ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು

Date: 30-11-2020

Location: .


ಕಲಾವಿದೆ ಫ್ರಿಡಾ ಕಹ್ಲೋ‌ ಅವರ `ಮೈ ಬರ್ತ್’ ಕಲಾಕೃತಿ ವಿಶ್ವ ವ್ಯಾಪಕವಾಗಿ ಚರ್ಚೆಗೊಳಗಾದ ಸುಂದರ ಕಲಾಕೃತಿ. ಬಾಲ್ಯದಲ್ಲಿ ಪೋಲಿಯೋಗೆ ತುತ್ತಾಗಿ, ಶಾಲೆಯಲ್ಲಿ ಲೈಂಗಿಕ ಕಿರುಕುಳಕ್ಕೆ ತುತ್ತಾಗಿ, ರಸ್ತೆ ಅಪಘಾತವೊಂದರಲ್ಲಿ ನರಕ ಯಾತನೆಯ ನೋವು ಅವಳ ಬಹುತೇಕ ಚಿತ್ರಕೃತಿಗಳು ಬಿಂಬಿಸಿವೆ. ಈ ಕಲಾಕೃತಿಗಳನ್ನು ಲೇಖಕ ಲಕ್ಷ್ಮಣ ಬಾದಾಮಿ ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ವ್ಕಕ್ತಪಡಿಸಿದ ಜಿಜ್ಞಾಸೆ ಇಲ್ಲಿದೆ.

ಕಲಾಕೃತಿ: ಮೈ ಬರ್ತ್
ಕಲಾವಿದೆ: ಫ್ರಿಡಾ ಕಹ್ಲೋ (1907-1954)
ದೇಶ: ಮೆಕ್ಸಿಕೋ

ಹುಟ್ಟುವ ಹೊಸ ಜೀವವೊಂದು ಹೊರಜಗತ್ತಿಗೆ ಹೇಗೆ ಬರುತ್ತದೆ? ಅದು ಬರುವಾಗ ತಾಯ ಒಡಲಿನಲ್ಲಿ ಉಂಟಾಗುವ ನೋವ ತೆರೆಗಳ ಅಬ್ಬರವೇನು, ಸಂಕಟದ ಉಬ್ಬರವೇನು? ಎಂಬುದು.. ಮತ್ತು ಒಂದು ಜೀವ ಇನ್ನೊಂದು ಜೀವಕ್ಕೆ ಜನ್ಮ ನೀಡುವಾಗಿನ ಸೃಷ್ಟಿ ಕ್ರಿಯೆಯ ಅನುಭವ ತಾಯಿಗೆ ಮಾತ್ರ ಗೊತ್ತು; ಹೆಣ್ಣುಜೀವಕ್ಕೆ ಮಾತ್ರ ಗೊತ್ತು. ತಾನು ಹೇಗೆ ಹುಟ್ಟಿ ಬಂದೆ ಅನ್ನುವ ಅನುಭವ ಹೆಣ್ಣೊಬ್ಬಳು ತಾನೂ ತಿರುಗಿ ತಾಯಾದಾಗ ಆ ಅನುಭವ ಪಡೆಯುತ್ತಾಳೆ. ಗಂಡು ಜನ್ಮಕ್ಕೆ ಈ ಅನುಭವ ಅತೀತವಾದುದು.

ದೃಶ್ಯಾತ್ಮಕವಾಗಿ ಈ ಚಿತ್ರ ತುಂಬಾ ಸರಳವಾಗಿದೆ. ಚಿತ್ರಭಿತ್ತಿಯ ಮಧ್ಯದಲ್ಲಿ ಒಂದು ಮಂಚವಿದೆ. ಮಂಚದ ಮಧ್ಯೆ ಹೆಣ್ಣೊಬ್ಬಳು ಮಲಗಿದ್ದಾಳೆ. ಅವಳಿಗೆ ಹೆರಿಗೆಯಾಗುತ್ತಿದೆ. ಮಂಚದ ಮಧ್ಯ ನೇರಕ್ಕೆ ಹಿಂದಿನ ಗೋಡೆಯಲ್ಲಿ ಒಂದು ಚಿತ್ರಪಟ ತೂಗು ಹಾಕಲಾಗಿದೆ. ಇವೆಲ್ಲದರ ಮಧ್ಯೆ ಸಾಕಷ್ಟು ತೆರಪು (Space) ಇದ್ದುದರಿಂದ ಆಕೃತಿಗಳು ಬಯಲಿಗೆ ಬಿದ್ದಂತೆ ಅಥವಾ ಕಲಾಕೃತಿಯು ಒಂದಿಷ್ಟು ಖಾಲಿ ಖಾಲಿ ಅನ್ನಿಸುತ್ತಿದೆ. ಕಲಾವಿದೆ ಫ್ರಿಡಾ ಕಹ್ಲೋ ಉದ್ಧೇಶಪೂರ್ವಕವಾಗಿಯೇ ಚಿತ್ರದಲ್ಲಿ ಒಂದಿಷ್ಟು ಖಾಲಿತನವನ್ನು ತುಂಬಿದ್ದಾಳೆನಿಸುತ್ತದೆ. ಹೆಂಗಸರು, ದಾದಿಯರು ಸೂಲಗಿತ್ತಿಯರು ಇರುವ ಹೆರಿಗೆ ಕೋಣೆಯನ್ನು ಚಿತ್ರಿಸುವುದು ಅವಳ ಉದ್ಧೇಶವಾಗಿರಲಿಲ್ಲ.

ಇಲ್ಲಿ ಯಾವುದನ್ನು ಸಂಕೀರ್ಣಗೊಳಿಸದೇ ನೇರಾನೇರ ವಸ್ತುವನ್ನು ಇಟ್ಟಿರುವುದರಿಂದ ನೋಡುವವರ ದೃಷ್ಟಿ ಅಲ್ಲಿಯೇ ಕೇಂದ್ರಿಕೃತಗೊಂಡು ಗಂಭೀರ ಆಲೋಚನೆಗಳು ಶುರುವಾಗುತ್ತವೆ. ತಾಯಿಯ ಜನನಾಂಗದಿಂದ ಉದಿಸುತ್ತಿರುವುದು ಕೂಸಲ್ಲ, ಬೆಳೆದ ತಲೆ! ಅದೂ ಫ್ರಿಡಾಳದ್ದೇ!! ಹಾಗಾದರೆ ತಾಯಿ ಯಾರು? ಅನ್ನೋ ಪ್ರಶ್ನೆಯನ್ನು ಉತ್ತೇಜಿಸಲು ಹೆರಿಗೆಯಾಗುತ್ತಿರುವ ಹೆಂಗಸಿನ ಮುಖದ ಮೇಲೆ ಬೆಡ್‌ಶೀಟ್‌ನ್ನು ಹೊದಿಸಲಾಗಿದೆ. ಇಲ್ಲಿ ತಾಯ ಗರ್ಭದಿಂದ ಫ್ರಿಡಾ ಜನಿಸುತ್ತಿದ್ದಾಳೋ ಅಥವಾ ಅವಳು ತನ್ನ ಗರ್ಭದಿಂದ ತಾನೇ ಪುನಃ ಜನಿಸುತ್ತಿದ್ದಾಳೋ..!? ನೋಡುಗನಲ್ಲಿ ದಿಗಿಲುಗಳ ಮೇಲೆ ದಿಗಿಲು ಶುರುವಿಟ್ಟುಕೊಳ್ಳುತ್ತವೆ.

‘My Birth ಫ್ರೀಡಾ ಕಹ್ಲೋಳ ಈ ಕೃತಿ ತನ್ನ ಹುಟ್ಟನ್ನು ತಾನೇ ನೋಡಿಕೊಳ್ಳುವ ಬಗೆಯೆನಿಸುತ್ತದೆ. ಅಲ್ಲದೆ ವ್ಯಕ್ತಿ ಆತ್ಮಾವಲೋಕನಕ್ಕೆಡೆ ಮಾಡಿಕೊಳ್ಳುವ ಆರಂಭ ಹಾಗೂ ಪ್ರಾಪಂಚಿಕ ಪರಿಧಿಯಲ್ಲಿ ನಿಂತು ಅಧ್ಯಾತ್ಮಿಕದ ಕಡೆಗೆ ಹೊರಳುವ ಪ್ರಮೇಯ ಅನಿಸುತ್ತದೆ. ಯಾರಿಗೆ ಯಾರಿಲ್ಲ ಎರವಿನ ಸಂಸಾರ/ ನೀರ ಮೇಲಣ ಗುಳ್ಳೆ/ ನಿಜವಲ್ಲ ಹರಿಯೇ/ ಎಂಬುದನ್ನು ಚಿತ್ರ ಖಾತ್ರಿಪಡಿಸುತ್ತದೆ. ಹೆರಿಗೆಯ ನೋವು ತಿನ್ನುತ್ತಿರುವುದನ್ನು ನೋಡಿಯೂ ಏನೂ ಮಾಡಲಾಗದ ಸ್ಥಿತಿಯಲ್ಲಿ ‘Virgin of Sorrows’ ಚಿತ್ರಪಟದಲ್ಲಿದ್ದಾಳೆ. ತನ್ನ ಅಸಹಾಯಕ ಸ್ಥಿತಿಗೆ ಅವಳೂ ಕಣ್ಣೀರಾಗಿದ್ದಾಳೆ.

ಇಡೀ ಚಿತ್ರವು ಕಲಾವಿದೆಯ ಸ್ವಂತ ಬದುಕಿನ ನೋವ ಕುದಿ ಎಸರು ಘನೀಭೂತಗೊಂಡು ಇಲ್ಲಿ ಚಿತ್ರವಾಗಿದೆ. ಈ ಕಲಾಕೃತಿ ರಚಿಸುವಾಗ ಫ್ರೈಡಾ ಆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದಳು ಮತ್ತು ಆಗಷ್ಟೇ ಫ್ರೈಡಾಳಿಗೆ ಗರ್ಭಪಾತವಾಗಿತ್ತು. ತನ್ನ ತಾಯಿಯನ್ನು ಕಳೆದುಕೊಂಡಿದ್ದು, ತಾನು ತಾಯಿಯಾಗುವ ಅಸ್ಮಿತೆಯನ್ನು ಕಳೆದುಕೊಂಡಿದ್ದು.. ಈ ಸಂಕಟಗಳ ದಾಳಿಗೆ ನಲುಗಿ ಅವಳು ಮುದ್ದೆಯಾಗುವ ಬದಲು ಅವುಗಳನ್ನೇ ತೀವೃವಾಗಿ ಬಳಸಿ ಚಿತ್ರವಾಗಿಸಿ ಹಗುರಾಗಲು ಯತ್ನಿಸಿದ್ದಾಳೆ.

ಫ್ರಿಡಾ ಬಾಲ್ಯದಲ್ಲಿ ಪೊಲಿಯೋಗೆ ತುತ್ತಾಗಿ ದೈಹಿಕವಾಗಿ ಅಸಮರ್ಥಳಾದಳು. ಶಾಲೆಯಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದಳು. ತರುಣಾವಸ್ಥೆಯಲ್ಲಿ ವಾಹನ ಅಪಘಾತವೊಂದರಲ್ಲಿ ಸಿಲುಕಿ ನುಜ್ಜುಗುಜ್ಜಾದಳು. ಅದರ ನೋವು, ದೈಹಿಕ ತೊಂದರೆಗಳು ಬದುಕಿನುದ್ದಕ್ಕೂ ಕಾಡಿದವು. ಇಷ್ಟಪಟ್ಟು ಕೈಹಿಡಿದ ಗಂಡ ನಡುವೆಯೇ ಕೈಬಿಟ್ಟ.. ಹೀಗೆ ಅಡಿಗಡಿಗೂ ಸಂಕಟಗಳ ಸರಮಾಲೆಯಲ್ಲೇ ತುಯ್ಯತೊಡಗಿದಳು. ಪರಿಣಾಮವಾಗಿ ಬಹಳಷ್ಟು ಚಿತ್ರಗಳಿಗೆ ಅವಳ ನೋವೆ ಎದಿರು ನಿಂತು modelDV ಆಗಿ ಚಿತ್ರಿತಗೊಂಡಂತಿದೆ. The Broken column, The wounded Deer, A Few Small Nips, Girl With Death Mask, Diego and I, Diego and Frida ಇವೇ ಮುಂತಾದ ಚಿತ್ರಗಳು ಕಹ್ಲೋಳ ಬದುಕಿನ ಒಂದೊಂದು ಕಾಲಘಟ್ಟದಲ್ಲಾದ ಒಂದೊಂದು ಕಥೆಯನ್ನು ಹೇಳುತ್ತವೆ. ಹಾಗಾಗಿ ಇವು ಕಹ್ಲೋಳ ಆತ್ಮಚರಿತ್ರಾತ್ಮಕ ಚಿತ್ರಗಳಾಗಿವೆ. ಇನ್ನೂ ಮುಂದುವರೆದು ಹೇಳುವುದಾದರೆ ಇವು ಇಡೀ ಸ್ತ್ರೀ ಸಂಕುಲದ ಚರಿತ್ರಾತ್ಮಕ ಚಿತ್ರಗಳು ಅಂದರೂ ನಡೆದೀತು. The wounded Deer ನಲ್ಲಿ ಜಿಂಕೆಯ ಮೈತುಂಬಾ ಬಾಣಗಳು ನೆಟ್ಟಿವೆ. ಈ ಜಿಂಕೆಯ ಮುಖ ಕಹ್ಲೋಳದ್ದೇ ಆದರೂ ಇದು ಅವಳ ಯಾತನೆಗಳನ್ನಷ್ಟೇ ತೋರಿಸದೇ, ಆಕೆ ಸ್ತ್ರೀ ಕುಲದ ಪ್ರತಿನಿಧಿಯಾಗಿ ಚರಿತ್ರೆಯ ತುಂಬಾ ಹೆಣ್ಣಿನ ಮೇಲಾದ ಗಾಯದ ಗುರುತುಗಳನ್ನು ನೆನಪಿಸಿಕೊಡುತ್ತಾಳೆ. ತನ್ನ ಬದುಕಿನ ಬೇಗುದಿಯನ್ನೇ ಬಣ್ಣವಾಗಿಸಿಕೊಂಡ ಕಹ್ಲೋ ಸ್ತ್ರೀ ಸಮುದಾಯದ ಮುಖವಾಣಿಯಂತಾಗಿದ್ದಾಳೆ. ಅವಳ ಕಷ್ಟಗಳು ಬಹಳಷ್ಟು ಸ್ತ್ರೀಯರು ಅನುಭವಿಸುತ್ತಿರುವ ಸಂಕಷ್ಟಗಳೇ ಆಗಿರುವುದರಿಂದ ಅವಳ ಅಭಿವ್ಯಕ್ತಿಯಲ್ಲಿ ಸಾರ್ವತ್ರಿಕ ದನಿಯೂ ಮಿಳಿತವಾಗಿದೆ. ಅವಳ ಕಲಾಕೃತಿಗಳೆಲ್ಲ ಸ್ತ್ರೀವಾದಿಗಳಿಗೆ ಪ್ರಖರ ಆಕರ ಶಕ್ತಿಗಳಾಗಿವೆ. ಹಾಗೆಯೇ ಚಿತ್ರಗಳ ಮೂಲಕ ತನ್ನ ಆತ್ಮಚರಿತ್ರೆಯನ್ನು, ಅದು ಭಾಗಶಃ ಆಗಿದ್ದರೂ ಅತ್ಯಂತ ತೀವ್ರವಾಗಿ ಗೋಚರಿಸುವಂತೆ ಸೃಷ್ಟಿಸಿದ ಮೊದಲ ಕಲಾವಿದೆ ಫ್ರಿಡಾ ಕಹ್ಲೋ ಆಗಿದ್ದಾಳೆನಿಸುತ್ತದೆ.

ಬಸ್ ಅಪಘಾತದಿಂದುಂಟಾದ ತೀವ್ರತರ ದೈಹಿಕ ನೋವು, ಮೂಳೆ ಮುರಿತದ ಯಾತನೆಗಳು ಆಕೆಯನ್ನು ಬಿಟ್ಟುಬಿಡದೇ ಕಾಡುತ್ತಿದ್ದವು. ಅದರ ವೈದ್ಯಕೀಯ ಖರ್ಚನ್ನು ಭರಿಸಲಿಕ್ಕೆ ಆಕೆ ಹೆಣಗಾಡುತ್ತಿದ್ದಳು. The Broken column ಹೆಸರಿನ ಚಿತ್ರವು ಅವಳ ದೇಹವೆಷ್ಟು ಶಿಥಿಲವಾಗಿತ್ತು ಎಂಬುದನ್ನು ಕಾಣಿಸುತ್ತದೆ. ಪತಿಯು ಇವಳಿಗೆ ವಿಚ್ಛೇದನ ನೀಡಿದಾಗ Diego and I ಚಿತ್ರಿಸಿದಳು. ಇದರಲ್ಲಿ ಕಹ್ಲೋ ತನ್ನದೇ ಭಾವಚಿತ್ರ ರಚಿಸಿ ಹಣೆಯ ಮೇಲೆ ಡಿಯಾಗೋನನ್ನು ಚಿತ್ರಿಸಿದ್ದಾಳೆ. ಕಣ್ಣಲ್ಲಿ ನೀರು ತುಳುಕಿದಾಗಲೂ ಅವಳ ನೋಟದಲ್ಲಿ ಮರುಕ ಮತ್ತು ತೀಕ್ಷಣತೆ ಇರುವುದರಿಂದ ಇದು ಪರಿಸ್ಥಿತಿಯ ಭಯಂಕರ ವ್ಯಂಗವಾಗಿ ತೋರುತ್ತದೆ.

ಫ್ರಿಡಾ ಕಹ್ಲೋ ಕಲಾ ಶಿಕ್ಷಣವನ್ನು ಸಾಂಪ್ರದಾಯಿಕವಾಗಿ ಪಡೆದವಳಲ್ಲ. ಆದುದರಿಂದಲೋ ಏನೋ ಅವಳಿಗೆ ಯಾವುದೇ ಆಧುನಿಕ ಕಲಾ ಪಂಥಗಳ ಹಂಗು ಇರಲಿಲ್ಲ. ಕಲೆಯ ಆದಿಮ ತಿಳಿವಳಿಕೆಯೊಂದಿಗೆ ತನ್ನದೇ ಆದ ಒಂದು ವೈಯಕ್ತಿಕ ಪಥದಲ್ಲಿ ನಡೆದಿದ್ದಳು. ಸ್ವತಃ ಪತಿಯಾದ ಡಿಯಾಗೋ ಪ್ರಸಿದ್ಧ ಚಿತ್ರಕಲಾವಿದನಾಗಿದ್ದು ಕ್ಯೂಬಿಸಂ, ಸರ್ರಿಯಲಿಸಂ ಶೈಲಿಯ ಶ್ರೇಷ್ಠ ಕೃತಿಗಳನ್ನು ರಚಿಸಿದ್ದರೂ ಅವನ ಪ್ರಭಾವಕ್ಕೆ ಒಂದಿನಿತು ಒಳಗಾಗಿರಲಿಲ್ಲ. ತನ್ನ ಸ್ವಂತಿಕೆಯನ್ನು ತನ್ನಷ್ಟೇ ಜತನದಿಂದ ಕಾಪಾಡಿಕೊಂಡಿದ್ದಳು. ಆಕಾರಗಳನ್ನು ಒಡೆದು (ಒಂದರ್ಥದಲ್ಲಿ ವಿಕಾರವಾಗಿಸಿ) ಅಮೂರ್ತ ಆಕೃತಿಗಳನ್ನು ಸೃಜಿಸಿ ಆ ಮೂಲಕ ವರ್ಣಚಿತ್ರಕಲೆಗೆ ಹೊಸ ಭಾಷ್ಯಗಳನ್ನು ಬರೆಯುತ್ತಿದ್ದ ಕಾಲದಲ್ಲಿ ಕಹ್ಲೋ ತುಸು ಪಾರಂಪರಿಕವಾಗಿಯೇ, ಆಕಾರಗಳನ್ನು ಒಡೆಯದೆ ಇರುವ ರೂಪದಲ್ಲಿಯೇ ಅವುಗಳನ್ನು ವಿಶಿಷ್ಟವಾಗಿ, ವೈರುಧ್ಯವಾಗಿ ಸಂಯೋಜಿಸಿ ಆ ಮೂಲಕ ಅವಳು ಕಲಾಕೃತಿಗಳಲ್ಲಿ ಹೊರಡಿಸುತ್ತಿದ್ದ ಧ್ವನಿಶಕ್ತಿ ಯಾವುದಕ್ಕೂ ಕಡಿಮೆಯಾಗಿರಲಿಲ್ಲ.

‘ಕಾಣದುದನರಸುವರಲ್ಲದೇ ಕಂಡದನರಸುವರೇ? ಇದು ನಮ್ಮ ವಚನಕಾರ ಅಲ್ಲಮನ ಪ್ರಶ್ನೆ. ಅಕಾಡೆಮಿಕ್ ವಲಯದ ಕಲಾವಿದರು ಕಲಿತಿರುವುದನ್ನು ಮರೆತು ಕಾಣಲಾರದ್ದನ್ನು ತಮ್ಮ ಕೃತಿಗಳ ಮೂಲಕ ಶೋಧಿಸಲು ಹೊರಡುತ್ತಾರೆ. ಫ್ರಿಡಾ ಕಹ್ಲೋ ನಾನ್ ಅಕಾಡೆಮಿಕ್ ಕ್ಷೇತ್ರದವಳು. ಅವಳು ಕಾಣಲಾರದ್ದನ್ನು ಹುಡುಕುವ ಗೋಜಿಗೆ ಹೋಗುವುದಿಲ್ಲ. ತಾನು ಕಂಡು ಉಂಡದ್ದನ್ನೇ ಲೋಕದೆದಿರು ತೆರೆದಿಟ್ಟು ಹಗುರಾಗಲು ತವಕಿಸಿದ್ದಾಳೆ. ಇವಳ ದೃಶ್ಯಭಾಷೆ ತುಂಬ ಸರಳವಾದುದು. ಹಾಗೆಂದು ಅದು ಕನಿಷ್ಠ ಎಂದರ್ಥವಲ್ಲ. ಎಂಥವರೊಂದಿಗೂ ಅದು ಸಂವಹನ ಸಾಧಿಸುತ್ತದಲ್ಲ.. ಇದೇ ಅದರ ಮಹತ್ವವಾಗಿದೆ. ಉಳಿದ ಕಲಾವಿದರಂತೆ ಇಸಂಗಳ ಹೇರಿಕೆಯಾಗಲಿ, ಘನಗಂಭೀರ ರೂಪಕ, ಪ್ರತಿಮೆಗಳ ಭಾರವಾಗಲಿ ಇಲ್ಲದಿರುವುದರಿಂದ ಈ ಕೃತಿಗಳು ಸುಲಭಗ್ರಾಹಿಯಾಗುತ್ತವೆ. ಅವಳ ಈ ಅನನ್ಯ ಕಲಾಪಥದಲ್ಲಿ ವಿಮರ್ಶಕರು ಮ್ಯಾಜಿಕ್ ರಿಯಲಿಸಂ, ಮೆಕ್ಸಿಕನ್ ಜಾನಪದದ ಪ್ರಭಾವ ಮತ್ತು ನವ್ಯ ಸಾಹಿತ್ಯ ಸಿದ್ಧಾಂತದ ಪ್ರಭಾವವನ್ನು ಗುರುತಿಸುತ್ತಾರೆ. ಫ್ರಿಡಾ ತನ್ನ ವಾಸ್ತವಿಕ ದೃಷ್ಟಿಕೋನಕ್ಕೆ ಮಾಂತ್ರಿಕತೆಯನ್ನು ಬೆರೆಸಿ ಕಲಾಕೃತಿಗಳನ್ನು ಬಲವಾಗಿ ಮಸೆದಿದ್ದಾಳೆ!

 

 

 

 

 

 

 

 

 

 

 

 

 

A few small nibs passionate from love

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Diego and frida

 

 

 

 

 

 

 

 

 

 

 

 

Roots 1943

 

ಈ ಹಿಂದಿನ ಅಂಕಣ ಬರಹಗಳು

ಗೌಳಿಗಿತ್ತಿಯ ಮೌನ ಜಾಗರಣೆ!

ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...