ಹಸಿವೆಂಬ ಹೆಬ್ಬಾವು

Date: 21-09-2022

Location: ಬೆಂಗಳೂರು


ರೂಬೆನ್ಸ್‍ನ ಬಹಳಷ್ಟು ಚಿತ್ರಗಳು ರೋಮನ್ ಮತ್ತು ಗ್ರೀಕ್ ಪುರಾಣ ಕಥೆಗಳ ಸನ್ನಿವೇಶಗಳನ್ನು ಆಧರಿಸಿವೆ. ಇವನು ಬಾರೋಕ್ ಶೈಲಿಯಲ್ಲಿ ಕೃತಿಗಳನ್ನು ರಚಿಸಿದನು. ಈ ಶೈಲಿಯು ಧಾರ್ಮಿಕ ಕಲೆಯ ವಾಹಕವಾಗಿ ಕೆಲಸ ಮಾಡಿತು ಎನ್ನುತ್ತಾರೆ ಲೇಖಕ ಲಕ್ಷ್ಮಣ ಬಾದಾಮಿ. ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ನೆದರ್‌ಲ್ಯಾಂಡ್ ಕಲಾವಿದ ಪೀಟರ್ ಪಾಲ್ ರೂಬೆನ್ಸ್ ಕಲಾಕೃತಿ ಬಗ್ಗೆ ಬರೆದಿದ್ದಾರೆ.

ಕಲಾಕೃತಿ:`ರೋಮನ್ ಚಾರಿಟಿ’
ಕಲಾವಿದ: ಪೀಟರ್ ಪಾಲ್ ರೂಬೆನ್ಸ್
ಕಾಲ: 1577-1640
ದೇಶ: ನೆದರ್‌ಲ್ಯಾಂಡ್
ಕಲಾಪಂಥ: ಬಾರೋಕ್

ಚಿತ್ರವನ್ನು ನೋಡಿದೊಡನೆ ಇದೆಂಥ ವಿಸಂಗತಿ!! ಅಂದು ಬಿಡಬಹುದು. ಆದರೆ ಅದರ ಹಿಂದಿನ ವೃತ್ತಾಂತವನ್ನು ತಿಳಿದರೆ ಇದು ಸುಸಂಗತಿಯೇ ಅನ್ನುತ್ತೀರಿ. ಜೀವಕಾರುಣ್ಯವಿಲ್ಲದ ಮತಿಗೇಡಿಗಳು ಪ್ರಭುತ್ವದಲ್ಲಿರುವುದು ನಿನ್ನೆ ಮೊನ್ನೆಯ ಕಥೆಯಲ್ಲ. ಆದಿ ಕಾಲದಿಂದಲೂ ಅಂಥವರ ದೌರ್ಜನ್ಯ, ಕ್ರೌರ್ಯ ಇದ್ದೇ ಇದೆ. ಅದಕ್ಕೆ ಪ್ರತಿಯಾಗಿ ಅಧೀನ ಜನವು ಕೂಡಾ ಬದುಕುವ ಛಲವನ್ನು ತೋರುತ್ತಲೇ ಬಂದಿದ್ದಾರೆ. ಅಂಥದೊಂದು ಬದುಕುವ ಛಲದ ಕಥೆ ಇದು.

`ಪ್ರಾಚೀನ ರೋಮನ್ನರ ಅವಿಸ್ಮರಣೀಯ ಘಟನೆಗಳು ಮತ್ತು ಉಕ್ತಿಗಳು’ ಎಂದು ಪ್ರಸಿದ್ಧವಾಗಿರುವ ಒಂಬತ್ತು ಗ್ರಂಥಗಳಲ್ಲಿ `ರೋಮನ್ ಚಾರಿಟಿ’ ಹೆಸರಿನ ಈ ಘಟನೆ ಅತ್ಯಂತ ಗೌರಯುತವಾದದ್ದೆಂದು ದಾಖಲಾಗಿದೆ. 14ನೇ ಲೂಯಿಸ್‍ನ ಆಳ್ವಿಕೆಯ ಕಾಲದಲ್ಲಿ ಕ್ರಿ. ಶ. 23-79ರ ನಡುವೆ ಪ್ಲಿನೇ ದಿ ಎಲ್ಡರ್‍ನು ಈ ಕಥೆಯನ್ನು ಮರು ನಿರೂಪಿಸಿದ್ದಾನೆ.

ಸಿಮೋನ್ ಎಂಬ ರೋಮನ್ ಪ್ರಜೆಯು ಹಸಿವನ್ನು ತಾಳಲಾರದೆ ಒಂದು ಬ್ರೆಡ್‍ನ್ನು ಕದಿಯುತ್ತಾನೆ. ಈ ಕಳುವಿನ ಆರೋಪ ಚಕ್ರವರ್ತಿಯಲ್ಲಿಗೆ ಹೋದಾಗ ಅವನು ಸಿಮೋನ್‍ಗೆ ಮರಣದಂಡನೆ ಶಿಕ್ಷೆ ವಿಧಿಸುತ್ತಾನೆ. ಈ ಮರಣದಂಡನೆ ಶಿಕ್ಷೆ ಎಂಥದೆಂದರೆ ಸಾಯುವರೆಗೂ ಆಹಾರ-ನೀರು ಇಲ್ಲದೇ ಹಸಿವಿನಿಂದ ಸಾಯುವುದು. ಈ ಸುದ್ದಿ ಕೇಳಿ ಸಿಮೋನ್‍ನ ಮಗಳು ಪೆರೋ ತಂದೆಯನ್ನು ನೋಡಲು ಕಾರಾಗೃಹಕ್ಕೆ ಧಾವಿಸುತ್ತಾಳೆ. ಅಲ್ಲಿನ ಜೈಲಾಧಿಕಾರಿಗಳು ಅವಳನ್ನು ಒಳ ಬಿಡುವುದಿಲ್ಲ. ಪೆರೋ ಚಕ್ರವರ್ತಿಯಲ್ಲಿಗೆ ಹೋಗಿ ಮೊರೆಯಿಡುತ್ತಾಳೆ. ತಂದೆಯನ್ನು ಭೇಟಿಯಾಗುವಾಗ ಒಂದು ತುಣುಕು ಆಹಾರವಾಗಲಿ, ತೊಟ್ಟು ನೀರಾಗಲಿ ಕೊಂಡೊಯ್ಯಬಾರದೆಂಬ ಶರತ್ತಿನ ಮೇಲೆ ಚಕ್ರವರ್ತಿ ದಿನಕ್ಕೊಂದು ಭೇಟಿಯಾಗಲು ಅನುಮತಿ ನೀಡುತ್ತಾನೆ.

ಹಸಿವು ಬಳಲಿಕೆಯಿಂದ ಕೃಶವಾಗುತ್ತಿದ್ದ ತಂದೆಯನ್ನು ನೋಡಿ ಪೆರೋ ಕಂಗೆಡುತ್ತಾಳೆ. ತಂದೆಯ ಮೇಲೆ ಅಂತಃಕರಣ ಉಕ್ಕಿ ಅವನನ್ನು ಉಳಿಸಿಕೊಳ್ಳಲೇಬೇಕೆಂದು ಒಂದು ದಿಟ್ಟ ನಿಲುವು ತಾಳುತ್ತಾಳೆ. ಐದಾರು ತಿಂಗಳ ಕೂಸನ್ನು ಹೊಂದಿದ್ದ ಪೆರೋನ ಎದೆಯಲ್ಲಿ ಹಾಲಿತ್ತು. ಅದನ್ನೇ ತಂದೆಗೆ ಉಣಿಸಲು ಮುಂದಾಗುತ್ತಾಳೆ! ತಂದೆ ಇದಕ್ಕೆ ನಿರಾಕರಿಸುತ್ತಾನೆ. ಆದರೆ ಮಗಳ ಮಮಕಾರ, ಕಾಳಜಿ, ವಾತ್ಸಲ್ಯಕ್ಕೆ ಸೋತು ಆಮೇಲೆ ಒಪ್ಪುತ್ತಾನೆ.

ಕಾಲ ಕಳೆದಂತೆ ಸೊರಗಿ ಸೊರಗಿ ಸಾವನ್ನಪ್ಪಬೇಕಾಗಿದ್ದ ಸಿಮೋನ್ ಚಿಗುರಿಕೊಂಡದ್ದನ್ನು ನೋಡಿ ಅನುಮಾನದಿಂದ ಪತ್ತೆ ಮಾಡಿದಾಗ ತಂದೆ ಮಗಳ `ಜೀವ-ದಾಹ’ ಕಂಡು ಹೌಹಾರುತ್ತಾರೆ. ಮತ್ತೆ ದೊರೆಯ ಬಳಿ ನ್ಯಾಯ ಪಂಚಾಯತಿ ಆಗುತ್ತದೆ. ಪರ ವಿರೋಧದ ಮಾತು ಮಾತುಗಳು ಕೇಳಿ ಬರುತ್ತವೆ. ಕೊನೆಗೆ ತಾಯಕಾರುಣ್ಯದ ಮಗಳ ಪರ, ಮಾನವೀಯತೆಯ ಪರ ನ್ಯಾಯಾಧೀಶರು ತೀರ್ಪು ನೀಡುತ್ತಾರೆ. ತಂದೆ-ಮಗಳಿಬ್ಬರು ನಿರ್ದೋಷಿಗಳೆಂದು ಬಿಡುಗಡೆಯಾಗುತ್ತಾರೆ.

`ರೋಮನ್ ಚಾರಿಟಿ’ಯ ಈ ಪ್ರಸಂಗವನ್ನು ಅನೇಕ ವರ್ಣಚಿತ್ರಕಾರರು, ಶಿಲ್ಪಿಗಳು ತಮ್ಮ ಕಲಾಕೃತಿಗಳಲ್ಲಿ ಹಿಡಿದಿರಿಸಿದ್ದಾರೆ. ಅವರಲ್ಲಿ ಪೀಟರ್ ಪಾಲ್ ರೂಬೆನ್ಸ್‍ನು ಒಬ್ಬ. ಜೈಲಿನ ಗಾಢ ಕತ್ತಲೆಯ ಹಿನ್ನೆಲೆಯಲ್ಲಿ ತಂದೆ ಮಗಳಿಬ್ಬರ ತಿಳಿವರ್ಣದ ಆಕೃತಿಗಳು ಚಿತ್ರದಲ್ಲಿ ಮುಖ್ಯವಾಗಿ ಕಾಣುತ್ತವೆ. ಶಿಲಾಕಂಬಕ್ಕೆ ಒರಗಿರುವ ಸಿಮೋನ್‍ನ ಕೈಗಳನ್ನು ಬೆನ್ನ ಹಿಂದೆ ಬಂಧಿಸಲಾಗಿದೆ. ಕಾತುರದಿಂದ ತಂದೆಗೆ ಮೊಲೆಯೂಡಿಸುತ್ತಿರುವ ಪೆರೋಳಲ್ಲಿ ಕಕ್ಕುಲಾತಿ ಮತ್ತು ಭೀತಿ ಒಟ್ಟಿಗೆ ಅವಳ ಮುಖದಲ್ಲಿ ಕಾಣಿಸಿವೆ. ಭೀತಿ ಯಾಕೆಂದರೆ ತಾನು ಹಾಲುಣಿಸುತ್ತಿರುವುದನ್ನು ಯಾರಾದರೂ ನೋಡಿದರೆ.ಎಂಬುದಕ್ಕೆ. ಸಿಮೋನ್‍ನು ಹಸಿವಿನಿಂದ ಕಂಗೆಟ್ಟು ಮಗಳ ಮೊಲೆ ಉಣ್ಣಲು ಮಗುವಿನಂತಾಗಿ ಮುಖ ಚಾಚಿದ್ದಾನೆ. ಅವನ ಮುಖದಲ್ಲಿ ಹಸಿವಿನ ದಾಹವೊಂದು ತೀವ್ರವಾಗಿ ಕಾಣುತ್ತದೆ. ಪೆರೋ ಆದರೂ ಇಲ್ಲಿ ಸಾಕ್ಷಾತ್ ತಾಯಿಯೇ ಆಗಿದ್ದಾಳೆ.

ಚಿತ್ರದ ಕೇಂದ್ರಬಿಂದು ಪೆರೋಳ ಮೊಲೆತೊಟ್ಟು ಸಿಮೋನ್‍ನ ತುಟಿಗಳಲ್ಲಿ ಸಂಧಿಸಿರುವಲ್ಲಿದೆ. ನೋಡುವವನ/ಳ ದೃಷ್ಟಿ ಮೊದಲು ಕೇಂದ್ರ ಬಿಂದುವಿನಲ್ಲಿ ನೆಟ್ಟು ಅಲ್ಲಿಂದ ಸುತ್ತಲೂ ಚದುರುತ್ತದೆ. ಹಾಗೆಯೇ ನೋಡುತ್ತ ಹೋದರೆ ಪೆರೋಳ ಪ್ರಾಯದ ಮೈಯ Skin tone ಮತ್ತು ಸಿಮೋನ್‍ನ Skin tone ಈ ಕೃತಿಯ ಇನ್ನೊಂದು ಮುಖ್ಯ ಅಂಶವಾಗಿದೆ. ಸಿಮೋನ್‍ನ ಕಳೆಗುಂದಿದ ಮುಖದಲ್ಲಿ ಅವನು ಸೊರಗಿರುವ ಲಕ್ಷಣಗಳು ತೋರುತ್ತವೆ. ಅದೇ ಲಕ್ಷಣಗಳು ದೇಹದಲ್ಲಿ ಕಾಣುವುದಿಲ್ಲ. ಹಸಿವಿನಿಂದ ಬಳಲುತ್ತಿರುವವನಲ್ಲಿ ಇನ್ನಷ್ಟು ಕೃಶಕಾಯತೆ ಕಾಣಿಸಬೇಕಿತ್ತು.

ರೂಬೆನ್ಸ್‍ನ ಚಿತ್ರಶೈಲಿಯ ಬಗ್ಗೆ ಹೇಳುವುದಾದರೆ ಅವನ ಸಂಯೋಜನೆಗಳಲ್ಲಿ ಒಂದಿಷ್ಟು ಸಂಕೀರ್ಣತೆ ಕಾಣುತ್ತದೆ. ಚಿತ್ರದ ತುಂಬಾ ಆಕೃತಿಗಳ ಸಮೂಹವೇ ಇರುತ್ತದೆ. ಆ ಎಲ್ಲಾ ಪಾತ್ರಗಳು ನಾನಾ ನಮೂನೆಯ ಭಾವ ಭಂಗಿಗಳಲ್ಲಿ ಜೀವಂತ ಚಟುವಟಿಕೆಗಳಿಂದ ಇರುತ್ತವೆಯೇ ಹೊರತು ಚಿತ್ರ ಭಿತ್ತಿ ತುಂಬಿಸಲು ಮೈವೆತ್ತ ಆಕಾರಗಳಾಗಿರುವುದಿಲ್ಲ. ಯುದ್ಧ, ಅಪಹರಣ, ಕ್ಷೋಭೆ ತಲ್ಲಣಗಳಿರುವ ವಸ್ತುಗಳಲ್ಲಿ ಮನುಷ್ಯಾಕೃತಿಗಳು ಸೇರಿದಂತೆ ಪ್ರಾಣಿಗಳು ಆಕೃತಿಗಳನ್ನು ಸಹ ಒಟ್ಟು ದೃಶ್ಯ ಪರಿಣಾಮಕ್ಕೆ ಒಗಿಸುವಲ್ಲಿ ರುಬೆನ್ಸ್‍ನ ಸೃಷ್ಟಿಶೀಲತೆ ಅಮೋಘದ್ದೆನಿಸುತ್ತದೆ.

ಕ್ಷೋಭೆಯ ಭಾವಗಳ ಚಿತ್ರಿಸಿದಂತೆಯೇ ಮುಗ್ಧ ಮಕ್ಕಳ, ಹೆಂಗಸರ ದಯನೀಯ, ಸಂದರ್ಭದ ವರ್ತನೆ, ಮನ ಕಲಕುವ ಭಾವಗಳನ್ನು ಅಷ್ಟೇ ಭಾವಪೂರ್ಣವಾಗಿ ಚಿತ್ರಿಸಿದ್ದಾನೆ. ಇವನ ಆಕೃತಿಗಳಲ್ಲಿ ಎದ್ದುಕಾಣುವ ಇನ್ನೊಂದು ಗುಣವೆಂದರೆ ಗಂಡಸರ ಮೈಬಣ್ಣ(Skin tone)ವು ಒಂದಿಷ್ಟು Orange toneನಲ್ಲಿದ್ದರೆ, ಹೆಂಗಸರ ಮೈಬಣ್ಣವು ತಿಳಿಗುಲಾಬಿ(Rose tone) ವರ್ಣದಿಂದ ಕಂಗೊಳಿಸುತ್ತಾ ಅವನ್ನೊಮ್ಮೆ ಸ್ಪರ್ಶಿಸಬೇಕೆಂಬ ಸಣ್ಣದಾಗಿ ಕಿಚ್ಚನ್ನೂ ಹೊತ್ತಿಸುತ್ತದೆ. ಆದ್ದರಿಂದಲೇ ರೂಬೆನ್ಸ್‍ನ ಹೆಸರು ಕೇಳಿದ ರಸಿಕ ನೋಡುಗರು `ಓಹ್..! ಗುಲಾಬಿವರ್ಣದ ಪುಷ್ಪ ಶರೀರದ ನಗ್ನ ಸುಂದರಿಯರ ಚಿತ್ರಗಾರ’ ಎಂದು ನೆನಪಿಸಿಕೊಳ್ಳುತ್ತಾರೆ.

ರೂಬೆನ್ಸ್‍ನ ಬಹಳಷ್ಟು ಚಿತ್ರಗಳು ರೋಮನ್ ಮತ್ತು ಗ್ರೀಕ್ ಪುರಾಣ ಕಥೆಗಳ ಸನ್ನಿವೇಶಗಳನ್ನು ಆಧರಿಸಿವೆ. ಇವನು ಬಾರೋಕ್ ಶೈಲಿಯಲ್ಲಿ ಕೃತಿಗಳನ್ನು ರಚಿಸಿದನು. ಈ ಶೈಲಿಯು ಧಾರ್ಮಿಕ ಕಲೆಯ ವಾಹಕವಾಗಿ ಕೆಲಸ ಮಾಡಿತು. ಜನರಲ್ಲಿ ಧರ್ಮನಿಷ್ಠೆ ಮತ್ತು ದೈವಭಕ್ತಿಯನ್ನು ಉತ್ತೇಜಿಸುವ ಉದ್ಧೇಶ ಇದು ಹೊಂದಿತ್ತು. ಈ ವಿಧದ `ಕೃತಿಗಳಲ್ಲಿ ಮುಖ್ಯವಾಗಿ ಆಕೃತಿ ಕಣ್ಮನಗಳನ್ನು ರಂಜಿಸಬೇಕು. ಅವುಗಳಲ್ಲಿ ಚೈತನ್ಯ ತುಂಬಿ ತುಳಕಬೇಕು. ಅವನ್ನು ಕಂಡೊಡನೆಯೇ ಅವು ನಮ್ಮನ್ನು ಮಂತ್ರ ಮುಗ್ಧಗೊಳಿಸಬೇಕು ಎಂಬ ಪ್ರೇರಣೆಯಿಂದ ಈ ಅವಧಿಯಲ್ಲಿ ಸೃಷ್ಟಿಗಳು ಉಂಟಾದವು’ (ಶಿವರಾಮ ಕಾರಂತ, ಕಲಾಪ್ರಪಂಚ) ತನ್ನ ಕೃತಿಗಳಲ್ಲಿ ರಂಜನೆ ಮತ್ತು ಚಿತ್ತಾಕರ್ಷಣೆಯ ಗುಣವನ್ನು ಹದವಾಗಿ ಬೆರೆಸಿದ್ದಾನೆ. ಅವನು ಈ ಗುಣವನ್ನು ತನಗಿಂತ ಹಿರಿಯ ಕಲಾವಿದರಿಂದ ಪಡೆದುಕೊಳ್ಳುತ್ತಿದ್ದ. `ಶನಿ ತನ್ನ ಮಗನನ್ನು ತಿನ್ನುತ್ತಿರುವ’ (Saturn devouring his son) ಚಿತ್ರಕ್ಕಾಗಿ ಮೈಕೆಲ್ಯಾಂಜಿಲೋನ ಕೃತಿಗಳ ಪ್ರೇರಣೆ ಪಡೆದಿದ್ದ ಎಂದು ವಿಮರ್ಶಕರು ಹೇಳುತ್ತಾರೆ. Saturn devouring his son ವಸ್ತುವನ್ನಾಗಿಸಿ ಕಲಾವಿದ Goya ಕೂಡಾ ಚಿತ್ರಿಸಿದ್ದಾನೆ. Goya ಇಲ್ಲಿ ರುಬೆನ್ಸ್‍ನ ಮೀರಲು ಯತ್ನಿಸಿದ್ದಾನೆ. ಈ ಕೃತಿಯು ಭಯಂಕರ ಭೀಭತ್ಸವಾಗಿದೆ. ರೂಬೆನ್ಸ್ ಪೌರಾಣಿಕ ವಸ್ತುಗಳ ಜೊತೆಗೆ ಮಹತ್ತರವಾದ ನಿಸರ್ಗ ಚಿತ್ರಗಳನ್ನು, ಭಾವಚಿತ್ರಗಳನ್ನು ರಚಿಸಿದ್ದಾನೆ.

ಈ ಅಂಕಣದ ಹಿಂದಿನ ಬರೆಹಗಳು:
ದೇವರ ದಿನದಂದು ಜೀವನದ ವಿಶ್ಲೇಷಣೆ
ಬನ್ನಿ, ಬದುಕು ಹಂಚಿಕೊಳ್ಳೋಣ
ವರ್ಣಯಾತ್ರೆ
ವರ್ಣ ವ್ಯಾಖ್ಯಾನ
ಚಂದವಿರುವುದಷ್ಟೇ ಕಲೆಯಲ್ಲ
ಕನಸುಗಳು ಮೈದೋರಿದಾಗ
ಕತ್ತಲೆಯ ಅಳತೆಗಾರ
ದುಃಖದ ಉತ್ಪಾತ - ದಿ ಸ್ಕ್ರೀಮ್
ಹಸಿವು ತಣಿಸುವ ತಾಯಿ
ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು
ಗೌಳಿಗಿತ್ತಿಯ ಮೌನ ಜಾಗರಣೆ!
ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...