ಏನಿದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ?

Date: 13-01-2022

Location: ಬೆಂಗಳೂರು


‘2014ಕ್ಕೆ, “ಮಕ್ಕಳ ಹಕ್ಕುಗಳ ಒಡಂಬಡಿಕೆ”ಗೆ 25ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮಾಚರಣೆ ಆಚರಿಸಿ, ಈಗ 32 ವರ್ಷದಲ್ಲಿ ಭಾರತವು ಸೇರಿದಂತೆ ಆನೇಕ ರಾಷ್ಟ್ರಗಳು ತನ್ನ ಕಾನೂನುಗಳಲ್ಲಿ ಮಕ್ಕಳು ಎಂದರೆ 18 ವರ್ಷದೊಳಗಿನವರು ಎಂಬ “ತಿದ್ದುಪಡಿ” ಮಾಡಿ, ಮಕ್ಕಳ ಸಂರಕ್ಷಣೆಗೆ ಮುಂದಾಗಿರುವುದು ಒಂದು ಮಹತ್ವದ ಸಂಗತಿಯಾಗಿದೆ’ ಎನ್ನುತ್ತಾರೆ ಮಕ್ಕಳ ಹಕ್ಕು ಮತ್ತು ಮಕ್ಕಳ ಸಂರಕ್ಷಣೆಯ ತಜ್ಞರಾದ ಕೆ. ರಾಘವೇಂದ್ರ ಭಟ್.  ಅವರು ತಮ್ಮ  ಮಕ್ಕಳ ಹಕ್ಕುಗಳು ಮತ್ತು ನಾವು ಅಂಕಣದಲ್ಲಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಕುರಿತು ವಿಶ್ಲೇಷಿಸಿದ್ದಾರೆ. 

“ಮಕ್ಕಳು”, “ಮಗು” ಎಂದಾಗ ನಮ್ಮ ಕಣ್ಣ ಮುಂದೆ ಬರುವ ಉತ್ತರ ಚಿಕ್ಕವರು ಅಥವಾ ಸಣ್ಣವರು ಎಂದು. ಇನ್ನೂ ಸ್ವಲ್ಪ ಯೋಚಿಸಿದಾಗ ಅವರು ಮುಗ್ದರು, ಕೂತೂಹಲಿಗಳು, ಕ್ರೀಯಾಶೀಲರು, “ಪಾಪ” ಅವಲಂಭಿತರು ಹೀಗೆ..ಆದರೆ ಮಗುವಿಗೆ ಒಂದು ಪರಿಭಾಷೆ ಇದೆ. ಒಂದು ನಿರ್ಧಿಷ್ಟ ವಯಸ್ಸಿನ, ಅರ್ಥೈಸಬಹುದಾದ ಮಗು ಎಂದಾಗ, ಅದು 6, 14 ಹೆಚ್ಚೆಂದರೆ 16 ವರ್ಷ ವಯಸ್ಸಿನ ಒಳಗಿರುವವರ ಬಗ್ಗೆ ಚರ್ಚೆ ನಡೆಯುತ್ತವೆ, ಇಂದಿಗೂ ನಡೆಯುತ್ತಲೇ ಇದೆ. ಆದರೆ ಇಂದಿನ ಈ ಯುಗದಲ್ಲಿ, “ಮನುಷ್ಯನ” ಭೌದ್ಧಿಕ, ಮಾನಸಿಕ, ದೈಹಿಕ, ಸಾಮಾಜಿಕ, ಭಾಷಾ ಸಾಮರ್ಥ್ಯದ ಬೆಳವಣಿಗೆಯನ್ನು ವೈಜ್ಞಾನಿಕವಾಗಿ ಶೋಧಿಸಿ, ದೇಹ ರಚನೆಯ ಬೆಳವಣಿಗೆ ಆಧಾರದಲ್ಲಿ, ಒಂದು ಸ್ಪಷ್ಟ ವಯಸ್ಸಿನ ಆಧಾರದಲ್ಲಿ, “ಮಗು”ವಿಗೆ ಅಥವಾ ಮಕ್ಕಳು ಎಂದರೆ ಯಾರು ಎಂಬುದಕ್ಕೆ ಒಂದು ಅರ್ಥವನ್ನು ನೀಡಲಾಯಿತು. ಈಗಾಗಲೇ ಚರ್ಚಿಸಿದ ಅಂಶಗಳಂತೆ, ಆ ಎಲ್ಲಾ ಬೆಳವಣಿಗೆ ಹಂತಗಳನ್ನು ತಲುಪುವುದು “18” ವಯಸ್ಸಿಗೆ ಎಂಬುದನ್ನು ಘೋಷಿಸಲಾಯಿತು. ಅದಕ್ಕೆ ಅಂತರಾಷ್ಟ್ರೀಯ ಮನ್ನಣೆ, ಕಾನೂನಿನ ಮುದ್ರೆ ದೊರೆತು, ವಿಶ್ವ ಪ್ರಚಲಿತವಾಯಿತು. 1989 ನವೆಂಬರ್ 20 ರಂದು ವಿಶ್ವಸಂಸ್ಥೆ, ಅಂತರಾಷ್ಟ್ರೀಯ ಮಟ್ಟದಲ್ಲಿ “ಮಕ್ಕಳ ಹಕ್ಕುಗಳ ಒಡಂಬಡಿಕೆ” ಎಂಬ ಒಪ್ಪಂದ ಮಾಡಿಕೊಂಡು ಅಂಗೀಕಾರ ಮಾಡಿತು. ಇದನ್ನು ಆಗ 165 ರಾಷ್ಟ್ರಗಳು ಒಪ್ಪಿಕೊಂಡವು. 2014ರ ಹೊತ್ತಿಗೆ 196 ರಾಷ್ಟ್ರಗಳು ಇದನ್ನು ಅಂಗೀಕರಿಸಿವೆ. “ಮಕ್ಕಳು ಎಂದರೆ, 18 ವರ್ಷದೊಳಗಿನ ಎಲ್ಲಾ ಮಾನವರು”.

2014ಕ್ಕೆ, “ಮಕ್ಕಳ ಹಕ್ಕುಗಳ ಒಡಂಬಡಿಕೆ”ಗೆ 25ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮಾಚರಣೆ ಆಚರಿಸಿ, ಈಗ 32 ವರ್ಷದಲ್ಲಿ ಭಾರತವು ಸೇರಿದಂತೆ ಆನೇಕ ರಾಷ್ಟ್ರಗಳು ತನ್ನ ಕಾನೂನುಗಳಲ್ಲಿ ಮಕ್ಕಳು ಎಂದರೆ 18 ವರ್ಷದೊಳಗಿನವರು ಎಂಬ “ತಿದ್ದುಪಡಿ” ಮಾಡಿ, ಮಕ್ಕಳ ಸಂರಕ್ಷಣೆಗೆ ಮುಂದಾಗಿರುವುದು ಒಂದು ಮಹತ್ವದ ಸಂಗತಿಯಾಗಿದೆ. “ಮಗು” ಅಂದರೆ 18 ವರ್ಷ ಎಂಬ ಪರಿಭಾಷೆ ನೀಡಲು ಅಂತರಾಷ್ಟ್ರೀಯ ಮಟ್ಟದಲ್ಲಿ ಕೇವಲ ವೈಜ್ಞಾನಿಕ ಮತ್ತು ದೇಹರಚನೆಯ ಅಂಶಗಳಷ್ಟೇ ಕಾರಣ ಅಲ್ಲ. ಅದಕ್ಕೆ ಇನ್ನೂ ಹಲವಾರು ಸಾಮಾಜಿಕ, ರಾಷ್ಟ್ರೀಯ, ಧಾರ್ಮಿಕ ಕಾರಣಗಳೂ ಇವೆ. ಅದಕ್ಕೆ ನಾವು “ವಿಶ್ವಸಂಸ್ಥೆ ಯ ಮಕ್ಕಳ ಹಕ್ಕುಗಳ ಒಡಂಬಡಿಕೆ” ಇತಿಹಾಸವನ್ನು ನೋಡಬೇಕಾಗಿದೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ:-
“ವಿಶ್ವಸಂಸ್ಥೆ”ಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು ಜಗತ್ತಿನೆಲ್ಲೆಡೆ ಇರುವ ಎಲ್ಲಾ ಮಕ್ಕಳ ಹಕ್ಕುಗಳನ್ನು ಕುರಿತು, ಎಲ್ಲಾ ಸರ್ಕಾರಗಳು ಪರಸ್ಪರರೊಂದಿಗೆ ಮಾಡಿಕೊಂಡಿರುವ ಒಪ್ಪಂದ. ಏಕೆ ಅಂತಹ ಒಂದು ಒಪ್ಪಂದ ಮಾಡಿಕೊಳ್ಳಬೇಕಾಯಿತು?, ಎಂಬುದಕ್ಕೆ ಈ ಲೇಖನದ ಪ್ರಾರಂಭದಲ್ಲಿ ವಿವರಿಸಿರುವ ಹಲವಾರು ಅಂಶಗಳು ಕಾರಣಗಳಾಗಿವೆ. ಅದನ್ನು ಕಾನೂನುಬದ್ಧಗೊಳಿಸುವ, ಕಡ್ಡಾಯ ಮಾಡುವ ಹಿನ್ನೆಲೆಯಲ್ಲಿ, ಅದಕ್ಕೊಂದು ರೂಪ, ನೀತಿ, ನಿಯಮ ಕಲ್ಪಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಚಿಂತಿಸುತ್ತಾ ಬಂತು. “ಮಕ್ಕಳನ್ನು” ಕೇಂದ್ರೀಕರಿಸದ ಹೊರತು “ಜಗತ್ತಿನ” ಮುನ್ನಡೆ ಅಸಾಧ್ಯ ಎಂಬುದನ್ನು ಅರ್ಥಮಾಡಿಸಿತು. 16 ಮತ್ತು 17 ನೇ ಶತಮಾನದಲ್ಲಿ ಸಂಪ್ರದಾಯ ಅಭಿವೃದ್ಧಿಯನ್ನು ನಂಬದವರು, ನಂತರದ ಶತಮಾನಗಳಲ್ಲಿ ಆಧುನಿಕತೆ, ಆಧುನಿಕೋತ್ತರ ಅಭಿವೃದ್ಧಿ ಸಿದ್ದಾಂತಗಳು ಚರ್ಚೆಗಳಾಗಿ, ನಂತರ ಉದಾರವಾದ, ನವ ಉದಾರವಾದಗಳು ಹುಟ್ಟಿಕೊಂಡವು. 21 ನೇ ಶತಮಾನಕ್ಕೆ ಕಾಲಿಟ್ಟಾಗ ಅರಿವಾಗಿದ್ದು, “ಮಾನವ ಅಭಿವೃದ್ಧಿ”ಯ ಸಿದ್ದಾಂತ, ಪ್ರತಿಯೊಬ್ಬ ಮನುಷ್ಯ, ಘನತೆಯಿಂದ, ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ, ಆರೋಗ್ಯ, ವಸತಿ, ಆಹಾರ, ಸಂಪೂರ್ಣಗಳಿಕೆ ಯೋಗ್ಯವಾಗಿ ಬದುಕುವುದು. ಈ “ಮಾನವ ಅಭಿವೃದ್ಧಿ” ಅಂದಾಗ ಹೆಚ್ಚಿನ ಪಾಲು ಪಡೆದವರು 41% ಮಕ್ಕಳು. ಈ ಹಿನ್ನೆಲೆಯಲ್ಲಿ “ಮಕ್ಕಳ ಅಭಿವೃದ್ಧಿ” ಪ್ರಾಮುಖ್ಯತೆಯನ್ನು ಪಡೆಯಿತು. “ಅಭಿವೃದ್ಧಿ” ಎಂದಾಕ್ಷಣ ಆರ್ಥಿಕತೆಗೆ ಸಂಭಂದಿಸಿದ್ದಲ್ಲ ಎಂಬುದನ್ನು ಅರಿತು, ಮಾನವನ ಬದುಕು ಮತ್ತು “ಹಕ್ಕಿ”ಗೆ ಸಂಬಂಧಿಸಿದ್ದು ಎಂಬ ಸಂಗತಿ ನಮಗೆ ತಿಳಿದಾಗ, ಮಕ್ಕಳಿಗೂ ಅದೇ ಅನ್ವಯಿಸುತ್ತದೆ. “ಮಕ್ಕಳ ಅಭಿವೃದ್ಧಿ” ಅಂದರೆ, ಅದು ಅವರ ಹಕ್ಕಿಗೆ ಸಂಬಂಧಿಸಿದ್ದು, “ಹಕ್ಕು”ಗಳ ಆಧಾರಿತವಾದದ್ದು, ಹಕ್ಕುಗಳಿಗೆ ಸಂಬಂಧಿಸಿದ್ದು.

ಹಕ್ಕು ಎಂದಾಗ ಗುಣಾತ್ಮಕ ಹಕ್ಕಾಗಿರಬೇಕು (Positive Right), ಋಣಾತ್ಮಕ ಹಕ್ಕಾಗಿರಬಾರದು. (Negative Right) ಋಣಾತ್ಮಕ ಹಕ್ಕು ಎಂದರೆ, ಅವರ ಹಕ್ಕುಗಳನ್ನು ಪಡೆಯಲಿಕ್ಕೆ ಅಡೆತಡೆ, ತೊಡಕು, ತೊಂದರೆ, ಕಷ್ಟಪಡಬೆಕಾದರೆ, ಕ್ಯೂ ನಿಲ್ಲಬೇಕಾದರೆ ಇದನ್ನು ನಾವು Negative Right ಎಂದು ಕರೆಯುತ್ತೇವೆ. Positive Right ಅಂದರೆ ಆ “ಹಕ್ಕ” ನ್ನು ಅನುಭವಿಸಲು ಯಾವುದೇ ಕಷ್ಟಪಡದೇ, ಅಡೆತಡೆ ಇಲ್ಲದೆ, ಅನುಭವಿಸಲು, ಸಂಭ್ರಮಿಸಲು ಇರುವ ಅಂಶಗಳನ್ನು ಪಡೆದುಕ್ಕೊಳ್ಳುವ ಮತ್ತು ಅನುಭವಿಸುವ ಹಕ್ಕನ್ನು ಗುಣಾತ್ಮಕ ಹಕ್ಕು (Positive Right) ಎಂದು ಕರೆಯುತ್ತೇವೆ. ಉದಾ: “ಶಿಕ್ಷಣ”ದ ಹಕ್ಕನ್ನು ನೀಡಿದ್ದೇವೆ. ಯಾರೂ ಆಕ್ಷೇಪಣೆ ಮಾಡಿಲ್ಲ. ಆದರೆ Positive Right ಇಲ್ಲವೆಂದರೆ, ಏನು ಪ್ರಯೋಜನ? ಅಂದರೆ ಅಲ್ಲಿ ಶಾಲೆಯೇ ಇಲ್ಲ ಅಂದಾದರೆ, ಇದ್ದರೂ ಕೊಠಡಿಗಳಿರುವುದಿಲ್ಲ, ಶಿಕ್ಷಕರಿರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಮಗು “ಶಿಕ್ಷಣ” ದ ಸಂಪೂರ್ಣ ಹಕ್ಕನ್ನು ಅನುಭವಿಸುವ, ಸಂತೋಷಪಡುವ, ಅವಕಾಶ ಇರುವುದಿಲ್ಲ. ಇದು ಬಹಳ ಮುಖ್ಯವಾದದ್ದು. ಹಾಗಾಗಿ “ಮಕ್ಕಳ ಹಕ್ಕುಗಳು” ಎನ್ನುವುದಕ್ಕೆ ಒಂದು ರಾಷ್ಟ್ರದ ಬದ್ಧತೆಯನ್ನು ಪಡೆಯಲು “ವಿಶ್ವಸಂಸ್ಥೆ” ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಸಿದ್ಧಪಡಿಸಿತು.

“ಮಕ್ಕಳ ಹಕ್ಕುಗಳ ಒಡಂಬಡಿಕೆ” ಯ ಹಿಂದೆ ಚರಿತ್ರೆಗಳು ಕಂಡು ಬರುತ್ತವೆ. 1914-1918 ರ ವರೆಗೆ ನಡೆದ ಮೊದಲನೇ ಜಾಗತಿಕ ಯುದ್ದದಲ್ಲಿ ಮಕ್ಕಳ ಮೇಲಾದ ದೌರ್ಜನ್ಯ, ಸಾವಿಗೆ ಒಳಗಾದ ಅದೆಷ್ಟೋ ಮಕ್ಕಳು, ಅನಾಥರಾದ ಮಕ್ಕಳು..ಇವರ ಭವಿಷ್ಯವನ್ನು ಪರಿಗಣಿಸಿ, ‘ಮಕ್ಕಳಿಗೆ’ ಪ್ರತ್ಯೇಕ ಕಾನೂನು ಬದ್ಧತೆಯ ಬಗ್ಗೆ ಚರ್ಚೆ ಪ್ರಾರಂಭಿಸಿದ್ದು, “ಸೇವ್ ದ ಚಿಲ್ಡ್ರನ್ ಫಂಡ್” ಎಂಬ ಸಂಸ್ಥೆ.

ಮೊದಲನೇ ಮಹಾಯುದ್ದ, “ಮಕ್ಕಳ ರಕ್ಷಣೆ” ಆಂದೋಲನವನ್ನು ಹುಟ್ಟು ಹಾಕಿತು ಮತ್ತು ಈ ಪ್ರಕಾರ “ಮಕ್ಕಳ ಹಕ್ಕುಗಳ” ವಿಷಯ ಉದ್ಭವಿಸಿತು. ಸೆಪ್ಟೆಂಬರ್ 24, 1924 ರಂದು ಸಂಯುಕ್ತ ರಾಷ್ಟ್ರಗಳ ಒಕ್ಕೂಟ League of Nations ಇದಕ್ಕೆ ಮಾನ್ಯತೆ ನೀಡಿತು. 20 ನೇ ಶತಮಾನದಲ್ಲಿ ಅತ್ಯಂತ ಹೆಚ್ಚು ನಂಬಿದ ಮಾನವ ಅಭಿವೃದ್ಧಿ ಸಿದ್ಧಾಂತದ ಹಿನ್ನೆಲೆಯಲ್ಲಿ, ಮಾನವ ಹಕ್ಕು ಪ್ರಮುಖವಾಯಿತು. ಆ ಹಿನ್ನೆಲೆಯಲ್ಲಿ, 1948 ರಲ್ಲಿ “ಮಾನವ ಹಕ್ಕುಗಳ” ಘೋಷಣೆಯಾಯಿತು. ಅದರಲ್ಲಿ ಮಕ್ಕಳ ವಿಚಾರವನ್ನು ಎತ್ತಿ ಹಿಡಿಯಲಾಯಿತು. ಈ ಹಿನ್ನೆಲೆಯಲ್ಲಿ 1989 ನವೆಂಬರ್ 20ರಂದು, ಮಕ್ಕಳ ಹಕ್ಕುಗಳಿಗೆ ಅಂತರಾಷ್ಟ್ರೀಯ ಒಪ್ಪಂದವೇರ್ಪಟ್ಟು, “ಪ್ರತಿಯೊಂದು ಮಗುವಿಗೂ ಅತ್ಯಂತ ಅತ್ಯುತ್ತಮವಾದುದನ್ನು ಕೊಡುವುದು ಮನುಕುಲದ ಕರ್ತವ್ಯ” ಎಂಬುದನ್ನು ಅಂಗೀಕರಿಸಲಾಯಿತು. ಇದನ್ನು ಗಮನಿಸಿದ ಪೋಲ್ಯಾಂಡ್ ರಾಷ್ಟ್ರ 1978 ರಲ್ಲಿ ಮಕ್ಕಳ ಹಕ್ಕುಗಳ ಸುದೀರ್ಘ, ಗಂಭೀರವಾದ ಚಿಂತನೆ ಪ್ರಾರಂಭಿಸಿ, ಮಕ್ಕಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮಾನ್ಯತೆ, ಗೌರವ, ಪ್ರಾತಿನಿಧ್ಯ, ದೊರೆಯುವ ಹಿನ್ನೆಲೆಯಲ್ಲಿ, “ಮಕ್ಕಳ ಹಕ್ಕುಗಳ ರಚನಾ ಸಮಿತಿ”ಯನ್ನು ರಚಿಸಿ, “ಅಂತರಾಷ್ಟ್ರೀಯ ಮಕ್ಕಳ ವರ್ಷ” ಎಂದು ಆಚರಿಸಿತು ಮತ್ತು ಈ ಪ್ರಕಾರ ಸಮಿತಿ ತನ್ನ ರಚನಾತ್ಮಕ ಕೆಲಸ ಪ್ರಾರಂಭಿಸಿತು.

ಈ ಸಮಿತಿ 1979 ರಿಂದ 1989ರ ವರೆಗೆ ಜಗತ್ತಿನ ಎಲ್ಲಾ ಬದಲಾವಣೆ, ಅಭಿವೃದ್ಧಿ, ಕಾನೂನು, ಬೆಳವಣಿಗೆಗಳನ್ನು ಗಮನಿಸಿ, 10 ವರ್ಷಗಳ ಕಾಲ ಬರೆದು, ತಿದ್ದಿ, 1989 ಕ್ಕೆ “ಮಕ್ಕಳ ಹಕ್ಕುಗಳ” ವಿಚಾರ ವರದಿಯನ್ನು ವಿಶ್ವಸಂಸ್ಥೆಗೆ ಒಪ್ಪಿಸಿತು. ಈ ವರದಿಯನ್ನು ವಿಮರ್ಶಿಸಿದ ವಿಶ್ವಸಂಸ್ಥೆ, 1989 ನವೆಂಬರ್ 20 ರಂದು ತನ್ನ ಸಾಮಾನ್ಯ ಸಮಿತಿಯಲ್ಲಿ ಮಂಡಿಸಿತು. ಅದನ್ನು 165 ರಾಷ್ಟ್ರಗಳು ಅಂಗೀಕರಿಸಿದವು. ಇದನ್ನು 1990 ಜನವರಿ 29 ರಂದು ಜಾಗತಿಕ ನಾಯಕರ ಶೃಂಗ ಸಭೆಯಲ್ಲಿ ಕೂಡ ಚರ್ಚಿಸಿ, ಮನ್ನಣೆ ಮತ್ತು ಅಂಗೀಕಾರ ಪಡೆಯಲಾಯಿತು. ತದ ನಂತರ 1990ರ ಸೆಪ್ಟೆಂಬರ್-2 ರಂದು “ಮಕ್ಕಳ ಹಕ್ಕುಗಳು” ಹಾಗೂ ಒಡಂಬಡಿಕೆ, ಅಂತರಾಷ್ಟ್ರೀಯ ಕಾನೂನುಗಳ ಪಟ್ಟಿಗೆ ಸೇರ್ಪಡೆಯಾಯಿತು. ಈ ಎಲ್ಲಾ ಹಂತದಲ್ಲಿ ಭಾಗವಹಿಸಿದ “ಭಾರತ”, ಕೇವಲ ಮೌಖಿಕ ಒಪ್ಪಿಗೆ ಮಾತ್ರ ನೀಡಿತ್ತು. ನಂತರ ಭಾರತದಲ್ಲಿ ಮಕ್ಕಳ ಅಭಿವೃದ್ಧಿಯನ್ನು ಗಮನಿಸಿ, ಭಾರತ ಸರ್ಕಾರ 1992 ಡಿಸೆಂಬರ್ 11 ರಂದು ಈ ಒಡಂಬಡಿಕೆಗೆ ಶಾಸನಬದ್ಧವಾಗಿ ಅಂಗೀಕರಿಸಿ, ಸಹಿ ಮಾಡಿದೆ. ತದ ನಂತರ 1997, 2002, 2008 ರಲ್ಲಿ ಒಟ್ಟು 3 ವರದಿಗಳನ್ನು ಮಂಡಿಸಿ, ಭಾರತದಲ್ಲಿ “ಮಕ್ಕಳ ಹಕ್ಕುಗಳಿಗಾಗಿ” ದೊಡ್ಡ ಬದಲಾವಣೆಗೆ ಕಾರಣವಾಯಿತು.

ಮಕ್ಕಳ ಹಕ್ಕುಗಳ ಒಡಂಬಡಿಕೆ ಏನು ಹೇಳುತ್ತದೆ:-
ಈ ಒಡಂಬಡಿಕೆಯು, ಮಕ್ಕಳು ಅನುಭವಿಸಬೇಕಾದ, ರಾಷ್ಟ್ರ “ಖಾತ್ರಿ” ಪಡಿಸಬೇಕಾದ ಅನೇಕ ಅಂಶಗಳನ್ನು ಹೇಳಿದೆ. ಅದರಲ್ಲಿ ಮುಖ್ಯವಾಗಿ ವೈಜ್ಞಾನಿಕವಾಗಿ ಮಕ್ಕಳ ಬೆಳವಣಿಗೆ, “ಪೋಷಣೆ ಮತ್ತು ರಕ್ಷಣೆ” ಗೆ ಅಗತ್ಯ ಅವಧಿಯಾದ “18” ವರ್ಷಗಳು ಸೇರಿದ್ದು, ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾತಿನಿಧ್ಯ ದೊರೆಯಿತು. ಕಾನೂನು ಮತ್ತು ಶಾಸನಬದ್ಧ ಪರಿಭಾಷೆಗೆ ಮನ್ನಣೆ ದೊರೆಯಿತು. ಅಂದರೆ, ಒಡಂಬಡಿಕೆಯು “ಮಗು” ವಿಗೆ ಅರ್ಥವನ್ನು ನೀಡಿತು.

“18 ವರ್ಷದೊಳಗಿನ ಎಲ್ಲಾ ಮನುಷ್ಯರೂ ಮಕ್ಕಳು” ಎಂದು, ಯಾವ ರಾಷ್ಟ್ರ ಈ ಒಡಂಬಡಿಕೆಗೆ ಒಪ್ಪಿದೆಯೋ, ಆ ರಾಷ್ಟ್ರದ ಎಲ್ಲಾ ಮಕ್ಕಳ ಕಾನೂನುಗಳಲ್ಲಿರುವ ಪರಿಭಾಷೆಯಲ್ಲಿ ತಿದ್ದುಪಡಿ ಮಾಡಿ, “18” ವರ್ಷ ಮಾಡತಕ್ಕದ್ದು ಎಂದು ಸೂಚಿಸಿದೆ. ಹಾಗೂ ಪ್ರಮುಖವಾಗಿ “54” ಪರಿಚ್ಛೇದಗಳನ್ನು ಒಳಗೊಂಡಿದ್ದು, 10 ಅಧ್ಯಾಯಗಳನ್ನು ಹೊಂದಿದೆ.   

ಹಿನ್ನೆಲೆ:
ಮನುಷ್ಯ ತನ್ನ ಮಕ್ಕಳಿಗೆ ವಿಶೇಷವಾದ ಕಾಳಜಿ, ಪ್ರೀತಿ, ಪ್ರೇಮ, ಮತ್ತು ರಕ್ಷಣೆ ನೀಡುವುದು ಸ್ವಾಭಾವಿಕ, ಪ್ರಾಣಿ, ಪಕ್ಷಿ, ಜಲಚರಗಳೂ ಇದಕ್ಕೆ ಹೊರತಲ್ಲ. ಒಂದು ಸಮುದಾಯ ತನ್ನ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ನೀಡುವುದು ಸ್ವಾಭಾವಿಕ. ಮಾನವ ಹಕ್ಕುಗಳ ಬಗ್ಗೆ ಚಿಂತನೆ ಆರಂಭವಾದದ್ದು 1789ರಲ್ಲಿ, ಫ್ರಾನ್ಸಿನಲ್ಲಿ. “ನಾಗರೀಕ ಹಕ್ಕು” ಘೋಷಣೆ ಹೊರಬಂದ ಸಂದರ್ಭದಲ್ಲೂ ಮಕ್ಕಳನ್ನು ಪೋಷಕರ ಆಸ್ತಿ ಎಂದೇ ಪರಿಗಣಿಸಲಾಗಿತ್ತು. 20 ನೇ ಶತಮಾನದ ಆರಂಭದಲ್ಲೂ ಮಕ್ಕಳ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸೂಕ್ತ ನಿಲುವುಗಳು ಇರಲಿಲ್ಲ. ‘ಮಕ್ಕಳು ಅವರ ಕುಟುಂಬದ ಅಂಕೆಯಲ್ಲಿರಬೇಕು. ಕುಟುಂಬದ ನಿರ್ದೇಶನದಂತೆ ನಡೆಯಬೇಕು. ಮಕ್ಕಳ ಯೋಗಕ್ಷೇಮದ ಸಂಪೂರ್ಣ ಜವಾಬ್ದಾರಿ ಕುಟುಂಬದ್ದೇ’ ಎಂಬುದು ಸಮುದಾಯದಲ್ಲಿ ಆಗ ಇದ್ದ ನಿಲುವು. ಇಂತಹ ನಿಲುವುಗಳ ಬದಲಾವಣೆಗೆ ನಾಗರಿಕ ಸಮಾಜ ಮೊದಲನೆ ಜಾಗತಿಕ ಯುದ್ದ (1914-1918) ಆಗುವ ತನಕ ಕಾಯಬೇಕಾಯಿತು.

“ಸೇವ್ ದಿ ಚಿಲ್ಡ್ರನ್ ಫಂಡ್” (Save the Children Fund-SCF) ಎಂಬ ಅಂತರಾಷ್ಟ್ರೀಯ ಸೇವಾ ಸಂಸ್ಥೆ 1919ರಲ್ಲಿ, ಬ್ರಿಟನ್ ಮತ್ತು ಸ್ವೀಡನ್‍ನಲ್ಲಿ ಶ್ರೀಮತಿ ಎಗ್ಲಾಂಟೈನ್ ಜೆಬ್ ಎಂಬುವರ ಪ್ರಯತ್ನದಿಂದಾಗಿ ಆರಂಭವಾಯಿತು. ಈ ಎರಡು ದೇಶಗಳಲ್ಲಿರುವ (SCF) ಶಾಖೆಗಳ ಒಕ್ಕೂಟದ ಒತ್ತಾಸೆಯಿಂದ “ಮಕ್ಕಳ ಹಕ್ಕುಗಳ ಸನ್ನದು” (Charter of the Rights of the Child) ರಚನೆಯಾಯಿತು. ಅಂದಿನ ರಾಷ್ಟ್ರಗಳ ಒಕ್ಕೂಟ (League of Nations) 1924 ಸೆಪ್ಟೆಂಬರ್ 26ರಂದು ಇದನ್ನು ಅಂಗೀಕರಿಸಿತು.

ಇದರಲ್ಲಿ ಐದು ಪ್ರಮುಖ ವಿಚಾರಗಳಿದ್ದವು:
1. ಪ್ರತಿ ಮಗುವಿಗೆ ದೈಹಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಅವಕಾಶವಿರಬೇಕು.
2. ಹಸಿವಿನಿಂದ ಬಳಲುವ ಮಗುವಿಗೆ ಆಹಾರ, ಅನಾರೋಗ್ಯಗೊಂಡ ಮಗುವಿಗೆ ಚಿಕಿತ್ಸೆ, ಹಿಂದುಳಿದ ಮಗುವಿಗೆ ಸಹಾಯ ನೀಡಬೇಕು. ತಪ್ಪು ಮಾಡಿದ ಮಕ್ಕಳನ್ನು ಸನ್ಮಾರ್ಗಕ್ಕೆ ತರಬೇಕು. ತಿರಸ್ಕೃತ ಅಥವಾ ಅನಾಥ ಮಕ್ಕಳಿಗೆ ರಕ್ಷಣೆ ನೀಡಬೇಕು.
3. ನೈಸರ್ಗಿಕ ದುರಂತಗಳು ಅಥವಾ ಯುದ್ಧ ಸಂಭವಿಸಿದಾಗ ಎಲ್ಲರಿಗಿಂತ ಮೊದಲು ಮಕ್ಕಳಿಗೆ ರಕ್ಷಣೆ ನೀಡಬೇಕು
4. ಮಕ್ಕಳನ್ನು ಎಲ್ಲಾ ರೀತಿಯ ಶೋಷಣೆಗಳಿಂದ ರಕ್ಷಿಸಬೇಕು, ಎಲ್ಲಾ ಮಕ್ಕಳಿಗೂ ರಕ್ಷಣೆ ದೊರೆಯಬೇಕು. ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರೆಯಬೇಕು.
5. ಪ್ರತಿಯೊಂದು ಮಗುವೂ ತನ್ನ ಬುದ್ಧಿಶಕ್ತಿ, ಕೌಶಲ್ಯಗಳನ್ನು ತನ್ನ ಸಹವರ್ತಿಗಳ ಶ್ರೇಯೋಭಿವೃದ್ಧಿಗಾಗಿ ಬಳಸಬೇಕೆಂಬ  ಪ್ರಜ್ಞೆಯೊಡನೆ ಬೆಳೆಯಬೇಕು.

1948 ರಲ್ಲಿ ಘೋಷಿತವಾದ “ಮಾನವ ಹಕ್ಕು” ಗಳಲ್ಲಿ ಮಕ್ಕಳಿಗೂ ಹಕ್ಕುಗಳಿವೆ ಎಂದು ಗುರುತಿಸಲಾಗಿದೆ. 1959 ನವೆಂಬರ್ 20 ರಂದು ವಿಶ್ವಸಂಸ್ಥೆಯ ಮಹಾಸಭೆ ಮಕ್ಕಳ ಹಕ್ಕುಗಳನ್ನು ಅಂಗೀಕರಿಸಿತು. “ಪ್ರತಿಯೊಂದು ಮಗುವಿಗೂ ಅತ್ಯುತ್ತಮವಾದ ವ್ಯವಸ್ಥೆಗಳು ಮತ್ತು ಸೌಲಭ್ಯಗಳು ಹಾಗೂ ಬದುಕನ್ನು ನೀಡಬೇಕಾದುದು ಮನುಕುಲದ ಕರ್ತವ್ಯ” ಎಂಬ ವಿಚಾರವನ್ನು ಎತ್ತಿ ಹಿಡಿಯಿತು.

1924ರಲ್ಲಿ ನೀಡಲಾಗಿದ್ದ ಐದು ಅಂಶಗಳನ್ನು ಇಲ್ಲಿ ವಿಶದೀಕರಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವು ಈ ಮುಂದಿನಂತಿವೆ.
- ಯಾವುದೇ ಮಗು ತಾರತಮ್ಯಕ್ಕೆ ಈಡಾಗಬಾರದು.
- ಮಕ್ಕಳಿಗೆ ಗೌರವಯುತ ಬಾಳು ದೊರೆಯಬೇಕು.
- ಸ್ವತಂತ್ರವಾಗಿ ವಿಕಾಸ ಹೊಂದುವ ಅವಕಾಶವಿರಬೇಕು.
- ಮಕ್ಕಳಿಗೆ ಒಂದು ಹೆಸರು ಮತ್ತು ರಾಷ್ಟ್ರೀಯತೆಯಿರಬೇಕು.
- ಮಕ್ಕಳಿಗೆ ಸಾಮಾಜಿಕ ಭದ್ರತೆ ದೊರೆಯಬೇಕು.
- ಪ್ರೀತಿ ತೋರುವ ಮತ್ತು ಮಕ್ಕಳಿಗೆ ಅರ್ಥಮಾಡಿಕೊಳ್ಳುವ ಆಪ್ತರು ಮಕ್ಕಳಿಗೆ ಇರಬೇಕು.
- ಮಕ್ಕಳಿಗೆ ಶಿಕ್ಷಣ, ಮನೋರಂಜನೆ ದೊರೆಯಬೇಕು.
- ದುರಂತ ಸಂಭವಿಸಿದ್ದಲ್ಲಿ ಮಕ್ಕಳಿಗೆ ಪ್ರಥಮ ಆದ್ಯತೆಯ ಮೇರೆಗೆ ರಕ್ಷಣೆ ಮತ್ತು ಪುನರ್ವಸತಿ ದೊರೆಯಬೇಕು.
- ನಿರ್ಲಕ್ಷ್ಯ, ಹಿಂಸೆ ಅಥವಾ ಶೋಷಣೆಯ ವಿರುದ್ಧ ಮಕ್ಕಳಿಗೆ ರಕ್ಷಣೆಯನ್ನು ಖಾತ್ರಿಪಡಿಸಬೇಕು.

ಇವೆಲ್ಲವನ್ನೂ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಒಪ್ಪಿ ಜಾರಿಗೆ ತರಬೇಕೆಂದು ಬಯಸಲಾಗಿತ್ತೇ ಹೊರತು, ‘ಇವುಗಳನ್ನು ಜಾರಿಗೆ ತರಬಾರದು ಎಂಬ ಒತ್ತಾಯಪೂರ್ವಕ ಆಗ್ರಹ’ವಿರಲಿಲ್ಲ. ಈ ಹಿನ್ನಲೆಯಲ್ಲಿ, 1989 ರಲ್ಲಿ ಜಾರಿಗೆ ಬಂದ “ಮಕ್ಕಳ ಹಕ್ಕುಗಳ ಒಡಂಬಡಿಕೆ”, ಒಂದು ರೀತಿಯ ಧೃಡವಾದ ಕಾನೂನು, ಒಡಂಬಡಿಕೆಯನ್ನು ಒಪ್ಪಿ ಅನುಸರಿಸುವ ರಾಷ್ಟ್ರಗಳ ಜವಾಬ್ದಾರಿ, ಮಿತಿಗಳು, ಮತ್ತು ಜಾರಿ ಮಾಡದಿದ್ದಲ್ಲಿ ತಗೆದುಕೊಳ್ಳಬೇಕಾದ ಕ್ರಮಗಳು ಮೊದಲಾದವುಗಳ ಬಗ್ಗೆ ಕಾನೂನಿನ ಸ್ವರೂಪದಲ್ಲಿ ಅಡಕ ಮಾಡಿರುವುದು ಈ ಒಡಂಬಡಿಕೆಯ ವಿಶೇಷ. ಸದ್ಯ ಚಾಲ್ತಿಯಲ್ಲಿರುವ ಯಾವುದೇ ಕಾನೂನು, ಹಕ್ಕುಗಳಿಗಿಂತ ಇನ್ನೂ ಉತ್ತಮವಾದ ಆದರ್ಶಗಳು ಮತ್ತು ವ್ಯವಸ್ಥೆಗಳು ಮಕ್ಕಳಿಗಾಗಿ ಇರಬೇಕೆಂದು ಈ ಒಡಂಬಡಿಕೆ ಬಯಸಿದೆ.

ಒಡಂಬಡಿಕೆಯ ಪ್ರಮುಖ 10 ಅಧ್ಯಾಯಗಳು ಹೀಗಿವೆ:
ಅಧ್ಯಾಯ.1. ಸಾಮಾನ್ಯ ಮೂಲ ವಿಚಾರಗಳು:- 
ಇದರಲ್ಲಿ “ಮಗು” ವಿನ ಕುರಿತು ಅರ್ಥ, ವಿಶ್ಲೇಷಣೆ, ತಾರತಮ್ಯದ ಬಗ್ಗೆ, ಮಗುವಿನ ಹಿತದೃಷ್ಟಿ, ಜೀವಿಸುವ, ಅಭಿವೃದ್ಧಿ, ಅಭಿಪ್ರಾಯ ಅದನ್ನು ಅಳೆಯುವ ಮೇಲ್ನೋಟದ ಮಾಪಕಗಳ ಬಗ್ಗೆ ವಿವರಿಸಲಾಗಿದೆ.

ಅಧ್ಯಾಯ-2. ರಲ್ಲಿ ನಾಗರಿಕ ಹಕ್ಕುಗಳು, ಮಾಹಿತಿ ಸ್ವಾತಂತ್ರ್ಯ:- 

ಹೆಸರು ಮತ್ತು ರಾಷ್ಟ್ರೀಯತೆ, ಅನನ್ಯತೆ, ವ್ಯಕ್ತಿತ್ವ, ಸ್ವಾತಂತ್ರ್ಯ, ಧರ್ಮ ಪಾಲನೆ, ಸಂಘಟಿತರಾಗುವ, ಖಾಸಗೀತನದ ಮಾಹಿತಿ, ಹಿಂಸೆಯಿಂದ ಮುಕ್ತಿ ಪಡೆಯುವ ಹಕ್ಕು ಮುಂತಾದ 8 ಪ್ರಮುಖ ಹಕ್ಕುಗಳನ್ನು ವಿವರಿಸಲಾಗಿದೆ.
ಅಧ್ಯಾಯ - 3. ಕೌಟುಂಬಿಕ ವಾತಾವರಣ ಮತ್ತು ಪರ್ಯಾಯ ವ್ಯವಸ್ಥೆ:- 
ಪೋಷಕರೊಂದಿಗೆ, ಸಮಸ್ಯೆಯಿದ್ದಲ್ಲಿ ಬೇರ್ಪಡೆ, ವಿಕಾಸಕ್ಕಾಗಿ ಸಾಮರ್ಥ್ಯದ ಗಳಿಕೆ, ಕಾನೂನುಬಾಹಿರ ಸಾಗಾಣಿಕೆ ವಿರುದ್ಧ, ರಕ್ಷಣೆ, ದತ್ತು ವಿಚಾರಗಳನ್ನು ಒಳಗೊಂಡಿದೆ.

ಅಧ್ಯಾಯ - 4. ಮೂಲಭೂತ ಆರೋಗ್ಯ ಸೇವೆ ಮತ್ತು ಆರೈಕೆ:-
ವಿಕಲಚೇತನ (ವಿಶೇಷ ಸಾಮರ್ಥ್ಯವುಳ್ಳ) ಮಕ್ಕಳ ರಕ್ಷಣೆ, ಆರೋಗ್ಯ ಸೇವೆ, ಸಾಮಾಜಿಕ ಭದ್ರತೆ, ಇವೆಲ್ಲ ಅಂಶಗಳು ಸೇರಿವೆ.
ಅಧ್ಯಾಯ - 5. ಶಿಕ್ಷಣ, ವಿಶ್ರಾಂತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು:- 
ಶಿಕ್ಷಣದ ಹಕ್ಕು, ಶಿಕ್ಷಣದ ಗುರಿ, ವಿಶ್ರಾಂತಿ ಮತ್ತು ಮನೋರಂಜನೆ ಮುಂತಾದ ಹಲವಾರು ಸಂಗತಿಗಳನ್ನೊಳಗೊಂಡಿದೆ.
ಅಧ್ಯಾಯ - 6. ತುರ್ತುಸ್ಥಿತಿಯಲ್ಲಿರುವ ಮಕ್ಕಳು ಮತ್ತು ರಕ್ಷಣೆ:- 
ನಿರಾಶ್ರಿತ ಮಕ್ಕಳು ಯುದ್ಧ/ಸಶಸ್ತ್ರ ಸಂಘರ್ಷದಿಂದ ರಕ್ಷಣೆ ಮುಂತಾದ ವಿಷಯಗಳನ್ನೊಳಗೊಂಡಿದೆ.
ಅಧ್ಯಾಯ – 7. ಕಾನೂನಿನೊಡನೆ ಸಂಘರ್ಷಕ್ಕೆ ಬಿದ್ದ ಮಕ್ಕಳು:-
ಪುನರ್ವಸತಿ ವ್ಯವಸ್ಥೆ, ಮಕ್ಕಳ ನ್ಯಾಯ ವ್ಯವಸ್ಥೆ ಜಾರಿ, ಮಕ್ಕಳು ಯಾವುದೇ ಕಾನೂನಿನೊಡನೆ ಸಂಘರ್ಷ ನಡೆಸದಂತೆ, ಒಂದು ವೇಳೆ ನಡೆಸಿದರೆ ಅದರಿಂದ ಹೊರಬರಲು ಅವಕಾಶ ಮುಂತಾದ ಅವಕಾಶಗಳನ್ನು ಹೇಳಲಾಗಿದೆ.
ಅಧ್ಯಾಯ – 8. ಮೂಲ ನಿವಾಸಿಗಳು ಮತ್ತು ಅಲ್ಪಸಂಖ್ಯಾತರು:-
ಅಲ್ಪಸಂಖ್ಯಾತರು ಮತ್ತು ಮೂಲನಿವಾಸಿಗಳ ಮಕ್ಕಳಿಗೆ ಸೂಕ್ತ ಶಿಕ್ಷಣ, ಆರೋಗ್ಯ, ವಸತಿ ಮುಂತಾದ ಅಂಶಗಳು.
ಅಧ್ಯಾಯ – 9. ಶೋಷಣೆಗೆ ಒಳಗಾದ ಮಕ್ಕಳು:-
ಬಾಲಕಾರ್ಮಿಕತೆ, ಆರ್ಥಿಕ ಶೋಷಣೆ, ಮಾದಕ ವಸ್ತುಗಳು, ಲೈಂಗಿಕ ಶೋಷಣೆ, ಸಾಗಾಣಿಕೆ, ಮಾರಾಟ ಮತ್ತು ಇನ್ನಿತರ ಶೋಷಣೆಗಳಿಂದ ರಕ್ಷಣೆ ಮುಂತಾದ ಸಂಗತಿಗಳನ್ನು ಇಲ್ಲಿ ನೋಡಬಹುದು. ಅಧ್ಯಾಯ -10 ಮಕ್ಕಳ ಹಕ್ಕುಗಳ ಒಡಂಬಡಿಕೆ ಒಪ್ಪಿಗೆ ಮತ್ತು ಪ್ರಚಾರ ಜಾರಿ ಮತ್ತು ವಿಶ್ವಸಂಸ್ಥೆಯ ಸಾಮಾಜಿಕ ವರದಿಯ ಅಂಶಗಳನ್ನು ಒಳಗೊಂಡಿದೆ.

ಈ ಎಲ್ಲಾ 10 ಅಧ್ಯಾಯದ ಕ್ರೋಡೀಕರಿಸಿದ 54 ಅಂಶಗಳ (ಹಕ್ಕುಗಳು) , 4 ಪ್ರಮುಖ ಹಕ್ಕುಗಳೆಂದರೆ

1. ಬದುಕುವ ಹಕ್ಕು.  2. ರಕ್ಷಣೆಯ ಹಕ್ಕು
3. ಅವಕಾಶ, ವಿಕಾಸ ಮತ್ತು ಅಭಿವೃಧ್ಧಿ ಹೊಂದುವ ಹಕ್ಕು. 4. ಭಾಗವಹಿಸುವ ಹಕ್ಕು.
ಈ ಮೇಲಿನ 4 ಪ್ರಮುಖ ಹಕ್ಕುಗಳು, “ಮಕ್ಕಳ ಹಕ್ಕುಗಳು” ಒಡಂಬಡಿಕೆಯ ಜೀವಾಳ.

ಈ ಮೇಲೆ ತಿಳಿಸಿದ ಎಲ್ಲಾ ಹಕ್ಕುಗಳನ್ನು ಅನುಷ್ಠಾನ ಮಾಡಿ, ರಾಷ್ಟ್ರದ ಎಲ್ಲಾ ಮಕ್ಕಳು ಅರ್ಥಮಾಡಿಕೊಂಡು, ಪಡೆದು, ಅನುಭವಿಸಿ, ಸಂಭ್ರಮಿಸಿ, ಬೆಳವಣಿಗೆ ಹೊಂದುವುದು ದೇಶದ ಅಭಿವೃದ್ಧಿಯ ಮಹತ್ತರವಾದ ಹೆಜ್ಜೆ. ಅದರಲ್ಲಿ ದೇಶದ 50% ಪ್ರಗತಿಯ ಅಂಶಗಳು, ಸೂಚ್ಯಂಕಗಳನ್ನು ಒಳಗೊಂಡಿದೆ. ಇದನ್ನು ಖಾತ್ರಿಪಡಿಸುವುದು, ಸಮಾಜ, ರಾಷ್ಟ್ರ ಮತ್ತು ಸರ್ಕಾರದ ಜವಾಬ್ದಾರಿ. ಮಕ್ಕಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. 2013ರಲ್ಲಿ ಬಂದ ಮಕ್ಕಳ ರಾಷ್ಟ್ರೀಯ ನೀತಿಯಲ್ಲಿ ಹೇಳಿದಂತೆ  Declaring its Children as the Nation’s “Supremely Important Asset” ಮಕ್ಕಳು ರಾಷ್ಟ್ರದ ಮಹತ್ವದ ಅತ್ಯುನ್ನತ ಸಂಪತ್ತು ಎಂದು ದಾಖಲಿಸಿದೆ. ಇದರ ಅರ್ಥ ಅವರನ್ನು ಕಡೆಗಣಿಸಿದರೆ, ಅಲ್ಲಗಳೆದರೆ, ನಿರ್ಲಕ್ಷಿಸಿದರೆ, ಮಾನ್ಯತೆ ನೀಡದಿದ್ದರೆ, ಪ್ರಾಧಾನ್ಯತೆ ನೀಡದಿದ್ದರೆ, “ರಾಷ್ಟ್ರದ” ದೊಡ್ಡ ಸಂಪತ್ತು ಕಳೆದು ಹೋದಂತೆ. ಅವರನ್ನು ಸಂರಕ್ಷಿಸುವ, ಬೆಳೆಸುವ, ಅಭಿವೃದ್ಧಿಪಡಿಸುವ ಮುಖ್ಯ ಅಭಿವೃದ್ಧಿಯ ಪಥಕ್ಕೆ ತಂದು ನಿಲ್ಲಿಸುವ ಹೊಣೆ ಸಮಾಜ ಮತ್ತು ಸರ್ಕಾರದ್ದು. ಈ ಸಂದರ್ಭದಲ್ಲಿ ಮೇಲಿರುವ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಅದರ ಅನುಷ್ಠಾನಕ್ಕೆ ಒಂದಷ್ಟು ರೀತಿ, ನೀತಿ-ರಿವಾಜುಗಳು ಬೇಕು. ಅದಕ್ಕೆ ಭಾರತದಲ್ಲಿ 1960 ರಿಂದಲೂ ಹಲವಾರು ಕಾನೂನುಗಳನ್ನು ತರಲಾಗಿದೆ. 1992ರ ನಂತರವಂತೂ ಹಲವಾರು ಕಾನೂನುಗಳಿಗೆ, ಮಕ್ಕಳ ಒಡಂಬಡಿಕೆ ಪ್ರಕಾರವೇ ತಿದ್ದುಪಡಿ ಮಾಡಿ ಅನುಷ್ಠಾನ ಮಾಡಲಾಗುತ್ತಿದೆ.

ಮಕ್ಕಳ ಸಂರಕ್ಷಣೆ ಎಂದರೇನು? : 18 ವರ್ಷದೊಳಗಿನ ಮ್ಕಕಳನ್ನು ಯಾವುದೇ ರೀತಿಯ ನಿರ್ಲಕ್ಷ್ಯ, ಹಿಂಸೆ, ಶೋಷಣೆ, ಮತ್ತು ಅನಗತ್ಯವಾಗಿ ಕುಟುಂಬದಿಂದ ದೂರ ಮಾಡುವುದರಿಂದ ರಕ್ಷಿಸುವುದನ್ನು ‘ಮಕ್ಕಳ ಸಂರಕ್ಷಣೆ’ ಎಂದು ಕರೆಯುತ್ತೇವೆ. ಇದರಲ್ಲಿ ಪ್ರಮುಖವಾಗಿ ಮಕ್ಕಳು ಯಾವುದೇ ರೀತಿಯ ಅಪಾಯಕ್ಕೆ ಹೋಗದಂತೆ ಹಾಗೂ ಅಪಾಯಗಳಿಂದ ರಕ್ಷಿಸಿ ಅವರ ಬಾಲ್ಯವನ್ನು ಮತ್ತು ಹಕ್ಕುಗಳನ್ನು ಅನುಭವಿಸುವಂತೆ ಮಾಡಿ ಮಕ್ಕಳು ದುರ್ಬಲರಾಗುವುದನ್ನು ತಪ್ಪಿಸುವುದೇ ಮಕ್ಕಳ ಸಂರಕ್ಷಣೆ ಎಂದು ರಾಷ್ಟ್ರೀಯ ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆಯ ಮಾರ್ಗದರ್ಶಿ ಸೂಚನೆಯಲ್ಲಿ ಹೇಳಲಾಗಿದೆ. (ಪರಿಷ್ಕೃತ ಯೋಜನೆ 2014-15) 

ಮಕ್ಕಳು ಅತ್ಯಂತ ಹೆಚ್ಚು ನಿರ್ಲಕ್ಷ್ಯ ಹಿಂಸೆ, ಶೋಷಣೆ, ಮತ್ತು ಕುಟುಂಬದಿಂದ ದೂರವಾಗುವ ಸ್ಥಿತಿ ಅಥವಾ ಪದ್ಧತಿ ಇರುವುದು ಹಾಗೂ ಜೀವನದಲ್ಲಿ ಅಪಾಯಕ್ಕೆ ಹೋಗುವ ಸ್ಥಿತಿ ಬಾಲಕಾರ್ಮಿಕತೆ, ಬಾಲ್ಯವಿವಾಹ ಮತ್ತು ಮಕ್ಕಳ ಸಾಗಾಣಿಕೆ ಮತ್ತು ಮಾರಾಟ ಸ್ಥಿತಿಯಲ್ಲಿ ಕಾಣುತ್ತದೆ. ಅದರಂತೆ ಮಕ್ಕಳ ಸಂರಕ್ಷಣೆಯ ಇನ್ನೊಂದು ಅರ್ಥ, “ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಹಾಗೂ ಮಕ್ಕಳ ಸಾಗಾಣಿಕೆ ಮತ್ತು ಮಾರಾಟವನ್ನು ಸಂಪೂರ್ಣ ತಡೆಗಟ್ಟಿ, ನಿರ್ಮೂಲನೆ ಮಾಡುವುದು ಹಾಗೂ ಯಾವುದೇ ಮಕ್ಕಳು ಈ ಪದ್ಧತಿಗೆ ಒಳಗಾಗದಂತೆ ನೋಡುವುದು, ತಡೆಯುವುದು ಮತ್ತು ಈ ಕ್ರೂರ ವ್ಯವಸ್ಥೆಯಿಂದ ದೂರ ಇಡುವುದು ಮತ್ತು ಸಂರಕ್ಷಿಸುವುದು ಕೂಡ ಮಕ್ಕಳ ಸಂರಕ್ಷಣೆ ಅರ್ಥ ವ್ಯಾಪ್ತಿಗೆ ಬರುತ್ತದೆ.”   

ನಮ್ಮ ರಾಷ್ಟ್ರದ “ಮಕ್ಕಳ ಸಂರಕ್ಷಣೆ” ಗಾಗಿರುವ ಎಲ್ಲಾ ಕಾನೂನುಗಳಲ್ಲಿ “ಮಕ್ಕಳ ಹಕ್ಕುಗಳ” ಒಡಂಬಡಿಕೆಯಲ್ಲಿ ಹೇಳಿದ ಹಕ್ಕನ್ನು ಒದಗಿಸುವ ಅಂಶಗಳು ಒಳಗೊಂಡಿದೆ. ಅದನ್ನು ನೀವು ಗಮನಿಸಬಹುದು. ಪ್ರತಿ ಕಾನೂನಿನ ಮೇಲೆ “ಮಕ್ಕಳ ಹಕ್ಕುಗಳ” ನ್ಯಾಯಯುತ, ಕಾನೂನುಬದ್ಧ, ಅನುಷ್ಠಾನದ ಬದ್ಧತೆ ಕಾಣಬಹುದು. ಅವು ಕಾನೂನಿನ ಅನುಷ್ಠಾನಕ್ಕಾಗಿ ಅಲ್ಲ “ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ” ಎಂಬ ಪರಿಭಾಷೆಯಲ್ಲಿಯೇ ನೋಡಬೇಕು. ಕೇವಲ ಕಾನೂನಿಗಾಗಿ ಎಂದು ನೋಡಿದಾಗ ಕೇವಲ ಶಬ್ಧಗಳು ಮಾತ್ರ ಕಾಣುತ್ತವೆ. “ಹಕ್ಕಿ” ಗಾಗಿ ಎಂದು ನೋಡಿದಾಗ, “ಅಭಿವೃದ್ಧಿಯ” ಅಂಶ ನಾವು ನೋಡಬಹುದು. (ಲೇಖನಕ್ಕೆ ಅಧ್ಯಯನ ಮಾಡಿದ ಕೃತಿ: ಡಾ. ಎನ್. ವಿ ವಾಸುದೇವ ಶರ್ಮಾ ರವರ “ಕಲ್ಪನೆಯಿಂದ ಸಾಧ್ಯತೆಯೆಡೆಗೆ” ಹಾಗೂ ಇತರ ಕೃತಿಗಳು)    

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ 54 ಪರಿಚ್ಛೇದಗಳ ಸಂಕ್ಷಿಪ್ತ ಪರಿಚಯ ಮಹಿತಿಗಾಗಿ ಇಲ್ಲಿದೆ ನೋಡಿ. ಇದರಲ್ಲಿ ಪರಿಚ್ಛೇದ 1 ರಿಂದ 41 ರ ತನಕ ಮಕ್ಕಳಿಗೆ ಸಂಬಂದಿಸಿದ್ದು. 42 ರಿಂದ 54 ರ ತನಕ ಸರಕಾರ ಮತ್ತು ಅನುಷ್ಠಾನದಾತರಿಗೆ ಸಂಬಂದಿಸಿದ್ದು. 

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ- ನವೆಂಬರ್ 20, 1989.
ಭಾರತ ಸರ್ಕಾರ 1992 ಡಿಸೆಂಬರ್ 11ರಂದು ಸಹಿ ಮಾಡಿದೆ.
ಪರಿಚ್ಚೇಧ 1 : 18 ವರ್ಷದೊಳಗಿನ ಎಲ್ಲಾ ಮನುಷ್ಯ ಜೀವಿಗಳು ಮಗು ಅಥವಾ ಮಕ್ಕಳು. 
ಪರಿಚ್ಚೇಧ 2 : ಮಕ್ಕಳಲ್ಲಿ ಯಾವುದೇ ತಾರತಮ್ಯ ತರಬಾರದು. 
ಪರಿಚ್ಚೇಧ 3 : ಮಕ್ಕಳ ಹಿತಾಸಕ್ತಿ  ಕಾಪಾಡಬೇಕು. 
ಪರಿಚ್ಚೇಧ 4 : ಮಕ್ಕಳ ಹಕ್ಕುಗಳನ್ನು ಸರ್ಕಾರ ಪ್ರಾಮಾಣಿಕವಾಗಿ ಜಾರಿಗೆ ತರಬೇಕು. 
ಪರಿಚ್ಚೇಧ 5 : ಮಕ್ಕಳ ಶ್ರೇಯೋಭಿವೃದ್ದಿಗೆ ಸಹಕರಿಸುವ ಪೋಷಕರಿಗೆ ಸರ್ಕಾರದ ಮನ್ನಣೆ. 
ಪರಿಚ್ಚೇಧ 6 : ಜೀವಿಸುವ ಹಕ್ಕು. 
ಪರಿಚ್ಚೇಧ 7 : ಹೆಸರು ಮತ್ತು ರಾಪ್ಟ್ರೀಯತೆಯನ್ನು ಪಡೆಯುವ ಹಕ್ಕು. 
ಪರಿಚ್ಚೇಧ 8 : ಮಕ್ಕಳ ಅನನ್ಯತೆಯನ್ನು ಕಾಪಾಡುವುದು. (ಹೆಸರು,ಜಾತಿ, ವರ್ಗ, ಪರಿಸ್ಥಿತಿ, ಕೌಟುಂಬಿಕ ಸಂಬಂಧ ಉಳಿಸಿಕೊಳ್ಳುವುದು.) 
ಪರಿಚ್ಚೇಧ 9 : ಪೋಷಕರಿಂದ ರಕ್ಷಣೆಯ ಹಕ್ಕು. 
ಪರಿಚ್ಚೇಧ 10 : ಪೋಷಕರೊಂದಿಗಿರುವ ಹಕ್ಕು 
ಪರಿಚ್ಚೇಧ 11 : ಸ್ಥಳಾಂತರದಿಂದ ರಕ್ಷಣೆ ಪಡೆಯುವ ಹಕ್ಕು.(ಯಾವುದೇ ಮಗುವನ್ನು/ಪೋಷಕರ/ಸರ್ಕಾರದ/ಹಾಗೂ ಮಗುವಿನ ಅನುಮತಿ ಇಲ್ಲದೆ ಸ್ಥಳಾಂತರ ಮಾಡುವ ಹಾಗಿಲ್ಲ.) 
ಪರಿಚ್ಚೇಧ 12 : ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು.
ಪರಿಚ್ಚೇಧ 13 : ಮಾಹಿತಿ ಪಡೆಯುವ ಹಕ್ಕು. 
ಪರಿಚ್ಚೇಧ 14 : ಆತ್ಮಸಾಕ್ಷಿ ಮತ್ತು ಧರ್ಮದ ಅನುಸರಣೆ, ಧಾರ್ಮಿಕ ಹಕ್ಕು. 
ಪರಿಚ್ಚೇಧ 15 : ಸಂಘಟಿತರಾಗುವ ಹಕ್ಕು. 
ಪರಿಚ್ಚೇಧ 16 : ವೈಯಕ್ತಿಕ ರಕ್ಷಣೆಯ ಹಕ್ಕು.
ಪರಿಚ್ಚೇಧ 17 : ದೇಶ ಮತ್ತು ಅಂತರಾಪ್ಟ್ರೀಯ ಮಟ್ಟದ ಮಾಹಿತಿ ಪಡೆಯುವ ಹಕ್ಕು.
ಪರಿಚ್ಚೇಧ 18 : ಹೆತ್ತವರ/ಪೋಷಕರ ಪೋಷಣೆ, ಲಾಲನೆ ಪಡೆಯುವ ಹಕ್ಕು. 
ಪರಿಚ್ಚೇಧ 19 : ದುರುಪಯೋಗದಿಂದ ರಕ್ಷಣೆಯ ಹಕ್ಕು. 
ಪರಿಚ್ಚೇಧ 20 : ಕುಟುಂಬ ವಾತಾವರಣದಿಂದ ವಂಚಿತ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಪಡೆಯುವ ಹಕ್ಕು.
ಪರಿಚ್ಚೇಧ 21 : ದತ್ತು ನೀಡುವಾಗ ಅನ್ಯಾಯವಾಗದ ಹಾಗೆ ರಕ್ಷಿಸುವ ಹಕ್ಕು. 
ಪರಿಚ್ಚೇಧ 22 : ನಿರಾಶ್ರಿತ, ನಿರ್ವಸಿತರಾಗುವುದರಿಂದ ರಕ್ಷಣೆ ಹಕ್ಕು, 
ಪರಿಚ್ಚೇಧ 23 : ಅಂಗವಿಕಲ ಮಕ್ಕಳಿಗೆ ರಕ್ಷಣೆಯ ಹಕ್ಕು. 
ಪರಿಚ್ಚೇಧ 24 : ಉತ್ತಮ ಆರೋಗ್ಯ ಹೊಂದುವ ಹಕ್ಕು. 
ಪರಿಚ್ಚೇಧ 25 : ಎಲ್ಲಾ ಮಕ್ಕಳ ಪಾಲನೆ ಕೇಂದ್ರಗಳಲ್ಲಿ ನಿಯಮಿತ ಅವಧಿಗಳಲ್ಲಿ ಪುನರ್‍ವಿಮರ್ಶೆ. 
ಪರಿಚ್ಚೇಧ 26 : ಸಾಮಾಜಿಕ ಭದ್ರತೆಯನ್ನು ಪಡೆಯುವ ಹಕ್ಕು. 
ಪರಿಚ್ಚೇಧ 27 : ಸೂಕ್ತ ಜೀವನ ಮಟ್ಟ ಪಡೆಯುವ ಹಕ್ಕು .
ಪರಿಚ್ಚೇಧ 28 : ಶಿಕ್ಷಣದ ಹಕ್ಕು.
ಪರಿಚ್ಚೇಧ 29 : ಮಕ್ಕಳು ಸ್ವಾವಲಂಬಿಯಾಗಿ ಬದುಕಲು ಪೂರಕವಾಗಿರುವಂತಹ ಶಿಕ್ಷಣದ ಹಕ್ಕು. 
ಪರಿಚ್ಚೇಧ 30 : ಅಲ್ಪಸಂಖ್ಯಾತ ಸಮುದಾಯಗಳಿಗೆ ಅವರ ಸಂಸ್ಕೃತಿಯಲ್ಲಿ  ಜೀವಿಸುವ ಹಕ್ಕು 
ಪರಿಚ್ಚೇಧ 31 : ಭಾಗವಹಿಸುವ ಹಕ್ಕು .
ಪರಿಚ್ಚೇಧ 32 : ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಣೆಯ ಹಕ್ಕು. (ಬಾಲಕಾರ್ಮಿಕತೆ ನಿಷೇಧ).
ಪರಿಚ್ಚೇಧ 33 : ಮಾದಕದ್ರವ್ಯಗಳಿಂದ ರಕ್ಷಣೆಯ ಹಕ್ಕು. 
ಪರಿಚ್ಚೇಧ 34 : ಲೈಂಗಿಕ ಶೋಷಣೆಯಿಂದ ರಕ್ಷಣೆಯ ಹಕ್ಕು. 
ಪರಿಚ್ಚೇಧ 35 : ಮಕ್ಕಳ ಮಾರಾಟ ಮಾಡುವ ಮತ್ತು ಅಕ್ರಮ ಬಂಧನದಲ್ಲಿಡುವುದರ ವಿರುದ್ದ ರಕ್ಷಣೆಯ ಹಕ್ಕು. 
ಪರಿಚ್ಚೇಧ 36 : ಇನ್ನಿತರ ಶೋಷಣೆಗಳ ವಿರುದ್ದ ರಕ್ಷಣೆಯ ಹಕ್ಕು. 
ಪರಿಚ್ಚೇಧ 37 : ಚಿತ್ರಹಿಂಸೆ ಮತ್ತು ಮರಣದಂಡನೆಯಿಂದ ರಕ್ಷಣೆಯ ಹಕ್ಕು. 
ಪರಿಚ್ಚೇಧ 38 : ಯುದ್ದ/ಸಶಸ್ತ್ರ ಸಂಘರ್ಷದಿಂದ ರಕ್ಷಣೆಯ ಹಕ್ಕು. 
ಪರಿಚ್ಚೇಧ 39 : ಯಾವುದೇ ರೀತಿ ವಂಚಿತರಾಗಿದ್ದರೆ, ತಕ್ಷಣ ಪುನರ್ವಸತಿ ವ್ಯವಸ್ಥೆ. 
ಪರಿಚ್ಚೇಧ 40 : ಪರಿಸ್ಥತಿಗನುಗುಣವಾಗಿ ಸಮಸ್ಯೆಗೊಳಗಾಗಿದ್ದರೆ ಮಕ್ಕಳಿಗೆ ನ್ಯಾಯ ದೊರಕಿಸಿಕೊಡುವ ಹಕ್ಕು.
ಪರಿಚ್ಚೇಧ 41 : ಮಕ್ಕಳ ಪರವಾದ ಕಾನೂನನ್ನು ಎತ್ತಿಹಿಡಿಯುವ ಹಕ್ಕು.
ಪರಿಚ್ಚೇಧ 42 : ಸರಕಾರ ಮಕ್ಕಳ ಹಕ್ಕುಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. 
ಪರಿಚ್ಚೇಧ 43 : ಮಕ್ಕಳ ಹಕ್ಕುಗಳ ಬಗ್ಗೆ ಒಪ್ಪಿ ಸಮಿತಿ ರಚಿಸಿ ಪ್ರಗತಿ ಪಡಿಸಬೇಕು. 
ಪರಿಚ್ಚೇಧ 44 : ಮಕ್ಕಳ ಹಕ್ಕುಗಳ ಜಾರಿ ಕುರಿತ ವರದಿಯನ್ನು ವಿಮರ್ಶೆ ಮಾಡಿ ವಿಶ್ವಸಂಸ್ಥೆಗೆ 
ಒಪ್ಪಿಸುವುದು.
ಪರಿಚ್ಚೇಧ 45 : ಪರ್ಯಾಯ ವರದಿಗಳನ್ನು ಇತರ ಸಂಘಸಂಸ್ಥೆಗಳ ಸಹಕಾರದಿಂದ  ಸಲಹೆ ಪಡೆದು  
ವಿಶ್ವಸಂಸ್ಥೆಗೆ ಕಳುಹಿಸುವುದು. 
ಪರಿಚ್ಚೇಧ 46 : ಮಕ್ಕಳ ಹಕ್ಕುಗಳ ಈ ಅಂತರಾಪ್ಟ್ರೀಯ ಒಡಂಬಡಿಕೆಗೆ ಸಹಿ ಹಾಕಲು ಎಲ್ಲಾ ದೇಶಗಳಿಗೆ 
ಅವಕಾಶವಿದೆ.
ಪರಿಚ್ಚೇಧ 47 : ಒಡಂಬಡಿಕೆಯನ್ನು ಒಪ್ಪಿದ ಮೇಲೆ ಆ ಪ್ರತಿಯು ವಿಶ್ವಸಂಸ್ಥೆಯ ಪ್ರಧಾನ 
ಕಾರ್ಯದರ್ಶಿಗಳ ಬಳಿ ಇಡಲ್ಪಡುತ್ತದೆ. 
ಪರಿಚ್ಚೇಧ 48 : ಎಲ್ಲಾ ರಾಪ್ಟ್ರಗಳಿಗೆ ಈ ಒಡಂಬಡಿಕೆಯನ್ನು ತಿಳಿದು ಒಪ್ಪಲು  ಸ್ವಾತಂತ್ರ್ಯವಿದೆ. 
ಪರಿಚ್ಚೇಧ 49 : ಯಾವುದೇ ರಾಪ್ಟ್ರವು ಈ ಒಡಂಬಡಿಕೆಯನ್ನು ಒಪ್ಪಿ ಸಹಿ ಮಾಡಿ ವಿಶ್ವಸಂಸ್ಥೆ ಪ್ರಧಾನ 
ಕಾರ್ಯದರ್ಶಿಯವರಿಗೆ ನೀಡಿದ 30 ದಿನಗಳ ನಂತರ ಅದು ಜಾರಿಗೆ ಬರುತ್ತದೆ. 
ಪರಿಚ್ಚೇಧ 50 : ಈ ಒಡಂಬಡಿಕೆಗೆ ಸೂಕ್ತ ತಿದ್ದುಪಡಿ ಸೂಚಿಸಲು ಎಲ್ಲಾ ಸದಸ್ಯ  ರಾಪ್ಟ್ರಗಳಿಗೆ 
ಅವಕಾಶವಿದೆ. 
ಪರಿಚ್ಚೇಧ 51 : ಈ ಒಡಂಬಡಿಕೆಗೆ ತಕರಾರು ಇದ್ದಲ್ಲಿ, ಒಪ್ಪಿಗೆಯಾಗದಿದ್ದಲ್ಲಿ ವಿಶ್ವಸಂಸ್ಥೆಗೆ ತಿಳಿಸಬೇಕು. 
ಪರಿಚ್ಚೇಧ 52 : ಯಾವುದಾದರೂ ರಾಪ್ಟ್ರ ಸದಸ್ಯತ್ವದಿಂದ ರಾಜೀನಾಮೆ  ನೀಡುವುದಿದ್ದರೆ ಪ್ರಧಾನ 
ಕಾರ್ಯದರ್ಶಿಗಳಿಗೆ ತಿಳಿಸಬೇಕು. 
ಪರಿಚ್ಚೇಧ 53 : ಒಡಂಬಡಿಕೆಯ ಮುಖ್ಯಪ್ರತಿ  ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ಬಳಿ ಇರುತ್ತದೆ. 
ಅವರೇ ಇದರ ಮೇಲ್ವಿಚಾರಕರು.
ಪರಿಚ್ಚೇಧ 54 : ಒಡಂಬಡಿಕೆಯ ಭಾಷಾ ಪ್ರತಿಗಳಾದ ಅರೇಬಿಕ್, ಚೈನೀಸ್, ಇಂಗ್ಲೀಷ್, ಫ್ರೆಂಚ್, ರಷ್ಯನ್  
ಮತ್ತು ಸ್ಪ್ಯಾನೀಷ್ ಭಾಷೆಯ ಪ್ರತಿಗಳನ್ನು ಮೂಲಪ್ರತಿಗಳೆಂದೇ ಪರಿಗಣಿಸಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಬಳಿ ಇಡಲಾಗುವುದು.

ಮಕ್ಕಳ ಈ ಎಲ್ಲಾ ಹಕ್ಕುಗಳನ್ನು ಮಕ್ಕಳು ಅನುಭವಿಸುವಂತಾಗಲು, ಕಾಪಾಡಲು, ರಕ್ಷಿಸಲು ಈಗಾಗಲೇ ಹಲವಾರು ಕಾನೂನು, ನೀತಿ, ನಿಯಮ, ಯೋಜನೆ, ವ್ಯವಸ್ಥೆಗಳು, ಹಣಕಾಸು ಓದಗಿಸುವುದು ಹಾಗೂ ಇತರ ಕ್ರಮಗಳನ್ನು  ಸರಕಾರ ಮಾಡುತ್ತಿರುವುದು ಅಭಿನಂದನಾರ್ಹವಾದುದು.(ಮುಂದಿನ ಲೇಖನದಲ್ಲಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಮಕ್ಕಳಿಗಾಗಿ ಹೇಳಿದ ಪರಿಚ್ಚೇಧ 12 ಅಭಿಪ್ರಾಯದ ಹಕ್ಕು ಹಾಗೂ ಪರಿಚ್ಚೇಧ 31 ಭಾಗವಹಿಸುವ ಹಕ್ಕನ್ನು ಸಾಕಾರಗೊಳಿಸಲು ಕರ್ನಾಟಕ ರಾಜ್ಯವು ದೇಶದಲ್ಲಿಯೇ ಮೊದಲ ಬಾರಿಗೆ ಜಾರಿಗೆ ತಂದ  “ಮಕ್ಕಳ ಹಕ್ಕುಗಳ ಗ್ರಾಮಸಭೆ” ಯ ಪರಿಚಯವನ್ನು ನೋಡೋಣ.)      

ಈ ಅಂಕಣದ ಹಿಂದಿನ ಬರೆಹಗಳು: 
“ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳು”
“ಹಕ್ಕಿನ” ಪರಿಭಾಷೆ ಮತ್ತು ಮಕ್ಕಳು
ಇಂದಿನ ಮಕ್ಕಳು: ಇಂದಿನ ಪ್ರಜೆಗಳು:


 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...