ಎಂದಿಗೂ ಒಳಗೊಳ್ಳದ ಅಕಾಡೆಮಿಕ್ ವಲಯಗಳು

Date: 30-12-2021

Location: ಬೆಂಗಳೂರು


‘ವಿಶ್ವವಿದ್ಯಾನಿಯ, ಸಾಹಿತ್ಯ ಸಮ್ಮೇಳನಗಳ ವಿಚಾರ ಸಂಕಿರಣಗಳಲ್ಲಿ ನನಗೆ ಸ್ಥಾನವಿರಲಿಲ್ಲ. ಯಾವುದೇ ಒಂದು ಕೃತಿಯನ್ನು ವಿಮರ್ಶಿಸುವಾಗ ಆ ಕೃತಿಯ ಬಗ್ಗೆ ಬಂದಿರುವ ವಿಮರ್ಶೆಯನ್ನು ಪ್ರಸ್ತಾಪಿಸಿ, ಅವಲೋಕಿಸಿ ತಮ್ಮ ವಿಮರ್ಶೇ ಮಂಡಿಸಬೇಕಾದ್ದು ಶಾಸ್ತ್ರೀಯವಾಗಿ ಅಪೇಕ್ಷಣೀಯ’ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರು ತಮ್ಮ ಪತ್ರತಂತು ಮಾಲಾ ಅಂಕಣದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ಅಸಮಾನತೆಯ ಕುರಿತು ಬರೆದಿದ್ದಾರೆ.

ನಾನು ಮನೆಯೊಳಗೂ ಹೊರಗೂ ಈ ದೇಶದ ಆಚಾರಕ್ಕನುಗುಣವಾಗಿ ‘ಅಸ್ಪೃಶ್ಯ'ನಾಗೇ ಬೆಳೆದವನು. ನನ್ನ ವೃತ್ತಿ, ಬದುಕಿನ ಬಗೆಗಿನ ಧೋರಣೆ, ಎಲ್ಲವನ್ನೂ ಪ್ರಶ್ನಿಸುವುದು ಇತ್ಯಾದಿ ಕಾರಣಗಳಿಂದಾಗಿ ನಾನು ನನ್ನ ಮನೆ ಮತ್ತು ಬಂಧೂವಲಯದಲ್ಲಿ ‘ಅಸ್ಪೃಶ್ಯ'ನಾಗೇ ಇದ್ದೆ. ಒಂದು ರೀತಿಯಲ್ಲಿ ಕಾಫ್ಕಾನ ‘ಮೆಟಮಾರ್ಫಸಿಸ್' ನಾಯಕನಿಗೆ ನನನ್ನೇ ಹೋಲಿಸಿಕೊಂಡು ವಿಚಿತ್ರ ಅಸ್ಮಿತೆಯಿಂದ ಸಂತೋಷಪಡುತ್ತದ್ದೆ. ಮನೆಗೆ ದೊಡ್ಡಮಗನಾಗಿ ನನ್ನ ಜವಾಬ್ದಾರಿಗಳನ್ನು ನಿರ್ಲಕ್ಷಿಸಿರಲಿಲ್ಲವಾಗಿ ಅಷ್ಟರಮಟ್ಟಿಗೆ ಮನೆ ಮಂದಿಗೆ ಸಹ್ಯನಾಗಿದ್ದೆ. ಸಾಹಿತ್ಯ ವಲಯದಲ್ಲೂ ಅಸ್ಪೃಶ್ಯನನ್ನಾಗಿಯೇ ಕಾಣಲಾಗುತ್ತಿತ್ತು. ವಿಶೇಷವಾಗಿ ಅಕಾಡೆಮಿಕ್ ವಲಯಗಳಲ್ಲಿ. ಇದಕ್ಕೆ ನನ್ನ ಹೆಸರಿನ ಮುಂದೆ ‘ಎಂ.ಎ’ ಎಂಬ ಉತ್ತರ ಪ್ರತ್ಯೆಯ ಇಲ್ಲದಿರುವುದು ಕಾರಣವಿದ್ದೀತು. ನಾನು ಸಾಕಷ್ಟು ವಿಮರ್ಶೆ ಬರೆದಿದ್ದರೂ ಅಕಾಡೆಮಿಕ್ ವಲಯಗಳು ಅದನ್ನು ಗಂಭೀರವಾಗಿ ತೆಗೆದುಕೊಂಡಂತೆ ನನಗೆ ಕಂಡಿರಲಿಲ್ಲ.

ವಿಶ್ವವಿದ್ಯಾನಿಯ, ಸಾಹಿತ್ಯ ಸಮ್ಮೇಳನಗಳ ವಿಚಾರ ಸಂಕಿರಣಗಳಲ್ಲಿ ನನಗೆ ಸ್ಥಾನವಿರಲಿಲ್ಲ. ಯಾವುದೇ ಒಂದು ಕೃತಿಯನ್ನು ವಿಮರ್ಶಿಸುವಾಗ, ತಹಲ್ವರೆಗೆ ಆ ಕೃತಿಯ ಬಗ್ಗೆ ಬಂದಿರುವ ವಿಮರ್ಶೆಯನ್ನು ಪ್ರಸ್ತಾಪಿಸಿ, ಅವಲೋಕಿಸಿ ತಮ್ಮ ವಿಮರ್ಶೇ ಮಂಡಿಸಬೇಕಾದ್ದು ಶಾಸ್ತ್ರೀಯವಾಗಿ ಅಪೇಕ್ಷಣೀಯ. ಆದರೆ ನಮ್ಮ ನವ್ಯೋತ್ತರ ವಿಮರ್ಶೆ ಇದನ್ನು ಮಾನ್ಯ ಮಾಡದಂತೆ ತೋರುತ್ತದೆ. ಹೀಗಾಗಿ ನನ್ನ ವಿಮರ್ಶಾ ಲೇಖನಗಳಿಗೆ ಪ್ರಸ್ತಾಪ, ಚರ್ಚೆಯ ಸ್ಥಾನವೂ ಸಿಗಲಿಲ್ಲ. ನನ್ನ ವಿಮರ್ಶೆಯನ್ನೇ ತಮ್ಮದೆಂಬಂತೆ ಬರೆದುಕೊಂಡ ನಿದರ್ಶನಗಳಿವೆ. ಶ್ರೀ ಮುರಳೀಧರ ಉಪಾಧ್ಯರ ಪತ್ರವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಉಪಾಧ್ಯರ ಸಂಪಾದಕತ್ವದಲ್ಲಿ ಶ್ರೀಅನಂತಮೂರ್ತಿಯವರ ಬಗ್ಗೆ ತಂದ ಗ್ರಂಥದಲ್ಲಿ ನನ್ನ ಒಂದು ಲೇಖನವೂ ಸ್ಥಳ ಪಡೆಯಲಿಲ್ಲ. ನಾನು ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ, ಅನಂತ ಮೂರ್ತಿಯವೆರ ಕಥೆಗಳು ಹೀಗೆ ‘ಅನಂತ ಸಾಹಿತ್ಯ' ಕುರಿತು ಹಲವಾರು ವಿಮರ್ಶಾ ಲೇಖನಗಳನ್ನು ಬರೆದಿದ್ದು ಅದಾವುದೂ ಆ ಗ್ರಂಥದಲ್ಲಿ ಸ್ಥಾನಗಳಿಸಲು ಉಪಾಧಧ್ಯರಿಗೆ ಅಯೋಗ್ಯವೆಂದು ಕಂಡಿದ್ದು ನನಗೆ ಬೇಸರ ಉಂಟು ಮಾಡಿತ್ತು. ಅದನ್ನು ವ್ಯಕ್ತಪಡಿಸಿ ಬರೆದ ಪತ್ರಕ್ಕೆ ಮುರಳೀಧರ ಉಪಾಧ್ಯರು ಉತ್ತರ ಕೊಡುವ ಸೌಜನ್ಯ ತೋರಿದ್ದರು.

ಪ್ರೊ.ಮುರಳೀಧರ ಉಪಾಧ್ಯ
ನಲ್ಮೆಯ ಶ್ರೀ ಜಿ.ಎನ್.ರಂಗನಾಥ ರಾವ್-ರಿಗೆ,
ವಂದನೆಗಳು

ನಿಮ್ಮ 8-8-2000ದ ಪತ್ರ ತಲುಪಿದೆ. ‘ಡಾ.ಯು.ಆರ್.ಅನಂತ ಮೂರ್ತಿ' ಗ್ರಂಥದಲ್ಲಿ ನಿಮ್ಮ ಲೇಖನವಾಗಲಿ ಲೇಖನ ಮಾಹಿತಿ(ಟಿಪ್ಪಣಿ)ಯನ್ನಾಗಲೀ ಉದೇಶಪೂರ್ವಕವಾಗಿ ಕೈಬಿಟ್ಟಿದ್ದಲ್ಲ. ನಿಮಗೆ ಬೇಸರವಾಗಿರುವುದು ಸಹಜ. ನನ್ನ ಗ್ರಂಥದ ಮಾಹಿತಿ ಅಸಮಗ್ರವಾದುದಕ್ಕೆ ನನಗೆ ಬೇಸರವಾಗಿದೆ.

* ಬೆಂಗಳೂರಿನಿಂದ ಅಗ್ರಹಾರ ಕೃಷ್ಣಮೂರ್ತಿ ಅವರು ಕಳುಹಿಸಿದ ಜೆರಾಕ್ಸ್ ಲೇಖನ ಕಡತದಲ್ಲಿ ನಿಮ್ಮ ಯಾವ

ಲೇಖನವೂ ಇರಲಿಲ್ಲ.

* ಹಂಪಿ ಕನ್ನಡ ವಿ.ವಿ.ಯ ಪ್ರಸಾರಾಂಗ 1995ರಲ್ಲಿ ಪ್ರಕಟಿಸಿದ ‘ಯು.ಆರ್.ಅನಂತ ಮೂರ್ತಿ. (ಲೇ:ಮೋಹನ ಕುಂಚಾರ್)
ಪುಸ್ತಕದ ಹೆಚ್ಚಿನ ಓದಿಗಾಗಿ ಲೇಖನ ಸೂಚಿಯಲ್ಲಿ 65 ಲೇಖನಗಳ ಉಲ್ಲೇಖ ಇದೆ. ನಿಮ್ಮ ಒಂದು ಲೇಖನವೂ ಅಲ್ಲಿ
ಉಲ್ಲೇಖಗೊಂಡಿಲ್ಲ. ಈ ಪುಸ್ತಕದಲ್ಲಿ ಬಿಟ್ಟುಹೋದ ಮಾಹಿತಿ ಇದೆಯೇ ಎಂದು ವಿಚಾರಿಸಿದ್ದಕ್ಕೆ ಹಂಪಿಯ
ಪ್ರಾಧ್ಯಾಪಕ ಮಿತ್ರ ಸಹಕರಿಸಲಿಲ್ಲ.

* ಅನಂತಮೂರ್ತಿಯವರನ್ನು ಕುರಿತ ಲೇಖನಗಳ ಸಂಗ್ರಹ ಸರ್ವಮಂಗಳಾ ಅವರಲ್ಲಿ ಇದೆ ಎಂದು ಕೇಳಿದ್ದೆ. ಅವರು ನನ್ನ
ಪತ್ರಗಳಿಗೆ ಉತ್ತರಿಸಲಿಲ್ಲ. ಅನಂತ ಮೂರ್ತಿಯವರ ಬಳಿಯಲ್ಲಿ ತನ್ನ ಕುರಿತು ಬಂದ ಲೇಖನಗಳ ಪಟ್ಟಿ ಇರಲಿಲ್ಲ.
ಕೆಲವು ಇಂಗ್ಲಿಷ್ ಲೇಖನಗಳನ್ನಷ್ಟೆ ಅವರು ನೀಡಿದರು.

* ‘ಪ್ರಜಾವಾಣಿ' ಸಂಪಾದಕೀಯದ ಬಗ್ಗೆ ನಾನು ಬರೆದ ಪತ್ರಕ್ಕೆ ನೀವು ಉತ್ತರ ನೀಡಿ, ಪೂರಕ ಮಾಹಿತಿ ನೀಡಿದ್ದಿದ್ದರೆ ...
ಈ ತಪ್ಪು ತಪ್ಪುತ್ತಿತ್ತು. ನಿಮ್ಮನ್ನು ಸಂಪರ್ಕಿಸಲು ಆಗ ಮಂಗಳೂರಲ್ಲಿದ್ದ ಪೂರ್ಣಿಮಾ ಅವರನ್ನು ವಿನಂತಿಸಿದೆ. ಬೆಂಗಳೂರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಮೀಟಿಂಗಿಗೆ ಬಂದಗ ನಿಮ್ಮನ್ನು ಸಂಪರ್ಕಿಸುವ ಪ್ರಯತ್ನಿಸಿದ್ದೆ. ಸಂಪರ್ಕ ಸಿಗಲಿಲ್ಲ.

* ತನ್ನ ಎಂಟು ಲೇಖನಗಳ ಉಲ್ಲೇಖ ಬಿಟ್ಟುಹೋಗಿದೆ ಎಂದು ಡಾ.ನಾಡಿಗರೂ ಪತ್ರ ಬರೆದಿದ್ದಾರೆ..
* ನಿಮ್ಮ ಲೇಖನಗಳ- ‘ಭಾರತೀಪುರ', ‘ಸಂಸ್ಕಾರ'ಜೆರಾಕ್ಸ್ ಪ್ರತಿಯ ವಿವರಗಳೊಂದಿಗೆ ಕಳುಹಿಸಿರಿ. ಕೆಲವು ಸಂಶೋಧಕರು
ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಅವರಿಗೆ ಮಾಹಿತಿ ನೀಡುತ್ತೇನೆ.

* ಮಾಹಿತಿ ತಂತ್ರಜ್ಞಾನ ಯುಗದಲ್ಲಿರುವ ನಾವು ಕೆಲವು ಮಾಹಿತಿಗಳಿಗಾಗಿ ಎಷ್ಟು ಪ್ರಯತ್ನ ಮಾಡಿದರೂ ಸಿಗುವುದಿಲ್ಲ. ನಮ್ಮ
ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳ ಅಸಹಕಾರ, ಔದಾಸೀನ್ಯ ಇದಕ್ಕೆ ಮುಖ್ಯ ಕಾರಣ.

* ‘ಬಿ.ವಿ.ಕಾರಂತ'ಗ್ರಂಥದಲ್ಲಿ ನಾನು ನಿಮ್ಮ ಲೇಖನ ಪ್ರಕಟಿಸಿದ್ದೆ. ‘ಅನಂತ ಮೂರ್ತಿ' ಗ್ರಂಥದ ಸಂಪಾದಕೀಯದಲ್ಲಿ’
ಪ್ರಜಾವಾಣಿ ಸಂಪಾದಕೀಯ(ಜ್ಞಾನಪೀಠ) ಬಳಸಿಕೊಂಡಿದ್ದೇನೆ. ಮಾಹಿತಿ ಕೊರತೆಯಿಂದಾಗಿ ಆದ ತಪ್ಪಿಗಾಗಿ
ವಿಷಾದಿಸುತ್ತೇನೆ.

ಈಗ ಏನು ಮಾಡುತ್ತಿರುವಿರಿ?
ನಿಮ್ಮ ವಿಶ್ವಾಸದ
ಮುರಳೀಧರ ಉಪಾಧ್ಯ

-ಈ ಪತ್ರವೇ ನನ್ನ ಅಸಮಾಧಾನಗಳಿಗೆ ಸ್ವವಿವರಣಾತ್ಮಕವಾಗಿರುವಾಗ ನಾನು ಏನು ತಾನೆ ಮಾಡಲುಸಾಧ್ಯ?

ಇಪ್ಪತ್ತೊಂದನೆ ಶತಮಾನದ ಉದಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ 'ಇಪ್ಪತ್ತನೇ ಶತಮಾನದ ಸಾಹಿತ್ಯ ವಿಮರ್ಶೆ' ಎಂಬ ಬೃಹತ್ ಗ್ರಂಥವನ್ನು ಪ್ರಕಟಿಸಿತು. ಆ ಕಾಲಘಟ್ಟದಲ್ಲಿ ಕನ್ನಡದ ಕಥಾ ಸಾಹಿತ್ಯ, ನಾಟಕ ಸಾಹಿತ್ಯ ಮತ್ತು ರಂಗಭೂಮಿ ಕುರಿತು ನನ್ನ ನಾಲ್ಕು ವಿಮರ್ಶಾ ಸಂಕಲನಗಳು ಹಾಗೂ ಹಲವಾರು ಬಿಡಿ ಲೇಖನಗಳು ಪ್ರಕಟವಾಗಿದ್ದವು. ಅಕಾಡೆಮಿ ಆ ಗ್ರಂಥದಲ್ಲಿ ನನ್ನ ಒಂದು ಲೇಖನಕ್ಕೂ ‘ಸ್ಥಾನ/ಸ್ಥಳ' ಸಿಗಲಿಲ್ಲ, ಆಗ ಹೆಚ್ಚು ಚರ್ಚಿತವಾಗಿದ್ದ ಅನಂತ ಮೂರ್ತಿಯವರ ‘ಸಂಸ್ಕಾರ', ‘ಅವಸ್ಥೆ', ಗಿರಿಯವರ ‘ಗತಿಸ್ಥಿತಿ' ಆರ್ಯರ ‘ಗುರು;',ಶಾಂತಿನಾಥ ದೇಸಾಯಿಯವರ ‘ಮುಕ್ತಿ', ‘ವಿಕ್ಷೇಪ', ಅನಕೃ ಕಾದಂಬರಿಗಳು, ಲಂಕೇಶರ 'ಬಿರುಕು', ‘ಸಂಕ್ರಾಂತಿ', ಚಿತ್ತಾಲರ ‘ಶಿಕಾರಿ',ಕನ್ನಡದಲ್ಲಿ ಅಸಂಗತ ನಾಟಕಗಳ ಹುಟ್ಟು ಮತ್ತು ಬೆಳವಣಿಗೆ ಈ ಯಾವ ನನ್ನ ವಿಮರ್ಶಾ ಲೇಖನಗಳನ್ನೂ ಈ ಗೃಂಥದ ಸಂಪಾದಕರು ಪರಿಗಣಿಸಲಿಲ್ಲ. ಅವರ ಮಾನದಂಡವೇನಿತ್ತೋ ತಿಳಿದು ಬರಲಿಲ್ಲ. ಈ ಅವಧಿಯಲ್ಲಿ ಕನ್ನಡದ ನವ್ಯ ಗದ್ಯದ ಬಗ್ಗೆ ಹೆಚ್ಚು ಬರೆದವನು ನಾನು. ಗ್ರಂಥದಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸುವ ಸೌಜನ್ಯವೂ ಅದರಲ್ಲಿ ಕಂಡುಬರಲಿಲ್ಲ. ಇಪ್ಪತ್ತನೇ ಶತಮಾನದ ಕನ್ನಡ ವಿಮರ್ಶೆಯ ಆ್ಯಂಥಾಲಜಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಸಂಪಾದಕರು ಆ ಗ್ರಂಥಕ್ಕೆ ಹೆಸರಿಸದಿದ್ದರೆ ನನ್ನ ತಕರಾರೇನೂ ಇರುತ್ತಿರಲಿಲ್ಲ. ಇಪ್ಪತ್ತನೆಯ ಶತಮಾನದ ವಿಮರ್ಶೆ ಎಂದ ಮೇಲೆ ಆ ಅವಧಿಯಲ್ಲಿ ಬಂದ ಪ್ರಮುಖ ಪುಸ್ತಕಗಳ ಎಲ್ಲ ವಿಮರ್ಶೆಯನ್ನು ಗಣನೆಗೆ ತೆಗೆದುಕೊಳ್ಳಬೇಕಲ್ಲವೆ? ಇದನ್ನು ದಿವ್ಯ ನಿರ್ಲಕ್ಷ್ಯ ಎನ್ನಬೇಕೆ ಅಥವಾ ಪೆಡುಸಿನ ನಿಲುವು ಎನ್ನಬೇಕೆ? ಏನೇ ಆದರೂ ಇದರಿಂದ ಸಾಹಿತ್ಯ ಚರಿತ್ರೆಗೆ ಅಪಚಾರವಾದಂತಾಗುವುದಿಲ್ಲವೆ? ಈಚಿನ ದಿನಗಳಲ್ಲಿ ನನ್ನ ಅನುವಾದಗಳು, ವಿಶೇಷವಾಗಿ ಗಾಂಧಿ ಸಾಹಿತ್ಯ ಕುರಿತ ಅನುವಾದಗಳು ಹಾಗೂ ಟಾಲ್ ಸ್ಟಾಯ್, ಶೇಕ್ಸ್ ಪಿಯರ್, ಲಾರೆನ್ಸ್ ಅನುವಾದಗಳ ಬಗ್ಗೆಯೂ ಹೀಗೆ ಆಗಿದೆ.
ಈ ಅಂಕಣದ ಹಿಂದಿನ ಬರಹಗಳು:
ಪತ್ರಗಳನ್ನು ಬರೆಯುವುದು ನನ್ನ ವೃತ್ತಿಯ ಒಂದು ಕ್ರಮವನ್ನಾಗಿ ರೂಢಿಸಿಕೊಂಡೆ
ಅಂತ:ಸತ್ವಕ್ಕೆ ಪ್ರಾಣವಾಯು ತುಂಬುತ್ತಿದ್ದ ಪತ್ರಗಳು
‘ಸಾಹಿತ್ಯ ಕೃತಿಯೊಂದರ ವಿಮರ್ಶೆಯ ಮಾನದಂಡ ಅದರಲ್ಲೇ ಅಂತರ್ಗತವಾಗಿರುತ್ತದೆ’
ಹಿರಿಯರ ವಿಮರ್ಶಾತ್ಮಕ ಪತ್ರಗಳಿಂದ ಓದುಗರ ಅಪೇಕ್ಷೆ ತಿಳಿಯುವಲ್ಲಿ ಸಹಾಯವಾಗಿದೆ
‘ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ’: ಜಿ.ಎನ್. ರಂಗನಾಥರಾವ್

‘ಮರಳಿ ಯತ್ನವ ಮಾಡು' ಎನ್ನುತ್ತಾ ಉತ್ಸಾಹ ತುಂಬುವ ಆಪ್ತರ ಪತ್ರಗಳು
ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...