ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು

Date: 29-09-2022

Location: ಬೆಂಗಳೂರು


ಸುಂದವಾದ ಹೂಗಳನ್ನು ಇಟ್ಟುಕೊಂಡು ಮಾಲೆ ಹೆಣೆದರೆ ಎಲ್ಲದರ ಬಣ್ಣ ಹಾಗೂ ವಾಸನೆಗೆ ಆ ಪರಿಸರ ಆಹ್ಲಾದಮಯವಾಗುವಂತೆ ಈ ಗಜಲ್ ಸಂಕಲನವು ನಿಸ್ಸಂದೇಹವಾಗಿ ಸಹೃದಯ ಓದುಗರ ಮನಸ್ಸನ್ನು ತಣಿಸುತ್ತದೆ ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ಪ್ರಭಾವತಿ ದೇಸಾಯಿಯವರ ’ಒಲವಿನ ಹಾಯಿದೋಣಿ’ ಸಂಕಲನದ ಬಗ್ಗೆ ಬರೆದಿದ್ದಾರೆ.

ನನ್ನ ಅಜ್ಜಿಮನೆ ಇರುವುದು ಅಂಕೋಲಾ ತಾಲೂಕಿನ ಗಂಗಾವಳಿ ನದಿ ತೀರದಲ್ಲಿ. ನಾವು ಚಿಕ್ಕವರಿರುವಾಗ ಅಜ್ಜಿ ಮನೆಗೆ ಹೋಗಬೇಕೆಂದರೆ ಗಂಗಾವಳಿ ನದಿಯನ್ನು ದೋಣಿಯಲ್ಲಿ ದಾಟಿಕೊಂಡು ಹೋಗಬೇಕಿತ್ತು. ಆಗಿನ ಕಾಲದ ಸಣ್ಣ ದೋಣಿ ಅದು. ಈಗಿನಂತೆ ಯಾಂತ್ರೀಕೃತ ಬೋಟ್ ಅಲ್ಲ. ದೊಡ್ಡ ಮರದ ದಿಮ್ಮಿಗಳನ್ನು ಕೆತ್ತಿ ಮಾಡುತ್ತಿದ್ದ ದೋಣಿಯೂ ಇರುತ್ತಿತ್ತು. ಹಲಗೆ ಜೋಡಿಸಿ ಮಾಡಿದ ದೋಣಿಗಳೂ ಕೂಡ ಇರುತ್ತಿದ್ದವು. ತುಂಬಿ ಹರಿಯುವ ಗಂಗಾವಳಿಯ ನಡುವೆ ಆ ಪುಟ್ಟ ದೋಣಿಯಲ್ಲಿ ಧೈರ್‍ಯ ಮಾಡಿ ಹೋಗುತ್ತಿದ್ದೆವಲ್ಲ ಎಂದು ನೆನೆಸಿಕೊಂಡರೆ ಈಗ ಅಚ್ಚರಿ. ಆದರೆ ಆ ಕಾಲ ಬೇರೆಯದ್ದೆ. ನದಿ ದಾಟಿಸುವ ಅಂಬಿಗರೂ ಮನೆಯವರಂತೆ ಇರುತ್ತಿದ್ದರು. ನದಿಯ ದಂಡೆಯಲ್ಲಿರುವ ಮಾವನ ಗದ್ದೆಯಲ್ಲಿ ನಿಂತು ಹೋಗುವ ದೋಣಿಗಳನ್ನೆಲ್ಲ ಲೆಕ್ಕ ಹಾಕುವುದೆಂದರೆ ಅದೇನೋ ಖುಷಿ. ಅದರ ನಡುವೆ ಹಾಯಿದೋಣಿಯೇನಾದರೂ ಕಂಡುಬಿಟ್ಟರೆ ನಮಗೆ ಥೇಟ್ ಟೈಟಾನಿಕ್ ಹಡಗನ್ನು ನೋಡಿದ ಸಂಭ್ರಮ. ಬಿಳಿಯ ಬಟ್ಟೆಯನ್ನು ಉದ್ದ ಕೋಲಿಗೆ ಕಟ್ಟಿ, ಆ ಬಟ್ಟೆಯೂ ಬೀಸುವ ಗಾಳಿಗೆ ಬಾಗಿ, ನಿಲ್ಲಿಸಿಟ್ಟ ದೋಣಿಯಂತೆ ಕಾಣುವಾಗಲೆಲ್ಲ ಆ ಬಿಳಿಯ ಬಟ್ಟೆಯ ಮರೆಯಲ್ಲಿ ಯಾವುದೋ ಮಹಾರಾಣಿ ಪಯಣಿಸುತ್ತಿರಬಹುದು ಎನ್ನುವ ಭ್ರಮೆ. ಜೀವನದಲ್ಲಿ ಒಂದು ಸಲವಾದರೂ ಹಾಯಿದೋಣಿಯಲ್ಲಿ ಪ್ರಯಾಣ ಮಾಡಬೇಕು ಎಂದು ಕಂಡಿದ್ದ ಕನಸುಗಳೇನು ಕಡಿಮೆಯಿರಲಿಲ್ಲ. ಮತ್ತೆ ಹಾಯಿದೋಣಿಯನ್ನು ನೆನಪಿಸಿ ಬಾಲ್ಯವನ್ನು ಮೆಲಕು ಹಾಕುವಂತೆ ಮಾಡಿದ ಸಂಕಲನ ಪ್ರಭಾವತಿ ದೇಸಾಯಿಯವರ ಒಲವಿನ ಹಾಯಿದೋಣಿ.

ಗಜಲ್ ಎಂದರೆ ನನಗೆ ಉಳಿದೆಲ್ಲ ಕಾವ್ಯ ಪ್ರಕಾರಗಳಿಗಿಂತ ತುಸು ಜಾಸ್ತಿ ಪ್ರೀತಿ. ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ, ಛಂದೋಬದ್ಧವಾಗಿ ಬರೆಯಬಹುದಾದ ಈ ಕಾವ್ಯಕ್ಕೆ ತನ್ನದೇ ಆದ ಘನತೆಯಿದೆ. ಒಂದು ಕಾಲದಲ್ಲಿ ರಾಜಾಸ್ಥಾನದಲ್ಲಿ ಮೆರೆದ ಹಾಡುಗಬ್ಬ ಇದು. ಗಜಲ್ ಬರೆಯುವುದೆಂದರೆ ಒಂದು ರೀತಿಯ ತಪಸ್ಸಿದ್ದಂತೆ. ಧ್ಯಾನದ ಮೂಲಕ ಪಡೆಯಬಹುದಾದ ದೇವಲೋಕದ ಅಪ್ಸರೆಯಂತೆ ಭಾಸವಾಗುವ ಗಜಲ್ ನಮ್ಮ ಎಲ್ಲಾ ಖುಷಿಗೂ ದುಃಖಕ್ಕೂ ಒದಗುವ ಒಂದು ಅದ್ಭುತ ಸಂವಹನಾ ಮಾಧ್ಯಮ. ಈ ಕಾರಣಕ್ಕಾಗಿ ಗಜಲ್ ಪುಸ್ತಕ ನೋಡಿದರೆ ಮನಸ್ಸು ಸಹಜವಾಗಿ ಸೆಳೆದುಕೊಳ್ಳುತ್ತದೆ. ಹಾಗೆ ಸೆಳೆದುಕೊಂಡು ನಿರಂತರವಾಗಿ ಓದಿಸಿಕೊಂಡ ಸಂಕಲನ ಒಲವ ಹಾಯಿದೋಣಿ.

ಅಜ್ಙಾನ ಅಂಧಕಾರದ ಮುಸುಕು ಕಿತ್ತಿ ಎಸೆದಾತಂಗೆ ಶರಣು
ಎಲ್ಲೆಡೆ ಸಮಾನತೆಯ ಸುಜ್ಙನ ಸುಧೆ ಹರಿಸಿದಾತಂಗೆ ಶರಣು

ಎಂದು ಬಸವಣ್ಣನನ್ನು ಸ್ಮರಿಸುವ ಗಜಲ್ ಮೂಲಕ ಪ್ರವೇಶಿಕೆ ಪಡೆವ ಈ ಸಂಕಲನ ನಿರೂಪಣೆಯ ದೃಷ್ಟಿಯಿಂದಲೂ ಗಮನಾರ್ಹ. ಬಸವಣ್ಣವರು ಜಾತಿಮತದ ಕಂದಾಚಾರಗಳನ್ನು ವಿರೋಧಿಸಿ ಮನುಜಪಥವನ್ನು ರೂಪಿಸಿದವರು. ಅವರ ನೆರಳಲ್ಲಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೆಂದರೆ ನಿಜಾರ್ಥದಲ್ಲಿ ಶರಣನಾಗುವುದು ಎಂದರ್ಥ. ಹೀಗಾಗಿ ಗಜಲ್‌ಕಾರ್ತಿ ಇಲ್ಲಿ

ವೇದ ಭಾಷ್ಯದಲಿ ಮನುಜ ಬದುಕು ಕಗ್ಗಂಟಾಗಿ ನರಳುತ್ತಿತ್ತು ಅಂದು
ಅಚ್ಚಕನ್ನಡದಲಿ ಮಾನವೀಯ ಮೌಲ್ಯ ಬಿತ್ತಿದಾತಂಗೆ ಶರಣು

ಈ ಶೇರ್ ಹಲವಾರು ಅರ್ಥಗಳನ್ನು ಧ್ವನಿಸುತ್ತದೆ. ಇಡೀ ಸಮಾಜ ವೇದದ ಮೂಢನಂಬಿಕೆಯಲ್ಲಿ ನರಳುತ್ತಿತ್ತು. ಜಾತಿ ಮತಗಳನ್ನು ಅತಿಯಾಗಿ ಹೇರಿ ಮನುಷ್ಯತ್ವವನ್ನೂ ಮರೆತಂತಹ ಘಟನೆಗಳು ಮತ್ತೆಮತ್ತೆ ನಡೆಯುತ್ತಿತ್ತು. ಆದರೆ ಬಸವಣ್ಣನವರು ಇದೆಲ್ಲವನ್ನೂ ವಿರೋಧಿಸಿದರು. ಜಾತಿಯ ಹೆಸರಲ್ಲಿ ಜನರನ್ನು ಕೀಳಾಗಿ ನೋಡುವುದನ್ನು ಅಪರಾಧ ಎಂದು ಸಾರಿದರು. ದುಡಿಯದೆ, ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತಿ ಆ ಮೂಲಕ ಹಣ ಮಾಡಿಕೊಳ್ಳುವುದನ್ನು ಅನೈತಿಕ ಎಂದು ಘೋಷಿಸಿ, ಕಾಯಕವೇ ಕೈಲಾಸ ಎಂದು ಸಾರಿದರು. ದುಡಿಮೆಯಿಂದ ಮಾತ್ರ ಮೋಕ್ಷಪ್ರಾಪ್ತಿ ಎಂಬುದು ಅವರ ಧ್ಯೇಯವಾಗಿತ್ತು. ಮುಖ್ಯವಾಗಿ ಹಿಂದಿನ ಪೂರ್ವಸೂರಿಗಳಂತೆ ಸಾಮಾನ್ಯ ಜನರಿಗೆ ಅರ್ಥವಾಗದ ಸಂಸ್ಕೃತವನ್ನು ಬಳಸದೆ ಜನಸಾಮಾನ್ಯರ ಆಡುನುಡಿಯಾದ ಕನ್ನಡವನ್ನು ತಮ್ಮೆಲ್ಲ ಶರಣರ ಸಂವಹನ ಮಾಧ್ಯಮವನ್ನಾಗಿ ಮಾಡಿಕೊಂಡರು. ಸಂಸಾರವನ್ನು ತ್ಯಜಿಸಿ, ಕಾಮವನ್ನು ಬಲವಂತವಾಗಿ ಕಟ್ಟಿಟ್ಟು ಸನ್ಯಾಸಿ ಆಗೆಂದು ಇವರು ಎಂದಿಗೂ ಹೇಳಲಿಲ್ಲ. ಅಂತಹ ಮಹಾಪುರುಷನನ್ನು ಗಜಲ್‌ಕಾರ್ತಿ ತುಂಬ ಆರ್ದ್ರವಾಗಿ ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಗಜಲ್ ಓದುಗನ ಮನದಾಳಕ್ಕೆ ಇಳಿದು ನಮ್ಮನ್ನು ತಟ್ಟಿ ಎಬ್ಬಿಸುತ್ತದೆ.

ಅಲ್ಲೊಂದು ಕಟ್ಟಿದ ಕರಿ ಮೋಡಕೆ ಭಾರ ಇಳಿಸುವ ಅವಸರ
ಇಲ್ಲೊಂದು ಊರಿದ ಬೀಜಕೆ ಮೊಳಕೆ ಒಡೆದು ಚಿಗುರುವ ಅವಸರ

ಎನ್ನುವ ಜೀವಪರ ಸಾಲುಗಳನ್ನು ಹೊಂದಿರುವ ಶೇರ್‌ಗಳನ್ನು ಒಳಗೊಂಡಿರುವ ಈ ಸಂಕಲನ ಆಯ್ಕೆ ಮಾಡಿಕೊಂಡ ರದೀಫ್ ಜೊತೆಗೆ ವಿಷಯವಸ್ತುವಿನಿಂದಲೂ ಗಮನ ಸೆಳೆಯುತ್ತದೆ. ಕಟ್ಟಿದ ಮೋಡ ಮಳೆಯಾಗಿ ಸುರಿಯುವುದು ಪ್ರಕೃತಿ ಸಹಜ. ಹಾಗೆ ಕಪ್ಪಾದ ಮೋಡಕ್ಕೆ ಮಳೆ ಹನಿಸಬೇಕಾದ ಅವಸರವಿರುತ್ತದೆ. ಮಳೆ ಹನಿಸಿದರೆ ಊರಿದ ಬೀಜ ಮೊಳಕೆಯೊಡೆಯುತ್ತದೆ. ಪ್ರಕೃತಿ ಸಹಜವಾದ ಈ ಕ್ರಿಯೆ ನಮಗೆ ಅವಸರದ ಪ್ರಕ್ರಿಯೆ ಎನ್ನಿಸುತ್ತದೆ. ಏಕೆಂದರೆ ನಾವು ಧಾವಂತದಲ್ಲಿದ್ದೇವೆ. ನಮಗೆ ನಮ್ಮ ಧಾವಂತ ನಮ್ಮ ಸುತ್ತಲೂ ಆವರಿಸಿಕೊಂಡಂತಹ ಭಾವ. ಹೀಗಾಗಿ ನಮ್ಮ ಅವಸರಕ್ಕೆ ತಕ್ಕಂತೆ ನಿಸರ್ಗವೂ ಧಾವಂತದಲ್ಲಿದೆ ಎಂದು ನಮ್ಮನ್ನು ನಾವು ನಂಬಿಸಿಕೊಳ್ಳುತ್ತಿದ್ದೇವೆ.

ಪ್ರೀತಿ ಪ್ರೇಮ ವಿರಹದ ಹೊರತಾಗಿ ಗಜಲ್ ಅತ್ಯಪೂರ್ವವಾಗಿ ಹೊಂದಿಕೊಳ್ಳುವುದು ಎದೆಯನ್ನು ಆರ್ದ್ರಗೊಳಿಸುವ ಭಾವನೆಗಳಿಗೆ. ಅದರಲ್ಲೂ ಮಾತೃವಾತ್ಸಲ್ಯಕ್ಕೆಂದೇ ಹೇಳಿ ಮಾಡಿಸಿದಂತೆ ಗಜಲ್‌ನ್ನು ಬಳಸಿಕೊಳ್ಳಬಹುದು. ಇಲ್ಲಿ ಗಕಲ್‌ಕಾರ್ತಿ ತಮ್ಮ ತಾಯಿಯನ್ನು ಕುರಿತು ಬರೆದಿದ್ದಾರೆ.

ನೊಂದ ಜೀವಕೆ ನೆಮ್ಮದಿಯ ಸೆರಗು ಹೊದಿಸಿದವಳು ಅವಳು
ಸ್ವಪ್ನಲೋಕದಲಿ ವಿಹರಿಸಲು ಲಾಲಿ ಹಾಡಿದವಳು ಅವಳು

ಎಂದು ತಾಯಿಯ ಮಹತ್ವವನ್ನು ಸಾರಿದ್ದಾರೆ. ತಾಯಿ ತನ್ನ ಸೆರಗಿನಲ್ಲಿ ನೋಂದ ಕಂದನನ್ನು ಮಲಗಿಸಿಕೊಂಡು ಜೋಗುಳ ಹಾಡುತ್ತಾಳೆ. ತಾಯಿಯ ತೋಳಲ್ಲಿರುವುದಕ್ಕಿಂತ ನೆಮ್ಮದಿ ಬೇರೆಲ್ಲೂ ಇರುವುದು ಸಾಧ್ಯವಿಲ್ಲ. ಎಂತಹುದ್ದೇ ನೋವಿದ್ದರೂ ಅಮ್ಮನ ಮಡಿಲಲ್ಲಿ ತಲೆಯಿಟ್ಟರೆ ಸಾಕು ನೋವು ಕಳೆದು ಮನಸ್ಸು ಪ್ರಫುಲ್ಲಿತವಾಗುತ್ತದೆ.ಅವಳ ಲಾಲಿಯೆಂದರೆ ಅದು ಸ್ವರ್ಗದ ಜೋಗುಳ ಎನ್ನುವ ಗಜಲ್‌ಕಾರ್ತಿ ತಾಯಿಪ್ರೇಮಕ್ಕೆ ಸಾಟಿಯಾದುದು ಯಾವುದೂ ಇಲ್ಲ ಎನ್ನುತ್ತಾರೆ.

ಲೋಕದ ಹೃದಯಗಳ ಕಲ್ಮಶ ತೊಳೆಯಲು ಬೇಕು ಸಮಯ
ಕೊರಡೊಂದು ಚಿಗುರಿ ಮೊಗ್ಗು ಸುಮವಾಗಲು ಬೇಕು ಸಮಯ

ಬೇಕಾದುದನ್ನೆಲ್ಲ ಬೆರಳ ತುದಿಯ ಚಲನೆಯಿಂದ ದಕ್ಕಿಸಿಕೊಳ್ಳುವ ನಮಗೆ ಯಾವುದಕ್ಕೂ ಕೊರತೆಯಿಲ್ಲ. ಆದರೆ ಬದುಕಿನಲ್ಲಿ ಇತ್ತೀಚೆಗೆ ನಮಗೆ ಲಭ್ಯವಾಗದಿರುವುದು ಸಮಯ ಮಾತ್ರ. ಹೆತ್ತ ಅಮ್ಮನಿಗೆ ಮಕ್ಕಳಿಗೆ ಕೊಡಲು ಸಮಯವಿಲ್ಲ. ಗಂಡನಿಗೆ ಹೆಂಡತಿಗಾಗಿ ಒಂದಿಷ್ಟು ಸಮಯ ತೆಗೆದಿಡಲಾಗುವುದಿಲ್ಲ. ಹೆಂಡತಿಗೆ ಗಂಡನಿಗಾಗಿ ಸಮಯವಿಲ್ಲ. ಹೆತ್ತ ಮಕ್ಕಳಿಗೆ ಅಪ್ಪ ಅಮ್ಮನಿಗಾಗಿ ತುಸು ಸಮಯ ನೀಡಲು ಆಗುವುದಿಲ್ಲ. ಕೊನೆಗೆ ಪ್ರೇಮಿಸಿದ ಪ್ರೇಮಿಗೆ ಪ್ರೀತಿಸಿದವಳಿಗಾಗಿ ಎರಡು ನಿಮಿಷ ಕೊಡಲಾಗುವುದಿಲ್ಲ. ಎಲ್ಲರಿಗೂ ತಮ್ಮ ಸ್ವಾರ್ಥವಷ್ಟೇ ಮುಖ್ಯ. ತಾವು ಸಾಧಿಸಬೇಕಾದ ಗುರಿ ತಲುಪಲು ಅದೆಷ್ಟೋ ಮನಸುಗಳ ಮೇಲೆ ಸಮಾಧಿ ಕಟ್ಟುವ ಕೊಲೆಪಾತಕರು ಇವರು. ನಾವೆಲ್ಲರೂ ಒಬ್ಬರಲ್ಲ ಒಬ್ಬರಿಗೆ ಸಮಯದ ಅಭಾವದ ಸಬೂಬು ಹೇಳುತ್ತೇವೆ.ಆದರೆ ಗಜಲ್‌ಕಾರ್ತಿ ಮನಸ್ಸಿನ ಕೊಳೆ ತೆಗೆಯಲು ಸಮಯ ಕೇಳುತ್ತಿದ್ದಾರೆ. ಮೊಗ್ಗನ್ನು ಬಲವಂತವಾಗಿ ಅರಳಿಸಿ ಹಣಗಳಿಸುವ ಈ ಧಾವಂತದ ಬದುಕಿನಲ್ಲಿ ಮೊಗ್ಗು ಸಹಜವಾಗಿ ಅರಳಿ ಹೂವಾಗಲು ಸಮಯಬೇಕು ಎಂದು ತುಂಬಾ ಮಾರ್ಮಿಕವಾಗಿ ಹೇಳುತ್ತಾರೆ.

ವಿಶ್ವ ಕುಟುಂಬದ ಮನಗಳಲ್ಲಿ ಶಾಂತಿಯ ದೀಪ ಹಚ್ಚೋಣ
ಮುನಿದ ಹೃದಯಗಳಲಿ ಸ್ನೇಹ ಮಮತೆಯ ದೀಪ ಹಚ್ಚೋಣ

ಇಲ್ಲಿರುವ ರೂಪಕಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಗಜಲ್‌ಕಾರ್ತಿ ತಮ್ಮ ಸುತ್ತಲಿನ ಸಮಾಜವನ್ನು ತೀರಾ ನಿರ್ದಿಷ್ಟವಾಗಿ ಅವಲೋಕಿಸುತ್ತಿರುವುದು ಗೊತ್ತಾಗುತ್ತದೆ. ಮನೆಮನಗಳನ್ನು ಬೆಳಗುವ ದೀಪ ಹಚ್ಚುವ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಹೆಚ್ಚಿದೆ. ಎಲ್ಲ ಕೊಳೆ ಕಲ್ಮಶಗಳನ್ನು ತೊಡೆದು ಹಾಕಿ ಬೆಳಕನ್ನು ನೀಡುವ ದೀಪಾವಳಿಗೆ ತಮವನ್ನು ಹೊಡೆದೋಡಿಸುವ ಹಬ್ಬ ಎಂದು ಕರೆಯುತ್ತೇವೆ. ದೀಪ ಹಚ್ಚುವುದರ ಮೂಲಕ ಸಕಲ ಕೆಡುಕನ್ನೂ ದೂರೀಕರಿಸುವ ಸಾಂಕೇತಿಕ ಆಚರಣೆಯನ್ನು ಮಾಡುತ್ತೇವೆ. ಗಜಲ್‌ಕಾರ್ತಿ ಇಲ್ಲಿ ಮನಮನದೊಳಗೂ ದೀಪ ಹಚ್ಚಿ ನಮ್ಮೊಳಗಿನ ತಮವನ್ನು ದೂರೀಕರಿಸಿಕೊಳ್ಳಬೇಕಾದ ತುರ್ತಿನ ಬಗ್ಗೆ ಹೇಳುತ್ತಾರೆ. ಗಜಲ್‌ಕಾರ್ತಿ ಸಾಮಾಜಿಕ ವಿಷಯಗಳನ್ನು, ನಿಸರ್ಗದ ಸಹಜ ವ್ಯಾಪಾರಗಳನ್ನು ಗಜಲ್‌ನ ಚೌಕಟ್ಟಿಗೆ ಸಮರ್ಪಕವಾಗಿ ಅಳವಡಿಸಿದ್ದಾರೆ. ಎಲ್ಲಿಯೂ ವಸ್ತುವಿನ ಆಯ್ಕೆ ಹಾಗೂ ಹೆಣಿಯುವಿಕೆ ತಪ್ಪದಂತಿದೆ.

ಆದರೆ ಮೂಲತಃ ಗಜಲ್ ಎಂದರೆ ನವಿರು ಭಾವಗಳನ್ನು ಹೊಮ್ಮಿಸುವ ಜೋಡು ಸಾಲು. ಇಲ್ಲಿ ಪ್ರೇಮದ ಅನುಭೂತಿಯನ್ನು ಹೇಳದಿದ್ದರೆ ಒಂದು ಗಜಲ್ ಸಂಕಲನ ಎಂದಿಗೂ ಪೂರ್ತಿಯಾಗಲು ಸಾಧ್ಯವಿಲ್ಲ. ಪ್ರಭಾವತಿ ದೇಸಾಯಿಯವರ ಈ ಸಂಕಲನದಲ್ಲೂ ಪ್ರೇಮದತೀವ್ರತೆಯನ್ನು ಹೇಳುವ ಹತ್ತಾರು ಗಜಲ್‌ಗಳಿವೆ. ಪ್ರೇಮಿಯೊಂದಿಗಿನ ಸಂಭಾಷಣೆಯೇ ಗಜಲ್ ಎಂದು ಬಲ್ಲಿದರು ಹೇಳಿರುವಾಗ

ಅಧರದ ಅಧರದಲಿ ಬೆಸೆಯುತ ಜೀವಿಗಳು ನಲಿಯುತಿವೆ
ಬನದಲಿ ಕೋಗಿಲೆಗಳು ಮೌನ ಮುರಿದು ಹಾಡುತಿದೆ

ಎನ್ನುವಂತಹ ಶೇರ್‌ಗಳು ತಾನೇ ತಾನಾಗಿ ರೂಪುಗೊಳ್ಳುವುದರಲ್ಲಿ ಯಾವ ಆಶ್ಚರ್‍ಯವೂ ಇಲ್ಲ.ಪ್ರೇಮದ ಉತ್ಕಟತೆ ಇದ್ದಲ್ಲಿ ಮಾತ್ರ ಗಜಲ್‌ನ ಶೇರ್‌ಗಳು ಸಹಜವಾಗಿ ಅರಳಿಕೊಳ್ಳುತ್ತವೆ. ಒಬ್ಬ ಪ್ರೇಮಿ ತನ್ನ ಪ್ರಿಯತಮೆಯ ಅಧರಕ್ಕಿಟ್ಟ ಸಿಹಿ ಚುಂಬನದಿಂದಾಗಿ ಬನದಲ್ಲಿರುವ ಕೋಗಿಲೆಗಳು ಮೌನ ಮುರಿದು ಹಾಡುತ್ತವೆಯೆಂದರೆ ಈ ಚುಂಬನಕ್ಕೆ ಇರುವ ಶಕ್ತಿಯ ಆಳವನ್ನು ಅಳೆಯಲಾಗದು. ಇಲ್ಲಿ ಪ್ರೇವದ ತೀವ್ರ ಭಾವಾಭಿವ್ಯಕ್ತಿಯನ್ನು ಕಾಣಬಹುದು

ಚಂದಿರ ಸರಿದು ರವಿ ಉದಯಿಸಿದರೂ ಮುತ್ತಿನ ಅಮಲು ಇಳಿದಿಲ್ಲ
ಹುಣ್ಣಿಮೆ ಕಳೆದು ಅಮವಾಸ್ಯೆ ಬಂದರೂ ಉಕ್ಕಿದ ಕಡಲು ಇಳಿದಿಲ್ಲ

ರಾತ್ರಿ ಇನಿಯನಿಟ್ಟ ಮುತ್ತಿನ ಅಮಲು ಬೆಳಗಾದರೂ ಇಳಿಯುತ್ತಿಲ್ಲ. ಹೂಜಿಗಟ್ಟಲೆ ಮದಿರೆ ಕುಡಿದರೂ ಓಲಾಡದ ಜಗಜಟ್ಟಿಯೊಬ್ಬ ಪ್ರೇಮಿಯ ಮುತ್ತಿಗೆ ಹಿಡಿತ ತಪ್ಪಿ ಓಲಾಡುವ ಕಥೆಗಳು ನಮ್ಮ ಪುರಾಣಗಳಲ್ಲಿ ಹೇರಳವಾಗಿ ಸಿಗುತ್ತವೆ. ಅಂತಹ ಮುತ್ತಿನ ಅಮಲು ಬೆಳ್ಳಾನೆ ಬೆಳಗೆದ್ದು ರವಿ ಮೂಡಿದರೂ ಇಳಿಯುವುದಿಲ್ಲ. ಇನ್ನು ಚಂದಿರನಾದರೋ ಸೋಮರಸದ ಒಡೆಯ. ಮೈತುಂಬ ಸೋಮವನ್ನು ತುಂಬಿಕೊಂಡಾತ. ಹುಣ್ಣಿಮೆಯಲ್ಲಿ ಅವನ ಆಮೋದಕ್ಕೆ ಸಮುದ್ರವೂ ಉಕ್ಕೇರುತ್ತದೆ. ಆದರೆ ಉಕ್ಕೇರಿದ ಕಡಲಿಗೆ ಚಂದಿರನಿರದ ಅಮವಾಸ್ಯೆ ಹತ್ತಿರ ಬಂದರೂ ಪರಿವೆಯಿಲ್ಲ. ಅದು ಉಕ್ಕೇರುತ್ತಲೇ ಇದೆ. ಇದು ಚುಂಬನದ ಮಹತ್ವ ಎಂದು ಹೇಳಿ ನಿಸೂರಾಗುತ್ತಾರೆ ಗಜಲ್‌ಕಾರ್ತಿ ಇಷ್ಟೆಲ್ಲ ಪ್ರೇಮವಿದ್ದರೂ ಮುನಿಸು ಸಹಜ. ಕೋಪವಿರದ ಪ್ರೇಮ ಈ ಜಗತ್ತಿನಲ್ಲಿರಲು ಸಾಧ್ಯವೇ ಇಲ್ಲ. ಇನ್ನು ವಿರಹವಂತೂ ಪ್ರೇಮದ ಮತ್ತೊಂದು ಮುಖ. ಕೆಲವೊಮ್ಮೆ ಅರಿವಾಗದ ಪ್ರೇಮದಲ್ಲಿ ನಂಬಿಸಿ ಕತ್ತುಕೊಯ್ಯುವವರಿಗೇನೂ ಕೊರತೆಯಿಲ್ಲ. ಹೀಗಾಗಿ ಮೋಸ ಮಾಡುವುದೂ ಸಹಜ ಎಂಬಂತಾಗಿಬಿಟ್ಟಿದೆ. ಒಂದೇ ಜೀವ ಎಂಬಂತಿರುವ ಎರಡು ದೇಹಗಳು ಹಠಾತ್ತಾಗಿ ದೂರವಾದರೆ ಆ ಸ್ಥಿತಿಯನ್ನು ಊಹಿಸಿಕೊಳ್ಳುವುದು ಅಸಾಧ್ಯ.

ಪ್ರೀತಿ ಧಿಕ್ಕರಿಸಿದವನಿಗಾಗಿ ನೆನೆಯುತ್ತಿರುವೆ ಏಕೆ ಹೀಗೆ
ಒಂದು ನುಡಿ ಆಡದವನಿಗಾಗಿ ಕರೆಯುತ್ತಿರುವೆ ಏಕೆ ಹೀಗೆ

ಪ್ರೀತಿಸುವೆನೆಂದು ಮೋಸ ಮಾಡಿ ದೂರ ಹೋದವನನ್ನು ಮರೆಯಬೇಕೆಂದರೂ ಮರೆಯಲಾಗದೆ ಪದೇಪದೇ ಮನಸ್ಸು ಅವನನ್ನು ನೆನಪಿಸಿಕೊಂಡು ಕೊರಗುತ್ತದೆ. ತನ್ನ ಸಾಧನೆಗೆ ಅಡ್ಡಿಯಾಗುವ ಸಬೂಬು ಹೇಳಿ ದೂರವಾಗುವವನನ್ನು ನೆನಪಿಸಿಕೊಂಡು ಅಳುವ ಅಗತ್ಯವಿಲ್ಲ ಎಂದು ಗಜಲ್‌ಕಾರ್ತಿ ಹೇಳುತ್ತಾರೆ.

ಅವನ ಕಣ್ಣಲ್ಲಿ ಕನಸು ಹುಡುಕಿದ್ದು ನನ್ನದೇ ತಪ್ಪು
ಸುಣ್ಣವನು ಬೆಣ್ಣೆ ಎಂದು ತಿಳಿದಿದ್ದು ನನ್ನದೇ ತಪ್ಪು

ಎಂದು ಪ್ರೇಮದ ವೈಫಲ್ಯಕ್ಕೆ ತನ್ನನ್ನೇ ಹೊಣೆಯಾಗಿಸಿಕೊಳ್ಳುವ ಹೆಣ್ಣು ಆತ ಮೋಸಗಾರ ಎಂದು ಗೊತ್ತಾದ ನಂತರವೂ ಪ್ರೇಮಿಸುವ ತಪ್ಪು ಮಾಡಿದ್ದಕ್ಕಾಗಿ ಕೊರಗುತ್ತಾಳೆ.

ಸುಂದವಾದ ಹೂಗಳನ್ನು ಇಟ್ಟುಕೊಂಡು ಮಾಲೆ ಹೆಣೆದರೆ ಎಲ್ಲದರ ಬಣ್ಣ ಹಾಗೂ ವಾಸನೆಗೆ ಆ ಪರಿಸರ ಆಹ್ಲಾದಮಯವಾಗುವಂತೆ ಈ ಗಜಲ್ ಸಂಕಲನವು ನಿಸ್ಸಂದೇಹವಾಗಿ ಸಹೃದಯ ಓದುಗರ ಮನಸ್ಸನ್ನು ತಣಿಸುತ್ತದೆ. ಪ್ರಭಾವತಿ ದೇಸಾಯಿಯವರ ಇತ್ತೀಚಿನ ಗಜಲ್‌ಗಳಲ್ಲಿ ಒಂದು ರೀತಿಯ ಗಾಂಭಿರ್‍ಯತೆ ಹಾಗೂ ಪ್ರೌಢತೆಯನ್ನು ಗಮನಿಸಬಹುದು. ಈ ಸಂಕಲನದಲ್ಲಿ ಬಹುತೇಕ ಹೊಸ ರದೀಫ್‌ಗಳನ್ನು ಆರಿಸಿಕೊಂಡು ವೈವಿಧ್ಯತೆ ಮೆರೆದಿದ್ದಾರೆ.

ಮೂಗಿಗಿಂತ ಎಂದಿಗೂ ಮೂಗುತಿ ಭಾರವಾಗಬಾರದು. ಸಂಕಲನದಲ್ಲಿ ಗಜಲ್‌ಗಿಂತ ಅಭಿಪ್ರಾಯಗಳು ಹೆಚ್ಚಾದರೆ ಅದು ಭಾರವನ್ನು ತಡೆದುಕೊಳ್ಳಲಾಗದೆ ಕುಸಿಯತೊಡಗುತ್ತದೆ. ನಮ್ಮ ಕವಿತೆ/ ಗಜಲ್‌ಗಳು ಓದುಗರ ಜೊತೆ ಮಾತನಾಡಬೇಕೆ ಹೊರತೂ ಬೇರೆಯವರ ಅಭಿಪ್ರಾಯಗಳನ್ನು ಹೇರಬೇಕಾದುದಿಲ್ಲ. ಇದೊಂದು ಎಚ್ಚರಿಕೆಯನ್ನು ತೆಗೆದುಕೊಂಡರೆ ಸಂಕಲನ ಸರಳವಾಗಿ ಓದುಗರ ಮನಸ್ಸನ್ನು ಗೆಲ್ಲುವುದರಲ್ಲಿ ಸಂದೇಹವಿಲ್ಲ.

ಪ್ರೇಮದ ಹಣತೆಯು ಬತ್ತಿ ಕ್ಷೀಣಿಸದಂತೆ ಕಾಯಬೇಕು ಬಾಳಿನಲಿ
ಒಲವ ತೈಲ ಹಾಕದೆ ಪ್ರಭೆ ನಂದಿಸಿದವನೆ ಯಾಕೆ ಕಾಣೆಯಾದೆ

ಬದುಕಿನ ಪ್ರೇಮ ಯಾವತ್ತೂ ಆರದಂತೆ ಕಾಪಿಟ್ಟುಕೊಳ್ಳಬೇಕಾದ ಜವಾಬ್ಧಾರಿ ನಮ್ಮದೆ. ಹಿರಿಯ ಗಜಲ್‌ಕಾರ್ತಿ ಈ ಮೂಲಕ ನಮ್ಮನ್ನೆಲ್ಲ ಎಚ್ಚರಿಸಿದ್ದನ್ನು ಅಲ್ಲಗಳೆಯುವಂತಿಲ್ಲ.

ಈ ಅಂಕಣದ ಹಿಂದಿನ ಬರಹಗಳು:
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...