ಡಾ. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು

Date: 17-11-2020

Location: .


ದೇಶದ ಬಹು ಚರ್ಚಿತ ವ್ಯಕ್ತಿಗಳಲ್ಲಿ ಬಿ. ಆರ್‌. ಅಂಬೇಡ್ಕರ್ ರಾಜಕೀಯ - ಸಾಮಾಜಿಕ ಚಿಂತಕರಾಗಿದ್ದರು. ಅವರು ಸಂವಿಧಾನ ಕರಡು ರಚಿಸುವ ಮೊದಲು ಕುಶಲ ಆರ್ಥಿಕ ತಜ್ಞರೂ ಆಗಿದ್ದರು. ಎಂದಿಗೂ ಪ್ರಸ್ತುತ ಎನಿಸುವ ಕೃಷಿಯ ಅನೇಕ ಸಮಸ್ಯೆಗಳಿಗೆ ಅವರು ಸೂಚಿಸಿದ ಪರಿಹಾರ ಹಾಗೂ ಅವರ ಆರ್ಥಿಕ ನೀತಿ ಬಗ್ಗೆ ವಸ್ತು ನಿಷ್ಟವಾಗಿ ಪತ್ರಕರ್ತ ಹೃಷಿಕೇಶ ಬಹದ್ದೂರ ದೇಸಾಯಿ ಅವರು ತಮ್ಮ ಇಂದಿನ ಬರೆಹದಲ್ಲಿ ವಿಶ್ಲೇಷಿಸಿದ್ದಾರೆ.

ಅನೇಕ ಸಲ ನಾವು ಮಹಾ ಮಾನವರನ್ನು ಸಹಿತ ನಮ್ಮೊಂದಿಗೆ ಹೊಲಿಸಿಕೊಂಡು ಮಾತನಾಡುತ್ತೇವೆ. ನಮ್ಮ ದೋಷ-ದೌರ್ಬಲ್ಯಗಳು ಅವರಿಗೂ ಇವೆ ಎಂತಲೂ, ಅವರ ಶಕ್ತಿ-ಸಾಮರ್ಥ್ಯಗಳು ನಮ್ಮೊಳಗೆ ಸಹಜವಾಗಿ ಬಂದಿವೆ ಎಂತಲೂ ಆರೋಪಿಸಿ ಕೊಂಡುಬಿಡುತ್ತೇವೆ.

ಹೀಗಾಗಿ ಎಲ್ಲಾ ಮನುಷ್ಯರ ಬಗ್ಗೆ ಒಂದು ಸರಳವಾದ, ಕ್ಲಿಷ್ಟವಲ್ಲದ ಅಭಿಪ್ರಾಯವನ್ನು ಬೆಳೆಸಿಕೊಂಡು ಬಿಡುತ್ತೇವೆ. ಇದರ ಹಿಂದೆ ನಮ್ಮ ಜೀವನದ ಅನುಭವದ ಹಿನ್ನೆಲೆಯಲ್ಲಿ, ನಮ್ಮ ಹುಟ್ಟಿನಿಂದಾಗಿ ನಮಗೆ ದೊರೆತ ಸೌಲತ್ತುಗಳಿಂದಾಗಿ ನಮ್ಮಲ್ಲಿ ಬೆಳೆದು ಬಂದ ಪೂರ್ವಗ್ರಹ ಕೆಲಸ ಮಾಡಿರುತ್ತದೆ.

ಹೀಗಾಗಿ ನಾವು ಇವರು ಒಳ್ಳೆಯವರಾಗಿರಲಿಕ್ಕೆ ಸಾಧ್ಯವಿಲ್ಲ, ಇವರು ಕೆಟ್ಟವರಾಗಿರಲಿಕ್ಕೆ ಸಾಧ್ಯ ಇಲ್ಲ ಅಂತ ಅಂದುಕೊಳ್ಳುತ್ತೇವೆ. ನಮ್ಮ ತಿಳುವಳಿಕೆಯ ಮಿತಿಯನ್ನು ಆಧರಿಸಿ, ``ಇವರು ಇದಕ್ಕಿಂತ ಹೆಚ್ಚು ಬುದ್ಧಿವಂತರಾಗಿರಲಿಕ್ಕೆ ಸಾಧ್ಯವೇ ಇಲ್ಲ,’’ ಅಂತಲೋ , ``ಇವರು ದಡ್ಡರಾಗಿರಲಿಕ್ಕೆ ಸಾಧ್ಯವೇ ಇಲ್ಲ,’’ ಅಂತಲೋ ಫರ್ಮಾನು ಹೊರಡಿಸಿ ಬಿಡುತ್ತೇವೆ. ಅದು ಬರೀ ನಮ್ಮ ತಲೆಯಲ್ಲಿ ಇದ್ದರೆ ಸಾಲದು ಅಂತ ಇತರರನ್ನೂ ಹಿಡಿದು ಹಿಡಿದು ಅವರ ತಲೆಯಲ್ಲಿ ತುಂಬಿ ಬಿಡುತ್ತೇವೆ.

ಇನ್ನೂ ಕೆಲವೊಮ್ಮೆ, ನಾವು ಇಷ್ಟ ಪಡುವವರ ಅಥವಾ ನಮ್ಮ ಅಭಿಮಾನಕ್ಕೆ ಪಾತ್ರರಾದ ಕೆಲವರನ್ನು ಅತಿ ಮಾನವರನ್ನಾಗಿ ಎತ್ತರಕ್ಕೆ ಏರಿಸಿ ಬಿಡುತ್ತೇವೆ. ಅವರಿಗೆ ನಮ್ಮ ಅಭಿಮಾನವೇ ಮಿತಿಗಳನ್ನು ಹಾಕಿ ಬಿಡುತ್ತೇವೆ. ಕೆಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಜನಪ್ರಿಯತೆ ಪಡೆದವರು ಇತರ ಕ್ಷೇತ್ರ ಗಳಲ್ಲಿ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂದು ಕೊಳ್ಳುತ್ತೇವೆ. ಅದರ ವಿರುದ್ಧವಾಗಿ ಎಷ್ಟೇ ಮಾಹಿತಿ ದೊರಕಿದರೂ ನಮ್ಮ ಭಾವನೆ ಬದಲಾಗುವುದಿಲ್ಲ.

ಉದಾಹರಣೆಗೆ - ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ ಅವರು ಒಳ್ಳೆಯ ಲೇಖಕರು ಅನ್ನುವುದು ನಮಗೆ ಗೊತ್ತಿರುವುದಿಲ್ಲ. ಅವರ ಸಣ್ಣ ಕತೆಗಳನ್ನು ನಾವು ಓದಿರುವ ಸಾಧ್ಯತೆ ಕಮ್ಮಿ. ಹೀಗಾಗಿ ಅವರು ಕತೆಗಾರರಾಗಲಿಕ್ಕೆ ಸಾಧ್ಯ ಇಲ್ಲ ಅಂತ ಗಟ್ಟಿಯಾಗಿ ನಂಬಿಕೊಂಡಿರುತ್ತೇವೆ.

ಡಾ. ಅಂಬೇಡ್ಕರ್ ಅವರು ಈ ದೇಶದ ಬಹು ಚರ್ಚಿತ ವ್ಯಕ್ತಿಗಳಲ್ಲಿ ಒಬ್ಬರು. ಅವರ ಬಗ್ಗೆ ಅಪಾರ ಭಕ್ತಿ ಹಾಗೂ ಅಪಾರ ದ್ವೇಷ ಎರಡೂ ಇದ್ದವರು ಬಹು ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿ ಮಜಾ ಏನೆಂದರೆ ಅವರನ್ನು ಆರಾಧಿಸುವರು ಅಥವಾ ಹಗೆತನ ಇಟ್ಟುಕೊಂಡವರು ಇಬ್ಬರಿಗೂ ಇರುವ ಕಾರಣ ಒಂದೇ- ಡಾ. ಅಂಬೇಡ್ಕರ್ ಅವರು ಸಂವಿಧಾನ ಕರಡು ರಚನಾ ಸಮಿತಿಯ ಮುಖ್ಯಸ್ಥರಾಗಿದ್ದರು ಅನ್ನುವುದು.

ಡಾ. ಅಂಬೇಡ್ಕರ್ ಸಂವಿಧಾನ ಎನ್ನುವುದು ಕೆಲವರಲ್ಲಿ ಸಂತೋಷ - ಭಾವೋ ದ್ವೇಗಕ್ಕೆ ಕಾರಣವಾದರೆ ಇನ್ನು ಕೆಲವರಲ್ಲಿ ಕ್ರೋಧವನ್ನು ಕೆರಳಿಸುತ್ತದೆ.

ಆದರೆ ಈ ಎರಡು ಪಂಗಡಗಳಲ್ಲಿ ಇನ್ನೊಂದು ಸಾಮ್ಯ ಇದೆ. ಅವರು ಇಬ್ಬರೂ ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನೆಯೊಂದನ್ನು ಒಂದು ಬಿಟ್ಟು ಬೇರೆ ಯಾವ ಮಹತ್ವದ ಕೆಲಸಗಳನ್ನೂ ಮಾಡಿಲ್ಲ ಅಂತ ತಿಳಿದುಕೊಂಡಿದ್ದಾರೆ. ಇದು ತೋರಿಸುವುದು ನಮ್ಮ ಮಿತಿಯನ್ನೇ ಹೊರತು, ಭೀಮರಾಯರ ಮಿತಿಯನ್ನಲ್ಲ.

ಈ ರೀತಿಯ ಅತಿರೇಕದ ಅಭಿಮಾನ-ಅಸಡ್ಡೆಗಳಲ್ಲಿ ಕಳೆದು ಹೋಗಿರುವುದು ಡಾ. ಅಂಬೇಡ್ಕರ ಅವರ ಆರ್ಥಿಕ ಚಿಂತನೆ.

ಅವರ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿರುವಾಗ ನಮಗೆ ಹೊಳೆಯುವ ಕೆಲ ವಿಷಯಗಳು ಏನು ಎಂದರೆ - ಅವರ ಚಿಂತನೆಗಳನ್ನು ಯಾವುದೇ ಆರ್ಥಿಕ ಸಿದ್ಧಾಂತದ ಚೌಕಟ್ಟಿಗೆ ಒಳ ಪಡಿಸುವುದು ಸಾಧ್ಯವಿಲ್ಲ.

ಅವರನ್ನು ಪಕ್ಕಾ ಎಡ ಪಂಥೀಯರೆಂದೋ, ಪಕ್ಕಾ ಬಲ ಪಂಥೀಯರೆಂದೋ ಕರೆದು ಸೀಮಿತಗೊಳಿಸುವುದು ಅಸಾಧ್ಯ. ಅವರು ಇಬ್ಬದಿಯ ಸಿದ್ಧಾಂತ - ನಿಯಮ - ಸೂತ್ರ ಗಳನ್ನು ಬಳಸಿ, ಅವುಗಳ ತುದಿಗಳನ್ನು ಚಿವುಟಿ ಅವುಗಳ ಅರ್ಥ ವಸರುವಂತೆ ಮಾಡುತ್ತಾರೆ. ಅವು ಎಲ್ಲವೂ ಕೂಡಿ ಕೊನೆಗೆ ದೇಶದ ಆರ್ಥಿಕ ಸ್ಥಿತಿ ಗಟ್ಟಿಯಾಗುವಂತೆ, ಜನ ಸಾಮಾನ್ಯರ ಕಲ್ಯಾಣ ಸಾಧ್ಯವಾಗುವಂತೆ ಸಮನ್ವಯ ಗೊಳಿಸುತ್ತಾರೆ.

ಅವರು ವಿಶ್ವಮಾನ್ಯ ಸಂವಿಧಾನ ತಜ್ಞರಾಗುವುದಕ್ಕೆ ಮೊದಲೇ ಕುಶಲ ಆರ್ಥಿಕ ತಜ್ಞ ರಾಗಿದ್ದರು. ಆಧುನಿಕ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ ಅವರು ತಮ್ಮ ವಿಶ್ವ ವಿದ್ಯಾಲಯದ ಶಿಕ್ಷಕರ ಗಮನ ಸೆಳೆದಿದ್ದರು. ತನ್ನ ತಲೆಮಾರಿಗೆ ಅತ್ಯಂತ ಉನ್ನತ ಶಿಕ್ಷಣ ಪಡೆದ ಅವರ ಮೂರು ಪ್ರಮುಖ ವಿಚಾರ ಸರಣಿಗಳನ್ನು ನಾವು ಇಲ್ಲಿ ಗಮನಿಸಬಹುದು . ಅಮೆರಿಕದ ಕೊಲಂಬಿಯಾ ವಿಶ್ವ ವಿದ್ಯಾಲಯ ಹಾಗೂ ಲಂಡನ್ನಿನ ಲಂಡನ್ ಸ್ಕೂಲ್ ಆಫ್ ಏಕನಾಮಿಕ್ಸ್ಗಳಲ್ಲಿ ಅವರು ಸಂಶೋಧನೆ ನಡೆಸಿ ಪ್ರೌಢ ಪ್ರಬಂಧ ಪಡೆದದ್ದು ಅರ್ಥಶಾಸ್ತ್ರದಲ್ಲಿ.

ಅವರ ಲಂಡನ್ನಿನ ಪ್ರಬಂಧ ಭಾರತದ ನಗದು ನೀತಿಯ ಬಗ್ಗೆ ಇದೆ. ಇಂದಿಗೆ ಸುಮಾರು ನೂರು ವರ್ಷಗಳ ಹಿಂದೆ ಅದು ಸ್ವೀಕೃತಗೊಂಡಿತು. ಆದರೆ ಅದು ಇತರ ಪ್ರಬಂಧಗಳಂತೆ ಕೇವಲ ಪಂಡಿತರಿಗಾಗಿ, ಪಾಮರರಿಂದ ದೂರವಾಗಿ, ವಿಶ್ವ ವಿದ್ಯಾಲಯದದ ಸಂದೂಕಗಳಲ್ಲಿ ಭದ್ರವಾಗಿ ಕೂತುಕೊಳ್ಳಲಿಲ್ಲ. ಆ ವಿಶ್ವ ವಿದ್ಯಾಲಯ ಅದನ್ನು ಪ್ರಕಟ ಮಾಡಿತು. ಈಗ ಅದು ಭಾರತದಂಥ ಅನೇಕ ದೇಶಗಳ ನಗದು ನೀತಿಯನ್ನು ನಿರ್ದೇಶಿಸುವ `ದಿ ಪ್ರಾಬ್ಲಂ ಆಫ್ ದಿ ರುಪಿ: ಇಟ್ಸ್ ಒರಜೀನ್ಸ್ ಅಂಡ್ ಸೊಲ್ಯೂಷನ್' ಅನ್ನುವ ಮಾರ್ಗದರ್ಶಿ ಪಠ್ಯವಾಗಿದೆ.

ಭಾರತದಂತಹ ದೇಶದಲ್ಲಿ ಕಾಗದದ ನೋಟು ಚಲಾವಣೆ ಯಲ್ಲಿ ಇರಬೇಕೋ, ಅಥವಾ ಚಿನ್ನದ ನಾಣ್ಯ ಇರಬೇಕೋ ಅನ್ನುವ ಸಮಸ್ಯೆ ಯನ್ನು ಈ ಪುಸ್ತಕ ಚರ್ಚಿಸುತ್ತದೆ. ಈಗ ಇದು ಅಸಮಂಜಸ ಅನ್ನಿಸಬಹುದು ಆದರೆ 1920ರ ಹೊತ್ತಿಗೆ ಇದು ಅತ್ಯಂತ ಗಂಭೀರ ಸಮಸ್ಯೆಯಾಗಿತ್ತು. ಸಾಕಷ್ಟು ಸಂಪತ್ತನ್ನು ಸೃಷ್ಟಿಸಲಾರದ ದೇಶದಲ್ಲಿ ಮಾತ್ರ ಕಾಗದದ ನೋಟುಗಳ ಚಲಾವಣೆ ನಡೆಯುತ್ತದೆ ಅನ್ನುವ ನಂಬಿಕೆ ಆಗ ಇತ್ತು.

ಮುಂದುವರೆದ ದೇಶಗಳಾದ ಬ್ರಿಟನ್, ಫ್ರಾನ್ಸ್, ಸ್ಪೇನ್ಗಳು ತಮ್ಮ ತಮ್ಮಲ್ಲಿ ಚಿನ್ನದ ನಾಣ್ಯ ಚಲಾಯಿಸಿ ತಮ್ಮ ಕಾಲನಿಗಳಾದ ಎಷಿಯಾದ ದೇಶಗಳಲ್ಲಿ ಕಾಗದದ ನೋಟುಗಳನ್ನು ಚಲಾವಣೆಗೆ ತರುತ್ತವೆ. ಇದು ವಸಾಹತು ಷಾಹಿ ದಬ್ಬಾಳಿಕೆಯ ಪ್ರತೀಕ, ತಾವು ಶ್ರೇಷ್ಟ - ತಮ್ಮ ಕಾಲನಿಗಳು ಕನಿಷ್ಟ ಅನ್ನುವ ತಾರತಮ್ಯ ನೀತಿಯ ದ್ಯೋತಕ ಅನ್ನುವ ತಿಳುವಳಿಕೆ ಇತ್ತು.

ಅರ್ಥಶಾಸ್ತ್ರದ ಪಿತಾಮಹ ಅನ್ನಿಸಿಕೊಳ್ಳುವ ಜನ ಮೆನಯಾರ್ಡ್ ಕೆಯನ್ಸ್ ಅವರು ಭಾರತಕ್ಕೆ ಕಾಗದದ ನೋಟೇ ಸರಿ ಅಂತ ಪ್ರತಿಪಾದಿಸಿದ್ದರು. ಅದನ್ನು ತೀವ್ರವಾಗಿ ಖಂಡಿಸಿದ ಡಾ. ಅಂಬೇಡ್ಕರ್ ಅವರು ಕಾಗದದ ನೋಟಿನ ಬೆಲೆಯನ್ನು ಸರಕಾರ ಕಟ್ಟುತ್ತದೆ. ಆದರೆ ಚಿನ್ನದ ನಾಣ್ಯದ ಬೆಲೆಯನ್ನು ಜನ ಕಟ್ಟುತ್ತಾರೆ. ಆಡಳಿತ ಮಾಡುವವರು ಕಾಗದದ ನೋಟಿನ ಬೆಲೆಯನ್ನು ತಮ್ಮ ಮನಸ್ಸಿಗೆ ಬಂದಂತೆ, ಅವೈಜ್ಞಾನಿಕವಾಗಿ ಹೆಚ್ಚು- ಕಮ್ಮಿ ಮಾಡಬಹುದು. ರಾತ್ರೋ ರಾತ್ರಿ ಅದರ ಮೌಲ್ಯ ಹೆಚ್ಚು ಮಾಡಬಹುದು, ಅದನ್ನು ಅಪಮಾನ್ಯ ಮಾಡಬಹುದು. ಅದು ನಿಸರ್ಗದ ನಿಯಮಗಳಿಗೆ ವಿರುದ್ಧವಾಗಿ ಇರಬಹುದು, ಆದ್ದರಿಂದ ಅದು ಕೂಡದು, ಅಂತ ವಾದ ಮಂಡಿಸಿದರು. ಅದಕ್ಕೆ ಸಾಕಷ್ಟು ಮನ್ನಣೆ ದೊರೆಯಿತು.

ಬಡ ಬ್ರಿಟಿಷ್ ಕಾಲನಿಯಿಂದ ಬಂದ 30ವರ್ಷದ ಯುವಕನೊಬ್ಬ ಕೆಯನ್ಸ್ ಅವರ ಸಿದ್ಧಾಂತಗಳನ್ನು ಧಿಕ್ಕರಿಸುತ್ತಾನೆ ಎನ್ನುವುದೇ ಆಗಿನ ಕಾಲದ ಆಕಾಡೆಮಿಕ್ ವೃತ್ತಗಳಲ್ಲಿ ಸಂಚಲನ ಮೂಡಿಸಿತ್ತು.

ಅಂಬೇಡ್ಕರ್ ಅವರು ಗಾಳಿಯಲ್ಲಿ ಮಾತು ಆಡಲಿಲ್ಲ. ತಮ್ಮ ನಿಲುವನ್ನು ಸಿದ್ಧಪಡಿಸಲು ಅವರು ವಿವಿಧ ದೇಶಗಳಲ್ಲಿ ಜಾರಿ ಇದ್ದ ನಗದು ನೀತಿಗಳನ್ನು, ಆಯಾ ದೇಶಗಳ ಪರ್ಯಾಯಗಳನ್ನು ಚರ್ಚಿಸಿದರು. ತನ್ನ ವಿಚಾರ ಹಾಗೂ ನಂಬಿಕೆಗಳನ್ನು ಅಂಕಿ ಅಂಶಗಳ ಮೂಲಕ ಮಂಡಿಸಿದರು.

ರಾಷ್ಟ್ರವೊಂದು ತನ್ನ ಸಂಪತ್ತು ಹಾಗೂ ಶ್ರಮಗಳ ಅನುಪಾತಕ್ಕೆ ಹೊಂದುವಂತೆ ನೋಟು - ನಾಣ್ಯಗಳನ್ನು ಬಿಡುಗಡೆ ಮಾಡಬೇಕು. ತನ್ನ ಕುವತ್ತು ಮೀರಿ ನೋಟು - ನಾಣ್ಯ ಚಲಾವಣೆ ಮಾಡಿದರೆ ಅಲ್ಲಿನ ಆರ್ಥಿಕ ಸ್ಥಿತಿಗೆ ಹಿನ್ನಡೆಯಾಗುತ್ತದೆ. ಒಂದು ದೇಶವನ್ನು ನಡೆಸುವುದು ಮನೆಯನ್ನು ನಡೆಸಿದಂತೆ. ಮನೆ ಯಜಮಾನ ತನ್ನ ಆದಾಯ ಮೀರಿ ಖರ್ಚು ಮಾಡಬಾರದು. ಅಂತೆಯೇ ಒಂದು ದೇಶ ತನ್ನ ಕೈ ಮೀರಿ ನೋಟು ಮುದ್ರಿಸಬಾರದು, ನಾಣ್ಯ ಟಂಕಿಸಬಾರದು ಅಂತ ತಾಕೀತು ಮಾಡಿದರು. ಆಗ ಅದರ ಬೆಲೆ ಅದನ್ನು ಮುದ್ರಿಸಿದ ಕಾಗದದಗಿಂತ ಕಮ್ಮಿ ಆಗಬಹುದು. ಅದು ಅಸಹಾಯಕ ಪರಿಸ್ಥಿತಿ ಅಂತ ಎಚ್ಚರಿಕೆ ನೀಡಿದರು. ಬೆಲೆ ಸ್ಥಿರತೆ ಹಾಗೂ ಜವಾಬ್ದಾರಿಯುತ ಹಣಕಾಸಿನ ವಹಿವಾಟು ಎನ್ನುವ ಮೂಲ ನಿಯಮಗಳ ಸುತ್ತ ದೇಶದ ಆಯ ವ್ಯಯ ಇರಬೇಕು ಎಂದು ಸೂಚಿಸಿದರು.

ಕಾಗದದ ನೋಟು ಇದ್ದರೆ ಚುನಾಯಿತ ಸರ್ಕಾರಗಳು ರಾಜಕೀಯ ಕಾರಣಗಳಿಗೋಸ್ಕರ ಅದರ ಮೌಲ್ಯವನ್ನು ಬದಲಾಯಿಸಬಹುದು, ಎಂದು ಶಂಕಿಸಿದರು. ಅವರು ಅಂದು ಕೊಂಡಂತೆಯೇ ಆಯಿತು.

ಆಧುನಿಕ ಕಾಲದ ಪ್ರಧಾನಿಗಳಾದ ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಅವರು ನೋಟಿನ ಬೆಲೆಯನ್ನು ಅವೈಜ್ಞಾನಿಕವಾಗಿ ಬದಲು ಮಾಡಿದರು. ಯಾರೋ ಕೆಲವು ಆಮದು - ರಫ್ತು ವ್ಯವಹಾರಸ್ಥರಿಗೆ ಅನುಕೂಲ ವಾಗಲು ಹೆಚ್ಚು - ಕಮ್ಮಿ ಮಾಡಿದರು. ಆವಾಗ ಶತಮಾನಗಳ ಹಿಂದಿನ ಈ ಬೃಹತ್ ಗ್ರಂಥ ನಮಗೆ ನೆನಪಾಗಬೇಕಿತ್ತು. ಅದು ಕೆಲವರಿಗಷ್ಟೇ ನೆನಪಾಯಿತು. ಅಂಬೇಡ್ಕರ್ ಅವರನ್ನು ಆರಾಧಿಸುವ - ಹಳಿಯುವ ಎರಡೂ ಪಂಗಡಗಳ ಪಾಠಕರು ಈ ಪುಸ್ತಕ್ಕೆ - ಅದರಲ್ಲಿನ ಸಿದ್ಧಾಂತಕ್ಕೆ ಮರಳಿದ್ದು ವಿರಳ.

ಕೆಲ ವರ್ಷಗಳ ಹಿಂದೆ ರಿಸರ್ವ್ ಬ್ಯಾಂಕ್ನವರು ನೋಟಿನ ಮೇಲೆ ಮುದ್ರಿಸಲು ಇನ್ನೊಬ್ಬ ರಾಷ್ಟ್ರ ನಾಯಕನ ಹುಡುಕಾಟದಲ್ಲಿ ತೊಡಗಿದರು. ಆವಾಗ ಕೆಲವರು ಗಾಂಧಿ ಬದಲಿಗೆ ರವೀಂದ್ರನಾಥ ಟ್ಯಾಗೋರ್, ಚಾಣಕ್ಯ, ಲಕ್ಷ್ಮಿ ದೇವಿ ಮುಂತಾದ ಪರ್ಯಾಯಗಳನ್ನು ಸೂಚಿಸಿದರು. ಇನ್ನೂ ಕೆಲವರು ಡಾ. ಅಂಬೇಡ್ಕರ್ ಅವರೇ ಇದಕ್ಕೆ ಸೂಕ್ತ, ಅವರ ಶಿಫಾರಸಿನಿಂದಲೇ ರಿಸರ್ವ್ ಬ್ಯಾಂಕ್ ಶುರು ಆಯಿತು ಅಂತ ಹೇಳಿದರು. ಇದು ಅರ್ಥ ಶಾಸ್ತ್ರಿಗಳ ಲೋಕದಲ್ಲಿ ಕುತೂಹಲ ಮೂಡಿಸಿತು.

ಪ್ರದೀಪ್ ರಯಿದಾಸಿ, ಕುಫಿರ ನಲಗುಂದವಾರ, ಅನೂಪ್ ಕುಮಾರ್, ವೇಲ್ಲಿ ನಚ್ಚಿಯನ ಮುಂತಾದ ಅಂಬೇಡ್ಕರ್ ವಾದಿಗಳು `ವೆಳ್ಳಿವಾಡಾ', `ಅಂಬೇಡ್ಕರ್ ಡಾಟ್ ಓ . ಆರ್. ಜಿ.’, `ರೌಂಡ್ ಟೇಬಲ್ ಇಂಡಿಯಾ', `ಮೂಕ ನಾಯಕ' ಮೊದಲಾದ ಜಾಲ ತಾಣಗಳಲ್ಲಿ ಇದರ ಪೂರಕ ಲೇಖನ ಬರೆದರು.

ಅದರಲ್ಲಿ ಅವರು ಡಾ. ಅಂಬೇಡ್ಕರ್ ಅವರು ಹಿಲಟನ ಆಯೋಗದ ಎದುರು ಮಂಡಿಸಿದ ವರದಿ ಹಾಗೂ ಅವರ `ಭಾರತದ ಅರ್ಥ ವ್ಯವಸ್ಥೆ ಹಾಗೂ ಬ್ಯಾಂಕಿಂಗ್ ನ ಇತಿಹಾಸ' ಎನ್ನುವ ಪುಸ್ತಕದ ಪುಟಗಳನ್ನು ತೋರಿದರು.

ಇವುಗಳ ಸಾರಾಂಶ ಏನು ಅಂದರೆ ಭಾರತದ ಅರ್ಥ ವ್ಯವಸ್ಥೆಯ ಕೀಲಿ ಕೈ ಸ್ವಾಯತ್ತ ಸಂಸ್ಥೆಯೊಂದರ ಕೈಯಲ್ಲಿ ಇರಬೇಕು. ಅದು ಚುನಾವಣೆಯಲ್ಲಿ ಗೆದ್ದ ರಾಜಕೀಯ ಪಕ್ಷವೊಂದರ ಸರಕಾರದ ಕೈಯಲ್ಲಿ ಇರಬಾರದು. ಇಡೀ ರಾಷ್ಟ್ರದ ಸಕಲ ಜನರ ಕಲ್ಯಾಣ ಹಾಗೂ ಅಭಿವೃದ್ಧಿಗೆ ಪೂರಕವಾಗುವ ನೀತಿಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ರೂಪಿಸಬೇಕೆ ಹೊರತು ಕಿರು ದೃಷ್ಟಿಯ ರಾಜಕಾರಣ ದಿಂದ ಅಲ್ಲ, ಅನ್ನುವುದು ಅವರ ನಿಲುವಾಗಿತ್ತು. ಅದಕ್ಕಾಗಿ ಅವರು ರಿಸರ್ವ್ ಬ್ಯಾಂಕ್ನ ಸ್ಥಾಪನೆಗೆ ಒಟ್ಟು ಕೊಟ್ಟರು. ಅವರ ವಾದವನ್ನು ಒಪ್ಪಿಕೊಂಡ ಬ್ರಿಟಿಷ್ ಸರಕಾರ 1935ರಲ್ಲಿ ಕಲ್ಕತ್ತಾದಲ್ಲಿ ರಿಸರ್ವ್ ಬ್ಯಾಂಕ್ ಸ್ಥಾಪಿಸಿತು.
ಅದಕ್ಕೆ ದೇಶದ ಆರ್ಥಿಕ ನೀತಿ ನಿರೂಪಣೆ, ನೋಟು- ನಾಣ್ಯ, ಬ್ಯಾಂಕಿಂಗ್, ಉದ್ದಿಮೆ ಹಾಗೂ ಇತರ ವಿಷಯಗಳ ಬಗ್ಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿತು. ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ಎನ್. ಡಿ. ಎ ಸರಕಾರ ಮೊನೆಟರಿ ಪಾಲಿಸಿ ಸಮಿತಿ ರೂಪಿಸಿ ಬ್ಯಾಂಕಿನ ಅಧಿಕಾರ ಕಸಿದುಕೊಂಡಿತು. ಅದು ಸ್ವಾಯತ್ತೆ ಕಳೆದುಕೊಂಡು ಆಳುವ ಪಕ್ಷದ ಮಾತು ಕೇಳುವ ಸರ್ಕಾರಿ ವಿಭಾಗದ ಮಟ್ಟಕ್ಕೆ ಇಳಿಯಿತು.

ಅಂಬೇಡ್ಕರ್ ಅವರ ಇನ್ನೊಂದು ಅಪೂರ್ವ ಕೊಡುಗೆ ಅವರು ಕೊಲಂಬಿಯಾ ವಿಶ್ವ ವಿದ್ಯಾಲಯದಲ್ಲಿ ಮಂಡಿಸಿದ ಕೇಂದ್ರ ಹಾಗೂ ರಾಜ್ಯಗಳ ಆರ್ಥಿಕ ಸಂಬಂಧ ಗಳ ಸಿದ್ಧಾಂತ. ಸಾರ್ವಜನಿಕ ಹಣಕಾಸಿನ ತಜ್ಞ ಎಡವಿನ ಸೇಲಿ ಗಮನ ಅವರ ವಿದ್ಯಾರ್ಥಿಯಾಗಿದ್ದ ಅಂಬೇಡ್ಕರ ಅವರು ತಮ್ಮ ಪ್ರಬಂಧದಲ್ಲಿ ಕೇಂದ್ರ ಸರಕಾರ ರಾಜ್ಯಗಳನ್ನು ತನ್ನ ಕೆಳಗೆ ಕೆಲಸ ಮಾಡುವ ಹಣಕಾಸು ಘಟಕಗಳೆಂದು ಕೀಳಾಗಿ ನೋಡಬಾರದು. ಅವರಿಗೆ ಸಮಾನ ಗೌರವ ನೀಡಬೇಕು. ಕೇಂದ್ರ ಸರಕಾರ ಆಡಳಿತ ನಡೆಸಲು ರಾಜ್ಯಗಳಿಂದ ಕರ ವಸೂಲಿ ಮಾಡಬಾರದು. ತನ್ನ ವರಮಾನ ತಾನು ಗಲಿಸಿಕೊಳ್ಳಬೇಕು. ರಾಜ್ಯಗಳೂ ಅಷ್ಟೇ, ಕೇಂದ್ರದ ಮುಂದೆ ಕೈ ಚಾಚಿ ನಿಲ್ಲಬಾರದು. ತಮಗೆ ಬೇಕಷ್ಟು ಆದಾಯ ಗಳಿಸಲು ತಮ್ಮದೇ ಆದ ಯೋಜನೆ ತಯಾರಿಸಿಕೊಳ್ಳಬೇಕು ಅಂತ ಸಲಹೆ ನೀಡಿದರು. ಇಂದಿನ ಕೇಂದ್ರ ಸರಕಾರ ರಾಜ್ಯಗಳಿಂದ ಸಂಗ್ರಹಿಸಿದ ರೂ. 60,000 ಕೋಟಿಗೂ ಹೆಚ್ಚು ತೆರಿಗೆಯನ್ನು ಮರಳಿ ನೀಡದೆ ಸತಾಯಿಸುತ್ತಿದೆ. ನಿಮಗೆ ಬೇಕಾದರೆ ನಮ್ಮ ಹೆಸರಿನಲ್ಲಿ ಸಾಲ ತೆಗೆದುಕೊಳ್ಳಿ ಅಂತ ಪುಗಸಟ್ಟೆ ಸಲಹೆ ಬೇರೆ ನೀಡಿದೆ. ``ಇದು ಸರಿಯದಾದ್ದಲ್ಲ. ಇದನ್ನು ಅಂಬೇಡ್ಕರ್ ವಿರೋಧಿಸಿದ್ದರು'’ ಅಂತ ಹೇಳುತ್ತಿರುವ ದನಿಗಳು ಕ್ಷೀಣ. ಜನ ಸಾಮಾನ್ಯರ ಜಾಗೃತಿ ಕೇಂದ್ರಗಳಾಗಬೇಕಿದ್ದ ವಿಶ್ವ ವಿದ್ಯಾಲಯಗಳು ಅಸಂಬದ್ಧ ವಿಷಯಗಳ ಬಗ್ಗೆ ಚರ್ಚಾ ಗೋಷ್ಟಿ ಏರ್ಪಡಿಸುತ್ತಿವೆ.

ಅಂಬೇಡ್ಕರ್ ಅವರು 1918 ರಲ್ಲಿ ಭಾರತೀಯ ಅರ್ಥಶಾಸ್ತ್ರ ಸೊಸೈಟಿ ಗೆ ಬರೆದ `ಭಾರತದ ಸಣ್ಣ ಹಿಡುವಳಿಗಳ ಸಮಸ್ಯೆ ಹಾಗೂ ಪರಿಹಾರ' ಎನ್ನುವ ಪ್ರಬಂಧ ಅಮೂಲ್ಯವಾದದ್ದು. ಇದು ಬರೀ ಭಾರತಕ್ಕೆ ಅಲ್ಲದೆ ವಿಶ್ವದ ಯಾವುದೇ ದೇಶದ ಸಣ್ಣ ಹಿಡುವಳಿದಾರರ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು.

ಇದರಲ್ಲಿ ಅವರು ಅಲ್ಲಿಯವರೆಗೆ ಲಭ್ಯವಿದ್ದ ಮಾಹಿತಿ ಹಾಗೂ ದತ್ತಾಂಶ ಆಧರಿಸಿ ತಮ್ಮ ಸಿದ್ಧಾಂತ ಮಂಡಿಸಿದರು. ಅದರ ಪ್ರಕಾರ ದೇಶದ ವಿವಿಧ ಕಡೆಗಳಲ್ಲಿ ಒಂದು ಎಕರೆ ಭೂಮಿಯಲ್ಲಿ 6 ರಿಂದ 14 ಪಾಲುದಾರರು ಇದ್ದು, ಸರಾಸರಿ ತಲಾ ಭೂ ಹಂಚಿಕೆ ಒಂದು ಕುಟುಂಬಕ್ಕೆ ಅರ್ಧ ಎಕರೆಯಿಂದ ಎರಡು ಎಕರೆ ಒಳಗೆ ಇರುವುದಾಗಿ ಕಂಡು ಬಂತು.

ಸಣ್ಣ ಹಿಡುವಳಿದಾರರು ಲಾಭ ಇಲ್ಲದ ಕೃಷಿ ಮಾಡುತ್ತಿರುವುದನ್ನು, ಒಬ್ಬ ಸಣ್ಣ ರೈತ ಮಾಡಿದ ಸಾಲ ಅನೇಕ ತಲೆಮಾರಿನ ನಂತರವೂ ತೀರದೇ ಇರುವುದನ್ನೂ, ತಲಾ ಆದಾಯಕ್ಕಿಂತ ಹೆಚ್ಚು ಖರ್ಚು ಆಗುವುದನ್ನು, ಅವರು ಗ್ರಹಿಸಿ, ವಿಶ್ಲೇಷಿಸಿದರು.

`ದೊಡ್ಡ ಹಿಡುವಳಿದಾರರು ಯಾವಾಗಲೂ ಲಾಭದಲ್ಲಿ ಇರುತ್ತಾರೆ ಆದರೆ ಸಣ್ಣ ಹಿಡುವಳಿದಾರರು ಸದಾ ನಷ್ಟದಲ್ಲಿ ಬದುಕುತ್ತಾರೆ' ಎನ್ನುವ ನಂಬಿಕೆ ಆಧಾರ ರಹಿತವೆಂದು ಅವರು ಸಿದ್ಧಪಡಿಸಿ ತೋರಿಸಿದರು. ಕೃಷಿ ಲಾಭದಾಯಕವಾಗಿರಲು ಅನೇಕ ಕಾರಣಗಳು ಇವೆ. ಅವುಗಳನ್ನೆಲ್ಲಾ ಸಮೀಕರಿಸಿದರೆ ಮಾತ್ರ ಕೃಷಿ ಜೀವನಾಧಾರ ಕಸುಬಿನಿಂದ ಲಾಭದಾಯಕ ಉದ್ದಿಮೆ ಆಗಲು ಸಾಧ್ಯ ಅಂತ ವಾದ ಮಾಡಿದರು.

ಬಡವರಿಗೆ ಕೇವಲ ಭೂಮಿ ನೀಡಿದರೆ ಸಾಲದು ಅವರಿಗೆ ಬಂಡವಾಳ ಹಾಗೂ ಕೃಷಿ ಯಂತ್ರಗಳು ಅಗತ್ಯ ಅನ್ನುವ ಶಿಫಾರಸು ಮಾಡಿದರು.

ದೊಡ್ಡ ಹಿಡುವಳಿದಾರರು ಮಿತಿ ಇಲ್ಲದೆ ಭೂಮಿ ಖರೀದಿ ಮಾಡಲು ಅನುಕೂಲ ಮಾಡಿ ಕೊಡುವ ಬಾಂಬೆ ಭೂಮಿ ಸುಧಾರಣೆ ಕಾಯಿದೆಯನ್ನು ಜಾರಿಗೆ ತರಬಾರದು. ಇದರಿಂದ ಸಮಾಜದಲ್ಲಿ ಅಸಮತೋಲನ ಉಂಟಾಗುತ್ತದೆ. ಕೆಲವೇ ಸಾಹುಕಾರರ ಜಮೀನುಗಳಲ್ಲಿ ಲಕ್ಷಾಂತರ ನಿರ್ಗತಿಕ ಕೂಲಿ ಕಾರರು ದುಡಿದು ತಿನ್ನುವ ಸ್ಥಿತಿ ಬರಬಹುದು. ಇದು ಆರೋಗ್ಯಕರ ಲಕ್ಷಣವಲ್ಲ ಎನ್ನುವ ಮಾತನ್ನು ಆಡಿದರು.

ಈಗ ಭೂ ಒಡೆತನದ ಬಗ್ಗೆ ನಡೆಯುವ ಚರ್ಚೆ ಗಳು ಎರಡು ವಿಭಿನ್ನ ದಿಕ್ಕಿ ನಲ್ಲಿ ಸಾಗುತ್ತಿವೆ. ``ಏನೂ ಇಲ್ಲದ ಕಡು ಬಡವರಿಗೆ ಭೂಮಿಯನ್ನು ಹಂಚುವುದು ಒಂದೇ ನಮ್ಮ ಗುರಿ, ಅದರಿಂದ ಎಲ್ಲ ಸಮಸ್ಯೆಗಳು ಪರಿಹಾರ ವಾಗುತ್ತವೆ'’ ಎನ್ನುವ ಪಕ್ಷಗಳು ಒಂದು ಕಡೆ ಆದರೆ, ಸಣ್ಣ ಹಿಡುವಳಿಗಳಿಂದಲೆ ಎಲ್ಲ ಸಮಸ್ಯೆ ಆಗಿರುವುದು, ಭೂಮಿಯನ್ನು ಯಾರು ಬೇಕಾದರೂ , ಎಷ್ಟು ಬೇಕಾದರೂ ಖರೀದಿ ಮಾಡುವ ಅವಕಾಶ ಇರಬೇಕು ಅದರಿಂದ ಭಾರತ ಸ್ವರ್ಗವಾಗುವುದರಲ್ಲಿ ಸಂಶಯವಿಲ್ಲ ಎನ್ನುವ ಪಕ್ಷಗಳು ಇನ್ನೊಂದು ಕಡೆ.

ಸಂಪೂರ್ಣ ಸತ್ಯ ಎನ್ನುವುದು ಈ ಎರಡೂ ಕಡೆ ಇಲ್ಲ ಎನ್ನುವುದು ಅಂಬೇಡ್ಕರ್ ಅವರ ಪ್ರಬಂಧದಿಂದ ತಿಳಿಯುತ್ತದೆ.

ಕೃಷಿಯ ಸಮಸ್ಯೆಗೆ ಕೃಷಿಯಲ್ಲಿ ಉತ್ತರವಿಲ್ಲ. ಅದು ಸಂಪೂರ್ಣ ಅರ್ಥ ವ್ಯವಸ್ಥೆ ಸುಧಾರಿಸುವುದರಲ್ಲಿ ಇದೆ. ``ಇದು ವಿಚಿತ್ರವಾಗಿ ಕಾಣಬಹುದು. ಆದರೆ ಕೃಷಿಯ ಸಮಸ್ಯೆಗಳಿಗೆ ಉತ್ತರ ಔದ್ಯೋಗಿಕರಣದಲ್ಲಿ ಇದೆ'’ ಎಂದು ಅವರು ಅಭಿಪ್ರಾಯಪಟ್ಟರು.

``ರೈತ ಹಾಗೂ ಆತನ ಕೆಲಸಗಾರರು ಹೊಂದಿರುವ ಕೌಶಲ್ಯ ಎಲ್ಲಕ್ಕಿಂತ ಮುಖ್ಯ. ಇದು ಅವರಿಗೆ ಆಸಕ್ತಿ ಇದ್ದರೆ ಮಾತ್ರ ದಕ್ಕುತ್ತದೆ. ನಿರಾಸಕ್ತಿಯಿಂದ ಮಾಡಿದ ಯಾವ ಕೆಲಸವೂ ಫಲ ಕೊಡುವುದಿಲ್ಲ. ಇದಕ್ಕೆ ಕೃಷಿ ಅಪವಾದವಲ್ಲ. ಅನೇಕರು ಬೇರೆ ಕೆಲಸ ಸಿಗದೇ, ನಿರಾಸಕ್ತಿಯಿಂದ- ಅನಿವಾರ್ಯವಾಗಿ ಜಮೀನಿನಲ್ಲಿ ದುಡಿಯುವ ಕೆಲಸಕ್ಕೆ ಬರುತ್ತಾರೆ. ಇದು ತಪ್ಪಬೇಕು. ಉದ್ದಿಮೆಗಳು ಹೆಚ್ಚಬೇಕು. ಜಮೀನಿನ ಮೇಲೆ ಯುವ ಜನರ ಅವಲಂಬನೆ ಕಮ್ಮಿ ಆಗಬೇಕು ಎಂದು ಅವರು ವಾದಿಸಿದರು .

ಸ್ವಭಾವತಃ ಆಧುನಿಕ ಚಿಂತಕರಾಗಿದ್ದ ಅಂಬೇಡ್ಕರ್ ಅವರು ಭಾರತ ಬಡತನದ ಹಣೆ ಪಟ್ಟಿ ತೆಗೆದು ಅಭಿವೃದ್ಧಿ ಹೊಂದಬೇಕಾದರೆ ಹೆಚ್ಚು ಉದ್ದಿಮೆಗಳನ್ನು ಸ್ಥಾಪಿಸಬೇಕು, ಅದರಿಂದ ಉದ್ಯೋಗ ಸೃಷ್ಟಿ ಮಾಡಿ ಬಡತನ ಹೋಗಳಾಡಿಸಬೇಕು. ಹಳ್ಳಿಗಳಿಂದ ಹೆಚ್ಚು ಜನರು ನಗರಗಳತ್ತ ಹೊರಡಬೇಕು. ತಂತ್ರಜ್ಞಾನ, ಉದ್ದಿಮೆಗಳ ಆಧಾರದ ಮೇಲೆ ನವ ಭಾರತ ಉದಯಿಸಬೇಕು ಎಂಬ ಕನಸ ಕಂಡರು.

ಅವರು ಕೊಳ್ಳು ಬಾಕ ತನದ ವಿರುದ್ಧ ಎಚ್ಚರಿಸಿದರು. ಜನ ಖರ್ಚು ಮಾಡುವುದರಿಂದ ದೇಶ ಬೆಳೆಯುವುದಿಲ್ಲ. ಅವರು ಉಳಿತಾಯ ಮಾಡುವುದರಿಂದ ಬೆಳೆಯುತ್ತದೆ ಎಂದು ತಿಳಿ ಹೇಳಿದರು.

ಉದ್ಯೋಗದ ರೂಪಗಳಾದ ಛದ್ಮ ಉದ್ಯೋಗ, ಸುಳ್ಳು ಉದ್ಯೋಗ ಹಾಗೂ ಅರ್ಧ ಉದ್ಯೋಗಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಅಂಬೇಡ್ಕರ್ ಅವರು ಈ ಪದ ಪುಂಜಗಳನ್ನು 1920ರ ಸುಮಾರಿಗೇ ಬಳಸಿ ಇವುಗಳ ಅರ್ಥವನ್ನು ಹೇಳಿದ್ದರು.

ಅಂಬೇಡ್ಕರ್ ಅವರ ಚಿಂತನೆ ಗಳ ಪ್ರಭಾವ ತನ್ನ ಮೇಲೆ ಆಗಿದೆ ಎನ್ನುವುದನ್ನು ಇಬ್ಬದಿ - ಕಾರ್ಮಿಕ ಸಿದ್ಧಾಂತದ ಜನಕ ನೊಬೆಲ್ ಪ್ರಶಸ್ತಿ ಪಡೆದ ಆರ್ಥರ್ ಲೂಯಿಸ್ ಪ್ರಸ್ತಾಪಿಸಿದ್ದಾರೆ. ಕಮ್ಮಿ ಕೂಲಿಗೆ ದುಡಿಯುವ ಕೃಷಿ ಕಾರ್ಮಿಕರನ್ನು ಉದ್ದಿಮೆಗಳಿಗೆ ವರ್ಗಾವಣೆ ಮಾಡಿದರೆ ಎರಡೂ ಕ್ಷೇತ್ರಗಳಿಗೂ ಲಾಭ ಎನ್ನುವ ವಾದವನ್ನು ಲೂಯಿಸ್ ಅವರು ಸಮರ್ಥವಾಗಿ ಮಂಡಿಸಿದರು.

ಹಿದುತ್ವವಾದಿ ಚಿಂತನೆಗಳನ್ನು ಜೀವನವಿಡೀ ವಿರೋಧಿಸಿದ, ಹಿಂದೂ ಧಾರ್ಮಿಕ ಗ್ರಂಥಗಳ ಕೆಲ ಮೂಲ ನಂಬಿಕೆಗಳನ್ನು ತಾತ್ವಿಕವಾಗಿ, ಸಾಕಾರಣವಾಗಿ ವಿರೋಧಿಸಿದ ಅಂಬೇಡ್ಕರ್ ಅವರು ಮಿತಾಕ್ಷರ ಅವರ ಕರ್ತಾ- ಪುತ್ರ- ಪ್ರಪೌತ್ರ ಆಧಾರಿತ ಆನುವಂಶಿಕ ಆಸ್ತಿ ಹಂಚಿಕೆಯನ್ನು ಬೆಂಬಲಿಸಿದರು. ಇದರಿಂದ ಕೇವಲ ಹಿರಿಯ ಪುತ್ರನಿಗೆ ಆಸ್ತಿ ದಕ್ಕುವ ಸಾಧ್ಯತೆ (ಪ್ರಾಯಿಮೊ ಜೆನೆಟರ್) ತಪ್ಪುತ್ತದೆ. ಅನೇಕ ರಾಜ ಮನೆತನಗಳಲ್ಲಿ ವೈಮನಸ್ಯ ಬೆಳೆಯಲು ಇದೇ ಕಾರಣ ಎಂದು ಅವರು ಎತ್ತಿ ತೋರಿಸಿದರು.

ಸರಳೀಕೃತ ಎಡ- ಬಲದ ಲೆಕ್ಕೆ ಸಿಗದ ಅರ್ಥಶಾಸ್ತ್ರಜ್ಞ ಡಾ. ಅಂಬೇಡ್ಕರ್. ಅವರು ಒಂದು ಕಡೆ ಔದ್ಯೋಗಿಕ ಕ್ರಾಂತಿಯ ಮಾತು ಆಡಿದರೆ ಇನ್ನೊಂದು ಕಡೆ ಸಹಕಾರಿ ಕೃಷಿ ಯ ಶಿಫಾರಸು ಮಾಡುತ್ತಾರೆ. ಸಹಕಾರಿ ಕೃಷಿ ಕೇವಲ ಎಡ ಪಂಥೀಯ ದೇಶಗಳಲ್ಲಿ ಅಷ್ಟೇ ಅಲ್ಲ, ಬಂಡವಾಳ ಶಾಹಿ ದೇಶಗಳಾದ ಯೂರೋಪು, ಆಸ್ಟ್ರೇಲಿಯಾ, ಅಮೇರಿಕದಲ್ಲಿ ಸಹಿತ ಚಾಲ್ತಿಯಲ್ಲಿ ಇದೆ ಎನ್ನುತ್ತಾರೆ.

ಒಂದು ಕಡೆ ಬಡವರಲ್ಲಿ ಭೂಮಿಯ ಹಂಚಿಕೆ ಆಗಬೇಕು ಎನ್ನುವ ಅವರು ಅಧಿಕಾರಿಗಳು ಉದ್ದಿಮೆದಾರರಿಗೆ ಅನಗತ್ಯ ತೊಂದರೆ ಕೊಡಬಾರದು, ಹಳ್ಳಿಗಳಿಂದ ಕೆಲಸಗಾರರು ನಗರಕ್ಕೆ ಬರಬೇಕು ಎನ್ನುತ್ತಾರೆ.

ಬಂಡವಾಳ ಹೂಡಿದವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೂಡದು ಅನ್ನುವ ಅವರು ಉದ್ದಿಮೆಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಮುಖ್ಯ ಕರ್ತವ್ಯಗಳಲ್ಲಿ ಒಂದು ಎನ್ನುತ್ತಾರೆ.

ಸರಕಾರ ಸಾರ್ವಜನಿಕ ಉದ್ದಿಮೆ ಸ್ಥಾಪಿಸಬೇಕು ಆದರೆ ಖಾಸಗಿ ಅವರಿಗೆ ಬಂಡವಾಳ ಹೂಡಿಕೆಯ ಅವಕಾಶ ಇರಬೇಕು ಎನ್ನುವ ಜವಾಹರ್ ಲಾಲ್ ನೆಹರು ಅವರ ಸಿದ್ಧಾಂತಕ್ಕೆ ಬೆಂಬಲ ಸೂಚಿಸುವ ಅಂಬೇಡ್ಕರ್, ತಮ್ಮನ್ನು ಆರ್ಥಿಕ ನೀತಿ ನಿರೂಪಣೆ ಸಮಿತಿಯಿಂದ ಕಾಂಗ್ರೆಸ್ ಸರಕಾರ ದೂರ ಇಟ್ಟದ್ದನ್ನು ಮರೆಯುವುದಿಲ್ಲ.

ಕೇವಲ ಲಾಭದ ದೃಷ್ಟಿ ಹೊಂದಿರುವ ಅರ್ಥ ವ್ಯವಸ್ಥೆ ಸಲ್ಲದು. ಅಲ್ಲಿ ಸರಕಾರಗಳು ಆಡಳಿತ ನಡೆಸುವುದಿಲ್ಲ. ಭೂ ಮಾಲೀಕರು ಹಾಗೂ ಸಾಹುಕಾರರು ಜನರನ್ನು ಆಳುತ್ತಾರೆ. ಆದರೆ ಅಸಂಖ್ಯ ಅಸಹಾಯಕ ಜನ ಸಾಮಾನ್ಯರು ಹೊಟ್ಟೆ ಪಾಡಿಗಾಗಿ ತಮ್ಮ ಸಾಂವಿಧಾನಿಕ ಹಕ್ಕುಗಳ ಆಸೆ ಕೈ ಬಿಡಬೇಕಾಗುತ್ತದೆ.

ಯಾವ ವ್ಯಕ್ತಿಯೂ, ಇಡೀ ದೇಶದಲ್ಲಿ ಕೃಷಿ - ಉದ್ದಿಮೆ - ಸೇವೆ ಸೇರಿದಂತೆ ಯಾವ ಕೆಲಸ ಅಥವಾ ವ್ಯಾಪಾರ ಮಾಡಬಹುದು ಎನ್ನುವದನ್ನು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ ವ್ಯಕ್ತಿ, ಉದ್ದಿಮೆದಾರರು ತಮಗೆ ತಿಳಿದಂತೆ ಮಾಡಲಿ ಎನ್ನುವ ಲೆಸೇ ಫೇರ್ ನೀತಿಗಳನ್ನು ಒಪ್ಪುವುದಿಲ್ಲ. ಉದ್ದಿಮೆದಾರರ ಸ್ವಾತಂತ್ರ ಬೇರೆ, ಕೆಲಸಗಾರರ ಸ್ವಾತಂತ್ರ ಬೇರೆ ಎಂದು ಘೋಷಿಸಿದರು.

ಉದ್ದಿಮೆದಾರರು ಬಡ ಕೆಲಸಗಾರರನ್ನು ಶೋಷಿಸದಂತೆ ಸರಕಾರ ಕಾನೂನು ರೂಪಿಸಬೇಕು. ಇಲ್ಲದಿದ್ದರೆ ಅವರು ಸರ್ವಾಧಿಕಾರಿಗಳಾಗಿ ಬಿಡುತ್ತಾರೆ ಎಂದು ಹೇಳಿದ ಅವರು, ಕಾರ್ಲ್ ಮಾರ್ಕ್ಸ್ನನ್ನು ಸಂಪೂರ್ಣವಾಗಿ ಒಪ್ಪಲಿಲ್ಲ.

ತಮ್ಮ ನಿಧನಕ್ಕೆ ಕೆಲವೇ ದಿನ ಮುನ್ನ ಬರೆದ `ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್' ಅನ್ನುವ ಪುಸ್ತಕದಲ್ಲಿ ಅವರು ಬುದ್ಧ ಹಾಗೂ ಮಾರ್ಕ್ಸ್ ಇಬ್ಬರೂ ಸಮಾಜದಲ್ಲಿ ಇರುವ ಶೋಷಣೆ ಯ ಬಗ್ಗೆ ಮಾತಾಡುತ್ತಾರೆ. ಆದರೆ ಅವರು ಸೂಚಿಸುವ ಪರಿಹಾರಗಳು ಭಿನ್ನ. ಮಾರ್ಕ್ಸ್ ಹಿಂಸೆಯನ್ನು ಪ್ರತಿಪಾದಿಸಿದರೆ, ಬುದ್ಧ ಕರುಣೆಯ ಮಾರ್ಗ ತೋರುತ್ತಾನೆ ಎಂದರು.

ಭಾರತೀಯ ಮಾರ್ಕ್ಸ್ವಾದಿಗಳು ಕೇವಲ ವರ್ಗ ಸಂಘರ್ಷದ ಮಾತು ಆಡುತ್ತಾರೆ. ಜಾತಿ, ಬೇಧ ಮರೆತು ಬಿಡುತ್ತಾರೆ. ಜಾತಿಯ ಹಿಂಸೆಯನ್ನು ಕಡೆಗಣಿಸುವ ಯಾವ ಸಿದ್ದಾಂತವೂ ಭಾರತಕ್ಕೆ ತಕ್ಕುದಲ್ಲ, ಎಂದು ಅಂಬೇಡ್ಕರ್ ವಾದಿಸುತ್ತಾರೆ. ಪಂಜಾಬಿನ ಜಾತ ಪಾತ ತೊಡಕ ಮಂಡಲದಲ್ಲಿ 1935ರಲ್ಲಿ ಮಾಡದೇ ಉಳಿದ `ಜಾತಿ ವಿನಾಶ' ಭಾಷಣದಲ್ಲಿ ಇದು ಎದ್ದು ಕಾಣುತ್ತದೆ.

ಜಾತಿ ವ್ಯವಸ್ಥೆ ಭಾರತದ ಅರ್ಥ ವ್ಯವಸ್ಥೆಯನ್ನು ಸಹಿತ ಪ್ರಭಾವಿಸುತ್ತದೆ. ಅದನ್ನು ಮರೆತು ಯಾವ ನೀತಿ - ನಿಯಮ ರೂಪಿಸಿದರೂ ಸಹಿತ ಅದು ಅರ್ಥಹೀನ ಎಂದರು. `ಪ್ರಗತಿ ಪರ ಚಿಂತಕರು ನನಗೆ ಜಾತಿಯಲ್ಲಿ ನಂಬಿಕೆ ಇಲ್ಲ ಎಂದರೆ ಸಾಲದು. ಅವರು ಜಾತಿ ಬೇಧದ ವಿರುದ್ಧ ಹೋರಾಟ ಮಾಡಬೇಕು,’ ಎಂಬ ಕರೆ ಕೊಟ್ಟರು.

ಸಂವಿಧಾನ ರಚನಾ ಸಮಿತಿಯಲ್ಲಿ ಅವರು ಮಾಡಿದ ಕೊನೆಯ ಭಾಷಣದಲ್ಲಿ ``ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಇಲ್ಲದೇ ಹೋದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇಲ್ಲ. ನಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ, ನಾವು ಸಾಮಾಜಿಕವಾಗಿ, ಆರ್ಥಿಕವಾಗಿ ಸಮಾನರು ಎಂದು ಎಣಿಸದ ಜನರನ್ನು ಕೇವಲ ಚುನಾವಣೆಗಾಗಿ ಸಮಾನರು, ನಮ್ಮ ಓಟು - ನಿಮ್ಮ ಓಟು ಎರಡೂ ಸಮಾನ ಎಂದು ಹೇಳಿಕೊಂಡರೆ ಅದು ಅಪ್ಪಟ ಸುಳ್ಳೆ ಹೊರತು ನಿಜವಲ್ಲ’’ ಎಂದು ಛೇಡಿಸಿದರು.

ಬ್ರಿಟಿಷ್ ಸರ್ಕಾರದ ಶೋಷಣೆಯನ್ನು ವಿರೋಧಿಸುವುದು ಎಷ್ಟು ಮುಖ್ಯವೋ, ನಮ್ಮ ಸಮಾಜದಲ್ಲಿ ಬೆಳೆದು ಬಂದಿರುವ ಶೋಷಣೆಯನ್ನು ವಿರೋಧಿಸುವುದು ಕೂಡ ಅಷ್ಟೇ ಮುಖ್ಯ ಎಂದು ಅವರು ತಿಳಿ ಹೇಳಿದರು.

ಅವರ ರಾಜಕೀಯ - ಸಾಮಾಜಿಕ ಚಿಂತನೆಗಳಷ್ಟೇ ಅವರ ಸಮಗ್ರ ಆರ್ಥಿಕ ಚಿಂತನೆಗಳು ಸಹ ಸದಾ ಕಾಲಕ್ಕೂ ಪ್ರಸ್ತುತ. ಅವನ್ನು ನಾವು ನೆನಪು ಮಾಡಿಕೊಳ್ಳಬೇಕಾದದ್ದು ವಿಕಾಸಶೀಲ ದೇಶವೊಂದರ ನಾಗರಿಕರಾದ ನಮ್ಮ ಕರ್ತವ್ಯ.

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...