ಜರ್ಮನಿಯ `ಕನ್ನಡ ಪಂಡಿತ' ಫರ್ಡಿನಾಂಡ್ ಕಿಟೆಲ್

Date: 07-04-2020

Location: ಬೆಂಗಳೂರು


ಧರ್ಮ ಪ್ರಚಾರ ಮಾಡುವ ಉದ್ದೇಶದಿಂದ ಬಂದ ಕ್ರಿಶ್ಚಿಯನ್ ಪಾದ್ರಿಯೊಬ್ಬ ಕನ್ನಡ ಕಲಿತು ಮಾಡಿದ ಸಾಧನೆ ಅನನ್ಯ ಮತ್ತು ಅಪೂರ್ವ. ಜನಸಾಮಾನ್ಯರಲ್ಲಿ ತಮ್ಮ ಧರ್ಮದ ಬಗ್ಗೆ ಅರಿವು ಮೂಡಿಸಬೇಕಾದರೆ ಅವರದೇ ಭಾಷೆಯಲ್ಲಿ ಮಾತನಾಡಬೇಕು ಎಂಬ ಸರಳ ಸಿದ್ಧಾಂತ ಪಾದ್ರಿಗಳದು. ಅದಕ್ಕಾಗಿ ಪಾದ್ರಿ ದೇಶ- ಭಾಷೆ ಯಾವುದೇ ಆದರೂ ದೇಸಿ ಭಾಷೆ ಕಲಿಯುವ ಪ್ರಯತ್ನ ಮಾಡಿದರು. ಹೀಗೆ ಕಲಿತ ಭಾಷೆಯನ್ನು ಕೇವಲ ಧಾರ್ಮಿಕ ಕಾರಣಗಳಿಗಾಗಿ ಸೀಮಿತಗೊಳಿಸಿಕೊಳ್ಳಲಿಲ್ಲ. ಬದಲಿಗೆ ಶಾಸನ ಸಂಗ್ರಹ, ಸಂಶೋಧನೆ, ಜಾನಪದಗೀತೆಗಳ ಸಂಗ್ರಹ, ಹಳೆಗನ್ನಡ ಗ್ರಂಥಗಳ ಸಂಪಾದನೆ ಮತ್ತು ಪ್ರಕಟಣೆಯಂತಹ ಸಾಂಸ್ಕೃತಿಕ- ಸಾಹಿತ್ಯಕ ಕ್ಷೇತ್ರದಲ್ಲಿ ನಡೆದು ಅದ್ಭುತ ಸಾಧನೆ ಮಾಡಿದರು.

ಒಬ್ಬೊಬ್ಬ ಕ್ರಿಶ್ಚಿಯನ್ ಪಾದ್ರಿಯೂ ಒಂದೊಂದು ಅಪೂರ್ವ ಕೆಲಸ ಮಾಡುವ ಮೂಲಕ ಕನ್ನಡಿಗರ ಮೇಲೆ ಋಣಭಾರ ಹೊರಿಸಿದ್ದಾರೆ. ಬಿ.ಎಲ್. ರೈಸ್ ಶಾಸನ ಸಂಗ್ರಹಿಸಿದರೆ ಜೆ.ಎಫ್.ಫ್ಲೀಟ್ ಜಾನಪದ ಗೀತೆಗಳ ಸಂಗ್ರಹ ಮಾಡಿದ. ಹಾಗೆಯೇ ಹರ್ಮನ್ ಮೋಗ್ಲಿಂಗ್ ದಾಸರ ಪದಗಳನ್ನು ಸಂಗ್ರಹಿಸಿದ ಮತ್ತು ಕನ್ನಡ ಪತ್ರಿಕೋದ್ಯಮಕ್ಕೆ ಅಸ್ತಿಭಾರ ಹಾಕಿದ. ಅವರೆಲ್ಲರಿಗಿಂತ ಭಿನ್ನವಾದ ಮತ್ತು ಹೆಚ್ಚು ಮಹತ್ವದ ಸಾಧನೆ- ಕಾರ್ಯ ಮಾಡುವ ಮೂಲಕ ಕನ್ನಡಿಗರಿಗೆ ಪ್ರಾತಃಸ್ಮರಣೀಯ ಆದವರು ರೆವರೆಂಡ್ ಫರ್ಡಿನಾಂಡ್ ಕಿಟೆಲ್.

ಕನ್ನಡ ಕಲಿಯುವುದು ಅನ್ಯಭಾಷಿಕರಿಗೆ ಸುಲಭವಾಗಲಿ ಎಂಬ ಉದ್ದೇಶದಿಂದ ಕನ್ನಡ ಪದಗಳನ್ನು ಸಂಗ್ರಹಿಸಿ ಅದಕ್ಕೆ ಅರ್ಥ ಪತ್ತೆಹಚ್ಚಿ ಇಂಗ್ಲಿಷ್ ಅರ್ಥವನ್ನೂ ಜೊತೆಗೆ ನೀಡುವ ಕಿಟೆಲ್‌ರ ಕನ್ನಡ ಕೋಶ ಕನ್ನಡ ಅಕ್ಷರಲೋಕದ ಮೈಲಿಗಲ್ಲು. ಕಿಟೆಲ್‌ರ `ಕನ್ನಡ- ಇಂಗ್ಲಿಷ್ ಡಿಕ್ಶನರಿ' ಪ್ರಕಟವಾಗಿ ನೂರಾರು ವರ್ಷಗಳಾಗಿದ್ದರೂ ಅದಕ್ಕೆ ಸರಿದೊರೆಯಾಗಿ ನಿಲ್ಲಬಲ್ಲ ಮತ್ತೊಂದು ಕೆಲಸ ಆಗಿಲ್ಲ- ಅಷ್ಟೇ ಅಲ್ಲ ಅದನ್ನು ಮಾಡುವುದು ಬಹುಶಃ ಸಾಧ್ಯವೂ ಇಲ್ಲ. ಅದಕ್ಕೆ ಕಿಟೆಲ್‌ರ ಕಾಳಜಿ ಮತ್ತು ಹಾಕಿದ ಅಪಾರ ಪರಿಶ್ರಮವೇ ಕಾರಣ.

ಕಿಟೆಲ್‌ರ ನಿಘಂಟು ರೂಪುಗೊಂಡ ಕಥೆ ರೋಚಕವೂ ಹೌದು, ಕರುಣಾಜನಕವೂ ಹೌದು. ಕನ್ನಡ ಸಾಂಸ್ಕೃತಿಕ ಲೋಕದ ಅವಿಸ್ಮರಣೀಯ- ದಾಖಲಾರ್ಹ ಘಟನೆಯೂ ಹೌದು. ಜರ್ಮನಿಯ ಬಾಸೆಲ್ ಮಿಷನ್ ತಂಡದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕಾಗಿ ಬಂದ ಕಿಟೆಲ್ ಕನ್ನಡ ಕಲಿತರು. ಮತ್ತು ಕನ್ನಡದ ಪ್ರಾಚೀನ ಗ್ರಂಥಗಳ ಬಗ್ಗೆ ಪ್ರೀತಿ- ಒಲವು ಬೆಳೆಸಿಕೊಂಡರು.

ಕನ್ನಡ- ಇಂಗ್ಲಿಷ್ ಪದಕೋಶ ಇದ್ದರೆ ಕಲಿಕೆ ಸುಲಭವಾಗುತ್ತದೆ ಎಂದು ಹಲವರು ಯೋಚಿಸಿದರು. ಅದಾಗಲೇ ಕ್ರಿಶ್ಚಿಯನ್ ಪಾದ್ರಿ ರೆವರೆಂಡ್ ರೀವ್ ರಚಿಸಿದ್ದ ಪದಕೋಶ ಇತ್ತು. ಆದರೆ, ಅದು ಶಾಸ್ತ್ರೀಯವಾಗಿರಲಿಲ್ಲ. ಹಲವು ಲೋಪ ದೋಷಗಳಿಂದ ಕೂಡಿತ್ತು. ಅದನ್ನು ಸರಿಪಡಿಸುವ ಕೆಲಸವನ್ನು ಇಂಗ್ಲಿಷ್ ಅಧಿಕಾರಿ ವಾಲ್ಟರ್ ಎಲಿಯಟ್ ಮತ್ತು ಬಾಸೆಲ್ ಮಿಷನ್ನಿನ ಹರ್ಮನ್ ಮೊಗ್ಲಿಂಗ್ ಅವರು ಕಿಟೆಲ್‌ರಿಗೆ ವಹಿಸಿದರು. ಇರುವ ನಿಘಂಟನ್ನೇ ರಿಪೇರಿ ಮಾಡಲು ಯೋಚಿಸಿ ಕಿಟೆಲ್ ಕಾರ್ಯಪ್ರವೃತ್ತರಾದರು. ಅದರೆ, ಅದು ರಿಪೇರಿ ಆಗದ ಪ್ರಮಾಣದಲ್ಲಿದೆ ಎಂದು ಅವರಿಗೆ ಅರಿವಾಗಲು ಹೆಚ್ಚು ದಿನ ಬೇಕಾಗಲಿಲ್ಲ.

ಆದರೆ, ಅದನ್ನು ಕೈ ಬಿಡುವ ಸ್ಥಿತಿಯಲ್ಲಿಯೂ ಕಿಟೆಲ್ ಇರಲಿಲ್ಲ. ತಮ್ಮ ಬಿಡುವಿನ ಬಹುತೇಕ ವೇಳೆಯನ್ನು ಡಿಕ್ಶನರಿಯ ಕೆಲಸದಲ್ಲಿಯೇ ಕಳೆಯಲು ಆರಂಭಿಸಿದರು. ಅದಕ್ಕಾಗಿ ಕನ್ನಡ ಬಲ್ಲ ವಿದ್ವಾಂಸರ ನೆರವು ಪಡೆದರು. ಧಾರವಾಡದ ರಸ್ತೆಗಳಲ್ಲಿ ನಿಂತು ಕಿಸೆಯಲ್ಲಿಟ್ಟುಕೊಂಡು ಬಂದ ಸಣ್ಣ ಪುಟ್ಟ ವಸ್ತುಗಳನ್ನು ಓಡಾಡುವವರಿಗೆ ತೋರಿಸಿ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ ಎಂದು ಕೇಳಿ ಉಚ್ಛಾರಗಳನ್ನು ದಾಖಲಿಸಿಕೊಳ್ಳುತ್ತ್ದಿದರು. ಒಂದೊಂದೇ ಹನಿ ಸೇರುತ್ತ ಹೋದ ಪದಗಳ ಸಂಖ್ಯೆ ವಿಫುಲವಾಗಿ ಬೆಳೆಯುತ್ತ ಹೋಯಿತು. ಶಾಸ್ತ್ರೀಯ ಗ್ರಂಥಗಳು ಮತ್ತು ಗಾದೆ ಮಾತುಗಳಲ್ಲಿ ಬಳಕೆಯಾಗುತ್ತಿದ್ದ ಕನ್ನಡ ಪದಗಳೂ ಕಿಟೆಲ್‌ರ ಕೋಶಕ್ಕೆ ಸೇರುತ್ತ ಹೋದವು. ಶಿಷ್ಟ ಮತ್ತು ಜನ ಮಾತನಾಡುವ ಪದಗಳನ್ನು ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡರು. ಇದೆಲ್ಲ ನಡೆದದ್ದು 1877ರಲ್ಲಿ. ಆಗಲೇ ಕಿಟೆಲ್‌ರ ಆರೋಗ್ಯ ಕೂಡ ಕೆಡಲು ಆರಂಭಿಸಿತು. ತಮ್ಮ ನಿಘಂಟಿನ ಹಸ್ತಪ್ರತಿಯೊಂದಿಗೆ ಜರ್ಮನಿಗೆ ತೆರಳಿದ ಕಿಟೆಲ್‌ರಿಗೆ ಅನಾರೋಗ್ಯದ ಮಧ್ಯೆದಲ್ಲಿಯೂ ಅಲ್ಲಿ ಸುಮ್ಮನೆ ಕೂಡಲು ಆಗಲಿಲ್ಲ. ಡಿಕ್ಶನರಿಯ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮುಂದುವರೆಸಿದರು. 1883ರಲ್ಲಿ ಮತ್ತೆ ಭಾರತಕ್ಕೆ ಮರಳಿದರು. ಕುಳಿತು ನಿಂತಲ್ಲೆಲ್ಲ ಅದೇ ಗುಂಗು. ಸಿಕ್ಕಸಿಕ್ಕವರ ಜೊತೆಗೆಲ್ಲ ಶಬ್ದಗಳ ಬಗೆಗೇ ಮಾತು ಚರ್ಚೆ. ನಂತರ ಕೆಲಸ ಪೂರ್ಣಗೊಂಡಿದೆ ಅನ್ನಿಸಿ ಮುದ್ರಣ ಮಾಡುವಂತೆ ಹಸ್ತಪ್ರತಿಯನ್ನು ಬಾಸೆಲ್ ಮಿಷನ್ ಸಂಸ್ಥೆಗೆ ವಹಿಸಿದರು.

ಅದರೆ, ಪ್ರಕಟಣೆಯ ಕೆಲಸ ಆರಂಭವಾಗುವ ಮುನ್ನವೇ ತಲೆನೋವು ಮತ್ತು ಕಣ್ಣುನೋವು ಕಿಟೆಲ್‌ರನ್ನು ಬಾಧಿಸಲು ಆರಂಭಿಸಿತು. ಅನಿವಾರ್ಯವಾಗಿ 1892ರಲ್ಲಿ ಮತ್ತೆ ಜರ್ಮನಿಗೆ ಪಯಣಿಸಿದರು ಕಿಟೆಲ್. ಕೆಲಸ ಪೂರ್ಣಗೊಂಡಿಲ್ಲ ಅನ್ನಿಸಲು ಆರಂಭಿಸಿ ಮತ್ತಷ್ಟು ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ತೀವ್ರ ಅನಾರೋಗ್ಯದ ಮಧ್ಯದಲ್ಲಿಯೇ ನಡೆಸಿದ ಸತತ ಎರಡು ವರ್ಷಗಳ ಕಾಲ ಸತತ ಪ್ರಯತ್ನದ ನಂತರ 70ಸಾವಿರ ಪದಗಳಿರುವ ಕೋಶ ಪ್ರಕಟವಾಯಿತು. ಆ ವೇಳೆಗೆ ಅಷ್ಟೊಂದು ಶಾಸ್ತ್ರೀಯವೂ, ಖಚಿತವೂ ಆದ, ನಿಯಮಬದ್ಧವೂ ಆದ ನಿಘಂಟು ಬೇರಾವ ಭಾಷೆಯಲ್ಲಿಯೂ ಇರಲಿಲ್ಲ. ಈಗಲೂ ಅದಕ್ಕೆ ಸಮನಾಗಿ ನಿಲ್ಲುವ ಮತ್ತೊಂದು ಕೋಶ ಭಾರತೀಯ ಭಾಷೆಗಳಲ್ಲಿಯೇ ಅಪರೂಪ. ಕಿಟೆಲ್‌ರ ಅನನ್ಯ ಸಾಧನೆಯನ್ನು ಗುರುತಿಸುವಲ್ಲಿ ಜರ್ಮನಿಯರು ಹಿಂದೆ ಬಿಳಲಿಲ್ಲ. ಕಿಟೆಲ್‌ರ ಸಾಹಸವನ್ನು ಗಮನಿಸಿದ ಕೂಬಿಂಗ್ಟನ್ ವಿಶ್ವವಿದ್ಯಾಲಯ `ಡಾಕ್ಟರ್ ಆಫ್ ಲಾಸ್' ಗೌರವ ಪದವಿ ನೀಡಿತು.

ಕನ್ನಡಿಗರು ಕಿಟೆಲ್ ಅವರನ್ನು  ’ಪಂಡಿತರು’ ಎಂದೂ ಅವರ ಡಿಕ್ಶನರಿಯನ್ನು `ಪಂಡಿತರ ಕೋಶ' ಎಂದು ಗುರುತಿಸುತ್ತಾರೆ. ಕಿಟೆಲ್‌ರು ನಿಘಂಟು ಮಾತ್ರವಲ್ಲದೆ 1871ರಲ್ಲಿಯೇ ಕೇಶಿರಾಜನ ಶಬ್ದಮಣಿ ದರ್ಪಣವನ್ನು ಪರಿಷ್ಕರಿಸಿ ಪ್ರಕಟಿಸಿದ್ದರು. ನಾಗವರ್ಮನ `ಛಂದೋಂಬುಧಿ' ಪರಿಷ್ಕರಿಸಿದ್ದಾರೆ. ಶಾಲಾಮಕ್ಕಳಿಗಾಗಿ `ಪಂಚತಂತ್ರ' ಮತ್ತು `ಕನ್ನಡ ಕಾವ್ಯ ಮಾಲೆ' ಸಂಗ್ರಹಿಸಿ ನೀಡಿದ್ದಾರೆ.

ಕನ್ನಡ ಪಂಡಿತ ಜಾರ್ಜ್ ಫರ್ಡಿನಾಂಡ್ ಕಿಟೆಲ್ ಹುಟ್ಟ್ದಿದು 1832ರಲ್ಲಿ ಏಪ್ರಿಲ್ 7ರಂದು ಜರ್ಮನಿಯ ವಾಯುವ್ಯ ಭಾಗದಲ್ಲಿರುವ ಕಾಸ್ಟರ್ ಹಾಫ್ ಪಟ್ಟಣದಲ್ಲಿ. ಕಿಟೆಲ್‌ರ ತಂದೆ ಗ್ಯಾಟ್‌ಫೀಟ್ ಕ್ರಿಸ್ತಿಯನ್ ಕಿಟೆಲ್ ಮತ್ತು ತಾಯಿ ಹೆಲೆನ್ ಹೇಬರ್ಟ್. ಅವರ ಆರು ಜನ ಮಕ್ಕಳನ್ನು ಫರ್ಡಿನಾಂಡ್ ಅತ್ಯಂತ ಹಿರಿಯ. ಅವರ ತಂದೆ ಪ್ರಾಟೆಸ್ಟೆಂಟ್ ಚರ್ಚಿನ ಧರ್ಮಾಧಿಕಾರಿ ಆಗಿದ್ದರು. ಚರ್ಚ್‌ನ ಧಾರ್ಮಿಕ ವಾತಾವರಣದಲ್ಲಿ ಬೆಳೆದ ಕಿಟೆಲ್‌ಗೆ ಬಾಲ್ಯದಿಂದಲೂ ಧರ್ಮ ಪ್ರಚಾರಕ ಆಗಬೇಕೆಂಬ ಹಂಬಲ. ಆರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದ ಕಿಟೆಲ್ ಔರಿಕ್‌ನಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಉನ್ನತ ವ್ಯಾಸಂಗಕ್ಕಾಗಿ ಸ್ವಿಟ್ಜರ್‌ಲ್ಯಾಂಡ್‌ನ ಬಾಸೆಲ್ ನಗರದ ಮಿಷನ್ ಕಾಲೇಜಿಗೆ ಸೇರಿದರು. 1850ರಿಂದ 1853ರ ವರೆಗೆ ಧಾರ್ಮಿಕ ಶಿಕ್ಷಣ ಪಡೆದ ಕಿಟೆಲ್ ನಂತರ ಧರ್ಮ ಪ್ರಚಾರದ ಉದ್ದೇಶದಿಂದ ಪಾದ್ರಿಯಾಗಿ ಧಾರವಾಡಕ್ಕೆ ಬಂದರು. ನಂತರ ಮಂಗಳೂರು, ಮಡಿಕೇರಿ, ಆನಂದಪುರ, ಹುಬ್ಬಳ್ಳಿಯಲ್ಲಿ ಪ್ರಚಾರಕರಾಗಿ ಕಾರ‍್ಯ ನಿರ್ವಹಿಸಿದರು.

ಕಿಟೆಲ್ ಅವರು ಮಂಗಳೂರಿನಲ್ಲಿ ಇದ್ದಾಗಲೇ 1860ರಲ್ಲಿ ಪಾಲಿನ್ ಐತ್ ಎಂಬ ಜರ್ಮನ್ ಯುವತಿಯೊಂದಿಗೆ ಮದುವೆಯಾಯಿತು. ನಾಲ್ಕು ವರ್ಷದ ದಾಂಪತ್ಯದ ಫಲವಾಗಿ ಇಬ್ಬರು ಗಂಡುಮಕ್ಕಳು ಹುಟ್ಟಿದರು. ಈ ಸಂತಸದ ದಿನಗಳಲ್ಲಿಯೇ ಯುವ ಕಿಟೆಲ್ ಪತ್ನಿ ವಿಯೋಗ ಅನುಭವಿಸಬೇಕಾಯಿತು. ಅದರಿಂದ ಕಂಗಾಲಾದ ಕಿಟೆಲ್ ಒಂದು ವರ್ಷದ ರಜೆ ಪಡೆದು ಯುರೋಪ್‌ಗೆ ಮರಳಿದರು. 1867ರಲ್ಲಿ ತಮ್ಮ ಪತ್ನಿಯ ಸಹೋದರಿ ಜ್ಯೂಲಿಯ ಕೈ ಹಿಡಿದು ಭಾರತಕ್ಕೆ ಬಂದರು. 1877 ವರೆಗೆ `ಶಬ್ದಮಣಿ ದರ್ಪಣ' ಮತ್ತು `ಛಂದೋಂಬುಧಿ'ಗಳನ್ನು ಸಂಪಾದಿಸಿದರು. ನಂತರ ಅವರ ಜೀವಿತದ ಬಹುತೇಕ ಅವಧಿಯನ್ನು ಡಿಕ್ಶನರಿ ರಚನೆಗಾಗಿಯೇ ಮೀಸಲಿಟ್ಟರು. ಡಿಕ್ಶನರಿಯ ಕೆಲಸ ಮುಗಿದು ಪ್ರಕಟವಾಗಿ, ಜನಪ್ರಿಯತೆಯ ತುದಿ ತಲುಪಿದಾಗ ತಾಯ್ನಾಡಿನಲ್ಲ್ದಿದರೂ ಅವರಿಗೆ ಕನ್ನಡ್ದದೇ ಧ್ಯಾನ. ಯಾರಾದರೂ ಕನ್ನಡ ಮಾತನಾಡುವವರಿಗಾಗಿ ಚಡಪಡಿಸುತ್ತ್ದಿದರು. ಕನ್ನಡ ಬರವಣಿಗೆಯಲ್ಲಿ ನಿರತರಾಗಿದ್ದರು. `ಇಂಡಿಯನ್ ಆ್ಯಂಟಿಕ್ವರಿ' ಕನ್ನಡ ಸಾಹಿತ್ಯ ಸಂಸ್ಕೃತಿ ಕುರಿತು ಹಲವು ಲೇಖನಗಳನ್ನು ಪ್ರಕಟಿಸಿದರು. ಕಿಟೆಲ್ ಕೇವಲ ಸೃಜನೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿಲ್ಲ. ಕಾವ್ಯಕೃಷಿಯಂತಹ ಸೃಜನಶೀಲ ಮಾಧ್ಯಮದಲ್ಲಿಯೂ ಅವರು ತಮ್ಮ ಅನನ್ಯ ಪ್ರತಿಭೆ ಮೆರೆದರು. ಅವರ ಕನ್ನಡ ಕವಿತೆಗಳು ಹೊಸಗನ್ನಡ ಕವಿತೆಗೆ ಅಸ್ತಿಭಾರವನ್ನೇ ಹಾಕಿದವು. ಶಿಶುನಾಳ ಶರೀಫರ ಸಮಕಾಲೀನರಾಗಿದ್ದ ಕಿಟೆಲ್‌ರ ಕವಿತೆಗಳು ಧಾರ್ಮಿಕ - ಆಧ್ಯಾತ್ಮಿಕಯಿಂದ ಹೊರಬಂದ ಕನ್ನಡದ ಮೊದಲ ಕಾವ್ಯತುಣುಕುಗಳು ಎಂದು ಪರಿಗಣಿಸಲಾಗುತ್ತದೆ.

ಇಂಗ್ಲಿಷಿನಲ್ಲಿ ರಚಿಸಿದ ಕನ್ನಡ ವ್ಯಾಕರಣ ಕುರಿತ ಪುಸ್ತಕ 1903ರಲ್ಲಿ ಪ್ರಕಟವಾಯಿತು. ಅದರ ಮೊದಲ ಪ್ರತಿ ಸೆಪ್ಟಂಬರ್ 18ರಂದು ಕಿಟೆಲ್‌ರ ಕೈ ಸೇರಿತು. ಅದನ್ನು ಪ್ರೀತಿಯಿಂದ ಮುಟ್ಟಿ ಸಂಭ್ರಮಿಸಿದರು ಕಿಟೆಲ್. ಮರುದಿನ ಬೆಳಗಿನ ವಾಕಿಂಗ್ ಮುಗಿಸಿ ಬಂದ ನಂತರ ವಿಶ್ರಾಂತಿಗಾಗಿ ಹಾಸಿಗೆಯ ಒರಗಿದ ಕಿಟೆಲ್ ಮತ್ತೆ ಮೇಲೆಳಲಿಲ್ಲ. ಆದರೆ, ಅಷ್ಟೊತ್ತಿಗಾಗಲೇ ಅವರ ಕನ್ನಡವನ್ನು ಆಕಾಶದೆತ್ತರ ಬೆಳೆಸಿ ಆಗಿತ್ತು.

-ದೇವು ಪತ್ತಾರ

 

MORE NEWS

ಯುಟ್ಯೂಬ್: ಕನ್ನಡ ಸಾಹಿತಿಗಳ ಸಂದರ್...

23-05-2020 ಬೆಂಗಳೂರು

ಬೆಂಗಳೂರು ಆಕಾಶವಾಣಿ ಕೇಂದ್ರವು ಕನ್ನಡ ಸಾಹಿತಿಗಳ ಹಲವು  ಮಹತ್ವದ ಹಾಗೂ ಮೌಲಿಕ ವಿಚಾರ ಒಳಗೊಂಡಿರುವ ಸಂದರ್ಶನಗಳ ಧ್...

ವೈಫ್ ಆಫ್ ಪೋಯಟ್ ಅಲ್ಲ, ಲೈಫ್ ಆಫ್ ...

23-05-2020 ಧಾರವಾಡ

ಇತ್ತಿಚೆಗೆ ನಮ್ಮನ್ನಗಲಿದ ಲೇಖಕಿ, ಸಾಹಿತಿ ಶಾಂತಾದೇವಿ ಅವರಿಗೆ ಕವಿ ರಾಜಕುಮಾರ‌ ಮಡಿವಾಳರ‌ ಒಂದು ನೆನಪ...

ಖ್ಯಾತ ಲೇಖಕಿ, ಸಾಹಿತಿ ಶಾಂತಾದೇವಿ ...

22-05-2020 ಬೆಳಗಾವಿ

ಖ್ಯಾತ ಲೇಖಕಿ, ಸಾಹಿತಿ ಶಾಂತಾದೇವಿ ಕಣವಿ ಅವರು ಇಂದು ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ನಿಧನರಾದರು. ಅ...

Comments

Magazine
With us

Top News
Exclusive
Top Events