ಎಲ್ಲರೊಳಗೊಂದಾಗಿ ಬಾಳಬೇಕೆನ್ನುವ ನಿತ್ಯ ಸತ್ಯಗಳನ್ನು ತಿಳಿಸಿಕೊಡುವ ಕತೆ : ‘ಸಂಜೆ ಬಿಸಿಲು’


"ಈ ಕಥಾ ಸಂಕಲನದಲ್ಲಿ ನನ್ನನ್ನು ಅತಿಯಾಗಿ ಕಾಡಿದ ಕಥೆ ಇಲ್ಲದವರು. ಕೆಲವೊಂದು ಕಥೆಗಳೇ ಹೀಗೆ. ನಮ್ಮ ಜೀವನದಲ್ಲಿ ನಡೆದ ಘಟನೆಗಳಿಗೆ ಸ್ವಲ್ಪ ಮಟ್ಟಿನ ಹೋಲಿಕೆ ಇದ್ದರೂ ಸಾಕು ಮನಸ್ಸನ್ನು ಕದಡಿಬಿಡುತ್ತವೆ" ಎನ್ನುತ್ತಾರೆ ಪೂರ್ಣಿಮಾ ಹೆಗಡೆ. ಅವರು ಲೇಖಕಿ ಎ. ಪಿ. ಮಾಲತಿ ಅವರ ‘ಸಂಜೆ ಬಿಸಿಲು’ ಕಥಾಸಂಕಲನಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಮಯೂರ, ತರಂಗ, ಕರ್ಮವೀರ, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಪ್ರಿಯತೆ ಗಳಿಸಿದ ಹದಿನೆಂಟು ಕಥೆಗಳಿಂದ ಈ ಕಥಾ ಸಂಕಲನ ಶೋಭಿಸಲ್ಪಟ್ಟಿದೆ. ಜೀವಿಸುವ ಛಲಬೇಕು, ಈಸಬೇಕು, ಇದ್ದು ಜೈಸಬೇಕು, ಪರರ ಸಂಪತ್ತನ್ನು ಆಶಿಸಬಾರದು, ಎಲ್ಲರೊಳಗೊಂದಾಗಿ ಬಾಳಬೇಕೆನ್ನುವ ನಿತ್ಯ ಸತ್ಯಗಳನ್ನು ಆಧಾರವಾಗಿಸಿಕೊಂಡಿವೆ ಇಲ್ಲಿಯ ಕಥೆಗಳು. ಎನ್ನುವ ಮೂಲಕ ಬೆನ್ನುಡಿ ಬರೆದ ಶ್ರೀ ಜಿ. ಟಿ. ನಾರಾಯಣರಾವ್ ಅವರ ಮಾತುಗಳು ಅದೆಷ್ಟು ಸತ್ಯ ಎನ್ನುವುದು ಇಲ್ಲಿಯ ಕಥೆಗಳಿಂದಲೇ ವಿದಿತವಾಗುತ್ತದೆ. ಕಥೆಗಳನ್ನು ಓದುತ್ತಿರುವ ನಮ್ಮ ಮನಸ್ಸು ತನ್ನಿಂದ ತಾನೇ ಅಂತರ್ಮುಖಿಯಾಗಿ, ಆತ್ಮ ವಿಮರ್ಶೆಗೆ ತೊಡಗಿ ಬಿಡುತ್ತದೆ.

“ವಿಶ್ವಾಸ “ ಶೀರ್ಷಿಕೆಯಡಿ ರಚಿತವಾದ ಈ ಕಥೆ ಮನೆ ಖರೀದಿ ವಿಷಯಕ್ಕೆ ಸಂಬಂಧಪಟ್ಟಿದೆ. ರಮೇಶರಾಯರಿಂದ ವೆಂಕಟೇಶ್ ಪ್ರಭು ಎನ್ನುವವರು ಹನ್ನೊಂದು ಲಕ್ಷ ರೂಪಾಯಿಗಳಿಗೆ ಮನೆ ಖರೀದಿಸಲು ಮಾತುಕತೆಗಳಾಗಿ, ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸುವುದಕ್ಕಾಗಿ ಇಬ್ಬರೂ ಬಂದಿರುತ್ತಾರೆ. ಕಾರಣಾಂತರದಿಂದ ರೆಜಿಸ್ಟ್ರೇಶನ್ ಹದಿನೈದು ದಿನಗಳು ಮುಂದೆ ಹೋಗಿರುತ್ತದೆ. ಹನ್ನೊಂದು ಲಕ್ಷಗಳನ್ನು ವಾಪಸ್ ತೆಗೆದುಕೊಂಡು ಹೋಗಲು ಹೆದರಿದ ವೆಂಕಟೇಶ್ ಪ್ರಭುಗಳು ವಿಶ್ವಾಸದ ಮೇಲೆ ನಂಬಿಕೆಯಿಟ್ಟು ಅಷ್ಟೂ ಹಣವನ್ನು ರಮೇಶ್ ರಾಯರಿಗೆ ಕೊಟ್ಟು, ಮನೆಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ತಾವಿಟ್ಟು ಕೊಳ್ಳುತ್ತಾರೆ. ವಿಶ್ವಾಸದಿಂದ ಹಣವನ್ನೇನೋ ಕೊಟ್ಟರು.. ಆದರೆ ಅದಕ್ಕಾಗಿ ಬಹಳ ಪರಿತಪಿಸಬೇಕಾದ ಘಟನೆಯೊಂದು ಜರುಗಿತು.. ಆ ಘಟನೆ ಯಾವುದು? ನಿಜವಾಗಿಯೂ ರಮೇಶ್ರಾಯರು ವಿಶ್ವಾಸ ಘಾತುಕರೇ? ವೆಂಕಟೇಶ್ ಪ್ರಭುಗಳಿಗೆ ಮನೆ ಪ್ರಾಪ್ತವಾಯಿತೇ? ಮನದಲ್ಲೇಳುವ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯಲು ಕೊನೆಯವರೆಗೂ ಓದುವ ಹಾಗೆ ಮಾಡುತ್ತದೆಯಲ್ಲದೇ ಓದುಗರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಾ ಸಾಗುತ್ತದೆ. ಕಥೆಯನ್ನು ಓದಿ ಮುಗಿಸಿದಾಗ ಶೀರ್ಷಿಕೆಗೆ ತಕ್ಕ ನ್ಯಾಯ ಒದಗಿಸಿಕೊಟ್ಟು, ರಮೇಶ್ ರಾಯರ ವ್ಯಕ್ತಿತ್ವಕ್ಕೆ ತಲೆಬಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಲೇಖಕಿ.

ಈ ಕಥಾ ಸಂಕಲನದಲ್ಲಿ ನನ್ನನ್ನು ಅತಿಯಾಗಿ ಕಾಡಿದ ಕಥೆ ಇಲ್ಲದವರು. ಕೆಲವೊಂದು ಕಥೆಗಳೇ ಹೀಗೆ. ನಮ್ಮ ಜೀವನದಲ್ಲಿ ನಡೆದ ಘಟನೆಗಳಿಗೆ ಸ್ವಲ್ಪ ಮಟ್ಟಿನ ಹೋಲಿಕೆ ಇದ್ದರೂ ಸಾಕು.. ಮನಸ್ಸನ್ನು ಕದಡಿಬಿಡುತ್ತವೆ. ತನ್ನ ಗಂಡ ಮಂಜಯ್ಯನ ಬೇಜವಾಬ್ದಾರಿತನಕ್ಕೆ ತಾನೇ ಕಾರಣವೆಂದು ಎಲ್ಲರೂ ತನ್ನನ್ನು ದೋಷಿಯನ್ನಾಗಿಸಿದರೂ ನಿರ್ಲಿಪ್ತಳಾಗಿದ್ದು ಸಾವಿತ್ರಿ ಗಂಡನ ದಿನಕಾರ್ಯ ಮುಗಿಸಿದಳು. ತನ್ನನ್ನು ಬುದ್ಧಿಹೀನಳೆಂದುಕೊಂಡು ತಾಯಿಯು ಅಚ್ಚರಿಗೊಳ್ಳುವ ರೀತಿಯಲ್ಲಿ ಬದುಕಿಗೆ ನೆಲೆಕಂಡುಕೊಂಡಿದ್ದು ಹೇಗೆ? ಇದೇ ಈ ಕಥೆಯ ಜೀವಾಳ.

“ಇಂಟರ್ನೆಟ್ ಪ್ರೇಮ “ ಕಥೆಯಲ್ಲಿ “ಮದುವೆಯಾಗಿ ಸಂತೃಪ್ತ ಜೀವನ ನಡೆಸುತಿದ್ದ ಗೃಹಿಣಿ ಅಮಾಯಕ ಯುವಕನನ್ನು ಪ್ರೇಮ ಜಾಲದಲ್ಲಿ ಬೀಳಿಸಿ ಅವನಿಗೆ ಮೋಸ ಮಾಡಿಬಿಟ್ಟಳಲ್ಲ!!” ಎಂದು ಖೇದವೆನಿಸುತ್ತದೆ. ಆದರೆ ಕಥೆಯ ಅಂತ್ಯದಲ್ಲಿ ಆತ ಬೇರೆ ಹುಡುಗಿಯನ್ನು ಮದುವೆಯಾಗುವ ಒಳ್ಳೆಯ ತೀರ್ಮಾನ ಕೈಗೊಳ್ಳುವುದು ಖುಷಿಯೆನಿಸುತ್ತದೆ.. ಈಗಿನ ಯುವ ಜನತೆಗೆ ಸಂದೇಶ ನೀಡುವ ಕಥೆ ಸೊಗಸಾಗಿ ನಿರೂಪಿಸಲ್ಪಟ್ಟಿದೆ.

ಚಿನ್ನದಾಭರಣದ ವ್ಯಾಮೋಹದಲ್ಲಿ ಅಳಿಯ, ಮಗಳ ಕಷ್ಟಕ್ಕೆ ಸ್ಪಂದಿಸದ ಹೊನ್ನಮ್ಮನ ಪಾತ್ರ ವಿಶಿಷ್ಟವಾಗಿ ಮೂಡಿ ಬಂದಿದೆ 'ಕಲ್ಲು ಕರಗಿತು' ಕಥೆಯಲ್ಲಿ. ಮಗಳ ಪ್ರೀತಿಯ ಮಾತು,ಸಂತೋಷದ ಮುಂದೆ ತಾಯಿಯಾದವಳಿಗೆ ಒಡವೆ, ಆಭರಣಗಳು ಬೆಲೆಯಿಲ್ಲದ್ದು , ಲೆಕ್ಕಕ್ಕಿಲ್ಲದ್ದು ಎನ್ನುವುದನ್ನು ಅರಿವು ಮೂಡಿಸುವುದೇ ಈ ಕಥೆಯ ಉದ್ದೇಶ ಎನ್ನುವುದು ತುಂಬಾ ಚೆನ್ನಾಗಿ ನಿರೂಪಿತವಾಗಿದೆ.

ವೃದ್ಧಾಶ್ರಮದಲ್ಲಿ ಬದುಕು ಹೇಗೆ? ಅಲ್ಲಿರುವವರ ಮನೋಭಾವನೆಯೇನು? ಮಗ, ಸೊಸೆ ಚೆನ್ನಾಗಿ ನೋಡಿಕೊಂಡರೂ ರಾಯರೇಕೆ ಇಲ್ಲಿಗೆ ಬಂದುಳಿದರು? ಹಳೆಯ ಪ್ರೀತಿ ವೃದ್ಧಾಪ್ಯದಲ್ಲಿ ದೊರೆತಾಗ ಆಗುವ ಸಂತೋಷ, ಸಂಭ್ರಮವನ್ನು ‘ಸಂಜೆ ಬಿಸಿಲು’ ಎನ್ನುವ ಕಥೆಯ ಮೂಲಕ ಸೊಗಸಾಗಿ ಹೇಳಿದ್ದಾರೆ.

ಓದುಗರ ಜೀವನದೃಷ್ಟಿಯನ್ನು ಹಸನುಗೊಳಿಸಿ, ಧನಾತ್ಮಕ ಸಂದೇಶವನ್ನು ಸಾರುವ ಇಲ್ಲಿನ ಕಥೆಗಳು ವಿಭಿನ್ನ ಕಥಾವಸ್ತುಗಳನ್ನು ಹೊಂದಿ, ವಾಸ್ತವಿಕ ನೆಲೆಗಟ್ಟಿನಲ್ಲಿ ಓದುಗರನ್ನು ತರ್ಕಿಸುವಂತೆ ಮಾಡುತ್ತವೆ.. ಚೆಂದದ ಹದಿನೆಂಟು ಕಥೆಗಳನ್ನು ಒಟ್ಟಿಗೆ ಓದಲು ದೊರೆತ ಸಾರ್ಥಕಭಾವ ನನ್ನದು.

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...