ಗಂಧದ ಪರಿಮಳ ಬೀರುವ ಮಾನವೀಯ ಬರಹ `ಅನಾಥ’


ಚಂದ್ರಶೇಖರ ಗಂಧನಹಳ್ಳಿ  ಅವರು ತಮ್ಮ ಚೊಚ್ಚಲ ಕೃತಿ ‘ಅನಾಥ’ದಲ್ಲಿ ವಿಶಿಷ್ಟ ಶೈಲಿ ಅನುಸರಿಸಿದ್ದಾರೆ ಎನ್ನುವ ಪಾರ್ವತೀಶ ಬಿಳಿದಾಳೆ  ಅವರು ನೇರ ನಿರೂಪಣೆಯ ಮೂಲಕ ಆರಂಭವಾಗುವ ಅನಾಥರ ಜಗತ್ತಿನೊಳಗಿನ ಪಯಣವು, ನಂತರ ಕೆಲ ಅನಾಥರೇ ತಮ್ಮ ಬದುಕನ್ನು ಹೇಳುವ ಹೃದಯಸ್ಪರ್ಶಿ ಘಟನೆಗಳೊಂದಿಗೆ ಸಾಗುತ್ತದೆ ಎಂದು ವಿವರಿಸಿದ್ದಾರೆ. ಘೋರ ಹಾಗೂ ಯಾತನಾಮಯವಾಗಿರುವ ’ಅನಾಥ’ ಎಂಬ ಸಾಮಾಜಿಕ ಸ್ಥಿತಿಯ ಕುರಿತ ಮುನ್ನುಡಿ ಮುನ್ನುಡಿ  ಇಲ್ಲಿದೆ.   

 

ಪತ್ರಕರ್ತ, ಸ್ನೇಹಿತ ಚಂದ್ರಶೇಖರ ಗಂಧನಹಳ್ಳಿ ಅವರು ಅಪರೂಪದ ಬರಹವೊಂದನ್ನು ನೀಡಿದ್ದಾರೆ. ನನ್ನ ಎರಡು ಮೂರು ದಶಕಗಳ ಓದಿನ ಅನುಭವ ಹಾಗೂ ಸಾಹಿತ್ಯಾಸಕ್ತಿಯನ್ನು ನಂಬಿ ಹೇಳಬಹುದಾದರೆ ಅನಾಥ ಜಗತ್ತಿನ ಜನರ ಕುರಿತಂತೆ ಕನ್ನಡದಲ್ಲಿ ಪ್ರಕಟವಾಗುತ್ತಿರುವ  ವಿರಳಾತಿವಿರಳ ಪುಸ್ತಕಗಳಲ್ಲಿ ಇದೂ ಒಂದಾಗಿರಬಹುದು. ಲೇಖಕರು ಮಾತಿಗಿಂತ ಹೆಚ್ಚಾಗಿ ಮೌನವಾಗಿರುವುದನ್ನೇ ಇಷ್ಟಪಡುವವರು. ಸಮಾಜವೇ ಸೃಷ್ಟಿಸಿರುವ ಅನಾಥರ ಬದುಕನ್ನು ಅವರು ನೋಡಿ, ನಂತರ ಅದೇ ಅವರನ್ನು ಕಾಡಿ, ಬೇಡಿ ಕೊನೆಗೆ ಬದುಕಿನ ಹಾಡಾಗಿ ಇಲ್ಲಿ ನಿರೂಪಣೆಗೊಂಡಿವೆ.
ಅನಾಥರ ಬದುಕನ್ನು ಕುರಿತು ಬರೆಯುವಾಗ ಲೇಖಕರು ವಿಶಿಷ್ಟ ಶೈಲಿ ಅನುಸರಿಸಿದ್ದಾರೆ. ನೇರ ನಿರೂಪಣೆಯ ಮೂಲಕ ಆರಂಭವಾಗುವ ಅನಾಥರ ಜಗತ್ತಿನೊಳಗಿನ ಪಯಣವು, ನಂತರ ಕೆಲ ಅನಾಥರೇ ತಮ್ಮ ಬದುಕನ್ನು ಹೇಳುವ ಹೃದಯಸ್ಪರ್ಶಿ ಘಟನೆಗಳೊಂದಿಗೆ ಸಾಗುತ್ತದೆ. ಹಲವು ಘಟನೆಗಳು ನಮ್ಮನ್ನು ಬೆಚ್ಚಿಬೀಳಿಸುವಷ್ಟು ಘೋರ ಹಾಗೂ ಯಾತನಾಮಯವಾಗಿವೆ. ಅನಾಥ ಎನ್ನುವುದು ಒಂದು ಸಾಮಾಜಿಕ ಸ್ಥಿತಿ. ಯಾರೇ ವ್ಯಕ್ತಿಗೆ ತಂದೆ-ತಾಯಿ ಹಾಗೂ ಸಮೀಪ ಬಂಧುಗಳಿರದೆ ಜೀವಿಸಬೇಕಾದ ಸ್ಥಿತಿಯನ್ನು ಅನಾಥ ಬದುಕ ಎಂದು ಭಾವಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಯಾವುದೇ ಜೀವಿಯಂತೆಯೇ ಮನುಷ್ಯ ಜೀವಿಯೂ ಒಂದು ಜೈವಿಕ ಸೃಷ್ಟಿಯೇ ಆಗಿರುವಾಗ ಅವರಿಗೆ ಕನಿಷ್ಠ ಪಕ್ಷ ತಂದೆ-ತಾಯಿ ಇರಲಿಕ್ಕೇ ಬೇಕು. ಆದರೆ ಅವರಿಂದ ಪರಿತ್ಯಕ್ತರಾಗುವುದು, ದೂರಾಗುವುದು, ಕಳೆದುಕೊಳ್ಳುವುದು ಇವೇ ಮುಂತಾದ ಸಂದರ್ಭಗಳಲ್ಲಿ ಅನಾಥರು ಸೃಷ್ಟಿಯಾಗುತ್ತಾರೆ.
ಓರ್ವ ವ್ಯಕ್ತಿ ಸಾಮಾಜಿಕವಾಗಿ ಅನಾಥ ವಲಯಕ್ಕೆ ದೂಡಲ್ಪಟ್ಟ ಮೇಲೆ ಅಂತವನಿಗೆ ರಕ್ಷಣೆ ಇರುವುದಿಲ್ಲ. ನಾಗರೀಕ ಸಮಾಜವು ಏರ್ಪಡಿಸಿಕೊಂಡಿರುವ ಸಾಂವಿಧಾನಿಕ ಸಂಸ್ಥೆಗಳಾಗಲಿ, ವ್ಯವಸ್ಥೆಯಾಗಲಿ ಅನಾಥರನ್ನು ರಕ್ಷಿಸುತ್ತಾರೆಂಬ ನಂಬಿಕೆ ಮೂಡುವುದಿಲ್ಲ. ಸರ್ಕಾರಿ ಇಲಾಖೆಗಳು, ಪೊಲೀಸರಿಂದ ಕೊನೆಗೆ ಕೋರ್ಟುಗಳಲ್ಲೂ ಅನಾಥರು ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಇದಿಷ್ಟೇ ಅಲ್ಲದೆ ಒರ್ವರ ರಕ್ಷಣೆಗೆ ಯಾರೂ ಇಲ್ಲವೆಂಬುದು ಸಮಾಜಘಾತುಕ ಶಕ್ತಿಗಳಿಗೂ ದೌರ್ಜನ್ಯ ನಡೆಸಲು ಅವಕಾಶ ಕಲ್ಪಿಸುತ್ತದೆ. ಅನಾಥರು ಮಹಿಳೆಯರಾಗಿದ್ದರೆ ಲೈಂಗಿಕ ಶೋಷಣೆ ನಡೆಸಲು ಸಿಕ್ಕ ಅನುಮತಿ ಎಂದು ಬಹುತೇಕರು ಭಾವಿಸುತ್ತಾರೆ. ಅಂತಹ ಕೆಲವು ಅನಾಥ ಸ್ಥಿತಿಗೆ ದೂಡಲ್ಪಟ್ಟ ಮಹಿಳೆಯರ ಬದುಕಿನ ನಿಜ ಕತೆಗಳನ್ನು ಲೇಖಕರು ಇಲ್ಲಿ ನಿರೂಪಿಸಿದ್ದಾರೆ. ತಮ್ಮದೇ ಆದ ಭಾಷೆಯಲಿ, ತಾವು ಅದು ಹೇಗೆ ಮೋಸಹೋದೆವೆಂಬುದನ್ನು, ಕುಟುಂಬದಿಂದ ಪರಿತ್ಯಕ್ತರಾದರೆಂಬುದನ್ನು ಮನ ತಲ್ಲಣಿಸುವಂತೆ ಅನಾಥರು ಹೇಳಿಕೊಂಡಿದ್ದಾರೆ. ನಾವು ಬದುಕುತ್ತಿರುವ ಈ ಸಮಾಜವು ಮೇಲ್ನೋಟಕ್ಕೆ ವ್ಯವಸ್ಥಿತವಾಗಿ, ನಾಗರೀಕವಾಗಿ ಸಂಘಟಿಸಲ್ಪಟ್ಟಿದೆ ಎಂಬಂತೆ ಕಾಣುತ್ತದೆ. ಆದರೆ ಅವಕಾಶ ಸಿಕ್ಕರೆ, ಒಬ್ಬರ ಅಸಹಾಯತೆಯನ್ನು ದುರುಪಯೋಗಪಡಿಸಿಕೊಳ್ಳಲು ಅನೇಕರು ಹಿಂಜರಿಯುವುದಿಲ್ಲ. ಆ ಕ್ಷಣದಲ್ಲಿ ಸುಪ್ತವಾಗಿ ಅಡಗಿರುವ ಅಮಾನವೀಯ ಗುಣ ನಡವಳಿಕೆಗಳೆಲ್ಲ ಪುಟಿದೆದ್ದು ಬಂದು ಅನಾಥರನ್ನು ಹಿಂಸಿಸುತ್ತವೆ.
ಅನಾಥ ಎಂಬುದಕ್ಕೆ ಲೇಖಕರು ಈ ಕೃತಿಯಲ್ಲಿ ಇನ್ನೊಂದು ವಿಭಿನ್ನ ವ್ಯಾಖ್ಯಾನ ನೀಡುತ್ತಾರೆ. ಅದು ನಮ್ಮಂಥ ಸಾಮಾನ್ಯ ಮನುಷ್ಯ ಜೀವಿಗಳು, ಕೌಟುಂಬಿಕವಾಗಿ, ಸಾಮಾಜಿಕವಾಗಿ ಅನಾಥರಲ್ಲದೇ ಹೋದರೂ ಸಹ, ಅನಿರೀಕ್ಷಿತವಾಗಿ ಕೆಲವು ಸಂದರ್ಭಗಳಲ್ಲಿ ಅನಾಥ ಸ್ಥಿತಿ ಎದುರಿಸಬೇಕಾಗಿ ಬರುವ ಸಂಗತಿಗಳವು. ಇಲ್ಲಿ ನಿರೂಪಕ ಪೊಲೀಸರಿಂದಾಗಿ ಸ್ವತಃ ಅಂತಹ ಒಂದು ಅನಾಥ ಪ್ರಜ್ಞೆ ಅನುಭವಿಸುವ ಘಟನೆಯ ವಿವರ ನೀಡುತ್ತಾರೆ.
ವಚನ ಚಳವಳಿಯ ನಾಯಕ ಅನುಭವ ಮಂಟಪದ ಮುಂದಾಳು ಅಲ್ಲಮಪ್ರಭುವಿನ ಹಿನ್ನೆಲೆ ನಮಗೆ ತಿಳಿದಿಲ್ಲ. ಆದರೆ ಆತ ನಮ್ಮ ನಾಡಿನ ವಚನ ಪರಂಪರೆಯ ಬಹುದೊಡ್ಡ ವ್ಯಕ್ತಿಯಾಗಿ ಸಮಾಜವು ಗೌರವಿಸಿ ಆದರಿಸಿದೆ.
ಮತ್ತೊಂದೆಡೆ, ಮಧ್ಯಯುಗೀನ ಹಾಗೂ ಆಧುನಿಕಪೂರ್ವ ಕರ್ನಾಟಕ ಸಮಾಜವು ಅನಾಥರು, ಪರಿತ್ಯಕ್ತರನ್ನು ಕ್ರೂರವಾಗಿ ನಡೆಸಿಕೊಂಡಿರುವುದಕ್ಕೂ ಸಾಕ್ಷಿಗಳಿವೆ. ಶೃಂಗೇರಿಯಂತಹ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಪರಿತ್ಯಕ್ತ ಮಹಿಳೆಯರನ್ನು ಬಹಿರಂಗವಾಗಿ ಹರಾಜು ಹಾಕಲಾಗುತ್ತಿತ್ತು. ಕರಾವಳಿಯ ಸಾಮಾಜಿಕ ವ್ಯವಸ್ಥೆಯಲ್ಲಿ ಅನಾಥ ಮಹಿಳೆಯರನ್ನು ದೇವಾಲಯಗಳ ಸೇವಕರಾಗಿ ನೇಮಿಸಿಕೊಂಡು ಎಲ್ಲ ರೀತಿಯಲ್ಲೂ ಶೋಷಿಸುವ ಒಪ್ಪಿತ ವ್ಯವಸ್ಥೆಯಿತ್ತು.
ಮನುಷ್ಯ ಮೂಲಭೂತವಾಗಿ ಏಕಾಂಗಿ ಎನ್ನುವ ಮಾತೊಂದಿದೆ. ಆದರದು ಭಿನ್ನನೆಲೆಯ ಏಕಾಂಗಿತನ. ಆ ಲೆಕ್ಕದಲ್ಲಿ ಹೇಳುವುದಾದರೆ ಹಲವು ನೂರು ಕೋಟಿ ಜನರಿರುವ ಇಷ್ಟು ದೊಡ್ಡ ಗಾತ್ರದ ನಮ್ಮ ಭೂಗ್ರಹವೂ ಅದಕ್ಕಿಂತ ವಿಶಾಲವಾದ ಸೌರಮಂಡಲದಲ್ಲಿ ಗೊತ್ತು ಗುರಿಯಿಲ್ಲದೆ, ತನ್ನಂತಿರುವ ಇನ್ನೊಂದು ಗ್ರಹ ಸಿಗದೆ ಅನಾಥವಾಗಿಯೇ ಅಸ್ತಿತ್ವದಲ್ಲಿದೆ.
ನಾವು ಅಷ್ಟು ದೊಡ್ಡ ವಿಚಾರಗಳಿಗೆ ಹೋಗದೆ ನಮ್ಮ ನಿತ್ಯ ಬದುಕಿನ ಸಾಮಾಜಿಕ ಸನ್ನಿವೇಶ ಸಂದರ್ಭದಲ್ಲಿ ನೋಡುವ, ಕೇಳುವ ಹಾಗೂ ಅನುಭವಿಸುವ ಅನಾಥತೆಯನ್ನು ಪರಿಭಾವಿಸಬೇಕಿದೆ.
ಇದು ನಮ್ಮದೇ ಸಮಾಜ ನಿರ್ಮಿಸುವ ಅನಾಥ ಬದುಕಿನ ಸ್ತರವಾಗಿದೆ. ಒಂದು ವ್ಯವಸ್ಥೆಯ ಎದುರು ವ್ಯಕ್ತಿ ಅಸಹಾಯಕನಾಗಿ ಅನಾಥ ಸ್ಥಿತಿ ತಲುಪುವುದು, ಸರ್ಕಾರದ ಕ್ರೌರ್ಯದೆದು ಬನಹಯಬಹರು ನಾಗರಿಕರೊಬ್ಬರು ತಬ್ಬಲಿಯಾಗುವುದು, ದೊಡ್ಡ ಬಹುರಾಷ್ಟ್ರೀಯ ಕಂಪನಿಯ ಸೂಪರ್ ಮಾರ್ಕೆಟಿನೆದಿರು ನೆರೆಹೊರೆಯ ನಮ್ಮ ಚಿಕ್ಕಪುಟ್ಟ ವ್ಯಾಪಾರಿಗಳು ಅಸಹಾಯಕರಾಗುವುದು, ಮಾರುಕಟ್ಟೆಯ ಲಾಭಬಡುಕರೆದುರು ಬೆಳೆಗಾರ ರೈತ ಖಾಲಿ ಕೈಲಿ ಕಣ್ಣೀರಾಗುವುದು ಮನದಲ್ಲಿ ಮೂಡುವ ನವಿರು ಭಾವನೆಗಳನ್ನು ವ್ಯಕ್ತಪಡಿಸಲು ತಾವಿಲ್ಲದೆ ಅವು ಹುಟ್ಟಿದಲ್ಲೇ ಕ್ಷಯಿಸಿ ಅನಾಥವಾಗಿ ಕಣ್ಮರೆಯಾಗಿಬಿಡುವ...
ನಮ್ಮ ನಿಮ್ಮ ಬದುಕಿನಲ್ಲೂ ಈ ರೀತಿಯ ಹಲವು ಅನಾಥ ಕಂಪಾರ್ಟ್‌ಮೆಂಟುಗಳಿವೆ. ಇದೆಲ್ಲದರಿಂದ ಬಾಧಿತ ಹಲವು ಜನರ ಬದುಕಿನ ಕತೆಗಳೇ ಚಂದ್ರಶೇಖರ ಗಂಧನಹಳ್ಳಿಯವರ ಮೂಲಕ ಒಂದು ಅಪರೂಪದ ಬರಹ ಪ್ರಯೋಗವಾಗಿ ಇಲ್ಲಿ ಕೃತಿ ರೂಪ ತಾಳಿದೆ.
ಈ ಬರಹದ ವಿಶೇಷವೇನೆಂದರೆ ವಿಷಯವು ಅನಾಥರ ಕುರಿತಾದ್ದರಿಂದ ದತ್ತು ಸ್ವೀಕಾರದ ಕಾನೂನಿನ ಮಾಹಿತಿ ಹಾಗೂ ಇತರ ಸಾಮಾಜಿಕ ಆಯಾಮಗಳನ್ನು ಚರ್ಚಿಸಿರುವುದಾಗಿದೆ. ಜೊತೆಗೆ ಕರ್ನಾಟಕ ರಾಜ್ಯದೆಲ್ಲೆಡೆ ಇರುವ ಅನಾಥಾಲಯಗಳ ಕಿರು ಪರಿಚಯ ಹಾಗೂ ಅವುಗಳ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ನೀಡಿದ್ದಾರೆ. ಅನಾಥರು ಕೃತಿಯ ಓದು ನಮ್ಮನ್ನು ಕಾಡುತ್ತದೆ. ಬರಹಗಾರರೊಬ್ಬರಿಗೆ ಪ್ರತಿಭೆಯೊಂದಿಗೆ ಮಾನವೀಯ ಕಾಳಜಿಯೂ ಇರಬೇಕು. ಚಂದ್ರಶೇಖರ ಗಂಧನಹಳ್ಳಿ ಆ ಸೂಕ್ಷ್ಮತೆ -ಸ್ಪಂದನೆಗಳಿರುವ ಹೊಸ ಬರಹಗಾರರಾಗಿ ಅಕ್ಷರ ಲೋಕದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಯುವ ಲೇಖಕರಿಗೆ ಯಶ ಕೋರುತ್ತೇನೆ.

________________________________________________________________________________________________________________________________
ಪಾರ್ವತೀಶ ಬಿಳಿದಾಳೆ

ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಲ್ಲಿ ಬರೆಯುವ ಪತ್ರಕರ್ತ- ಲೇಖಕ ಪಾರ್ವತೀಶ್ ಜನಿಸಿದ್ದು 1967ರಲ್ಲಿ. ಬಾಲ್ಯ- ಪ್ರಾಥಮಿಕ ಶಿಕ್ಷಣ ಪಡೆದದ್ದು ಆನೇಕಲ್, ಮಾಲೂರು, ದೊಡ್ಡ ಬಳ್ಳಾಪುರದಲ್ಲಿ. ಬಿ.ಕಾಂ. ಪದವಿ ಪೂರ್ಣಗೊಳಿಸಿರುವ ಅವರು ಎಂ.ಎ. ಪತ್ರಿಕೋದ್ಯಮ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿದವರು. ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಅವರು ಅರೆಕಾಲಿಕ ರೈತರೂ ಹೌದು. ಕೆಲಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ್ ಅವರು ನಂತರ ಕರ್ನಾಟಕ ಪ್ರಗತಿರಂಗ ಹಾಗೂ ಕರ್ನಾಟಕ ವಿಮೋಚನಾ ರಂಗದ ಸಕ್ರಿಯ ಕಾರ್ಯಕರ್ತರಾಗಿದ್ದರು. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸಾಕೇತ್ ಎನ್ನುವ ವಾರಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಗೈಡ್ ಮಾಸಪತ್ರಿಕೆಯ ಸಂಪಾದಕರಾಗಿ ದುಡಿದಿದ್ದಾರೆ. 

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...