ಗುಲ್ಬರ್ಗ: ಬಹಮನಿ ಸುಲ್ತಾನ್‌ರ ರಾಜಧಾನಿಯಾಗಿ 673 ವರ್ಷ

Date: 28-01-2020

Location: ಬೆಂಗಳೂರು


ಈಗಿನ ಈಶಾನ್ಯ ಕರ್ನಾಟಕದ ಪ್ರಮುಖ ನಗರ ಕಲಬುರಗಿ/ಗುಲ್ಬರ್ಗ. ಈ ನಗರ ರಚನೆಯ ಸ್ವರೂಪ ಹಾಗೂ ಅದರ ಐತಿಹಾಸಿಕತೆಯನ್ನು ಹಿರಿಯ ಇತಿಹಾಸ ತಜ್ಞ ಹಾಗೂ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌ (ಐಸಿಎಚ್‌ಆರ್‌) ಉಪ ನಿರ್ದೇಶಕರಾದ ಡಾ. ಶಿವಶರಣ ಅರುಣಿ ಅವರು ಈ ಲೇಖನದಲ್ಲಿ ಚರ್ಚಿಸಿದ್ದಾರೆ. ಮಧ್ಯಕಾಲೀನ ಅವಧಿಯಲ್ಲಿ ಬಹಮನಿ ದೊರೆಗಳ ರಾಜಧಾನಿಯಾಗಿ ಪ್ರವರ್ಧಮಾನಕ್ಕೆ ಬಂದ ಗುಲ್ಬರ್ಗ ಕುರಿತ ಒಂದು ಹಿನ್ನೋಟ ಇಲ್ಲಿದೆ-

 

ಗುಲ್ಬರ್ಗ ನಗರವು ರಾಜಧಾನಿಯಾಗಿ 673 ವರ್ಷಗಳಾಗಿವೆ. ಕ್ರಿ.ಶ. 1347ರಲ್ಲಿ ಬಹಮನಿ ಸುಲ್ತಾನ ಅಲ್ಲಾವುದ್ದಿನ ಹಸನ್ ಬಹಮನ್ ಶಹಾನು ಬಹಮನಿ ರಾಜ್ಯವನ್ನು ಗುಲ್ಬರ್ಗದಲ್ಲಿ ಸ್ಥಾಪಿಸಿದನು. ತುಂಗಭದ್ರಾ ನದಿ ದಂಡೆಯ ಮೇಲೆ ಹಕ್ಕ-ಬುಕ್ಕ ಅರಸರಿಂದ ವಿಜಯನಗರ ರಾಜ್ಯ ಆಗಲೇ ಸ್ಥಾಪನೆಯಾಗಿ 10 ವರ್ಷಗಳು ಸಂದಿದ್ದವು. ದಕ್ಷಿಣ ಭಾರತದ ಮುಖ್ಯವಾಗಿ ಕೃಷ್ಣಾ-ತುಂಗಭದ್ರಾ ನದಿಗಳ ಬಯಲಿನ ಪ್ರದೇಶದಲ್ಲಿ ಅಧಿಪತ್ಯ ಸ್ಥಾಪಿಸುವ ಉದ್ದೇಶದಿಂದ ವಿಜಯನಗರ ರಾಜ್ಯ ಸ್ಥಾಪನೆಯಾಗಿ ತನ್ನ ರಾಜಕೀಯ ಹಿಡಿತ ಬಲಗೊಳಿಸುವಲ್ಲಿ ಮಗ್ನವಾಗಿತ್ತು. ಈ ಸಮಯದಲ್ಲಿ ಇದೇ ಪ್ರದೇಶದಲ್ಲಿ ಹೊಸದಾಗಿ ಮತ್ತೊಂದು ರಾಜಕೀಯ ಶಕ್ತಿಯಾದ ಬಹಮನಿ ರಾಜ್ಯ ಸ್ಥಾಪಿಸುವ ರಾಜಕೀಯ ಉದ್ದೇಶ ಅಸ್ಪಷ್ಟ. ಆದರೇ, ದಕ್ಷಿಣ ಭಾರತದ ಪ್ರಾಚೀನ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹಲವಾರು ಶತಮಾನಗಳ ಕಾಲ ತುಂಗಭದ್ರಾ ನದಿ ಕಣಿವೆಯು ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ವಿಭಜಿಸುವ ಗಡಿರೇಖೆಯಾಗಿತ್ತು. ತುಂಗಭದ್ರಾ ನದಿಯ ದಕ್ಷಿಣದ ಪ್ರದೇಶ ಅಂದರೇ, ಕರ್ನಾಟಕ, ಆಂಧ್ರ, ತಮಿಳುನಾಡು ಪ್ರದೇಶ ಬೆಟ್ಟ-ಗುಡ್ಡಗಳ ನಾಡಾಗಿದೆ. ಅದಕ್ಕಾಗಿ ವಿಜಯನಗರ ರಾಜ್ಯದಂತಹ ಪ್ರಬಲವಾದ ರಾಜಕೀಯ-ಶಕ್ತಿ ಉದಯಗೊಳ್ಳಲು ಕಾರಣವಾಯಿತು.

ಖನಿಜಗಳ ನಾಡು:

ಕೃಷ್ಣಾ ಮತ್ತು ಭೀಮಾ ನದಿಗಳ ಪ್ರದೇಶ ಕಪ್ಪುಮಣ್ಣಿನ ಫಲವತ್ತಾದ ಭೂಮಿ ಯಾಗಿದ್ದು, ಪ್ರಾಚೀನ ಕಾಲ ದಿಂದಲೂ ಈ ಪ್ರದೇಶ ವಾಣಿಜ್ಯ-ವ್ಯಾಪಾರ ಹಾಗೂ ಕೃಷಿ ಚಟುವಟಿಕೆಗಳಿಗೆ ಹೆಸರು ವಾಸಿಯಾಗಿತ್ತು. ಕಡಪಾ ಶಹಾಬಾದ ಕಲ್ಲು ಕಣಿಗಳಂತೆ ಯೇ ವಜ್ರದ ಕಣಿಗಳು ಈ ಭಾಗದಲ್ಲಿ ಹೇರಳವಾಗಿ ಲಭ್ಯವಾಗುತ್ತಿತ್ತು. ಖನಿಜ ಸಂಪತ್ತು ಹೆಚ್ಚಾಗಿ ದೊರೆಯುತ್ತಿದ್ದರಿಂದ ಈ ಪ್ರದೇಶದ ಮೇಲಿನ ಹತೋಟಿಯನ್ನು ಸಾಧಿಸಲು ಬಹಮನಿ ರಾಜ್ಯ ಉದಯಗೊಂಡಿತು. ಅದರಂತೆ ಗುಲ್ಬರ್ಗ ಪ್ರದೇಶ ದಟ್ಟ ಅರಣ್ಯ ಅಥವಾ ಅಬೇಧ್ಯ ಬೆಟ್ಟ-ಕಣಿವೆಗಳ ಪ್ರದೇಶವಲ್ಲ, ಇದು ಸಮತಟ್ಟಾದ ಪ್ರದೇಶ. ಇದೊಂದು ಆಯಕಟ್ಟಿನ ಸ್ಥಳ. ಪ್ರಾಚೀನ ಕಾಲದ ಶಾತವಾಹನರು, ರಾಷ್ಟ್ರಕೂಟರು, ಅಥವಾ ಕಲ್ಯಾಣ ಚಾಲುಕ್ಯರ ರಾಜಧಾನಿಗಳು ನೈಸರ್ಗಿಕ ರಕ್ಷಣೆ ನೀಡುವ ನದಿ ದಂಡೆಗಳ ಮೇಲೆ ನಿರ್ಮಿಸುವ ಸಂಪ್ರದಾಯವಿತ್ತು. ಆದರೆ ಬಹಮನಿ ಸುಲ್ತಾನರು ತಮ್ಮ ರಾಜಧಾನಿಯನ್ನಾಗಿ ಗುಲ್ಬರ್ಗಾವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರಥಮಬಾರಿಗೆ ಈ ಸಂಪ್ರದಾಯವನ್ನು ಮುರಿದರು. ನದಿಗಳಿಂದ ಬಹುದೂರವಿರುವ ಗುಲ್ಬರ್ಗ ನಗರಕ್ಕೆ ವೈರಿಗಳು ಯಾವುದೇ ದಿಕ್ಕಿನಿಂದ ದಾಳಿಮಾಡುವ ಸಾಧ್ಯತೆಗಳಿವೆ. ಆದರೂ ಬಲಿಷ್ಟವಾದ ಸೈನ್ಯ ಹಾಗೂ ಭದ್ರಕೋಟೆಗಳಿಂದ ಬಹಮನಿ ಸುಲ್ತಾನರು ಸುಮಾರು 75 ವರ್ಷಗಳ ಸುದೀರ್ಘ ಕಾಲ ಗುಲ್ಬರ್ಗವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು.

ರಾಜಧಾನಿ ನಗರ ನಿರ್ಮಾಣದ ಉದ್ದೇಶ:

ದೇವಗಿರಿ, ಜುನ್ನಾರ್‌, ಫರಿಂದಾ, ನಳದುರ್ಗಾಗಳಂತಹ ಅಬೇಧ್ಯ ಕೋಟೆಯುಕ್ತ ನಗರಗಳನ್ನು ಕಂಡಿದ್ದ ಅಲ್ಲವುದ್ದಿನ್ ಹಸನ್ ಗಂಗು, ಗುಲ್ಬರ್ಗವನ್ನು ತನ್ನ ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಉದ್ದೇಶವೇ ಬೇರೆಯಾಗಿತ್ತು. ಪ್ರಾಚೀನ ದೇವಗಿರಿಯ ಯಾದವ ಮತ್ತು ವಾರಂಗಲ್ಲಿನ ಕಾಕತೀಯ ಅರಸರು ರಾಜಕೀಯ ಅವನತಿ ಹೊಂದಿದ್ದರು. ಈ ಪ್ರಾಚೀನ ರಾಜಮನೆತನಗಳು ಕಟ್ಟಿದ ಆಡಳಿತ ವ್ಯವಸ್ಥೆಯನ್ನು ಹೊಸದಾಗಿ ಸ್ಥಾಪಿಸಲ್ಪಡುವ ತನ್ನ ಬಹಮನಿ ರಾಜ್ಯದ ಆಡಳಿತಕ್ಕೆ ಬಳಸಿಕೊಳ್ಳುವುದು ಮುಖ್ಯ ಉದ್ದೇಶವಾಗಿತ್ತು. ಅದರಂತೆ ಪಶ್ಚಿಮ ಕರಾವಳಿಯ ಬಂದರು ಪ್ರದೇಶವಾದ ದಾಬೋಲ್ ಮತ್ತು ಗೋವಾ ಅದರಂತೆ ಪೂರ್ವದ ಕರಾವಳಿಯ ಬಂದರು ಪ್ರದೇಶಗಳಿಗೆ ಸರಿಸಮಾನ ದೂರದಲ್ಲಿ ಗುಲ್ಬರ್ಗ ಪ್ರದೇಶ ಇದೆ. ಪ್ರಾಚೀನ ವ್ಯಾಪಾರ-ವಾಣಿಜ್ಯ ಸರಕು ಸಾಗಾಣಿಕೆಗಳ ಹೆದ್ದಾರಿಗಳು ಗುಲ್ಬರ್ಗ ಪ್ರದೇಶವನ್ನು ಬಳಸಿಕೊಂಡು ಹೋಗುತ್ತಿದ್ದವು. ಈ ಹೆದ್ದಾರಿಗಳ ನಿಯಂತ್ರಣದಿಂದ ಆರ್ಥಿಕ ಆದಾಯದ ಜೊತೆಗೆ ರಾಜ್ಯದ ಮೇಲೆ ಹಿಡಿತ ಹಿಡಿದಿಟ್ಟುಕೊಳ್ಳುವುದು ಅತ್ಯಂತ ಸುಲಭವಾಗಿತ್ತು. ಪರ್ಶಿಯಾ, ಅಥವಾ ಮಧ್ಯ ಏಶಿಯಾದ ಹೆರಾಟ್, ಬುಖಾರಾ, ಕಾಬೂಲಗಳಂತಹ ನಗರಗಳ ಮಾದರಿಯಲ್ಲಿ ಹೊಸದಾಗಿ ಸ್ಥಾಪಿಸಿದ ರಾಜಧಾನಿ ಗುಲ್ಬರ್ಗಾವನ್ನು ರಚಿಸಿರುವುದು ಇದರ ರಚನಾ ಶೈಲಿಯ ಆಧಾರದಿಂದ ಗುರುತಿಸಬಹುದು.

ಗುಲಬರ್ಗಾ ನಗರ ನಿರ್ಮಾಪಕ ಬಹಮನಿ ರಾಜ್ಯದ ಸುಲ್ತಾನ ಅಲ್ಲಾವುದ್ದಿನ್ ಹಸನ್ ಗಂಗು ಅವರ ಕುರಿತಾದ ಕೆಲವು ಕುತೂಹಲಕಾರಿ ಐತಿಹ್ಯ ಅಥವಾ ಕತೆಗಳಿವೆ.  ಈ ಕತೆಗಳು ಕಾಲ್ಪನಿಕ ಎನಿಸಿದರೂ ಚಾರಿತ್ರಿಕ ಅಂಶಗಳನ್ನು ಹೊಂದಿದೆ.

ಸುಲ್ತಾನ ಅಲ್ಲಾವುದ್ದಿನ್‌ನಿಗೆ ಗಂಗು ಎಂಬ ಹೆಸರು ಹಾಗೂ ಈ ಮನೆತನಕ್ಕೆ ಬಹಮನಿ ಎಂಬ ಹೆಸರು ಬರುವುದಕ್ಕೆ ಐತಿಹ್ಯಗಳಿವೆ.  ಗುಲಬರ್ಗಾದಲ್ಲಿ ಹೊಸದಾಗಿ ಬಹಮನಿ ರಾಜ್ಯ ಸ್ಥಾಪಿಸುವುದಕ್ಕೆ ಮೊದಲು ಅಲ್ಲಾವುದ್ದಿನ್‌ನು ದೆಹಲಿಯಲ್ಲಿ ಗಂಗು ಎಂಬ ಬ್ರಾಹ್ಮಣನ ಮನೆಯಲ್ಲಿ ಸೇವಕನಾಗಿದ್ದನಂತೆ.  ಒಂದು ದಿನ ತನ್ನ ಒಡೆಯನ ಭೂಮಿಯನ್ನು ಉಳಿಮೆ ಮಾಡುವ ಸಂಧರ್ಭದಲ್ಲಿ ಚಿನ್ನದ ನಾಣ್ಯಗಳಿರುವ ದೊಡ್ಡ ಕೊಪ್ಪರಿಗೆ ದೊರೆಯಿತು.  ಸಿಕ್ಕ ನಿಧಿಯನ್ನು ತನಗಾಗಿ ತೆಗೆದುಕೊಳ್ಳದೇ, ಭೂಮಿಯ ಒಡೆಯನಾದ ಗಂಗುನಿಗೆ ತಂದು ಒಪ್ಪಿಸಿದನು.  ಅಲ್ಲಾವುದ್ದಿನನ ಈ ಪ್ರಾಮಾಣಿಕತೆಗೆ ಮೆಚ್ಚಿ ಗಂಗು, ದೆಹಲಿ ಸುಲ್ತಾನ್ ಘಿಯಾಸುದ್ದೀನ್‌ನಿಗೆ ವರದಿ ಮಾಡಿದನು.  ಈ ಪ್ರಾಮಾಣಿಕತೆಗೆ ದೆಹಲಿ ಸುಲ್ತಾನನು ಕೂಡ ಮೆಚ್ಚಿ ತನ್ನ ರಾಜ್ಯದ ಸೈನ್ಯ ಪಡೆಗೆ ಅಧಿಕಾರಿಯನ್ನಾಗಿ ನೇಮಕ ಮಾಡಿದನು.  ಜೀತದಾಳಾಗಿದ್ದ ಅಲ್ಲಾವುದ್ದಿನ್ ರಾಜ್ಯದ ಸೈನ್ಯ ಪಡೆಗೆ ಅಧಿಕಾರಿಯಾಗಿ ಬಡ್ತಿಯನ್ನು ಪಡೆದು ತದನಂತರ ಶೀರ್ಘವಾಗಿ ಉನ್ನತ ಹುದ್ದೆಗೆ ಬಂದನು.  ಪ್ರಾಮಾಣಿಕತೆ ಮತ್ತು ರಾಜಕೀಯ ಚಾಣಾಕ್ಷ್ಯತೆಯನ್ನು ಗುರುತಿಸಿದ ಬ್ರಾಹ್ಮಣ ಒಡೆಯ ಗಂಗು, ಮುಂದೊಂದು ದಿನ ಸುಲ್ತಾನನಾಗುವುದಾಗಿ ಭವಿಷ್ಯವನ್ನು ಅಲ್ಲಾವುದ್ದಿನ್‌ನಿಗೆ ಹೇಳಿದನು.  ಅಲ್ಲಾವುದ್ದಿನ್ ಈ ಬ್ರಾಹ್ಮಣನ ಭವಿಷ್ಯನುಡಿಯಿಂದ ಪ್ರಭಾವಿತನಾಗಿ ಮುಂದೊಂದು ದಿನ ತಾನು ಹೊಸದಾಗಿ ರಾಜ್ಯ ಕಟ್ಟಿದರೇ ತನ್ನ ಒಡೆಯನ ಬ್ರಾಹ್ಮಣ ಮನೆತನದ ಹೆಸರಿನಲ್ಲಿ ತನ್ನ ರಾಜ್ಯದ ಮನೆತನಕ್ಕೆ ಹೆಸರಿಡುವುದಾಗಿ ಹಾಗೂ ತನ್ನ ಹೆಸರಿನೊಂದಿಗೆ ತನ್ನ ಒಡೆಯನ ಹೆಸರಾದ ಗಂಗು ಎಂಬುದಾಗಿ ಸೇರಿಸಿಕೊಳ್ಳುವುದಾಗಿ ಹೇಳಿಕೊಳ್ಳುತ್ತಾನೆ.  ಅದರಂತೆ ಅಲ್ಲಾವುದ್ದಿನ್ ಸ್ಥಾಪಿಸಿದ ರಾಜಮನೆತನಕ್ಕೆ ಬಹಮನಿ ಎಂತಲೂ ಹಾಗೂ ಅಲ್ಲಾವುದ್ದಿನ್‌ನ ಹೆಸರಿನೊಂದಿಗೆ ಹಸನ್ ಗಂಗು ಎಂದು ಸೇರಿಸಿಕೊಂಡಿರುವುದು ಎಂದು ವಿದ್ವಾಂಸರು ಗುರುತಿಸುತ್ತಾರೆ.  ಈ ಕತೆಯನ್ನು ೧೬ನೇ ಶತಮಾನದ ಚರಿತ್ರೆಕಾರ ಫೆರಿಸ್ತಾ ಕೂಡ ದಾಖಲಿಸಿದ್ದಾನೆ.  ಆದರೆ ಇನ್ನೊಬ್ಬ ಇತಿಹಾಸಕಾರ ತಬ್ತಾಬಿಯು ಅಲ್ಲಾವುದ್ದಿನ್‌ನು ಒಬ್ಬ ದೈವ ಸಂಭೂತನೆಂತಲೂ ಚಿತ್ರಿಸಿದ್ದಾನೆ.  ಒಮ್ಮೆ ಮರಳುಗಾಡಿನಲ್ಲಿ ಅಲ್ಲಾವುದ್ದಿನ್‌ನು ವಿಶ್ರಾಂತಿ ಪಡೆಯುತ್ತಿದ್ದ ಸಂಧರ್ಭದಲ್ಲಿ ಒಂದು ನಾಗರ ಹಾವು ತನ್ನ ಹೆಡೆಯನ್ನು ಬಿಚ್ಚಿ ಅಲ್ಲಾವುದ್ದಿನ್‌ನಿಗೆ ನೆರಳನ್ನು ಕೊಡುತ್ತಿದ್ದುದನ್ನು ಬ್ರಾಹ್ಮಣ ಗಂಗು ಗಮನಿಸಿ, ಮುಂದೊಂದು ದಿನ ಇವನು ದೊಡ್ಡ ವ್ಯಕ್ತಿಯಾಗುವುದನ್ನು ಗುರುತಿಸುತ್ತಾನೆ.  ಅಲ್ಲಾವುದ್ದಿನ್‌ನಿಗೆ ತನ್ನ ಮನೆತನದ ಬ್ರಾಹ್ಮಣ ಹೆಸರನ್ನು ಹೊಸದಾಗಿ ಸ್ಥಾಪಿಸುವ ರಾಜ್ಯಕ್ಕೆ ಬಹಮನ್ ಎಂಬ ಹೆಸರನ್ನು ಇಡಲು ಹೇಳುತ್ತಾನೆ ಎಂಬ ಕತೆಯನ್ನು ತಬ್ತಾಬಿ ದಾಖಲಿಸುತ್ತಾನೆ.

ಆದರೆ ಇವು ಮಧ್ಯಕಾಲೀನದಲ್ಲಿ ಪ್ರಚಲಿತದಲ್ಲಿದ್ದ ಎರಡು ಕತೆಗಳು ವಾಸ್ತವತೆಯೇ ತುಂಬಾ ಭಿನ್ನವಾಗಿದೆ.  ಹೆಸರಾಂತ ಇತಿಹಾಸಕಾರ ಹೆಚ್.ಕೆ. ಶೇರ್‌ವಾನಿ ಅವರು ಹಳೆಯ ದಾಖಲೆಗಳನ್ನು ಆಧರಿಸಿ ಅಲ್ಲಾವುದ್ದಿನ್‌ನ ಪೂರ್ವಾಪರವನ್ನು ಹುಡುಕಿದ್ದಾರೆ.  ದೊರೆತ ದಾಖಲೆಗಳ ಪ್ರಕಾರ, ಅಲ್ಲಾವುದ್ದಿನ್‌ನ ಪೂರ್ವಜರು ಒಂದಿ ರಾಜಮನೆತನಕ್ಕೆ ಸೇರಿದವರು ಎಂಬ ದಾಖಲೆಗಳಿವೆ.   ಪರ್ಶಿಯಾ ದೇಶದಲ್ಲಿ ಇಶ್ಪಹಾನ್ ಎಂಬ ರಾಜ್ಯವನ್ನು ಆಳುತ್ತಿದ್ದ ಕುಕುಯಿದ್ ಮನೆತನಕ್ಕೆ ಸೇರಿದವನು.  ಇರಾನ್ ದೇಶದ ಪ್ರಸಿದ್ಧ ಮನೆತನವಾದ ಬಹಮನ್ ಮನೆತನಕ್ಕೆ ಸೇರಿದ ಅಲ್ಲಾವುದ್ದಿನ್‌ನು ದೆಹಲಿಗೆ ಖಿಲ್ಜಿ ಸುಲ್ತಾನರ ಆಳ್ವಿಕೆಯಲ್ಲಿ ಪರ್ಶಿಯಾದಿಂದ ವಲಸೆ ಬಂದು ಸೈನ್ಯದಲ್ಲಿ ದೊಡ್ಡ ಹುದ್ದೆ ಅಲಂಕರಿಸಿ ತನ್ನ ಮುತ್ಸದ್ಧಿತನದಿಂದ ಬೇಗನೆ ಪ್ರಸಿದ್ಧಿಗೆ ಬಂದನು.

ಸೈನಿಕ ಹುದ್ದೆಯಿಂದ ಸುಲ್ತಾನ ಹುದ್ದೆಯವರೆಗಿನ ಹೋರಾಟಗಳು:
ಅಲ್ಲಾವುದ್ದಿನ್‌ನ ಮೂಲ ಹೆಸರ ಜಫರ್ ಖಾನ್.  ಇವನು ಕ್ರಿ.ಶ. ೧೨೯೦ರಲ್ಲಿ ಜನಿಸಿದನು.  ತನ್ನ ೫೭ನೇ ವರ್ಷದಲ್ಲಿ ಬಹಮನಿ ರಾಜ್ಯವೆಂಬ ನೂತನ ರಾಜ್ಯವನ್ನು ಸ್ಥಾಪಿಸಿದನು.  ದೆಹಲಿ ಸುಲ್ತಾನ ಮಹ್ಮದ್ ಬಿನ್ ತುಘಲಕ್‌ನು ಸ್ಥಾಪಿಸಲು ಪ್ರಯತ್ನಿಸಿದ ಸಾಮ್ರಾಜ್ಯಕ್ಕೆ ಅಪಾರ ಸೈನ್ಯದ ಸೇವೆಯ ಕೊಡುಗೆಯನ್ನು ಅಲ್ಲಾವುದ್ದಿನ್ ನೀಡಿದ್ದಾನೆ.  ಆದರೆ ತುಘಲಕ್ ಸುಲ್ತಾನನ ಸಾಮ್ರಾಜ್ಯ ದಾಹಕ್ಕೆ ದಕ್ಷಿಣ ಭಾರತದಲ್ಲಿ ಹಲವಾರು ದಂಗೆಗಳು ಕಾಣಿಸಿಕೊಂಡವು.  

ದೇವಗಿರಿಯಲ್ಲಿ ಅನೇಕ ಅಮೀರರನ್ನು ಒಂದೆಡೆ ಸೇರಿಸಿ ದೆಹಲಿ ತುಘಲಕ್ ಸುಲ್ತಾನನ ವಿರುದ್ಧ ಪಿತೂರಿ ಮಾಡಿ ದಂಗೆ ಏಳುವುದಕ್ಕೆ ಪ್ರೇರೇಪಿಸಿ ಅದರ ನೇತೃತ್ವವನ್ನು ಅಲ್ಲಾವುದ್ದಿನ್ ವಹಿಸಿಕೊಂಡನು.  ತುಘಲಕ್ ಸೈನ್ಯವನ್ನು ವೀರಾವೇಶದಿಂದ ಹೋರಾಡಿ ದೆಹಲಿ ಪ್ರಭುತ್ವವನ್ನು ದೇವಗಿರಿ ಸಮೇತವಾಗಿ ದಕ್ಷಿಣ ಭಾರತದಿಂದ ಹೊರಹಾಕಿದನು.  ಈ ರಾಜಕೀಯ ಮುತ್ಸದ್ಧಿತನ ಗುರುತಿಸಿದ ಅಲ್ಲಿಯ ಅಮೀರರು ಜಫಾರ್ ಖಾನ್ ಹೆಸರಿನ ಈ ಸರದಾರನನ್ನು ತಮ್ಮ ನಾಯಕನೆಂದು ಒಪ್ಪಿಕೊಂಡರು.  ಬಹಮನಿ ರಾಜ್ಯವು 3ನೇ ಆಗಸ್ಟ್ 1347ರಂದು ಸ್ಥಾಪನೆಗೊಂಡಿತು.  ಅಲ್ಲಾವುದ್ದಿನ್ ಹಸನ್ ಬಹಮನ್ ಶಹಾ ಎಂಬ ನೂತನ ಹೆಸರಿನೊಂದಿಗೆ ರಾಜ್ಯದ ಸುಲ್ತಾನನಾಗಿ ತನ್ನ 57ನೇ ವರ್ಷದಲ್ಲಿ ಅಧಿಕಾರ ಪ್ರಾರಂಭಿಸುತ್ತಾನೆ.  

ಸೂಫಿ ಸಂತರ ಆರ್ಶಿವಾದ:
ವಿದ್ಯಾರಣ್ಯರು ವಿಜಯನಗರ ರಾಜ್ಯ ಸ್ಥಾಪನೆಯ ಸಂದರ್ಭದಲ್ಲಿ ಹಕ್ಕ ಮತ್ತು ಬುಕ್ಕ ಅರಸರಿಗೆ ಪ್ರೇರಣೆ ನೀಡುವಂತೆಯೇ, ಬಹಮನಿ ರಾಜ್ಯ ಸ್ಥಾಪನೆಯಲ್ಲಿಯೂ ಸೂಫಿ ಸಂತ ಷೇಕ್ ಶಿರಾಜುದ್ದೀನ್‌ರ ಆರ್ಶಿವಾದ ದೊರೆಯಿತು ಎಂಬ ಮಾಹಿತಿ ಇದೆ.  ಅಲ್ಲಾವುದ್ದೀನ್‌ನಿಗೆ ತುಘಲಕ್ ಸಾಮ್ರಾಜ್ಯದ ವಿರುದ್ಧ ಹೋರಾಟ ಮಾಡುವುದಕ್ಕೆ ಪ್ರೇರೇಪಿಸಿ ನೂತನ ರಾಜ್ಯ ಸ್ಥಾಪನೆಗೆ ಪ್ರೇರಣೆ ಸೂಫಿ ಸಂತರು ನೀಡಿದರು.  ಷೇಕ್ ಜುನೈದಿ ಸಂತನ ದರ್ಗಾವು ಗುಲಬರ್ಗಾ ಕೋಟೆಯ ಪಶ್ಚಿಮಕ್ಕೆ ಇದೆ.  ಅಲ್ಲದೇ, ಅಲ್ಲಾವುದ್ದಿನ್‌ನ ಗೋರಿಯು ಕೂಡ ಈ ಸಂತನ ದರ್ಗಾದ ಸಮೀಪವೇ ಇರುವುದು ಸೂಫಿ ಸಂತನ ಬಗ್ಗೆ ಗೌರವದ ಸೂಚಕವಾಗಿದೆ.  ಒಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಪ್ರಥಮ ಮುಸ್ಲಿಮ್ ರಾಜ್ಯವೆನಿಸಿದ ಬಹಮನಿ ರಾಜ್ಯದ ಸಂಸ್ಥಾಪಕನ ಆರಂಭ ರಾಜಕೀಯ ಮುತ್ಸದ್ಧಿತನ ಹಾಗೂ ಧಾರ್ಮಿಕ ಸಹಿಷ್ಣುತೆಯನ್ನು ಒಳಗೊಂಡಿದ್ದವು ಎಂಬುದು ಗಮನಾರ್ಹ ಅಂಶ. 

ಚಿತ್ರ: ಬಹಮನಿ ಸಾಮ್ರಾಜ್ಯದ ಸ್ಥಾಪಕ ಅಲ್ಲಾವುದ್ದೀನ್‌ ಬಹಮನ್‌ನ ಸಮಾಧಿ

ಗುಲ್ಬರ್ಗ ಕೋಟೆಯ ಹಳೆಯ ಚಿತ್ರ (1880): ರಾಜಾ ದೀನ್‌ ದಯಾಳ್‌

ಕೋಟೆಯ ಪ್ರಮುಖ ದ್ವಾರ: ಒಂದು ಹಳೆಯ ಚಿತ್ರ

 

 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...