"ಹಯ್ದರಾಬಾದ ಕರ್ನಾಟಕದಲ್ಲಿ ಅಹಿಹಯರು "

Date: 05-02-2020

Location: ಕಲಬುರಗಿ


ಸಾರ್ವಭೌಮ ಅರಸರ ಅಧೀನದಲ್ಲಿ ನೂರಾರು ಮಾಂಡಲಿಕರು ಸ್ಥಳೀಯ ಆಡಳಿತದ ಜವಾಬ್ದಾರಿಯನ್ನು ಹೊಂದಿರುವ ಕುರಿತು ಶಾಸನಗಳು ವಿಪುಲ ಮಾಹಿತಿಯನ್ನು ನೀಡುತ್ತವೆ. ಅವರಲ್ಲಿ ಕೆಲವರು ಅರಸು ಮನೆತನದ ಸಂಬಂಧಿಗಳೂ ಆಗಿರುತ್ತಿದ್ದರು. ಹಲವರು ಸ್ವಂತ ಶಕ್ತಿಯ ಮೇಲೆ ನೆಲೆಗೊಂಡಿರುತ್ತಿದ್ದರು. ಇಂಥವರಲ್ಲಿ ಅಹಿಹಯ ಎಂಬ ಮನೆತನವೂ ಒಂದು. 

ಅಹಿಹಯ, ಹೇಹಯ, ಹೈಹಯರೆಂದು ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಮಾಂಡಲಿಕರು ಕಲ್ಬುರ್ಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮೂರ್ನಾಲ್ಕು ಶಾಖೆಗಳಾಗಿ ಚದುರಿದಂತೆ ಹತ್ತನೇ ಶತಮಾನದ ಉತ್ತರಾರ್ಧದಿಂದ ಹದಿಮೂರನೇ ಶತಮಾನದ ಪೂರ್ವಾರ್ಧದವರೆಗೆ ರಾಜಕೀಯ ರಂಗಭೂಮಿಯಲ್ಲಿ ಕಂಡುಬರುತ್ತಾರೆ. ಇವರು ತಮ್ಮನ್ನು ಮಾಹಿಷ್ಮತಿಪುರವರೇಶ್ವರರು, ಮದ್ಯದೇಶಾಧೀಶ್ವರರು, ಅಹಿಹಯ ವಂಶೋದ್ಭವರೆಂದು ಕರೆದುಕೊಂಡಿದ್ದಾರೆ. ಕಲ್ಯಾಣ ಚಾಲುಕ್ಯರು, ಕಲಚೂರಿಗಳು ಮತ್ತು ಸೇವುಣರಲ್ಲಿ ಮಂಡಲೇಶ್ವರ, ಮಹಾಮಂಡಲೇಶ್ವರರಾಗಿ ಸೇವೆ ಸಲ್ಲಿಸಿರುವರು. 

ಇವರನ್ನು ಮುಖ್ಯವಾಗಿ ಸಗರನಾಡಿನ ಅಹಿಹಯರು, ಎಡೆದೊರೆನಾಡಿನ ಅಹಿಹಯರು ಮತ್ತು ಅರಲು ಮುನ್ನೂರಿನ ಅಹಿಹಯರೆಂದು ಅಧ್ಯಯನ ಮಾಡಬಹುದಾಗಿದೆ. ಇವರೊಂದಿಗೆ ಮೊರಟದ ಅಹಿಹಯರು, ಅಯ್ಯಣವಾಡಿ ಅಹಿಹಯರು, ಮುದಗುಂದೂರು ಅಹಿಹಯರು, ಕೊರಲೂರು ಅಹಿಹಯರು, ಕಲ್ಲಕೆಳಗೈನೂರು ಅಹಿಹಯರು ಮತ್ತು ಆಡಕಿಯ ಅಹಿಹಯರೆಂದು ಅಧ್ಯಯನ ಮಾಡುವುದಕ್ಕೆ ಅವಕಾಶಗಳಿವೆ. 

ಸಗರನಾಡಿನ ಅಹಿಹಯರ ಆಳ್ವಿಕೆಯನ್ನು ಶಾಸನಗಳು ಚಂದಯ್ಯನಿಂದ ಸಾ.ಶ. 939 ರಲ್ಲಿ ಆರಂಭಿಸಿ ಸಾ.ಶ.1208 ರಲ್ಲಿ ಚಂದುಗಿದೇವರಸನವರೆಗೆ ದಾಖಲಿಸುತ್ತವೆ.ಇವರು ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರಮತ್ತು ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಹುತೇಕ ಪ್ರದೇಶಗಳನ್ನು(ಕೃಷ್ಣ ಮತ್ತು ಭೀಮೆಯರ ನಡುವಿನ ದೋ-ಅಬ್ )ಆಳಿದರು.ಇವರಲ್ಲಿ ಒಂದನೆ ರೇವರಸ ಬಹು ಪ್ರಸಿದ್ಧನಾಗಿದ್ದು ಅಹಿಹಯರ ಪ್ರವರ್ಧಮಾನಕ್ಕೆ ಅಡಿಗಲ್ಲು ಹಾಕಿದಂತೆ ಕಾಣುತ್ತದೆ. ಎಡೆದೊರೆ ನಾಡಿನಲ್ಲೂ ಅಹಿಹಯರ ಆಳ್ವಿಕೆಗೆ ನಾಂದಿ ಹಾಡಿದನು. ಈತನೊಂದಿಗೆ ಮಲ್ಲಿರೇವರಸ, ಅಲ್ಲಹುಲಿದೇವರಸರು ಪ್ರಮುಖ ಮಂಡಳೇಶ್ವರರಾಗಿದ್ದಾರೆ. ಕೆಂಬಾವಿ, ಯಡ್ರಾಮಿ,ಕೊಲ್ಲೂರು,ಮರಮಕಲ್ ಶಾಸನಗಳು ಇವರ ವಂಶಾವಳಿ ದಾಖಲಿಸುತ್ತವೆ. ಇದರೊಂದಿಗೆ ಸಿರವಾಳ, ಬೀಮರಾಯನಗುಡಿ, ಕೆಲ್ಲೂರು, ಸಂಗಮ,ಕಕ್ಕೇರಿ, ಹೋತಗಲ್ ಮುಂತಾದ ಶಾಸನಗಳನ್ನು ಇವರು ಹಾಕಿಸಿರುವರು. ಎಡೆದೊರೆ ನಾಡಿನ ಅಹಿಹಯರ ಕುರಿತು ಶಾಸನಗಳು ಸಾ.ಶ.1022 ರಿಂದ 1217 ರ ವರೆಗಿನ ಆಳ್ವಿಕೆಯನ್ನು ದಾಖಲಿಸುತ್ತವೆ. ಇವರು ರಾಯಚೂರು ಜಿಲ್ಲೆಯ ಮಾನ್ವಿ, ದೇವದುರ್ಗ ಮತ್ತು ಲಿಂಗಸೂರಿನ ಉತ್ತರ ಭಾಗಗಳಲ್ಲಿ ತಮ್ಮ ಆಳ್ವಿಕೆ ನೆಲೆಗೊಳಿಸಿದ್ದರು. ಲೋಕಾದಿತ್ಯರಸನಿಂದ ಇಮ್ಮಡಿ ಮಲ್ಲಿದೇವರಸನವರೆಗೆ ಅನೇಕರು ಆಳಿದ್ದು ರೇವರಸ, ಮಾನುವೆಯ ಮಳೆಯರಸ, ಒಂದನೇ ಮಲ್ಲಿದೇವರಸ,ಇಮ್ಮಡಿ ಮಲ್ಲಿದೇವರಸರು ಪ್ರಮುಖರಾಗಿದ್ದಾರೆ. ಮಲ್ಲಟ, ಗಬ್ಬೂರು, ಮಾನ್ವಿ, ಕಲ್ಲೂರು, ಬಲ್ಲಟಗಿ ಮುಂತಾದ ಶಾಸನಗಳನ್ನು ಇವರು ಹಾಕಿಸಿರುವರು.

ಅರಲು ಮುನ್ನೂರಿನ ಅಹಿಹರು ಕಲ್ಬುರ್ಗಿ ಜಿಲ್ಲೆಯ ಚಿತಾಪೂರು,ಸೇಡಂ ತಾಲೂಕು ಪ್ರದೇಶದಲ್ಲಿ ಸಾ.ಶ.1054 ರಿಂದ 1209 ರ ವರೆಗೆ ಆಳಿದ್ದು ಎರಗರಸ, ಲೋಕರಸ, ಬಿಜ್ಜರಸ, ಏಚರಸ ಮುಂತಾದವರು ಪ್ರಮುಖರಾಗಿರುವರು. ದಿಗ್ಗಾಂವ ಮತ್ತು ಹಂದರಕಿ ಶಾಸನಗಳು ಈ ಮನೆತನದ ವಂಶಾವಳಿಯನ್ನು ನೀಡುತ್ತವೆ. ನಾಗಾಯಿ, ಹಲಕರಟ, ಆಡಕಿ ಇನ್ನಿತರೆ ಇವರ ಪ್ರಮುಖ ಶಾಸನಗಳಾಗಿವೆ. ಇವರ ಆಡಳಿತವು ಅಧಿರಾಜರ ಆಡಳಿತದ ಪ್ರತಿರೂಪದಂತೆಯೇ ಇದ್ದು ಸ್ಥಳೀಯವಾಗಿ ರಾಜಕೀಯ ಸ್ಥಿರತೆಯನ್ನು ನೆಲೆಗೊಳಿಸುವಲ್ಲಿ ನಿರತವಾಗಿತ್ತು. ಇವರು ಶೈವ ಮತಾವಲಂಬಿಗಳಾಗಿದ್ದರೂ ವೈದಿಕ, ಜೈನ ಮತ್ತು ಇತರೆ ಪಂಥಗಳನ್ನು ಪೋಷಿಸಿರುವರು. ಸಂಸ್ಕೃತದೊಂದಿಗೆ ಕನ್ನಡಕ್ಕರದ ಬೆಳವಣಿಗೆಗೂ ನೀರೆರೆದರು. ಅನೇಕ ದೇವಾಲಯ, ಬಸದಿಗಳ ನಿರ್ಮಿಸಿ ದತ್ತಿ ವ್ಯವಸ್ಥೆ ಮಾಡುವ ಮೂಲಕ ಈ ನೆಲದ ಕಲೆಯನ್ನು ಬೆಳೆಸುವಲ್ಲಿ ಶ್ರಮಿಸಿರುವರು. 

ಈ ಮನೆತನಗಳ ನಡುವೆ ನಡೆದಿರಬಹುದಾದ ವೈವಾಹಿಕ ಇಲ್ಲವೇ ಯುದ್ಧ ಸಂಬಂಧಗಳ ಕುರಿತು ಶಾಸನಗಳು ಮೌನವಹಿಸಿವೆ. ಆದರೆ ಸಿಂದರು, ಆಂಧ್ರದ ಚೋಳರು, ಬಾಣರು, ಶಿಳಾರರು ಮುಂತಾದ ಅನ್ಯ ಮಾಂಡಲಿಕರೊಂದಿಗೆ ಉಂಟಾದ ವೈವಾಹಿಕ ಮತ್ತು ಯುದ್ಧ ಸಂಬಂಧಗಳ ಬಗ್ಗೆ ಕೆಲ ಮಾಹಿತಿಯನ್ನು ಶಾಸನಗಳು ನೀಡುತ್ತವೆ. ಈ ನೆಲದ ರಾಜಕೀಯ ಸ್ಥಿರತೆ, ಧಾರ್ಮಿಕ ಸಮನ್ವಯತೆ, ವ್ಯಾಪಾರದ ಪ್ರವರ್ಧಮಾನತೆ, ಶಿಕ್ಷಣ ಸಂಗೀತ ಕಲೆಗಳ ಪ್ರಫುಲ್ಲತೆಗೆ ಸುಮಾರು ಎರಡೂವರೆ ಶತಮಾನಗಳ ಕಾಲ ದುಡಿದ ಈ ಅಹಿಹಯರು ಹದಿಮೂರನೇ ಶತಮಾನದ ಪೂರ್ವಾರ್ಧದ ನಂತರ ಚರಿತ್ರೆಯ ರಂಗದಿಂದ ಕಣ್ಮರೆಯಾಗುತ್ತಾರೆ.

- ಎ.ಎಂ.ಸೈದಾಪುರ

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...