ಏಕಾಂತದೊಂದಿಗೆ ಸರಳ ಸಂಭಾಷಣೆ stories by rabindranath tagore

Date: 28-03-2022

Location: ಬೆಂಗಳೂರು


'ಹೆಣ್ಣಿನ ಸೋಲು ಗಂಡಿನ ಗೆಲುವಾಗಿಯೂ, ಗಂಡಿನ ಪ್ರೀತಿಯೇ ಹೆಣ್ಣಿನ ಪಾಲಿಗೆ ಸಕಲ ಸಂಪತ್ತಾಗಿಯೂ, ಪ್ರೀತಿ-ವಿಶ್ವಾಸಗಳೇ ಇಲ್ಲದ ಮದುವೆಯೊಂದು ಊರ್ಜಿತವಾಗಿಯೂ, ಬುದ್ಧಿವಂತೆಯಾಗಿರುವ ಹೆಣ್ಣಿನ ಜೀವನ ಕಷ್ಟಕರವಾಗಿಯೂ! ಹೀಗೇ ಕಾಲ ಬದಲಾದ ಮಾತ್ರಕ್ಕೆ ಸತ್ಯದ ಸ್ವರೂಪ ಬದಲಾಗುವುದಿಲ್ಲ' ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ ಅವರು ತಮ್ಮ ಬೆಳ್ಳಕ್ಕಿ ಸಾಲು ಅಂಕಣದಲ್ಲಿ Stories By Rabindranath Tagore ಸರಣಿಯ ಕುರಿತು ಬರೆದಿದ್ದಾರೆ.

ಕಥೆಯೊಂದು ಏನನ್ನು ಹೇಳಬೇಕು ಅಥವಾ ಯಾವುದನ್ನು ಹೇಳದೆಯೇ ತನ್ನಲ್ಲಿಯೇ ಉಳಿಸಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದು ಕಷ್ಟಸಾಧ್ಯ. ಅದನ್ನು ಒಬ್ಬರಿಂದ ಇನ್ನೊಬ್ಬರಿಗೆ ದಾಟಿಸುವ ಪ್ರಕ್ರಿಯೆಯಲ್ಲಿ ಹೇಳದೆಯೇ ಉಳಿದ ಸೂಕ್ಷ್ಮಗಳು ಆ ಕಥೆಯನ್ನು ತಮ್ಮದಾಗಿಸಿಕೊಳ್ಳುತ್ತಿರುವವರನ್ನು ಹೇಗೆ ತಟ್ಟಬಲ್ಲವು ಎನ್ನುವ ಆಧಾರದ ಮೇಲೆ ಅದರ ಭವಿಷ್ಯ ನಿರ್ಧರಿಸಲ್ಪಡುತ್ತದೆ. ಪ್ರೀತಿ-ಪ್ರಣಯಗಳನ್ನು ಆಧರಿಸಿದ ಕಥೆಯೇ ಆದರೂ ಆ ಸಂವೇದನೆಗಳಾಚೆ ಅದು ತನ್ನಲ್ಲಿ ಅಡಗಿಸಿಟ್ಟುಕೊಂಡಿರಬಹುದಾದ ಅಭಿವ್ಯಕ್ತಿಯೇ ತನ್ನದೇ ಆದ ಕಾರಣಗಳಿಂದಾಗಿ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಅಂತಹ ಕಾರಣಗಳನ್ನು ಸೃಷ್ಟಿಮಾಡುವ ಪಾತ್ರಗಳು, ಘಟನೆಗಳು, ಸಂಬಂಧಗಳೆಲ್ಲವೂ ಕಥೆಯನ್ನು ಬೇರೆಬೇರೆ ಸ್ವರೂಪಗಳಲ್ಲಿ ಬೆಳೆಸುತ್ತಲೇ ಇರುತ್ತವೆ. ಹಾಗೊಂದು ಕಥಾವಸ್ತು ಎಲ್ಲಿಯವರೆಗೆ ಬೆಳೆಯುತ್ತಲೇ ಇರುತ್ತದೆಯೋ ಅಲ್ಲಿಯವರೆಗೂ ಕಥೆಗೆ ಸಾವೆಂಬುದಿಲ್ಲ. ಜೀವಂತವಾಗಿರುವ ಆ ಕಥೆಗಳೇ ಕಾಲ-ದೇಶಗಳನ್ನು ದಾಟಿ, ತಲೆಮಾರುಗಳು ಕಳೆದರೂ ಕಾಡುತ್ತಲೇ ಇರುವ ಗೊಂದಲಗಳಿಗೆ ನಮ್ಮನ್ನು ಎದುರಾಗಿಸಿ ತಬ್ಬಿಬ್ಬುಗೊಳಿಸುತ್ತವೆ. ಹಾಗೆ ಏಕಾಂತವನ್ನೇ ವಿಷಯವಸ್ತುವನ್ನಾಗಿಸಿಕೊಂಡ, ತಮ್ಮೊಳಗೆ ಹಲವಾರು ಕಥೆಗಳನ್ನು ಬಚ್ಚಿಟ್ಟುಕೊಂಡು ಕಾಲಕಾಲಕ್ಕೆ ಅವುಗಳೊಂದಿಗೆ ಸಂಧಿಸುವ ಬಿಡಿಬಿಡಿಯಾದ ಕಥೆಗಳ ಸರಣಿ Stories By Rabindranath Tagore.

ಈ ಕಥೆಗಳ ಪ್ರಪಂಚದೊಳಗೊಂದು ವಿಸ್ಮಯಗೊಳಿಸುವ ಹೆಣ್ಣಿನ ಲೋಕವಿದೆ. ಅಲ್ಲೊಂದು ಚೆಂದದ ಏಕಾಂತವಿದೆ; ಯೋಚನೆಗೆ ಹಚ್ಚುವ ಪ್ರಶ್ನೆಗಳಿವೆ; ತನ್ನ ಸುಖದ ಪರಿಕಲ್ಪನೆಗಳನ್ನೆಲ್ಲ ತ್ಯಾಗಮಾಡಿ ಎದುರಿಗಿರುವವನನ್ನು ಪ್ರೀತಿಸುವ ಔದಾರ್ಯವಿದೆ; ಭಾವಿಸಿಕೊಂಡ ಪ್ರೀತಿ ಬದುಕಿಗೆ ಆಗಿಬರಲಾರದೆನ್ನುವ ಸತ್ಯವನ್ನು ಒಪ್ಪಿಕೊಂಡು ತನ್ನನ್ನು ತಾನು ಸಂಭಾಳಿಸಿಕೊಳ್ಳುವ ಗಟ್ಟಿತನವೂ! ಬಾಲ್ಯವಿವಾಹವನ್ನು ಸಮಾಜ ಸಹಜವೆಂದು ಒಪ್ಪಿಕೊಂಡಿದ್ದ ಸಮಯದಲ್ಲಿಯೂ, ವೈಧವ್ಯವೆನ್ನುವುದು ಹೆಣ್ಣಿನ ಸಕಲ ಸಂತೋಷವನ್ನು ಕಸಿದುಕೊಳ್ಳುತ್ತಿದ್ದ ಕಾಲದಲ್ಲಿಯೂ, ಶಿಕ್ಷಣಕ್ಕೂ ಹೆಣ್ಣಿಗೂ ಸಂಬಂಧವೇ ಇಲ್ಲವೆಂದು ಪರಿಗಣಿಸುತ್ತಿದ್ದ ಸಂದರ್ಭದಲ್ಲಿಯೂ ಹೆಂಗಳೆಯರ ಬದುಕು ಶ್ರೀಮಂತವಾಗಿಯೇ ಇತ್ತು. ಯಾವ ಸಮಸ್ಯೆಗಳು ಸಾಮಾಜಿಕ ಪಿಡುಗುಗಳ ಹೆಸರಿನಲ್ಲಿ ಹೆಣ್ಣಿನ ಬದುಕನ್ನು ನಿಯಂತ್ರಿಸಲು ಬಳಸಲ್ಪಟ್ಟವೋ ಅವುಗಳನ್ನು ಮೀರಿಯೂ ಹೆಣ್ಣಿನ ಭಾವಲೋಕವೆನ್ನುವುದು ಶ್ರೀಮಂತವಾಗಿಯೂ, ಸುಂದರವಾಗಿಯೂ ಇತ್ತು. ಇಷ್ಟೂ ವರ್ಷಗಳಲ್ಲಿ ಹೆಣ್ಣಿಗೆ ದೊರಕಿದ್ದು ಸಮಾನತೆಯಷ್ಟೇ; ಬದಲಾಗಿದ್ದು ಕೇವಲ ಸಾಮಾಜಿಕ ವ್ಯವಸ್ಥೆಯಷ್ಟೇ. ಆದರೆ ತನ್ನನ್ನು ತಾನು ಕಂಡುಕೊಳ್ಳುವ, ಎಲ್ಲ ಅವ್ಯವಸ್ಥೆಗಳ ನಡುವೆಯೂ ನೆಮ್ಮದಿಯನ್ನು ಹುಡುಕಿಕೊಳ್ಳುವ ಪ್ರಕ್ರಿಯೆಯೊಂದು ತಲೆತಲಾಂತರಗಳಿಂದ ಜಾರಿಯಲ್ಲಿದೆ.

ಆರು ವರ್ಷಗಳ ನಂತರ ಅವರಿಬ್ಬರೂ ಆಕಸ್ಮಿಕವಾಗಿ ರೈಲ್ವೆ ನಿಲ್ದಾಣದಲ್ಲಿ ಭೇಟಿಯಾಗುತ್ತಾರೆ; ಎಲ್ಲೆಲ್ಲೂ ಕತ್ತಲು ಆವರಿಸಿಕೊಂಡಿರುವ ಮಳೆಗಾಲದ ರಾತ್ರಿಯೊಂದರಲ್ಲಿ ನೆನಪುಗಳೊಂದಿಗೆ ಮುಖಾಮುಖಿಯಾಗುತ್ತಾರೆ. ಆ ನೆನಪುಗಳಲ್ಲಿಯೂ ಹೇಳಿಕೊಳ್ಳುವಂತಹ ಸಂತಸವೇನಿಲ್ಲ. ಅಲ್ಲಿರುವುದು ಇಬ್ಬರು ಗೆಳೆಯರು ಹಾಗೂ ಮೂವರು ವಿಧವೆಯರು. ಅವರಲ್ಲೊಬ್ಬಳು ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಗಂಡನನ್ನು ಕಳೆದುಕೊಂಡವಳು; ತನ್ನ ಪರಿಸ್ಥಿತಿಗೆ ಆ ಇಬ್ಬರು ಗೆಳೆಯರೇ ಕಾರಣವೆಂದುಕೊಂಡು ಅವರ ಜೀವನದ ನೆಮ್ಮದಿಯನ್ನು ಹಾಳುಮಾಡುವಷ್ಟು ಅಸೂಯೆಯನ್ನು ಮನಸ್ಸಿನಲ್ಲಿ ತುಂಬಿಕೊಂಡವಳು. ತನ್ನ ಸುತ್ತ ಇರುವವರನ್ನು ತನ್ನವರೆಂದು ಒಪ್ಪಿಕೊಂಡು ನೆಮ್ಮದಿಯಿಂದ ಬದುಕುವ ಅವಕಾಶವಿದ್ದಾಗಲೂ ಅವಳು ಆಯ್ಕೆ ಮಾಡಿಕೊಳ್ಳುವ ನಡೆಯನ್ನು ನಿರ್ಧರಿಸಿದ್ದು ಪ್ರೀತಿಯೋ, ದ್ವೇಷವೋ, ಅಸೂಯೆಯೋ ಅಥವಾ ತನ್ನ ಪರಿಸ್ಥಿತಿಯ ಕುರಿತಾದ ಅಸಮಾಧಾನವೋ ಎನ್ನುವುದು ಅಸ್ಪಷ್ಟ. ತಾನು ಬುದ್ಧಿವಂತೆಯಾಗಿರುವುದೇ ತನ್ನೆಲ್ಲ ಅಸಮಾಧಾನಗಳಿಗೂ ಕಾರಣವಿರಬಹುದೇನೋ ಎಂದುಕೊಳ್ಳುವ ಅವಳು ನಿಜದಲ್ಲಿ ಬಯಸಿದ್ದೇನು, ಪ್ರೀತಿಸಿದ್ದು ಯಾರನ್ನು ಎನ್ನುವ ಪ್ರಶ್ನೆಗೂ ಉತ್ತರ ಸುಲಭವಾಗಿ ಸಿಕ್ಕುವಂಥದ್ದಲ್ಲ. ತಿರಸ್ಕರಿಸಲ್ಪಟ್ಟ ನೋವೇ ಅವಳ ಅಲ್ಲಿಯವರೆಗಿನ ಎಲ್ಲ ಅಲೆದಾಟಗಳಿಗೂ ಕಾರಣವಾಗಿದ್ದಾದರೆ, ಆ ರೈಲ್ವೆ ನಿಲ್ದಾಣದ ಭೇಟಿಯಲ್ಲೊಂದು ಸಮತೋಲನದ ಸಾಧ್ಯತೆ ಅವಳೆದುರು ತೆರೆದುಕೊಂಡಿರಬಹುದು.

ಇನ್ನೋರ್ವ ಹೆಣ್ಣುಮಗಳಿಗೆ ಜಮೀನ್ದಾರನೆನ್ನಿಸಿಕೊಂಡಿರುವ ಗಂಡನಿದ್ದಾನಾದರೂ, ಆತನಿಗೆ ತನ್ನ ಪ್ರೀತಿಗಾಗಿ ಹಗಲು-ರಾತ್ರಿಗಳೆನ್ನದೇ ಕಾಯುತ್ತಿರುವ ಹೆಂಡತಿಯೆಡೆಗೆ ಆದರವಿಲ್ಲ. ನಾಟಕದ ಅಭಿನೇತ್ರಿಯೋರ್ವಳ ಮೋಹದಲ್ಲಿ ಬಿದ್ದಿರುವ ಅವನಿಗೆ ತನ್ನಲ್ಲಿರುವ ಹಣ-ಅಂತಸ್ತುಗಳ ಬಲದಿಂದ ಅವಳನ್ನು ಒಲಿಸಿಕೊಳ್ಳುವ ಆತುರ. ಅವಳು ಅಭಿನಯವನ್ನು ತ್ಯಜಿಸಿ ಅವನೊಂದಿಗೆ ಜೀವನ ಸಾಗಿಸಲು ಒಪ್ಪಿಕೊಳ್ಳುತ್ತಾಳಾದರೂ ನಾಟಕವಿಲ್ಲದ ನೀರಸ ಬದುಕನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲಾರಳು. ಇದೊಂದು ಸಂಕೀರ್ಣವಾದ ಪ್ರೀತಿಯ ಸರಮಾಲೆ. ನಿಜದಲ್ಲಿ ತಮ್ಮದಲ್ಲದ ಪ್ರೀತಿಗಾಗಿ ಹಂಬಲಿಸುವ ಆ ಮೂವರಲ್ಲಿ ದುರ್ಬಲರಾರು, ಪ್ರಬಲರಾರು ಎನ್ನುವುದನ್ನು ನಿರ್ಧರಿಸಿಬಿಡುವಷ್ಟು ಸರಳ ಲೆಕ್ಕಾಚಾರಕ್ಕೆ ಸಂಬಂಧಗಳ ಆಗುಹೋಗುಗಳು ದಕ್ಕುವುದಿಲ್ಲ. ಹೇಗಾದರೂ ಗಂಡನ ಪ್ರೀತಿಯನ್ನು ತನ್ನದಾಗಿಸಿಕೊಳ್ಳಬೇಕೆಂದು ಪ್ರಯತ್ನಿಸುವ ಹೆಂಡತಿ, ಹೆಂಡತಿಯ ಪ್ರೀತಿಯನ್ನು ನಿರ್ಲಕ್ಷ್ಯಿಸಿ ಪ್ರೇಯಸಿಯನ್ನು ಒಲಿಸಿಕೊಳ್ಳುವ ಭರದಲ್ಲಿ ಪ್ರೀತಿಯನ್ನು ಬಂಧಿಸಿಡಲು ಯತ್ನಿಸುವ ಗಂಡ, ಜನಪ್ರಿಯತೆಯ ಮೋಹದಿಂದ ಹೊರಬಾರಲಾರದೇ ಚಪ್ಪಾಳೆಯ ಸದ್ದಿಗಾಗಿ ಹಂಬಲಿಸುವ ಪ್ರೇಯಸಿ ಹೀಗೇ ಪ್ರೀತಿಯ ಕುರಿತಾದ ವ್ಯಾಖ್ಯಾನ ಮೂವರದ್ದೂ ಬೇರೆಯೇ. ನಟಿಯಾಗಿದ್ದ ಪ್ರೇಯಸಿಯ ಜಾಗವನ್ನು ಹೆಂಡತಿ ಆವರಿಸಿಕೊಂಡಿದ್ದನ್ನು ಒಪ್ಪಿಕೊಳ್ಳಲಾಗದ ಗಂಡನ ಅಹಂಕಾರವೊಂದು ಆ ರಂಗಭೂಮಿಯ ಅಂಗಳದಲ್ಲಿ ಅಂತ್ಯ ಕಂಡಿರಬಹುದು. ಗಂಡನಿಂದ ತಿರಸ್ಕೃತಳಾದ ಹೆಂಡತಿಯ ನೋವು ಅನಾರ್ಕಲಿ, ರಾಧೆ, ಶಕುಂತಲೆಯರ ಪಾತ್ರಗಳಲ್ಲಿ ವಿಲೀನವಾಗಿ ನಲಿವಾಗಿ ಬದಲಾಗಿರಬಹುದು.

ಮದುವೆಯಾಗಿ ಹದಿನೈದು ವರ್ಷಗಳಲ್ಲಿ ಒಂದು ದಿನವೂ ಗಂಡನನ್ನು ಬಿಟ್ಟು ಎಲ್ಲಿಯೂ ಹೋಗಿರದಿದ್ದ ಅವಳು ಗಂಡನನ್ನೂ, ಗಂಡನ ಮನೆಯನ್ನೂ ತೊರೆದು ಬಂದಿದ್ದಾಳೆ. ಸಮುದ್ರದ ದಡದಲ್ಲಿರುವ ಧರ್ಮಶಾಲೆಯೊಂದರ ಪುಟ್ಟ ಕೊಠಡಿಯಲ್ಲಿ ಕುಳಿತು ಗಂಡನಿಗೆ ಪತ್ರ ಬರೆಯುತ್ತಾಳೆ. ದಾಂಪತ್ಯದ ಅಷ್ಟೂ ವರ್ಷಗಳಲ್ಲಿ ಗಂಡನ ಹತ್ತಿರ ಹೇಳಲು ಸಾಧ್ಯವಾಗದಿದ್ದ ಮಾತುಗಳನ್ನೆಲ್ಲ ಅವಳು ಆ ಪತ್ರದ ಮೂಲಕ ಹೇಳಹೊರಟಿದ್ದಾಳೆ. ಹೆಂಗಸರು ಬುದ್ಧಿವಂತೆಯರಾಗಿರುವುದೇ ಅಪರಾಧವೆಂದು ಭಾವಿಸಿರುವ ಹಾಗೂ ಅಡುಗೆಮನೆಯ ಹೊರತಾಗಿ ಬೇರೆ ಯಾವ ಜಾಗವೂ ಹೆಂಗಸರಿಗೆ ಯೋಗ್ಯವಾದದ್ದಲ್ಲ ಎಂದುಕೊಂಡಿರುವ ಅವಳ ಗಂಡನಲ್ಲಿ ಆ ಪತ್ರ ಪರಿವರ್ತನೆಯನ್ನು ತಂದಿರಬಹುದಾದರೂ, ಅವಳಿಗೆ ಮತ್ತೆ ಆ ಮನೆಗೆ ಹಿಂದಿರುಗುವ ಯಾವ ಯೋಚನೆಗಳೂ ಇಲ್ಲ. "ಆ ಮನೆಯ ಸೊಸೆಯಾಗಲು ಅಗತ್ಯವಿರುವುದಕ್ಕಿಂತ ಜಾಸ್ತಿ ಬುದ್ಧಿಯನ್ನು ನನಗೆ ನೀಡಿರುವ ದೇವರಿಗೆ ಅದನ್ನು ಹಿಂದಿರುಗಿಸುವುದು ಹೇಗೆ?" ಎನ್ನುವ ಅವಳ ಪ್ರಶ್ನೆಯಲ್ಲಿರುವ ಆತ್ಮವಿಶ್ವಾಸವನ್ನೂ, ವ್ಯಂಗ್ಯವನ್ನೂ ಒಪ್ಪಿಕೊಳ್ಳುವ ಉದಾರ ಮನೋಭಾವ ಗಂಡನಾದವನಿಗೆ ಇದ್ದಿರಬಹುದೇ; ಹಾಗೊಮ್ಮೆ ಒಪ್ಪಿಕೊಂಡಿದ್ದೇ ಆದರೂ ಅವಳು ಕಳೆದುಕೊಂಡಿರುವ ಹದಿನೈದು ವರ್ಷಗಳನ್ನು ಅವನು ಅವಳಿಗೆ ಮರಳಿಸಬಲ್ಲನೇ! ಮದುವೆಯಾಗಿರುವ ಒಂದೇ ಕಾರಣಕ್ಕಾಗಿ ತನ್ನದೇ ರಕ್ತಸಂಬಂಧಿಗಳನ್ನು ಪ್ರೀತಿಸುವ ಸ್ವಾತಂತ್ರ್ಯವನ್ನೂ ಕಳೆದುಕೊಂಡ ಮನೆಯ ಹಿರಿಸೊಸೆಯನ್ನು ನೋಡುತ್ತ ಹದಿನೈದು ವರ್ಷಗಳನ್ನು ಕಳೆದ ಅವಳಿಗೆ ಬಿಡುಗಡೆಯೊಂದೇ ನೆಮ್ಮದಿಯ ಮಾರ್ಗವಾಗಿ ಗೋಚರಿಸಿದ್ದಿರಬಹುದು. ತಟಸ್ಥಳಾಗಿ ಸಮುದ್ರತೀರದಲ್ಲಿ ನಿಂತ ಅವಳ ಪಾದಗಳನ್ನು ಸ್ಪರ್ಶಿಸುವ ಅಲೆಗಳಂತೆಯೇ ಅವಳ ಬದುಕಿನ ಸಂಘರ್ಷಗಳಿಗೂ ಕೊನೆ ಎಂಬುದಿರಬಹುದು.

ಆ ಮದುವೆ ಮುರಿದುಬೀಳುವುದು ಅಪನಂಬಿಕೆಯ ಕಾರಣದಿಂದಾಗಿ. ವರದಕ್ಷಿಣೆಯ ರೂಪದಲ್ಲಿ ಹೆಣ್ಣಿನ ತಂದೆ ಕೊಡುತ್ತಿರುವ ಚಿನ್ನದ ಮೌಲ್ಯವನ್ನು ಪರೀಕ್ಷಿಸಲು ಹೊರಟ ಗಂಡಿನ ಮಾವನ ಅವಿಶ್ವಾಸವನ್ನು ಧಿಕ್ಕರಿಸುವ ಅವಳು ಅವಿವಾಹಿತೆಯಾಗಿಯೇ ಉಳಿಯಲು ನಿರ್ಧರಿಸುತ್ತಾಳೆ. ವರದಕ್ಷಿಣೆಯೆನ್ನುವುದು ಸರ್ವೇಸಾಮಾನ್ಯವಾಗಿದ್ದ ಕಾಲ ಅದು. ಆದರೆ ಮದುವೆಹೆಣ್ಣಿನ ಮೈಮೇಲಿರುವ ಆಭರಣವನ್ನು ಪರೀಕ್ಷಿಸಲು ಹೊರಟಿರುವ ಸಂಶಯ ಸ್ವಭಾವದ ಜನರೊಂದಿಗೆ ತನ್ನ ಮಗಳು ಸುಖವಾಗಿರಲು ಸಾಧ್ಯವಿಲ್ಲ, ಹಾಗಾಗಿ ಈ ಮದುವೆ ನಡೆಯುವುದೂ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಗಂಡಿನವರಿಗೆ ಹೇಳುವ ಅವಳ ತಂದೆ ಅವರನ್ನು ಬೀಳ್ಕೊಡುತ್ತಾನೆ. ಆ ಕ್ಷಣದಲ್ಲಿ ಆ ತಂದೆಯ ನಿಲುವಿನಲ್ಲಿ, ಮಾತಿನಲ್ಲಿ ಕಾಣಿಸುವುದು ಮಗಳ ಕುರಿತಾದ ಕಾಳಜಿ, ಪ್ರೀತಿ ಹಾಗೂ ಮದುವೆಯ ಹೊರತಾಗಿಯೂ ಅವಳು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಮರ್ಥಳೆನ್ನುವ ಆತ್ಮವಿಶ್ವಾಸ.

ಅವನ ನಂಬಿಕೆಗೆ ತಕ್ಕಂತೆ ಅವಳು ತನ್ನ ಬದುಕಿಗೊಂದು ಘನವಾದ ಉದ್ದೇಶವನ್ನು ಕಂಡುಕೊಳ್ಳುತ್ತಾಳೆ; ಅನಾಥ ಮಕ್ಕಳಿಗೆ ಶಿಕ್ಷಣ ದೊರಕುವಂತೆ ಮಾಡುವ ನಿಟ್ಟಿನಲ್ಲಿ ತನ್ನಿಂದ ಸಾಧ್ಯವಾದ ಪ್ರಯತ್ನಗಳನ್ನು ಮಾಡುತ್ತಿರುತ್ತಾಳೆ. ಆ ಸಮಯದಲ್ಲಿ ಅವಳಿಗೆ ಆಕಸ್ಮಿಕವಾಗಿ ಎದುರಾಗುವವನು ತನ್ನೊಂದಿಗೆ ಮದುವೆಯ ನಿಶ್ಚಯ ಮಾಡಿಕೊಂಡಿದ್ದ ಅದೇ ಹುಡುಗ. ಅವನ ಬದುಕಿನಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಅವಿವಾಹಿತನಾಗಿಯೇ ಉಳಿದಿರುವ ಆತನಿಗೆ ಅವಳನ್ನು ಮದುವೆಯಾಗುವ ಆಸೆ. ಆದರೆ ವೈವಾಹಿಕ ಜೀವನವನ್ನು ಧಿಕ್ಕರಿಸಿ, ತನ್ನ ಗುರಿಯನ್ನು ತಲುಪುವ ಮಾರ್ಗದಲ್ಲಿ ನಡೆಯುತ್ತಿರುವ ಅವಳ ದೃಢನಿರ್ಧಾರದೆದುರು ಸೋಲುತ್ತಾನೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವೆನ್ನುವಂತೆ ತನ್ನ ಪ್ರೀತಿಯನ್ನು ಹಾಗೆಯೇ ಉಳಿಸಿಕೊಳ್ಳುವ ನಿರ್ಧಾರದೊಂದಿಗೆ ಅವಳ ಜೀವನದ ಉದ್ದೇಶಗಳನ್ನೇ ತನ್ನದಾಗಿಸಿಕೊಂಡು ಸಹಾಯಕ್ಕೆ ನಿಲ್ಲುತ್ತಾನೆ.

ಅಲ್ಲಿಂದ ಇಲ್ಲಿಯವರೆಗೂ ಎಲ್ಲವೂ ಹಾಗೆಯೇ ಇವೆ. ಹೆಣ್ಣಿನ ಸೋಲು ಗಂಡಿನ ಗೆಲುವಾಗಿಯೂ, ಗಂಡಿನ ಪ್ರೀತಿಯೇ ಹೆಣ್ಣಿನ ಪಾಲಿಗೆ ಸಕಲ ಸಂಪತ್ತಾಗಿಯೂ, ಪ್ರೀತಿ-ವಿಶ್ವಾಸಗಳೇ ಇಲ್ಲದ ಮದುವೆಯೊಂದು ಊರ್ಜಿತವಾಗಿಯೂ, ಬುದ್ಧಿವಂತೆಯಾಗಿರುವ ಹೆಣ್ಣಿನ ಜೀವನ ಕಷ್ಟಕರವಾಗಿಯೂ! ಹೀಗೇ ಕಾಲ ಬದಲಾದ ಮಾತ್ರಕ್ಕೆ ಸತ್ಯದ ಸ್ವರೂಪ ಬದಲಾಗುವುದಿಲ್ಲ. ಬದಲಾಗಿದ್ದೇನಿದ್ದರೂ ಸಮಸ್ಯೆಗಳ ಸ್ವರೂಪ ಮಾತ್ರ. ಶಿಕ್ಷಣವನ್ನು ಪಡೆದುಕೊಂಡ ಕಾರಣಕ್ಕೆ ಹೆಣ್ಣು ಗಂಡಾಗಿ ವ್ಯವಹರಿಸಬಲ್ಲಳೇ ಎನ್ನುವುದಕ್ಕೆ ಉತ್ತರವಿಲ್ಲ. ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತ ಹೋದಂತೆ ಸಮಾನತೆಯ ಪರಿಕಲ್ಪನೆಯೇ ಬದಲಾಗಿಬಿಡಬಹುದೇ ಎನ್ನುವುದನ್ನೂ ನಿರ್ಧರಿಸಲಾಗುವುದಿಲ್ಲ. ಹೆಣ್ಣಿನ ಜಗತ್ತಿನೊಳಗೆ ಇನ್ನೊಂದು ಪ್ರಪಂಚವಿತ್ತು ಮತ್ತು ಆ ಪ್ರಪಂಚ ಕೇವಲ ಅವಳ ನಿಯಂತ್ರಣದಲ್ಲಿತ್ತು. ಸಮಾಜವನ್ನು ನೆಚ್ಚಿಕೊಂಡು ನಡೆದವರಿಗೂ, ಹೊಂದಾಣಿಕೆ ಮಾಡಿಕೊಂಡವರಿಗೂ, ಧಿಕ್ಕರಿಸಿದವರಿಗೂ ಅವರವರ ಪಾಲಿನ ಸೋಲು-ಗೆಲುವು, ನೋವು-ನಲಿವು ಸಹಜವಾಗಿಯೇ ಸಿಗುತ್ತಿತ್ತು. ಬದಲಾವಣೆಯೆನ್ನುವುದು ಆ ಒಳಜಗತ್ತನ್ನು ಅವಳ ನಿಯಂತ್ರಣದಿಂದ ಕಸಿದುಕೊಳ್ಳುವುದಾದರೆ ಯಾವುದೂ ಬದಲಾಗದಿರುವುದೇ ಒಳಿತು.

Stories By Rabindranath Tagore ಸರಣಿಯ ವಿಡಿಯೋ:

ಈ ಅಂಕಣದ ಹಿಂದಿನ ಬರಹಗಳು:
ಬಂಧನಕ್ಕೂ ಬಿಡುಗಡೆಗೂ ಏಕೈಕ ರಹದಾರಿ MODERN LOVE
ಕೆಂಪು ಕೂದಲಿನ ರಾಜಕುಮಾರಿಯ ಕತೆ ANNE WITH AN E
https://www.bookbrahma.com/news/asahayaka-gadirekheya-kanasina-payana-crash-landing-on-you
ಮುಗುಳ್ನಗೆಯ ಆಲಿಂಗನ SOMETHING IN THE RAIN (KOREAN ROMANTIC DRAMA)
ಒಳತಾರಸಿಯ ಒಂಟಿ ಚೌಕಗಳು THE QUEEN'S GAMBIT
ಅನುರಾಗದ ಮಧುರ ಆಲಾಪ BANDISH BANDITS (INDIAN ROMANTIC DRAMA)
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...