ಹಾ.ಮಾ.ನಾಯಕರ ಪತ್ರಗಳು

Date: 20-01-2022

Location: ಬೆಂಗಳೂರು


‘ನನ್ನ ಸಾಹಿತ್ಯ ವಿಮರ್ಶೆಯ ಬಗ್ಗೆ ಹಾಮಾನಾ ಅವರಿಗೆ ಅಂಥ ಒಳ್ಳೆಯ ಭಾವನೆ ಇದ್ದಂತಿರಲಿಲ್ಲ. ನನ್ನ ‘ಹೊಸ ತಿರುವು' ಸಂಕಲನ ಪ್ರಕಟವಾದಾಗ, ಅದು  ಮೈಸೂರು ವಿಶ್ವವಿದ್ಯಾನಿಲಯದ ಸಾಹಿತ್ಯ ವಲಯಗಳಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು’ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರು ತಮ್ಮ ಪತ್ರತಂತುಮಾಲಾ ಅಂಕಣದಲ್ಲಿ ಹಾ.ಮಾ. ನಾಯಕರು ಮತ್ತು ಅವರ ನಡುವಿನ ಪತ್ರವ್ಯವಹಾರಗಳ ಕುರಿತು ವಿಶ್ಲೇಷಿಸಿದ್ದಾರೆ. 

ಡಾ.ಹಾರೋಗದ್ದೆ ಮಾನಪ್ಪ ನಾಯಕರು ಮತ್ತು ನನ್ನ ನಡುವಣ ಸ್ನೆಹ ವಿಚಿತ್ರವೂ ವಿಶಿಷ್ಟವೂ ಆದುದಾಗಿತ್ತು. ವಿಚಿತ್ರ ಏಕೆಂದರೆ, ಮೊದಲ ಭೇಟಿಪೂರ್ವದಲ್ಲಿ ಅವರು ನನ್ನ ಬಗ್ಗೆ ವಿರಸ ಭಾವನೆ ಹೊಂದಿದ್ದರು. ನನ್ನ ಸಾಹಿತ್ಯಕ ನಿಲುವು ಒಲವುಗಳ ಬಗ್ಗೆ ತೀವ್ರ ಅಸಮಾಧಾನವನ್ನು ಖಾಸಗಿಯಾಗಿಯೂ ವಾಚಕರವಾಣಿ ಅಂಕಣದ ಮೂಲಕ ಬಹಿರಂಗವಾಗಿಯೂ ವ್ಯಕ್ತಪಡಿಸಿದ್ದರು. ಮುಖತಃ ಭೇಟಿಯಾಗಿ ಮಾತನಾಡಿದ ನಂತರ ಅವರು ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡರು, ಪ್ರೀತಿ ವಿಶ್ವಾಸಗಳಿಂದ ನಡೆಸಿಕೊಂಡರು. ವಿಶಿಷ್ಟ ಏಕೆಂದರೆ, ನಮ್ಮದು ಹೆಚ್ಚಾಗಿ ಸಾಹಿತ್ಯಕ ಗೆಳೆತನವಾಗಿದ್ದರೂ ಅವರ ಕೆಲವೊಮ್ಮೆ ನನ್ನ ಖಾಸಗಿ ಜೀವನದ ಬಗ್ಗೆಯೂ ಕಾಳಜಿ ತೋರಿದ್ದರು. ಇದರಿಂದಾಗಿ ಅವರು ಬೆಂಗಳೂರಿಗೆ ಬಂದಾಗಲೆಲ್ಲ ಫೊನ್ ಮಾಡಿ ತಾವು ವಾಸ್ತವ್ಯಹೂಡಿದ್ದ ಹೋಟೆಲಿಗೆ ಕರೆಸಿಕೊಂಡು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಪರಸ್ಪರ ಯೋಗಕ್ಷೇಮ ವಿಚಾರಿಸುವುುದರಿಂದ ಶುರುವಾಗಿ, ವೃತ್ತಿ, ಸಾಹಿತ್ಯ, ಪ್ರಚಲಿತ ವಿಷಯ ಹಲವಾರು ಸಂಗತಿಗಳು ನಮ್ಮ ಮಾತಿನ ಸರಹದ್ದಿನಲ್ಲಿ  ಸುಳಿದಾಡುತ್ತಿದ್ದವು. ಮೈಸೂರಿಗೆ ಹೋದಾಗ ನಾನು ಅವರನ್ನು, ಚದುರಂಗ ಮತ್ತು ಜಿ.ಎಚ್.ನಾಯಕ, ಡಿ.ಎ.ಶಂಕರ ಅವರನ್ನು ಭೇಟಿಯಾಗದೇ ವಾಪಸಾಗುತ್ತಿರಲಿಲ್ಲ.       

ನನ್ನ ಸಾಹಿತ್ಯ ವಿಮರ್ಶೆಯ ಬಗ್ಗೆ ಹಾಮಾನಾ ಅವರಿಗೆ ಅಂಥ ಒಳ್ಳೆಯ ಭಾವನೆ ಇದ್ದಂತಿರಲಿಲ್ಲ. ನನ್ನ ‘ಹೊಸ ತಿರುವು' ಸಂಕಲನ ಪ್ರಕಟವಾದಾಗ, ಅದು  ಮೈಸೂರು ವಿಶ್ವವಿದ್ಯಾನಿಲಯದ ಸಾಹಿತ್ಯ ವಲಯಗಳಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ನವ್ಯವಿರೋಧಿಗಳಿಗೆ ಸಹಜವಾಗಿ ನನ್ನ ವಿಮರ್ಶೆ ಮೆಚ್ಚುಗೆಯಾಗಿರಲಿಲ್ಲ. ಅವರಲ್ಲಿ ಕೆಲವರು ನನಗೆ ‘ಅನಂತ ಮೂರ್ತಿಯ ಅಡ್ಡೆಯ ವಟು' ಎಂದು ಹಣೆಪಟ್ಟಿ ಹಚ್ಚಿದ್ದರೆಂಬುದೂ ನನ್ನ ಕಿವಿ ಮುಟ್ಟಿತ್ತು. 1973ರಲ್ಲಿ ನವದೆಹಲಿಯ ಸಾಹಿತ್ಯ ಅಕಾಡಮಿ ಪ್ರೊ.ಕೆ.ಆರ್.ಶ್ರೀನಿವಾಸ ಅಯ್ಯಂಗಾರ್ ಅವರ ಸಂಪಾದಕತ್ವದಲ್ಲಿ ಪ್ರಕಟಿಸಿದ "ಇಂಡಿಯನ್ ಲಿಟರೇಚರ್ ಸಿನ್ಸ್ ಇಂಡಿಪೆಂಡೆನ್ಸ್' ಎಂಬ ಗ್ರಂಥದಲ್ಲಿ ಆ ವೇಳೆಗಾಗಲೇ ವಸ್ತುನಿಷ್ಠ ವಿಮರ್ಶೆಗೆ ಹೆಸರಾಗಿದ್ದ ಪ್ರೊ.ಜಿ.ಎಚ್.ನಾಯಕರ "ಎ ಸರ್ವೇ ಆಫ್ ಲಿಟರರಿ ಟ್ರೆಂಡ್ಸ್ ಇನ್ ಕನ್ನಡ ಸಿನ್ಸ್ ಇಂಡಿಪೆಂಡೆನ್ಸ್"(ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯ ಮಾರ್ಗಗಳ ಸಂಕ್ಷಿಪ್ತ ಸಮೀಕ್ಷೆ) ಲೇಖನ ಪ್ರಕಟವಾಗಿತ್ತು. ಈ ಲೇಖನದ ಬಗ್ಗೆ 1973ರರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಹಾಮಾನಾ ಕಟುವಾಗಿ ಟೀಕಿಸಿ ಮಾತನಾಡಿ ಜಿ.ಎಚ್.ನಾಯಕರ ಮಾನದಂಡಗಳನ್ನು ಖಂಡಿಸಿದ್ದರು. "ಇಪ್ಪತ್ತು ಪುಟಗಳ ಲೇಖನದಲ್ಲಿ ನವ್ಯರಿಗೆ 13 ಪುಟ ಮೀಸಲಿಟ್ಟು, ಬೇಂದ್ರೆಯವರಿಗೆ 9 ಸಾಲು, ಕೆ.ವಿ.ಪುಟ್ಟಪ್ಪನವರಿಗೆ ಒಂದು ಪುಟಕ್ಕಿಂತ ಕಡಿಮೆ ಸ್ಥಳಕೊಟ್ಟಿರುವ ಲೇಖಕರು, ಮಾಸ್ತಿ, ಡಿ.ವಿ.ಜಿ., ಪುತಿನ, ಭೈರಪ್ಪ ಅವರ ಹೆಸರನ್ನು ಹೇಳಿಲ್ಲ" ಎನ್ನುವುದು ಹಾಮನಾ ಅವರ ಮುಖ್ಯ ಆಕ್ಷೇಪಣೆಯಾಗಿತ್ತು. ಇಂಥ ವಿಮರ್ಶೆಗಳ ಬಗ್ಗೆ ಎಚ್ಚರ ಅಗತ್ಯ ಎಂದು ಜನರನ್ನು ಎಚ್ಚರಿಸಿದ್ದರು. ಆ ಸಮಾರಂಭದಲ್ಲಿ ಮಾತನಾಡಿದ ಪ್ರೊ.ದೇಜಗೌ ಅವರು ಹಾಮಾನಾ ಅವರ ಮತುಗಳನ್ನು ಪುಷ್ಟೀಕರಿಸಿದ್ದರು. ಹಾಮಾನಾ ಮತ್ತು ದೇಜಗೌ ಅವರ ಭಾಷಣಗಳು ಪತ್ರಿಕೆಗಳಲ್ಲಿ ವರದಿಯಾಗಿ ಪರ-ವಿರೋಧ ಪ್ರತಿಕ್ರಿಯೆಗಳು ಬರತೊಡಗಿದವು. ನಾನು, ಜಿ.ಎಸ್.ಸದಾಶಿವ ಮತ್ತು ವೈಕುಂಠರಾಜು ಜಿ.ಎಚ್.ನಾಯಕರ ಲೇಖನವನ್ನು ಸಮರ್ಥಿಸಿ ಪ್ರ.ವಾ.ವಾಚಕರವಾಣಿ ಅಂಕಣದಲ್ಲಿ ಬರೆದೆವು. ಜಿ.ಎಚ್.ನಾಯಕರ ಈ ಲೇಖನವನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದ ಮಾಡಕೋಡದೆಂದು ಸಾಹಿತ್ಯ ಅಕಾಡೆಮಿ ಠರಾವು ಮಾಡಿತು. ಆ ಸಭೆಯಲ್ಲಿದ್ದ ಅನಂತ ಮೂರ್ತಿ ಆ ಠರಾವನ್ನು ವಿರೋಧಿಸಿದ್ದರು. ಹೊಸ ಮಾರ್ಗ ಮತ್ತು ಹೊಸಪ್ರಯೋಗಗಳಿಗೆ, ಹೊಸಬರ ಗಮನಾರ್ಹ ರಚನೆಗಗಳ ಬಗೆಗೆ ಜಿ.ಎಚ್.ನಾಯಕರು ಹೆಚ್ಚು ಒತ್ತು ಕೊಟ್ಟಿರುವುದು ಹಾಗೂ ಕುವೆಂಪು ಮೊದಲಾದವರನ್ನು ಹೊಸಮಾರ್ಗಕ್ಕೆ           ಹಿನ್ನೆಲೆಯಾಗಿಒಗಟ್ಟುಕೊಂಡಿರುವುದು ನ್ಯಾಯವಾದುದಾಗಿದೆ" ಎಂದು ಬರೆದ ನಾನು, ಹಾಮಾನಾ ಅವರ ಸಾಲುಗಳ ಲೆಕ್ಕಾಚಾರವನ್ನು ಅವರ ಸಂಪದಾಕತ್ವದಲ್ಲಿ ಕನ್ನಡ ವಿಶ್ವಕೋಶದ ಮೂರನೆಯ ಸಂಪುಟದಲ್ಲಿನ ಕನ್ನಡ ಕಾವ್ಯ ವಿಮರ್ಶೆ ವೈಖರಿಯ ನಿದರ್ಶನ ನೀಡಿ ಟೀಕಿಸದ್ದೆ."ಮುಂದಿನ ಪೀಳಿಗೆಗೆ ದಾಖಲೆಯಾಗುವ ವಿಶ್ವಕೋಶದಲ್ಲಿ ನವ್ಯ ಕಾವ್ಯದ ಬಗ್ಗೆ, ನವ್ಯ ಕಾವ್ಯದ ಪ್ರವರ್ತಕ ಕವಿ ಅಡಿಗರ ಬಗ್ಗೆ ಪರಿಚಯಮಾಡಿಕೊಟ್ಟಿರುವ ವೈಖರಿ, ಎಣಿಸಿದಂತೆ ಮೂರು ಕಡೆ ಹೆಸರು ಹೇಳುವುದು ಹೊರತು ಅಡಿಗರ ಕಾವ್ಯದ ಬಗ್ಗೆ ಒಂದು ಸಾಲೂ ಸಹ ಇಲ್ಲ. ಜಿ.ಎಚ್.ನಾಯಕರ ಲೇಖನದ ಬಗ್ಗೆ  ಅಷ್ಟೊಂದು ಹುಯಿಲೆಬ್ಬಿಸಿದ ಹಾ ಮಾ ಣಾಯಕರು ಏನನ್ನುತ್ತಾರೆ" ಎಂದು ಪ್ರಶ್ನಿಸಿದ್ದೆ. ಹಾಮಾನಾ ಅವರು ಇದಕ್ಕೆ ಪ್ರತಿಕ್ರಿಯಿಸಿ ನನ್ನನ್ನು ವಾಚಕರವಾಣಿ ಲೇಖಕ ಎಂದು ಹಿಯಾಳಿಸಿದ್ದರು.        

ನಾನು ಸಾಪ್ತಾಹಿಕ ಪುರವಣಿಯನ್ನು ವಹಿಸಿಕೊಂಡಾಗ, ಅದಕ್ಕೆ ಹೊಸ ಸತ್ವ-ಸ್ವರೂಪಗಳನ್ನು ಕೊಡುವ ಉತ್ಸಾಹದಲ್ಲಿ ಕನ್ನಡದ ಬಹುತೇಕ ಲೇಖಕರನ್ನು ಭೇಟಿಯಾದಂತೆ ಹಾಮಾನಾ ಅವರನ್ನೂ ಭೇಟಿಯಾಗಿದ್ದೆ. ಹಾಮಾನಾ ಅವರಿಂದ ‘ಸಾಪು'ಗೆ ಅಂಕಣವೊಂದನ್ನು ಬರೆಸುವುದು ನನ್ನ ಉದ್ದೇಶವಾಗಿತ್ತು. ಈ ಉದ್ದೇಶದಿಂದ ‘ಸಿಂಹವನ್ನು ಅದರ ಗುಹೆಯೊಳಗೇ ಎದುರಿಸಿಸು'   ಎನ್ನುವ ನಾಣ್ನುಡಿಯಂತೆ ನಾನು ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲೇ   ಭೇಟಿಯಾಗಿದೆ. ಉಭಯಕುಶಲೋಪರಿಯ ನಂತರ ನಾನು ‘ನಾಯಕರೇ, ನಮ್ಮ ‘ಸಾಪು'ಗೆ ನೀವು ಪ್ರತಿವಾರ ಒಂದು ಅಂಕಣ ಬರೆಯಬೇಕು' ಎಂಬುದು ನನ್ನ ಸಂಪಾದಕರ ಮತ್ತು ನನ್ನ ಅಪೇಕ್ಷೆಯಾಗಿದೆ ಎಂದೆ. ನನ್ನ ಮಾತಿನಿಂದ ಅವರಿಗೆ ತುಸು ಆಶ್ಚರ್ಯವಾದಂತಿತ್ತು.

"ಏನು ಸ್ವಾಮಿ ನಿಮ್ಮಂದ ಈ ಮಾತೇ?"
"ಏಕೆ,ಇದರಲ್ಲೇನು ಆಶ್ಚರ್ಯ?"
"ಅಲ್ಲ ರಾಯರೇ, ನನಗೆ ನಿಮ್ಮ ಬಗ್ಗೆಯಾಗಲೀ ಪ್ರಜಾವಾಣಿ ಬಗ್ಗೆಯಾಗಲೀ ಯಾವುದೇ ಪೂರ್ವಗ್ರಹ ಇಲ್ಲ. ಬರೆಯಲಿಕ್ಕೆ ನನ್ನ ಒಪ್ಪಿಗೆ ಇದೆ. ಆದಾಗ್ಯೂ..."

ಪತ್ರಕರ್ತರಾದವರು ಸತ್ಯಪಕ್ಷಪಾತಿಗಳಾಗಿರಬೇಕು, ಬೇರೇನೂ ಆಗಿರಬಾರದು. ಅವರು ಪೂರ್ವಗ್ರಹ(ಪ್ರಿಜುಡಿಸಸ್), ಪೂರ್ವಾಗ್ರಹ(ಆಂಗರ್) ಮತ್ತು ಪೂರ್ವನಿಶ್ಚಿತಅಭಿಪ್ರಾಯ(ಪ್ರಿಕನ್ಸೀವ್ಡ್/ಪ್ರಿಡಿಸ್ಪೋಸ್ಡ್)ಗಳಿಂದ ಮುಕ್ತರಾಗಿರಬೇಕು ಎಂಬ ಪತ್ರಿಕಾ ಪರಂಪರೆಯಲ್ಲಿ ನಂಬಿಕೆ ಇರುವವನು ನಾನು. ಇದಾವುದೂ ಇಲ್ಲದೆ, ನಮ್ಮ ಓದುಗರಿಗೆ ಹಾಮಾನಾ ಅವರ ಜ್ಞಾನ ಮತ್ತು ಲೋಕಾನುಭವಗಳ ಲಾಭವಾಗಲಿ ಎಂದು ಅವರ ಬಳಿ ಅಂಕಣ ಬರೆಯವಂತೆ ಕೇಳಲು ಹೋಗಿದ್ದೆ. ಈ ಮಾತುಗಳನ್ನೇ ಅವರಿಗೆ ತಿಳಿಸಿದೆ. ಅವರು ಸ್ವಲ್ಪ ಹೊತ್ತು ಯೋಚಿಸಿ, ‘ಇದು ನಿಜವೆ?' ಎಂದು ಕೇಳಿದರು.

"ಹೌದು ನಾಯಕರೆ. ಪತ್ರಕರ್ತರಿಗೆ ಪೂರ್ವಗ್ರಹ/ಪೂರ್ವಾಗ್ರಹಗಳಿರಬಾರದು. ನನಗೆ ನಿಮ್ಮ ಬಗ್ಗೆ ಪುರ್ವಗ್ರಹಗಳಿಲ್ಲ. ನಾನು ಹಿಂದಿನ ಚರ್ಚೆಗಳನ್ನು ಒಂದು ಅಕೆಡಮಿಕ್ ಚರ್ಚೆಯಾಗಿಯೇ ಭಾವಿಸದ್ದೇನೆ. ಅದರಲ್ಲಿ ಸಿಟ್ಟುಕೋಪಗಳು ಇಲ್ಲ. ಈಗ ಅದನ್ನೆಲ್ಲ ಮರೆತಿದ್ದೆನೆ. ಹಾಮಾನಾ ಅವರಿಗೆ ಆ ಕ್ಷಣ ನನ್ನ ಮಾತುಗಳನ್ನು ನಂಬಲಿಕ್ಕೆ ಆಯಿತೋ ಇಲ್ಲವೋ ತಿಳಿಯಲಿಲ್ಲ. ತಮ್ಮ ಬರಹಗಳನ್ನು ನಾನೂ ಪೂರ್ವಗ್ರಹಗಳಿಂದ ನೋಡಿ ತಿರುಚಿ. ವಿಕೃತಗೊಳಿಸಿದರೆ ಎನ್ನುವ ಸಂಶಯ ಅವರನ್ನು ಭಾದಿಸಿದಂತೆ ನನಗೆ ಭಾಸವಾಯಿತು."ಇದರಲ್ಲಿ ನನ್ನ ಸ್ವಾತಂತ್ರ್ಯ ಎಷ್ಟು"

"ಲೇಖಕರಾಗಿ ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಲೇಖನದ ವಸ್ತು-ವಿಷಯ ಆಯ್ಕೆ, ಅಭಿಪ್ರಾಯ, ನೀತಿ-ನಿಲುವು, ಭಾಷೆ, ಶೈಲಿ ಇದೆಲ್ಲದರಲ್ಲೂ ಸೃಜನಶೀಲ ಲೇಖಕರಿಗಿರುವ ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯ ನಿಮಗಿರುತ್ತದೆ. ಹಾಗೆಯೇ ಸಂಪಾದಕರಿಗೂ ಪತ್ರಿಕೆಯ ಸಂಪಾದಕೀಯ ನೀತಿ, ವೃತ್ತಿಧರ್ಮ ನಿಯಮಗಳ ಬದ್ಧತೆ ಇರುತ್ತದೆ ಎಂಬುದನ್ನು ತಾವು  ಗಮನದಲ್ಲಿಟ್ಟುಕೊಂಡರೆ ಸಾಕು"    

"ಆಯಿತು ರಾಯರೇ ನಿಮ್ಮ ವಿಶ್ವಾಸ ದೊಡ್ಡದು. ಸ್ವಲ್ಪ ಕಾಲಾವಕಾಶಕೊಡಿ' ಎಂದರು. ಅಂದಿಗೆ ಅವತ್ತಿನ ನಮ್ಮ ಭೇಟಿ ಮುಕ್ತಾಯಗೊಂಡಿತ್ತು. 

‘ಜ್ಞಾನಗಂಗಾ',ಗುಲಬರ್ಗಾ ವಿಶ್ವವಿದ್ಯಾಲಯ
 ಗುಲಬರ್ಗಾ-585106
 ಡಿಸೆಂಬರ 9,1984
 ಪ್ರಿಯ ಶ್ರೀ ರಂಗನಾಥ ರಾವ್,    

ನಿಮ್ಮ ಕಾಗದ ಬಂದಿದೆ. ಶ್ರೀ ಸಿಂಗ್ ಅವರ ಕಾಗದವೂ ಬಂದಿದೆ. ಅಂಕಣ ಬರೆಯಲು ನಾನು ಒಪ್ಪಿಕೊಂಡಿದ್ದೇನೆ. ನಿಮ್ಮ     ಅಪೇಕ್ಷೆಯಂತೆ ಈ ತಿಂಗಳ 24-25ರಂದು ನಿಮಗೆ ಸೇರುವಂತೆ ಎರಡು ಲೇಖನ ಕಳಿಸುತ್ತೇನೆ. ಆಮೇಲೆ ಪ್ರತಿವಾರ. ಒಂದು ಲೇಖನ ನಿಮ್ಮಲ್ಲಿ ಯಾವಾಗಲೂ ರಿಝರ್ವಿನಲ್ಲಿರಲಿ. ಅಲ್ಲವೆ?

ಮೈಸೂರಿನಲ್ಲಿ ನನ್ನದೇ ಆದ ಡೊಡ್ಡ ಪುಸ್ತಕ ಭಂಡಾರ, ಅನೇಕ ಸಾಹಿತ್ಯಕ ಸಾಂಸ್ಕೃತಿಕ ಸಂಸ್ಥೆಗಳು. ಜೊತೆಗೆ ಓದು ಬರಹಕ್ಕೆ ಸಮಯ ಇದ್ದವು. ಇದೆಲ್ಲದರಿಂದಲೂ ವಂಚಿತನಾಗಿ ಈ ಅಂಕಣ ನಿರ್ವಹಿಸುವುದು ಕಷ್ಟವೆಂದೇ ತೋರುತ್ತದೆ. ನೋಡೋಣ.    

ಅಂಕಣದ ಹೆಸರು ‘ಪ್ರಸ್ತುತ', ‘ಸ್ವಗತ'. ‘ಸಂಪ್ರತಿ', ‘ಸಮಕ್ಷಮ' ಅಥವಾ ‘ಸಾಂಪ್ರತ' ಇಟ್ಟುಕೊಳ್ಳಬಹದೆಂದು ತೋರುತ್ತದೆ. ಎಡಗಡೆ ಸೂಚಿಸಿದಂತೆ, ನಿಮ್ಮ ‘ಡೆಕ್ಕನ್ ಹೆರಾಲ್ಡ್'ಸಾಪ್ತಾಹಿಕದ ಅಂಕಣಗಳ ಮಾದರಿಯಲ್ಲಿ ನೀವು ಸೂಕ್ತ ಕಂಡಹಾಗೆ ಒಂದು ಮಾದರಿಯನ್ನು ಶೀರ್ಷಿಕೆಗೆ ಇಟ್ಟುಕೊಳ್ಳಬಹುದು. ಮುಖ್ಯವಾಗಿ ಪ್ರತಿವಾರ ಒಂದೇ ನಿರ್ದಿಷ್ಟವಾದ ಜಾಗದಲ್ಲಿರಬೇಕು, ಈ ಅಂಕಣ.   ಐನೂರು ಪದಗಳಿಗೆ ಮೀರಬಾರದೆಂದು ಶ್ರೀ ಸಿಂಗ್ ಹೇಳಿದ್ದಾರೆ. ಒಂದೆರಡು ವಾರ ಸ್ವಲ್ಪ ಹೆಚ್ಚುಕಡಿಮೆ ಆಗಬಹುದು. ಆ ಮೇಲೆ ಹೊಂದಾಣಿಕೆ ಸರಿಯಾಗುತ್ತದೆ. ನನ್ನ ಈಚಿನ ಚಿತ್ರಗಳು ನನ್ನ ಬಳಿಇಲ್ಲ. ಈಚೆಗೆ ನನ್ನ ಕೆಲವು ಚಿತ್ರಗಳನ್ನು ಶ್ರೀ ಪಿ.ಎಸ್.ಚಂದ್ರಶೇಖರ್(ಎಚ್ 69(5),4ನೇ ಮುಖ್ಯ ರಸ್ತೆ,ರಾಮಚಂದ್ರಪುರಂ,ಬೆಂಗಳೂರು21)ತೆಗೆದಿದ್ದಾರೆ.

ನಿಮ್ಮ ಛಾಯಾಗ್ರಾಹಕರಾದ ಶ್ರೀ ಸೋಮಶೇಖರ್ ಹಾಗೂ ಶ್ರೀ ತಿಪ್ಪೇಸ್ವಾಮಿಯವರಲ್ಲಿಯೂ ನನ್ನ ಚಿತ್ರಗಳಿವೆ. ದಯವಿಟ್ಟು ನೀವು ಅವರನ್ನು ಸಂಪರ್ಕಿಸಬೇಕೆಂದು ಕೋರುತ್ತೇನೆ. ತಿಪ್ಪೇಸ್ವಾಮಿ ಒಳ್ಳೆಯ ಚಿತ್ರ ತೆಗೆದಿದ್ದಾರೆ. ಈ ವಿಷಯದಲ್ಲಿ ಸಹಾಯಮಾಡಲಾಗದಿರುವುದಕ್ಕೆ ಕ್ಷಮಿಸಿ. ಶ್ರೀ ಚಂದ್ರಶೇಖರ್ ನಿಮಗೆ ಗೊತ್ತಿರ ಬೇಕಲ್ಲವೆ?

ಈ ಅಂಕಣ ಬರೆಯುವ ಅವಕಾಶ ಕಲ್ಪಿಸಿಕೊಟ್ಟು ನೀವು ನನಗೆ ಬಹಳ ಉಪಕಾರ ಮಾಡಿದ್ದೀರಿ. ಫೈಲುಗಳಲ್ಲಿ ನಾನು ಕಳೆದುಹೋಗಬಹುದು ಎಂಬ ಭಯ ಮೂಡಿರುವ ಈ ಹೊತ್ತಿನಲ್ಲಿ ಅಲ್ಪಸ್ವಲ್ಪ ಓದುಬರಹಗಳಿಗಾದರೂ ಈ  ಅಂಕಣ ಒತ್ತಾಯಿಸುತ್ತದೆಂದು ನಂಬಿದ್ದೇನೆ.      

ಬರಹಗಳು ಬಂದಮೇಲೆ ನಿಮ್ಮ ಖಂಡಿತವಾದ ಅಭಿಪ್ರಾಯ ತಿಳಿಸಿ. ನಾನು ತಪ್ಪು ತಿಳಿಯುವ ಪ್ರಮೇಯವೇ ಇಲ್ಲ. ಲೇಖಕ-ಸಂಪಾದಕರ ಸಂಬಂಧದಲ್ಲಿ ನಾನು ಈ ಮಾತು ಹೇಳುತ್ತಿಲ್ಲ;ಕೇವಲ ಸ್ನೇಹಿತನಾಗಿ. ಅಷ್ಟೆ. ಈ ಅಂಕಣ ಒಂದು ಸ್ವಂತ ದೃಷ್ಟಿಕೋನದ್ದು;ಸ್ವಂತ ಅನುಭವದ್ದು. ಆದ್ದರಿಂದ ಆಗಾಗ "ನಾನು" ಬರುತ್ತದೆ. ಅದರಿಂದ ನಿಮ್ಮಲ್ಲಿ ತಪ್ಪು ಭಾವನೆ ಬರಬಾರದು.

ಶ್ರೀ ಸಿಂಗರಿಗೂ ಬರೆದಿದ್ದೇನೆ.
ನೀವು ಉತ್ತರ ಬರೆಯುತ್ತೀರೆಂದು ಭಾವಿಸಿದ್ದೇನೆ.
ಆದರಗಳೋಡನೆ,
ನಿಮ್ಮ ವಿಶ್ವಾಸದ,
ಹಾಮಾನಾ

ನಾನಿ ‘ಸಂಪ್ರತಿ' ಶೀರ್ಷಿಕೆಯನ್ನು ಆಯ್ಕೆಮಾಡಿ ಅಂಕಣವನ್ನು ಶುರುಮಾಡಿದೆ. ಅಂಕಣ ವಾರದಿಂದ ವಾರಕ್ಕೆ ಓದುಗರ ಮೆಚ್ಚುಗೆಗೆ ಪಾತ್ರವಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ‘ನಭೂತೋ ನಭವಿಷ್ಯತಿ' ಎನ್ನುವಷ್ಟರಮಟ್ಟಿಗೆ ಪ್ರಸಿದ್ಧಿ ಪಡೆದು ಐದು ವರ್ಷಗಳಿಗೂ ಹೆಚ್ಚು ಕಾಲ ಪ್ರಕಟವಾಯಿತು. ಮುಂದೆ ನನ್ನ ಸಹೋದ್ಯೋಗಿ ಡಿ.ವಿ.ರಾಜಶೇಖರ ಅವರು ‘ಸಾಪು'ದಲ್ಲಿ ಆರಂಭಿಸಿದ ಪ್ರೊ.ಜಿ.ವೆಂಕಟಸುಬ್ಬಯ್ಯನವರ  ‘ಇಗೋ ಕನ್ನಡ' ದಶಕಕ್ಕೂ ಹೆಚ್ಚು ವರ್ಷಗಳ ಕಾಲ ಪ್ರಕಟಗೊಂಡು ಜನಪ್ರಿಯವಾಗಿ ಹಾಮಾನಾ ಅಂಕಣದ ಬಗ್ಗೆ ‘ನಭವಿಷ್ಯತಿ' ಎನ್ನುವ ಅಭಿಪ್ರಾಯವನ್ನು ನಾನು ತಿದ್ದಿಕೊಳ್ಳಬೇಕಾಯಿತು. ಮುಂದಿನ ವರ್ಷಗಳಲ್ಲಿ ‘ಸಂಪ್ರತಿ'ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಗಿ ಅಂಕಣ ಬರಹಕ್ಕೆ ‘ಸಾಹಿತ್ಯ'ದ ಮಾನ್ಯತೆಯ ಮುದ್ರೆ ಬಿದ್ದದ್ದು ಈಗ ಇತಿಹಾಸ.

 **       **       ***          ** 
ಮೈಸೂರು
ಏಪ್ರಿಲ್ 19,1990

ಪ್ರಿಯ ಶ್ರೀ ರಂಗನಾಥ ರಾವ್
ನಿಮ್ಮ ಕಾಗದ ಬಂದು ಸಂತೋಷವಾಯಿತು;ವ್ಯಥೆಯೂ ಆಯಿತು! ಸಂತೋಷ ನಿಮಗೆ ಬಡ್ತಿ ಸಿಕ್ಕಿದೆ ಎಂಬ ಕಾರಣಕ್ಕೆ:ವ್ಯಥೆ ಗೊತ್ತಿಲ್ಲದವರ ಜೊತೆ ವ್ಯವಹರಿಸಬೇಕಲ್ಲ ಎಂಬ ಕಾರಣಕ್ಕೆ.  

ನಿಮಗೆ ಶುಭಗಳಿರಲಿ ಎಂದು ಹಾರೈಸುತ್ತೇನೆ. ನೀವು ಈ ಐದಾರು ವರ್ಷ ನನ್ನನ್ನು ತುಂಬ ವಿಶ್ವಾಸಗೌರವಗಳಿಂದ ನೋಡಿಕೊಂಡಿರಿ. ನಾನು ವ್ಯಕ್ತಪಡಿಸಿದ ಎಲ್ಲ ಬಗೆಯ ಅಭಿಪ್ರಾಯಗಳನ್ನೂ ಸಹಿಸಿದಿರಿ:ಭಾವನೆಗಳಿಗೆ ಬೆಲೆ ಕೊಟ್ಟಿರಿ. ಇದನ್ನು ನಾನು ಮರೆಯುವುದಿಲ್ಲ.     

ವಾಸ್ತವವಾಗಿ ನಿಮ್ಮ ಪ್ರೀತಿಯ ಒತ್ತಾಯವಿಲ್ಲದಿದ್ದರೆ ನಾನು ಇಷ್ಟು ದೀರ್ಘಕಾಲ ಬರೆಯುತ್ತಿರಲಿಲ್ಲ. ಮುಂದೆ ಎಷ್ಟು ಕಾಲ ಬರೆಯುತ್ತೇನೆಂಬುದೂ ನನಗೆ ತಿಳಿಯದು. ಈ ವರ್ಷದ ಕೊನೆಯವರೆಗಾದರೂ ಬರೆಯಬೇಕೇಂದುಕೊಂಡಿದ್ದೇನೆ. ನೋಡೋಣ. ಅದು ಅನೇಕ ವಿಷಯಗಳನ್ನು ಅವಲಂಬಿಸಿದೆ. ಮತ್ತೇನು;ಚೆನ್ನಾಗಿದ್ದೀರಲ್ಲ. 

ಆದರಗಳೋಡನೆ,
ಸ್ನೇಹದ
ಹಾಮಾನಾ

***        ***        ***       ***     ***    ****

ಪ್ರಿಯ ಶ್ರೀ ರಂಗನಾಥ ರಾವ್,
‘ಪ್ರಜಾವಾಣಿ'ಯ ನನ್ನ ಅಂಕಣ ನಿಂತ ಸಂಗತಿ ನಿಮಗೆ ತಿಳಿದಿರಬೇಕೆಂದು ಭಾವಿಸುತ್ತೇನೆ. ಈ ವರ್ಷದ ಡಿಸೆಂಬರ್‍ವರೆಗೆ(ಆರು ವರ್ಷ ಕಾಲ)ಬರೆಯಬೇಕೆಂದುಕೊಂಡಿದ್ದೆ. ನಾಲ್ಕು ತಿಂಗಳ ಮೊದಲೇ ನಿಲ್ಲಿಸುವಂಥ ಪರಿಸ್ಥಿತಿ ಬಂತು! ಅದಕ್ಕಾಗಿ ನಾನು ವ್ಯಸನ ಪಡುವಂಥಾದ್ದೇನೂ ಇಲ್ಲ. ನಿಮಗೇ ತಿಳಿದಂತೆ ನಾನು ಯಾವತ್ತು ಬೇಕಾದರೂ ನಿಲ್ಲಿಸಲು ಸಿದ್ಧನಾಗಿಯೇ ಇದ್ದೆ. ವಾಸ್ತವವಾಗಿ ನೀವು ಆ ವಿಭಾಗ ಬಿಟ್ಟಮೇಲೆ ನನಗೆ ಅಂಕಣ ಮುಂದುವರಿಸುವ ಆಸಕ್ತಿಯೇ ಇರಲಿಲ್ಲ. ನಾನು ಅದನ್ನು ಒಂದು ಸ್ನೇಹದ ಕೆಲಸವೆಂದು ಮಾಡಿದ್ದೆ. ಜೊತೆಗೆ ನೀವು "ನಾನು ಅಲ್ಲಿಂದ ಬದಲಾದ ಒಡನೆಯೇ ನೀವೂ ಬಿಟ್ಟರೆ ತಪ್ಪು ಅರ್ಥ ಬರಬಹುದು" ಎಂದು ಹೇಳಿದ್ದೂ ನೆನಪಿನಲ್ಲಿತ್ತು!

ನಾನು ನಿಮಗೆ ಚಿರಕೃತಜ್ಞನಾಗಿರಬೇಕು. ನೀವು ಬರೆಸದಿದ್ದರೆ ನಾನು ಈ ಅಂಕಣವನ್ನು ಬರೆಯುತ್ತಲೇ ಇರಲಿಲ್ಲವೆಂದರೆ ನೀವು ನಂಬಬೇಕು. ಒಳ್ಳೆಯ ಅವಕಾಶ ಕಲ್ಪಿಸಿಕೊಟ್ಟಿರಿ. ಲಕ್ಷಾಂತರ ಜನರಿಗೆ ಪರಿಚಯ ಮಾಡಿಸಿದಿರಿ. ಈ ಅಂಕಣಕ್ಕಾಗಿಯೇ ಅಕಾಡೆಮಿ ಪ್ರಶಸ್ತಿ ಪಡಯುವ ಅದೃಷ್ಟವೂ ನನ್ನ ಪಾಲಿಗೆ ಬಂತು. ಇದನ್ನೆಲ್ಲ ನಾನು ಖಂಡಿತವಾಗಿಯೂ ಮರೆಯುವುದಿಲ್ಲ. ನಿಮ್ಮ ಸ್ನೇಹ ನನ್ನ ಪಾಲಿಗೆ ಅಮೂಲ್ಯವಾದದ್ದು. ನೀವು ಮಾಡಿಸಿದ ಕೆಲಸದಿಂದ ನಿಮಗೆ ಕೆಟ್ಟ ಹೆಸರು ತರುವಂಥದೇನೂ ಆಗಿಲ್ಲ ಎಂದುಕೊಂಡಿದ್ಗದೇನೆ. ನನಗೆ ತಿಳಿಯದೇ ಆಗಿದ್ದರೆ ಕ್ಷಮಿಸಿ.

ಇಂಗ್ಲಿಷ್ ಕಲಿಕೆಗೆ ಸಂಬಂಧಿಸಿ ನಿಮ್ಮ ಪ್ರಶ್ನಾವಳಿ ಬಂದಿದೆ(ಸುಧಾ). ಇನ್ನು ಮೂರು-ನಾಲ್ಕು ದಿನಗಳಲ್ಲಿ ಉತ್ತರ ಕಳಿಸುತ್ತೇನೆ. ಚೆನ್ನಾಗಿದ್ದೀರಲ್ಲ? ಇಷ್ಟರಲ್ಲೇ ಒಮ್ಮೆ ಭೇಟಿಯಾಗೋಣ.

ಆದರಗಳೊಡನೆ,
ಸ್ನೇಹದ
ಹಾಮಾನಾ 

ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಹಾಮಾನಾ ಅವರ `ಸಂಪ್ರತಿ' ಅಂಕಣ ಶುರುವಾದದ್ದು ಓದುಗರಿಗೆ ಎಷ್ಟು ಅನಿರೀಕ್ಷಿತವೋ ಅದು ನಿಂತದ್ದೂ ಅಷ್ಟೇ ಅನಿರೀಕ್ಷಿತವಾಗಿತ್ತು. ‘ಸಾಪು' ದಿಂದ ‘ಸುಧಾ' ‘ಮಯೂರ'ಗಳಿಗೆ ನನ್ನ ವರ್ಗವಾದ ಕೂಡಲೇ ಹಾಮಾನಾ ತಮ್ಮ ಅಂಕಣ ನಿಲ್ಲಿಸುವ ಅಪೇಕ್ಷೆ ವ್ಯಕ್ತಪಡಿಸಿದ್ದರು. ಆ ವೇಳೆಗೆ ಅವರ ಅಂಕಣಕ್ಕೆ ಐದು ವರ್ಷ ತುಂಬಿತ್ತು. ಯಾವುದೂ ಒಬ್ಬ ವ್ಯಕ್ತಿಯನ್ನೇ ಆಧರಿಸಿರಬಾರದು. ನಾನು ‘ಸಾಪು'ದಲ್ಲಿ ಇಲ್ಲ ಅಂದಾಕ್ಷಣ ಹಾಮಾಣ ತಮ್ಮ ಅಂಕಣ ನಿಲ್ಲಿಸುವುದು ಸರಿಯಲ್ಲ ಎನ್ನಿಸಿತು. ಅವರ ಅಂಕಣ ಓದುಗರಿಗೆ ಇಷ್ಟವಾಗಿದೆ, ಜನಪ್ರಿಯವಾಗಿದೆ. ನಾನು ಬೇರೆಡೆ ಹೋದೆ ಅಂದಾಕ್ಷಣ ಅದೇಕೆ ನಿಲ್ಲಬೇಕು? ಓದುಗರಿಗೇಕೆ ಅದರ ಕೊರತೆಯಾಗಬೇಕು? ಜೊತೆಗೆ ಅದು ತಪ್ಪು ಅರ್ಥಗಳಿಗೂ ಎಡೆ ಮಾಡಿಕೊಡಬಹುದು, ನನ್ನ ಜಾಗಕ್ಕೆ ಬರುವವರಿಗೂ ಅದರಿಂದ ಕಸಿವಿಸಿಯಾಗಬಹುದು ಎನ್ನಿಸಿ ಅಂಕಣ ನಿಲ್ಲಿಸ ಬೇಡಿ ಎಂದು ನಾನು ಸಲಹೆ ಮಾಡಿದ್ದೆ. ಏನಿದ್ದರೂ ಮುಂದೆ ನನ್ನ ಸ್ಥಾನಕ್ಕೆ ಬಂದ  ಶ್ರೀ ಡಿ.ವಿ.ರಾಜಶೇಖರ ಅವರಿಗೆ ಅದನ್ನು ಮುಂದುವರಿಸುವ ಅಥವಾ  ಇಲ್ಲಿಸುವ ಸ್ವಾತಂತ್ರ್ಯ ಇದ್ದೇ ಇತ್ತು. ನನಗೆ ತಿಳಿದಂತೆ ಡಿ.ವಿ.ರಾಜಶೇಖರ ಅವರಿಗೂ ಅಂಕಣ ನಿಲ್ಲಿಸುವ ಉದ್ದೇಶ ಇರಿಲಿಲ್ಲ. ಆದರೆ ಕೆಲವು ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ‘ಸಂಪ್ರತಿ' ನಿಲ್ಲ ಬೇಕಾಯಿತು. ಆ ವೇಳೇಗೆ ‘ಪ್ರವಾ' ದಿಂದ ನಿವೃತ್ತಿಹೊಂದಿದ್ದ ಶ್ರೀ ಎಂ.ಬಿ.ಸಿಂಗ್ ಅವರು ‘ಪ್ರವಾ'ದಿಂದ ಹೊರ ನಡೆದಿದ್ದ ಐ.ಕೆ.ಜಾಗೀರ್‍ದಾರ್ ಅವರನ್ನು ಜೊತೆಗೆ ಸೇರಿಸಿಕೊಂಡು ‘ಸಂಕೇತ' ಎನ್ನುವ ವಾರ ಪತ್ರಿಕೆಯ ಪ್ರಕಟಣೆ ಆರಂಭಿಸಿದರು. ಯಾವುದೇ ಹೊಸ ಪತ್ರಿಕೆಗೆ ಜನಪ್ರಿಯ ಲೇಖಕರು ಬಂಡವಾಳ ಇದ್ದಂತೆ. ‘ಸಂಕೇತ'ಕ್ಕೆ ಬರೆಯುವಂತೆ ಸಿಂಗ್-ಜಾಗೀರ್ದಾರ್ ಜೋಡಿ ಹಾಮಾನಾ ಅವರನ್ನು ಕೋರಿತು. ಹಾಮಾನಾ ‘ಸಂಕೇತ'ಕ್ಕೆ ಬರೆಯಲು ಶುರು ಮಾಡಿದರು. ತಮ್ಮ ಪತ್ರಿಕೆಯ ಅಂಕಣಕಾರರರು ಇನ್ನೊಂದು ಪತ್ರಿಕೆಗೆ ಬರೆಯುವುದು ‘ಪ್ರವಾ' ಸಂಪಾದಕರಿಗೆ ನೈತಿಕವಾಗಿ ಸರಿ ಎನ್ನಿಸಲಿಲ್ಲ. ತಮ್ಮ ಅಂಕಂಣಕಾರ ತಮ್ಮ ಪತ್ರಿಕೆಗಷ್ಟೇ ವಿಶೇಷ ಮೀಸಲಾಗಿರಬೇಕು, ಅವರು ಬರವಣಿಗೆ ತಮಗಷ್ಠೇ ಸೀಮಿತವಾಗಿರಬೇಕು ಎನ್ನುವ ಸಂಪಾದಕರ ನಿಲುವು ವ್ಯವಾಹಾರಿಕವಾಗಿ ಸರಿ ಇರಬಹುದು. ಸಾಮಾನ್ಯವಾಗಿ ಯಾವುದೇ ಪತ್ರಿಕೆಯೂ ತಮ್ಮ ಪತ್ರಿಕೆ ಜನಪ್ರಿಯ ಲೇಕಕರನ್ನ ಪ್ರತಿಸ್ಪರ್ಧಿ ಪತ್ರಿಕೆಗೆ ಬಿಟ್ಟುಕೊಡುವುದಿಲ. ಇಲ್ಲಿ ‘ಸಂಕೇತ' ‘ಪ್ರವಾ' ಪ್ರತಸ್ಪರ್ಧಿಯಾಗಿರಲಿಲ್ಲ. ಜೊತೆಗೆ ತಾವು ‘ಪ್ರವಾ'ಗೆ ಬರೆದುದನ್ನು ‘ಸಂಕೇತ'ಕ್ಕೆ ಬರೆಯುವುದಿಲ್ಲವೆಂದು ಹಾಮಾನಾ ನೀಡಿದ ಸಮಜಾಯಿಷಿ ‘ಪ್ರವಾ' ಸಂಪಾದಕರಿಗೆ ಒಪ್ಪಿಗೆಯಾಗಲಿಲ್ಲ. ನೀವು ನಮಗೆ ಬರೆಯುತ್ತಿರುವಾಗ ಇನ್ನೊಂದು ಪತ್ರಿಕೆಗೆ ಬರೆಯಲಾಗದು ಎಂದು ಸ್ಪಷ್ಟವಾಗಿ ಹಾಮಾನಾ ಅವರಿಗೆ ತಿಳಿಸಲಾಯಿತಂತೆ. ಹಾಮಾನಾ ಇದನ್ನು ಲೇಖಕನಾಗಿ ತಮ್ಮ ಸ್ವಾತಂತ್ರ್ಯದ ಹರಣ ಎಂದೇ ಭಾವಿಸಿದರು. ಯಾವ ಪತ್ರಿಕೆಯೂ ಲೇಖಕರನ್ನು ತಮ್ಮ ಏಕಸ್ವಾಮ್ಯ, ತಮ್ಮ ಜೀತದಾಳು ಎಂಬಂತೆ ಭಾವಿಸಿ ಹಕ್ಕು ಸಾಧಿಸಲಾಗದು ಇದರಿಂದ ನಮ್ಮ ಸ್ವಾತಂತ್ರ್ಯ ಕಿತ್ತುಕೊಂಡಂತೆ ಎಂದು ಹೇಳಿ ‘ಸಂಪ್ರತಿ' ನಿಲ್ಲಿಸಿದರು.  

****     *****      ******    *****
ಮೈಸೂರು
ಫೆಬ್ರವರಿ 14,91.
ಪ್ರಿಯ ಶ್ರೀ ರಂಗನಾಥ ರಾವ್,
ನಿಮ್ಮ ಕಾಗದ ತಲುಪಿದೆ. ವಂದನೆಗಳು. ನಿಮ್ಮ ಹಾರೈಕೆಗಾಗಿ ಋಣಿಯಾಗಿದ್ದೇನೆ. ನಿಮ್ಮ ಸ್ನೇಹವನ್ನ ನಾನು ಸದಾ ಸ್ಮರಿಸುತ್ತೇನೆ.
ಚೆನ್ನಗಿದ್ದೀರಲ್ಲ?
ಆದರಗಳೊಡನೆ,
ಸ್ನೇಹದ
ಹಾಮಾನಾ
*****          *****                ******                  *******
ಮೈಸೂರು
ನವೆಂಬರ್ 1,92.

ಪ್ರಿಯ ಶ್ರೀ ರಂಗನಾಥ ರಾವ್,
ನಿಮ್ಮ ಕಾಗದ ಬಂದಿದೆ. ಸ್ನೇಹ ಹಾಗೂ ವಿಶ್ವಾಸಗಳಿಗಾಗಿ ತುಂಬ ಕೃತಜ್ಞನಾಗಿದ್ದೇನೆ. ನೀವು ಏನೇ ಹೇಳಿದರೂ ನಾನು ಆ ದಿನ ನಿಮ್ಮೊಡನೆ ಹಾಗೆ ಮಾತಾಡಬಾರದಿತ್ತು. ನಾವು ಮಾಡುವ ಕೆಲಸಕ್ಕೆ ಬೆಲೆ ಇದೆಯೋ ಇಲ್ಲವೋ, ಗುರುತಿಸುವುದು ಬೇರೆಯವರ ಕೆಲಸ. ನಾವು ಹೇರಿಕೊಳ್ಳುವುದು ಖಂಡಿತಾ ಉಚಿತವಲ್ಲ. ಇರಲಿ.     

‘ಮಯೂರ'ದ ಲೇಖನ ಓದಿದೆ. ಡಾ.ನರಹಳ್ಳಿ ತುಂಬ ಉದಾರವಾಗಿ ಬರದಿದ್ದಾರೆ. ‘ಸುಧಾ'ದಲ್ಲೂ ಒಂದು ಲೇಖನ ಬರುತ್ತದೆಂದು ತಿಳಿದು ಸಂತೋಷವಾಯಿತು. ನಿಮ್ಮ ಪ್ರೀತಿಗಾಗಿ ನಾನು ಸದಾ ಕೃತಜ್ಞ. ಸಿಂಪಿಯವರನ್ನು ಕುರಿತ ಲೇಖನ ಎಂದು ಪ್ರಕಟವಾಗುತ್ತದೆ? ಅದು ನಿಮಗೆ ಇಷ್ಟವಾಯಿತೆಂದು ತಿಳಿದು ಸಂತೋಷವಾಯಿತು. ನೀವೂ ಮನೆಯವರೂ ಕ್ಷೇಮವಷ್ಟೆ?

ಆದರಗಳೊಡನೆ,
ಸ್ನೇಹದ
ಹಾಮಾನಾ
*****                        ******                 *****             *****
ಮೈಸೂರು 
ಜುಲೈ 18,94.     

ಪ್ರೀತಿಯ ಜಿ.ಎನ್.ಆರ್.ರಾವ್,     

ನಿಮ್ಮ 16ರ ಕಾಗದ ಬಂದು ವಿಚಾರ ತಿಳಿದು ತುಂಬ ಸಂತೋಷವಾಯಿತು. ಈಚಿನ ದಿನಗಳಲ್ಲಿ ಇಷ್ಟೊಂದು ಸಂತೋಷದ ಸುದ್ದಿ ಬಂದಿರಲಿಲಲ್ಲ. ಅದನು ನನಗೆ ತಿಳಿಸಿದ ನಿಮ್ಮ ಸೌಜನ್ಯಕ್ಕೆ ತುಂಬ ಕೃತಜ್ಞನಾಗಿದ್ದೇನೆ. ನಿಮಗೆ ಎಲ್ಲ ಶುಭಗಳೂ ಯಶಸ್ಸೂ ಇರಲಿ ಎಂದು ಹೃದಯ ಪೂರ್ವಕ ಹಾರೈಸುತ್ತೇನೆ. ಇದರಲ್ಲಿ ನನ್ನ ಸಹಕಾರದ ಪ್ರಶ್ನೆ ಏನಿದೆ? ನಾನು ಯಾವಾಗಲೂ ನಿಮ್ಮವನೇ ಎಂಬುದು ನಿಮಗೆ ತಿಳಿದಿದ್ದರೆ ಸಾಕು, ಚೆನ್ನಾಗಿದ್ದೀರಲ್ಲ?

ಆದರಗಳೊಡನೆ,
ಸ್ನೇಹದ
ಹಾಮಾನಾ
ಈ ಅಂಕಣದ ಹಿಂದಿನ ಬರಹಗಳು:
ಸಾಹಿತ್ಯ-ಪತ್ರಿಕೋದ್ಯಮಗಳ ಯಾತ್ರೆಯಲ್ಲಿ ಸಿಕ್ಕ ಪ್ರೊತ್ಸಾಹ ಮತ್ತು ಗೌರವ
ನಿವೃತ್ತಿಯ ನಂತರ ಬರವಣಿಗೆಯೇ ನನಗೆ ಆಸರೆಯಾಯಿತು
ಎಂದಿಗೂ ಒಳಗೊಳ್ಳದ ಅಕಾಡೆಮಿಕ್ ವಲಯಗಳು
ಪತ್ರಗಳನ್ನು ಬರೆಯುವುದು ನನ್ನ ವೃತ್ತಿಯ ಒಂದು ಕ್ರಮವನ್ನಾಗಿ ರೂಢಿಸಿಕೊಂಡೆ
ಅಂತ:ಸತ್ವಕ್ಕೆ ಪ್ರಾಣವಾಯು ತುಂಬುತ್ತಿದ್ದ ಪತ್ರಗಳು
‘ಸಾಹಿತ್ಯ ಕೃತಿಯೊಂದರ ವಿಮರ್ಶೆಯ ಮಾನದಂಡ ಅದರಲ್ಲೇ ಅಂತರ್ಗತವಾಗಿರುತ್ತದೆ’
ಹಿರಿಯರ ವಿಮರ್ಶಾತ್ಮಕ ಪತ್ರಗಳಿಂದ ಓದುಗರ ಅಪೇಕ್ಷೆ ತಿಳಿಯುವಲ್ಲಿ ಸಹಾಯವಾಗಿದೆ
‘ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ’: ಜಿ.ಎನ್. ರಂಗನಾಥರಾವ್

‘ಮರಳಿ ಯತ್ನವ ಮಾಡು' ಎನ್ನುತ್ತಾ ಉತ್ಸಾಹ ತುಂಬುವ ಆಪ್ತರ ಪತ್ರಗಳು
ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...