“ಹಕ್ಕಿನ” ಪರಿಭಾಷೆ ಮತ್ತು ಮಕ್ಕಳು

Date: 13-11-2021

Location: ಬೆಂಗಳೂರು


‘ಮಕ್ಕಳು ಅವರ ಹಕ್ಕುಗಳನ್ನು ಹಕ್ಕಿನ ಪರಿಭಾಷೆ ಮತ್ತು ಪರಿಕಲ್ಪನೆಯಲ್ಲಿಯೇ ಬದುಕಬೇಕು, ಬದುಕಿ ಬಾಳಬೇಕು. ಅದು ಅಭಿವೃದ್ಧಿ ಹೊಂದಿದ ಅಥವಾ ಅಭಿವೃದ್ಧಿ ಹೊಂದುತ್ತಿರುವ ಉತ್ತಮ ರಾಷ್ಟ್ರದ ಮತ್ತು ನಾಗರಿಕತೆಯ ಲಕ್ಷಣ’ ಎನ್ನುತ್ತಾರೆ ಮಕ್ಕಳ ಹಕ್ಕು ಮತ್ತು ಮಕ್ಕಳ ಸಂರಕ್ಷಣೆಯ ತಜ್ಞರಾದ ಕೆ. ರಾಘವೇಂದ್ರ ಭಟ್. ಅವರು ತಮ್ಮ  ಮಕ್ಕಳ ಹಕ್ಕುಗಳು ಮತ್ತು ನಾವು ಅಂಕಣದಲ್ಲಿ ಮಕ್ಕಳ ಹಕ್ಕಿನ ಪರಿಭಾಷೆ ಮತ್ತು ಮಕ್ಕಳ ಬೆಳವಣಿಗೆಯ ಕುರಿತು ವಿಶ್ಲೇಷಿಸಿದ್ದಾರೆ. 

ಅಮ್ಮನ ಹಳೆ ಸೀರೆಯಿಂದ ಮಾಡಿದ ಶಾಲೆಯ ಪಾಠೀಚೀಲ, ಹೆಗಲಿಗೆ ಅಡ್ಡವಾಗಿ ಹಾಕಿಕೊಂಡು, ಅಲ್ಯೂಮಿನಿಯಂನ ಊಟದ ಬುತ್ತಿಯನ್ನು ಕೈಯಲ್ಲಿ ಹಿಡಿದು ಬೆಳಗ್ಗೆ 8 ಗಂಟೆಗೆ ಶಾಲೆಗೆ ಹೊರಟೆ. ಬುತ್ತಿಯಲ್ಲಿರುವ ನಿನ್ನೆಯ ದಿನದ ಬಿಸಿ ಮಾಡಿದ ಅನ್ನ, ಅದಕ್ಕೆ ಎರಡು ಸೌಟು ಹುಳಿ ಮಜ್ಜಿಗೆ, “ಮಿಡಿ” ಮಾವಿನ ಕಾಯಿಯ ಉಪ್ಪಿನಕಾಯಿಯ, ಒಂದಿಷ್ಟು ರಸ ಮತ್ತು ಒಂದು ತುಂಡು ಮಿಡಿ ಮೂರು ಸೇರಿ ಬುತ್ತಿಯ ಮುಚ್ಚಳದಿಂದ ಘಂ ಎಂದು ಪರಿಮಳ ಮೂಗಿಗೆ ಬಡಿಯುತ್ತಿತ್ತು. ಅದನ್ನು ಉಣ್ಣಲು ಯಾವಾಗ ಮಧ್ಯಾಹ್ನ 12:45 ಗಂಟೆ ಆಗುತ್ತದೆಂದು ಯೋಚಿಸುತ್ತಾ ಶಾಲೆಗೆ ಹತ್ತಿರದ ರಸ್ತೆ ತನಕ 3 ಕಿ.ಮೀಟರ್ ನಡೆದೆ. ಆ ರಸ್ತೆಯಲ್ಲಿ ನಮ್ಮ ಶಾಲೆಯ ಮುಖಾಂತರ ಹೋಗುವ ಬಸ್ಸು ಬರುತ್ತದೆ. ಆ ಬಸ್ಸಿಗಾಗಿ ರಸ್ತೆ ಬದಿ ನಿಂತಿದ್ದೆ. ಅನೇಕ ಜನ ಮತ್ತು ಮಕ್ಕಳು ನಿಂತ ಜಾಗದಲ್ಲಿ ನಾನು ನಿಂತೆ. ಆಗಲೇ  ಗಂಟೆ 9:15 ಆಗಿತ್ತು. 

ಅಷ್ಟರಲ್ಲಿ ಪೊಂ ಪೊಂ ಎಂದು ಶಬ್ಧ ಮಾಡುತ್ತಾ ಬಸ್ಸು ಬಂದೇ ಬಿಟ್ಟಿತು. ಆ ಬಸ್ಸು ಬಂತು ಎಂದರೆ ನಮಗೆಲ್ಲಾ ಆನಂದವೋ ಆನಂದ. ಆ ರಸ್ತೆಯಲ್ಲಿ ಎರಡೇ  ಬಸ್ಸುಗಳು, ಕೆಲವೇ ಸಮಯದಲ್ಲಿ ಬರುವ ಕಾರಣ “ಬಸ್ಸು” ಎಂದರೆ ನಮಗೆ ಮತ್ತು ನಮ್ಮ ಊರಿನವರಿಗೆಲ್ಲಾ ಒಂದು ವಿಶೇಷವೇ ಸರಿ. ಎಲ್ಲಾ ಜನರು ಮತ್ತು ಮಕ್ಕಳು ಬಸ್ಸಿನ ಮೆಟ್ಟಿಲ ಹತ್ತಿರ ನುಗ್ಗಿದರು. ಅಷ್ಟರಲ್ಲಿ ಕಂಡಕ್ಟರ್ ಮತ್ತು ಒಂದಷ್ಟು ಜನರ ಬಾಯಲ್ಲಿ ‘ಮಕ್ಕಳು ಮೊದಲು ಹತ್ತಲಿ’ ಬಿಡಿ, ಮಕ್ಕಳನ್ನು ಮೊದಲು ಹತ್ತಿಸಿ, ಜಾಗ ಬಿಡಿ, “ಮಕ್ಕಳು ಮುಂದೆ ಬನ್ನಿ” ಒಳಗೆ ಬನ್ನಿ ಬಾಗಿಲಲ್ಲಿ ನಿಲ್ಲಬೇಡಿ, ಅಮ್ಮಾ, ಯಜಮಾನರೇ ಮಕ್ಕಳು  ಹತ್ತಲು ಬಿಡಿ! ಎನ್ನುವ ಮಾತುಗಳು. ಇದನ್ನು ಕೇಳಿದ ನನಗೆ ಅದೇನೋ ಆನಂದ, ನಾವು ದೊಡ್ಡ ಜನ, ನಮಗೆ ಅಂದರೆ ಮಕ್ಕಳಿಗೆ ಮೊದಲ ಅವಕಾಶ, ನಮಗೂ ಮನ್ನಣೆಯಿದೆ ಎಂದು. ನಮ್ಮನ್ನು ಜನ ಗುರುತಿಸುತ್ತಾರೆ ಎಂಬ ಒಳಗಿನ ಸಂತೋಷ. ಹೀಗೆ ನಮಗೆ ಬಸ್ಸಿನ ಒಳಗೆ ಮೊದಲ ಪ್ರವೇಶ. ಆ ಬಸ್ಸೋ ಜನರಿಂದ ತುಂಬಿ ತುಳುಕುತ್ತಿತ್ತು, ಅದು ಬೇರೆ ಮಾತು. ಆದರೆ ಮಕ್ಕಳು ಮೊದಲು ಅದೇ ಸುಖ ಆವಾಗ. 

ಇನ್ನೊಂದು ಘಟನೆ, ಅಮ್ಮನೊಂದಿಗೆ ಪ್ರಥಮ ಆಧ್ಯತೆಯಲ್ಲಿಯೇ ಬಸ್ಸು ಹತ್ತಿ ಅಜ್ಜನ ಮನೆಗೆ ಹೋದದ್ದು. ಬಸ್ಸು ಹತ್ತಲು ಪ್ರಥಮ ಆಧ್ಯತೆಯೇನೋ ಸಿಕ್ಕಿತು, ಆದರೆ ಬಸ್ಸಿನಲ್ಲಿ ಸೀಟು ಖಾಲಿ ಇತ್ತು ಎಂದು ಅಮ್ಮನೊಂದಿಗೆ ಕೂತು ಹೊರಗೆ ಗಿಡ, ಮರ, ರಸ್ತೆ ಮತ್ತು ಕಟ್ಟಡಗಳು ಓಡುವುದುನ್ನು ನೋಡಿ ಆಶ್ಚರ್ಯ ಪಡುತ್ತಿದ್ದೆ. ಅಷ್ಟೊತ್ತಿಗೆ ಮುಂದಿನ ನಿಲ್ದಾಣದಲ್ಲಿ ಇನ್ನೂ ಕೆಲವು ಅಮ್ಮಂದಿರು ಬಸ್ಸಿನೊಳಗೆ ಬಂದರು. ಅವರೊಂದಿಗೆ ಮಕ್ಕಳೂ ಇದ್ದರು. ಮಕ್ಕಳು ಕೆಲವು ಸೀಟುಗಳ ಮಧ್ಯೆ ತುರುಕಿ ಸೇರಿಕೊಂಡರು. ಅಷ್ಟರಲ್ಲಿ ರಾಜ ಗಾಂಭೀರ್ಯದಿಂದ ಕುಳಿತಿದ್ದ ನನ್ನ ಹತ್ತಿರ ಬಂದ ಕಂಡಕ್ಟರ್ ಮಕ್ಕಳನ್ನು ಕಾಲ ಮೇಲೆ ಕೂರಿಸಿಕೊಳ್ಳಿ, ದೊಡ್ಡವರಿಗೆ ಸೀಟುಕೊಡಿ ಎಂದು ಹೇಳಿದ. ಈ ಮಾತು ನನ್ನ ಕಿವಿಗೆ ಕರ್ಕಶವಾಗಿ ಕೇಳಿಸಿತು. ಅಮ್ಮನ ಮುಖ ನೋಡಿದಾಗ, ಅಮ್ಮ ನನ್ನನ್ನು ಎತ್ತಿ ಅವರ ಕಾಲ ಮೇಲೆ ಕುಳ್ಳಿರಿಸಿಕೊಂಡರು. ಸೀಟು ತಪ್ಪಿದ ಕಾರಣಕ್ಕೆ ಸಿಟ್ಟು ಬಂದು, ಕಂಡಕ್ಟರ್ ಗೆ ಶಾಪ ಹಾಕಲು ಯೋಚಿಸಿದಾಗ, ಅಮ್ಮನ ಕಾಲ ಮೇಲೆ ಕುಳಿತ ಸುಂದರ, ಪ್ರೀತಿಯ ಅಪ್ಪುಗೆಗೆ ಸಿಟ್ಟು ಮಾಯವಾಯಿತು. ಮತ್ತೆ ಕಿಟಕಿಯ ಮುಖಾಂತರ ಹೊರಗೆ ನೋಡಿದಾಗ ಮತ್ತೊಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ ಗಿಡ, ಮರ, ರಸ್ತೆ ಮತ್ತು ಕಟ್ಟಡಗಳು ಓಡುತ್ತಿಲ್ಲ, ಓಡುತ್ತಿರುವುದು ನಾನು ಕುಳಿತ ಬಸ್ಸು ಎಂಬ ಅರಿವು ನನಗಾಯಿತು. ಅದರ ಆನಂದದಲ್ಲಿಯೇ ಕುಳಿತ ನನಗೆ ಮತ್ತೆ ಕಾಡಿದ ಪ್ರಶ್ನೆ ಏನೆಂದರೆ. ಬಸ್ಸಿಗೆ ಹತ್ತಲು ಮೊದಲು ಅವಕಾಶ ಕೊಟ್ಟು ಸೀಟಲ್ಲಿ ಕುಳಿತರೆ ಎಬ್ಬಿಸುವುದು ಯಾಕೆ ಎಂಬುದು? ಇದಕ್ಕೆ ಟಿಕೆಟ್ ಪಡೆಯಲಿಲ್ಲ ಎಂಬ ಕಾರಣ ಸರಿ. ಆದರೆ ಟಿಕೆಟ್ ಪಡೆದರೂ ಮಕ್ಕಳು ಕುಳಿತರೆ, ಮಕ್ಕಳನ್ನು ತಳ್ಳಿ ದೊಡ್ಡವರು ಕೂರುತ್ತಾರೆ. ಇರಲಿ ಹತ್ತಲು ಪ್ರಥಮ ಅವಕಾಶ ಸಿಕ್ಕಿದ್ದೇ ಒಂದು ಖುಷಿ.

ಅಜ್ಜನ ಮನೆಯಲ್ಲಿ ಯಾವುದೋ ಕಾರ್ಯಕ್ರಮ ಪೂರ್ಣ ಮುಗಿಯದಿದ್ದರೂ, ಅಜ್ಜನ ಆದೇಶ ಮಕ್ಕಳಿಗೆ ಮೊದಲು ಊಟ ಕೊಡಿ ಎಂದು. ಮಕ್ಕಳೆಲ್ಲಾ ಮೊದಲು ಊಟ ಮಾಡಲಿ, ಅವರಿಗೆ ಹಸಿವಾಗಬಹುದು ಎಂದು. ಮಕ್ಕಳೆಲ್ಲಾ ಊಟ ಮಾಡಿ ಎಂದು ತಿಳಿಸಿದರು. ನಾವೇ ಒಂದಷ್ಟು ಮಕ್ಕಳು ಒಟ್ಟಿಗೆ ಊಟ ಮಾಡಿದ ಖುಷಿ ಅದು ಪರಮಾನಂದ. ಈ ರೀತಿ ಹೆಚ್ಚಿನ ಮನೆಗಳಲ್ಲಿ ಇಂದಿಗೂ ಮಕ್ಕಳಿಗೆ ಮೊದಲು ಊಟ ಕೊಡಿ ಎನ್ನುವ ಮಾತನ್ನು ಕೇಳುತ್ತಿದ್ದೇವೆ.

ಚಿಕ್ಕವರಾಗಿದ್ದಾಗ ಜೋರು ಜ್ವರ ಬಂದಾಗ ಅಪ್ಪ ನನ್ನನ್ನು ಹೆಗಲ ಮೇಲೆ ಕೂರಿಸಿ 4 ಕಿಲೋ ಮೀಟರ್ ನಡೆದು ಡಾಕ್ಟರ್ ಬಳಿ ತೋರಿಸಿ, ಮತ್ತೆ 4 ಕಿಲೋ ಮೀಟರ್ ವಾಪಾಸು ಮನೆಗೆ ಹೆಗಲ ಮೇಲೆ ಕೂರಿಸಿಕೊಂಡು ನಡೆದುಕೊಂಡು ಬಂದು, ಮನೆಯಲ್ಲಿ ಮಲಗಿಸಿ, ಅವಾಗವಾಗ ನನ್ನ ಹಣೆ ಮುಟ್ಟಿ ನೋಡುತ್ತಿದ್ದಾಗ, ನಿದ್ರೆ ಬರದಿದ್ದರೂ ನಿದ್ರೆ ಬಂದಂತೆ ನಟಿಸಿ ಅಪ್ಪನ ಪ್ರೀತಿಯುತ ಕಾಳಜಿಯ ಸ್ಪರ್ಶವನ್ನು ಅನುಭವಿಸಿದಾಗ ಜ್ವರ ಮಾಯವಾಗುತ್ತಿತ್ತು. ವಾವ್!!! ಎಂತಹ ಕಾಳಜಿ.  

ನಾನೇ ಗಮನಿಸಿದಂತೆ, ಜಾತ್ರೆ, ನಡೆಯುತ್ತಿರುವಾಗ, ದೊಡ್ಡವರು ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು, “ನೋಡು ಅಲ್ಲಿ ರಥ” ಚಾಮಿ, ಪಟಾಕಿ, ಲೈಟು ಹೀಗೆ ‘ಮಗು’ವಿಗೆ ಸಂಭ್ರಮ ಸವಿಯಲು ಅವಕಾಶ ನೀಡುತ್ತಿದ್ದರು. ಅದೇ ರೀತಿ “ಮಕ್ಕಳನ್ನು” ಕರೆದುಕೊಂಡು ಹೋಗುವ ಯಾವುದೇ ಕುಟುಂಬ, ಪೋಷಕರು ಒಬ್ಬರಿಗೊಬ್ಬರು ಮಾತಾಡುತ್ತಾ ‘ಕೈ ಹಿಡಿದುಕೋ”, ‘ಜಾಗ್ರತೆ’, “ಅವಳನ್ನು ಎತ್ತಿಕೋ”, ಮಕ್ಕಳಿಗೆ ನೀರು ಬೇಕಿತ್ತೋ.... ಏನೋ.... ಹೀಗೆ ಹಲವಾರು ಮಕ್ಕಳ ಪರ.... ಮಾತುಗಳು. ಇದನ್ನೆಲ್ಲಾ ನೋಡಿದರೆ ನಾವು ಇಂದು ಮಾತನಾಡುವ ಮಕ್ಕಳ ರಕ್ಷಣೆಯಲ್ಲಿ ಇದು ಇದೆ ಅಂತ ಅನ್ನಿಸುವುದಲ್ಲಿವೇ?

ಇನ್ನು ಕೆಲವು ಕುಟುಂಬಗಳು ಅವರವರೊಡನೆ ಬೇಟಿಯಾದಾಗ, ಮಾತನಾಡುವಾಗ ಬರುವ ಕನಿಷ್ಠ ಮೂರನೇಯ ಪ್ರಶ್ನೆಯೇ “ಮಕ್ಕಳು ಎಲ್ಲಾ ಆರಾಮ ಇದ್ದಾರಾ? ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಬಡವ ಶ್ರೀಮಂತ ಭೇದವಿಲ್ಲದೆ ಈ ಪ್ರಶ್ನೆಗಳು ಬರುತ್ತವೆ. ಅಂದರೆ ಇಲ್ಲಿಯೂ ಮಕ್ಕಳಿಗೆ ಪ್ರಾಧಾನ್ಯ. ಮಧ್ಯಾಹ್ನ 12:30 ದಾಟಿದರೆ ಸಾಕು ಎಲ್ಲಾ ಮನೆಗಳಲ್ಲಿ ಮಕ್ಕಳದ್ದು ಊಟ ಆಯಿತಾ ಎನ್ನುವ ಪ್ರಶ್ನೆ. ಸಾಮಾನ್ಯ ಕುಟುಂಬಗಳ ಮಧ್ಯೆ ಬರುವ ಯಾವುದೇ ದೂರವಾಣಿ  ಕರೆಗಳ ಮಾತಿನ ಮೊದಲನೇ  ಅಥವಾ ಎರಡನೇ ಮಾತುಗಳು, ಮಕ್ಕಳು ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಆರಾಮವಾಗಿದ್ದಾರಾ?.ಈ ಪ್ರಶ್ನೆಗಳಿಗೆ ಉತ್ತರಗಳನ್ನು ಅರಿತ ಮೇಲೆಯೇ ಮುಂದಿನ ಮಾತುಗಳು ಮುಂದುವರಿಯುತ್ತಿದ್ದವು. ವ್ಹಾವ್!! ಎಷ್ಟು ಚಂದ ಅಲ್ವಾ? ಮಕ್ಕಳಿಗೆ ಎಷ್ಟೊಂದು ಪ್ರಾಧಾನ್ಯತೆ ಮತ್ತು ಪ್ರಾಮುಖ್ಯತೆ. ಹಾಂ! ಇನ್ನೊಂದು ಘಟನೆ ನೆನಪಾಯಿತು ಯಾವುದೇ ಹಬ್ಬಗಳಿಗೆ ಏನಾದರು ಒಂದು ಸಿಹಿ ಮಾಡುವುದು ನಮ್ಮ ಸಂಪ್ರದಾಯ. ನಾನು ಚಿಕ್ಕವನಿದ್ದಾಗ ಹಬ್ಬಕ್ಕೆ ಅಮ್ಮ ಸ್ವೀಟ್ ಮಾಡಿದಾಗ ದೇವರಿಗೆ ಇಡುವ ಮೊದಲೇ ನಾನು ಸ್ವೀಟ್ ತಿನ್ನಲು ಹೋದೆ. ಆಗ ಅಮ್ಮ ಈಗ ತಿನ್ನುವಂತಿಲ್ಲ, ದೇವರಿಗೆ ಆದ ಮೇಲೆ ಎಂದರು. ಒಂದು ಕೊಡಮ್ಮಾ ರುಚಿ ನೋಡುತ್ತೇನೆ ಎಂದು ಹಠ ಮಾಡಿದಾಗ, ಹೊರಗಿನಿಂದ ಮಕ್ಕಳ ಹಕ್ಕುಗಳ ಪರ  ಅಪ್ಪನ ಆದೇಶ ಹೊರಬಂತು. ಮಕ್ಕಳಿಗೆ ಅದೆಲ್ಲಾ ಅನ್ವಯಿಸುವುದಿಲ್ಲಾ, ಅವರಿಗೆ ಕೊಡಬಹುದು ಪರವಾಗಿಲ್ಲಾ ಎಂದು. ಆ ಮಾತಿಗೆ ಒಪ್ಪಿದ ಅಮ್ಮ ತಕ್ಷಣ ಒಂದು ಸ್ವೀಟ್ ನನ್ನ ಕೈಗೆ ನೀಡಿದರು. ಅದನ್ನು ತಿಂದ ಸಂತೋಷ ಜೀವನದ ಉತ್ತಮ ಕ್ಷಣಗಳಾಗಿಯೇ ಇಂದಿಗೂ ಉಳಿದಿದೆ. ಆ ಕ್ಷಣಗಳು ಮತ್ತೆ ಬರಲೆಂದು ದೇವರು ಮತ್ತು ಪ್ರಕೃತಿಯಲ್ಲಿ ಎಷ್ಟು ಕೇಳಿದರು ಬರಲೇ ಇಲ್ಲ! ಅಂತಹ ಸಂಭ್ರಮ ಅದಾಗಿತ್ತು. ಇಲ್ಲಿಯೂ ಮಕ್ಕಳಿಗೆ ಪ್ರಥಮ. ದೇವರಿಗೆ ಆದ ಮೇಲೆ ಎನ್ನುವ ಕಾನೂನು, ಮಕ್ಕಳಿಗೆ ಅನ್ವಯಿಸುವುದಿಲ್ಲ. ಮಕ್ಕಳಿಗಾಗಿ, ಮಕ್ಕಳ ಹಿತಕ್ಕಾಗಿ ದೇವರ ಕಾನೂನನ್ನು ಉಲ್ಲಂಘಿಸಿ ಮಕ್ಕಳಿಗೆ ಪ್ರಥಮ ಆಧ್ಯತೆ ಮತ್ತು ಪ್ರಾಮುಖ್ಯತೆ ನೀಡಲಾಯಿತು. ಈ ಆಶಯಗಳು ಎಷ್ಟು ಚಂದ ಮತ್ತು ಸುಂದರ ಅಲ್ವೇ? ಹಾಗಾದರೆ ನಮ್ಮ ಹಿಂದಿನ ಕಾಲದಲ್ಲಿಯೂ “ಮಕ್ಕಳು” ಪ್ರತಿಯೊಬ್ಬರಿಗೂ ಪ್ರಥಮ ಆದ್ಯತೆ ಆಗಿದ್ದರು. ಅವರ ‘ಸಂರಕ್ಷಣೆ’ ಅವರ “ಖುಷಿ” ಆನಂದ, ಅವರಿಗೆ ಲಭಿಸಬೇಕಾದ್ದು (ಹಕ್ಕು) ಎಂಬುದರ ಎಲ್ಲಾ ಅಂಶಗಳು ಅಡಗಿತ್ತು ಅಲ್ಲವೇ....? ಎಷ್ಟು ಪ್ರಾಧಾನ್ಯತೆ ಇತ್ತು ಅಲ್ಲವೇ....?

ಹಾಗಾದರೆ ಈ ಎಲ್ಲಾ ಪ್ರಾಮುಖ್ಯತೆ, ಪ್ರಾಧಾನ್ಯತೆ ಏನು ಎಂದು ಅರ್ಥೈಸೋಣ. ಅವರವರ ಅನುಭವಗಳು ಬೇರೆ ಬೇರೆ ಅರ್ಥವನ್ನು ಕೊಡಬಹುದು ಅದು ನಿಜವೂ ಇರಬಹುದು ಇರಲಿ. ಆದರೆ ಸಾರ್ವತ್ರಿಕವಾಗಿ ನೋಡಿದಾಗ ಕಾಣುವುದು ಈ ಎಲ್ಲಾ ಪ್ರಾಮುಖ್ಯತೆಗಳು ಹಾಗೂ ಪ್ರಾಧಾನ್ಯತೆ ಯಾಕೆಂದರೆ, ಮಕ್ಕಳು ಎನ್ನುವ ಕಾರಣಕ್ಕೆ. ಹೌದು ಮಕ್ಕಳು ಎಂದರೆ ಏನು?. ಚಿಕ್ಕವರು, ಸಣ್ಣವರು, ಇನ್ನೂ ಬೆಳೆಯಬೇಕಾದವರು ಎಂಬ ಉತ್ತರ ಹೀಗೆ ಮುಂದುವರೆಯುತ್ತದೆ. ಆದರೆ ಬಹಳ ಪ್ರಮುಖವಾದ ಅಂಶ ಎಂದರೆ, ಮಕ್ಕಳಿಗೆ ನೀಡಬೇಕಾದ ರಕ್ಷಣೆಯ ಅಂಶ. ಮಕ್ಕಳು ವಯಸ್ಸಿನಲ್ಲಿ ಚಿಕ್ಕವರಾದ್ದರಿಂದ, ಜಾಗೃತಿಯಿಂದ, ರಕ್ಷಣೆಯಿಂದ, ಎಚ್ಚರಿಕೆಯಿಂದ, ಕಾಳಜಿಯಿಂದ ನೋಡಿಕೊಳ್ಳಬೇಕು ಎಂಬ ಅಂಶ ಇದರಲ್ಲಿ ಅಡಗಿದೆ. ಉತ್ತಮ ಪೋಷಣೆ, ಆರೈಕೆಯ ರಕ್ಷಣೆಯೇ ಇದರಲ್ಲಿ ಕಾಣುತ್ತದೆಯಾದರೂ ಪ್ರಮುಖವಾಗಿ ಮಕ್ಕಳು ಯಾವುದೇ ಅಪಾಯಕ್ಕೆ ತುತ್ತಾಗದಂತೆ, ಅಪಾಯಕ್ಕೆ ಹೋಗದಂತೆ, ಅಪಾಯದ ಅಂಚಿನತ್ತ ಸಾಗದಂತೆ ನೋಡಿಕೊಳ್ಳಬೇಕು ಎಂಬ ಮಹತ್ತರವಾದ ಆಶಯವೇ ಈ ಪ್ರಾಧಾನ್ಯತೆ ಮತ್ತು ಪ್ರಾಮುಖ್ಯತೆಯ ಮೂಲ ಎಂಬುದು ನಿಮಗೂ ಗೊತ್ತು.

ಆದರೆ ಸ್ವಲ್ಪ ಯೋಚಿಸಿ ನೋಡಿದಾಗ ಇದು ಕೇವಲ ಮಕ್ಕಳ ರಕ್ಷಣೆಯ ಭಾಗ ಮಾತ್ರವಲ್ಲ. ಮಕ್ಕಳ ರಕ್ಷಣೆ ಅತ್ಯಂತ ಪ್ರಮುಖವಾಗಿ ಮಾನವ ಹಕ್ಕಿನ ಅಂಶ, ಅಂದರೆ ಹಕ್ಕಿಗೆ ಸಂಬಂಧಿಸಿದ್ದು. ಹಾಗಾದರೆ 1989ರಲ್ಲಿ ಬಂದ ಮಕ್ಕಳ ಹಕ್ಕುಗಳ ಒಡಂಬಡಿಕೆಯು ಬರುವ ಎಷ್ಟೊ ಮೊದಲೇ ನಮ್ಮ ಸಮಾಜ ಮಕ್ಕಳ ಹಕ್ಕಿನ ಬಗ್ಗೆ ಮಾತನಾಡಿತ್ತು. ಅದಕ್ಕೆ ಮಹತ್ವ ಕೂಡಾ ಇತ್ತು ಅಲ್ವಾ?. ಹೌದು ಅದು ಕೇವಲ ರಕ್ಷಣೆ, ಜಾಗೃತಿ, ಸಣ್ಣವರು ಎಂಬ ನೆಲೆಯಲ್ಲಿ ಇತ್ತೇ ಹೊರತು ಪ್ರಜೆಯಾಗಿ ಅಷ್ಟೊಂದು ಇರಲಿಲ್ಲ, ಇರಲಿ ಬಿಡಿ. ಆದರೆ ಮಕ್ಕಳ ರಕ್ಷಣೆಯೊಂದಿಗೆ ಬಹಳ ಪ್ರಮುಖವಾಗಿ ಮಕ್ಕಳ ಆರೋಗ್ಯ, ಬೆಳವಣಿಗೆ ಬಗ್ಗೆಯೂ ಹೆಚ್ಚಿನ ಕಾಳಜಿ ಎಲ್ಲಾ ಮನೆಗಳಲ್ಲಿತ್ತು. ಅದು ನಿಯಮಾನುಸಾರ ಸೂಕ್ತವಾಗಿಲ್ಲದಿದ್ದರೂ ಮಕ್ಕಳ ಮೇಲಿನ ಪ್ರೀತಿ, ಕಾಳಜಿ ಮಾತ್ರ ಸ್ಪಷ್ಟವಾಗಿಯೇ ಇತ್ತು. 

ಮಕ್ಕಳು ಹೇಗಿದ್ದಾರೆ? ಎನ್ನುವ ಪ್ರಶ್ನೆಯ ಹಿಂದೆ ಹಲವಾರು ಮಕ್ಕಳ ಅಭಿವೃದ್ಧಿ ಸೂಚ್ಯಂಕಗಳು ಅಡಗಿದ್ದವು. ಮುಖ್ಯವಾಗಿ ಮಕ್ಕಳದ್ದು ಊಟವಾಯಿತಾ? ಮಕ್ಕಳು ಎಲ್ಲಿ ಹೋಗಿದ್ದಾರೆ? ಎನ್ನುವ ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಬರುತ್ತಿದ್ದ ಉತ್ತರಗಳು, ಈಗ ಊಟ ಮಾಡಿ ಇಲ್ಲಿ ಏಲ್ಲೋ ಆಟಕ್ಕೆ ಹೋಗಿರಬೇಕು. ಇನ್ನು ಕೆಲವರು ಇಷ್ಟೊತ್ತು ಆಟವಾಡಿ ಈಗ ಊಟ ಮಾಡಿ ಮಲಗಿದ್ದಾರೆ. ಎನ್ನುವ ಪೋಷಕರ ಉತ್ತರಗಳನ್ನು ನಾವೆಲ್ಲರೂ ಕೇಳಿದ್ದೀವಿ. ಕಡು ಬಡ ಕುಟುಂಬಗಳಲ್ಲಿಯೂ ಕೂಡಾ ಈಗ ಕೆಲಸದಿಂದ ಬಂದು, ಇಲ್ಲೆಲ್ಲೋ ಆಟವಾಡಲು ಹೋಗಿರಬೇಕು ಎನ್ನುವ ಉತ್ತರ. ಈ ಎಲ್ಲಾ ಉತ್ತರಗಳ ಹಿಂದೆ ಮಕ್ಕಳ ಬದುಕು, ರಕ್ಷಣೆ, ವಿಕಾಸ ಮತ್ತು ಭಾಗವಹಿಸುವ ಅಂಶಗಳು ಇದೆ ಎಂದು ನಿಮಗೆ ಅನ್ನಿಸುವುದಿಲ್ಲವೇ? ಹೌದು, ಇಲ್ಲ ಎನ್ನುವುದು ನಿಮಗೆ ಬಿಟ್ಟದ್ದು. ಅದು ಇಂದು ನಾವು ಮಾತನಾಡುವ ಮಕ್ಕಳ ಹಕ್ಕುಗಳ ಅಂಶಗಳೇ ಎಂಬುದಂತೂ ಎದ್ದು ಕಾಣುತ್ತವೆ. ಇಲ್ಲಿ, ಸಮಾಜದ ಎಲ್ಲರಿಗೂ ಮಕ್ಕಳು ಉತ್ತಮ ಆರೋಗ್ಯ, ಉತ್ತಮ ಬೆಳವಣಿಗೆ ಹೊಂದಿ, ಯಾವುದೇ ತೊಂದರೆ ಅಥವಾ ಅಪಾಯಕ್ಕೆ ಒಳಗಾಗದೇ ಬಾಳಬೇಕು ಎನ್ನುವ ಆಶಯ ಹಾಗೂ ಪ್ರಥಮ ಆಧ್ಯತೆ ನೀಡಬೇಕು ಎನ್ನುವ ಅಂಶ. ಇವೆಲ್ಲವೂ ಹಕ್ಕಿನ ಅಂಶವೇ ಆಗಿದೆ. ಇದು ಹಿಂದಿನಿಂದಲೂ ಇತ್ತು ಎನ್ನುವುದಕ್ಕೆ ಇವುಗಳೆಲ್ಲವೂ ಒಂದು ಉದಾಹರಣೆಯಾಗಿದೆ. ಇದು ನಿಜಕ್ಕೂ ಮಕ್ಕಳು ದೇವರಿಗೆ ಸಮಾನ ಎಂದು ಹೇಳಿರುವುದಕ್ಕೆ ಒಂದು ಸಾಕ್ಷಿ. ಈ ಎಲ್ಲಾ ಕಡೆ ಕಂಡುಬರುವ ಅಂಶ ಏನೆಂದರೆ ಹಕ್ಕಿನ ಅಂಶ. ಹಾಗಾದರೆ ಈ ಹಕ್ಕು ಅಂದರೆ ಏನು ಎಂದು ಸ್ವಲ್ಪ ನೋಡೋಣ. 

ಈ ಹಕ್ಕನ್ನು ಎಲ್ಲಿಯಾದರು ಸ್ವಲ್ಪ ಹಣದಿಂದ ಕೊಂಡುಕೊಳ್ಳಬಹುದೇ? ಅಥವಾ ಯಾರಿಂದಾದರೂ ಸ್ವಲ್ಪ ಚೀಲದಲ್ಲಿ ಹಾಕಿ ತರಬಹುದೇ? ಮುಂದೆ ಯಾವತ್ತಾದರೂ ಬೇಕಾಗಬಹುದೆಂದು ಎಲ್ಲಿಯಾದರೂ ಸ್ವಲ್ಪ ಡಬ್ಬಿ ಅಥವಾ ಲಾಕರ್‍ನಲ್ಲಿ ಇಡಬುಹುದೇ? ಒಂದು ವೇಳೆ ಹೌದು ಎಂದಾದರೆ ಅದು ವಸ್ತುಗಳಾಗಬಹುದು. ಆದರೆ ಇಲ್ಲಿ ನಾವು ಚರ್ಚಿಸುವ ಹಕ್ಕು, ವಸ್ತುಗಳಲ್ಲ. ಅದು ಪ್ರತಿಯೊಬ್ಬರಲ್ಲಿಯೂ ಇರುವ ಹಾಗೂ ನಮ್ಮೊಳಗೂ ಇರುವ ಅಂಶ, ಅದನ್ನು ಯಾರಿಂದಲೂ ಕೊಡಲು ಸಾಧ್ಯವಿಲ್ಲ. ಅದು ನಿರಂತರವಾಗಿ ಪ್ರತಿ ಕ್ಷಣವು ಅನುಭವಿಸಲು ಮತ್ತು ಪ್ರತಿ ಕ್ಷಣ ಅನುಭವಿಸಲೇಬೇಕಾದ, ಯಾವ ಕಾರಣಕ್ಕೂ ವಂಚಿತಗೊಳ್ಳದೇ ಹಾಗೂ ಅವುಗಳು ಇಲ್ಲದೇ ಬದಕು ಪೂರ್ಣ ಪ್ರಮಾಣವಾಗದೇ ಇರುವ ಅಂಶಗಳು ಹಕ್ಕು ಅನ್ನಿಸಿಕೊಳ್ಳುತ್ತವೆ.

ಹಕ್ಕು ಎಂದರೆ ಅತ್ಯಂತ ಅಗತ್ಯವಾದದ್ದು, ಬೇಕೆ ಬೇಕಾದದ್ದು, ಯಾರು ಕೂಡ ತಡೆಯಬಾರದ್ದು, ಕಸಿಯಬಾರದ್ದು, ದಿನ ನಿತ್ಯ ಬೇಕಾದದ್ದು, ಕಾನೂನಾತ್ಮಕವಾದದ್ದು, ಸಾಮಾಜಿಕ, ನೈತಿಕ ಸ್ವಾತಂತ್ರ್ಯದ ತತ್ವದಡಿಯಲ್ಲಿ ರಚಿತವಾದ ಮೂಲಭೂತ ಭಾಧ್ಯತೆಗಳಾದ ಪ್ರತಿ ಕ್ಷಣ ಅನುಭವಿಸಬೇಕಾದ ಅಂಶಗಳೇ ಹಕ್ಕು ಎಂದೆನ್ನಿಸಿಕೊಳ್ಳುತ್ತವೆ. 

ಹಕ್ಕನ್ನು ಯಾರು ಕಸಿಯುವಂತಿಲ್ಲ. ಅನುಭವಿಸುವಾಗ ತಡೆಯುವಂತಿಲ್ಲ. ಹಕ್ಕಿಗೆ ಯಾವುದೇ ಇತಿಮಿತಿಗಳು ಇಲ್ಲ. ಉದಾಹರಣೆಗೆ ಮಕ್ಕಳನ್ನು ಇಂತಿಷ್ಟೇ ಪ್ರೀತಿಸಿ! ಪ್ರೀತಿಸಬೇಕು ಎಂದು ನಿಗದಿಪಡಿಸಿ, ಲೆಕ್ಕಾಚಾರ ಮಾಡಲು ಸಾಧ್ಯವೇ? (ನಿಯಮ, ರೀತಿ, ನೀತಿ ಇರಬೇಕು ನಿಜ). ಅಪ್ಪನನ್ನು  40% ಮಾತ್ರ, ಅಮ್ಮನನ್ನು 60% ಪ್ರೀತಿಸು ಎಂದು ಹೇಳಲು ಸಾಧ್ಯವೇ? ಇಲ್ಲ ತಾನೇ? ಯಾಕೆಂದರೆ ಅಪ್ಪ ಅಮ್ಮನ ಪ್ರೀತಿ ಅದು ಅತ್ಯಂತ ಅಗತ್ಯವಾದದ್ದು, ಬೇಕೆ ಬೇಕಾದದ್ದು. ಅದನ್ನು ಯಾವುದೇ ಅಳತೆಯ ಮಾಪನದಿಂದ ಅಳೆದು ತೂಗಿ ಕೊಡಲು ಸಾಧ್ಯವಿಲ್ಲ. ಹಾಗೆಯೇ ರಕ್ಷಣೆ ಪಡೆಯುವುದು ಕೂಡಾ, ಮಕ್ಕಳಿಗೆ ಹಾಗೂ ನಮ್ಮೆಲ್ಲರಿಗೂ ಬೇಕು ಯಾಕೆಂದರೆ ಅದು ಹಕ್ಕು. ಹಾಗೆಂದ ಮಾತ್ರಕ್ಕೆ ಮಕ್ಕಳನ್ನು ಸಂರಕ್ಷಿಸಬೇಕೆಂದು ಮಕ್ಕಳನ್ನು ಸುರಕ್ಷಿತವಾಗಿ ಬೀರುವಿನಲ್ಲಿ ಅಥವಾ ಲಾಕರ್‍ನಲ್ಲಿ ಇಡಲು ಸಾಧ್ಯವೇ? ಇಲ್ಲ. ಯಾಕೆಂದರೆ ಮಕ್ಕಳಿಗೆ ಸಂರಕ್ಷಿಸಿಕೊಳ್ಳುವ, ಸಂರಕ್ಷಣೆಗೆ ಒಳಪಡುವ ಹಾಗೂ ರಕ್ಷಿಸಿಕೊಳ್ಳುವ ಹಕ್ಕು ಅವರಿಗಿದೆ ಹೊರತು ಮಕ್ಕಳು ಸಂರಕ್ಷಣೆಯ ವಸ್ತುಗಳಲ್ಲ ಎನ್ನುವುದು ಅರ್ಥವಾದರೆ ಸಾಕು.

ಹಾಗಾದರೆ ಹಕ್ಕನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ, ಅದು ನಮ್ಮೊಳಗೆ ಅಡಗಿರುವ ಅಂಶ. ಅದು ನಮ್ಮಲ್ಲಿ ಇದೆ. ಅದನ್ನು ನಮ್ಮದಾಗಿಸಿಕೊಂಡು, ಅನುಭವಿಸಿ, ಸುಂದರ, ನೆಮ್ಮದಿಯ, ಸ್ವಾಭಿಮಾನದ, ಸಂತೋಷದ ಮತ್ತು ಘನತೆಯ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶಗಳೇ ಹಕ್ಕು. ಹಾಗಾದರೆ ನಮ್ಮ ಸಂವಿಧಾನದ ಭಾಗ ಮೂರರಲ್ಲಿ ಕೊಟ್ಟಿದ್ದು ಏನು?. ಹೌದು! ಅವುಗಳು ಮೂಲಭೂತ ಹಕ್ಕುಗಳು. ಮಕ್ಕಳೂ ಸೇರಿದಂತೆ ಈ ದೇಶದ ಎಲ್ಲಾ ನಾಗರಿಕರಿಗೂ (ಪ್ರಜೆಗಳಿಗೂ) ಸೇರಿದ್ದು. ಅವುಗಳ ಉಲ್ಲಂಘನೆಯಾದಾಗ, ನನ್ನ ಹಕ್ಕಿನ ಉಲ್ಲಂಘನೆಯಾಗಿದೆಯೆಂದು  ಉಚ್ಛ ನ್ಯಾಯಾಲಯ, ಸರ್ವೊಚ್ಛ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ.  ಆದರೆ ಈಗ ನಾವು ಚರ್ಚಿಸುತ್ತಿರುವ ಹಕ್ಕು ಇದಕ್ಕಿಂತಲೂ ತುಂಬಾ ಮಿಗಿಲಾದದ್ದು. ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು, ಸಂವಿಧಾನ ನೀಡಿದ್ದು ಕೊಟ್ಟಿದ್ದು ಎಂಬ ಅಂಶವಿದೆ. ಈ ಮೂಲಭೂತ ಹಕ್ಕುಗಳಿಗೆ ಇತಿ-ಮಿತಿಗಳು ಮಾನದಂಡಗಳು, ನಿಯಮಗಳು ಇವೆ.  ಆದರೆ ನಾವು ಇಲ್ಲಿ ಹೇಳುತ್ತಿರುವ ಹಕ್ಕಿಗೆ ಇತಿ-ಮಿತಿಗಳು, ಸೀಮಿತ ಮಾನದಂಡಗಳು ಹಾಗೂ ನಿಯಮಗಳು ಇಲ್ಲ. (ಒಂದಷ್ಟು ಕ್ರಮಗಳಿರಬಹುದು) ಉದಾಹರಣೆಗೆ ಪ್ರೀತಿ, ತಾಯಿಯನ್ನು ಇಂತಿಷ್ಟೇ ಪ್ರೀತಿಸಬೇಕು, ಹೀಗೆಯೇ ಪ್ರೀತಿಸಬೇಕು, ಇಷ್ಟು ವರ್ಷಗಳು ಮಾತ್ರ ಪ್ರೀತಿಸಬೇಕು ಎಂದು ಹೇಳಲು ಸಾಧ್ಯವೇ? ಇಲ್ಲ ತಾನೆ?. ಸಂವಿಧಾನದ ಮೂಲಭೂತ ಹಕ್ಕುಗಳನ್ನು ನೀಡುವ ಮುಖಾಂತರ, ನಾವು ಇಲ್ಲಿ ಚರ್ಚಿಸುತ್ತಿರುವ ಹಕ್ಕುಗಳನ್ನು ರಕ್ಷಿಸಲು, ಅನುಭವಿಸಲು ಮಾಡಿರುವ ಕಾನೂನಾತ್ಮಕ ಅವಕಾಶ. ಹಾಗಾದರೆ ಈ ಹಕ್ಕುಗಳು ಯಾವುವು? 

ಹಕ್ಕಿನ ಪ್ರಮುಖ ಅಂಶಗಳಾದ ಪ್ರೀತಿ, ವಾತ್ಸಲ್ಯ, ವಿಶ್ವಾಸ, ಗೌರವ, ಸಂತೋಷ, ಸಂಭ್ರಮ. ಮನರಂಜನೆ, ಸ್ನೇಹ, ರಕ್ಷಣೆ, ಆಟ-ಪಾಠ, ಪೋಷಣೆ, ಆರೋಗ್ಯ, ಅವಕಾಶ, ಭಾಗವಹಿಸುವುದು, ಅಭಿಪ್ರಾಯ, ಮೆಚ್ಚುಗೆ, ಪೌಷ್ಠಿಕ ಆಹಾರ, ವಸತಿ, ಶಿಕ್ಷಣ ಇತ್ಯಾದಿ. ಇವುಗಳನ್ನು ಅನುಭವಿಸುವುದರಲ್ಲಿ ಕ್ರಮಗಳು ಇರಬಹುದು. ಆದರೆ ಪ್ರತಿಯೊಬ್ಬರು ಇಷ್ಟೇ, ಹೀಗೆಯೇ ಅನುಭವಿಸಬೇಕೆಂದು ಇತಿ-ಮಿತಿ, ಮಾನದಂಡ ಹಾಕಲು ಸಾಧ್ಯವೇ?. ಯೋಚಿಸಿ, ಸಾಧ್ಯವಿಲ್ಲ ಎಂದು ನಿಮಗೆ ಅನ್ನಿಸಿದರೆ, ಅದು ಹಕ್ಕು ಎಂದೆನಿಸಿಕೊಳ್ಳುತ್ತದೆ. ಹಾಗೆಯೇ ಮೇಲೆ ಹೇಳಿದ ಎಲ್ಲಾ ಅಂಶಗಳನ್ನು ನಿಮಗೆ ಕೊಂಡುಕೊಳ್ಳಲೂ ಸಾಧ್ಯವಿಲ್ಲ. ಈಗ ನಮ್ಮಲ್ಲಿ ಹಣಕಾಸು ಇಲ್ಲ ಎಂದು ಹೇಳಿ ಮೇಲೆ ಹೇಳಿದ ಅಂಶಗಳಲ್ಲಿ ಕೆಲವನ್ನು ನಾವು ಕೊಡುವುದಿಲ್ಲ, ಕೆಲವನ್ನು ತೆಗೆಯಿರಿ ಎಂದು ನಿಮಗೆ ಹೇಳಿದರೆ, ನೀವು ಯಾವ ಅಂಶಗಳನ್ನು ತೆಗೆಯುತ್ತೀರಿ? ಒಮ್ಮೆ ಯೋಚಿಸಿ. ಪ್ರೀತಿ, ಆಟ-ಪಾಠ, ಸಂತೋಷ, ಗೌರವ, ಸ್ನೇಹ, ಶಿಕ್ಷಣ ಇವುಗಳಲ್ಲಿ ಯಾವುದಾದರೊಂದನ್ನು ಮಕ್ಕಳಿಗೆ ಬೇಡ ಎಂದು ತೆಗೆಯಲು ಪ್ರಯತ್ನಿಸಿ ಆಗುತ್ತಾ?. ಇಲ್ಲ, ಸಾಧ್ಯವೇ ಇಲ್ಲ! ಎಂದಾದರೆ ಅದು ನಮ್ಮ ಹಕ್ಕು ಎಂದೆನಿಸಿಕೊಳ್ಳುತ್ತದೆ. ಎಂತಹ ಆಶ್ಚರ್ಯ! ಅಲ್ವಾ? ಯಾವುದು ಕಡಿಮೆಗೊಳಿಸಲು, ನಿಲ್ಲಿಸಲು, ಕೊಡದೇ ಇರಲು, ಅನುಭವಿಸದೇ ಇರಲು ಹಾಗೂ ಯಾವ ಅಂಶ  ಇದು ಇವರಿಗೆ ಬೇಡ ಎಂದು ಹೇಳಲು ಸಾಧ್ಯವಿಲ್ಲವೋ, ಅಂತಹ ಅಂಶಗಳೆಲ್ಲವೂ ಹಕ್ಕು. 

ಮಕ್ಕಳು ಈ ಎಲ್ಲಾ ಹಕ್ಕುಗಳನ್ನು ಬಾಲ್ಯ ಮತ್ತು ಪ್ರೌಢಾವಸ್ಥೆಯಲ್ಲಿಯೇ ಅಥವಾ ಮಕ್ಕಳಾಗಿದ್ದಾಗಲೇ ಅನುಭವಿಸಿದರೆ ಮಾತ್ರ ಅವರು ಸುಂದರ ಬದುಕನ್ನು ಅನುಭವಿಸಿ ಸಮಾಜದ ಮತ್ತು ಮಾನವ ಅಭಿವೃದ್ಧಿ ಕೊಡುಗೆದಾರರಾಗುತ್ತಾರೆ. ಸಾವಿರಾರು ವರ್ಷಗಳ ಹಿಂದೆಯೆ ಜ್ಞಾನಿಯೊಬ್ಬರು ಹೇಳಿದಂತೆ “ಮಕ್ಕಳು ನಮ್ಮ ಸಾಮರ್ಥ್ಯ, ನಮ್ಮ ಭವಿಷ್ಯ, ನಮ್ಮ ಆಸ್ತಿ ಆದರೆ ನಮ್ಮ ಸಮಸ್ಯೆಗಳಲ್ಲ”. ಅಬ್ಬಾ! ಎಷ್ಟು ಚೆನ್ನಾಗಿದೆ ಅಲ್ವಾ? ಎಷ್ಟೊಂದು ಅರ್ಥವನ್ನೊಳಗೊಂಡಿದೆ. ಈ ಹತ್ತು ಪದಗಳ ಹಿಂದೆ, ನೂರಾರು ಪುಟಗಳ ವಿಚಾರ, ಸಂಗತಿಗಳು ಅಡಗಿವೆ. ಮಕ್ಕಳು ನಮಗೆ ಸಮಸ್ಯೆಗಳಾಗದೇ ಇರಬೇಕಾದರೆ ಅವರು, ಅವರ ಬಾಲ್ಯದ ವಯಸ್ಸಿನಲ್ಲಿಯೇ ಹಕ್ಕುಗಳನ್ನು ಪರಿಪೂರ್ಣವಾಗಿ ಅನುಭವಿಸಿದಾಗ ಮಾತ್ರ, ಅವರು ನಮ್ಮ ಸಾಮರ್ಥ್ಯ ಮತ್ತು ಆಸ್ತಿಗಳಾಗಿ ಪರಿವರ್ತನೆಯಾಗುತ್ತಾರೆ. ಅವರ ಹಕ್ಕನ್ನು ನಾವು ಉಲ್ಲಂಘನೆ ಮಾಡಿದಲ್ಲಿ ಅವರಿಗೆ ಅನುಭವಿಸಲು ಬಿಡದೇ ಇದ್ದಲ್ಲಿ ಅಥವಾ ಅನುಭವಿಸಲು ಅವಕಾಶ ನೀಡದಿದ್ದಲ್ಲಿ, ಅವರು ನಮಗೆ ಸಮಸ್ಯೆಗಳಾಗುವ ಸಾಧ್ಯತೆಗಳೇ ಹೆಚ್ಚು ಆದ್ದರಿಂದ ಮಕ್ಕಳು ಅವರ ಹಕ್ಕುಗಳನ್ನು ಹಕ್ಕಿನ ಪರಿಭಾಷೆ ಮತ್ತು ಪರಿಕಲ್ಪನೆಯಲ್ಲಿಯೇ ಬದುಕಬೇಕು, ಬದುಕಿ ಬಾಳಬೇಕು. ಅದು ಅಭಿವೃದ್ಧಿ ಹೊಂದಿದ ಅಥವಾ ಅಭಿವೃದ್ಧಿ ಹೊಂದುತ್ತಿರುವ ಉತ್ತಮ ರಾಷ್ಟ್ರದ ಮತ್ತು ನಾಗರಿಕತೆಯ ಲಕ್ಷಣ. 

ಹಕ್ಕನ್ನು ಪಡೆಯಲು. ಅನುಭವಿಸಲು ಯಾವುದೇ ಅಡೆತಡೆ ಇರಬಾರದು, ತೊಡಕು ಇರಬಾರದು, ಕಷ್ಟಪಡಬಾರದು. ಅದಕ್ಕಾಗಿ ಹೋರಾಟ, ಜಗಳ ಮಾಡುವ ಸ್ಥಿತಿ ಬರಬಾರದು. ಅದಕ್ಕಾಗಿ ಇನೊಬ್ಬರು ಹೋರಾಟ ಮಾಡುವಂತಾಗಬಾರದು. ಅದು ಸದಾಕಾಲ ಅನುಭವಿಸುವಂತಿರಬೇಕು. ಉದಾಹರಣೆಗೆ ಶಿಕ್ಷಣದ ಹಕ್ಕು. ಇದನ್ನು ಪಡೆಯಲು ಜಾಲತಾಣದ ಕೇಂದ್ರದ ಮಂದೆ ಪೋಷಕರು ಸಾಲು ನಿಂತು, ಅರ್ಜಿ ಹಾಕಿ, ಅವರಿಗೆ ರೂ. 50/100 ನೀಡಿ, ತನ್ನ ಮಕ್ಕಳ ಪಟ್ಟಿ ಬಂದಿದೆಯಾ ಎಂದು ಶಾಲೆ/ಇಲಾಖೆ ಮುಂದೆ ಕಾಯುವ ಸ್ಥಿತಿ ಇದೆಯಲ್ಲಾ? ಪಟ್ಟಿಯಲ್ಲಿ ಹೆಸರು ಇಲ್ಲಾ ಎಂದಾದರೆ, ಮುಂದೆ ಗತಿ! ಮತ್ತೆ ಇನ್ನೊದು ಕಡೆ ಹಕ್ಕಿಗಾಗಿ ಕ್ಯೂ ನಿಲ್ಲಿಬೇಕು. ಇದನ್ನು ನಿಜವಾದ ಹಕ್ಕು ಎಂದು ಹೇಳಬಹುದೇ? ಗೊತ್ತಿಲ್ಲ ಚರ್ಚೆಯ ಅಗತ್ಯ ಇದೆ.

ಹಕ್ಕು ಎಂಬುದು ಮಕ್ಕಳಿಗೆ ಮಾತ್ರ ಎಂದಲ್ಲ. ಅದು ಎಲ್ಲಾ ಜೀವಿಗಳಿಗೂ ಸಂಬಂಧಿಸಿದ್ದು. ಮಾನವರಾದ ನಾವು ಮಕ್ಕಳಿದ್ದಾಗಲೇ ಹಕ್ಕಿನ ನಿಜವಾದ ಅಂಶಗಳನ್ನು ಅನುಭವಿಸಿ. ಮಾನವರಾಗಿ ಬಾಳಿದಲ್ಲಿ ಮಾತ್ರ, ನಾವು ಇನ್ನೊಬ್ಬರ ಮತ್ತು ಇತರ ಜೀವಿಗಳ ಹಕ್ಕನ್ನು ಗೌರವಿಸಿ, ಅವರ ಹಕ್ಕನ್ನು ಉಲ್ಲಂಘಿಸದೇ ಅವರಿಗೂ ಅನುಭವಿಸಲು ಬಿಡುತ್ತೇವೆ. ಅದೆ ತಾನೇ ಮಾನವೀಯತೆಯ ಲಕ್ಷಣ. 

ಮಕ್ಕಳು ಅವರ ಹಕ್ಕನ್ನು ಅನುಭವಿಸಿ ಬದುಕಿದಾಗ ಮಾತ್ರ ಅಥವಾ ಮಕ್ಕಳ ಅಭಿವೃದ್ಧಿ ಸಾಧಿಸಿದಾಗ ಕುಟುಂಬ, ಊರು, ರಾಜ್ಯ, ದೇಶದ ಅಭಿವೃದ್ಧಿ ಹಾಗೂ ತನ್ಮೂಲಕ ಮಾನವ ಅಭಿವೃದ್ಧಿ ಸಾಧಿಸಲು ಸಾಧ್ಯ. ಹಾಗಾದರೆ ಮಕ್ಕಳ ಹಕ್ಕುಗಳಿಗೂ ಮಾನವ ಅಭಿವೃದ್ಧಿಗೂ ಅತ್ಯಂತ ಹತ್ತಿರದ ಸಂಬಂಧ ಇದೆ ಎಂದಾಯಿತು. ಬರೀ ಸಂಬಂಧ ಅಲ್ಲ, ಮಾನವ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆದಾರರು ಮಕ್ಕಳೇ ಆಗಿದ್ದಾರೆ. ಮಾನವ ಅಭಿವೃದ್ಧಿಯಲ್ಲಿ ಮಕ್ಕಳ ಅಭಿವೃದ್ಧಿಯ ಸೂಚ್ಯಂಕಗಳೇ ಹೆಚ್ಚು ಅಡಗಿವೆ ಎನ್ನುವ ಸತ್ಯದ ಅರಿವು ನಮಗಾದರೆ, ಅದು ನಾವು ಮಕ್ಕಳಿಗೆ ಹಾಗೂ ಮಕ್ಕಳ ಹಕ್ಕುಗಳಿಗೆ ನೀಡಿದ ಗೌರವವೇ ಸರಿ.

ನವೆಂಬರ್ ತಿಂಗಳಿನಲ್ಲಿ, ಮಕ್ಕಳ ಹಕ್ಕುಗಳ ಮಾಸಾಚರಣೆ, ಕಾನೂನಾತ್ಮಕ ದತ್ತು ಕುರಿತು ಜಾಗೃತಿ ಹಾಗೂ “ಮಕ್ಕಳ ದಿನಾಚರಣೆ” ಯನ್ನು ದೇಶಾದಾದ್ಯಂತ ಆಚರಿಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಹಾಗೂ ದಿನಾಚರಣೆಗಳು ನಿಜವಾಗಲೂ ಮಕ್ಕಳ ಹಕ್ಕಿನ ಪರಿಕಲ್ಪನೆಯಲ್ಲಿ, ಆಶಯಗಳಲ್ಲಿ. ಮಕ್ಕಳ ಅಭಿವೃದ್ಧಿ ಮತ್ತು ಮಕ್ಕಳ ಹಿತಾಸಕ್ತಿಗಾಗಿ ನಡೆಸಿದಲ್ಲಿ ಮಕ್ಕಳಿಗೆ ಉತ್ತಮ ನ್ಯಾಯ ದೊರಕಿಸಿದಂತಾಗುತ್ತದೆ. ಇವುಗಳು ಮತ್ತೆ ಪುನಃ ನೆಪಮಾತ್ರಕ್ಕೆ, ಕಾಗದದ ಒಳಗೆ, ಕ್ಯಾಮರಾದೊಳಗೆ, ಸಾಮಾಜಿಕ ಜಾಲತಾಣದೊಳಗೆ ಸೇರಿಸಲು, ವರದಿಗಾಗಿ ಮತ್ತು ಕೇವಲ ಸಂಘಟಕರ ಸುಖಕ್ಕಾಗಿ ಮಾತ್ರ ಆಗದೇ ನಿಜವಾಗಿಯೂ ಮಕ್ಕಳು ಘನತೆಯ ಬದುಕನ್ನು ಸ್ವಾಭಿಮಾನದಿಂದ ಅನುಭವಿಸಲಿ. ಅದಕ್ಕೆ ಈ ದಿನಗಳು ಕಾರ್ಯಕ್ರಮಗಳು ಕಾರಣವಾಗಲಿ, ನಾವೂ ಸಾಕ್ಷಿಗಳಾಗೋಣ.

ಮುಂದಿನ ಅಂಕಣದಲ್ಲಿ  “ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳು” ವಿಷಯದ ಬಗ್ಗೆ ಚರ್ಚಿಸೋಣ.

ಈ ಅಂಕಣದ ಹಿಂದಿನ ಬರೆಹಗಳು: 
ಇಂದಿನ ಮಕ್ಕಳು: ಇಂದಿನ ಪ್ರಜೆಗಳು:

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...