ಈಜಿಪ್ಟಿನ ನಾಲ್ಕನೆಯ ಪಿರಮಿಡ್ ‘ಉಮ್ ಕುಲ್ಸುಂ’

Date: 10-02-2021

Location: .


ಲಿಂಗತ್ವದ ಒಪ್ಪಿತ ಕಲ್ಪನೆಗಳನ್ನು ತಮ್ಮ ಗಾಯನದ ಮೂಲಕವೇ ಪ್ರತಿರೋಧಿಸಿದ್ದ ಗಾಯಕಿ ಉಮ್ ಕುಲ್ಸಂ ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಎಂದೇ ಖ್ಯಾತಿವೆತ್ತಿದ್ದರು. ವೈಯಕ್ತಿಕ ಹಾಗೂ ಸಂಗೀತ ಬದುಕಿನಲ್ಲಿ ಈಜಿಪ್ಟಿನ ಸಂಸ್ಕೃತಿಯನ್ನು ಅಪ್ಪಿಕೊಂಡ ಅವರ ಬದುಕಿನ ವಿವಿಧ ಆಯಾಮಗಳನ್ನು ಲೇಖಕರಾದ ಶೈಲಜ ಮತ್ತು ವೇಣುಗೋಪಾಲ್ ಅವರು ತಮ್ಮ ಸ್ವರಲಿಪಿ ಅಂಕಣದಲ್ಲಿ ಅನಾವರಣಗೊಳಿಸಿದ ಬರಹವಿದು.

ಈಜಿಪ್ಟ್‌ನ ದನಿ, ಈಜಿಪ್ಟಿನ ನಾಲ್ಕನೆಯ ಪಿರಮಿಡ್ ಎನಿಸಿಕೊಂಡು ಅರಬ್ ದೇಶಗಳಲ್ಲೆಲ್ಲಾ ನಿರಾತಂಕವಾಗಿ ಓಡಾಡಿಕೊಂಡು, ಅರಬ್-ಈಜಿಪ್ಟ್ ಸಂಗೀತದ ಅಸಲೀ ಪ್ರತಿನಿಧಿ ಎನಿಸಿಕೊಂಡು, ಅರಬ್ ಸಂಗೀತಕ್ಕೆ ಹೊಸ ವ್ಯಾಖ್ಯಾನ ಬರೆದ ಈಜಿಪ್ಟಿನ ಮಹಾನ್ ಗಾಯಕಿ ಉಮ್ ಕುಲ್ಸಂ. ಅವರು ತೀರಿಹೋದ 30ವರ್ಷಗಳ ಬಳಿಕವೂ ಅರಬ್ ಸಂಗೀತ ಏನೆಂದು ತಿಳಿದುಕೊಳ್ಳಬೇಕಾದರೆ ನೀವು ಉಮ್ ಕುಲ್ಸುಂ ಅವರ ಗಾಯನ ಕೇಳಬೇಕು ಎನ್ನುತ್ತಾರೆ ಅರಬ್ ಲೋಕದ ಹೊಸಪೀಳಿಗೆಯ ಕಲಾವಿದರು. ಉಮ್ ನನ್ನ ಬಹು ಮೆಚ್ಚಿನ ಗಾಯಕಿ ಎನ್ನುತ್ತಾರೆ ಸಂಗೀತ ಮತ್ತು ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ ಪಡೆದ ಬಾಬ್ ಡಿಲನ್. ನಾನು ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಉಮ್ ಕುಲ್ಸಂನಂತಹ ಕಂಠದೊಂದಿಗೆ ಹುಟ್ಟಲು ಬಯಸುತ್ತೇನೆ ಎನ್ನುತ್ತಾರೆ ನಮ್ಮ ಲತಾ ಮಂಗೇಶ್ಕರ್. ಹೀಗೆ ನಿಜವಾದ ಅರ್ಥದಲ್ಲಿ ಗ್ಲೋಬಲ್ ಅಗಿರುವ ಉಮ್ ಕುಲ್ಸುಂ ಅವರನ್ನು ನಮಗೆ ಪರಿಚಯಿಸಿದ್ದು ಪಂಡಿತ್ ರಾಜೀವ್ ತಾರಾನಾಥರು ವಿಶ್ವ ಸಂಗೀತ ದಿನಾಚರಣೆಯ ಭಾಷಣದಲ್ಲಿ. 2020ರಲ್ಲಿ ನಾವು ಈಜಿಪ್ಟಿಗೆ ಹೋಗಿದ್ದಾಗ ಸ್ಪಿಂಕ್ಸ್ ವಿಗ್ರಹದಷ್ಟೇ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಉಮ್ ಕುಲ್ಸುಂ ಅವರ ಮೂರ್ತಿ ಮತ್ತು ವರ್ಣಚಿತ್ರಗಳು ನಮ್ಮಲ್ಲಿ ಬೆರಗು ಮೂಡಿಸಿತ್ತು. ಎಲ್ಲಾ ಬಸ್ಸುಗಳಲ್ಲಿ, ಹೋಟೆಲ್ಲಿನಲ್ಲಿ, ಟ್ಯಾಕ್ಸಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೇಳಿ ಬರುತ್ತಿದ್ದದ್ದು ಅವರ ಕಂಠಸಿರಿ.

ಹಾರ್ವರ್ಡ್‌ನ ಇಶಾಮ್ ಮೆಮೋರಿಯಲ್ ಲೈಬ್ರರಿ ಮತ್ತು ಆರ್ಕೈವ್ ಆಫ್ ವರ್ಡ್ಲ್ ಮ್ಯೂಸಿಕ್‌ನ ಕ್ಯುರೇಟರ್ ಆಗಿರುವ, ಜೊತೆಗೆ ಸಂಗೀತಶಾಸ್ತ್ರಜ್ಞೆಯೂ ಆಗಿರುವ ವರ್ಜೀನಿಯಾ ಡೇನಿಯಲ್‌ಸನ್ ಅವರ ಅಪರೂಪದ, ಅಮೂಲ್ಯ ಕೃತಿ `The Voice of Egypt Umm Kulthom, Arabic Song, and Egyptian Society in The Twentieth Century.’ ಉಮ್ ಕುಲ್ಸುಂ ಅವರ ಬದುಕು ಮತ್ತು ಸಂಗೀತದ ಮೂಲಕ ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಈಜಿಪ್ಟಿನ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಈ ಕೃತಿ ತೆರೆದಿಡುತ್ತದೆ. ಆ ಕಾಲದ ಸಂಗೀತದ ಮೇಲೆ ಯಾವೆಲ್ಲಾ ಪ್ರಭಾವಗಳಿದ್ದವು. ಈ ಪ್ರಭಾವಗಳನ್ನು ಮೈಗೂಡಿಸಿಕೊಂಡ ನಂತರವೂ ಇಂದು ಈಜಿಪ್ಷಿಯನ್ ಅಥವಾ ಅರಬ್ ಎಂದು ಕರೆಯಲಾಗುವ ಸಂಗೀತ ತನ್ನತನವನ್ನು ಹೇಗೆ ಉಳಿಸಿಕೊಂಡಿತು; ಆ ಕಾಲದ ಸಂಗೀತದ ಸಭೆಗಳು ಮತ್ತು ಪ್ರೇಕ್ಷಕರು ಹೇಗಿದ್ದರು ಮತ್ತು ಅಲ್ಲಿ ಬಳಸುತ್ತಿದ್ದ ವಾದ್ಯಗಳು ಯಾವುವು; ಸಂಗೀತದ ಪ್ರಸ್ತುತಿ ಹೇಗಿತ್ತು; ನಾಟಕ ಮತ್ತು ಒಪೇರಾಗಳಲ್ಲಿ ಹೆಂಗಸರ ಭಾಗವಹಿಸುವಿಕೆ ಯಾವ ರೀತಿಯದಾಗಿತ್ತು ಎನ್ನುವುದು ನಮಗೆ ಅರಿವಾಗುತ್ತದೆ. ಈ ನಾಟಕ ಮತ್ತು ಒಪೇರಾಗಳು ಸಂಗೀತವನ್ನು ಹೇಗೆ ಪ್ರಭಾವಿಸಿದ್ದವು ಎಂಬುದೂ ಇದರಲ್ಲಿದೆ. ವಿಭಿನ್ನ ಕಲಾಮಾಧ್ಯಮಗಳೆಲ್ಲವೂ ತಮ್ಮದೇ ಆದ ರೀತಿಯಲ್ಲಿ ರಾಷ್ಟ್ರೀಯತೆಯ ಕಲ್ಪನೆಯನ್ನು, ದೇಶಭಕ್ತಿಯನ್ನು ಪ್ರಚಾರ ಮಾಡುತ್ತಿದ್ದ ಕಾರಣಕ್ಕೆ ಅವುಗಳನ್ನು ವಸಾಹತು ಸರ್ಕಾರ ದಂಡಿಸುತ್ತಿದ್ದ ಚಿತ್ರಣವೂ ದೊರಕುತ್ತದೆ. ಈ ಸಂದರ್ಭದಲ್ಲಿ ಗಾಯಕಿಯರಾಗಿ, ನಟಿಯರಾಗಿ, ತಾರೆಯರಾಗಿ ಮಿನುಗಿದವರಲ್ಲಿ ಹೆಚ್ಚಿನವರು ಆರ್ಥಿಕವಾಗಿ ಕೆಳವರ್ಗಗಳಿಗೆ ಸೇರಿದವರು ಮತ್ತು ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಬಂದವರು. ಈ ವೃತ್ತಿ ಅವರಿಗೆ ಆದಾಯದ ಮೂಲವಾಗಿತ್ತು. ಉಮ್ ಕುಲ್ಸಂ ಕೂಡ ಇದೇ ಹಿನ್ನೆಲೆಯವರು.

20ನೆಯ ಶತಮಾನದ ಅರಬ್ ಲೋಕದ ಅತ್ಯಂತ ಪ್ರಭಾವಶಾಲಿ ಮತ್ತು ಖ್ಯಾತ ಗಾಯಕಿ ಉಮ್ ಕುಲ್ಸಂ ಅವರ ಬದುಕು ಅರಳಿದ್ದು ಎರಡು ಮಹಾಯುದ್ಧಗಳ ನಡುವೆ, 1919ರ ಮಹಾ ಆರ್ಥಿಕ ಕುಸಿತ ಮತ್ತು 1952ರ ಈಜಿಪ್ಟ್ ಕ್ರಾಂತಿಯ ಕಾಲದಲ್ಲಿ. ಆಗ ಘಟಿಸಿದ ಗಂಭೀರವಾದ ಸಾಮಾಜಿಕ ರಾಜಕೀಯ ಬದಲಾವಣೆಗಳು ಉಮ್ ಕುಲ್ಸಂ ಅವರ ಬದುಕನ್ನು ಒಬ್ಬ ಪ್ರಜೆಯಾಗಿ ಮತ್ತು ಒಬ್ಬ ಕಲಾವಿದೆಯಾಗಿ ಪ್ರಭಾವಿಸಿತು. ಹಾಗೆಯೇ ಸಂಗೀತ ಇಡೀ ಅರಬ್ ಸಂಗೀತವನ್ನು ಪುನರ್‌ ವ್ಯಾಖ್ಯಾನಿಸಿತು. 50 ವರ್ಷಗಳ ಕಾಲ ನಿರಂತರ ಹಾಡಿದ ಅವರು ಈಜಿಪ್ಟ್ ಕಲಾಪ್ರಪಂಚದ ಸಂಕೇತವೇ ಆಗಿದ್ದರು. ಅವರ ವೃತ್ತಿಬದುಕು ರೂಪುಗೊಂಡ ಸಮಯದಲ್ಲಿ ಈಜಿಪ್ಟ್ ಮಹತ್ತರವಾದ ರೀತಿಯಲ್ಲಿ ಸ್ಥಿತ್ಯಂತರಗೊಳ್ಳುತ್ತಿತ್ತು. ಅಲ್ಲಿ ಪುರುಷರ ಮೇಲಾಟವಿತ್ತು. ವಸಾಹಾತು ಆಳ್ವಿಕೆಯಲ್ಲಿದ್ದ ಈಜಿಪ್ಟ್ ತನ್ನದೊಂದು ಅಸ್ಮಿತೆಯನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ರೂಪಿಸಿಕೊಳ್ಳಲು ಹಪಹಪಿಸುತ್ತಿತ್ತು. ಅಂತಹ ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶದಲ್ಲಿ ರೂಪುಗೊಂಡ ಯಶಸ್ವೀ ಸಂಗೀತ ಕಲಾವಿದೆ ಉಮ್ ಕುಲ್ಸುಂ. ಈಜಿಪ್ಟಿನ ಕುಗ್ರಾಮ ಒಂದರ ಈ ಹುಡುಗಿ ಒಂದು ರಾಷ್ಟ್ರದ ಸಾಂಸ್ಕೃತಿಕ ಸಂಕೇತವಾಗಿ ಬೆಳೆದು, ಅರಬ್ ಸಂಗೀತಕ್ಕೆ ಒಂದು ಸ್ಪಷ್ಟ ವ್ಯಾಖ್ಯಾನ ನೀಡಿ, ಅದರ ಅಂಚುಗಳನ್ನು ವಿಸ್ತರಿಸಿದಳು. ಕೈರೋದ ಸಂಗೀತ ಸಂಸ್ಥೆಗಳ ಜೊತೆ ವ್ಯವಹರಿಸಿ, ಅತ್ಯಂತ ಕಠಿಣವಾದ, ಒತ್ತಡ ತುಂಬಿದ ಹಾದಿಯಲ್ಲಿ ಯಶಸ್ವೀ ವೃತ್ತಿಬದುಕನ್ನು ರೂಪಿಸಿಕೊಂಡಳು. ಜೊತೆಗೆ ಅತ್ಯಂತ ಪುರಾತನ ಮತ್ತು ತುಂಬಾ ಗೌರವಿಸಲ್ಪಡುವ ಅರಬ್ ಕಲೆಯನ್ನು ಅಭಿವ್ಯಕ್ತಿಸುತ್ತಿದ್ದ ಒಬ್ಬ ಅದ್ಭುತ ಗಾಯಕಿಯಾಗಿ ಹೊರಹೊಮ್ಮಿದಳು.

ಉಮ್ ಕುಲ್ಸಂ ಹುಟ್ಟಿದ್ದು ಈಜಿಪ್ಟಿನ ತಮ್ಮೇ-ಅಲ್-ಜ಼ಹೇರಾ ಎಂಬ ಹಳ್ಳಿಯ ಬಡ ಕುಟುಂಬದಲ್ಲಿ 1904ರ ಮೇ ತಿಂಗಳಿನಲ್ಲಿ. ಅವರ ತಂದೆ ಅಲ್ ಷೇಕ್ ಇಬ್ರಾಹೀಂ ಅಲ್ ಸಯ್ಯಿದಾಲ್ ಬಲ್ತಾಜಿ. ಅವರು ಸ್ಥಳೀಯ ಮಸೀದಿಯೊಂದರ ಇಮಾಮ್. ತಾಯಿ ಫತ್ಮಾ ಅಲ್ ಮಲೀಜೀ ಮಕ್ಕಳಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸಿ, ಪೋಷಿಸುತ್ತಿದ್ದ ಗೃಹಿಣಿ. ಕುಲ್ಸಂ ಮನೆಯ ಕಿರಿಯ ಮಗಳು. ಐದು ವರ್ಷವಾಗಿದ್ದಾಗ ಕುರಾನ್ ಶಾಲೆಯಲ್ಲಿ ಕಲಿತು, ನಂತರ ಹಲವು ಕಿಲೋಮೀಟರ್ ದೂರದ ಶಾಲೆಯಲ್ಲಿ ಮೂರು ವರ್ಷ ಕಲಿತರು. ಸ್ಪಷ್ಟವಾದ ಉಚ್ಚಾರಣೆ ಮತ್ತು ಧ್ವನಿಯ ಏರಿಳಿತಗಳ ಜೊತೆ ಕುರಾನನ್ನು ಓದುವುದನ್ನು ಕಲಿತರು. ಈ ಕಲಿಕೆ ಬದುಕಿಡೀ ಅವರೊಂದಿಗಿತ್ತು. ಅವರ ಸಂಗೀತದಲ್ಲಿ ಬಹು ಮುಖ್ಯ ಪಾತ್ರ ವಹಿಸಿತು. ಉಮ್ ಕುಲ್ಸುಮಳ ತಂದೆ ಮಸೀದಿಯ ಕೆಲಸದ ಜೊತೆಗೆ ಮದುವೆ ಮುಂತಾದ ಸಮಾರಂಭಗಳಲ್ಲಿ ಧಾರ್ಮಿಕ ಗೀತೆಗಳನ್ನು ಹಾಡುತ್ತಿದ್ದರು. ಮಗ ಖಾಲಿದ್ ಮತ್ತು ಸೋದರಳಿಯ ಸಾಹರ್ ಅವರ ಜೊತೆ ಹಾಡುತ್ತಿದ್ದರು. ತಂದೆ ಖಾಲಿದ್‌ಗೆ ಕಲಿಸುತ್ತಿದ್ದಾಗ ಅದನ್ನು ಕೇಳಿಕೊಂಡು ತಾನು ಕಲಿತೆ ಎಂದು ಉಮ್ ಹೇಳುತ್ತಿದ್ದರು. ಅವಳ ಶಕ್ತಿಶಾಲಿಯಾದ ಕಂಠವನ್ನು ಆಲಿಸಿದ ಅವರು ನಂತರ ಅವಳಿಗೂ ಕಲಿಸಿದರು. ನಾನು ಮಕ್ಕಳು ಮಗ್ಗಿ ಹೇಳುವಂತೆ, ಗಿಣಿಯಂತೆ, ಸುಮ್ಮನೆ ಅವರು ಹಾಡಿದ್ದೆಲ್ಲವನ್ನೂ ಹಾಗೆಯೇ ನಕಲು ಮಾಡಿ ಹಾಡುತ್ತಿದ್ದೆ.

ಸಂಗೀತ ಐಗುಪ್ತರ ಬದುಕಿನ ಭಾಗವಾಗಿತ್ತು. ರಂಜ಼ಾನ್ ತಿಂಗಳಿನಲ್ಲಿ, ಪ್ರವಾದಿಯವರ ಹುಟ್ಟುಹಬ್ಬದಲ್ಲಿ, ಅಥವಾ ಇನ್ಯಾವುದಾದರೂ ಸಂತರ ಹುಟ್ಟುಹಬ್ಬದಲ್ಲಿ, ಮದುವೆ, ಸುನ್ನತಿ, ನಾಮಕರಣ, ಪ್ರವಾಹ ಬಂದು ನೈಲ್ ನದಿ ಉಕ್ಕಿ ಹರಿದಾಗ ಸಂಗೀತವಿರುತ್ತಿತು. ಹಲವು ಆಸಕ್ತ ಗಾಯಕರು ಸೂಫಿ ಧಾರ್ಮಿಕ ಗಾಯಕರಿಂದ ತರಬೇತಿ ಪಡೆಯುತ್ತಿದ್ದರು. ಅಲ್-ಲೇತಿ (al-Laythi) ಎನ್ನುವ ಸೂಫಿ ಪಂಥ ತಮ್ಮ ಸಾಂಗೀತಿಕ ಸೌಂದರ್ಯಕ್ಕೆ ತುಂಬಾ ಹೆಸರುವಾಸಿಯಾಗಿತ್ತು. ಇಂತಹ ಹಿನ್ನೆಲೆಯವರನ್ನು ಮಿನ್-ಅಲ್-ಮಶಾಯಿಕ್ ಎಂದು ಕರೆಯುತ್ತಿದ್ದರು. ಸಾಮಾನ್ಯವಾಗಿ ಧಾರ್ಮಿಕ ಹಾಡುಗಳನ್ನು ಹಾಡುತ್ತಿದ್ದವರು ಗಂಡಸರು. ಆದರೆ ಹೆಂಗಸರೂ ಕೂಡ ಒಳ್ಳೆಯ ಧಾರ್ಮಿಕ ಗಾಯಕಿಯರಾದರು ಮತ್ತು ಪರದೆ ಧರಿಸಿ ಸ್ತ್ರೀಪುರುಷರಿಬ್ಬರೂ ಹಾಡುತ್ತಿದ್ದರು. ಉಮ್ ಕುಲ್ಸಂ ಅವರ ಉಚ್ಚಾರ, ಉಡುಪು ಹಾಗೂ ನಡವಳಿಕೆಯಿಂದ ಅವರನ್ನು ಮಿನ್- ಅಲ್-ಮಶಾಯಿಕ್ ಎಂದೇ ಗುರುತಿಸುತ್ತಿದ್ದರು.

ಹಿಂದೆಲ್ಲಾ ಗಾಯನಕ್ಕೆ ಯಾವುದೇ ವಾದ್ಯಸಹಕಾರ ಇರುತ್ತಿರಲಿಲ್ಲ. ಬದಲಾಗಿ ಗಾಯಕರ ಸಣ್ಣ ತಂಡವೊಂದು ಪ್ರಮುಖ ಗಾಯಕರಿಗೆ ಗಾಯನ ಸಹಕಾರ ನೀಡುತ್ತಿತ್ತು. ನಂತರ ಕೈರೋದ ಧಾರ್ಮಿಕ ಗಾಯಕರು ಸಹಗಾಯನಕ್ಕೆ ಬದಲಾಗಿ ವಯೋಲಿನ್ ಆಥವಾ ಕ್ವಿನ್ ವಾದ್ಯವನ್ನು ಬಳಸಲಾರಂಭಿಸಿದರು. ಉಮ್ ಕುಲ್ಸುಂ ಕಾಲದಲ್ಲಿ ಮವ್ವಾಲ್ ಹಾಡುಗಾರರಿದ್ದರು. ಇವು ಆಡುಮಾತಿನಲ್ಲಿದ್ದು ಗ್ರಾಮೀಣ ಸಾಂಸ್ಕೃತಿಕ ಪರಿಸರಕ್ಕೆ ಸೇರಿದ್ದವು. ಮವ್ವಾಲ್ ಹಾಡುವುದಕ್ಕೆ ಮೊದಲು ಲಯಾಲಿಯನ್ನು ಹಾಡುತ್ತಿದ್ದರು. ಮವ್ವಾಲಿಗೆ ಹಿಂದಿನಿಂದಲೂ ಡ್ರಂಗಳು, ಚಪ್ಪಾಳೆ ತಟ್ಟುವುದು, ಡಬ್ಬಲ್ ರೀಡ್ ಇರುವ ಮಿಜ಼್‌ಮಾರ್ (ಗಾಳಿವಾದ್ಯ ಓಲಗದ ಹಾಗೆ ಇರುತ್ತದೆ) ಉರ್‌ಘುಲ್ (ಕೊಳಲಿನ ಹಾಗೆ ರಂಧ್ರಗಳಿರುವ ಗಾಳಿವಾದ್ಯ) ಮುಂತಾದವುಗಳನ್ನು ಪಕ್ಕವಾದ್ಯವಾಗಿ ಬಳಸುತ್ತಿದ್ದರು. ಹಳ್ಳಿಯ ಕಡೆಗಳಲ್ಲಿ ಗಂಡಸರು ಮಾಡುತ್ತಿದ್ದ ಬೊಂಬು ನೃತ್ಯಕ್ಕೆ ಸಂಗೀತ ನುಡಿಸಲು ಇವುಗಳನ್ನು ಬಳಸುತ್ತಿದ್ದರು. ಅರೇಬಿಕ್ ಮಹಾಕಾವ್ಯ ’ಬಾನಿ ಹಿಲಾಲ್’ ಕಥೆಯನ್ನು ಹಾಡಲು ಸ್ಪೈಕ್ ಫಿಡಲ್ (ರಬಾಬ್) ಅಥವಾ ಡ್ರಮ್ಮನ್ನು ಪಕ್ಕವಾದ್ಯವಾಗಿ ಬಳಸುತ್ತಿದ್ದರು. 1900ರ ಹೊತ್ತಿಗೆ ಪಾಶ್ಚಾತ್ಯ ಮಿಲಿಟರಿ ಸಂಗೀತವನ್ನು ನುಡಿಸುವುದನ್ನೂ ಐಗುಪ್ತರು ಕಲಿತಿದ್ದರು. ಸ್ಥಳೀಯ ಕಲಾವಿದರ ಕೈಯಲ್ಲಿ ಈ ಮಾರ್ಷಲ್ ಶೈಲಿಯ ನುಡಿಸುವಿಕೆ ಬದಲಾಗಿತ್ತು ಮತ್ತು ತುಂಬಾ ಜನಪ್ರಿಯತೆಯನ್ನು ಪಡೆಯಿತು.

ಬಾಲ್ಯದಲ್ಲಿ ಈ ಎಲ್ಲಾ ಸಂಗೀತವನ್ನು ಕೇಳುತ್ತಾ, ಅದನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ ಉಮ್ ಕುಲ್ಸುಂ ಬೆಳೆದರು. ಇದರ ಜೊತೆಗೆ ಕುಲ್ಸುಂ ಮತ್ತವರ ಗೆಳತಿಯರು ಗ್ರಾಮಾಫೋನ್ ರೆಕಾರ್ಡುಗಳನ್ನು ಕೇಳುತ್ತಿದ್ದರು. ಏಕೆಂದರೆ ಅವರೆಲ್ಲಾ ಬೆಳೆಯುವ ಹೊತ್ತಿಗೆ ಗ್ರಾಮಾಫೋನ್ ಉದ್ಯಮ ಒಂದು ಜನಪ್ರಿಯ ಸಾಂಗೀತಿಕ ಮನೋರಂಜನೆಯಾಗಿತ್ತು. ಸುಮಾರು 1100 ಐಗುಪ್ತ ಧ್ವನಿಮುದ್ರಿಕೆಗಳು ಹೊರಬಂದಿದ್ದವು. ಮುಂದೆ ತನಗೆ ಗುರುಗಳಾದ ಅಲ್ ಶೇಕ್ ಅಬೂಲ್ ಇಲಾ ಮುಹಮ್ಮದ್ ಅವರ ಗಾಯನವನ್ನು ಕುಲ್ಸುಂ ಮೊದಲು ಕೇಳಿದ್ದು ಇಂತಹ ಧ್ವನಿಮುದ್ರಿಕೆಗಳಲ್ಲಿಯೇ. ಉಮ್ ಕುಲ್ಸುಂ ಸಂಗೀತಲೋಕಕ್ಕೆ ಕಾಲಿಟ್ಟಾಗ ಅಲ್ಲಿ ವಾಗ್ಗೇಯ ಕೃತಿಯೇ ತುಂಬಾ ಮುಖ್ಯವೆನಿಸಿಕೊಂಡಿತ್ತು. ಸ್ವತಃ ಕುಲ್ಸುಂ ಕೂಡ ಸಾಹಿತ್ಯ ತುಂಬಾ ಮುಖ್ಯವೆಂದು ಭಾವಿಸಿದ್ದರು. ಕೃತಿಯ ಸಾಹಿತ್ಯ ಪರಿಣಾಮಕಾರಿಯಾಗಿ ಇದ್ದಷ್ಟೂ ಹಾಡು ಪರಿಣಾಮಕಾರಿಯಾಗಿರುತ್ತದೆ. ಸಂಗೀತದಲ್ಲಿ ಪದಗಳು ತುಂಬ ಮುಖ್ಯ. ಸರಿಯಾಗಿ ಅರ್ಥ ಸ್ಫುರಿಸುವಂತೆ ಪದಗಳನ್ನು ಉಚ್ಚರಿಸದೇ ಇದ್ದರೆ ಕೇಳುಗರ ಭಾವವನ್ನು ಮೀಟಲು ಸಾಧ್ಯವಿಲ್ಲ. ಪ್ರತಿಯೊಂದು ಪದವನ್ನು ಸ್ವತಃ ನಾವು ಚಪ್ಪರಿಸಿ, ಅನುಭವಿಸಿ ಹಾಡಬೇಕು, ಎನ್ನುತ್ತಿದ್ದರು.

ಕುಲ್ಸುಂ ಸಾರ್ವಜನಿಕವಾಗಿ ಮೊದಲು ಹಾಡಿದ್ದು ಅವರ ಹಳ್ಳಿಯ ಮುಖ್ಯಸ್ಥ ಉಮ್ಡಾನ ಮನೆಯಲ್ಲಿ. ಮಶಾಯಿಕ್ ಹಾಡುಗಳನ್ನು ಇಷ್ಟು ಶಕ್ತಿಯುತವಾಗಿ, ಸೊಗಸಾಗಿ ಹಾಡುವ ಹುಡುಗಿಯ ಸಮಾಚಾರ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹಬ್ಬಲಾರಂಭಿಸಿ, ಬೇರೆ ಸಮಾರಂಭಗಳಿಗೆ ಅವರಿಗೆ ಆಹ್ವಾನ ಬಂದಿತು. ಈ ಹುಡುಗಿ ಆಕರ್ಷಣೆಯ ಕೇಂದ್ರವಾದಳು. ಆದರೆ ಉಮ್ ಕುಲ್ಸುಂ ಅವರ ಕಾಲದಲ್ಲಿ ಸಂಗೀತವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಉತ್ತೇಜನವಿರಲಿಲ್ಲ. ಅದರಿಂದ ಜೀವನೋಪಾಯ ಸಾಧ್ಯವೆಂದು ಅನ್ನಿಸಿರಲಿಲ್ಲ. ಅದಕ್ಕೊಂದು ಸಾಮಾಜಿಕ ಘನತೆಯಿರಲಿಲ್ಲ. ಅದು ಗೌರವಾನ್ವಿತ ಕುಟುಂಬಕ್ಕೆ ಸಲ್ಲದ ವೃತ್ತಿ ಎನ್ನುವ ಭಾವನೆಯೂ ಇತ್ತು. ಸಂಗೀತ ಕಚೇರಿಗಳು, ಮಾದಕ ವಸ್ತುಗಳ ಸೇವನೆ, ಮದ್ಯಪಾನ, ಜೂಜು ಹಾಗು ವೇಶ್ಯಾವೃತ್ತಿ ಇವೆಲ್ಲವೂ ಸಂಗೀತದೊಂದಿಗೆ ತಳುಕು ಹಾಕಿಕೊಂಡಿದ್ದವು. ಸಂಗೀತದ ಕಾರ್ಯಕ್ರಮಗಳು ನಡೆಯವ ಸ್ಥಳದಲ್ಲೆಲ್ಲಾ ವಿದೇಶೀ ಸೈನಿಕರು ಇರುತ್ತಿದ್ದರು. ಅವರ ಬಳಿ ತುಂಬಾ ಹಣ ಇರುತ್ತಿತ್ತು. ಅವರಿಗೆ ಯಾವುದೆ ರೀತಿಯ ನಿರ್ಬಂಧಗಳಿರಲಿಲ್ಲ. ಹಾಗಾಗಿ ಆರಂಭದಲ್ಲಿ ಕಾರ್ಯಕ್ರಮ ನೀಡುವಾಗ ಕುಲ್ಸುಂ ಹುಡುಗನಂತೆ ಉಡುಗೆ ತೊಡುತ್ತಿದ್ದರು.

19ನೇ ಶತಮಾನದ ಕೊನೆ ಮತ್ತು 20ನೇ ಶತಮಾನದ ಆದಿ ಭಾಗದಲ್ಲಿ ಈಜಿಪ್ಟಿನಲ್ಲಿ ಸೊಗಸಾದ ರಸ್ತೆಗಳು, ರೈಲು ಹಾದಿಗಳು ನಿರ್ಮಾಣವಾದವು. ಇದರಿಂದಾಗಿ ಕಲಾವಿದರಿಗೆ ಓಡಾಟ ಸುಗಮವಾಯಿತು. ಹಳ್ಳಿಗಳಲ್ಲಿ ತಾತ್ಕಾಲಿಕ ಟೆಂಟುಗಳನ್ನು ನಿರ್ಮಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು. ಉಮ್ ಕುಲ್ಸುಂ ಎಲ್ಲಾ ಕಡೆಗೂ ತಮ್ಮ ತಂದೆಯ ಜೊತೆ ಹೋಗುತ್ತಿದ್ದರು. ಆರಂಭದಲ್ಲಿ ಚಿಕ್ಕ ಹುಡುಗಿಯೊಬ್ಬಳು ಸೊಗಸಾಗಿ ಕುರಾನಿನ ಸುರಾ ಓದುತ್ತಾಳಂತೆ ಎನ್ನುವ ಕುತೂಹಲದಿಂದಲೇ ತುಂಬಾ ಜನ ಬರುತ್ತಿದ್ದರು. ವೃತ್ತಿ ಬದುಕಿನ ಪ್ರಗತಿಗೆ ಕೈರೋದಲ್ಲಿ ನೆಲೆಸುವುದು ಅನಿವಾರ್ಯವಾದಾಗ ಅವರು ಕೈರೋದಲ್ಲಿ ನೆಲೆಸಿದರು. ಅಲ್ಲಿ ಅವರು ಮೊದಲು ಹಾಡಿದ್ದು ಒಂದು ಮದುವೆಯ ಮನೆಯಲ್ಲಿನ ಮಹಿಳೆಯರಿಗಾಗಿ. ಅತಿ ಸಾಮಾನ್ಯ ಉಡುಗೆಯ ಕುಲ್ಸುಂ ಅವರನ್ನು ಶ್ರೀಮಂತ ಮಹಿಳೆಯರು ಅಸಡ್ಡೆಯಿಂದ ನೋಡಿ, ತಮ್ಮದೇ ಮಾತುಕತೆಗಳಲ್ಲಿ ಮುಳುಗಿದ್ದರು. ಆದರೆ ಒಮ್ಮೆ ಉಮ್ ಕುಲ್ಸುಂ ಹಾಡಲು ಪ್ರಾರಂಭಿಸಿದ ಕೂಡಲೆ ಅವರೆಲ್ಲರೂ ಆಕೆಯ ಕಂಠಸಿರಿಯನ್ನು ಕೇಳಿ ದಂಗಾದರು. ಮಹಿಳೆಯರ ಬಿಡಾರದಿಂದ ಇಂತಹ ಶಕ್ತಿಯುತವಾದ ಧ್ವನಿಯನ್ನು ಕೇಳಿದ ಗಂಡಸರು ಅಚ್ಚರಿಗೊಂಡು ಅವರನ್ನು ಸಾರ್ವಜನಿಕವಾಗಿ ಹಾಡುವಂತೆ ಆಹ್ವಾನಿಸಿದರು.

ಆಗ ಹೆಚ್ಚಿನ ಗಾಯಕರೆಲ್ಲರೂ ಹಾಡುತ್ತಿದ್ದುದು ಪ್ರವಾದಿ ಮಹಮದರ ಜೀವನ ಗಾಥೆಯನ್ನು. ಇವು ಐಗುಪ್ತರ ಬದುಕಿನ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಯ ಬಹುಮುಖ್ಯ ಭಾಗವಾಗಿದ್ದವು. ಅದನ್ನು ಹಾಡುವ ಶೈಲಿ ಸಂಪೂರ್ಣವಾಗಿ ಹರಳುಗಟ್ಟಿರಲಿಲ್ಲ. ಸತತವಾಗಿ ಬದಲಾಗುತ್ತಿತ್ತು. ಆರಂಭದಲ್ಲಿ ಗದ್ಯ ವಾಚನದಂತಿದ್ದ ಅದು ನಿಧಾನವಾಗಿ ರಾಗಮಯವಾದ, ಮಧುರವಾದ, ಇಂಪಾದ ಹಾಡಿನ ರೂಪ ತಳೆಯಿತು. ಅರಬ್ ಸಂಗೀತ ಸಂಪ್ರದಾಯದಲ್ಲಿ ಇಂತಹ ಬದಲಾವಣೆಗಳಿಗೆ ಅವಕಾಶವಿತ್ತು. ಈ ಬೆಳವಣಿಗೆಯ ಹಿಂದಿನ ಚಾಲಕಶಕ್ತಿ ವಿಶ್ವವಿದ್ಯಾನಿಲಯದಲ್ಲಿದ್ದ ಇಬ್ರಾಹೀಂ ಅಲ್ ಮಗ್ಹ್ರಬಿ ಮತ್ತು ಅವರ ಸಹೋದ್ಯೋಗಿ ಇಸ್ಮಾಯಿಲ್ ಸುಕ್ಕರ್ ಎನ್ನುವ ಧಾರ್ಮಿಕ ಗಾಯಕರು.

ಕುಲ್ಸುಂ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯದಲ್ಲಿ ಈಜಿಪ್ಟ್ ಬ್ರಿಟಿಷರ ಆಡಳಿತದಲ್ಲಿತ್ತು. ವಸಾಹತು ದೊರೆಗಳ ಮೌಲ್ಯಗಳು ಮತ್ತು ಅವರ ಕಲೆಗಿಂತ ತಮ್ಮ ಮೌಲ್ಯಗಳು ಮತ್ತು ಕಲೆ ಭಿನ್ನವೆಂದು ಸ್ಥಾಪಿಸುವ ರಾಷ್ಟ್ರೀಯವಾದಿ ತವಕ ಈಜಿಪ್ಟಿನಲ್ಲಿ ತೀವ್ರವಾಗಿತ್ತು. ಆಗ ಈಜಿಪ್ಟ್‌ತನ ಎನ್ನುವ ಕಲ್ಪನೆಯನ್ನು ಕಟ್ಟಿಕೊಟ್ಟು, ಈಜಿಪ್ಟಿನ ಸಾಂಸ್ಕೃತಿಕ ಅಸ್ಮಿತೆಯೊಂದನ್ನು ಕುಲ್ಸುಂ ತನ್ನ ಸಂಗೀತದ ಮೂಲಕ ನಿರ್ಮಿಸಿದರು.

ಅವರು ಪಾಶ್ಚಾತ್ಯ ಸಂಗೀತದ ಹಲವು ಅಂಶಗಳು ಮತ್ತು ವಾದ್ಯಗಳನ್ನು ಅರಬ್ ಸಂಗೀತಕ್ಕೆ ಒಗ್ಗಿಸಿದರು. ಹಲವು ವಿಭಿನ್ನ ಶೈಲಿಗಳನ್ನು ಅರಬ್ ಸಂಗೀತಕ್ಕೆ ತಂದರು. ಹೀಗೆ ಮಾಡಿ ಐಗುಪ್ತ ಸಂಗೀತವನ್ನು ಮತ್ತಷ್ಟು ಪುಷ್ಟಿಗೊಳಿಸುವುದರ ಬಗ್ಗೆ ಹೆಚ್ಚಿನವರ ಆಕ್ಷೇಪವೇನೂ ಇರಲಿಲ್ಲ. ಸಂಗೀತ ಇತಿಹಾಸಕಾರರು ಹೇಳುವಂತೆ ಹಿಂದೆಯೂ ಕೂಡ ಗ್ರೀಕ್ ಸಂಗೀತದ ಅಂಶಗಳನ್ನು ಈಜಿಪ್ಟ್ ಸಂಗೀತ ತನ್ನದಾಗಿಸಿಕೊಂಡಿತ್ತು. ಉಮ್ ಕುಲ್ಸುಂ ಅವರ ಕೃತಿಭಂಡಾರ ಪಾಶ್ಚಿಮಾತ್ಯ ಜನಪ್ರಿಯ ಸಂಗೀತ, ಅರಬ್ ಜಾನಪದ ಸಂಗೀತ, ಧಾರ್ಮಿಕ ಸಂಗೀತ ಮತ್ತು ಹಳೆಯ ಅರಬ್ ಸಂಗೀತ ಇವುಗಳನ್ನು ಒಳಗೊಂಡಿತ್ತು. ಇವೆಲ್ಲವೂ ಅವರೇ ಕಲ್ಪಿಸಿ ರೂಪಿಸಿಕೊಂಡಿದ್ದ ಕೃತಿ ಭಂಡಾರವಾಗಿತ್ತು. ಹಾಗಾಗಿ ಅಭಿಜಾತ, ಜನಪ್ರಿಯ, ಜಾನಪದ, ಕಲಾಸಂಗೀತ ಇಂತಹ ಕಟ್ಟುನಿಟ್ಟಾದ ವಿಭಜನೆಯನ್ನು ಉಮ್ ಕುಲ್ಸುಂ ಅವರ ಸಂಗೀತಕ್ಕೆ ಅನ್ವಯಿಸುವುದಕ್ಕೆ ಕಷ್ಟವಾಗುತ್ತದೆ. ಅವರ ಸಂಗೀತ ಇಂತಹ ಕಲ್ಪನೆಗಳಿಗೆ ಸವಾಲೆಸೆಯುತ್ತವೆ. ಅವರು ಪ್ರವಾದಿ ಮಹಮದರನ್ನು ಸ್ತುತಿಸುವ ಧಾರ್ಮಿಕ ಗೀತೆಗಳನ್ನು, ಜನರ ಆಡುಭಾಷೆಯಲ್ಲಿರುವ ಲಘುಧಾಟಿಯ ದೇಸೀ ಅರಬ್ ಹಾಡುಗಳಾದ ತಕ್‌ತೂಕಾ (taqtūqa), ಜನಪ್ರಿಯ ಪ್ರೇಮಗೀತೆಗಳನ್ನು ಹಾಡುತ್ತಿದ್ದರು. ಹಾಗಾಗಿ ಎಲ್ಲಾ ಬಗೆಯ ಶ್ರೋತೃಗಳಿಗೂ ಅವರ ಸಂಗೀತ ಇಷ್ಟವಾಗುತ್ತಿತ್ತು. ಅವರ ಗಾನಭಂಡಾರ ಈಜಿಪ್ಟ್ ಮತ್ತು ಅರಬ್ ಸಂಸ್ಕೃತಿಯ ನಿಜವಾದ ಸಂಗ್ರಹವನ್ನು ಒಳಗೊಂಡಿದೆ ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ಅವರ ಸಂಗೀತ ಏಕಕಾಲಕ್ಕೆ ಅಭಿಜಾತವೂ ಮತ್ತು ತನ್ನ ನೆಲದ ಜನರ ದೈನಂದಿನ ಬದುಕಿನ ದನಿಯೂ ಆಗಿತ್ತು.

ಉಮ್ ಕುಲ್ಸಂ ಕ್ರಮಿಸಿದ ಹಾದಿ ಮತ್ತು ಅವರೊಬ್ಬ ರಾಷ್ಟ್ರೀಯ ಗಾಯಕಿಯಾಗಿ ಹೊರಹೊಮ್ಮಿದ ಪ್ರಕ್ರಿಯೆ ಸುಲಭದ್ದೇನಾಗಿರಲಿಲ್ಲ. ಆರಂಭದಲ್ಲಿ ತುಂಬಾ ಕಟು ಟೀಕೆಗಳನ್ನು ಎದುರಿಸಬೇಕಾಯಿತು. ಅವರಿಗೆ ಇರುವುದು ಒಳ್ಳೆಯ ಕಂಠ ಮತ್ತು ಮಾಧುರ್ಯ ಅಷ್ಟೆ. ಅದರೆ ಕಲೆ ಅದನ್ನು ಮೀರಿದ್ದು ಎಂದು ವಿಮರ್ಶಕರು ವ್ಯಂಗ್ಯವಾಡಿದರು. ಅವಳೊಬ್ಬಳು ಧಾರ್ಮಿಕ ಗಾಯಕಿ ಅಷ್ಟೆ. ಇಂತಹ ಗಾಯನ ಶೈಲಿ ಈಜಿಪ್ಟಿನಲ್ಲಿ ಹಲವು ಶತಮಾನಗಳಿಂದ ಇದೆ ಎಂದರು. ಅವಳು ಸಂಗೀತಕ್ಕೆ ಹೊಸದೇನು ತಂದಿದ್ದಾಳೆ ಎಂದು ಪ್ರಶ್ನಿಸಿದರು. ಇನ್ನು ಕೆಲವರು ಅವಳೊಬ್ಬ ಹಳ್ಳಿಯ ಗಮಾರ್ ಎಂದು ಲೇವಡಿ ಮಾಡಿದರು. ಆದರೆ ಕುಲ್ಸುಂ ಇಂತಹ ಟೀಕೆಗಳಿಂದ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಉತ್ಕೃಷ್ಟತೆಯನ್ನು ಸಾಧಿಸಲು ಅವಶ್ಯಕವಿರುವುದೆಲ್ಲವನ್ನೂ ಮಾಡಿದರು.

ಮೊದಲು ತಮ್ಮ ಕಲಾತ್ಮಕ ಕೌಶಲ ಮತ್ತು ವೇದಿಕೆಯ ಮೇಲಿನ ಪ್ರಸ್ತುತಿಯನ್ನು ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸಿದರು. ಅಲ್ ನಿಜ್ರಿದಿ ಎನ್ನುವ ರಚನಕಾರರ ಬಳಿ ಕೆಲಸ ಮಾಡುತ್ತಾ ಕುಲ್ಸುಂ ತಮ್ಮ ಕಂಠದಲ್ಲಿ ಹೆಚ್ಚಿನ ಸುಲಲಿತತೆಯನ್ನು ಬೆಳೆಸಿಕೊಂಡು, ಸರಾಗವಾಗಿ ಹಾಡಲಾರಂಭಿಸಿದರು. ಕಂಠದಲ್ಲಿ ಒಂದು ನಿರಾಯಾಸತೆ ಮೂಡಿತು. ಇವರಿಗೆ ಊದ್ ಕಲಿಸಲು ಮತ್ತು ಮುವಾಶ್ಶಹಾತ್ ಹಾಡುವುದನ್ನು ಕಲಿಸಲು ಅವರ ತಂದೆ ಓರಿಯಂಟಲ್ ಮ್ಯೂಸಿಕ್ ಕ್ಲಬ್‌ನ ಮಹಮೂದ್ ರಹ್ಮಿಯನ್ನು ಖಾಸಗಿಯಾಗಿ ನೇಮಿಸಿದರು. ಏಕೆಂದರೆ ಆಗ ಮಹಿಳೆಯರಿಗೆ ಆ ಕ್ಲಬ್‌ಗೆ ಪ್ರವೇಶವಿರಲಿಲ್ಲ. ಅವರ ಪ್ರಮುಖ ಗುರು ಅಲ್ ಶೇಕ್ ಅಬೂ ಅಲ್ ಇಲಾ ಮಹಮೂದ್. ಅವರು ಮಶಾಯಿಕ್ ಸಂಗೀತ ಸಂಪ್ರದಾಯದಲ್ಲಿ ಪರಿಣತರು. ಅವರಲ್ಲಿ ಸೊಗಸಾದ ಅಭಿಜಾತ ಸಂಗೀತದ ಕೃತಿಭಂಡಾರವೇ ಇತ್ತು. ಅವರು ಕುಲ್ಸುಂಗೆ ತಮ್ಮ ಶಕ್ತಿಶಾಲಿಯಾದ ಕಂಠವನ್ನು ಹೇಗೆ ನಿಯಂತ್ರಿಸಬೇಕು ಎನ್ನುವುದನ್ನು, ಅದರ ಬಾಗು ಬಳುಕುಗಳು ಹೇಗಿರಬೇಕು ಮತ್ತು ಹಾಡಿನ ಅರ್ಥ ಹಾಗೂ ರಾಗ ಹೇಗೆ ಪರಸ್ಪರ ಮೇಳೈಸಬೇಕೆಂಬುದನ್ನು ಹೇಳಿಕೊಟ್ಟರು. ಟರ್ಕಿ ಮತ್ತು ಜಿಪ್ಸಿ ಹಾಡುಗಳ ಕೂಗಾಟದ ಪ್ರಭಾವವನ್ನು ತೊಡೆದು ಹಾಕಿ, ಅಸಲೀ ಅರಬ್ ಪ್ರಸ್ತುತಿಯ ಕಲಾತ್ಮಕತೆಯನ್ನು ಸಂಗೀತದಲ್ಲಿ ರೂಪಿಸಿದರು. ಆ ತನಕ ಕುಲ್ಸುಂ ಹಾಡುತ್ತಿದ್ದ ಹೆಚ್ಚಿನ ಹಾಡುಗಳು ಬಳಕೆ ತಪ್ಪಿದ್ದ ಆರ್ಷೇಯ ಅರಬ್ ಭಾಷೆಯಲ್ಲಿದ್ದವು. ಅವು ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಜನರಿಗೆ ಅರ್ಥವಾಗುವ ಭಾಷೆಯಲ್ಲಿ, ಗುಣಾತ್ಮಕವಾಗಿ ಉತ್ಕೃಷ್ಟವಾದ ಹಾಡುಗಳನ್ನು ರಚಿಸಿಕೊಡುವಂತೆ ಅಹಮದ್ ರಾಮೀ ಎನ್ನುವ ಖ್ಯಾತ ಕವಿಯನ್ನು ಕುಲ್ಸುಂ ಕೇಳಿಕೊಂಡರು. ಆ ಹಾಡುಗಳು ತುಂಬಾ ಜನಪ್ರಿಯತೆಯನ್ನು ಪಡೆದವು.

ಅವರ ಬದುಕಿನ ಅತ್ಯಂತ ಯಶಸ್ವೀ ದಿನಗಳು ಪ್ರಾರಂಭವಾದದ್ದು 1923ರಲ್ಲಿ ಓಡಿಯಾನ್ ಕಂಪನಿ ಅವರ ಧ್ವನಿಮುದ್ರಿಕೆಗಳನ್ನು ಹೊರತಂದಾಗ. ನಗರ ಪ್ರದೇಶಗಳಲ್ಲಿ ತುಂಬಾ ಖ್ಯಾತರಾಗಿದ್ದ ಗಾಯಕಿಯರ ಧ್ವನಿಮುದ್ರಿಕೆಗಳಿಗಿಂತ ಹೆಚ್ಚಾಗಿ ಕುಲ್ಸುಂ ಅವರ ಧ್ವನಿಮುದ್ರಿಕೆಗಳು ಮಾರಾಟವಾಗುತ್ತಿದ್ದವು. ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದ ಮತ್ತು ಈಜಿಪ್ಟಿನ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿ ಹಾಡಿದ್ದ ಉಮ್ ಕುಲ್ಸುಂ ಎಲ್ಲರಿಗೂ ಪರಿಚಿತವಿದ್ದರು. ಹಾಗಾಗಿ ನಗರಕ್ಕೆ ಬಂದ ಗ್ರಾಮೀಣ ಜನರು ಧ್ವನಿಮುದ್ರಿಕೆಗಳ ಮೇಲೆ ಕುಲ್ಸುಂ ಅವರ ಚಿತ್ರ ನೋಡಿ, ಈಕೆ ತಮ್ಮ ಮನೆಯಲ್ಲಿ ಹಾಡಿದಾಕೆ ಎಂದು ಅವರ ಧ್ವನಿತಟ್ಟೆಗಳನ್ನು ಕೊಳ್ಳುತ್ತಿದ್ದರು. 1926ರಲ್ಲಿ ಓಡಿಯನ್ ರೆಕಾರ್ಡಿಂಗ್ ಕಂಪನಿ ಉಳಿದೆಲ್ಲ ಕಲಾವಿದರಿಗಿಂತ ಕುಲ್ಸುಂಗೆ ಹೆಚ್ಚಿನ ಸಂಭಾವನೆ ನೀಡುತ್ತಿತ್ತು. ಅವರ ಬದುಕಿನ ಯಶಸ್ಸು ಖಂಡಿತವಾಗಿಯೂ ಒಂದು ಆಕಸ್ಮಿಕವಲ್ಲ. ಅದರ ಹಿಂದೆ ಹಲವು ವರ್ಷಗಳ ಪರಿಶ್ರಮವಿತ್ತು. ಅವರು ವೈಯಕ್ತಿಕ ಮತ್ತು ಸಂಗೀತದ ಬದುಕಿನಲ್ಲಿ ಮಾಡಿಕೊಂಡ ಆಯ್ಕೆಗಳಿಗೆ ಒಂದು ಸ್ಪಷ್ಟವಾದ ಮಾದರಿಯಿತ್ತು.

ಕಲೆಯ ಪೋಷಣೆಯನ್ನು ವಸಾಹತುಶಾಹಿಗೆ ಒಂದು ಪ್ರತಿರೋಧವಾಗಿ ಪರಿಗಣಿಸುವ ಬೆಳವಣಿಗೆ ಈಜಿಪ್ಟಿನಲ್ಲಿ ಪ್ರಾರಂಭವಾಗಿತ್ತು. ಹಾಗಾಗಿ ಅಲ್ಲಿ ಕಲೆ ಎನ್ನುವುದು ಒಂದು ರಾಜಕೀಯ ಅಭಿವ್ಯಕ್ತಿಯಾಗಿತ್ತು. ಕುಲೀನ ವರ್ಗಗಳಿಂದ ಮೊದಲ್ಗೊಂಡು ದುಡಿಯುವ ವರ್ಗಗಳ ತನಕ ಎಲ್ಲರೂ ಒಂದು ಅಸಲೀ ಐಗುಪ್ತ ಸಂಗೀತದ ಹುಡುಕಾಟದಲ್ಲಿದ್ದರು. 19ನೇ ಶತಮಾನದ ಕೊನೆಯ ಭಾಗದಿಂದ ಪುರಾತನ ಅರೇಬಿಯನ್ ಮತ್ತು ಮುಸ್ಲಿಂ ಆಚರಣೆಗಳು ಸಾಂಸ್ಕೃತಿಕ ಅಭಿವೃದ್ಧಿಯ ಆಧಾರವಾದವು. ಅವುಗಳ ಮೌಲಿಕತೆಯನ್ನು ಮತ್ತೆ ಮತ್ತೆ ಒತ್ತಿ ಹೇಳಲಾಯಿತು ಈಜಿಪ್ಟ್ ರಾಷ್ಟ್ರೀಯ ಪ್ರಜ್ಞೆ ಮತ್ತು ಮುಸ್ಲಿಂ ಪ್ರಜ್ಞೆ ಎರಡನ್ನೂ ಒಂದರೊಂದಿಗೆ ಮತ್ತೊಂದನ್ನು ಬೆಸೆದರು. ಉಮ್ ಕುಲ್ಸುಂ ಸಂಗೀತ ಕ್ಷೇತ್ರದಲ್ಲಿ ಇದರ ದನಿಯಾದರು. ಜನರ ಮನಸ್ಸಿನಲ್ಲಿ ಅಮೂರ್ತವಾಗಿ ಇದ್ದಿರಬಹುದಾದ ಭಾವನೆ ಮತ್ತು ಕಲ್ಪನೆಗಳಿಗೆ ತನ್ನ ಹಾಡುಗಳ ಮೂಲಕ ಒಂದು ಸ್ಪಷ್ಟ ರೂಪ ನೀಡಿದರು. ’ಸಲೋ ಕ್ವಲ್ಬಿ’ ಎಂಬ ಅವರ ಪ್ರಖ್ಯಾತ ಹಾಡು ಪ್ರವಾದಿ ಮಹಮದರ ಸ್ತುತಿಯಾಗಿ ಆರಂಭವಾಗುತ್ತದೆ. ಅದರಲ್ಲಿ ಅವರು ಸೇರಿಸಿರುವ ಕೇವಲ ಆಶಿಸಿ, ಬಯಸುವುದರಿಂದ ಬೇಡಿಕೆಗಳು ಈಡೇರುವುದಿಲ್ಲ, ಹೋರಾಟದಿಂದಷ್ಟೇ ವಿಶ್ವವನ್ನು ಪಡೆಯಬಹುದು ಎಂಬ ಎರಡು ಸಾಲುಗಳು ಈಜಿಪ್ಟಿನ ರಾಷ್ಟ್ರೀಯತೆಯ ಹಂಬಲದ ದನಿಯಾಯಿತು. ಎರಡನೆಯ ಮಹಾಯುದ್ಧದ ನಂತರ ಐಗುಪ್ತರು ತಮ್ಮ ಸ್ವಾತಂತ್ರ್ಯಕ್ಕಾಗಿ ತೀವ್ರವಾದ ಹೋರಾಟ ನಡೆಸುತ್ತಿದ್ದಾಗ ಉಮ್ ಕುಲ್ಸಂ ಅತ್ಯಂತ ಶಕ್ತಿಶಾಲಿಯಾಗಿ ಹಾಡುತ್ತಿದ್ದ ಈ ಸಾಲುಗಳು ಜನರನ್ನು ಬಡಿದೆಬ್ಬಿಸುತ್ತಿತ್ತು. ಅದು ಏಕಕಾಲಕ್ಕೆ ರಾಷ್ಟ್ರೀಯತೆ ಹಾಗೂ ಧಾರ್ಮಿಕತೆಯ ಅಭಿವ್ಯಕ್ತಿಯಾಗಿತ್ತು. ಎಲ್ಲಾ ವರ್ಗಗಳ ಜನರಿಗೆ ಕುಲ್ಸಂ ಅವರ ಸಂಗೀತದಲ್ಲಿ ತಮ್ಮ ಅಸ್ಪಷ್ಟ ಕಲ್ಪನೆ ಸಾಕಾರವಾಗಿದೆ ಅನ್ನಿಸಿ ಅದರೊಂದಿಗೆ ತಾದಾತ್ಮ್ಯ ಸಾಧ್ಯವಾಯಿತು. ಅವರು ತಮ್ಮ ಸಾರ್ವಜನಿಕ ಬದುಕಿನಲ್ಲಿ ಮತ್ತು ತಮ್ಮ ಸಂಗೀತದಲ್ಲಿ ದೇಶೀಯತೆಗೆ ಒತ್ತುಕೊಟ್ಟರು. ಅವರೊಬ್ಬ ರಾಷ್ಟ್ರೀಯ ಐಕಾನ್ ಆಗಿ, ಒಂದು ಬಲವಾದ ರಾಜಕೀಯ ದನಿಯಾಗಿದ್ದಕ್ಕೆ, ಕೇವಲ ಅವರ ಅಸಾಧಾರಣ ಕಂಠ ಮತ್ತು ಸಂಗೀತಾತ್ಮಕತೆಯಷ್ಟೇ ಕಾರಣವಾಗಿರಲಿಲ್ಲ. ಆಗ ಅತ್ಯಂತ ತೀವ್ರವಾಗಿದ್ದ ರಾಷ್ಟ್ರೀಯ ಚಳವಳಿಯ ಸಂವಾದಕ್ಕೆ ಹೊಂದುವಂತಹ ಪುರುಷತ್ವ ಮತ್ತು ಸ್ತ್ರೀತ್ವದ ಕಲ್ಪನೆಗಳ ಪ್ರತಿನಿಧಿಯಾಗಿದ್ದರು.

ತಮ್ಮ ಉಡುಗೆ ತೊಡುಗೆಗಳಲ್ಲಿಯೂ ಕುಲ್ಸುಂ ಈಜಿಪ್ಟ್‌ತನವನ್ನು ಅಭಿವ್ಯಕ್ತಿಸುತ್ತಿದ್ದರು. ತಮ್ಮ ಕಾಲದ ಉಡುಪಿನ ಹೊಸ ವಿನ್ಯಾಸಗಳನ್ನು ತಮ್ಮ ಸಾಂಪ್ರದಾಯಿಕ ಈಜಿಪ್ಟಿನ ಉಡುಪಿನ ಘನತೆಗೆ ಧಕ್ಕೆ ಬಾರದಂತೆ ಅಳವಡಿಸಿಕೊಂಡರು. ಅವರ ಉಡುಪಿಗೆ ಉದ್ದವಾದ ತೋಳಿದ್ದು ಅದು ಹೆಕ್ಕತ್ತಿನವರೆಗೂ ಇರುತ್ತಿತ್ತು. ಈಜಿಪ್ಟಿನ ಸಾಂಪ್ರದಾಯಿಕ ಉಡುಗೆಯಾದ ಜಲ್ಲಬಿಯಾವನ್ನೇ ತೊಡುತ್ತಿದ್ದರು. ಕೂದಲನ್ನು ಮೇಲಕ್ಕೆ ಎತ್ತಿ ತುರುಬು ಕಟ್ಟುತ್ತಿದ್ದರು. ಅದು ದುಡಿಯುವ ವರ್ಗದ ಮಹಿಳೆಯರ ತುರುಬನ್ನು ಮತ್ತು ಕುಲ್ಸಂ ಅವರ ಗತವನ್ನು ನೆನಪಿಸುತ್ತಿತ್ತು. ಬಲಗೈನಲ್ಲಿ ಒಂದು ಸುಂದರವಾದ ರೇಷ್ಮೆಯ ಕರವಸ್ತ್ರವನ್ನು ಹಿಡಿದಿರುತ್ತಿದ್ದರು. ಅದು ಅವರ ಗುರುತಾಗಿತ್ತು.

ಸ್ವತಃ ದುಡಿಯುವ ವರ್ಗದಿಂದ ಬಂದಿದ್ದ ಕುಲ್ಸಂ ಈ ವರ್ಗಗಳಲ್ಲಿ ತುಂಬಾ ಜನಪ್ರಿಯವಾಗಿದ್ದ ಆಡುಮಾತಿನಲ್ಲಿದ್ದ ಅಜ಼ಲ್‌ಗಳನ್ನು, ಅವರ ಭಕ್ತಿಗೀತೆಗಳಾದ ನಿಶಾದ್‌ಗಳನ್ನು ಮತ್ತು ಅವರ ದೇಸೀ ಪಾತ್ರಗಳನ್ನು ಸಂಗೀತದ ಪರಿಧಿಯೊಳಗೆ ತಂದರು. ಕ್ರಮೇಣ ಸಾಮುದಾಯಿಕ ಸಮ್ಮತಿಯಿಂದ ಇವೆಲ್ಲವೂ ಸೇರಿಕೊಂಡಿರುವ ಈಜಿಪ್ಟ್/ಅರಬ್ ಸಂಗೀತವನ್ನು ತಮ್ಮ ಪರಂಪರೆ ಎಂದು ಜನ ಸ್ವೀಕರಿಸಿದರು. 1940ರಿಂದ ತಮ್ಮ ಸಂಗೀತ ಮತ್ತು ಹಾಡುಗಳ ಮೂಲಕ ಉಮ್ ಕುಲ್ಸುಂ ಜನರ ಭಾಷೆ, ಅವರ ಭಾವನೆಗಳು ಮತ್ತು ಸಂವೇದನೆಗಳನ್ನೇ ಅಭಿವ್ಯಕ್ತಿಸತೊಡಗಿದರು. ಅವರ ಯಾವುದೇ ಹಾಡು ಅಥವಾ ಅವರು ನಟಿಸಿದ ಸಿನಿಮಾದ ನಾಯಕಿಯರು ಯಾವುದೋ ಕನಸಿನ ರಮ್ಯಲೋಕಕ್ಕೆ ಸೇರಿದವರಾಗಿರಲಿಲ್ಲ. ಎಲ್ಲರೂ ಇಲ್ಲಿನ ಮಣ್ಣಿನ ವಾಸನೆಯನ್ನು ಹೊಂದಿದ್ದರು. ಅವರ ಇಡೀ ಸಂಗೀತ ಒಂದು ಸಮಷ್ಟಿ ಪ್ರಜ್ಞೆಯ ಅಭಿವ್ಯಕ್ತಿಯಾಗಿತ್ತು. 1952ರಿಂದ ೬೦ರವರಗೆ ಅವರು ಹೆಚ್ಚಾಗಿ ಹಾಡಿದ್ದೆಲ್ಲಾ ರಾಷ್ಟ್ರಭಕ್ತಿಗೀತೆಗಳೇ. 1967ರಲ್ಲಿ ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಈಜಪ್ಟ್ ಹೀನಾಯವಾದ ಸೋಲನ್ನು ಅನುಭವಿಸಿತು. ಆಗ ಇಡೀ ಅರಬ್ ಪ್ರಪಂಚದಲ್ಲಿ ಹಾಡಿ ಅದರಿಂದ ಬಂದ 2,530,000 ಡಾಲರ್ ಮೊತ್ತದ ಹಣವನ್ನು ರಾಷ್ಟ್ರದ ಖಜಾನೆಗೆ ನೀಡಿದರು.

ನಿಧಾನವಾಗಿ ಕುಲ್ಸುಂ ಅತ್ಯಂತ ಪ್ರಭಾವಿ ವ್ಯಕ್ತಿಗಳಿಂದ ಮೊದಲುಗೊಂಡು ಹಳ್ಳಿಯ ಜನಸಾಮಾನ್ಯರ ತನಕ ಈಜಿಪ್ಟಿನ ಜನತೆಯ ಬದುಕಿನ ಭಾಗವಾದರು. ಪ್ರತಿ ಗುರುವಾರ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಕುಲ್ಸುಂ ಅವರ ಗಾಯನ ಕೇಳಲು ಜನ ಕಾತರರಾಗಿ ಕಾಯುತ್ತಿದ್ದರು. ಗುರುವಾರ ಸಂಜೆಗಳು ಈಜಿಪ್ಟಿನ ಬೀದಿಗಳು ಅಕ್ಷರಶಃ ನಿರ್ಜನವಾಗಿರುತ್ತಿತ್ತು, ಎಲ್ಲರೂ ರೇಡಿಯೋದ ಮುಂದೆ ಕುಳಿತಿರುತ್ತಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ.

ಶಾವ್‌ಕಿಯವರ ಪದ್ಯಗಳನ್ನು ಧ್ವನಿಮುದ್ರಿಕೆಗಳಿಗೆ ಹಾಡುವ ಮೂಲಕ ಉಮ್ ಕುಲ್ಸುಂ ಜನಸಾಮಾನ್ಯರಿಗೆ ಕಾವ್ಯವನ್ನು ಪರಿಚಯಿಸಿ ಕಲಿಸಿದರು ಎಂದು ಅವರನ್ನು ಕೊಂಡಾಡುತ್ತಾರೆ. ಜನ ಮನೆಯಲ್ಲಿ, ಬೀದಿಯಲ್ಲಿ ಹೋಗುವಾಗ, ತೋಟದಲ್ಲಿ ಸುತ್ತಾಡುವಾಗ, ಶಾಲೆಯಲ್ಲಿರುವಾಗ ಕುಲ್ಸುಂ ಅವರ ಹಾಡುಗಳನ್ನು ಸದಾ ಗುನುಗುತ್ತಿದ್ದರು. ನಾನು ಕಾಲೇಜಿನಲ್ಲಿದ್ದಾಗ ನಮ್ಮ ಕಾಲೇಜಿನ ದ್ವಾರಪಾಲಕನಿಗೆ ನಾನು ಸಂಗೀತಪ್ರೇಮಿ ಎಂದು ತಿಳಿದಿತ್ತು. `ನೀನು ಉಮ್ ಕುಲ್ಸಂ ಅವರ ಹೊಸ ಧ್ವನಿಮುದ್ರಿಕೆಯನ್ನು ಕೇಳಿದ್ದಿಯಾ’ ಎಂದು ನನ್ನನ್ನು ಕೇಳಿ, ಉತ್ಕೃಷ್ಟ ಸಾಹಿತ್ಯವಿರುವ ಆ ಹಾಡನ್ನು, ಕಾಲೇಜಿನ ಅನಕ್ಷರಸ್ಥ, ಅಶಿಕ್ಷಿತ ದ್ವಾರಪಾಲಕ ಸ್ವಲ್ಪವೂ ತಪ್ಪಿಲ್ಲದೆ ಹಾಡುತ್ತಿದ್ದ ಎಂದು ಖ್ಯಾತ ವಿಮರ್ಶಕರೊಬ್ಬರು ಹೇಳುತ್ತಾರೆ. ಈಜಿಪ್ಟಿನ ಉತ್ಕೃಷ್ಟ ಸಾಹಿತ್ಯವನ್ನು, ಭಾಷೆಯನ್ನು ಕುಲ್ಸುಂ ತಮ್ಮ ಸಂಗೀತದ ಮೂಲಕ ಜನರಿಗೆ ಪರಿಚಯಿಸಿ ಅದನ್ನು ಸವಿಯುವಂತೆ ಮಾಡಿದರು.

ಉಮ್ ಕುಲ್ಸುಂ ಲಿಂಗತ್ವದ ಒಪ್ಪಿತ ಕಲ್ಪನೆಗಳನ್ನು ಸದ್ದುಗದ್ದಲವಿಲ್ಲದೆಯೇ ಒಡೆದಿದ್ದರು. ವ್ಯವಹಾರದಲ್ಲಿ ಅವರು ತುಂಬಾ ಕಟ್ಟುನಿಟ್ಟಾಗಿ ವ್ಯವಹರಿಸುತ್ತಿದ್ದರು. ತಮ್ಮ ಯಶಸ್ವೀ ವೃತ್ತಿಬದುಕಿನ ಹಂಬಲದಿಂದಾಗಿ ಅವರು ಕೌಟುಂಬಿಕ ಬದುಕಿಗೆ ಬಿಲ್‌ಕುಲ್ ಅಂಟಿಕೊಳ್ಳಲಿಲ್ಲ. ಅವರ ಎರಡು ಮದುವೆಗಳೂ ತೀರಾ ಅಸಂಪ್ರದಾಯಿಕವಾಗಿದ್ದವು. ಮೊದಲ ಮದುವೆ ಕೆಲವೇ ದಿನಗಳಲ್ಲಿ ಮುರಿದು ಬಿದ್ದಿತು. ಇನ್ನು ತಮಗೆ 50ವರ್ಷಗಳಾಗಿದ್ದಾಗ ಮಕ್ಕಳಿದ್ದ, ವಯಸ್ಸಿನಲ್ಲಿ ತಮಗಿಂತ ಕಿರಿಯನಾಗಿದ್ದ ವಿವಾಹಿತನೊಬ್ಬನನ್ನು ಮದುವೆಯಾದರು.

1972ರವರೆಗೂ ಕುಲ್ಸುಂ ಹಾಡುತ್ತಿದ್ದರು. ನಂತರ ಆರೋಗ್ಯದ ಸಮಸ್ಯೆ ಉಲ್ಬಣಿಸಿ 1975ರಲ್ಲಿ ಮೂತ್ರಪಿಂಡದ ಸಮಸ್ಯೆಯಿಂದ ತೀರಿಕೊಂಡರು. ಅವರ ಅಂತ್ಯಸಂಸ್ಕಾರದಂದು ನಾಲ್ಕು ಮಿಲಿಯನ್ ಜನ ಕೈರೋದಲ್ಲಿ ಸೇರಿದ್ದರು. ಈಜಿಪ್ಟಿನ ಜನಪ್ರಿಯ ನಾಯಕ ನಿಸಾರ್ ಸತ್ತಾಗಲೂ ಈ ಸಂಖ್ಯೆಯಲ್ಲಿ ಜನ ಸೇರಿರಲಿಲ್ಲ. ಪುರುಷರ ಪಾರಮ್ಯವಿರುವ ನಾಡಿನಲ್ಲಿ ಉಮ್ ಕುಲ್ಸುಂ ಅವರ ಹೆಣವಿದ್ದ ಶವಸಂಪುಟವನ್ನು ಸರ್ಕಾರಿ ಅಧಿಕಾರಿಗಳ ಕೈಯಿಂದ ತೆಗೆದುಕೊಂಡು ದುಃಖತಪ್ತ ಜನ ಕೈರೋದ ಬೀದಿ ಬೀದಿಗಳಲ್ಲಿ ಅದನ್ನು ಹೆಗಲು ಬದಲಾಯಿಸಿಕೊಂಡು ಮೆರವಣಿಗೆ ಹೋದರು. ಇದು ಇತಿಹಾಸದಲ್ಲಿ ಎಂದೂ ಕಂಡರಿಯದ್ದು. ಉಮ್ ಕುಲ್ಸುಂ ಈಜಿಪ್ಟಿನ ಜನರ ನರನಾಡಿಗಳಲ್ಲಿ ಇಂದೂ ಇದ್ದಾರೆ.

ಇದನ್ನೂ ಓದಿ : ಒಂದು ಸಂಜೆಗಣ್ಣಿನ ಹಿನ್ನೋಟ...!

ಮೃದಂಗದ ಜಾಡು ಹಿಡಿದು ಹೊರಟ 'ವರ್ಗೀಕರಣ' ಮೀರಿದ ಕೃತಿ

ಬದುಕೇ ಹಾಡಾದ ಮಮ್ಮಾ ಆಫ್ರಿಕಾ ಮೀರಿಯಂ ಮಕೇಬಾ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...