“ಇವರ ಕಾದಂಬರಿಯ ಸಂದೇಶ ಸರಕಾರಕ್ಕೆ ತಲುಪಲಿ..ಆಡಳಿತ ವರ್ಗದ ಮನ ಮುಟ್ಟಲಿ..ಯುವ ಮನಸ್ಸುಗಳಿಗೆ ನಿಮ್ಮಬರಹಗಳು ಸ್ಫೂರ್ತಿಯಾಗಲಿ..ಕಾದಂಬರಿ ಮುಖೇನ ವ್ಯಕ್ತವಾದ ಲೇಖಕರ ಪರಿಸರ ಕಾಳಜಿಗೊಂದು ಸಲಾಂ,” ಎನ್ನುತ್ತಾರೆ ಭವ್ಯಾ.ಪಿ.ಆರ್.ನಿಡ್ಪಳ್ಳಿ. ಅವರು ಮಂಜುನಾಥ್ ಎಲ್.ಕೆ ಅವರ “ಎತ್ತಿನ ಹೊಳೆ” ಕೃತಿ ಕುರಿತು ಬರೆದ ವಿಮರ್ಶೆ
ನನ್ನ ಪ್ರೀತಿಯ ಮಂಜು.. ನನ್ನ ವಿದ್ಯಾರ್ಥಿಗಳ ಪಾಲಿಗೆ ಮಂಜಣ್ಣ..ಯಾನೆ ಮಂಜುನಾಥ್ ಎಲ್.ಕೆ. ಅವರಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಹೃದಯಸ್ಪರ್ಶಿ ಸ್ವಾಗತವನ್ನು ಬಯಸುವೆ.. ಕನ್ನಡವನ್ನು ಬರೆಯಲು.. ಓದಲೂ ಆಗದ ಈಗಿನ ಕೆಲವು ಪದವಿ ವಿದ್ಯಾರ್ಥಿಗಳ ಮಧ್ಯೆ ಇಲ್ಲೊಬ್ಬ ಅತ್ಯಂತ ಸೊಗಸಾಗಿ ಕನ್ನಡವನ್ನು ಅರೆದು ಕುಡಿದಂತೆ ಕಾದಂಬರಿಯನ್ನೇ ಸೃಷ್ಟಿಸುತ್ತಾನೆ ಎಂದರೆ ಸಾಹಿತ್ಯ ಪ್ರಿಯೆಯಾದ ನನಗೆ.. ನಿಮಗೆಲ್ಲಾ ಇದನ್ನೂ ಮೀರಿ ಬೇರೇನು ಬೇಕು...? ಹೌದು! ಉತ್ಪ್ರೇಕ್ಷೆ ಯಲ್ಲ... ಅತಿಶಯೋಕ್ತಿಯೂ ಅಲ್ಲ..
ನಮ್ಮ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಮಂಜುನಾಥ್ ಎಲ್.ಕೆ ಅವರ ಚೊಚ್ಚಲ ಕಾದಂಬರಿ "ಎತ್ತಿನಹೊಳೆ" ಕೈ ಸೇರಿದ ಕೂಡಲೇ ಓದಿಯೇ ಮುಗಿಸಿಬಿಟ್ಟೆ.. ಮಂಜು ನನ್ನ ನೇರ ವಿದ್ಯಾರ್ಥಿ ಅಲ್ಲದೇ ಇದ್ದರೂ ಇಂದಿಗೂ ನನ್ನನ್ನು ಅತ್ಯಂತ ಗೌರವದಿಂದ ಕಾಣುವ ಒಬ್ಬ ಜೀವ.. ಅಲ್ಲದೇ ನನಗೂ ಅತ್ಯಾಪ್ತ ಬಂಧು ಎನ್ನಲು ಬಲು ಖುಷಿಯಿದೆ.
ಆಗೊಮ್ಮೆ ಈಗೊಮ್ಮೆ ಅವನ ಬರಹಗಳಿಗೆ ಕಮೆಂಟಿಸುತ್ತಾ ಕೆಲವೊಮ್ಮೆ ಒಂದಷ್ಟು ವಿಚಾರಗಳ ಬಗೆಗೆ ದೀರ್ಘವಾದ ಚರ್ಚೆಯನ್ನು ಸಂದೇಶದ ಮೂಲಕವೇ ಮಾಡುತ್ತಾ ನಮ್ಮೊಳಗೊಬ್ಬ critic ಸದ್ದಿಲ್ಲದೇ ಹುಟ್ಟಿಕೊಂಡಿರುತ್ತಿದ್ದ.
ಇಂತಿಪ್ಪ ನಮ್ಮ ಮಂಜು ಒಳಗೊಬ್ಬ ಕಾದಂಬರಿಗಾರ ಹುಟ್ಟಿಕೊಂಡ ಎಂದಾಗ ಕುಚೋದ್ಯ ಎನಿಸಿತು. ಕನ್ನಡ ಸಾಹಿತ್ಯ ಲೋಕ ಬಡವಾಗುತ್ತಿದೆ ಎಂಬ ಕೂಗಿನ ಮಧ್ಯೆ ಇಂತಹ ಯುವ ಲೇಖಕರು ಕಾದಂಬರಿಯೊಂದಿಗೆ ಸಾಹಿತ್ಯದರಮನೆಯ ಹೊಸ್ತಿಲು ದಾಟುತ್ತಿದ್ದಾರೆ ಎಂದರೆ ನನ್ನೊಳಗೇನೋ ಒಂಥರಹದ ದಿವ್ಯ ಸಂಭ್ರಮವಿದೆ ಬಿಡಿ.
ಇದೆಲ್ಲ ಒತ್ತಟ್ಟಿಗಿರಲಿ...ಬನ್ನಿ ಎತ್ತಿನಹೊಳೆಯತ್ತ ನಡೆಯೋಣ..
ಹೇಳಿ ಕೇಳಿ ನಾನು ಅಭಿವೃದ್ದಿಯ ನೆಪಕ್ಕೆ ಬಲಿಯಾಗುತ್ತಿರುವ ಪ್ರಕೃತಿಯ ಬಗೆಗೆ ಕೊರಗುವವಳು.. ಕರಗುವವಳು. ನದಿ..ನೀರು..ಗಾಳಿ..ಮಣ್ಣು..ಜೀವ ವೈವಿಧ್ಯ ಗಳ ಬಗೆಗೆ ಕುತೂಹಲವಿಟ್ಟುಕೊಂಡವಳು..ಜೊತೆಗೆ ಪಿಎಚ್ ಡಿ ಅಧ್ಯಯನಕ್ಕೂ ಪರಿಸರ ಪತ್ರಿಕೋದ್ಯಮವನ್ನೇ ಆಯ್ಕೆ ಮಾಡಿಕೊಂಡು ವಿಮರ್ಶೆಗಾಗಿ ಸಾಹಿತ್ಯವನ್ನು ತಡಕಾಡುವ ಸುಸಂದರ್ಭದಲ್ಲಿ ಮಂಜುನ "ಎತ್ತಿನಹೊಳೆ" ಬಹಳ ಗಂಭೀರವಾಗಿ ಓದಿಸಿಕೊಂಡು ಹೋಯಿತು..
ಕಾದಂಬರಿಯುದ್ದಕ್ಕೂ ಬಳಸಲಾದ ಮಲೆನಾಡಿನ ಗ್ರಾಮ್ಯ ಭಾಷೆ ಓದಿದಾಗಲೆಲ್ಲ ಎದೆಯಲ್ಲಿ ಏನೋ ತಣ್ಣಗೆ ಕರಗಿದಂತೆ ಭಾಸವಾಯಿತು.. ಹಳ್ಳಿಯ ಮುಗ್ಧ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ.. ಬಹುಶಃ ಈ ರೀತಿಯ ವರ್ಣನೆಯಲ್ಲಿ ಹಳ್ಳಿಯ ಬದುಕನ್ನು ಜೀವಂತವಾಗಿರಿಸಲು ಅದನ್ನು ಅತ್ಯಾಪ್ತವಾಗಿ ಪ್ರೀತಿಸಿ ಅನುಭವಿಸಿ ಬದುಕಿದವರಿಗಷ್ಟೇ ಬರೆಯಲು ಸಾಧ್ಯ ಎನ್ನುವೇ..
"ಏನೋ ಒಂದು ಒಳ್ಳೆಯದಾಗುತ್ತದೆ ಎಂದರೆ ತಪ್ಪು ಮಾಡುವುದರಲ್ಲಿ ಏನೂ ತಪ್ಪಿಲ್ಲ" ಎಂಬ ವಿಚಾರವನ್ನು ನಾನೂ ನಂಬಿದವಳು.. ಹೀಗಿರುವಾಗ ಕಥಾನಾಯಕ ಉಗಮನ ಒಂದು ತಪ್ಪು ಇಡೀ ಹಳ್ಳಿಯನ್ನೇ ಬದಲಾಯಿಸಿಬಿಟ್ಟದ್ದು ಬಹಳ ಧನಾತ್ಮಕ ವಿಚಾರ ಎನಿಸಿತು.. ಅಚಲವಾದ ನಂಬಿಕೆಯೊಳಗೊಂದು ಹಸಿರಿನ ಉಳಿವು ಆಗುತ್ತದೆಯಾದರೆ ತಪ್ಪಾದರೇನು? ಆದರೆ ಕೊನೆಗೊಂದು ನನಗೆ ಉಳಿದ ಪ್ರಶ್ನೆ ಸಂಕಟ ಏನೆಂದರೆ ಈ ಮುಗ್ಧ ಜನರ ನಂಬಿಕೆಯನ್ನೇನೋ ಬದಲಾಯಿಸಲಾಯಿತು ಮಂಜು.. ಆದರೆ ಹಣದಾಸೆಗೆ ಅಧಿಕಾರದಲ್ಲಿರುವ ದುರುಳರ ಈ ಎತ್ತಿನಹೊಳೆಯಂತಹ ಯೋಜನೆಯನ್ನು ರೂಪಿಸಿದವರನ್ನು ಏನು ಮಾಡಬಹುದು ಹೇಳು? ಯಾಕೆಂದರೆ ಅವರಲ್ಲಿ ಮುಗ್ಧತೆ ಇಲ್ಲ..ನಂಬಿಕೆ ಇಲ್ಲ..ಇರುವುದು ಒಂದೇ ಹಣ..ಹಣ..ಹಣ..
ಬಹುಶಃ ಇಂದು ಈ ಮನುಷ್ಯತ್ವವನ್ನು ಮೀರಿದ ಧರ್ಮ...ಜಾತಿ.. ಮತಗಳನ್ನು ಉಳಿಸಲೋಸುಗ ನಮ್ಮ ಸಮಾಜದಲ್ಲಿ ನಡೆಯುವ ಕಠಿಣವಾದ ಒಗ್ಗಟ್ಟು ಪರಿಸರವನ್ನು ಉಳಿಸಲು ಅಷ್ಟೇ ಕಠಿಣವಾಗಿ ನಡೆಯುತ್ತಿದ್ದರೆ ಅದೆಷ್ಡು ಚೆನ್ನವಿತ್ತು?
ಕಾದಂಬರಿಯೊಳಗೆ ಬಂದ ಉಗಮ.. ಭೂಷಿತಾ.. ಸಂದೀಪ.. ನಂತವರು ನಮ್ಮ ಸುತ್ತಮುತ್ತಲೆಲ್ಲ ಇರುತ್ತಿದ್ದರೆ ಪ್ರಕೃತಿಯನ್ನು ಉಳಿಸಬಹುದು..
ಕಾದಂಬರಿಯನ್ನು ಓದುತ್ತಾ ಹೋದಂತೆ ಎಲ್ಲೊ ಒಂದು ಕಡೆ ಪದೇ ಪದೇ ವಸುದೇಂದ್ರ ಅವರ ತೇಜೋತುಂಗಾ ಭದ್ರಾ ಕಾದಂಬರಿ ಮತ್ತೆ ಮತ್ತೆ ನನ್ನ ಸ್ಮೃತಿ ಪಟಲದಲ್ಲಿ ಹಾದುಹೋಯಿತು..ಸಮೃದ್ಧವಾದ ಗ್ರಾಮ್ಯ ಭಾಷೆ.. ಅದೇ ನಾಯಿ.. ಅದೇ ದನ.. ಅದೇ ರಾಶಿ ರಾಶಿ ಹಕ್ಕಿಗಳು..ಅದೇ ಗದ್ದೆ.. ಅದೇ ಮರ.. ಅದೇ ಮುಗ್ಧ ಸಂಬಂಧಗಳು.. ಅದರ ಮಧ್ಯೆ ನುಸುಳಿ ಹೋಗುವ ಸಣ್ಣ ಸ್ವಾರ್ಥ.. ಓಹ್ ಅದ್ಭುತ ಎನಿಸಿತು ಉಚ್ಚಳಿಯ ವರ್ಣನೆ..
ದೂರದ ಬೆಂದಕಾಳೂರಿನಲ್ಲಿ (ಬೆಂಗಳೂರು) ಕುಳಿತುಕೊಂಡು, ದಟ್ಟವಾದ ಹೊಗೆಯನ್ನು ನುಂಗಿಕೊಂಡು, ಗಾಡಿಗಳ ಕರ್ಕಶ ಶಬ್ದಗಳನ್ನು ಕೇಳಿಸಿಕೊಂಡರೂ ನಿನ್ನೊಳಗೊಬ್ಬ ಅಪ್ಪಟ ಹಸಿರು ಪ್ರೇಮಿ ಜೀವಂತವಾಗಿದ್ದು.. ಹಳ್ಳಿಯ ದಿವ್ಯ ಗಾನವನ್ನು ತನ್ನೊಳಗೆ ಗುಪ್ತವಾಗಿ ಅನುರಣಿಸಿಕೊಂಡು ನಿನ್ನ ಕಲ್ಪನೆಗೊಂದು ಜೀವಂತಿಕೆಯನ್ನು ಬರಹಗಳಲ್ಲಿ ಕಟ್ಟಿಕೊಟ್ಟಿರುವ ಪರಿ ಇದೆಯಲ್ವಾ ಮಂಜು ಅದು ಅದ್ಭುತ.. ಶಹಭಾಷ್..
ಇಂದಿಗೂ ನೆನಪಿದೆ ಸರಿಸುಮಾರು ಹತ್ತು ಹನ್ನೊಂದು ವರ್ಷಗಳ ಹಿಂದೆ ನಾನು ಧಾರವಾಹಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇದೇ ಮಲೆನಾಡಿನಲ್ಲಿ ಉಳಿದುಕೊಂಡಿದ್ದೆ. ವಿನಾಯಕ ಎಂಬ ಸಹೋದರನ ಮನೆಯಲ್ಲಿ ಅನಿವಾರ್ಯವಾಗಿ ಉಳಿದುಕೊಳ್ಳುವ ಸಂದರ್ಭ ಬಂದಾಗ ಮೊದಲ ಬಾರಿಗೆ ಚಳಿ ಎಂದರೇನು ಎಂದು ಅನುಭವಿಸಿದ್ದೆ.. ಅವರ ಅಪ್ಪಾಜಿ ತಂದುಕೊಟ್ಟ ಮೂರು ಮೂರು ಕಂಬಳಿಯೊಳಗೆ ಹುದುಗಿದಷ್ಟು ಎದೆಯೊಳಗೆ ರಕ್ತವೇ ಹೆಪ್ಪುಗಟ್ಟಿ ಬಿಡಬಹುದೇ ಈ ಚಳಿಗೆ ಎಂದು ಮೊದಲ ಬಾರಿ ಹೆದರಿದ್ದೆ. ಆ ಜೀವ ಅಂದು ನನ್ನನ್ನು ನೋಡಿ ಬಹಳ ನಕ್ಕಿದ್ದು ಇಂದಿಗೂ ನೆನಪಿದೆ. ಆ ಚಳಿ ಮತ್ತೆನೆನಪಾದದ್ದು ಈ ಬರಹದೊಳಗೆ ನಾನು ಲೀನವಾದಾಗ.. ಥ್ಯಾಂಕ್ಯೂ ಮಂಜು.
ಕಾದಂಬರಿ ಓದುತ್ತಾ ಕೊನೆಯಾದಂತೆ ನನಗೆಲ್ಲೋ ಅನಿಸಿದ್ದು- ನಾನು ಅಪ್ಪಟ ಕರಾವಳಿಯವಳು.. ಇದೇ ಘಟ್ಟದ ಕೆಳಗಡೆ ಕೂತು ಇದನ್ನು ಓದುತ್ತಿದ್ದೇನೆ.. ಬಾಯಾರಿಕೆ ಆದಾಗಲೆಲ್ಲ ತಣ್ಣಗಿನ ನೀರು ಕುಡಿಯುತ್ತೇನೆ.. ಬಿಸಿಲು ಜೋರಾದಾಗ ಆಸೆ ಪಟ್ಟು ನೆಟ್ಟ ಕಂಗಿನ ಗಿಡಗಳಿಗೆ ನೀರು ಹಾಯಿಸುತ್ತೇನೆ.. ನೆರಳು ಬೇಕೆಂದಾಗ ಮರವನ್ನರಿಸಿ ಹೋಗುತ್ತೇನೆ.. ರಾಷ್ಟ್ರೀಯ ಚತುಷ್ಪಥ ಹತ್ತಿರವಿದ್ದರೂ ಇನ್ನೂ ಹಳ್ಳಿಯ ವಾತಾವರಣ ಸ್ವಲ್ಪ ಮಟ್ಟಿಗೆ ಇದೆ. ಆದರೆ ಆದರೆ ಇದೇ ಎತ್ತಿನಹೊಳೆ ಯಶಸ್ವಿಯಾದರೆ ನನ್ನ ಕರಾವಳಿಯ ಜನರ ಹೆಣದ ಮೇಲೆ ಘಟ್ಟದಲ್ಲಿ ಸಮಾಧಿ ಇರಬಹುದಲ್ಲವೇ ಎಂದೆನಿಸಿ ಭಯವಾಯಿತು.. ಪಶ್ಚಿಮ ಘಟ್ಟ ನಾಶವಾಗಿ ಬಯಲಾದರೆ ಕರಾವಳಿಗೆ ಬದುಕಿಲ್ಲ ಎಂಬುವುದು ಇಲ್ಲಿ ಕಾದಾಡುವ ಜನಗಳಿಗೆ ಯಾಕೆ ತಿಳಿಯುತ್ತಿಲ್ಲ ಎಂಬ ಪ್ರಶ್ನೆ ಸದಾ ನನ್ನನ್ನು ಕಾಡುತ್ತದೆ.. ಆಹಾರ..ಗಾಳಿ.. ನೀರು ಇಲ್ಲದೇ ಇದ್ದಲ್ಲಿ ಈ ಧರ್ಮ..ಜಾತಿ.. ಮತ ಇದ್ದರೆಷ್ಟು ಬಿಟ್ಟರೆಷ್ಟು..?
ಒಟ್ಟಿನಲ್ಲಿ ಮಂಜು ಅವರ ಭಾಷೆಯ ಮೇಲಿನ ಹಿಡಿತ.. ಹಳ್ಳಿಯ ಬಗೆಗಿನ ಕನವರಿಕೆ.. ಪರಿಸರದ ಕಾಳಜಿ ಕಂಡಾಗ ಕನ್ನಡ ಸಾಹಿತ್ಯ ಲೋಕಕ್ಕೆ ಒಬ್ಬ ಉದಯೋನ್ಮುಖ ಬರಹಗಾರ ಬಂದೇ ಬಿಟ್ಟ ಎಂದೆನಿಸುತ್ತದೆ.. ಏನೇ ಇರಲಿ ಇವರ ಕಾದಂಬರಿಯ ಸಂದೇಶ ಸರಕಾರಕ್ಕೆ ತಲುಪಲಿ.. ಆಡಳಿತ ವರ್ಗದ ಮನ ಮುಟ್ಟಲಿ.. ಯುವ ಮನಸ್ಸುಗಳಿಗೆ ನಿಮ್ಮಬರಹಗಳು ಸ್ಫೂರ್ತಿಯಾಗಲಿ.. ಕಾದಂಬರಿ ಮುಖೇನ ವ್ಯಕ್ತವಾದ ಲೇಖಕರ ಪರಿಸರ ಕಾಳಜಿಗೊಂದು ಸಲಾಂ ಎನ್ನುತ್ತಾ ಮಂಜು ಅವರ ಲೇಖನಿಯೊಳಗಿನಿಂದ ಇನ್ನಷ್ಟು ಬರಹಗಳು ಮೂಡಿಬರಲಿ ಎಂಬ ಸದಾಶಯಯೊಂದಿಗೆ ಒಳ್ಳೆಯದೇ ಆಗಲಿ ಪುಟ್ಟ.. ವಿರಮಿಸುತ್ತೇನೆ...
“ಕವಿಯು ಈ ಕವನವು ಹೊಸ ವರ್ಷದ ಆರಂಭವನ್ನು ಸನಾತನ ಸಾಂಸ್ಕೃತಿಕ ಹಬ್ಬಗಳ ಹಿನ್ನೆಲೆಯಲ್ಲಿ ಕವಿಯು ವೈಭೋಗದಿಂದ ವಿವರಿ...
“ಸಾಹಿತ್ಯಿಕವಾಗಿ ಶ್ಯಾಮಲಾ ಇಷ್ಟರ ಮಟ್ಟಿನ ಸಫಲತೆ ಪಡೆದಿದ್ದರೆ ಅದರಲ್ಲಿ ಅವರ ಹೋರಾಟದ ಕತೆಯೂ ಇದೆ,” ಎನ್ನ...
“ಇದರಲ್ಲಿ ವಿವಿಧ ಕಾಲಘಟ್ಟದಲ್ಲಿ ಬರೆದ ಅವರ ಬಹುಪಾಲು ಅತ್ಯುತ್ತಮ ಕತೆಗಳು ಇರುವುದರಿಂದ ಪರೋಕ್ಷವಾಗಿ ಇವು ಅವರ ಪ್...
©2025 Book Brahma Private Limited.