ಗ್ರಾಮಾಯಣ ಎಂಬ ಸಮಕಾಲೀನ ಪುರಾಣ

Date: 25-03-2021

Location: .


ಕನ್ನಡ ಸಾಹಿತ್ಯಲೋಕದ ಕ್ಲಾಸಿಕ್ ಕಾದಂಬರಿಗಳ ಸಾಲಿನಲ್ಲಿ ರಾವ್‌ಬಹದ್ದೂರ ಅವರ ಮೊದಲ ಕಾದಂಬರಿ ಗ್ರಾಮಾಯಣ ವೂ ಒಂದು. ಕನ್ನಡದ ಮಹತ್ವದ ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಲೇಖಕ, ವಿಮರ್ಶಕ ಶ್ರೀಧರ ಹೆಗಡೆ ಭದ್ರನ್ ಅವರು ತಮ್ಮ ‘ಬದುಕಿನ ಬುತ್ತಿ’ ಅಂಕಣದಲ್ಲಿ ಈ ಕಾದಂಬರಿಯ ಕಥಾ ರಚನೆಯ ಕುತೂಹಲವನ್ನು ವಿಶ್ಲೇಷಿಸಿದ್ದಾರೆ.


1957ರಲ್ಲಿ ಪ್ರಕಟವಾದ ಗ್ರಾಮಾಯಣ ಕಾದಂಬರಿ ಲೇಖಕರಾದ ಕೆ. ಬಿ. ಕುಲಕರ್ಣಿಯವರನ್ನು ರಾವ್ ಬಹದ್ದೂರ್ ಆಗಿ ಕನ್ನಡ ಕಾದಂಬರಿ ಪ್ರಪಂಚದಲ್ಲಿ ಶಾಶ್ವತಗೊಳಿಸಿತು. ಪತ್ರಕರ್ತರಾಗಿ, ಕತೆಗಾರರಾಗಿ ಹಲವು ಕಾದಂಬರಿಗಳನ್ನು ಬರೆದಿದ್ದರೂ ರಾವ್ ಬಹದ್ದೂರ್ ಅವರ ಹೆಸರು ನಿಂತಿರುವುದು ‘ಗ್ರಾಮಾಯಣ’ದ ಮೇಲೆ. ಕುತೂಹಲದ ಸಂಗತಿಯೆಂದರೆ, ಇದು ಲೇಖಕರ ಮೊದಲ ಕಾದಂಬರಿ. ಮತ್ತು ರಾವ್ ಬಹದ್ದೂರ್ ಅವರ ಸಮಸ್ತ ಸಾಹಿತ್ಯದ ಮೇಲೆ ನಡೆದ ಚರ್ಚೆ ಹಾಗೂ ವಿಮರ್ಶೆಗಳಿಗಿಂತ ಹೆಚ್ಚು ಬರವಣಿಗೆ ಇದೊಂದೇ ಕೃತಿಯ ಬಗ್ಗೆ ಬಂದಿದೆ. ಇಂದಿಗೂ ಮರುಮುದ್ರಣಗೊಂಡು ಪ್ರಕಟಗೊಳ್ಳುತ್ತಲೇ ಇರುವ ’ಗ್ರಾಮಾಯಣ’ ಕನ್ನಡ ಕಾದಂಬರಿ ಪ್ರಪಂಚದ ಒಂದು ’ಚಿರಕೃತಿ’ ಎಂದೇ ಜನಪ್ರಿಯವಾಗಿದೆ.

‘ಗ್ರಾಮಾಯಣ’ ಹೆಸರೇ ಹೇಳುವಂತೆ ಒಂದು ಗ್ರಾಮದ ಕಥನ. ಇದರ ಕೇಂದ್ರದಲ್ಲಿರುವುದು ಪಾದಳ್ಳಿ ಎಂಬ ಊರು. ಕಥೆ ಪ್ರಾರಂಭವಾಗುವುದೇ ಊರಿಗೆ ಪಾದಳ್ಳಿ ಎಂಬ ಹೆಸರು ಹೇಗೆ ಬಂತು? ಎಂಬ ಐತಿಹ್ಯದಿಂದ. ಕಾದಂಬರಿಗೆ ಮುನ್ನುಡಿ ಬರೆದಿರುವ ಖ್ಯಾತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಕಾದಂಬರಿಯ ಕ್ರಿಯೆಯ ಕೇಂದ್ರವನ್ನು ಸೂಚಿಸುತ್ತ; ಇದು ಮುಖ್ಯವಾಗಿ ಪಾದಳ್ಳಿಯ ಕಥೆ. ಕೃಷ್ಣಾ ನದಿಯ ದಂಡೆಯ ಮೇಲೆ ಇರುವ ಈ ಊರು ಪ್ರಾದೇಶಿಕ ಸತ್ಯವಷ್ಟೇ ಆಗಿರದೇ, ಈ ಕಾದಂಬರಿಯಲ್ಲಿಯ ಅನೇಕ ಸಂಗತಿಗಳಿಗೆ; ಸನ್ನಿವೇಶಗಳಿಗೆ ಕೇಂದ್ರಬಿಂದುವಾಗಿದೆ ಅಥವಾ ವಿಮರ್ಶೆಯ ಪರಿಭಾಷೆಯಲ್ಲಿ ಹೇಳುವುದಾದರೆ ಇಲ್ಲಿ ನಡೆಯುವ ಕತೆಯ ವಸ್ತುವಾಗಿದೆ. ಅಂತಲೇ ಇಲ್ಲಿ ನಡೆಯುವ ಘಟನೆಗಳು ಅವುಗಳಲ್ಲಿ ಭಾಗವಹಿಸಿದ ವ್ಯಕ್ತಿಗಳು ಪಾದಳ್ಳಿಯ ದೈವಕ್ಕೆ ಅಭಿವ್ಯಕ್ತಿಯನ್ನು ನೀಡುತ್ತವೆ. ಕತೆ ಪಾದಳ್ಳಿಯನ್ನು ಬಿಟ್ಟು ಇನ್ನೊಂದು ಊರಿಗೆ ಹೋದರೂ ಬೇರೆ ಊರಿನ ವ್ಯಕ್ತಿಗಳು ಪಾದಳ್ಳಿಗೆ ಬಂದರೂ ಪಾದಳ್ಳಿಯ ಜೀವನವೇ ಅಲ್ಲಿ ಪ್ರಕಾಶಿತವಾಗುತ್ತದೆ. ಪಾದಳ್ಳಿಯ ಸ್ಥಿತಿ- ಗತಿ, ಅವನತಿಗಳೇ ಕಾದಂಬರಿಯ ಜೀವವಾಗಿ ಮಿಡಿಯುತ್ತವೆ. ಈ ಮಾತುಗಳು ಇಡೀ ಕೃತಿಯ ಆಶಯವನ್ನು ಸೂಚಿಸುತ್ತವೆ.

ಗ್ರಾಮಾಯಣ ತುಂಬಾ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಕಾದಂಬರಿ. ಒಂದು ಕಾಲದ ಹಳ್ಳಿ ತನ್ನ ಜೀವನ ಕ್ರಮದಿಂದ ಹೇಗೆ ಟೊಳ್ಳಾಗಿ ಕುಸಿದು ಹೋಗುತ್ತಿದೆ ಎಂಬುದನ್ನು ’ಪಾದಳ್ಳಿ’ಯ ಅವನತಿಯ ಮೂಲಕ ಲೇಖಕರು ಚಿತ್ರಿಸಿದ್ದಾರೆ. ಪಾದಳ್ಳಿ ಕೇವಲ ಒಂದು ಹಳ್ಳಿಯಾಗಿ ಉಳಿಯದೆ ಭಾರತದ ಸಂಧಿಕಾಲದ ಯಾವ ಹಳ್ಳಿಯಾದರೂ ಆಗಬಹುದಾದ ಸಾಧ್ಯತೆಯನ್ನು ಪಡೆದುಕೊಂಡಿದೆ. ಪಾದಳ್ಳಿಯ ವಿಘಟನೆಗೆ; ದುರಂತಕ್ಕೆ ಕಾರಣವಾದ ಶಕ್ತಿಗಳು ಹಾಗೂ ಪ್ರಭಾವವನ್ನು ಕಾದಂಬರಿ ಹುಡುಕುತ್ತಾ ಸಾಗುತ್ತದೆ.

’ಸರಂಜಾಮೀ ಪದ್ಧತಿ’ ಮತ್ತು ’ಜಾತಿ ಪದ್ಧತಿ’ ಪ್ರಬಲವಾಗಿ ಬೇರೂರಿದ್ದ ಕಾಲದ ಜೀವನವನ್ನು ಕಾದಂಬರಿ ವಿವೇಚಿಸುತ್ತದೆ. ಆಂತರಿಕವಾಗಿ ಸತ್ವವನ್ನು ಕಳೆದುಕೊಳ್ಳುತ್ತಿದ್ದ ನಮ್ಮ ವ್ಯವಸ್ಥೆ ಪಾಶ್ಚಾತ್ಯ ನಾಗರಿಕತೆಯ ಹೊಡೆತವನ್ನೂ ತಾಳಿಕೊಳ್ಳಬೇಕಾಗಿತ್ತು. ಪಾಶ್ಚಾತ್ಯ ಪ್ರಭಾವ ನಗರಗಳಿಂದ ನಿಧಾನವಾಗಿ ಹಳ್ಳಿಗಳಿಗೂ ಹರಿಯಲಾರಂಭಿಸಿತ್ತು. ಹಿಂದಿನ ಮೌಲ್ಯ ವ್ಯವಸ್ಥೆಯ ಮೇಲೆ ಬಿದ್ದ ಹೊಡೆತದಿಂದ ಸಮಾಜ ವಿಘಟನೆಯತ್ತ ನಡೆಯಿತು. ಇಂಥ ಸಂಧಿ ಕಾಲದ ತಲ್ಲಣ ಮತ್ತು ನೋವನ್ನು ಗ್ರಾಮಾಯಣ ಬಹಳ ತೀವ್ರವಾಗಿ ಅಭಿವ್ಯಕ್ತಿಸಿದೆ.

ಕಾದಂಬರಿಯ ಆರಂಭದಲ್ಲೇ ಪಾಳೇಗಾರಿಕೆಯ ಪಳಿಯುಳಿಕೆಯಾದ ಜಾಗೀರದಾರರ ವಾಡೆಯಲ್ಲಿ ಬಿರುಕು ಬಿಟ್ಟು; ಅರಮನೆ ಗುರುಮನೆಗಳೆರಡೂ ಅಧೋಗತಿಗಿಳಿದು ಇಡೀ ಊರು ಛಿದ್ರವಾಗುವಂತಹ ಘಟನೆಗಳು ರಾಣೋಜಿರಾಯರ ಸಾವಿನಿಂದ ಪ್ರಾರಂಭವಾಗುತ್ತವೆ. ಜನರು ನೀತಿಯನ್ನು ಬಿಟ್ಟು ಅಥವಾ ಗಾಳಿಗೆ ತೂರಿ ತಮಗೆ ಎಲ್ಲಿ ಹೆಚ್ಚಿನ ಲಾಭವಿದೆ ಅಲ್ಲಿ ಸೇರಿಕೊಳ್ಳುವ ಪ್ರವೃತ್ತಿ ಶುರುವಾಗಿದೆ. ಸಂತಾನವಿಲ್ಲದ ರಾಣೋಜಿರಾಯರ ಹೆಂಡಿರಾದ ಲಕ್ಷ್ಮೀಬಾಯಿ ಹಾಗೂ ಪುತಳಾಬಾಯಿಯರಲ್ಲಿ ಆಸ್ತಿಯ ಹಕ್ಕಿಗಾಗಿ ಕಿತ್ತಾಟ ನಡೆಯುತ್ತದೆ. ಆಗ ಕಿರಿಯವಳಾದ ಪುತಳಾಬಾಯಿಯ ತಮ್ಮ ಬಾಪೂಗೌಡ ವಾಡೆಯನ್ನು ಪ್ರವೇಶಿಸುತ್ತಾನೆ. ಅವನ ಕಾರುಬಾರು ಮತ್ತು ದರ್ಬಾರಿಗೆ ಮಠದ ಗುರುವಾದ ಪಡದಯ್ಯನ ಬೆಂಬಲ ಸಹಕಾರವೂ ಸಿಕ್ಕು ಅನಾಹುತ ವಿಪರೀತವಾಗುತ್ತದೆ. ಇದೇ ಮುಂದೆ ನಡೆಯುವ ಎಲ್ಲ ಅನಾಹುತಗಳಿಗೂ ನಾಂದಿಯಾಗುತ್ತದೆ. ಏಳೆಂಟು ವರ್ಷಗಳ ಕಾಲ ವಾಡೆಯಲ್ಲಿ ಬೇರುಬಿಟ್ಟಿದ್ದರೂ ಬಾಪೂಸಾಹೇಬನಿಗೆ ಅಲ್ಲಿಯ ನೆಲ ಜಲಗಳ ಬಗ್ಗೆ ಅಭಿಮಾನವಿಲ್ಲ. ಆ ನೆಲಕ್ಕೆ ಪರಕೀಯನಾಗಿ ವಿಲಾಸಿಯಾಗಿ ಇದ್ದ ಆತ ಹೆಂಡತಿಯಿದ್ದೂ ಬೇರೆ ಹುಡುಗಿಯರ ಮೇಲೆ ಕಣ್ಣು ಹಾಕುತ್ತಾನೆ. ಅದರಲ್ಲೂ ವಾಡೆಯಲ್ಲೇ ಇರುವ ಶಿಲೇದಾರ ನಾನಾಸಾಹೇಬನ ಮಗಳು ಚೆಲುವೆ ಚಿಮಣಾಳಿಗಾಗಿ ಬಾಯಿಬಿಡುತ್ತಾನೆ. ಅವಳನ್ನು ಪಡೆಯಲು ವಿರಕ್ತಮಠದ ಸ್ವಾಮಿ ಪಡದಯ್ಯನ ಸಹಾಯ ಬೇಡುತ್ತಾನೆ. ಆದರೆ ಆ ಕ್ಷುದ್ರ ಸ್ವಾಮಿ ತನಗೆ ಪ್ರಸಾದವಾಗಿದ್ದ ದಾನಮ್ಮನ ಸಹಾಯದಿಂದ ಚಿಮಣಾಳನ್ನು ಮಠಕ್ಕೆ ಕರೆಸಿಕೊಂಡು ಶೀಲಹರಣ ಮಾಡುತ್ತಾನೆ. ಇದು ಇಡೀ ಕಾದಂಬರಿಯಲ್ಲಿ ಅವನತಿಯ ಪ್ರಕ್ರಿಯೆಯನ್ನು ಆರಂಭಿಸುವ ಘಟನೆಯಾಗಿದೆ. ಈ ಶೀಲಹರಣದ ಜವಾಬ್ದಾರಿಯನ್ನು ಜನ ಎರಡು ಭಾಗವಾಗಿ ಇಬ್ಬರ ಮೇಲೆ ಹಾಕುತ್ತಾರೆ. ಕೆಲವರು ಸ್ವಾಮಿ ಪಡದಯ್ಯನನ್ನು ದೂರಿದರೆ ಇನ್ನೊಂದು ಪಂಗಡದವರು ಬಾಪೂಸಾಹೇಬನ ಮೇಲೆ ಹೊಣೆಗಾರಿಕೆ ಹಾಕುತ್ತಾರೆ. ಈ ಘಟನೆಯ ನಂತರ ನಡೆದ ಚಿಮಣಾಳ ತಂದೆ ನಾನಾಸಾಹೇಬನ ಸಾವಿನಿಂದ ಪಾದಳ್ಳಿಯ ಅವನತಿಯ ಪ್ರಕ್ರಿಯೆ ತೀವ್ರಗೊಳ್ಳುತ್ತದೆ. ಇಲ್ಲಿಯೇ ಪುತಳಾ ಮತ್ತು ಶಿಲೇದಾರ ನಾನಾ ಸಾಹೇಬನ ಅನೈತಿಕ ಸಂಬಂಧದ ಸೂಚನೆಯೂ ಸೆಲೆಯೊಡೆಯುತ್ತದೆ. ಪಡದಯ್ಯ ರಾಜಾರೋಷವಾಗಿ ದಾನಮ್ಮನನ್ನು ಮಠದಲ್ಲೇ ’ಇಟ್ಟುಕೊಳ್ಳುವುದು’; ಗೋಪಾಳಾಚಾರಿ ತಳವಾರ ರಂಗಿಯ ’ನಾದ’ಕ್ಕೆ ಮರುಳಾಗುವುದು ಇಲ್ಲೆಲ್ಲ ಇಂತಹ ಅನೈತಿಕ ಸಂಬಂಧ ಪಾಪ ಎಂಬ ನೇರ ಪ್ರತಿಪಾದನೆಯಿಲ್ಲದಿದ್ದರೂ ಸೂಕ್ಷ್ಮ ಸೂಚನೆಯನ್ನು ಓದುಗ ಗ್ರಹಿಸಬಹುದು.

ಊರಿನ ಒಗ್ಗಟ್ಟು ಕಾಪಾಡಲು ನಿಯಮಿತವಾಗಿರುವ ದೈವದವರು -ಊರಿನ ಪ್ರತಿಷ್ಠಿತರು ಪರಸ್ಪರ ದ್ವೇಷ ಅಸೂಯೆಗಳಿಂದ ಬಡಿದಾಡುತ್ತಾ ಪಾದಳ್ಳಿಯ ಪತನಕ್ಕೆ ಕಾರಣರಾಗುತ್ತಾರೆ. ನಾನಾ ಸಾಹೇಬನ ಸಾವಿನ ನಂತರ ಸೇರಿದ ದೈವ ಸಭೆ ಲಂಚತಿಂದು ಅವನ ಸಾವನ್ನು ಮುಚ್ಚಿ ಹಾಕಲು ಪ್ರಯತ್ನಿಸುವುದು; ಈ ಸಂಬಂಧದಲ್ಲಿ ನಿರೀಕ್ಷಿತ ಪಾಲು ದೊರೆಯಲಿಲ್ಲವೆಂದು ಕುಲಕರ್ಣಿ ಶೇಷಪ್ಪ ತಕರಾರು ತೆಗೆಯುವುದು; ಇವೇ ಮುಂದೆ ವಾಡೆ-ಮಠ ಮತ್ತು ಗೌಡರ ಮನೆತನದ ಮಧ್ಯೆ ದ್ವೇಷಕ್ಕೆ ಕಾರಣವಾಗುವುದು ಕಾದಂಬರಿಯ ಮುಖ್ಯ ಘಟನೆಗಳಾಗುತ್ತವೆ. ಅಂತಿಮವಾಗಿ ವಾಡೆ-ಮಠ ಮತ್ತು ಗೌಡರ ಮನೆತನಗಳ ನಡುವಿನ ಸಂಘರ್ಷವೇ ಪ್ರಧಾನವಾಗಿ ಕತೆಯನ್ನು ಮುನ್ನಡೆಸಿಕೊಂಡು ಹೋಗುತ್ತವೆ.

ತಮ್ಮ ಅಧಿಕಾರ ಮತ್ತು ಪ್ರತಿಷ್ಠೆಗಾಗಿ ಶಂಕ್ರಪ್ಪಗೌಡರು ಊರನ್ನೇ ಪಣವಾಗಿಡುವುದು; ನೀತಿಯ ಕೇಂದ್ರವಾಗಬೇಕಿದ್ದ ಮಠ ಅನೀತಿಯ ಕೇಂದ್ರವಾಗುವುದು; ಕಾದಂಬರಿಯ ವೈಚಾರಿಕತೆಯ ಪ್ರಕಾರ ಒಳಿತಿನ ಪ್ರತೀಕವಾಗಿದ್ದ ಬಾಳಾಚಾರ್ಯರ ಮನೆಯೂ ತುಂಡಾಗಿ ಹೋಗುವುದು ಇವೆಲ್ಲವೂ ಮೌಲ್ಯಗಳಲ್ಲಿ ಆಗುತ್ತಿರುವ ಬದಲಾವಣೆಯ ದ್ಯೋತಕಗಳೇ ಆಗಿವೆ. ಹೀಗಾಗಿ ಕಾದಂಬರಿಯಲ್ಲಿ ನೀತಿ, ಪಾಪದ ವಿವೇಚನೆ ಬೇರೆ ಬೇರೆ ಹಂತಗಳಲ್ಲಿ ನಡೆಯುತ್ತಾ ಹೋಗುತ್ತದೆ. ...ಪಾಪ ರಕ್ತಬೀಜ ರಾಕ್ಷಸನಂತೆ; ಕೊಂದರೆ ಸಾಯಲಾರದ ವಸ್ತುವೆಂದರೆ ಅದೊಂದೇ. ನೂರು ನಾನಾ ಸಾಹೇಬರು ಸತ್ತರೂ ಪಾಪ ಸಾಯುವುದಿಲ್ಲ. ಈ ಮಾತುಗಳು ಕೆಡುಕು-ಪಾಪದ ಅವಿನಾಶತೆಯನ್ನೇ ನಿಟ್ಟುಸಿರಿನೊಂದಿಗೆ ಧ್ವನಿಸುತ್ತವೆ. ಪಡದಯ್ಯ ಚಿಮಣಾಳ ಶೀಲಹರಣ ಮಾಡಿದ್ದು ಅನೀತಿ-ಪಾಪ ಎಂದು ಎಲ್ಲರಿಗೂ ತಿಳಿದಿದ್ದರೂ ಯಾರೂ ಅದನ್ನು ಪ್ರಶ್ನಿಸುವ ಸಾಹಸ ಮಾಡುವುದಿಲ್ಲ. ಇದನ್ನು ವಿರೋಧಿಸುವ ದಾದಾ ವೈಚಾರಿಕತೆಯ ಅಭಾವದಿಂದ ಸುಮ್ಮನಾಗಬೇಕಾಗುತ್ತದೆ.
ಕಾದಂಬರಿಯನ್ನು ಲೇಖಕರು ಮೂರು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಮೊದಲನೆಯ ಭಾಗದ ಪ್ರಮುಖ ವ್ಯಕ್ತಿ ಶಂಕರಪ್ಪ ಗೌಡರು. ವಾಡೆಯ ಒಳಜಗಳ; ಅದರಿಂದ ಪುತಳಾಬಾಯಿ ಪಾದಳ್ಳಿಯನ್ನು ಸೇರುವುದು; ವಾಡೆಯಲ್ಲಿ ಬಾಪೂನ ದರ್ಬಾರು; ಚಿಮಣಾಳ ಮೇಲೆ ಆತನ ಕಣ್ಣು ಬೀಳುವುದು; ಪಡದಯ್ಯನಿಂದ ಚಿಮಣಾಳ ಶೀಲಹರಣ; ನಾನಾ ನಿಗೂಢವಾಗಿ ಸಾಯುವುದು; ಊರಿನಲ್ಲಿ ಎರಡು ಬಣಗಳಾಗುವುದು; ಪುತಳಾ ಆತ್ಮಹತ್ಯೆ ಎಲ್ಲ ಘಟನೆಗಳೂ ಸಾವಯವವಾಗಿ ಹೊಂದಿಕೊಂಡಿವೆ. ಈ ಭಾಗದ ಕೇಂದ್ರ ವ್ಯಕ್ತಿ ಶಂಕರಪ್ಪಗೌಡನ ಸಾವಿನಿಂದ ಮೊದಲ ಭಾಗ ಮುಗಿಯುವುದು ಅರ್ಥಪೂರ್ಣವೆನಿಸುತ್ತದೆ. ಮುಂದಿನೆರಡು ಭಾಗದಲ್ಲಿ ಗೌಡರ ಮನೆತನ ನಿಧಾನವಾಗಿ ಕುಸಿಯುತ್ತಾ ಸಾಗುತ್ತದೆ. ಎರಡನೆಯ ಭಾಗದಲ್ಲಿ ದಾದಾ ಮತ್ತು ಬಾಳಾಚಾರ್ಯರು ಗೌಡರ ಮನೆತನದ ಗೌರವ ಹಾಗೂ ಪಾದಳ್ಳಿಯ ಮಾನ ಕಾಪಾಡಲು ನಿರಂತರವಾಗಿ ಪ್ರಯತ್ನಿಸುತ್ತಾರೆ.

ಎರಡನೆಯ ಭಾಗದಲ್ಲಿ ಊರಿನಿಂದ ಓಡಿಹೋಗಿದ್ದ ಪಡದಯ್ಯ ಲಿಂಗಪ್ಪನೊಂದಿಗೆ ಮರಳಿ ಬರುತ್ತಾನೆ. ಇಲ್ಲಿಂದ ಪಾದಳ್ಳಿ ಅರ ಬಿಗಿಹಿಡಿತದಲ್ಲಿ ನರಳಬೇಕಾಗುತ್ತದೆ. ಪಡದಯ್ಯನ ಗುಂಪಿನಿಂದ ಗೌಡರ ಮನೆತನಕ್ಕೆ ಬಂದ ವಿಪತ್ತುಗಳನ್ನು ದಾದಾ ಧೈರ್ಯ ಸಾಹಸಗಳಿಂದ ಪರಿಹರಿಸುತ್ತಾನೆ. ಆದರೆ; ಕರಿಹರಿಯುವ ಪ್ರಸಂಗದಲ್ಲಿ ಸಿಟ್ಟಾದ ಗೌಡತಿ ಪಾರ್ವತವ್ವ ದಾದಾನ ಕೆಡುಕನ್ನು ಎದುರಿಸುವ ಶಕ್ತಿಯನ್ನು ನಿಷ್ಕ್ರಿಯಗೊಳಿಸುತ್ತಾಳೆ. ಮುಂದೆ ದುಷ್ಟ ಶಕ್ತಿಗಳೇ ವಿಜೃಂಭಿಸುತ್ತವೆ. ಬಾಳಾಚಾರ್ಯರು ನೈತಿಕತೆಯ ನೇತಾರರಾಗಿ ಪಾದಳ್ಳಿಯ ಸಂಕಟದ ಬಗ್ಗೆ ಚಿಂತಿಸಬಲ್ಲರು ಹೊರತು ತಡೆಯಲಾರರು. ಕಾದಂಬರಿಯ ಕೊನೆಯ ಭಾಗದಲ್ಲಿ; ಪಡದಯ್ಯ ಮತ್ತು ಲಿಂಗಪ್ಪ ಮುಖ್ಯರಾಗುತ್ತಾರೆ. ದಾದಾನ ಹೊಲದ ಕಬಜಾವನ್ನು ಪಡದಯ್ಯ ಹೊಂದುವುದು; ಗೌಡರ ಹಗೇವಿನ ಲೂಟಿಯ ಯೋಜನೆ; ಗೌಡರ ಹೊಲ ಹರಗಿದ್ದು; ಮುಂತಾದ ಕುಕೃತ್ಯಗಳು ಪಡದಯ್ಯನ ನೇತೃತ್ವದಲ್ಲಿ ನಡೆಯುತ್ತವೆ. ಇಲ್ಲೆಲ್ಲ ದುಷ್ಟಶಕ್ತಿಗಳೇ ಮೇಲಾಗುವುದನ್ನು ಕಾಣುತ್ತೇವೆ. ಊರನ್ನು ಉದ್ಧಾರ ಮಾಡಬಹುದೆಂದು ಇಂದುಪುರದ ಮಹಾರಾಜರನ್ನು ಕರೆಸಿಕೊಂಡರೂ ಉಪಯೋಗವಾಗುವುದಿಲ್ಲ. ಈ ಸಂದರ್ಭದಲ್ಲಿ ವಾಡೆಯ ರೈತರಲ್ಲಿ ಉಂಟಾದ ಒಡಕನ್ನು ಪಡದಯ್ಯ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾನೆ. ಹೀಗೆ ಕಾದಂಬರಿಯ ವಸ್ತು ತನ್ನ ಬಿಗಿಯನ್ನು ಕಂಡುಕೊಂಡಿದೆ.
’ಗ್ರಾಮಾಯಣ’ ಕಾದಂಬರಿಯಲ್ಲಿ ಲೇಖಕರು; ಕೆಡುಕು ಪ್ರಬಲವಾಗುತ್ತಾ; ಅದೇ ಜಯಶಾಲಿಯಾಗುವ ಚಿತ್ರವನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಇದಿಷ್ಟರಿಂದಲೇ ಸಮಾಧಾನವಾಗದೇ ಒಳಿತಿನೊಂದಿಗೆ ಕೆಡುಕೂ ನಾಶವಾಗುವ ಸಂಗತಿಯನ್ನೂ ಚಿತ್ರಿಸಿದ್ದಾರೆ. ಬಿರುಗಾಳಿ-ಜಡಿಮಳೆ; ಪ್ರವಾಹ; ಕಾಲರಾ ಮತ್ತು ಪ್ಲೇಗಿಗೆ ತುತ್ತಾಗುವ ಪಾದಳ್ಳಿ ರೋಗಗ್ರಸ್ತವಾಗುತ್ತದೆ. ಈಗಾಗಲೇ ಟೊಳ್ಳಾಗಿರುವ ಅದು ಹೊರಗಿನ ಶಕ್ತಿಗಳ ಒತ್ತಡಕ್ಕೆ ಒಳಗಾಗಿ ತತ್ತರಗೊಳ್ಳುವುದನ್ನು ಕಾಣಿಸುತ್ತಾರೆ. ನೈಸರ್ಗಿಕ ವಿಕೋಪಗಳು ಸಾಂಕೇತಿಕವಾಗಿ; ಮಾನವಾತೀತ ಶಕ್ತಿಯ ಕಾರಣಕ್ಕೆ ಪಾದಳ್ಳಿ ನಾಶವಾಗುವುದರ ಸೂಚನೆಯನ್ನು ಕೊಡುತ್ತವೆ.

ಕಾದಂಬರಿ ಹೊತ್ತಿರುವ ಕೆಡುಕಿನ ಪರಂಪರೆಗೆ ಎದುರಾಗಿ ನಿಲ್ಲಬಲ್ಲ ಇಬ್ಬರು ವ್ಯಕ್ತಿಗಳೆಂದರೆ ದಾದಾ ಮತ್ತು ಬಾಳಾಚಾರ್ಯರು. ದಾದಾ ಚಿಮಣಾಳ ಅಣ್ಣ. ಪೈಲ್ವಾನ. ಕೊನೆಯವರೆಗೂ ಇನ್ನೊಬ್ಬರನ್ನು ಹಿಂಬಾಲಿಸಿಕೊಂಡೇ ಅವನು ಬರುತ್ತಾನೆ. ಕೆಡುಕಿನ ವಿರುದ್ಧ ಹೋರಾಡಲು ಬೇಕಾದ ವೈಚಾರಿಕತೆ ಅವನಲ್ಲಿಲ್ಲ. ಲೇಖಕರಿಗೆ ದಾದಾನ ಪಾತ್ರದ ಬಗ್ಗೆ ವಿಶೇಷ ಆಸ್ಥೆಯಿದೆಯಾದರೂ ಅದು ಕಾದಂಬರಿಯ ಐಕ್ಯಕ್ಕೆ ಭಂಗ ತರುವುದಿಲ್ಲ. ಈ ಕಾದಂಬರಿಯನ್ನು ಬರೆಯುವಾಗಲೇ ಲೇಖಕರು ಕತೆಯ ಕೇಂದ್ರದಲ್ಲಿ ದಾದಾನನ್ನು ಇರಿಸಿಕೊಂಡಿದ್ದರು. ಈ ಬಗ್ಗೆ ಅವರೇ ಹೀಗೆ ಹೇಳಿದ್ದಾರೆ; ದಾದಾ ಎಂಬ ಒಬ್ಬ ವ್ಯಕ್ತಿಯ ಸಾಹಸಮಯ ಜೀವನದ ಸುತ್ತಲೂ ಒಂದು ಕತೆಯನ್ನು ಕಟ್ಟಬೇಕೆಂದು ನನ್ನ ಹಂಬಲವಿತ್ತು. ಆದರೆ ಬರೆಯುತ್ತ ಹೋದಂತೆ ಅದರ ರಚನೆಯೇ ಭಿನ್ನವಾಗುತ್ತ ನಡೆಯಿತು. ದಾದಾನಲ್ಲಿ ಇರದ ವೈಚಾರಿಕತೆ ಬಾಳಾಚಾರ್ಯರಲ್ಲಿದೆ. ಅವರು ಪಾದಳ್ಳಿಯ ಬಗ್ಗೆ ಪ್ರೀತಿ-ಅಭಿಮಾನಗಳಿರುವ ವ್ಯಕ್ತಿ. ಪಾದಳ್ಳಿಗೆ ಬಂದೊದಗಿರುವ ಸಂಕಟದ ನಿವಾರಣೆಗಾಗಿ ಅವರು ಚಡಪಡಿಸುತ್ತಾರೆ. ದೇವರು-ಧರ್ಮದಲ್ಲಿ ನಂಬಿಕೆಯುಳ್ಳ ಅವರು; ಬಿಕ್ಕಟ್ಟಿನ ಸಮಯದಲ್ಲಿ ಶಾಂತಿ, ಸಮಾಧಾನವನ್ನು ಭಾಗವತ ವಾಚನದಲ್ಲಿ ಕಂಡುಕೊಳ್ಳುತ್ತಾರೆ. ಇದೇ ಅವರ ಮಿತಿಯೂ ಆಗಿದೆ. ಹೀಗಾಗಿಯೇ ಪುರಾಣದಲ್ಲಿ ಘಟಿಸಿದ್ದು ಜೀವನದಲ್ಲಿಯೂ ಸತ್ಯವಾಗಬೇಕೆ? ಎಂಬ ಪ್ರಶ್ನೆಯನ್ನು ಅವರು ಎದುರಿಸುತ್ತಾರೆ; ಸಾತ್ವಿಕ ಜೀವನಕ್ಕೆ ಸತ್ವವೇಕೆ ಇಲ್ಲ ಎಂಬುದೇ ಗೂಢ ಸಮಸ್ಯೆಯಾಯಿತು. ಅಸುರಶಕ್ತಿ ದೈವಶಕ್ತಿಗಿಂತ ಬಲವಾದದ್ದೆಂದು ಪುರಾಣದಲ್ಲಿ ತಾವು ಓದಿದ್ದು ಜೀವನದಲ್ಲಿಯೂ ಸತ್ಯವಾಗಬೇಕೆ? ಹೀಗೆ ಅವರ ವೈಚಾರಿಕತೆ ಪುರಾಣದ ಚೌಕಟ್ಟಿನ ಸಮರ್ಥನೆಯಲ್ಲಿ ವಿರಮಿಸುವುದು ಅವರ ಮಿತಿಯೂ ಆಗಿದೆ. ಕಾದಂಬರಿಯ ಕೇಂದ್ರವೇ ಆಗಿರುವ ಬಾಳಾಚಾರ್ಯರು ’ಕೇಡಿ’ನ ಎದುರು ತಮ್ಮ ಸೋಲನ್ನು ಒಪ್ಪಿಕೊಳ್ಳುವುದು ಸಾಂಪ್ರದಾಯಿಕ ಮನಸ್ಸಿನ ಅನಿವಾರ್ಯತೆಯನ್ನೇ ಎತ್ತಿಹೇಳುತ್ತದೆ. ಸ್ಥಿತಪ್ರಜ್ಞೆಯೇ ಒಂದು ಮೌಲ್ಯವಾಗುವ ಸಾಧ್ಯತೆಯನ್ನು ಬಾಳಾಚಾರ್ಯರಲ್ಲಿ ಕಾಣುತ್ತೇವೆ.

ಕಾದಂಬರಿಯ ಕೊನೆಯಲ್ಲಿ, ದಾದಾ ಇಂದುಪುರದಿಂದ ಪಾದಳ್ಳಿಗೆ ಬರುತ್ತಾನೆ. ಆದರೆ ಮಠವೂ ಸೇರಿ ಇಡೀ ಪಾದಳ್ಳಿ ಖಾಲಿಯಾಗಿ ಕಾಣಿಸುತ್ತದೆ. ಆಗ ದಾದಾನಿಗೆ ಚಿಕ್ಕಂದಿನಲ್ಲಿ ಕೇಳಿದ ಒಂದು ಕಥೆ ನೆನಪಾಗುತ್ತದೆ; ’ಯಾವುದೋ ಒಂದು ಊರು. ಆ ಊರ ಅರಸನ ಪಾಪದ ಫಲವಾಗಿ ಊರಿಗೂರೇ ಶಾಪಗ್ರಸ್ತವಾಗಿರುತ್ತದೆ. ಒಂದು ದಿನ ಬೇರೆ ಊರಿನ ರಾಜಕುಮಾರ ಈ ಊರಿಗೆ ಬಂದ. ಆಗ ಹಗಲಾಗಿತ್ತು. ಊರಲ್ಲಿ ಪೇಟೆ, ಕೋಟೆ, ತೋಟಗಳು, ಬೀದಿ, ಸೌಧಗಳು ಎಲ್ಲವೂ ಇದ್ದವು. ಆದರೆ ಜನರೇ ಇರಲಿಲ್ಲ. ರಾಜಕುಮಾರ ಇಡೀ ದಿನ ತಿರುಗಾಡಿದ. ಒಬ್ಬರೂ ಕಾಣಬರಲಿಲ್ಲ. ಅರಮನೆಯೂ ಖಾಲಿ. ರಾಜಕುಮಾರ ಬೇಸರಗೊಂಡ. ಸಂಜೆಯಾಯಿತು. ಕತ್ತಲೆಯಾಗುವಾಗ ರಾಜಕುಮಾರ ಊರು ಬಿಟ್ಟುಹೋಗಬೇಕೆಂದು ಅರಮನೆಯ ಹತ್ತಿರ ನಿಂತವನು ಮರಳಿದ. ಕತ್ತಲೆಯಾಗುತ್ತಿದ್ದಂತೆ ಗುಡಿಯಿಂದ ಗಂಟೆಗಳ ನಾದ ಕೇಳಿಸಿತು. ಪೇಟೆಯ ತುಂಬ ದೀಪಗಳು. ಭರದಿಂದ ವ್ಯಾಪಾರ ಪ್ರಾರಂಭವಾಗಿತ್ತು. ವೇಷಭೂಷಣಗಳಿಂದ ಅಲಂಕೃತರಾದ ಜನರು ಓಣಿಯೊಳಗೆ ಬರುತ್ತಿದ್ದರು. ಕೋಟೆಯೆಡೆಯಿಂದ ಸನ್ನೆಗಹಳೆಯ ಶಬ್ದ ಕೇಳಿಸಿತು. ಅರಮನೆಯಿಂದ ಸಿಂಗರಿಸಿದ ರಥದಲ್ಲಿ ಅರಸ ಬರುತ್ತಿದ್ದ. ಅವನೆದುರು ಸಾಲಾಗಿ ಸೈನಿಕರು. ಈ ಪರ ಊರಿನ ರಾಜಕುಮಾರ ದಂಗಾಗಿ ಹೋದ. ಬೀದಿಯಲ್ಲಿ ಒಬ್ಬ ಯುವಕನನ್ನು ಇದೆಲ್ಲ ಏನು? ಎಂದು ಕೇಳಿದ. ಆಗ ಅವನಿಗೆ ತಿಳಿದುಬಂತು; ಆ ಊರು ಹಗಲಿನಲ್ಲಿ ಸತ್ತು ಇರುಳಿನಲ್ಲಿ ಬದುಕುತ್ತಿತ್ತು. ಅರಸನ ಪಾಪವೇ ಇದಕ್ಕೆ ಕಾರಣವಾಗಿತ್ತಂತೆ. ಅರಸರು ಅಥವಾ ಸಂಪತ್ತಿನ ಒಡೆಯರು ಮಾಡುವ ಪಾಪದ ಫಲವಾಗಿ ಇಡೀ ಊರು ಹೇಗೆ ನವೆಯಬೇಕು ಎಂಬುದು ಈ ಪ್ರಸಂಗದ ಗಂತವ್ಯ. ಇದು ಇಡೀ ಕಾದಂಬರಿಯನ್ನು ವ್ಯಾಪಿಸಿಕೊಳ್ಳುವ ಎಳೆಯೂ ಹೌದು.
***
’ಗ್ರಾಮಾಯಣ’ ಕಾದಂಬರಿಯ ರಚನೆಯ ಹಿಂದೆ ಒಂದು ಕುತೂಹಲದ ಕಥೆಯಿದೆ. ಧಾರವಾಡದ ಮನೋಹರ ಗ್ರಂಥಮಾಲೆಯ ಸ್ಥಾಪಕರಾದ ಜಿ. ಬಿ. ಜೋಶಿಯವರು ಹುಬ್ಬಳ್ಳಿಯ ಆಸ್ಪತ್ರೆಯೊಂದರಲ್ಲಿ ಆಪರೇಶನ್ ಮಾಡಿಸಿಕೊಂಡು ಶುಶ್ರೂಷೆ ಪಡೆಯುತ್ತಿದ್ದರು. ಸಮೀಪದಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ರಾವ್ ಬಹದ್ದೂರ್ ಅವರು ಮಧ್ಯಾಹ್ನದ ಚಹಾ ಬಿಡುವಿನಲ್ಲಿ ಹರಟೆಹೊಡೆಯಲು ಬರುತ್ತಿದ್ದರಂತೆ. ಒಂದು ದಿನ ಅದೂ ಇದೂ ಮಾತಾಗಿ ಕನ್ನಡ ಕಾದಂಬರಿ ಪ್ರಪಂಚದೆಡೆಗೆ ಮಾತು ಹೊರಳಿತಂತೆ. ರಾವಬಹದ್ದೂರರು ಕಾದಂಬರಿಗಳ ವಿಷಯವನ್ನು ಟೀಕಿಸುತ್ತ; ಈಗಿನ ಕಾದಂಬರಿಕಾರರಿಗೆ ಪ್ರೇಮ, ಕಾಮ ಮುಂತಾದ ವಿಷಯಗಳನ್ನು ಹೊರತುಪಡಿಸಿ ಬೇರೆ ವಿಷಯಗಳೇ ಸಿಗುವುದಿಲ್ಲ. ಕಾದಂಬರಿ ಅಂದರೆ ನಾಯಕ, ನಾಯಕಿ ಇರಲೇಬೇಕು. ಅವೆಲ್ಲವೂ ಸಿನಿಮಾದ ಪ್ರತಿಧ್ವನಿಯಂತೇ ಇರುತ್ತವೆ.’ ಹೀಗೆ ಹೇಳುತ್ತಲೇ ಜಮಖಂಡಿಯಲ್ಲಿದ್ದ ’ದಾದಾ’ ಎಂಬ ವ್ಯಕ್ತಿಯ ವಿವರಣೆಯನ್ನು ನೀಡುತ್ತಾ; ದಾದಾನಂಥ ವ್ಯಕ್ತಿಯನ್ನೇ ಕೇಂದ್ರಸ್ಥಾನದಲ್ಲಿರಿಸಿಕೊಂಡು ಕಾದಂಬರಿಯನ್ನೇಕೆ ಬರೆಯಬಾರದು? ಎಂದು ಪ್ರಶ್ನಿಸಿದರಂತೆ. ಆಗ ಜಿ. ಬಿ. ಯವರು; ನೀನು ಬರೆದುಕೊಡು ನಾನು ಪ್ರಕಟಿಸುತ್ತೇನೆ. ಇಂದಿನಿಂದಲೇ ಬರೆಯಲು ಪಾರಂಭಿಸಿ ಎಂದು ಹುರಿದುಂಬಿಸಿದರಂತೆ. ಈ ಸಂದರ್ಭವನ್ನು ಕುರಿತು ಲೇಖಕ ರಾವ್ ಬಹದ್ದೂರ್; ನಮಾಜು ಮಾಡಲು ಬಂದರೆ ಮಸೀದಿ ಕೊರಳಿಗೆ ಬಿತ್ತು ಎಂದಿದ್ದಾರೆ. ಮರುದಿನವೇ ಒಂದು ಪ್ರಕರಣವನ್ನು ಬರೆದು ತಂದು ರಾವ್ ಬಹದ್ದೂರ್ ಓದಿದರಂತೆ. ಹೀಗೆ ಇದು ಜಿಬಿಯವರು ಆಸ್ಪತ್ರೆಯಲ್ಲಿರುವವರೆಗೂ ಮುಂದುವರಿಯತಂತೆ.

ಕಾದಂಬರಿ ಬರೆದು ಮುಗಿದ ಮೇಲೆ ಅದನ್ನು ಓದಿದ ಕೀರ್ತಿನಾಥ ಕುರ್ತಕೋಟಿಯವರು; ಕಾದಂಬರಿಯ ವಿಷಯ ಚೆನ್ನಾಗಿದೆ. ಆದರೆ ಅಭಿವ್ಯಕ್ತಿ ಸರಿಯಾಗಿಲ್ಲ. ಅದನ್ನು ತಿದ್ದಬೇಕಾಗುತ್ತದೆ ಎಂದರಂತೆ. ಆಗ ಆ ಕೆಲಸವನ್ನು ಜಿಬಿಯವರು ಕೀರ್ತಿಯವರಿಗೇ ಒಪ್ಪಿಸಿದ್ದರು. ಇದಕ್ಕೆ ರಾವ್ ಬಹದ್ದೂರರೂ ಒಪ್ಪಿದ್ದರು. ಲೇಖಕರೇ ಈ ಬಗ್ಗೆ ತಮ್ಮ ಮಾತಿನಲ್ಲಿ ಹೀಗೆ ಬರೆದುಕೊಂಡಿದ್ದಾರೆ; ನನ್ನಿಂದ ಬರೆಯಲ್ಪಟ್ಟ; ಕೆ. ಡಿ. ಕುರ್ತಕೋಟಿಯವರಿಂದ ಸಂಸ್ಕಾರಹೊಂದಿ; ಶ್ರೀ ಎ. ವ್ಹಿ. ಶಾಸ್ತ್ರಿಯವರಿಂದ ನಾಮಕರಣ ಹೊಂದಿದ... ಹೀಗೆ ರಾವ್ ಬಹದ್ದೂರರ ಸೃಜನಶೀಲತೆಗೆ ಕುರ್ತಕೋಟಿಯವರ ವೈಚಾರಿಕ ಸ್ಪರ್ಶ ದೊರೆತು ಗ್ರಾಮಾಯಣ ಎಂಬ ಚಿರಕೃತಿ ಕನ್ನಡಕ್ಕೆ ದಕ್ಕಿದೆ. ಕಾದಂಬರಿಗೆ ಹೆಸರಿಡುವುದೂ ಒಂದು ಸಮಸ್ಯೆಯಾದಾಗ ಈ ಹೊಣೆಯನ್ನು ಜಿಬಿಯವರು ಗೋಕಾಕರಿಗೆ ವಹಿಸಿದ್ದರಂತೆ. ಈ ಮಧ್ಯೆ ಲೇಖಕರಿಗೆ ಭೆಟ್ಟಿಯಾದ ಹುಬ್ಬಳ್ಳಿಯ ಕಾಮರ್ಸ್ ಕಾಲೇಜು ಪ್ರಾಧ್ಯಾಪಕರಾಗಿದ್ದ ಪ್ರೊ. ಎ. ವ್ಹಿ. ಜೋಶಿಯವರು; ಆ ಕತೆಯನ್ನು ನಾನು ಕೇಳಿದ್ದೇನೆ. `It is a saga of a Village' ಎಂದು ನನಗನಿಸುತ್ತದೆ. ಇದಕ್ಕೆ ’ಗ್ರಾಮಾಯಣ’ ಎಂದು ಹೆಸರಿಟ್ಟರಾಗದೇ? ಎಂದರಂತೆ. ರಾಮಾಯಣದ ಆದರ್ಶಕ್ಕೂ ನಮ್ಮ ವಾಸ್ತವಕ್ಕೂ ಇರುವ ಅಂತರವನ್ನು ವ್ಯಂಗ್ಯವಾಗಿ ಸೂಚಿಸುವ ಸೂಕ್ತ ಹೆಸರಾಗಿ ಇದು ಕೃತಿಯನ್ನು ಅಲಂಕರಿಸಿ, ಸಮಕಾಲೀನ ಪುರಾಣವಾಗಿ ಜನಪ್ರಿಯವಾಗಿದೆ.

ಕಾದಂಬರಿ ಪ್ರಕಟವಾಗುವಾಗ ಕೀರ್ತಿನಾಥ ಕುರ್ತಕೋಟಿಯವರ ಸುದೀರ್ಘ ಮುನ್ನುಡಿಯನ್ನು ಹೊತ್ತೇ ಬಂದಿದೆ. ಹಲವಾರು ಒಳನೋಟಗಳನ್ನು ನೀಡುವ ಈ ಬರಹ ಕಾದಂಬರಿಯ ಪ್ರವೇಶಕ್ಕೆ ಮಾತ್ರವಲ್ಲ ಮುಂದಿನ ವಿಮರ್ಶಾತ್ಮಕ ಚರ್ಚೆಗೂ ಒಂದು ಹದವಾದ ಭೂಮಿಕೆಯನ್ನೊದಗಿಸಿದೆ. ಮುಂದೆ ಸರ್ವಶ್ರೀ ಎಂ. ಜಿ. ಕೃಷ್ಣಮೂರ್ತಿ ಎಚ್. ಎಂ. ಚೆನ್ನಯ್ಯ ಜಿ. ಎಸ್. ಆಮೂರ ಡಿ. ರಘುನಾಥರಾವ್ ಮುಂತಾದ ವಿಮರ್ಶಕರು ಘನವಾದ ವಿಮರ್ಶೆಗಳನ್ನು ಬರೆದರು. 1970ರಲ್ಲಿ ಶ್ರೀಕೃಷ್ಣ ಆಲನಹಳ್ಳಿಯವರ ಸಂಪಾದಕತ್ವದಲ್ಲಿ ’ಗ್ರಾಮಾಯಣ ಸಮೀಕ್ಷೆ’ ಎಂಬ ವಿಮರ್ಶಾ ಲೇಖನಗಳ ಸಂಕಲನವೇ ಪ್ರಕಟಗೊಂಡು ಕನ್ನಡ ಕಾದಂಬರಿಯೊಂದಕ್ಕೆ ಸಲ್ಲಬಹುದಾದ ಬಹುದೊಡ್ಡ ಗೌರವವಾಯಿತು. ಹಲವಾರು ಪಿಎಚ್.ಡಿ. ಪ್ರಬಂಧಗಳಲ್ಲಿ ಇದರ ಚರ್ಚೆ ಜಾಗ ಪಡೆದಿದೆ. ಇತ್ತೀಚೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ; ’ಗ್ರಾಮಾಯಣ ಸಾಂಸ್ಕೃತಿಕ ಮುಖಾಮುಖಿ’ ವಿಚಾರ ಸಂಕಿರಣ ನಡೆಸಿ ಲೇಖನಗಳ ಪುಸ್ತಕವನ್ನೂ ಪ್ರಕಟಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ರಾವ್ ಬಹದ್ದೂರ್ ಶತಮಾನೋತ್ಸವ ಸಂದರ್ಭದಲ್ಲಿ ಜಮಖಂಡಿಯಲ್ಲಿ ನಡೆಸಿದ್ದ ವಿಚಾರ ಸಂಕಿರಣದ ಪ್ರಬಂಧಗಳನ್ನು ’ರಾವ್ ಬಹದ್ದೂರ್ ಸಾಹಿತ್ಯಕ ಒಳನೋಟಗಳು’ ಎಂಬ ಪುಸ್ತಕದಲ್ಲಿ ಪ್ರಕಟಿಸಿದೆ. ಹೀಗೆ ಆರು ದಶಕಗಳ ಕಾಲ ನಿರಂತರವಾಗಿ ಚರ್ಚೆ-ವ್ಯಾಖ್ಯಾನಗಳಿಗೆ ’ಗ್ರಾಮಾಯಣ’ ಒಳಗಾಗುತ್ತಲೇ ಬಂದಿದೆ. ತನ್ನ ತಾಜಾತನದಿಂದಾಗಿ ಇಂದಿಗೂ ಸಮಕಾಲೀನವೂ ಎನ್ನಿಸುತ್ತದೆ.

ಈ ಅಂಕಣದ ಹಿಂದಿನ ಬರೆಹ

ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’

ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’

ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ

ಪುಸ್ತಕ ಲೋಕವೆಂಬ ಬದುಕಿನ ಬುತ್ತಿ

ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'

ಅಂಬಿಕಾತನಯದತ್ತರ ಸಖೀಗೀತ

ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...