ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ

Date: 30-11-2021

Location: ಬೆಂಗಳೂರು


‘ಕರ್ನಾಟಕದ ಸಂದರ್ಭದಲ್ಲಿ ಉತ್ತರ ದಕ್ಷಿಣದ ತಾರತಮ್ಯ ಅಧಿಕ.‌ ಬಲಾಢ್ಯ ದಕ್ಷಿಣವು ಉತ್ತರವನ್ನು ಎಲ್ಲ ಬಗೆಯಲ್ಲೂ ನೋಡುವ ರೀತಿ ಮಲತಾಯಿ ನೀತಿ. ಉತ್ತರವು ಸದಾ ದಕ್ಷಿಣದ ದಾಕ್ಷಿಣ್ಯದಲ್ಲಿರುವಂತಾಗಿದೆ’ ಎನ್ನುತ್ತಾರೆ ಹಿರಿಯ ಲೇಖಕ ಹಾಗೂ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿಬುತ್ತಿ’ ಅಂಕಣದಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಗಳ ನಡುವಿನ ತಾರತಮ್ಯದ ಕುರಿತು ವಿಶ್ಲೇಷಿಸಿದ್ದಾರೆ. 

ಈ ಶೀರ್ಷಿಕೆ ಅನೇಕ ಸಲ ಅನೇಕರನ್ನು ಕಾಡಿರದಿದ್ದರೂ ಕೆಲವರನ್ನಾದರೂ ಕೆಲವೊಮ್ಮೆ ಕಾಡುತ್ತಿರುತ್ತದೆ. ಅದು ರಾಜಶಾಹಿ ಮತ್ತು ಅಧಿಕಾರಶಾಹಿ ಪ್ರಭುತ್ವದ ಖಾಸಗಿ ಒಳಸೇತುಗಳ ಸಂಭಾವ್ಯ ಹುನ್ನಾರದ ಪರಿಣಾಮ. ತಳಕು ಹಾಕಿದ ಇಂತಹ ಸಂಭವನೀಯ ಸಂಗತಿಗಳನ್ನು ಸೀಳಿ ನೋಡಿದಾಗ ಹಿಡನ್ ಹಿಡಿತಗಳು ಗಂಭೀರ ಚಿಂತನೆಗೀಡು ಮಾಡುತ್ತವೆ.  

ಅಂದಹಾಗೆ ಮೋದಿ ಮೊದಲ ಬಾರಿ ಪ್ರಧಾನಿಯಾದ ಹೊಸದರಲ್ಲಿ ಆರೇಳು ತಿಂಗಳುಗಳ ಕಾಲ ದಿಲ್ಲಿಯ ಒಟ್ಟು ವ್ಯವಸ್ಥೆ ಅವರಿಗೆ ಒಲಿಯುತ್ತಿರಲಿಲ್ಲ. ಸಣ್ಣದೊಂದು ಬಗೆಯ ಅಗೋಚರ ಅಸಹಕಾರ ಮತ್ತು ಅಸಹನೀಯತೆ. ಅವರನ್ನು ಬಹುಳ ಪ್ರಜ್ಞೆ ಭಾರತದ ಪ್ರಧಾನಿಯಾಗಿ ನೋಡುವ ಬದಲು ಅಧಿಕ ಪ್ರಮಾಣದಲ್ಲಿ ಗುಜರಾತಿಯನ್ನಾಗಿಯೇ ನೋಡುವ ದಿಲ್ಲಿಯ ಒಳಗಣ್ಣುಗಳು. ಅಂತಹ ಅಮೂರ್ತ ಬಿಕ್ಕಟ್ಟು ಬಗೆಹರಿಯಲು ಪ್ರಣಬ್ ಮುಖರ್ಜಿ ಅವರಂತಹ ಮಹನೀಯರು ಪ್ರಧಾನಿ ನೆರವಿಗೆ ನಿಂತರು. ತನ್ಮೂಲಕ ದೇಶಹಿತದ ಮುನ್ನಡೆಗೆ ಸಹಕರಿಸಿದರೆಂದು ಓದಿ, ಕೇಳಿ ತಿಳಿದಿದ್ದೇನೆ. 

ಇಂತಹ ಪ್ರಸಂಗಗಳು ದಿಲ್ಲಿ ಭೌಗೋಳಿಕ ದೂರದ ಊರೆಂಬ ಅಂತರದ ದೂರಿಗೆ ಸೇರಿದ್ದಲ್ಲ. ಇದೊಂದು ತರಹದ ಪ್ರಾದೇಶಿಕತೆಯ ಮನೋದೈಹಿಕ ಸೂಕ್ಷ್ಮ ಸ್ವರೂಪದ ಒಳಸತ್ಯ. ಸ್ಥಳೀಯ ಸ್ಥಾಪಿತ ವ್ಯವಸ್ಥೆಯೊಂದರ ಸಿದ್ಧಸೂತ್ರದ ಭೂಮಿಕೆಯೇ ಅದಾಗಿದೆ. ಭಾಷಿಕ ನೆಲೆಯ ವರಸೆಯೂ ಸೇರಿದಂತೆ ಒಟ್ಟಾರೆ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ನಡವಳಿಕೆಗಳು ಇಂಥಲ್ಲಿ ಪ್ರಚಲಿತಗೊಳ್ಳುತ್ತವೆ. ರಾಜಕೀಯ ಪರಿಸರದ ಬಾಹುಳ್ಯಕ್ಕೆ ಅದನ್ನೆಲ್ಲ ನಿಯಂತ್ರಿಸುವ ಪರಿಪಾಠ ಬೆಳೆದು ಬಂದಿದೆ. ಅಂತೆಯೇ ಸಹಜವಾಗಿ ದಿಲ್ಲಿಗೊಂದು ಖದರ್. ಅದಕ್ಕೆ ಅಲ್ಲಿಯದೇ, ಅದರದೇ ಹವಾ. ಪ್ರಾಯಶಃ ಇಂತಹ ಸಟಪಟ ಕಾರಣಗಳಿಗಾಗಿಯೇ ಅಂದಿನ ಪ್ರಧಾನಿ ದೇವೇಗೌಡರು ಕಷ್ಟಪಟ್ಟು ಹಿಂದಿ ಕಲಿತು ಕೆಂಪುಕೋಟೆಯ ಭಾಷಣ ಮಾಡಿದರು.  

ದಿಲ್ಲಿ ಶೈಲಿಯಲ್ಲೇ ಆಯಾ ರಾಜ್ಯಗಳಿಗೆ ಅಲ್ಲಲ್ಲಿ ಉತ್ತರ ದಕ್ಷಿಣ, ಪೂರ್ವ ಪಶ್ಚಿಮಗಳ ವೈಪರೀತ್ಯದ ಹವಾಮಾನ. ಅದು ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಅಸಮಾನತೆಯ ವಿದ್ಯಮಾನ. ಇದು ಇಷ್ಟೇ ಆಗಿದ್ರೇ ಹೋಗಲಿ ಬಿಡೆಂದು ಸ್ಯಾನಿಟೈಸರಿಂದ ಕೈ ತೊಳೆದು ಸುಮ್ಮನಿರಬಹುದಿತ್ತು. ಅದರಾಚೆಗಿನ ಆಳದ ಮತ್ತು ಆಖೈರಿನ ಕಾರಣಗಳು ಅರಿವಿಗೆ ಬಾರದೇ ಮ್ಯುಸಿಕಲ್ ಕುರ್ಚಿ ಆಟದವರೆಗೆ ಅದರ ಬೆಳವಣಿಗೆ.

ಕರ್ನಾಟಕದ ಸಂದರ್ಭದಲ್ಲಿ ಉತ್ತರ ದಕ್ಷಿಣದ ತಾರತಮ್ಯ ಅಧಿಕ.‌ ಬಲಾಢ್ಯ ದಕ್ಷಿಣವು ಉತ್ತರವನ್ನು ಎಲ್ಲ ಬಗೆಯಲ್ಲೂ ನೋಡುವ ರೀತಿ ಮಲತಾಯಿ ನೀತಿ. ಉತ್ತರವು ಸದಾ ದಕ್ಷಿಣದ ದಾಕ್ಷಿಣ್ಯದಲ್ಲಿರುವಂತಾಗಿದೆ. ಇದುವರೆಗೆ ಉತ್ತರದ ಒಬ್ರೇ ಒಬ್ಬರೂ ಪೂರ್ಣಾವಧಿ ಮುಖ್ಯಮಂತ್ರಿ ಆಗಿಲ್ಲ. ಅದರಲ್ಲೂ ಹೈದರಾಬಾದ್ ಕರ್ನಾಟಕದ ಕತೆ ಹೇಳತೀರದು. ಅದೀಗ ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ. ಮುನ್ನೂರೆಪ್ಪತ್ತೊಂದು ಜೆ, ಮುಂತಾಗಿ ಆರ್ಟಿಕಲ್ ಲಾಗೂ ಆದಮೇಲೂ ಅದು ಹಳೆಯ ಹದಗೆಟ್ಟ ಹೈದರಾಬಾದ್ ಕರ್ನಾಟಕದ ಚೆಹರೆಗಳನ್ನೇ ಬದುಕಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದಕ್ಷಿಣದೊಂದಿಗೆ ಹೋಲಿಕೆ ಮಾಡದಷ್ಟು ಫರಕು. ಅದಕ್ಕೆಂದೇ "ಜಾಂದೇ ಚೋಡೋ"  ಮಾತುಗಳು ನಮಗೆ ಹಕ್ಕಿನೊಡೆತನದಂತೆ ಅಂಟಿಕೊಂಡಿವೆ. 

ಇದು ಇಂದು ನಿನ್ನೆಯದಲ್ಲ. ಏಕೀಕರಣ ಪೂರ್ವದ ಕಾಲದಿಂದಲೂ ನಡೆದುಬಂದ ಹಾದಿ ಅದು. ಕುವೆಂಪು ಹೊರತು ಪಡಿಸಿದರೆ ಹಳೇ ಮೈಸೂರು ಪ್ರಾಂತ್ಯದ ಕೆಲವು ಹೆಸರಾಂತ ಸಾಹಿತಿಗಳಿಗೆ ಏಕೀಕರಣ ಬೇಡವಾಗಿತ್ತು. ಅದರಲ್ಲೂ ಅವರಿಗೆ ನಮ್ಮ ಹೈ. ಕ. ಬೇಡವೇ ಬೇಡ ಎಂಬುದಾಗಿತ್ತು. ಹಾಗೆ ನೋಡಿದರೆ ಈಗ ಆಗಿರುವುದು ರಾಜಕೀಯ ಏಕೀಕರಣ. ಅದರಲ್ಲೂ ಲಿಂಗಾಯತ ಮತ್ತು ಒಕ್ಕಲಿಗ ಎಂಬ ಎರಡು ಪ್ರಮುಖ ಸಮುದಾಯಗಳ ರಾಜಕೀಯ ಏಕೀಕರಣದಂತಾಗಿದೆ. ಸಾಂಸ್ಕೃತಿಕ ಕರ್ನಾಟಕದ ಏಕೀಕರಣ ಆಗಿಲ್ಲ. 


ಸಾಹಿತ್ಯಕವಾಗಿ ಮೈಸೂರು ಬೆಂಗಳೂರಿಗರ ದೃಷ್ಟಿಕೋನವೇ ಬೇರೆ. ದೇವನೂರರ ಸಾಹಿತ್ಯಕ್ಕೆ ದಕ್ಕುವ ಮಹತ್ವ ವಾಲೀಕಾರ ಚೆನ್ನಣ್ಣನ ಸಾಹಿತ್ಯಕ್ಕೆ ಸಿಗುವುದಿಲ್ಲ. ಲಂಕೇಶರ 'ಅಕ್ಷರ ಹೊಸಕಾವ್ಯ' ನಮ್ಮನ್ನು ಅಜ್ಞಾತಕ್ಕೆ ತಳ್ಳಿತು. ಆಗ 'ಬೆನ್ನ ಹಿಂದಿನ ಬೆಳಕಾಗಿ' ಬಂದವರು ಶಾಂತರಸರು, ನಮ್ಮವರು. ಅದು ಬರೀ ಅಸ್ಮಿತೆಯ ಬೆಳಕಲ್ಲ., ಕನ್ನಡದ ಅನನ್ಯತೆಯ ಬೆಳಕು. ಸಾಂಸ್ಕೃತಿಕವಾಗಿ ಇಂತಹ ಹತ್ತಾರು ನಿದರ್ಶನಗಳಿವೆ. ಬೆಂಗಳೂರಿಗೆ ಎಲ್ಲವನ್ನೂ ತನ್ನಲ್ಲೇ ಇಟ್ಟುಕೊಳ್ಳುವ ಯಜಮಾನಿಕೆಯ ಉಮೇದು. ಅದು ಅಘೋಷಿತ ಕಲ್ಚರಲ್ ಹೈಕಮಾಂಡ್‌.  ಬೆಂಗಳೂರೇತರ ಉ.ಕ. ಇಲ್ಲವೇ ಹೈ.ಕ. ದೈನೇಸಿ ದನಿಯಲ್ಲಿ ಬೇಡುವ ಮತ್ತು ಬೆಂಗಳೂರು ತನಗೆ ತಿಳಿದಷ್ಟು ಅವುಗಳಿಗೆ ನೀಡುವ ವಾಡಿಕೆ ಬೃಹದಾಕಾರವಾಗಿ ಬೆಳೆದು ಬಿಟ್ಟಿದೆ. ಅದರಲ್ಲೂ ತಾಂತ್ರಿಕ ಜ್ಞಾನದ ಬಲಾಢ್ಯತನ ಭಾರವಾಗುವಷ್ಟು ಬೆಳೆಸಿಕೊಂಡಿದೆ. 

ಅದೇ ಉತ್ತರದ ಇಲ್ಲವೇ ಈಶಾನ್ಯದ ಹೈ.ಕ. ಮೆತ್ತಗಾಗಿ ಹೋಗಿದೆ. ಇವತ್ತಿಗೂ ಬೆಂಗಳೂರು ಮತ್ತು ಮೈಸೂರು ಕಡೆಯ ಕೆಲವು ಮಂದಿ ಕಲಬುರ್ಗಿ ಮತ್ತು ಗುಲಬರ್ಗಾ ಎರಡೂ ಬೇರೆ ಬೇರೆಯೇ.? ಬಿಜಾಪೂರವೂ ಹೈದರಾಬಾದ್ ಕರ್ನಾಟಕವೇ ಎಂದು ಕೇಳುವವರಿದ್ದಾರೆ. ನಮ್ಮ ಹೈದ್ರಾಬಾದ್ ಕರ್ನಾಟಕವು ಅಧಿನಾಯಕನಿಲ್ಲದೇ ಸದಾ ನರಳಾಟದಲ್ಲೇ ಸೊರಗಿ ಸೋತು ಸುಣ್ಣವಾಗಿದೆ. ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ ಬೆಳಗಾವಿಗಳೇ ಮಾತ್ರ ಎಂಬಂತೆ ಥಟ್ಟಂತ ನೆನಪಾಗ್ತವೆ. ಪಾಪು ಅಂಥವರಿಗೂ ಹಾಗೇ ಅನಿಸಿತ್ತು. ಯಾದಗಿರಿ, ಕಲಬುರಗಿಗಳು ಯಾರಿಗೂ ನೆನಪಿಗೆ ಬರೊಲ್ಲ. ಒಂದೆರಡು ಜಿಲ್ಲೆಗಳಲ್ಲಿ ಹರಿದಾಡುವ ಕಾವೇರಿ ಕನ್ನಡ ಸಿನೆಮಾ ಜಗತ್ತಿಗೆ ಸಮಸ್ತ ಕನ್ನಡಿಗರ "ಜೀವನದಿ"ಯಾಗಿ ಹರಿದಾಡುತ್ತದೆಂದು ಬೇಸರವೇನಿಲ್ಲ.

ಆದರೆ ಆರೇಳು ಜಿಲ್ಲೆಗಳಲ್ಲಿ ತುಂಬಿ ತುಳುಕ್ಯಾಡಿ, ಹಾಳತವಾಗಿ ಹರಿದಾಡುವ ಕೃಷ್ಣೆ, ಭೀಮೆ, ತುಂಗಭದ್ರೆಯರು ಬರಿದು ಬರೀನದಿಗಳೆಂದೇ ಸಾಹಿತ್ಯ, ಸಿನೆಮಾ ಲೋಕದಲ್ಲಿ ಬಣ್ಣನೆಗೀಡಾಗುತ್ತವೆ. ಅಷ್ಟು ಮಾತ್ರವಲ್ಲ ''ಭೀಮಾತೀರದ ಹಂತಕರು" ಎಂಬ ಸಿನೆಮಾಕ್ಕೆ ಹೆಸರಾಗುತ್ತವೆ. ಭೀಮಾತೀರದ ಪರಿಸರವು ಕಡಕೋಳ ಮಡಿವಾಳಪ್ಪ, ರಾಮಪುರದ ಬಕ್ಕಪ್ಪ, ಅವಧೂತ ಪರಂಪರೆಯ ಗಾಣಗಾಪುರದ ದತ್ತಾವಧೂತ, ಮಧುರ ಚೆನ್ನ, ಪಿ. ಧೂಲಾಸಾಹೇಬರಂಥ ಅನುಭಾವಿ ಲೋಕಮಾನ್ಯರ ಸೌಹಾರ್ದ, ಸಾಂಸ್ಕೃತಿಕ ಸಮೃದ್ಧಿಯಿಂದ ತುಂಬಿ ತುಳುಕಿದ ನಾಡು. ಭೀಮಾತೀರದ ಹಂತಕರ ಹೆಸರಿನ  ಆರ್ಭಟದ ಅವಾಜಿನಲ್ಲಿ ಬಹುದೊಡ್ಡ ನೆಲಧರ್ಮ ಸಂಸ್ಕೃತಿ ನೇಪಥ್ಯಕ್ಕೆ ಸರಿದು ನಿಲ್ಲುತ್ತದೆ. ನೆನಪಿರಲಿ : ಉತ್ತರ ಕರ್ನಾಟಕದಲ್ಲಿ ಕೃಷ್ಣೆಗಿಂತ ಕಾವೇರಿ ಉಳಿವಿಗಾಗಿ ಹೆಚ್ಚು ಹೋರಾಟಗಳು ಜರುಗಿವೆ.

ಆದರೆ ಬೆಂಗಳೂರು ಕೇಂದ್ರಿತ ಸಾಂಸ್ಕೃತಿಕ ಸಾಮ್ರಾಜ್ಯ ಬಹುದೂರದ ಉ.ಕ, ಮತ್ತು ಹೈ. ಕ. ಲೋಕದ ಮೇಲೆ ಹಿಡಿತ ಸಾಧಿಸಿ ಅದರ ಸಕಾರಾತ್ಮಕ ಬೆಳವಣಿಗೆಗೆ ಅಡ್ಡಿಯಾಗ್ತದೆ. ಭಾಳಂದ್ರ ಸಿನೆಮಾ ಲೋಕಕ್ಕೆ ನಮ್ಮಭಾಗದ ಭಾಷೆ ಮತ್ತು ನಮ್ಮ ಕಲಾವಿದರು 'ಹಾಸ್ಯಕ್ಕಾಗಿ ಮಾತ್ರ' ಎಂಬಂತೆ ಬಳಕೆಯಾಗಿದೆ. 

ಬೀದರ, ಕಲಬುರಗಿ, ಯಾದಗಿರಿ, ರಾಯಚೂರುಗಳು ಉರ್ದು ಎಂಬ ಮಧುರ ಭಾಷೆಯ ಆಡುಂಬೊಲ. ಅಲ್ಲಿನ ಯಾವುದಾದರೂ ಜಿಲ್ಲೆಯಲ್ಲಿ ಕರ್ನಾಟಕ ಉರ್ದು ಅಕಾಡೆಮಿ ಇರಬೇಕಿತ್ತು. ಉತ್ತರಾದಿ ಶಾಸ್ತ್ರೀಯ ಸಂಗೀತದ ಮೇರುಪರ್ವತಗಳು, ಐದಾರು ಪದ್ಮವಿಭೂಷಣರಿಂದ ವಿರಾಜಮಾನವಾಗಿರುವ ಧಾರವಾಡದಂತಹ ಸಂಗೀತದ ರಾಜಧಾನಿಯಲ್ಲಿ ಕರ್ನಾಟಕ ಸಂಗೀತ ಅಕಾಡೆಮಿ ಇರಬೇಕು. ನಾಟಕಗಳ ತವರುಮನೆ ಡಾವಣಗೇರಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಇರಬೇಕು. 

ಆದರೆ ಅಕಾಡೆಮಿಗಳೆಲ್ಲವೂ ಬೆಂಗಳೂರಿನಲ್ಲೇ ಗೂಟ ಬಡಕೊಂಡು ಕುಂತಿವೆ. ಅಕಾಡೆಮಿಗಳನ್ನು ಸೂಕ್ತ ಪ್ರಾಂತ್ಯಗಳಿಗೆ ಸ್ಥಳಾಂತರಿಸುವ ಮೂಲಕ ಸಾಂಸ್ಕೃತಿಕ ವಿಕೇಂದ್ರೀಕರಣ ಮಾಡುವ ಮನಸು ಬೆಂಗಳೂರಿಗೇಕಿಲ್ಲ.?  ಈಗ್ಗೆ ಕೆಲವು ವರ್ಷಗಳ ಹಿಂದೆ ಹೆಸರಾಂತ ರಂಗಕರ್ಮಿ, ಸಂಸ್ಕೃತಿ ಚಿಂತಕ ಪ್ರಸನ್ನ ಅವರ ನೇತೃತ್ವದಲ್ಲಿ ಕರ್ನಾಟಕಕ್ಕೆ 'ರಾಷ್ಟ್ರೀಯ ರಂಗಶಾಲೆ' ಬೇಕೆಂಬ ಸತ್ಯಾಗ್ರಹ ಜರುಗಿತು. ನಾನೂ ಭಾಗವಹಿಸಿದ್ದೆ. ಹೋರಾಟ ಯಶಸ್ವಿಯಾಯಿತು. ರಾಷ್ಟ್ರೀಯ ರಂಗಶಾಲೆ ಬೆಂಗಳೂರಿಗೆ ಬಂತು. ಕಡೆಯಪಕ್ಷ ಅದು ಕರ್ನಾಟಕದ ವೃತ್ತಿ ನಾಟಕಗಳ ತವರೂರು ಡಾವಣಗೇರಿಗೆ ಬರುವಂತಾಗಲಿಲ್ಲ.

ಬಾಗಲಕೋಟೆಗೆ ಕರ್ನಾಟಕ ಬಯಲಾಟ ಅಕಾಡೆಮಿ ಮಂಜೂರಿಯಾದ ದಿವಸ ನಾನು ಬೆಂಗಳೂರಲ್ಲಿದ್ದೆ. ಅದರ ಸುದ್ದಿಯನ್ನು ಅಲ್ಲಿನ ಪ್ರೆಸ್ ಕ್ಲಬ್ಬಿಗೆ ಹೊತ್ತುತಂದ ನನ್ನ ಪತ್ರಕರ್ತ ಮಿತ್ರ ಹೇಳಿದ್ದು ಹೀಗಿತ್ತು. ನಾನು ಆಗಾಗ ಹೇಳುತ್ತಿದ್ದ ಸಾಂಸ್ಕೃತಿಕ ವಿಕೇಂದ್ರೀಕರಣದ ಮಾತು ಉಲ್ಲೇಖಿಸುತ್ತಾ " ಕಡಕೋಳ ನಿಮ್ಮ‌ ಭಾಗದ ಬಾಗಲಕೋಟೆಗೆ ಬಯಲಾಟ ಅಕಾಡೆಮಿ ಕೊಟ್ಟಿದ್ದೇವೆ ಖುಷಿ ಪಡು" ಎಂಬುದಾಗಿತ್ತು. ಅಂದರೆ ಬೆಂಗಳೂರಿನ ಆ ಸನ್ಮಿತ್ರನಿಗೂ ಬಾಗಲಕೋಟೆಗೆ ಬೆಂಗಳೂರು ಕೊಡುತ್ತದೆಂಬ ಮತ್ತು ಬಾಗಲಕೋಟೆ ಬೇಡುತ್ತದೆಂಬ ಅನ್ಯಪರತೆಯು ಪ್ಯಾಂಡಮಿಕ್ ಪರಿಯಲ್ಲಿ ಹಬ್ಬಿಕೊಂಡಿದೆ. ಬಾಗಲಕೋಟೆ ಕನ್ನಡನಾಡಿನ ಅವಿಭಜಿತ ಪ್ರೀತಿಯ ಭಾಗವೆಂಬ ಜೀವಭಾವ ಬೆಂಗಳೂರಿಗೆ ಬರುವುದು ಯಾವಾಗ.?  

ಮಲ್ಲಿಕಾರ್ಜುನ ಕಡಕೋಳ
9341010712

ಮಲ್ಲಿಕಾರ್ಜುನ ಕಡಕೋಳ ಅವರ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...