ಗರುಡಗಮನ ಬಂದ..ಮಂಗಳೂರ ಹೊತ್ತು ತಂದ

Date: 28-01-2022

Location: ಬೆಂಗಳೂರು


‘ಸಿನೆಮಾದ ಪ್ಲಾಟ್ ಸಾಮಾನ್ಯವೆನಿಸಿದರೂ, ಅಸಾಮಾನ್ಯ ರೀತಿಯಲ್ಲಿ ಸಹಜತೆಯಿಂದ ಕಡಿದಿಟ್ಟ ಬಗೆಗೆ ದಿಲ್ ಸೆ ಸಲಾಂ, ರಾಜ್ ಶೆಟ್ಟಿ ಭಾಯಿ’ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ಅನಂತಯಾನ ಅಂಕಣದಲ್ಲಿ ಗರುಡಗಮನ ವೃಷಭ ವಾಹನ ಸಿನಿಮಾದ ಕುರಿತು ಬರೆದಿದ್ದಾರೆ.

ಒಂದು ಊರು ಬೆಳಗುವುದು, ಆ ಊರ ಭಾಷೆ ಬೆಳೆಯುವುದು, ಅಲ್ಲಿನ ಸಂಸ್ಕೃತಿಯ ಕುರಿತು ಬೆರಗು ಮೂಡುವುದೆಲ್ಲವೂ ಸಾಧ್ಯವಾಗುವುದು ಅದರ ಮೇಲಿರುವ ನಮ್ಮ ಹೆಮ್ಮೆ ಮತ್ತು ಅಭಿಮಾನದಿಂದ ಮಾತ್ರ. ಜೊತೆಯಲ್ಲಿ ಪ್ರಭಲ ಮಾಧ್ಯಮವೊಂದಿದ್ದರೆ, ಅದು ವ್ಯಾಪಿಸುವ ವಿಸ್ತಾರ ಹೇಳ ತೀರದ್ದು. ಸಿನೆಮಾ ಅಂತಹದ್ದೊಂದು ಪ್ರಭಲ ಮಾಧ್ಯಮ. ದೃಶ್ಯಗಳಲ್ಲಿ ಕಥೆಯನ್ನು ಕಟ್ಟಿಡುತ್ತಾ ಸಾಗುವ ಹಾದಿಯಲ್ಲಿ, ಬೇಕು ಬೇಡಗಳ ಗೌಜಿ ತುಸು ಹೇಚ್ಛೆ ಇರುತ್ತದೆ. ಅವುಗಳನ್ನು ಸ್ವೀಕರಿಸಿ ತಿರಸ್ಕರಿಸುವ ಜಾಣ್ಮೆ ಇಲ್ಲಿ ಬಹುಮುಖ್ಯ. ಒಟ್ರಾಸಿ ಸಿನೆಮಾ ಮಾಡುವುದಲ್ಲ. ಒಟ್ರಾಸಿಯಲ್ಲೂ ಸಂಯಮದಿಂದ ತುಸು ತ್ರಾಸನ್ನು ತೆಗೆದುಕೊಂಡೆವೆಂದಾದರೆ-ಉತ್ತಮ ಸಿನೆಮಾವು ಮೂಡಿ ಬರಲು ಸಾಧ್ಯ. ಮೌನ ಮಾತಾಗಿ..ನೋಟಗಳು ಕತೆಯಾಗಿ..ಪೌರಾಣಿಕ ನೆಲೆಗಟ್ಟಿನಲ್ಲಿ ಪ್ರಸಕ್ತ ಬದುಕಿನ ವಾಸ್ತವ ಚಿತ್ರಣವನ್ನು ಕಟ್ಟಿಕೊಟ್ಟ ಸಿನೆಮಾ ‘ಗರುಡ ಗಮನ ವೃಷಭ ವಾಹನ’.

'ಜಾಸ್ತಿ ತುಳಿಬೇಡಿ ಆಯ್ತಾ...ಒಮ್ಮೆ ಎದ್ದು ನಿಲ್ಲುತ್ತೇವೆ'-ಈ ಮಾತು ಸಾರ್ವಕಾಲಿಕವಾದದ್ದು. ಆಯಾ ಕ್ಷೇತ್ರಗಳಲ್ಲಿ ಕೋಟಿ ಪರಂಪರೆ ಇರುವುದು ಸುಳ್ಳಲ್ಲ. ಅಲ್ಲಿ ಮುದ್ರೆ ಬಿದ್ದರೇನೇ ಶುದ್ದಿ ಕಲಶವಾಗಿ ಸ್ವೀಕೃತಗೊಳ್ಳಲ್ಪಡುತ್ತದೆ. ಸಾಹಿತ್ಯ, ಕಲೆ, ಸಂಗೀತ, ಸಿನೆಮಾವೂ ಸೇರಿದಂತೆ ಬಹುಪಾಲು ಕ್ಷೇತ್ರಗಳಿಗೆ ಇದು ಅನ್ವಯಿಸುತ್ತದೆ. ಅಂತಹ ಕೋಠಿಗಳು ಕೇಂದ್ರೀಕೃತವಾಗಿರುತ್ತವೆ. ಬಹುತೇಕ ವಿದ್ಯಾಮಾನಗಳು, ಸಂಗತಿಗಳು ವಿಜೃಂಭಿಸಿ ನಡೆದು, ಮನ್ನಣೆಯನ್ನು ಪಡೆದುಕೊಳ್ಳುವುದು ಸೀಮಿತ ಪ್ರದೇಶದಲ್ಲಿ ಮಾತ್ರ. ಆ ಕಾರಣದಿಂದ ಮೇಲೆ ಹೇಳಿದ ಕ್ಷೇತ್ರಗಳು ಬರೀ ನಗರಕ್ಕಷ್ಟೇ..ಅಲ್ಲಿರುವವರದ್ದಷ್ಟೇ..ಅವರೊಂದಿಷ್ಟು ಹೇಳಿದರಷ್ಟೇ- ಮಾನ್ಯತೆ, ಪುರಸ್ಕಾರ. ಇಲ್ಲದಿದ್ದಲ್ಲಿ ದುಂಡುದುಂಡಗಿನ ವಿಮರ್ಶಾ ಮಾನದಂಡಗಳು ದಂಡು ದಂಡಾಗಿ ದಾಳಿ ಇಡಲು ಶುರು ಹಚ್ಚಿಕೊಳ್ಳುತ್ತವೆ.

ಬದುಕಿ ಉಳಿಯುವ ಭಾಗ್ಯಕ್ಕೆ ದುಂಬಾಲು ಬೀಳುವುವರಿಗೇನೂ ಕಮ್ಮಿಯಿಲ್ಲ. ಅದೃಷ್ಟ ಹೀಗೂ ದೊರಕುವುದುಂಟು. ಅದೆಂತಹದ್ದೇ ಶ್ರೇಷ್ಠತಮವಾಗಿದ್ದರೂ ಒಪ್ಪಿತವಾಗದಿದ್ದ ಪಕ್ಷದಲ್ಲಿ ಸ್ವೀಕಾರವೂ ಗೊಳ್ಳುವುದಿಲ್ಲ. ಕಾಲಕ್ಕೆ ಹರಿದು ಮಾತ್ರವೇ ಗೊತ್ತು. ಹಾಗೊಂದಿಷ್ಟು ಹರಿದದ್ದೇ ಸಹಜವಾದದ್ದು ಮುನ್ನೆಲೆಗೆ ಬಂತು. ಅಷ್ಟೇ ಹಾಗಾದರೆ ಇಷ್ಟರವರೆಗೆ ಕಾಲವನ್ನು ಕಟ್ಟಿ ಹಾಕಿ, ಸಹಜತೆಯನ್ನು ತುಳಿದವರಾರು? ಪ್ರಶ್ನೆಗೆ ಉತ್ತರ ನಮ್ಮಲ್ಲಿಯೇ ಇದೆ. ಹೀಗೇ ಎಂಬುದಿಲ್ಲದ ಬಾಳಲ್ಲಿ, ಹೇಗೇಗೋ ಆಗಿ ಬರುವ ಹೊತ್ತು ಪದೇಪದೇ ಎದ್ದು ನಿಲ್ಲುವಂತೆ ಪ್ರಚೋದಿಸುತ್ತಿರುತ್ತದೆ. ಅಂತಹ ಸಮಯದಲ್ಲಿ ಪ್ರತಿಭೆಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಆತ್ಮವಿಶ್ವಾಸ ಬಹುಮುಖ್ಯ. ನಮ್ಮ ಮೇಲೆ, ನಾವು ಮಾಡುವ ಕಾರ್ಯದ ಮೇಲೆ ನಂಬಿಕೆ ಇದ್ದ ಪಕ್ಷದಲ್ಲಿ ಮಾತ್ರ ಯಶಸ್ಸು ಹೆಗಲೇರಿ ಕುಳಿತುಕೊಳ್ಳುತ್ತದೆ. ಎಷ್ಟೂ ಅಂತ ಪ್ರತಿಭೆಯನ್ನು ತಡೆ ಹಿಡಿಯಬಹುದು ಹೇಳಿ? ಒಂದಲ್ಲ ಒಂದು ದಿನ ಅದು ಮೀನುಗಲೇ ಬೇಕು.’ಮಿನುಗು ತಾರೆ ಅಂದ. ನೋಡು ಎಷ್ಟು ಚಂದ’-ಸಹಜವಾದದ್ದು ಯಾವತ್ತಿಗೂ ಸುಂದರವೇ.

ಸಿನೆಮಾದ ಪ್ಲಾಟ್ ಸಾಮಾನ್ಯವೆನಿಸಿದರೂ, ಅಸಾಮಾನ್ಯ ರೀತಿಯಲ್ಲಿ ಸಹಜತೆಯಿಂದ ಕಡಿದಿಟ್ಟ ಬಗೆಗೆ ದಿಲ್ ಸೆ ಸಲಾಂ, ರಾಜ್ ಶೆಟ್ಟಿ ಭಾಯಿ. 'ಇರುವುದೇ ಹಾಗೆ..ಎಂತ ಮಾಡ್ಲಿಕ್ಕೆ ಆಗ್ತದೆ' ಎನ್ನುವಂತಹ ಪಾತ್ರ 'ಶಿವ'ನದ್ದು. ಅವ ಎದ್ದು ಬಂದ ಬಗೆಯೇ ಭಿನ್ನ.'ಮಾಯಾ ಬಜಾರ್' ನಲ್ಲಿ 'ಒಂದು ಮೊಟ್ಟೆಯ ಕಥೆ'ಯಿಂದ ತೊಡಗಿ, 'ಅಮ್ಮಚ್ಚಿಯೆಂಬ ನೆನಪು'ಗಳೊಂದಿಗೆ ಬೆರೆತು, 'ಮಹಿರ'ನಾಗಿ 'ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ 'ಬಿಟ್ಟವನು ಇದೀಗ 'ಗರುಡ ಗಮನ ವೃಷಭ ವಾಹನ'ದಲ್ಲಿ ಆಡಿ ನಲಿದ ಪರಿ ಅನನ್ಯ. ಮಂಡೆಯ ಮೇಲೆ ಖಾಲಿ ಆದರೆ ಏನು ಮಾರಾಯ? ಒಳಗೆ ಗಟ್ಟಿ ಉಂಟಲ್ಲಾ..’ ಹೇಳುವುದಿದಕ್ಕೇ. 'ಶಿವ' ಪಾತ್ರದ ರಾಜ್ ಬಿ ಶೆಟ್ಟಿ ತಮ್ಮ ಬಾಡಿ ಲ್ಯಾಂಗ್ವೇಜ್ ನಲ್ಲೇ ಬಹಳಷ್ಟನ್ನು ಅಭಿನಯಿಸಿ ತೋರಿದ್ದಾರೆ. ಮಂಗಳಾದೇವಿ ದೇವಸ್ಥಾನದ ಎದುರಿನ 'ಶಿವ'ತಾಂಡವ-ಜಸ್ಟ್ ಬ್ರಿಲಿಯೆಂಟ್! ಎರಡು ವ್ಯತ್ಯಸ್ತ ಭಾವಗಳ ಜುಗಲ್ ಬಂಧಿಯಲ್ಲಿ ನಟಿಸಿ ರಿಷಬ್ ಶೆಟ್ಟಿ ಸೈ ಎನಿಸಿಕೊಂಡಿದ್ದಾರೆ.

ಚಿತ್ರದುದ್ಧಕ್ಕೂ ಉತ್ತೇಜಿಸುವಂತಹ ಲೊಕೇಶನ್ ಗಳಿವೆ. ಇದು ಒಂದು ಊರ, ಪರಿಸರದ ಹೆಮ್ಮೆಯೂ ಹೌದು. ಅಲ್ಲಿ ಹೀಗೂ ಇದೆಯಲ್ಲಾ! ಹುಬ್ಬೇರಿಸಿ ನೋಡುವಂತೆಯೂ ಮಾಡುತ್ತದೆ. ಊರಿನ ಗಲ್ಲಿ, ಬೀಡಿ ಕಟ್ಟುವ ಮನೆ, ಬಾರ್, ಪುಟ್ಟ ಮೈದಾನ, ಮಂಗಳೂರು ಮಲ್ಲಿಗೆ, ದೇವಸ್ಥಾನ, ಮಸೀದಿ..ಎಲ್ಲವನ್ನೂ ಇದ್ದಂತೆಯೇ ಸೆರೆಹಿಡಿದು ಉಸಿರು ನೀಡಿದ್ದಾರೆ. ಪ್ರತೀ ಪಾತ್ರವೂ ಸಹಜವಾಗಿಯೇ ಮಾತನಾಡುತ್ತವೆ. ಎಲ್ಲೂ ‘ಬೆಂಗಳೂರಿನ ಹವೆ’ ಕಾಣಿಸುವುದಿಲ್ಲ. ಅದೇನಿದ್ದರೂ ‘ಶೆಟ್ಟಿದ್ವಯರದ್ದೇ ಹವ’. ರಾಜ್-ರಿಷಬ್ ಪರಸ್ಪರ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ತಮ್ಮನ್ನು ಸಂಪೂರ್ಣವಾಗಿ ಪಾತ್ರದೊಳಗೆ ಆಹ್ವಾನಿಸಿಕೊಂಡ ‘ಗೋಪಾಲ ಕೃಷ್ಣ ದೇಶಪಾಂಡೆ’ರಿಗೆ ಭೇಷ್ ಅನ್ನಲೇ ಬೇಕು.‘ದೀಪಕ್ ರೈ ಪಾಣಾಜೆ’ಯವರದ್ದು ಮರೆಯಲಾಗದಂತಹ ಪಾತ್ರ ನಿರ್ವಹಣೆ.'ಯಮಹಾ ಆರ್.ಎಕ್ಸ್- 100' ಕೂಡಾ ತನ್ನ ಪಾತ್ರವನ್ನು ಚೆನ್ನಾಗಿಯೇ ನಿಭಾಯಿಸಿದೆ.

ಬಿಕೋ ಎನ್ನುತ್ತಿರುವ ನೀರವ ರಸ್ತೆಯಲ್ಲಿ ಒಮ್ಮೆಲೇ 'ಯಮಹಾ' ಬೈಕಿನ ಸದ್ದು. ಒಂದೇ ಅಪ್ಪನಿಗೆ ಹುಟ್ಟಿದವ ಮಂಗಳಾದೇವಿಗೆ ಸುತ್ತು ಹಾಕ್ಲಿಕ್ಕೆ ಯಮಹಾ ಬೈಕಿನಲ್ಲಿ ಬರುವಾಗ 'ಕಾಗೆ'ಯೊಂದು ಅಡ್ಡಕ್ಕೆ ಹಾರಿ ಹೋಗುವುದನ್ನು ತೋರಿಸಿದ ನಿರ್ದೇಶಕ ರಾಜ್ ಬಿ ಶೆಟ್ಟಿ, ಸೂಕ್ಷ್ಮ ಸಂವೇದನಾಶೀಲ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾವನೆಯು ಬುದ್ದಿಯ ಹಿಡಿತದಿಂದ ತಪ್ಪಿದರೆ ಮಕ್ಕಳು ಮುದುಕರು ಎನ್ನದೆ ಆಗಬಹುದಾದ ಅನಾಹುತವನ್ನು ಅಂತಿಮ ದೃಶ್ಯದಲ್ಲಿ ಕಾಣಬಹದು. ಸಿನೆಮಾ ಎನ್ನುವುದು ವಾಸ್ತವ ಬದುಕಿನ ನಕಲು.

'ಹುಲಿವೇಷ'-ಮಂಗಳೂರು ಮಣ್ಣಿನ ಸಂಸ್ಕೃತಿಯ ಪ್ರತೀಕ. ಕಡಲತಡಿಯ ಮಕ್ಕಳ ಸಿನೆಮಾದಲ್ಲಿ ಹುಲಿವೇಷ ಮತ್ತು ಕುಣಿತ ಸಿಗ್ನೇಚರ್ ಮಾರ್ಕ್ ಆಗಿ ಬಿಟ್ಟಿದೆ. ಎರಡು ನಿಮಿಷಕ್ಕಾದರೂ ಪರದೆಯಲ್ಲಿ ಬಂದು ಹೋಗಲೇ ಬೇಕೆನಿಸುವಷ್ಟು ಹುಚ್ಚು ಪ್ರೀತಿ-ತಪ್ಪಲ್ಲ. ಭಾವನೆಗಳನ್ನು ಕೆರಳಿಸಲು ಹಿನ್ನಲೆ ಸಂಗೀತವನ್ನು ಬಳಸುವುದುಂಟು. ಇಲ್ಲಿ ಅಂತಹ ಅನಾಹುತಕ್ಕೆ ಕೈ ಹಾಕದಿರುವುದನ್ನು ಶ್ಲಾಘಿಸಲೇಬೇಕು. ಬಹುಪಾಲು ಹಿನ್ನಲೆಯಲ್ಲಿ ಕೇಳಿ ಬರುವ ಕೋಳಿಯ ಕೂಗು, ಬಸ್ಸಿನ ಸದ್ದು, ಮಕ್ಕಳ ಆಟದ ಬೊಬ್ಬೆ ಜೊತೆಗೆ ಹುಲಿ ವೇಷದ ಮ್ಯೂಸಿಕ್ ಎಂತಹವರನ್ನೂ ಮುದಗೊಳಿಸುತ್ತದೆ. ಶಾಸ್ತ್ರೀಯ ಸಂಗೀತ, ಜನಪದ ಸಂಗೀತವನ್ನು ‘ಮಿದುನ್ ಮುಕುಂದನ್’ ಬಳಸಿ ಬೆರೆಸಿದ ವೈಖರಿ ತುಂಬಾನೇ ಇಷ್ಟವಾಯಿತು. ಸಿನೆಮಾಟೋಗ್ರಫಿ ವಂಡರ್ಫುಲ್. ಚಿತ್ರದುದ್ದಕ್ಕೂ ಬಳಸಿದ ಪ್ರಾದೇಶಿಕ ಭಾಷೆ ಇದೆಯಲ್ಲ, ಅದು ಸಿನೆಮಾದ ದೊಡ್ಡ ಪ್ಲಸ್ ಪಾಯಿಂಟ್. ಮಂಗಳೂರಿನ ಮಣ್ಣಿನ ಸೊಗಡು ಅಡಗಿರುವುದೇ 'ತುಳು' ಭಾಷೆಯಲ್ಲಿ. ಇಲ್ಲಿಯ ಕನ್ನಡದಲ್ಲೂ'ತುಳು' ಹಾಸುಹೊಕ್ಕಿ ಸಹಜವೆನಿಸಿಕೊಂಡಿದೆ. ಭಾಷೆಗಳಿಲ್ಲ ಜಗಳವಾಡುವುದಿಲ್ಲ. ಪರಸ್ಪರ ಕಲೆತು ಬೆರೆತು ಒಂದಾಗಿ ಉಸಿರಾಡುತ್ತವೆ. 'ದೇವೆರ್ನಾಜ ಇಲ್ಲ ಮಾರಾಯ'-ಕನ್ನಡದ ‘ದೇವರಾಣೆ’ ಸಹಜವಾಗಿ ತುಳುವಿನ ‘ದೇವೆರ್ನಾಜ’ ಆಗಿ ಮೂಡಿ ಬರುವುದು ಇಲ್ಲಿನ ವಿಶೇಷತೆ.

ಎಲ್ಲೂ ಅಸಹಜ ಎನಿಸಿದಷ್ಟು ಸಹಜವಾಗಿ ಸಿನೆಮಾವನ್ನು ನಿರ್ದೇಶಿಸಿದ್ದಾರೆ ರಾಜ್ ಬಿ ಶೆಟ್ಟಿ. ಮುಗ್ಧತೆಯಲ್ಲಿ ಹುಟ್ಟುವ ಇಲ್ಲಿಯ ಮಾತುಗಳು ಅನ್ಯರಿಗೆ ಅನ್ಯಗ್ರಹದ ಮಾತುಗಳಾಗಿ ಕೇಳಿಯೂ ಬರಬಹುದು.'ಎಂತ ಮಾಡ್ಲಿಕೆ ಆಗ್ತದೆ. ನಾವು ಇರುವುದೇ ಹಾಗೆ, ಮಾರಾಯ್ರೆ'. ಬದುಕನ್ನು ಇದ್ದ ಹಾಗೆ, ಬಂದ ಹಾಗೆ ಅನುಭವಿಸಿ ಜೀವಿಸಿವುದು ಇಲ್ಲಿನ ಪರಿಸರಕ್ಕೊಂದು ವರವೂ ಹೌದು. ಶಾಪವೂ ಹೌದು. 'ತುಳು' ಭಾಷೆ ಹಾಸ್ಯ ರಸವನ್ನು ಹರಿಸುವಷ್ಟು ಪ್ರಾಯಶಃ ದೇಶದ ಇತರ ಯಾವ ಭಾಷೆಯೂ ಹರಿಸುವುದಿಲ್ಲ.'ತುಳು' ಬಿಟ್ಟರೆ ಅಂತಹ ಸಾಧ್ಯತೆ ಇರುವ ಭಾಷೆ 'ಮಲೆಯಾಳಂ' ಮಾತ್ರ. ಆಡುವ ವರಸೆಯಲ್ಲಿ, ಹೇಳುವ ಧಾಟಿಯಲ್ಲಿ, ಕೇಳುವ ಪ್ರಶ್ನೆಯಲ್ಲಿ, ಆಂಗಿಕ ಚೇಷ್ಟೆಯಲ್ಲಿ..ಅಷ್ಟೆಯಾಕೆ ಬೈಯುವ ಪದಗಳಲ್ಲೂ ಹಾಸ್ಯ ಹೊಕ್ಕಿ ಕುಳಿತಿರುತ್ತದೆ. ಆ ನೆಲದ ಗಂಧವೇ ಅಂತಹದ್ದು. ಪೂರಕವಾಗಿ ಯಕ್ಷಗಾನ, ತಾಳ ಮದ್ದಳೆ, ಪಾಡ್ದನ, ನೇಮ-ಭೂತಕೋಲ, ನಾಟಕಗಳೆಲ್ಲವೂ ಸೇರಿ ಚಿಂತನೆ-ಭಾವನೆಗಳನ್ನು ಹರಿತವಾಗಿರಿಸಿವೆ. ಪ್ರಾದೇಶಿಕ ಭಾಷೆಯ ಸೊಬಗಿರುವುದೇ ಅಲ್ಲಿ ಬಳಕೆಯಾಗುವ ಪದಗಳಲ್ಲಿ. ಅದು ಇಲ್ಲವಾದರೆ ಪ್ರಾದೇಶಿಕತೆ “ಎಂತ 'ಸಾವು' ಮಾರ್ರೆ..ಎಂತ ಚೊರೆಯಾ ನಿಂದು..ಎಂತದ 'ಬ್ಯಾವರ್ಸಿ' ಸರಿಯಾಗಿ ಬ್ಯಾಟು ಹಿಡಿಲಿಕ್ಕೆ ಬರುದಿಲ್ಲ..ಬ್ಯಾಟಿಂಗ್ ಮಾಡ್ತಾನಂತೆ..ಹೋಗಾ ಹೋಗಾ ಫೀಲ್ಡಿಂಗ್ ಮಾಡಾ..”

'ಕೊಲ್ಲುವವರು ಸಾವಿರ ಜನ ಇದ್ದರೆ ಕಾಯುವವ ಒಬ್ಬ ಇರ್ತಾನೆ' ಅನ್ನೋ ಮಾತಿದೆ. ಪೌರಾಣಿಕ ಹಿನ್ನಲೆಯಲ್ಲಿ ವಾಸ್ತವ ಬದುಕಿನ ಅಂತರಾತ್ಮವನ್ನು‘ರಾಜ್-ರಿಷಬ್’ ಜೋಡಿ ತೆರೆದಿಟ್ಟಿದ್ದಾರೆ. ಬಾಲ್ಯದ ಮುಗ್ದತೆಯು ಬೆಳೆದಂತೆ ಇನ್ನಿಲ್ಲವಾಗಿ ವಿಭಿನ್ನ ಹಾದಿಯನ್ನು ಹಿಡಿಯುತ್ತದೆ. ತನ್ನ ಸ್ವಂತದ ನೆಲೆಯನ್ನು ಕಂಡುಕೊಳ್ಳುವ ಅಹಮಿನ ಚಪಲದ ಹಠಕ್ಕೆ ಬಿದ್ದು ಮಣ್ಣಾದವರ ಕತೆ ಇದು.

ಪೀಳಿಗೆಯಿಂದ ಪೀಳಿಗೆಗೆ ಮನುಷ್ಯ ಸೂಕ್ಷ್ಮವಾಗುತ್ತಾ ಹೋಗುತ್ತಾನೆ. ಕಾಲಾನುಕಾಲಕ್ಕೆ ದಯಮಾಡಿಸಿ ಬರುವ ತಂತ್ರಜ್ಞಾನದ ಮಹಿಮೆ ಅಪಾರ. ಹಾಗಿರಲು ಮನುಷ್ಯನ ತಿಳುವಳಿಕೆ, ಜ್ಞಾನ, ಗ್ರಹಿಕೆಯ ವೇಗವು ಥಟ್ಟನೆಂದು ದುಪ್ಪಟ್ಟಾಗಿದೆ. ಆ ನಿಟ್ಟಿನಲ್ಲಿ ಸಿನೆಮಾದ ಸಂಕಲನವು ಒಂದಷ್ಟು ಹರಿತಗೊಂಡಿದ್ದರೆ ಚೆನ್ನಿರುತ್ತಿತ್ತು ಎಂದೆಣಿಸಿದ್ದು ಸುಳ್ಳಲ್ಲ. ಸನ್ನಿವೇಶದ ತೀವ್ರತೆಯನ್ನು ದಾಟಿಸುವ ಹಾದಿಯಲ್ಲಿ ಕೆಲವೊಂದು ಸೀನ್ ಗಳನ್ನು ಸ್ವಲ್ಪ ಹೆಚ್ಚೇ ಎಳೆದಾಡಿದ್ದಾರೆ. ಎರಡೂವರೆ ಗಂಟೆಯ ಸಿನೆಮಾದಲ್ಲಿ ಕನಿಷ್ಠವೆಂದರೂ ಹದಿನೈದು ನಿಮಿಷದಷ್ಟು ಟ್ರಿಮ್ಮಿಂಗ್ ಅನ್ನು ಮಾಡಿದ್ದಲ್ಲಿ;ಸಿನೆಮಾದ ಒಟ್ಟಂದವು ಇನ್ನೊಂದು ಮಜಲಿಗೆ ಏರಿರುತ್ತಿತ್ತು.

ಏನೇ ಹೇಳಿ ಕಾಲ ಬದಲಾಗಿದೆ. ನೋಡುವ ಕಣ್ಣು, ಕೇಳುವ ಕಿವಿ, ಚಿಂತಿಸುವ ಮಿದುಳಿಗೊಂದಿಷ್ಟು ಸಹಜಯೆಯನ್ನು ಬೇಯಿಸಿ ಹಾಕುವಷ್ಟರವರೆಗೆ ಪರಿಸ್ಥಿತಿ ಬಂದು ನಿಂತಿದೆ. ಅಷ್ಟಕ್ಕೇ ಧನ್ಯ. ಅದು ಗಂಜಿ-ಮೀನು ಫ್ರೈ, ಕೋರಿ ರೊಟ್ಟಿ ಆದರೂ ಸರಿ..ಇಲ್ಲ ಮೊಸರನ್ನವಾದರೂ ಸರಿ. ಕಲಬೆರಕೆ ಇರಬಾರದಷ್ಟೇ. ಕಪೋಕಲ್ಪಿತ ಲೋಕದಲ್ಲಿನ ವಿಹಾರ ಹೆಚ್ಚು ಬಾಳುವಂತದ್ದಲ್ಲ. ಕಾಸ್ಮೋ ನಗರಗಳಿಗೆ ಅದರದ್ದೇ ಆದ ಸಂಸ್ಕೃತಿ ಅಂತ ಇಲ್ಲವೇ ಇಲ್ಲ. ರಾಜ್ಯದ ಆಯಾ ಪ್ರಾದೇಶಿಕ ನೆಲೆಗಟ್ಟಿನಲ್ಲಿ ಸಿನೆಮಾಗಳು ಮೂಡಿ ಬರಬೇಕು. ಹಾಗೆ ಬಂದದ್ದೇ ಆದರೆ ಹತ್ತಲವು ದೈತ್ಯ ಪ್ರತಿಭೆಗಳು ಹುಟ್ಟಿ ಬರುತ್ತವೆ. ಅದಕ್ಕೆ ಜೀವಂತ ಸಾಕ್ಷಿ ರಾಜ್ ಶೆಟ್ಟಿ -ರಿಷಬ್ ಶೆಟ್ಟಿ-ರಕ್ಷಿತ್ ಶೆಟ್ಟಿ ಮತ್ತು ಭಂಡಾರಿ ಬ್ರದರ್ಸ್’. ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸಿದರೆ; ಉತ್ತರವಾಗಿ- ನಮ್ಮ ನೆಲದ ಗಂಧ, ಸಂಸ್ಕೃತಿಯ ಮೇಲಿರುವ ನಮ್ಮ ಅಚ್ಚಳಿಯದ ಪ್ರೀತಿ..ಅದಕ್ಕೆ ಆ ನೆಲವು ತೆರೆದುಕೊಳ್ಳುವ ರೀತಿ ಎಂದಷ್ಟೇ ಹೇಳಬಲ್ಲೆ. ನಮ್ಮದು ಎನ್ನುವುದರ ಮೇಲೆ ಅಭಿಮಾನ ಇದ್ದರೇನೇ ಉತ್ತಮವಾದುದರ ಸೃಷ್ಟಿ ಸಾಧ್ಯ. ಇಲ್ಲದಿದ್ದಲ್ಲಿ ಒಂದಷ್ಟು ಬಣ್ಣಗಳನ್ನು ಬೆರೆಸಿ,ಮೆತ್ತಿಸಿ ಕುಣಿದು ದಣಿಯಬೇಕೆಷ್ಟೇ.

ಆ ನೆಲೆಯಲ್ಲಿ, 'ಗರುಡ ಗಮನ ವೃಷಭ ವಾಹನ' ಸಿನೆಮಾವು ಕನ್ನಡ ಸಿನಿ ಇಂಡಸ್ಟ್ರಿಗೆ ಒಂದು ಸಂದೇಶವೆಂದೇ ನನ್ನ ಅನಿಸಿಕೆ. ಕರ್ನಾಟಕ ಎನ್ನುವುದೊಂದು ದೇಶ. ಇಲ್ಲಿ ಏನಿಲ್ಲ? ಎಲ್ಲವೂ ಇದೆ. ಆದರೂ ನಾವು,'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ..' 'ಗಗವೃವಾ' ವ್ಹಾರೆ ವ್ಹಾ. ಎನಿವೇಸ್..ರಾಜ್ ಬಿ ಶೆಟ್ಟಿ-ರಿಷಬ್ ಶೆಟ್ಟಿ, ಭಾಯಿ ಲೋಗ್.. ದಿಲ್ ಸೆ ಪ್ಯಾರ್, ನಿಕ್ಲೆಗ್.

ಈ ಅಂಕಣದ ಹಿಂದಿನ ಬರೆಹಗಳು:
ಸುಖದ ಸುತ್ತು…
ನಿರೀಕ್ಷೆಗಳಿಲ್ಲವಾದರೆ ನಿರಾಳ
ದಾರುಣ ಅಂತ್ಯ ಹೇಳುವ 'ನಗ್ನಸತ್ಯ'
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...