"ವಾಕ್ಯ ಮತ್ತು ಶಬ್ದದ ಸಂಬಂಧದ ಕುರಿತು ನಡೆಸುವ ಜಿಜ್ಞಾಸೆ ಮುಖ್ಯವಾಗುವುದು ಇಲ್ಲಿ. ಈ ಬಗ್ಗೆ "ಕಾವ್ಯ ಸಂಭವ" ದಲ್ಲಿ ಬಂದಿದೆ. ಅದನ್ನೇ ಇಲ್ಲಿ ಮತ್ತೆ ಕಾಣಿಸುತ್ತಿದ್ದೇನೆ. ಇದು ಶ್ರೀಧರ ಬಳಗಾರ ಅವರ ಒಂದು ಪೇಪರ್ ಪ್ರೆಸೆಂಟೇಶನ್ನಿನ ಕೀನೋಟ್ ಕೃಪೆ, ನನ್ನ ಮಾತುಗಳೇನಲ್ಲ," ಎನ್ನುತ್ತಾರೆ ನರೇಂದ್ರ ಪೈ. ಅವರು ಮಧು ಬಿರಾದಾರ್ ಅವರ ‘ದೊರೆ ನೆತ್ತಿ ಗರುಡ’ ಕೃತಿ ಕುರಿತು ಬರೆದ ವಿಮರ್ಶೆ.
ದೊರೆ ನೆತ್ತಿ ಗರುಡ, ಯುವ ಕವಿ ಮಧು ಬಿರಾದಾರ್ ಅವರ ಎರಡನೆಯ ಕವನ ಸಂಕಲನ. ವೃತ್ತಿಯಿಂದ ಕನ್ನಡ ಪ್ರಾಧ್ಯಾಪಕರಾಗಿರುವ ಇವರು ಜಾಗತಿಕ ಕವಿತೆಗಳ ಕನ್ನಡ ಅನುವಾದದ ಕುರಿತು ಅಧ್ಯಯನ ನಡೆಸಿ ಪಿಎಚ್‌ಡಿ ಪಡೆದವರು. ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡಿರುವ, ಸೂಕ್ಷ್ಮ ಮನಸ್ಸಿನ ಮಧು ಬಿರಾದಾರ್ ತಮ್ಮ ಕಾಲದ ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯಿಕ ಬಿಕ್ಕಟ್ಟುಗಳ ಬಗ್ಗೆ ಸದಾ ಸ್ಪಂದಿಸುತ್ತ ಬಂದವರು, ಜಾಗೃತರಾಗಿರುವವರು. ಹಾಗಾಗಿಯೇ ಅವರ ಕವಿತೆಗಳಲ್ಲಿ ರಮ್ಯಲೋಕ ಅಷ್ಟಾಗಿ ಕಾಣುವುದಿಲ್ಲ. ಅವರ ಈ ಎಳೆ ವಯಸ್ಸಿನಲ್ಲಿ ಪ್ರೇಮ-ಕಾಮದ ಕವಿತೆಗಳ ಬದಲಿಗೆ ಸಂಘರ್ಷಗಳ, ಅನ್ಯಾಯಗಳ ಕುರಿತ ಕಾಳಜಿ ಎದ್ದು ಕಾಣುತ್ತದೆ. ಇದು ಒಂದು ವಿಶೇಷವಾದರೆ, ಸಾಮಾನ್ಯವಾಗಿ ಬೌದ್ಧಿಕತೆ ಮಂಚೂಣಿಯಲ್ಲಿದ್ದು ಭಾಷೆಯನ್ನು ಹರಿತವಾಗಿ ಬಳಸಲು ಉದ್ದೀಪಿಸುವ ಈ ಮನೋಧರ್ಮಕ್ಕೆ ಮಧು ಬಿರಾದಾರ್ ಮತ್ತೊಂದು ಸೇರ್ಪಡೆ ಆಗದೇ ಇರುವುದು ಅವರ ಇನ್ನೊಂದು ವಿಶೇಷತೆಯಾಗಿದೆ. ಬಹುಶಃ ಇದಕ್ಕೆ ಅವರೊಬ್ಬ ಭಾವಜೀವಿಯಾಗಿರುವುದೇ ಕಾರಣವಿದ್ದೀತು ಅನಿಸುತ್ತದೆ. ಹಾಗಾಗಿಯೇ ಕವಿಯೊಬ್ಬನ ನೆಲೆಯಿಂದಲೇ ತನ್ನ ಕಾಲಕ್ಕೆ ಸ್ಪಂದಿಸುವ ಸಾಧ್ಯತೆ ಅವರಿಗೆ ತೆರೆದಿದೆ. ಹಾಗಾಗಿ ಅವರ ಕವಿತೆಗಳನ್ನು ಹೆಚ್ಚಿನ ಆಶಾವಾದದೊಂದಿಗೆ ಕಾಣಬಹುದಾಗಿದೆ.
ತನ್ನ ಕಾಲದ ಬಿಕ್ಕಟ್ಟುಗಳಿಗೆ ತೀವ್ರವಾಗಿ ಸ್ಪಂದಿಸುವ ಮಧು ಬಿರಾದಾರ್ ತಮ್ಮ ಅಸಮಾಧಾನವನ್ನು ಹೊರಹಾಕಲು ಭಾಷೆಯ ನೆರವು ಪಡೆವ ಹಂತದಲ್ಲಿ, ತಮ್ಮ ಮಾಧ್ಯಮ ಕವಿತೆ ಆಗಿರುವುದರಿಂದ ಹೆಚ್ಚು ಎಚ್ಚರದ ಹೆಜ್ಜೆ ಇಡುತ್ತಾರೆ. ಎಷ್ಟೇ ಎಚ್ಚರದಿಂದಿದ್ದರೂ ಅವರ ವಯೋಮಾನದಲ್ಲೇ ಎಳಸುತನ ಉಳಿದಿರುವುದರಿಂದ ಇದು ಅವರು ಮತ್ತು ಅವರದೇ ಮನೋಧರ್ಮ ಇರಿಸಿಕೊಂಡು ಕಾವ್ಯವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಸ್ವೀಕರಿಸಿರುವ ಎಲ್ಲ ಯುವ ಬರಹಗಾರರು ಎದುರಿಸುತ್ತಿರುವ ಮಹತ್ವದ ಸವಾಲಾಗಿದೆ. ಇದಕ್ಕೆ ಸಾಕಷ್ಟು ಪೂರ್ವತಯಾರಿಯ ಅಗತ್ಯ ಇದ್ದೇ ಇದೆ. ಕೇಶವ ಮಳಗಿಯವರೂ ತಮ್ಮ ಮುನ್ನುಡಿಯಲ್ಲಿ ಈ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ. ಕವಿ, ಸಾಹಿತಿ ವರ್ತಮಾನದ ಬಿಕ್ಕಟ್ಟುಗಳಿಗೆ ಸ್ಪಂದಿಸಿ ಬರೆಯುವುದು ಅತ್ಯಂತ ಅಪೇಕ್ಷಣೀಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರಿಂದ ಹುಟ್ಟುವ ಅಸಮಾಧಾನ, ವ್ಯವಸ್ಥೆಯ ಬಲಿಪಶುವಾಗಿ ಅನುಭವಿಸುವ ನೋವು, ಅಪಮಾನ, ಸಂಕಟಗಳ ಅಭಿವ್ಯಕ್ತಿಗೆ ಭಾಷೆಯಲ್ಲಿ ಆತ ತಡಕಾಡುವಾಗ ಎರಡು ಅಂಶಗಳನ್ನು ಸಾಹಿತಿ ಗಣನೆಗೆ ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಒಂದು, ವ್ಯವಸ್ಥೆಯ ದುರವಸ್ಥೆಗೆ ಸಾಹಿತಿ ಕೂಡ ಕಾರಣ ಎನ್ನುವುದನ್ನು ಒಪ್ಪಿಕೊಂಡೇ ಆತನ ಅಭಿವ್ಯಕ್ತಿಯ ನೆಲೆ ರೂಪುಗೊಳ್ಳಬೇಕು. ಇಲ್ಲದಿದ್ದರೆ ಅವನು ಇದೆಲ್ಲ ನೀವು ಮಾಡಿದ ಕರ್ಮ ಎಂದು ದೂರುವ ನೆಲೆಯಲ್ಲೇ ಎಲ್ಲವನ್ನೂ ಹೇಳ ತೊಡಗುತ್ತಾನೆ. ಅಥವಾ ವಸ್ತುಸ್ಥಿತಿಯ ಬಗ್ಗೆ ಕೇವಲ ವ್ಯಂಗ್ಯವಾಡತೊಡಗುತ್ತಾನೆ. ರೊಚ್ಚು, ವ್ಯಂಗ್ಯ, ದೂರು - ಮೂರೂ ಇಲ್ಲದ ನೆಲೆಯಿಂದ ಅವನು ವರ್ತಮಾನಕ್ಕೆ ಸ್ಪಂದಿಸುವುದು ಮುಖ್ಯ. ಇದಕ್ಕೆ ನಮ್ಮ ಕಾವ್ಯ ಪರಂಪರೆಯಲ್ಲೇ ಸಾಕಷ್ಟು ಮಾರ್ಗದರ್ಶನ ನೀಡಬಲ್ಲ ಉದಾಹರಣೆಗಳು ಸಿಗುತ್ತವೆ. ನಾನು ಮನಸ್ಥಿತಿಯ ಬಗ್ಗೆ ಹೇಳಿದ್ದೇನೆಯೇ ಹೊರತು ಕಾವ್ಯದ ಧಾಟಿಯಲ್ಲಿನ ವ್ಯಂಗ್ಯ, ರೊಚ್ಚುಗಳ ಬಗ್ಗೆ ಅಲ್ಲ. ಕವಿಯ ಮನೋಧರ್ಮ ವ್ಯಂಗ್ಯದ್ದು, ರೊಚ್ಚಿನದ್ದು ಆದಾಗ ಅಭಿವ್ಯಕ್ತಿಗೆ ಅಗತ್ಯವಾದ ಫೋಕಸ್ ಅವನೇ ಕಳೆದುಕೊಳ್ಳುತ್ತಾನೆ ಎನ್ನುವುದನ್ನು ಹೇಳುವುದಷ್ಟೇ ನನ್ನ ಉದ್ದೇಶ. ಅವನ ಕಾವ್ಯದ ಧಾಟಿ, ಭಾಷೆಯ ರೊಚ್ಚು, ವ್ಯಂಗ್ಯದ ಬಗ್ಗೆ ನನ್ನ ತಕರಾರಿಲ್ಲ.
ಎರಡನೆಯದು, ಅವನ ಅಭಿವ್ಯಕ್ತಿಗೆ ಬೇಕಾದ ಭಾಷೆಯೊಂದನ್ನು ಅವನೇ ಸ್ವತಃ ರೂಢಿಸಿಕೊಳ್ಳಬೇಕೆಂಬ ಅರಿವು. ಸಿದ್ಧ ಮಾದರಿಗೆ ಹೊರಳಿದರೆ ಅವನಿಗೊಂದಿಷ್ಟು ಸವಕಲಾದ ನುಡಿಗಟ್ಟುಗಳು, ಕ್ಲೀಷೆ ಎನಿಸುವ ಮಾತುಗಳು ಮಾತ್ರ ಸಿಗುತ್ತವೆ. ಅಂಥ ಕವಿತೆಗೆ ಆತ್ಮವೇ ಇರುವುದಿಲ್ಲ. ಈ ‘ತನ್ನ ಶಿಲುಬೆಯ ತಾನೇ ಹೊರಬೇಕಾದ’ ಸಂಕಷ್ಟಕ್ಕೆ ಮುಖಾಮುಖಿಯಾದ ಕವಿಗೆ ಭಾಷೆ ಸವಾಲಾಗುತ್ತದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಲು ನಾನು ಮೊದಲಿಗೆ ಉಲ್ಲೇಖಿಸಿದ ಫೋಕಸಿಂಗ್ ಬಹಳ ಅಗತ್ಯ. ಸಂತುಲಿತ ಮನಸ್ಥಿತಿಯಲ್ಲಿ ಮಾತ್ರ ಕವಿ ತನ್ನ ಅಮೂರ್ತ ಚಿಂತನೆಗಳ ಮೂರ್ತ ರೂಪವನ್ನು ಕಾಣಬಲ್ಲ. ಇಲ್ಲದಿದ್ದಲ್ಲಿ ಅವನು ತನ್ನ ಬಾಯಲ್ಲಿ ಬೇರೆಯವರ ಸೊಲ್ಲುಗಳನ್ನು ಅರಚಲು ಸುರುಮಾಡುತ್ತಾನೆ. ಇಂಥ ಕವಿತೆಗಳು ಈಗಾಗಲೇ ಕನ್ನಡದಲ್ಲಿ ಸಾಕಷ್ಟಿವೆ.
ಮಧು ಬಿರಾದಾರ್ ಅವರ ದೊರೆನೆತ್ತಿ ಗರುಡ ಸಂಕಲನದ ಕವಿತೆಗಳನ್ನು ಗಮನಿಸುವಾಗ ಅವರು ತಮ್ಮ ಮನೋಧರ್ಮವನ್ನು ಸಂತುಲಿತಗೊಳಿಸಿಕೊಳ್ಳುವ ಮತ್ತು ಅಂಥ ಸ್ವಸ್ಥ ಚಿತ್ತದಿಂದ ತಮ್ಮ ಅಭಿವ್ಯಕ್ತಿ ಸಾಧ್ಯತೆಗಳನ್ನು ಭಾಷೆಯಲ್ಲಿ ಕಂಡುಕೊಳ್ಳುವ ಹಂತದಲ್ಲಿ ಬಹಳಷ್ಟು ದೂರ ಸಾಗಿ ಬಂದಿದ್ದಾರೆ ಅನಿಸುತ್ತದೆ. ದೊರೆ ನೆತ್ತಿ ಗರುಡ ಎಂಬ ಶಬ್ದವನ್ನು ಅವರು ರೂಪಿಸಿಕೊಂಡಾಗಲೇ ಇದು ಸುರುವಾಗಿದೆ. ಆದರೆ ಈ ಪ್ರಕ್ರಿಯೆಗೆ ಆರಂಭ ಮಾತ್ರ ಇರುತ್ತದೆ, ಅಂತ್ಯ ಎನ್ನುವುದು ಇರುವುದಿಲ್ಲ. ಹಾಗಾಗಿ ಕವಿ ನಿರಂತರವಾಗಿ ತನ್ನ ಎಚ್ಚರವನ್ನು ಕಾಪಾಡಿಕೊಂಡು ಬರದಿದ್ದರೆ ಬಹುಬೇಗ ಏಕತಾನತೆಯ ಅಪಾಯಕ್ಕೆ ಗುರಿಯಾಗುತ್ತಾನೆ.
ಮುಂದಿನ ಸಮಸ್ಯೆ ಈ ಕವಿಯನ್ನು ಓದುವ ಓದುಗನದ್ದೂ ಆಗಿದೆ. ಈ ಕವಿಯ ಅಭಿವ್ಯಕ್ತಿ ಛಂದಸ್ಸೇನಿದೆ, ಅದರ ಲಯ ಹಿಡಿಯುವುದು ಯಾವನೇ ಓದುಗನಿಗೆ ಕೂಡ ಅಷ್ಟು ಸರಳವಲ್ಲ. ಅದಕ್ಕೂ ಓದುಗನ ಸ್ವಸ್ಥಚಿತ್ತದ ಫೋಕಸಿಂಗ್ ಅಗತ್ಯ. ಕವಿ ನಮಗೆ ತಿಳಿದೇ ಇರುವ ಅದೇ ನಿತ್ಯದ ಭಾಷೆಯಲ್ಲೇ ನಮಗೆ ಅರ್ಥವಾಗದ್ದನ್ನೆಲ್ಲ ಹೇಳುತ್ತಿದ್ದಾನೆ ಅನಿಸಿದಾಗಲೇ ಓದುಗ "ಕವಿತೆ ಕಷ್ಟ, ಅದು ನಮಗಲ್ಲ’ ಎಂದು ನಿರ್ಧರಿಸುತ್ತಾನೆ. ಆದರೆ ಅದು ನಿಜಕ್ಕೂ ಹಾಗಿರಲಿಲ್ಲ, ಹಾಗಿಲ್ಲ ಕೂಡ. ಕವಿ ನಮಗೆ ತಿಳಿದೇ ಇರುವುದನ್ನೇ, ನಾವು ನಿತ್ಯ ಅನುಭವಿಸುತ್ತಿರುವುದನ್ನೇ ಹೇಳುತ್ತಿದ್ದಾನೆ, ನಮ್ಮ ನೋವು, ನಮ್ಮ ಹುಡುಕಾಟ, ನಮ್ಮ ತಲ್ಲಣಗಳ ಬಗ್ಗೆಯೇ ಹೇಳುತ್ತಿದ್ದಾನೆ. ಹೇಗೆ ಹೇಳುತ್ತಿದ್ದಾನೆಂದರೆ, ಅದನ್ನು ಹೀಗಲ್ಲದೆ ಬೇರೆ ಯಾವ ತರದಲ್ಲೂ ಹೇಳಲು ಸಾಧ್ಯವೇ ಇಲ್ಲ ಎನ್ನುವ ತರದಲ್ಲಿ. ಹಾಗೆ ಹೇಳದೇ ಹೋದರೆ ಅದು ನಿಮ್ಮ ನಿತ್ಯದ ಗೋಳಿನ ತರವೇ ಕೇಳಿಸುತ್ತದೆ ಮತ್ತು ಆಗ ಅದು ಕವಿತೆಯಾಗುವುದಿಲ್ಲ, ನಿಮ್ಮ ನಿತ್ಯದ ಗೊಣಗಾಟವಷ್ಟೇ ಆಗುತ್ತದೆ.
ಓದುಗರಾಗಿ, ಕವಿಯ ಈ ಭಾಷೆಯನ್ನು, ಕವಿ ಭಾಷೆಯನ್ನು ಬಳಸುವ ಹೊಸ ಛಂದಸ್ಸನ್ನು ನಾವು ಕಲಿಯಲೇ ಬೇಕಾಗಿದೆ. ಏಕೆಂದರೆ ಇದು ನಮ್ಮದು, ಕವಿಯದ್ದು ಮಾತ್ರ ಅಲ್ಲ. ನಮ್ಮದೇ ಪ್ರತಿಬಿಂಬವನ್ನು ನಾವು ಕನ್ನಡಿಯಲ್ಲಷ್ಟೇ ನೋಡಿಕೊಳ್ಳುವುದು ಹೇಗೆ ಅನಿವಾರ್ಯವೋ ಹಾಗೆ ಕವಿತೆ ನಮಗೆ ನಮ್ಮದೇ ಗೋಳನ್ನು ಭಾಷೆಯಲ್ಲಿ ಕಂಡುಕೊಳ್ಳಲು ಅತ್ಯಂತ ಅಗತ್ಯ. ಇದು ಎಲ್ಲ ಕಾಲದ ಅಗತ್ಯ ಕೂಡ.
ಹಾಗೆ ಓದುಗನಿಗೆ ಇದು ನಮ್ಮದೂ ಅನಿಸಬೇಕಾದರೆ ಮೊದಲು ಕವಿ ಸ್ವತಃ ತನ್ನ ಕಾಲದ ಬಿಕ್ಕಟ್ಟುಗಳನ್ನು ಸ್ವೀಕರಿಸಬೇಕಾಗುತ್ತದೆ, ಅದು ಇನ್ಯಾರೋ ಮಾಡಿಟ್ಟ ಕರ್ಮ ಎಂದು ತಾನು ಅದರ ಹೊರಗೆ ನಿಂತು ಮಾತನಾಡುವುದನ್ನು ಬಿಡಬೇಕಾಗುತ್ತದೆ. ಹಾಗೆ ಸ್ವೀಕರಿಸಿಯೇ ಅವನದನ್ನು ವಿರೋಧಿಸಬೇಕಾಗುತ್ತದೆ. ಆಗ ಕವಿಯ ವರ್ತಮಾನದ ಬಿಕ್ಕಟ್ಟುಗಳು ಓದುಗನದ್ದೂ ಆಗುತ್ತವೆ ಮತ್ತು ಕವಿಯ ಪ್ರತಿರೋಧದ ಭಾಷೆ ಜನಪದವಾಗುತ್ತದೆ. ಇದನ್ನು ನಮಗೆ ನಮ್ಮ ಕಾವ್ಯ ಪರಂಪರೆಯೇ ಮತ್ತೆ ಮತ್ತೆ ತೋರಿಸಿಕೊಟ್ಟಿದೆ, ಹೊರತು ಇದು ಹೊಸ ಅರಿವೇನಲ್ಲ. ಮಧು ಬಿರಾದಾರ್ ಅವರ ಕವಿತೆಗಳಲ್ಲಿ ನಮಗೆ ಕಂಡು ಬರುವ ಪ್ರಬುದ್ಧತೆ, ಅವರಲ್ಲಿ ಈ ಎಚ್ಚರ ಇರುವುದನ್ನು ಸ್ಪಷ್ಟಪಡಿಸುತ್ತದೆ.
ಮಧು ಬಿರಾದಾರ್ ಈ ಸಂಕೀರ್ಣ ಘಟ್ಟದ ಎರಡೂ ನೆಲೆಗಳಲ್ಲಿ ಪೂರ್ತಿಯಾಗಿ ಯಶಸ್ವಿಯಾಗಿದ್ದಾರೆಂದು ಹೇಳುವ ಧೈರ್ಯ ನನಗಿಲ್ಲ. ಆದರೆ ನಮ್ಮ ತೊಂಬತ್ತು ಶೇಕಡಾ ಕವಿಗಳು ಇಲ್ಲಿಯ ತನಕವೂ ಬರುವುದಿಲ್ಲ ಎನ್ನುವುದು ಕವಿತೆಗಳನ್ನು ಪ್ರೀತಿಯಿಂದ ಓದುತ್ತ ಬಂದಿರುವ ಎಲ್ಲರಿಗೂ ಗೊತ್ತು. ಹಾಗಾಗಿ ಮಧು ಬಿರಾದಾರ್ ಬಹಳ ಮುಖ್ಯವಾಗುತ್ತಾರೆ. ಮಧು ಬಿರಾದಾರ್ ತಮ್ಮ ಸಂತುಲಿತ ಮನೋಧರ್ಮದಲ್ಲೂ ಭಾಷೆಯಲ್ಲಿ ಕಂಡುಕೊಂಡ ಅಭಿವ್ಯಕ್ತಿ ರೂಪಕಗಳಲ್ಲೂ ಪೂರ್ತಿಯಾಗಿ ಯಶಸ್ವಿಯಾದ ಸಾಕಷ್ಟು ಕವಿತೆಗಳು ಈ ಸಂಕಲನದಲ್ಲಿವೆ. ಅವರು ಆಯ್ದುಕೊಂಡ ಹಾದಿ ಕತ್ತಿ ಮೇಲಿನ ನಡಿಗೆ. ತಮ್ಮ ಭಾಷೆ, ನುಡಿಗಟ್ಟು, ರೂಪಕಗಳನ್ನು ಹೊಸದಾಗಿ ಕಟ್ಟುತ್ತ, ಅವು ತಕ್ಷಣವೇ ಓದುಗನಲ್ಲಿಯೂ ಕವಿಭಾವ ಪ್ರತಿಮಾ ಪುನರ್‌ಸೃಷ್ಟಿಸಬಲ್ಲ ಕಸು ಹೊಂದಿರುವಂತೆಯೂ ಅವರು ನೋಡಿಕೊಳ್ಳಬೇಕಿದೆ. ಬಳಸಿದ ಶಬ್ದ, ಸಾಲುಗಳಿಗೆ ಅರ್ಥ ಏನೆಂದು ಕವಿ ವಿವರಿಸಬೇಕಿಲ್ಲ, ಆದರೆ ಅದು ಒಂದು ಚಿತ್ರವನ್ನು, ಅದೆಷ್ಟೇ ಹೊಳಹುಗಳ ರೂಪದಲ್ಲಿರಲಿ, ಪರವಾಗಿಲ್ಲ, ಓದುಗನ ಮನೋಭಿತ್ತಿಯಲ್ಲಿ ಮೂಡಿಸಲೇ ಬೇಕಾಗುತ್ತದೆ. ಇದು ಕವಿಯೊಬ್ಬನ ಪ್ರಾಥಮಿಕ ಟೂಲ್, ಇದೇ ಅಂತಿಮವಲ್ಲ. ಅವನ ಮಹತ್ವದ ಪಯಣ ಸುರುವಾಗುವುದೇ ಇಲ್ಲಿಂದ.
ಇಲ್ಲಿ ಒಂದು ಮಾತನ್ನು, ಇದು ನೇರವಾಗಿ ಮಧು ಬಿರಾದಾರ್ ಅವರಿಗೆ ಸಂಬಂಧಿಸಿಲ್ಲವಾದರೂ ಹೇಳಲೇ ಬೇಕಿದೆ. ಕವಿ ನನ್ನದೇ ವರ್ತಮಾನವನ್ನು, ಸದ್ಯವನ್ನು ನನಗೇ ಹೇಳುವಾಗ, "ಹೀಗಲ್ಲದೆ ಬೇರೆ ಯಾವ ತರದಲ್ಲೂ ಹೇಳಲು ಸಾಧ್ಯವೇ ಇಲ್ಲ"ದ ರೀತಿಯಲ್ಲಿ ಹೇಳುತ್ತಾನೆ ಎಂದೆ. ಆದರೆ, ಹಾಗೆ ಹೇಳುವುದೆಂದರೆ ಗಾಳಿಯಲ್ಲಿ ಕೈಯಾಡಿಸುವುದೇನೂ ಅಲ್ಲ. ಕವಿ ತನ್ನ ಭಾಷಾ ಪ್ರಯೋಗವನ್ನು, ಬಳಸಿದ ನುಡಿಗಟ್ಟನ್ನು, ಕಟ್ಟುವ ಪ್ರತಿಮೆಯನ್ನು ಹೇಗೆ ಬೇಕಾದರೂ ಅರ್ಥಮಾಡಿಕೊಳ್ಳಿ, ಅದೆಲ್ಲ ನಿಮ್ಮ ನಿಮ್ಮ ಕೆಪಾಸಿಟಿಗೆ ಬಿಟ್ಟಿದ್ದು ಎನ್ನುವ, ತನ್ನ ಅಬದ್ಧ ಪರಿಕಲ್ಪನೆಗಳನ್ನು ಓದುಗನ ಮೇಲೆ ಹೊರಿಸುವ ಜಾಣ್ಮೆ ತೋರಿಸುವುದು ತಪ್ಪು. ಈಚಿನ ಕೆಲವು ಕವಿತೆಗಳ ಸೊಲ್ಲುಗಳು ಈ ರೀತಿ ಪರಸ್ಪರ ಸಂಬಂಧ ಜೋಡಿಸಿಕೊಂಡು ನಿಲ್ಲದಿರುವ, ಹೊಳಹುಗಳನ್ನಾದರೂ ಕರುಣಿಸದಿರುವ, ಕೇವಲ ಅದರ ಶಾಬ್ದಿಕ ಆಕರ್ಷಣೆಯ ಹೊರತು ಬೇರೆ ಯಾವ ರೀತಿಯಲ್ಲೂ ಹೊಂದಿಕೊಳ್ಳದ ಪ್ರಯೋಗಗಳನ್ನು ಗಮನಿಸಿದ್ದೇನೆ. ಓದುಗರು ಕವಿತೆಗಳೆಂದರೆ ಹೆದರಲು ಇಂಥ ಚಲ್ತಾ ಹೈ ಧೋರಣೆ ಕಾರಣ. ಇದು ತಪ್ಪು. ಇಂಥ ಕಡೆ ಓದುಗ ಇದು ತನಗೆ ಮಾತ್ರ ಅರ್ಥವಾಗುತ್ತಿಲ್ಲವೇನೋ, ತಾನು ಅಷ್ಟು ಜಾಣನಲ್ಲವೇನೋ ಎಂದುಕೊಂಡು ದೊರೆ ಬಟ್ಟೆ ತೊಟ್ಟಿಲ್ಲ ಎಂದು ಗೊತ್ತಿದ್ದರೂ ಬಾಯಿ ಬಿಟ್ಟರೆ ಬಣ್ಣಗೇಡು ಎಂದು ಸುಮ್ಮನಿರುತ್ತಾನೆ. ವಿಮರ್ಶಕರು ಕೂಡ ಸತ್ಯ ತಿಳಿದಿದ್ದರೂ ಬೇರೆ ಬೇರೆ ಕಾರಣಗಳಿಂದ ಮೌನವಹಿಸುವುದನ್ನು ಗಮನಿಸಿದ್ದೇನೆ. ಇಷ್ಟರ ಮೇಲೆ ಇಂಥ ಕವಿತೆಗಳಿಗೆ ಪ್ರಶಸ್ತಿ ಬೇರೆ ಸಿಗುತ್ತದೆ, ಹಿರಿಯ ಸಾಹಿತಿಗಳೇ ಇಂಥವರ ಕವಿತೆಗಳ ಬಗ್ಗೆ, ಅದರ ಅಪಸವ್ಯಗಳ ಬಗ್ಗೆ ಸೊಲ್ಲೆತ್ತದೆ ಹೊಗಳುವುದು ಅಚ್ಚರಿ ತರುತ್ತದೆ. ಅಲ್ಲಿಗೆ ದೊರೆ ಬಟ್ಟೆ ತೊಟ್ಟಿಲ್ಲವೆಂದು ಹೇಳುವವರೇ ಇರುವುದಿಲ್ಲ.
ವಾಕ್ಯ ಮತ್ತು ಶಬ್ದದ ಸಂಬಂಧದ ಕುರಿತು ನಡೆಸುವ ಜಿಜ್ಞಾಸೆ ಮುಖ್ಯವಾಗುವುದು ಇಲ್ಲಿ. ಈ ಬಗ್ಗೆ "ಕಾವ್ಯ ಸಂಭವ" ದಲ್ಲಿ ಬಂದಿದೆ. ಅದನ್ನೇ ಇಲ್ಲಿ ಮತ್ತೆ ಕಾಣಿಸುತ್ತಿದ್ದೇನೆ. ಇದು ಶ್ರೀಧರ ಬಳಗಾರ ಅವರ ಒಂದು ಪೇಪರ್ ಪ್ರೆಸೆಂಟೇಶನ್ನಿನ ಕೀನೋಟ್ ಕೃಪೆ, ನನ್ನ ಮಾತುಗಳೇನಲ್ಲ.
"ಕೇಳುಗನೊಂದಿಗೆ ಸಂವಹನ ಸಾಧ್ಯವಾಗುವಂತೆ ಅರ್ಥವನ್ನು ಸ್ಫುರಿಸುವ ಕಾರ್ಯ ಮಾಡುವುದು ಶಬ್ದವೇ ಅಥವಾ ಶಬ್ದದ ಸಮರ್ಪಕ ಸಂಯೋಜನೆಯುಳ್ಳ ವಾಕ್ಯವೆ ಎನ್ನುವುದು ಜಿಜ್ಞಾಸೆ. ಒಂದು ಶಬ್ದಕ್ಕೆ ವಾಕ್ಯದ ಹಂಗಿಲ್ಲದ ಸ್ವತಂತ್ರ ಸಂವಹನ ಸಾಮರ್ಥ್ಯವಿರಲು ಸಾಧ್ಯವಿಲ್ಲವೆ? ಇದ್ದರೆ ವಾಕ್ಯ ಏಕೆ ಬೇಕು? ವಾಕ್ಯವೇ ಅರ್ಥವನ್ನು ಪೂರ್ಣಗೊಳಿಸುವುದು ಎಂದಾದಲ್ಲಿ ಶಬ್ದದ ಪಾತ್ರ/ಮಹತ್ವ ಏನು? ಇತ್ಯಾದಿ ಇತ್ಯಾದಿ. ಅಲ್ಲಿಂದ ಇದು ಶಬ್ದ ಮತ್ತು ಸದ್ದು (ಪದ ಮತ್ತು ಶಬ್ದ ಅಥವಾ ಪದ ಮತ್ತು ಸದ್ದು) ಎರಡರ ಸಂಬಂಧವನ್ನು ಕುರಿತು ಚರ್ಚಿಸುತ್ತದೆ. ಒಂದು ಪದಕ್ಕೆ ಇರುವ ಸದ್ದು ಅದರ ಧ್ವನಿಶಕ್ತಿಯೊಂದಿಗೆ ಎಂಥ ಸಂಬಂಧವನ್ನು ಹೊಂದಿದೆ ಎನ್ನುವುದು ಇದರ ರೂಕ್ಷ ವಿವರಣೆಯಾದೀತು. ಸದ್ದಿಗೆ ಸಂಗೀತದೊಂದಿಗೂ ಸಂಬಂಧವಿದೆ. ಧ್ವನಿಶಕ್ತಿಗೆ ಸದ್ದಿನ ಹಂಗಿಲ್ಲ ಎನ್ನುವುದನ್ನು ಮರೆಯುವಂತಿಲ್ಲವಲ್ಲ. ಒಂದು ಪದ (ಶಬ್ದ) ಅದರ ಸದ್ದಿನ ಸಹಿತ ಮನಸ್ಸಿನಲ್ಲಿ ಉದ್ದೀಪಿಸುವ ಚಿತ್ರದೊಂದಿಗೆ ಪದದ ಮತ್ತು ಅದರ ಸದ್ದಿನ ಪಾತ್ರವೇನು ಎನ್ನುವುದನ್ನು ಬಹುಶಃ ಎಂದಿಗೂ ಪರಸ್ಪರ ಸ್ವಾಯತ್ತಗೊಳಿಸಿ ಕಾಣಲಾರೆವು. ಆದರೆ ಧ್ವನಿಶಕ್ತಿಯನ್ನೇ ಕಳೆದುಕೊಂಡು ಕ್ಲೀಷೆಯಾಗಿಬಿಟ್ಟ ಪದಗಳ ಸಂದರ್ಭದಲ್ಲಿ ಅದು ಸ್ಥೂಲವಾಗಿ ನಮಗೆ ಕಾಣಿಸುತ್ತದೆ ಎನ್ನುವುದು ನಿಜ. ಹಾಗೆಯೇ, ಮನಸ್ಸಿನಲ್ಲಿ ಮೂಡಿಸುವ ಚಿತ್ರ ಎಂದಾಗ ಕಣ್ಣೆದುರು ಇರುವ ಚಿತ್ರ ಮತ್ತು ಕಣ್ಣೆದುರು ಏನೂ ಇಲ್ಲದಿದ್ದಾಗಲೂ ಮನಸ್ಸಿನಲ್ಲಿ ಮೂಡುವ ಚಿತ್ರ ಎನ್ನುವ ಎರಡೂ ಸಂದರ್ಭಗಳಲ್ಲಿ ಪದ, ಸದ್ದು, ಧ್ವನಿಶಕ್ತಿಯೊಂದಿಗೆ ದೃಶ್ಯ ಅದೃಶ್ಯಗಳ ಸಂಬಂಧವೊಂದು ಏರ್ಪಟ್ಟಿದೆ ನೋಡಿ! ಇದರ ಇನ್ನೊಂದು ಮಗ್ಗಲು ಕೂಡ ಇದೆ, ಅದು ಅನಿವರ್ಚನೀಯಗಳ ಕುರಿತಾದ್ದು, ಮೌನದ ಭಾಷೆಗೆ ಸಂಬಂಧಪಟ್ಟಿದ್ದು. ವಾಚ್ಯವಾಗಲಾರದ, ವಾಚ್ಯವಾಗಬಾರದ ಭಾಷೆಯ ಬಗೆಗಿನದು.
ಒಂದು ಶಬ್ದ ಅಥವಾ ವಾಕ್ಯ ಅದನ್ನು ಬಳಸುವ ವ್ಯಕ್ತಿಯ ಸಂವೇದನೆಯಿಂದ ಸ್ಫೂರ್ತಗೊಳ್ಳುತ್ತದೆ ಎನ್ನುವುದು ಸಾಮಾನ್ಯವಾದ ನಂಬಿಕೆ. ಅನುಕರಣೆ, ಅನುಸಂಧಾನ, ನಕಲು ಮತ್ತು ಕ್ಲೀಷೆಯ ಸಂದರ್ಭಗಳನ್ನು ಹೊರತು ಪಡಿಸಿ ನೋಡಿದರೆ ಅದು ನಿಜ ಮತ್ತು ಸಹಜ. ಹಾಗಾಗಿ ಒಬ್ಬ ವ್ಯಕ್ತಿ ಬಳಸುವ ಶಬ್ದಗಳು, ವಾಕ್ಯಬಂಧ ತೀರ ವ್ಯಕ್ತಿಗತವಾಗಿರುತ್ತವೆ. ಒಬ್ಬನ ಸಹಿ (sig-`nature'), ಒಬ್ಬ ವ್ಯಕ್ತಿಯ ನಡೆಯುವ ವೇಗ, ಶೈಲಿ, ವಿಧಾನ ಹೇಗೆ ವ್ಯಕ್ತಿಗತವೋ ಹಾಗೆಯೇ ಒಬ್ಬ ವ್ಯಕ್ತಿ ಬಳಸುವ ಶಬ್ದ, ಕಟ್ಟುವ ವಾಕ್ಯ, ಏನನ್ನು ಹೇಗೆ ಹೇಳುತ್ತಾನೆ ಅಥವಾ ಏನನ್ನು ಹೇಳುವುದಿಲ್ಲ ಮತ್ತು ಹೇಳಬೇಕೆಂದು ನಾವು ನಿರೀಕ್ಷಿಸುವಂತೆ ಹೇಳುವುದಿಲ್ಲ ಎನ್ನುವುದೆಲ್ಲವೂ ಆತನ ವ್ಯಕ್ತಿಗತ ಭಾಷೆ ಅಥವಾ ಹಾಗೆ ಹೇಳಬಹುದಾದರೆ ಆತನ ಛಂದಸ್ಸನ್ನು ನಿರ್ಧರಿಸುವ ಸಂಗತಿಗಳಾಗಿರುತ್ತವೆ. ಅವರವರ ಭಾಷೆಗೆ ಹೀಗೆ ಅವರವರದ್ದೇ ಗುರು-ಲಘು ಸಂಯೋಗ."
ಇದನ್ನು ನಾನು ಈ ಕಾಲದ, ವರ್ತಮಾನದ ಬಿಕ್ಕಟ್ಟುಗಳನ್ನು ಗಂಭೀರವಾಗಿ ತೆಗೆದುಕೊಂಡು ಕವಿತೆಗಳನ್ನು ಬರೆಯ ಹೊರಟ ಬರಹಗಾರ ಎದುರಿಸುತ್ತಿರುವ ದೊಡ್ಡ ಸವಾಲು ಎಂದು ತಿಳಿಯುತ್ತೇನೆ.
“ಕವಿಯು ಈ ಕವನವು ಹೊಸ ವರ್ಷದ ಆರಂಭವನ್ನು ಸನಾತನ ಸಾಂಸ್ಕೃತಿಕ ಹಬ್ಬಗಳ ಹಿನ್ನೆಲೆಯಲ್ಲಿ ಕವಿಯು ವೈಭೋಗದಿಂದ ವಿವರಿ...
“ಸಾಹಿತ್ಯಿಕವಾಗಿ ಶ್ಯಾಮಲಾ ಇಷ್ಟರ ಮಟ್ಟಿನ ಸಫಲತೆ ಪಡೆದಿದ್ದರೆ ಅದರಲ್ಲಿ ಅವರ ಹೋರಾಟದ ಕತೆಯೂ ಇದೆ,” ಎನ್ನ...
“ಇದರಲ್ಲಿ ವಿವಿಧ ಕಾಲಘಟ್ಟದಲ್ಲಿ ಬರೆದ ಅವರ ಬಹುಪಾಲು ಅತ್ಯುತ್ತಮ ಕತೆಗಳು ಇರುವುದರಿಂದ ಪರೋಕ್ಷವಾಗಿ ಇವು ಅವರ ಪ್...
©2025 Book Brahma Private Limited.