ಗುಣಮಟ್ಟದ ಸಾಹಿತ್ಯ ಪತ್ರಿಕೆಗಳಿಂದ ಸೃಜನಶೀಲ ಪರಿಣಾಮ: ಎಚ್.ಎಸ್. ಶಿವಪ್ರಕಾಶ್

Date: 11-01-2021

Location: ಬೆಂಗಳೂರು


ಸೃಜನಶೀಲ ಸಾಹಿತ್ಯ ಪತ್ರಿಕೆಗಳು ಗಾತ್ರ,ಹಾಗೂ ಪ್ರಸಾರದಲ್ಲಿ ಸಣ್ಣದಾಗಿದ್ದರೂ ಕೂಡ ತಮ್ಮ ಗುಣಮಟ್ಟದಿಂದ ಅವು ಉಂಟು ಮಾಡುವ ಪ್ರಭಾವ ಮತ್ತು ಪರಿಣಾಮಗಳು ಮಹತ್ವದ್ದಾಗಿವೆ ಎಂದು ಹಿರಿಯ ಕವಿ ಡಾ.ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು.

ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ಸಂಗಾತ ತ್ರೈಮಾಸಿಕ ಪತ್ರಿಕೆಯ ಮೂರನೇ ವರ್ಷಾಚರಣೆ ಹಾಗೂ ಕತಾ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಹೂಡಿಕೆಯಿಲ್ಲದೆ ಯಾವ ಉದ್ಯಮವೂ ಇಲ್ಲ ಎನ್ನುವಂತಾಗಿದೆ. ಈ ಸಂದರ್ಭದಲ್ಲಿ ಸಾಹಿತ್ಯ, ಕಲೆ, ಧರ್ಮ, ಆಧ್ಯಾತ್ಮಗಳು ಸಹ ವಾಣಿಜ್ಯೀಕರಣವಾಗಿದೆ. ಪ್ರಭುತ್ವವೂ ಸೇರಿದಂತೆ ಎಲ್ಲವೂ ಕೂಡ ಬಹುರಾಷ್ಟ್ರೀಯ ಕಂಪನಿಗಳ ಅಣತಿಯಂತೆ ಸಾಗಬೇಕಾಗಿದೆ. ಆದರೆ, ಸಂಗಾತದಂತಹ ಪತ್ರಿಕೆ ಯಾವುದೇ ಸದ್ದು, ಗದ್ದಲವಿಲ್ಲದೇ ಕೇವಲ ಓದುಗರ, ಚಂದಾದಾರರ ಪ್ರೀತಿಯಿಂದ ನಿರುದ್ಯಮೀಕರಣದ ರೀತಿಯಲ್ಲಿ ಮೂರು ವರ್ಷ ಪೂರೈಸಿರುವುದು ಸಂತಸ ಸಂಗತಿ. ಕನ್ನಡದಲ್ಲಿ ಸಾಕ್ಷಿ, ಸಂಕ್ರಮಣ, ಶೂದ್ರ, ಋಜುವಾತು ಮೊದಲಾದ ಪತ್ರಿಕೆಗಳು ಈ ಮಾರ್ಗದಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿವೆ ಎಂದರು.

ಸಂಗಾತ ಪತ್ರಿಕೆಯ ಜೊತೆಗೆ ಪ್ರಕಾಶನ, ಸಾಹಿತ್ಯ ಕಾರ್ಯಕ್ರಮಗಳನ್ನು ಟಿ.ಎಸ್. ಗೊರವರ ಅವರು ಬಹಳ ಪ್ರೀತಿಯಿಂದ ಯಾವುದೇ ರಾಜಿ ಇಲ್ಲದೇ ನಿರ್ವಹಿಸುತ್ತಿದ್ದಾರೆ. ಇಂದು ಅನೇಕ ಪ್ರಶಸ್ತಿಗಳ ಹಿಂದೆ ದೊಡ್ಡ ಮಟ್ಟದ ರಾಜಕಾರಣ, ಜಾತಿ, ಉಪಜಾತಿಗಳ ಗುದ್ದಾಟ ನಡೆಯುತ್ತಿರುತ್ತದೆ. ಸಂಗಾತ ಪತ್ರಿಕೆ ಅಂತಹ ಚಟುವಟಿಕೆಗಳಿಗೆ ಆಸ್ಪದವಿಲ್ಲದೇ ಸೃಜನಾತ್ಮಕವಾಗಿ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಮಾದರಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಸಂಗಾತ, ಸಂಗಾತಿ, ಸಾಂಗತ್ಯ ಎಂಬ ಪದವೇ ಪರಸ್ಪರ ಬೆಸೆಯುವ ಸಂವೇದನೆಯ ಪದಗಳಾಗಿವೆ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಮುದಾಯಗಳೊಂದಿಗೆ ಸಂವಹನ ಮಾಡಬೇಕು ಎಂದರು.

ಕವಿಗಳಾದ ಆರಿಫ್ ರಾಜಾ ಅವರು ಬಹುಮಾನಿತ ಕಥೆಗಳ ಕುರಿತು ಮಾತನಾಡಿ, ಕನ್ನಡದಲ್ಲಿ ಕಥನ ಸಾಹಿತ್ಯದ ಟ್ರೆಂಡ್, ಕಾರ್ಪೊರೇಟ್ ವಲಯದಿಂದ ನಗರ ಕೇಂದ್ರಿತ ಸಂವೇದನೆಗೆ ಇದೀಗ ತೆರೆದುಕೊಳ್ಳುತ್ತಿದೆ. ಗ್ರಾಮೀಣ ಬದುಕಿನ ಚಿತ್ರಣಗಳನ್ನು ಕಟ್ಟಿಕೊಡುತ್ತಿರುವ ಭರವಸೆಯ ಹೊಸ ಕಥೆಗಾರರು ಕನ್ನಡದಲ್ಲಿ ಬರೆಯುತ್ತಿದ್ದಾರೆ ಎಂದರು.

ಪ್ರಶಸ್ತಿ ಪುರಸ್ಕಾರ: ‘ಬಿಲದಿಂದ ಮಾಯವಾದವರು’ ಈ ಕತೆಗೆ ಬಹುಮಾನ ಪಡೆದಿರುವ ಗೌತಮ ಜ್ಯೋತ್ಸ್ನಾ ಹಾಗೂ ‘ಸೀರೆ’ ಕತೆಗೆ ಒಪ್ಪಿತ ಪುರಸ್ಕಾರ ಪಡೆದಿರುವ ಸಂಪತ್ ಸಿರಿಮನೆ ಅವರಿಗೆ ಕತಾ ಬಹುಮಾನ ಹಾಗೂ ‘ಚಿತ್ರ ಚಿಗುರುವ ಹೊತ್ತು’ ಕವನ ಸಂಕಲನದ ಕರ್ತೃ ಚಾಂದಪಾಷಾ ಎನ್.ಎಸ್. ಅವರಿಗೆ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಗಾತ ಪತ್ರಿಕೆ ಸಂಪಾದಕ ಟಿ.ಎಸ್. ಗೊರವರ, ಮಕ್ಕಳ ಸಾಹಿತಿ ಶಿವಲಿಂಗಪ್ಪ ಹಂದಿಹಾಳ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

ಬಾಲ್ಯದ ನೆನಪುಗಳನ್ನು ಕೆದಕುವ ಯಶಸ್...

27-01-2021 ಬೆಂಗಳೂರು

ಬಾಲ್ಯದ ನೆನಪುಗಳನ್ನು ಉದ್ದೀಪನಗೊಳಿಸುವ ಸಮರ್ಥ ಕವಿತೆಗಳು ‘ಎಂಟಾಣೆ ಪೆಪ್ಪರಮೆಂಟು’ ಕವನ ಸಂಕಲನದ ಹೆಚ್ಚುಗ...

ಕನ್ನಡ ಮನಸ್ಸುಗಳನ್ನು ನೋಯಿಸಿದ್ದರೆ...

27-01-2021 ಬೆಂಗಳೂರು

‘ಕನ್ನಡದ ವಿರುದ್ಧ ನಾನು ಮಾತನಾಡಿಲ್ಲ. ಕನ್ನಡವನ್ನು ಭಯ-ಭಕ್ತಿಯಿಂದ ತಲೆಯ ಮೇಲಿಟ್ಟುಕೊಂಡು ಮೆರೆಸುತ್ತೇನೆ. ನನ್ನ...

ಪುಂಡರು-ಸಂಸ್ಕೃತಿ ಗುತ್ತಿಗೆದಾರರ ಮ...

27-01-2021 ಉಡುಪಿ

ಭಾರತದಲ್ಲಿ ಒಂದೆಡೆ ಪುಂಡ ಪೋಕರಿಗಳು ಮತ್ತೊಂದೆಡೆ ಇಡೀ ಭಾರತೀಯ ಸಂಸ್ಕೃತಿಯ ಗುತ್ತಿಗೆದಾರರು ಎಂಬಂತೆ ವರ್ತಿಸುತ್ತಿರುವವರ...

Comments