ದ್ವನಿ ಎಂಬ ಜಗತ್-ವಲಯ

Date: 09-10-2022

Location: ಬೆಂಗಳೂರು


ಪ್ರತಿಯೊಂದು ದ್ವನಿಯೂ ವ್ಯಾಪಕ ಬಿನ್ನತೆಯನ್ನು ಹೊಂದಿರುತ್ತದೆ. ಅನಂತ ಸಾದ್ಯತೆಯ ಇಶ್ಟೆಲ್ಲ ದ್ವನಿಗಳನ್ನು ಅದ್ಯಯನ ಮಾಡುವುದು ಅಸಾದ್ಯ ಮತ್ತು ಅನವಶ್ಯಕ ಎಂಬ ಅರಿವಿನಿಂದಲೆ ಬಾಶಾವಿಗ್ನಾನದಲ್ಲಿ ದ್ವನಿಮಾ ಎಂಬ ಪರಿಕಲ್ಪನೆ ಬಂದಿದೆ ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಧ್ವನಿಗಳ ಬಗ್ಗೆ ಬರೆದಿದ್ದಾರೆ.

ಮನುಶ್ಯರು ದ್ವನ್ಯಂಗಗಳ ಸಹಾಯದಿಂದ ಉಚ್ಚರಿಸುವ ಎಲ್ಲವೂ ದ್ವನಿಗಳೆ, ಆದರೆ ಅವೆಲ್ಲವೂ ದ್ವನಿಮಾ ಆಗಲಾರವು. ಬಾಶಾವಿಗ್ನಾನದಲ್ಲಿ ಅದ್ಯಯನದ ಅನುಕೂಲಕ್ಕಾಗಿ ಇಂತಾ ಪಾರಿಬಾಶಿಕಗಳನ್ನು ಮಾಡಿಕೊಳ್ಳಲಾಗಿದೆ. ಸಹಜವಾಗಿ ಉಚ್ಚಾರವಾಗುವ ಮತ್ತು ಪದರಚನೆಗಳಲ್ಲಿ ಬಳಕೆಯಾಗುವ ದ್ವನಿಗಳನ್ನು ಬಾಶಾವಿಗ್ನಾನದಲ್ಲಿ ’ದ್ವನಿಗಳು’ ಎಂದು ಪರಿಗಣಿಸುತ್ತಾರೆ. ಅಂದರೆ, ಮುಕದಲ್ಲಿನ ದ್ವನ್ಯಂಗಗಳ ಸಹಾಯದಿಂದ ಉಚ್ಚರಿಸುವ ಇತರ ಕೆಲವು ದನಿಗಳನ್ನು ಅವು

ಪದರಚನೆಯಲ್ಲಿ ಬರುವುದಿಲ್ಲವಾದ್ದರಿಂದ ದ್ವನಿಗಳೆಂದು ಪರಿಗಣಿಸುವುದಿಲ್ಲ. ಹಾಗಾದರೆ, ಬಾಯಿಯಿಂದ ಹುಟ್ಟುವ ಒಂದು ’ದನಿ” ’ದ್ವನಿ’ಯಾಗಬೇಕಾದರೆ ಅದು ಪದಗಳನ್ನು ಕಟ್ಟುವುದಕ್ಕೆ ಬಳಕೆ ಆಗಬೇಕು. ಇಲ್ಲಿ ಮನುಶ್ಯರು ಉಚ್ಚರಿಸುವ ’ದನಿ’ಗಳೆಲ್ಲವೂ ಯಾಕೆ ಬಾಶೆಯ ’ದ್ವನಿ’ಗಳಾಗಲಾರವು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ. ಮುಂದುವರೆದು, ಬಾಶೆಯಲ್ಲಿ

’ದ್ವನಿ’ಗಳಾದ ಎಲ್ಲವೂ ಒಂದೆ ರೀತಿಯ ಸ್ತಾನಮಾನವನ್ನು, ಕೆಲಸವನ್ನು ಹೊಂದಿರುತ್ತವೆಯೆ ಎಂಬುದನ್ನು ತುಸು ಆಲೋಚಿಸಬಹುದು.

ಕುತೂಹಲವೆಂದರೆ, ನಿಸರ‍್ಗ ತನ್ನೊಡಲೊಳಗಿನ ಎಲ್ಲ ಬಹುಳತೆಯನ್ನ, ಅದರೊಟ್ಟಿಗೆನೆ ಮೇಲ್ಕಿಳಿನ ರಚನೆಯನ್ನು, ಏರಿಳಿಗಳನ್ನು ಬಾಶೆಯ ಒಳಗೂ ವ್ಯಕ್ತಪಡಿಸುತ್ತದೆ. ಒಬ್ಬ ವ್ಯಕ್ತಿಯನ್ನು ಕರೆದು ಒಂದು ದ್ವನಿಯನ್ನು ಹಲವು ಬಾರಿ ಉಚ್ಚರಿಸಲು ಹೇಳಿದಾಗ ಅಶ್ಟೂ ಬಾರಿ ಆ ವ್ಯಕ್ತಿ ಒಂದು ದ್ವನಿಯನ್ನು ಒಂದೆ ರೀತಿಯಲ್ಲಿ ಉಚ್ಚರಿಸುತ್ತಾರೆ ಎಂಬುದು ತುಸು ಕಶ್ಟಸಾದ್ಯವಾದ ವಿಚಾರ. ಮುಕಕುಹರದಲ್ಲಿ ವಿಶಾಲವಾದ ಜಾಗದ ಕೆಲಕೆಲ ಬಿಂದುಗಳಲ್ಲಿ ಒಂದೊಂದು ದ್ವನಿ ಹುಟ್ಟುವುದಾದರೂ ಪ್ರತಿಯೊಂದು ದ್ವನಿಗೂ ಅದರದೆ ಆದ ಗಡಿ ಎಂಬುದೊಂದು ಇರುತ್ತದೆ. ಆ ಗಡಿಯ ಒಳಗೆ ಆ ದ್ವನಿಯ ಉಚ್ಚರಣೆಗೆ ವಿಪರೀತ ಸ್ವಾತಂತ್ರವಿರುತ್ತದೆ. ಆ ಗಡಿಯ ಉದ್ದಗಲಕ್ಕೂ ಆ ದ್ವನಿ ಎಲ್ಲಿ ಬೇಕಾದರೂ ಉಚ್ಚಾರವಾಗಬಹುದು. ಇದು ಕಾರಣ ಒಂದೆ ದ್ವನಿಯನ್ನು ಹಲವು ಬಾರಿ ಉಚ್ಚರಿಸಿದಾಗ ಆ ದ್ವನಿ ಒಂದೆ ರೀತಿ ಇರುತ್ತದೆ ಎಂದು ಹೇಳಲು ಬಾರದು. ಈ ಬಿನ್ನತೆ ಮನುಶ್ಯಮಾತ್ರರಿಗೆ ಗೊತ್ತಾಗದೆ ಇರಬಹುದು. ಇಂದಿನ ತಂತ್ರಗ್ನಾನ ಇದನ್ನೆಲ್ಲ ಅರ‍್ತ ಮಾಡಿಕೊಳ್ಳುವುದಕ್ಕೆ ಹೆಚ್ಚು ಹೆಚ್ಚು ಸಹಾಯ ಮಾಡುತ್ತದೆ. ಪದಮೊದಲು, ಪದನಡುವೆ, ಪದಕೊನೆ, ಒತ್ತಕ್ಕರ ಹೋಗೆ ವಿವಿದ ಪರಿಸರಗಳಲ್ಲಿ ಬಳಕೆಯಾಗುವ ಒಂದು ದ್ವನಿಯೂ ಬಿನ್ನವಾಗುವ ಸಾದ್ಯತೆ ಇದೆ. ಇನ್ನೂ ಕೆಲವೊಮ್ಮೆ ಪದದ ನಿರ‍್ದಿಶ್ಟ ಪರಿಸರವೂ ಹೀಗೆ ದ್ವನಿಯಲ್ಲಿ ಬಿನ್ನತೆ ಉಂಟಾಗಲಿಕ್ಕೆ ಕಾರಣವಾಗುತ್ತಿರುತ್ತದೆ. ಅಂದರೆ, ಅವಲೋಕಿಸುತ್ತಿರುವ ದ್ವನಿಯ ಹಿಂದಿನ ಮತ್ತು ಮುಂದಿನ ದ್ವನಿ, ಸ್ವರವೊ, ವ್ಯಂಜನವೊ, ಸ್ವರವಾಗಿದ್ದಲ್ಲಿ ಎಂತ ಸ್ವರ, ವ್ಯಂಜನವಾಗಿದ್ದಲ್ಲಿ ಎಂತ ವ್ಯಂಜನ ಎಂಬ ಅಂಶಗಳು ಆ ನಿರ‍್ದಿಶ್ಟ ದ್ವನಿಯ ಉಚ್ಚರಣೆಯನ್ನು ನಿರ‍್ದರಿಸುತ್ತಿರುತ್ತವೆ. ಅನುನಾಸಿಕ, ಒತ್ತಕ್ಕರ

ಇವು ಹೀಗೆ ದ್ವನಿಯೊಂದರ ಉಚ್ಚರಣೆಯನ್ನು ಪ್ರಬಾವಿಸುವ ಮಹತ್ವದ ಅಂಶಗಳು. ಒಬ್ಬ ವ್ಯಕ್ತಿಯ ಉಚ್ಚರಣೆಯಲ್ಲಿಯೆ ಇದೆಲ್ಲ ಬಿನ್ನತೆ ಇರುವ ಅವಕಾಶ ಇದೆ. ಇನ್ನೂ ಮುಂದುವರೆದು ವ್ಯಕ್ತಿಯೊಬ್ಬರು ಬದುಕಿನ ಉದ್ದಕ್ಕೂ ಒಂದು ದ್ವನಿಯನ್ನು ಒಂದೆ ರೀತಿಯಲ್ಲಿ ಉಚ್ಚರಿಸುತ್ತಾರೆ ಎಂದು ಹೇಳುವುದೂ ಕಶ್ಟ. ಒಂದು ವ್ಯಕ್ತಿಯ ಬದುಕಿನ ಅವದಿಯಲ್ಲಿ ದ್ವನಿಯೊಂದರ ಉಚ್ಚರಣೆಯಲ್ಲಿ ಬದಲಾವಣೆಗಳು ಸಹಜವಾಗಿ ಆಗುವ ಅವಕಾಶಗಳು ತುಂಬಾ ಇರುತ್ತವೆ. ತಲೆಮಾರುಗಳ ನಡುವೆ ಸಹಜವಾಗಿಯೆ ಈ ಬದಲಾವಣೆ ಇನ್ನೂ ದೊಡ್ಡದಾಗಿರುತ್ತದೆ. ಇದು ಸಾಮೂಹಿಕ ಇಲ್ಲವೆ ಸಾಮಾಜಿಕ ಹಂತಕ್ಕೆ ಬಂದಾಗ ದೊಡ್ಡದಾಗಿ ಕಾಣಿಸುತ್ತದೆ. ಪ್ರತಿ ಬಾಶೆಯಲ್ಲಿಯೂ ದ್ವನಿಯ ಉಚ್ಚರಣೆಯಲ್ಲಿ ಕಾಲಾಂತರದಲ್ಲಿ ಸಾಕಶ್ಟು ಬದಲಾವಣೆಗಳು ಆಗುತ್ತಲೆ ಇರುತ್ತವೆ. ಇದಕ್ಕೆ ಮೂಲಬೂತವಾದ ಕಾರಣವೆಂದರೆ ಹೀಗೆ ವ್ಯಕ್ತಿ ನೆಲೆಯಲ್ಲಿ ಪ್ರತಿ ದ್ವನಿಗೆ

ಇರುವ ಮುಕ್ತ ಅವಕಾಶ. ಈ ಬದಲಾವಣೆ ಮುಂದೆ ದೊಡ್ಡಪ್ರಮಾಣದಲ್ಲಿ ಅಂದರೆ ಮನುಶ್ಯಮಾತ್ರರಿಗೆ ಅವಲೋಕಿಸುವುದಕ್ಕೆ ಸಾದ್ಯವಾಗುವಶ್ಟು ಬಿನ್ನತೆಯನ್ನು ಪಡೆದುಕೊಂಡಾಗ ಅದು ದ್ವನಿ ಬದಲಾವಣೆಯಾಗಿ ಕಾಣಿಸಿಕೊಳ್ಳುತ್ತದೆ.

ದ್ವನಿ ಬದಲಾವಣೆ ಎನ್ನುವುದು ಮೊದಲು. ದ್ವನಿಮಾ ಬದಲಾವಣೆ ಆನಂತರ. ಅಂದರೆ ಪ್ರತಿಯೊಂದು ದ್ವನಿಯಲ್ಲಿ ಆಗುವ ಬದಲಾವಣೆಗಳು ಮೊತ್ತಗೊಂಡು ಬೆಳೆದು ಇಡಿಯಾಗಿ ಬದಲಾಗುವ ಹಂತಕ್ಕೆ ಬಂದಾಗ ದ್ವನಿಮಾ ಬದಲಾವಣೆ ಹಂತವನ್ನು ಅದು ಪಡೆದುಕೊಳ್ಳುತ್ತದೆ.

ಒಂದು ದ್ವನಿಗೆ ಹಲವು ಅವತಾರಗಳು ಇರುತ್ತವೆ ಎನ್ನುವುದಕ್ಕೆ ಒಂದೆರಡು ಬಳಕೆಗಳನ್ನು ತೆಗೆದುಕೊಂಡು ಅರ‍್ತ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡಬಹುದು.

’ಕ್’ ದ್ವನಿಯನ್ನು ಉದಾಹರಣೆಗೆ ತೆಗೆದುಕೊಂಡರೆ, ಇದು ಕನ್ನಡದಲ್ಲಿ ’ಕಣ್ಣು’ ಪದದಲ್ಲಿ ಪದಮೊದಲಿಗೆ, ’ನೂಕು’ ಪದದಲ್ಲಿ ಪದನಡುವೆ ಮತ್ತು ’ಅಕ್ಕ’ ಪದದಲ್ಲಿ ಒತ್ತಕ್ಕರದಲ್ಲಿ ಬಳಕೆಯಾಗುತ್ತಿದೆ. ಹಳಗನ್ನಡದಲ್ಲಿ ಇದು ’ಉಕ್’ ಎಂಬಂತ ಪದಗಳಲ್ಲಿ ಪದಕೊನೆಯಲ್ಲಿಯೂ ಬಳಕೆಯಾಗುತ್ತಿತ್ತು. ಆದರೆ, ಹೊಸಗನ್ನಡದಲ್ಲಿ ಇವೆಲ್ಲ ಸ್ವರಕೊನೆಗಳಾಗಿ ಬದಲಾಗಿರುವುದರಿಂದ ಇಂದು ಸಾಮಾನ್ಯವಾಗಿ ಅವು ಕಂಡುಬರುವುದಿಲ್ಲ. ಹಾಗಾದರೆ, ಇಂದಿನ ಕನ್ನಡದಲ್ಲಿ ’ಕ್’ ದ್ವನಿಯು ಮೂರು ಬಿನ್ನ ಪರಿಸರಗಳಲ್ಲಿ ಬಳಕೆಯಾಗುತ್ತದೆ. ಈ ಮೂರೂ ಪರಿಸರಗಳಲ್ಲಿ ಬಿನ್ನ

ದ್ವನಿಮಾ ಪರಿಸರಗಳಲ್ಲಿ ಅದು ಬಳಕೆಯಾಗಹುದು. ಅಂದರೆ, ’ಕ್’ ದ್ವನಿಯ ಹಿಂದೆ ಮತ್ತು ಮುಂದೆ ಬೇರೆ ಬೇರೆ ದ್ವನಿಗಳು ಬರಬಹುದು. ಇದೆಲ್ಲವನ್ನು ಪರಿಗಣಿಸದಿದ್ದರೂ ’ಕ್’ ದ್ವನಿಯ ಬಳಕೆಯ ಮೂರು ಪರಿಸರಗಳಲ್ಲಿ ಅದು ತುಸು ಬಿನ್ನವಾಗಿ ಉಚ್ಚರಣೆಯಾಗುತ್ತಿರಬಹುದು. ಹಾಗಾದರೆ, ಈ ಮೂರು ಪರಿಸರಗಳಲ್ಲಿ ಹುಟ್ಟುವ ’ಕ್’ ದ್ವನಿಯನ್ನು ಸುಮ್ಮನೆ ಅರ‍್ತ ಮಾಡಿಕೊಳ್ಳುವುದಕ್ಕೆ ಅನುವಾಗಲೆಂದು ಈ ಮುಂದಿನಂತೆ ಹೆಸರಿಸಿಕೊಳ್ಳೋಣ. ಕ್೧, ಕ್೨, ಕ್೩.

ದಾರವಾಡ, ಕಲಬುರಗಿ, ಬೀದರ ಮೊದಲಾದ ಕೆಲವು ಪರಿಸರಗಳಲ್ಲಿ ತುಸು ಹೆಚ್ಚಿನ ಉಸಿರಿನೊಂದಿಗೆ ಈ ದ್ವನಿ ಬಳಕೆಯಾಗುತ್ತದೆ. ]ಕಬ್ಬು’ ಇಂತಾ ಪದಗಳನ್ನು ಅಲ್ಲೆಲ್ಲ ’ಕ.ಬ್ಬು’ ಎಂದು ಉಚ್ಚರಿಸುತ್ತಾರೆ. ಇದು ದೊಡ್ಡಉಸಿರಿನ ’ಖ್’ ದ್ವನಿಯ ಬ್ರಮೆಯನ್ನು ತರಲು ಕಾರಣವಾಗಿದೆ. ಆದರೆ ಅದು ದೊಡ್ಡ ಉಸಿರಿನ ದ್ವನಿ ಅಲ್ಲ. ಹಾಗಾದರೆ, ಇದನ್ನು’;ಕ್’ ದ್ವನಿಯ ನಾಲ್ಕನೆ ಅವತಾರ ಎಂದು ಕರೆದು ಇದನ್ನು ಕ೪ ಎಂದು ಹೆಸರಿಸಿಕೊಳ್ಳಬಹುದು. ಪರ‍್ಶಿಯನ್ನಿನ ಪ್ರಬಾವದಿಂದ ಕಲಬುರಗಿ ಮೊದಲಾದ ಕನ್ನಡಗಳಲ್ಲಿ ಇನ್ನೊಂದು ಕ್ ದ್ವನಿ ಬಳಕೆಯಲ್ಲಿದೆ.’ನಿಕ್ಹಾ’ದಂತ ಪದಗಳಲ್ಲಿ ಇದನ್ನು

ಉಚ್ಚರಿಸಲಾಗುತ್ತದೆ. ಇದನ್ನು ಬೇರೆ ಬೇರೆ ವಿದ್ವಾಂಸರು ಗುರುತಿಸಿದ್ದಾರೆ. ಹಾಗಾದರೆ, ಇದನ್ನು ಕ೫ ಎಂದು ಹೆಸರಿಸಿಕೊಳ್ಳಬಹುದು. ಇದರೊಟ್ಟಿಗೆ ಸಂಸ್ಕ್ರುತದ ಪದಗಳನ್ನು ಉಚ್ಚರಿಸುವುದಕ್ಕೆಂದು ಆದುನಿಕ ಕಾಲದ ಕೆಲವು ಮೇಲ್ವರ‍್ಗದ ಮಂದಿ ಮಹಾಪ್ರಾಣವನ್ನು ಆಗೊಮ್ಮೆ ಈಗೊಮ್ಮೆ, ಅವಶ್ಯವಿದ್ದಾಗ, ತರಬೇತಿ ಪಡೆದಾಗ, ಜಾಗರೂಕ ಸ್ತಿತಿಯಲ್ಲಿ ಇದ್ದು ಉಚ್ಚರಿಸುತ್ತಾರೆ. (ಕಂಡಿತವಾಗಿಯೂ ಇದು ಮೇಲ್ವರ‍್ಗದ, ಯಾಕೆಂದರೆ ಮೇಲ್ಜಾತಿಯ ಎಲ್ಲರೂ ಇಂತ ಪ್ರಯತ್ನ ಮಾಡುವುದಿಲ್ಲ ಮತ್ತು ಕೆಳಜಾತಿಗಳ ಮೇಲ್ವರ‍್ಗದವರು ಹಲವರು ಇದನ್ನು ಮಾಡುತ್ತಾರೆ).

ಇಂತವುಗಳನ್ನು ಬಾಶೆಯಲ್ಲಿ ದ್ವನಿಗಳು ಎಂದು ಕರೆಯಲು ಬಾರದು. ಯಾಕೆಂದರೆ ಇವು ವ್ಯಕ್ತಿಯ ಜಾಗರೂಕ ಸ್ತಿತಿಯಲ್ಲಿ ಉಚ್ಚರಣೆಗಳು ಮಾತ್ರ, ಇವು ದನಿಗಳು ಮಾತ್ರ, ಇವು ಬಾಶೆಯಲ್ಲಿ ಉತ್ಪಾದಕವಲ್ಲ. ದನಿಯೊಂದು ದ್ವನಿಯಾಗಬೇಕಾದರೆ ಅದು ಆ ಬಾಶೆಯಲ್ಲಿ ಉತ್ಪಾದಕವಾಗಿರಬೇಕು. ಇಂತವುಗಳನ್ನು ಕೇಶಿರಾಜನು ಗನಸ್ವನಾದಿ ಎಂದು ಕರೆಯುತ್ತಾನೆ. ಇದೆಲ್ಲ

ಏನೇ ಇದ್ದರೂ ಲಿಪಿಯಲ್ಲಿ ಮಹಾಪ್ರಾಣ ದ್ವನಿಗಳಿಗಾಗಿ ಲಿಪಿಯನ್ನು ಇಟ್ಟುಕೊಂಡಿರುವ ಕಾರಣವನ್ನೂ ಇದಕ್ಕೆ ಸೇರಿಸಿ ಇನ್ನೊಂದು ಇಂತಾ ದ್ವನಿ ಇದೆ ಎಂದು ಲೆಕ್ಕಿಸಿಬಿಡೋಣ. ಈಗ ’ಖ್’ ಎಂಬ ಸಂಕೇತದಿಂದ ಗುರುತಿಸಬಹುದಾದ ಕಲ್ಪಿತವಾದೊಂದು ಈ ಮಹಾಪ್ರಾಣ ದ್ವನಿಯನ್ನು ಇನ್ನೊಂದು’;ಕ್’ ಎಂದು ಲೆಕ್ಕಿಸಬೇಕಾಗುತ್ತದೆ. ಹಾಗಾದರೆ, ಇದನ್ನು ’ಕ್೬’ ಎಂದು ಹೆಸರಿಸಬಹುದು.

ಹಾಗಾದರೆ ಸದ್ಯ ನಮ್ಮ ದಿನಜೀವನದ ಕನ್ನಡದ ಬಳಕೆಯಲ್ಲಿ ಆರು ಬಗೆಯ ’ಕ್’ ದ್ವನಿಗಳು ಇವೆ ಎಂದು ಹೇಳಬಹುದು. ಇವುಗಳಲ್ಲಿ ಮೊದಲ ಮೂರು ನಂತರದ ಮೂರು ಒಂದೊಂದು ಗುಂಪಿನಂತೆ ಕಾಣಬಹುದು. ಮೊದಲ ಗುಂಪಿನಲ್ಲಿ ಒತ್ತಕ್ಕರದಲ್ಲಿ ಬರುವ ’ಕ್’ ದ್ವನಿ ಸಹಜವಾಗಿ ತುಸು ಬಿನ್ನವಾಗುತ್ತದೆ. ಇದನ್ನು ಮನುಶ್ಯಮಾತ್ರರು ಗುರುತಿಸಲು ಸಾದ್ಯ. ಹಾಗೆಯೆ ಎರಡನೆ ಗುಂಪಿನಲ್ಲಿ ಬರುವ ಹೆಚ್ಚು ಉಸಿರಿನ ಮತ್ತು ದೊಡ್ಡ ಉಸಿರಿನ ಎರಡೂ ದ್ವನಿಗಳಿಗಿಂತ ಪರ‍್ಶಿಯನ್ ಹಿನ್ನೆಲೆಯ 'ಕ್' ದ್ವನಿ ತುಸು ಬಿನ್ನವಾಗುತ್ತದೆ. ಇದನ್ನೂ ಸಾಮಾನ್ಯ ಕಿವಿಯಿಂದ ಗುರುತಿಸಬಹುದು.

ಹೀಗೆ ಪ್ರತಿಯೊಂದು ದ್ವನಿಯೂ ವ್ಯಾಪಕ ಬಿನ್ನತೆಯನ್ನು ಹೊಂದಿರುತ್ತದೆ. ಅನಂತ ಸಾದ್ಯತೆಯ ಇಶ್ಟೆಲ್ಲ ದ್ವನಿಗಳನ್ನು ಅದ್ಯಯನ ಮಾಡುವುದು ಅಸಾದ್ಯ ಮತ್ತು ಅನವಶ್ಯಕ ಎಂಬ ಅರಿವಿನಿಂದಲೆ ಬಾಶಾವಿಗ್ನಾನದಲ್ಲಿ ದ್ವನಿಮಾ ಎಂಬ ಪರಿಕಲ್ಪನೆಯನ್ನು ಬೆಳೆಸಿಕೊಂಡಿದೆ. ಸಮಾನ ಗುಣಗಳಿರುವ ಇಲ್ಲಿ ಮಾತಾಡಿದ ’ಕ್’ ದ್ವನಿಗಳಂತಾ ದ್ವನಿಗಳ ಸಮೂಹದಿಂದ ಒಂದು ’ದ್ವನಿ’ಯನ್ನು ಆರಿಸಿ ’ದ್ವನಿಮಾ’ ಎಂದು ಕರೆಯಲಾಗುತ್ತದೆ. ಹೀಗೆ ದ್ವನಿಯ ಬಳಕೆ, ಪರಿಸರ ಮೊದಲಾದವಕ್ಕೆ ಸಂಬಂದಿಸಿದ ಸಾಕಶ್ಟು ವಿಚಾರಗಳು ತುಂಬಾ ಕುತೂಹಲಕರವಾಗಿವೆ. ದ್ವನಿ ಎಂಬುದೆ ಒಂದು ಬಹುದೊಡ್ಡ ಜಗತ್ತು.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...