ಹೆಚ್ಚೇನು ಹೇಳೋಣ ಹೆಚ್ಚೆನ್‌ ಬಗ್ಗೆ ?


[1999ರ ಡಿಸೆಂಬರ್ 31ರ ನಡುರಾತ್ರಿ... ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಭೂಮಂಡಲವೇ ಸಜ್ಜಾಗಿತ್ತು. ಏಕೆಂದರೆ ಬರಲಿರುವುದು ಬರೀ ಹೊಸ ವರ್ಷ ಆಗಿರಲಿಲ್ಲ, ಹೊಸ ಶತಮಾನವೂ ಆಗಿತ್ತು. ಹೊಸ ಸಹಸ್ರಮಾನವೂ ಆಗಿತ್ತು. ಆ ಮಹಾನ್‌ ಸಂಭ್ರಮದ ಕ್ಷಣದಲ್ಲಿ ಡಾ. ಎಚ್‌ ನರಸಿಂಹಯ್ಯ ಏನು ಮಾಡುತ್ತಿದ್ದರು? ಎಚ್ಚೆನ್‌ ಬಗ್ಗೆ ಎನ್ನೆಚ್‌ ಬೀರಿದ ಕಿರುನೋಟ...]
 

ಅಬ್ಬ, ಅದೆಂಥ ಮಿಲೆನಿಯಂ ಹಬ್ಬ! ಬೆಂಗಳೂರಲ್ಲಂತೂ ಹುಚ್ಚು ಸಂಭ್ರಮ. ಸಮುದ್ರ ಉಕ್ಕೇರಿದಂತೆ ಜನಸಾಗರವೇ ಮಹಾತ್ಮಾ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಯತ್ತ ಬಂದು ಜಮಾಯಿಸುತ್ತಿತ್ತು. 

ರಾತ್ರಿ ಹನ್ನೊಂದಾಯಿತು. ‘ಪ್ರಜಾವಾಣಿ’ ಕಚೇರಿಯಲ್ಲೂ ಅವ್ಯಕ್ತ ಆತಂಕ,  ಸಂಭ್ರಮ.  ಯಾವುದೋ ಭಯೋತ್ಪಾತ ಸಂಭವಿಸೀತು, ವೈಟೂಕೆ ವೈರಸ್‌ ಹಠಾತ್‌ ಉದ್ಭವಿಸೀತು. ಅದನ್ನು ಎದುರಿಸಲು ಜಗತ್ತಿನ ಎಲ್ಲೆಲ್ಲಿ ಎಂತೆಂಥ ಸಿದ್ಧತೆ ನಡೆಯುತ್ತಿತ್ತೆಂಬ ವರದಿಗಳು ಟೆಲಿಪ್ರಿಂಟರ್‌ನಲ್ಲಿ ಬರುತ್ತಿದ್ದವು. ಜಗತ್ತಿನ ಯಾವ ಯಾವ ದೇಶದ ಯಾವ ಯಾವ ಗಣ್ಯರು, ಯಾವ ಯಾವ ಸಿನೆಮಾ ತಾರೆಯರು ಮಿಲೆನಿಯಂ ಸ್ವಾಗತಕ್ಕೆಂದು ಯಾವ ಯಾವ ಬೀಚ್‌ಗಳಲ್ಲಿ, ಯಾವ ಯಾವ ಹೊಟೇಲ್‌ಗಳಲ್ಲಿ ಸೇರಲಿದ್ದರು, ಅವರಿಗಾಗಿ ಎಂತೆಂಥ ಅದ್ಧೂರಿ ಸಿದ್ಧತೆಗಳು ನಡೆದಿದ್ದವು ಎಂಬುದರ ಸಮೀಕ್ಷೆಗಳು ಬರುತ್ತಿದ್ದವು.ಅಂಥ ವರದಿಗಳ ಮೇಲೆ ಕೊನೆಯ ಬಾರಿ  ಕಣ್ಣು ಹಾಯಿಸಿ ನಾನೂ ರಸ್ತೆಗೆ ಇಳಿದೆ.  ಜನಜಂಗುಳಿಯನ್ನು, ಪೊಲೀಸರ ಕಿಕ್ಕಿರಿದ ಬಂದೋಬಸ್ತುಗಳನ್ನು ದಾಟಿಕೊಂಡು ಗಾಂಧೀನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಬಂದೆ.

ನ್ಯಾಷನಲ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ನನ್ನ ಮಗ ಹೇಮಂತ ತನ್ನ ನಾಲ್ವರು ಟೀಮ್‌ಮೇಟ್‌ಗಳ ಜತೆ ಬಸ್‌ ನಿಲ್ದಾಣಕ್ಕೆ ಬರುವವನಿದ್ದ. ಬಾಗಲಕೋಟೆಯಲ್ಲಿ ನಡೆಯಲಿರುವ ಮಕ್ಕಳ ವಿಜ್ಞಾನ ಪ್ರದರ್ಶನಕ್ಕೆಂದು ಅವರೊಂದಿಗೆ ಅಂದು ರಾತ್ರಿ ಬಸ್‌ನಲ್ಲಿ ಹೊರಡುವವನಿದ್ದ. ಅವನ ಟೀಮ್‌ಗೆ ವಿದಾಯ ಹೇಳಲೆಂದು ಹೋದರೆ ಅಲ್ಲಿನ ಬಿಕೋ ಎನ್ನುವ ಬೀದಿಯಲ್ಲಿ ಒರಟು ಹಾಸುಗಲ್ಲಿನ ಫುಟ್‌ಪಾತ್‌ನಲ್ಲಿ ಅರೆಗತ್ತಲಲ್ಲಿ ಎಂಭತ್ತರ ವಯೋವೃದ್ಧ, ಮಾಜಿ ಕುಲಪತಿ, ಪದ್ಮಭೂಷಣ ಡಾ. ಎಚ್. ನರಸಿಂಹಯ್ಯ ಮೆಲ್ಲಗೆ, ಒಬ್ಬಂಟಿಯಾಗಿ ಹೆಜ್ಜೆ ಹಾಕುತ್ತಿದ್ದರು. ಟೋಪಿ ಇತ್ತು. ಕನ್ನಡಕ ಇರಲಿಲ್ಲ. ಸಾಲಾಗಿ ನಿಂತ ಬಸ್‌ಗಳಲ್ಲಿ ಒಂದೊಂದರ ಬಳಿಗೂ ಹೋಗಿ ಅವರು ಕತ್ತೆತ್ತಿ, ಕಣ್ಣು ಕಿರಿದುಗೊಳಿಸಿ ಬೋರ್ಡ್ ನೋಡುತ್ತಿದ್ದರು. ಕಲ್ಲು ಎಡವದಂತೆ ಮೆಲ್ಲಗೆ ಸಾಗುತ್ತ, ಬಾಗಲಕೋಟೆಗೆ ಹೊರಟು ನಿಂತಿದ್ದ ಕಡೆ ಬಂದರು.

‘ಎಲ್ಲಿಗೆ ಹೊರಟಿರಿ ಸಾರ್?’ ಎಂದು ಕೇಳಿದೆ. 
‘ಎಲ್ಲಿಗೂ ಇಲ್ಲಪ. ಈ ಮಕ್ಕಳು ಸೈನ್ಸ್ ಎಕ್ಸಿಬಿಷನ್‌ಗೆ ಹೋಗ್ತಿದಾರೆ. ಅವರಿಗೆ ವಿಷ್ ಮಾಡಿ ಹೋಗೋಣಾಂತ ಬಂದೆ’ ಎಂದರು.
  
ಮಕ್ಕಳೆಲ್ಲ ಏರಿಕೂತ ಬಸ್ಸನ್ನು ತಾವೂ ಕಷ್ಟಪಟ್ಟು ಏರಿ, ಅಲ್ಲಿದ್ದ ಐವರನ್ನೂ ಹೆಸರಿಸಿ ಮಾತಾಡಿಸಿ, ಕೊಂಚ ಹೊತ್ತು ತಮಾಷೆಯ ಕತೆ ಹೇಳಿ,  ‘ಹೋಗಿ ಬರ‍್ರೆಪಾ, ಈ ಬಾರಿಯೂ ಫಸ್ಟ್‌ ಪ್ರೈಝ್  ನಮ್ಮದೇ ಆಗಬೇಕು!'  ಎಂದು ಹಾರೈಸಿ ಕೆಳಗಿಳಿದರು.
 
ತನ್ನ ಸ್ವಂತದ್ದೆಂಬ ಮಕ್ಕಳಿಲ್ಲ, ಮೊಮ್ಮಕ್ಕಳಿಲ್ಲ. ಆದರೂ ಅವರ ಕನಸಿನಲ್ಲಿ ಮಕ್ಕಳೇ ತುಂಬಿದ್ದುವೇನೊ.  ಹೊಸ್ತಿಲಲ್ಲಿರುವ ಹೊಸ ಸಹಸ್ರಮಾನದ ಕೃತಕ ಸಂಭ್ರಮಕ್ಕೆ ಅಲ್ಲಿ ಸ್ಥಾನವಿರಲಿಲ್ಲ. ಅವರಿಗೆ ವಿಜ್ಞಾನ ಮುಖ್ಯವಾಗಿತ್ತು. ಅದನ್ನು ಈ ಮಕ್ಕಳು ಸುರಕ್ಷಿತವಾಗಿ ಮುಂದಕ್ಕೆ ಕೊಂಡೊಯ್ಯುತ್ತಾರೊ ಅಥವಾ ವಿಜ್ಞಾನವೇ ಈ ಹೊಸಪೀಳಿಗೆಯನ್ನು ಹೈಜಾಕ್‌ ಮಾಡುತ್ತದೊ ಎಂಬ ಆತಂಕದಲ್ಲಿ ಎಳೆಯರನ್ನು ಕೈಹಿಡಿದು ಮುನ್ನಡೆಸುವ ಕನಸುಗಳೇ ಅಲ್ಲಿ ತುಂಬಿದ್ದುವೇನೊ. ಬಸ್‌ನಿಂದ ಎಚ್ಚೆನ್‌ ಕೆಳಕ್ಕಿಳಿದರು. ಮೆಜೆಸ್ಟಿಕ್‌ನಲ್ಲಿ ಸಹಸ್ರಮಾನ ಸ್ವಾಗತದ, ಮೋಜುಮಸ್ತಿಯ ಗಲಾಟೆ ಭೋರ್ಗರೆಯುತ್ತಿತ್ತು. 

[ನಾಗೇಶ ಹೆಗಡೆ ಅವರ 'ಮುಷ್ಟಿಯಲ್ಲಿ ಮಿಲೆನಿಯಂ' ಗ್ರಂಥದಿಂದ]

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...