ಗೌಳಿಗಿತ್ತಿಯ ಮೌನ ಜಾಗರಣೆ!

Date: 27-10-2020

Location: ಬೆಂಗಳೂರು


ಕತೆಗಾರ ಲಕ್ಷ್ಮಣ ಬಾದಾಮಿ ಅವರು ದೃಶ್ಯ ಕಲೆಯ ಬರವಣಿಗೆಯಲ್ಲಿಯೂ ನಿಷ್ಣಾತರು. ಅವರು ಬರೆವ ಅಂಕಣ ವರ್ಣಯಾತ್ರೆ. ಈ ಬಾರಿಯ ಅಂಕಣದಲ್ಲಿ ಜೋಹಾನ್ಸ್‌ ವರ್ಮೀರ್‌ ಅವರ ’ಗೌಳಿಗಿತ್ತಿ’ ಕಲಾಕೃತಿಯ ಬಗ್ಗೆ ಬರೆದಿದ್ದಾರೆ.

ಕಲಾಕೃತಿ: ಗೌಳಿಗಿತ್ತಿ
ಕಲಾವಿದ: ಜೋಹಾನ್ಸ್ ವರ್ಮೀರ್
ಕಾಲ: 1632-1675
ದೇಶ: ಹಾಲಂಡ್
ಕಲಾಪಂಥ: ಬಾರೋಕ್, ಡಚ್ ಸುವರ್ಣ ಕಾಲ

ಶ್...!! ಮಾತನಾಡಬೇಡಿ ನಮ್ಮ ಚಿತ್ರದ ನಾಯಕಿ ಮೌನ ಜಾಗರಣೆಯಲ್ಲಿದ್ದಾಳೆ. ನೋಡುವವರು ಸಹ ಹಾಗೇ ಇರಬೇಕೆಂದು ಅವಳ ಬಯಕೆ. ಅವಳು ಇನ್ನೂ ಹಾಲು ಹೆಪ್ಪು ಹಾಕಿಲ್ಲ. ಆದರೆ ಅಲ್ಲಿನ ಶಬುದಕ್ಕೆ ಸಂಪೂರ್ಣ ಹೆಪ್ಪು ಹಾಕಿ ತನ್ನ ತಹಬಂದಿಗೆ ತಗೊಂಡಿದ್ದಾಳೆ.

ನಾವು ನೋಡುತ್ತಿರುವುದು ಚಲನಚಿತ್ರವಲ್ಲ, ಸ್ಥಿರ ಚಿತ್ರವನ್ನು ಎಂಬ ಎಚ್ಚರ ನಮ್ಮಲ್ಲಿದ್ದಾಗಲೂ ಹಾಲಿನ ಧಾರೆ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಚಲಿಸುತ್ತಿರುವಂತೆ ಭಾಸವಾಗುತ್ತದೆ. ಈ ಚಲನೆಯ ಶಬ್ದ ನೋಡುಗನ ಪ್ರಶಾಂತ ನೋಟಕ್ಕೆ ಎಲ್ಲಿ ಧಕ್ಕೆಯಾಗುತ್ತದೇನೋ ಎಂದು ಆಕೆ ಇನ್ನೂ ನಿಧಾನವಾಗಿ ಸುರಿಯುವ ಎಚ್ಚರದಲ್ಲಿದ್ದಾಳೆ! ನಿಜ. ಅವಳು ಮೌನದ ಜಾಗರಣೆಯಲ್ಲಿದ್ದಾಳೆ.

ಕಲಾವಿದ ಜೋಹಾನ್ಸ್ ವರ್ಮೀರ್ 1657-58 ಸುಮಾರಿನಲ್ಲಿ ಈ ಗೌಳಿಗಿತ್ತಿ(Milkmaid) ಕೃತಿಯನ್ನು ರಚಿಸಿದ್ದಾನೆ. ಗೌಳಿಗಿತ್ತಿ ಕೋಣೆಯ ಒಂದು ಮೂಲೆಯಲ್ಲಿ ನಿಂತಿದ್ದಾಳೆ. ಅವಳ ಎದುರೇ ಒಂದು ಕಿಟಕಿ ಇರುವುದರಿಂದ ಬೆಳಕು ಮುಂದಕ್ಕೆ ಹರಡುವ ಮುನ್ನ ಇವಳನ್ನು ಒಂದಿಷ್ಟು ತಬ್ಬಿಕೊಂಡು ಮುನ್ನಡೆದಿದೆ. ಗೌಳಿಗಿತ್ತಿ ಮಧ್ಯೆ ವಯಸ್ಸಿನ ದಷ್ಟಪುಷ್ಟ ಹೆಂಗಸು. ತಲೆಗೊಂದು ಬಿಳಿ ಕುಲಾವಿ ಧರಿಸಿದ್ದಾಳೆ. Yello Ocherh ನ ಉದ್ದ ತೋಳಿನ ರವಿಕೆ ತೊಟ್ಟಿದ್ದಾಳೆ. ಮುಂಗೈವರೆಗೂ ಬರಬಹುದಾದ ಆ ರವಿಕೆಯ ತೋಳನ್ನು ಕೆಲಸಕ್ಕೆ ಅಡಚಣೆಯಾಗುತ್ತದೆಂದು ಅದನ್ನಾಕೆ ರಟ್ಟೆಯವರೆಗೂ ಏರಿಸಿದ್ದಾಳೆ. ಅಲ್ಲಿ ಸಹಜವಾದ ಮಡಿಕೆಗಳುಂಟಾಗಿವೆ. ರವಿಕೆ ಏಕರಂಗಿ(Plane) ಆದರೂ ಅದರ ತುದಿಯಲ್ಲಿ ಬಟ್ಟೆಯ ಹಾಸಿನ ಎಳೆಯ ಬಣ್ಣ, ಹೊಕ್ಕಿನ ಎಳೆಯ ಬಣ್ಣ ಬೇರೆ ಬೇರೆಯಾಗಿರುವುದರಿಂದ ಬಟ್ಟೆಯ ಮೇಲೆ ಬೀಳುವ ನೆರಳು-ಬೆಳಕಿಗನುಗುಣವಾಗಿ ಅದು ಬೇರೆಬೇರೆ ಬಣ್ಣದಲ್ಲಿ ಕಾಣಿಸುತ್ತದೆ. ನೀಲಿ-ಹಳದಿಗಳು ಹಾಸು ಹೊಕ್ಕಿನ ಬಣ್ಣಗಳಾಗಿದ್ದರಿಂದ ಅದು ಒಟ್ಟು ತೋರುಗಾಣುವಿಕೆಯಲ್ಲಿ Peacock blueನಂತೆ ಕಾಣುತ್ತ ಆ ನೆರಿಗೆಗಳಲ್ಲಿ ಒಮ್ಮೆ ತಿಳಿಹಳದಿಯೂ, ಮತ್ತೊಮ್ಮೆ ನೀಲಿಯೂ ಆಗಿ ಕಾಣುತ್ತದೆ. ಏಕರಂಗಿ ಬಟ್ಟೆಯಲ್ಲಿ ಎರಡು ಬಣ್ಣಗಳ ತೋರುಗಾಣುವಿಕೆಯ ಈ ಸೂಕ್ಷ್ಮತೆಯು ಅವನ ತಂದೆ ಒಬ್ಬ ನೇಕಾರನಾಗಿದ್ದರಿಂದ ಬಂದಿರಬಹುದೆಂದು ಕಾಣುತ್ತದೆ.

ಗೌಳಿಗಿತ್ತಿ ತೊಟ್ಟುಕೊಂಡು ಅದನ್ನು ಎತ್ತಿಕಟ್ಟಿರುವ ಲಂಗದ ಬಣ್ಣ Ultramarine blue ತುಂಬಾ ಶ್ರೀಮಂತವಾಗಿದೆಯಾದರೂ ಅದು ಎದ್ದು ಕಾಣಿಸುವುದಕ್ಕಿಂತ ರವಿಕೆಯ ಬಣ್ಣ ನಸುಹಳದಿಯಾದರೂ ಅದೇ ಹೆಚ್ಚು ತೋರುಗಾಣುತ್ತಿದೆ. ಇದಕ್ಕೆ ಕಾರಣವೆಂದರೆ ಅದು ನೇರ ಬೆಳಕಿಗೆ ಒಡ್ಡಿಕೊಂಡಿರುವುದು, ಈ ಬಣ್ಣ ಚಿತ್ರದಲ್ಲಿ ಮತ್ತೆಲ್ಲಿಯೂ ಬಳಕೆ ಯಾಗದಿರುವುದು ಮತ್ತು ಇದು ಒಟ್ಟು ಚಿತ್ರ ಚೌಕಟ್ಟಿನ ಮಧ್ಯೆ ಭಾಗದಲ್ಲಿರುವುದೇ ಆಗಿದೆ. ಇಲ್ಲಿ ಇನ್ನಷ್ಟು ಕಾಂತಿಯುತವಾಗಿ ಕಾಣುವುದು ಬ್ರೆಡ್ಡಿನ ತುಣುಕುಗಳು ಮತ್ತು ಬಿದಿರು ಬುಟ್ಟಿಯಲ್ಲಿರುವ ಬ್ರೆಡ್ಡು, ಪಾತ್ರೆಗಳ ಹೊಳೆಯುವ ಅಂಚು.

ಮೇಲುನೋಟಕ್ಕೆ ಈ ಚಿತ್ರ ಯಾವ ಸಂಕೀರ್ಣತೆಗೆ ಒಳಗಾಗದೆ ತುಂಬ ಸರಳ ಅನ್ನಿಸುತ್ತದೆ. ಗೌಳಿಗಿತ್ತಿಯ ತಲೆಯಿಂದ ಎಡಭುಜಕ್ಕೆ ತಾಗಿಸಿಕೊಂಡು ಕೆಳಕ್ಕೆ ಲಂಬವಾಗಿ ಒಂದು, ಬಲಭುಜಕ್ಕೆ ತಾಗಿಸಿಕೊಂಡು ಓರೆಯಾಗಿ ಇನ್ನೊಂದು ಹೀಗೆ ಎರಡು ಕಾಲ್ಪನಿಕ ರೇಖೆಗಳನ್ನೆಳೆದಾಗ ಉಂಟಾಗುವ ಒಂದು ತ್ರಿಕೋನದಲ್ಲಿ ಮುಖ್ಯ ಚಿತ್ರ ಉಳಿದುಹೋಗುತ್ತದೆ. ಉಳಿದ ಹಿನ್ನೆಲೆ-ಮುನ್ನೆಲೆಗಳು ಸಪ್ಪೆ ಎನ್ನಿಸಿಬಿಡಬಹುದಾಗಿದ್ದನ್ನು ವರ್ಮೀರ್ನ ಸೂಕ್ಷ್ಮ ನಿರೀಕ್ಷಣೆಗಳಿಂದಾಗಿ ಅಲ್ಲಿಯೂ ನೋಡುಗನ ದೃಷ್ಟಿ ಸಂಚಲಿಸುತ್ತದೆ. ಕಿಟಕಿಯ ಸರಳುಗಳು, ಅದಕ್ಕೆ ಜೋಡಿಸಿರುವ ಗಾಜುಗಳು, ಆ ಗಾಜಿನ ಚೌಕದಲ್ಲಿ ಒಂದೆಡೆ ಒಡೆದು ಹೋಗಿರುವುದು, ಗೋಡೆಗೆ ನೇತು ಹಾಕಿರುವ ಬಿದಿರಿನ ಬಾಸ್ಕೆಟ್, ಅದರ ಪಕ್ಕದಲ್ಲಿಯೇ ನೇತು ಬಿದ್ದಿರುವ ಹಿತ್ತಾಳೆ ಪಾತ್ರೆ, ಗೋಡೆಗೆ ಅಲ್ಲಲ್ಲಿ ಹೊಡೆದಿರುವ ಮೊಳೆಗಳು, ಗೋಡೆಯ ಕೆಳಗೆ ನೆಲಕ್ಕೆ ಹೊಂದಿಕೊಂಡಂತೆ ಜೋಡಿಸಿರುವ ಟೈಲ್ಸ್ ಕಲ್ಲಿನ ಪಟ್ಟಿ, ಅದರಲ್ಲಿರುವ ಚಿತ್ತಾರಗಳು.. ಮತ್ತು ಡಚ್ ಅಡುಗೆ ಮನೆಗಳಲ್ಲಿರುವಂತೆ ಇಲ್ಲಿಯೂ ಇರುವ Footwarmer.. ಇವೆಲ್ಲವುಗಳಲ್ಲಿ ವರ್ಮೀರ್‍ನ ಕುಸುರಿ ಕಾರ್ಯ ಎದ್ದು ಕಾಣುತ್ತದೆ.

ಕಲಾವಿದ ಜೋಹಾನ್ಸ್ ವರ್ಮೀರ್ ಮೌನಕ್ಕೆ ಒತ್ತು ಕೊಟ್ಟು ಚಿತ್ರಿಸಿರುವ ಈ ಕಲಾಕೃತಿಯನ್ನು ಅವನೆಷ್ಟು ಮೌನದಿಂದ ಸಂಯಮದಿಂದ ಚಿತ್ರಿಸಿದ್ದಾನೆಂದು ಕೃತಿಯನ್ನು ಸೂಕ್ಷ್ಮವಾಗಿ ಕಂಡರಿಸಿದಾಗ ತಿಳಿಯುತ್ತದೆ. ಮೌನವನ್ನು ಪ್ರೀತಿಸಿದಷ್ಟೇ ಪ್ರಮಾಣದಲ್ಲಿ ಅವನು ಬೆಳಕನ್ನು ಇಲ್ಲಿ ಪ್ರೀತಿಸಿದ್ದಾನೆ. ಇದೊಂದೆ ಅಲ್ಲದೆ ಇನ್ನುಳಿದ ಬಹುತೇಕ ಕಲಾಕೃತಿಗಳಲ್ಲಿಯೇ ವರ್ಮೀರ್ ಬೆಳಕಿಗೆ ಒತ್ತು ಕೊಟ್ಟಿದ್ದಾನೆ. ಕತ್ತಲೆ-ಬೆಳಕಿನ ಈ ಆಟದಲ್ಲಿ ಕತ್ತಲೆ ಹಿಂದೆ ಸರಿದು ಬೆಳಕು ಝಗ್ಗನೆ ಬೆಳಗುವ ಢಾಳಾಗಿ ಕಾಣುವ ನೋಟವನ್ನು ಅವನ `ಪತ್ರ ಹಿಡಿದಿರುವವಳು’, `ಪತ್ರ ಬರೆಯುತ್ತಿರುವವಳು’, `ಮುತ್ತಿನೋಲೆ ಧರಿಸಿದ ಹುಡುಗಿ’ ತೂಕ ಮಾಡುತ್ತಿರುವ ಹೆಂಗಸು’ ಇವೇ ಮುಂತಾದ ಕೃತಿಗಳಲ್ಲಿ ಕಾಣಬಹುದು.

ವರ್ಮೀರ್ ಬಾರೋಕ್ ಶೈಲಿಗೆ ಸೇರಿದ ಕಲಾವಿದನಾಗಿದ್ದಾನೆ. 17ನೇ ಶತಮಾನದಲ್ಲಿ ಹಾಲೆಂಡ್‍ನ ಬಹುತೇಕ ಕಲಾವಿದರು ಇದೇ ಶೈಲಿಯಲ್ಲಿ ಕಲಾಕೃತಿಗಳನ್ನು ರಚಿಸಿದರು. ಪ್ರಕಾಶಮಾನವಾದ ಬೆಳಕು, ಆಳವಾದ ನೆರಳು; ಉಜ್ವಲವಾದ ಶ್ರೀಮಂತ ಬಣ್ಣಗಳು ಮತ್ತು ಮನುಷ್ಯನ ವಾಸ್ತವಿಕ ಜೀವನ ವಿಧಾನದಿಂದ ಆಯ್ದುಕೊಂಡ ವಸ್ತುಗಳು ಬಾರೋಕ್ ಶೈಲಿಯ ಕಲಾವಿದರಿಂದ ಅರಳಿನಿಂತಿವೆ. Rembrandt, Hendrick Avercamp, Jan Van Goyen, Frans Hals ಇನ್ನೂ ಮುಂತಾದ ಡಚ್ ಕಲಾವಿದರು ಬಾರೋಕ್ ಪರಂಪರೆಯಲ್ಲಿ ಸಾಗಿದವರು.

ವರ್ಮೀರ್ನ `ಗೌಳಿಗಿತ್ತಿ’ ಕೃತಿಯು ಬಾರೋಕ್ ಶೈಲಿಯ ಲಕ್ಷಣಗಳನ್ನು ಪರಿಪೂರ್ಣವಾಗಿ ಹೊಂದಿದೆ. ಅದರಲ್ಲಿ ಒಂದು ಲಕ್ಷಣ ಈ ಕೃತಿಯನ್ನು ವಿಶೇಷ ಸ್ಥಾನದಲ್ಲಿರಿಸಿದೆ. `ವಾಸ್ತವಿಕ ಜೀವನ ವಿಧಾನ’ದಲ್ಲಿ ತೊಡಗಿಕೊಂಡಿರುವ ಗೌಳಿಗಿತ್ತಿ ತೀರ ಸಾಮಾನ್ಯ ಮಹಿಳೆಯಾಗಿದ್ದಾಳೆ. ಮಹಾನ್‍ವ್ಯಕ್ತಿಗಳು, ಪುರಾಣ ವಸ್ತುಗಳು ಕಲೆಗೆ ಆಕರವಾಗುತ್ತಿದ್ದ ಸಂದರ್ಭದಲ್ಲಿ ಗೌಳಿಗಿತ್ತಿಯ ಚಿತ್ರಣವು ತುಂಬಾ ಗಮನಾರ್ಹವಾಗಿದೆ.

ವರ್ಮೀರ್ ಬದುಕಿದ್ದ ಕಾಲದಲ್ಲಿ ಅವನನ್ನು ಗುರುತಿಸದೇ, ಅವನ ಕಲಾಕೃತಿಗಳ ಮೌಲ್ಯ ಅರಿಯದೇ ಉದ್ಧೇಶಪೂರ್ವಕವಾಗಿಯೋ.. ನಿರುದ್ಧೇಶಪೂರ್ವಕವಾಗಿಯೋ ಅವನ ಮರಣಾನಂತರವೂ ಎರಡು ಶತಮಾನಗಳ ಕಾಲ ಅವನನ್ನು ಗತದಲ್ಲಿಯೇ ಹೂಳಲಾಗಿತ್ತು. ನಂತರ 19ನೇ ಶತಮಾನದಲ್ಲಿ ಇಬ್ಬರು ಸಂಶೋಧಕರ ಶೋಧದ ನಂತರ ಇವನ 66 ಕೃತಿಗಳ ಕುರಿತು ಪ್ರಬಂಧವನ್ನು ಪ್ರಕಟಿಸಿದರು. ಅಲ್ಲಿಂದ ವರ್ಮೀರ್‍ನ ಖ್ಯಾತಿ ಬೆಳೆದು ಡಚ್ ಸುವರ್ಣ ಯುಗದ ಖ್ಯಾತ ಕಲಾವಿದರಲ್ಲಿ ಇವನು ಒಬ್ಬನೆಂದು ಮನ್ನಣೆ ದೊರೆತಿದೆ.

 

 

ಇದನ್ನು ಓದಿ:

ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...