ಗಾನ ವಿಶಾರದೆ ‘ಶ್ಯಾಮಲಾ ಜಿ. ಭಾವೆ’ ಇನ್ನಿಲ್ಲ

Date: 22-05-2020

Location: ಬೆಂಗಳೂರು


ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಭಜನ್ ಸಂಗೀತ ಹೀಗೆ ವಿವಿಧ ಸಂಗೀತ ಪ್ರಕಾರಗಳಲ್ಲೂ ಪ್ರತಿಭೆ ಮೆರೆದ ಅದ್ಭುತ ಗಾಯಕಿ ಶ್ಯಾಮಲಾ ಜಿ. ಭಾವೆ ಇಂದು ಬೆಳಗ್ಗೆ 6.30ಕ್ಕೆ ನಿಧನರಾದರು. ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದ್ದು ಅಂತಿಮ ದರ್ಶನಕ್ಕೆ ಶೇಷಾದ್ರಿಪುರಂನ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಂಗೀತ ಸಂಯೋಜಕಿ, ಉಭಯ ಗಾನ ವಿಶಾರದೆ, ವಿದುಷಿ ಎಂಬ ಬಿರುದುಗಳಿಗೆ ಪಾತ್ರರಾಗಿದ್ದ ಶ್ಯಾಮಲಾ ಭಾವೆ, ಮೂಲತಃ ಬೆಂಗಳೂರಿನವರು. ಆರನೇ ವಯಸ್ಸಿನಲ್ಲೇ ಸಂಗೀತದ ಕಛೇರಿ ನೀಡಿ ಪ್ರತಿಭೆ ಮೆರೆದರು. ಸಂಗೀತ ಹಾಗೂ ರಂಗಭೂಮಿ ಪರಂಪರೆಯ ಸುಸಂಸ್ಕೃತ ಮನೆತನದಿಂದ ಬಂದ ಅವರ ಮುತ್ತಜ್ಜ ವಿಷ್ಣುದಾಸ ಭಾವೆ ಮರಾಠಿ ರಂಗಭೂಮಿಯ ಆದ್ಯ ಪ್ರವರ್ತಕರಾಗಿದ್ದರು. ತಂದೆ-ತಾಯಿಯಿಂದ ಹಿಂದೂಸ್ಥಾನಿ ಸಂಗೀತವನ್ನು, ಬಿ. ದೊರೆಸ್ವಾಮಿ ಹಾಗೂ ಎ. ಸುಬ್ಬರಾಯ ಅವರಲ್ಲಿ ಕರ್ನಾಟಕ ಸಂಗೀತದ ತಾಲೀಮು, ಪಂ. ಜಸರಾಜ್‌ ಅವರ ಮಾರ್ಗದರ್ಶನದಲ್ಲಿ ಸಂಗೀತ ತಾಲೀಮು ಪಡೆದು ಉಭಯಗಾನ ವಿದುಷಿ ಎಂಬ ಖ್ಯಾತಿ ಪಡೆದಿದ್ದರು. ಅನೇಕ ಚಲನಚಿತ್ರ, ಸಾಕ್ಷಚಿತ್ರ, ಗ್ರಾಮಫೋನ್‌ ಹಾಗೂ ಕ್ಯಾಸೆಟ್‌ಗಳಲ್ಲಿ ಧ್ವನಿ ನೀಡಿ, ಸಂಗೀತ ನಿರ್ದೇಶನ ಮಾಡಿದ್ದಲ್ಲದೇ, 9 ಭಾಷೆಗಳಲ್ಲಿ ಸುಮಾರು 1500ಕ್ಕೂ ಅಧಿಕ ಗೀತೆಗಳಿಗೆ ರಾಗ ಸಂಯೋಜಿಸಿದ್ದರು. 

ಶ್ಯಾಮಲಾ ಭಾವೆ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ, ಅಧ್ಯಕ್ಷರಾಗಿದ್ದರು. 1992ರಲ್ಲಿ ಅವರ ‘ಸ್ವರ ಸಾಧನಾ’ ಅಭಿನಂದನ ಗ್ರಂಥ ಸಮರ್ಪಿಸಲಾಗಿತ್ತು.ಉಭಯಗಾನ ವಿಶಾರದೆ, ಉಭಯ ಗಾನ ವಿದುಷಿ, ಕರ್ನಾಟಕ ರಾಜ್ಯೋತ್ಸವ, ಗಾನ ಮಾಧುರಿ, ಸುರಮಣಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಅಮೇರಿಕಾದ ಹ್ಯೂಸ್ಟನ್‌ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ಭಾರತ ಗೌರವ್‌, ‘ವರ್ಷದ ಮಹಿಳೆ’, ಗಾನ ಕೋಕಿಲ, ಕೃಷ್ಣಗಾನ ಮಾಧುರಿ ಹೀಗೆ ಅನೇಕ ಬಿರುದು, ಪ್ರಶಸ್ತಿ, ಪುರಸ್ಕಾರಗಳು ಲಭಿಸಿದ್ದವು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...