ಹಾಸ್ಯದ ಲೇಪನವಿಟ್ಟು ಮಕ್ಕಳ ಮನಸ್ಥಿತಿಯನ್ನು ಬಿಂಬಿಸುವ ಕಥೆಗಳು

Date: 03-12-2022

Location: ಬೆಂಗಳೂರು


“ನಾವು ಮಕ್ಕಳನ್ನು ಯಾಕೆ ಸಣ್ಣವರು ಎನ್ನುತ್ತೇವೆ? ಚಿಕ್ಕ ವಯಸ್ಸು ಎಂದೇ? ಅಥವಾ ಅನುಭವ ಸಾಲದು ಎಂದೇ? ಇತ್ತೀಚೆಗಂತೂ ಬಹುತೇಕ ಮಧ್ಯವಯಸ್ಕರಿಗೆ ತಮ್ಮ ಮೊಬೈಲ್‌ನ ಹಲವಾರು ಫೀಚರ್‌ಗಳನ್ನು ತಿಳಿದುಕೊಳ್ಳಲು ಅವರ ಮಕ್ಕಳ ಸಹಾಯ ಬೇಕೇ ಬೇಕು” ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ಲೇಖಕ ಗುಂಡುರಾವ್ ದೇಸಾಯಿ ಅವರ ‘ಮಕ್ಕಳು ಸಣ್ಣವರಲ್ಲ’ ಕೃತಿಯ ಕುರಿತು ಬರೆದಿದ್ದಾರೆ.

ನನಗೆ ಎಷ್ಟೋ ಸಲ ಅನುಮಾನ ಬರುವುದುಂಟು. ನಾವು ಮಕ್ಕಳನ್ನು ಚಿಕ್ಕವರು ಎಂದುಕೊಂಡು ಅವರಿಗೆ ಅರ್ಥವಾಗಲಾರದು ಎಂಬ ಉಪೇಕ್ಷೆಯಿಂದ ಏನೇನೆಲ್ಲ ಮಾತಾಡಿಕೊಳ್ಳುತ್ತೇವೆ. ಏನೆಲ್ಲ ಕೆಲಸ ಮಾಡುತ್ತೇವೆ. ಆದರೆ ಆ ಮಕ್ಕಳು ತಮಗೇನೂ ಅರ್ಥವೇ ಆಗಿಲ್ಲ ಎನ್ನುವಂತೆ ನಟಿಸುತ್ತ ಒಂದು ದಿನ ನಮ್ಮನ್ನು ಸರಿಯಾಗಿ ಫಜೀತಿಗೆ ಸಿಲುಕಿಸುತ್ತಾರೆ. ಯಾರದ್ದಾದರೂ ಎದುರಿಗೆ ಬೇಡವಾಗಿದ್ದನ್ನು ಹೇಳಿ ಆ ದಿನ ನೀನೇ ಹೀಗೆ ಹೇಳಿದ್ದೆ ಅಲ್ವಾ ಎಂದು ನಮ್ಮ ಮಾನ ತೆಗೆದುಬಿಡುತ್ತಾರೆ. ಅಂತಹ ಹತ್ತಾರು ಪ್ರಸಂಗಗಳನ್ನು ಮಕ್ಕಳು ಚಿಕ್ಕವರಿದ್ದಾಗ ಎದುರಿಸಿ ಅನುಭವವಾಗಿರುವುದರಿಂದ ಮಕ್ಕಳು ಖಂಡಿತಾ ಸಣ್ಣವರಲ್ಲ ಎಂಬ ಖಡಾಖಂಡಿತವಾದ ನಿಲುವಿಗೆ ಬಂದಿದ್ದೇನೆ. ಅದರಲ್ಲೂ ಗುಂಡುರಾವ್ ದೇಸಾಯಿಯವರು ನನ್ನ ಅಭಿಪ್ರಾಯವನ್ನು ಪುರಸ್ಕರಿಸಿ ‘ಮಕ್ಕಳು ಸಣ್ಣವರಲ್ಲ ಎಂದ ಮೇಲೆ ಅದು ಸತ್ಯವೇ ಎನ್ನಿಸಿಬಿಟ್ಟಿದೆ.

ನಾವು ಮಕ್ಕಳನ್ನು ಯಾಕೆ ಸಣ್ಣವರು ಎನ್ನುತ್ತೇವೆ? ಚಿಕ್ಕ ವಯಸ್ಸು ಎಂದೇ? ಅಥವಾ ಅನುಭವ ಸಾಲದು ಎಂದೇ? ಇತ್ತೀಚೆಗಂತೂ ಬಹುತೇಕ ಮಧ್ಯವಯಸ್ಕರಿಗೆ ತಮ್ಮ ಮೊಬೈಲ್‌ನ ಹಲವಾರು ಫೀಚರ್‌ಗಳನ್ನು ತಿಳಿದುಕೊಳ್ಳಲು ಅವರ ಮಕ್ಕಳ ಸಹಾಯ ಬೇಕೇ ಬೇಕು. ಆ ಮಕ್ಕಳು ಕಾಲೇಜಿಗೆ ಹೋಗುವವರಾಗಿರಬೇಕಿಲ್ಲ, ಹೈಸ್ಕೂಲು ಓದುವವರೂ ಆಗಿರಬೇಕಿಲ್ಲ. ಕೊನೆಯಪಕ್ಷ ಪ್ರಾಥಮಿಕ ಶಾಲೆಯ ಮಕ್ಕಳಾದರೂ.... ಊಹೂ. ಇನ್ನೂ ಶಾಲೆಯ ಮೆಟ್ಟಿಲು ಹತ್ತದ ಮಗುವೂ ತಾಯಿಗೆ ಹಾಗಲ್ಲ ಅದು ಹೀಗೆ ಮಾಡಬೇಕು ಎಂದು ಮೊಬೈಲ್ ವಿಷಯದಲ್ಲಿ ಸಲಹೆ ಕೊಡುವುದನ್ನು ನೋಡಿದಾಗ ಮಕ್ಕಳನ್ನು ಯಾವ ಕೋನದಲ್ಲಿ ಸಣ್ಣವರು ಎನ್ನುವುದು ಎಂಬುದು ಅರ್ಥವಾಗುವುದಿಲ್ಲ.

ನಿವೃತ್ತಿಯಂಚಿಗೆ ಬಂದಿರುವ ಶಿಕ್ಷಕರೊಬ್ಬರು ಒಂದನೆ ತರಗತಿಯ ನಲಿಕಲಿ ಮಕ್ಕಳ ಬಳಿ ಸಾಟ್‌ನ ಹಾಜರಿ ಹಾಕಿಕೊಡು ಎಂದು ಹೇಳುತ್ತಿದ್ದುದನ್ನು ನಾನು ಕಂಡಿದ್ದೇನೆ. ಸಾಟ್‌ನಲ್ಲಿ ಮಕ್ಕಳ ಪರೀಕ್ಷೆಯ ಅಂಕ ಹಾಗೂ ಗ್ರೇಡ್ ತುಂಬಲು ಮಕ್ಕಳ ಬಳಿ ಹೇಳಿಕೊಡು ಎನ್ನುವ ಶಿಕ್ಕಿಯರಿದ್ದಾರೆ. ಅಂದರೆ ಮಕ್ಕಳು ದೊಡ್ಡವರಿಗಿಂತ ಬುದ್ಧಿವಂತರೆಂದೇ ಅರ್ಥೈಸಿಕೊಳ್ಳಬೇಕು. ಹೀಗಾಗಿಯೇ ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ ಎಂಬ ಹಾಡು ಜನಪ್ರೀಯವಾಗಿದ್ದು.

ಈ ಸಂಕಲನದಲ್ಲಿ ಒಟ್ಟೂ ಹನ್ನೆರಡು ಕಥೆಗಳಿವೆ. ಇಲ್ಲಿನ ಕಥೆಗಳು ಕಥೆಗಳು ಎಂದೆನಿಸದೆ ಸುತ್ತಮುತ್ತ ನಡೆಯುತ್ತಿರುವ ಘಟನೆಗಳು ಎಂದೆನಿಸಲು ಕಾರಣವಿದೆ. ಇಲ್ಲಿನ ಕಥೆಗಳಿಗೆ ವಾಸ್ತವದ ಲೇಪನವಿದೆ. ಯಾವ ಕಥೆಯೂ ಇದೊಂದು ಕಥೆ ಬಿಡು ಎನ್ನುವಂತೆ ಓದಿಸಿಕೊಳ್ಳದೆ ವರ್ತಮಾನದಲ್ಲಿ ನಡೆಯುತ್ತಿರುವ ಯಾವುದೋ ಒಂದು ಘಟನೆಯಂತೆ ನಮ್ಮನ್ನು ಸೆಳೆಯುತ್ತದೆ. ಉದಾಹರಣೆಗೆ ಮೊದಲ ಕಥೆ ಎಗ್‌ರೈಸ್ ಮಂತ್ರಿಯನ್ನೇ ಗಮನಿಸಿ. ಇಲ್ಲಿ ಶಾಲಾ ಸಂಸತ್ತಿನಲ್ಲಿ ಮಂತ್ರಿಯಾಗ ಬಯಸಿದ ನಾಗ ತನಗೆ ಮತ ಹಾಕಿದರೆ ತನ್ನ ಸಹಪಾಠಿಗಳಿಗೆಲ್ಲ ಎಗ್‌ರೈಸ್ ಕೊಡಿಸುವ ಆಮಿಶ ಒಡ್ಡಿರುತ್ತಾನೆ. ಶಿಕ್ಷಕರೆಲ್ಲರ ನಿರೀಕ್ಷೆ ತಲೆಕೆಳಗಾಗಿ ಒಬ್ಬ ಜಾಣ, ಒಳ್ಳಯ ಹುಡುಗನ ಬದಲು ನಾಗ ಮುಖ್ಯಮಂತ್ರಿಯಾಗುತ್ತಾನೆ. ನಂತರ ಆಶ್ವಾಸನೆಯನ್ನು ಈಡೇರಿಸುವ ವಿಷಯದಲ್ಲಿ ತಿಕ್ಕಾಟ ಪ್ರಾರಂಭವಾಗಿ ಭಿನ್ನಮತ ಪ್ರಾರಂಭವಾಗುತ್ತದೆ. ಇದೆಲ್ಲ ಕಲ್ಪನೆಯಲ್ಲಿ ನಡೆಯುವ ಕಥೆಗಳಲ್ಲ. ಇವು ನಮ್ಮ ಪ್ರಸ್ತುತ ಸನ್ನಿವೇಶಕ್ಕೆ ಹಿಡಿದ ಕೈಗನ್ನಡಿಯಂತೆ ದಿಗಿಲು ಹುಟ್ಟಿಸುತ್ತದೆ. ಮಕ್ಕಳಿಗೆ ಅದಿವೇಶನ ನಡೆಸಿ ಎಂದಾಗ ಬೇರೇನೂ ಮಾತಾಡದೆ ಖುರ್ಚಿ ಎತ್ತಿ ಜಗಳವಾಡಿದ್ದ ಹಳೆಯ ಜೋಕ್ ಒಂದು ಈ ಸಂದರ್ಭದಲ್ಲಿ ಬೇಡವೆಂದರೂ ನೆನಪಾಗದೆ ಇರದು. ಇದರ ಜೊತೆಗೆ ಪರಶುರಾಮ ಎನ್ನುವ ತಾನು ಪೊಟ್ಟಣ ಕಟ್ಟಿಸಿಕೊಂಡು ಹುಡುಗಿಯರಿಗೂ ತಂದುಕೊಡುವ ಭರವಸೆ ನೀಡಿದ್ದು ರಟ್ಟಾಗುತ್ತದೆ. ನಾಗ ಗೆದ್ದರೆ ಇವನ್ಯಾಕೆ ಪಾರ್ಸೆಲ್ ತಂದುಕೊಡಬೇಕು ಎಂಬ ಹಿನ್ನಲೆ ವಿಚಾರಿಸಿದರೆ ಪರಶುರಾಮನ ಮನೆಯವರು ತಳ್ಳುಗಾಡಿಯಲ್ಲಿ ಎಗ್‌ರೈಸ್ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದವರು. ಹೀಗಾಗಿ ನಾಗ ಎಗ್‌ರೈಸ್ ಕೊಡಿಸಿದರೆ ತಮಗೆ ಲಾಭವಾಗದೆಂಬ ದೂರಾಲೋಚನೆ ಆತನದ್ದು. ಇಲ್ಲಿ ಕಾಣುವ ವಾಸ್ತವದ ವಿಡಂಬನೆ ನಮ್ಮಲ್ಲಿ ನಗು ಹುಟ್ಟಿಸಿದರೂ ಅದೊಂದು ವಿಷಾದದ ನಗುವಾಗಿರುತ್ತದೆ.

ಇನ್ನು ಸಂಕಲನದ ಶೀರ್ಷಿಕಾ ಕಥೆ ಕೂಡ ಗಮನ ಸೆಳೆಯುತ್ತದೆ. ಪಾರಿವಾಳಗಳನ್ನು ಸಾಕಿ ಹಣ ಮಾಡಿಕೊಳ್ಳುವ ಮಕ್ಕಳ ಆಸೆ, ಪಾರಿವಾಳಗಳನ್ನು ಪಡೆಯಲು ಅಲ್ಲಿನ ಕೆಲವರ ಹುನ್ನಾರ, ತನ್ನಿಂದ ಸಾಕಲಾಗದೆಂದು ಗೆಳೆಯನಿಗೆ ಸಾಕಲು ಕೊಟ್ಟ ಹುಡುಗ ಹೀಗೆ ಪಾರಿವಾಳಗಳನ್ನು ವಿವಿಧ ಕರ‍್ಯಕ್ರಮಗಳಲ್ಲಿ ಹಾರಿಸುವಾಗ ಕೊಟ್ಟು ಹಣ ಮಾಡಲು, ಪಾರಿವಾಳಗಳ ನಡುವೆ ಸ್ಪರ್ಧೆ ಏರ್ಪಡಿಸಿ ಬೆಟ್ಟಿಂಗ್ ಗೆದ್ದು ಹಣ ಮಾಡುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಕಂಡು ಶಿಕ್ಷಕರು ದಿಗ್ಭಾçಂತರಾದರೂ ಕೊನೆಯಲ್ಲಿ ಶಾಲೆಯಲ್ಲಿ ಸ್ವಾತಂತ್ಯ್ರೋ ತ್ಸವದಂದು ಪಾರಿವಾಳ ಹಾರಿಸುವನಿರ್ಧಾರ ಮಾಡುವುದು ಒಂದಿಷ್ಟು ಆಶಾಭಾವನೆ ಹುಟ್ಟಿಸುತ್ತದೆ. ಈ ಕಥೆಯಲ್ಲಿ ಮಕ್ಕಳ ವ್ಯವಹಾರ ದೊಡ್ಡವರ ವ್ಯವಹಾರವನ್ನೂ ಮೀರಿಸಿದ ವ್ಯಾಪ್ತಿ ಪಡೆದುಕೊಳ್ಳುತ್ತದೆ. ಶಾಲೆಯಲ್ಲಿ ಏನು ಹೇಳಿಕೊಟ್ಟರೂ ಅರ್ಥವಾಗದ ಮಕ್ಕಳು ಇಲ್ಲಿ ಸಹಜವಾಗಿ ಹೆಣ್ಣು ಗಂಡು ಪಾರಿವಾಳಗಳ ದಾಂಪತ್ಯವನ್ನು ಅರಿಯುತ್ತಾರೆ. ಒಂದು ಸದೃಢ ಹೆಣ್ಣು ಅಥವಾ ಗಂಡು ಪಾರಿವಾಳ ತನ್ನ ಜೋಡಿಯನ್ನು ಹುಡುಕಿ ಕರೆದುಕೊಂಡು ಬರುವುದನ್ನು ಸಹಜವೆಂಬಂತೆ ಹೇಳಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳು ಸಣ್ಣವರೆಂದು ದೊಡ್ಡವರು ಅಂದುಕೊಳ್ಳುವುದು ಅದೆಷ್ಟು ತಪ್ಪು ಎನ್ನುವುದು ಇಲ್ಲಿ ಅರ್ಥವಾಗುತ್ತದೆ.

ರಾಮುವಿನ ನಾಯಿ ಹಾಗೂ ನಾಯಿಯೊಂದಿಗಿನ ಸೌಖ್ಯ ಕಥೆಯು ಮಕ್ಕಳು ಸಹಜವಾಗಿ ಪ್ರಾಣಿಗಳನ್ನು ಸಾಕುವ ಕಡೆಗೆ ತೋರಿಸುವ ಒಲವನ್ನು ಹೇಳುತ್ತದೆ. ಒಂದು ಕಥೆಯಲ್ಲಿ ಸಂಪ್ರದಾಯವಾದಿ ಅಜ್ಜಿಗೆ ಕಾಣದಂತೆ ನಾಯಿ ಸಾಕುವ ಮಕ್ಕಳು ಹಾಗೂ ಮತ್ತೊಂದು ಕತೆಯಲ್ಲಿ ಅಪ್ಪನನ್ನು ಕಾಡಿ ಹಠ ಮಾಡಿ ದುಬಾರಿ ನಾಯಿ ಕೊಡಿಸಿಕೊಂಡ ಹುಡುಗ. ಎರಡೂ ಕಥೆಯಲ್ಲಿ ಮಕ್ಕಳಲ್ಲಿರುವ ನಾಯಿ ಪ್ರೀತಿ ಎದ್ದು ಕಾಣುತ್ತದೆಯಾದರೂ ನಿರೂಪಣಾ ಶಯಲಿಯ ವ್ಯತ್ಯಾಸವನ್ನು ನೋಡಬಹುದು. ಒಂದು ಕಥೆಯಲ್ಲಿ ನಾಯಿ ಮಕ್ಕಳನ್ನು ಅತಿಯಾಗಿ ಹಚ್ಚಿಕೊಂಡಿದ್ದರೂ ಅನಿವರ‍್ಯವಾಗಿ ಮರಿ ಕಾದ ನಂತರ ದೂರ ಬಿಟ್ಟು ಬರಬೇಕಾದ ಸ್ಥಿತಿ. ಇನ್ನೊಂದರಲ್ಲಿ ನೂರು ಕೆಜಿ ದಾಟಿದ ಹುಡುಗ ನಾಯಿಯನ್ನು ಬೆಳಗಿನ ವಾಕ್‌ಗೆ ಕರೆದೊಯ್ಯುತ್ತ ಅದರ ಜೊತೆ ಓಡುತ್ತ ತೂಕ ಇಳಿಸಿಕೊಂಡ ಕಥೆ. ಎರಡೂ ಕಥೆಗಳಲ್ಲಿ ನಾಯಿಯನ್ನು ಎಷ್ಟೇ ದೂರ ಕಳಿಸಿದರೂ ಮತ್ತೆ ವಾಪಸ್ ಬರುವ ನಿಯತ್ತು. ಕೊನೆಯಲ್ಲಿ ಮಡಿ ಮೈಲಿಗೆಯನ್ನು ಅತಿಯಾಗಿ ಪಾಲಿಸುವಂತಹ ಅಜ್ಜಿಯೇ ಮನೆಯೊಳಗೆ ಬರದಂತೆ ಸಾಕಿಕೊಳ್ಳಿ ಎಂದರೆ ಮತ್ತೊಂದು ಕತೆಯಲ್ಲಿ ಕಾಡಿ ಬೇಡಿ ಉಳಿಸಿಕೊಂಡ ನಾಯಿಯನ್ನು ಸಾಕಲಾಗದೆ ಮಾರಿಬಿಡೋಣ ಎಂದು ಸೋತು ಹೇಳುವ ಹುಡುಗ.

ಪವಾಡ ಹಾಗೂ ದೆವ್ವ ಬಂತು ದೆವ್ವ ಕಥೆಗಳು ಇನ್ನೊಂದು ತೆರದವು. ಪವಾಡ ಕಥೆಯ ನಾಯಕ ನಾಗ ಶಾಲೆಗೆ ನಿಯಮಿತವಾಗಿ ಬರುವವನಲ್ಲ. ಪರೀಕ್ಷೆಗೆ ಬಂದು ಉಳಿದಂತೆ ತನ್ನದೇ ಕೆಲಸದಲ್ಲಿ ಇರುವವನು. ಶಿಕ್ಷಣ ಅತ್ಯಗತ್ಯ ಎಂದು ಹೇಳಿದರೆ ವಿದ್ಯಾವಂತರಲ್ಲದ ಅದೆಷ್ಟೋ ಜನ ಸುಖವಾಗಿ ಬಾಳುತ್ತಿರುವ ಉದಾಹರಣೆಗಳನ್ನು ಹೇಳುವವನು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಟ್ರಾಕ್ಟರ್ ಹೊಡೆಯುತ್ತ, ಹೊಲದ ಬದುಕನ್ನು ಹಸನಾಗಿ ನೋಡಿಕೊಳ್ಳುವವನು. ಕಲಿಯಲು ಮನಸ್ಸಿಲ್ಲದವನನ್ನು ಹಿಡಿದು ಕೂಡಿಟ್ಟು ಕಲಿ ಎನ್ನುವ ನಮ್ಮ ಶಿಕ್ಷಣ ಪದ್ದತಿಯ ಕುರಿತು ಆತನಿಗೆ ಅಸಮಧಾನವಿದೆ. ಹತ್ತನೆ ತರಗತಿ ಆಗದೆ ಲೈಸೆನ್ಸ್ ಸಿಗೋದಿಲ್ಲ ಎಂದು ನನ್ನನ್ನೂ ಸೇರಿಸಿ ಎಲ್ಲ ಶಿಕ್ಷಕರು ಹೆದರಿಸುತ್ತೇವೆ. ಆದರೆ ಇಲ್ಲಿ ಕಥೆಯ ನಾಯಕ ಶಾಲೆಗೇ ಹೋಗದವರೂ ಲೈಸೆನ್ಸ್ ಪಡೆದದ್ದು ಗೊತ್ತು ಎನ್ನುತ್ತಾನೆ. ಮಕ್ಕಳಿಗೆ ಅತ್ಯವಶ್ಯವಿರುವ ವಿದ್ಯೆ ನೀಡಬೇಕೆ ಹೊರತೂ ನಮಗೆ ಇಷ್ಟವಾದ ವಿದ್ಯೆಯನ್ನು ಏಕತಾನತೆಯಿಂದ ನೀಡಿ ಎರಕದಲ್ಲಿ ಅಚ್ಚು ಹುಯ್ದಂತೆ ತಯಾರು ಮಾಡುವುದಲ್ಲ ಎಂಬುದನ್ನು ಇಲ್ಲಿನ ಕಥಾ ನಾಯಕ ದಿಟ್ಟವಾಗಿ ಹೇಳುತ್ತಾನಾದರೂ ನಾವು ಶಿಕ್ಷಕರು ಅದನ್ನೆಲ್ಲ ಲೆಕ್ಕಿಸುವಂತಿಲ್ಲ. ನಮಗೆ ನಮ್ಮ ಹತ್ತನೆ ತರಗತಿಯ ಶಿಕ್ಷಣವೇ ಮುಖ್ಯ. ಹೀಗಾಗಿ ಶಿಕ್ಷಕರು ಮೈಮೇಲೆ ದೇವರು ಬರುವ ಅವಳ ಅಮ್ಮನ ಬಳಿಯೇ ಹುಡುಗನನ್ನು ಪ್ರತಿದಿನ ಶಾಲೆಗೆ ಕಳಿಸುವ ಅಪ್ಪಣೆ ಪಡೆದುಕೊಳ್ಳುತ್ತಾರೆ. ಈ ಕಥೆಯನ್ನು ಓದುವಾಗ ಶಿಕ್ಷಕರಾಗಿದ್ದರೆ ಖಂಡಿತಾ ಹಳೆಯದ್ದೊಮದು ನೆನಪು ಕಾಡದೆ ಬಿಡಲಾರದು. ನಾನು ಈಗ ವರ್ಗಾವಣೆಗೊಂಡು ಬಂದ ಹಿಂದಿನ ಶಾಲೆಯಲ್ಲಿ ಕೂಡ ಇಂತಹುದ್ದೇ ಒಬ್ಬ ಹುಡುಗನಿದ್ದ. ಓದು ಎಂದರೆ ಸಾಕು, ‘ಮುದ್ರೇನು ಬತ್ತೋಗುದೇ?’ ಎನ್ನುತ್ತಿದ್ದ. ಮೀನುಗಾರರ ಕುಟುಂಬದವನಾದ ಆತ ಮೀನು ಹಿಡಿಯುವುದೇ

ತನ್ನ ಕೆಲಸ ಎಂದು ನಿರ್ಧರಿಸಿಕೊಂಡಾಗಿತ್ತು. ಆಗಲೇ ದೊಡ್ಡ ದೊಡ್ಡ ಬಲೆಯಲ್ಲಿ ಮೀನು ಹಿಡಿಯುವುದು, ಯಾಂತ್ರಿಕೃತ ಬೋಟ್ ಚಲಾಯಿಸುವುದು ಕಲಿತಿದ್ದ ಹುಡುಗ ಆತ. ನನ್ನ ಕಾಟ ತಾಳದೆ ಯೋಚನೆ ಮಾಡ್ಬೇಡಿ ಟೀಚಾ, ಇಂಗ್ಲೀಸ್ ಪಾ ಆತಿ.’ ಎಂದು ಆಣೆ ಹಾಕಿದ್ದ. ಪರೀಕ್ಷೆಗೆ ಒಂದು ತಿಂಗಳಿದೆ ಎನ್ನುವಾಗಲೂ ಓದದೆ ಇದ್ದವನು ಕೊನೆಯ ಒಮದು ತಿಂಗಳು ಎಲ್ಲ ಗ್ರಾಮರ್ ಹೇಳಿಸಿಕೊಂಡು, ಪರೀಕ್ಷೆಗೆ ಬಂದೇ ಬರುತ್ತದೆ ಎನ್ನು ಪ್ರಶ್ನೋತ್ತರಗಳನ್ನು ಸುಲಭವಾಗಿ ಬರೆಯಿಸಿಕೊಂಡು ಊರು ಹೊಡೆದಿದ್ದ. ಫಲಿತಾಂಶ ಬಂದಾಗ ಉಳಿದ ಐದು ವಿಷಯಗಳಲ್ಲಿ ಫೇಲ್ ಆದರೂ ಇಂಗ್ಲೀಷ್‌ನಲ್ಲಿ ಪಾಸಾಗಿ ‘ಹೆಂಗೇ ಟೀಚಾ? ಇಂಗ್ಲೀಸ್ ಪಾಸಾಗಿ.’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ. ಆದರೆ ಆತನ ಮುಂದಿನ ಪ್ರಶ್ನೆ ಮಾತ್ರ ನನ್ನನ್ನು ತಲ್ಲಣಗೊಳಿಸಿತ್ತು. ‘ಇಂಗ್ಲೀಸ್ ಪಾಸಾಗಿ ಅಂದ್ಕೊಂಡೆ ನನ್ನ ಬಲೆಗೆ ಹೆಚ್ಚ್ ಮೀನ್ ಬೀಳೂದೇ ಟೀಚಾ?’ ಎಂದುಬಿಟ್ಟಿದ್ದ. ನಾನು ಉತ್ತರವೇ ಸಿಗದೆ ತಲೆ ತಗ್ಗಿಸಿದ್ದೆ. ಮಕ್ಕಳಿಗೆ ಅಗತ್ಯವಿರುವ ಶಿಕ್ಷಣವನ್ನು, ಅದರಲ್ಲೂ ಮೂಲ ಶಿಕ್ಷಣವನ್ನು, ಉದ್ಯೋಗ ಆಧಾರಿತ ಶಿಕ್ಷಣವನ್ನು ನೀಡಲು ನಾವಿನ್ನೂ ಸಫಲರಾಗಿಲ್ಲ ಎಂಬ ನೋವು ಬಹುತೇಕವಾಗಿ ಪ್ರೌಢಶಾಲಾ ಶಿಕ್ಷಕರಲ್ಲಿ ಕಾನುತ್ತದೆ. ಭಾರತದಂತಹ ದೇಶದಲ್ಲಿ ಹೊಸ ವಿಷಯಗಳನ್ನು ಕಲಿಯುವ ಖುಷಿಗಿಂತ ಮುಂದಿನ ಬದುಕು ಕಟ್ಟಿಕೊಳ್ಳಲು ಬೇಕಾದ ಶಿಕ್ಷಣದ ಅಗತ್ಯ ಹೆಚ್ಚಿದೆ.

ಇನ್ನು ದೆವ್ವ ಬಂತು ದೆವ್ವದ ಕಥೆಯಲ್ಲಿ ಹಾರರ್ ಸಿನೆಮಾಗಳನ್ನು ನೋಡುವ ಹುಚ್ಚಿರುವ ಹುಡುಗ ದೆವ್ವವನ್ನು ತಮಾಷೆ ಮಾಡುವ, ಮೊಬೈಲ್‌ನಲ್ಲಿ ಪಾಶ್ಚಾತ್ಯ ದೇಶಗಳ ಭಯಂಕರ ದೆವ್ವಗಳ ಫೋಟೊ ಹಾಗೂ ಧ್ವನಿ ಕೇಳಿಸಿ ಆಟ ಆಡಿಸುವ ತಮಾಷೆಯ ಪ್ರಸಂಗಗಳಿವೆ. ಅಯ್ಯೋ ಮೂಢನಂಬಿಕೆಯನ್ನು ಹೇಳಿದಂತಾಯ್ತಲ್ಲ ಎಂದುಕೊಳ್ಳುವ ಹೊತ್ತಿಗೆ ಇದು ಕನಸು ಎಂಬುದು ತಿಳಿಯುತ್ತದೆ.

ಹೇಳಿದ ಮಾತನ್ನು ಕೇಳದೆ ಕಾಡಿಗೆ ಹೋಗಿ ಚಿರತೆಗೆ ಚಿಪ್ಸ್ ಆಸೆ ತೋರಿಸಿ ಬೋನಿಗೆ ಬೀಳಿಸದ ಚಿರತೆ ಮತ್ತು ಸ್ನಾö್ಯಕ್ಸ್, ಕಂಪ್ಯೂಟರ್, ಟ್ಯಾಬ್‌ನಿಂದ ಎಲ್ಲ ಕಲಿತು ತಾನೇ ಜಾಣ ಎಂದು ಬೀಗಿ ಶಿಕ್ಷಕರನ್ನೂ ತಬ್ಬಿಬ್ಬು ಮಾಡುತ್ತ ಕೊನೆಗೆ ಮೊದಲನೆ ಸ್ಥಾನಕ್ಕಾಗಿ ನಡೆಯುವ ಪೈಪೋಟಿಯಲ್ಲಿ ಆಹ್ವಾನ ಸ್ವೀಕರಿಸಿದ ಸ್ನೇಹಿತನ ಕುರಿತು ಯೋಚಿಸುತ್ತ ಮನಸ್ಸಿನ ನೆಮ್ಮದಿ ಕೆಡಿಸಿಕೊಂಡ ನಾನೇ ಫಸ್ಟ್ ಮುಂತಾದ ಕಥೆಗಳು ಸರಾಗವಾಗಿ ಓದಿಸಿಕೊಳ್ಳುತ್ತ ನಮ್ಮ ನಡೆಯುವ ಸನ್ನಿವೇಶಗಳು ಎಂಬ ಭಾವ ನೀಡುತ್ತವೆ.

ಪ್ಲಾಸ್ಟಿಕಾಯಣ ಕಲಥೆಯು ಪ್ಲಾಸ್ಟಿ ಬಳಕೆಯ ಕಗ್ಗಂಟನ್ನು ತೋರಿಸುತ್ತದೆ. ನೈತಿಕವಾಗಿ ತಾವು ಮಾಡುತ್ತಿರುವುದು ತಪ್ಪು ಎನ್ನುವುದು ಗೊತ್ತಾದರೂ ಚರಂಡಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕೊಳಚೆಯನ್ನು ಮನೆಯಂಗಳದಲ್ಲಿ ಎಸೆದು ಬರುವ ಮಕ್ಕಳಿಗೆ ಒಂದು ಹಂತದಲ್ಲಿ ಪೌರಕಾರ್ಮಿಕರು ಸಾಥ್ ನೀಡುತ್ತಾರೆ. ನಂತರ ಊರು ಪ್ಲಾಸ್ಟಿಕ್ ಮುಕ್ತವಾಗುತ್ತದೆಯಾದರೂ ಅದು ತಾತ್ಕಾಲಿಕ ಎಂಬುದು ಎಲ್ಲರಿಗೂ ಅರಿವಿದೆ. ಆದರೆ ಶಾಶ್ವತ ಪರಿಹಾರವೇನು ಎಂಬುದು ಯಾರಿಗೂ ಗೊತ್ತಿಲ್ಲ.

ಇಲ್ಲಿನ ಬಹುತೇಕ ಕಥೆಗಳಿಗೆ ಒಂದು ತಾತ್ವಿಕ ಅಂತ್ಯವಿಲ್ಲ. ಕಥೆಗಾರರು ಇಲ್ಲಿ ಯಾವುದೇ ನೀತಿಯನ್ನು ಇಟ್ಟು ಉಪದೇಶ ನೀಡಲು ಹೊರಟವರಲ್ಲ. ಅದನ್ನು ಓದುಗರ ವಿವೇಚನೆಗೆ ಬಿಟ್ಟುಬಿಟ್ಟಿದ್ದಾರೆ. ಕಥೆಗಾರರು ಮೂಲತಃ ಹಾಸ್ಯ ಲೇಖಕರಾದ್ದರಿಂದ ಎಲ್ಲ ಕಥೆಗಳಲ್ಲೂ ಹಾಸ್ಯದ ಲೇಪನವಿದೆ. ಹಾಸ್ಯದ ಒಳಗೆ ತಿಳಿಯಬೇಕಾದ ಅಂಶಗಳೂ ಒಳಗೊಂಡಿದೆ. ಜೊತೆಗೆ ಶಿಕ್ಷಕರಾದ್ದರಿಂದ ಮಕ್ಕಳ ಮನಸ್ಥಿತಿಯ ಅರಿವೂ ಇದೆ. ಹೀಗಾಗಿ ಕಥೆಗಳು ಎಲ್ಲೂ ತೊಡಕಿಲ್ಲದೆ ಓದಿಸಿಕೊಳ್ಳುತ್ತವೆ.

ಈ ಅಂಕಣದ ಹಿಂದಿನ ಬರಹಗಳು:
ಭೂತ ವರ್ತಮಾನಗಳ ಬೆಸೆಯುವ ಕಥಾನಕ
ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ
ತಣ್ಣಗೆ ಕಥೆಯಾಗಿ ಹರಿಯುವ ಗಂಗಾವಳಿ
ಬದಲಾವಣೆಗಾಗಿ ಆತ್ಮಾವಲೋಕನವೊಂದೇ ಮಾರ್ಗ
ವಿಸ್ತಾರ ವಿಷಯದ ಗುಟುಕು ನೀಡುವ ಮಾಯದ ಕಥೆಗಳು
ಅಚ್ಚರಿಗೆ ನೂಕುವ ಹೊಳಹುಗಳು
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...