ದುಃಖದ ಉತ್ಪಾತ - ದಿ ಸ್ಕ್ರೀಮ್

Date: 03-03-2021

Location: .


ಮನುಷ್ಯರ ಭಾವನಾತ್ಮಕ ಮತ್ತು ಮಾನಸಿಕ ಸ್ಥಿತಿಯನ್ನು ಕಲಾಕೃತಿಯಲ್ಲಿ ಶೋಧಿಸಿ ಕ್ಯಾನ್ವಾಸ್‌ ಮೇಲೆ ಪ್ರತಿಬಿಂಬಿಸುವ ಕಲಾವಿದ ‘ಎಡ್ವರ್ಡ್ ಮುಂಕ್’. ಅವರ ಹೆಸರಾಂತ ಚಿತ್ರ ದಿ ಸ್ಕ್ರೀಮ್’ ಕುರಿತು ಲೇಖಕ ಲಕ್ಷ್ಮಣ ಬಾದಾಮಿ ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ವಿಶ್ಲೇಷಿಸಿದ ಬರಹ ಇಲ್ಲಿದೆ.

ಕಲಾಕೃತಿ : ದಿ ಸ್ಕ್ರೀಮ್
ಕಲಾವಿದ : ಎಡ್ವರ್ಡ್ ಮುಂಕ್
ಕಾಲ : 1863 - 1944
ದೇಶ : ನಾರ್ವೆ
ಕಲಾಪಂಥ : ಅಭಿವ್ಯಕ್ತಿವಾದ

‘ಅಯ್ಯಯ್ಯೋ...!!! ಎಂದು ಅವನು ಭಯಂಕರವಾದ ಅಂಜಿಕೆಯಿಂದ ಚೀರುತ್ತಿದ್ದಾನೆ. ಆ ಚೀತ್ಕಾರದ ಧ್ವನಿ ಅದೆಷ್ಟು ತೀವ್ರವಾಗಿದೆಯೆಂದರೆ ಚಿತ್ರ ನೋಡುತ್ತಿರುವವನು ಸಹ ಕೇಳಿಸಿಕೊಳ್ಳಲಾಗದೇ ಕಿವಿ ಮುಚ್ಚಿಕೊಳ್ಳುವಷ್ಟು. ಅಂದರೆ ಈ ಚಿತ್ರ ಸೌಂಡ್ ನ್ನು ಹೊರಡಿಸುತ್ತಿದೆಯಾ..?! ಅಂದರೆ ಹೌದು ಎನ್ನಬೇಕು. ಆದರೆ ಆ ಧ್ವನಿ ಕಿವಿಗೆ ಕೇಳಿಸುವುದಿಲ್ಲ ಬದಲಿಗೆ ಕಣ್ಣಿಗೆ ಕೇಳಿಸುತ್ತದೆ. ವಾಕ್ ಮತ್ತು ಅರ್ಥ ಒಂದರ ಬೆನ್ನಿಗೆ ಇನ್ನೊಂದಿರುವಂತೆ ಇಲ್ಲಿಯೂ ದೃಕ್ (ದೃಶ್ಯ) ಮತ್ತು ಪರಸ್ಪರ ಬೆನ್ನಿಗಂಟಿಕೊಂಡಂತೆ ಇದೆ. ಕಣ್ಣು ಮತ್ತು ಕಿವಿ ಇವೆರಡರಿಂದಲೇ ನಾವು ಕಲೆಯನ್ನು ಅರಿಯುತ್ತೇವೆ. ಕಣ್ಣಿನಿಂದಷ್ಟೇ ಅರಿಯಬಹುದಾದದ್ದನ್ನು ಕಿವಿಗೂ ಮತ್ತು ಕಿವಿಯಿಂದಷ್ಟೇ ಅರಿಯಬೇಕಾದ್ದನ್ನು ಕಣ್ಣಿಗೂ ಕಾಣಿಸುವಂತಹ ಕಲಾಕೃತಿಗಳು ಸೃಷ್ಟಿಯಾಗಿವೆ, ಮತ್ತು ಆಗುತ್ತಲೂ ಇವೆ. ಇದು ಸಾಧ್ಯವಾಗುವುದು ಕಲಾವಿದನೋರ್ವನು ಅನುಭವಗಳಿಂದ ಮಾಗಿದ ಸ್ಥಿತಿಯಲ್ಲಿದ್ದಾಗ ಇಲ್ಲವೆ ಅವನು ತನ್ನ ಅನುಭವವನ್ನು ತನ್ನ ಮಾಧ್ಯಮದ ಮೂಲಕ ಪುನರುತ್ಪಾದಿಸುವ ಪ್ರಚಂಡ ಶಕ್ತಿವಂತನಾಗಿದ್ದಾಗ ಇದು ಸಾಧ್ಯವಾಗುತ್ತದೆ.

ಎಡ್ವರ್ಡ್ ಮುಂಕ್‌ನ ‘The Scream' ನೋಡಿದಾಗ ಅವನಿಗೆ ಈ ಎರಡು ಸಾಮರ್ಥ್ಯವಿತ್ತು ಎನ್ನಬೇಕಾಗುತ್ತದೆ. ಮುಖ್ಯವಾಗಿ ಮುಂಕ್ ತನಗಾದ ಅನುಭವವನ್ನು Re Produce ಮಾಡಿದ್ದಾನೆ. ಅವನು ಎಷ್ಟರಮಟ್ಟಿಗೆ ಭೀತಿಯಿಂದ ಚೀರಿದ್ದಾನೆಂಬುದು ಕೃತಿ ನೋಡಿದವನಿಗೆ ಸ್ಪಷ್ಟವಾಗಿ ಮನವರಿಕೆಯಾಗುತ್ತದೆ. ಚಿತ್ರದಲ್ಲಿ ಚೀರುತ್ತಿರುವ ವ್ಯಕ್ತಿಯ ಮುಖದಲ್ಲಿ ಹೆಚ್ಚು ವಿವರಗಳನ್ನು ತುಂಬದೇ ನಿರ್ದಿಷ್ಟ ಉದ್ಧೇಶವನ್ನು ಕಲಾವಿದ ಸಾಧಿಸಿರುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ. ತಲೆಬುರಡೆಯಂಥ ಮುಖ, ಅದರಲ್ಲಿ ಹಿಗ್ಗಿದ ಕಣ್ಣುಗಳು, ಎರಡು ಚುಕ್ಕೆಗಳಲ್ಲೇ ಮುಗಿದ ಮೂಗು, ‘ಓ.... ಅಂತ ಚೀರುತ್ತಿರುವ ಬಾಯಿ ಮತ್ತು ತನ್ನ ಬಾಯಿಯ ಸೌಂಡ್‌ಗೆ ತಾನೇ ಬೆದರಿದಂತೆ ತನ್ನೆರಡು ಕೈಗಳಿಂದ ಕಿವಿಗಳನ್ನು ವ್ಯಕ್ತಿ ಮುಚ್ಚಿಕೊಂಡಿದ್ದಾನೆ.

ಮುಂಕ್ ತನ್ನದೇ ಭಾವನಾತ್ಮಕ ಮತ್ತು ಮಾನಸಿಕ ಸ್ಥಿತಿಯನ್ನು ಶೋಧಿಸಬೇಕೆಂದು ತನ್ನನ್ನು ತಾನೇ ನಿಕಷಕ್ಕೆ ಒಡ್ಡಿಕೊಳ್ಳತೊಡಗಿದ್ದನು. ಇದನ್ನು ವಿಮರ್ಶಕರು ‘ಆತ್ಮದ ಅಧ್ಯಯನ ಎಂದಿದ್ದಾರೆ. ಸ್ವತಃ ಮುಂಕ್ ಸ್ಕ್ರೀಮ್ ಕೃತಿ ರಚನೆಯ ಹಿನ್ನೆಲೆಯಲ್ಲಿ ಹೇಳಿದ್ದಾನೆ- ‘ಸೂರ್ಯಾಸ್ತದ ಸಮಯದಲ್ಲಿ ನಾನು ನನ್ನಿಬ್ಬರು ಗೆಳೆಯರೊಡನೆ ವಾಕಿಂಗ್‌ಗೆಂದು ರಸ್ತೆಗಿಳಿದಿದ್ದೆ. ಇದ್ದಕ್ಕಿದ್ದಂತೆ ಆಕಾಶ ರಕ್ತಮಯ ಕೆಂಪು ವರ್ಣಕ್ಕೆ ತಿರುಗಿತು. ನಾನು ನಿಂತು ರಸ್ತೆಯ ಪಕ್ಕಕ್ಕೆ ಸರಿದೆ. ನಾನಾಗ ಬಾಯಿಂದ ಹೇಳಲಾಗದಷ್ಟು ದಣದು ಬಿಟ್ಟಿದ್ದೆ. ಬೆಂಕಿಯ ನಾಲಿಗೆಗಳು ಮತ್ತು ರಕ್ತವು ನೀಲಿಬೆರೆತ ಕಪ್ಪು ಬಣ್ಣದ ಮೇಲೆ ಹರಡಿತು. ನನ್ನ ಸ್ನೇಹಿತರು ವಾಕಿಂಗ್ ಮಾಡುತ್ತ ನಡೆದಿದ್ದರು. ನಾನು ಹಿಂದುಳಿದಿದ್ದೆ. ಭಯದಿಂದ ನಡುಗುತ್ತಿದ್ದೆ ನಂತರ ನಾನು ಪ್ರಕೃತಿಯ ಅಗಾಧವಾದ ಅನಂತವಾದ ಕಿರುಚಾಟವನ್ನು ಕೇಳಿದೆ, ಮುಂಕ್ ಹೇಳುವಂತೆ ‘ದುಃಖದ ಉತ್ಪಾತ’ ಪ್ರಕೃತಿಯಿಂದಲೇ ಆಗಿದೆ. ಅದನ್ನು ಕಂಡು ತಾನು ಬೆಚ್ಚಿರುವುದಾಗಿ ಹೇಳುತ್ತಾನೆ. ಅದಕ್ಕೆಯೇ ಚಿತ್ರದಲ್ಲಿ ಆಕಾಶದ ತುಂಬಾ ರಕ್ತರಂಜಿತ ಕೆಂಪು ಅಲೆ ಅಲೆಯಾಗಿ ಸಂಚಲಿಸಿದೆ. ಈ ಸಂಚಲನ ಕೃತಿಯ ತುಂಬಾ ವ್ಯಾಪಿಸಿಕೊಂಡಿದೆ. ಹಿನ್ನೆಲೆಯ ಬೆಟ್ಟ, ಬಯಲಿನಲ್ಲೂ ಕಂಪನಗಳ ಆವರ್ತನ. ರಸ್ತೆಯ ತುಂಬಾ ಧಾವಂತದ ರೇಖೆಗಳೇ ತುಂಬಿ ಅವಕ್ಕೆ ಇನ್ನಿಲ್ಲದ ಆವೇಗ ಬಂದು ಅವನ ಗೆಳೆಯರು ಕ್ಷಣ ಹೊತ್ತಿನಲ್ಲಿಯೇ ಕಿಲೋಮೀಟರ್‌ನಷ್ಟು ದೂರಕ್ಕೆ ಸಾಗಿದ್ದಾರೆ.

ಪ್ರಸ್ತುತ ಚಿತ್ರ ಆ ಹೊತ್ತಿನಲ್ಲಿ ಮುಂಕ್‌ನೊಬ್ಬನ ಮನಸ್ಥಿತಿಯ ಬಿಂಬವಾಗಿದ್ದರೆ ಈ ಹೊತ್ತಿನಲ್ಲಿ ಸಾರ್ವಕಾಲಿಕವಾಗಿ ಆಧುನಿಕ ಮನುಷ್ಯನ ಚಿತ್ರಣವೇ ಆಗಿ ತೋರುತ್ತಿದೆ. ಸದಾ ಒತ್ತಡ, ಆತಂಕಗಳ ಜತೆಯಲ್ಲೇ ಜೀವನ ದೂಡುತ್ತಿರುವ ಮನುಷ್ಯನ ಆರ್ತನಾದದಂತಿದೆ ಇದು. ಆಧುನಿಕ ಮನುಷ್ಯನ ನಡೆ ಯಾವತ್ತೂ ಪ್ರಕೃತಿಯ ವಿರುದ್ಧವೇ ಆಗಿರುತ್ತದೆ. ಅಂದು ಮುಂಕ್‌ನಿಗೆ ಹಠಾತ್ತಾಗಿ ಮುನಿಸಿನ ರೂಪ ತೋರಿ ಅವನನ್ನು ಬೆದರಿಸಿದ್ದರೆ, ಇಂದಿನ ಧಾರ್ಷ್ಟ್ಯ ಮನುಷ್ಯರು ಕೇವಲ ರೂಪಕ್ಕೆ ಭಯಭೀತರಾಗುವವರಲ್ಲ. ಅವರಿಗೆ ಭಯಂಕರ ಕ್ರಿಯೆಯೇ ಜರುಗಬೇಕು. ತತ್ಪರಿಣಾಮವಾಗಿಯೋ ಏನೋ ಈ ಹೊತ್ತಿನ ಆಧುನಿಕ ಕಾಲದಲ್ಲಿ ಭಯಂಕರವಾದ ನೆರೆ ಹಾವಳಿಗಳು, ರೋಗ ರುಜಿನಗಳು ಔಷಧವೇ ಇರದ ಸೂಕ್ಷ್ಮಾತಿಸೂಕ್ಷ್ಮ ರೋಗಗಳಿಗೆ ಇಂದಿನ ಮನುಷ್ಯ ಹೌಹಾರಿದ್ದಾನೆ.

Death in Sick room, Anxity, The Sick child, Despair by Death Bed, Jealousy, The Death Chamber, The Dead Mother , Love and Pain ಇವು ಮುಂಕ್‌ನ ಕೆಲವು ಕಲಾಕೃತಿಗಳ ಶೀರ್ಷಿಕೆಗಳು. ಇವುಗಳನ್ನು ನೋಡಿದರೆ ಇವನು ಸಾವು-ದುಃಖಗಳಿಗೆ ಸಾಕಷ್ಟು ಎದುರಾಗಿದ್ದಾನೆ ಅನ್ನಿಸದಿರದು. ಹೌದು ವಿನ್ಸೆಂಟ್ ವ್ಯಾನ್‌ಗೋ, ಫ್ರೈಡಾ ಕಹ್ಲೋಳಂತೆಯೇ ಎಡ್ವರ್ಡ್ ಮುಂಕ್‌ನದು ಕೂಡಾ ನೋವಿಗದ್ದಿದ ಕುಂಚವೇ. ತಂದೆ-ತಾಯಿ, ಅಜ್ಜ, ಸೋದರಿಯ ಸಾವುಗಳು ಮತ್ತು ಒಬ್ಬ ಸೋದರಿಯ ಮಾನಸಿಕ ಅಸ್ವಸ್ಥತೆ ಇವೆಲ್ಲದರ ನೋವು ಅವನನ್ನು ಸದಾ ಬಾಧಿಸುತ್ತಿತ್ತು. ಸ್ವತಃ ಅವನೂ ಕೂಡ, ಆಗಾಗ ಅನಾರೋಗ್ಯದಿಂದ ಬಳಲುತ್ತಿದ್ದ. ಪರಿಣಾಮವಾಗಿ ಅವನಿಂದ ದುಃಖತಪ್ತ ಚಿತ್ರಗಳೇ ಮೂಡಿದವು.

ಸ್ವಾನುಭವದ ಆತ್ಮಕಥಾನಕಗಳನ್ನು ಚಿತ್ರಿಸುವಾಗ ಕಲಾವಿದನು ತನ್ನ ಕೃತಿಯಿಂದ ಮಾನಸಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ತನ್ನ ದುಃಖಚರಿತೆಯನ್ನು ಹೇಳಿ ಅನುಕಂಪೆ ಗಿಟ್ಟಿಸುವ ತೋರಿಕೆಯಾಗಿ ಬಿಡಬಹುದು. ಇಲ್ಲಿ ಮುಂಕ್ ಹಾಗೆ ಮಾಡದೇ ಸದೂರದಲ್ಲಿದ್ದು ನೋವನ್ನು ತೋಡಿಕೊಂಡಿದ್ದಾನೆ. ಅದು ಅವನೊಬ್ಬನದೇ ಅನ್ನಿಸದೆ ಎಲ್ಲರ ದುಃಖವು ಅನ್ನಿಸುವಂತೆ ಮಾಡಿದ್ದಾನೆ. ಇಂಥ ಸದೂರವನ್ನು ಕಾಯ್ದುಕೊಳ್ಳಲಿಕ್ಕೆ ವ್ಯಾನ್‌ಗೋ ಮತ್ತು ಫ್ರೈಡಾ ಕಹ್ಲೋ ಇಬ್ಬರಿಗೂ ಸಾಧ್ಯವಾಗಿಲ್ಲವೆಂದು ಹೇಳಬೇಕಾಗುತ್ತದೆ. ಹಳಹಳಿ, ಯಾತನೆಗಳ ಜೊತೆಗೆ ಬದುಕಿದ ಮುಂಕ್‌ನ ಕಲಾಕೃತಿಗಳಲ್ಲಿ ವಿಷಣ್ಣತೆ ಇರುವಂತೆ ರಾಚನಿಕವಾಗಿ ಒಂದಿಷ್ಟು ವಿಕ್ಷಿಪ್ತತೆಯೂ ಕಂಡುಬರುತ್ತದೆ. ಬಿಡುಬೀಸಾದ, ಗೀಚಾಟದಂತಿರುವ ಕುಂಚದ ಸ್ಟ್ರೋಕ್ಸ್, ತೈಲವರ್ಣವನ್ನು ಜಲವರ್ಣದಂತೆ ಬಳಸಿರುವ ರೀತಿ, ಅಪೂರ್ಣವೆನಿಸುವ ಕೆಲವು ಕಲಾಕೃತಿಗಳು.. ಇವೆಲ್ಲ ಒಂದು ತೆರನಾದರೆ ಇನ್ನೊಂದೆಡೆ ವಿಫುಲ ವರ್ಣಗಳನ್ನು ಬಳಸಿ ಅವುಗಳ ಪ್ರತಿಫಲನದ ಪರಿಣಾಮಗಳನ್ನು ಆಕೃತಿಗಳಲ್ಲೆಲ್ಲಾ ಚದುರಿಸುವ ಚಮತ್ಕೃತಿ ಅವನದು. ಕೃತಿ ನಿರ್ಮಾಣದಲ್ಲಿ ಅವನಿಗೆ ಬಾಹ್ಯ ವಾಸ್ತವಕ್ಕಿಂತ ಅವನೊಳಗಿನ ಆಂತರಿಕ ತುಮುಲುಗಳು ಹೆಚ್ಚು ಕೆಲಸ ಮಾಡಿವೆ. ‘ರೂಪ, ಸ್ಪಷ್ಟತೆ, ಸೊಬಗು, ಸಂಪೂರ್ಣತೆ ಮತ್ತು ವಾಸ್ತವಿಕತೆಯನ್ನು ನಿರ್ದಯವಾಗಿ ತಿರಸ್ಕರಿಸಿ ತನ್ನ ಪ್ರತಿಭೆಯ ಅಂತರ್ಬೋಧೆಯ ಬಲದಿಂದ ಆತ್ಮದ ಸೂಕ್ಷ್ಮ ದರ್ಶನಗಳನ್ನು ಚಿತ್ರಿಸುತ್ತಾನೆ ಎಂದು ವಿಮರ್ಶಕರೊಬ್ಬರು ಮುಂಕ್‌ನ ಚಿತ್ರ ರಚನೆಯ ಬಗ್ಗೆ ಹೇಳುತ್ತಾರೆ. ಹಾಗೆಯೇ, ಇವನ ಮೇಲೆ ಪಾಲ್ ಗಾಗಿನ್, ವ್ಯಾನ್‌ಗೋ ಮತ್ತು ಹೆನ್ರಿ ಡಿ ಟೌಲೌಸ್ ಲೌಟ್ರೆಕ್ ಇವರ ಪ್ರಭಾವವಾಗಿರುವುದನ್ನು ಗುರುತಿಸುತ್ತಾರೆ.

 

ಈ ಹಿಂದಿನ ಅಂಕಣ ಬರಹಗಳು

ಹಸಿವು ತಣಿಸುವ ತಾಯಿ

ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು

ಗೌಳಿಗಿತ್ತಿಯ ಮೌನ ಜಾಗರಣೆ!

ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...