"ಗನ್ನೇರಿ" ಎಂಬ ಅಪರೂಪದ ಖಂಡಕಾವ್ಯ: ಎಚ್.ಎಸ್. ಸತ್ಯನಾರಾಯಣ


ಗನ್ನೇರಿಯಂತಹ ಅಸಾಮಾನ್ಯ ಹೆಣ್ಣುಮಕ್ಕಳು ನಮ್ಮ ನಡುವೆ ಅನೇಕರಿರುತ್ತಾರೆ, ಅವರತ್ತ ಅಲಕ್ಷಯ ಸಲ್ಲದೆಂಬುದನ್ನು ಪ್ರತಿಪಾದಿಸುವುದು ಈ ಖಂಡಕಾವ್ಯದ ಮುಖ್ಯ ಉದ್ದೇಶವಾಗಿರುವಂತಿದೆ. ಇಂತಹ ಆಶಯದ ಮತ್ತೊಂದು ಕಾವ್ಯ ಕನ್ನಡದಲ್ಲಿ ಬಂದಿಲ್ಲವೆಂಬುದೇ ಹೆಚ್ಚುಗಾರಿಕೆ ಎನ್ನುತ್ತಾರೆ ಲೇಖಕ ಎಚ್.ಎಸ್. ಸತ್ಯನಾರಾಯಣ. ಹಿರಿಯ ಕವಿ ಸ. ರಘುನಾಥರ ಖಂಡಕಾವ್ಯ ಗನ್ನೇರಿಯ ಕುರಿತು ಆವರು ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಹಿರಿಯ ಕವಿ ಸ. ರಘುನಾಥರ ಖಂಡಕಾವ್ಯ ಗನ್ನೇರಿಗೆ ಪ್ರತಿಷ್ಠಿತ ಪುತಿನ ಕಾವ್ಯ ಪುರಸ್ಕಾರ ದೊರೆತಿದೆ. ದೀರ್ಘ ಕಾಲ ಕಾವ್ಯ ರಚನೆಯಲ್ಲಿ ತೊಡಗಿಕೊಂಡಿದ್ದರೂ ರಘುನಾಥರ ಕಾವ್ಯದ ಬಗ್ಗೆ ನಾವು ಚರ್ಚೆ ಮಾಡಿರುವುದು ತುಂಬ ಕಡಿಮೆ. ವಿಮರ್ಶೆ, ಪ್ರಶಸ್ತಿ ಮುಂತಾದವಕ್ಕೆ ತೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಬರೆದು ಖುಷಿಪಡುವುದು ರಘುನಾಥರ ಗುಣ. ಗನ್ನೇರಿಯಂತಹ ಖಂಡಕಾವ್ಯವನ್ನೂ ಯುವ ಬರಹಗಾರರಾದ ದಿಲೀಪ್ ಕುಮಾರ್ ಮತ್ತು ಕೃಷ್ಣದೇವಾಂಗ ಮಠ ಅವರುಗಳ ಒತ್ತಾಸೆಗೆ ಕಟ್ಟುಬಿದ್ದು ಬರೆದಿದ್ದಾರೆ.

ಗನ್ನೇರಿ ಎಂದರೆ ಕೆಂಪು ಕಣಗಿಲೆ ಹೂವು. ಇದು ಹಳಗನ್ನಡ ಕಾವ್ಯಗಳಲ್ಲಿ ಉಲ್ಲೇಖಗೊಂಡಿದೆ. ಹರಿಹರನ ರಗಳೆಗಳಲ್ಲಿ ಮತ್ತೆ ಮತ್ತೆ ಚೆಂಗಣಿಗಿಲೆಯ ಪ್ರಸ್ತಾಪ ಬರುತ್ತದೆ. ಶಿವನಿಗೆ ತುಂಬ ಪ್ರಿಯವಾದ ಹೂವೆಂದು ಹರಿಹರ ವರ್ಣಿಸಿದ್ದಾನೆ. ಚೆಂಗಣಗಿಲೆ ಋತುಮಾನವನ್ನು ಅವಲಂಬಿಸಿ ಅರಳುವ ಹೂವಲ್ಲ. ಹೆಚ್ಚು ಆರೈಕೆ ಬಯಸದೆ, ಮಳೆ,ಗಾಳಿ, ಬಿಸಿಲಿನ್ನೆದುರಿಸಿ ಎಲ್ಲೆಡೆ ಅರಳಿ ನಗುವ ಅದರ ಜೀವನಪ್ರೀತಿಯಿಂದ ಜನಮಾನಸದಲ್ಲಿ ಕೆಂಪು ಕಣಗಿಲೆಗೆ ಅಚ್ಚಳಿಯದ ಸ್ಥಾನವಿದೆ. ಇದನ್ನು ಗನ್ನೇರಿ ಎಂಬ ತೆಲುಗು ಸ್ಪರ್ಶದ ಹೆಸರಿಂದ ಕೋಲಾರ ಸುತ್ತಮುತ್ತಲ ಜನ ಕರೆಯುತ್ತಾರಾದ್ದರಿಂದ ರಘುನಾಥರು ತಮ್ಮ ಕಾವ್ಯದ ನಾಯಕಿಯನ್ನು ಗನ್ನೇರಿ ಎಂದು ಕರೆದಿರಬಹುದು. ಇಲ್ಲಿ ಬರುವ ಗನ್ನೇರಿಕೂಡ ಚೆಂಗಣಗಿಲೆಯಂತೆ ಬದುಕಿನ ಕಷ್ಟಗಳನ್ನು ಎದುರಿಸಿ ನಿಂತು ತನ್ನ ಅದಮ್ಯ ಜೀವನ ಪ್ರೀತಿಯನ್ನು ಮೆರೆಯುವವಳು. ಬೀದಿ ಬದಿ ಬೆಳೆಯುವ ಆ ಹೂವಿನಂತೆ ಅತಿ ಸಾಮಾನ್ಯ ನೆಲೆಯ ಸ್ಥಳೀಯ ಪ್ರತಿಭೆ. ವಿಶ್ವಾತ್ಮಕ ನೆಲೆಯ ಪುರಾಣ ಪಾತ್ರಗಳನ್ನು ಕಾವ್ಯದ ನಾಯಕರನ್ನಾಗಿಸದೆ, ಕಡುಬಡತನದ ಕಷ್ಟಗಳನ್ನೆದುರಿಸಿ ಘನತೆಯ, ಆತ್ಮಗೌರವದ ಬದುಕನ್ನು ಕಟ್ಟಿಕೊಳ್ಳುವ, ತನ್ನಂತಹ ಅನೇಕರ ಅನೇಕ ಕಷ್ಟಗಳಲ್ಲಿ ಸಹಭಾಗಿಯಾಗುವ ಗನ್ನೇರಿಯನ್ನು ಕಾವ್ಯದ ನಾಯಕಿಯನ್ನಾಗಿಸಿಕೊಂಡಿರುವುದು ರಘುನಾಥರ ಹೆಚ್ಚುಗಾರಿಕೆ ಮತ್ತಿ ಕವಿ ಧಮನಿತರ ಪರವಾಗಿದ್ದಾರೆಂಬುದಕ್ಕೆ ಮತ್ತು ಕನ್ನಡ ಕಾವ್ಯಕ್ಕೆ ಹೊಸತನವನ್ನು ತಂದುಕೊಡುವಲ್ಲಿ ಉತ್ಸುಕರಾಗಿದ್ದಾರೆಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಗನ್ನೇರಿಯ ತಾಯಿ ಅಲಮೇಲು. ಸಂಪಂಗಿಯನ್ನು ಮದುವೆಯಾಗಿ ಹೊಟ್ಟೆಬಟ್ಟೆಗೆ ಕೊರೆಯಿಲ್ಲದೆ ಅಲಮೇಲುಗೆ ಮಕ್ಕಳಿಲ್ಲವೆಂಬ ಕೊರಗು. ಬಸಿರಾಗಿಯೇ ತವರಿನ ಹೊಸ್ತಿಲು ತುಳಿಯುವ ಸಂಕಲ್ಪದ ಆಕೆ ಕೊನೆಗೂ ಗರ್ಭ ಧರಿಸುತ್ತಾಳೆ. ಅವಳ ಗರ್ಭಿಣಿಯಾದಾಗ ತಿಂಗಳು ತಿಂಗಳು ಆಗುವ ಸಂಕಟ ಕಳೆಯಲು ಬರುವ, ಯಾವ ತಿಂಗಳ ಸಂಕಟ ನಿವಾರಣೆಗೆ ಏನು ತಿನ್ನಬೇಕು, ಏನು ತಿನ್ನಬಾರದೆಂದು ರೂಢಿಗತ ಆಚರಣೆಗಳನ್ನು ಕೈಗೊಳ್ಳಲೆಂದು ಬರುವ ವರದಮ್ಮನ ಚಿತ್ರಣ ಸೊಗಸಾಗಿದೆ. ಬಸಿರೆಂದರೆ ಅದೊಂದು ರೋಗವೆಂದು ಭಾವಿಸಿ ವೈದ್ಯರಿಗೆ ದುಡ್ಡುತೆತ್ರು ಬರುವ ಇಂದಿನ ದಿನಗಳಲ್ಲಿ ವರದಮ್ಮನ ಆಚರಣೆಗಳು ಗರ್ಭಧರಿಸುವುದು, ಹೆರಿಗೆಯಾಗುವುದು ಪ್ರಕೃತಿಸಹಜವಾದ ಪ್ರಕ್ರಿಯೆಯೆಂಬುದನ್ನು ನೆನಪು ಮಾಡುತ್ತಲೇ ನಾವು ಮರೆತುಬಿಡಬಹುದಾದ ನಾಟಿ ಮದ್ದಿನ ಜ್ಞಾನಶಾಖೆಗಳನ್ನು ನೆನಪಿಸುವಂತಿದೆ. ಹಚ್ಚೆ ಪುಲ್ಲಮ್ಮನ ಹಚ್ಚೆ ಹಾಡುಗಳು, ಅವರವರ ಮನದ ಕಾಮನೆಗಳಿಗೆ ತಕ್ಕಂತೆ ಆಕೆ ಹಚ್ಚೆ ಮೂಡಿಸುವ ರೀತಿಗಳು ಟ್ಯಾಟೋ ಕಾಲದ ನಮ್ಮಲ್ಲಿ ಅಚ್ಚರಿ ಮೂಡಿಸುತ್ತದೆ.

ಮನೆಯಲ್ಲಿ ಬಸುರಿಯಿದ್ದರೆ ಸಂಭವಿಸಬಹುದಾದ ಎಲ್ಲ ಸಂತಸದ ಕ್ಷಣಗಳನ್ನೂ ಅಲಮೇಲಿ-ಸಂಪಗಿಯರು ಸವಿಯುತ್ತಾರೆ. ಅಲಮೇಲಿಗೆ ಮನೆಯ ಎತ್ತು, ಹಸು ಕರುಗಳೊಂದಿಗಿನ ಗೆಳೆತನ, ಮನೆ, ಹೊಲಗದ್ದೆಗಳ ಒಪ್ಪ ಓರಣದ ಬಗೆಗಿರುವ ಕಾಳಜಿಗಳೆಲ್ಲವೂ ಇಂದಿನ ಹಳ್ಳಿಗಾಡ ಹೆಣ್ಣುಮಕ್ಕಳ ಅಂತಃಕರಣವನ್ನು ತೆರೆದು ತೋರುತ್ತದೆ. ಅಲಮೇಲಿಯ ಗಂಡ ಸಂಪಂಗಿ, ತಾಯಿ, ತಂದೆ, ಅಣ್ಣ, ಅತ್ತಿಗೆ ಎಲ್ಲರೂ ಹೃದಯವಂತರು ಮತ್ತು ಕೈಲಾದಮಟ್ಟಿಗೆ ಕೌಟುಂಬಿಕ ಮೌಲ್ಯವನ್ನು ಪೊರೆಯಬಲ್ಲವರು. ಅಲಮೇಲಿ ಗನ್ನೇರಿಯನ್ನು ಹೆರುವುದು, ಗನ್ನೇರಿಯ ಬಾಲ್ಯ, ತುಂಟತನ, ನಾಯಿ, ಬೆಕ್ಕು, ದನಕರುಗಳೊಂದಿಗೆ ಆಡುವುದು, ಕತೆ ಕೇಳದೆ ಊಟ ಮಾಡೆನೆಂದು ಪೀಡಿಸುವುದು-ಇಲ್ಲೆಲ್ಲ ಕರಘುನಾಥರ ಕಾವ್ಯಕಲೆ ಅದ್ಭುತವಾಗಿ ಮಿಂಚಿದೆ. ಕವಿಯ ಅಂತಃಕರಣವೂ ಪಾತ್ರಗಳ ಜೊತೆ ಮಿಳಿತಗೊಂಡಿದೆ.

ಗನ್ನೇರಿ ಓದಿನಲ್ಲಿ ಚುರುಕಾದ ಹುಡುಗಿ, ಎಳೆಯ ವಯಸ್ಸಿನಲ್ಲಿ ಶಾಲೆಯ ಸೌಕರ್ಯಕ್ಕಾಗಿ ಟೀಕಿಸಿದ ದಿಟ್ಟೆ, ತಾಯಿ ಅಲಮೇಲಿಗೆ ಅಕ್ಷರಾಭ್ಯಾಸ ಮಾಡಿಸಿ, ತನ್ನೊಂದಿಗೆ ತಾಯಿಯೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣಳಾಗುವಂತೆ ಮಾಡಿದ ದಿಟ್ಟೆ. ಊರಿನ ಇತರ ಹೆಣ್ಣುಮಕ್ಕಳೂ ಅಕ್ಷರಕ್ಕಾಗಿ ಹಂಬಲಿಸುವಂತೆ ಮಾಡುವ ಜಾಣೆ, ಸಹಪಾಠಿಗಳ ಕಷ್ಟಕ್ಕೆ ಹೆಗಲುಕೊಡುವ ಗಟ್ಟಿಗಿತ್ತಿ. ಬರುಬರುತ್ತಾ ಅವಳ ಲೋಕ ಪ್ರೀತಿ ಬೆಳೆಯುತ್ತಾ ಹೋಗುತ್ತದೆ. ತನ್ನ ಸುತ್ತಲ ಜೀವಗಳ ಬದುಕು ಹಸನುಗೊಳ್ಳಬೇಕೆಂಬ ಆಶಯದಿಂದ ಊರಿನ ಮಗಳೇ ಆಗಿಬಿಡುವ ಅವಳ ಪಾದರಸದಂತಹ ವ್ಯಕ್ತಿತ್ವದಿಂದ ಗನ್ನೇರಿಯ ಕತೆ ಕುತೂಹಲದಿಂದ ಓದಿಸಿಕೊಳ್ಳಿತ್ತಾ ಹೋಗುತ್ತದೆ. ಗನ್ನೇರಿಯ ಕತೆಯ ನೆಪದಲ್ಲಿ ನಾಗರೀಕ ಜಗತ್ತಿನ ಅಪಸವ್ಯಗಳು, ದೊಡ್ಡವರ ಸಣ್ಣತನ, ಅಧಿಕಾರಿಗಳ ಭ್ರಷ್ಟಮುಖ, ಶಿಕ್ಷಣ ವ್ಯವಸ್ಥೆಯ ಅಪಮೌಲ್ಯಗಳು, ಲಿಂಗತಾರತಮ್ಯ ಮುಂತಾದ ಸಂಗತಿಗಳನ್ನೆಲ್ಲಾ ಹಳ್ಳಿಗಾಡಿನ ಮುಗ್ಧ ಜೀವಿಗಳು ಎದುರಿಸಿ ನಿಲ್ಲಬೇಕೆಂಬುದನ್ನು ಕವಿ ವಿವರಿಸುವ ಪ್ರಯತ್ನ ಮಾಡಿದ್ದಾರೆ.

ಗನ್ನೇರಿಯಂತಹ ಅಸಾಮಾನ್ಯ ಹೆಣ್ಣುಮಕ್ಕಳು ನಮ್ಮ ನಡುವೆ ಅನೇಕರಿರುತ್ತಾರೆ, ಅವರತ್ತ ಅಲಕ್ಷಯ ಸಲ್ಲದೆಂಬುದನ್ನು ಪ್ರತಿಪಾದಿಸುವುದು ಈ ಖಂಡಕಾವ್ಯದ ಮುಖ್ಯ ಉದ್ದೇಶವಾಗಿರುವಂತಿದೆ. ಇಂತಹ ಆಶಯದ ಮತ್ತೊಂದು ಕಾವ್ಯ ಕನ್ನಡದಲ್ಲಿ ಬಂದಿಲ್ಲವೆಂಬುದೇ ಹೆಚ್ಚುಗಾರಿಕೆ. ಸ್ಥಳಿಯ ನುಡಿಗಟ್ಟುಗಳ ಧಾರಾಳ ಬಳಕೆ, ಒಂದೇ ಕಾವ್ಯ ಪ್ರಕಾರಕ್ಕೆ, ಛಂದೋಲಯಕ್ಕೆ ಜೋತು ಬೀಳದೆ, ಗದ್ಯಗಂಧಿ ಲಯ, ನಾಲ್ಕುಸಾಲು, ಎರಡು ಸಾಲು, ಎಂಟುಸಾಲಿನ ಪದಗತಿ, ಸಾಂಗತ್ಯ, ಕಂದಗಳ ಹೊಸರೂಪ ಇವೇ ಮುಂತಾದ ಗುಣಗತಿಯಲ್ಲಿ ಇಡೀ ಕಾವ್ಯವನ್ನು ಕವಿ ಮುನ್ನಡೆಸಿದ್ದಾರೆ. ಹಾಡಬಹುದಾದ ಲಯವೊಂದು ಇಡೀ ಕಾವ್ಯದುದ್ದಕ್ಕೂ ಅಂತರ್ಗತವಾಗಿದೆ ಎಂಬ ಭಾವನೆ ಓದುಗರನ್ನು ಆವರಿಸುವ ಶೈಲಿಯೊಂದು ರಘುನಾಥರಿಗೆ ಸಿದ್ಧಿಸಿದೆ.

ಇಷ್ಟೆಲ್ಲಾ ಗುಣಗಳ ಜೊತೆಯಲ್ಲೆ ಮರೆಯದೆ ಹೇಳಬೇಕಾದ ಮಾತೆಂದರೆ, ಆರಂಭದಲ್ಲಿ ಕಾಣುವ ಕಾವ್ಯಗುಣ ಕಾವ್ಯ ಮುಂದುವರೆದಂತೆ ಅಲ್ಲಲ್ಲಿ ಕಣ್ಮರೆಯಾಗುತ್ತದೆ. ಮೊದಮೊದಲಲ್ಲಿ ಈ ಕಾವ್ಯ ಹುಟ್ಟಿಸುವ ನಿರೀಕ್ಷೆಗಳೆಲ್ಲವೂ ಕೆಲವೊಂದು ಕಡೆ ತಾಳ ತಪ್ಪಿದಂತೆ, ಲಯ ಕಳೆದುಕೊಂಡ ಹಾಡಿನಂತೆ ಕಾಣುತ್ತದೆ. ಇನ್ನಷ್ಟು ತಿದ್ದಿತೀಡುವ ಅಗತ್ಯವಿತ್ತೇನೋ ಎನಿಸುತ್ತದೆ.

ಆದರೆ ಕಾವ್ಯಜ್ಞತೆಗೆ ಇದರಿಂದ ಭಂಗವೊದಗುವುದಿಲ್ಲ ಎಂಬುದನ್ನು ಒತ್ತಿ ಹೇಳಲೇಬೇಕು. ಇತ್ತೀಚಿನ ದಿನಗಳಲ್ಲಿ ಖಂಡ ಕಾವ್ಯವನ್ನು ಬರೆಯುವವರು, ಓದುವವರು ಬೆರಳೆಣಿಕೆಯಷ್ಟಿದ್ದಾರೆ. ಗನ್ನೇರಿಯನ್ನು ಕೈಗೆತ್ತಿಕೊಂಡವರು ಕೆಳಗಿಡದೆ ಅವಳ ಬದುಕಿನ ಜೊತೆ ಹೆಜ್ಜೆ ಹಾಕುತ್ತಾರೆಂಬುದರಲ್ಲಿ ಅನುಮಾನವಿಲ್ಲ. ಇದು ಕವಿಯ ವೈಯಕ್ತಿಕ ಜೀವನದ ಘಟನೆಗಳಿರಬಹುದು ಅಥವಾ ನಮ್ಮೆಲ್ಲರ ಅನುಭವದ ತುಣುಕುಗಳಿರಬಹುದು ಎಂಬಂತಹ ಸರಳ, ಸಹಜ ಪಾತ್ರಗಳು ಕಾವ್ಯದುದ್ದಕ್ಕೂ ಇಡಿಕಿರಿದಿವೆ. ಕಠಿಣ ಛಂದಸ್ಸನ್ನಾಗಲೀ ಮಹಾಮಹಿಮರ ಕಥೆಯನ್ನಾಗಲೀ ಅವಲಂಬಿಸದೆ ಜನಮಾನಸದಲ್ಲಿ ಉಳಿಯಬಲ್ಲ ಗನ್ನೇರಿಯಂತಹ ಕಾವ್ಯ ರಚಿಸಲು ಬೇಕಾದ ಹದ ಮತ್ತು ಬರವಣಿಗೆಯ ಸಾಫಲ್ಯವನ್ನು ಈ ಕವಿ ಸಾಧಿಸಿದ್ದಾರೆಂಬುದು ಒಟ್ಟಾರೆಯಾಗಿ ಈ ಖಂಡಕಾವ್ಯವನ್ನು ಓದಿದಾಗ ಅನ್ನಿಸುತ್ತದೆ. ಇಂತಹ ಕಾವ್ಯವನ್ನು ಕನ್ನಡಿಗರ ಕೈಗಿತ್ತ ಕವಿಯ ಕೈಗೆ ಪುತಿನ ಕಾವ್ಯ ಪುರಸ್ಕಾರ ಸಲ್ಲುತ್ತಿರುವುದು, ಅದೂ ಆ ಪ್ರಶಸ್ತಿಯ ಬೆಳ್ಳಿಹಬ್ಬದ ಆಕಸ್ಮಿಕವೂ ಜೊತೆಗೂಡಿರುವುದು ಕಾವ್ಯ ಪ್ರಿಯರಿಗೆ ಖುಷಿಕೊಡುವ ವಿಚಾರವಲ್ಲವೆ? ಡಾ. ಕೆ.ವಿ. ನಾರಾಯಣ ಅವರು ಅದ್ಭುತ ಒಳನೋಟದ ಮುನ್ನುಡಿ ಬರೆದಿದ್ದಾರೆ. ಪ್ರೊ.ನರಹರಿಯವರ ಬೆನ್ನುಡಿಯೊಂದಿಗೆ ಈ ಕಾವ್ಯ ಸಂಪನ್ನಗೊಂಡಿದೆ. ಪ್ರಶಸ್ತಿಗಾಗಿ ಮತ್ತು ಉತ್ತಮ ಕಾವ್ಯ ಕೊಟ್ಟಿದ್ದಕ್ಕಾಗಿ ಅಭಿನಂದನೆಗಳು ನಿಮಗೆ ಸ. ರಘುನಾಥ್ ಸರ್.

- ಎಚ್.ಎಸ್. ಸತ್ಯನಾರಾಯಣ
ಎಚ್.ಎಸ್. ಸತ್ಯನಾರಾಯಣ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

MORE FEATURES

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...

ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 

23-04-2024 ಬೆಂಗಳೂರು

"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ...

ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ

23-04-2024 ಬೆಂಗಳೂರು

'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್&zwn...