ದೊಡ್ಡ ಉಸಿರು-ಸಣ್ಣ ಉಸಿರು

Date: 22-04-2022

Location: ಬೆಂಗಳೂರು


'ಕೇಶಿರಾಜ ಮಹಾಪ್ರಾಣಗಳು ಕನ್ನಡದಲ್ಲಿ ಇವೆ ಎಂದು ಒತ್ತು ಕೊಟ್ಟು ಹೇಳುವ ಪರಿಯೆ ಅನುಮಾನ. ಬೇರೆ ಇನ್ನಾವುದೆ ದ್ವನಿಗಳು ಕನ್ನಡದಲ್ಲಿ ಇವೆ ಎಂದು ಹೇಳಿಯೆ ಇಲ್ಲದ ಕೇಶಿರಾಜ ಹೀಗೆ ಮಹಾಪ್ರಾಣಗಳ ಬಗೆಗೆ ಮಾತ್ರವೆ ಮಾತನಾಡುವುದಕ್ಕೆ ಇರುವ ಕಾರಣವೆ ಅಚ್ಚರಿಯದು' ಎನ್ನುತ್ತಾರೆ ಲೇಖಕ, ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಕನ್ನಡದಲ್ಲಿರುವ ಮಹಾಪ್ರಾಣಗಳ ಕುರಿತು ವಿಶ್ಲೇಷಿಸಿದ್ದಾರೆ.

ಕನ್ನಡ ಅಕ್ಶರಮಾಲೆಯಲ್ಲಿ ಹತ್ತು ಮಹಾಪ್ರಾಣಗಳು ಇವೆ. ಮಹಾಪ್ರಾಣ ಎಂದರೆ ದೊಡ್ಡ ಉಸಿರು. ಕನ್ನಡ ಬಾಶೆ ರಾಚನಿಕವಾಗಿ ಮಹಾಪ್ರಾಣಗಳೆಂದು ಕರೆಯುವ ದ್ವನಿಗಳಿಗೆ ಬೇಕಾದ ದೊಡ್ಡ ಉಸಿರನ್ನು ಕೊಡದ ಸಣ್ಣ ಉಸಿರಿನ ಬಾಶೆ.

ಕನ್ನಡದ ಬಹುದೊಡ್ಡ ವಯ್ಯಾಕರಣಿಗಳಾಗಿರುವ ನಾಗವರ‍್ಮ ಮತ್ತು ಕೇಶಿರಾಜ ಇಬ್ಬರೂ ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲ ಎಂದು ಸ್ಪಶ್ಟವಾಗಿ ಹೇಳುತ್ತಾರೆ. ಕನ್ನಡದ ದ್ವನಿಗಳ ಬಗೆಗಿನ ಚಿಂತನೆಯ ಆರಂಬದ ಕಾಲದಿಂದ ಮಹಾಪ್ರಾಣಗಳ ಬಗೆಗೆ ಈ ವಿಚಾರ ಇರುವಂತಿದೆ. ಈ ಮೊದಲಿನ ಬರಹದಲ್ಲಿ ಮಾತಾಡಿದಂತೆ ಕ್ರಿಸ್ತಶಕದ ಎಡಬಲದಲ್ಲಿ ಕನ್ನಡಕ್ಕೆ ಲಿಪಿಯನ್ನ ಅಳವಡಿಸಿಕೊಳ್ಳುವಾಗ ಮಹಾಪ್ರಾಣಗಳು ಕನ್ನಡದಲ್ಲಿ ಇಲ್ಲ ಎಂಬ ತಿಳುವಳಿಕೆ ಒಂದೆಡೆ ಬೆಳೆದಿದೆ, ಅದರೊಟ್ಟಿಗೆ ಈ ಚರ‍್ಚೆ ನಡೆಯುತ್ತಿರುವಾಗಲೆ ಇನ್ನೊಂದೆಡೆ ಮಹಾಪ್ರಾಣಗಳ ಬಳಕೆ ಬರಹದಲ್ಲಿ ಮೊದಲಾದ ಹಾಗಿದೆ. ಹಾಗಾಗಿ, ತಿಳುವಳಿಕೆಯಲ್ಲಿ ಮಹಾಪ್ರಾಣಗಳು ಇಲ್ಲ ಎಂಬುದು ಇದ್ದರೂ ಬಳಕೆಯಲ್ಲಿ ಅವು ಉಳಿದುಬಂದಿವೆ.

ಬಳಕೆಯಲ್ಲಿ ಅವು ಉಳಿದುಬರುವುದಕ್ಕೆ ಕಾರಣಗಳೇನಿರಬಹುದು ಎಂಬುದನ್ನು ವಿಚಾರಿಸಬೇಕು. ಮಹಾಪ್ರಾಣ ಎಂಬ ಪದವು ಪಾಣಿನಿಯ ಬಳಕೆ ಅಲ್ಲ. ರುಗ್ವೇದದಿಂದ ಮೊದಲಾಗಿ ಸಂಸ್ಕ್ರುತದಲ್ಲಿ ಸೋಶ್ಮನ್ ‘ಸ-ಉಶ್ಮನ್’ ಎಂಬ ಪದವನ್ನು ಇವುಗಳಿಗೆ ಬಳಸಲಾಗಿದೆ. ಸಂಸ್ಕ್ರುತದಲ್ಲಿ ಮೊದಲಿಗೆ ಮಹಾಪ್ರಾಣ ಪದವನ್ನು ಬಳಸಿದ್ದು ಪತಂಜಲಿ ತನ್ನ ಅಶ್ಟಾದ್ಯಾಯಿಯ ಮೇಲಿನ ಮಹಾಬಾಶ್ಯದಲ್ಲಿ. ಕನ್ನಡದ ದೊರೆತ ಹಳೆಯ ವ್ಯಾಕರಣವಾದ ಬಾಶಾಬೂಶಣದಲ್ಲಿಯೂ ಮಹಾಪ್ರಾಣ ಎಂಬ ಪದ ಬಳಕೆ ಆಗಿಲ್ಲ ಎಂಬುದನ್ನೂ ಗಮನಿಸಬೇಕು. ಇಲ್ಲಿಯೆ ಹೇಳಬಹುದಾದ ಇನ್ನೊಂದು ವಿಚಾರವೆಂದರೆ ನಾಗವರ‍್ಮ, ಕೇಶಿರಾಜ ಇವರಾರೂ ಅಲ್ಪಪ್ರಾಣ ಎಂಬ ಪದವನ್ನು ಬಳಸುವುದೆ ಇಲ್ಲ. ಸೋಶ್ಮನ್ ಎಂದರೆ ಹೆಚ್ಚು ಉಸಿರನ್ನು ಬಯಸುವಂತ ದ್ವನಿಗಳು. ಹೀಗೆ ಹೆಚ್ಚಿನ ಉಸಿರನ್ನು ಬಯಸುವ ದ್ವನಿಗಳು ವರ‍್ಗದ ಎರಡನೆ ಮತ್ತು ನಾಲ್ಕನೆ ದ್ವನಿಗಳು, ಶ್, ಷ್ ಮೊದಲಾದ ಅವರ‍್ಗೀಯ ವ್ಯಂಜನಗಳು. ಇವುಗಳನ್ನು ಮಹಾಪ್ರಾಣಗಳು ಎಂದೆನ್ನಬಹುದು. ಕನ್ನಡ ಪಾರಂಪರಿಕ ವ್ಯಾಕರಣದಲ್ಲಿ ಶ್, ಷ್, ಸ್ ದ್ವನಿಗಳನ್ನು ಊಶ್ಮ ದ್ವನಿಗಳೆಂದೆ ಕರೆಯಲಾಗಿದೆ, ಮತ್ತು ವರ‍್ಗದಲ್ಲಿನ ದ್ವನಿಗಳಿಗೆ ಮಹಾಪ್ರಾಣ ಎಂಬ ಪದದ ಬಳಕೆ ಆಗಿದೆ.

ಕನ್ನಡ ವ್ಯಾಕರಣ ಪರಪರೆಯಲ್ಲಿ ಕೂಡ ಊಶ್ಮ ಮತ್ತು ಮಹಾಪ್ರಾಣ ಎಂಬ ಪದಗಳು ಕ್ರಮವಾಗಿ ಅವರ‍್ಗೀಯ ವ್ಯಂಜನಗಳ ಮತ್ತು ವರ‍್ಗೀಯ ವ್ಯಂಜನಗಳ ಸಾಲಲ್ಲಿ ಬರುವ ವ್ಯಂಜನಗಳಿಗೆ ಬಳಕೆಯಲ್ಲಿ ಬಂದಿವೆ. ಸಂಸ್ಕ್ರುತ ಬಾಶೆಯನ್ನಾದರಿಸಿ ಬಂದಿದ್ದ, ಅದುವರೆಗೆ ಪ್ರತಿಶ್ಟಾಪಿತವಾಗಿದ್ದ ದ್ವನಿವಿಗ್ನಾನದ ಸಿದ್ದಾಂತಗಳು ಮತ್ತು ಕನ್ನಡ ದ್ವನಿವಿಗ್ನಾನದ ತಿಳುವಳಿಕೆ ಇವೆರಡರ ನಡುವಿನ ಕಂದರದಲ್ಲಿ ಕನ್ನಡದಲ್ಲಿ ಈ ಬಿನ್ನವಾದ ಬೆಳವಣಿಗೆ ಆಗಿರುವಂತಿದೆ. ಹೀಗಾಗಿ ಮಹಾಪ್ರಾಣ ಎಂಬ ಪಾರಿಬಾಶಿಕದ ಬಳಕೆ ಕನ್ನಡದಲ್ಲಿ ವಿಶೇಶವಾಗಿ ಬಳಕೆಗೆ ಬಂದಿದೆ. ಈ ವಿಚಾರಗಳು ಮಹಾಪ್ರಾಣಗಳ ಬಗೆಗೆ ಕಂಡಿತವಾಗಿಯೂ ಕನ್ನಡಕ್ಕೆ ಲಿಪಿ ಸಂಯೋಜನೆ ಮಾಡಿದ ಕಾಲದಿಂದಲೆ ಚರ‍್ಚೆ ನಡೆದಿರುವಂತಿದೆ ಎಂಬ ವಾಸ್ತವವನ್ನು ತೋರಿಸುತ್ತವೆ. ಸೋಶ್ಮ ದ್ವನಿಗಳ ನಿರ‍್ವಹಣೆಯಲ್ಲಿನ ಗೊಂದಲ, ಈ ಗೊಂದಲದ ಮೇಲೆ ನಡೆದಿರಬಹುದಾದ ದೊಡ್ಡ ಚರ‍್ಚೆ ಇವೆಲ್ಲ ಕಾರಣವಾಗಿ ಕನ್ನಡದಲ್ಲಿ ಮಹಾಪ್ರಾಣ ದ್ವನಿಗಳ ಲಿಪಿಗಳ ಬಳಕೆ ಮುಂದುವರೆದಿರುವಂತಿದೆ. ಕನ್ನಡದಲ್ಲಿ ಸೋಶ್ಮನ್ ದ್ವನಿಗಳಿಗೆ ಬಿನ್ನ ಪಾರಿಬಾಶಿಕಗಳ ಬೆಳವಣಿಗೆ ಈ ಗೊಂದಲವನ್ನು ಸ್ಪಶ್ಟವಾಗಿ ತೋರಿಸುತ್ತದೆ. ಅಂದರೆ, ಕನ್ನಡದಲ್ಲಿ ಶ್ ಮತ್ತು ಷ್ ದ್ವನಿಗಳು ಹಾಗೆಯೆ ಮಹಾಪ್ರಾಣಗಳೆಂದು ಕರೆಯುವ ಹತ್ತು ವರ‍್ಗೀಯ ವ್ಯಂಜನಗಳು ಇಲ್ಲ ಎಂದು ವಯ್ಯಾಕರಣಿಗಳು ನಿರಂತರ ಹೇಳುತ್ತಲೆ ಬರುತ್ತಿದ್ದರೂ ಅವು ಬರವಣಿಗೆಯಲ್ಲಿ ಬಳಕೆಗೆ ಬಂದವು ಮತ್ತು ಬಳಕೆಗೆ ಬಂದೂ ಬರವಣಿಗೆಯಲ್ಲಿ ವಿಪರೀತದ ಗೊಂದಲ ಉಳಿದುಕೊಂಡೆ ಬರುತ್ತಿದೆ.

ಹೀಗೆ ಮಹಾಪ್ರಾಣಗಳ ಬಳಕೆ ಮೊದಲಾದ ಬಳಿಕವೂ ಕೆಲವು ವಿಚಾರಗಳನ್ನು ಗಮನಿಸಬೇಕು. ಮೊದಮೊದಲಿಗೆ ಕನ್ನಡದಾಗ ಬರಹ ಮಾಡಿದವರು ಹೆಚ್ಚಿನವರು ಉತ್ತರದ ಬವುದ್ದ, ಹಾಗೆಯೆ ಜಯ್ನ ಹಿನ್ನೆಲೆಯವರು. ಅವರು, ಉತ್ತರದಿಂದಲೆ ಬಂದವರಿರಬಹುದು ಇಲ್ಲವೆ ಉತ್ತರವನ್ನು ಆವಾಹಿಸಿಕೊಂಡ ಇಲ್ಲಿಯವರಾಗಿರಬಹುದು. ಮಹಾಪ್ರಾಣ ದ್ವನಿಗಳ ಬಳಕೆ ಪ್ರಾಕ್ರುತ-ಸಂಸ್ಕ್ರುತದ ಪದಗಳೆ ಆಗಿರಬೇಕು. ಮಹಾಪ್ರಾಣಯುಕ್ತ ಪದಗಳೆಂದು ಕೇಶಿರಾಜ ಕೆಲವು ಪದಗಳನ್ನು ಪಟ್ಟಿ ಮಾಡಬೇಕಾದ ಅನಿವಾರ‍್ಯತೆ ಬಂದುದಕ್ಕೆ ಇದುವೆ ಕಾರಣ. ಕೇಶಿರಾಜ ಹೀಗೆ ಪಟ್ಟಿ ಮಾಡಿದ ಬಹುತೇಕ ಪದಗಳು ಪ್ರಾಕ್ರುತದವೆ ಆಗಿವೆ. ಈ ಪದಗಳ ಬಳಕೆಯಲ್ಲಿ ಗೊಂದಲ ಇರುವುದರಿಂದ ಇವುಗಳನ್ನು ಹೀಗೆ ಬರೆಯಬೇಕೆ ಎಂದು ಹೇಳಬೇಕಾದ ಅನಿವಾರ‍್ಯತೆ ಬಂದಿದ್ದಿತು ಎಂಬುದು ಸ್ಪಶ್ಟವಾಗುತ್ತದೆ. ಉಳಿದ ಯಾವುದೆ ಪದಗಳಿಗೆ ಹೀಗೆ ಉಚ್ಚರಿಸಬೇಕೆಂಬ ನಿಯಮವನ್ನು ವಿವರಿಸಿಲ್ಲದ ಕೇಶಿರಾಜ ಇವುಗಳನ್ನು ಹೇಳುವಲ್ಲಿಯೆ ಇದು ಸ್ಪಶ್ಟವಾಗುತ್ತದೆ.

ಕನ್ನಡದಲ್ಲಿ ಈ ಪದಗಳನ್ನು ಪಡೆದುಕೊಂಡಾಗ ಅವುಗಳಲ್ಲಿ ಮೂಲದಲ್ಲಿ ಮಹಾಪ್ರಾಣಗಳ ಬಳಕೆ ಇದ್ದಿತು ಮತ್ತು ಕನ್ನಡದಲ್ಲಿ ಮಹಾಪ್ರಾಣಗಳ ತಿಳುವಳಿಕೆ ಗೊಂದಲಗಳೊಂದಿಗೆ ನಡೆದಿತ್ತು. ಈ ನಡುವೆ ಮಹಾಪ್ರಾಣಗಳ ಬಳಕೆ ಹಾಗೆಯೆ ಮೊದಲಾಯಿತು. ಒಮ್ಮೆ ಬರಹವು ರೂಡಿಯಾದ ಬಳಿಕ ಹಾಗೆಯೆ ಮುಂದುವರೆದಿದೆ. ಆದರೆ, ಬರವಣಿಗೆಯಲ್ಲಿ ಮಹಾಪ್ರಾಣಗಳನ್ನು ಉಳಿಸಿಕೊಂಡರೂ ಉದ್ದಕ್ಕೂ ಮಹಾಪ್ರಾಣ ಬಳಕೆಯಲ್ಲಿ ಇರಲಿಲ್ಲ. ಸಂಸ್ಕ್ರುತ ಹಿನ್ನೆಲೆಯ ವಿದ್ವಾಂಸರು ಬರೆದಿರುವಲ್ಲಿ ಮಹಾಪ್ರಾಣಗಳ ಗೊಂದಲ ತುಸು ಕಡಿಮೆ ಇರುವಂತಿದೆ. ಯಾಕೆಂದರೆ ಸಂಸ್ಕ್ರುತ ಬರೆಯುವಾಗ ಯಾವ ಪದಗಳಲ್ಲಿ ಯಾವ ದ್ವನಿಗಳಿಗೆ ದೊಡ್ಡ ಉಸಿರಿನ ದ್ವನಿಗಳ ಲಿಪಿಯ ಅವಶ್ಯಕತೆ ಇದೆ ಮತ್ತು ಅವುಗಳನ್ನು ಹೇಗೆ ಬರೆಯಬೇಕು ಎಂಬ ತಿಳುವಳಿಕೆ ಇತ್ತು. ಅದರ ನೆರವಿನಿಂದ ಸಂಸ್ಕ್ರುತದ ಪದಗಳನ್ನು ಕನ್ನಡದಾಗ ಬರೆಯುವಾಗ ಮಹಾಪ್ರಾಣಗಳನ್ನು ಸಂಸ್ಕ್ರುತಕ್ಕೆ ಸರಿ ಎನಿಸುವಂತೆ ಅವರು ಬರೆದಿದ್ದಾರೆ. ಆದರೆ, ಕನ್ನಡದ ಎಲ್ಲ ವಿದ್ವಾಂಸರು ಸಂಸ್ಕ್ರುತದ ಹಿನ್ನೆಲೆಯವರು ಅಲ್ಲ, ಇಲ್ಲವೆ ಅವರ ಸಂಸ್ಕ್ರುತದ ತಿಳುವಳಿಕೆ ಸಮನಾಗಿರಲಿಲ್ಲ. ಇಂತಾ ಸಂದರ‍್ಬಗಳಲ್ಲಿ ಮಹಾಪ್ರಾಣಗಳ ಬಳಕೆಯ ಗೊಂದಲ ಕಂಡುಬರುತ್ತದೆ. ಕನ್ನಡದ ಸಾವಿರಾರು ಶಾಸನಗಳನ್ನು, ಹಸ್ತಪ್ರತಿಗಳನ್ನು ಗಮನಿಸಿದಾಗ ಹಲವೆಡೆ ಈ ಮಹಾಪ್ರಾಣದ ಗೊಂದಲ ಕಂಡುಬರುತ್ತದೆ. ಇಂದಿನ ಕಾಲದಲ್ಲಿ ಬಾಶೆಯ ಬಳಕೆಯ ಎಲ್ಲ ವಲಯಗಳಲ್ಲಿ ಮಹಾಪ್ರಾಣಗಳ ಬಳಕೆ ಇಲ್ಲ ಮತ್ತು ಬರವಣಿಗೆಯ ಎಲ್ಲ ವಲಯಗಳಲ್ಲಿ ಇವುಗಳ ಬಗೆಗೆ ಗೊಂದಲ ಸ್ಪಶ್ಟವಾಗಿದೆ.

ಕೇಶಿರಾಜ ಮಹಾಪ್ರಾಣಗಳು ಕನ್ನಡದಲ್ಲಿ ಇವೆ ಎಂದು ಒತ್ತು ಕೊಟ್ಟು ಹೇಳುವ ಪರಿಯೆ ಅನುಮಾನ. ಬೇರೆ ಇನ್ನಾವುದೆ ದ್ವನಿಗಳು ಕನ್ನಡದಲ್ಲಿ ಇವೆ ಎಂದು ಹೇಳಿಯೆ ಇಲ್ಲದ ಕೇಶಿರಾಜ ಹೀಗೆ ಮಹಾಪ್ರಾಣಗಳ ಬಗೆಗೆ ಮಾತ್ರವೆ ಮಾತನಾಡುವುದಕ್ಕೆ ಇರುವ ಕಾರಣವೆ ಅಚ್ಚರಿಯದು. ಬಾಶೆಯ ವಿದ್ಯಾರ‍್ತಿಯಾದ ಕೇಶಿರಾಜನಿಗೆ ಮಹಾಪ್ರಾಣ ದ್ವನಿಗಳ ಉಚ್ಚರಣೆಯ ಕ್ರಮ, ಅವು ಕನ್ನಡ ಬಾಶೆಯಲ್ಲಿ ಉಚ್ಚಾರವಾಗದ ವಾಸ್ತವ, ಈ ತಿಳುವಳಿಕೆಯನ್ನು ಅದಾಗಲೆ ಸಾವಿರ ವರುಶದಿಂದ ಹೇಳುತ್ತಾ ಬಂದಿದ್ದ ಕನ್ನಡ ದ್ವನಿವಿಗ್ನಾನ ಈ ಎಲ್ಲವೂ ಒಂದೆಡೆ ಅವನ ಅರಿವಿನ ಬಾಗವಾಗಿ ಬೆಟ್ಟದಂತೆ ಇದ್ದವು. ಇನ್ನೊಂದೆಡೆ, ಈ ಮೇಲೆ ಹೇಳಿದ ಆರಂಬ ಕಾಲದ ಕೆಲವು ಗೊಂದಲ ಕಾರಣವಾಗಿ ಬಳಕೆಯಲ್ಲಿ ದೊಡ್ಡದಾಗಿ ರೂಡಿಗೆ ಬಂದಿದ್ದ ಮಹಾಪ್ರಾಣಗಳು ಇನ್ನೊಂದೆಡೆ ಇದ್ದವು. ಇದುವರೆಗಿನ ಬಳಕೆಯನ್ನು ನೇರವಾಗಿ ತಿರಸ್ಕರಿಸದೆ, ಅನೇರವಾಗಿ ತಿರಸ್ಕರಿಸುವ ಕೆಲಸವನ್ನು ಅವನು ಮಾಡುತ್ತಾನೆ. ಮಹಾಪ್ರಾಣಗಳು ಇವೆ, ಆದರೆ ಅವು ಅನುಕರಣೆಯಲ್ಲಿ ಮತ್ತು ಒಂದೆರಡು ಸಂಕ್ಯಾವಾಚಕಗಳಲ್ಲಿ ವಿದ್ವಾಂಸರು ಗುರುತಿಸುತ್ತಾರೆ ಎಂದು ಸುಮ್ಮನಾಗುತ್ತಾನೆ. ಗಮನ ಸೆಳೆಯುವ ಮಾತೆಂದರೆ ಅನುಕರಣಗಳಲ್ಲಿ ಮತ್ತು ಸಂಕ್ಯಾವಾಚಕಗಳಲ್ಲಿ ವಿದ್ವಾಂಸರು ಗುರುತಿಸುತ್ತಾರೆ ಎಂಬ ಮಾತು. ಅಂದರೆ, ಅವು ಸಹಜವಾಗಿ ಇಲ್ಲ ಮತ್ತು ಒಂದು ಬಾಶೆಯ ರಚನೆಯಾಗಿ ಪರಿಗಣಿಸಲು ಸಾದ್ಯವಿಲ್ಲದ ನಿಯಮಿತ ವಲಯದಲ್ಲಿ ಕಾಣಿಸುವ ಈ ದ್ವನಿಗಳನ್ನು ಸಾಮಾನ್ಯರು ಗುರುತಿಸುವುದಿಲ್ಲ, ಬದಲಿಗೆ ವಿದ್ವಾಂಸರು ಗುರುತಿಸುತ್ತಾರೆ ಎಂದು ಹೇಳುವುದು ಬಹು ಸೊಗಸಾಗಿದೆ.
ಈ ಅಂಕಣದ ಹಿಂದಿನ ಬರೆಹ:
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

ಕನ್ನಡದಾಗ ದ್ವನಿವಿಗ್ನಾನ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...