ಗಾನ ತಪಸ್ವಿನಿ ಮೊಗುಬಾಯಿ ಕುರ್ಡಿಕರ್

Date: 04-09-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ಜಗದೀಶ ಕೊಪ್ಪ ಅವರು 'ಗಾನಲೋಕದ ಗಂಧರ್ವರು' ಸರಣಿಯಲ್ಲಿ ಜೈಪುರ ಅತ್ರೌಲಿ ಘರಾಣೆಯ ಅಪ್ರತಿಮ ಗಾಯಕಿ ಮೊಗುಬಾಯಿ ಕುರ್ಡಿಕರ್‌ ಬರೆದಿದ್ದಾರೆ. ಖ್ಯಾತ ಗಾಯಕಿ ಕಿಶೋರಿ ಅಮೋನಕರ್‌ ಅವರ ತಾಯಿ-ಗುರುವಾಗಿದ್ದ ಮೊಗುಬಾಯಿ ಅವರು ಉಸ್ತಾದ್‌ ಅಲ್ಲಾದಿಯಾಖಾನ್‌ ಅವರಿಂದ ಆರಂಭವಾದ ಸಂಗೀತ ಪರಂಪರೆಗೆ ಸೇರಿದವರು.

2002ರಲ್ಲಿ ಖ್ಯಾತ ವಿದುಷಿ ಗಂಗೂಬಾಯಿ ಹಾನಗಲ್ ಅವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ಘೋಷಣೆ ಮಾಡಿತ್ತು. ಆ ವೇಳೆಯಲ್ಲಿ ಅವರು ಕೊಲ್ಕತ್ತ ನಗರದಲ್ಲಿ ನಡೆಯುತ್ತಿದ್ದ ಸಂಗೀತ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಕೊಲ್ಕತ್ತ ನಗರದಿಂದ ಹುಬ್ಬಳ್ಳಿಗೆ ಹಿಂತಿರುಗಲು ಪುಣೆ ನಗರಕ್ಕೆ ವಿಮಾನದಲ್ಲಿ ಬಂದಿದ್ದ ಅವರು, ಖ್ಯಾತ ಹಿಂದೂಸ್ತಾನಿ ಗಾಯಕಿ ಕಿಶೋರಿ ಅಮೋನ್ಕರ್ ಅವರ ನಿವಾಸದಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದರು. ಗಂಗೂಬಾಯಿ ಹಾನಗಲ್ ಅವರಿಗೆ ಬಹಳ ವರ್ಷಗಳ ಕಾಲ ಆತ್ಮೀಯರಾಗಿದ್ದ ಹಾಗೂ ಹಿಂದೂಸ್ತಾನಿ ಗಾಯನದಲ್ಲಿ ಹಿರಿಯ ಗಾಯಕಿಯಾಗಿ ಹೆಸರು ಮಾಡಿದ್ದ ಮತ್ತು ಕಿಶೋರಿಯವರ ತಾಯಿಯವರಾಗಿದ್ದ ವಿದುಷಿ ಮೋಗುಬಾಯಿ ಕುರ್ಡಿಕರ್ ಅವರು ಅದೇ ವರ್ಷ ನಿಧನರಾಗಿದ್ದರು. ಕಿಶೋರಿ ಅಮೋನ್ಕರ್‌ರವರು ತಮ್ಮ ತಾಯಿಯ ಸ್ಮರಣಾರ್ಥ ಪುಣೆ ನಗರದಲ್ಲಿ ಸಂಗೀತೋತ್ಸವ ಏರ್ಪಡಿಸಿದ್ದರು. ನನ್ನ ತಾಯಿಯ ಸ್ಥಾನದಲ್ಲಿರುವ ನೀವು ಭಾಗವಹಿಸಬೇಕುಎಂದು ಕಿಶೋರಿಯವರು ಮನವಿ ಮಾಡಿಕೊಂಡಿದ್ದರು. ಜೊತೆಗೆ ಅವರಿಗೂ ಸಹ 2002ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕಿಶೋರಿ ಅಮೋನ್ಕರ್ ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಗಂಗೂಬಾಯಿ ಹಾನಗಲ್ ರವರು ತಮ್ಮ ಪುತ್ರಿ ಕೃಷ್ಣ ಹಾನಗಲ್ ಜೊತೆ ಸಂಗೀತೋತ್ಸವದಲ್ಲಿ ಪಾಲ್ಗೊಂಡು ಆನಂತರ ಹುಬ್ಬಳ್ಳಿಗೆ ಹಿಂತಿರುಗಿದ್ದರು. ನಾನು ಉದಯ ಟಿ.ವಿ.ಯಲ್ಲಿದ್ದ ಕಾರಣ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ಸಂದರ್ಶನ ನೀಡುತ್ತಾ, ಮಾತುಗಳ ಮಧ್ಯೆ ಮೊಗುಬಾಯಿ ಕುರ್ಡಿಕರ್ ಕುರಿತು ಹೆಮ್ಮೆಯಿಂದ ಗೌರವದಿಂದ ಮಾತನಾಡಿ ಅವರ ಬದುಕನ್ನು ಸ್ಮರಿಸಿಕೊಂಡರು. ಅಂದು ಅವರಾಡಿದ ಮಾತುಗಳು ಇಂದಿಗೂ ನನ್ನೊಳಗೆ ಹಸಿರಾಗಿವೆ.

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ತಮ್ಮ ಗಾಯನ, ವಿದ್ವತ್, ಪ್ರತಿಭೆಯ ಮೂಲಕ ಮಹಿಳೆಯರಿಗೆ ಘನತೆ, ಗೌರವವನ್ನು ತಂದುಕೊಟ್ಟ ಪ್ರಾತಃಸ್ಮರಣೀಯ ಗಾಯಕಿಯರಲ್ಲಿ ಖ್ಯಾತ ವಿದುಷಿಯರಾದ ಮೊಗಬಾಯಿ ಕುರ್ಡಿಕರ್ ಮತ್ತು ಕೇಸರಿಬಾಯಿ ಕೇರ್ಕರ್, ಪ್ರಮುಖರಾಗಿದ್ದಾರೆ. ಈ ಇಬ್ಬರು ಮಹಿಳಾ ಕಲಾವಿದೆಯರು ಅಂದಿನ ಸಂಗೀತ ಲೋಕದಲ್ಲಿ ಗಾನಸಾಮ್ರಾಟ್ ಎಂದು ಪ್ರಸಿದ್ಧರಾಗಿದ್ದ ಮುಂಬೈ ನಗರದ ಹಾಗೂ ಕೊಲ್ಲಾಪುರ ಸಂಸ್ಥಾನದ ಆಸ್ಥಾನ ಕಲಾವಿದರಾಗಿದ್ದ ಜೈಪುರ್ ಅತ್ರೌಲಿ ಘರಾಣೆಯ ಉಸ್ತಾದ್ ಅಲ್ಲಾವುದ್ದೀನ್ ಖಾನರವರ ಶಿಷ್ಯೆಯರು ಎಂಬುದು ಗಮನಾರ್ಹ ಸಂಗತಿ. ಅಂದಿನ ಕಾಲಘಟ್ಟದಲ್ಲಿ ಮಹಿಳಾ ಕಲಾವಿದೆಯರು ಎಂದರೆ ಬೆಲೆವೆಣ್ಣುಗಳಂತೆ ನೋಡುತ್ತಿದ್ದ ಸಮಾಜದಲ್ಲಿನ ಎಲ್ಲಾ ಅಪಮಾನಗಳನ್ನು, ಕ್ರೌರ್ಯವನ್ನು ಮೆಟ್ಟಿ ನಿಂತ ಅಸಮಾನ್ಯ ಗಾಯಕಿಯರು ಇವರು ಎಂಬುದು ವಿಶೇಷ. ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಮಹಿಳೆಯರ ಕುರಿತಾಗಿ ಇದ್ದ ಪುರುಷ ಲೋಕದ ಸಿದ್ಧ ಮಾದರಿಯ ಗ್ರಹಿಕೆಗಳನ್ನು ತೊಡೆದು ಹಾಕಿದವರು.

ಮೋಗುಭಾಯಿ ಕುರ್ಡಿಕರ್ ಕುರಿತಂತೆ ಬೆಳಗಾವಿಯ ನನ್ನ ಮಿತ್ರರಾದ ಶಿರೀಷ್ ಜೋಷಿಯವರು ದಾಖಲಿಸಿರುವ ಒಂದು ಘಟನೆ ಅಂದಿನ ಸಮಾಜದ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. 1950ರ ದಶಕದಲ್ಲಿ ಗೋವಾದ ಹಿಂದೂ ದೇವಾಲಯಗಳಲ್ಲಿ ಒಂದು ವಾರ ನಿರಂತರ ಸಂಗೀತ ಕಚೇರಿ ನೀಡಲು ಒಪ್ಪಿಕೊಂಡಿದ್ದ ಮೋಗುಬಾಯಿವರು ಪ್ರತಿ ರಾತ್ರಿ ಕೇವಲ ನೂರು ಅಥವಾ ನೂರೈವತ್ತು ರೂಪಾಯಿಗಳಿಗಳ ಸಂಭಾವನೆಗೆ ಸಂಗೀತ ಕಛೇರಿ ನಡೆಸಿ, ಬಂದ ಹಣವನ್ನು ಹಾರ್ಮೋನಿಯಂ ಮತ್ತು ತಬಲಾ ಸಾಥ್ ನೀಡುತ್ತಿದ್ದ ಕಲಾವಿದರೊಂದಿಗೆ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಹಗಲಿನ ವೇಳೆ ಶ್ರೀಮಂತರ ಆಹ್ವಾನದ ಮೇಲೆ ಅವರ ನಿವಾಸಕ್ಕೆ ತೆರಳಿ ಒಂದು ಅಥವಾ ಎರಡು ಗಂಟೆಗಳ ಕಾಲ ಸಂಗೀತ ಕಛೇರಿ ನಡೆಸಿ ಕೊಡುತ್ತಿದ್ದರು. ಒಮ್ಮೆ ಗೋವಾದ ಶ್ರೀಮಂತ ಜಮೀನ್ದಾರನೊಬ್ಬ ತನ್ನ ಸೇವಕನ ಮೂಲಕ ಕಳುಹಿಸಿದ ಆಮಂತ್ರಣದ ಮೇರೆಗೆ ಆತನ ನಿವಾಸಕ್ಕೆ ಕಾರ್ಯಕ್ರಮ ನೀಡಲು ತಮ್ಮ ಸಹ ಕಲಾವಿದರೊಂದಿಗೆ ಮೊಗುಬಾಯಿ ಹೋದಾಗ ಈ ಅಪಮಾನಕಾರಿ ಘಟನೆ ನಡೆಯಿತು. ಮಾಲೀಕನ ಆಜ್ಞೆಯಂತೆ ಸೇವಕರು ತೆಂಗಿನ ಚಿಪ್ಪಿನಲ್ಲಿ ಮೊಗುಬಾಯಿಗೆ ಚಹಾ ನೀಡಲು ಬಂದಾಗ ಅವರು ಅಪಮಾನದಿಂದ ಘಾಸಿಗೊಂಡರು. ಚಹಾವನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ, ಸಂಗೀತ ಕಛೇರಿಯನ್ನು ರದ್ದು ಪಡಿಸಿ ವಾಪಸ್ ಬಂದರು. ಆ ದಿನ ಮೋಗುಬಾಯಿ ಕುರ್ಡಿಕರ್ ರವರು ಇನ್ನು ಮುಂದೆ ಶ್ರೀಮಂತರ ಮನೆಗಳಿಗೆ ತೆರಳಿ ಖಾಸಾಗಿ ಸಂಗೀತ ಕಛೇರಿ ನೀಡುವುದಿಲ್ಲ ಎಂದು ಶಪಥಗೈದರು. ಅದರಂತೆ ತಮ್ಮ ಜೀವನ ಪೂರ್ತಿ ನಡೆದುಕೊಂಡರು. ಇಷ್ಟು ಮಾತ್ರವಲ್ಲದೆ, ಸ್ವಾಭಿಮಾನದ ಹಾಗೂ ಘನತೆಯ ಬದುಕನ್ನು ತಮ್ಮ ಪುತ್ರಿಯಾದ ಕಿಶೋರಿ ಅಮೋನ್ಕರ್ ರವರಿಗೆ ಸಂಗೀತದ ಜೊತೆ ಧಾರೆಯೆರೆದರು
ಮೊಗುಬಾಯಿ ಕುರ್ಡಿಕರ್ ರವರು 1904ರಲ್ಲಿ ಪೂರ್ಚುಗೀಸರ ಆಡಳಿತವಿದ್ದ ಅಂದಿನ ಗೋವಾರಾಜ್ಯದ ಕುರ್ಡಿ ಎಂಬ ಪುಟ್ಟ ಹಳ್ಳಿಯಲ್ಲಿ ಕಲಾವಂತರು ಎಂದು ಕರೆಯಲಾಗುತ್ತಿದ್ದ ದೇವದಾಸಿ ಸಮುದಾಯದ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಜಯಶ್ರೀ ಬಾಯಿಯವರು ತನ್ನ ಪುತ್ರಿ ಗಾಯಕಿಯಾಗಲಿ ಎಂಬ ಆಸೆಯಿಂದ ಪ್ರತಿದಿನ ಹತ್ತಿರ ಜಂಬೂವಿಲಿ ಎಂಬ ಪ್ರದೇಶದಲ್ಲಿದ್ದ ದೇವಸ್ಥಾನದ ಬಳಿ ಕರೆದೊಯ್ಯತ್ತಿದ್ದರು. ಅಲ್ಲಿಗೆ ಬರುತ್ತಿದ್ದ ಸಾದು ಸಂತರಿಂದ ಮರಾಠಿ ಭಾಷೆಯ ಅಭಂಗ್ ಎನ್ನುವ ಭಜನೆಗಳನ್ನು ಕಲಿಯಲು ಪ್ರೋತ್ಸಾಹಿಸುತ್ತಿದ್ದರು. ನಂತರ ಒಂಬತ್ತು ವರ್ಷದ ಮೋಗುಬಾಯಿಯನ್ನು ಚಂದ್ರೇಶ್ವರ್ ಭೂತನಾಥ ಮಂಡಳಿ ಎಂಬ ನಾಟಕ ಕಂಪನಿಗೆ ಸೇರಿಸಿ, ಅಲ್ಲಿನ ಹಿರಿಯ ಕಲಾವಿದರಿಂದ ಹಾಡುಗಾರಿಕೆಯಲ್ಲಿ ತರಬೇತಿ ಕೊಡಿಸುತ್ತಿದ್ದರು. ಬಾಲಕಿ ಮೋಗುಬಾಯಿ ಹಾಡು ಕಲಿಯುವುದರ ಜೊತೆಗೆ ನಾಟಕಗಳಲ್ಲಿ ಪ್ರಹ್ಲಾದ, ಧ್ರುವ ಎಂಬ ಬಾಲ ಪಾತ್ರಗಳನ್ನು ಸಹ ಮಾಡುತ್ತಿದ್ದರು. ದೇವದಾಸಿ ಸಮುದಾಯದ ಹೆಣ್ಣು ಮಕ್ಕಳಿಗೆ ಸಂಗೀತ ಮತ್ತು ನೃತ್ಯ ಇವುಗಳು ಬದುಕಿಗೆ ಆ ಕಾಲದಲ್ಲಿ ಆಸರೆಯಾಗುತ್ತಿದ್ದರಿಂದ ಹಾಡುಗಾರಿಕೆಯ ಜೊತೆಗೆ ಮೊಗುಬಾಯಿಯವರು ರಾಮ್‌ಲಾಲ್ ಎಂಬುವರಿಂದ ಕಥಕ್ ನೃತ್ಯವನ್ನು ಸಹ ಅಭ್ಯಾಸ ಮಾಡುತ್ತಿದ್ದರು. ಆದರೆ, ಅವರ ದುರಾದೃಷ್ಟವೆಂಬಂತೆ ಆರ್ಥಿಕ ನಷ್ಟದಿಂದ ನಾಟಕ ಕಂಪನಿಯು ಮುಚ್ಚಿ ಹೋಯಿತು. ಮರುವರ್ಷ ಅವರ ತಾಯಿ ಜಯಶ್ರೀಬಾಯಿಯವರು ಅನಾರೋಗ್ಯದಿಂದ ನಿಧನರಾದರು. ಸಾವಿಗೆ ಮುನ್ನ ತನ್ನ ಪುತ್ರಿಯನ್ನು ತನ್ನ ಸಹೋದರಿಯ ವಶಕ್ಕೆ ಒಪ್ಪಿಸಿದ್ದರಲ್ಲದೆ, ಪುತ್ರಿಯನ್ನು ಹತ್ತಿರ ಕರೆದು ಯಾವ ಕಾರಣಕ್ಕೂ ಮೈ ಮಾರಿ ಜೀವಿಸುವ ಕಾಯಕಕ್ಕೆ ಇಳಿಯದೆ, ಸಂಗೀತದಲ್ಲಿ ಸಾಧನೆಯನ್ನು ಮಾಡಿ ಇಡೀ ಸಮಾಜ ನಿನ್ನತ್ತ ಗೌರವದಿಂದ ನೋಡುವಂತೆ ಬದುಕಬೇಕು ಎಂಬ ವಚನವನ್ನು ಬಾಲಕಿ ಮೋಗುಬಾಯಿಯವರಿಂದ ಪಡೆದಿದ್ದರು.
ನಂತರದ ದಿನಗಳಲ್ಲಿ ಮೋಗುಬಾಯಿವರು ಸ್ತ್ರೀ ನಾಟಕ ಮಂಡಳಿಯಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದರು. ಆದರೆ, ಅಲ್ಲಿನ ಹಿರಿಯ ಕಲಾವಿದೆಯರ ಜೊತೆಗಿನ ವೈಮನಸ್ಸಿನಿಂದ ನಾಟಕ ವೃತ್ತಿಯನ್ನು ತ್ಯಜಿಸಿ ಹುಟ್ಟೂರು ಕುರ್ಡಿಯಲ್ಲಿದ್ದ ಚಿಕ್ಕಮ್ಮನ ಮನೆಗೆ ಹಿಂತಿರುಗಿದರು. ಒಮ್ಮೆ ತೀವ್ರ ಅನಾರೋಗ್ಯಕ್ಕೆ ತುತ್ತದ ಬಾಲಕಿ ಮೋಗುಬಾಯಿಯವರನ್ನು ಅವರ ಚಿಕ್ಕಮ್ಮ ಚಿಕಿತ್ಸೆಗಾಗಿ ಸಾಂಗ್ಲಿ ಪಟ್ಟಣಕ್ಕೆ ಕರೆದೊಯ್ದು ಅಲ್ಲಿಯೇ ಮನೆ ಮಾಡಿದರು. ಚಿಕಿತ್ಸೆಯ ಜೊತೆಗೆ ಸಂಗೀತ ಕಲಿಯಲು ಸ್ಥಳಿಯ ಗುರುವೊಬ್ಬರ ಬಳಿ ಕಳುಹಿಸತೊಡಗಿದರು. ಇದು ಮೋಗುಬಾಯಿಯವರ ಪಾಲಿಗೆ ಅದೃಷ್ಟದ ಬಾಗಿಲು ತೆರೆದಂತಾಯಿತು.

ಮೋಗುಬಾಯಿ ಸಾಂಗ್ಲಿಯಲ್ಲಿ ಸಂಗೀತದ ಅಭ್ಯಾಸ ಮಾಡುತ್ತಿದ್ದ ಅದೇ ವೇಳೆಯಲ್ಲಿ (1916) ಉಸ್ತಾದ್ ಅಲ್ಲಾವುದ್ದೀನರು ಸಹ ಸಾಂಗ್ಲಿಯಲ್ಲಿ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ದಿನ ಅಲ್ಲಾವುದ್ದೀನ್ ಖಾನರು ತಮ್ಮ ವೈದ್ಯರಾದ ಅಬಾ ಸಾಹೇಬ್ ಸಾಂಬ್ರೆ ಅವರ ಮನೆಯಿಂದ ಹೊರಬಂದು ರಸ್ತೆಯಲ್ಲಿ ನಡೆಯುತ್ತಿದ್ದಾಗ, ಜೋಪಡಿಯಂತಹ ಸಣ್ಣ ಮನೆಯೊಂದರ ಕೊಠಡಿಯೊಂದರಿಂದ ಬಾಲಕಿಯ ಸುಶ್ರಾವ್ಯ ಕಂಠದಿಂದ ತೇಲಿಬರುತ್ತಿದ್ದ ಸಂಗೀತವನ್ನು ಕೇಳಿ ಅಚ್ಚರಿಗೊಂಡರು. ಕುತೂಹಲದಿಂದ ಕೊಠಡಿಯತ್ತ ಹೆಜ್ಜೆ ಹಾಕಿದರು. ಕಣ್ಣು ಮುಚ್ಚಿಕೊಂಡು ತಂಬೂರದ (ತಂಬೂರಿಯ) ಶ್ರುತಿ ಮೀಟುತ್ತಾ ಹಾಡುತ್ತಿದ್ದ ಮೋಗುಬಾಯಿಯವರು ಮನೆ ಬಾಗಿಲಿಗೆ ಬಂದ ಹಿರಿಯ ಜೀವವನ್ನು ನೋಡಿ ಹಾಡುಗಾರಿಕೆಯನ್ನು ನಿಲ್ಲಿಸಿದರು. ಹಾಡು ಮಗು ನಿನ್ನ ಸಂಗೀತವನ್ನು ಕೇಳಲು ಬಂದಿದ್ದೇನೆ ಎನ್ನುತ್ತಾ ಅಲ್ಲಾವುದ್ದೀನ್ ಖಾನರು ಮೋಗುಬಾಯಿ ಎದುರು ಕುಳಿತಾಗ, ಅವರು ಮತ್ತೇ ಹಾಡತೊಡಗಿದರು. ತಾನು ಕೊಲ್ಲಾಪುರದ ಸಾಹುಮಹಾರಾಜನ ಆಸ್ಥಾನದ ವಿದ್ವಾಂಸ ಹಾಗೂ. ಹಿಂದೂಸ್ಥಾನಿ ಸಂಗೀತದ ಅಪ್ರತಿಮ ಗಾಯಕ ಮತ್ತು ಗುರುವಿನ ಎದುರು ಹಾಡುತ್ತಿದ್ದೇನೆ ಎಂಬ ಯಾವ ಪರಿಕಲ್ಪನೆಯೂ ಇರದ ಮುಗ್ಧ ಬಾಲಕಿ ಮೋಗುಬಾಯಿ ಧ್ಯಾನಸ್ಥ ಮನಸ್ಸಿನಲ್ಲಿ ಅದುವರೆಗೆ ತಾವು ಕಲಿತಿದ್ದನ್ನು ಅಲ್ಲಾವುದ್ದೀನ್ ಖಾನ್ ರ ಎದುರಿಗೆ ಹಾಡತೊಡಗಿದರು.

ಸಂಗೀತವನ್ನು ಕೇಳಿ ಖುಷಿಗೊಂಡ ಅಲ್ಲಾವುದ್ದೀನ್ ಖಾನರು ಬಾಲಕಿಯನ್ನು ತಮ್ಮ ಮನೆಗೆ ಆಹ್ವಾನಿಸಿದರು. ಅವರ ನಿವಾಸಕ್ಕೆ ತೆರಳಿದ ನಂತರ ಮೋಗುಬಾಯಿವರಿಗೆ ನಾನು ಸಂಗೀತ ಲೋಕದ ಸಾಮ್ರಾಟನ ಸನ್ನಿಧಿಯಲ್ಲಿದ್ದೀನಿ ಎಂಬುದು ತಿಳಿಯಿತು. ಸಾಂಗ್ಲಿಯಲ್ಲಿದ್ದ ಎಂಟು ತಿಂಗಳ ಕಾಲ ಅಲ್ಲಾವುದ್ದೀನರಿಂದ ಖಯಾಲ್, ಠುಮ್ರಿಗಳನ್ನು ಅಭ್ಯಾಸ ಮಾಡಿದರು. ಮೋಗುಬಾಯಿಯ ಕಂಠಸಿರಿ ಮತ್ತು ಸಂಗೀತದ ಆಸಕ್ತಿಯನ್ನು ಗಮನಿಸಿದ ಖಾನ್ ಸಾಹೇಬರು ಮಗೂ, ನೀನು ಮುಂಬೈ ನಗರಕ್ಕೆ ಬಂದರೆ, ನಿನಗೆ ಸಂಗೀತವನ್ನು ಧಾರೆಯೆರೆಯುತ್ತೀನಿ ಎಂಬ ಭರವಸೆಯಿತ್ತರು. ಇಂತಹ ಅವಕಾಶಕ್ಕಾಗಿ ಎದು ನೋಡುತ್ತಿದ್ದ ಮೋಗುಬಾಯಿವರು ಮುಂಬೈ ನಗರಕ್ಕೆ ತೆರಳಿ ಕಾಥೆವಾಡಿ ಎಂಬ ಪ್ರದೇಶದಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದು ಗುರುವಿನ ಬಳಿ ಶಿಷ್ಯ ವೃತ್ತಿ ಕೈಗೊಳ್ಳಲು ಅವಕಾಶಕ್ಕಾಗಿ ಕಾಯತೊಡಗಿದರು. ಆದರೆ, ಕೊಲ್ಲಾಪುರದ ಸಂಸ್ಥಾನದಲ್ಲಿ ಹಾಗೂ ಅಲ್ಲಿನ ಮಹಾಲಕ್ಷಿ ದೇವಾಲಯದ ವಿಶೇಷ ಪೂಜಾ ದಿನಗಳಲ್ಲಿ ಹಾಡುವ ಹೊಣೆಗಾರಿಕೆ ಮತ್ತು ಮುಂಬೈ ನಗರದ ಶ್ರೀಮಂತರ ನಿವಾಸಗಳಲ್ಲಿ ಪ್ರತಿ ರಾತ್ರಿ ಹಾಡಬೇಕಾದ ಅನಿವಾರ್ಯತೆ ಇವುಗಳ ನಡುವೆ ಮೋಗುಬಾಯಿಯವರಿಗೆ ಪಾಠ ಹೇಳಿಕೊಡಲು ಅಲ್ಲಾವುದ್ದೀನ್ ಖಾನರಿಗೆ ಸಾಧ್ಯವಾಗಲಿಲ್ಲ.
1920ರಲ್ಲಿ ಮುಂಬೈ ನಗರಕ್ಕೆ ತೆರಳಿದ ಮೊಗುಬಾಯಿವರಿಗೆ ಆ ವೇಳೆಗೆ ಹದಿನಾರು ವರ್ಷವಾಗಿತ್ತು. ಈ ಸಮಯದಲ್ಲಿ ಅವರಿಗೆ ಪಂಜಾಬಿ ಯುವಕ ಮೋಹನ್‌ದಾಸ್ ಬಾಟಿಯ ಎಂಬುವರ ಪರಿಚಯವಾಗಿ 1923ರಲ್ಲಿ ಅವರೊಡನೆ ವಿವಾಹವೂ ನೆರವೇರಿತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ಅವರ ಸಂಗೀತದ ಸಾಧನೆ ಮುಂದುವರಿಯಿತು. ಮೋಗುಬಾಯಿವರು ಸ್ವಲ್ಪ ದಿನಗಳ ಕಾಲ ಅಲ್ಲಾವುದ್ದೀನರ ಸಲಹೆಯಂತೆ ಅವರ ಸಹೋದರ ಹೈದರ್ ಖಾನ್ ಬಳಿ ಅಭ್ಯಾಸ ಮಾಡಿದರು. ನಂತರ ಆಗ್ರಾ ಘರಾಣೆಯ ಬಶೀರ್ ಖಾನ್ ಎಂಬ.ಪಂಡಿತರ ಬಳಿಯೂ ಸಹ ಅವರು ಕೆಲವು ವರ್ಷ ಶಿಷ್ಯ ವೃತ್ತಿ ಕೈಗೊಂಡರು. ಈ ವಿಷಯ ತಿಳಿದ ಅಲ್ಲಾವುದ್ದೀನ್ ಖಾನರಿಗೆ ಬೇಸರಗೊಂಡರು. ವಾಸ್ತವವಾಗಿ ಅಲ್ಲಾವುದ್ದೀನ್ ಖಾನ್ ಕುಟುಂಬ ಜೈಪುರ್ ಅತ್ರೌಲಿ ಘರಾಣೆ ಶೈಲಿಯ ಸಂಗೀತವು ಆಗ್ರಾ ಘರಾಣೆ ಸಂಗೀತದಿಂದ ವಿಕಸಿತವಾದ ಶೈಲಿಯಾಗಿತ್ತು. ಆಲಾಪನೆಯಲ್ಲಿ ಅಥವಾ ರಾಗಗಳ ಪ್ರಸ್ತುಪಪಡಿಸುವಿಕೆಯಲ್ಲಿ ಮೂಲಭೂತ ವ್ಯತ್ಯಾಸಗಳಿರಲಿಲ್ಲ. ಸಂಗೀತ ಸಾಧನೆಯೊಂದೇ ತಮ್ಮ ಜೀವನದ ಏಕಮಾತ್ರ ಗುರಿ ಎಂದು ನಂಬಿ ಬದುಕಿದ್ದ ಮೋಗುಬಾಯಿವರ ಸಂಗೀತಾಸಕ್ತಿಗೆ ಅವರ ಪತಿ ಬಾಟಿಯ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಾ ಬಂದರು. ಎರಡು ಮಕ್ಕಳು ಹಾಗೂ ಸಂಸಾರದ ನಡುವೆ ಸಂಗೀತ ಕಛೇರಿ ನಡೆಸುತ್ತಾ ಸಾಧನೆ ಮಾಡುತ್ತಿದ್ದ ಮೊಗುಬಾಯಿವರ ಬದ್ಧತೆಗೆ ಮನಕರಗಿದ ಅಲ್ಲಾವುದ್ದೀನ್ ಖಾನರು 1933ರಲ್ಲಿ ಅಂತಿಮವಾಗಿ ಅವರನ್ನು ತಮ್ಮ ಶಿಷ್ಯೆಯನ್ನಾಗಿ ಸ್ವೀಕರಿಸಿದರು. ಆ ವೇಳೆಗೆ ಮೋಗುಬಾಯಿವರಿಗೆ ಮೂರನೇ ಮಗುವಾಗಿ ಜನಿಸಿದ್ದ ಕಿಶೋರಿ ಅಮೊನ್ಕರ್ ಎರಡು ವರ್ಷದ ಕೂಸು. ಘಟಬಂಧನ್ ಎಂದು ಕರೆಯಲಾಗುವ ಶಿಷ್ಯತ್ವ ಸ್ವೀಕಾರ ಸಮಾರಂಭಕ್ಕೆ ಮೊಗುಬಾಯಿಯವರು ತಮ್ಮ ಬಳಿ ಇದ್ದ 125 ಗ್ರಾಂ ಚಿನ್ನವನ್ನು ಮಾರಾಟ ಮಾಡಿ ಗುರುದಕ್ಷಿಣೆಯಾಗಿ ಗುರುವಿಗೆ ನೀಡಿದರು. 1933ರಿಂದ 1946ರವರೆಗೆ ಸತತ ಹದಿಮೂರು ವರ್ಷಗಳ ಕಾಲ ಸಂಗೀತವನ್ನು ತಮ್ಮ ಶಿಷ್ಯೆಗೆ ಧಾರೆಯೆರೆದ ಅಲ್ಲಾವುದ್ದೀನ್‌ಖಾನ್‌ರವರು ಮೋಗುಬಾಯಿಯವರ ಸಂಗೀತಕ್ಕೆ ಸಾಣೆ ಹಿಡಿದು ಅದನ್ನು ಹೊಳೆಯುವ ವಜ್ರವನ್ನಾಗಿ ಮಾಡಿದರು. ಮೋಗುಬಾಯಿವರು ಸಹ ಅಷ್ಟೇ ನಿಷ್ಟೆಯಿಂದ ತನ್ನ ಎರಡು ವರ್ಷದ ಕೂಸು ಕಿಶೋರಿಯನ್ನು ತೊಡೆಯ ಮೇಲೆ ಹಾಕಿಕೊಂಡು ಹಗಲು ರಾತ್ರಿ ನಿರಂತರ ಅಭ್ಯಾಸ ಮಾಡುತ್ತಿದ್ದರು. ಮುಗುವಿನ ಪಾಲಿಗೆ ತಾಯಿಯ ಸಂಗೀತ ಜೋಗುಳವಾಗಿತ್ತು.
ಆನಂತರ ದಿನಗಳಲ್ಲಿ ಮುಂಬೈ ನಗರದ ಪ್ರತಿಷ್ಟಿತ ಸಂಗೀತ ಕಛೇರಿಗಳಲ್ಲಿ ಮೋಗುಬಾಯಿಯವರಿಗೆ ಪ್ರಾಶಸ್ತ್ಯ ದೊರೆಯತೊಡಗಿತು. ಸ್ವತಃ ಗುರುಗಳು ತಮ್ಮ ಶಿಷ್ಯೆಯನ್ನು ಖಯಾಲ್ ಪ್ರಕಾರದಲ್ಲಿ ರಾಣಿ ಎಂದು ತುಂಬಿದ ಸಭೆಯಲ್ಲಿ ಮನಸಾರೆ ಹೊಗಳುತ್ತಿದ್ದರು. ಮೋಗುಬಾಯಿವರು ಹಿಂದುಸ್ತಾನಿ ಸಂಗೀತದ ಠುಮ್ರಿ, ದ್ರುಪದ್, ಖಯಾಲ್ ಪ್ರಕಾರಗಳಲ್ಲದೆ, ಲಘು ಪ್ರಕಾರದ ಗಜಲ್ ಗಳನ್ನು ಮತ್ತು ಮರಾಠಿಯ ಅಭಂಗ್ ಗಳನ್ನೂ ಸಹ ಸಂಗೀತ ಕಛೇರಿಯಲ್ಲಿ ಹಾಡುತ್ತಿದ್ದರು. ಅವರ ಸಂಗೀತ ಕೇಳುಗರ ಪಾಲಿಗೆ ಅನುಭಾವದ ಅನಭೂತಿಯಾಗಿತ್ತು. ಸಂಗೀತವನ್ನು ಒಂದು ಮನರಂಜನೆಯ ಮಾಧ್ಯಮ ಎಂದು ತಿಳಿಯದ ಮೋಗುಬಾಯಿಯವರು ಅದನ್ನು ಅಂತರಂಗದ ಮೂಲಕ ದೇವರನ್ನು ತಲುಪುವ ಮಾಧ್ಯಮ ಎಂದು ಅವರು ಭಾವಿಸಿದ್ದರು. ಹಾಗಾಗಿ ಮೋಗುಬಾಯಿಯವರ ಸಂಗೀತಕ್ಕೆ ಅಲೌಕಿಕvಯ ಸ್ಪರ್ಶವಿತ್ತು. ತಮ್ಮ ಬದುಕಿನ ಕಷ್ಟ, ಕಾಪರ್ಣ್ಯ, ಅಪಮಾನಗಳನ್ನು ಅವರು ಸಂಗೀತದ ಮೂಲಕ ಮೀರುವಲ್ಲಿ ಯಶಸ್ವಿಯಾದರು. ಇದನ್ನೇ ಅವರು ತಮ್ಮ ಪುತ್ರಿ ಕಿಶೋರಿ ಅಮೋನ್ಕರ್ ಹಾಗೂ ಶಿಷ್ಯರಾದ ಪದ್ಮಾವತ್ ವಾಲ್ಕರ್, ಕಮಲಗ ತಾಂಬ್ರೆ, ವಾಮನ್ ರಾವ್ ದೇಶಪಾಂಡೆ, ಸುಹಾಸಿನಿ ಮೂಲಗಾಂವಕರ್ ಮುಂತಾದವರಿಗೆ ಸಂಗೀತದ ಜೊತೆ ಕಲಿಸಿಕೊಟ್ಟರು. ಅವರ ಸಂಗೀತ ಛಾಯೆಯನ್ನು ದಟ್ಟವಾಗಿ ಅವರ ಪುತ್ರಿಯಲ್ಲಿ ನಾವು ಕಾಣಬಹುದಾಗಿದೆ.

ಗೋವಾದ ಪುಟ್ಟ ಹಳ್ಳಿಯಲ್ಲಿ ಓರ್ವ ದೇವದಾಸಿಯ ಪುತ್ರಿಯಾಗಿ ಜನಿಸಿದ ಮೊಗುಬಾಯಿವರಿಗೆ ಸಂಗೀತದಲ್ಲಿ ಮಾಡಿದ ಸಾಧನೆಗಾಗಿ ಗಾನ ತಪಸ್ವಿನಿ ಬಿರುದು ಮಾತ್ರವಲ್ಲದೆ, ಕೇಂದ್ರ ನೃತ್ಯ ಸಂಗೀತ ಅಕಾಡೆಮಿಯ ಪ್ರಶಸ್ತಿಯ ಜೊತೆಗೆ ಕೇಂದ್ರ ಸಕಾರದಿಂದ 1974ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ದೊರೆಯಿತು. ಮೋಗುಬಾಯಿಯವರ ಗೌರವಾರ್ಥ ಗೊವಾದ ಮಡ್ಗಾಂವ್ ನಗರದಲ್ಲಿ ಪ್ರತಿ ವರ್ಷ ಸಂಗೀತೋತ್ಸವವನ್ನು ಗೋವಾದ ಜನತೆ ಆಚರಿಸುತ್ತಾ ಬಂದಿದ್ದಾರೆ. ಆತ್ಮ ವಿಶ್ವಾಸ, ಛಲ ಮತ್ತು ದೃಢ ವಿಶ್ವಾಸ ಇವಗಳ ಮೂಲಕ ಸಾಧನೆ ಮಾಡಬಹುದು ಎಂಬುದಕ್ಕೆ ಮೊಗುಬಾಯಿಯವರ ಅಪ್ರತಿಮ ಸಾಧನೆ ಇಂದಿಗೂ ಮಾದರಿಯಾಗಿದೆ.

*

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...