ಈ ಸಂಕಲನದ ಹೆಚ್ಚಿನ ಕವಿತೆಗಳ ಕೇಂದ್ರ ‘ಹಿಂಸೆ’


"ಆತ್ಮವಾದರೋ ಅಲೆಮಾರಿಯಾಗಿ ಸುತ್ತುತ್ತಲೇ ಇರುತ್ತದೆ ಅದಕ್ಕೆ ದೇಹಭಾದೆಗಳಿಲ್ಲ, ಆದರೆ ಅದನ್ನು ಧರಿಸುವ ದೇಹಕ್ಕೆ ಮಾತ್ರ ಹಿಂಸೆಯೆನ್ನುವುದು ತಪ್ಪಿದ್ದಲ್ಲ. ದೇಹವೆನ್ನುವುದು “ನೋವಿನ ಜಲಾಶಯ”. ಜಲವಿಲ್ಲದೆ ದೇಹ ಬದುಕಲಾರದು. ದೇಹದಲ್ಲಿ ಹೆಚ್ಚಾಗಿ ಇರುವುದು ಜಲದ ಅಂಶವೇ. ಆದುದರಿಂದ ದೇಹದ ಜೊತೆಗೆ ನೋವು ಅನಿವಾರ್ಯ," ಎನ್ನುತ್ತಾರೆ ಗಿರಿಜಾಶಾಸ್ತ್ರಿ ಅವರು ಎಸ್. ದಿವಾಕರ್‌ ಅವರ “ವಿಧಾನಸಭೆಯಲ್ಲೊಂದು ಹಕ್ಕಿ” ಕೃತಿ ಕುರಿತು ಬರೆದ ವಿಮರ್ಶೆ.

“ವಿಧಾನಸಭೆಯಲ್ಲೊಂದು ಹಕ್ಕಿ” ಈ ಸಂಕಲನದ ಕವಿತೆಗಳನ್ನು ಓದಿ ಮುಗಿಸಿದಾಗ ಉಂಟಾದದ್ದು ಆನಂದವಲ್ಲ. ಪ್ರಕ್ಷುಬ್ಧ ಭಾವ. ಉಸಿರುಕಟ್ಟಿದ ಅನುಭವ. ಅರವಿಂದ ನಾಡಕರ್ಣಿಯವರು ಲೌಕಿಕ ಅನುಭವದಿಂದಲೇ ಹುಟ್ಟಿಬರುವ ಕಾವ್ಯಾನುಭವವನ್ನು chaos ಮತ್ತು cosmos ಪರಿಕಲ್ಪನೆಗಳಲ್ಲಿ ಬಹಳ ಪರಿಣಾಮಕಾರಿಯಾಗಿ ವಿವರಿಸಿದ್ದ ನೆನಪು ಇನ್ನೂ ನನ್ನ ಮಿದುಳು ಮೂಲೆಯಲ್ಲಿ ಬಲವಾಗಿ ಕೂತಿದೆ. chaos ನಿಂದಲೇ ಹುಟ್ಟಿಬರುವ ಕಾವ್ಯವು ಹೇಗೆ ಕಾಸ್ಮಿಕ್ ಆದ ಅನುಭವವನ್ನು ಕೊಡುತ್ತದೆ ಎಂಬುದನ್ನು ಅಂದು ತಿಳಿಸಿ ಹೇಳಿದ್ದರು.

ದಿವಾಕರ್ ಅವರ ಕವಿತೆಗಳನ್ನು ಓದುವಾಗ ನನಗೆ ನೆನಪಾದದ್ದು ನಾಡಕರ್ಣಿಯವರ ಮಾತುಗಳೇ. ಇದು ನಮ್ಮ ಹೊರಗಿನ ಪ್ರಕ್ಷುಬ್ಧತೆ ಮಾತ್ರವಲ್ಲ ಒಳಗಿನದೂ ಕೂಡ. ಇಂತಹ ಪ್ರಕ್ಷುಬ್ಧತೆಯನ್ನು ಪರಿಣಾಮಕಾರಿ ರೂಪಕಗಳ ಮೂಲಕ ಬಚ್ಚಿಡುವ ಕವಿಯ ನೈಪುಣ್ಯಕ್ಕೆ ಆಹಾ ಎಂದು ಬೆರಗಾಗುತ್ತೇವೆ. ಈ ಬೆರಗೇ ಅನಂದವನ್ನು ಉಂಟುಮಾಡುವ ಸಾಧನವಾಗುತ್ತದೆ. "ರೂಪಕ ಎಂದರೆ ಸಾಕ್ಷಾತ್ಕಾರ ಎಂದು ಅಡಿಗರು ನಿರೂಪಕನ ಹೆಗಲ ಮೇಲೆ ಕೈಯಿಟ್ಟು ಹೇಳುತ್ತಾರೆ."(ರೂಪಕ). ಆನಂದದ ಮೂಲ ಸಾಕ್ಷಾತ್ಕಾರವೇ ಅಲ್ಲವೇ? ಇದನ್ನೇ ನಾಡಕರ್ಣಿಯವರು ಕಾಸ್ಮಿಕ್ (ವಿಶ್ವಾತ್ಮಕ) ಅನುಭವ ಎಂದರೆನಿಸುತ್ತದೆ.

ಈ ಸಂಕಲನದ ಹೆಚ್ಚಿನ ಕವಿತೆಗಳ ಕೇಂದ್ರ ಹಿಂಸೆ. ಇದು ಹೊರಗಿನ ಮತ್ತು ಒಳಗಿನ ಹಿಂಸೆ. ಹಿಂಸೆಯ ನಾನಾ ಸ್ವರೂಪಗಳು ಇಲ್ಲಿ ಮೈದಳೆದಿವೆ. ಪ್ರಭುತ್ವದ, ಅಧಿಕಾರದ ವ್ಯವಸ್ಥೆಯ ಭಾಷೆಯೆಂದರೆ ಅದು ಎಂದೂ ಹಿಂಸೆಯೇ. ಇದು ದೈಹಿಕವಾದುದೇ ಆಗಬೇಕಿಲ್ಲ. ಮಾನಸಿಕ ಹಿಂಸೆಯೂ ಅಷ್ಟೇ ಯಾತನಾಮಯ. ಇದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ. ನಮ್ಮಕಾಲದಲ್ಲಿ ಅದು ಇನ್ನೂ ಹೆಚ್ಚಾಗಿದೆ (ಯಾಕೆಂದರೆ ಅದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ) ಇದು ದೇಶಕಾಲಾತೀತವಾದುದು ಎಂಬ ವಿಶ್ವಾತ್ಮಕ ಅನುಭವವನ್ನು ಉಂಟುಮಾಡುತ್ತದೆ, ಇದಕ್ಕೆ ರಾಜೇಂದ್ರ ಚೆನ್ನಿಯವರು ಹೇಳುವಂತೆ ಕವಿಗೆ ಕನ್ನಡದ ಯಾವ ಬರಹಗಾರರಿಗೂ ಇರದ, ವಿಶ್ವಸಾಹಿತ್ಯ ಪರಂಪರೆಗಳ ಬಗ್ಗೆ ಇರುವ ಆತ್ಮೀಯ ಪರಿಚಯವೂ ಕಾರಣವಿರಬಹುದು.

ಹಿಂಸೆ ಮನುಷ್ಯನ ಆದಿಮ ಸ್ವಭಾವ. ಕಾಡಿನ ವಿಧಿಯೂ ಹಿಂಸೆಯೇ. ಆದರೆ ಅದು ಅನಿವಾರ್ಯವಾದುದು ಮತ್ತು ಲಾಲಸೆಯಿಂದ ಮುಕ್ತವಾದುದು. ಆದರೆ ಮನುಷ್ಯ ಕಾಡಿನಿಂದ ದೂರಾಗಿ ನಗರಕ್ಕೆ ಹತ್ತಿರವಾದಂತೆಲ್ಲಾ ತೊಡಗಿಕೊಂಡ ಹಿಂಸೆಯ ಮೂಲ ಅವನ ಲಾಲಸೆ, ಸ್ವಾರ್ಥದಲ್ಲಿ ಅಡಗಿದೆ. ನಾಗರಿಕತೆಯ ಮೂಲ ಹಿಂಸೆಯೇ. ಈ ಹಿಂಸೆಯ ಸ್ಬರೂಪ ಕಣ್ಣಿಗೆ ಕಾಣುವುದಿಲ್ಲ, ಅನುಭವಕ್ಕೆ ಮಾತ್ರ ವೇದ್ಯವಾಗುತ್ತದೆ.

ಈ ಸಂಕಲನದ ಕವಿತೆಗಳು ಹಿಂಸೆಯಿಂದ ಶುರುವಾಗಿ "ಚಿತ್ರಹಿಂಸೆ"ಯಿಂದ ಮುಗಿಯುತ್ತವೆ.ಈ ಸಂಕಲನದ ಮೊದಲ “ಏನರ್ಥವಿದಕೆಲ್ಲ?” ಕವಿತೆಯಲ್ಲಿ ಲಾರಿಯ ಚಕ್ರಕ್ಕೆ ಸಿಕ್ಕಿ ಅಪ್ಪಚ್ಚಿಯಾದ ಇಲಿಯ ದೇಹ ಒಣಗಿ ರೂಪಾಂತರ ಪಡೆದುಕೊಳ್ಳತ್ತಾ ಗಟಾರಕ್ಕೆ ಬಿದ್ದು ಸಾಯುವುದರಲ್ಲಿ ಮುಕ್ತಾಯ ವಾಗುತ್ತದೆ. ಮನುಷ್ಯನ ನಾಗರಿಕತೆ ಎಸಗುವ ಕ್ರೌರ್ಯಕ್ಕೆ ಇದು ಸಾಕ್ಷಿಯಾಗಿದೆ.

ಕೊನೆಯ “ಚಿತ್ರಹಿಂಸೆ” ಕವಿತೆಯಲ್ಲಿ ಹಿಂಸೆಯ ಅನಾದಿ ರೂಪವನ್ನು ಹೇಳುತ್ತಾ,ಹಿಂಸೆಯೆನ್ನುವುದು ಮೊದಲು ಹೇಗಿತ್ತೋ ಹಾಗೆಯೇ" ಇದೆ, "ಏನೂ ಬದಲಾಗಿಲ್ಲ. "ಇಪ್ಪತ್ತನೆಯ ಶತಮಾನದಲ್ಲಿ ಕ್ರಿಸ್ತಪೂರ್ವದಲ್ಲಿ ಕ್ರಿಸ್ತಶಕದಲ್ಲಿ…..”. ಎನ್ನುತ್ತಾರೆ ಕವಿ.

ಆತ್ಮವಾದರೋ ಅಲೆಮಾರಿಯಾಗಿ ಸುತ್ತುತ್ತಲೇ ಇರುತ್ತದೆ ಅದಕ್ಕೆ ದೇಹಭಾದೆಗಳಿಲ್ಲ, ಆದರೆ ಅದನ್ನು ಧರಿಸುವ ದೇಹಕ್ಕೆ ಮಾತ್ರ ಹಿಂಸೆಯೆನ್ನುವುದು ತಪ್ಪಿದ್ದಲ್ಲ. ದೇಹವೆನ್ನುವುದು “ನೋವಿನ ಜಲಾಶಯ”. ಜಲವಿಲ್ಲದೆ ದೇಹ ಬದುಕಲಾರದು. ದೇಹದಲ್ಲಿ ಹೆಚ್ಚಾಗಿ ಇರುವುದು ಜಲದ ಅಂಶವೇ. ಆದುದರಿಂದ ದೇಹದ ಜೊತೆಗೆ ನೋವು ಅನಿವಾರ್ಯ. ಪರರನ್ನು ಹಿಂಸಿಸಲು, ಪರರಿಂದ ಹಿಂಸೆಗೆ ಒಳಗಾಗಲು ದೇಹವೇ ಕಾರಣ. ದೇಹದ ಉರವಣೆಗಳನ್ನು ದೇಹಧರಿಸಿದವರೇ ಬಲ್ಲರು. ಆದುದರಿಂದಲೇ ದೇವರ ದಾಸಿಮಯ್ಯ “ನೀನೊಮ್ಮೆ ಒಡಲುಗೊಂಡು ನೋಡಾ” ಎಂದು ಅರೂಪ ಶಿವನಿಗೆ ಸವಾಲು ಹಾಕುತ್ತಾನೆ.

ಈ ಎರಡು ಕವಿತೆಗಳ ನಡುವೆ, ದೇವಾಲಯಗಳು ಹಿಂಸಾಲಯಗಳಾಗಿ ಮಾರ್ಪಟ್ಟಿರುವ "ಉಗುರುಗಳ ಕಿತ್ತ, ಮೊಲೆತೊಟ್ಟುಗಳ ಕತ್ತರಿಸಿದ ಕೈಕಾಲು ಲಟಕ್ಕೆಂದು ಮುರಿದ" ಕ್ರೌರ್ಯ (ದೇವಾಲಯ- ವಧಾವಲಯ), “ಸತ್ತವರವನ್ನು ಕೊಲ್ಲಲಾಗುವುದಿಲ್ಲ” ಆದರೆ ಸತ್ತವರು ಬದುಕಿರುವವರನ್ನು ಕೊಲ್ಲುವ ವಿಪರ್ಯಾಸ (ಸತ್ತವರು ಸ್ವಾರ್ಥಿಗಳು) , ಪ್ರಕ್ರೂಸ್ಟೆಸ್ ಎಂಬ ದರೋಡೆಕೋರ ಸಿಕ್ಕಿದವರನ್ನೆಲ್ಲಾ ತನ್ನ ಮಂಚದ ಮೇಲೆ ಮಲಗಿಸಿ, ಮಂಚಕ್ಕೆ ತಕ್ಕಂತೆ ಕಾಲನ್ನು ಕತ್ತರಿಸುವ ಇಲ್ಲ ಎಳೆದು ಹಿಗ್ಗಿಸುವ ಪ್ರಕ್ರಿಯೆಯಲ್ಲಿ ಒಬ್ಬರೂ ಉಳಿಯದೆ ಸತ್ತುಹೋಗುತ್ತಿದ್ದ ದುರಂತ ( ಪ್ರಕ್ರೂಸ್ಟೆಸ್ ಮಂಚ), ವಾರಸುದಾರರಿಲ್ಲದ ರುಂಡವೊಂದು ತನ್ನ ಜೊತೆಗಿರದ ಮುಂಡಕ್ಕಾಗಿ ತಡಕಾಡುವುದು (ಒಂದು ನಿಟ್ಟುಸಿರು), ಹೊಂದಾಣಿಕೆಯಿಲ್ಲದ ವ್ಯವಸ್ಥೆ (ಪ್ರಾಸ) ತಾಲೀಮು ಮಾಡುವವನಿಗೂ ಪಾತ್ರಕ್ಕೂ ಸಂಬಂಧವೇ ಇಲ್ಲದ ಒಂದು ಅಸಂಗತ ಸ್ಥಿತಿ (ತಾಲೀಮು), ಸಾವಿರಾರು ಪಾರಿವಾಳಗಳನ್ನು ಹಿಡಿದು ತಂದು ಅವುಗಳನ್ನು ಬಿಡುಗಡೆ ಮಾಡುವ ಖುಷಿಯಲ್ಲಿ ಅವುಗಳನ್ನು ಮರಣಾಂತಿಕವಾಗಿ ಘಾಸಿಗೊಳಿಸುತ್ತಿದ್ದ ಚೀನಾದ ರಾಜ (ಬಿಡುಗಡೆ) ಎರಡು ಅತಿರೇಕ ಸಿದ್ಧಾಂತಗಳಿಗೆ ಸಿಕ್ಕಿ ಹೋಳಾಗಿರುವ ಊರು(ಹೌದಪ್ಪನ ಊರು ಮತ್ತು ಇಲ್ಲಪ್ಪನ ಊರು) ಮುಂತಾದ ಕವಿತೆಗಳು ಹಿಂಸೆಯನ್ನೇ ಹೊದ್ದುಕೊಂಡಿವೆ. ಅನೇಕ ಕವಿತೆಗಳಲ್ಲಿ, ನೊಣ, ಹಲ್ಲಿ, ಹಕ್ಕಿ,ಕೋಳಿ ಹಿಂಸೆಯ ರೂಪಕಗಳಾಗಿ ಬಂದಿವೆ. ಪ್ರಭುತ್ವದ ಕಾರಣವಾಗಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಹಿಂಸೆಯ ಸ್ವರೂಪವನ್ನು ಇವು ಅನನ್ಯವಾಗಿ ಸೆರೆಹಿಡಿದಿವೆ.

ನಾಗರಿಕ ಪ್ರಪಂಚದಲ್ಲಿ ಹಿಂಸೆ ಎನ್ನುವುದು "ಕೈತವದ ಶಿಕ್ಷಾಗುರು" ಎನ್ನುವ ಒಂದು ಸಮರ್ಥ ಅಭಿವ್ಯಕ್ತಿ "ಕರ್ಮಣಿಪ್ರಯೋಗ" ಎನ್ನುವ ಕವಿತೆಯಲ್ಲಿದೆ. ಇಡೀ ಕವಿತೆ ಕರ್ಮಣಿ ಪ್ರಯೋಗದಲ್ಲಿದೆ. ಕರ್ಮಣಿ ಪ್ರಯೋಗವೆಂದರೆ ಕರ್ತೃವನ್ನು ಮರೆಮಾಚುವುದೇ ಆಗಿದೆ. ಇಡೀ ವ್ಯವಸ್ಥೆ ಒಂದು ಅದೃಶ್ಯ ಶಕ್ತಿಯ ಕೈವಾಡಕ್ಕೆ ಒಳಗಾಗಿದೆ. ಕತ್ತಲಲ್ಲಿ ಬಾಣ ಪ್ರಯೋಗ ಮಾಡುತ್ತಿರುವವರು ಯಾರೆಂದು ತಿಳಿಯದೇ ಹೋದಾಗ "ಸಿಕ್ಕಬಾರದೇ ಕೈಗೊಂದು ಬಾಂಬೋ ಅಥವಾ ಬಂದೂಕೋ" ಎನ್ನುವಾಗ "ಬಂದೂಕಿನ ನಳಿಗೆಯ ಮೂಲಕವೇ ಸ್ವಾತಂತ್ರ್ಯ ಹೊಮ್ಮುತ್ತದೆ" ಎನ್ನುವ ಮಾವೋನ ನೆನಪಾಗುತ್ತದೆ.

ಪಿತೃಪ್ರಧಾನ ವ್ಯವಸ್ಥೆಯ ಹುನ್ನಾರಗಳೂ ಕಣ್ಣಿಗೆ ಕಾಣುವುದಿಲ್ಲ. ಅದರ ಕಾರ್ಯ ವೈಖರಿಯೂ ಅನೂಹ್ಯ. ಬಲಿಪಶುವೊಂದು ತಾನೇ ಬಲಿಪೀಠಕ್ಕೆ ತೆರಳುವ ಹಾಗೆ ಹಿಂಸೆಯೇ ಬದುಕು ಎಂದು ನಂಬಿಸಲಾಗಿದೆ ಹೆಣ್ಣಿಗೆ. ತಾನೇ ಒಪ್ಪಿಕೊಳ್ಳುವಂತೆ ಮಾಡಲಾಗಿದೆ. "ಯುಗ ಯುಗಗಳಾದರೂ ಕೊನೆಯಿಲ್ಲದೆ" ನಡೆಯುತ್ತಲೇ ಇದೆ ಈ ಹಿಂಸೆ "ಹುಡುಗಿಯರ ಮೇಲೆ" ಎನ್ನುವ ಹಿಂಸೆಯ ಇನ್ನೊಂದು ಸ್ವರೂಪ "ಯಾರೋ ಬಡಿಯುತ್ತಿದ್ದಾರೆ ಹುಡುಗಿಯನ್ನು" ಕವಿತೆಯಲ್ಲಿ ವ್ಯಕ್ತವಾಗಿದೆ. ಯಾರು ಬಡಿಯುತ್ತಿದ್ದಾರೆ ಎಂದು ಗೊತ್ತಾದರೆ ಕತ್ತಿ ಗುರಾಣಿ ಬಾಂಬು ಬಂದೂಕಗಳಿಂದ ಯುದ್ಧಮಾಡಬಹುದು. ಆದರೆ ಇಲ್ಲಿ ನಡೆಯುತ್ತಿರುವುದು ಕತ್ತಲಲ್ಲಿ ಹೂಡಿದ ಏಕ ಮುಖವಾದ ಮಾಯಾಯುದ್ಧ. ಆದುದರಿಂದ ಶಿಕ್ಷೆ ಕೊಡುವುದು ಯಾರಿಗೆ?

ಆದುದರಿಂದಲೇ "ಇಂದು ನಮ್ಮೀ ನಾಡು” ಮನುಷ್ಯಮಾತ್ರರ ಕೊಂದು
ಹೆಗ್ಗಣವ ಬದುಕಿಸುತ್ತಿರುವ ಪ್ಲೇಗು
ಎಲ್ಲಿ ನೋಡಿದರಲ್ಲಿ ಬೋಳುಮರ, ಕಳ್ಳಿಗಿಡ
ಹಸಿರು ವಿಚಾರಗಳ ತರಿವ ಅಲಗು" (ಇಂದು ನಮ್ಮೀ ನಾಡು ೨೦೨೦) ಎನ್ನುತ್ತಾರೆ. ಇಡೀ ಸಮಾಜವೇ ಒಂದು ಪ್ಲೇಗಾಗಿದೆ. ಇಲ್ಲಿ ಕೊಲ್ಲಬೇಕಾಗಿರುವುದು ಹೆಗ್ಗಣಗಳನ್ನು . ಆದರೆ ವಿಪರ್ಯಾಸವೆಂದರೆ ಹೆಗ್ಗಣಗಳನ್ನು ಬದುಕಿಸುತ್ತಿದೆ. ಕಾಯುವ ದೈವವೇ ಕೊಲ್ಲುತ್ತಿದೆ. (ಪ್ಲೇಗು ಉಂಟುಮಾಡುವ ಹಿಂಸೆ,ನೋವು ಅದರ ಭಯಾನಕ ಸ್ವರೂಪ ಏನೆಂಬುದಕ್ಕೆ ಅಲ್ಬರ್ಟ್ ಕಾಮೂನ ಪ್ಲೇಗ್ ಒಂದು ಉತ್ತಮ ಉದಾಹರಣೆ)

“ವೇಷ ಕಟ್ಟಿರುವ ಮಿಥ್ಯೆಗಳ ಅಮೋಘ ನೃತ್ಯ;
ರುಂಡಗಳ ಚೆಂಡಾಡುತಿರುವ ದುಂಡಾವರ್ತಿ;
ಹಿಂಸೆಯದೇ ಇಲ್ಲಿ ನಿತ್ಯ ಸತ್ಯ" ಈ ಸಾಲುಗಳು
ನಮ್ಮ ಇಂದಿನ ೨೦೨೦ರ ರೋಗಗ್ರಸ್ತ ಸಂದರ್ಭಕ್ಕೆ ಕನ್ನಡಿ ಹಿಡಿಯುತ್ತದೆ.

ಹಿಂಸೆ, ಲಾಲಸೆ, ಸ್ವಾರ್ಥ ಈ ಪದಗಳಿಗೆ ವಿರುದ್ಧ ಪದಗಳು ಯಾವುವೆಂದು ಕೇಳಿದರೆ ಎಲ್ಲಾ ಕಾಲಕ್ಕೂ ಥಟ್ಟನೆ ಹೊಳೆಯುವ ಉತ್ತರವೆಂದರೆ " ಗಾಂಧಿ"

“ವಿಧಾನಸಭೆಯಲ್ಲೊಂದು ಹಕ್ಕಿ” ಈ ಸಂಕಲನದ ಶೀರ್ಷಿಕೆ. ಇದೇ ಹೆಸರಿನ ಒಂದು ಕವಿತೆಯೂ ಇಲ್ಲಿದೆ. ಇಲ್ಲಿ ಬರುವ ಹಕ್ಕಿಯ ಪ್ರತಿಮೆಯೇ ಈ ಕವಿತೆಗಳ ಮೂಲ ಪ್ರತಿಮೆಯೆಂದು ನನಗನ್ನಿಸುತ್ತದೆ. ಈ ಸಂಕಲನದ ಹೆಸರು ಅದೇ ಆಗಿದೆ ಎನ್ನುವುದಷ್ಟೇ ಕಾರಣವಲ್ಲ ಇದಕ್ಕೆ. ಈ ಕವಿತೆಯನ್ನು ಓದಿದ ತಕ್ಷಣ ನನಗೆ ನೆನಪಾದದ್ದು ಪು.ತಿ.ನ ಅವರು ೧೯೪೭ ರಲ್ಲಿ ಬರೆದ “ನೆರಳು” ಎನ್ನುವ ಕವಿತೆ. "ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು" ಆ ಗರುಡನನ್ನು ಪು.ತಿ.ನ ಗಾಂಧಿ ಎನ್ನುತ್ತಾರೆ.

“ಗಾಂಧೀಜಿಯನ್ನು ಗರುಡನ ರೂಪಕದ ಮೂಲಕ ವಿವರಿಸುತ್ತಾ ಅವರ ಪ್ರಭಾವದ ‘ನೆರಳು’ ಭೂಮಿಯಲ್ಲಿ ಚಲಿಸುವ ವರ್ಣನೆ ಆ ಕವನದಲ್ಲಿ ಇದೆ” ಎನ್ನುತ್ತಾರೆ ವಿವೇಕ ರೈ ಅವರು. ಗಾಂಧಿಯದು ಏಕಾಂಗಿ ಪಯಣ. ಅವನ ಹಾದಿಯಲ್ಲಿ ನಡೆದವರು, ಅವನು ಸಾರಿದ ಮೌಲ್ಯಗಳನ್ನು ಆತ್ಮಸಾತ್ ಮಾಡಿಕೊಂಡವರು ಕಡಿಮೆ. ‘ಅದಕೋ ಅದರಿಚ್ಚೆ ಹಾದಿ, ಇದಕೋ ಹರಿದತ್ತ ಬೀದಿ’ ಎನ್ನುವ ಪುತಿನ ಕವನದ ಸಾಲುಗಳ ವ್ಯಂಗ್ಯ ಗಾಂಧಿಮಾರ್ಗದಿಂದ ನಾವು ಮೊಗ ತಿರುವಿದ, ಅವನ ಹೆಸರನ್ನು ನಮ್ಮ ಸ್ವಾರ್ಥಕ್ಕೆ ನಗದು ಮಾಡಿಕೊಳ್ಳುತ್ತಿರುವ ರೀತಿಯನ್ನು ಪರಿಣಾಮಕಾರಿಯಾಗಿ ಧ್ವನಿಸುತ್ತದೆ.
“ವಿಧಾನಸಭೆಯಲ್ಲೊಂದು ಹಕ್ಕಿ” ಕವಿತೆಯಲ್ಲಿ, ಒಂದುದಿನ ವಿಧಾನ ಸಭೆಯಲ್ಲಿ ಕಣ್ಣುಕುಕ್ಕುವ ಬೆಳಕಿನ ಹಕ್ಕಿಯೊಂದು ಪ್ರತ್ಯಕ್ಷವಾಗುತ್ತದೆ. ಈ ಹಕ್ಕಿ ಗಾಂಧಿಯೇ ಇರಬೇಕು ಎನಿಸುತ್ತದೆ.

ಒಳಗೆ ಹೊಕ್ಕ ಹಕ್ಕಿ ಅಲ್ಲಿರುವ ವ್ಯವಸ್ಥೆಯನ್ನೆಲ್ಲಾ ಬುಡಮೇಲುಮಾಡಿದಾಗ, ಉಂಟಾದ ಅವ್ಯವಸ್ಥೆಯೇ ಆ ಹಕ್ಕಿಯನ್ನು ಹೊರಗೆ ಓಡಿಸಿಬಿಡುತ್ತದೆ. ಸಭಾಸದರೆಲ್ಲಾ ಅವಾಕ್ಕಾಗಿ ಗಕ್ಕನೆ ನಿಲ್ಲುತ್ತಾರೆ. ಹಕ್ಕಿ ನಾಪತ್ತೆಯಾಗಿರುತ್ತದೆ. "ಜನರಷ್ಟೇ ನೆರಳುಗಳಂತೆ (ಇಂಥ ನೆಳಲೇನು ಗಾಂಧಿಯೆಂದು- ಪು.ತಿ.ನ) ಜರುಗಿ ಬರುತ್ತಿರುವುದ ಕಂಡು" ಹೆದರಿಕೊಂಡು ದೌಡಾಯಿಸುತ್ತಾರೆ ಒಳಕ್ಕೆ.

ಇದು ಸಿದ್ದಲಿಂಗಯ್ಯನವರ “ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಕವಿತೆಯನ್ನು ಕಣ್ಣಮುಂದೆ ತರುತ್ತದೆ.
ಈ ಸಂಕಲನದ ಕವಿತೆಗಳಲ್ಲಿ ಅಡಗಿರುವ ಹಿಂಸೆಗೆ ಈ ಕವಿತೆಯ ಮೂಲಕವೇ ಉತ್ತರವನ್ನು ಕವಿ ಕಂಡು ಕೊಳ್ಳುತ್ತಿದ್ದಾರೇನೋ ಎನಿಸುತ್ತದೆ.

ವಿದೇಶೀ ಸಾಹಿತ್ಯದ ಪ್ರೇರಣೆಯಿಂದ ಅನೇಕ ಕವಿತೆಗಳು ಇಲ್ಲಿ ರೂಪ ಪಡೆದಿವೆ."ಕನ್ನಡ ಕಾವ್ಯವು ಪ್ರವೇಶ ಮಾಡದ ಅನೇಕ ವಿಶ್ವಸಾಹಿತ್ಯ ಪರಂಪರೆಗಳ ಆಧುನಿಕ ಕಾವ್ಯದಲ್ಲಿ ಹಿಂಸೆ ಮತ್ತು ನೋವಿನ ಈ ಬಗೆಯ ಅನುಸಂಧಾನವಿದೆ" ಎಂದು ಇದಕ್ಕೆ ಮುನ್ನಡಿ ಬರೆದ ರಾಜೇಂದ್ರ ಚೆನ್ನಿಯವರು ಹೇಳಿರುವುದು ಸರಿಯಾಗಿಯೇ ಇದೆ.
ಹಿಂಸೆ ಅಹಿಂಸೆಯ ಹೋರಾಟಗಳ ಈ ಕವಿತೆಗಳನ್ನು ಓದುವಾಗ ಸಹಜವಾಗಿಯೇ ಬೇಂದ್ರೆ ನೆನಪಾಗುತ್ತಾರೆ.

“ಅಲ್ಲಿಂದ ಇಲ್ಲಿವರೆ ಹೊರಳಿ ನೋಡಿ
ಇದ್ದುದಿದ್ದಂತಿತ್ತು ಜನನ-ಮರಣದ ಜೋಡಿ
ಗೆದ್ದುದೇನೆನುತ ಮರಳಿ ಜಿಗಿದ
ಭೂತಜಾತದ ಎದೆಯ ಸೀಳಿ ಸಿಗಿದ
ಅದೇ ತನ್ನ ಮನೆಯೆಂದು ಸಿದ್ಧ ಬಗೆದ”. ("ಬುದ್ಧ" ಬೇಂದ್ರೆ)

"ಬೇಂದ್ರೆಯವರ ಪ್ರಕಾರ ಹಿಂಸೆಯ ವಿರುದ್ಧ ಅಹಿಂಸೆಯನ್ನು ಮುಂದೆ ಮಾಡಿದ ಬುದ್ಧ ತಾನು ಗೆದ್ದುದೇನು ಎಂದು ತಿಳಿಯದೇ ನಿರಾಶನಾಗಿ ಈ ಲೋಕವನ್ನೇ ತನ್ನ ಮನೆಯೆಂದು ಬಗೆದು ಮರಳಿ ಬರುತ್ತಾನೆ. ಆದ್ದರಿಂದ ಹಿಂಸೆ ಮತ್ತು ಅಹಿಂಸೆಯ ನಡುವಿನ ಹೋರಾಟ ಅನಂತ ಕಾಲದ್ದು. ನಿರಂತರವಾದದ್ದು" ಎಂದು ಕೆ.ರಘುನಾಥ್ ಅವರು ಹೇಳುವುದು ದಿವಾಕರ್ ಅವರ ಕವಿತೆಗಳ ಸಮರ್ಥನೆಯಾಗಿದೆ.

- ಗಿರಿಜಾಶಾಸ್ತ್ರಿ

MORE FEATURES

ಹದ್ದಿನ ಸಂಕೇತ ಕಾದಂಬರಿಗೊಂದು ಕಾವ್ಯದ ಶಕ್ತಿಯನ್ನು ದಕ್ಕಿಸಿಕೊಟ್ಟಿದೆ

05-12-2024 ಬೆಂಗಳೂರು

"ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು ಮನಸಿನೊಳಗೆ ಅಚ್ಚೊತ್ತಿ ಬಿಡುತ್ತದೆ. ಅತ್ತ ಮಲೆನಾಡು ಇತ್ತ ಕರಾವಳಿಯ ನಡುವ...

ಸಾಹಿತ್ಯಾಸಕ್ತರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧವಾಗಿದೆ ‘ಬೆಂಗಳೂರು ಲಿಟ್ ಫೆಸ್ಟ್’

04-12-2024 ಬೆಂಗಳೂರು

ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರ...

ಕೆಂಡದಗಿರಿಯ ಮೇಲೆ ಅರಗಿನ ಕಂಬ..

04-12-2024 ಬೆಂಗಳೂರು

"ಮಾತು, ಮೌನಗಳ ಅನುಭವದಲ್ಲಿನ ಈ ಹುಡುಕಾಟವು ಪ್ರಪಂಚದ ಚರಾಚರಗಳೊಂದಿಗೆ ಒಂದು ಆತ್ಮೀಯತೆಯನ್ನು ಏರ್ಪಡಿಸುತ್ತಲೇ ಇದೆ...