Date: 06-03-2025
Location: ಬೆಂಗಳೂರು
"ಪತ್ರಿಕೋದ್ಯಮದ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡ ಇವರು ಸಂಯುಕ್ತ ಕರ್ನಾಟಕ,ಪ್ರಜಾವಾಣಿ,ಮಯೂರ,ಸುಧಾ, ಕನ್ನಡಪ್ರಭ, ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇವರ “ಮಗು ಬಂದವನು”, “ನಂ ಕೌಲಿ ಕಂಡ್ರಾ”, “ತುಣುಕುಗಳು”, ಇವು ಇವರ ಕಥಾಸಂಕಲನಗಳು. ಇವುಗಳೆಲ್ಲ ‘ಇದುವರೆಗಿನ ಕಥೆಗಳು’ ಎಂದು ಸಮಗ್ರವಾಗಿ ಪ್ರಕಟಗೊಂಡಿವೆ," ಎನ್ನುತ್ತಾರೆ ಅಂಕಣಗಾರ್ತಿ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಜಿ.ಎಸ್ ಸದಾಶಿವ ಅವರ "ಹ್ಯಾಂಗೊವರ್ ನಲ್ಲಿ ಮನದ ದ್ವಂದ್ವತೆ" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.
ನವ್ಯೋತ್ತರ ಸಾಹಿತ್ಯ ಸಂದರ್ಭ ಎನ್ನಬಹುದಾದ ಜಿ.ಎಸ್ ಸದಾಶಿವ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಭಾರಂಗೀ ಹೋಬಳಿ ಗುಂಡುಮನೆ ಊರು ಅದೇ ಹೊಗೊಪ್ಪಲು. ಆದರೆ ಈಗ ಆ ಗುಂಡುಮನೆ ಮತ್ತು ಗಿಂಡಿಮನೆಯು ಶರಾವತಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಆ ದಂಡೆ ಮತ್ತು ಈ ದಂಡೆಯಾಗಿದೆ. ಇವರ ತಾಯಿಯ ತವರೂರಾದ ಗಿಂಡಿಮನೆಯಲ್ಲಿ 1939 ರ ಸೆಪ್ಟೆಂಬರ್ 13 ರಂದು ಜನಿಸಿದರು. ಹಾಂಸೆ ಎಂಬ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಎಂ. ಎ ಪದವಿ ಗಳಿಸಿದರು.
ಪತ್ರಿಕೋದ್ಯಮದ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡ ಇವರು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಮಯೂರ, ಸುಧಾ, ಕನ್ನಡಪ್ರಭ, ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇವರ “ಮಗು ಬಂದವನು”, “ನಂ ಕೌಲಿ ಕಂಡ್ರಾ”, “ತುಣುಕುಗಳು”, ಇವು ಇವರ ಕಥಾಸಂಕಲನಗಳು. ಇವುಗಳೆಲ್ಲ ‘ಇದುವರೆಗಿನ ಕಥೆಗಳು’ ಎಂದು ಸಮಗ್ರವಾಗಿ ಪ್ರಕಟಗೊಂಡಿವೆ. “ಪಾರಿವಾಳ ಮತ್ತು ಹಕ್ಕಿ ಹಿಡಿಯುವನು, ಅಲಿಬಾಬಾ ಮತ್ತು ಇತರ ಕಥೆಗಳು, ಪ್ರಾಚೀನ ಭಾರತದ ಹಕ್ಕಿ ಕಥೆಗಳು, ಪ್ರಾಚೀನ ಭಾರತದ ಕಥೆಗಳು, ಮೀನುಗಾರ ಮತ್ತು ರಾಜ, ಮೂರ್ಖ ರಾಜಕುಮಾರರು, ಮಯೂರ, ಇವುಗಳು ಇವರ ಅನುವಾದಿತ ಮಕ್ಕಳ ಕಥಾಸಂಕಲನಗಳು’. ಇತರೆ ಇವರ ಅನುವಾದಿತ ಕೃತಿಗಳು ‘ಕಥರೀನಾ ಬ್ಲಂ, ಶಿಖರದ ಹಾದಿಯಲ್ಲಿ, ತಾಯಿ ಮತ್ತು ಚೆಲುವು,ಮುಂತಾದವು. ಇವರ ‘ಸದಾ ವಾರೆನೋಟ’.ಎಂಬ ಕೃತಿಯನ್ನು ಸಹ ಕಾಣಬಹುದು. ಇವರಿಗೆ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸಂದೇಶ ಪತ್ರಿಕೆ” ಲಭಿಸಿದೆ. ಇವರು “ಆಕ್ರಮಣ, ಮೂರು ದಾರಿಗಳು, ಆಕ್ಸಿಡೆಂಟ್, ಮತ್ತು ಮೌನಿ”. ಚಿತ್ರಗಳಿಗೆ ಚಿತ್ರಕಥೆ ಸಂಭಾಷಣೆ ಬರೆದಿರುತ್ತಾರೆ. “ಹದಿನೈದು ಕತೆಗಳು, ಮತ್ತು ಪ್ರಶಸ್ತಿ-83” ಇವು ಇವರ ಸಂಪಾದನಾ ಕೃತಿಗಳು.
ಜಿ.ಎಸ್ ಸದಾಶಿವ ಅವರ ಹ್ಯಾಂಗೊವರ್ ಕತೆಯಲ್ಲಿ ಸೋಮು ಮತ್ತು ಕಿಟ್ಟು ಇಬ್ಬರು ಸ್ನೇಹಿತರು. ಸೋಮು ತನ್ನ ಬಾಲ್ಯದಲ್ಲಿ ಹತಾಶಗಳಿಗೆ ಪರಿತಪಿಸಿ ಅಪ್ಪ ಮಲತಾಯಿಯ ಎದುರಿಗೆ ಸೋಮುಗೆ ಬೈಯುವುದು, ಒದೆಯುವುದು, ಬೆಂಗಳೂರಲ್ಲೆ ಓದಲಾರದೆ ಸುಳ್ಳು ಹೇಳುವ ನೀನು ಸೋಮಾರಿ ಎಂದು ಹಂಗಿಸುವುದು, ಇಂಥದ್ದನ್ನೆಲ್ಲ ಕೇಳಿ ರೋಸಿ ಹೋದ ಸೋಮು ಬೆಂಗಳೂರಿನಲ್ಲೇ ಓದುತ್ತಿದ್ದವನು ಮತ್ತಷ್ಟು ಪಣತೊಟ್ಟು ಬೆಂಗಳೂರಿನಲ್ಲಿ ಏರೋನಾಟಿಕ್ಸ್ ನಲ್ಲಿ ಕೆಲಸ ದಕ್ಕಿಸಿಕೊಂಡ. ಸೋಮುವಿನ ಅಪ್ಪ ತನ್ನ ಆಸ್ತಿಯಲ್ಲಿ ಬಿಡಿಗಾಸು ನೀಡಲಾರೆ ನಿನಗೆ ಯಾವುದಕ್ಕೂ ಹಣ ಕೊಡುವುದಿಲ್ಲ ಎಂದು ಓದುತ್ತಿದ್ದಾಗ ಹೇಳಿದ ಅಪ್ಪ, ಈಗ ಕೆಲಸ ಸಿಕ್ಕಿದೆ ಎಂದಾಕ್ಷಣ, ಇಷ್ಟು ದಿನ ಮಗ ಬೇಡವಾಗಿದ್ದ ಅಪ್ಪನಿಗೆ “ತಿಂಗಳಿಗೆ ಒಂದಿಷ್ಟು ದುಡ್ಡು ಕಳಿಸ್ತಾ ಇರು” ಎನ್ನುವ ಪತ್ರ ಸೋಮುವಿನ ಕೋಪಕ್ಕೆ ನೋವಿಗೆ ಈಡು ಮಾಡುವ ಸ್ಥಿತಿಯನ್ನು, ಅಚಾನಕ್ಕಾಗಿ ಸಿಕ್ಕ ಸ್ನೇಹಿತ ಕಿಟ್ಟುವಿನಲ್ಲಿ ಎಣ್ಣೆ ಕುಡಿಯುವುದರ ಮೂಲಕ ಹೇಳುತ್ತಾನೆ. ಇತ್ತ ಮಾಂಸವನ್ನು ತಿನ್ನಲಾರದ ಮನೆತನದಲ್ಲಿ ಹುಟ್ಟಿ ಬಾರ್ ನಲ್ಲಿ ಹೆಂಡ ಕುಡಿದು ತುಂಡು ನುಂಗುತ್ತಾ ಕುಳಿತ ಸಮಯದಲ್ಲಿ ಸೋಮು ತನ್ನ ಸ್ನೇಹಿತ ಕಿಟ್ಟುವಿನಲ್ಲಿ “ಹಣ ಕಳಿಸಬೇಕಾ ಅಥವಾ ಬೇಡ್ವಾ” ಎಂಬ ದ್ವಂದ್ವಾರ್ಥಕ ಸ್ಥಿತಿಯಲ್ಲಿ ರೋಷಾವೇಶದ ನೋವು ಸಂಕಟ ಸಂದರ್ಭದಲ್ಲಿ ಈ ಕತೆ ಮೂಡಿ ಬರುತ್ತದೆ.
ಈ ಕಥೆಯಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಬದುಕಿನ ಸ್ಥಿತ್ಯಂತರಗಳು, ಬಾಲ್ಯದ ಸವಿ ಕ್ಷಣವನ್ನು ಸವಿಯದೆ ಸೋಮು ಕಳೆದುಕೊಳ್ಳುತ್ತಾನೆ. ಕಾರಣ ತನ್ನ ಅಪ್ಪ ಹಾಗೂ ಚಿಕ್ಕ ತಾಯಿ. ಅಪ್ಪ ಚಿಕ್ಕ ತಾಯಿಯ ಎದುರಿನಲ್ಲೇ ಸೋಮುವಿನ ಬಗೆಗೆ ಕೀಳಾಗಿ ಮಾತಾಡುವುದು ಒದೆಯುವುದು ಮಾಡಿದಾಗ ಸೋಮವಿನ ಸ್ವಾಭಿಮಾನ ಸೆಟದೇಳುತ್ತದೆ. ಬಹುಶಃ ಆ ಕಾರಣಗಳಿಂದ ಸೋಮು ಏರೋನಾಟಿಕ್ಸ್ ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಆದರೆ ವಿಷಯ ಅದಲ್ಲ ಇದುವರೆಗೂ ಅಕ್ಕರೆ ಪ್ರೀತಿ ತೋರದೆ, ಮಾತನಾಡದೆ, ಇದ್ದ ಅಪ್ಪ ಕೆಲಸ ಸಿಕ್ಕ ತಕ್ಷಣ ಯಾರಿಂದಲೋ ವಿಷ್ಯ ತಿಳಿದು “ಕೆಲಸಕ್ಕೆ ಸೇರಿದಿಯಂತಲಾ, ತಿಂಗಳು ಒಂದಷ್ಟು ದುಡ್ಡು ಕಳಿಸ್ತಾ ಇರು”. ಎನ್ನುವ ಪ್ರೀತಿ ಇರದ ಅಪ್ಪನಿಂದ ಬಂದ ಆ ಕಾಗ್ದ ಓದಿ ಸೋಮುವಿಗೆ ಅಸಹ್ಯವಾಗುವುದು ಸಹಜ ತಾನೆ? ಮನುಷ್ಯ ಎಂಬ ಪ್ರಾಣಿ ಸಂಬಂಧಕ್ಕೆ ಬೆಲೆ ಕೊಡುವುದು ಯಾವುದಕ್ಕೆ ಹಾಗಾದರೆ? ಹಣಕ್ಕೆ ತಮ್ಮ ಅವಶ್ಯಕತೆಗಳಿಗೆ ಎಂಬ ಸತ್ಯ ಮತ್ತೊಮ್ಮೆ ರುಜುವಾತಾಗುತ್ತದೆ.ಈ ಕತೆಯಲ್ಲಿ ಬರುವ ಆ ಮಲತಾಯಿಯನ್ನು ನಾವು ಸ್ತ್ರೀ ಕುಲದ ನೆಲೆಯಲ್ಲಿ ನೋಡಲು ಸಾಧ್ಯವಿಲ್ಲ. ಹೆಣ್ಣು ಮನಸಾಗಿಯೂ ಕೂಡ ಒಬ್ಬ ಸಣ್ಣ ಬಾಲಕನಿಗೆ ಬಡಿಯುವುದು ಹೊಡೆಯುವುದನ್ನು ತಪ್ಪಿಸಬಹುದಿತ್ತು ಆಕೆ ಸವತಿ ಮತ್ಸರವನ್ನೆ ನಾವು ಗಮನಿಸಬಹುದು. ಆಕೆಯನ್ನು ಸ್ತ್ರೀ ವಾದಿ ಹಿನ್ನೆಲೆಯಿಂದ ವೀಕ್ಷಿಸುವುದಾದರೆ ಆಕೆಯಲ್ಲಿ ಸ್ತೀತ್ವದ ನೆಲೆಯನ್ನು ಕಾಣಲಾರವು. ಹಾಗೆ ಎಲ್ಲ ಹೆಣ್ಣನ್ನು ಹೆಣ್ಣೆಂಬ ಚಿಂತನೆಯಡಿಯಲ್ಲಿ ತರಲಾಗದು. “ಹೆಣ್ಣೆಂಬ ಅಂಗ ಹೊತ್ತವರೆಲ್ಲ ಹೆಣ್ಣಲ್ಲ”.
ಮನುಷ್ಯನಿಗೆ ಯಾವುದಾದರೊಂದು ಘಟನೆ ಹೆಚ್ಚಾಗಿ ಮನಸ್ಸಿಗೆ ಗಾಸಿಕೊಳ್ಳುವಂತಿದ್ದರೆ ಅದರ ಸುತ್ತಲೂ ಸುತ್ತುವರಿಯುತ್ತಾನೆ. ಹಾಗೆಯೇ ಈ ಕತೆಯಲ್ಲೂ ಬಹುಶಃ ಆ ನೋವಿಂದ ಗಾಯವಾದ, ನೋವಿನ ಹ್ಯಾಂಗೊವರ್ ನಿಂದ ಸೋಮು ಹೊರಬಂದಿಲ್ಲ. “ಇವರ ಕಥೆಗಳ ನಾಯಕರು ಅಂತರ್ಮುಖಿಗಳು, ಹಿಂದೆ ತಮಗೆ ಆದದ್ದನ್ನು ಇವತ್ತಿನ ದೂರದಿಂದ ವಿಶ್ಲೇಷಿಸುತ್ತಾರೆ”.( ಹೊಸಗನ್ನಡ ಸಾಹಿತ್ಯ ಚರಿತ್ರೆ-ಎಲ್.ಎಸ್.ಶೇಷಗಿರಿರಾವ್) ಯಾವುದೇ ವಸ್ತು ವಿಷಯ ಘಟನೆಯಾದರೂ ಕೂಡ ಭೂತವಿರದೆ ವರ್ತಮಾನ ಇರಲು ಸಾಧ್ಯವಿಲ್ಲ. ಹಿಂದಿನ ವಸ್ತು ವಿಚಾರಗಳಿಗೆ ಸಂಬಂಧಿಸಿದಂತೆ ಮನುಷ್ಯ ಸಹಜವಾಗಿ ವರ್ತಮಾನದಲ್ಲಿ ಪ್ರತಿಕ್ರಿಸುತ್ತಾನೆ. ಇದೇ ವಿಚಾರವನ್ನು ಸೋಮು ತನ್ನ ಹಳೆಯ ನೋವಿನ ಹ್ಯಾಂಗೊವರ್ ಇಂದ ವರ್ತಮಾನವನ್ನು ವೀಕ್ಷಿಸುತ್ತಿದ್ದಾನೆ. ಈ ಕತೆಯನ್ನು ಮನೋವೈಜ್ಞಾನಿಕ ಹಿನ್ನೆಲೆಯಿಂದ ಈ ಘಟನೆಯನ್ನು ವಿಮರ್ಶಿಸಿದಾಗ ಸಹ ಯಾವೊಬ್ಬ ಹುಚ್ಚನ್ನು ತನ್ನ ಬದುಕಿನಲ್ಲಿ ಹಿಂದೆ ನಡೆದ ಘಟನೆಗಳಿಂದಾಗಿಯೇ ಹುಚ್ಚು ಹಿಡಿದು ಬಾಳನ್ನು ವರ್ತಮಾನದೊಂದಿಗೆ ಪ್ರತಿಕ್ರಿಸುತ್ತಾ ಸಾಗುತ್ತಾನೆ. ಈ ಎಲ್ಲಾ ಕಾರಣದಿಂದಾಗಿ ಸೋಮು ಎಂಬ ಪಾತ್ರವೂ ಹಿಂದಿನ ಘಟನೆಗಳಿಗೆ ತನ್ನ ಪ್ರತಿಕ್ರಿಯೆ ಕಾಣಬಹುದು. ಹಾಗೂ ಸೋಮು ಪರಿಸ್ಥಿತಿಯೊಂದಿಗೆ ಅನುಸಂಧಾನಕ್ಕೊಳಪಡಿಸಿಕೊಂಡು ಸಾಗುತ್ತಾನಾ ಅಥವಾ ಅಪ್ಪನಿಗೆ ದುಡ್ಡು ನೀಡದೆ ದ್ವೇಷಿಸುತ್ತಾನಾ? ಎಂಬ ದಿಗಿಲು ಕಿಟ್ಟುನಲ್ಲಿ ಇದ್ದೇ ಇತ್ತು. ಕಾರಣ “ನಾನು ದುಡ್ಡು ಕಳಿಸ್ತೆ ಇದಿದ್ದು ಸರಿನಾ?” ಎಂದು ಸೋಮು ಎಣ್ಣೆ ಸೇವನೆಯ ಸಮಯದಲ್ಲಿ ಕೇಳಿದ್ದ. ಶೇಷಗಿರಿರಾವ್ ಅವರು ಇವರ ಕಥೆಯ ನಾಯಕರು ಅಂತರ್ಮುಖಿಗಳು ಎನ್ನುತ್ತಾರೆ ಆದರೆ ಮನುಷ್ಯ ಅಂತರ್ಮುಖಿ ಯಾವ ಸಮಯದಲ್ಲಿ ಆಗುತ್ತಾನೆ? ತನ್ನೊಳಗಿನ ನೋವುಗಳಿಂದ ನೊಂದು ಬೆಂದು ಈ ಜಗತ್ತಿನೊಂದಿಗೆ ತನ್ನ ವೈಪಲ್ಯ ಅವಮಾನ ಅಪಮಾನ ಗಳ ಸುತ್ತ ಬದುಕು ಹೆಣೆದು ನಂತರ ಎಲ್ಲಾ ತಡೆಗೋಡೆಗಳ ಮೀರಿ ಎದ್ದು ನಿಂತಾಗ ಅಂತರ್ಮುಖಿಯಾದ ಮನುಷ್ಯ ಜಗತ್ತನ್ನು ನೋಡುವ ದೃಷ್ಟಿ ಎಲ್ಲರಿಗಿಂತ ಭಿನ್ನವಾಗಿರುತ್ತದೆ. ಬಹುಶಃ ಹ್ಯಾಂಗೊವರ್ ಕಥೆಯಲ್ಲೂ ಸಹ ಸೋಮು ತನ್ನೊಳಗಿನ ತನ್ನನ್ನು ಪ್ರಶ್ನಿಸುತ್ತಾ ಅಂತರ್ಮುಖಿಯಾಗಿರಲು ಕಾರಣ ಆತನ ಬಾಲ್ಯ ಎನಿಸುತ್ತದೆ.
ಸೋಮುವಿನ ಸ್ನೇಹಿತ ಕಿಟ್ಟು ಪ್ರಾಸಂಗಿಕವಾಗಿ ದಾರಿ ಮಧ್ಯದಲ್ಲಿ ಸಿಗುತ್ತಾನೆ ಆ ದಿನ. ಬಾರಿನಲ್ಲಿ ಕುಡಿದದ್ದು ಸಾಕಾಗದೆ ಕಿಟ್ಟುವಿನ ಮನೆಯಲ್ಲೂ ಸಹ ಕುಡಿತಕ್ಕೆ ಅಣಿಯಾಗಿದ್ದು,ಹಾಗೂ ಬ್ರಾಹ್ಮಣರ ಹುಡುಗರಾದರೂ ಮಾಂಸವನ್ನು ತಿನ್ನಲಾರದೆ ನುಂಗುವುದು ಅಪ್ಪನ ಮೇಲಿನ ಕಿಚ್ಚಿಗೋ ಎಂಬಂತೆ ಕತೆಗಾರ ಚಿತ್ರಿಸುತ್ತಾರೆ. ತಿಂದಿದ್ದು ಜೀರ್ಣವಾಗದೆ ರಾತ್ರಿಯೇ ವಾಂತಿ ಮಾಡಿಕೊಳ್ಳುವುದು ಬೇರೆ ವಿಷಯ. ಸೋಮುವಿನ ಈ ಸಮಸ್ಯೆಯಿಂದ ಕಿಟ್ಟು ಸಹ ಸೋಮು ಅಪ್ಪನಿಗೆ ಹಣ ಕಳಿಸುವುದು ಸರಿಯಾ? ತಪ್ಪಾ ಎಂಬ ಗೊಂದಲದಿಂದಲೇ ಮಾರನೇ ದಿನ ಬೆಳಿಗ್ಗೆ ಕುಡಿದ ಹೆಂಡವೆಲ್ಲ ಇಳಿದ ಮೇಲೆ “ಅಪ್ಪನ ವಿಷಯ ಏನು ತೀರ್ಮಾನಕ್ಕೆ ಬಂದೆ?” ಎಂದಾಗ “ನಿಜ ಏನು ಗೊತ್ತಾ? ನಿನ್ನೆ ಊರಿಗೆ 150 ಮನಿ ಆರ್ಡರ್ ಮಾಡಿದೆ. ಪ್ಯಾಂಟಿನಲ್ಲಿ ಅದರ ರಶೀದಿ ಇದೆ ನೋಡು” ಎಂದಾಗ ಕಿಟ್ಟು ಅವಕ್ಕಾಗಿ ತಳಮಳಿಸಿ ಹೋಗುತ್ತಾನೆ. ಕಥೆಯ ಕೊನೆಯಲ್ಲಿ ಸೋಮು ನಿನ್ನೆಯೇ ಕಳಿಸಿದ 150 ರೂಪಾಯಿ ಹಣದ ಹ್ಯಾಂಗೊವರ್ ನಿಂದ ಹೊರಬರಲಾರದೆ ಆಕಸ್ಮಿಕವಾಗಿ ಸಿಕ್ಕ ಗೆಳೆಯನೊಂದಿಗೆ ಎಣ್ಣೆ ಕುಡಿದಾದರೂ ನೋವು ಮರೆತು ಖುಷಿ ಅನುಭವಿಸೋಣ ಎಂದು ಕುಡಿಸಿ ತಾನು ಕುಡೆದಿದ್ದ. ಆದರೆ ಎಣ್ಣೆ ಕುಡಿಯುವಾಗಲು, ಕುಡಿದ ನಂತರವು ಅಪ್ಪ ಕೇಳಿದ 150 ರೂ ಹಣ ಹಾಗೂ ತನ್ನ ಬಾಲ್ಯದಲ್ಲಿ ತಾನು ಕಂಡ ನೋವು ಮತ್ತೆ ಮರುಕಳಿಸಿ ಜೀವ ಹಿಂಡಿತ್ತು.
ವೈಜ್ಞಾನಿಕ ಹಿನ್ನೆಲೆಯಿಂದ ಈ ಕಥೆ ವೀಕ್ಷಿಸಿದಾಗ ಮನುಷ್ಯ ಕುಡಿಯುವ ಮುನ್ನ ಯಾವ ಚಿಂತೆ ಹಾಗೂ ಚಿಂತನೆಯಲ್ಲಿರುತ್ತಾನೋ ಕುಡಿದ ನಂತರವೂ ಸಹ ಅದೇ ಅಮಲಿಗೆ ತೆರಳುತ್ತಾನೆ. ಉದಾಹರಣೆಗೆ ಪ್ರೀತಿ, ಪ್ರೇಮ, ವಿರಹ, ನೋವು,ಸಂಕಟ, ಸಿಟ್ಟು, ದ್ವೇಷ, ನಗು, ಅಳು, ಇತ್ಯಾದಿ ಭಾವಗಳು ಕುಡಿದ ನಂತರ ವರ್ತಮಾನ ಸ್ಥಿತಿಗೆ ಭೂತದ ಕ್ರಿಯೆಯೇ ಮೂಲ. ವರ್ತಮಾನದಲ್ಲಿ ಪ್ರತಿಕ್ರಿಯಿಸುವುದನ್ನು ವಿಜ್ಞಾನ ಹೇಳುವುದು. ಆದ ಕಾರಣದಿಂದ ಈ ಕಥೆಯ ಸೋಮು ತನ್ನ ನೋವು ಮರೆಯಲೆಂದು ಕುಡಿದರೂ ಕೂಡ ತನ್ನ ಗತದ ಹ್ಯಾಂಗೋವರ್ ನಿಂದ ಹೊರಬರಲಾರದೆ ಒದ್ದಾಡುವ ಪರಿಸ್ಥಿತಿಯನ್ನು ಜಿ. ಎಸ್. ಸದಾಶಿವ ಅವರು ಮನುಷ್ಯನ ಮನಸ್ಥಿತಿಯನ್ನು ಚೆನ್ನಾಗಿ ಕಟ್ಟಿಕೊಟ್ಟಿರುತ್ತಾರೆ.
ಒಂದು ಕಾಲದಲ್ಲಿ ಬೇಡವೆಂದು ಕಾಲಿನಲ್ಲಿ ಒದ್ದ ಅದೇ ವಸ್ತು ಅಥವಾ ವ್ಯಕ್ತಿ ಇಂದು ಅವಶ್ಯಕತೆ ಇದೆ ಎಂದಾಗ ಸಂಬಂಧಗಳ ಕೊಂಡಿ ಮತ್ತಷ್ಟು ಬಿಗಿ ಮಾಡಿಕೊಳ್ಳುವುದರ ಹಿನ್ನೆಲೆ ಕೂಡ ಸ್ವಾರ್ಥವೇ ಆಗಿರುತ್ತದೆ ಎಂಬುದನ್ನು ಕಥೆ ಎತ್ತಿ ಹಿಡಿಯುತ್ತದೆ. ಇಲ್ಲಿ ಆ ಹ್ಯಾಂಗೊವರ್ ಗೆ ಪ್ರೇರಕವಾಗಿ ವಿಸ್ಕಿ ಬಿಯರ್, ಮಾಂಸ, ಮುಂತಾದ ಜೊತೆಗೆ ಆತನ ಸ್ನೇಹಿತ ಕಿಟ್ಟು ಪ್ರೇರಿತ ಶಕ್ತಿಗಳಂತೆ ರೂಪಕಗಳಾಗಿ ನಮ್ಮನ್ನು ನೋಡುತ್ತವೆ. ಆದರೆ ಸ್ನೇಹಿತ ನೆನ್ನೆಯೆ ಹಣ ಕಳಿಸಿದೆ ಎಂಬುದನ್ನು ಅಮಲು ಇಳಿದ ಮೇಲೆ ಹೇಳಿದ ಆತನ ಮಾತು ಕೇಳಿ ಆಶ್ಚರ್ಯ ಚಕಿತನಾಗಿ ಮತ್ತೊಂದು ತರದ ಹ್ಯಾಂಗೊವರ್ ಗೆ ಕಿಟ್ಟುವನ್ನು ಸಿಲುಕಿಸುವಂತಹ ನಾಟಕೀಯತೆಯನ್ನು ಲೇಖಕರು ಕಿಟ್ಟುವಿನ ಮೂಲಕ ತೋರಿಸುತ್ತಾರೆ. ಇನ್ನೊಂದು ಎಣ್ಣೆ ಹೊಡೆದು ಅಮಲಿನಲ್ಲಿ ತೇಲಾಡಿ ಸುಸ್ತು ಬಾಯಿ ಸಪ್ಪೆ ತಲೆನೋವು ಬೆಳಗಿಗೆ ಸರಿಯಾಗಿ ಸ್ಪಂದಿಸಲಾರದ ಮನಸ್ಥಿತಿಯನ್ನು ಕೂಡ ಹಿಂದಿನ ದಿನದ ಹ್ಯಾಂಗೂವರೆಗೆ ಹೋಲಿಸಬಹುದಾಗಿದೆ. ಇಲ್ಲಿ ಸಂಪ್ರದಾಯ ಆಚಾರ ವಿಚಾರಗಳನ್ನೆಲ್ಲಾ ನೋವು ದುಃಖ ಎಂಬುವವು ಗಾಳಿಗೆ ತೂರಿಬಿಡುತ್ತದೆ ಎಂಬ ಅಂಶವನ್ನು ಪ್ರತಿಪಾದಿಸಿದ್ದಾರೆ ಲೇಖಕರು. “ಅದೇ ನೋವು ಸಂಪ್ರದಾಯದ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ”. ಎಂಬ ನಿಲುವಿಗೆ ಮಾಂಸ ಮದ್ಯವನ್ನು ತಿಂದು ಕುಡಿಯುವುದನ್ನು ಕತೆಗಾರ ಉಲ್ಲೇಖಿಸುತ್ತಾರೆ. ಒಟ್ಟಾರೆ ಸಮಕಾಲೀನ ಸಂದರ್ಭದಲ್ಲೂ ಸಹ ಇಂತಹ ಕಥೆಯ ಆವರಣಗಳು ಆಶಯಗಳು ಎಲ್ಲಾ ಕಡೆಯೂ ಅನುರಣಿಸುತ್ತಲೇ ಇರುತ್ತದೆ ಎಂಬುದು ಸತ್ಯ ಸಂಗತಿ.
ಈ ಅಂಕಣದ ಹಿಂದಿನ ಬರಹಗಳು:
ಅಬಚೂರಿನ ಪೋಸ್ಟಾಫೀಸು ಕತೆಯಲ್ಲಿ ಕಾಣುವ ಹಳ್ಳಿ ಜಗತ್ತು
ಲಂಕೇಶ್ ಅವರ ನಿವೃತ್ತರು ಎಂಬ ಕಥೆಯಲ್ಲಿ ಕಾಣುವ ಸಣ್ಣತನ
ಶ್ರಾದ್ಧ ಕಥೆಯಲ್ಲಿ ಕಾಣುವ ಆಚಾರದ ದ್ವಂದ್ವ ನಿಲುವು
ರಾಮನ ಸವಾರಿ ಸಂತೆಗೆ ಹೋದದ್ದು ಕಥೆಯಲ್ಲಿ ಕಾಣುವ ವಿಷಮ ದಾಂಪತ್ಯ
ರಾಘವೇಂದ್ರ ಖಾಸನೀಸ ಅವರ ತಬ್ಬಲಿಗಳು ಕಥೆಯಲ್ಲಿ ಸಂಬಂಧಗಳ ಅಸಂಬದ್ಧತೆ
ಅನಂತಮೂರ್ತಿ ಅವರ `ಕ್ಲಿಪ್ ಜಾಯಿಂಟ್' ಕಥೆಯಲ್ಲಿ ಕಾಣುವ ಮೌಲ್ಯಶೋಧನೆ
ಶಾಂತಿನಾಥ ದೇಸಾಯಿ ಅವರ ಕ್ಷಿತಿಜ ಕಥೆಯಲ್ಲಿ ಕಾಣುವ ಸಾಂಸ್ಕೃತಿಕ ಮುಖಾಮುಖಿ
ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ
ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ
ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ
ಯಾರು ಹಿತವರು ನಿನಗೆ ಕಥೆಯೊಳಗಿನ ಕಾಮ
ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ
ಯಾರು ಅರಿಯದ ವೀರನ ತ್ಯಾಗ
ಮಾಸ್ತಿಯವರ ಮೊಸರಿನ ಮಂಗಮ್ಮ
ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು
ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ
ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ
"ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾ...
"ಪ್ರಶಸ್ತಿ ಪುರಸ್ಕಾರಗಳಿಂದ ದೂರವಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಇವರ ಹಂಗಿನರಮನೆಯ ಹೊರಗೆ ಕಥೆಯು &ldqu...
"ರಂಗಭೂಮಿ ಎಂದರೆ ಕೇವಲ ನಾಟಕಗಳ ಪ್ರದರ್ಶನ ಮಾತ್ರವಲ್ಲ. ಅದೊಂದು ಬಹುತ್ವ ಆಯಾಮಗಳ ಜೀವನ ಪ್ರೀತಿ ಹುಟ್ಟಿಸುವ ಜನಸಂಸ...
©2025 Book Brahma Private Limited.