"ಈಗಲೂ ನಮ್ಮ ದೇಶದಲ್ಲಿ ಅಸ್ಪೃಶ್ಯತೆ, ಜಾತಿ ಪದ್ಧತಿ, ಧರ್ಮಾಂಧತೆ ಮೌಡ್ಯತೆ ಜೀವಂತವಾಗಿವೆ. ಇಂತಹ ಜ್ವಲಂತ ಸಾಮಾಜಿಕ ಪಿಡುಗುಗಳ ಬಗ್ಗೆ 'ಭೂಮಿ' ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ," ಎನ್ನುತ್ತಾರೆ ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ. ಅವರು ಈರಣ್ಣ ಬೆಂಗಾಲಿ ಅವರ ‘ಭೂಮಿ’ ಕಾದಂಬರಿಗೆ ಬರೆದ ಮುನ್ನುಡಿ ಇಲ್ಲಿದೆ.
ಬಿಸಿಲ ನಾಡು ಕಲ್ಯಾಣ ಕರ್ನಾಟಕದ ಒಂದು ಭಾಗ ರಾಯಚೂರು ಜಿಲ್ಲೆ. ಈ ಬಿಸಿಲ ನಾಡಿನಲ್ಲಿ ಅನೇಕ ಸಾಹಿತ್ಯ ದಿಗ್ಗಜರು ಕಲ್ಯಾಣ ಕರ್ನಾಟಕದ ಘನತೆ, ಗೌರವಗಳನ್ನು ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಬೆಳಗುವಂತೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಈಗಲೂ ಅನೇಕ ಹಿರಿಯ ಮತ್ತು ಕಿರಿಯ ಸಾಹಿತಿಗಳು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕರ್ನಾಟಕದಾದ್ಯಂತ ಮಿಂಚುತ್ತಿದ್ದಾರೆ. ಕಥೆ, ಕಾದಂಬರಿ, ಕಾವ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಗಜಲ್, ನಾಟಕ, ವಿಡಂಬನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂತಹವರಲ್ಲಿ ರಾಯಚೂರಿನ ಯುವಸಾಹಿತಿ ಈರಣ್ಣ ಬೆಂಗಾಲಿಯವರೂ ಒಬ್ಬರು.
ಈರಣ್ಣ ಬೆಂಗಾಲಿ ಅವರು ಸತತ ಅಧ್ಯಯನ, ಪರಿಶ್ರಮ, ಶ್ರದ್ಧೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದಿನೇ ದಿನೇ ಮೇಲೇರತೊಡಗಿದ್ದಾರೆ. ನಿರಂತರ ಸಾಹಿತ್ಯದ ಅಧ್ಯಯನ, ಹಿರಿಯ ಸಾಹಿತಿಗಳ ಒಡನಾಟದಿಂದ ತಮ್ಮ ಸಾಹಿತ್ಯಾಸಕ್ತಿ, ಸಾಹಿತ್ಯ ಭಂಡಾರವನ್ನು ಹಿರಿದಾಗಿಸಿಕೊಂಡು ಹಲವಾರು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ರಚಿಸಿ ಸಾಹಿತ್ಯಾಭಿಮಾನಿಗಳ ಮುಂದೆ ಇಟ್ಟು ಹಿರಿಯ ಸಾಹಿತಿಗಳಿಂದ ಬೆನ್ನು ತಟ್ಟಿಸಿಕೊಂಡಿದ್ದಾರೆ ಮತ್ತು ಕಿರಿಯ ಸಾಹಿತಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ.
ಈರಣ್ಣನವರ ಸಾಹಿತ್ಯ ಕೃತಿಗಳು ಒಂದೇ ಸಾಹಿತ್ಯ ಪ್ರಕಾರದಲ್ಲಿ ಇಲ್ಲ. ಆಡು ಮುಟ್ಟದ ಗಿಡವಿಲ್ಲ ಎಂಬ ಗಾದೆಯಂತೆ ಈರಣ್ಣನವರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. 2008ರಿಂದ ಆರಂಭವಾದ ಅವರ ಅಮೋಘ ಸಾಹಿತ್ಯ ಸೇವೆಯಲ್ಲಿ ಈಗಾಗಲೇ ಹದಿನೈದಕ್ಕಿಂತಲೂ ಹೆಚ್ಚು ಸಾಹಿತ್ಯ ಕೃತಿಗಳು ಹೊರಹೊಮ್ಮಿದ್ದು ಅವೆಲ್ಲವೂ ಜನಮನ ಗೆದ್ದಿವೆ. ವ್ಯಂಗ್ಯಚಿತ್ರ ಸಂಕಲಗಳು, ಹನಿಗವನ ಸಂಕಲನಗಳು, ಹೈಕು ಸಂಕಲನಗಳು, ಗಜಲ್ ಸಂಕಲನಗಳು, ಮಕ್ಕಳ ಕವನ ಸಂಕಲನಗಳು, ಮಕ್ಕಳ ಕಥಾ ಸಂಕಲನಗಳು, ಸಾಧಕರ ಯಶೋಗಾಥೆಗಳ ಬಗ್ಗೆ ಕೃತಿಗಳನ್ನು ರಚಿಸಿದ್ದು ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಈರಣ್ಣನವರ ಸಾಹಿತ್ಯಾಸಕ್ತಿ ಕಾದಂಬರಿಯ ಕಡೆಗೆ ವಾಲಿದ್ದು, ಆ ಪ್ರಯತ್ನವೇ ಈ 'ಭೂಮಿ' ಕಾದಂಬರಿ.
ಜಗಜ್ಯೋತಿ ಬಸವೇಶ್ವರರು ಸಾಮಾಜಿಕ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ದೀನದಲಿತರ ಏಳಿಗೆಗಾಗಿ ಶ್ರಮಿಸಿದವರು. ಸಮಾಜದ ಪಿಡುಗುಗಳಾದ ವರ್ಣನೀತಿ, ಜಾತಿ, ಅಸ್ಪೃಶ್ಯತೆ, ಮೌಡ್ಯತೆ, ಲಿಂಗ ತಾರತಮ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹನ್ನೆರಡನೆಯ ಶತಮಾನದಲ್ಲಿ ಹೋರಾಟ ಮಾಡಿದರು, ಕ್ರಾಂತಿ ಮಾಡಿದರು. ಅವರ ಹೋರಾಟದ ಫಲದಿಂದ ಇಂತಹ ಸಾಮಾಜಿಕ ಪಿಡುಗುಗಳು ತಕ್ಕಮಟ್ಟಿಗೆ ಕಡಿಮೆಯಾಗಿವೆಯಾದರೂ ಪಟ್ಟಭದ್ರ ಹಿತಾಸಕ್ತಿಗಳ ಅಟ್ಟಹಾಸದಿಂದ ಈಗಲೂ ನಮ್ಮ ದೇಶದಲ್ಲಿ ಅಸ್ಪೃಶ್ಯತೆ, ಜಾತಿ ಪದ್ಧತಿ, ಧರ್ಮಾಂಧತೆ ಮೌಡ್ಯತೆ ಜೀವಂತವಾಗಿವೆ.
ಇಂತಹ ಜ್ವಲಂತ ಸಾಮಾಜಿಕ ಪಿಡುಗುಗಳ ಬಗ್ಗೆ 'ಭೂಮಿ' ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ ಈರಣ್ಣನವರು. ಭೂಮಿ ಕಾದಂಬರಿಯ ಮುಖ್ಯ ಪಾತ್ರಧಾರಿಗಳಾದ ಈರಣ್ಣ, ಚೈತ್ರಾ ಮತ್ತು ಭೂಮಿ ಅಸ್ಪೃಶ್ಯತೆ, ಶೋಷಣೆ, ಮೌಡ್ಯತೆಗಳ ವಿರುದ್ಧ ಸಿಡಿದೆದ್ದು ಅವುಗಳ ನಿವಾರಣೆಗೆ ಹೋರಾಡುತ್ತಾ ಬದುಕನ್ನು ಕಟ್ಟಿಕೊಳ್ಳುವುದನ್ನು ಈರಣ್ಣ ಬೆಂಗಾಲಿಯವರು ತುಂಬಾ ಅರ್ಥಪೂರ್ಣವಾಗಿ ಮತ್ತು ಅಷ್ಟೇ ಸೊಗಸಾಗಿ ಚಿತ್ರಿಸಿದ್ದಾರೆ. ಸಮಾಜದ ತಳಮಟ್ಟದ ಜನರ ಹಿತಕ್ಕಾಗಿ ಹೋರಾಡುವ ಅವರು ಅನುಭವಿಸಿದ ಕಷ್ಟಕೋಟಲೆಗಳು ಅನಂತ. ಹೋರಾಟದ ಬದುಕೇ ಹಾಗೆ ಅಲ್ಲವೇ...?
ಸಾಮಾಜಿಕ ಕಳಕಳಿಯ ವಿಭಿನ್ನ ಕಥಾವಸ್ತುವಿನೊಂದಿಗೆ ಈ 'ಭೂಮಿ'ಯ ಮೂಲಕ ಕಾದಂಬರಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿರುವ ಈರಣ್ಣ ಬೆಂಗಾಲಿಯವರು ಜನರ ಪ್ರೀತಿ ಗಳಿಸುವರೆಂಬ ವಿಶ್ವಾಸವಿದೆ. ಯುವ ಸಾಹಿತಿ ಈರಣ್ಣನವರು ಮುಂದಿನ ದಿನಮಾನಗಳಲ್ಲಿ ಇನ್ನೂ ಹಲವಾರು ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ ಜನಮನ ಗಳಿಸಲಿ ಎಂಬ ಆಶಯ, ಶುಭ ಹಾರೈಕೆಗಳು.
- ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ
“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...
"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...
“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...
©2024 Book Brahma Private Limited.