ಇಂಗ್ಲಿಷ್ ಗೀತಗಳ ಪಯಣ

Date: 06-09-2020

Location: ಬೆಂಗಳೂರು


ಕನ್ನಡ ನವೋದಯ ಕಾವ್ಯಕ್ಕೆ ನಾಂದಿ ಹಾಡಿದ್ದು ಬಿ.ಎಂ.ಶ್ರೀಯವರು ಭಾಷಾಂತರಿಸಿದ ’ಇಂಗ್ಲಿಷ್‌ ಗೀತೆಗಳು’. ಶ್ರೀಯವರ ಅನುವಾದದ ಸ್ವರೂಪ, ಅದರ ಮಹತ್ವ ಹಾಗೂ ಬೀರಿದ ಪ್ರಭಾವಗಳನ್ನು ಚರ್ಚಿಸಿರುವ ವಿಮರ್ಶಕಿ-ಲೇಖಕಿ ಡಾ. ತಾರಿಣಿ ಶುಭದಾಯಿನಿ ಅವರು ಈ ಬರೆಹದಲ್ಲಿ ಅನುವಾದ ಪ್ರಕ್ರಿಯೆ ಕುರಿತು ಚರ್ಚಿಸಿದ್ದಾರೆ.

ಬಿ.ಎಂ.ಶ್ರೀಕಂಠಯ್ಯನವರ ಅನುವಾದಿತ ಕವಿತೆಗಳ ಸಂಗ್ರಹವಾದ ’ಇಂಗ್ಲಿಷ್ ಗೀತಗಳು’ ಒಂದು ಚಾರಿತ್ರಿಕ ಮಹತ್ವವುಳ್ಳ ಕೃತಿ. ಶ್ರೀಯವರು ಇಂಗ್ಲಿಷ್ ಅಧ್ಯಾಪಕರಾಗಿದ್ದು ಆನಂತರ ಕನ್ನಡವನ್ನೂ ಬೋಧಿಸಿ ಎರಡೂ ಭಾಷೆಗಳನ್ನೂ ಸಮಾನವಾಗಿ ಅನುಸಂಧಾನ ಮಾಡಿದ ಕಾರಣದಿಂದಲೋ ಏನೋ ಅವರ ಇತರೆ ಕೃತಿಗಳಿಗಿಂತ ಮಿಗಿಲಾಗಿ ಅವರ ಅನುವಾದಿತ ಕೃತಿಯು ಮಹತ್ವ ಪಡೆದುಕೊಂಡಿದೆ. ವಸಾಹತು ಶಿಕ್ಷಣದಿಂದ ಪಲ್ಲಟಗೊಂಡ ಭಾಷಾನೀತಿಗಳು ನಾಡಿಗರನ್ನು ತಮ್ಮ ಭಾಷೆಯ ಬಗೆಗೆ ಮರುಯೋಚನೆ ಮಾಡುವ ಸಂಧಿ ಕಾಲದಲ್ಲಿ ಶ್ರೀಕಂಠಯ್ಯನವರ ಕವಿತೆಯ ಅನುವಾದಗಳು ಬಂದವು. ಶ್ರೀಯವರು ಈ ಸಂಧಿಕಾಲದಲ್ಲಿ ಭಾಷೆ, ಸಂಸ್ಕೃತಿಗಳ ಸಮನ್ವಯದ ಸಾಧನೆಯನ್ನು ಆಶಿಸಿ ಅದನ್ನೊಂದು ಸಾಮರಸ್ಯದ ನೆಲೆಗಟ್ಟಿಗೆ ತಂದು ನಿಲ್ಲಿಸುವಲ್ಲಿ ಕ್ರಿಯಾಶೀಲರಾದರು. ಶ್ರೀಯವರ ಸ್ವಂತ ರಚನೆಯ ಕವಿತೆಗಳು ಕನ್ನಡದ ಒಂದು ಪರಂಪರೆಯ ಭಾಗವಾಗಿ ಬಂದಿದ್ದರೆ, ಅವರ ಇಂಗ್ಲಿಷ್ ಗೀತಗಳು ಕನ್ನಡ ನವೋದಯದ ಹೊಸ ಭಾಷ್ಯವನ್ನೇ ಬರೆಯಬಲ್ಲ ಕೃತಿಯಾಯಿತು. ಇಂಗ್ಲಿಷ್ ಗೀತಗಳು ಕೃತಿ ಹಲವುತನದ ಚೆಲುವಿಕೆಯನ್ನು ಮೈಗೂಡಿಸಿಕೊಂಡಿದ್ದರಿಂದಲೋ ಏನೊ ಅದರ ಸೊಬಗು ಮಿಗಿಲಾದುದಾಗಿತ್ತು. ಅಷ್ಟೇ ಏಕೆ ಶ್ರೀಯವರ ’ಅಶ್ವತ್ಥಾಮನ್’ ಕೃತಿಯು ಅನುವಾದದ ಇನ್ನೊಂದು ವಿಸ್ತರಣೆಯಂತೆಯೇ ಇರುವುದಾದರೂ ಶ್ರೀಯವರ ಅನುವಾದದ ರೀತಿ, ತಂತ್ರಗಾರಿಕೆಗಳು ಹಾಗು ಭಾಷಾಶೈಲಿಗಳೇ ವಿಭಿನ್ನವಾಗಿದ್ದು ಅಶ್ಚತ್ಥಾಮನ್ ಹಾಗೂ ಇಂಗ್ಲಿಷ್ ಗೀತಗಳು ಅನುವಾದಗಳ ಅನುವಾದಕರು ಒಬ್ಬರೆಯೇ? ಎನ್ನುವ ಅಚ್ಚರಿ ಮೂಡುತ್ತದೆ. ಹೀಗೆ ಅವಳ ಸೊಬಗು ಇವಳಿಗೆ ಇವಳ ತೊಡಿಗೆ ಅವಳಿಗೆ ಇಡುವ ಮೂಲಕ ಶ್ರೀಯವರು ಸಾಧಿಸಿದ ಸಾಂಸ್ಕೃತಿಕ ಸಮನ್ವಯವು ಇಂಗ್ಲಿಷ್ ಗೀತಗಳನ್ನು ಒಂದು ಯುಗಸಂವೇದಿ ಕೃತಿಯಾಗಿ ರೂಪಿಸಿದ್ದು ಚಾರಿತ್ರಿಕ ಮಹತ್ವ ಗಳಿಸಿದೆ.

ಇಂಗ್ಲಿಷ್ ಗೀತಗಳು ಈಗ ಲಭ್ಯವಿರುವ ಆವೃತ್ತಿಗೂ ಮೊದಲು ಅನೇಕ ಮಜಲುಗಳನ್ನು ದಾಟಿಬಂದಿದೆ. ಶ್ರೀಯವರೇ ಹೇಳಿಕೊಂಡಂತೆ ಅವರ ಗುರುಗಳಾದ ಬಾಪು ಸುಬ್ಬರಾಯರು ಶ್ರೀಯವರ ಮೂರು ಅನುವಾದಿತ ಕವಿತೆಗಳನ್ನು 1919ರ ಹೊತ್ತಿಗೆ 'ವಿದ್ಯಾದಾಯಿನಿ' ಪತ್ರಿಕೆಯಲ್ಲಿ ಪ್ರಕಟಪಡಿಸಿದರು. ಶ್ರೀಯವರೇ ಹೇಳಿಕೊಂಡಂತೆ 'ಕರ್ಣಾಟಕ ಜನಜೀವನ'ದ ಸಂಚಿಕೆಗಳಲ್ಲಿ ಹಲವಾರು ಅನುವಾದಗಳು ಪ್ರಕಟಗೊಂಡವು. 1921ರ ಹೊತ್ತಿಗೆ ಹನ್ನೆರಡು ಕವಿತೆಗಳು ಪ್ರಕಟಗೊಂಡವು. 1924ರ ಹೊತ್ತಿಗೆ ಇಪ್ಪತ್ತನಾಲ್ಕು ಕವಿತೆಗಳಷ್ಟು ಒಂದು ಸಂಗ್ರಹದಲ್ಲಿ ಬಂದವು. 1926ರ ಹೊತ್ತಿಗೆ ಇಂಗ್ಲಿಷ್ ಗೀತಗಳು ಸಮಗ್ರವಾಗಿ ಪ್ರಕಟಗೊಂಡಿತು. ತೀನಂಶ್ರೀಯವರು ಉಲ್ಲೇಖಿಸುವಂತೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದವರು ಒಟ್ಟು ಅರವತ್ತು ಅನುವಾದಗಳನ್ನು ಅವರ ಸ್ವತಂತ್ರ ಕವಿತೆಗಳಾದ ಕಾಣಿಕೆ, ಭರತಮಾತೆಯ ವಾಕ್ಯ, ಮೈಸೂರು ಮಕ್ಕಳು ಎಂಬವುಗಳನ್ನು ಸೇರಿಸಿ 1926ನೆಯ ಇಸವಿಯಲ್ಲಿ 'ಪ್ರಬುದ್ಧ ಕರ್ಣಾಟಕ'ದ ಚಂದಾದಾರರಿಗೆ ಉಡುಗೊರೆಯಾಗಿ ನೀಡಿದರು (1952ರಲ್ಲಿ ಇಂಗ್ಲಿಷ್ ಗೀತೆಗಳಿಗೆ ಬರೆದ ಪ್ರಸ್ತಾವನೆ). ಈಗಿನ ಪ್ರಕಟಣೆಗಳಲ್ಲಿಯೂ ಇಂಗ್ಲಿಷ್ ಗೀತಗಳು ಎನ್ನುವುದು ಅರವತ್ತು ಕವಿತೆಗಳ ಸಂಗ್ರಹವೇ ಆಗಿ ದೊರೆಯುತ್ತಲಿದೆ. ಈ ಒಟ್ಟು ಅರವತ್ತು ಕವಿತೆಗಳನ್ನು ಅನುವಾದ ಮಾಡುವ, ಪರಿಷ್ಕಾರಗೊಳಿಸುವ ಈ ಅವಧಿಯು ಸಹ ದೀರ್ಘಾವಧಿಯದೇ. ಶ್ರೀಯವರು ತಮ್ಮ ಈ ಅನುವಾದಗಳನ್ನು ಹತ್ತಿರ ಹತ್ತಿರ ಒಂದು ದಶಕದಷ್ಟು ಕಾಲದಲ್ಲಿ ಮಾಡಿದ್ದು ಅವರ ಪರಿಷ್ಕರಣೆಗಳು ಸಹ ಸಾಂಸ್ಕೃತಿಕ ಪ್ರಭಾವಗಳಿಂದ ಮತ್ತೆ ಮತ್ತೆ ಮರು ರೂಪಗಳನ್ನು ಪಡೆದಿದ್ದಿರಬೇಕು. ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ಗೀತಗಳು ಎನ್ನುವುದು ಒಂದು ಪ್ರಕ್ರಿಯೆ; ಒಂದು ಪಯಣ. ಅದು ಅನುವಾದದ ಪಯಣ; ಸಾಂಸ್ಕೃತಿಕ ಅನುಭವದ ಪಯಣ.

ಶ್ರೀಯವರ ಇಂಗ್ಲಿಷ್ ಗೀತಗಳು ಕೃತಿಗೆ ಚಾರಿತ್ರಿಕ ಮಹತ್ವ ಇರುವುದು ಮುಖ್ಯವಾಗಿರುವುದು ಅನೇಕ ಕಾರಣಗಳಿಂದ. ಮೊದಲನೆಯದಾಗಿ ಅದು ಬದಲಾಗುತ್ತಿದ್ದ ಹೊಸಯುಗದ ಕನ್ನಡದ ಉಲಿಯ ಸ್ವರೂಪದ ಬಗೆಗೆ ಚಿಂತಿಸಿದ್ದು; ಎರಡನೆಯದು ಆಧುನಿಕತೆ ಪ್ರವೇಶ ಮಾಡುತ್ತಿದ್ದ ಸಮುದಾಯಗಳಲ್ಲಿ ಒಂದು ಹೊಸ ಸಂವೇದನೆಯನ್ನು ಹುಟ್ಟುಹಾಕಿದ್ದು. ಇದಕ್ಕು ಮಿಗಿಲಾಗಿ ಇಂಗ್ಲಿಷ್ ಗೀತಗಳು ಕನ್ನಡದ ಮಟ್ಟಿಗೆ ಅನುವಾದದ ಮರುವ್ಯಾಖ್ಯಾನವನ್ನು ಮಾಡುವುದಕ್ಕೆ ಕಾರಣವಾಗಿದ್ದು. ಹೀಗೆ ಅನೇಕ ಸಾಂಸ್ಕೃತಿಕ ಪಲ್ಲಟಗಳಿಗೆ ಕಾರಣವಾದ ಕೃತಿ ’ಇಂಗ್ಲಿಷ್ ಗೀತಗಳು’.

ಉಲಿಯ ಸ್ವರೂಪ

ಶ್ರೀಯವರು ತಮ್ಮ ಜೀವಮಾನದಲ್ಲಿ ತೊಡಗಿಸಿಕೊಂಡ ಕನ್ನಡದ ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿಯೇ ಕನ್ನಡದಲ್ಲಿ ಇಂಗ್ಲಿಷ್ ಗೀತಗಳು ಬರಲು ಪ್ರೇರಣೆಯಾಯಿತು ಎಂದು ಊಹಿಸಬಹುದು. ಶ್ರೀಯವರು ಮಾಡಿದ ಮಾತು ತಲೆಯೆತ್ತುವ ಬಗೆ ಹಾಗು ಕನ್ನಡದ ಪುನರುಜ್ಜೀವನ ಎನ್ನುವ ಎರಡು ಭಾಷಣಗಳು ಆಧುನಿಕ ಸಂದರ್ಭದಲ್ಲಿ ಕನ್ನಡದ ಉಲಿಯು ಹೇಗಿರುಬೇಕೆನ್ನುವುದರ ರೂಪುರೇಶೆಯನ್ನು ಕಲ್ಪಿಸಿದ್ದವು. ಕನ್ನಡವು ತನ್ನ ಬಹುಕಾಲದ ಪೋಷಕ ಭಾಷೆಯಾದ ಸಂಸ್ಕೃತವನ್ನೂ ಹೊಸ ಶಿಕ್ಷಣದ ಭಾಗವಾಗಿ ಆಡಳಿತ ಭಾಷೆಯಾಗಿ ರೂಢಿಸಿಕೊಂಡಿರುವ ಹೊಸ ಪೋಷಕ ಭಾಷೆ ಇಂಗ್ಲಿಷನ್ನೂ ಹೇಗೆ ಅನುಸಂಧಾನ ಮಾಡಬೇಕೆನ್ನುವುದರ ಕುರಿತು ಶ್ರೀಯವರು ಆಲೋಚಿಸಿದ್ದಾರೆ. ಅವರ ಒಟ್ಟು ಅಭಿಪ್ರಾಯದಲ್ಲಿ ಕನ್ನಡವು ಈ ಎರಡು ಭಾಷೆಗಳ ಸಾರಸತ್ವಗಳನ್ನು ಹೀರಿಕೊಂಡು ಪುಷ್ಟಿಗೊಳ್ಳಬೇಕೆನ್ನುವುದೇ ಶ್ರೀಯವರ ಆಶಯ ಮತ್ತು ಹಾರೈಕೆ.

ಶ್ರೀಯವರಿಗೂ ಪೂರ್ವದಲ್ಲಿ ನಡೆದ ಉಲಿಯನ್ನು ತಿದ್ದಿ ರೂಪಿಸುವ ಕೆಲಸಗಳು ಮಿಶನರಿ ಜನಗಳಿಂದ ನಡೆದಿದ್ದವು. ಮಿಷನರಿಗಳು ಭಾರತೀಯ ಭಾಷೆಗಳನ್ನು ಅವುಗಳ ಲಿಪಿ, ಬರಹದ ಸ್ವರೂಪಗಳನ್ನು ತಿದ್ದುವ ಮೂಲಕ ಮುದ್ರಣಕ್ಕೆ ಒಗ್ಗಿಸುವ ಪ್ರಯತ್ನಗಳನ್ನು ಮಾಡುತ್ತಿದ್ದರು. ಅವು ಮತಾಂತರದ ಉದ್ದೇಶ ಇಟ್ಟುಕೊಂಡು ಮಾಡಿದ ಪ್ರಯತ್ನಗಳೇ ಆದರೂ ಭಾಷೆಯ ಸ್ವರೂಪದ ದೃಷ್ಟಿಯಿಂದ ಇವು ಮಹತ್ವದ ಪಲ್ಲಟಗಳೇ ಆಗಿದ್ದವು. ಇದರಿಂದ ಕನ್ನಡದಂತಹ ದೇಶೀಭಾಷೆಗಳು ತಮ್ಮ ಚಹರೆಗಳನ್ನು ಆಧುನಿಕಗೊಳಿಸಿಕೊಳ್ಳತೊಡಗಿದವು.

ಶ್ರೀಯವರು ಒಟ್ಟಾರೆ ಕನ್ನಡ ನುಡಿಯು ಹೇಗೆ ಸಮಸ್ತ ಕನ್ನಡಿಗರಿಗೆ ಏಕರೂಪವಾಗಿ ಒಂದು ಸ್ಟ್ಯಾಂಡರ್ಡ್ ಕನ್ನಡವಾಗಿ ಬರಬೇಕೆಂಬುದನ್ನು ತಮ್ಮ ಭಾಷಣಗಳಲ್ಲಿ ಪ್ರಸ್ತಾಪ ಮಾಡಿ ಜನರ ಗಮನ ಸೆಳೆದಿದ್ದರು. ಇದರೊಂದಿಗೆ ಸಾಹಿತಿಯಾಗಿ ಕನ್ನಡಕ್ಕೆ ಹೊಸ ಕಾವ್ಯಕ್ಕೆ ಬೇಕಾದ ಹೊಸ ನುಡಿಗಾಗಿ ಹುಡುಕಾಟ ನಡೆಸಿದ್ದರು. ಇದರ ಬೆನ್ನ ಹಿಂದೆ ಹಲವಾರು ಚಾರಿತ್ರಿಕ ಸಂಗತಿಗಳಿದ್ದವು. ಹೊಸದಾಗಿ ಮೂಡುತ್ತಿದ್ದ ಆಧುನಿಕ ಸಂವೇದನೆಗೆ ಸಂವಾದಿಯಾಗಿ ಹೊಸ ಗದ್ಯ ಪ್ರಕಾರಗಳು ಚಾಲನೆಗೆ ಬರುತ್ತಿದ್ದವು. ಹತ್ತೊಂಬತ್ತನೇ ಶತಮಾನದ ಹೊತ್ತಿಗಾಗಲೇ ಗದ್ಯಂ ಹೃದ್ಯಂ ಪದ್ಯಂ ವದ್ಯಂ ಎನ್ನುವ ಧೋರಣೆಯಿಂದ ಬರೆದ ಮುದ್ದಣನಂತಹ ಬರಹಗಾರರು ಬಂದಿದ್ದರು. ಒಡೆಯರ ಕಾಲದ ಸಾಹಿತ್ಯವು ನಿಧಾನವಾಗಿ ಗದ್ಯವನ್ನೇ ತನ್ನ ಅಭಿವ್ಯಕ್ತಿಯನ್ನಾಗಿ ಮಾಡಿಕೊಳ್ಳುತ್ತಿತ್ತು. ನಾಟಕದಂತಹ ದೃಶ್ಯಕಲೆಗಳತ್ತ ಒಲವು ಹೆಚ್ಚಾಗಿ ಪಾಶ್ಚಾತ್ಯ ನಾಟಕಗಳನ್ನು ದೇಶೀಯ ಚೌಕಟ್ಟಿನಲ್ಲಿ ತಂದುಕೊಳ್ಳುವ ಉತ್ಸಾಹ ಕಾಣುತಿತ್ತು. ಈ ಎಲ್ಲ ಬೆಳವಣಿಗೆಗಳು ಕಾವ್ಯದಂತಹ ಸಾಂಪ್ರದಾಯಿಕ ಪ್ರಕಾರಗಳು ವಿಸ್ಮೃತಿಯತ್ತ ಜಾರುವುದಕ್ಕೆ ಅನುವು ಮಾಡಿಕೊಡುತ್ತಿದ್ದವೆನಿಸುತ್ತದೆ. ಇಪ್ಪತ್ತನೇ ಶತಮಾನದ ಹೊತ್ತಿಗೆ ಕಾವ್ಯಕ್ಕೊಂದು ಹೊಸ ಅಭಿವ್ಯಕ್ತಿಯ ಭಾಷೆ ಬೇಕಾಗಿತ್ತು ಎಂಬುದನ್ನು ಬಿಎಂಶ್ರೀ ಕಂಡುಕೊಂಡರು.

ಕನ್ನಡವು ಹೊಸಗಾಲಕ್ಕೆ ತೆರೆದುಕೊಳ್ಳುವ ಹೊತ್ತಿನಲ್ಲಿ ಹೊಸಗನ್ನಡಕ್ಕೆ ಅನುಕೂಲವಾಗುವಂತಹ ಅನುವಾದಗಳು ಗದ್ಯದ ರೂಪದಲ್ಲಿ ಬರತೊಡಗಿದ್ದವು. ಹತ್ತೊಂಬತ್ತು ಹಾಗು ಇಪ್ಪತ್ತನೇ ಶತಮಾನದ ಆರಂಭದ ದಶಕಗಳಲ್ಲಿ ಗದ್ಯದ ಅನುವಾದಗಳಲ್ಲಿ ಕಾಣುವ ಉತ್ಸಾಹ ಕಾವ್ಯದ ಅನುವಾದಗಳಲ್ಲಿ ಅಷ್ಟಾಗಿ ಕಾಣುವುದಿಲ್ಲ. ಉಳಿದೆಲ್ಲ ಪ್ರಕಾರಗಳಿಗಿಂತ ಕಾವ್ಯದ ಅನುವಾದವು ಅನೇಕ ಏರುತಗ್ಗುಗಳನ್ನು ಕಂಡಿತ್ತು. ಭಾಷೆ, ವಸ್ತು ಹಾಗೂ ಸಂರಚನೆಯ ಸಂಕಟಗಳನ್ನು ಅನುಭವಿಸಿತ್ತು. ಹೊಸಗನ್ನಡವೆನ್ನುವ ಉಲಿಗೆ ಆರಂಭದ ಬಲ ತುಂಬಿದ ಮಿಷನರಿಗಳು ಕಾವ್ಯದ ಅನುವಾದಗಳನ್ನು ಮಾಡುತ್ತಿದ್ದರು. ದೇಶೀಯ ಸಮಾಜಗಳ ಸಮುದಾಯಗಳಲ್ಲಿ ನೆಲೆಗೊಳ್ಳುವ ಉದ್ದೇಶದಿಂದ ಶುರುವಾದ ಅವರ ಅನುವಾದಗಳು ಕ್ರೈಸ್ತಮತೀಯ ಸಾಹಿತ್ಯವನ್ನು ದೇಶೀಯರಿಗಾಗಿ ತಿಳಿಯಪಡಿಸುವ ಉದ್ದೇಶದಿಂದ ಆದವು. ಆದರೆ ಅವರ ಸ್ಥಳೀಯ ಭಾಷೆಗಳ ಮೇಲಿನ ಆಸಕ್ತಿ ಅವರನ್ನು ಇಲ್ಲಿನ ಸಾಹಿತ್ಯಕೃತಿಗಳ ಅನುವಾದಕ್ಕೆ ತೊಡಗುವಂತೆ ಮಾಡಿತು. ಹೀಗೆ ಅವರ ಕಾವ್ಯಾನುವಾದಗಳು ದೇಶೀಯ ಭಾಷೆಗಳಿಂದ ಯುರೋಪಿನ ಭಾಷೆಗಳಿಗೆ ಹಾಗೂ ಯುರೋಪಿನ ಭಾಷೆಗಳಿಂದ ದೇಶೀಯ ಭಾಷೆಗಳಿಗೆ ನಡೆಯುವ ದ್ವಿಪಕ್ಷೀಯ ನೆಲೆಗಳಲ್ಲಿದ್ದವು. ಮಿಷನರಿಗಳು ರೂಢಿಸಿಕೊಟ್ಟ ಕನ್ನಡವು ಕಚ್ಚಾ ಆಗಿದ್ದು ಅವರ ಅನುವಾದಗಳ ಭಾಷೆಯು ಆರಂಭ ಕಾಲದ ತೊಡಕುಗಳನ್ನು ಹೊಂದಿದ್ದಿತು. ಆದರೆ ಮಿಷನರಿ ಪ್ರಯತ್ನಗಳ ನಂತರ ನಡೆದ ಕಾವ್ಯದ ಅನುವಾದಗಳಲ್ಲಿ ಪಠ್ಯಪುಸ್ತಕಗಳಿಗಾಗಿ, ಶೈಕ್ಷಣಿಕ ಅವಶ್ಯಕತೆಗಳಿಗಾಗಿ ಮಾಡಿದ ಅನುವಾದಗಳನ್ನು ಬಿಟ್ಟರೆ ಜನರ ಓದಿನ ಅಭಿರುಚಿಗಾಗಿ ಬಂದವು ಗಣನೀಯವಾಗಿ ಕಡಿಮೆ ಇದ್ದವು. ಈ ಚಾರಿತ್ರಿಕ ಸಂಗತಿಗಳು ಇಂಗ್ಲಿಷ್ ಗೀತಗಳನ್ನು ಹೊಸಗನ್ನಡದ ಉಲಿಯ ಬಗೆಗೆ ಹೊಸ ನಿಲುವು ತಾಳಲು ಪ್ರೇರಣೆ ನೀಡಿದವು.

ಶ್ರೀಯವರು ಸಂಸ್ಕೃತ ಮತ್ತು ಇಂಗ್ಲಿಷಿನ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಇಂಗ್ಲಿಷ್ ಗೀತಗಳನ್ನು ರಚಿಸುವ ಆಶಯ ಹೊಂದಿದ್ದರು. ಅವರ ಕನ್ನಡ ಮಾತು ತಲೆಯೆತ್ತುವ ಬಗೆ ಐತಿಹಾಸಿಕ ಭಾಷಣದಲ್ಲಿ ಅವರು ಉಲಿಯ ಕುರಿತ ತಮ್ಮ ಸಮನ್ವಯದ ನಿಲುವನ್ನು ಮುಕ್ತವಾಗಿ ವ್ಯಕ್ತ ಪಡಿಸುತ್ತಾರೆ. ಹೊಸಗನ್ನಡದ ಉಲಿಯು ರೂಪುಗೊಳ್ಳುವುದರ ಜೊತೆಗೆ ಹೊಸಗನ್ನಡದ ಬರಹದ ಭಾಷೆಯಾಗಿ ಒಂದು ಶಿಷ್ಟ ಆದರೆ ಎಲ್ಲರಿಗೊಪ್ಪುವ ಭಾಷೆಯಾಗಿ ರೂಪುಗೊಳ್ಳುವ ಅಂಗವಾಗಿ ಶ್ರೀಯವರು ಮಾಡುತ್ತಿದ್ದ ಯತ್ನಗಳು ಇಂಗ್ಲಿಷ್ ಗೀತಗಳು ಸಂಕಲನದಲ್ಲಿ ಪ್ರತಿಫಲಿತವಾಗಿವೆ. ಅಭಿವ್ಯಕ್ತಿಯ ಮಾಧ್ಯಮವಾಗಿ ಕನ್ನಡವು ಬೆಳೆಯಬೇಕೆನ್ನುವ ಅವರು ಭಾಷಣಗಳನ್ನು ಮಾಡಿದರು, ಕಾವ್ಯ ರಚನೆ ಮಾಡಿದರು, ಅನುವಾದಗಳನ್ನು ಮಾಡಿದರು; ಸ್ವತಃ ಅಧ್ಯಾಪಕರಾಗಿ ಶಿಷ್ಯರನ್ನು ಹುರಿದುಂಬಿಸಿದರು. ಈ ಎಲ್ಲ ಪ್ರಯತ್ನಗಳಲ್ಲಿ ಇಂಗ್ಲಿಷ್ ಗೀತಗಳು ಅನುವಾದವು ತನಗರಿವಿಲ್ಲದಂತೆ ಮಹತ್ವದ ಪಾತ್ರ ವಹಿಸಿತ್ತು. ಲಲಿತವಹ ಕನ್ನಡವನ್ನು ರೂಪಿಸುವ ಕೆಲಸ ಅನುವಾದಗಳು ಅಚ್ಚುಕಟ್ಟಾಗಿ ಮಾಡಿದ್ದವು.

ಅನುವಾದದ ಸಾಂಸ್ಕೃತಿಕ ಆಯಾಮಗಳು

ಶ್ರೀ ಅವರು ಕೈಗೆತ್ತಿಕೊಳ್ಳುವ ಅನುವಾದವು ಇಂಗ್ಲಿಷ್‌ನಿಂದ ಕನ್ನಡಕ್ಕೆ ಎಂದು ಒಂದು ಭಾಷೆಯಿಂದ ಭಾಷೆಗೆ ಆಗಬಹುದಾದ ಅನುವಾದ ಮಾತ್ರವಾಗಿರದೆ ಒಂದು ದಟ್ಟವಾದ ಸಾಂಸ್ಕೃತಿಕವಾದ ಪ್ರೇರಣೆಗಳಿದ್ದವು. ಶ್ರೀ ಅವರು ಭಾಷಾಂತರ ಮಾಡುತ್ತಿರುವುದು ಸಂಸ್ಕೃತಿಯ ಕೊಡುಕೊಳ್ಳುವಿಕೆಯ ಕಾರಣಕ್ಕಾಗಿ ಎನ್ನುವುದು ಅವರ ಮಾತುಗಳಲ್ಲಿಯೇ ವ್ಯಕ್ತವಾಗುತ್ತದೆ. ಇಂಗ್ಲಿಷ್ ಕಾವ್ಯದ ಮೂಲಕ ಶ್ರೀ ಅವರು ಪ್ರತಿಪಾದಿಸ ಹೊರಟಿದ್ದ ಆಧುನಿಕತೆ ಎನ್ನುವ ಪ್ರಜ್ಞೆ ಅವರಿಗೇ ತಿಳಿದಿರುವಂತೆ ಒಂದು ದಾಟುವಿಕೆ ಆಗಿತ್ತು. ಆಗಿನ ಕನ್ನಡ ಸಂವೇದನೆಯಾಗಲೀ ಅಥವಾ ಅದರ ಸಂಸ್ಕೃತಿಯಾಗಲೀ ವಸಾಹತುಶಾಹಿ ರೂಪಿಸುತ್ತಿದ್ದ ಆಧುನಿಕತೆಗೆ ಹತ್ತಿರ ಇರಲಿಲ್ಲ. ಈ ಅಂಶವನ್ನು ಸಾಧಿಸ ಹೊರಟ ಶ್ರೀ ಅವರಿಗೆ ಸಂಸ್ಕೃತಿಯನ್ನು ಧಿಕ್ಕರಿಸಿ ಮುಂದೆ ನಡೆಯುವ ಆಕಾಂಕ್ಷೆ ಇರಲಿಲ್ಲವಾಗಿ ಅವರು ನಮ್ಮದೆನ್ನುವ ಸಂಸ್ಕೃತಿಗೆ ಒಗ್ಗುವ ಕೆಲವು ಮಾರ್ಪಾಟುಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ವಹಿಸಿದರು. ನಮ್ಮ ಸಂಸ್ಕೃತಿ ಎನ್ನುವುದಕ್ಕೆ ಬಲವಾಗಿ ಪ್ರತಿ ಸಂಸ್ಕೃತಿ ಎನ್ನುವುದೊಂದು ಉಂಟಾಗುವುದರಿಂದ ತನ್ನ ಸಂಸ್ಕೃತಿಯ ಅನನ್ಯತೆಯನ್ನು ಮರುರೂಪಿಸಿಕೊಳ್ಳುವ ಅಗತ್ಯ ಮತ್ತು ಸವಾಲು ಉಂಟಾಯಿತು.

ಶ್ರೀ ಅವರ ಇಂಗ್ಲಿಷ್ ಗೀತಗಳು ಬಂದ ಹೊತ್ತಿನಲ್ಲಿ ವಸಾಹತುಶಾಹಿ ಆಡಳಿತವು ಇನ್ನಷ್ಟು ಬಲವಾಗಿ ದೇಶಿಕೇಂದ್ರಗಳಲ್ಲಿ ನೆಲೆಗೊಳ್ಳುತ್ತಿತ್ತು. ಸ್ವತಃ ಇಂಗ್ಲಿಷ್ ಅಧ್ಯಾಪಕರಾದ ಶ್ರೀ ಅವರು ಇಂಗ್ಲಿಷ್ ಭಾಷೆಯನ್ನು ನಿರಾಕರಿಸುವ ಧೋರಣೆ ಹೊಂದಿರಲಿಲ್ಲ ಅಲ್ಲದೆ ಅವರು ವಸಾಹತು ಆಡಳಿತವನ್ನು ಕಟುವಾಗಿ ವಿರೋಧಿಸುವ ಗುಂಪಿಗೆ ಸೇರಿದವರೂ ಅಲ್ಲ. ಹಾಗಾಗಿ ಇಂಗ್ಲಿಷ್ ಕವಿತೆಯೊಂದಿಗಿನ ಅನುಸಂಧಾನ ಅವರಿಗೆ ದೊಡ್ಡ ತೊಡಕಿನ ಸಂಗತಿಯಾಗಿರಲಿಲ್ಲ ಎಂದು ಊಹಿಸಬಹುದು. ವಿ.ಎಸ್.ಶ್ರೀಧರ್ ಅವರು ಗುರುತಿಸುವಂತೆ, ವಿರೋಧಾಭಾಸದ ಅರಿವಿನ ಗೈರುಹಾಜರಿಯಿಂದಾಗಿಯೇ ಶ್ರೀಯವರ ಬರಹಗಳಲ್ಲಿ ವಸಾಹತುಶಾಹಿ ಅಧಿಕಾರವನ್ನು ನಿರಾಕರಿಸುವ ಅಥವಾ ಭೇದಿಸುವ ಲಕ್ಷಣಗಳು ಇಲ್ಲವಾಗಿವೆ (ಸಾಂಸ್ಕೃತಿಕ ಮುಖಾಮುಖಿ, ಪು.೫೧). ಆದುದರಿಂದಲೇ ಆಳೌ ಬ್ರಿಟಾನಿಯಾ ತರದ ಕವಿತೆ ಬ್ರಿಟಿಷ್ ರಾಷ್ಟ್ರೀಯತೆಯನ್ನು ಕನ್ನಡದಲ್ಲಿ ತರುವಾಗ ಯಾವುದೇ ಹಿಂಜರಿಕೆಯಿಲ್ಲದಂತಾಗಿದೆ. ಶ್ರೀಯವರ ಅನುವಾದಗಳಲ್ಲಿ ಮುಖ್ಯವಾಗಿ ಚರ್ಚೆಗೆ ಒಳಗಾಗಿರುವುದು ಆಳೌ ಬ್ರಿಟಾನಿಯಾ, ಇಂಗ್ಲೆಂಡ್ ತರದ ಕವಿತೆಗಳು. ಈ ಕವಿತೆಗಳನ್ನು ಆಯ್ಕೆ ಮಾಡಿಕೊಂಡಿರುವುದರ ಹಿಂದೆ ವಸಾಹತುಶಾಹಿಯ ಬಗ್ಗೆ ಒಲವು ಇದೆ ಎನ್ನುವ ಆಕ್ಷೇಪ ಇದೆ. ಸಹಜವಾಗಿಯೇ ವಸಾಹತುಶಾಹಿ ಕಾಲದಲ್ಲಿ ಬದುಕಿದ್ದ ಇಂಗ್ಲಿಷ್ ಶಿಕ್ಷಣ ಪಡೆದು ಅದರ ಫಲವಾಗಿ ನೌಕರಿಯನ್ನು ಮಾಡುತ್ತಿರುವ ಶ್ರೀಯವರು ಈ ಕವಿತೆಗಳನ್ನು ಶುದ್ಧ ಇಂಗ್ಲಿಷ್ ಕವಿತೆಗಳಾಗಿ ಇಷ್ಟಪಟ್ಟಿರಲಿಕ್ಕೂ ಸಾಕು. ಅವನ್ನು ಕನ್ನಡಕ್ಕೆ ತರುವಾಗ ಹೆಮ್ಮೆಯೂ ಇದ್ದಿರಬಹುದು. ಆದರೆ ಅವರಿಗೆ ಈ ಬಗ್ಗೆ ಹಿಂಜರಿಕೆ ಇಲ್ಲ ಎನ್ನುವುದನ್ನು ಗಮನಿಸಬೇಕು. ಶ್ರೀಯವರ ವಸಾಹತುಶಾಹಿ ಬಗೆಗಿನ ಧೋರಣೆಗಳು ಪ್ರಭುತ್ವದ ನಿಷ್ಠೆಯ ಧೋರಣೆಗಳಿಗಿಂತ ವಿಭಿನ್ನವಾಗಿಯೇನೂ ಇದ್ದಂತೆ ತೋರುವುದಿಲ್ಲ. ಒಟ್ಟಾರೆ ಪ್ರಭುತ್ವದ ಮೇಲಿನ ನಿಷ್ಠೆಯು ಶ್ರೀಯವರಿಗೆ ಮುಖ್ಯವೆನಿಸಿದೆ.

ಶ್ರೀ ಅವರು ಅನುವಾದಿಸಲೆತ್ತಿಕೊಂಡಿರುವ ಪ್ರೇಮಕವಿತೆಗಳ ಅನುವಾದಗಳು ಮಾತ್ರ ಸಾಂಸ್ಕೃತಿಕ ಸಂಗತಿಗಳನ್ನು ಸೂಕ್ಷ್ಮವಾಗಿ ನಿರ್ವಹಿಸುತ್ತದೆ. ಇದು ಪ್ರಾಯಶಃ ರಾಷ್ಟ್ರೀಯತಾವಾದದ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಮಾದರಿಗಳ ಒತ್ತಡದಿಂದ ಹಾಗೂ ಹೊಸ ಸಾಮಾಜಿಕ ಬದಲಾವಣೆಯ ಕಾರಣದಿಂದ ಎನ್ನಬಹುದು.

ಶ್ರೀಯವರು ತಮ್ಮ ಅನುವಾದಗಳಲ್ಲಿ ಮುಖ್ಯವಾಗಿ ಕೈಗೆತ್ತಿಕೊಂಡಿರುವುದು ಅನುವಾದಗಳಲ್ಲಿ ಸರ್ವೇಸಾಮಾನ್ಯವಾದ ಸಾಮರಸ್ಯದ ವಿಷಯಗಳನ್ನು. ಇಂಗ್ಲಿಷ್ ಗೀತಗಳು ಪಾಲ್‌ಗ್ರೇವ್‌ನ ಗೋಲ್ಡನ್ ಟ್ರೆಷರಿ ಕವಿತಾ ಸಂಕಲನದ ಮಾದರಿಯನ್ನು ಇಟ್ಟುಕೊಂಡು ಹೊರಟ ಅನುವಾದ ಪ್ರಯತ್ನ. ಬಿ.ಎಂ.ಶ್ರೀಕಂಠಯ್ಯನವರು ಹುಯಲಗೋಳ ನಾರಾಯಣರಾಯರಂತೆಯೇ ಷೇಕ್ಸ್‌ಪಿಯರ್ ನಾಟಕಗೀತೆಗಳು ಹಾಗು ರೊಮ್ಯಾಂಟಿಕ್ ಮತ್ತು ವಿಕ್ಟೋರಿಯನ್ ಕಾವ್ಯಗಳ ಭಾಷಾಂತರವನ್ನು ಎತ್ತಿಕೊಂಡಿದ್ದಾರೆ. ಪಾಲ್‌ಗ್ರೇವ್‌ನ ಗೋಲ್ಡನ್ ಟ್ರೆಷರಿ ಸಂಕಲನವೇ ಅವರ ಭಾಷಾಂತರದ ಮಾದರಿ. ಆಯ್ಕೆ, ಅಭಿರುಚಿಗಳೆಲ್ಲದರ ದೃಷ್ಟಿಯಿಂದ ಅವರು ಗೋಲ್ಡನ್ ಟ್ರೆಷರಿಯನ್ನೆ ಅನುಸರಿಸಿದ್ದಾರೆ. ನವೋದಯದ ಆರಂಭದ ಕಾಲದಲ್ಲಿ ಭಾವಗೀತಾತ್ಮಕವಾಗಿದ್ದ ರಚನೆಗಳನ್ನು ಹೊಸಗನ್ನಡ ಕಾವ್ಯವು ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಶೀಲವಾಯಿತು.

ಶ್ರೀಯವರು ತಮ್ಮ ಅನುವಾದಕ್ಕೆ ಆಯ್ಕೆ ಮಾಡಿಕೊಳ್ಳುವುದು ಇಂಗ್ಲಿಷಿನ ಕ್ಷಿಷ್ಟಕವಿತೆಗಳನ್ನಾಗಲೀ ವಸ್ತುವಿನ ದೃಷ್ಟಿಯಿಂದ ಅಪರೂಪದ ಕವಿತೆಗಳನ್ನಾಗಲೀ ಅಲ್ಲ. ಬದಲಾಗಿ ಅನುವಾದಗಳು ಅನುಸರಿಸುವ ವಿಶ್ವಾತ್ಮಕ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡ ಅವರ ಅನುವಾದದಲ್ಲಿ ಎಲ್ಲರಿಗೂ ಅನ್ವಯವಾಗುವ ವಿಶ್ವಾತ್ಮಕ ಮೌಲ್ಯಗಳ ಕಡೆ ಹೆಚ್ಚಿನ ಗಮನ ಹರಿಸಲಾಗಿದೆ. ಉದಾಹರಣೆಗೆ ಕರುಣಾಳು ಬಾ ಬೆಳಕೆ(ಹೆನ್ರಿ ನ್ಯೂಮನ್ನ್‌ನ ಲೀಡ್ ಕೈಂಡ್ಲಿ ಲೈಟ್) ಎನ್ನುವ ಕವಿತೆ ವಿಕ್ಟೋರಿಯನ್ ಕಾಲದ ಟ್ರಾಕ್ಟೇರಿಯನ್ ಸ್ಕೂಲ್‌ಗೆ ಸೇರಿದ ಧಾರ್ಮಿಕ ಕವಿತೆ. ಆದರೆ ಅದರ ಒಟ್ಟು ತಾತ್ಪರ್ಯವು ಧಾರ್ಮಿಕ ಶ್ರದ್ಧೆಯನ್ನು ಅಮೂರ್ತವಾಗಿ ಹೇಳುವುದರಿಂದ ಅದು ಕನ್ನಡಕ್ಕೆ ಹೊಂದಿಕೊಳ್ಳುವ ರಚನೆಯಾಗುತ್ತದೆ. ಹಾಗೆಯೇ ಸುಖಜೀವನ ಕವಿತೆ ಏನು ಸುಖಿಯೊ ತಾನು ತನ್ನಿಚ್ಛೆಯಲಿ ಬದುಕುವವನು.. .. ಎಂದು ಆರಂಭವಾಗಿ ಈ ಬಗೆಯ ಮುಕ್ತನಿಗೆ ಏರುವಾಸೆಗಳಿಲ್ಲ ಬೀಳುವಳುಕಿಲ್ಲ ಎಂದು ಮುಗಿಯುತ್ತದೆ. ಈ ಕವಿತೆ ಕೂಡ ಸಾರ್ವತ್ರೀಕರಣಗೊಂಡ ಉನ್ನತವಾದ ಬದುಕಿನ ಮೌಲ್ಯ. ಕಾರಿಹೆಗ್ಗಡೆಯ ಮಗಳು ಕವಿತೆಯ ಪ್ರೇಮ ದುರಂತವು ಎಲ್ಲ ದೇಶಕಾಲಗಳಲ್ಲಿಯೂ ಜರುಗುವ ಪ್ರೇಮ ದುರಂತಗಳೇ. ಆದರೆ ಈ ಭಾಷಾಂತರಗಳು ಎಲ್ಲಿಯೂ ಭಾಷಾಂತರ ಎನಿಸದೆ ಯಾವುದೊ ಕನ್ನಡದ್ದೇ ಕವಿಯ ಅಂತರಂಗದ ಮಾತುಗಳನ್ನು ಕೇಳುತ್ತಿದ್ದೇವೆ ಎಂದು ಅನಿಸುತ್ತದೆ. ಇದಕ್ಕೆ ಮುಖ್ಯವಾಗಿ ಈ ಇಂತಹ ಕವಿತೆಗಳಲ್ಲಿರುವ ವಿಶ್ವಾತ್ಮಕ ಮೌಲ್ಯಗಳೇ.

ಅನುವಾದಗಳಲ್ಲಿ ಆಯ್ಕೆಯ ಸಂಗತಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಅಂತೆಯೇ ಶ್ರೀಯವರು ಆರಿಸಿದ ಕವಿತೆಗಳಿಗಿಂತ ಆರಿಸದ ಕವಿತೆಗಳ ಸಂಗತಿ ಕೂಡ ಅಷ್ಟೇ ಮುಖ್ಯವಾದ ಸಂಗತಿಯಾಗಿ ತೋರುತ್ತದೆ. ಶ್ರೀಯವರ ಅನುವಾದಗಳಲ್ಲಿ ಕೀಟ್ಸ್‌ನ ಕ್ಲಿಷ್ಟ ಆದರೆ ಎವರ್ ಗ್ರೀನ್ ಎನ್ನಿಸುವ ಓಡ್ ಆನ್ ಎ ಗ್ರೀಷನ್ ಅರ್ನ್ ಕವಿತೆಯಂತಹ ಆಳವಾದ, ಅನುವಾದಕ್ಕೆ ಸವಾಲಾಗುವಂತಹ ಕವಿತೆಗಳು ಏಕೆ ಅನುವಾದವಾಗೊಳ್ಳಲಿಲ್ಲ ಎನ್ನುವ ಸಣ್ಣ ಪ್ರಶ್ನೆ ಓದುಗರ ಮನದಲ್ಲಿ ಏಳುತ್ತದೆ. ಇದಷ್ಟಲ್ಲದೆ ಮೆಟಫಿಸಿಕಲ್ ಕವಿಗಳಾಗಲೀ, ಆಗಸ್ಟನ್ ಕವಿಗಳಾಲೀ ಕನ್ನಡ ಕವಿಗಳ/ಅನುವಾದಕರ ಮನಹೊಕ್ಕಿದ್ದು ಕಡಿಮೆ ಎನ್ನುವ ಅಪವಾದವು ಬಿ.ಎಂ.ಶ್ರೀ ಅವರ ಇಂಗ್ಲಿಷ್ ಗೀತಗಳ ಅನುವಾದಗಳ ಮೇಲೆಯೂ ಮೇಲೆ ಇರುವ ಅಪವಾದ. ತೀನಂಶ್ರೀಯವರು ತಮ್ಮ ಇಂಗ್ಲಿಷ್ ಗೀತಗಳ ಪ್ರಸ್ತಾವನೆಯಲ್ಲಿ ಕೆಲವು ಶ್ರೀಯವರ ನೆಚ್ಚಿನ ಕವಿತೆಗಳೇ ಆದರೂ ಅವು ಅನುವಾದಗಳಲ್ಲಿ ಬಂದಿಲ್ಲ ಎನ್ನುವ ಅಂಶವನ್ನು ಗುರುತಿಸಿದ್ದಾರೆ. ಇಂಗ್ಲಿಷ್ ಗೀತಗಳ ಬಗ್ಗೆ ಚರ್ಚಿಸುವಾಗ ಶ್ರೀಯವರು ಬಿಟ್ಟ ಕವಿತೆಗಳ ಬಗೆಗೇ ಹೆಚ್ಚಿನ ಚರ್ಚೆ ನಡೆದಿದೆ ಎನ್ನುವುದು ಗಮನಾರ್ಹ. ಇದಲ್ಲದೆ ಭಾಷಿಕವಾಗಿ, ರಾಚನಿಕವಾಗಿ ಕಷ್ಟವೆನಿಸುವ, ತುಂಬ ಆಳವಾದ ಅನುಭವ ಗಾಢತೆ ಹೊಂದಿದ ಕವಿತೆಗಳನ್ನು ಶ್ರೀಯವರು ಅನುವಾದಿಸಲಿಲ್ಲ. ಶ್ರೀಯವರೇ ತಮ್ಮ ಅನುವಾದದ ಮುನ್ನಿನ ಅರಿಕೆಯಲ್ಲಿ ನಿವೇದಿಸಿಕೊಂಡಿರುವಂತೆ ತಾವು ಈ ಅನುವಾದಗಳನ್ನು ಮಾಡುವಾಗ ಇಂಗ್ಲಿಷಿನ ಕಾವ್ಯಮಾಲೆಯ ನಾಯಕರತ್ನಗಳೆಂದು ಅಂದುಕೊಂಡವಲ್ಲ ಹಾಗು ಉತ್ತಮರಾದ ಕವಿಗಳು ಇಲ್ಲಿ ಎಲ್ಲರೂ ಇಲ್ಲ. ಆಗಾಗ್ಗೆ ಓದುವಾಗ ಮನಸಿಗೆ ಬಂದ ಕವಿತೆಗಳನ್ನು ತಾವು ಅನುವಾದಕ್ಕೆ ಎತ್ತಿಕೊಂಡುದಾಗಿ ಹೇಳಿಕೊಂಡಿದ್ದಾರೆ. ಮುಂದುವರೆದಂತೆ ಇಂಗ್ಲಿಷ್ ಕವಿತೆಗಳು ಸ್ವಾಭಾವಿಕವಾಗಿರುವ ಶೃಂಗಾರ ರಸವನ್ನು ಹೇಗೆ ಗಂಭೀರವಾಗಿ ಸೂಕ್ಷ್ಮವಾಗಿ ತೋರಿಸುತ್ತಾರೆ ತಮಗೆ ಹಿಡಿಸಿತು ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. ಶ್ರೀಯವರು ಹೀಗೆ ತಮಗರಿವಿಲ್ಲದಂತೆ ವಿಶ್ವಾತ್ಮಕವಾದ ಮಾನವ ಸಹಜ ಭಾವನೆಗಳಿಗೆ ಆದ್ಯತೆ ಕೊಡುತ್ತಾ ಒಂದು ಹೊಸ ಬಗೆಯ ಸಂವೇದನೆಯನ್ನು ಗುರುತಿಸಿಕೊಂಡಿದ್ದಾರೆ. ಇದು ಅವರ ಅನುವಾದಗಳ ಹಿಂದಿನ ಕಾರಣವನ್ನು ಯುಗಧರ್ಮಕ್ಕೆ ಒಗ್ಗಿಸುತ್ತದೆ. ಶ್ರೀಯವರ ಇಂಗ್ಲಿಷ್ ಗೀತಗಳು ಕವಿತಾ ಸಂಕಲನದಲ್ಲಿ ಅನುವಾದಗೊಂಡ ಕವಿತೆಗಳು ಹೊಸದಾಗಿ ತಲೆಯೆತ್ತುತ್ತಿದ್ದ ತಲೆಮಾರಿನ ಆಶೋತ್ತರಗಳ ನಾಡಿಮಿಡಿತವನ್ನು ಈ ಆಯ್ಕೆಯ ಹಿಂದೆ ಕಾಣಬಹುದು. ವಸಾಹತುಶಾಹಿ ಪರ್ವದಲ್ಲಿ ವ್ಯಕ್ತಿತ್ವ ನಿರ್ಮಾಣದ ಪ್ರಕ್ರಿಯೆ ನಡೆಯುತ್ತಿದ್ದು ಸಾಮುದಾಯಿಕ ವ್ಯಕ್ತಿತ್ವದಿಂದ ವೈಯುಕ್ತಿಕ ಎನ್ನುವ ಕಡೆಗೆ ಪಲ್ಲಟ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಬಂದ ಇಂಗ್ಲಿಷ್ ಗೀತಗಳು ಒತ್ತುಕೊಟ್ಟಿದ್ದು ವೈಯಕ್ತಿಕ ಭಾವಗಳಿಗೆ ಕಿವಿಗೊಡುವ ವ್ಯಕ್ತಿನಿಷ್ಠ ಕಾವ್ಯಕ್ಕೆ. ಇನ್ನು ಮುಂದುವರೆದು ಹೇಳುವುದಾದರೆ ರಮ್ಯಪಂಥದ ವ್ಯಕ್ತಿನಿಷ್ಠತೆ, ರಮ್ಯತೆ ಹಾಗೂ ಕಲ್ಪನೆಗಳ ಅಮೂರ್ತ ಲೋಕದ ಅಭಿವ್ಯಕ್ತಿಗೆ. ಆದುದರಿಂದಲೇ ಇಲ್ಲಿನ ಅನುವಾದಗಳು ಸಾರ್ವತ್ರಿಕತೆಯನ್ನು ಸಾಧಿಸಿಕೊಳುವುದಕ್ಕೆ ಸಾಧ್ಯವಾಗಿದೆ. ಶ್ರೀಯವರು ಅನುವಾದಕ್ಕೆ ಎತ್ತಿಕೊಂಡ ಕವಿತೆಗಳಲ್ಲಿ ಯುದ್ಧಗೀತೆಗಳಿವೆ, ಆದರೆ ಸಂಸ್ಕೃತಿ ಸಂರಚನೆಗಳನ್ನು ಅಲುಗಾಡಿಸುವ ಕ್ರಾಂತಿಕಾರಿ ಕವಿತೆಗಳು ಗೈರುಹಾಜರಾಗಿವೆ. ವಿಕ್ಟೋರಿಯನ್ ಯುಗದ ಸಂವೇದನೆಯನ್ನು ಎತ್ತಿ ಹಿಡಿಯುವ ಕವಿತೆಗಳು ಈ ಅನುವಾದ ಸಂಗ್ರಹದಲ್ಲಿ ಜಾಗ ಪಡೆದಿವೆ. ಇದು ಆಳದಲ್ಲಿ ನಮ್ಮನಾಳುತ್ತಿದ್ದ ಬ್ರಿಟಿಷ್ ಪ್ರಭುಗಳ ಸಮಕಾಲೀನ ಸಾಹಿತ್ಯ ಪ್ರಜ್ಞೆಯನ್ನು ರೂಢಿಸಿಕೊಳ್ಳುವುದಾಗಿತ್ತು. ಆ ಮೂಲಕ ವಸಾಹತುಶಾಹಿ ಆಡಳಿತವು ಒಡ್ಡಿದ್ದ ಇಂಗ್ಲಿಷ್ ಸಾಹಿತ್ಯ ಕಲಿಕೆಯ ಸವಾಲನ್ನು ನಿಷ್ಠೆಯಿಂದ ಸ್ವೀಕರಿಸಿ ಪಾಲಿಸುವಂತದ್ದಾಗಿತ್ತು.

ರೆನೆಸಾನ್ಸ್ ಕಾಲದ ವಿದ್ಯಾವಂತ ವರ್ಗವು ಯುರೋಪಿನ ಸಂಸ್ಕೃತಿಯನ್ನು ಓದು ಮತ್ತು ಕಲಾರಾಧನೆಯ ತೊಡಗುವಿಕೆಯಲ್ಲಿ ಕಂಡುಕೊಂಡ ಪರಿಣಾಮವಾಗಿ ಒಂದು ಅಭಿರುಚಿಯುಳ್ಳ ವರ್ಗ ನಿರ್ಮಾಣವಾಗಿತ್ತು. ಜೊತೆಜೊತೆಗೇ ದೇಶೀಯ ಭಾಷೆಗಳು ಚಿಗುರಿಕೊಂಡು ಓದಿನ, ಮುದ್ರಣದ ಭಾಷೆಗಳಾಗಿ ಪರಿವರ್ತಿತಗೊಂಡವು. ಅದರಂತೆ ಭಾರತದ ರೆನೆಸಾನ್ಸ್ ಕಾಲ ಎನ್ನಿಸಿಕೊಳ್ಳುವ ವಸಾಹತುಶಾಹಿಯ ಆಳ್ವಿಕೆಯ ಸಂದರ್ಭದಲ್ಲಿ ಸಹ ದೇಶೀಯ ಭಾಷೆಗಳು ಹೊಸ ರೂಪ ತಳೆದುದನ್ನು ಗಮನಿಸಬಹುದು. ಈ ದೇಶಭಾಷೆಗಳು ಹದಗೊಂಡು ಅವುಗಳಲ್ಲಿ ಅಭಿರುಚಿ ನಿರ್ಮಾಣವಾಗುವ ಹಂತದಲ್ಲಿ ಶ್ರೀಯವರ ಇಂಗ್ಲಿಷ್ ಕವಿತೆಗಳ ಅನುವಾದಗಳು ಪ್ರೇಮ ಮತ್ತು ಮದುವೆಗಳನ್ನು ಮರುವಿವರಿಸಿಕೊಳ್ಳುವ ಸಂಸ್ಕೃತಿ ಮೌಲ್ಯಮಾಪನವನ್ನು ಮಾಡಿದವು. ಇಲ್ಲಿರುವ ಪ್ರೇಮಕವಿತೆಗಳು ಕೋರ್ಟ್‌ಶಿಪ್ಪಿನ ಹೊಸ ಸಂಸ್ಕೃತಿಯನ್ನು ಪರಿಚಯಿಸಿದವು. ಈ ಸಂಸ್ಕೃತಿಯು ಕೆನೆಪದರದ ವರ್ಗಕ್ಕೆ ಒಂದು ಅಭಿರುಚಿಯನ್ನು ರೂಢಿಸಿಕೊಟ್ಟಿತು. ಓಲೈಸುವ, ನವಿರಾದ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಕಲೆಯನ್ನು ಸಾಹಿತ್ಯದಲ್ಲಿ ಚಲನಚಿತ್ರದಂತಹ ಪ್ರದರ್ಶನ ಕಲೆಗಳಲ್ಲಿ ಆನಂತರ ರೂಢಿಯೇ ಆಯಿತು. ಕನ್ನಡದ ಮಟ್ಟಿಗೆ ನವೋದಯದ ಆರಂಭ ಕಾಲದಲ್ಲಿ ಪ್ರೇಮ ನಿವೇದನೆಯ ಮರುವಿವೇಚನೆಯನ್ನು ಇಂಗ್ಲಿಷ್ ಗೀತಗಳ ನಂತರ ಬಂದ ಎಲ್ಲ ಪ್ರೇಮಕವಿತೆಗಳು ಮಾಡಿದವು. ಕುವೆಂಪು ಅವರ ’ಚಂದ್ರಮಂಚಕೆ ಬಾ ಚಕೋರಿ’, ’ಪ್ರೇಮ ಕಾಶ್ಮೀರ’, ತೀನಂಶ್ರೀಯವರ ’ಒಲುಮೆ’, ನರಸಿಂಹಸ್ವಾಮಿಯವರ ’ಮೈಸೂರ ಮಲ್ಲಿಗೆ’ ಸಂಗ್ರಹಗಳು ಪ್ರೇಮವನ್ನು ಅಭಿವ್ಯಕ್ತಿ ಮಾಡಿಕೊಳ್ಳುವುದಕ್ಕೆ ಹಿಂಜರಿಯಲಿಲ್ಲ. ಆದರೆ ಆ ಕೋರ್ಟ್‌ಶಿಪ್ಪನ್ನು ದಾಂಪತ್ಯದ ಚೌಕಟ್ಟಿನಲ್ಲಿ ವಿವರಿಸಿಕೊಂಡರು. ಕನ್ನಡದ ಹೊಸ ಸಂವೇದನೆಯು ಉಂಟಾಗಿದ್ದು ಇಂಗ್ಲಿಷ್ ಗೀತೆಗಳು ಹುಟ್ಟು ಹಾಕಿದ ಮಧುರ ಭಾವದ ಗೀತೆಗಳಿಂದ ಎನ್ನುವುದನ್ನು ಮರೆಯಲಾಗದು. ಆದರೆ ಈ ಪ್ರೇಮ ನಿವೇದನೆಯು ಒಂದು ನೈತಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡು ಹೊಸ ಜಗತ್ತಿನಲ್ಲಿ ಪ್ರೇಮ ತಪ್ಪಲ್ಲ, ಆದರೆ ಅದು ಒಂದು ನೈತಿಕ ಚೌಕಟ್ಟಿನಲ್ಲಿರಬೇಕು ಎನ್ನುವ ಧೋರಣೆಯನ್ನು ತಳೆದಿತ್ತು. ಆಧುನಿಕತೆಗೆ ತೆರೆದುಕೊಂಡ ಮೊದಲ ತಲೆಮಾರುಗಳಲ್ಲಿ ಮೇಲ್ಜಾತಿ ಮತ್ತು ಮೇಲ್ವರ್ಗಗಳೇ ಮುಂಚೂಣಿಯಲ್ಲಿದ್ದುದರಿಂದ ಅವರು ಆಧುನಿಕತೆಯನ್ನು ಒಲ್ಲೆ ಎನ್ನಲಿಲ್ಲ. ಆದರೆ ಅದನ್ನು ತಮಗೆ ಬೇಕಾದಂತೆ ತಿದ್ದಿಕೊಂಡರು ಎನ್ನಲಾಗುತ್ತದೆ. ಒಟ್ಟಾರೆ ಇಂಗ್ಲಿಷಿನ ಕವಿತೆಗಳು ಈ ಸಂಸ್ಕೃತಿಯ ಜೊತೆಗೆ ಅನುಸಂಧಾನ ಮಾಡಿದ್ದನ್ನು ಒಂದು ಚಾರಿತ್ರಿಕ ಸಂದರ್ಭದ ಯುಗಧರ್ಮವಾಗಿ ನೋಡಬಹುದಾಗಿದೆ.

ಶ್ರೀಯವರ ಅನುವಾದದಲ್ಲಿ ರಚಿಸಿಕೊಳ್ಳುವ ಚೌಕಟ್ಟುಗಳಲ್ಲಿ ಮೇಲ್ವರ್ಗ/ ಮೇಲ್ಜಾತಿಗಳು ಮುನ್ನೆಲೆಯಲ್ಲಿರುತ್ತವೆ ಎನ್ನುವ ಆರೋಪ ಇದೆ. ಸ್ವತಃ ಮೇಲ್ಜಾತಿ/ಮೇಲ್ವರ್ಗಕ್ಕೆ ಸೇರಿದ ಶ್ರೀಯವರು ಇಂಗ್ಲಿಷಿನ ಕವಿತೆಗಳನ್ನು ಶಿಷ್ಟವರ್ಗಕ್ಕೆ ಹತ್ತಿರವಾಗಿ ಅನುವಾದಿಸಿದ್ದಾರೆ ಎನ್ನುವ ಅಭಿಪ್ರಾಯವಿದೆ. ಶ್ರೀಯವರು ಅನುವಾದಿಸುತ್ತಿದ್ದ ಸಂದರ್ಭದಲ್ಲಿ ಬ್ರಾಹ್ಮಣ-ಶೂದ್ರ, ಇಂಗ್ಲಿಷ್-ಕನ್ನಡ, ಮೈಸೂರು ವಿದ್ಯಾವಂತ ವರ್ಗ-ಉತ್ತರ ಕರ್ನಾಟಕದ ಹಳ್ಳಿತನ ಹೀಗೆ ಅನೇಕ ದ್ವಿತ್ವಗಳನ್ನು ಅವರು ಎದುರಿಸಿರಲಿಕ್ಕೂ ಸಾಕು. ಆದರೆ ಅವರ ಸಮನ್ವಯದ ಶೈಲಿ ಮೇಲ್‌ಸ್ತರದ ಯಜಮಾನಿಕೆಗಳ ಸ್ವರೂಪಗಳನ್ನು ಕಾಣಿಸದಂತೆ ಮರೆಮಾಚುತ್ತದೆ; ದೇಶಕಾಲಗಳನ್ನು ಮೀರುವ ಹಾಗೆ ಮಾಡುತ್ತದೆ. ಹೀಗೆ ಮಾಡುವುದರಿಂದಲೇ ಹಲವಾರು ಸಾಂಸ್ಕೃತಿಕ ಭಿನ್ನತೆಗಳು ಅನನ್ಯತೆಯ ಸ್ವರೂಪವನ್ನು ಪಡೆದುಕೊಳ್ಳುವುದಿಲ್ಲ.

ಶ್ರೀಯವರ ಅನುವಾದದಲ್ಲಿ ಅವರು ಇಂಗ್ಲಿಷಿನ ಸಮಾಜವನ್ನು ಹಾಗೂ ಅಲ್ಲಿನ ಜನರನ್ನು ನೆಲಕ್ಕೆ ಒಗ್ಗಿಸುವ ರೀತಿ ಗಮನಾರ್ಹವಾಗಿದೆ. ಅವರು ಸೂಚಿಸುವ ಪದಗಳು/ಪದಪುಂಜಗಳು ಕೆಲವೊಮ್ಮೆ ಅರ್ಥಪಲ್ಲಟಕ್ಕೆ ಕಾರಣವಾಗುತ್ತವೆ. ಅವು ಅರ್ಥಾಂತರಗಳಿಗೆ ಕಾರಣವಾಗುತ್ತ ತಮ್ಮದೇ ಆದ ಸಾಂಸ್ಕೃತಿಕ ಅರ್ಥಗಳನ್ನು ಪಡೆದುಕೊಳ್ಳುತ್ತವೆ. ಆ ಅರ್ಥಗಳು ಎರಡು ಭಾಷೆಗಳ ಸಾಂಸ್ಕೃತಿಕ ಭಿನ್ನತೆಗಳಿಂದ ಉಂಟಾದ ಅನುವಾದದ ಸೃಷ್ಟಿಯೇ ಅಥವಾ ಅನುವಾದಕರ ಮಧ್ಯಪ್ರವೇಶದಿಂದ ಉಂಟಾದವೇ ಎನ್ನುವುದು ನಿರ್ಧರಿಸುವುದು ಕಷ್ಟ. ಆದರೆ ಶ್ರೀಯವರ ಉದ್ದೇಶ ಮತ್ತು ಆಶಯಗಳು ಒಬ್ಬ ಅನುವಾದಕನಿಗೆ ಇದ್ದಿರಬಹುದಾದ ಐಡಿಯಾಲಾಜಿಗಳು, ಸಾಮಾಜಿಕ ಪ್ರಭಾವಗಳೇ ಮುಂತಾದವುಗಳಿಂದ ಪ್ರಭಾವಿತಗೊಂಡಿಲ್ಲವೆಂದು ಹೇಳುವುದು ಕಷ್ಟ. ಶ್ರೀಯವರು ಮಾಡಿದ ಅನುವಾದಗಳಲ್ಲಿ ಕೆಲವು ಅವರ ಆಶಯಗಳನ್ನು ಎತ್ತಿ ಹೇಳುವಂತಿದ್ದರೆ ಇನ್ನು ಕೆಲವು subversive ಆಗಿವೆ. ಹೀಗೆ ಪ್ರಜ್ಞಾಪೂರ್ವಕ ಹಾಗು ಅಪ್ರಜ್ಞಾಪೂರ್ವಕವಾಗಿ ಶ್ರೀಯವರು ಮಾಡುವ ಮಾರ್ಪಾಟುಗಳಿಗೆ ಸಂಸ್ಕೃತಿ ಕಾರಣಗಳು ಹಿನ್ನೆಲೆಯಾಗಿ ಒದಗಿ ಬರುತ್ತವೆ ಎನ್ನುವುದನ್ನು ಊಹಿಸಬಹುದು.

ಶ್ರೀಯವರ ಅನುವಾದವು ಅನುಸೃಷ್ಟಿಯ ಮಾದರಿಯನ್ನೂ ನೇರಾನುವಾದದ ಮಾದರಿಯನ್ನೂ ಒಟ್ಟೊಟ್ಟಿಗೇ ನಿಭಾಯಿಸುತ್ತದೆ. ಭಾಷೆಯ ಬಳಕೆ ಮತ್ತು ಲಯದ ದೃಷ್ಟಿಯಿಂದ ಹಾಗೂ ಭಾಷಿಕ ಸಂರಚನೆಗಳ ದೃಷ್ಟಿಯಿಂದ ಸಾಂಪ್ರದಾಯಿಕತೆಯನ್ನು ಒಪ್ಪಿಕೊಂಡಂತೆ ಕಾಣುವ ಶ್ರೀಯವರು ಅದನ್ನು ತಮಗೆ ಬೇಕಾದಂತೆ ಮುರಿದು ಕಟ್ಟಿಕೊಂಡಿರುವುದು ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ಕಾಣುತ್ತದೆ. ಕನ್ನಡದಲ್ಲಿ ಬಂದ ಅನುವಾದಗಳ ಮಾದರಿಗಳೇನಿವೆ ಅವುಗಳನ್ನು ಇನ್ನೊಂದು ವಿಸ್ತರಣೆಯ ಹಂತಕ್ಕೆ ಒಯ್ದಿದ್ದು ಈ ಇಂಗ್ಲಿಷ್ ಗೀತಗಳು.

ಸಂರಚನೆ

ಕಾವ್ಯದ ಭಾಷಾಂತರ ಮಾಡುವ ಮುನ್ನ ಬಿ.ಎಂ.ಶ್ರೀ ಅವರು ಹೇಳುವ ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ ಎನ್ನುವ ಮಾತು ಮೇಲ್ನೋಟಕ್ಕೆ ಅದಲು ಬದಲಿನ ಸುಂದರ ಪರಿಕಲ್ಪನೆಯನ್ನು ಮುಂದಿಟ್ಟು ಸೊಬಗನ್ನು ನಿರೀಕ್ಷಿಸುತ್ತದೆ. ಆದರೆ ವಸ್ತ್ರ ಎನ್ನುವಾಗಲೇ ಅದಕ್ಕೆ ಒಬ್ಬರ ದೇಹವಿನ್ಯಾಸಕ್ಕೆ ರೂಪುಗೊಂಡಿದ್ದು ಇನ್ನೊಬ್ಬರಿಗೆ ಹೊಂದುತ್ತದೆಯೇ? ಎನ್ನುವ ಅನುಮಾನವನ್ನು ಹುಟ್ಟುಹಾಕುತ್ತದೆ. ಉದ್ದ, ಅಗಲ, ಅಳತೆಗಳಲ್ಲಿ ವ್ಯತ್ಯಾಸಗೊಳ್ಳುವ ಈ ಮುಜುಗರಗಳನ್ನು ಪ್ರಾಯಶಃ ತೆರೆದ ಮನದಿಂದ ಸ್ವೀಕರಿಸಲು ತೊಡಕು ಎನ್ನಿಸುತ್ತದೆ. ಕನ್ನಡಕ್ಕೆ ಹೊಸಕಾವ್ಯವನ್ನು ಹೇಗೆ ತಂದುಕೊಳ್ಳಬೇಕೆಂಬುದು ಕನ್ನಡದ ಭಾಷಾಂತರಕಾರರಿಗೆ ಸವಾಲಿನ ಸಂಗತಿಯಾಗಿತ್ತು. ಕೆಲವರಿಗೆ ವಸ್ತು ಪಲ್ಲಟ ಮುಖ್ಯವೆನಿಸಿದರೆ ಇನ್ನು ಹಲವರಿಗೆ ಕಾವ್ಯದ ಶರೀರ (ಸಂರಚನೆ)ದ ಬಗೆಗೆ ಆತಂಕ. ಕನ್ನಡದ ಭಾಷಾಂತರಕಾರರ ಜಿಜ್ಞಾಸೆಗಳು ಬಹುತೇಕ ಕಾವ್ಯದ ಸಂರಚನೆಯ ಬಗೆಗೇ ಹೆಚ್ಚು ನಡೆದಿವೆ.

ಇಂಗ್ಲಿಷ್ ಗೀತಗಳು ಬರುವ ಪೂರ್ವದಲ್ಲಿ ಅನುವಾದದ ಕೆಲಸ ಮಾಡಿದ ಮಿಷನರಿ ಕಾವ್ಯದ ಭಾಷಾಂತರಗಳು ಅದಾಗಲೇ ಕನ್ನಡ ಕಾವ್ಯದಲ್ಲಿ ಪ್ರಚಲಿತವಾದ ಛಂದಸ್ಸು, ಸಂಗೀತ, ಲಯ ಹಾಗು ಮಾತ್ರೆ, ಗಣಗಳನ್ನು ಹೊರ ಕವಚವನ್ನಾಗಿ ಇಟ್ಟುಕೊಂಡು ಮಾಡಿದಂತವಾಗಿದ್ದವು. ಈ ಕ್ರಿಯೆ ಕನ್ನಡ ಕಾವ್ಯ ಪ್ರಕಾರದೊಳಗಿನ ಬದಲಾವಣೆಗೆ ಚಾಲನೆಯಿತ್ತಿತು. ರೈಸ್ ಮಹಾಶಯ ಕ್ರೈಸ್ತ ಗೀತೆಗಳನ್ನು ಕನ್ನಡಕ್ಕೆ ತರುವಾಗ ಕನ್ನಡಿಗರಲ್ಲಿ ಪ್ರಚಲಿತವಿದ್ದ ದಾಸರ ಹಾಡುಗಳನ್ನು ಮಾದರಿಯಾಗಿಟ್ಟುಕೊಂಡ ಎಂದು ಹೇಳಲಾಗುತ್ತದೆ. ವಾಸ್ತವವಾಗಿ ಇಂಗ್ಲಿಷ್ ಅಥವಾ ಜರ್ಮನ್ ಭಾಷೆಯ ಮೂಲ ಛಂದಸ್ಸುಗಳ ಮಾದರಿಯನ್ನೂ ಅವನು ಬಿಟ್ಟುಕೊಟ್ಟಿರಲಿಲ್ಲ. ಅಂತ್ಯಪ್ರಾಸವನ್ನು ಇವನು ಜೀವಾಳ ಎಂದು ಭಾವಿಸುತ್ತಾನೆ. ಆದರೆ ಕನ್ನಡದಲ್ಲಿ ಆಗ ಪ್ರಚಲಿತವಿದ್ದುದು ಆದಿಪ್ರಾಸ. ಈ ಮಾರ್ಪಾಟುಗಳು ಭಾಷಾಂತರದಲ್ಲಿ ಕಂಡೂ ಕಾಣದಂತಿವೆ. ಮಿಶನರಿಗಳು ಅನುಸರಿಸಿದ ಸಂರಚನೆಯ ಮಾದರಿಯು ಹಳೆಯ ಕಣಕದಲ್ಲಿ ಹೊಸ ಹೂರಣವನ್ನು ತುಂಬಿಕೊಡುವ ತೆರನಾಗಿದ್ದಿತು. ಕನ್ನಡದ ಹಳೆಯ ಕಂದ, ವೃತ್ತ, ಷಟ್ಪದಿ, ತ್ರಿಪದಿಗಳ ಮಾದರಿಗಳನ್ನಿಟ್ಟುಕೊಂಡು ಕ್ರೈಸ್ತಗೀತೆಗಳನ್ನು ಅನುವಾದ ಮಾಡುವುದರಿಂದ ಜನರ ಅಭಿರುಚಿಯನ್ನು ಬದಲಾಯಿಸಿದಂತಾಗುವುದಿಲ್ಲ; ಬದಲಾಗಿ ದೇವರು ಮತ್ತು ಶ್ರದ್ಧೆಗಳನ್ನು ಮಾತ್ರ ಬದಲಾಯಿಸಿದಂತಾಗುತ್ತದೆ ಎಂಬ ನಂಬಿಕೆ ಇದರ ಹಿಂದೆ ಇದ್ದಂತೆ ತೋರುತ್ತದೆ. ಕಿಟೆಲ್ ರಚಿಸಿದ ಸುದೀರ್ಘ ಕ್ರಿಸ್ತಕಾವ್ಯವು ಹಳಗನ್ನಡದ ಛಂದಸ್ಸಿನಲ್ಲಿ ಸಾಗುವುದನ್ನು ಇಲ್ಲಿ ನೆನೆಯಬಹುದು. ಹೊಸಗನ್ನಡದ ಅಭಿವ್ಯಕ್ತಿಗೆ ಪೂರಕವಾಗಿ ಕ್ರಿಸ್ತ ಮಿಷನರಿಗಳು ಬಳಸಿದ ಕನ್ನಡವು ದೇಶೀಯರಿಗೆ ಅನೇಕ ಹೊಸ ಅಂಶಗಳನ್ನು ತೆರೆದಿಟ್ಟವು. ಮಿಷನರಿ ಕಾವ್ಯಾನುವಾದಗಳು ಭಾಷಾಂತರದ ಮೊದಲ ಹಂತವಾದುದರಿಂದ ಕಾವ್ಯದ ಶರೀರ, ಭಾಷೆ ಮುಂತಾದ ಸಂರಚನಾ ಅಂಶಗಳನ್ನು ಅಲುಗಾಡಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು ಎಂದು ಊಹಿಸಬಹುದು.

ಶ್ರೀಯವರ ಪೂರ್ವದಲ್ಲಿ ನಡೆದ ಅನುವಾದಗಳು ಗದ್ಯಕ್ಕೆ ಪ್ರಾಶಸ್ತ್ಯ ನೀಡಿದ್ದಕ್ಕೊ ಏನೊ ಕಾವ್ಯದ ಅನುವಾದಗಳು ಹಿನ್ನೆಲೆಗೆ ಸರಿದಿದ್ದವು. ಕಾವ್ಯವನ್ನು ಅನುವಾದಿಸಲು ಇದ್ದ ತೊಡಕುಗಳಲ್ಲಿ ಅದರ ಭಾಷಿಕ ಸಂರಚನೆಯೆಂತೊ ಹಾಗೆಯೇ ಅದರ ಶಿಲ್ಪವೂ ಅನುವಾದಕಾರರನ್ನು ಹಿಡಿದು ನಿಲ್ಲಿಸಿರಬೇಕು. ಛಂದಸ್ಸು, ಮಾತ್ರಾ ಲಯಗಳು ಹಾಗು ಆದಿಪ್ರಾಸ, ಅಂತ್ಯಪ್ರಾಸಗಳ ಕಟ್ಟುಪಾಡಿನಲ್ಲಿದ್ದ ಕನ್ನಡ ಕಾವ್ಯದ ಮಾದರಿಯಲ್ಲಿ ತಾವು ಅನುವಾದಿಸಲು ಹೊರಟಿದ್ದ ಇಂಗ್ಲಿಷಿನ ಕಾವ್ಯವನ್ನು ಹೇಗೆ ಹೊಂದಿಸುವುದು ಎನ್ನುವುದೇ ಕವಿಗಳ ಚಿಂತೆಯಾಗಿರುವಂತೆ ತೋರುತ್ತದೆ. ಕನ್ನಡದ ಛಂದಸ್ಸುಗಳನ್ನು ಬಳಸಿ ಮಾಡಿದ ಅನುವಾದಗಳು ಮೊದಲ ಹಂತದಲ್ಲಿ ಸಾಧಾರಣವಾಗಿ ಕಾಣುತ್ತವೆ. ಇಂಗ್ಲಿಷಿನ ಲಯ ಹಾಗು ಛಂದಸ್ಸಿನ ರೀತಿ ಕನ್ನಡಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುವಂತದ್ದು. ಇಂಗ್ಲಿಷಿನ ರಿದಮ್ ಎನ್ನುವುದು ಸ್ಟ್ರೆಸ್ ಅಂದರೆ ಒತ್ತುಗಳಿಂದ ಬರುತ್ತದೆ. ಕನ್ನಡದ ಲಯವನ್ನು ಸಾಮಾನ್ಯವಾಗಿ ರಿದಮ್ ಜೊತೆ ಸಮೀಕರಿಸಲಾಗುತ್ತದೆ. ಆದರೆ ಕನ್ನಡದಲ್ಲಿ ವಾಸ್ತವವಾಗಿ ಲಯ ಮತ್ತು ರಿದಮ್ ಎರಡೂ ಇವೆ ಎನ್ನುವುದು ಪ್ರಾಜ್ಞರ ಅಭಿಪ್ರಾಯ (ನೋಡಿ ಪ್ರಭಾಕರ ಆಚಾರ್ಯ, ಕವಿತೆಯ ಓದು). ಇಂತಹ ಸೂಕ್ಷ್ಮ ಅಂಶಗಳು ಕನ್ನಡದಲ್ಲಿ ಆಂಗ್ಲಭಾಷೆಯ ಕವಿತೆಗಳ ಪ್ರವೇಶಕ್ಕೆ ಇರುವ ಮೂಲಭೂತ ತೊಡಕನ್ನು ಹೇಳುತ್ತವೆ. ಕನ್ನಡದ ಮೊದಲ ಅನುವಾದಕರಾದ ಎಸ್.ಜಿ. ನರಸಿಂಹಾಚಾರ್ಯರು ಹಾಗೂ ಹಟ್ಟಂಗಡಿ ನಾರಾಯಣರಾಯರು ಇಂಗ್ಲಿಷಿನ ಕಂಟೆಂಟ್ ಅನ್ನು ಇಟ್ಟುಕೊಂಡು ತಮ್ಮ ಭಾಷೆಯ ಲಯ, ಛಂದಸ್ಸುಗಳನ್ನು ಬಳಸಿಕೊಂಡು ಅನುವಾದಿಸಿದರು. ಇವರಿಗಿಂತ ಶ್ರೀಯವರು ಭಿನ್ನರಾಗಿ ಆಡುಭಾಷೆಯ ಅಂದರೆ ಕನ್ನಡದ ಮೌಖಿಕ ಲಯಗಳನ್ನು ಬಳಸಿ ಇಂಗ್ಲಿಷಿನ ಕವಿತೆಗಳನ್ನು ಹೊಸಗನ್ನಡಕ್ಕೆ ಹತ್ತಿರ ಮಾಡಿದ್ದಲ್ಲದೆ ಅದನ್ನು ಸಮಕಾಲೀನವಾಗಿರುವಂತೆ ನೋಡಿಕೊಂಡರು. ಈ ಸಮಸ್ಯೆ ಆನಂತರದ ಕವಿತಾ ಅನುವಾದಕರಿಗೆ ಇಲ್ಲವೆಂದು ಹೇಳಲಾಗದು. ಆದರೆ ಮುಕ್ತಛಂದದಲ್ಲಿ ಬರೆಯುವುದು ಎಂದರೆ ಗದ್ಯಸಾಲುಗಳನ್ನು ಬರೆಯುವುದು ಎಂದು ಅರ್ಥೈಸಿಕೊಂಡ ಕವಿಗಳು ಇಂಗ್ಲಿಷಿನ ಅನುವಾದಗಳಲ್ಲಿ ರೈಮ್ ಮತ್ತು ರಿದಮ್‌ಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಕಾಣುವುದಕ್ಕೆ ಹೋಗಲಿಲ್ಲ.

ನಂತರದ ಬೆಳವಣಿಗೆಗಳಲ್ಲಿ ಇಂಗ್ಲಿಷ್ ಕವಿತೆಗಳ ಅನುವಾದಗಳು ಹೊಸ ಕಾವ್ಯ ಪ್ರಕಾರಗಳ ಹುಟ್ಟಿಗೆ ಕಾರಣವಾದವು. ವಸ್ತುಕ ಮತ್ತು ವರ್ಣಕ ಕಾವ್ಯದ ಮಾದರಿಗಳಲ್ಲಿದ್ದ ಕನ್ನಡ ಕಾವ್ಯದಲ್ಲಿ ವ್ಯಕ್ತಿನಿಷ್ಠ ಹಾಗೂ ವಸ್ತುನಿಷ್ಠವೆಂಬ ಎರಡು ಹೊಸ ಮಾದರಿಗಳು ರೂಢಿಯಾದವು. ಭಾವಗೀತೆಯು ವ್ಯಕ್ತಿನಿಷ್ಟವಾದ ಕಾವ್ಯ ಪ್ರಕಾರವಾಗಿ ಹೊಸಯುಗದಲ್ಲಿ ವ್ಯಕ್ತಿತ್ವ ನಿರ್ಮಾಣದ ಕೆಲಸಕ್ಕೆ ಪೂರಕವಾಗಿ ಬಂದಿತು. ಭಾವಗೀತೆಯ ನಾನಾ ಪ್ರಕಾರಗಳಾದ ಅಷ್ಟ ಷಟ್ಪದಿ ಅಥವಾ ಸುನೀತ (Sonnet), ಪ್ರಗಾಥ (Ode), ಶೋಕಗೀತೆ (Elegy), ಕಥನಕವನ (Ballad), ಇವುಗಳು ಭಾಷಾಂತರದ ಮೂಲಕ ಲಭಿಸಿದ ಪ್ರಕಾರಗಳು. ಇವು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಇಪ್ಪತ್ತನೇ ಶತಮಾನದ ಎರಡು ಮೂರನೇ ದಶಕಗಳಲ್ಲಿ. ಹಟ್ಟಿಯಂಗಡಿ ಮತ್ತು ಶ್ರೀಯವರು ತಂದ ಸಂಗ್ರಹಗಳು ಈ ಬಗೆಯ ಹೊಸತನಕ್ಕೆ ಮಾದರಿಗಳಾಗಿ ಬಂದವು. ಇಂಗ್ಲಿಷ್ ಗೀತಗಳು ಸಂಗ್ರಹದಲ್ಲಿರುವ ವಿವಿಧ ಬಗೆಯ ಕಾವ್ಯ ಪ್ರಕಾರಗಳನ್ನು ನೋಡಿದರೆ ಶ್ರೀಯವರು ಹೊಸಗನ್ನಡದ ಕಾವ್ಯಕ್ಕೆ ನೀಡಿದ ಕಾಣಿಕೆಯ ಮಹತ್ವವನ್ನು ಗಮನಿಸಬಹುದು. ವಸ್ತು ಮತ್ತು ಭಾಷಿಕ ರಚನೆಗಳ ವಿನ್ಯಾಸಗಳನ್ನು ಮರುಬರವಣಿಗೆ ಮಾಡಿದ ಶ್ರೀಯವರ ಅನುವಾದಗಳು ಕನ್ನಡ ಕಾವ್ಯದ ಚಲನೆಗೆ ಇಂಬು ನೀಡಿದವು.

ಛಂದಸ್ಸು

ಇಂಗ್ಲಿಷ್ ಗೀತಗಳು ಕನ್ನಡಕ್ಕೆ ಬರುವಾಗ ಎದುರಾಗಿದ್ದು ಕಾವ್ಯದ ಸಂರಚನೆಯ ತೊಡಕು. ಕಾವ್ಯಾನುವಾದದಲ್ಲಿ ಕಾವ್ಯದ ಶರೀರವನ್ನು ಅನುವಾದ ಮಾಡುವುದೇ ಅನುವಾದಕನಿಗೆ ಸವಾಲು. ಕಾವ್ಯದ ಆಶಯಗಳನ್ನು ಹಿಡಿಯಬೇಕೊ ಅಥವಾ ಆಕೃತಿಯನ್ನು ಹಿಡಿಯಬೇಕೊ ಎನ್ನುವ ಜಿಜ್ಞಾಸೆಯೇ ಕಾವ್ಯದ ಅನುವಾದಕರಲ್ಲಿ ಕಾಡುತ್ತದೆ. ಕನ್ನಡದಲ್ಲಿ ಅನುವಾದಗೊಂಡು ಬಂದ ಕಾವ್ಯಗಳಲ್ಲಿ ಈ ತೊಡಕನ್ನು ಅನುವಾದಕರು ತಮ್ಮ ವಿವೇಕಾನುಸಾರವಾಗಿ ವಿವೇಚನೆ ಮಾಡಿದ್ದಾರೆ. ಹತ್ತೊಂಬತ್ತನೇ ಶತಮಾನದ ಅನುವಾದಕರಾದ ಶ್ರೀಕಂಠೇಶಗೌಡರು ತಮ್ಮ ಷೇಕ್ಸ್‌ಪಿಯರ್ ಭಾಷಾಂತರ ನಾಟಕ ಪ್ರತಾಪರುದ್ರದ ಪೀಠಿಕೆಯಲ್ಲಿ ಕಾವ್ಯಕ್ಕೆ ಅಂದ ಕೊಡತಕ್ಕ ಅನೇಕ ಜಾಗಗಳಲ್ಲಿ ಛಂದಸ್ಸು ಒಂದಾಗಿರುವುದು. ಇದೇ ರೀತಿ ಲಕ್ಷಣ, ಅಲಂಕಾರ, ಉಪಮಾನ, ಪುರಾಣ, ಇತಿಹಾಸ, ನೀತಿ, ನ್ಯಾಯ, ಮತ, ಆಚಾರ, ವ್ಯವಹಾರಗಳು ವ್ಯತ್ಯಾಸವಾಗಿರುವಲ್ಲಿ ಭಾಷಾಂತರಿಸುವವನ ಪಾಡೇನು? (ಶ್ರೀಕಂಠೇಶಗೌಡರ ಕೃತಿಗಳು, ಪು.13) ಎಂದು ಅಲವತ್ತುಗೊಂಡಿದ್ದಾರೆ.

ಇಂಗ್ಲಿಷ್ ಭಾಷೆಯ ಕಾವ್ಯವನ್ನು ಕನ್ನಡಕ್ಕೆ ತರುವಾಗ ಇದ್ದ ಧೋರಣೆಯೆಂದರೆ ಅದು ನಮ್ಮ ಕಾವ್ಯದ ವಸ್ತು ಮತ್ತು ರಚನೆಗಳಿಗೆ ಹೊರತಾಗಿ ನಿಲ್ಲುತ್ತದೆ ಎನ್ನುವ ಪೂರ್ವಗ್ರಹ ಮತ್ತು ಭಾಷಿಕ ಕಷ್ಟಗಳು. ಇಂಗ್ಲಿಷಿನ ಲಯ ಹಾಗು ಛಂದಸ್ಸಿನ ರೀತಿ ಕನ್ನಡಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುವಂತದ್ದು. ಆರಂಭಿಕ ಭಾಷಾಂತರಕಾರರಾದ ಧೋಂಡೋ ನರಸಿಂಹ ಮುಳಬಾಗಿಲು ಅವರ ಪುತ್ರ ನರಸೋಪಂತರು ಕನ್ನಡ ಛಂದಸ್ಸಿನ ಕೊಲೆಯು ಎಂಬ ಉಗ್ರವಾದ ಲೇಖನ (ಇದು ನವೆಂಬರ್ 1918ರ 'ವಾಗ್ಭೂಷಣ' ಪತ್ರಿಕೆಯಲ್ಲಿ ಪ್ರಕಟಗೊಂಡಿದೆ ಎಂದು ರಾ.ಯ.ಧಾರವಾಡಕರ ಅವರು ಉಲ್ಲೇಖಿಸಿದ್ದಾರೆ) ಬರೆದು ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರವಾಗುತ್ತಿರುವ ಪಠ್ಯಗಳಲ್ಲಿ ಆಗುತ್ತಿರುವ ಛಂದಸ್ಸಿನ ಕೊಲೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಧಾರವಾಡಕರ ಅವರು ಉಲ್ಲೇಖಿಸುವಂತೆ, ಆಂಗ್ಲ ಭಾಷೆಗೂ ಕನ್ನಡ ಭಾಷೆಗೂ ಏನೇನೂ ಸಂಬಂಧವಿಲ್ಲ. ಆ ಭಾಷೆಗೂ ಕನ್ನಡಕ್ಕೂ ಭೂಮ್ಯಾಕಾಶಗಳಷ್ಟು ಅಂತರವಿದೆ. ಹೀಗಿದ್ದೂ, ಆಂಗ್ಲಭಾಷಾ ಪದ್ಧತಿಯನ್ನು ಕನ್ನಡ ಭಾಷಾ ಲಕ್ಷಣಗಳಲ್ಲಿ ಸಮಾವೇಶ ಮಾಡಬೇಕೆನ್ನುವುದು ಎಂಥ ಅಸಮಂಜಸತನವು.. ಪುರಾತನ ವಿದ್ವಾಂಸರ ಮತರದ ವಿರುದ್ಧವಾಗಿಯೂ, ಭಾಷಾ ಸಂಪ್ರದಾಯದ ವಿರುದ್ಧವಾಗಿಯೂ ರಚಿಸಲ್ಪಡುವ ಕವಿತೆಗಳು ಕನ್ನಡ ಭಾಷೆಯ ಕೊಲೆಯನ್ನು ಮಾಡುವವಲ್ಲದೆ, ಆ ಭಾಷೆಗೆ ಅಲಂಕಾರವಾಗಲಾರವು.. ..ಶಾಸ್ತ್ರವಿರುದ್ಧವಾದ ಕಾಗೆ ಗುಬ್ಬೆಗಳ ಕವಿತೆಗಳ ಅವಶ್ಯವು ಕನ್ನಡ ಭಾಷೆಗೆ ಇರುವುದಿಲ್ಲ (ಹೊಸಗನ್ನಡದ ಉದಯಕಾಲ, ಪು.50).

ಇಂಗ್ಲಿಷಿನಿಂದ ಕನ್ನಡಕ್ಕೆ ಬಂದ ಭಾಷಾಂತರಗಳು ಇರುವ ಛಂದಸ್ಸನ್ನು ಮುರಿದು ಕಟ್ಟಿಕೊಳ್ಳುವ ಕ್ರಿಯೆಯಲ್ಲಿ ಕೆಲಸ ಮಾಡಿವೆ. ಆದುದರಿಂದ ಇಂಗ್ಲಿಷಿನ ಬ್ಲ್ಯಾಂಕ್ ವರ್ಸ್ ಕನ್ನಡದಲ್ಲಿ ಸರಳ ರಗಳೆಯಾಗಿ ಬರುತ್ತದೆ.ಫ್ರೀ ವರ್ಸ್ ಕನ್ನಡದಲ್ಲಿ ಮುಕ್ತಛಂದವಾಯಿತು.ಇವುಗಳಲ್ಲಿ ಆರಂಭದಲ್ಲಿ ಭಾಷಾಂತರಕಾರರಿಗೆ ಆಕರ್ಷಿಸಿದ್ದು ಸರಳ ರಗಳೆ. ಇದನ್ನು ಉಪಯೋಗಿಸಿಕೊಂಡು ಭಾವಗೀತೆಯ ಅನೇಕ ಪ್ರಕಾರಗಳನ್ನು ಕನ್ನಡಕ್ಕೆ ತರುವ ಯತ್ನವನ್ನು ಭಾಷಾಂತರಕಾರರು ಮಾಡಿದ್ದಾರೆ. ಕನ್ನಡದ ಮೊದಲ ಅನುವಾದಕರಾದ ಎಸ್.ಜಿ.ನರಸಿಂಹಾಚಾರ್ಯರು ಹಾಗೂ ಹಟ್ಟಂಗಡಿ ನಾರಾಯಣರಾಯರು ಇಂಗ್ಲಿಷಿನ ವಸ್ತುವನ್ನು ಪ್ರಧಾನವಾಗಿಟ್ಟುಕೊಂಡು ಕನ್ನಡದ ಲಯ, ಛಂದಸ್ಸುಗಳನ್ನು ಬಳಸಿಕೊಂಡು ಅನುವಾದಿಸುವ ಮಿಷನರಿ ಮಾದರಿಯನ್ನು ಅನುಸರಿಸಿದರೆ ಶ್ರೀಯವರು ತಮ್ಮ ಕಾಲಕ್ಕೆ ವಸ್ತು ಮತ್ತು ಅದಕ್ಕೊಪ್ಪುವ ಲಯಗಳನ್ನು ಸಮಕಾಲೀನ ಮೌಖಿಕ ಲಯಗಳಿಂದ ಆರಿಸಿಕೊಂಡು ಭಾಷಾಂತರಿಸಿದರು. ಇದು ಒಂದು ಪಲ್ಲಟ. ಶ್ರೀಯವರು ಮುಕ್ತಛಂದದಲ್ಲಿ ಬರೆಯಲಿಲ್ಲ; ಬದಲಾಗಿ ಅವರು ಕನ್ನಡದ ಲಯಗಳನ್ನು (ಮುಖ್ಯವಾಗಿ ಭಾಮಿನೀ ಲಯ) ಬಳಸಿಕೊಂಡು ಪ್ರಯೋಗಕ್ಕೆ ತೊಡಗಿದುದು ಕಾಣುತ್ತದೆ. ಆದರೆ ವಸ್ತುವಿನ ನಾವೀನ್ಯತೆಯನ್ನು ಬಯಸಿ ಭಾಷಾಂತರಕ್ಕೆ ಕೈಹಾಕಿದ ಕನ್ನಡದ ಭಾಷಾಂತರಕಾರರಿಗೆ ಆ ನಾವೀನ್ಯತೆಯೇ ಹೊಸ ಲಯಗಳ ಕಸಿಗೆ ಉತ್ತೇಜನ ನೀಡಿತು ಎನ್ನಬಹುದು.

ಕಾವ್ಯದ ಭಾಷಾಂತರಗಳಲ್ಲಿ ಶ್ರೀಯವರಿಗಿಂತ ಹಿಂದೆಯೇ ಅನೇಕಾನೇಕ ಪ್ರಯೋಗಗಳು ನಡೆದಿದ್ದವು. ಶ್ರೀಯವರದು ರೂಪಾಂತರದ ಚಿಟ್ಟೆರೂಪವಷ್ಟೆ! ರಂ.ಶ್ರೀ ಮುಗಳಿಯವರು ತಮ್ಮ ಸಾಹಿತ್ಯ ಚರಿತ್ರೆಯಲ್ಲಿ ಗುರುತಿಸಿದಂತೆ 1857ರಲ್ಲಿ ಪ್ರಕಟವಾದ ಯಾತ್ರಿಕನ ಸಂಚಾರ(ವೈಗ್ಲೆ-ಪಿಲಿಗ್ರಿಮ್ಸ್ ಪ್ರೊಗ್ರೆಸ್) ಅನುವಾದಿಸಿದ ಹಲವು ಪದ್ಯಗಳು ಭಾಮಿನೀ ಷಟ್ಪದಿಯಲ್ಲಿದ್ದರೆ, ಇನ್ನು ಕೆಲವು ಹೊಸದಾಗಿ ಮಾಡಿಕೊಂಡ 4 ಮಾತ್ರೆಯ ಚೌಪದಿಯಲ್ಲಿರುತ್ತವೆ. ರಂ.ಶ್ರೀ ಅವರ ಪ್ರಕಾರ, ಈ ಕ್ರೈಸ್ತಗೀತೆಗಳು ಹಳೆಯ ಕನ್ನಡ ಛಂದಸ್ಸಿನ ಬುಡಕಟ್ಟಿನ ಮೇಲೆ ಕಲ್ಪಿಸಿಕೊಂಡು ಬಳಸಿದ ಮೊದಲನೆಯ ಹೊಸ ಛಂದಸ್ಸೆಂದು ಇದಕ್ಕೆ ವಿಶೇಷ ಮಹತ್ವವಿದೆ. ಇಂಗ್ಲಿಷ್ ಮೂಲಕ್ಕೆ ಸರಿ ಹೋಗುವಂತೆ ಇದರಲ್ಲಿ ನಾಲ್ಕು ಪಾದಗಳಿರುತ್ತವೆ). ಮುಂದುವರೆದು ಮಿಷನರಿ ಕೃತಿಯಾದ ಗೀತ ಪುಸ್ತಕಗಳು ಕೃತಿಯಲ್ಲಿ ಕನ್ನಡ ಅನುವಾದಗಳಿದ್ದು ಅವುಗಳ ಸರಣಿ ಹೊಸತಾಗಿದೆ. ಪಾಶ್ಚಿಮಾತ್ಯ ಸಂಗೀತದಲ್ಲಿ ಅವನ್ನು ಅಳವಡಿಸಲಾಗಿತ್ತು ಎಂದಿದ್ದಾರೆ (ಸಾಹಿತ್ಯ ಚರಿತ್ರೆ, ಪು. 207).
ಕನ್ನಡ ಪಠ್ಯಪುಸ್ತಕಗಳಿಗೆಂದು ಭಾಷಾಂತರಿಸಿದ ಪದ್ಯಗಳಲ್ಲಿ ಈ ಮೊದಲಿನ ಭಾಮಿನೀ ಷಟ್ಪದಿ, ಕಂದ, ಸಾಂಗತ್ಯಗಳ ಮಾದರಿಗಳನ್ನು ಅನುಸರಿಸಿ ಮಾಡಿರುವುದು ಕಂಡು ಬರುತ್ತದೆ. ಮೊದಲಿಗ ಭಾಷಾಂತರಕಾರರಾದ ಎಸ್.ಜಿ. ನರಸಿಂಹಾಚಾರ್ಯರು ಮಾಡಿದ ಅನೇಕ ಭಾಷಾಂತರಗಳು ಛಂದಸ್ಸನ್ನು ಬಿಟ್ಟುಕೊಡದೇ ಮಾಡಿದಂತವು. ಉದಾಹರಣೆಗೆ ವರ್ಡ್ಸ್‌ವರ್ತನ ಟು ದ ಕಕೂ ಪದ್ಯವನ್ನು ಎಸ್.ಜಿಯವರು ಕೋಗಿಲೆ ಎಂದು ಸಾಂಗತ್ಯದಲ್ಲಿ ಅನುವಾದಿಸಿದ್ದಾರೆ (ಬಾರೊ ಬಸಂತದ ಕಂದ ಬಾ ಬಾ ಬಾರೋ/ಹಾರುವ ಹಕ್ಕಿ ನೀನಲ್ಲ....). ಜೇನ್ ಟೇಲರ್‌ಳ ದಿ ಸ್ಟಾರ್ (ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್) ಪದ್ಯವನ್ನು ಅವರು ಶರಷಟ್ಪದಿಗೆ ಬಗ್ಗಿಸಿದ್ದಾರೆ. ಆದರೆ ಪಂಜೆಯವರ ಅನುವಾದಿತ ಕವಿತೆಗಳಾದ ತೆಂಕಣ ಗಾಳಿಯಾಟ, ಅಣ್ಣನ ವಿಲಾಪ, ಕಡೆಕುಂಜಿ ಕವಿತೆಗಳು ಮರುರಚನೆಗಳಾಗಿ ಮೈದಳೆಯುವಾಗ ಕನ್ನಡದ ಜಾಯಮಾನವನ್ನೇ ಅನುಸರಿಸುತ್ತವೆ. ಶ್ರೀಯವರಿಗಿಂತ ಮೊದಲು ಕಾವ್ಯವನ್ನು ಅನುವಾದ ಮಾಡಿದ ಎಸ್.ಜಿ.ನರಸಿಂಹಾಚಾರ್ಯ, ಪಂಜೆ ಹಾಗೂ ಹುಯಿಲಗೋಳ ನಾರಾಯಣರಾಯ ಮುಂತಾದವರು ಕನ್ನಡದ ಜಾಯಮಾನಕ್ಕೆ ಒಗ್ಗುವ ಹಾಗೆ ಅನುವಾದಿಸುವ ಗುರಿಯನ್ನು ತಮಗೆ ತಾವೇ ಹಾಕಿಕೊಂಡಿದ್ದರಾದ್ದರಿಂದ ಕನ್ನಡದ ಛಂದಸ್ಸುಗಳಾದ ಷಟ್ಪದಿ, ಕಂದ, ಸೀಸಗಳನ್ನು ಬಳಸಿ ಅನುವಾದ ಮಾಡಿದರು. ಮೇಲಾಗಿ ಅವರು ನೇರಾನುವಾದಕ್ಕೆ ತೊಡಗಲಿಲ್ಲವಾದುದರಿಂದ ನೆಲಕ್ಕೆ ಒಗ್ಗುವ ರೂಪಾಂತರಗಳನ್ನು ಮಾಡಿಕೊಂಡರು. ಕನ್ನಡದ ಛಂದಸ್ಸುಗಳನ್ನು ಅಲ್ಪಸ್ವಲ್ಪ ಬದಲಾಯಿಸಿಕೊಳ್ಳುವ ಸಣ್ಣ ಸ್ವಾತಂತ್ರ್ಯವನ್ನು ಅವರು ತೆಗೆದುಕೊಂಡರಾದರೂ ಅವರ ಅನುವಾದಗಳಲ್ಲಿ ಜಿಗಿತಗಳಿರಲಿಲ್ಲ. ಶ್ರೀಯವರು ತಮ್ಮ ಅನುವಾದಗಳಲ್ಲಿ ಕೊಂಚ ಮಟ್ಟಿಗೆ ಇದೇ ಹಿಂದಿನ ಹಾದಿಯನ್ನು ಅನುಸರಿಸಿದರಾದರೂ ಅವರ ಹೊರಳುಗಳು ಇಂಗ್ಲಿಷ್ ಗೀತಗಳ ಅವರ ಅನುವಾದಗಳಲ್ಲಿ ಗೋಚರಿಸುತ್ತವೆ. ಶ್ರೀಯವರು ನಿವೇದಿಸಿಕೊಳ್ಳುವಂತೆ ಕನ್ನಡದ ಜಾಯಮಾನವನ್ನು ಮೀರದೆ ಎಷ್ಟರಮಟ್ಟಿಗೆ ಅನುವಾದಿತ ಕವಿತೆಗಳ ಛಂದಸ್ಸು ಇಂಗ್ಲಿಷ್ ಛಂದಸ್ಸುಗಳನ್ನು ಹೋಲಬಹುದೊ ಅಷ್ಟರ ಮಟ್ಟಿಗೆ ಕನ್ನಡಕ್ಕೆ ತರಲು ಯತ್ನಿಸಿದ್ದಾರೆ. ಇಂಗ್ಲಿಷ್ ಗೀತಗಳ 1926 ಆವೃತ್ತಿಗೆ ಮುನ್ನುಡಿಯನ್ನು ಬರೆದ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಈ ಅಂಶವನ್ನು ಗುರುತಿಸಿದ್ದು ಶ್ರೀಯವರು ಇಂಗ್ಲಿಷಿಗೆ ಹೋಲುವ ಛಂದಸ್ಸಿನಲ್ಲಿ ಕವಿತೆಗಳನ್ನು ರಚಿಸಿರುವರು ಎಂದು ಪ್ರಶಂಸಿಸಿದ್ದಾರೆ. ಎಂ.ವೀ.ಸೀತಾರಾಮಯ್ಯನವರು ಇಂಗ್ಲಿಷ್ ಗೀತಗಳಿಗೆ ಬರೆದ ಮುನ್ನುಡಿಯಲ್ಲಿ ಕನ್ನಡ ಕಾವ್ಯದ ಸಂಸ್ಕೃತ ನಿಷ್ಠೆಯನ್ನೂ ಪಾಂಡಿತ್ಯ ಪ್ರದರ್ಶನವನ್ನೂ ಕೈಬಿಟ್ಟು ವರ್ಣವೃತ್ತ ಕಂದಾದಿ ಸಂಸ್ಕೃತ ಜನ್ಯ ಛಂದಸ್ಸನ್ನು ತ್ಯಜಿಸಿ, ದೇಸಿಯನ್ನು ನೆಮ್ಮಿ, ಕನ್ನಡ ನೆಲದಲ್ಲಿ ಬೇರುಬಿಟ್ಟ, ಕಸದ ರಾಶಿಯಲ್ಲಿ ಮುಚ್ಚಿಹೋಗಿದ್ದ ಛಂದೋರೂಪಗಳನ್ನು ಭಾಷಾಶೈಲಿಯನ್ನು ರೂಢಿಗೆ ತರಬೇಕು ಎನ್ನುವುದು ಶ್ರೀ ಅವರ ಹಿರಿ ಹಂಬಲವಾಗಿತ್ತು (ಶ್ರೀ ಸಾಹಿತ್ಯ, ಪು. vi). ತೀನಂಶ್ರೀಯವರು ಇಂಗ್ಲಿಷ್ ಗೀತಗಳು ಕೃತಿಗೆ ಬರೆದ ಮುನ್ನುಡಿಯಲ್ಲೂ ಅಲ್ಲಿನ ಛಂದಸ್ಸುಗಳ ಬಗೆಗೆ ಸುದೀರ್ಘವಾದ ಚರ್ಚೆ ಇದೆ. ಎಸ್.ಅನಂತನಾರಾಯಣ ಅವರು ತಮ್ಮ ಹೊಸಗನ್ನಡ ಕಾವ್ಯದ ಮೇಲೆ ಇಂಗ್ಲಿಷ್ ಕವಿತೆಗಳ ಪ್ರಭಾವ ಕೃತಿಯಲ್ಲಿ ಶ್ರೀಯವರ ಛಂದಸ್ಸಿನ ಪ್ರಯೋಗಗಳ ಬಗ್ಗೆ ಸಾಕಷ್ಟು ವಿವರವಾಗಿ ಚರ್ಚಿಸುತ್ತಾ ಪಂಪನ 3+5+3+5ರ ವಿನ್ಯಾಸದಲ್ಲಿರುವ ವೃತ್ತವೊಂದನ್ನು (ಪೆಡಸುದಾರಿ ಕವಿತೆಯ ಅಲ್ಲಿ ಸೊಗಯಿಸುವ ಕೃತಕ ಗಿರಿಗಳಿಂ) ಶ್ರೀಯವರು ಬಳಸಿಕೊಂಡ ಬಗೆಯನ್ನು ವಿವರಿಸಿದ್ದಾರೆ. ಒಟ್ಟಿನಲ್ಲಿ ಶ್ರೀಯವರು ಕನ್ನಡದ ಜಾಯಮಾನಕ್ಕೆ ತಕ್ಕಂತೆ ಎನ್ನುವ ಮಾತನ್ನು ಬಳಸುವಾಗ ಇಂಗ್ಲಿಷ್ ಮತ್ತು ಕನ್ನಡ ಛಂದಸ್ಸುಗಳೆರಡರ ಮರ್ಜಿಯನ್ನೂ ಕಾಯ್ದಿದ್ದಾರೆ. ಆದರೆ ಅವುಗಳನ್ನು ಕೋದ ರೀತಿ ಮಾತ್ರ ಬೆಸುಗೆಯ ಕಚ್ಚುಗಳನ್ನೇ ಕಾಣದಂತೆ ಸೇರಿಕೊಂಡು ಬಿಟ್ಟಿದೆ. ಶ್ರೀ ಹಿಡಿದಿದ್ದು ಮೂರು ಮಾತ್ರೆಗಳ ಲಯ, ವಿಸ್ತರಿಸುವಲ್ಲಿ ನಾಲ್ಕು ಮತ್ತು ಐದು ಮಾತ್ರೆಗಳ ಬಳಕೆ. ಬ್ರಹ್ಮಗಣದ ಮಾದರಿಯಲ್ಲಿ ಕಟ್ಟಿಕೊಂಡ ಲಯಗಳನ್ನು ಮಾತ್ರಾಗಣಕ್ಕೆ ಒಗ್ಗಿಸಿಕೊಂಡು ಶ್ರೀ ಆಧುನಿಕ ಕವಿತೆಗಳಿಗೆ ಬೇಕಾದ ಅಭಿವ್ಯಕ್ತಿಯನ್ನು ರೂಢಿಸಿಕೊಡುವ ಯತ್ನ ಮಾಡಿದರು. ಶ್ರೀಯವರ ಹೊಂದಾಣಿಕೆಯ ಧೋರಣೆಯು ಪ್ರಾಸದ ವಿಷಯದಲ್ಲಿಯೂ ಕಾಣುತ್ತದೆ. ಅವರು ಇಂಗ್ಲಿಷಿನ ಅಂತ್ಯಪ್ರಾಸವನ್ನೂ ಕನ್ನಡದ ಮೂಲದ ಆದಿಪ್ರಾಸದ ಅನುಸರಣೆಯನ್ನೂ ತಮ್ಮ ಗೀತಗಳಲ್ಲಿ ಮಾಡಿದರು.

ಕೊನೆಯದಾಗಿ
ಇಂಗ್ಲಿಷ್ ಗೀತಗಳು ಹುಟ್ಟುಹಾಕಿದ ಅನೇಕ ಸಂಗತಿಗಳ ಮೇಲ್ಮೈ ಲಕ್ಷಣಗಳನ್ನು ಈ ಪ್ರಸ್ತಾವನೆ ಗುರುತಿಸಲೆತ್ನಿಸಿದೆ. ಶ್ರೀಯವರ ಇಂಗ್ಲಿಷ್ ಗೀತಗಳ ಬಗ್ಗೆ ಶ್ರೀಯವರ ಸಮಕಾಲೀನರಾದ ಬೆಳ್ಳಾವೆ ವೆಂಕಟನಾರಾಯಣಪ್ಪರಿಂದ ಹಿಡಿದು ಸೀತಾರಾಮಯ್ಯ, ತೀನಂಶ್ರೀ, ಡಿವಿಜಿ, ಬೇಂದ್ರೆ ಹೀಗೆ ಅನೇಕ ಕವಿಗಳು ಮಾತನಾಡಿದ್ದಾರೆ. ಇಂಗ್ಲಿಷ್ ಗೀತಗಳ ಹಿರಿಮೆಯನ್ನು ಈ ಎಲ್ಲ ಕವಿ ಬರಹಗಾರರ ಮಾತುಗಳು ಎತ್ತಿಹಿಡಿದಿವೆಯಾದರೂ ಈ ಸಂಕಲನದ ಓರೆಕೋರೆಗಳನ್ನು ಸಹ ಎತ್ತಿ ಆಡಿವೆ ಎನ್ನುವುದನ್ನು ಮರೆಯುವಂತಿಲ್ಲ. ಆದರೆ ಈ ಎಲ್ಲ ವಿಮರ್ಶೆಯ ಸೊಲ್ಲುಗಳು ಸಹ ಕಾಲಧರ್ಮಕ್ಕೆ ತಕ್ಕ ಅಪೇಕ್ಷೆಗಳನ್ನು ವ್ಯಕ್ತ ಪಡಿಸಿವೆಯೆನ್ನಬಹುದು. ಹೀಗೆ ಕೃತಿಯೊಂದು ತನ್ನ ಸಮಕಾಲೀನರನ್ನೂ ಮುಂದಿನವರನ್ನೂ ಒಟ್ಟಿಗೇ ಸೆಳೆಯುವುದು ವಿಶೇಷವೇ ಸರಿ. ಹೀಗೆ ಗಮನ ಸೆಳೆಯುವ ಅವಕಾಶ ಸಾಹಿತ್ಯ ಚರಿತ್ರೆಯಲ್ಲಿ ಕೆಲವೇ ಕೆಲವು ಕೃತಿಗಳಿಗೆ ಸಿಗುವಂತದ್ದು. ಶ್ರೀಯವರ ಅನುವಾದದ ಪ್ರಯತ್ನಗಳು ಹೀಗೆ ಚಾರಿತ್ರಿಕ ಎನ್ನಿಸುವಂತಾಯಿತು. ಇಂಗ್ಲಿಷ್ ಗೀತಗಳ ಸಂಕಲನವು ಅನುವಾದದ ಹಲವು ಸವಾಲುಗಳನ್ನು ಎತ್ತಿಕೊಂಡು ಕನ್ನಡದ ಅನುವಾದ ಮೀಮಾಂಸೆಯನ್ನು ಬೆಳೆಸುವುದಕ್ಕೆ ತನ್ನ ಕಾಣಿಕೆಯನ್ನು ನೀಡಿತು.


ಆಕರಗಳು

* ಕರೀಗೌಡ ಬೀಚನಹಳ್ಳಿ. ಬಿ.ಎಂ.ಶ್ರೀಕಂಠಯ್ಯ, ಹಂಪಿ: ಕನ್ನಡ ವಿಶ್ವವಿದ್ಯಾಲಯ, 2013

* ಧಾರವಾಡಕರ, ರಾ.ಯ. ಹೊಸಗನ್ನಡದ ಉದಯಕಾಲ. ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು. 2013ನೇ ಆವೃತ್ತಿ

* ರಾಘವೇಂದ್ರರಾವ್,ಎಚ್.ಎಸ್(ಸಂ)ರಂ.ಶ್ರೀ ಮುಗಳಿ ಸಮಗ್ರ ಸಾಹಿತ್ಯ-ಭಾಗ ೨, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು, 2003

* ರಹಮತ್ ತರೀಕೆರೆ(ಸಂ) ಇಂಗ್ಲಿಷ್ ಗೀತಗಳು: ಸಾಂಸ್ಕೃತಿಕ ಮುಖಾಮುಖಿ, ಹಂಪಿ: ಕನ್ನಡ ವಿಶ್ವವಿದ್ಯಾಲಯ, 2007

* ರಾಜೇಗೌಡ, ಹ.ಕ(ಸಂ)ಶ್ರೀಕಂಠೇಶಗೌಡರ ಕೃತಿಗಳು, ಮೈಸೂರು: ಬೆಳಕೆರೆ ಪ್ರಕಾಶನ, 2009

* ಶಿವಾರೆಡ್ಡಿ, ಕೆ.ಸಿ (ಸಂ) ಅನುವಾದ ಸಂಕಥನ ಭಾಗ 1 & 2. ಬೆಂಗಳೂರು: ಕುವೆಂಪು ಭಾಷಾಭಾರತಿ ಪ್ರಾಧಿಕಾರ, 2017


ಈ ಅಂಕಣದ ಹಿಂದಿನ ಬರೆಹ

ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...