"ದೃಶ್ಯಮಾಧ್ಯಮಗಳ ಕುರಿತು ಮಾತನಾಡುವುದೇ ಅಪಮಾನ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಖಾಸಾಗಿ ಯೂಟ್ಯೂಬ್ ಚಾನಲ್ ಗಳೆಂಬ ಶೌಚಾಲಯದತ್ತ ನಾವು ತಲೆ ಹಾಕದಿರುವುದೇ ವಾಸಿ. ಎಡಗೈಗೆ ಏನು ಹತ್ತಿರ ಎಂದರೆ, ತಿಕ ಹತ್ತಿರ ಎಂಬ ಗಾದೆಯಂತೆ, ತಮ್ಮ ಮುಸುಡಿಗೆ ಮೊಬೈಲ್ ಅಥವಾ ಕ್ಯಾಮರಾ ಹತ್ತಿರ ಎನ್ನುವ ಹಾಗೆ ಬಹುತೇಕ ಮಂದಿ ಘೀಳಿಡುತ್ತಿದ್ದಾರೆ," ಎನ್ನುತ್ತಾರೆ ಎನ್. ಜಗದೀಶ್ ಕೊಪ್ಪ. ಅವರು ರಾಜಾರಾಂ ತಲ್ಲೂರು ಅವರ ‘ಪಿಟ್ಕಾಯಣ’ ಮತ್ತು ‘ಗಾದಿMAY+' ಕೃತಿ ಕುರಿತು ಬರೆದ ವಿಮರ್ಶೆ.
ಇಂದಿನ ಕನ್ನಡ ಪತ್ರಿಕೋದ್ಯಮದ ಜಗತ್ತು ನೆಲ ಕಚ್ಚಿ, ಉಳ್ಳವರ ಕಾಲಿನಡಿ ತೆರಳುತ್ತಿರುವಾಗ, ಪ್ರಜಾವಾಣಿ ಪತ್ರಿಕೆಯು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಸಹ ಒಂದಿಷ್ಟು ಘನತೆಯನ್ನು ಕಾಪಾಡಿಕೊಂಡಿದೆ. ಉಳಿದ ಪತ್ರಿಕೆಗಳು ತಮ್ಮ ಜಾತಿ ಮತ್ತು ಧರ್ಮಕ್ಕೆ ಹಾಗೂ ಮಾಲೀಕರ ಪಕ್ಷ ನಿಷ್ಟೆಗೆ ಅನುಗುಣವಾಗಿ ಪತ್ರಿಕೋದ್ಯಮದ ಹೆಸರಿನಲ್ಲಿ ಉಸಿರಾಡುತ್ತಿವೆ.
ದೃಶ್ಯಮಾಧ್ಯಮಗಳ ಕುರಿತು ಮಾತನಾಡುವುದೇ ಅಪಮಾನ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಖಾಸಾಗಿ ಯೂಟ್ಯೂಬ್ ಚಾನಲ್ ಗಳೆಂಬ ಶೌಚಾಲಯದತ್ತ ನಾವು ತಲೆ ಹಾಕದಿರುವುದೇ ವಾಸಿ. ಎಡಗೈಗೆ ಏನು ಹತ್ತಿರ ಎಂದರೆ, ತಿಕ ಹತ್ತಿರ ಎಂಬ ಗಾದೆಯಂತೆ, ತಮ್ಮ ಮುಸುಡಿಗೆ ಮೊಬೈಲ್ ಅಥವಾ ಕ್ಯಾಮರಾ ಹತ್ತಿರ ಎನ್ನುವ ಹಾಗೆ ಬಹುತೇಕ ಮಂದಿ ಘೀಳಿಡುತ್ತಿದ್ದಾರೆ. ಹಾಗಾಗಿ ವಾಟ್ಸ್ ಅಪ್ ಮೂಲಕ ಯಾರಾದರೂ ಯೂ ಟ್ಯೂಬ್ ದೃಶ್ಯಗಳನ್ನು ಕಳಿಸಿದರೆ, ಕೂಡಲೇ ಅವರನ್ನು ಬ್ಲಾಕ್ ಮಾಡಿ ದೃಶ್ಯಮಾಧ್ಯಮಗಳಿಂದ ದೂರ ಉಳಿದಿದ್ದೀನಿ.
ಇಂದು ಕನ್ನಡ ಜಗತ್ತಿನ ವರ್ತಮಾನದ ವಿಷಯಗಳಿಗೆ ಯಾವುದೇ ಆವೇಶ ಅಥವಾ ಪೂರ್ವಾಗ್ರಹವಿಲ್ಲದೆ ಸಾಮಾಜಿಕ ತಾಣಗಳಲ್ಲಿ ಬರೆಯುತ್ತಿರುವ ರಾಜಾರಾಂ ತಲ್ಲೂರ್ ನಮ್ಮ ನಡುವಿನ ಗಮನಾರ್ಹ ಪತ್ರಕರ್ತರಾಗಿ ಮತ್ತು ಲೇಖಕರಾಗಿ ಹೊರಹೊಮ್ಮಿದ್ದಾರೆ. ನಾನು ಕಳೆದ ಮೂರು ವರ್ಷದ ಹಿಂದೆ ಅವರ ಹೆಸರನ್ನೂ ಸಹ ಕೇಳಿರಲಿಲ್ಲ. ನಮ್ಮ ಮಂಡ್ಯದ ರಾಜೇಂದ್ರಪ್ರಸಾದ್ಒಮ್ಮೆ ಮಂಡ್ಯನಗರದಲ್ಲಿ ಬೇಟಿಯಾದಾಗ, ತಲ್ಲೂರ್ ಅವರ ಕರಿಡಬ್ಬಿ ಎಂಬ ಕೃತಿಯನ್ನು ನೀಡಿದ.( ಈಗ 2022 ರ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೃತಿಗೆ ದೊರತಿದೆ)
ಆ ಕೃತಿಯನ್ನು ಓದಿ, ಅಚ್ಚರಿಗೊಂಡ ನಾನು, ಕರಿಡಬ್ಬಿ ಕುರಿತಾಗಿ ಇಲ್ಲಿ ಬರೆದಿದ್ದೆ. ನಂತರ ನಿರಂತರವಾಗಿ ಅವರ ಲೇಖನಗಳನ್ನು ಗಮನಿಸುತ್ತಿದ್ದೀನಿ. ಯಾವುದೇ ಪೂರ್ವಾಗ್ರಹವಿಲ್ಲದೆ . ವರ್ತಮಾನದ ವಿಷಯವನ್ನು ತಲ್ಲೂರ್ ಹೇಗೆ ವಿಶ್ಲೇ಼ಷಿಸಬಲ್ಲರು ಎಂಬುದಕ್ಕೆ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ತನಿಖಾ ಪತ್ರಿಕೋದ್ಯಮ ಸತ್ತು ಹೋಗಿದೆ ಎಂಬ ಹೇಳಿಕೆ ಕುರಿತು ಹಾಗೂ ರಾಜ್ಯ ಬಜೆಟ್ ಹಿಂದಿನ ಕಹಿ ಸತ್ಯಗಳು ಮತ್ತು ಭವಿಷ್ಯದ ಆತಂಕಗಳು ಕುರಿತು ಬರೆದಿರುವ ಲೇಖನಗಳು ಸಾಕ್ಷಿಯಾಗಿವೆ.
ಒಂದು ಕಾಲದಲ್ಲಿ ಸರ್ದಾಜಿಗಳು ಎಂದರೆ ದಡ್ಡರು ಎಂಬ ಕಲ್ಪನೆ ಇಡೀ ದೇಶ್ಯಾದ್ಯಂತ ಅಸ್ತಿತ್ವದಲ್ಲಿತ್ತು. ಇಂಗ್ಲೀಷ್ ನಲ್ಲಿ ಸರ್ದಾಜಿ ಜೋಕ್ಸ್ ಎಂಬ ಪುಸ್ತಕಗಳು ಎಂಬತ್ತರ ದಶಕದಲ್ಲಿ ಪ್ರಸಿದ್ಧಿ ಪಡೆದಿದ್ದವು. ಆದರೆ, ಈ ಪರಿಕಲ್ಪನೆಯನ್ನು ತೊಡೆದು ಹಾಕಿದವರಲ್ಲಿ ಖಶ್ವಂತ್ ಸಿಂಗ್, ಡಾ.ಮನಮೋಹನ್ ಸಿಂಗ್ ಹಾಗೂ ಅವರ ಶಿಷ್ಯ ಮೊಂಟೆಕ್ ಸಿಂಗ್ ಅಹ್ಲುವಾಲಿಯ ಪ್ರಮುಖರು.
ರಾಜಾರಾಂ ತಲ್ಲೂರ್ ಇಂದು ಆರ್ಥಿಕ ವಿಷಯಗಳನ್ನು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಬರೆಯುತ್ತಿರುವವರಲ್ಲಿ ಮುಖ್ಯರು. ಅವರು ಮೊಂಟೆಕ್ ಸಿಂಗ್ ಅಹ್ಲುವಾಲಿಯ ಅವರ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಒಂದು ಕಾಲಘಟ್ಟದಲ್ಲಿ ಜಾಗತೀಕರಣದ ಕಡುವಿರೋಧಿಯಾಗಿ, ಮನಮೋಹನ್ ಸಿಂಗ್ ಅವರ ಆರ್ಥಿಕ ಧೋರಣೆಗಳನ್ನು ಕಟುವಾಗಿ ಟೀಕಿಸಿದ್ದ ನಾನು, ಈಗ ಜಾಗತೀಕರಣವೆಂಬುದು ನಮ್ಮ ಬದುಕಿನ ಭಾಗವಾಗಿರುವಾಗ, ಓರ್ವ ಅರ್ಥಶಾಸ್ತ್ರದ ಸಂಶೋಧಕನಾಗಿ ಅಮರ್ತ್ಯಸೇನ್ ಮತ್ತು ಮನಮೋಹನ್ ಅವರನ್ನು ಶ್ರೇಷ್ಠ ಅರ್ಥಶಾಸ್ತ್ರಜ್ಞರು ಎಂದು ಒಪ್ಪಿಕೊಂಡಿದ್ದೀನಿ.
ನಾನು ಮೊಂಟೆಕ್ ಅಹ್ಲುವಾಲಿಯ ಕೃತಿಯನ್ನು ಇಂಗ್ಲೀಷ್ ನಲ್ಲಿ ಓದಿದ್ದ ಕಾರಣದಿಂದ ತಲ್ಲೂರ್ ಅನುವಾದಿಸಿದ ಕೃತಿಯನ್ನು ಓದಲಿಲ್ಲ. ನಾನು ಕೇವಲ ಇಪ್ಪತ್ತು ಮಂದಿಯಷ್ಟು ಲೇಖಕರ ಮತ್ತು ಪತ್ರಕರ್ತರ ಬರಹಗಳನ್ನು ಮಾತ್ರ ಸಾಮಾಜಿಕ ತಾಣಗಳಲ್ಲಿ ಓದುತ್ತೇನೆ. ಹತ್ತು ವರ್ಷಗಳ ಹಿಂದೆ ದಿನವೊಂದಕ್ಕೆ ಹದಿನಾರು ನಿಮಿಷ ಸಾಮಾಜಿಕ ತಾಣ ವೀಕ್ಷಿಸುತ್ತಿದ್ದೆ ಈಗ ಐವತ್ತಾರು ನಿಮಿಷ ವೀಕ್ಷಿಸುತ್ತಿದ್ದೀನಿ ಎಂದು ತಿಳಿದ ನಂತರ ಮತ್ತೇ ಕಡಿಮೆ ಮಾಡಿದ್ದೀನಿ.
ಆದರೆ, ತಲ್ಲೂರ್ ಬರಹಗಳನ್ನು ಓದುತ್ತಿದ್ದೀನಿ. ಅವರು ವಾರ್ತಾಭಾರತಿಗೆ ಬರೆದ ಪಿಟ್ಕಾಯಣ ಅಂಕಣ ಬರಹಗಳನ್ನು ಅವರ ಗೋಡೆಯಲ್ಲಿ ಓದಿದ್ದರೂ ಸಹ ಪಿಟ್ಕಾಯಣ ಎಂಬ ಶೀರ್ಷಿಕೆ ನನಗೆ ಅರ್ಥವಾಗಿರಲಿಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರು ರಾಮಾಯಣದ ಮುಂದಿನ ಭಾಗವಾಗಿ ರೂಪಿಸಿರುವ ಕಥೆಯ ಶಿರ್ಷಿಕೆ ಎಂದು ಅವರ ಲೇಖನಗಳ ಸಂಗ್ರಹದ ಕೃತಿ ಓದಿದ ಮೇಲೆ ಅರ್ಥವಾಯಿತು.
ಗೆಳೆಯ ಜಿ.ಎನ್. ಮೋಹನ್ ತಮ್ಮ ಬಹುರೂಪಿ ಪ್ರಕಾಶನದ ಮೂಲಕ ಪ್ರಕಟಿಸಿರುವ ಪಿಟ್ಕಾಯಣ ಕೃತಿಯಲ್ಲಿನ ಐವತ್ತೆರಡು ಲೇಖನಗಳು ಅಂಕಣ ಬರಹಗಳಾಗಿದ್ದರೂ ಸಹ, ಇವುಗಳಲ್ಲಿ ಕೆಲವು ಅಂಕಣ ಬರಹಗಳು ಗಮನ ಸೆಳೆಯುತ್ತವೆ.
ಅಂಕಣ ಬರಹಗಳ ಇತಿ ಮಿತಿಗಳು ಏನೆಂದರೆ, ಅವುಗಳು ಆಯಾ ಕಾಲದ ತುರ್ತುಗಳಿಗೆ ಅನುಸಾರವಾಗಿ ವಿಷಯವನ್ನು ಆಯ್ಕೆ ಮಾಡಿಕೊಂಡು ಬರೆಯುವುದರಿಂದ ಈ ಬರಹಗಳು ದಶಕದ ನಂತರ ಪ್ರಸ್ತುತ ಎನಿಸುವುದಿಲ್ಲ. ಆದರೂ ಸಹ, ತಲ್ಲೂರ್ ಅವರು ಈ ಕೃತಿಯಲ್ಲಿ ಇಂದಿನ ಭಾರತದ ವರ್ತಮಾನದ ವಿಷಯಗಳನ್ನು ವಿಶೇಷವಾಗಿ ಆಡಳಿತಾರೂಢ ಸರ್ಕಾರಗಳ ತಪ್ಪುನಿರ್ಧಾರಗಳನ್ನು ವಸ್ತುನಿಷ್ಠವಾಗಿ ವಿಮರ್ಶೆ ಮಾಡಿದ್ದಾರೆ.
ಇದೇ ಲೇಖಕರ ಗಾದಿ may ಎಂಬ ಕೃತಿ ಕೂಡಾ 2022 ರಿಂದ 2024 ರವರೆಗೆ ಬರೆದ ಲೇಖನಗಳ ಕೃತಿಯಾಗಿದೆ. ಈ ಕೃತಿಯಲ್ಲಿನ ಲೇಖನಗಳು ಲೇಖಕರ ಸಾಮಾಜಿಕ ಕಳಕಳಿಯ ಜೊತೆಗೆ ತಾವು ಹುಟ್ಟಿ ಬೆಳೆದ ಕರಾವಳಿ ನೆಲದ ದುರಂತಗಳನ್ನು ಅವರು ವಿಮರ್ಶಿಸಿರುವ ಪರಿ ಓದುಗರನ್ನು ಚಿಂತಿಸಿವಂತೆ ಪ್ರೇರೇಪಿಸುತ್ತವೆ.
ರಾಜನೀತಿ ಭಾಗದಲ್ಲಿ ಪ್ರಭುತ್ವದ ತಪ್ಪು ಹೆಜ್ಜೆಗಳನ್ನು ವಿಮರ್ಶಿಸಿದರೆ, ಡೇಟಾ ಕಾಲ ವಿಭಾಗದಲ್ಲಿ ಮಾಹಿತಿ ತಂತ್ರಜ್ಞಾನದ ನೀತಿಯನ್ನು ಪ್ರಶ್ನಿಸಿದ್ದಾರೆ. ಅದೇ ರೀತಿಯಲ್ಲಿ ಆಡಿದ ಮಾತು ಭಾಗದಲ್ಲಿ ಉಡುಪಿ ಜಿಲ್ಲೆಗೆ ಸರ್ಕಾರ ನೀಡಿದ ಆಶ್ವಾಸನೆಗಳು, ಜಾರಿಯಾಗದೆ ಉಳಿದ ಬಗ್ಗೆ ದಾಖಲಿಸಿದ್ದಾರೆ. ಸಮುದ್ರ ಮತ್ತು ನದಿಗಳಿಂದ ಆವೃತ್ತವಾಗಿರುವ ನೆಲವಾದ ಉಡುಪಿಯ ಕುಡಿಯುವ ನೀರಿನ ಬವಣೆಯನ್ನು ಸಮಾಜದ ಮುಂದೆ ಅರ್ಥಪೂರ್ಣವಾಗಿ ಲೇಖಕರು ತೆರೆದಿಟ್ಟಿದ್ದಾರೆ.
ನನಗೆ ಈ ಕೃತಿಯನ್ನು ಓದುವಾಗ, ನನ್ನ ಹಿರಿಯ ಮಿತ್ರರು ಹಾಗೂ ಅರ್ಥಶಾಸ್ತ್ರಜ್ಞರಾದ ದಿವಂಗತ ಡಾ. ನಿ. ಮುರಾರಿ ಬಲ್ಲಾಳರ ,, ಕಿಟಕಿಗಳು, ಕನ್ನಡಿಗಳು,, ಎಂಬ ಕೃತಿಯ ನೆನಪಾಯಿತು. ಪಿ.ಲಂಕೇಶರ ಟೀಕೆ ಟಿಪ್ಪಣಿ ಭಾಗ- ಒಂದು ಹಾಗೂ ನನ್ನ ಪತ್ರಿಕೋದ್ಯಮದ ಗುರುಗಳಲ್ಲಿ ಒಬ್ಬರಾದ ಬಿ.ವಿ. ವೈಕುಂಠರಾಜು ಅವರು ಬರೆದ ಸಂಪಾದಕೀಯ ಎಂಬ ವಾರ ಪತ್ರಿಕೆಯ ಸಂಪಾದಕೀಯ ಬರಹಗಳ ಕೃತಿ ಇವುಗಳು ಬೀರಿದ್ದ ಪ್ರಭಾವವನ್ನು ರಾಜಾರಾಂ ತಲ್ಲೂರ್ ಅವರ ಕೃತಿಗಳು ಸಹ ಬೀರಿದವು.
ಇಂದು ಒಬ್ಬ ಪತ್ರಕರ್ತ ಅಥವಾ ಲೇಖಕ ಒಂದು ಪಕ್ಷಕ್ಕೆ ಅಥವಾ ಒಬ್ಬ ರಾಜಕೀಯ ಧುರೀಣನಿಗೆ ನಿಷ್ಠೆ ತೋರಿಸಿ ಅಭಿಮಾನಿಯಾಗುವುದು ದೊಡ್ಡ ಸಂಗತಿಯಲ್ಲ. ಆದರೆ, ಆತ್ಮಸಾಕ್ಷಿಗೆ ನಿಷ್ಠನಾಗಿ ಬದುಕುವುದು ಮತ್ತು ಬರೆಯುವುದು ನಿಜಕ್ಕೂ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಇಂದು ಉಡುಪಿ, ಮಂಗಳೂರು ನೆಲದಲ್ಲಿ ರಾಜಾರಾಂ ತಲ್ಲೂರು, ಪಂಜು ಗಂಗೊಳ್ಳಿ ಮತ್ತು ನವೀನ್ ಸೂರಿಂಜೆ ನನ್ನೊಳಗೆ ಭರವಸೆ ಮೂಡಿಸಿದ್ದಾರೆ.
ಇಂತಹವರ ಸಂತತಿ ನಾಡಿನೆಲ್ಲೆಡೆ ವಿಸ್ತರಿಸಲಿ ಎಂದು ಹಾರೈಸುತ್ತೇನೆ.
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
ಅಂಧತ್ವವನ್ನು ಬದುಕಿನ ಹೋರಾಟದ ಮೆಟ್ಟಿಲಾಗಿ ಪರಿವರ್ತಿಸಿಕೊಂಡು ಯಶ ಕಂಡಿರುವ ಸಿದ್ದೇಶ್ ಕೆ ಅವರಿಗೆ ಗೌರವಪೂರ್ವಕ ನಮನಗಳು...
©2025 Book Brahma Private Limited.