ಎನ್ ಕೌಂಟರ್ ಕಾದಂಬರಿಯ ಹೊಳಹು ಹೊಳೆದ ಹೊತ್ತು.....!


ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪಅವರ ಹೊಸ ಕಾದಂಬರಿ ಎನ್ ಕೌಂಟರ್ ಪ್ರಕಟಗೊಂಡಿದೆ. ಕುಖ್ಯಾತ ರೌಡಿಯೊಬ್ಬನ ಬದುಕಿನಲ್ಲಿ ನಡೆದ ಘಟನೆಗಳನ್ನು ಆಧರಿಸಿ ರೂಪು ಪಡೆದ ಈ ಕಾದಂಬರಿ ಕುರಿತು ಸ್ವತಃ ಲೇಖಕರೇ ಅಭಿವ್ಯಕ್ತಪಡಿಸಿರುವ ಮಾತುಗಳಿವು.

ಈ ಕಾದಂಬರಿಯ ಹುಳುನ ನನ್ನ ತಲೆಯಲ್ಲಿ ಬಿಟ್ಟವರು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿಯವರು. ಅವರು ಬಳ್ಳಾರಿಲಿ ಭೀಮ್ಲಾ ನಾಯಕ್ ಹೆಸರಿನ ಆಂಧ್ರಪ್ರದೇಶದ ಕುಖ್ಯಾತನನ್ನು ಎನ್‍ಕೌಂಟರ್ ಮಾಡಿದ್ದು 1990, ಸೆಪ್ಟೆಂಬರ್ ಮಾಹೆಯಲ್ಲಿ, ಅಂದರೆ ಮುವ್ವತ್ತು ವರ್ಷಗಳ ಹಿಂದೆ. ಆ ಕೃತ್ಯದಿಂದ ಬಿದರಿಯವರು ಉಭಯ ರಾಜ್ಯಗಳಲ್ಲಿ ಪ್ರಸಿದ್ಧರಾಗಿದ್ದರು, ಆದರೆ ಅವರಿಗೆ ನೆಮ್ಮದಿಯಿರಲಿಲ್ಲ. ಪರಸ್ಪರ ಅಭಿಮಾನವಿದ್ದದಕ ಅವರು, ‘ಅವತ್ತಿನಿಂದ ಇದ್ಯಾಕೊ ನನ್ನ ತಲೆನ ತಿನತೈತಿ, ನಮ್ಮ ಕೈಲಿ ಸತ್ತವನು ಕೆಟ್ಟವನಿದ್ದುದಕ ನಾವು ಎನ್‍ಕೌಂಟರ್ ಮಾಡಿದ್ದು. ಆದರೆ ಅವನು ಒಳ್ಳೆಯವನಿದ್ದರ ಏನು ಮಾಡೋದು! ಅದಕ ನೀವು ಆಂಧ್ರದೊಳಗ ಹೋಗಿ ಅವನ ಬಗೆಗಿನ ಮಾಹಿತಿ ಸಂಗ್ರಹಿಸಿರಿ, ಅವನು ಒಳ್ಳೆಯವನಿದ್ದರೆ ಒಳ್ಳೆಯವನಿದ್ದಂತ ಬರೀರಿ, ಕೆಟ್ಟವನಿದ್ದರೆ ಕೆಟ್ಟವನಿದ್ದರ ಕೆಟ್ಟವನಿದ್ದಾಂತ ಬರೀರಿ, ಅದಕ ನಮ್ಮ ತಕರಾರಿಲ್ಲ’ ಎಂದು ಖಡಕ್ಕಾಗಿ ಹೇಳಿದರು.

ಆ ಕಾಲದಲ್ಲಿ ಆ ಎನ್‍ಕೌಂಟರ್ ಉಭಯ ರಾಜ್ಯಗಳಲ್ಲಿ ತುಂಬಾ ಸುದ್ದಿ ಮಾಡಿತ್ತು. ಆಂಧ್ರದಲ್ಲಿದ್ದ ನನಗೆ ಎನ್‍ಕೌಂಟರ್ ಎಂಬ ಶಬ್ಧ ಹೊಸದಾಗಿರಲಿಲ್ಲ. ಎಲ್ಲಾ ಲೇಖಕರಂತೆ ನನಗೂ ಸಹ ಅದರ ಬಗ್ಗೆ ಅಸಮಾಧಾನವಿತ್ತು. ಆ ಘಟನೆಯಿಂದ ಬಳ್ಳಾರಿ ನಗರ ಸಹ ಬೆದರಿತ್ತು. ಅವರ ಸಲಹೆಯಂತೆ ನಾನು ಆಂಧ್ರ ಮತ್ತು ತೆಲಂಗಾಣದ ಐದಾರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದೆ, ಅಲ್ಲಿನ ಹತ್ತಾರು ತಾಂಡಾಗಳಲ್ಲಿ, ಪುನರ್ವಸತಿ ಕಾಲನಿಗಳಲ್ಲಿ ದಣವರಿಯದೆ ಸಂಚರಿಸಿದೆ, ಅವೆಲ್ಲ ಅವರೆಲ್ಲ ಇದ್ದದ್ದು ನಲ್ಲಮಲ ದಂಡಕಾರಣ್ಯದ ಸೆರಗಲ್ಲಿ. ಅಲ್ಲಿ ರ್ಯಾಡಿಕಲ್ಸು, ನಕ್ಸಲೈಟ್ ಹೆಸರಿನ ಕ್ಷುದ್ರರಿದ್ದರು. ಅಲ್ಲಲ್ಲಿ ನಮ್ಮನ್ನು ಅಟಕಾಯಿಸಿದರು, ನಮ್ಮನ್ನು ಪೋಲಿಸರು ಎಂದು ಸಂದೇಹಿಸಿದರು. ಕಾರನ್ನು ಶೋಧಿಸಿದರು. ಅವರ ಬಳಿ ಮಾರಕಾಯುಧಗಳಿದ್ದವು, ನಮ್ಮ ಬಳಿ ಸಜ್ಜನಿಕೆ ಮುಗುಳ್ನಗೆ ಇತ್ತು. ಹೀಗಾಗಿ ಅಲ್ಲಿನ ಲಂಬಾಣ ಕೊರವ ಚೆಂಚು ಬುಡಕಟ್ಟು ಸಮುದಾಯದ ಜನರು ಸಮಸ್ಯಾತ್ಮಕ ಅನ್ನಿಸಲಿಲ್ಲ. ಅಲ್ಲೆಲ್ಲ ಆ ಕಾಲದವರಲ್ಲಿ ಬಹಳಷ್ಟು ಜನರು ಕಾಲವಾಗಿದ್ದರು. ಉಳಿದಿದ್ದವರು ಸವೆದು ಕೃಷರಾಗಿದ್ದರು. ತಮ್ಮೆದೆಯೊಳಗೆ ನೆನಪುಗಳನ್ನು ಬೆದಕಿ ಘಾಸಿಗೊಂಡರು. ಕೇಳುವುದನ್ನು ಕೇಳಿದರು, ಹೇಳುವುದನ್ನು ಹೇಳಿದರು. ಅಂತಿಮ ಚರಣದಲ್ಲಿ ಹತಾಶರಾಗಿ ಕೈಚೆಲ್ಲಿದರು.

ಆದರೆ ಅವನ ಸಮಕಾಲೀನ ಪೊಲೀಸ್ ಅಧಿಕಾರಿಗಳಲ್ಲಿ ಕೆಲವರು ಮುಕ್ತವಾಗಿ ಮಾತಾಡಿದರು, ಕೆಲವರು ‘ಆ ನಟೋರಿಯಸ್ ಕ್ರಿಮಿನಲ್ ಬಗ್ಗೆ ಬರೆಯುವ ಉದ್ದೇಶ ವೇನು!’ ಎಂದು ಪ್ರಶ್ನಿಸಿದರು. ಕಾರಣ ಅವನೂ ಪೊಲೀಸೆ! ಒಂದೆರಡು ವರ್ಷಗಳ ಕ್ಲುಪ್ತಾವಧಿಯಲ್ಲಿ ಹತ್ತಾರು ಕ್ರಿಮಿನಲ್ ಕೃತ್ಯಗಳನ್ನು ಮೈಮೇಲೆಳೆದುಕೊಂಡವನು, ಮೂರ್ನಾಲ್ಕು ಜಿಲ್ಲೆಗಳಲ್ಲಿನ ಹತ್ತಾರು ಊರುಗಳಲ್ಲಿ ಚಂಡಮಾರುತದಂತೆ ಸುಳಿದಾಡಿದವನು, ತನ್ನ ನಿರ್ದಯಿ ಕೃತ್ಯಗಳಿಂದ ಅಧಿಕಾರಿಗಳ ಧನಿಕರ ನೆಮ್ಮದಿ ಹಾಳು ಮಾಡಿದವನು, ವ್ಯವಸ್ಥೆ ಮೇಲಿನ ಅಸದಳ ಕೋಪ ಪ್ರತಾಪವನ್ನು ತನ್ನ ಮಾತೃಸಂಸ್ಥೆ ಪೊಲೀಸ್ ವ್ಯವಸ್ಥೆ ಮೇಲೆ ಝಳಪಿಸಿದವನು, ಅವನು ಎನ್‍ಕೌಂಟರ್ ಆಗಲೆಂದೇ ಜನಿಸಿದವನು, ಎನ್‍ಕೌಂಟರಲ್ಲಿ ಸಾಯಲು ನಿಶ್ಚಯಿಸಿದ್ದವನು, ಕೊನೆಗೆ ಹಾಗೆ ಆದವನು ಮೇರಾವತ್ ಭೀಮ್ಲಾನಾಯಕ್!

ಆ ಕ್ಷಣದಿಂದ ನನ್ನಲ್ಲಿದ್ದ ಮಾಹಿತಿಯನ್ನು ಕಬಳಿಸುತ್ತ ಭೀಮ್ಲಾ ಬೆಳೆದು ಅಂತರಂಗವನ್ನು ವ್ಯಾಪಿಸಿದ. ತನ್ನ ಪುನರಾವತಾರಕ್ಕೆ ಸೂಕ್ತ ಅಭಿವ್ಯಕ್ತಿಗೆ ಹಂಬಲಿಸಿದ, ಅಂಗಲಾಚಿದ. ಸರಿದಪ್ಪುಗಳ ಅಡಕತ್ತರಿಯಲ್ಲಿ ನನ್ನನ್ನು ಸಿಲುಕಿಸಿದ. ಅವನು ಕುಂಡ್ರಿಸಿದ ಉರಿಯ ಉಯ್ಯಾಲೆ ಒಳ್ಳೆಯದು ಕೆಟ್ಟದ್ದರ ನಡುವೆ ಹೊಯ್ದಾಡಲಾರಂಭಿಸಿತು. ಸಾಂತ್ವನ ಗೊಳ್ಳದ ಸೃಜನಶೀಲ ಮನಸ್ಸು ಮೂರು ದಶಕಗಳ ಹಿಂದಿನ ವೃತ್ತಪತ್ರಿಕೆಗಳಲ್ಲಿ ಆ ಎನ್‍ಕೌಂಟರ್‍ಗೆ ಸಂಬಂಧಿಸಿದ ಮಾಹಿತಿಯನ್ನು ಜಾಲಾಡಿತು. ಆ ಎನ್‍ಕೌಂಟರಲ್ಲಿ ಭಾಗಿಯಾದ ಶಂಕರ ಬಿದರಿಯವರನ್ನೊಳಗೊಂಡಂತೆ ಅವರ ಸಹೋದ್ಯೋಗಿಗಳನ್ನು ಸಂದರ್ಶಿಸಲು ಪ್ರೇರೇಪಿಸಿತು. ಅವರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎಸ್. ಚಂದ್ರಶೇಖರ್ ತಮ್ಮ ತೊಡೆ ಮೇಲಿದ್ದ ಬುಲೆಟ್ ಗಾಯ ತೋರಿಸಿದರು, ಅವರ ಶೀಮತಿ ಅಯ್ಯೋ ಇವರು ಕೈಬಿಟ್ರೂಂತ ಅನಕೊಂಡಿದ್ವಿ’ ಅಂದರು. ನಿವೃತ್ತ ಹೆಡ್‍ಕಾನ್ಸ್ ಸ್ಟೇಬಲ್ ರಾಮಚಂದ್ರರೆಡ್ಡಿ ಅಂಗಿ, ಮೈಯಂಗಿ ಕಳಚಿ ವೀರಗಲ್ಲಿನಂಥ ತಮ್ಮ ಜಠರ ಪ್ರದೇಶ ತೋರಿಸಿದರು. ಅಲ್ಲಿ ಎರಡು ಕಡೆ ಗಾಯದ ಆಳ ಗುರುತುಗಳು ಇದ್ದವು. ವೈದ್ಯರು ಸಣ್ಣ ಕರುಳ ಉದ್ದವನ್ನು ಹ್ರಸ್ವಗೊಳಿಸಿ ಹೊಕ್ಕಿದ್ದ ಎರಡು ಬುಲೆಟ್ಟುಗಳನ್ನು ಹೊರ ತೆಗೆದು ಬದುಕಿಸಿದ್ದರು. ಅದರ ಪರಿಣಾಮ ಒಂದು ಬಿಸ್ಕತ್ತನ್ನು ಸಹಜವಾಗಿ ಜೀರ್ಣಿಸುವ ಶಕ್ತಿ ಅವರ ಕರುಳುಗಳಿಗೆ ಇರಲಿಲ್ಲ.

ಆ ಎಲ್ಲಾ ಗುರುತುಗಳ, ಸಾವುಗಳ ರೂವಾರಿ ಭೀಮ್ಲಾನಾಯಕ್! ಕೆಡುಕುತನದ ನಂಜು ಅವನ ದೇಹದ ತುಂಬೆಲ್ಲ ವ್ಯಾಪಿಸಿತ್ತು, ಅವನ ಮನಸ್ಸನ್ನು ಪ್ರಳಯಾಂತಕಾರಿ ಯಾಗಿಸಿತ್ತು, ಆದರೂ ಅವನಲ್ಲಿ ಸ್ವಲ್ಪೇ ಸ್ವಲ್ಪ ಒಳ್ಳೆತನವಿತ್ತು, ಅದು ವಿಜಯಲಕ್ಷ್ಮಿ ರೂಪದಲ್ಲಿ. ಆ ಒಳ್ಳೆತನವನ್ನು ನನ್ನ ಹೃದಯದ ಕಣ್ಣಿಗೆ ಬೀಳಿಸಿದ್ದು ನನ್ನ ಪ್ರವಾಸ ಮತ್ತು ಅಲ್ಲಿನ ಅವನ ವಾರಿಗೆಯವರು, ಕುಲಸಂಬಂಧಿಗಳು, ಅಯ್ಯೋ ಪಾಪ ಎಂದು ಮರುಗಿದ ಅವನ ಪೊಲೀಸ್ ಕೊಲಿಗ್‍ಗಳು! ಹಾಗೆಯೆ ನಮ್ಮ ಅಭಿಮಾನದ ಶಂಕರ ಬಿದರಿಯವರು. ಹೀರೋ ವಿಲನ್‍ಗಳಿಲ್ಲದ ಈ ಕಾದಂಬರಿನ ಬರೆಯೋದಕ್ಕೆ ನಾನು ತುಂಬಾ ರಿಸ್ಕ್ ತಗೊಂಡಿರುವೆ, ಆಂಧ್ರ ಮತ್ತು ತೆಲಂಗಾಣ ಉಭಯ ರಾಜ್ಯಗಳ ಮೂರ್ನಾಲ್ಕು ಜಿಲ್ಲೆಗಳಲ್ಲಿ ಸುತ್ತಾಡಿರುವೆ, ಅದೂ ಕರೋನಾ ವಿಸ್ತøತವಾಗಿದ್ದ ಸಾಮಾಜಿಕ ಸನ್ನಿವೇಶದಲ್ಲಿ. ಅಲ್ಲೆಲ್ಲ ಛದ್ಮವೇಷಧಾರಿಯಾದೆ, ಸ್ವಯಂ ಬ್ಯುಲ್ಡಪ್ ಕೊಟ್ಟುಕೊಂಡೆ, ಏನೆಲ್ಲ ನೋಡಿದೆ, ಯಾರ್ಯಾರದೊ ಜೊತೆ ಒಡನಾಡಿದೆ.. ಹೀಗೆ ಏನೆಲ್ಲಾ ಸರ್ಕಸ್ ಮಾಡಿ ಭೀಮ್ಲಾನ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡೆ.

ಪಟ್ಟಾಗಿ ಎರಡು ಮೂರು ತಿಂಗಳುಗಳ ಕಾಲ ಪಟ್ಟಾಗಿ ಕುಳಿತು ಈ ಕಾದಂಬರಿ ಪೂರೈಸಿದೆ. ಇವರು ಇದನ್ನು ತಲೆಯೊಳಗೆ ತುಂಬಿದವರು, ಎನ್‍ಕೌಂಟರನ ನನ್ನ ತಲೆಯೊಳಗೆ ತುಂಬಿದವರು. ಅಲ್ಲೆಲ್ಲ ತಿರುಗಾಡಿ ಮಾಹಿತಿ ಸಂಗ್ರಹಿಸಿರಿ ಎಂದು ಹೇಳಿದವರು, ಸರಿ ಅನ್ನಿಸಿದರೆ ಬರೀರಿ ಅಂದವರು. ಅದಕ್ಕೆ ಅಗತ್ಯವಿದ್ದ ನೆರವು ಸಲಹೆ ಸೂಚನೆ ನೀಡಿ ಹುರಿದುಂಬಿಸಿದವರಾದ ಸನ್ಮಾನ್ಯ ಶಂಕರ ಬಿದರಿ ಐಪಿಎಸ್ ಅವರಿಗೆ, ಆ ಅವಧಿಯಲ್ಲಿ ಬಳ್ಳಾರಿಲಿದ್ದ ಅನುಗಾಲದ ಗೆಳೆಯ ಹರಿಯಬ್ಬೆ ಪ್ರೇಂಕುಮಾರ್, ನನ್ನ ಜೊತೆ ಉಭಯ ರಾಜ್ಯಗಳಲ್ಲಿ ತಿರುಗಾಡಿದ ಕುಷ್ಟಗಿಯ ಪ್ರಮೋದ ತುರ್ವಿಹಾಳ್, ಎಲ್ಲಂದರಲ್ಲಿ ಕಾರ್ ಓಡಿಸಿದ ಚಾಲಕ ಬಂಡ್ರಿ ವೀರೇಶ್ ,ಸ್ವ್ಯಾನ್ ಪ್ರಿಂಟರ್ಸ್‍ನ ಸಹೋದರ ಕೃಷ್ಣಮೂರ್ತಿ ಮತ್ತವರ ಸಿಬ್ಬಂದಿ ಬಂಧುಗಳಿಗೆ, ಬಹಳ ದಿವಸಗಳ ನಂತರ ಪ್ರಕಟಿಸುತ್ತಿರುವ ನಾಡಿನ ಪ್ರತಿಷ್ಠಿತ ಪ್ರಕಾಶನ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಮತ್ತು ಶ್ರೀಮತಿ ಪ್ರಭಾ ಅವರಿಗೆ, ಮುಖಪಟ ರಚಿಸಿದ ಅಭಿಜಾತ ಕಲಾವಿದ ಟಿ.ಎಫ್. ಹಾದಿಮನಿ, ಮತ್ತು ನಿಮ್ಮೆಲ್ಲರಿಗೆ ಕೃತಜ್ಞತೆಗಳು.

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...