ಈ ಭಾಷಾ ಪರಿಚಾರಿಕೆ ಅಂದರೆ ಏನು?

Date: 17-10-2021

Location: ಬೆಂಗಳೂರು


‘ಈ ಭಾಷಾ ಪರಿಚಾರ್ಯ ಎಂದರೆ ಏನು? ಫಲಪೇಕ್ಷೆ ಇಲ್ಲದೆ ಮಾಡುವ ಸೇವೆ. ಇದು ಸಾಮಾನ್ಯವಾಗಿ ಯಾವುದೇ ಭಾಷೆಗೆ, ಕಲೆಗೆ, ಪ್ರದೇಶಕ್ಕೆ, ರಾಜ್ಯ- ದೇಶಗಳಿಗೆ, ಸಮುದಾಯಕ್ಕೆ, ಸಾಂಸ್ಕೃತಿಕ- ಸಾಂಪ್ರದಾಯಿಕ ಆಚಾರಣೆಗಳಿಗೆ ಬೇಕಾದದ್ದು’ ಎನ್ನುತ್ತಾರೆ ಲೇಖಕ, ಪತ್ರಕರ್ತ ಹೃಷಿಕೇಶ ಬಹದ್ದೂರ ದೇಸಾಯಿ. ಅವರು ತಮ್ಮ ‘ಋಷ್ಯಶೃಂಗ’ ಅಂಕಣದಲ್ಲಿ ಭಾಷಾ ಪರಿಚಾರಿಕೆ ಕುರಿತು ವಿಶ್ಲೇಷಿಸಿದ್ದಾರೆ.

ನಮ್ಮೂರಿನ ರಂಗ ಮಂದಿರದಲ್ಲಿ ಭಾನುವಾರದ ಮುಂಜಾವುಗಳಲ್ಲಿ ಪುಸ್ತಕ ಬಿಡುಗಡೆ, ಕವಿ ಸಮ್ಮೇಳನ, ಚರ್ಚಾ ಗೋಷ್ಟಿ , ಯಾರದೋ ಪುಣ್ಯ ಸ್ಮರಣೆ, ಕಾರ್ಯಕ್ರಮ ಇರುತ್ತವೆ. ಇವು ಯಾವುವೂ ಇಲ್ಲದೆ ಇದ್ದರೆ ಕೊನೆಗೆ ಒಬ್ಬರಿಗೊಬ್ಬರು ಕೊಟ್ಟು - ಕೊಳ್ಳುವ ಪ್ರಶಸ್ತಿ ಪ್ರದಾನ ಸಮಾರಂಭ ಅಂತೂ ಇದ್ದೇ ಇರುತ್ತದೆ. ಇದೇ ರೀತಿ ಬೆಂಗಳೂರಿನ ಬಿ.ಪಿ ವಾಡಿಯಾ ರಸ್ತೆಯ ವರ್ಲ್ಡ್ ಕಲ್ಚರ್ ಭವನದಲ್ಲೋ, ಮೈಸೂರಿನ ಧ್ವನ್ಯಾ ಲೋಕದಲ್ಲೋ ಅಥವಾ ಯಾವುದೇ ಜಿಲ್ಲೆಯ ಸಾಹಿತ್ಯ ಪರಿಷತ್ ಸಭಾಂಗಣದಲ್ಲೋ ಇದ್ದೀತು.

ಅಂತಹ ಕಾರ್ಯಕ್ರಮಗಳಲ್ಲಿ ಕಾಣಸಿಗುವ, ಕೇಳ ಪಡುವ ವೇದಿಕೆ ವೀರರು ಹಲವರು. ಅವರಲ್ಲಿ ಕೆಲವರು ಕವಿಗಳು, ಕತೆಗಾರರು, ಪ್ರಾಧ್ಯಾಪಕರು, ಪ್ರಾಂಶುಪಾಲರು, ಟೀಕಾ ಚಾರ್ಯರು, ಮಾಜಿ ಕವಿಗಳು, ಇತ್ಯಾದಿ. ಇನ್ನೂ ಕೆಲವರು ಕಷ್ಟ ಪಟ್ಟು ಚುನಾವಣೆ ಗೆದ್ದು ಸಾಹಿತ್ಯ ಸಂಘದ ಅಧ್ಯಕ್ಷರು, ಪರಿಷನ್ ಮಂದಿರದ ಠೇಕೆದಾರರು, ಅವರೂ ಇವರು ಇರುತ್ತಾರೆ. ಮತ್ತೂ ಕೆಲವರು ತಮ್ಮನ್ನು ತಾವು ಸಾಹಿತ್ಯ ಪರಿಚಾರಕರು ಅಂತ ಪರಿಚಯ ಮಾಡಿಕೊಳ್ಳುತ್ತಾರೆ. ತಾವು ಮಾಡಿ ಕೊಳ್ಳದಿದ್ದರೂ ತಮ್ಮ ಗುರು ಬಂಧುಗಳಿಂದ ಮಾಡಿ ಕೊಡುವಂತೆ ನೋಡಿಕೊಳ್ಳುತ್ತಾರೆ.

ಮೊದ ಮೊದಲಿಗೆ ನನಗೆ ಆ ಪದ ಅರ್ಥ ಆಗಿರಲಿಲ್ಲ. ಒಂದಿವಸ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಿಂದ ಆ ಪದ ಕೇಳಿ ನನ್ನ ಸ್ನೇಹಿತ ರೊಬ್ಬರಲ್ಲಿ ಕೇಳಿದೆ : ``ಹಂಗ ಅಂದ್ರ ಏನು?’’ ಅವರು ತಿಳಿ ಹೇಳಿದರು : ಹಂಗ ಅಂದ್ರ ಅವರು ಓದಿಲ್ಲ, ಬರದಿಲ್ಲ ಆದರ ಬೇರೆ ರೀತಿಯಿಂದ ಸಾಹಿತ್ಯದ ಸೇವಾ ಮಾಡ್ಯಾರ ಅಂತ ಅರ್ಥ'’ ಅವರ ಮಾತು ನನಗೆ ಅರ್ಥ ಆಗೋ ಹೊತ್ತಿಗೆ ವೇದಿಕೆಯಿಂದ ದನಿ ಬಂತು. ``ಶ್ರೀಯುತರು ಸಾಹಿತ್ಯ ಪರಿಚಾರಕರು. ಇವರು ಜಿಲ್ಲಾ ಸಾಹಿತ್ಯ ಭವನ ಕಟ್ಟುವ ಸಲುವಾಗಿ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟಿದ್ದಾರೆ. ಅದರ ಜಾಗ ಹುಡುಕಾಡುವುದರಿಂದ ಹಿಡಿದು ಅದಕ್ಕೆ ಅಡಿಗಲ್ಲು ಹಾಕುವುದರ ತನಕ ಅವರು ಕೆಲಸ ಮಾಡಿದ್ದಾರೆ. ಈಗ ಎಂ.ಎಲ್.ಎ ಫಂಡು ಕೊಡಿಸಿ ಒಂದು ಮೂರು - ನಾಲ್ಕು ಮಹಡಿ ಕಟ್ಟಿ ಬಿಟ್ಟರೆ, ಅವರ ಜೀವನ ಸಾರ್ಥಕ,’’ ಅಂತ ಅವರು ಬಣ್ಣಿಸಿದರು. ``ಇವರು ಅದನ್ನು ತಮ್ಮ ಜೀವನದ ಸವಾಲು ಆಗಿ ತೊಗೊಂಡು ಬಿಟ್ಟದ್ದಕ್ಕ ಆ ಭವನ ಇನ್ನೂ ಆಗೇ ಇಲ್ಲ. ತಾ ಮಾಡೋದಿಲ್ಲ, ಬ್ಯಾರೆ ದವರಿಗೆ ಬಿಡೋದಿಲ್ಲ,’’ ಅಂತ ಹಿರಿಯರೊಬ್ಬರು ನಿಟ್ಟುಸಿರು ಬಿಟ್ಟರು.

ಹಾಗಾದರೆ ಪರಿಚಾರ್ಯ ಎಂದರೆ ಏನು? ಫಲಪೇಕ್ಷೆ ಇಲ್ಲದೆ ಮಾಡುವ ಸೇವೆ. ಇದು ಸಾಮಾನ್ಯವಾಗಿ ಯಾವುದೇ ಭಾಷೆಗೆ, ಕಲೆಗೆ, ಪ್ರದೇಶಕ್ಕೆ, ರಾಜ್ಯ- ದೇಶಗಳಿಗೆ, ಸಮುದಾಯಕ್ಕೆ, ಸಾಂಸ್ಕೃತಿಕ- ಸಾಂಪ್ರದಾಯಿಕ ಆಚಾರಣೆಗಳಿಗೆ ಬೇಕಾದದ್ದು. ನಿಸ್ವಾರ್ಥ ಸೇವೆ ಇಲ್ಲದೆ, ಇವು ಯಾವುವೂ ಉಳಿಯಲಾರವು, ಬೆಳೆಯಲಾರವು. ಇನ್ನು ಯಾವ ಪ್ರದೇಶ, ಭಾಷೆ, ಸಮುದಾಯ ಇತರರಿಗಿಂತ ಹಿಂದುಳಿದಿದೆಯೋ, ಅದಕ್ಕೆ ಹೆಚ್ಚು ಸೇವೆ ಬೇಕಾದೀತು. ಈ ಹಿನ್ನೆಲೆಯಲ್ಲಿ ಒಂದು ಉದಾಹರಣೆ ನೋಡೋಣ. ಕರ್ನಾಟಕದ 31 ಜಿಲ್ಲೆಗಳಲ್ಲಿ 19 ಜಿಲ್ಲೆಗಳು ಗಡಿ ಜಿಲ್ಲೆಗಳು. ಇವುಗಳಲ್ಲಿ ಬಹುತೇಕವು ಒಳನಾಡಿಗಿಂತ ಹಿಂದೆ ಉಳಿದಿವೆ.

ಇತರ ಭಾಷೆಗಳ ಪ್ರಭಾವದಿಂದ ಭಾಷಾಭಿವೃದ್ಧಿಯಲ್ಲಿ, ರಾಜಧಾನಿಯಿಂದ ದೂರ ಇರುವುದಕ್ಕೆ, ಸರಕಾರದ ನಿರ್ಲಕ್ಷ ದಿಂದ, ನೀತಿ ನಿರೂಪಣೆಯಲ್ಲಿನ ಅನ್ಯಾಯದಿಂದ, ಬಡತನ, ಅಸಮಾನತೆ, ಇತ್ಯಾದಿ ಐತಿಹಾಸಿಕ ಕಾರಣಗಳಿಂದ, ಶಿಕ್ಷಣ - ಜೀವನ ಮಟ್ಟ ಇತ್ಯಾದಿ ಗಳಲ್ಲಿ ಹಿಂದುಳಿದಿರುವವು. ಇವುಗಳ ಬಗ್ಗೆ ಮಾತು ಬಂದಾಗಲೆಲ್ಲಾ ಇಲ್ಲಿ ಕನ್ನಡತನ ಕಮ್ಮಿ, ಕನ್ನಡದ ವಾತಾವರಣ ಇಲ್ಲ, ಇಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಬೇಕು, ಎನ್ನುವ ಒತ್ತಾಯ ಕೇಳಿ ಬರುತ್ತದೆ. ಇಲ್ಲಿ ಕನ್ನಡದ ಪರಿಚಾರಕರು ಬೇಕು ಎಂದು ಆಶಯ ವ್ಯಕ್ತ ವಾಗುತ್ತದೆ. ಇದು ಸಹಜ.

ಇಲ್ಲಿ ಎಂಥ ಪರಿಚಾರಿಕತೆ ಬೇಕು? ಸರಕಾರ ವಾಗಲಿ, ಗೈರು ಸರಕಾರಿ ಸಂಸ್ಥೆ ಗಳಾಗಲಿ, ಯಾವ ರೀತಿಯ ಸೇವೆ ಮಾಡ ಬೇಕಾಗುತ್ತದೆ? ಈ ಸರಳ ಪ್ರಶ್ನೆಗಳಿಗೆ ಸಿಗುವ ಉತ್ತರಗಳು ಮಾತ್ರ ಕ್ಲಿಷ್ಟ. ಅನೇಕ ರಾಜಕಾರಣಿಗಳು, ಅಧಿಕಾರಿಗಳು, ಹಾಗೂ ಪರಿಚಾರಕರಿಗೆ ಹೊಳೆಯುವ ಉತ್ತರಗಳು ಮಾತ್ರ ಅತಿ ಸರಳ. ಇವು ಎಲ್ಲರಿಗೂ ಗೊತ್ತಿರುವವು ಹಾಗೂ ಅತಿ ನಿರೀಕ್ಷಿತವಾದವು. ಅದು ಬಿಲ್ಡಿಂಗ್, ರಸ್ತೆ, ಸೇತುವೆ, ಇತ್ಯಾದಿ ಕಟ್ಟುವುದು. ಅದರ ಮೇಲೆ ಒಂದಕ್ಕೆ ಹತ್ತು ಖರ್ಚು ಮಾಡುವುದು. ಒಟ್ಟಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಕೆಲಸಗಳನ್ನು ಕ್ರಿಮಿನಲ್ ಉದ್ದೇಶ ಗಳಿಂದ ಮಾಡುವುದು. ನಮ್ಮ ಹೈದರಾಬಾದ್ ಕರ್ನಾಟಕ ದ ಕಡೆ ಇದರ ಬಗ್ಗೆ ಒಂದು ಜೋಕು ಇದೆ :```ಹಳೆ ಕಲ್ಲು ಹೊಸ ಬಿಲ್ಲು'’ ಅಂತ.

ಇಂತಹ ಹೊತ್ತಿನಲ್ಲಿ ನಮಗೆ ಕೆಲವು ನವ ಯುಗದ ಪರಿಚಾರಿಕೆ ಪ್ರಯತ್ನ ನೆನಪಾಗುತ್ತವೆ. ಅವುಗಳಲ್ಲಿ ಮುಖ್ಯವಾದದ್ದು ರೇಖತಾ ಫೌಂಡೇಷನ್. ಹಿಂದಿ- ಉರ್ದು- ಹಿಂದೂಸ್ತಾನಿ ಭಾಷೆ ಹಾಗೂ ಸಾಹಿತ್ಯದ ಪ್ರಚಾರ ದೃಷ್ಟಿಯಿಂದ ಆರಂಭವಾದ ಈ ಸಂಸ್ಥೆ ಹೊಸ ಸೀಮಿತ ಸಮಯದಲ್ಲಿ ಅಸಾಮಾನ್ಯ ಕೆಲಸ ಮಾಡಿದೆ. ಕನ್ನಡದಲ್ಲಿ ಇದೇ ರೀತಿಯ ಕೆಲಸ ಮಾಡುತ್ತಿರುವವರು ವಚನ ಸಂಚಯ, ದಾಸ ಸಂಚಯ, ಪುಸ್ತಕ ಸಂಚಯ ಮುಂತಾದ ಆನ್ಲೈನ್ ವೇದಿಕೆಗಳನ್ನು ರೂಪಿಸಿದ ಬೆಂಗಳೂರಿನ ಸಂಚಿ ಫೌಂಡೇಷನ್ ನ ಗೆಳೆಯರು.

ಈ ಬಾರಿ ರೇಖತಾ ದ ಬಗ್ಗೆ ತಿಳಿದುಕೊಳ್ಳೋಣ.

ಹೊಸ ತಲೆಮಾರಿನ ಹುಡುಗ ಹುಡುಗಿಯರಿಗೆ ಪುಸ್ತಕ ಓದುವ ರುಚಿ ಇಲ್ಲ. ಅವರಿಗೆ ಸ್ಕ್ರೀನ್ ನಲ್ಲಿ ಏನಾದರೂ ಕಂಡರೆ ಮಾತ್ರ ಓದುತ್ತಾರೆ. ಅವರಲ್ಲಿ ಸಾಹಿತ್ಯಾ ಭಿರುಚಿ ಬೆಳೆಸ ಬೇಕು ಎಂದರೆ ಹೊಸ ತಂತ್ರಜ್ಞಾನ ಬಳಸಿ ಏನಾದರೂ ಕರಾಮತ್ತು ಮಾಡಬೇಕು ಅಷ್ಟೇ. ಇಲ್ಲದಿದ್ದರೆ ಇಲ್ಲವೇ ಇಲ್ಲ,’’ ಎನ್ನುವ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಅದರ ಪ್ರಕಾರ ಕೆಲಸ ಮಾಡಿದವರು ರೇಖತಾದ ಸಿಬ್ಬಂದಿ ಹಾಗೂ ಸ್ವಯಂ ಸೇವಕರು.

ಇವರು ಶುರು ಮಾಡಿದ ರೇಖತಾ. ಒ. ಆರ್. ಜಿ. ವೆಬ್ಸೈಟ್ ತುಂಬ ಜನಪ್ರಿಯವಾಗಿದೆ. ಈ ಸಂಸ್ಥೆ ಇಲ್ಲಿಯ ವರೆಗೆ ಹಿಂದಿ- ಉರ್ದು - ಪರ್ಷಿಯನ್ - ಸಾಹಿತ್ಯಕ್ಕೆ ಸಂಬಂಧ ಪಟ್ಟಂತೆ ಇದರಲ್ಲಿ ಮಾಹಿತಿ ಲಭ್ಯ ಇದೆ. ಲೇಖಕರ ಬದುಕು- ಬರಹ, ಸೃಜನಶೀಲ ಹಾಗೂ ಸೃಜನೇತರ, ಕಾವ್ಯ, ಶಾಯರಿ, ಗಜಲ್, ದಾಸತೊಂಗಿ, ಕತೆ, ಕಾದಂಬರಿ, ಎಲ್ಲದರ ಸ್ಥೂಲ ಮಾಹಿತಿ ಇದೆ. ಮುಖ್ಯ ವಾಹಿನಿಯ ಸಾಹಿತ್ಯ ಹೊರತು ಪಡಿಸಿ ದಿನಚರಿ, ಮಕ್ಕಳ ಸಾಹಿತ್ಯ, ಅನುವಾದ, ಜೀವನ ಚರಿತ್ರೆ, ಚಲನ ಚಿತ್ರ ಸಾಹಿತ್ಯ, ಮುಂತಾದ ಪ್ರಕಾರ ಗಳ ಬರಹ ಗಳನ್ನೂ ಸಹಿತ ಇಲ್ಲಿ ಅಳವಡಿಸಲಾಗಿದೆ.

ಇದರಲ್ಲಿ 4,500 ಕವಿಗಳ ಪರಿಚಯ, 42,000 ಗಜಲ್, 27,000 ಶಾಯರಿ, 7,900 ಹಾಡುಗಳು, ಸುಮಾರು 7,000 ವಿಡಿಯೋ, ಹಾಗೂ ವಿವಿಧ ರೀತಿಯ 77,000 ಈ -ಪುಸ್ತಕ ಗಳನ್ನು ರೇಖತಾ ಪ್ರಕಟಿಸಿದೆ. ಇದಲ್ಲದೆ, ರೇಖತಾ ಸಿಬ್ಬಂದಿ ಹಾಗೂ ಆಸಕ್ತ ಸ್ವಯಂ ಸೇವಕರು ಸುಮಾರು ಒಂದು ಲಕ್ಷ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಕೇವಲ ಎಂಟು ವರ್ಷ ಗಳಲ್ಲಿ.

ರೇಖತಾ ದ ಅತಿ ಮಹತ್ವದ ವಿಷಯವೆಂದರೆ ಅದೊಂದು ಬಹು- ಲಿಪಿ, ಬಹು ಅಕ್ಷರ ಶೈಲಿಯ ಜಾಲ ತಾಣ. ಇದರಲ್ಲಿ ಇಂಗ್ಲೀಷು, ದೇವನಾಗರಿ, ಉರ್ದು- ಪರ್ಷಿಯನ್, ನಸತಾಲೀಕ, ಇತ್ಯಾದಿ ಲಿಪಿ ಗಳನ್ನು ಬಳಸಲಾಗಿದೆ. ಇವೆಲ್ಲ ಲಿಪಿ ಗಳನ್ನು ಬಳಸಿ, ಹುಡುಕ ಬಹುದು.

ಉರ್ದು ವಿನ ಬಗ್ಗೆ ಅನೇಕ ಜನರಿಗೆ ಸಿಟ್ಟು - ಅಸಹನೆ ಇರುವುದು ಅದರ ಲಿಪಿಯಿಂದಾಗಿ. ತಾವು ದಿನ ನಿತ್ಯ ಬಳಸುವ ಅನೇಕ ಕನ್ನಡ ಶಬ್ದಗಳು ಪರ್ಷಿಯನ್- ಉರ್ದು ಮೂಲದವು ಅಂತ ಅವರಿಗೆ ಗೊತ್ತಿರೋದಿಲ್ಲ. ಆದರೆ ಉರ್ದು ಲಿಪಿ ಅರೇಬಿಕ್ ಲಿಪಿ ಗೆ ಇರುವ ಸಾಮ್ಯವನ್ನು ನೋಡಿ ಅವರಿಗೆ ಉರ್ದುವಿನ ಮೇಲೆ ಅಸಹನೆ ಹುಟ್ಟಿಕೊಳ್ಳುತ್ತದೆ.

ಉರ್ದು ಭಾರತೀಯ ಭಾಷೆ ಅನ್ನುವುದು ಅನೇಕರಿಗೆ ಗೊತ್ತಿರುವುದಿಲ್ಲ. ಅದನ್ನು ವಿದೇಶಿ ಮೂಲದ ಭಾಷೆ ಅಂತಲೋ, ಅದು ಮುಸ್ಲಿಮರ ಭಾಷೆ ಅಂತಲೋ , ಕೆಲವರು ಅದನ್ನು ನಮ್ಮದಲ್ಲ ಅನ್ನುವ ಭಾವದಿಂದ, ತುಸು ದೂರದಿಂದ ನೋಡುತ್ತಾರೆ. ಬಹು ಲಿಪಿ ಬಳಕೆಯಿಂದ ಈ ಭಾವ ಕಮ್ಮಿ ಆಗಬಹುದು.

ಇನ್ನೊಂದು ಮುಖ್ಯ ಅಂಶವೆಂದರೆ ಭಾರತ ಸೇರಿದಂತೆ ಎಷಿಯಾದ ಅನೇಕ ದೇಶ- ಪ್ರದೇಶ ಗಳಲ್ಲಿ ಉರ್ದು ಭಾಷಿಕರು ಪರ್ಷಿಯನ್- ಉರ್ದು ಲಿಪಿ ಉಪಯೋಗಿಸುವುದಿಲ್ಲ. ಉತ್ತರ ಭಾರತದ, ಪಶ್ಚಿಮ ಭಾರತದ ಅನೇಕ ರಾಜ್ಯಗಳ ಜನರು ದೇವ ನಾಗರಿಯಲ್ಲಿ ಉರ್ದು ಬರೆಯುತ್ತಾರೆ. ಪಂಜಾಬಿನ ಉರ್ದು ಭಾಷಿಕರು ಗುರುಮುಖಿಯಲ್ಲಿ ಬರೆಯುತ್ತಾರೆ. ಕರ್ನಾಟಕ, ಕೇರಳ, ತಮಿಳುನಾಡು ಇತ್ಯಾದಿ ದಕ್ಷಿಣ ರಾಜ್ಯಗಳ ಉರ್ದು ಭಾಷಿಕರು ಕನ್ನಡಲ್ಲಿ ಬರೆದು -ಓದುವುದು ಉಂಟು. ಭಾರತೀಯ ಸೇನೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಅಧಿಕಾರಿಗಳು ನೀಡುವ ಉರ್ದು ಆದೇಶಗಳು ಇಂಗ್ಲೀಷ ಲಿಪಿಯಲ್ಲಿ ಇರುತ್ತವೆ. ಇವೆಲ್ಲ ಪ್ರಾಯೋಗಿಕ ಕಾರಣಗಳಿಗಾಗಿ ಅದು ಬಹು ಲಿಪಿ ತಾಣವಾಗಿ ಚಾಲ್ತಿ ಯಲ್ಲಿ ಇದೆ.

ಆದರೆ ರೇಖತಾ ಅತಿ ಹೆಚ್ಚು ಜನರಿಗೆ ಗೊತ್ತಿರುವುದು ಅದರ ನಿಘಂಟು ವಿನಿಂದಾಗಿ. ಅದರಲ್ಲಿ ಅನೇಕ ವೈಶಿಷ್ಟ್ಯ ಗಳಿವೆ . ಯಾವುದಾದರೂ ಪದವನ್ನು ನೀವು ಹುಡುಕಿದರೆ ಅದರ ಅರ್ಥ, ಸಮಾನರ್ಥಕ ಪದ, ವಿರುದ್ಧ ಅರ್ಥಗಳಲ್ಲದೆ, ಅದರ ಉಚ್ಛಾರ, ವಾಕ್ಯ ಗಳಲ್ಲಿ ಅದರ ಬಳಕೆ, ಅದಕ್ಕೆ ಸಂಬಂಧಿಸಿದ ವ್ಯಾಕರಣ ಸೂತ್ರ ಗಳು, ಅವುಗಳ ಉದಾಹರಣೆ, ಇತ್ಯಾದಿ ಗಳು ನಿಮಗೆ ದೊರೆಯುತ್ತವೆ.

ರೇಖತಾ ಫೌಂಡೇಷನ್ ಅನೇಕ ಉಪಯುಕ್ತ ಕೆಲಸಗಳನ್ನು ಮಾಡುತ್ತಿದೆ. ದೇಶದ 10 ನಗರ ಗಳಲ್ಲಿ ಅದು ಜಷ್ನ್ - ಎ ರೇಖತಾ ಎನ್ನುವ ಕಾವ್ಯ- ಗಾಯನ - ಚರ್ಚೆ ಯ ಕಾರ್ಯಕ್ರಮ ನಡೆಸುತ್ತದೆ. ಇವರು ನಡೆಸುವ ಆನ್ಲೈನ್ ಕವಿ ಸಮ್ಮೇಳನ ಗಳಲ್ಲಿ ಲಕ್ಷಾಂತರ ಜನ ಖುಷಿಯಿಂದ ಭಾಗವಹಿಸುತ್ತಾರೆ. ರೇಖತಾ ಫೌಂಡೇಷನ್ ನಿಂದ ಸೂಫಿ ಸಾಹಿತ್ಯದ ತಾಳೆಗರಿ ಗಳ ರಕ್ಷಣೆ, ಸೂಫಿ ಹಾಡು ಗಾರರ ಸಮ್ಮೇಳನ, ಹಾಗೂ ಉರ್ದು, ಪರ್ಷಿಯನ್, ಹಿಂದೂಸ್ತಾನಿ ಪಾಠ ಗಳು ನಡೆಯುತ್ತಿರುತ್ತವೆ. ಇವು ಆಫ್ಲೈನ್ ಹಾಗೂ ಆನ್ಲೈನ್ ಎರಡು ರೀತಿಗಳಲ್ಲಿ ಲಭ್ಯ.

ರೇಖತಾ ಫೌಂಡೇಷನ್ ಶುರು ಮಾಡಿದವರು ಉರ್ದು ಭಾಷೆ- ಸಾಹಿತ್ಯ ದ ಬಗ್ಗೆ ಆಸಕ್ತಿ ಇದ್ದ ಕೆಲವು ಗೆಳೆಯರು. ಇದರಲ್ಲಿ ಪ್ರಮುಖರು ನಾಗಪುರದ ಉದ್ಯಮಿ ಸಂಜೀವ ಸರಾಫ. ಪ್ರತಿಷ್ಟಿತ ಐ.ಐ.ಟಿ ಯಲ್ಲಿ ಓದಿ, ಐ.ಟಿ ಕ್ಷೇತ್ರದಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದ ಸಂಜೀವ, ತಮ್ಮ ಊರಿನ ಕಾಲೇಜು ಒಂದರಲ್ಲಿ ಪ್ರಚಲಿತ ವಿಷಯಗಳ ಮೇಲೆ ಭಾಷಣ ನೀಡಲು ಹೋದರು. ಅದರಲ್ಲಿ ಅವರು ಐ.ಟಿ ತಂತ್ರಜ್ಞಾನ ವನ್ನು ಭಾಷೆಗಳ ಅಭಿವೃದ್ಧಿಗೆ ಹೇಗೆ ಬಳಸಬಹುದು ಎಂಬ ವಿಷಯಗಳ ಮೇಲೆ ಮಾತಾಡಿದರು. ಆಗ ಅಲ್ಲಿನ ಪ್ರೊಫೆಸರ್ ಒಬ್ಬರು `` ನೀವೇ ಏಕೆ ಈ ರೀತಿಯ ಒಂದು ಕೆಲಸ ಮಾಡಬಾರದು ? ನೀವು ಈ ವಿಷಯದಲ್ಲಿ ನಮಗೆಲ್ಲ ಮೇಲ್ಪಂಕ್ತಿ ಹಾಕಬಾರದೇಕೆ,’’ ಎಂದು ಸಲಹೆ ನೀಡಿದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಸಂಜೀವ, ಕೆಲ ಸಮಾನ ಮನಸ್ಕ ಗೆಳೆಯರನ್ನು ಸೇರಿಸಿಕೊಂಡು ಫೌಂಡೇಷನ್ ಶುರು ಮಾಡಿದರು.

ಲಾಭಪೇಕ್ಷೆ ಇಲ್ಲದ, ಸೇವಾ ಸಂಸ್ಥೆಯಾಗಿ ಈ ಫೌಂಡೇಷನ್ ಕೆಲಸ ಮಾಡುತ್ತಿದೆ. ಇದರಲ್ಲಿ ನೂರಾರು ಜನ ಸದಸ್ಯರು, ಸಾವಿರಾರು ಆಸಕ್ತ ಬೆಂಬಲಿಗರು, ಇದ್ದರೆ. ಅದರ ಸಲಹಾ ಮಂಡಳಿಯಲ್ಲಿ ಉರ್ದು ಸಾಹಿತ್ಯದ ದಂತ ಕತೆಗಳಾದ ಗುಲಜಾರ್, ಬಶೀರ ಬದ್ರ, ಚಿತ್ರ ಸಾಹಿತಿ ಜವೇದ ಅಖ್ತರ್, ಸೇರಿದಂತೆ ಅನೇಕ ಆಸಕ್ತರು ಇದ್ದಾರೆ.

ನಟ ಮನೋಜ್ ಬಾಜಪೇಯಿ, ನಾಟಕಕಾರ ಗಿರೀಶ್ ಕಾರ್ನಾಡ್, ಚಿತ್ರ ನಿರ್ದೇಶಕ ರಾದ ಅನುರಾಗ ಕಶ್ಯಪ್, ವಿಶಾಲ ಭಾರದ್ವಾಜ್, ಇವರೆಲ್ಲ ರೇಖತಾ ದ ವೇದಿಕೆ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದ್ದಾರೆ.

ರೇಖತಾ ಅಂದರೆ ಸಮ್ಮಿಶ್ರ ಗೊಂಡ, ಹದವಾಗಿ ಬೆರಕೆಯಾದ, ಒಂದುಗೂಡಿಸಬಲ್ಲ, ಸಮಯೋಜಿಸಬಲ್ಲ, ಕಲೆಸು, ಒಂದಾಗಿಸು, ಅಂಟು , ಸಿಮೆಂಟು ಅಂತ ಅರ್ಥ. ಅಂದ ಹಾಗೆ ರೇಖತಾ ಅನ್ನೋದು ಉರ್ದು ಭಾಷೆಯ ಅನೇಕ ಹೆಸರುಗಳಲ್ಲಿ ಒಂದು. ಆ ಹೆಸರು ಅನರ್ಥಕವಾಗಿ, ನಮ್ಮ ಇಂದಿನ ಕಾಲದ ಸವಾಲು ಗಳಿಗೆ ಪರಿಹಾರಗಳನ್ನು ಸೂಚಿಸುವಂತಾಗಲಿ.

ಈ ಅಂಕಣದ ಹಿಂದಿನ ಬರೆಹಗಳು:
ಡಾ. ಅಂಬೇಡ್ಕರ್ ಹಾಗೂ ಪುಸ್ತಕ ಪ್ರೀತಿ
ಡಾ. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು
ಅಸಾಮಾನ್ಯ ನಾಳೆಗಳನ್ನು ತೋರಿದ ಆಸೀಮೋವ
’ರತ್ನಗಿರಿ ರಹಸ್ಯ’ ಎಂದಾದ ಉರ್ದುವಿನ ಮೊದಲ ಕಥನ ಕಾವ್ಯ ’ಕದಂರಾವ್-ಪದಂರಾವ್’
ಉರ್ದು ಜನಮಾನಸದ ಕವಿ ’ರಾಹತ್’ ಎಂಬ ದುರಿತ ಕಾಲದ ನೆಮ್ಮದಿ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...