ಗಾಂಧಿಯ ಅಹಿಂಸೆಯನ್ನು ಸಮಗ್ರವಾಗಿ ಪಾಲಿಸಿದವರು ಈ ದೇಶದ ದಲಿತರು....!

Date: 01-04-2021

Location: ಬೆಂಗಳೂರು


ಗಾಂಧೀಜಿ ಅವರ ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಅನುಯಾಯಿಗಳೆಂದರೆ ಅವರನ್ನು ಇಷ್ಟಪಡದ ದಲಿತ ಸಮುದಾಯಗಳೇ. ಇದು ಚರಿತ್ರೆಯ ವ್ಯಂಗ್ಯ ಎನ್ನುತ್ತಾರೆ ಹಿರಿಯ ಲೇಖಕ, ಚಿಂತಕ ರಾಜೇಂದ್ರ ಚೆನ್ನಿ. ಈ ಹಿನ್ನೆಲೆಯಲ್ಲಿ , ಚಿಂತಕ ಆನಂದ ತೇಲ್ತುಂಬ್ಡೆ ಅವರ ಬದುಕು ಬರಹಗಳೊಂದಿಗೆ ದೇಶದ ರಾಜಕೀಯ ದುಸ್ಥಿತಿಗಳ ಕುರಿತು ತಮ್ಮ ‘ಓದುವ ದಾರಿ’ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.

ಆನಂದ ತೇಲ್ತುಂಬ್ಡೆ ಅವರ ಮೂಲಕೃತಿಯ ಅನುವಾದದ ಈ ಎರಡು ಸಂಪುಟಗಳನ್ನು ಓದಿ ಅವುಗಳ ಬಗ್ಗೆ ಬರೆಯುತ್ತಿರುವುದು ತೀವ್ರವಾದ ತಪ್ಪಿತಸ್ಥ ಮನೋಸ್ಥಿತಿ ಮತ್ತು ಗಾಢವಾದ ವಿಷಾದದಲ್ಲಿ. ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರಾದ ಆನಂದ ತೇಲ್ತುಂಬ್ಡೆ ಅವರನ್ನು ಯಾವ ಸಾಕ್ಷ್ಯ ಹಾಗೂ ಆಧಾರಗಳೂ ಇಲ್ಲದೆ 31 ತಿಂಗಳುಗಳಿಂದ ಜೈಲಿನಲ್ಲಿ ಕೊಳೆಹಾಕಿರುವುದು ಆಧುನಿಕ ಜಗತ್ತಿನ ಅತಿದೊಡ್ಡ ಕಳಂಕಗಳಲ್ಲಿ ಒಂದು. ಅವರ ಹಾಗೆಯೇ, ಅನೇಕ ಕ್ರಿಯಾಶೀಲರನ್ನೂ ಜೈಲಿಗೆ ಹಾಕಿ ಎರಡು ವರ್ಷಗಳು ಕಳೆದಿವೆ. ಕವಿ ವರವರರಾವ್ ಅವರಿಗೆ ಬಹಳ ಹೋರಾಟದ ನಂತರ ಬೇಲ್ ನೀಡಲಾಗಿದೆ. ಸ್ಟ್ಯಾನ್ ಸ್ವಾಮಿ ಅವರಿಗೆ ಬೇಲ್ ನಿರಾಕರಿಸಲಾಗಿದೆ. ಇವರೆಲ್ಲರ ಸೆರೆಮನೆ ವಾಸಕ್ಕೆ ಕಾರಣವಾಗಿರುವ ಸಾಕ್ಷಿಗಳೆಂದರೆ ಅವರ ಲ್ಯಾಪ್‍ಟಾಪ್ ಮುಂತಾದವುಗಳಲ್ಲಿ ಇದ್ದವು ಎನ್ನಲಾದ “ದೇಶದ್ರೋಹಿ” ಹಾಗೂ “ಕೊಲೆ ಒಳಸಂಚಿನ” ಸಂದೇಶಗಳು ಇತ್ಯಾದಿ. ಈ ಸಂದೇಶಗಳನ್ನು ಭಾರತದ ಪೊಲೀಸರೇ ಹ್ಯಾಕ್ ಮಾಡಿ ಮತ್ತು ಒಂದು ತಂತ್ರಾಂಶವನ್ನು ಬಳಸಿ ಮೋಸದಿಂದ ಸೇರಿಸಿದ್ದಾರೆ ಎನ್ನುವುದು ಇಂದು ಸಾಬೀತಾಗಿದೆ. ಜಗತ್ತಿನ ಅತ್ಯಂತ ಪರಿಣಿತ ಹಾಗೂ ನಿಖರವಾದ ತೀರ್ಮಾನಗಳನ್ನು ಇಂಥ ವಿದ್ಯಮಾನಗಳಲ್ಲಿ ಕೊಡುವ ಸಾಮರ್ಥ್ಯವುಳ್ಳ Arsenal Consultant ಸಂಸ್ಥೆಯು ಈ ಬಗ್ಗೆ ತನ್ನ ವರದಿಯಲ್ಲಿ ಈ ತೀರ್ಮಾನವನ್ನು ಖಚಿತವಾಗಿ ಹೇಳಿದೆ. ಕೆಲವೇ ದಿನಗಳ ಹಿಂದೆ ಈಗ ಲಭ್ಯವಾಗಿರುವ ಈ ವರದಿಯನ್ನು ಸ್ಟ್ಯಾನ್ ಸ್ವಾಮಿಯವರ ಬೇಲ್ ಪ್ರಕರಣದಲ್ಲಿ ಪರಿಶೀಲಿಸಿ ಎಂದು ವಕೀಲರು ಕೇಳಿಕೊಂಡಾಗ “ಇದರಿಂದ ನ್ಯಾಯಾಲಯ ಪ್ರಕ್ರಿಯೆಗೆ ಅಡತಡೆಯಾಗುತ್ತದೆ” ಎಂದು ಹೇಳಿ ಸನ್ಮಾನ್ಯ ನ್ಯಾಯಾಧೀಶರು ತಿರಸ್ಕರಿಸಿದರು! ಈ ವರದಿಯನ್ನು ವಿಶ್ವದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದ್ದು, ಯಾರಾದರೂ ಓದಬಹುದಾಗಿದೆ. ಆದರೆ ಗೌರವಾನ್ವಿತ ನ್ಯಾಯಾಲಯದ ನಡವಳಿಕೆಯನ್ನು ಪ್ರಶ್ನಿಸುವುದು ಈ ದೇಶದಲ್ಲಿ ಅಪರಾಧವಾಗಿರುವುದರಿಂದ ನನ್ನ ಪ್ರತಿಕ್ರಿಯೆಯನ್ನು ಈ ಚಿಹ್ನೆಗಳ ಮೂಲಕ ದಾಖಲಿಸುತ್ತಿದ್ದೇನೆ. “!!??......”

ತೇಲ್ತುಂಬ್ಡೆಯವರ ಸಂಶೋಧನಾ ಬರಹಗಳು ಅಂಬೇಡ್ಕರ್ ಅವರ ಚಿಂತನೆಯ ಸಮಕಾಲೀನ ವಿಶ್ಲೇಷಣೆಯ ಶ್ರೇಷ್ಠ ಮಾದರಿಗಳಾಗಿವೆ. ಅವರ ಬಹುಪಾಲು ಕೃತಿಗಳು ಕನ್ನಡಕ್ಕೆ ಅನುವಾದವಾಗಿದ್ದು, ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಅನೇಕ ವಿಚಾರಸಂಕಿರಣಗಳಲ್ಲಿ, ಚರ್ಚೆಗಳಲ್ಲಿ ಭಾಗಿಯಾಗಿರುವ ಅವರು ಕನ್ನಡದ ಬರಹಗಾರರೇ ಅನ್ನುವಷ್ಟು ಆತ್ಮೀಯರಾಗಿದ್ದಾರೆ. ಆದರೆ ಅವರ ಬಂಧನ ಮತ್ತು ಸೆರೆಮನೆವಾಸದ ವಿರುದ್ಧ ದಲಿತ ಸಂಘಟನೆಗಳು ಮತ್ತು ನಾವೆಲ್ಲ ಉಗ್ರವಾಗಿ ಪ್ರತಿಭಟಿಸಲಿಲ್ಲ. ಅಂಬೇಡ್ಕರ್ ಅವರನ್ನು ಕೇವಲ ನಮ್ಮ ಪ್ರಗತಿಪರತೆಯ ಆಕರ್ಷಕ ಲಾಂಛನವನ್ನಾಗಿಸಿಕೊಂಡ ನಾವು, ಅಂಬೇಡ್ಕರ್ ಹೋರಾಟಗಳ ಫಲಾನುಭವಿಗಳಾಗಿದ್ದು ಈಗ ಗುಲಾಮಿ ಮಧ್ಯಮವರ್ಗದ ಸದಸ್ಯರಾಗಿರುವ ದಲಿತ ಸಂಗಾತಿಗಳು ಒಂದು ಘೋರವಾದ ಅಪರಾಧದಲ್ಲಿ ಸಹಭಾಗಿಗಳಾಗಿದ್ದೇವೆ. ಈ ಎರಡು ಸಂಪುಟಗಳನ್ನು ಓದುವಾಗ ಅದನ್ನು ತೇಲ್ತುಂಬ್ಡೆಯವರ ಆಪ್ತವಾದ, ಸಮಾಧಾನದ ಅವರ ದನಿಯಲ್ಲಿಯೇ ಕೇಳಿಸಿಕೊಂಡಂತೆ ಅನ್ನಿಸಿದೆ. ಶ್ರೇಷ್ಠ ವಿದ್ವಾಂಸನಿಗೆ ಸಾಧ್ಯವಾಗುವ ವಸ್ತುನಿಷ್ಠತೆ, ಅಪಾರವಾದ ತಾಳ್ಮೆಯ ಓದು, ಏರುದನಿಯೂ ಬೇಡವಾದ ಆತ್ಮವಿಶ್ವಾಸದ ವಾದಮಂಡನೆ ಇವು ಈ ಕೃತಿಗಳ ಉದ್ದಕ್ಕೂ ಪ್ರಭಾವಿಯಾಗಿವೆ. ತಮ್ಮ ಎಲ್ಲ ವೈಚಾರಿಕ ಸಂದೇಹಗಳೊಂದಿಗೆ, ಸೂಕ್ಷ್ಮವಾದ ಸಂಕೀರ್ಣ ಗ್ರಹಿಕೆಯೊಂದಿಗೆ ಪ್ರಜಾಪ್ರಭುತ್ವವನ್ನು ಅಪರಿಪೂರ್ಣ ಪರಿಹಾರವೆಂದು ನಂಬಿಕೊಂಡಿದ್ದ ಬಾಬಾಸಾಹೇಬರ ಚಿಂತನೆಯ ಮೂಲ ಆಕೃತಿಗಳು ಈ ಸಂಪುಟಗಳಲ್ಲಿ ನಿಚ್ಚಳವಾಗಿ ಮೂಡಿಬಂದಿವೆ. ಮಹಾಡ್ ಕೆರೆಯ ಆಂದೋಲನವು ಆಂದೋಲನವಲ್ಲ ಆಧುನಿಕ ಜಗತ್ತಿನ ಅತಿ ಮಹತ್ವದ ನಾಗರಿಕ ಹಕ್ಕು ಮಂಡನೆ ಎಂದು ವಾದಿಸುವ ತೇಲ್ತುಂಬ್ಡೆ, ಬಾಬಾಸಾಹೇಬ ಪ್ರಜಾಪ್ರಭುತ್ವವನ್ನು ಪರಿಕಲ್ಪಿಸಿಕೊಂಡ ಕ್ರಮವನ್ನು ಇಪ್ಪತ್ತನೆಯ ಶತಮಾನದ ಯಾವ ಚಿಂತಕರೂ ಮೀರಲಾಗಲಿಲ್ಲ ಎನ್ನುವುದನ್ನು ಹಾಗೆ ಹೇಳದೆಯೆ ಸಾಬೀತು ಮಾಡುತ್ತಾರೆ.

1850ರಿಂದಲೇ ಮಹಾರ್ ಸಮುದಾಯದಲ್ಲಿ ಹೊಸ ಪ್ರಜ್ಞೆಯೊಂದು ಉಗಮವಾಗಿದ್ದರ ಬಗ್ಗೆ Elinor Zelliot, ಅನುಪಮಾ ರಾವ್ ಮುಂತಾದವರು ಬರೆದಿದ್ದಾರೆ. ಜಾತಿಪದ್ಧತಿ ಹಾಗೂ ಜಮೀನ್ದಾರಿಗಳ ಹಿಡಿತದಲ್ಲಿ ಹಳ್ಳಿಯ ಸಮಾಜಕ್ಕೆ ಅನಿವಾರ್ಯವಾಗಿಯೂ ನಿಕೃಷ್ಟವಾಗಿಯೇ ಇದ್ದ ಮಹಾರ್ ದಲಿತ ಸಮುದಾಯವು ಅನೇಕ ರೀತಿಯಲ್ಲಿ ವಿಶಿಷ್ಟವಾಗಿತ್ತು. ಬಲೂತಾದಾರ್ ಜಾತಿಗಳಲ್ಲಿ ಒಂದಾಗಿ ಗ್ರಾಮಸೇವೆಗಳಿಗಾಗಿ ಬಲೂತ್ ಪ್ರತಿಫಲವನ್ನು ಪಡೆದುಕೊಂಡು, ಅವರಲ್ಲಿ ಕೆಲವರು ವತನ್ ಪದ್ಧತಿಯಲ್ಲಿ ಜಮೀನನ್ನು ಹೊಂದಿದ್ದರೂ ಕಳಂಕಿತವೆಂದು ಪರಿಗಣಿಸಲಾಗುವ ಕೆಲಸಗಳನ್ನು ನಿರ್ವಹಿಸಲೇಬೇಕಾಗುತ್ತಿತ್ತು. “ಗ್ರಾಮದ ಕಣ್ಣು”, ಜಮೀನು ಮತ್ತು ಹಳ್ಳಿಗಳ ಗಡಿರೇಖೆಗಳ ತಜ್ಞ, ಸುದ್ದಿವಾಹಕ ಇವೆಲ್ಲವೂ ಆಗಿದ್ದ ಮಹಾರ್ ನಿಗೆ ಆ ಬದುಕಿನಿಂದ ಆಚೆಗೆ ಇನ್ನೊಂದು ಜಗತ್ತನ್ನು ಕಲ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಗುಲಾಮಗಿರಿ ಹಾಗೂ ಜಾತಿವ್ಯವಸ್ಥೆಗಳ ನಡುವಿನ ವ್ಯತ್ಯಾಸದ ಬಗ್ಗೆ ತಮ್ಮ ಮುನ್ನುಡಿಯಲ್ಲಿ ತೇಲ್ತುಂಬ್ಡೆ ಜಗತ್ತು ಬಲ್ಲ ಎಲ್ಲಾ ಶ್ರೇಣೀಕೃತ ವ್ಯವಸ್ಥೆಯಲ್ಲಿ ಜಾತಿಪದ್ಧತಿಯೇ ಅತಿ ಕ್ರೂರವೇಕೆ ಎನ್ನುವುದನ್ನು ವಿವರಿಸುತ್ತಾರೆ. ಅಂಬೇಡ್ಕರ್ ಅವರ ಮಾತಿನಲ್ಲಿ, “ಒಂದು ರೀತಿ ಅಸ್ಪೃಶ್ಯರಿಗೆ ತಮ್ಮ ಗುಲಾಮಗಿರಿಯ ಪ್ರಜ್ಞೆ ಮೂಡದ ಹಾಗೆ ಮಾಡುವ ಗುಲಾಮಗಿರಿ, ಅಸ್ಪೃಶ್ಯತೆಯಾಗಿದ್ದರೂ ಅದು ಗುಲಾಮಗಿರಿ, ಪರೋಕ್ಷವಾದರೂ ಅದು ಸತ್ಯ. ಅದರಿಂದ ಬಿಡಿಸಿಕೊಳ್ಳುವ ಪ್ರಜ್ಞೆಯಿಲ್ಲದ ಕಾರಣ ಅದು ಚಿರಸ್ಥಾಯಿ. ಗುಲಾಮಗಿರಿ ಮತ್ತು ಅಸ್ಪೃಶ್ಯತೆ ಈ ಎರಡು ವ್ಯವಸ್ಥೆಗಳಲ್ಲಿ ಅಸ್ಪೃಶ್ಯತೆ ಹೆಚ್ಚು ಹೀನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ”. (ಉಧೃತ ಪುಟ 41)

ಹೀಗಾಗಿ ಅಸ್ಪೃಶ್ಯನಿಗೆ ಮಾನವ ಹಕ್ಕುಗಳೂ ಇಲ್ಲ; ನಾಗರಿಕ ಹಕ್ಕುಗಳೂ ಇಲ್ಲ. ಮಾನವನ imagination ಗೆ ಸಾಧ್ಯವಾಗುವ ಕ್ರೌರ್ಯದ ಪರಾಕಾಷ್ಠೆಯಾದ ಜಾತಿಪದ್ಧತಿಯ ಪರಿಕಲ್ಪನೆಯು ಭಾರತೀಯ ನಾಗರಿಕತೆಗೆ ಹೇಗೆ ಸಾಧ್ಯವಾಯಿತು ಎನ್ನುವುದೇ ಒಂದು ಬಗೆಹರಿಯದ ಪ್ರಶ್ನೆ.

ಆದರೆ ವಸಾಹತುಶಾಹಿಯ ಆಗಮನವು ಮಹಾರ್ ಸಮುದಾಯಕ್ಕೆ ಕುರುಡುಗತ್ತಲೆಯಲ್ಲಿ ಬೆಳಕಿನಂತೆ ಕಂಡಿತು. ಬ್ರಿಟಿಷ್ ಸಾಮ್ರಾಜ್ಯಶಾಹಿಯು ತನ್ನ ಯುದ್ಧಗಳಿಗಾಗಿ ಮಹಾರ್ ರನ್ನು ಸೈನಿಕರನ್ನಾಗಿ ಸೇರಿಸಿಕೊಂಡಿತು. ಬ್ರಿಟಿಷ್‍ರ ಪರವಾಗಿ ಛಲದಿಂದ ಹೋರಾಡಿ ಪೇಶ್ವೆಗಳನ್ನು ಸೋಲಿಸಿದ ಮಹಾರ್ ರು, ಆ ನೆನಪಿನಲ್ಲಿ ಆಚರಿಸುವುದೇ ಭೀಮ ಕೋರೆಗಾಂವನ ಆಚರಣೆ. ಅಂಬೇಡ್ಕರ್ ಮಹಾಡ್ ಸತ್ಯಾಗ್ರಹದ ತಮ್ಮ ಭಾಷಣದಲ್ಲಿ ನೆನಪಿಸುವಂತೆ ಪೇಶ್ವೆಗಳ ಕಾಲ ದಲಿತರಿಗೆ ಅತ್ಯಂತ ದುಷ್ಟ ಕಾಲವಾಗಿತ್ತು. ಉಗುಳು ಕೆಳಗೆ ಬೀಳದಂತೆ ಕುತ್ತಿಗೆಗೆ ಗಡಿಗೆ ಕಟ್ಟುವುದು, ತಮ್ಮ ನೆರಳು ಮೇಲ್ಜಾತಿಯವರ ಮೇಲೆ ಬೀಳಬಾರದೆಂದು ಎಚ್ಚರಿಕೆ ಹೇಳುವುದು ಇವೆಲ್ಲ ಆ ಕಾಲದ ಅನಿಷ್ಟಗಳು. ಪೇಶ್ವೆಗಳನ್ನು ಮಹಾರರು ಸೋಲಿಸಿದರು ಎನ್ನುವುದನ್ನು ಒಪ್ಪಲಾರದ ಮನಸ್ಥಿತಿಯ ಸನಾತನವಾದಿ ಬ್ರಾಹ್ಮಣರ ಹಿಂಸೆ ಹಾಗೂ ಪಿತೂರಿಗಳಿಂದಾಗಿ ಇಂದು ತೇಲ್ತುಂಬ್ಡೆ ಜೈಲಿನಲ್ಲಿದ್ದಾರೆ. ಏಕೆಂದರೆ ದಲಿತ ಪ್ರತಿಭಟನೆಗಳ ಬಗ್ಗೆ ಬರೆಯುವುದು, ಸಂಶೋಧನೆ ಮಾಡುವುದು, ಪೇಶ್ವೆಗಳ ವಾರಸುದಾರರ ದೃಷ್ಟಿಯಲ್ಲಿ ದೇಶದ್ರೋಹ.

ಇರಲಿ, ಬ್ರಿಟಿಷ್ ಸೇನೆಯನ್ನು ಸೇರಿದ ಅನೇಕ ಮಹಾರ್‍ರು “ಜಾತಿಪದ್ಧತಿಯ ಪಾಪಕೂಪಗಳಾದ” ಹಳ್ಳಿಗಳಿಂದ ದೂರಹೋಗಿ, ನೌಕರದಾರರಾಗಿ, ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡುವುದು ಸಾಧ್ಯವಾಯಿತು. ಸ್ವತಃ ಅಂಬೇಡ್ಕರ್ ಇಂಥ ಕುಟುಂಬದ ಸದಸ್ಯರಾಗಿದ್ದರು. ಆದರೆ ಆ ಯುಗದಲ್ಲಿ ವಿಜ್ಞಾನವೆಂದೇ ನಂಬಲಾಗಿದ್ದ ಜನಾಂಗೀಯವಾದ (racicm) ಬ್ರಿಟಿಷ್ ನೀತಿಗಳನ್ನು ಪ್ರವೇಶಿಸಿ ಕೇವಲ ಕೆಲವು ಭಾರತೀಯ ಜನಾಂಗಗಳಿಗೆ ‘ಕ್ಷಾತ್ರ’ ಸಾಮರ್ಥ್ಯವಿರುತ್ತದೆಯೆಂದು ನಂಬಲು ಆರಂಭಿಸಿ, ಮಹಾರ್ ರನ್ನು ಸೇನೆಗೆ ಭರ್ತಿಮಾಡಿಕೊಳ್ಳುವುದನ್ನು ನಿಲ್ಲಿಸಲಾಯಿತು. ಆಗ ಶಿಕ್ಷಿತರಾಗಿದ್ದ ಸೇನೆಯಿಂದ ನಿವೃತ್ತರಾಗಿದ್ದ ಅನೇಕರು ಇದನ್ನು ಪ್ರಶ್ನಿಸಿ ಅಹವಾಲುಗಳನ್ನು ಕೊಡಲಾರಂಭಿಸಿದರು. ಇದು ಮಹಾರ್ ಜನಾಂಗದಲ್ಲಿ ಹುಟ್ಟಿದ ಹೊಸ ಪ್ರಜ್ಞೆಗೆ ಕಾರಣವಾಗಿತ್ತು. ಜಾತಿವ್ಯವಸ್ಥೆಯನ್ನು ಬಿಟ್ಟುಕೊಡದ, ಆ ವ್ಯವಸ್ಥೆಯನ್ನು ಶಾಸ್ತ್ರಗಳ ಮೂಲಕ ಸಮರ್ಥಿಸುವ ಸಮಾಜದಿಂದ ಬಿಡುಗಡೆಯು ಸಾಧ್ಯವಾದರೆ ಅದು ಕೇವಲ ಶಿಕ್ಷಣ ಹಾಗೂ ಬ್ರಿಟಿಷ್ ವಸಾಹತುಶಾಹಿಯ ನ್ಯಾಯಬದ್ಧತೆಯಿಂದ ಎಂದು ಮಹಾರ್ ಜನಾಂಗವು ನಂಬಿತ್ತು. ಹೀಗಾಗಿ ಅಂಬೇಡ್ಕರರು ಹೋರಾಟಕ್ಕೆ ಇಳಿಯುವ ಮೊದಲೇ ಅನೇಕ ಅಹವಾಲು, ಸಭೆಗಳು, ಹಾಡುಗಳು, ಲಾವಣಿಗಳು ಇವುಗಳ ಮುಖಾಂತರ ಹೊಸ ಎಚ್ಚರವನ್ನು ಜನಾಂಗದಲ್ಲಿ ತರುವ ಪ್ರಯತ್ನಗಳು ನಡೆದಿದ್ದವು. ಅದೇ ಹೊತ್ತಿಗೆ, ಮಹಾರಾಷ್ಟ್ರದಲ್ಲಿ ಬ್ರಾಹ್ಮಣವಿರೋಧಿ ಚಳವಳಿಗಳು, ಸಮಾಜ ಸುಧಾರಣಾ ಚಳವಳಿಗಳಿಂದಾಗಿ ಅನೇಕ ಹಿಂದೂ ಕ್ರಿಯಾಶೀಲ, ಅಸ್ಪೃಶ್ಯತೆ, ಅಸಮಾನತೆಗಳ ವಿರುದ್ಧ ಹೋರಾಟದಲ್ಲಿ ಭಾಗಿಯಾಗ ತೊಡಗಿದರು. ಮಹಾಡ್ ಮುನಿಸಿಪಾಲ್ಟಿಯ ಸದಸ್ಯನಾಗಿದ್ದ ಟಿಪ್‍ನಿಸ್ ಇಂಥವರಲ್ಲಿ ಒಬ್ಬನಾಗಿದ್ದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶ್ರೀ ಎಸ್.ಕೆ. ಬೋಳೆಯವರು ಪ್ರಸ್ತಾಪ ಮಾಡಿ ಜಾರಿಗೆ ಬಂದಿದ್ದ ನಿರ್ಣಯವನ್ನು ಮಹಾಡ್‍ನ ಚವದಾರ್ ಕೆರೆಗೂ ಅನ್ವಯಿಸುವಂತೆ ಗೊತ್ತುವಳಿಯನ್ನು ಪಾಸುಮಾಡಿಸಿದ್ದ. ವಸಾಹತುಶಾಹಿ ಸರಕಾರದ ಬೆಂಬಲದೊಂದಿಗೆ, ಅದರ ಕಾನೂನುಗಳ ಅಡಿಯಲ್ಲಿ ಎಸ್.ಕೆ. ಬೋಳೆ ಠರಾವು ಪಾಸಾಗಿದ್ದು ಅದರ ಪ್ರಕಾರ ಸಾರ್ವಜನಿಕ ಕೆರೆ ಇತ್ಯಾದಿಗಳನ್ನು ಬಳಸದಂತೆ ಯಾರ ಮೇಲೂ ಪ್ರತಿಬಂಧ ಹೇರುವಂತಿರಲಿಲ್ಲ. ಅದೇ ರೀತಿ ‘ಮನುಸ್ವೃತಿ’ಯ ಭಾಗಗಳನ್ನು ಸುಡುವ ಸೂಚನೆಯನ್ನು ಕೊಟ್ಟ ಸಹಸ್ರಬುದ್ಧೆ ಕೂಡ ಹಿಂದೂ ಬ್ರಾಹ್ಮಣನೇ ಆಗಿದ್ದ. ಇನ್ನೂ ಅನೇಕ ಹಿಂದೂ ಪ್ರಗತಿಪರರು ಅಂಬೇಡ್ಕರ್ ಹೋರಾಟಗಳ ಜೊತೆಯಲ್ಲಿದ್ದರು. ಅವರಲ್ಲಿ ಕೆಲವರು ತಮ್ಮ ಸಮುದಾಯದ ಕಿರುಕುಳದಿಂದಾಗಿಯೇ ಅಥವಾ ತಮ್ಮ ಇಬ್ಬಂದಿತನದಿಂದ ದೂರವಾದದ್ದರ ಬಗ್ಗೆ ಕಟುವಾಗಿ ಅಂಬೇಡ್ಕರ್ ಬರೆದರೂ ಇಂಥ ಹೋರಾಟಗಳಲ್ಲಿ ವಿಭಿನ್ನ ಜನಾಂಗಗಳು ಒಂದು ಉದ್ದೇಶಕ್ಕಾಗಿ ಒಗ್ಗೂಡುವುದು ಮುಖ್ಯವೆನ್ನುವುದನ್ನು ಸಮರ್ಥಿಸಿದರು.

ಈ ಕೃತಿಯ ನಿರೂಪಣೆಯಿಂದ ಹೊಳೆಯುವುದೆಂದರೆ ಮಹಾನ್ ಚಳವಳಿಗಳಲ್ಲಿ ಅನೇಕ ಪ್ರಮುಖ ಸಂಗತಿಗಳು, ಘಟನೆಗಳು ಅನಿರೀಕ್ಷಿತವಾಗಿರುತ್ತವೆ; ಪೂರ್ವನಿಯೋಜಿತವಾಗಿರುವುದಿಲ್ಲ. ಆನಂತರ ಈ ಚಳವಳಿಗಳು ಬರಹ, ವಿಶ್ಲೇಷಣೆಗಳಲ್ಲಿ ನಿರೂಪಿತವಾಗುವಾಗ ಅವುಗಳು ಒಂದು ಪೂರ್ವನಿಶ್ಚಿತ ಆಕೃತಿಯನ್ನು ಸೇರಿಕೊಳ್ಳುತ್ತವೆ. ಉದಾಹರಣೆಗೆ ಮಹಾಡ್ ಸಮ್ಮೇಳನವು ಒಂದು ಸಮ್ಮೇಳನವಾಗಿ ಆಯೋಜಿತವಾಗಿತ್ತು, ಹೋರಾಟವಾಗಿ ಅಲ್ಲ. ಚವಡರ ಕೆರೆಯ ನೀರನ್ನು ಕುಡಿಯುವುದು ಒಂದು ಬಗೆಯ contingent ತೀರ್ಮಾನವಾಗಿತ್ತು. ಹಾಗೆ ನೋಡಿದರೆ ಅಂಥದೇ ಘಟನೆಯೊಂದು ಆಗಲೇ ನಡೆದಿದ್ದರೂ ಪ್ರಸಿದ್ಧಿಗೆ ಬಂದಿರಲಿಲ್ಲ. ಅಲ್ಲದೆ ಒಂದು ಮುನಿಸಿಪಾಲಿಟಿಯೂ ಬೋಳೆ ಪ್ರಸ್ತಾಪವನ್ನು ಸ್ವೀಕಾರ ಮಾಡುವುದರ ಹಿಂದೆ ಆಕ್ರಿಯೆಯ ಪ್ರಾಮುಖ್ಯತೆಯ ಕೆಲವರಿಗಾದರೂ ಹೊಳೆದಿರಬಹುದು. ಸ್ವಲ್ಪ ವಿಸ್ತರಿಸಿ ನೋಡಿದರೆ ಬ್ರಿಟಿಷ್ ವಸಾಹತುಶಾಹಿಯು ದಲಿತ ಜನಾಂಗಗಳಿಗೆ ನಾಗರಿಕ ಹಕ್ಕುಗಳನ್ನು ನೀಡಬೇಕೆಂಬ ಒತ್ತಾಸೆ, ನಿರೀಕ್ಷೆಗಳು ಅಂಬೇಡ್ಕರ್ ಅವರ ಕ್ರಿಯಾಶೀಲತೆಯ ಆಧಾರವೂ ಆಗಿದ್ದವು. ಅಮೇರಿಕದ ಅತ್ಯಂತ ಪ್ರಗತಿಪರ ಚಿಂತಕರಾಗಿದ್ದ ಜಾನ್ ಡೂಯಿ (John Dewey) ಪ್ರಜಾಪ್ರಭುತ್ವದ ಬಗ್ಗೆ ಮಾಡಿದ ಚಿಂತನೆಯ ಪ್ರಭಾವವು ಶಿಷ್ಯರಾಗಿದ್ದ ಅಂಬೇಡ್ಕರ್ ಅವರ ಮೇಲೆ ಗಾಢವಾಗಿತ್ತು. ಇವೆಲ್ಲವೂ ಸೇರಿದ್ದರಿಂದಲೆ ಪೂರ್ವನಿಯೋಜಿತವಲ್ಲದ ಚವಡರ್ ಕೆರೆಯ ಘಟನೆಯು ಸಹಜವಾಗಿ ನಡೆಯಿತು. ಇಷ್ಟೇ ಅನಿರೀಕ್ಷಿತವೆಂದರೆ ಮಹಾಡ್‍ನ ದೇವಾಲಯದ ಅರ್ಚಕನು ದಲಿತರು ಕೆರೆಯ ನೀರು ಕುಡಿದು ಈಗ ದೇವಾಲಯಕ್ಕೆ ನುಗ್ಗುತ್ತಿದ್ದಾರೆ ಎಂದು ಬೀದಿಯಲ್ಲಿ ಕಿರುಚುತ್ತಾ ಓಡಿದ್ದು. ಇದರಿಂದ ಹಿಂಸೆಗಿಳಿದ ಸವರ್ಣೀಯರು ಅನೇಕ ದಲಿತರ ಮೇಲೆ ಹಲ್ಲೆ ಮಾಡಿದರು. ತಮಗೆ ದೇವಾಲಯದ ಪ್ರದೇಶದ ಉದ್ದೇಶವೇ ಇಲ್ಲವೆಂದು ಅಂಬೇಡ್ಕರ್ ಖಚಿತವಾಗಿ ತಿಳಿಸಿದರೂ ಮಹಾಡ್‍ನ ಆಡಳಿತ ಏನನ್ನೂ ಮಾಡಲಿಲ್ಲ. ತೇಲ್ತುಂಬ್ಡೆಯವರು ಶ್ರಮಪಟ್ಟು ಸಂಗ್ರಹಿಸಿದ ಅನೇಕ ಸರಕಾರಿ ದಾಖಲೆಗಳ ಪ್ರಕಾರ ಬ್ರಿಟಿಷ್ ವಸಾಹತುಶಾಹಿಯು ವೈರುದ್ಧ್ಯಗಳ ಗೋಜಲಾಗಿತ್ತು. Rational ಆದ, ನ್ಯಾಯಬದ್ಧವಾದ ನಾಗರಿಕ ಕಾನೂನುಗಳನ್ನು ತರುವುದಾಗಿ ತನ್ನನ್ನು ತಾನೇ ಸಮರ್ಥಿಸಿಕೊಂಡ ಅದು ಮೇಲ್ವರ್ಗ, ಮೇಲ್ಜಾತಿಗಳ ಪರವಾಗಿಯೇ ಇತ್ತು. ಚವದಾರ್ ಕೆರೆಯು ಸಾರ್ವಜನಿಕವಲ್ಲವೆಂದು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ ಸವರ್ಣೀಯರನ್ನೂ ಎದುರು ಹಾಕಿಕೊಳ್ಳದೆ ವಿಳಂಬದ ಧೋರಣೆಯನ್ನು ಅದು ತಾಳಿತು. ಚವದರ್ ಕೆರೆಯ ಕೇಸನ್ನು ಅಂಬೇಡ್ಕರ್ ಗೆದ್ದಿದ್ದು 10 ವರ್ಷಗಳ ನಂತರ! ಕೃತಿಯಲ್ಲಿ ದೊರೆಯುವ ಹೇರಳ ದಾಖಲೆಗಳು ಮತ್ತು ಪತ್ರಿಕಾ ವರದಿಗಳಿಂದ ಸನಾತನ ಸವರ್ಣೀಯ ವರ್ಗವು ಹೀನವಾಗಿ ನಡೆದುಕೊಂಡದ್ದು ಸ್ಪಷ್ಟವಾಗಿದೆ. ಭಾರತದ ಸ್ವಾತಂತ್ರ್ಯವು ಬರುವವರೆಗೆ ಪ್ರತಿಯೊಂದು ಸಮಾನತೆ, ನ್ಯಾಯದ ಹೋರಾಟಗಳ ವಿರುದ್ಧ ಅದು ಅಸಹ್ಯವಾಗಿ, ಅಮಾನುಷವಾಗಿ ಮಾತ್ರ irrational ಆಗಿ ನಡೆದುಕೊಂಡಿವೆ. ಹೀಗಾಗಿಯೇ ರಾಜಾರಾಮ್ ಮೋಹನ ರಾಯ್, ಈಶ್ವರಚಂದ್ರ ವಿದ್ಯಾಸಾಗರ, ಗಾಂಧಿ ಮುಂತಾದ ಪ್ರಗತಿಪರ ಚಿಂತಕರು ಅವಮಾನ, ಅರೋಪ ಹಾಗೂ ಹಿಂಸೆಗಳಿಗೆ ಈ ವರ್ಗದಿಂದ ಗುರಿಯಾದದ್ದು ಭಾರತದ ಕರಾಳ ಚರಿತ್ರೆಯಾಗಿದೆ. ಮುಂದೆ ನಡೆದ ನಾಸಿಕ್‍ನ ಕಾಶಾರಾಮ್ ದೇವಾಲಯಕ್ಕೆ ದಲಿತ ಪ್ರವೇಶದ ಚಳವಳಿಯ ವಿವರಗಳು ಈ ಮಾತಿಗೆ ದ್ಯೋತಕವಾಗಿವೆ.

ಮತ್ತೆ ಮಹಾಡ್‍ನಲ್ಲಿ ನಡೆದ ಸಮಾವೇಷದಲ್ಲಿ ಮಹಾರರು ಅವಶ್ಯವಿದ್ದರೆ ಹೋರಾಟಕ್ಕೆ ಸಿದ್ಧರಾಗಿದ್ದರು. ಆದರೆ ಅಷ್ಟರಲ್ಲಿ ಚವದಾರ್ ಕೆರೆಯ ವಿದ್ಯಮಾನವು ಹೊಸ ತಿರುವು ಪಡೆದುಕೊಂಡು ಅದು ಸಾರ್ವಜನಿಕವಲ್ಲವೆಂದು ಮುನಿಸಿಪಾಲಿಟಿಯ ಹಿಂದಿನ ನಿರ್ಣಯವನ್ನು ವಾಪಸ್ಸು ತೆಗೆದುಕೊಂಡಿತ್ತು. ಹೀಗಾಗಿ ಅಂಬೇಡ್ಕರ್ ಅವರು ಕೇವಲ ಸಾಂಕೇತಿಕ ಪ್ರತಿಭಟನೆ ಸಾಕು ಎಂದು ನಿರ್ಧರಿಸುತ್ತಾರೆ. ಸಭೆಯಲ್ಲಿ ನಡೆದ ಚರ್ಚೆಗಳು, ಅಂಬೇಡ್ಕರ್ ಅವರ ಪ್ರಸ್ತಾಪಗಳು, ಸಮಾವೇಶಕ್ಕೆ ಬಂದವರ ಪ್ರತಿಕ್ರಿಯೆ, ಅಂತಿಮ ತೀರ್ಮಾನ ಇವುಗಳು ಅದೆಷ್ಟು ಸಂಕೀರ್ಣವಾಗಿವೆಯೆಂದರೆ ಅವುಗಳ ಚರ್ಚೆಯೇ ದೀರ್ಘ ಪ್ರಬಂಧದ ವಸ್ತುವಾಗಬಹುದು. ನನ್ನ ದೃಷ್ಟಿಯಲ್ಲಿ ಈ ಭಾಗದ ಓದು ಇಲ್ಲಿಯವರೆಗೆ ಸಮಾಜ ವಿಜ್ಞಾನಗಳಲ್ಲಿ ನಾವು ಕಲಿತ ಯೂರೋ ಕೇಂದ್ರಿತ ವೈಚಾರಿಕ ಚೌಕಟ್ಟುಗಳನ್ನು ನೆನಪಿಗೂ ತರುತ್ತದೆ ಮತ್ತು ಭಾರತದ ಚರಿತ್ರೆ ಹಾಗೂ ಸಮಾಜಗಳ ವಾಸ್ತವಗಳಲ್ಲಿ ಅವು negotiate ಆಗುವ ವಿಭಿನ್ನವಾದ ಕ್ರಮಗಳನ್ನು ಎದುರಿಗೆ ಇಡುತ್ತದೆ. ಈ ಓದಿನಲ್ಲಿ ಮೊದಲು ಏಟು ಬೀಳುವುದು ಸ್ಥಳೀಯ elite ವರ್ಗವು ಅನಕ್ಷರಸ್ಥ ಸಬ್-ಆಲ್ಟರ್ನ್ ಸಮುದಾಯವನ್ನು ಆಧುನಿಕ ರಾಜಕೀಯದ (ಅಂದರೆ ಕಾನೂನುವ್ಯವಸ್ಥೆ, ಖಾಸಗಿ-ಸಾರ್ವಜನಿಕ ಪರಿಕಲ್ಪನೆಗಳು, ನಾಗರಿಕ ಹಕ್ಕುಗಳು ಮತ್ತು ಪ್ರಭುತ್ವವು ಅವುಗಳ ಮೇಲೆ ಹೇರುವ ಮಿತಿಗಳು) ಅತಿ ಮಹತ್ವದ ಹಂತದಲ್ಲಿ ಮುನ್ನಡೆಸುವ ಬಗೆಗಿನ ಪರಿಕಲ್ಪನೆಗಳ ಮೇಲೆ ಎರಡನೇಯದು ಸಾಮುದಾಯಿಕ ನಡವಳಿಕೆಯು ಆಧುನಿಕ ಪ್ರಜಾಪ್ರಭುತ್ವದ civil society ಯ ನಡವಳಿಕೆಗೆ ವಿರುದ್ಧವೆನ್ನುವ ನಂಬಿಕೆಯ ಮೇಲೆ ಮೂರನೇಯದಾಗಿ ಒಂದು ಹೋರಾಟದ ಸನ್ನಿವೇಶವು ಹೇಗೆ ಪ್ರಜಾಪ್ರಭುತ್ವವಾದಿ ನಡವಳಿಕೆ ಹಾಗೂ ಕ್ರಮಗಳನ್ನು ಸಂಕೀರ್ಣಗೊಳಿಸುತ್ತದೆ ಎನ್ನುವ ಹೊಸ ನೋಟವನ್ನೇ ಈ ಓದು ನಮಗೆ ಕೊಡಬಲ್ಲದು. ಈ ಸಮ್ಮೇಳನದಲ್ಲಿಯೇ ಅಂಬೇಡ್ಕರ್ ಮಹಾರ್ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ್ದು ಇಂದಿನ ಸ್ತ್ರೀವಾದಿ ನೋಟಕ್ರಮದಲ್ಲಿ ವೈರುಧ್ಯಗಳಿಂದ ಕೂಡದ ಹಾಗೆ ಕಂಡರೂ ಒಂದು ಅಪೂರ್ವ ಚಾರಿತ್ರಿಕ ಘಟನೆಯಾಗಿದೆ.

ತೇಲ್ತುಂಬ್ಡೆ ಮುನ್ನುಡಿಯಲ್ಲಿ ಕೇಳುವ ಪ್ರಶ್ನೆಯೆಂದರೆ ಚವದರ್ ಕೆರೆಯ ನೀರು ಕುಡಿದದ್ದು, ಮನುಸ್ಮೃತಿಯ ಭಾಗಗಳನ್ನು ಸುಟ್ಟಿದ್ದು ಫ್ರೆಂಚ್ ಕ್ರಾಂತಿಯ ಪ್ರಮುಖ ಘಟನೆಯಾದ ಬ್ಯಾಸ್ಟೀಯ್ ಸೆರೆಮನೆಯ ಮೇಲಿನ ಲಗ್ಗೆಯಂಥ ಕ್ರಾಂತಿಕಾರಿ ಘಟನೆಯಾಗಿತ್ತೆ? ಅದರಿಂದ ದಲಿತರ ಏನಾದರೂ ಸಾಮಾಜಿಕ ಬದಲಾವಣೆಗಳು ಬಂದವೆ? ಭಾರತದ ಚರಿತ್ರೆ ದೊಡ್ಡ ಹೊರಳು ಕಂಡಿತೆ? ಉತ್ತರ ‘ಇಲ್ಲ’ ಎನ್ನುವುದು. ಹಾಗಿದ್ದರೆ ಮಹಾಡ್ ಸತ್ಯಾಗ್ರಹವು ಅದೇಕೆ ಇಷ್ಟು ಮುಖ್ಯ? ಅವರು ವಿವರಿಸುವಂತೆ ಇದು ಅರ್ಥವಾಗಬೇಕಾದರೆ ಜಾತಿಗ್ರಸ್ತ ನಾಗರಿಕತೆಯೊಂದರ ಸಮಗ್ರ ಇತಿಹಾಸದ ಹಿನ್ನೆಲೆಯಲ್ಲಿ ಅದನ್ನು ಇಟ್ಟು ನೋಡಬೇಕು.

ಈ ಕೃತಿ ಎರಡು ಸಂಪುಟಗಳಲ್ಲಿ ಈ ಕೆಲಸವನ್ನು ಮಾಡುತ್ತದೆ. ವೈಯಕ್ತಿಕವಾಗಿ ನನ್ನ ಓದಿನ ಅನುಭವವೆಂದರೆ ಅಂಬೇಡ್ಕರ್ ಅವರ ಮಾತು, ನಡೆ, ತೀರ್ಮಾನಗಳು ಎಲ್ಲವೂ ಒಂದು ಮಹಾನ್ ಪ್ರಜಾಪ್ರಭುತ್ವವಾದಿ ಚೇತನದ ಭಾಗಗಳಾಗಿ ಅದೆಷ್ಟು ಸಹಜವಾಗಿ ಬೆರೆತುಕೊಳ್ಳುತ್ತವೆ ಎನ್ನುವ ಅಚ್ಚರಿ. ಪಶ್ಷಿಮದ ಅತ್ಯುನ್ನತ ಚಿಂತನೆಗಳನ್ನು ಅರಗಿಸಿಕೊಂಡು ಅಕ್ಷರಸ್ಥವಲ್ಲದ ತನ್ನ ಸಮುದಾಯದ ಪ್ರಜ್ಞೆಯ ಭಾಗವಾಗಿಸುವ ಅವರ ಅದ್ಭುತವಾದ ಪ್ರತಿಭೆ. ಗಾಂಧಿಯವರ ಮೌಲ್ಯವಾದ ಅಹಿಂಸೆಯನ್ನು ಸಮಗ್ರವಾಗಿ ಇಲ್ಲಿ ವರೆಗೂ ಪಾಲಿಸಿದವರು ಈ ದೇಶದ ದಲಿತರು ಮಾತ್ರ. ಇನ್ನಿತರ ಎಲ್ಲಾ ಸಮುದಾಯಗಳು ಹಿಂಸೆಯನ್ನು ಯಾವುದೋ ಸಂದರ್ಭದಲ್ಲಿ ಆಯ್ಕೆ ಮಾಡಿಕೊಂಡವು. ಇಂದಿನ ಸಂದರ್ಭದಲ್ಲಿ , ಪೈಶಾಚಿಕವಾದ ಹಿಂಸೆಯಲ್ಲಿ ತೊಡಗಿರುವವರು ಯಾರು ಎಂದು ಬಿಡಿಸಿ ಹೇಳಬೇಕಾಗಿಲ್ಲ, ಚರಿತ್ರೆಯ ವ್ಯಂಗ್ಯವೆಂದರೆ ಗಾಂಧಿಯವರ ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಅನುಯಾಯಿಗಳೆಂದರೆ ಗಾಂಧಿಯವರನ್ನು ಇಷ್ಟಪಡದ ದಲಿತ ಸಮುದಾಯಗಳೇ.

ಈ ಅಂಕಣದ ಹಿಂದಿನ ಬರೆಹಗಳು :

ನಮ್ಮ ಕಾಲದಲ್ಲಿ ಓದಲೇಬೇಕಾದ ಎರಡು ಕೃತಿಗಳು

ಅನೇಕ ಶಕುಂತಲೆಯರು

ಕ್ಯಾಲಿಬನ್‍ನ ದಶಾವತಾರಗಳು

ಪಾಶ್ಚಾತ್ಯ ಸಾಹಿತ್ಯ ಮತ್ತು ಜೆಂಡರ್‌ ನ್ಯಾಯದ ಪರಿಭಾಷೆ

ಬದುಕು-ಸಾವುಗಳ ಸಹಜ ಲಯ ತಪ್ಪಿಸುವ ಅಸಂಗತ-ಅರ್ಥಶೂನ್ಯ

 

MORE NEWS

ಅನಾಮಿಕರಾಗಿ ಉಳಿದ ಮಹಾನ್ ಗಾಯಕಿಯರು...

17-04-2021 ಬೆಂಗಳೂರು

ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಎನ್ನು...

‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳ...

15-04-2021 ಬೆಂಗಳೂರು

ಸ್ವಜನ-ಸ್ವಜಾತಿ ಪಕ್ಶಪಾತಿಯ ಇಂದಿನ ‘ಜಾತಿಶ್ರೀ’ ಸ್ವಾಮೀಜಿಗಳು ಜ್ಞಾನಯೋಗಿ ತತ್ವದ ಅರ್ಥವನ್ನೇ ನಾಶ ಮಾಡುತ...

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್...

14-04-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...