ಹನಿ ಹನಿಸಿದ ಚೊಕ್ಕಾಡಿ

Date: 06-04-2021

Location: ಬೆಂಗಳೂರು


‘ತಾವೇ ಕಡೆದು ನಡೆದ ಹಾದಿಯಲ್ಲಿ ಚಿತ್ರಕಲೆ, ಸಂಗೀತ, ಫೋಟೋಗ್ರಫಿ, ಕಾವ್ಯ, ಕಥನ, ನಾಟಕ, ಯಕ್ಷಗಾನ, ಕೃಷಿ ಅಂತ ಇಷ್ಟವಾದದ್ದನ್ನೆಲ್ಲವನ್ನೂ ಕಲಿತು, ‘ಇನ್ನೂ ಕಲಿಯುತ್ತಲೇ ಇದ್ದೇನೆ…’ ಎಂಬ ವಿನೀತ ಭಾವ ನಿಮ್ಮದು’ ಎನ್ನುತ್ತಾ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ ಸಂತೋಷ್ ಅನಂತಪುರ. ತಮ್ಮ 'ಅನಂತಯಾನ'ದಲ್ಲಿ ಈ ಬಾರಿ 'ಸುಬ್ರಾಯ ಚೊಕ್ಕಾಡಿ' ಅವರ ಅನುಭವ ಕಥನ ‘ಕಾಲದೊಂದೊಂದೇ ಹನಿ’ ಕೃತಿಯ ಕುರಿತು ಬರೆದಿದ್ದಾರೆ.

ಹೇಳಬೇಕಾದದ್ದನ್ನೆಲ್ಲಾ ಹೇಳುತ್ತಾ ಹೋಗುವುದು ಸುಲಭದ ವಿಚಾರವಲ್ಲ. ಕಂಡದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು... ಹೀಗೆ ಬದುಕಿನ ಮೂಸೆಯಲ್ಲಿ ಕಂಡುಂಡ ಅಷ್ಟನ್ನೂ ತೆಗೆದು ದಾಖಲಿಸಿದುದರ ಪರಿಣಾಮ; ಕಾಲಘಟ್ಟವೊಂದಕ್ಕೆ ಮುಖಾಮುಖಿಯಾಗುವ ಭಾಗ್ಯ ನಮ್ಮದಾಯಿತು. ಇತಿಹಾಸದ ಪುಟಗಳನ್ನು ತಿರುವುವಂತೆ ಮಾಡಿದ ಹೆಗ್ಗಳಿಕೆ ನಿಮ್ಮ ಅನುಭವ ಕಥನದ್ದು. ಹುಟ್ಟುತ್ತಲೇ ಬಡತನವನ್ನು ಹೊದ್ದುಕೊಂಡು, ಒಂಟಿಯಾಗಿರುತ್ತಲೇ ಜಂಟಿಯ ಹಾದಿಯನ್ನು ತಾವೇ ಕಂಡುಕೊಂಡಿರಿ. ನೀರಾಹಾರಿಯಾಗಿ, ಸುಖವನ್ನು ಅರಸದೆ ನೆಮ್ಮದಿಯಲ್ಲಿ ಬದಕನ್ನು ಕಟ್ಟಿಕೊಂಡದ್ದು- ಸುಖವೆಂಬ ಮಾಯಾ ಜಿಂಕೆಯ ಹಿಂದೆ ಓಡದೆ ನೆಮ್ಮದಿಯನ್ನು ಅರಸಿಕೊಳ್ಳಿ ಎಂಬ ನಿಮ್ಮ ಕಿವಿಮಾತು ಪ್ರಸಕ್ತ ಪೀಳಿಗೆಗೆ ಬಹು ಉಪಯುಕ್ತವಾದದ್ದು.

ಮುಂದೇನು? ಎಂದು ಅರಸುತ್ತ ದಟ್ಟ ಕಾನನದಲ್ಲಿ ನಡೆದೂ ನಡೆದು 'ಕಾಡ ಮೂಲಕವೇ ಪಥ ಆಗಸಕ್ಕೆ' ಎನ್ನುವುದನ್ನು ಋಜು ಮಾಡಿದಿರಿ. ತಾವೇ ಕಡೆದು ನಡೆದ ಹಾದಿಯಲ್ಲಿ ಚಿತ್ರಕಲೆ, ಸಂಗೀತ, ಫೋಟೋಗ್ರಫಿ,ಕಾವ್ಯ, ಕಥನ, ನಾಟಕ, ಯಕ್ಷಗಾನ, ಕೃಷಿ ಅಂತ ಇಷ್ಟವಾದದ್ದನ್ನೆಲ್ಲವನ್ನೂ ಕಲಿತು, ‘ಇನ್ನೂ ಕಲಿಯುತ್ತಲೇ ಇದ್ದೇನೆ…’ ಎಂಬ ವಿನೀತ ಭಾವ ನಿಮ್ಮದು. ನಿಮಗೊದಗಿದ ಒಂಟಿತನವನ್ನು ಬದುಕಿಗೆ ಪೂರಕವಾಗಿಸಿ ಪರಿವರ್ತಿಸಿಕೊಂಡದ್ದು ಹೆಗ್ಗಳಿಕೆಯೇ ಸರಿ. ಇದು ಸ್ವ-ವಿಮರ್ಶಾ ಕಲೆಯನ್ನು ನೀಡಿದ್ದಲ್ಲದೆ, ತನ್ನೊಳಗೆಯೂ ಇಣುಕಿ ಹಾಕಿ ನೋಡುವಂತೆ ಮಾಡಿತು. ಜೊತೆಗೆ ಒಳಗಣ್ಣನ್ನೂ ತೆರೆದಿಟ್ಟಿತು. ಅನುಮಾನ-ಅವಮಾನಗಳ ಸುತ್ತಲೂ ಉರುಳಿ, ಹೊರಳಿ ಮತ್ತೆ ಅಲ್ಲೇ ಮೆಟ್ಟಿ ನಿಲ್ಲಬೇಕೆಂಬ ಛಲವು ನಿಜಾರ್ಥದಲ್ಲಿ ಇಂದು ನೀವು ಏನಾಗಿರುವಿರೋ ಅದನ್ನಾಗಿಸಿದೆ. ಅದೆಷ್ಟು ನೋವು ಸಂಕಟಗಳನ್ನು ಅನುಭವಿಸಿರಬಹುದು ನೀವು?! ಅವುಗಳನ್ನೆಲ್ಲಾ 'ವಾತಾಪಿ ಜೀರ್ಣೋಭವ...' ಎಂದು ಬದುಕಿನ ಮೂಲ ದ್ರವ್ಯವಾದ ಹಾಸ್ಯವನ್ನು ಮೈಗೂಡಿಸಿಕೊಂಡಿರಿ. ಹಾಗಾಗಿ ನೋವುಗಳೂ ನಿಮಗೆ ವಿನೋದದ ಅಲೆಗಳಾಗಿ, ಲಘು ಹಾಸ್ಯಗಳಿಂದಲೇ ಬದುಕಿನ ಲಾಸ್ಯವನ್ನು ತೆರೆದಿಟ್ಟಿರಿ.

ಉಪಯೋಗಕ್ಕೆ ಬಾರದ ಬಂಧ ಮತ್ತು ಜೀವಗಳು ಎಲ್ಲ ಕಾಲದಲ್ಲೂ ಇರುತ್ತವೆ. ಅಂತೆಯೇ ಉಪಯೋಗಕ್ಕೆ ಬರುವ ಜೀವ-ಬಂಧಗಳೂ ಸಹ. ಅಂತವುಗಳು ದೈವಾಂಶಯುಕ್ತ ಕಾರುಣ್ಯವನ್ನು ಸ್ಫುರಿಸುವಾಗಲೆಲ್ಲ ದೇವರಿಲ್ಲ ಎನ್ನಲಾದೀತೇ? ಕಷ್ಟದಲ್ಲಿ ನಮಗೊದಗುವವರೇ ನಿಜವಾದ ದೇವರು. ಸೋಗಲಾಡಿತನದ ಬಂಧಗಳು ತಂತಮ್ಮ ಹೊಟ್ಟೆಯ ಕೆಳಕ್ಕೆ ಮಾತ್ರ ಕೆರೆದುಕೊಳ್ಳುತ್ತ ಅತ್ತಿತ್ತ ನೋಡುವುದೂ ಇಲ್ಲ. ನೋಡಿದರೂ ಜಾಣ ಕುರುಡಿದೆಯಲ್ಲ! ಅಂತವುಗಳಿಗೆ ಸೆಟೆದು ನಿಂತು ಎದುರಿಸುವ ಧೈರ್ಯವಿಲ್ಲದುದರಿಂದ ಅವುಗಳು ಹಿಂದಿನಿಂದ ದಾಳಿಯಿಡುತ್ತವೆ. ಜೊತೆಗಿರುವ ಕೀರಲು ಬಂಧಗಳು ಸೆರಗಲ್ಲಿ ಕಟ್ಟಿಕೊಂಡ ಕೆಂಡಗಳಾಗಿ ಬಿಡುವುದು ನಮಗೊದಗುವ ಪ್ರಾಪ್ತಿಯಲ್ಲದೆ ಮತ್ತೇನು? ಅಳಿಯುವುದನ್ನು ಉಳಿಸುವ ಕಾರ್ಯಕ್ಕೆ ಒದಗುವ ಮಂದಿ ಬಹಳ ಕಡಿಮೆಯೇ. ಉಳಿದರೆ ನನ್ನದುಳಿಯಲಿ ಅಳಿದರೆ ಅನ್ಯರದ್ದಳಿಯಲಿ ಎಂಬವರೇ ಅಧಿಕ. ಅದಕ್ಕೆ ಸರಿಯಾಗಿ ಸಾಥ್ ನೀಡುವ ಜನಗಳಿಗೇನೂ ಕಮ್ಮಿ ಇಲ್ಲವಲ್ಲ. ಮನೆಯ ಹಿರೀಕನಾಗಿ ಕೂಡು ಕುಟು೦ಬದಲ್ಲಿ ಜನಿಸುವುದು ಶಾಪಗ್ರಸ್ಥ ವರವಿದ್ದಂತೆ.

ಮೂರು ತಲೆಮಾರುಗಳ ವಿವರಗಳನ್ನು ಹೊತ್ತು ಹೆತ್ತ ಕನಸು 'ಕಾಲದೊಂದೆಂದೇ ಹನಿ...' ಹುಟ್ಟಾ ಹೊತ್ತುಕೊಂಡ ಬಂದವುಗಳ ಜೊತೆಗೆ ಆಡಾಡುತ್ತ ಹೆಕ್ಕಿ ಕಟ್ಟಿಕೊಂಡವುಗಳು ಬದುಕಿನ ಮೂಲ ಸೆಲೆಯಿಂದ ನಿಮ್ಮನ್ನು ವಿಮುಖವಾಗಿಸಿಲ್ಲ. ಹನಿ ಹನಿಯನ್ನೂ ದಾಖಲಿಸಿ ದಾಟಿಸಿದ ಪರಿ ಅನನ್ಯ. ಇತಿಹಾಸದ ದಾಖಲೀಕರಣದಿಂದಾಗಿ ಕಾಲದಿಂದ ಕಾಲಕ್ಕೆ ಹೊರಳುತ್ತಾ, ಮಗ್ಗುಲು ಬದಲಾಯಿಸಿದ ನಿಮ್ಮ ಅನುಭವ ಕಥನಗಳು ಮುಂದಿನ ಪೀಳಿಗೆಗೆ ಮಾದರಿ ಎಂಬ ಅನಿಸಿಕೆ ನನ್ನದು.

ಬದುಕಿನ ಅಗ್ನಿದಿವ್ಯದೊಳಗೆ ಉರಿಯುತ್ತಲೇ ಮಾಗಿ, ಬಾಗಿ ಅವಮಾನಗೊಂಡ ಜಾಗದಲ್ಲೇ ಬೆಳೆದು ನಿಂತ ವಾಮನ ಮೂರ್ತಿ ನೀವು. ಕಷ್ಟದ ಬದುಕಿನ ಹೊಳೆಯ ಪಾತ್ರವನ್ನು ಪ್ರೀತಿಯತ್ತ ತಿರುಗಿಸಿ, ಅಡವಿಯ ಮಧ್ಯ ಬಾಳನ್ನು ಕಟ್ಟಿಕೊಳ್ಳುತ್ತಾ, ಇರುವಲ್ಲಿಯೇ ಬದುಕನ್ನು ಸವೆಸಿ ಜ್ಞಾನವನ್ನು ಮತ್ತದರಿಂದ ನೆಮ್ಮದಿಯನ್ನು ಕಂಡುಕೊಂಡಿರಿ. ಅಲ್ಲದೆ ಸುಖಕ್ಕಿಂತಲೂ ನೆಮ್ಮದಿಯೇ ಮುಖ್ಯವೆಂದು ಜೀವಿಸಿ ತೋರಿದಿರಿ. ನಿಮ್ಮ ಬಾಳ ಮಣ್ಣಿನ ಗುಣ್ಣಕ್ಕೆ ಸರಿಯಾದಂತಹ, ಅದಕ್ಕೆ ಹೊಂದುವಂತಹ ಬೆಳೆಯನ್ನೇ ನೀವು ತೆಗೆದಿರಿ ಎನ್ನುವುದು ಹೆಮ್ಮೆ ಮತ್ತು ಖುಷಿಯ ವಿಚಾರ. ನಿಮ್ಮ ನಿಲುವುಗಳನ್ನು ಮೃದುಲ ಕಠೋರತೆಯಿಂದ ತೋರುವಲ್ಲಿ ತೋರಿ ಅದಕ್ಕೆ ಬದ್ಧರಾದಿರಿ. ಜೊತೆ ಜೊತೆಗೆ ಬಂಧಗಳನ್ನೂ ಅಷ್ಟೇ ವಿನಮ್ರತೆಯಿಂದ ಆಪ್ತವಾಗಿ ಕಾಪಿಟ್ಟುಕೊಂಡಿರಿ. ತಮ್ಮ ಅನುಭವದಿಂದ ತೊಟ್ಟಿಕ್ಕಿದ ಹನಿ ಹನಿಯನ್ನು ಹನಿಸಿ ಬದಲಾಗುತ್ತಲೇ ಹೋಗುವು ಪೀಳಿಗೆಯನ್ನು ಹಾನಿಯಾಗದಂತೆ ನೋಡಿಕೊಂಡ ಗರ್ವ ನಿಮ್ಮದು. ನಿಮ್ಮ ಸಂಪರ್ಕಕ್ಕೆ ಬಂದ ಅಷ್ಟೂ 'ಹನಿ'ಗಳ ಹೆಸರನ್ನು ಕಥನದಲ್ಲಿ ನಮೂದಿಸಿದ್ದನ್ನು ಓದಿದ ನನಗೆ ನಿಮ್ಮ, 'ಮೆಮೊರಿ ಚಿಪ್' ಭಯಂಕರ ಮಾರಾಯರೇ ! ಎಂದೆನಿಸಿದ್ದು ಖಂಡಿತಾ ಸುಳ್ಳಲ್ಲ.

ಇಷ್ಟೆಲ್ಲಾ ಬದುಕಿನ ಕಷ್ಟಗಳ ಮಧ್ಯೆಯೂ ನೀವು ನೀವಾಗಿಯೇ ಇರಲು ಕಾರಣ ನಿಮ್ಮೊಳಗಿರುವ ಹಾಸ್ಯ ಪ್ರಜ್ಞೆ ಎನ್ನುವುದನ್ನು ಮತ್ತೆ ಮತ್ತೆ ಹೇಳಲೇಬೇಕು. ನಿಮ್ಮ ಕಣ್ಣುಗಳಿಗೆ ಕಾಣುವ ಸೂಕ್ಷ್ಮಗಳು ಕಾವ್ಯಕ್ಕೆ ಸ್ಫೂರ್ತಿಯಾದದ್ದು; ಸಮಯ ಪ್ರಜ್ಞೆ, ಟೈಮಿಂಗ್ಸ್ ಮತ್ತು ಗಮನಿಸುವಿಕೆಯನ್ನು ತೋರಿಸುತ್ತದೆ.

'…ಹಾಳು ಹಂಪೆಯ ಲಕ್ಷಣಗಳು, ಗೈಡು ಹೇಳುವುದನ್ನು ಕೇಳಿ ಕೃಷ್ಣ ದೇವರಾಯ ಕಿಸಕ್ಕೆಂದು ನಕ್ಕಿದ್ದು, ಮಧುರೈ ದೇವಳದಲ್ಲಿ ಪೂಜೆಯ ತಯಾರಿಯಲ್ಲಿದ್ದ ಪುರೋಹಿತರ ಕುರಿತಂತೆ, ಶ್ರೀರಂಗಂ ಚ್ಯುಯಿಂಗಮ್ ಪ್ರಸಂಗ, ಪುರಾತನ ಮಠದೊಳಗಿನ ಅನೇಕ ತಿರುವುಗಳು, ಅಷ್ಟೇ ಯಾಕೆ ನಟಿ ರೇಖಾ ತನ್ನ ನಾಯಿಯನ್ನು ಹಿಡಿದುಕೊಂಡು ವಾಕಿಂಗ್ ಹೋಗುವುದೂ ಕೂಡ ನಿಮ್ಮ ಕಾವ್ಯಕ್ಕೆ ವಸ್ತುವಾಯಿತು. ನಿಮ್ಮ ತುಂಟತನ ಅದೆಷ್ಟು ಜೋರೆಂಬುದು ರವೀಶನ ಮದುವೆಯ ವರಪೂಜೆಯಂದು ತಿಳಿಯಿತು. ಇಂತಹ ತುಂಟತನಗಳು ಬರಿದೇ ಸವೆದು ಹೋದ ಬದುಕನ್ನು ನವಿರಾಗಿಸುವುದು ಮಾತ್ರವಲ್ಲ ತಮ್ಮ ಸುತ್ತಲನ್ನೂ ಜೀವಂತವಾಗಿರಿಸುತ್ತದೆ.

ಆದ್ದರಿಂದಲೇ ಅಲ್ಲವೇ ತಲೆಮಾರುಗಳನ್ನು ಲೆಕ್ಕಿಸದೆ ಎಲ್ಲರೊಂದಿಗೆ ಬೆರೆಯಲು ಎಂಭತ್ತರ ತರುಣನಿಗೆ ಸಾಧ್ಯವಾದ್ದದ್ದು! ಒಬ್ಬ ವ್ಯಕ್ತಿಯಿಂದ ಊರು ಬೆಳಗಲ್ಪಟ್ಟಿತು ಎನ್ನುವುದಕ್ಕೆ ನೀವು ನಿದರ್ಶನರಾದಿರಿ. ಸಾರಸ್ವತ ಲೋಕದೊಳಗಿನ ಭಿನ್ನತೆಯ ನಡುವೆಯೂ ತಾವು ತಾವಾಗಿಯೇ ಇದ್ದು ಗೆದ್ದು ಪ್ರಾದೇಶಿಕ ಅಸಮಾನತೆಯನ್ನು ಮೀರಲು ಸಾಧ್ಯವಾಯಿತು. ಪ್ರಸಕ್ತ ಕಾಲದ ಕನ್ನಡದ ಮನಸ್ಸುಗಳಿಗೆ ಬೇಕಿರುವುದು ಕನ್ನಡದ ಗಡಿ, ಕಾಲ, ಪ್ರದೇಶಗಳನ್ನೆಲ್ಲಾ ಒಟ್ಟಾಗಿಸಿ ಒಳಗೊಳ್ಳುವಂತೆ ಮಾಡುವ ತುರ್ತು ಮಾರ್ಗ. ಅದಕ್ಕೆ ಸೂಕ್ಶ್ಮ ಸಂವೇದನೆಯ ಮನಸ್ಸು ಇರಬೇಕಷ್ಟೇ.

ಮುಖ್ಯವಾದ ಒಂದಂಶವನ್ನು ಇಲ್ಲಿ ಗಮನಿಸಬೇಕು-ಬರೆಯುವಾಗಿನ ಸಾಹಿತ್ಯಿಕ ಭಾಷೆ ಹೇಳುವಾಗ ಬರುವುದಿಲ್ಲ. ಹೇಳುವ ಭಾಷೆ ಬೇರೆ, ಬರೆಯುವ ಭಾಷೆ ಬೇರೆ. ಇಲ್ಲಿನ ಅನುಭವ ಕಥನಕ್ಕೆ ನರೇಷನ್ ಭಾಷೆಯನ್ನು ಬಳಸಿರುವುದರಿಂದ ಅಲಂಕಾರಿಕ ಹಾಗೂ ಸುಳ್ಳಿನ ತೋರಣಗಳು ಕಾಣಿಸದಿದ್ದದ್ದು ಬಹುದೊಡ್ಡ ಲಾಭ. ಆದಷ್ಟು ಜಾಗ್ರತೆಯಿಂದ ಹೆಣೆದ ಅನುಭವ ಕಥನದಲ್ಲಿ ವೈಭವೀಕರಣ, ವರ್ಣನೆ ಎಂಬ ಅಂದ-ಚಂದಗಳ ವಗೈರೆಗಳನ್ನು ಪ್ರಜ್ಞಾಪೂರ್ವಕವಾಗಿಯೇ ಬದಿಗೆ ಸರಿಸಿರುವುದು; ಕಾಲದ ಒಂದೊಂದು ಹನಿಯ ಸೊಬಗನ್ನು ಹಾಗೂ ಅದರ ನೈಜ್ಯತೆಯನ್ನು ಹೆಚ್ಚಿಸಿದೆ ಎಂದೇ ಹೇಳಬೇಕು. ಹಾಗಾಗಿ ಚೊಕ್ಕಾಡಿಯವರು ಏನಾಗಿದ್ದಾರೋ ಅದು ಮಾತ್ರವೇ ಅಕ್ಷರ ರೂಪವನ್ನು ಪಡೆದುಕೊಂಡಿದೆಯೇ ಹೊರತು; ಹಿಗ್ಗಿಸಿ, ಕುಗ್ಗಿಸಿಕೊಂಡು ತಳೆದ ಅವತಾರ ಪುರುಷ ಅವರಾಗಲಿಲ್ಲ. ಹೀಗೇ ಓದಬೇಕೆಂದಿರದ, ಯಾವುದೇ ಅಧ್ಯಾಯವನ್ನಾದರೂ ಎತ್ತಿಕೊಳ್ಳಬಹುದಾದ ಅನುಕೂಲ ಈ ಅನುಭವ ಕಥನದ್ದು. ಹಾಗಿದ್ದೂ ನಮ್ಮ ಓದನ್ನು ಅದು ಮುದಗೊಳಿಸುತ್ತದೆ. ಅಲ್ಲಲ್ಲಿ ಕೆಲವೊಂದು ವಿಷಯವನ್ನು ಪ್ರಸ್ತಾಪಿಸಿ, "ಇದು ಮುಂದೆ ಬರಲಿದೆ…" ಎಂದು ಟ್ರೈಲರ್ ಅನ್ನು ಮಾತ್ರ ಬಿಚ್ಚಿಟ್ಟು, 'ಪಿಕ್ಚರ್ ಅಭಿ ಬಾಕಿ ಹೈ...' ಎಂಬ ಕುತೂಹಲಕ್ಕೂ ಕಾರಣವಾಗುತ್ತಾರೆ.

ಶಿಷ್ಯ ವರ್ಗಕ್ಕೆ 'ಬೇಂದ್ರೆ ಮಾಸ್ತರ', ಮೊಮ್ಮಕ್ಕಳ ಕೂಟಕ್ಕೆ 'ಬೇಂದ್ರೆ ಅಜ್ಜ'ನಾಗಿ ಈಗಾಗಲೇ ಬೇಂದ್ರೆಯವರೊಂದಿಗೆ ಬಂಧವನ್ನು ಬೆಸೆದುಕೊಂಡು ಬಿಟ್ಟಿದ್ದೇವೆ. ಪ್ರಾಯಶಃ ಬೇಂದ್ರೆಯವರು ಕಳೆದರೆ ನಮ್ಮೆದುರಿನ ಶಿಷ್ಯ ಸಮೂಹಕ್ಕೆ 'ಚೊಕ್ಕಾಡಿ ಮಾಸ್ಟ್ರು' ಪುಳ್ಳಿಗಳ ಬಳಗಕ್ಕೆ 'ಚೊಕ್ಕಾಡಿ ಅಜ್ಜ' ನಾಗಿರುವುದು ಸುಬ್ರಾಯ ಚೊಕ್ಕಾಡಿಯವರು ಮಾತ್ರ ಎಂದು ಹೇಳಬಹುದು.

ಕೈ ನೋವಿರದಿದ್ದರೆ ನಿಮ್ಮ ಬರವಣಿಗೆಯ ಲಾಲಿತ್ಯವನ್ನು ಉಣಬಹುದಿತ್ತು. ಆದರೂ ತಾವು 'ವ್ಯಾಸ' ರಾಗಿ ಅಂಜನಾ ಹೆಗಡೆ 'ಗಣಪತಿ' ಯಾಗಿ ಕೊರತೆ ಕಾಣದಂತೆ 'ಕಾಲದೊಂದೊಂದೇ ಹನಿ'ಯನ್ನು ಹನಿಸಿದ್ದೀರಿ. ಇನ್ನಷ್ಟು ಹನಿಗಳು ಚೊಕ್ಕಾಡಿಯಿಂದ ಹನಿಯುತ್ತಿರಲಿ ಎನ್ನುವ ಆಶಯ ನನ್ನದು. ಕಾನನದ ಸುಮವು ತನ್ನಷ್ಟಕ್ಕೆ ತಾನು ಬಿರಿದು ಪಸರಿಸುವ ಸುಗಂಧದಂತೆ. ಯಾರು ಕಿವಿ ಮುಚ್ಚಿದರೂ ಕಾಡ ಹಕ್ಕಿಗಿಲ್ಲ ಚಿಂತೆ ಎಂಬಂತಿರುವ 'ಒಪ್ಪ ಮಾಮ' ಅಂದರೆ ಸುಮ್ಮನೇನು!

ಈ ಅಂಕಣದ ಹಿಂದಿನ ಬರೆಹಗಳು:

ಶಾಂತ ಕಡಲೊಳು ಬೀಸಿದ ಬಿರುಗಾಳಿ

ರಂಗದ ಮೇಲಿನ ಬಣ್ಣದ ಭಾವಗಳು

ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...

ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ

ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಅನಾಮಿಕರಾಗಿ ಉಳಿದ ಮಹಾನ್ ಗಾಯಕಿಯರು...

17-04-2021 ಬೆಂಗಳೂರು

ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಎನ್ನು...

‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳ...

15-04-2021 ಬೆಂಗಳೂರು

ಸ್ವಜನ-ಸ್ವಜಾತಿ ಪಕ್ಶಪಾತಿಯ ಇಂದಿನ ‘ಜಾತಿಶ್ರೀ’ ಸ್ವಾಮೀಜಿಗಳು ಜ್ಞಾನಯೋಗಿ ತತ್ವದ ಅರ್ಥವನ್ನೇ ನಾಶ ಮಾಡುತ...

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್...

14-04-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...