ಗೆಲುವಿನ ಹಂಬಲದ ನೋವಿನ ಹಗರಣ Scam 1992

Date: 19-04-2022

Location: ಬೆಂಗಳೂರು


'ಯಾರು ಯಾರಮೇಲೆ ಯಾವ ಸಮಯದಲ್ಲಿ ಆಕ್ರಮಣ ಮಾಡಬೇಕೆನ್ನುವ ತಂತ್ರಗಾರಿಕೆಯೇ ಆಯುಧ! ಚತುರ ಕಾಲಾಳುಗಳು ಯುದ್ಧಭೂಮಿಯಿಂದ ಹೊರಬಂದು ನೆಲೆ ಕಂಡುಕೊಂಡರೆ, ನಾಯಕರನ್ನೇ ನಂಬಿಕೊಂಡವರು ಕೊನೆಯ ಉಸಿರಿರುವವರೆಗೂ ಹೋರಾಟ ಮುಂದುವರಿಸಿ ನೆಲಕಚ್ಚಬೇಕಾಯಿತು. ಇಲ್ಲಿ ದೂಷಿಸಬೇಕಾಗಿರುವುದು ನಾಯಕರನ್ನೂ ಅಲ್ಲ, ನಂಬಿಕೆಯನ್ನೂ ಅಲ್ಲ. ಇದು ಕೇವಲ ಸಮಯ-ಸಂದರ್ಭಗಳೊಂದಿಗಿನ ಹೊಡೆದಾಟ! ಕಾಲವೇ ಇಲ್ಲಿ ನ್ಯಾಯಾಧೀಶ' ಎನ್ನುತ್ತಾರೆ ಲೇಖಕಿ ಅಂಜನಾ ಹೆಗಡೆ. ಅವರು ತಮ್ಮ ಬೆಳ್ಳಕ್ಕಿ ಸಾಲು ಅಂಕಣದಲ್ಲಿ Indian Financial Thriller ಕಥಾಸರಣಿ Scam 1992 ಕುರಿತು ವಿಶ್ಲೇಷಿಸಿದ್ದಾರೆ.

ಕನಸು-ಭ್ರಮೆ, ಆತ್ಮವಿಶ್ವಾಸ-ಹುಂಬತನಗಳನ್ನು ಬೇರ್ಪಡಿಸುವ ಗೆರೆ ಕಣ್ಣಿಗೆ ಕಾಣಿಸದಷ್ಟು ತೆಳುವಾದದ್ದು. ಸಮಯಕ್ಕೆ ಅನುಗುಣವಾಗಿ ಎಲ್ಲವೂ ಪೊರೆಕಳಚಿ ನೈಜರೂಪದಲ್ಲಿ ಪ್ರಕಟಗೊಳ್ಳಲೇಬೇಕಾಗಿರುವುದು ಪ್ರಕೃತಿಯ ನಿಯಮ. ಯಾವ ಕನಸುಗಳೂ ಕಲ್ಪಿಸಿಕೊಂಡಷ್ಟು ದೀರ್ಘಕಾಲದವರೆಗೆ ಕೈಹಿಡಿಯಲಾರವು; ಭ್ರಮೆಯನ್ನೇ ಬದುಕುತ್ತಿರುವವರ ಭರವಸೆಗಳು ಭಾವಿಸಿಕೊಂಡಷ್ಟು ಅವಧಿಯವರೆಗೆ ಜತೆಯಾಗಲಾರವು; ಆತ್ಮವಿಶ್ವಾಸದ ಜೀವಿತಾವಧಿ ತೆಗೆದುಕೊಂಡ ನಿರ್ಧಾರಗಳ ಕ್ರಿಯಾಶೀಲತೆಯನ್ನು ಅವಲಂಬಿಸಿದರೆ, ಹುಂಬತನವೆನ್ನುವುದು ಪ್ರಜ್ಞಾವಂತ ನಿಲುವುಗಳನ್ನು ನಮ್ಮದಾಗಿಸಿಕೊಳ್ಳಲು ಅಡ್ಡಿಮಾಡುವ ಅತಿದೊಡ್ಡ ದೌರ್ಬಲ್ಯ. ಎಲ್ಲ ನ್ಯೂನತೆ-ಕೊರತೆಗಳೊಂದಿಗೇ ಬದುಕಿನೊಂದಿಗೂ ರಾಜಿ ಮಾಡಿಕೊಳ್ಳುವುದರ ಜತೆಯಲ್ಲಿಯೇ ಸಮಯೋಚಿತ ಮತ್ತು ಪ್ರಾಯೋಗಿಕವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಲೇಬೇಕಾಗಿರುವುದು ಸಾರ್ವಕಾಲಿಕ ಅಗತ್ಯ. ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತ ಹೋದಂತೆ ಅತ್ಯಂತ ಜಾಗರೂಕ ಮತ್ತು ನಯನಾಜೂಕಿನ ವರ್ತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಆ ಯಶಸ್ಸಿನ ಕಾಲಾವಧಿಯೂ ದೀರ್ಘವಾಗುತ್ತ ಹೋಗಲು ಸಾಧ್ಯ. ಹಾಗೊಂದು ಅಸಾಧಾರಣ ಗೆಲುವಿನ ಮತ್ತು ಆ ಗೆಲುವಿನ ಹಿಂದಿರುವ ಅಪಾಯಕಾರಿ ನಿರ್ಧಾರಗಳ ಕುರಿತಾದ ಕಥಾಸರಣಿ Scam 1992.

ಹೆಸರೇ ಸೂಚಿಸುವಂತೆ ಇದೊಂದು ಹಗರಣದ ಇತಿಹಾಸ; ಮನೆಯ ಬಾಡಿಗೆಯನ್ನೂ ಕಟ್ಟಲಾಗದಂತಹ ಬಡತನದಲ್ಲಿದ್ದ ವ್ಯಕ್ತಿಯೊಬ್ಬ ನೋಡುನೋಡುತ್ತ ಆರ್ಥಿಕ ವ್ಯವಸ್ಥೆಯನ್ನೇ ಅಲ್ಲಾಡಿಸುವ ಮಟ್ಟಕ್ಕೆ ಬೆಳೆದುನಿಲ್ಲುವ ಕಥೆ. ಶ್ರೀಮಂತನಾಗುವ ಕನಸನ್ನು ಹೊಂದಿರದ ಯುವಕರಿಲ್ಲ. ಆದರೆ ಶ್ರೀಮಂತಿಕೆಯ ಹಂಬಲವನ್ನೇ ಬದುಕಾಗಿಸಿಕೊಂಡರೆ ಉಂಟಾಗಬಹುದಾದ ಅಲ್ಲೋಲಕಲ್ಲೋಲವೇ ಈ ಹಗರಣದ ವಿಷಯವಸ್ತು. ಬದುಕಿನ ಆರಂಭಿಕ ಹಂತಗಳಲ್ಲಿ ಹುಟ್ಟಿಕೊಳ್ಳುವ ಯಾವ ಕನಸುಗಳಿಗೆ ವಾಸ್ತವರೂಪ ಕೊಡಬಹುದೆನ್ನುವ ತಿಳಿವಳಿಕೆಯಿಲ್ಲದ, ಇದ್ದರೂ, ಎದುರಾಗಬಹುದಾದ ಅಪಾಯಗಳೆಲ್ಲವನ್ನೂ ನಿರ್ಲಕ್ಷ್ಯಿಸಿ ಕನಸುಗಳ ಹಿಂದೆ ಓಡುವ ಹುಂಬತನವನ್ನು ತಿದ್ದುವವರಾರು! ಬಡತನದಿಂದ ಪಾರಾಗಲು ಅವಿವೇಕದ ಮಾರ್ಗದಲ್ಲಿ ಚಲಿಸುವವನ ಗೆಲುವು ಎಲ್ಲಿಯವರೆಗೆ ಆತನ ಕೈಹಿಡಿಯಬಲ್ಲದು! ಹಣ ಗಳಿಸುವುದೇ ಬದುಕಿನ ಏಕೈಕ ಉದ್ದೇಶವಾಗಿಬಿಟ್ಟರೆ ನಿಜವಾದ ಅರ್ಥದಲ್ಲಿ ಅದನ್ನೊಂದು ಯಶಸ್ಸೆಂದು ಪರಿಗಣಿಸಲಾದೀತೇ! ವ್ಯವಸ್ಥೆಯ ಲೋಪದೋಷಗಳನ್ನು ಅರ್ಥೈಸಿಕೊಂಡು, ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವ ಚಾಣಾಕ್ಷತನವನ್ನು ಮೈಗೂಡಿಸಿಕೊಂಡರೆ ಹಣ ಗಳಿಸುವುದೊಂದು ಸಸಾರದ ಸಂಗತಿಯೆನ್ನಿಸಬಹುದು. ಆದರೆ ಸಮಯ-ಸಂದರ್ಭಗಳು ತಮ್ಮ ಚಾಣಾಕ್ಷತನವನ್ನು ತೋರಿಸಲು ಆರಂಭಿಸಿದ ಮರುಕ್ಷಣವೇ ಎಲ್ಲವೂ ಬದಲಾಗಿಬಿಡುವುದುಂಟು. ಆ ಬದಲಾವಣೆಯೇ ಇಲ್ಲಿ ಹಗರಣದ ರೂಪ ಪಡೆದುಕೊಳ್ಳುವುದೊಂದು ವಿಪರ್ಯಾಸ.

ಈ ಹಗರಣದ ಹಿಂದಿರುವ ವ್ಯವಹಾರವಾಗಲೀ, ಹಣದ ವಹಿವಾಟಾಗಲೀ ಜನಸಾಮಾನ್ಯನ ಎಣಿಕೆಗೆ ಸಿಕ್ಕುವಂಥದ್ದಲ್ಲ. ಯಾರು ಕಷ್ಟಪಟ್ಟು ದುಡಿದ ಹಣ ಯಾರ ಕೈಸೇರಿತು, ಯಾರ ಪಾಲಿನ ಲಾಭ ಯಾರ ಖಾತೆಗೆ ಜಮಾ ಆಯಿತು ಎನ್ನುವಂತಹ ದಾಖಲೆಗಳನ್ನು ಸುಲಭವಾಗಿ ನಮೂದಿಸುವಂಥ ತಂತ್ರಜ್ಞಾನ ಲಭ್ಯವಿರದಿದ್ದ ಕಾಲ ಅದು. ಹಣಕಾಸಿನ ವ್ಯವಹಾರವನ್ನೂ ನಂಬಿಕೆಯ ಆಧಾರದ ಮೇಲೆ ನಡೆಸುತ್ತಿದ್ದ ಆ ಕಾಲಘಟ್ಟದಲ್ಲಿ ಅದೇ ನಂಬಿಕೆಯನ್ನೇ ತಮ್ಮ ಆರ್ಥಿಕ ಲಾಭಕ್ಕಾಗಿ ಬಳಸಿಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ. ಅದು ಹಣದ ವಹಿವಾಟೇ ಆಗಿರಲೀ, ಷೇರು ಮಾರುಕಟ್ಟೆಯಿರಲೀ, ಆಸ್ತಿಯ ಕುರಿತಾದ ವಾದ-ವಿವಾದಗಳಿರಲೀ ಎಲ್ಲವೂ ಮಾತುಕತೆಯಲ್ಲಿಯೇ ಬಹುಪಾಲು ಇತ್ಯರ್ಥವಾಗುತ್ತಿದ್ದ ಆ ವ್ಯವಹಾರಗಳಲ್ಲಿ ಭರವಸೆಯದೇ ಬಹುದೊಡ್ಡ ಪಾತ್ರ. ಕಾಗದಪತ್ರಗಳಿಗಿಂತ ಹೆಚ್ಚಾಗಿ ಎದುರಿಗಿರುವವನ ಮಾತಿನಲ್ಲಿ ವಿಶ್ವಾಸವಿಡುತ್ತಿದ್ದ ಆ ಕಾಲದಲ್ಲಿ ತರ್ಕಬದ್ಧವಾಗಿ ಮಾತನಾಡಬಲ್ಲವನೇ ನೇತಾರನಾಗಿಯೂ, ಪರಾಕ್ರಮಿಯಂತೆಯೂ ಜನರ ವಿಶ್ವಾಸವನ್ನು ಗಳಿಸಬಲ್ಲವನಾಗಿದ್ದ. ಹಾಗೆ ಮಹಾಪುರುಷನಾಗಿ ಕಿರೀಟ ತೊಟ್ಟವನು ತನ್ನನ್ನು ನಂಬಿಕೊಂಡವರನ್ನು ಉಳಿಸುತ್ತಾನೆಯೋ, ಬೀಳಿಸುತ್ತಾನೆಯೋ ಎನ್ನುವುದು ಆತ ನಂಬಿಕೊಂಡಿದ್ದ ಮೌಲ್ಯ-ಆದರ್ಶಗಳ ಮೇಲೆ ಅವಲಂಬಿತವಾಗಿರುತ್ತಿತ್ತು. ಹಾಗೊಂದು ಭರವಸೆಯೇ ತಮ್ಮನ್ನು ಉಳಿಸಬಲ್ಲದೆಂದು ಬಲವಾಗಿ ನಂಬಿಕೊಂಡಿದ್ದವರ ಬದುಕಿನ ಕಡತಗಳೇ ನಾಶವಾಗಿಹೋದರೂ ಹಗರಣಗಳು ಮಾತ್ರ ಎಲ್ಲ ಅಂಕಿ ಅಂಶಗಳ ಸಮೇತ ಇತಿಹಾಸದಲ್ಲಿ ದಾಖಲಾದವು.

ಹಾಗೆ ದಾಖಲಾದ ಈ ಹಣ ಹಾಗೂ ಷೇರು ಮಾರುಕಟ್ಟೆಯ ವ್ಯವಹಾರವನ್ನು ಹಗರಣ ಎಂದು ನಾಮಕರಣ ಮಾಡುವವರೆಗೂ ಎಲ್ಲವೂ ಸುರಳಿತವಾಗಿಯೇ ನಡೆಯುತ್ತಿತ್ತು. ತಮಗಿರುವ ಎಲ್ಲ ಸಂಪರ್ಕಗಳನ್ನೂ, ವ್ಯವಸ್ಥೆಯ ಲೋಪದೋಷಗಳನ್ನು ಚತುರತೆಯಿಂದ ಬಳಸಿಕೊಂಡವರೆಲ್ಲ ಜನರ ದೃಷ್ಟಿಯಲ್ಲಿ ನಾಯಕರಾದರು. ಅವಕಾಶ ಸಿಕ್ಕಾಗಲೆಲ್ಲ ಒಬ್ಬರ ಮೇಲೊಬ್ಬರು ದಾಳಿ ಮಾಡುತ್ತ, ಒಬ್ಬರನ್ನೊಬ್ಬರು ತುಳಿಯುತ್ತ ಪ್ರಜಾಪ್ರಭುತ್ವದ ಸಕಲ ಸೌಕರ್ಯಗಳನ್ನೂ ಅನುಭವಿಸಿದರು. ಈ ಇಡೀ ಹಗರಣವೇ ಒಂದು ಯುದ್ಧ; ಬ್ಯಾಂಕು-ಮಾರುಕಟ್ಟೆಗಳೇ ಯುದ್ಧಭೂಮಿಗಳಾದರೆ, ಯಾರು ಯಾರಮೇಲೆ ಯಾವ ಸಮಯದಲ್ಲಿ ಆಕ್ರಮಣ ಮಾಡಬೇಕೆನ್ನುವ ತಂತ್ರಗಾರಿಕೆಯೇ ಆಯುಧ! ಚತುರ ಕಾಲಾಳುಗಳು ಯುದ್ಧಭೂಮಿಯಿಂದ ಹೊರಬಂದು ನೆಲೆ ಕಂಡುಕೊಂಡರೆ, ನಾಯಕರನ್ನೇ ನಂಬಿಕೊಂಡವರು ಕೊನೆಯ ಉಸಿರಿರುವವರೆಗೂ ಹೋರಾಟ ಮುಂದುವರಿಸಿ ನೆಲಕಚ್ಚಬೇಕಾಯಿತು. ಇಲ್ಲಿ ದೂಷಿಸಬೇಕಾಗಿರುವುದು ನಾಯಕರನ್ನೂ ಅಲ್ಲ, ನಂಬಿಕೆಯನ್ನೂ ಅಲ್ಲ. ಇದು ಕೇವಲ ಸಮಯ-ಸಂದರ್ಭಗಳೊಂದಿಗಿನ ಹೊಡೆದಾಟ! ಕಾಲವೇ ಇಲ್ಲಿ ನ್ಯಾಯಾಧೀಶ. ನ್ಯಾಯಕ್ಕಾಗಿ ಕಾದುನಿಂತವರೆಲ್ಲ ತಮ್ಮತಮ್ಮ ಸಮಯಕ್ಕಾಗಿ ಕಾಯದೇ ಬೇರೆ ವಿಧಿಯಿಲ್ಲ.

ವಿಧಿ, ಹಣೆಬರಹ ಹೀಗೆ ಯಾವ ಹೆಸರಿನಿಂದ ಕರೆದರೂ ಅದು ತನ್ನ ಕರಾಮತಿಯನ್ನು ತೋರಿಸಿದ ತಕ್ಷಣ ಮನುಷ್ಯನ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಲೇಬೇಕು. ಇಲ್ಲವಾದರೆ ಕೆಳಮಧ್ಯಮವರ್ಗದ ಬದುಕನ್ನು ಬದುಕುತ್ತಲೇ ಕೌಟುಂಬಿಕ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದ್ದ ವ್ಯಕ್ತಿಯೊಬ್ಬ ದೇಶದ ಅತಿದೊಡ್ಡ ಶ್ರೀಮಂತರ ಪಟ್ಟಿಗೆ ಸೇರಿದಮೇಲೂ, ತನ್ನೊಂದಿಗೆ ತನ್ನ ಕುಟುಂಬದವರನ್ನೂ ಆತಂಕದ ಬದುಕಿಗೆ ತಳ್ಳುವ ಪರಿಸ್ಥಿತಿ ಬಂದೊದಗುತ್ತಿರಲಿಲ್ಲ; ಸಹೋದರನ, ಸ್ನೇಹಿತನ ಮಾತನ್ನು ಕಡೆಗಣಿಸಿ ತನ್ನ ಬದುಕನ್ನೇ ಷೇರು ಮಾರುಕಟ್ಟೆಯನ್ನಾಗಿಸಿಕೊಳ್ಳುವ ಅಗತ್ಯವೂ ಎದುರಾಗುತ್ತಿರಲಿಲ್ಲ. ಶ್ರೀಮಂತಿಕೆಯ ದಾಹವನ್ನೂ, ಪ್ರಸಿದ್ಧಿಯ ಮೋಹವನ್ನೂ ಕೊಂಚ ನಿಯಂತ್ರಣದಲ್ಲಿಟ್ಟುಕೊಂಡಿದ್ದರೂ ನೆಮ್ಮದಿಯ ಸಾವನ್ನಾದರೂ ಕಾಣಬಹುದಿತ್ತು ಎನ್ನುವ ಅನಿಸಿಕೆಯೇ ಈ ಹಗರಣಕ್ಕೊಂದು ಬೇರೆಯದೇ ಆದ ಆಯಾಮವನ್ನು ಒದಗಿಸುತ್ತದೆ. ಅಸಡ್ಡೆಯ ಮನೋಭಾವ ಹಾಗೂ ಹುಂಬತನದ ನಿರ್ಧಾರಗಳೇ ಈ ಇಡೀ ಪ್ರಕರಣದ ರೂವಾರಿಗಳೆಂದು ಹೊರಗಿನವರಿಗೆ ಅನ್ನಿಸಿದರೂ, ಆ ನಿರ್ಧಾರಗಳನ್ನು ತೆಗೆದುಕೊಳ್ಳುವವನಿಗೆ ಅದು ಆತ್ಮವಿಶ್ವಾಸದಂತೆ ಭಾಸವಾಗಿರಲೂಬಹುದು. ಎಲ್ಲವೂ ತಾನಂದುಕೊಂಡಂತೆಯೇ ನಡೆಯುತ್ತಿರುವ ಸಮಯದಲ್ಲಿ ಕಣ್ಣಿಗೆ ಕಾಣಿಸದ ಹಣೆಬರಹವನ್ನೋ, ಕಡತಗಳಲ್ಲಿ ಕಾಣಿಸಿಕೊಳ್ಳದ ವಿಧಿಯ ಲೆಕ್ಕಾಚಾರವನ್ನೋ ಲೆಕ್ಕಕ್ಕೆ ತೆಗೆದುಕೊಳ್ಳುವ ಮನಃಸ್ಥಿತಿ ಎಷ್ಟು ಜನರಿಗಿದ್ದೀತು! ಇನ್ನೇನು ಎಲ್ಲವೂ ಕೈತಪ್ಪಿಹೋಗಲಿದೆ, ಎಲ್ಲೆಲ್ಲೂ ಸಂಚಲನ ಮೂಡಿಸಿದ ಹಗರಣವೊಂದು ಇತಿಹಾಸ ಸೇರಲಿದೆ ಎಂದು ಅರಿವಾಗುವ ಸಂದರ್ಭದಲ್ಲಿ, "ದೇವರ ಎದುರು ಕೈಗಳನ್ನಾದರೂ ಜೋಡಿಸು. ಆತನ ದಯೆಯಿಂದಲೇ ಎಲ್ಲ ಗೆಲುವೂ ಸಾಧ್ಯವಾಗಿದ್ದು" ಎನ್ನುತ್ತ ದೇವರನಾಮ ಜಪಿಸುವ ಮುಗ್ಧ ತಾಯಿಯ ಮುಖ ಎದುರಿಗೇ ಬಂದು ನಿಂತಂತಾಗುತ್ತದೆ. ತನ್ನನ್ನು ತಾನು ಅತಿಯಾಗಿ ನಂಬಿಕೊಂಡವನ ಅಧಃಪತನವೂ ಅದೇ ನಂಬಿಕೆಯ ಇನ್ನೊಂದು ಮುಖವಾಗಿದ್ದಿರಲೂಬಹುದು ಎನ್ನುವ ಯೋಚನೆಯೇ ಕಂಗೆಡಿಸುತ್ತದೆ.

ತನಗೆ ತಾನೇ ತೊಡಿಸಿಕೊಂಡ ಪ್ರತಿಷ್ಠೆಯ ಕಿರೀಟ ಹಾಗೂ ಪ್ರಯಾಸಪಟ್ಟು ಏರಿದ ಯಶಸ್ಸಿನ ಸಿಂಹಾಸನವನ್ನು ಉಳಿಸಿಕೊಳ್ಳಲು ಮಾಡುವ ಪ್ರಯತ್ನಗಳೆಲ್ಲವೂ ವಿಫಲವಾಗಿ, ತನ್ನನ್ನು ತಾನು ಷೇರು ಮಾರುಕಟ್ಟೆಯ ಮಹಾರಾಜನೆಂದು ಘೋಷಿಸಿಕೊಂಡಿದ್ದ ವ್ಯಕ್ತಿ ಜೈಲು ಸೇರುವುದರೊಂದಿಗೆ ಈ ಪ್ರಕರಣಕ್ಕೊಂದು ತೆರೆ ಎಳೆಯಲಾಗುತ್ತದೆ. ಜೈಲಿನಲ್ಲಿಯೇ ಸಂಭವಿಸುವ ಹೃದಯಾಘಾತದಿಂದಾಗಿ ಆತನ ಬದುಕು ಕೂಡಾ ಮುಗಿದುಹೋದರೂ, ಆತ ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುವುದು ನಾಯಕನಾಗಿಯೇ ಹೊರತು ಖಳನಾಯಕನಾಗಿ ಅಲ್ಲ. ಗೆಲುವಿಗಾಗಿ ಆತ ನಡೆಸುವ ಹೋರಾಟಗಳಿರಬಹುದು, ಸೋಲನ್ನು ಸ್ವೀಕರಿಸುವ ರೀತಿಯಾಗಿರಬಹುದು, ಅಪ್ಪಟ ವ್ಯಾಪಾರಿಯಂಥ ಆತನ ಮಾತುಕತೆ-ವ್ಯವಹಾರಗಳಿರಬಹುದು, ಹಾಗೆಯೇ ಆತನ ಷೋಕಿಗಳು ಎಲ್ಲವೂ ಅವನ ವ್ಯಕ್ತಿತ್ವಕ್ಕೊಂದು ಅಪ್ಪಟ ನಾಯಕನ ಮೆರಗನ್ನು ನೀಡುವ ಸಂಗತಿಗಳೇ. ಸೋಲಿಗೆ ಕಾರಣಗಳು ಸಾಕಷ್ಟಿರಬಹುದು. ಆದರೆ ಗೆಲುವಿಗೆ ಕಾರಣವಾಗಿದ್ದು ಗೆಲ್ಲಲೇಬೇಕೆನ್ನುವ ಹಟ. ಆ ಹಟವನ್ನೇ ಗುರಿಯೆಂದುಕೊಂಡರೆ, ಎಷ್ಟು ಜನರ ಲಕ್ಷ್ಯ ಸಾಯುವವರೆಗೂ ಒಂದೇ ಆಗಿರಲು ಸಾಧ್ಯ! ನಾಳೆ ಬದುಕಿರುತ್ತೇನೆನ್ನುವ ವಿಶ್ವಾಸವಿಲ್ಲದಿದ್ದರೂ, ಗೆಲ್ಲಬಲ್ಲೆ ಎನ್ನುವ ವಿಶ್ವಾಸವನ್ನು ಪ್ರತಿ ನಾಳೆಗಳಿಗೂ ರವಾನಿಸುವ ಕೆಲಸವನ್ನು ಮಾಡಲು ಎಷ್ಟು ಜನರಿಂದ ಸಾಧ್ಯವಾದೀತು! ಹಾಗಾಗಿಯೇ ಆತನ ಸಾವು ಮಧ್ಯಮವರ್ಗದ ಕನಸಿನೊಂದರ ಸಾವಿನಂತೆ ತೀವ್ರವಾಗಿ ಕಾಡುತ್ತದೆ.

ಬಡತನದೊಂದಿಗೆ ಆರಂಭವಾಗಿ ಮೋಸ, ಅನ್ಯಾಯ, ಹೋರಾಟ, ಸಾವು-ನೋವುಗಳನ್ನು ಒಳಗೊಂಡ ಈ ಹಗರಣ ಕಥೆಯಾಗಿ ಎಷ್ಟು ಆಕರ್ಷಕವೆನ್ನಿಸುತ್ತದೆಯೋ ಜೀವನಚರಿತ್ರೆಯಾಗಿ ಅಷ್ಟೇ ದುಃಖಕರವಾದದ್ದು ಕೂಡಾ. ಇದರಲ್ಲಿ ಭಾಗಿಯಾಗಿರುವ ಒಬ್ಬೊಬ್ಬರ ನಡತೆ-ನಡೆವಳಿಕೆಗಳೂ ಅಧ್ಯಯನಯೋಗ್ಯ. ಈ ಪ್ರಕರಣದಿಂದಾಗಿ ನೊಂದವನು ಹಾಗೂ ಪ್ರಯೋಜನ ಪಡೆದುಕೊಂಡವನು ಇಬ್ಬರೂ ಸ್ವಾರ್ಥಿಗಳ ಪಟ್ಟಿಗೇ ಸೇರುತ್ತಾರೆ. ತಮ್ಮತಮ್ಮ ಲಾಭ-ನಷ್ಟಗಳ ಲೆಕ್ಕಾಚಾರವಿಲ್ಲದೇ ಇಲ್ಲಿ ಯಾರೂ ವ್ಯವಹರಿಸುವುದೇ ಇಲ್ಲ. ಮನುಷ್ಯ ಸ್ವಭಾವಗಳನ್ನು ಆಳವಾಗಿ ಅಧ್ಯಯನ ಮಾಡಲು ತೊಡಗಿದರೆ ವಿಶ್ವಾಸ, ನಂಬಿಕೆ, ಭರವಸೆಗಳೆಲ್ಲ ನಿಜದಲ್ಲಿ ಅಸ್ತಿತ್ವದಲ್ಲಿವೆಯೇ ಅಥವಾ ದ್ವೇಷ, ಅಸೂಯೆ, ಸ್ವಾರ್ಥಗಳೇ ಮನುಷ್ಯನ ಮೂಲಸ್ವಭಾವಗಳಾಗಿರಬಹುದೇ! ಇತಿಹಾಸ, ಜೀವನಚರಿತ್ರೆಗಳು ಹುಟ್ಟುಹಾಕುವ ಅನೇಕ ಪ್ರಶ್ನೆಗಳಿಗೆ ಉತ್ತರ ದೊರಕದಿರುವುದೇ ಒಳ್ಳೆಯದು.

ಕಥಾಸರಣಿ Scam 1992 ಟ್ರೇಲರ್:

ಈ ಅಂಕಣದ ಹಿಂದಿನ ಬರಹಗಳು:
ಅಂತ್ಯವಿಲ್ಲದ ಸಂಘರ್ಷಗಳ ಪೂರ್ವಚರಿತ್ರೆ ROCKET BOYS
ಏಕಾಂತದೊಂದಿಗೆ ಸರಳ ಸಂಭಾಷಣೆ STORIES BY RABINDRANATH TAGORE
ಬಂಧನಕ್ಕೂ ಬಿಡುಗಡೆಗೂ ಏಕೈಕ ರಹದಾರಿ MODERN LOVE
ಕೆಂಪು ಕೂದಲಿನ ರಾಜಕುಮಾರಿಯ ಕತೆ ANNE WITH AN E
https://www.bookbrahma.com/news/asahayaka-gadirekheya-kanasina-payana-crash-landing-on-you
ಮುಗುಳ್ನಗೆಯ ಆಲಿಂಗನ SOMETHING IN THE RAIN (KOREAN ROMANTIC DRAMA)
ಒಳತಾರಸಿಯ ಒಂಟಿ ಚೌಕಗಳು THE QUEEN'S GAMBIT
ಅನುರಾಗದ ಮಧುರ ಆಲಾಪ BANDISH BANDITS (INDIAN ROMANTIC DRAMA)
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...