ಗೊಂಬೆಗೊಂದು ಚಿತ್ತಾರದ ಚೀಲ


ಮಕ್ಕಳ ಮನಸ್ಸಿಗೆ ಮುದವೆನಿಸುವಂತಹ ಕಥೆಗಳಿರುವ ‘‘ಗೊಂಬೆಗೊಂದು ಚೀಲ’ ಸಂಕಲನವನ್ನು ಪ್ರಶಂಸಿಸಿರುವ ಸಾಹಿತಿ ಪ.ಗು. ಸಿದ್ದಾಪುರ ಅವರು, ಲೇಖಕಿ ವಿಶಾಲಾ ಆರಾಧ್ಯ ಅವರ ಈ ಕೃತಿಗೆ ಬರೆದ ಮುನ್ನುಡಿಯ ಪೂರ್ಣ ಪಠ್ಯ ಇಲ್ಲಿದೆ.

ಮಕ್ಕಳಿಗೆ ಕತೆಗಳೆಂದರೆ ಹಾಲೋಗರುಂಡಂತೆ ಖುಷಿಯೋ ಖುಷಿ. ಹಸಿವು, ನಿದ್ರೆ, ನೀರಡಿಕೆ ಎಲ್ಲವನ್ನೂ ಮರೆಯುತ್ತಾರೆ. ಕತೆ ಹೇಳುವವರೊಂದಿಗೆ ಬೆರೆಯುತ್ತಾರೆ. ಕತೆಗಳೆಂದರೆ ಮಕ್ಕಳಿಗೆ ಅಷ್ಟೊಂದು ರುಚಿಕರ. ಮೈಮನ ಮರೆತು ಕಣ್ಣರಳಿಸಿ, ಕಿವಿಯರಳಿಸಿ ಕೇಳುತ್ತಾರೆ. ಅಚ್ಚರಿಯಿಂದ ಪ್ರಶ್ನೆ ಮಾಡುತ್ತಾರೆ. ಒಂದು ಕಾಲದಲ್ಲಿ ಪ್ರತಿ ಮನೆಮನೆಯಲ್ಲೂ ಅಜ್ಜ, ಅಜ್ಜಿಯರು ಕತೆಗಳ ಕಣಜವೇ ಆಗಿದ್ದರು.

ಮನೆಯಂಗಳದಲ್ಲಿ ಮಕ್ಕಳನ್ನು ಕೂಡಿಸಿಕೊಂಡು ಕತೆಗಳನ್ನು ಹೇಳತೊಡಗಿದರೆ ಅದಕ್ಕೆ ಪೂರ್ಣವಿರಾಮವೇ ಇರುತ್ತಿರಲಿಲ್ಲ. ಆ ಕಾಲವನ್ನು ಇಂದು ದೂರದರ್ಶನ, ಪುಟ್ಟ ಪುಟ್ಟ ಮೊಬಾಯಿಲ್ಗಳು ನುಂಗಿಬಿಟ್ಟಿವೆ. ಅಬಾಲ ವೃದ್ಧರನ್ನೂ ತನ್ನತ್ತ ಸೆಳೆದ `ಪಂಚತಂತ್ರದ ಕಥೆಗಳು' ಮಕ್ಕಳಿಗಾಗಿಯೇ ಹುಟ್ಟಿಕೊಂಡವುಗಳಾಗಿವೆ. ಜಗತ್ತಿನ ಎಲ್ಲ ಭಾಷೆಗಳಲ್ಲಿ ಅನುವಾದಗೊಂಡು ಮಹಾಕ್ರಾಂತಿಯನ್ನೇ ಮಾಡಿದ ಕೃತಿಗಳು ಹತ್ತು ಹಲವು. ಇವೆಲ್ಲದರ ಉದ್ದೇಶ ಎಳೆಯ ಮಕ್ಕಳ ಮನ ಅರಳಿಸಿ ಮಾನವೀಯ ಮೌಲ್ಯವನ್ನು ಬಿತ್ತಿ ಬೆಳೆಯುವುದು. ನೈತಿಕತೆಯನ್ನು ಎಳೆತನದಲ್ಲಿಯೇ ಬಿತ್ತಿದರೆ ಒಳ್ಳೆ ವ್ಯಕ್ತಿಯಾಗಿ ದೊಡ್ಡಶಕ್ತಿಯಾಗಿ ನಿಲ್ಲುವುದರಲ್ಲಿ ಸಂದೇಹವಿಲ್ಲವೆಂದು ಎಲ್ಲರ ಅನಿಸಿಕೆ. ಅದು ಶತಸತ್ಯವೂ ಹೌದು.

ಇಂದು ಪ್ರೌಢ ಸಾಹಿತ್ಯದಷ್ಟೇ ವಿಶಾಲವಾಗಿ `ಮಕ್ಕಳ ಸಾಹಿತ್ಯ' ಬೆಳೆದು ನಿಂತಿದೆ. ಮಕ್ಕಳ ಸಾಹಿತ್ಯ `ಪರಿಪೂರ್ಣ ಸಾಹಿತ್ಯ'ವೆಂದು ಹೇಳಬಹುದು. ಪ್ರೌಢ ಸಾಹಿತ್ಯದಲ್ಲಿರುವ ಎಲ್ಲ ಪ್ರಕಾರಗಳೂ ಮಕ್ಕಳ ಸಾಹಿತ್ಯದಲ್ಲಿ ಹುಲುಸಾಗಿ ಬೆಳೆದು ನಿಂತಿವೆ. ಅಂತೆಯೇ ಸಾಹಿತ್ಯ ಅಬಾಲವೃದ್ಧರಿಗೂ ಇಷ್ಟ ! ಪ್ರೌಢ ಸಾಹಿತ್ಯದ ಹಾಗೆ ತಲೆಬಿಸಿ ಮಾಡುವ ಸಾಹಿತ್ಯ ಇದಲ್ಲ. ಸದಾ ಖುಷಿಯನ್ನೇ ನೀಡುತ್ತದೆ. ಈ ನಿಟ್ಟಿನಲ್ಲಿ ಕೃಷಿ ಮಾಡಿದವರು ಶಿಕ್ಷಕ ವೃತ್ತಿಯಲ್ಲಿದ್ದವರೇ ಹೆಚ್ಚೆಂದು ಹೇಳಬಹುದು. ಏಕೆಂದರೆ ಸದಾ ಮಕ್ಕಳ ಮಧ್ಯದಲ್ಲಿಯೇ ಇರುವುದರಿಂದ ಅವರ ಬೇಕು ಬೇಡಿಕೆಗಳನ್ನು ಅರಿತುಕೊಂಡಿರುತ್ತಾರೆ. ಶಿಕ್ಷಕ ಪರಕಾಯ ಪ್ರವೇಶ ಮಾಡಿ ಬೋಧಿಸುವುದರಿಂದ ಮಕ್ಕಳ ತನುಮನ ಅರಳುತ್ತದೆ. ಪಾಠ ಬೋಧನೆ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ.

ಸಹೋದರಿ ವಿಶಾಲಾ ಆರಾಧ್ಯ ಅವರು ಈ ನಿಟ್ಟಿನಲ್ಲಿ ಪರಿಪೂರ್ಣ ಶಿಕ್ಷಕಿ, ಗುರುಮಾತೆ ಎಂದು ಹೇಳಬಹುದು. ಮಕ್ಕಳ ಪಾಠ ಬೋಧನೆಯಲ್ಲಿ ಪೂರಕ ಸಾಹಿತ್ಯವನ್ನು ತಾವೇ ಸಿದ್ಧಪಡಿಸಿಕೊಂಡು ಎಳೆಎಳೆಯಾಗಿ ತಿಳಿತಿಳಿಯಾಗಿ `ಅಮ್ಮ ಮಮ್ಮು ಉಣಿಸಿದ ಹಾಗೆ' ಪಾಠ ಹೇಳುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ `ಗೊಂಬೆಗೊಂದು ಚೀಲ'. ಈ ಚೀಲದಲ್ಲಿ ಮೌಢ್ಯತೆಯನ್ನು ಹೋಗಲಾಡಿಸುವ, ಪರಿಸರ ಪ್ರಜ್ಞೆ ಬಿತ್ತುವ, ಭಾವೈಕ್ಯತೆಯನ್ನು ಬೆಸೆಯುವ, ಸಮಾನತೆಯನ್ನು ಸಾರುವ, ಒಗ್ಗಟ್ಟಿನ ಬಲ ತಿಳಿಸುವ ಸುಮಾರು ಹನ್ನೆರಡು ಕತೆಗಳು ಹನ್ನೆರಡು ಬಾಡದ ಕುಸುಮಗಳಾಗಿ ಅರಳಿಕೊಂಡಿವೆ.

ಈಗಾಗಲೇ ಮಕ್ಕಳಿಗೆ `ಬೊಂಬಾಯಿ ಮಿಠಾಯಿ' ಕವಿತೆಗಳ ರುಚಿಯನ್ನು ಉಣಬಡಿಸಿದ ಶ್ರೀಮತಿ ವಿಶಾಲಾ ಆರಾಧ್ಯ ಅವರು ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ ಪಡೆದುಕೊಂಡಿದ್ದಾರೆ. ಇವರ ಸಾಹಿತ್ಯ ಶೈಲಿ ಅಷ್ಟೊಂದು ರುಚಿಕರವೆಂದು ಬೇರೆ ಹೇಳಬೇಕಾಗಿಲ್ಲ. ಮಕ್ಕಳ ಬಾಯಿ ಚಪ್ಪರಿಸುವಂತೆ ಕತೆ-ಕವಿತೆ ಹೆಣೆಯುವ ಕಲೆ ಇವರಿಗೆ ಕರಗತವಾಗಿದೆ. `ಓದಿನ ನಿಯಮ' ಕತೆಯಲ್ಲಿ ನಿತ್ಯ ಓದುವವರಿಗೆ, ಓದಿ ಬರೆಯುವವರಿಗೆ ಪರೀಕ್ಷೆ ಭಾರವೆನಿಸದು. ಪರೀಕ್ಷೆ ಹತ್ತಿರ ಬಂದಮೇಲೆ ಓದಿದರಾಯ್ತು ಎನ್ನುವವರ ಫಜೀತಿ ಈ ಕತೆಯಲ್ಲಿ ತುಂಬಾ ಮಾರ್ಮಿಕವಾಗಿ ಹೇಳಿ ಕೊಟ್ಟಿದ್ದಾರೆ.

‘ಪರಿವರ್ತನೆ’ ಜಗದ ನಿಯಮ. ಕ್ರೂರಿ ಅಂಗುಲಿಮಾಲಾ ಬೌದ್ಧ ಸನ್ಯಾಸಿಯಾದ, ದರೋಡೆಗಾರನಾಗಿದ್ದ ಕಟುಕ ವಾಲ್ಮೀಕಿ ಮಹಾಕವಿಯಾದ. ಇಂಥ ಉದಾಹರಣೆಗಳು ನಮ್ಮ ಮಧ್ಯವೂ ಸಿಗುತ್ತವೆ. ಇಲ್ಲಿ ವಿಶಾಲಾ ಆರಾಧ್ಯ ಅವರು ಕುಟಿಲ, ಕುತಂತ್ರ ನರಿ ಮಾಂಸ ತಿನ್ನುವ ಭರದಲ್ಲಿ ಮೂಳೆಯನ್ನೇ ನುಂಗಿ ಸಾವು ಬದುಕಿನ ನಡುವೆ ಸಿಲುಕಿರುವುದನ್ನು ಕಂಡು ಸಾಧು ಪಕ್ಷಿ ಕೊಕ್ಕರೆ ನೀಡಿದ ಸಹಾಯವನ್ನು ಸ್ಮರಿಸಲೇಬೇಕು. ಮೂಳೆಯನ್ನು ಹೊರ ತೆಗೆದ ಮೇಲೆ ನರಿ ತುಂಬಾ ಪರಿವರ್ತನೆಗೊಂಡು ಅಭಿನಂದನೆ ಸಲ್ಲಿಸಿದ್ದನ್ನು ಕಂಡು-ಕೇಳಿ ಮಕ್ಕಳ ಮನವು ಪರಿವರ್ತನೆಯಾಗದಿರದು. ಇದೊಂದು ಒಳ್ಳೇ ಸಂದೇಶ ನೀಡುವ ಕತೆಯಾಗಿದೆ. `ಸ್ನೇಹ ಸೇತು' ಇಲ್ಲಿಯೂ ಸಹ ಸಹಬಾಳ್ವೆಯ ಮಹತಿಯನ್ನು ಎತ್ತಿ ತೋರಿಸಿದ್ದಾರೆ. ಇನ್ನೊಬ್ಬರಿಗೆ ಹಿಂಸೆ ನೀಡಿ ಖುಷಿಪಡುವುದರಿಂದ ನಮಗಾಗುವ ತೊಂದರೆ ತೊಡಕನ್ನು ಪ್ರಾಣಿಗಳ ಮುಖಾಂತರ ಮನ ಮುಟ್ಟುವಂತೆ ಹೇಳಿದ್ದಾರೆ. ಸ್ನೇಹವೇ ಮಹಾಸಂಪತ್ತು ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದೇ ದೊಡ್ಡ ಗುಣವೆಂದು ತೋರಿಸಿಕೊಟ್ಟಿದ್ದಾರೆ.

ನಾಲ್ಕನೆಯ ಕತೆ `ಸಿಹಿಗಿಣ್ಣು' ತುಂಬಾ ರುಚಿಕರವಾಗಿದೆ. ಓದುವಾಗ ನನ್ನ ನಾಲಿಗೆ ತುಟಿ ಸವರಿಕೊಂಡಿತು. ಏಕೆಂದರೆ ನಮ್ಮ ಉತ್ತರ ಕರ್ನಾಟಕದಲ್ಲಿ ಅದೂ ನಮ್ಮ ವಿಜಯಪುರ ಜಿಲ್ಲೆಯಲ್ಲಿ `ಸಿಹಿಗಿಣ್ಣು' ಎಂದರೆ ಎಲ್ಲರ ಹೊಟ್ಟೆ ಎರಡಾಗುತ್ತವೆ. ನಾವು ಆಗಾಗ ಇದರ ರುಚಿಯನ್ನು ಅನುಭವಿಸುತ್ತಲೇ ಇರುವೆವು. ಆರಾಧ್ಯ ಅವರು ಹೇಳಿದ ಹಾಗೆ ಇದು ಗ್ರಾಮೀಣ ಪ್ರದೇಶದಲ್ಲಿ ಸಿಗುವ `ಬೆಳಗಾವ ಕುಂದಾ' ಎಂದು ಹೇಳಬಹುದು. ಇದರ ರುಚಿ ಬಲ್ಲವನೇ ಬಲ್ಲ ! ಗಿಣ್ಣು ತಯಾರಿಸುವ ವಿಧಾನವನ್ನೂ ಇಲ್ಲಿ ಹೇಳಿಕೊಟ್ಟಿದ್ದಾರೆ. ಇದು ಒಂದು ಪಾಕಶಾಸ್ತ್ರದ ಪಾಠವೇ ಆಗಿದೆ. ಒಟ್ಟಿನಲ್ಲಿ ಇದರಲ್ಲಿರುವ ಎಲ್ಲಾ ಕತೆಗಳು ಓದುಗರ ಮನ ಮುಟ್ಟುವಂತಿವೆ. ಒಂದು ಕಡಿಮೆ ಇನ್ನೊಂದು ಹೆಚ್ಚು ಎಂದು ಹೇಳಲಾರೆ.

ನನಗೆ ಅಪರಿಚಿತರಾದ ಶ್ರೀಮತಿ ವಿಶಾಲಾ ಆರಾಧ್ಯ ಅವರು ಫೇಸ್ ಬುಕ್ ಮುಖಾಂತರ ಪರಿಚಯವಾಗಿ ತಮ್ಮ `ಗೊಂಬೆಗೊಂದು ಚೀಲ'ಕ್ಕೊಂದು ಚಿತ್ತಾರ ಬಿಡಿಸಲು ಕೇಳಿಕೊಂಡಾಗ ಖುಷಿಯಿಂದ ಒಪ್ಪಿಕೊಂಡೆ. ಒಳ್ಳೆ ಕತೆ ಓದಲು ಅವಕಾಶವೂ ಸಿಕ್ಕಿತು. ಇದರಲ್ಲಿ ನನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದೇನೆ. ಸುಮ್ಮನೆ ಮುಖಸ್ತುತಿ ಮಾಡುವ ಸ್ವಭಾವ ನನ್ನದಲ್ಲ. ಇದ್ದಂತೆ ಬರೆದಿರುವೆ. ವಿಶಾಲಾ ಆರಾಧ್ಯ ಅವರು ಗುರುಮಾತೆಯಾಗಿ, ಮಾತೆಯಾಗಿ ಮಕ್ಕಳ ಮನ ಅರಿತು ಬೆರೆತು, ಪರಕಾಯ ಪ್ರವೇಶ ಮಾಡಿ ಬರೆದಿದ್ದಾರೆ. ಇನ್ನೂ ಅವರಿಂದ ಉತ್ತಮೋತ್ತಮ ಕೃತಿಗಳು ಹೊರಬರಲೆಂದು ತುಂಬು ಹೃದಯದಿಂದ ಹಾರೈಸುವೆ.

MORE FEATURES

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...

ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 

23-04-2024 ಬೆಂಗಳೂರು

"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ...

ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ

23-04-2024 ಬೆಂಗಳೂರು

'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್&zwn...