ಹರಿಭಕ್ತಿ ಸಾರ ಎಂಬ ಗಿಳಿಪಾಠ

Date: 19-11-2020

Location: ಬೆಂಗಳೂರು


ಹಿರಿಯ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ವಿಶ್ಲೇಷಿಸುವ ವಿಭಿನ್ನ ಅಂಕಣ ‘ನೀರು ನೆರಳು’. ಪ್ರತೀ ತಿಂಗಳು ಪ್ರಕಟವಾಗುವ ಅಂಕಣದಲ್ಲಿ ಈ ಬಾರಿ ಕನಕದಾಸರ ಹರಿಭಕ್ತಿ ಸಾರ ಶತಕ ಕಾವ್ಯದ ಕುರಿತು ವಿವರಣಾತ್ಮಕವಾಗಿ ವಿಶ್ಲೇಷಿಸಿದ್ದಾರೆ.

ಇದೊಂದು 110 ಪದ್ಯಗಳಿರುವ ಒಂದು ಶತಕ ಕಾವ್ಯ. ಇಲ್ಲಿ ಕನಕದಾಸರು ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಇತ್ಯಾದಿಗಳಲ್ಲಿ ಇರುವ ವಿಷ್ಣು ಸಂಬಂಧಿ ಕಥನಗಳನ್ನು ಆಯ್ದು ಸರಳಗನ್ನಡದಲ್ಲಿ ನಿರೂಪಿಸಿದ್ದಾರೆ. ಕೆಲವು ಪದ್ಯಗಳಲ್ಲಿ ಆತ್ಮಚಾರಿತ್ರಿಕವಾದ ನಿರೂಪಣೆಗಳೂ ಇವೆ. ಆರಂಭದ ಹದಿನೈದು ಪದ್ಯಗಳನ್ನು ಒಳಗೊಂಡಂತೆ ಇಲ್ಲಿನ ಹಲವು ಪದ್ಯಗಳು ಹರಿನಾಮ ಸಂಕೀರ್ತನೆ ಮಾಡುವ ನಾಮಾವಳಿ ರಚನೆಗಳಾಗಿವೆ. ಇಲ್ಲಿ ಹರಿನಾಮ ಸಂಕೀರ್ತನೆಯಲ್ಲದೆ ಹರಿವಾವೆ ವರಸೆಗಳ ನಿರೂಪಣೆ, ಹರಿ ಸರ್ವೋತ್ತಮ ತತ್ವವಲ್ಲದೆ ಸೃಷ್ಟಿಮೀಮಾಂಸೆ, ಸಂಸಾರ ನಿರ್ವಚನ, ದೇಹಮೀಮಾಂಸೆ, ಜ್ಞಾನಶಾಸ್ತ್ರೀಯ ಅಥವಾ ತತ್ವಶಾಸ್ತ್ರೀಯ ರಚನೆಗಳು, ನೀತಿಶಾಸ್ತ್ರ ವಿಚಾರಗಳು ನಿರೂಪಿತವಾಗಿವೆ. ಬಹುಜನ್ಮ, ಮುಕ್ತಿ, ಕರ್ಮಫಲ, ಲೀಲೆ, ಮಾಯೆ, ಜಗನ್ನಾಟಕ, ಇತ್ಯಾದಿಗಳ ಮಂಡನೆ ಮತ್ತು ಭಾಗವತ ಭಕ್ತಿ ಬದುಕಿನ ನೀತಿಗಳನ್ನು ಹೇಳುವ ನೀತಿಶಾಸ್ತ್ರ ಎರಡೂ ಆಗಿರುವ ಕೃತಿಯಿದು. ಹಾಗಾಗಿ ಇಲ್ಲಿ ಹಲವು ಮಾದರಿಯ ಪದ್ಯಗಳಿವೆ. ಈ ಎಲ್ಲ ಮಾದರಿಗಳಲ್ಲಿ ಮುಗ್ಧ ಭಕ್ತರ ಬೆರಗು ಮತ್ತು ನ್ಯಾಯಾನ್ಯಾಯ ವಿವೇಕಗಳನ್ನು ದಾಟಿದ ಹರಿಭಕ್ತಿಯ ಭಾವತೀವ್ರತೆ ವ್ಯಕ್ತವಾಗಿದೆ.

ಭಾಗವತ ತತ್ವ ಇಲ್ಲಿ ಕಿಂಚಿತ್ತಾಗಿ ಇರುವುದಾದರೂ ‘ಅತ್ಯತಿಷ್ಠದ್ದಶಾಂಗುಲ’ ತತ್ವವೆ ಇಲ್ಲಿ ದೊಡ್ಡದು. ‘ಹರಿಸರ್ವೋತ್ತಮ’ ಎಂಬ ಮಾಧ್ವತತ್ವವನ್ನು ಪ್ರಸಾರ ಮಾಡುವ ಗುರಿ ಇಲ್ಲಿದೆ. ಬ್ರಹ್ಮ, ರುದ್ರ, ಯಮ ಈ ಮೂವರಿಗಿಂತಲು (ಪದ್ಯ-71, 73) ಉದ್ದಂಡನಾದವನು (ಬಲಶಾಲಿ) ಮತ್ತು ಮಿಗಿಲಾದವನು ವಿಷ್ಣು. ಈತ ಈ ಲೋಕದ ಜ್ಞಾನದ ದೇವತೆಯಾದ ಶಾರದೆ ಮತ್ತು ಸಂಪತ್ತಿನ ದೇವತೆಯಾದ ಲಕ್ಷ್ಮಿ ಇವರಿಗೂ ಮಿಗಿಲಾದವನು. ಹೀಗೆ ಈ ಜಗತ್ತಿನಲ್ಲೆಲ್ಲ ಆತ್ಯಂತಿಕವಾದ ಶಕ್ತಿ ಒಂದಿದೆ. ಅದೇ ವಿಷ್ಣು ಎಂಬ ನಂಬಿಕೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಹರಿಭಕ್ತಿಸಾರ ಮಾಡುತ್ತದೆ. ಇಲ್ಲಿರುವ ಎಲ್ಲ ವಿಚಾರಗಳನ್ನು ಕಣ್ಣು ಮುಚ್ಚಿ ಭಕ್ತಿಯಿಂದ ನಂಬಿ ಬಾಳುವ ಕಾಲ ಇದಲ್ಲ. ಆದ್ದರಿಂದ ನಮ್ಮ ಜ್ಞಾನರಚನೆಯ ಸಾಧ್ಯತೆಗಳನ್ನು ಅವಲೋಕಿಸಿಕೊಳ್ಳಲು ಬಳಸಬಹುದಾದ ಒಂದು ಪಠ್ಯವಾಗಿ ನಾವಿಂದು ಇದನ್ನು ಪರಿಶೀಲಿಸಬಹುದಾಗಿದೆ.

ಇಲ್ಲಿ ಕವಿತ್ವ ಅಲ್ಲಲ್ಲಿ ಬೆಳಗಿದೆ. ತಾಯನ್ನು ಅಗಲಿದ ಶಿಶುವಿನಂತೆ ಬಾಯಿ ಬಿಡುವಂತಾಯ್ತೆ (94), ಗಿಳಿಯಮರಿಯನು ತಂದು ಪಂಜರದಲ್ಲಿ ಬಂಧಿಸಿ (20), ಬೀಜವೃಕ್ಷನ್ಯಾಯ, ಭ್ರಮರ ಕೀಟನ್ಯಾಯ, ತಾಯ ಮೊಲೆಹಾಲ ಬಿಂದುಗಳ ಲೆಕ್ಕವಿಡಬಹುದೇ? ತಾಯನಗಲಿದ ತನಯ ರಾಧೇಯ ಇತ್ಯಾದಿ ಇತ್ಯಾದಿ ಉಪಮೆ, ರೂಪಕಗಳ ಬಳಕೆಯಲ್ಲಿ ಮತ್ತು ಪ್ರಾಸ, ನಾದ, ಲಯ, ಭಾವತೀವ್ರವಾದ ನುಡಿ-ನುಡಿಗಟ್ಟುಗಳ ಬಳಕೆ ಹಾಗೂ ಗೇಯ ಚೌಕಟ್ಟು ಇವೆಲ್ಲವುಗಳ ದೃಷ್ಟಿಯಿಂದ ಇದೊಂದು ಅಭ್ಯಾಸಯೋಗ್ಯವಾದ ಕೃತಿ. ಗಣನೆಯಿಲ್ಲದ ಜನನಿಯರು ಮೊಲೆಯುಣಿಸಲು (62), ದೀನ ನಾನು ಸಮಸ್ತ ಲೋಕಕೆ ದಾನಿ ನೀನು (49), ಸಿರಿಯು ಸಂಪತ್ತಿನಲಿ ನೀ ಮೈಮರೆದು (48), ಗಿಳಿಯ ಮರಿಯನು ತಂದು ಪಂಜರದೊಳಗೆ ಪೋಷಿಸಿ (20), ಹೀಗೆ ಇಲ್ಲಿ ಹಲವು ಪದ್ಯಗಳು ನೀತಿಶಾಸ್ತ್ರವನ್ನೆ ಆಧರಿಸಿ ನಿರೂಪಣೆಗೊಂಡಿವೆ. ಹಾಗಾಗಿಯೇ ಕನಕದಾಸ ‘ನೀತಿಕೋವಿದರು ಇದನು ಆಲಿಸುವುದು’ ಎಂದು ಹೇಳಿದ್ದಾನೆ. ಆದರೂ ಈ ಎಲ್ಲ ಪದ್ಯಗಳಲ್ಲಿರುವ ನೀತಿಯು ಅಂತಿಮವಾಗಿ ಚಲಿಸುವುದು ಹರಿಸರ್ವೋತ್ತಮ ತತ್ವದ ಗುರಿಗೆ. ಹಾಗಾಗಿ ಈ ಅಂಕಿತ ಮತ್ತು ಗುರಿ ಇವುಗಳಿಂದ ಈ ನೀತಿ ವಾಕ್ಯಗಳನ್ನು ಬಿಡುಗಡೆಗೊಳಿಸಿದರೆ. ಇವು ಸ್ವಲ್ಪ ಕಾವ್ಯಾತ್ಮಕವಾದ ವೈಚಾರಿಕ ಆಕೃತಿಗಳಾಗಿ ನಮಗೆ ಗೋಚರಿಸುತ್ತವೆ. ಕಾವ್ಯದ ಛಂದಸ್ಸಿನಿಂದ ಕಾವ್ಯವನ್ನು ಬಿಡುಗಡೆ ಮಾಡಿದರೆ ಹೇಗೆ ಕಾವ್ಯದ ಅರ್ಥದ ಸುಳಿವುಗಳನ್ನು ಕಾಣಬಹುದೋ ಹಾಗೆ ಇಲ್ಲಿನ ಕೆಲವು ನೀತಿಪದ್ಯಗಳನ್ನು ಜಡ ವೈಷ್ಣವ ನಂಬಿಕೆಗಳಿಂದ ಬಿಡುಗಡೆಗೊಳಿಸಿದರೆ ಸ್ವಲ್ಪ ಮಟ್ಟಿಗಿನ ವೈಚಾರಿಕತೆಯನ್ನು ಕಾಣಲು ಸಾಧ್ಯ ಆದೀತು. ಸತ್ತವರಿಗಳಲೇಕೆ? (92), ಎಂಜಲೆಂಜಲು ಎಂಬರಾ ನುಡಿ ಎಂಜಲಲ್ಲವೆ? (101), ಬೀಜ ವೃಕ್ಷದೊಳಾಯ್ತು (89), ಕೇಳುವುದು ಕಡುಕಷ್ಟ, ಕಷ್ಟದ ಬಾಳುವೆಯ ಬದುಕೇನು? (77), ನೀರ ಮೇಲಣ ಗುಳ್ಳೆಯಂದದಿ (75), ಕೋಪವೆಂಬುದು ತನುವಿನಲಿ ನೆರೆಪಾಪ (68), ಇಂತಹ ಕೆಲ ಪದ್ಯಗಳನ್ನು ಹಾಗೆ ಓದುವುದರಿಂದ ಇಂದಿಗೆ ಅಗತ್ಯವಾದ ವೈಚಾರಿಕತೆಯನ್ನು ಸ್ವಲ್ಪ ಕಾಣಲು ಸಾಧ್ಯ ಆಗಬಹುದು.

ಇಲ್ಲಿ ನನಗೆ ಇಷ್ಟವಾದ ಪದ್ಯಗಳು ಒಂದಿಪ್ಪತ್ತು-ಇಪ್ಪತ್ಮೂರು ಮಾತ್ರ 49, 50, 55, 62, 68, 72, 75, 76, 77, 78, 80, 83, 85, 86, 88, 89, 92, 93, 95, 98, 99, 100, 101, ಅವುಗಳಲ್ಲಿ 12 ಪದ್ಯಗಳು ದೇಹಮಿಮಾಂಸೆ ಕುರಿತ ಪದ್ಯಗಳೇ ಆಗಿವೆ. ಈ ಹನ್ನೆರಡು ಪದ್ಯಗಳನ್ನು ಹೊರತುಪಡಿಸಿ ಇನ್ನುಳಿದ ಹನ್ನೊಂದು ಪದ್ಯಗಳನ್ನು ಗಮನಿಸಿದರೆ ಅವುಗಳು ಸೋಮೇಶ್ವರನ ನೀತಿಶತಕವನ್ನು ನೆನಪಿಸುತ್ತವೆ. ಧರ್ಮ, ಪಾಂಥಿಕತೆ, ದೈವಿಕತೆಗಳನ್ನು ಮೀರಿದ ನೈತಿಕತೆ ನಮ್ಮ ಪುರಾಣಗಳಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಕನಕನ ನೀತಿಶಾಸ್ತ್ರವೂ ಹಾಗೆಯೇ. ಅದು ವೈಷ್ಣವ ಭಕ್ತಿನೀತಿ. ಈ ಪಠ್ಯದ ಕೆಲವು ಪದ್ಯಗಳು ಉದಾಹರಣೆಗೆ 38, 39ನೇ ಪದ್ಯಗಳನ್ನು ನೋಡಿದರೆ; ಕನಕದಾಸ ಹರಿಯನ್ನು ಹೊಗಳುತ್ತಿದ್ದಾನೋ, ಬೈಯುತ್ತಿದ್ದಾನೋ ಆ ದೇವರಿಗೇ ಗೊತ್ತಾಗಬೇಕು. ಭಕ್ತರಾದವರೆ ನಿರೂಪಿಸಿರುವ ದೇವರ ಪ್ರತಿಯೊಂದು ಅವತಾರವೂ, ಪ್ರತಿಯೊಂದು ಮಂಗಾಟವೂ ಭಕ್ತರಿಗೆ ಪವಿತ್ರ ಮತ್ತು ನಿಗೂಢ ಲೀಲೆ. ಕೆಲವೊಮ್ಮೆ ವಿಮರ್ಶಾತ್ಮಕ ಮತ್ತು ಆತ್ಮ ವಿಮರ್ಶಾತ್ಮಕ ಎಚ್ಚರವನ್ನೆ ಇಂಥಹ ಭಕ್ತಿ ಕೊಂದುಬಿಡಬಲ್ಲುದು. ಇದನ್ನು ತಿಳಿದೇ ನಾವು ಹರಿಭಕ್ತಿ ಸಾರವನ್ನು ಓದಬೇಕು. ಏಕದೈವಭಕ್ತಿ, ನಿಷ್ಠೆಗಳು ಏಕರಾಜ, ಏಕಪಕ್ಷ ಭಕ್ತಿ, ನಿಷ್ಠೆಗಳು ಹೇಗೆ ಅಪಾಯಕಾರಿಯೂ ಆಗಬಲ್ಲುವು ಎಂಬುದನ್ನು ತಿಳಿಯಲೂ ಹರಿಭಕ್ತಿಸಾರವನ್ನು ನಾವಿಂದು ಓದಬಹುದು. ಕನಕದಾಸರ ಉದ್ದೇಶ ಏನಿತ್ತೊ ಅದನ್ನು ಶವ ಪರೀಕ್ಷೆ ಮಾಡುವುದು ತರವಲ್ಲ. ಆತನ ಪಠ್ಯ ಇಂದು ನಮ್ಮ ಕಣ್ಣೆದುರು ಇದೆ. ಅದನ್ನು ಎಲ್ಲರೂ ಒಂದೇ ರೀತಿ ಓದಬೇಕು ಎಂದೇನಿಲ್ಲ; ಭಕ್ತರು ಭಕ್ತಿಗೂ, ‘ಮುಕ್ತಿ’ಗೂ; ಭವಿಗಳು ವಿವೇಕಕ್ಕೂ ಓದಿಕೊಳ್ಳಬಹುದು. ಇದು ಪಠ್ಯದ ಶಕ್ತಿ-ಮಿತಿ ಹೇಗೋ ಹಾಗೇ ಓದುಗರ ಶಕ್ತಿ-ಮಿತಿ ಕೂಡ.

ಪುರಾಣೋ-ಚಾರಿತ್ರಿಕ ತಿಳುವಳಿಕೆ ಇಲ್ಲದವರು; ಚರಿತೆ, ಚಾರಿತ್ರ್ಯಗಳ ಅರಿವು ಇಲ್ಲದವರು ಇದನ್ನು ಸುಲಭವಾಗಿ ಅರಿತುಕೊಳ್ಳಲು, ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಕನಕದಾಸನ ಪುರಾಣಪಾಂಡಿತ್ಯ, ಶಾಸ್ತ್ರಪಾಂಡಿತ್ಯ ಇಲ್ಲಿ ಎದ್ದು ಕಾಣುತ್ತದೆ. ಇದರ ಒಂದೊಂದು ಪದ್ಯಗಳನ್ನೆ ಭಕ್ತಿ-ಪ್ರವಚನಕಾರರು ಗಂಟೆಗಟ್ಟಲೆ ವ್ಯಾಖ್ಯಾನಿಸಬಲ್ಲರು. ಜ್ಞಾನಮಾರ್ಗ-ಭಕ್ತಿಮಾರ್ಗಗಳ ಸಂಯೋಗ ಇಲ್ಲಿದೆ. ಯೋಗಮಾರ್ಗದ ತಿಳಿವೂ ಅಲ್ಲಲ್ಲಿ ಇರುವುದುಂಟು. ಇದೊಂದು ಕೇಳುಕಾವ್ಯ; ಪ್ರವಚನ, ಪಠಣ, ಪಾರಾಯಣ ಹೀಗೆ ಹಲವು ನಿಯೋಗಗಳಿಗೆ ಇದು ನಿರಂತರ ಗುರಿಯಾಗುತ್ತ ಬಂದಿದೆ. ವೈಷ್ಣವ ಭಕ್ತರು ಇದರ ಉದ್ದೇಶಿತ ಕೇಳುಗರು. ಅದರೂ ಇದು ಹಲವು ಸಮಾಜಗಳಲ್ಲಿ ಪ್ರದರ್ಶನ ಕಲೆಯಾಗಿ, ಪುರಾಣ ಪುಣ್ಯಶ್ರವಣ ಪಠ್ಯವಾಗಿ, ದಾಸಯ್ಯಗಳ ತೋತರಣೆ ಪಠ್ಯವಾಗಿ, ಪೂಜೆ-ವ್ರತ-ನೇಮಗಳಲ್ಲಿ ಆಚರಣೆ ಹಾಡಾಗಿ ಹೀಗೆ ಹಲವು ರೀತಿಯ ಬಳಕೆಗೂ ಗುರಿಯಾಗುತ್ತ ಬಂದಿದೆ. ಹಾಗಾಗಿ ಈ ಪಠ್ಯದ ವ್ಯಾಪ್ತಿ ದೊಡ್ಡದು. ಆಚಾರಗಳನ್ನು ಕಟ್ಟಿಕೊಡುವುದರಲ್ಲಿ ನಮ್ಮ ದೇಶ ಯಾವತ್ತು ಹಿಂದೆ ಬಿದ್ದಿಲ್ಲ. ಪ್ರತಿಯೊಂದು ಕಾಲವೂ ತನ್ನದೇ ಆದ ಆಚಾರಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡುತ್ತ ಬಂದಿದೆ. ಆಚಾರವನ್ನೆ ಮುಂದು ಮಾಡಿ ವಿಚಾರ ಮರೆಯುವುದು; ತಮ್ಮದೇ ವಿಚಾರ ನೆಲೆಗೊಳಿಸಲಿಕ್ಕಾಗಿ ಆಚಾರ ಚಾಲ್ತಿಗೆ ತರುವುದು ಎರಡೂ ನಮ್ಮಲ್ಲಿ ನಡೆಯುತ್ತ ಬಂದಿವೆ. ಇಂದಿಗೆ ಬೇಕಾದ ವಿಚಾರ ಇಲ್ಲಿ ಕಡಿಮೆಯಿದೆ. ಭಕ್ತಿಯ ಆಚಾರ ಹೆಚ್ಚಾಗಿದೆ. ಜನರನ್ನು ಕುರುಡು ಭಕ್ತರನ್ನಾಗಿ ತಯಾರು ಮಾಡುವುದು ಇಂತಹ ಪಠ್ಯಗಳ ಉದ್ದೇಶ.

ರಾಮಧಾನ್ಯ ಚರಿತೆಯಂತಹ ಕಾವ್ಯಕೃತಿ ಬರೆದ ಕನಕದಾಸರೇ, ತತ್ವಪದಗಳನ್ನು ಬರೆದ ಕನಕದಾಸರೇ, ಹರಿಭಕ್ತಿ ಸಾರವನ್ನು ಬರೆದಿದ್ದಾರೆ. ಬೇರೆ ಬೇರೆ ಬಗೆಯ ಸಹೃದಯ ದ್ವೀಪಗಳಿಗೆಲ್ಲ ತಲುಪುವ ಉದ್ದೇಶದಿಂದ ಹೀಗೆ ಹಲಬಗೆಯ, ರಚನೆಗಳನ್ನು ಕನಕದಾಸರು ಮಾಡಿರಬಹುದು. ಬೇಲೂರಿನಲ್ಲಿ ವೈಕುಂಠದಾಸರ ಸಾಹಚರ್ಯದಲ್ಲಿ ಇದ್ದಾಗ ಕನಕದಾಸರು ಹರಿಭಕ್ತಿ ಸಾರವನ್ನು ಬರೆದಂತೆ ಪ್ರತೀತಿಯಿದೆ. ಸುರಪುರ ನಿಲಯ ಚೆನ್ನಿಗರಾಯ, ಸುರಪುರಾಧಿಪ ಎಂಬ ಇಲ್ಲಿನ ಪ್ರಯೋಗಗಳೂ ಇದಕ್ಕೆ ಪುಷ್ಠಿ ನೀಡುತ್ತವೆ.

ಸಂಸ್ಕೃತ-ಕನ್ನಡ ನುಡಿಬಳಕೆಯ ನಡುವಿನ ಸಂಘರ್ಷ, ಎಲ್ಲ ಶಕ್ತಿ ಕೇಂದ್ರಗಳು ಮತ್ತು ಭಕ್ತಿಯ ನಡುವಿನ ಸಂಘರ್ಷ; ಪಾಂಡಿತ್ಯ ಮತ್ತು ಜನಮುಖತೆಗಳ ನಡುವಿನ ಸಂಘರ್ಷ, ದೇಹಮೋಹ ಮತ್ತು ಬಿಡುಗಡೆಯ ನಡುವಿನ ಸಂಘರ್ಷ ಹೀಗೆ ಹಲವು ಸಂಘರ್ಷಗಳು ಇಲ್ಲಿವೆ. ಹಲವಾರು ಕಡೆ ಕನಕ ಪುರೋಹಿತಶಾಹಿ ಮೌಲ್ಯಗಳನ್ನು, ಹಳೆಯ ತಿಳಿವುಗಳನ್ನು, ಪುರೋಹಿತಶಾಹಿ ಜೀವನ ಕ್ರಮಗಳನ್ನು ಪ್ರತಿಪಾದಿಸುತ್ತಾನೆ ಎಂಬುದು ನಿಜ. ಹೊಟ್ಟು, ಬೂಸದ ಜೊತೆ ಚಿನ್ನ ಬೆಳ್ಳಿಗಳನ್ನು ಈತ ಬೆರೆಸಿದ್ದಾನೆ. ನಾವು ಹಸನು ಮಾಡಿಕೊಂಡು ನಮಗೇನು ಬೇಕೋ ಅದನ್ನು ತೆಗೆದುಕೊಳ್ಳಬೇಕಷ್ಟೇ. ಇನ್ನೊಂದು ವಿಚಾರವನ್ನು ನಾವಿಲ್ಲಿ ಗಮನಿಸಬೇಕು. ಈ ಭಕ್ತಿಸಾರದಲ್ಲಿ, ಭಕ್ತಿ ಸಾಗರದಲ್ಲಿ ಹೆಣ್ಣಿನ ಮುಕ್ತಿಯ ವಿಚಾರವಿಲ್ಲ. ಪರುಷಮಯವಾದ ನಿರೂಪಣೆಯಿದು. ಇಲ್ಲಿನ ಎಲ್ಲ ಮಾತುಗಳೂ ಹೆಣ್ಣಿಗೂ ಅನ್ವಯಿಸುತ್ತವೋ ಎಂದರೆ ಇಲ್ಲ.

ಇಲ್ಲಿನ ಬಹುಪಾಲು ರಚನೆಗಳು ವಾವೆವರಸೆಯ ರಚನೆಗಳು. ಹರಿಯ ‘ದಶಾವತಾರ’ಗಳಲ್ಲಿ; ಹತ್ತು ಹಲವು ಪವಾಡ ಪ್ರಸಂಗಗಳಲ್ಲಿ ಹೇಗೆ ಹರಿಯು ಹಲವಾರು ಸಂಬಂಧಗಳನ್ನು ಪಡೆದ; ಮತ್ತು ಅವುಗಳಲ್ಲಿ ಮೇಲ್ನೋಟಕ್ಕೆ ಹೇಗೆ ಗೋಜಲುಗಳು ಕಾಣುತ್ತವೆ ಎಂಬುದನ್ನು ಈ ರಚನೆಗಳು ತಿಳಿಸುತ್ತವೆ. ಆ ಮೂಲಕ ಹರಿಯ ಪ್ರತಿಯೊಂದು ನಡೆಯನ್ನು ‘ಲೀಲೆ’ ಎಂದೇ ಇವು ಬಿಂಬಿಸುತ್ತವೆ. ಹರಿಯು ತನ್ನ ಮಗನನ್ನೆ ಕೊಂದ, ತನ್ನ ಮಗಳನ್ನೆ ಮದುವೆಯಾದ... ಇತ್ಯಾದಿ ವರಸೆಗಳ ಮೂಲಕ ಹರಿಯನ್ನು ನಿಗೂಢೀಕರಿಸುವ; ಹಲವು ಕಾಲದೇಶಗಳನ್ನು ಕಲಸುವ; ಒಳಿತು ಕೆಡುಕುಗಳಿಗೂ ಹರಿಯು ಅತೀತನೆಂದು ಬಿಂಬಿಸುವ ಕೆಲಸಗಳನ್ನು ಇವು ಮಾಡುತ್ತವೆ. ಚರಿತ್ರೆಯು ತನ್ನ ಕಾಲದ ಕಾಲು ಮುರಿದುಕೊಂಡು ಪುರಾಣವಾಗುವುದು ಎಂದರೆ ಇದೇ. ಇಲ್ಲಿನ ಹಲವಾರು ರಚನೆಗಳು ದೇವ-ಭಕ್ತ ಸಂವಾದ ಧಾಟಿಯಲ್ಲಿವೆ. ಓದುಗನು ಹರಿಯ ಜೊತೆ ನೇರವಾಗಿ ಸಂಭಾಷಣೆ ಮಾಡುವ ಧಾಟಿಯಲ್ಲಿ ಇರುವ ಇವು ಹರಿಯ ಸ್ಮರಣೆಯ ಮಹತ್ವವನ್ನೆ ಸಾರುವ ರಚನೆಗಳಾಗಿವೆ. ‘ಬಾಗವತರಾದೆಲ್ಲರಿಗೆ ವಂದಿಸದ ಕುಜನರಿಗಿಲ್ಲ ಸದ್ಗತಿ ನೋಡ’ (47) ಎಂದೂ ಒಂದು ಕಡೆ ಕನಕ ಹೇಳಿದ್ದಾನೆ. ಆ ಕಾಲಕ್ಕೆ ವೈಷ್ಣವ (ಮಾಧ್ವ) ಬ್ರಾಹ್ಮಣರೇ ತುಂಬಿದ್ದ ದಾಸಪಂಥಕ್ಕೆ ಕನಕ, ಪುರಂದರ ಇಬ್ಬರೂ ತಳವರ್ಗದಿಂದ ಬಂದವರು. ಕನಕದಾಸ ಕ್ಷತ್ರಿಯನಾಗಿದ್ದರೂ ಜನ್ಮತಃ ಕುರಿಕಾಯುವ ಸಮುದಾಯದಿಂದ ಬಂದವನು. ಹಾಗಾಗಿ ಅವನು ದಾಸನಾದ ಮೇಲೆ ಮೇಲ್ಜಾತಿಯವರಿಂದ ಸಮಾನ ಗೌರವವನ್ನು ಪಡೆದಿರಲಾರ. ಅವಮಾನಕ್ಕೆ ಖಂಡಿತಾ ಗುರಿಯಾಗಿರುತ್ತಾನೆ. ಆ ಅನುಭವದಿಂದಲೇ ಕನಕ ಹೀಗೆ ಬರೆದಿರಬಹುದು. ಎಲ್ಲ ಜಾತಿಯವರೂ ಹರಿಭಕ್ತ ಎಂಬ ಒಂದೇ ನೆಲೆಗಟ್ಟಿನಲ್ಲಿ ಸಮಾನವಾಗಿ ಬಾಳಬಾರದೇಕೆ? ಎಂಬ ಪ್ರಶ್ನೆ ಹರಿಭಕ್ತಿಸಾರದ ಹಲವು ಪದ್ಯಗಳ ಅಂತಃಸತ್ವವಾಗಿದೆ. (ಆದರೆ ಹಲವು ಕಡೆ ಭೂಸುರರು ಎಂಬ ಪರಿಭಾಷೆಯನ್ನು ಈತ ಬಳಸುತ್ತಾನೆ!)

ಇಲ್ಲಿ ಷಟ್ಪದಗಳನ್ನು ಬಿಡಿಸಿ ಅರ್ಥ, ಭಾವಗಳ ಅನುಸಾರ ಮರುಜೋಡಿಸಿದರೆ ಅವುಗಳೆಲ್ಲ ಹರಿಭಜನೆಗಳೆ ಆದರೂ ಚೌಕಟ್ಟಿನ ದೃಷ್ಟಿಯಲ್ಲಿ ವಚನಗಳ ಹಾಗೆಯೇ ಕಾಣುತ್ತವೆ. (ಉದಾಹರಣೆಗೆ ನೋಡಿ 40, 41) ಒಂದೆರಡಲ್ಲ ಛಂದಸ್ಸನ್ನು ಸುಲಿದು ಸಾಲುಗಳನ್ನು ಮುರಿದು ಕಟ್ಟಿದರೆ ಇಲ್ಲಿನ ಎಲ್ಲ ಷಟ್ಪದಿಗಳೂ ವಚನಗಳಂತೆಯೆ ಕಾಣುತ್ತವೆ. ಚೌಕಟ್ಟಿನ ದೃಷ್ಟಿಯಿಂದ ಹರಿಭಕ್ತಿಸಾರದ ಪದ್ಯಗಳಿಗು ವಚನಚೌಕಟ್ಟಿಗು ವ್ಯತ್ಯಾಸವೆ ಇಲ್ಲ. ಆದರೆ ಹೂರಣದ ದೃಷ್ಟಿಯಿಂದ ಇವುಗಳಿಗೆ ಒಂದಕ್ಕೊಂದಕ್ಕೆ ಸಂಬಂಧವಿಲ್ಲ. ಛಂದಸ್ಸಿನ ವೇಷ ಕಳಚಿದರೆ ಅರ್ಥ ಭಾವಗಳು ಖಂಡಿತಾ ಎದ್ದು ಕಾಣುತ್ತವೆ. ಹರಿಭಕ್ತಿಸಾರವು ನಿಜವಾದ ಅರ್ಥದಲ್ಲಿ ಭಕ್ತಿತತ್ವ ಪದಗಳ ಗುಚ್ಛ; ವೈಷ್ಣವದಾಸ ನೀತಿಸಾಹಿತ್ಯ, ತತ್ವಸಾಹಿತ್ಯ.

ಛಂದಸ್ಸನ್ನು ಯಾರಾದರೂ ಒಮ್ಮೆ ಒಪ್ಪಿ ಬರೆಯತೊಡಗಿದರೆ ಆಗ ಅದರದ್ದೆ ಆದ ಆಟದ ನಿಯಮಗಳಿಗೆ ಕವಿ ಬದ್ಧ ಆಗಬೇಕಾಗುತ್ತದೆ. ಹಾಗೆ ಕನಕನೂ ಷಟ್ಪದ ಛಂದಸ್ಸಿಗೆ ಇಲ್ಲಿ ಬದ್ಧನಾಗಿ ಬರೆದಿದ್ದಾನೆ. ಕೆಲವೊಮ್ಮೆ ಆದಿಪ್ರಾಸ ಅಂತ್ಯಪ್ರಾಸಗಳನ್ನು ಪಾಲಿಸಲೇಬೇಕಾದಾಗ ಪದಗಳ ಆಯ್ಕೆಯನ್ನು ಅರ್ಥ ನಿರ್ಧರಿಸುವುದಕ್ಕಿಂತ ಪ್ರಾಸವೇ ನಿರ್ಧರಿಸುತ್ತ ಇರುತ್ತದೆ. ವಚನ ಚೌಕಟ್ಟಿಗು ಷಟ್ಪದ ರೀತಿಯ ಇನ್ನಾವುದೇ ಚೌಕಟ್ಟಿಗು ಅರ್ಥದ ನೆಲೆಯಲ್ಲಿ/ ಪದಗಳ ಆಯ್ಕೆ ಮತ್ತು ಜೋಡಣೆಯ ನೆಲೆಯಲ್ಲಿ ಇರುವ ಬಹಳ ಮುಖ್ಯವಾದ ವ್ಯತ್ಯಾಸ ಇದು. ಇಲ್ಲಿ ತಾಯನಗಲಿದ ತನಯ ರಾಧೇಯ ಅನ್ನುವುದೂ ಛಂದಸ್ಸಿನ ಆಟವೇ; ಕೊಲ್ಲ ಬಲ್ಲವನಾಗಿ ಎಂದು ಬರೆಯುವ ಕಡೆ ಕೊಲ್ಲಬಗೆದವನಾಗಿ ಎಂದು ಬರೆಯಬೇಕಾಗಿ ಬರುವುದೂ ಛಂದಸ್ಸಿನ ಆಟವೇ. ಯಾವುದಾದರೂ ಒಂದು ಛಂದಸ್ಸನ್ನು ಒಪ್ಪಿ ಬರೆಯತೊಡಗಿದಾಗ ಅದರ ಪ್ರಾಸ, ಗಣ, ಮಾತ್ರೆಯ ನಿಯಮಗಳಿಗೆ ಕವಿ ಬದ್ಧನಾಗಿ ಬರೆಯಬೇಕಾಗುತ್ತದೆ. ಅದು ಒಮ್ಮೊಮ್ಮೆ ಅನುಕೂಲವೂ ಆಗಬಹುದು, ಒಮ್ಮೊಮ್ಮೆ ನಿರ್ಬಂಧವೂ ಆಗಬಹುದು. ಈ ಎರಡೂ ಸಾಧ್ಯತೆಗಳನ್ನು ಕನಕ ಇಲ್ಲಿ ಅನುಭವಿಸಿದ್ದಾನೆ.

ಕೆಲವೊಮ್ಮೆ ಹೇಳಿದ್ದನ್ನೆ ಮತ್ತೆ ಮತ್ತೆ ಬೇರೆ ಬೇರೆ ಮಾತುಗಳಲ್ಲಿ ಕನಕ ಹೇಳುತ್ತಿದ್ದಾನೆ ಅನ್ನಿಸುತ್ತದೆ. ಕೆಲವೇ ವಿಷಯಗಳು ಇಲ್ಲಿ ಮತ್ತೆ ಮತ್ತೆ ಪುನರಾವರ್ತನೆ ಆಗಿವೆ. ಇದು ಪದ್ಯದ ಒಳರಚನೆಯ ವಿಚಾರದಲ್ಲು ನಿಜ; ಒಟ್ಟಾರೆ ಕಾವ್ಯಕೃತಿಯ ವಿಚಾರದಲ್ಲು ನಿಜ. ಅಂದರೆ ಇಲ್ಲಿ ಕನಕ ಷಟ್ಪದಿ ಮತ್ತು ಶತಕ ಎಂಬ ಎರಡು ಚೌಕಟ್ಟುಗಳನ್ನು ಆರಿಸಿಕೊಂಡಿದ್ದಾನೆ. ಈ ಚೌಕಟ್ಟುಗಳೇ ಈತನ ಕಾವ್ಯಕ್ಕೆ ಮಿತಿಗಳಾಗಿಯೂ ಕಾಡಿವೆ. 50-55 ಪದ್ಯಗಳಲ್ಲಿ ಹೇಳಬಹುದಾದ ವಿಚಾರವನ್ನು ಹೇಳಲು ಶತಕ ಬಳಸಿದರೆ ಆಗ ಹೇಳುವ ವಿಚಾರಗಳು ಪುನರಾವರ್ತನೆ ಆಗಿಯೇ ಆಗುತ್ತವೆ. ಹಾಗೆಯೇ ನಾಲ್ಕು ಸಾಲುಗಳಲ್ಲೆ ಒಂದು ಸಂಗತಿಯನ್ನು ಹೇಳಬಹುದಾದ ಕಡೆ ಷಟ್ಪದಿಯ ಪಾದ ಪೂರಣಕ್ಕೆ ಅದನ್ನೆ ಆರು ಸಾಲುಗಳಲ್ಲಿ ವಿಸ್ತರಿಸಬೇಕಾದ ಇಕ್ಕಟ್ಟೂ ಉಂಟಾಗುತ್ತದೆ. (ಉದಾ. ನೋಡಿ 96) ಅಂತಹ ಕಡೆ ಮಾತುಗಳು ಅನಗತ್ಯವಾಗಿ ಪುನರಾವರ್ತನೆ ಆಗುತ್ತವೆ. ಹರಿಭಕ್ತಿಸಾರದಲ್ಲಿ ಹೀಗಾಗಿದೆ.

ವಿಶಾಲವಾದ ನೆಲೆಗಟ್ಟಿನಲ್ಲಿ ನೋಡಿದರೆ; ಕುಟುಂಬ, ಪ್ರಭುತ್ವ, ಮಠ, ಹೀಗೆ ವ್ಯವಸ್ಥೆಯಲ್ಲಿ ಸ್ಥಾಪಿತವಾಗಿರುವ ಹಲವು ಸಾಮಾಜಿಕ ಸಂಸ್ಥೆಗಳನ್ನು ಕನಕ ಇಲ್ಲಿ ಮೀರಿದ್ದಾನೆ. ಇವುಗಳನ್ನೆಲ್ಲ ಹರಿಭಕ್ತಸಾರದಲ್ಲಿ ನಿರಾಕರಿಸುವ ಈತ ಹರಿದಾಸತ್ವದ ಒಂದು ವಿರಕ್ತ ಜೀವನಕ್ರಮವನ್ನು ಪ್ರತಿಪಾದಿಸುತ್ತಿದ್ದಾನೆ. ಇದು ಎಲ್ಲ ಲೌಕಿಕ ವ್ಯಾಮೋಹಗಳನ್ನು ಮೀರಿದ, ದೇಹದ ಹಂಗನ್ನೂ ಮೀರಿದ ಹರಿದಾಸತ್ವ. ಜನನ ಮರಣಗಳ ರೀತಿರಿವಾಜು; ಭಯ ಸಂಭ್ರಮಗಳನ್ನೆಲ್ಲ ಮೀರಿದ ಮನೋನೆಲೆ. ನನ್ನದೇ ಎಂಬ ಕುಟುಂಬ, ಜಾತಿ, ಊರು, ದೇಹ, ಭಾಷೆ, ಕಾಲಗಳಿಲ್ಲದ; ಇವೆಲ್ಲವೂ ಉಪಾದಿಗಳೆಂದು ತಿಳಿದು ಇವೆಲ್ಲವುಗಳಿಂದ ಬಿಡುಗಡೆಗೊಂಡ ಒಂದು ಭಕ್ತ ಜೀವನಕ್ರಮ. ಇದನ್ನು ಕೆಲವರು ಒಪ್ಪಬಹುದು ಕೆಲವರು ಇಂದು ಒಪ್ಪದೆ ಇರಬಹುದು. ಇದರ ಹಿಂದಿನ ತಾತ್ವಿಕತೆ ಮತ್ತು ಇಲ್ಲಿ ಪ್ರತಿಪಾದಿತವಾಗಿರುವ ವಿಚಾರಗಳು ಮತ್ತು ಇಲ್ಲಿನ ಜ್ಞಾನಕೋಶದ ಕಾರಣಕ್ಕೆ ನಾನಂತು ಇದನ್ನು ಒಪ್ಪುವುದಿಲ್ಲ.

ಹುಟ್ಟು ಸಾವಿನ ನಡುವಿನ ಬದುಕೇ ಒಂದು ಬಂಧನ, ಈ ದೇಹವೇ ಒಂದು ಬಂಧನ, ಕುಟುಂಬ ಚೌಕಟ್ಟು ಒಂದು ಬಂಧನ, ಎಂಬ ನಂಬಿಕೆಗಳನ್ನು ಪ್ರಾಥಮಿಕವಾಗಿ ಒಪ್ಪಲಾಗದು. ಇವೆಲ್ಲ ‘ಬಂಧನ’ಗಳು ವೈಷ್ಣವ ಜ್ಞಾನಲೋಕದ ಜಡ ತತ್ವಗಳ ಪಂಜರದ ಗಿಳಿ ಮಾತುಗಳು ಮಾತ್ರ. ಇಲ್ಲಿ ಕನಕನ ಕಿಂಡಿಯಲ್ಲಿ ಬಿದ್ದ ರಾಮಧಾನ್ಯ ಹರಿಭಕ್ತಿ ಸಾರದಲ್ಲಿ ಮುಳುಗಿ ಕೊಳೆತಿರುವುದು ಮಾತ್ರ ನಿಜ. ನಿತ್ಯ ನಿರಂತರ ಚಲಿಸುವ ಚರಿತ್ರೆಯನ್ನು ಚಲನೆಯಿಲ್ಲದ ಹರಿಚರಿತೆಯಾಗಿ ದಶಾವತಾರ-ಶತಾವತಾರಗಳ ಮೂಲಕ ಮಾಡ ಹೊರಟ ವಿಷ್ಣುಪಂಥೀಯರ ಹುನ್ನಾರವನ್ನು ಇಲ್ಲಿ ಹರಿಭಕ್ತಿಸಾರದಲ್ಲಿ ಕುರುಡಾಗಿ ಪುನರಾವರ್ತನೆ ಮಾಡಲಾಗಿದೆ. ಈ ದೃಷ್ಟಿಯಲ್ಲಿ 105ನೆ ಪದ್ಯದಲ್ಲಿ ಇಲ್ಲಿ ಬಳಕೆಯಾಗಿರುವ ‘ಚಲನೆಯಿಲ್ಲದ ಚರಿತೆ’ ಮಾತು ಬಹಳ ಮಾರ್ಮಿಕವಾದದ್ದು. (ಇಲ್ಲಿ ನಿರೂಪಣೆ ಆಗಿರುವ ಹರಿಚರಿತೆಗೆ ನಿಜವಾಗಿಯೂ ಚಲನೆಯೆ ಇಲ್ಲದಾಗಿದೆ) ಶತಾಯುಧ ಬೀಸಿದ ಆಯುಧ ಮರಳಿ ಶತಾಯುಧನಿಗೇ ಬಡಿಯುವ ಹಾಗೆ ಈ ಮಾತು ಕಾವ್ಯ ನಿರೂಪಕನಿಗೇ ಬಡಿಯುತ್ತದೆ.

ನಿಜವಾಗಿಯೂ ಶತಾಯುಧನು ವೈರಿಯ ಮೇಲೆ ಬೀಸಿದ ಆಯುಧ (ಪದ್ಯ 35) ಅವನಿಗೇ ಮರಳಿ ಬಂದು ಬಡಿದು ಆತ ಸಾಯುವುದು ಒಂದು ಕಾವ್ಯರೂಪಕ. ಇಂತಹ ಕಾವ್ಯರೂಪಕಗಳನ್ನು ಹೊಸದಾಗಿ ಸೃಷ್ಟಿಸಬಲ್ಲ ಶಕ್ತಿ ಇರುವ ಕವಿಯೊಬ್ಬ ಈಗಾಗಲೆ ಇರುವ ಕಾವ್ಯರೂಪಕಗಳನ್ನು ಲೀಲೆ ಎಂದು ಗಿಳಿಪಾಠ ಒಪ್ಪಿಸಿದರೆ ಏನೆನ್ನಬೇಕು? ನಿಜವಾಗಿಯೂ ಇದನ್ನು ವೈಷ್ಣವ ಜಡ ಜ್ಞಾನರಾಜಕಾರಣದ ಬಲಿಪಶುತನ ಎನ್ನದೆ ಗತ್ಯಂತರವಿಲ್ಲ. ಪೂರ್ವಜನ್ಮದ ಕರ್ಮಫಲ ತತ್ವವನ್ನು ಅಪುರೂಪಕ್ಕೆ ಎಂಬಂತೆ ನಿರಾಕರಿಸುವ ಕವಿಯು (ಪದ್ಯ 58) ಮರಳಿ ಅದನ್ನು ವಿಷ್ಣುಕೃಪೆ ಎನ್ನುವುದು; ಇಡೀ ಜಗತ್ತಿನ ಆಗುಹೋಗುಗಳನ್ನು ಸೂತ್ರದ ಗೊಂಬೆಗಳ ಆಟ ಎನ್ನುವುದು, ಆ ಆಟದ ಸೂತ್ರಧಾರಿ ವಿಷ್ಣು ಎನ್ನುವುದು (69, 84); ಹುಟ್ಟಿನ ಮೂಲವನ್ನು ನಿರಾಕರಿಸುತ್ತ ಹೊಲಸು ಮೈಲಿಗೆಯನ್ನು ನಿರಾಕರಿಸುತ್ತಲೆ ಎಲ್ಲವನ್ನೂ ವಿಷ್ಣುವಿನ ಆಟ ಎಂದುಬಿಡುವುದು; ಈ ಎಲ್ಲವೂ ವೈಷ್ಣವ ಜ್ಞಾನರಾಜಕಾರಣದ ಬಲಿಪಶುತನವೆ.

ಪದ್ಯ 38, 39 ಎರಡೂ ಶ್ರೀಕೃಷ್ಣನ ನಿಂದಾಸ್ತುತಿಗಳು; 28-29, 40-41 ಪುನರಾವರ್ತನೆಗಳು. 60ನೇ ಪದ್ಯ ನೇರವಾಗಿ ಜನ್ಮಜನ್ಮಾಂತರಗಳನ್ನು ಹೇಳುತ್ತದೆ. ಮತ್ತು ಪರಮಾತ್ಮನ ಭಕ್ತಿಯಿಂದ ಮುಕ್ತಿ ಪಡೆಯುವ ಬಗ್ಗೆ ಹೇಳುತ್ತದೆ. ಈ ಜನ್ಮಾಂತರದ ಚಿಂತನೆ ಹಲವು ಪದ್ಯಗಳಲ್ಲಿ 61, 62, 63, 59, 57 ಮುಂದುವರಿಯುತ್ತದೆ. ಈಗಿನ ಪೋಸ್ಟ್ ಮಾಡರ್ನ್ ಕಾಲದಲ್ಲಿ ಇವೆಲ್ಲ ಕಳೆದು ಹೋದ ಜಮಾನದ ಸಂಗತಿಗಳಾಗಿ ಕಾಣುತ್ತವೆ. ಕ್ರಿಮಿಕೀಟ ಜನ್ಮಗಳು, ಪ್ರಾಣಿ ಪಕ್ಷಿ ಜನ್ಮಗಳು ಮುಗಿದ ನಂತರ ಮಾನವ ಜನ್ಮ ಬರುತ್ತದೆ; ಹಾಗೆ ಮಾನವ ಜನ್ಮ ಬಂದಾಗಲೇ ವಿಷ್ಣು ಭಕ್ತಿಯಲ್ಲಿ ಈ ದೇಹ ಮನಸ್ಸುಗಳನ್ನು ತೊಡಗಿಸಿ ಮುಕ್ತಿ ಪಡೆದುಬಿಡಬೇಕು ಎಂಬಿತ್ಯಾದಿ (ಪದ್ಯ-57) ವೈದಿಕ ನಂಬಿಕೆಗಳ ಗಿಳಿ ಪಾಠವನ್ನು ಇಲ್ಲಿನ ಹಲವು ಪದ್ಯಗಳಲ್ಲಿ ಒಪ್ಪಿಸಲಾಗಿದೆ.

ವಿಷ್ಣು, ಬ್ರಹ್ಮ, ರುದ್ರ ಈ ಮೂವರೂ ನಮ್ಮ ಮನೋಕೋಶದ ಒಳಗೆ ಈ ಲೋಕದ ಸೃಷ್ಟಿ, ಸ್ಥಿತಿ, ಲಯ ಕಾರ್ಯಗಳನ್ನು ಮಾಡಬಲ್ಲವರು ಎಂದು ಸ್ಥಾಪಿತ ಆಗಿದ್ದಾರೆ. ಗೊಳ್ಳು. ಯಾವ ಸೃಷ್ಟಿಕರ್ತನೂ ಲಯಕರ್ತನೂ ಸ್ಥಿತಿಕರ್ತನೂ ಇಲ್ಲ ಎಂಬುದು ಈ ವಿಜ್ಞಾನ ಯುಗದಲ್ಲಿ ನಾವೆಲ್ಲ ಬಲ್ಲ ಸಂಗತಿ. (ಆದರೆ ನಾವು ಕಾಣಬಲ್ಲ ಮತ್ತು ಕಾಣಲಾಗದ ಹಲವು ರಿಮೋಟ್ ಕಂಟ್ರೋಲುಗಳು ಇಲ್ಲಿವೆ ಎಂಬುದು ಮಾತ್ರ ನಿಜ) ತ್ರಿಮೂರ್ತಿಗಳ ಜೊತೆಗೆ ಈ ಲೋಕದಿಂದ ಜೀವ ನಿರ್ಗಮಿಸಲು ಕಾರಣವಾಗುವ ಮತ್ತು ನಿರ್ಗಮಿಸಿದಾಗ ಮಾಡಿದ ಪಾಪಕರ್ಮಾದಿಗಳ ಲೆಕ್ಕಕ್ಕೆ ಅನುಗುಣವಾಗಿ ಶಿಕ್ಷೆ ನೀಡುವ ಯಮ ನಾಲ್ಕನೆ ನಿರ್ಣಾಯಕ ಶಕ್ತಿಯಾಗಿ ನಮ್ಮ ನಂಬಿಕೆಯ ಲೋಕದಲ್ಲಿ ನೆಲೆಸಿದ್ದಾನೆ. 14 ಲೋಕಗಳಿವೆಯಂತೆ, ನಾವು ನಮ್ಮ ನಮ್ಮ ಕರ್ಮಾನುಸಾರ ಸ್ವರ್ಗಕ್ಕೊ ನರಕಕ್ಕೊ ಹೋಗುತ್ತೇವಂತೆ! ನಮ್ಮ ಒಬ್ಬೊಬ್ಬರ ಮತ್ತು ಸಮಷ್ಠಿ ಜನಮಾನಸದ ಜ್ಞಾನಕೋಶ ಇಂತಹ ನೂರಾರು-ಸಾವಿರಾರು ವರ್ಷಗಳ ಗಿಳಿಪಾಠಗಳಿಂದ ಜಡವಾಗಿಬಿಟ್ಟಿದೆ. ಇದನ್ನು ಮತ್ತಷ್ಟು ಕಲ್ಲು ಬಂಡೆಯ ಹಾಗೆ ಜಡವಾಗಿ ಮಾಡುವ ಕೆಲಸವನ್ನು ಹರಿಭಕ್ತಿಸಾರ ಮಾಡುತ್ತದೆ. ಮಾಡುತ್ತ ಬಂದಿದೆ. ಮುಗ್ಧ ಭಕ್ತ ಓದುಗರ ಮನಸ್ಸಿನಲ್ಲಿ ಮುಂದೆಯು ಇದು ಜಡತ್ವವನ್ನು ಉಂಟುಮಾಡುತ್ತಾ ಇರುತ್ತದೆ. ಆದರೆ ವೈಚಾರಿಕರಿಗೆ ಈ ವೈಷ್ಣವ ‘ಲೋಕಾಕಾರ’ ಕಥನ ಇಂದು ಔಟ್‍ಡೇಟೆಡ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕೇಳಿಕೆ ಮತ್ತು ಭಕ್ತಿ ಪ್ರವಚನಗಳಿಗೆ ನಿರಂತರ ಗುರಿಯಾಗುವಾಗೆಲ್ಲ ಈ ಕಾವ್ಯ ಜನಮಾನಸದ ಜ್ಞಾನಕೋಶವನ್ನು ದೈವ ನಿಯಾಮಕ ಆಗಿಸುವ ಕೆಲಸವನ್ನು ನಿರಂತರ ಮಾಡಬಲ್ಲದು. ಅಂತು ಭಕ್ತಿ ಸಾಹಿತ್ಯದ ಅನುಸಂಧಾನದಲ್ಲಿ ದೈವತ ಚಿಂತನೆಯಿಂದ ಬಿಡುಗಡೆ ಮಾತ್ರ ಇಲ್ಲ. ನಮ್ಮ ಜ್ಞಾನ ಮೀಮಾಂಸೆ, ತರ್ಕ, ವಿವೇಚನೆ, ವಸ್ತುನಿಷ್ಠತೆ, ವೈಜ್ಞಾನಿಕತೆಗಳನ್ನೆಲ್ಲ ನುಂಗಿಹಾಕಿರುವ ಇತಿಹಾಸ ಇಂತಹ ಭಕ್ತಿಸಾಹಿತ್ಯಗಳಲ್ಲಿದೆ. ವೈಯಕ್ತಿಕವಾಗಿ ಮತ್ತು ಸಾಮುದಾಯಿಕವಾಗಿ ಅತಿ ಲೋಭಿ (ಅರಿ-ಷಡ್‍ವರ್ಗಿ) ಆಗದೆ ವಿರಕ್ತವಾಗಿ ಇರುವ ಜೀವನ ಕ್ರಮಕ್ಕೆ ಯಾವತ್ತೂ ಬೆಲೆ ಇದೆ. ಆದರೆ ಮುಕ್ತಿ, ಕರ್ಮಫಲ, ಪುನರ್ಜನ್ಮ, ಲೀಲೆ, ಕಪಟನಾಟಕ, ಸೂತ್ರ, ಪಾತ್ರ, ಮಾಯೆ, ನಶ್ವರವಾದ ಇತ್ಯಾದಿ ನಂಬಿಕೆಗಳಿಂದ ಬಿಡುಗಡೆ ಪಡೆಯದ ವಿರಕ್ತಿಗೆ ಯಾವ ಭವಿಷ್ಯತ್ತೂ ಇರಲಾರದು.

ಪ್ರಭುತ್ವಕ್ಕೆ ಮತ್ತು ಎಲ್ಲ ಬಗೆಯ ಶಕ್ತಿಕೇಂದ್ರಗಳಿಗೆ ಬಹು ದೊಡ್ಡ ಪ್ರತಿರೋಧ ಶಕ್ತಿ ಆಗಿ ಬಳಕೆ ಆಗಿರುವ ಭಕ್ತಿಯು ಹೀಗೆ ಸಲ್ಲದ ನಂಬಿಕೆಗಳಿಂದ ತುಂಬಿಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವ ನಾವು ಸಮಾನತೆ ಸಾಧಿಸುವುದು ಕನಸಾದೀತು. ಚರಿತ್ರೆಯಲ್ಲಿ ಹೀಗೇ ಆಗುತ್ತ ಬಂದಿದೆ ಕೂಡ. ತತ್ವ ಪರಂಪರೆಗಳಲ್ಲಿ ಇಂದಿಗೂ ಜೀವಂತವಾಗಿರುವ, ಹಲವಾರು ತತ್ವಪದಗಳನ್ನು ಬರೆದ ಕನಕನೆ ಈ ಹರಿಭಕ್ತಿಸಾರವನ್ನು ಬರೆದನೆ ಎಂಬುದು ನಿಜವಾಗಿಯೂ ಅಚ್ಚರಿ. ಧಾರ್ಮಿಕತೆ ಎಂದರೆ; ಭಕ್ತಿ ಎಂದರೆ ಕುರುಡಾಗಿ ಅನುಕರಿಸುವುದು, ಪ್ರಶ್ನೆಮಾಡದೆ ಒಪ್ಪಿಕೊಳ್ಳುವುದು, ಅವಿವೇಕ ವಿವೇಕಗಳನ್ನು ಕಲಸಿಬಿಡುವುದು ಎಂದೆಲ್ಲ ಆಗುವುದಾದರೆ ಆ ಭಕ್ತಿ ವಜ್ರ್ಯ. ಮನೋವಿಜ್ಞಾನ, ವಿಕಾಸವಾದ, ಮಾಧ್ಯಮಿಕವಾದ, ಮಾಕ್ರ್ಸ್‍ವಾದ, ಬೌದ್ದ ಕರುಣಾ ಮೈತ್ರಿ ತತ್ವ, ಅಸಂಖ್ಯಾತ ತತ್ವಪದಕಾರರ ಚಲನಶೀಲ ಜೀವನ ದರ್ಶನಗಳು, ವಿಜ್ಞಾನ ಚಿಂತನೆಗಳು ಇತ್ಯಾದಿಗಳೆಲ್ಲ ಜಾಗತೀಕರಣ ಆಗುತ್ತಿರುವ ಇಂದಿನ ದಿನಮಾನಗಳಲ್ಲಿ ಲೋಕರಚನೆ ಮತ್ತು ಸ್ಥಿತಿ-ಲಯಗಳ ಬಗ್ಗೆ ಹರಿಸರ್ವೋತ್ತಮ ತತ್ವವನ್ನು ಒಪ್ಪುವುದಾದರೂ ಹೇಗೆ? ನಮ್ಮ ವಿವೇಕವನ್ನು ಬಡಿದೆಬ್ಬಿಸುವ ಓದು ನಮ್ಮೆಲ್ಲ ಪ್ರಾಚೀನ ಪಠ್ಯಗಳ ಅನುಸಂಧಾನದಲ್ಲಿ ಆಗಬೇಕು. ಇಲ್ಲದೆ ನಾವೂ ಬರಿದೆ ಚರಿತ್ರೆಯ ಗಿಳಿಪಾಠ ಒಪ್ಪಿಸಿದರೆ ನಾವು ಮುಂದೆ ಹೋಗುವುದಿಲ್ಲ. ಹಿಂದೆ ಹೋಗುತ್ತೇವೆ. ಇಲ್ಲವಾದರೆ ಎಲ್ಲಿದ್ದೇವೆಯೋ ಅಲ್ಲೆ ಇರುತ್ತೇವೆ.

ಈ ಲೋಕದ ಸೃಷ್ಟಿ ಆದಿಯಲ್ಲಿ ಹೇಗಾಯಿತು? ಬೀಜವು ಮರದಿಂದ ಹುಟ್ಟಿತು ಎನ್ನುವುದಾದರೆ ಆ ಮರದ ಮೂಲ ಯಾವುದು? ಹೀಗೆ ಬೀಜವೃಕ್ಷ ನ್ಯಾಯದ ಪ್ರಶ್ನೆಯ ಮೂಲಕ ಈ ಸೃಷ್ಟಿಯನ್ನು ಕಲ್ಪಿಸಿಕೊಂಡ ಬಗೆಯೇ ಕೇವಲ ತರ್ಕವನ್ನು ಆಧರಿಸಿದ್ದು. (ಪದ್ಯ 81-82) ವಿಶ್ವಸೃಷ್ಟಿಯ ಕುರಿತ ಪದ್ಯ (97) ಮತ್ತು ದೇಹದ ಉಸಿರಾಟದ ಕುರಿತ ನಂಬಿಕೆಗಳ ಪದ್ಯ (98) ಇಂತಹವುಗಳನ್ನು ನೋಡಿದರೆ ‘ನಗೆಯು ಬರುತ್ತದೆ’. ದೇಹಸೃಷ್ಟಿ-ಲೋಕಸೃಷ್ಟಿಗಳನ್ನು ಒಂದೇ ಆಗಿ ನೋಡುವುದೂ ಕೂಡ ಹಳೆಯ ಜಡ್ಡಾದ ತಿಳುವಳಿಕೆ. (ಪದ್ಯ-97) ವಿಕಾಸವಾದ ಈ ಪ್ರಶ್ನೆಯನ್ನು ಸರಿಯಾಗಿ ಬಗೆಹರಿಸದೆ ಇರಬಹುದು. ಈ ಹೊಣೆಯನ್ನು ಹರಿಭಕ್ತಿಸಾರಕ್ಕೆ ಹೊರಿಸುವುದು ಕೂಡ ತರವಲ್ಲ ಹೌದು. ಆದರೆ ಬರಿದೆ ಗಿಳಿಪಾಠ ಒಪ್ಪಿಸುವುದೂ ತರವಲ್ಲ ಅಲ್ಲವೇ? ಹಾಗೆ ನೋಡಿದರೆ ಭ್ರಮರ ಕೀಟನ್ಯಾಯಕ್ಕೆ ಸ್ವತಃ ಕವಿ ಕನಕದಾಸನೇ ಉದಾಹರಣೆ. ಗಿಳಿಯ ಮರಿಯನ್ನು ತಂದು ಪಂಜರದಲ್ಲಿಟ್ಟು ಸಾಕಿ ಬೆಳೆಸಿ ಅದಕ್ಕೆ ಬೇಕಾದ ನುಡಿಗಳನ್ನು ಕಲಿಸಿ ಕೇಳುವ ರೂಪಕವನ್ನು ಒಂದು ಪದ್ಯದಲ್ಲಿ (ಪದ್ಯ 20) ಪ್ರಸ್ತಾಪಿಸುವ ಕನಕನೇ ಒಂದು ಭಕ್ತಿಗಿಳಿ. ದ್ವೈತ-ಅದ್ವೈತ-ವಿಶಿಷ್ಟಾದ್ವೈತ ತತ್ವಗಳಲ್ಲಿ ಅಡ್ಡಾಡುವ ಕನಕ ಕುರುಬ ಪಂಜರದಿಂದ, ಬೇಡ ಪಂಜರದಿಂದ, ಕ್ಷತ್ರಿಯ ಪಂಜರದಿಂದ ಹಾರಿ ಹಾರಿ ವೈಷ್ಣವ ಭಕ್ತಿಪಂಜರಕ್ಕೆ ಪ್ರವೇಶ ಪಡೆದ ಗಿಳಿ.

ಇಲ್ಲಿ ನಾಲಕ್ಕು ಬಗೆಯ ನಿರ್ಮಾಣಗಳು ಆಗಿವೆ ಎನ್ನಲಾಗಿದೆ. (ಪದ್ಯ 84). ಅವೆಂದರೆ ನಾಲ್ಕು ವರ್ಣಾಶ್ರಮಗಳು (ಇವು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸವೂ ಆಗಬಹುದು: ಚತುರ್ ಧರ್ಮ; ಚತುರ್‍ಪ್ರಕೃತಿ; ಜರಾಯುಜ, ಅಂಡಜ, ಸ್ವೇದಜ, ಉದ್ಭಿಜ ಹೀಗೆ ಹಲಬಗೆಯಲ್ಲಿ ಇದನ್ನು ವ್ಯಾಖ್ಯಾನಿಸಬಹುದು. ಚೌಷಷ್ಟಿ ಎನ್ನುವುದನ್ನು 64 ಬಗೆಯ ವಿದ್ಯೆಗಳು ಎಂದೂ ವ್ಯಾಖ್ಯಾನಿಸಬಹುದು. ಚತುರ್ ಎಂಬುವು ಧರ್ಮ ಅರ್ಥ ಕಾಮ ಮೋಕ್ಷಗಳೂ ಆಗಬಹುದು. ಆದರೆ ಇವೇ ಚತುರ್‍ವಿಧ ನಿರ್ಮಾಣಗಳಿಂದಲೆ ಚೌಷಷ್ಠಿ ಲಕ್ಷಣ ಜಾತಿಧರ್ಮಗಳು ಆದವು ಎಂದರೆ ಅವನ್ನು ವರ್ಣಾಶ್ರಮಗಳು ಎಂದೇ ತಿಳಿಯಬೇಕಾಗುತ್ತದೆ) ಈ ನಾಲ್ಕು ವರ್ಣಾಶ್ರಮಗಳಿಂದಲೇ 64 ಬಗೆಯ ಜಾತಿ ಧರ್ಮಗಳು ಉಂಟಾದುವು ಎಂದು ಹೇಳುವುದನ್ನು ಅಂದರೆ ಇಲ್ಲಿನ ವರ್ಣಾಶ್ರಮ ಪದ್ಧತಿಯನ್ನು, ಜಾತಿಧರ್ಮ ಪದ್ದತಿಯನ್ನು ಆ ದೇವರೇ ಮಾಡಿದ ಎನ್ನುವುದನ್ನು ನಾವು ಖಂಡಿತಾ ಒಪ್ಪಲಾಗದು. ಇದನ್ನು ತಿರಸ್ಕರಿಸಿ ನೂರಾರು, ಸಾವಿರಾರು ವರ್ಷಗಳಾಗಿದ್ದರೂ, ಸಂವಿಧಾನ ಭಾರತದಲ್ಲಿ ಜಾರಿಯಾಗಿದ್ದರೂ ಮತ್ತೆ ಮತ್ತೆ ಇವುಗಳನ್ನು ಗಿಳಿಪಾಠ ಮಾಡುವ ಮತ್ತು ಒಪ್ಪಿಸುವ ಯಥಾಸ್ಥಿತಿವಾದಿ ಶಾಲೆಗಳಿಗೇನೂ ಇಲ್ಲಿ ಕೊರತೆಯಿಲ್ಲ. ಅಂತಹ ಶಾಲೆಯ ಪಠ್ಯವಾಗಿ ಹರಿಭಕ್ತಿಸಾರ ನಮ್ಮಲ್ಲಿ ನಿರಂತರ ಬಳಕೆ ಆಗುತ್ತ ಬಂದಿದೆ.

ಇಲ್ಲಿ ವೇದ, ಶಾಸ್ತ್ರ, ಪುರಾಣಗಳ ಓದು ಮತ್ತು ಅದರಿಂದ ಮಾನವನಿಗೆ ಬರುವ ಸಂಸ್ಕಾರದ ಬಗ್ಗೆ; ಓದಿಯೂ ಸಂಸ್ಕಾರ ಬಾರದಿರುವ ಬಗ್ಗೆ ಹೇಳಲಾಗಿದೆ. (100) ಯಾವನ್ನೂ ಇಡಿಯಾಗಿ ಪುರಸ್ಕರಿಸುವ ಮತ್ತು ಇಡಿಯಾಗಿ ತಿರಸ್ಕರಿಸುವ ಅಗತ್ಯವಿಲ್ಲ. ಆದರೆ ನಮ್ಮ ಸಾಹಿತ್ಯ ಸಂಕಥನಗಳನ್ನು ನೋಡಿದರೆ ವಿಷ್ಣುಪಂಥೀಯ ಸಾಹಿತ್ಯ ಮತ್ತು ಜ್ಞಾನಲೋಕವನ್ನು ಶಿವಪಂಥೀಯರು ಇಡಿ ಇಡಿಯಾಗಿ ತಿರಸ್ಕರಿಸಿರುವುದೂ ಹಾಗೇ ಇವರು ಅವರನ್ನು ಇಡಿ ಇಡಿಯಾಗಿ ತಿರಸ್ಕರಿಸಿರುವುದೂ ಕಾಣಬರುತ್ತದೆ.

ದೇಹ ನಿರಾಕರಣೆಯ ಬಗೆಗೆ ಇಲ್ಲಿ ಹತ್ತಕ್ಕು ಹೆಚ್ಚು ಪದ್ಯಗಳಿವೆ. 55, 62, 69, 75, 76, 78, 79, 84, 85, 86, 88, 87, 89, 90, 92, 93, 94, 96, 97, 98, 99, ಹೀಗೆ ಇಲ್ಲಿನ ಬಹುಪಾಲು ಪದ್ಯಗಳು ದೇಹದ ಬಗೆಗಿನ ವ್ಯಾಮೋಹವನ್ನು ನಿರಾಕರಿಸುತ್ತವೆ. ದೇಹವನ್ನು ಒಂದು ಬಂಧನ, ಒಂದು ಪಾಶ. ವಾಹನ, ಮನೆ, ರಥ, ತೊಗಲಕೋಟೆ, ಊರು, ನಗರ, ನೀರಮೇಲಣ ಗುಳ್ಳೆ, ದರ್ಪಣದ ಮೇಲೆ ನಿಲ್ಲಲಾರದೆ ಉರುಳಿಬೀಳುವ ಉದ್ದಿನ ಕಾಳು, ಸಂಸಾರ, ಮಣ್ಣಿನಗೊಂಬೆ, ತೊಗಲುಗೊಂಬೆ, ಹಾಹೆ, ಅಂಗದೇಶ, ಪಿಂಡಾಂಡ, ಮೂತ್ರದ ಬಿಲದಿಂದ ಬಂದುದು, ಹೀಗೆ ಹಲವು ರೀತಿಯಲ್ಲಿ ಉಪಮಿಸಲಾಗಿದೆ. ಇಲ್ಲಿನ ಎಲ್ಲ ಉಪಮೆಗಳನ್ನೂ ದೇಹ ವ್ಯಾಮೋಹದ ನಿರಾಕರಣೆ; ದೇಹಮೀಮಾಂಸೆಯ ಲೋಕದಲ್ಲಿ ಇರುವ ಹತ್ತು ಹಲವು ಜಾತಿ, ಜ್ಞಾನ, ಬಣ್ಣ, ತೂಕ, ಗಾತ್ರ, ಎತ್ತರ ಇತ್ಯಾದಿ ಹತ್ತಾರು ನೆಲೆಯಲ್ಲಿರುವ ತಾರತಮ್ಯಗಳ ನಿರಾಕರಣೆ ಎಂದು ತೆಗೆದುಕೊಂಡರೆ ಒಳಿತು. ಆದಾಗ್ಯೂ ಹೆಣ್ಣಿನ ಯೋನಿಯನ್ನು ಮೂತ್ರದ ಬಿಲವೆಂದು ತುಚ್ಛವಾಗಿ ಕಾಣುವುದನ್ನು, ದೇಹವನ್ನು ಜಗನ್ನಾಟಕ ಲೀಲೆಯ ಸೂತ್ರದ ಗೊಂಬೆಯೆಂದು ಕರೆಯುವುದನ್ನು ತೊಗಲುಕೋಟೆ, ಪಾಶ, ಬಂಧನ ಇತ್ಯಾದಿಯಾಗಿ ಕರೆಯುವುದನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ.

ಮತ್ತೊಮ್ಮೆ ಅವರವರ ಭಕುತಿಗೆ ಅವರವರ ಭಾವಕ್ಕೆ ಅವರವರ ತೆರನಾಗಿ ಈ ಪಠ್ಯವನ್ನು ಓದಬಹುದು ಎಂಬ ಮಾತನ್ನು ಪುನರಾವರ್ತಿಸಿ ನನ್ನ ಮಾತುಗಳನ್ನು ಮುಗಿಸುವ ಮುನ್ನ ಒಂದೇ ಒಂದು ಮಾತು ಹೇಳಬೇಕು; ಈಗಾಗಲೆ ಐಕಾನು ಆಗಿರುವ ಕವಿಯೊಬ್ಬನ ಎಲ್ಲ ರಚನೆಗಳನ್ನು ಕಣ್ಣು ಮುಚ್ಚಿಕೊಂಡು ನಾವು ಭಕ್ತಿಯಿಂದ ಆರಾಧಿಸಬೇಕಿಲ್ಲ. ವ್ಯಕ್ತಿಯೊಬ್ಬನ ಅಥವಾ ಒಂದು ಅಂಕಿತವುಳ್ಳ ಅಥವಾ ಒಂದು ತಾತ್ವಿಕತೆ ಉಳ್ಳ ಸಮಗ್ರ ರಚನೆಗಳು ನಮಗೆ ಅಗತ್ಯವಿಲ್ಲ. ಅವುಗಳಲ್ಲಿ ನಮಗೆ ಇಂದಿಗೆ ಎಷ್ಟು, ಏನು ಅಗತ್ಯವಿದೆಯೊ ಅದನ್ನು, ಅಷ್ಟನ್ನು ಮಾತ್ರವೆ ನಾವು ತೆಗೆದುಕೊಳ್ಳೋಣ. ನಮಸ್ಕಾರ.

ಇಲ್ಲಿನ ಪದ್ಯಗಳ ಆಕರ: ಹರಿಭಕ್ತಿಸಾರ: ಸಂ-ಎಸ್.ಎಫ್.ಜಕಬಾಳ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ, ಹಾವೇರಿ.

ಈ ಅಂಕಣದ ಹಿಂದಿನ ಬರೆಹಗಳು

ಕಲ್ಲು ದೈವ, ಮೊರ ದೈವ?

ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು

ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...