ಹೆಣ್ಣು ಬದುಕಿನ ಬವಣೆ ಹೇಳುವ ಗಂಡು ದನಿ

Date: 06-08-2021

Location: ಬೆಂಗಳೂರು


ಲೇಖಕಿ, ಅಂಕಣಕಾರ್ತಿ ಶ್ರೀದೇವಿ ಕೆರೆಮನೆ ಅವರು ‘ಸಿರಿ ಕಡಲು’ ಸರಣಿ ಬರೆಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದೊಂದಿಗಿನ ತಮ್ಮ ಸಹಯಾನವನ್ನು ನಿಮ್ಮ ಮುಂದಿಡಲಿದ್ದಾರೆ. ಈ ಬಾರಿಯ ಸರಣಿಯಲ್ಲಿ ಲೇಖಕ ಚಂದ್ರಶೇಖರ್ ಜಿ.ಆರ್ ಅವರ ಬೈಪಾಸ್ ರಸ್ತೆ ಕೃತಿಯ ಓದಿನೊಂದಿಗೆ ತೆರೆದುಕೊಂಡ ತಮ್ಮ ಅನುಭವ ಕಥನವನ್ನು ಈ ಲೇಖನದ ಮೂಲಕ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಒಂದು ಶನಿವಾರ ಅಮ್ಮ ಗಾಬರಿಯಲ್ಲಿ ಫೋನ್ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮರ ಕಡಿಯಲು ಬಂದಿದ್ದಾರೆ. ಮಾರ್ಕ್ ಮಾಡದೇ ಇರುವ ಮರನೂ ಕಡಿತಾರಂತೆ. ಕೇಳಿದರೆ ಅರ್ಧ ಮನೆಯವರೆಗೆ ಹೋಗ್ತದೆ ಅಂತ ಹೇಳ್ತಿದ್ದಾರೆ.' ಇನ್ನೇನು ಅತ್ತೇ ಬಿಡುತ್ತಾಳೆ ಎನಿಸುವಂತಿತ್ತು ಅಮ್ಮನ ಧ್ವನಿ. ಸರ್ವೆಗೆ ಬಂದಾಗ ನಮಗಿಂತ ಚಿಕ್ಕ ಮನೆಗೂ ನಮ್ಮ ಮನೆಗೆ ಮಾಡಿದ ಎಸ್ಟಿಮೇಟ್ ನ ಒಂದುವರೆ ಪಟ್ಟು ಹಣ ಹೆಚ್ಚಿಗೆ ಹಾಕಿದ್ದರು. ನಂತರ ಮತ್ತೊಮ್ಮೆ ಎಸ್ಟಿಮೇಟ್ ಸರಿಯಾಗಿಲ್ಲ ಎಂದು ನಾನು ಅರ್ಜಿ ಕೊಟ್ಟಾಗ "ನಾವು ಹುಬ್ಬಳ್ಳಿಯಿಂದ ಬರ್ತೇವೆ. ನಿಮಗೆ ಲಕ್ಷಗಟ್ಟಲೆ ಹಣ ಬರ್ತದೆ. ಆದರೆ ನಮಗೇನು ಕೊಟ್ಟಿರಿ?" ಎಂದು ಪ್ರಶ್ನಿಸಿದ್ದರಂತೆ. ಎಂದೂ ಲಂಚ ಕೊಟ್ಟೇ ಗೊತ್ತಿಲ್ಲದ ಬಡ ಪ್ರಾಥಮಿಕ ಶಾಲಾ ಮಾಸ್ತರನಾಗಿದ್ದ ಅಪ್ಪ, ಆ ಮಾತಿಗೆ ಕಂಗಾಲಾಗಿದ್ದರು. ಕೊನೆಗೂ ಮನೆಯ ಮುಂದಿನ ತಗಡಿನ ಶೀಟ್ ಹಾಕಿದ್ದ ಜಾಗ ಮಾತ್ರ ಹೋಗುತ್ತದೆ ಎಂದು ಹೇಳಿ House is in safer zone. ಎಂದು ಬರೆದು ಕೈ ತೊಳೆದುಕೊಂಡಿದ್ದರು. ಈಗ ಅರ್ಧ ಮನೆ ಹೋಗುತ್ತದೆ ಎಂದರೆ ಏನು ಮಾಡುವುದು? ಅವರು ಕೊಟ್ಟ ಹಣದಿಂದ ಇನ್ನೊಂದು ಮನೆ ಕಟ್ಟಿಕೊಳ್ಳಲೂ ಸಾಧ್ಯವಿರಲಿಲ್ಲ. ಹೀಗಾಗಿ ಅಮ್ಮ ಕಂಗಾಲಾಗಿದ್ದರು. ಈಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಅಪ್ಪನಿಗೆ ಅವರು ನೀಡಿದ ಕಾಗದ ಪತ್ರ ತೋರಿಸುವಷ್ಟೂ ಶಕ್ತಿ ಇರಲಿಲ್ಲ. ಅಂತೂ ನನ್ನ ಬಳಿಯಿದ್ದ ಮನೆ ಹೋಗುವುದಿಲ್ಲ ಎನ್ನುವ ರಾಷ್ಟ್ರೀಯ ಹೆದ್ದಾರಿಯವರ ಪತ್ರವನ್ನು ವ್ಯಾಟ್ಸ್ ಆಪ್ ಗೆ ಕಳಿಸಿ, ಯಾರ್ಯಾರಿಗೋ ಫೋನ್ ಮಾಡಿ ಸದ್ಯಕ್ಕೆ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಾಗಿತ್ತು.

ನನ್ನ ತಾಯಿಯ ಮನೆ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿದೆ. ಗ್ರಹಪ್ರವೇಶ ಆದಾಗ ನಾನು ಒಂದನೇ ತರಗತಿ. ಅದಕ್ಕಿಂತ ಹತ್ತು ವರ್ಷ ಮೊದಲು ಮನೆ ಕಟ್ಟಲು ಅಡಿಪಾಯ ಹಾಕ್ಕಿದ್ದಂತೆ. ಆಗ ಅಪ್ಪ ಪ್ರಾಥಮಿಕ ಶಾಲಾ ಶಿಕ್ಷಕರು. ಅವರಿಗೆ ಬರುತ್ತಿದ್ದ ಸಂಬಳ ಕೇವಲ ಎಂಬತ್ತು ರೂಪಾಯಿ. ಹಿರಿಯ ಮಗ. ಬರುತ್ತಿದ್ದ ಆ ಸಂಬಳದಲ್ಲಿಯೇ ಇಬ್ಬರು ತಮ್ಮಂದಿರನ್ನು ಓದಿಸಬೇಕು. ಇಬ್ಬರು ತಂಗಿಯರ ಮಕ್ಕಳನ್ನು ಓದಿಸಬೇಕು. ಅಮ್ಮನ ಅಣ್ಣನ ಮಕ್ಕಳಿಬ್ಬರು ಓದಲೆಂದು ಜೊತೆಗಿದ್ದರು.‌ಸಂಸಾರ ಸಾಗಿಸಬೇಕು.‌ ಒಂದು ಕಾಲದಲ್ಲಿ ಬೇಕಾದಷ್ಟು ಇದ್ದ ಆಸ್ತಿ ಉಳುವವನೆ ರೈತ ಎಂಬ ಕಾಯ್ದೆಗೆ ಸಿಲುಕಿ ಹಂಚಿಹೋಗಿ ಬಡತನದ ಸ್ಥಿತಿಯಾಗಿತ್ತು. ಹೀಗಾಗಿ ಊರಲ್ಲಿ ಮನೆಯ ಖರ್ಚಿಗೆ ಅವ್ವ-ಅಪ್ಪನಿಗೆ ಏನಾದರೂ ಕೊಡಬೇಕು. ಮದುವೆ ಆಗದ ತಂಗಿಯೊಬ್ಬಳಿದ್ದಾಳೆ. ಅವಳನ್ನೂ ನೋಡಿಕೊಳ್ಳಬೇಕು.‌ ಇಷ್ಟೆಲ್ಲವನ್ನು ಮಾಡಿಯೂ ಮನೆ ಕಟ್ಟಲು ಎಂದು ರಸ್ತೆ ಬದಿಯ ಜಾಗ ತೆಗೆದುಕೊಂಡಿದ್ದರು. ಸಾಲ ಮಾಡದೆಯೇ ಮನೆ ಕಟ್ಟಬೇಕು ಎಂದು ತೀರ್ಮಾನಿಸಿದವರಂತೆ ಇದ್ದಷ್ಟೇ ದುಡ್ಡಲ್ಲಿ ಸಾಮಾನು ತರುವುದು, ಮನೆ ಕಟ್ಟುವುದು. ಹೀಗಾಗಿ ಮನೆ ಪೂರ್ತಿಯಾಗಿ ಗ್ರಹಪ್ರವೇಶವಾಗಲು ಬರೋಬ್ಬರಿ ಹತ್ತುವರ್ಷ.

"ಅಡಿಗಲ್ಲು ಹಾಕಿ ಮನೆ ಕಟ್ಟಿ ಮುಗಿಸೋದಕ್ಕೆ ಹತ್ತು ವರ್ಷ ಬೇಕಾಗಿತ್ತು. ಈಗ. ಒಂದೇ ಸಲಕ್ಕೆ ಮುರಿದು ಬಿಡ್ತಾರೆ." ಅಪ್ಪನ ಧ್ವನಿಯಲ್ಲಿ ಜೀವವಿರಲಿಲ್ಲ. ತಾನು ನೌಕರಿ ಮಾಡಿ ಕೊಂಡುಕೊಂಡ ಜಾಗ ಎಂಬ ಕಾರಣಕ್ಕೆ ಅಪ್ಪನಿಗೆ ಇದರ ಬಗ್ಗೆ ಕಕ್ಕುಲಾತಿ ಜಾಸ್ತಿ. ಕೊಂಡುಕೊಂಡು ಮನೆ ಕಟ್ಟಿಕೊಂಡ ಈ ಜಾಗವನ್ನೂ ಪಾಲು ಮಾಡಬೇಕೆಂದು ಹಿಂಸೆಯ ಸಮಯದಲ್ಲಿ ಕೊನೆಯ ತಮ್ಮ ತಕರಾರು ತೆಗೆದಾಗ ನೊಂದು ವಾರಗಟ್ಟಲೇ ಊಟ ಬಿಟ್ಟು ಕೊರಗಿದ್ದರು ಅಪ್ಪ. ಈ ಮನೆಯಲ್ಲೇ ಉಳಿದು, ಇಲ್ಲೇ ಮದುವೆಯಾಗಿ ಹೀಗೆ ಹೇಳಿಬಿಟ್ಟನಲ್ಲ ಎಂದು. ಹಾಗೆ ಹೇಳಲೂ ಕಾರಣವಿತ್ತು. ಕೊಂಡ ಜಾಗವನ್ನೂ ತನ್ನಪ್ಪನ ಹೆಸರಿಗೇ ರಿಜಿಸ್ಟರ್ ಮಾಡಿಸಿದ್ದು ಇದಕ್ಕೆ ಕಾರಣ.

ಕೊನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರ ಬಂದಾಗಲೂ ಆ ಜಾಗ ಸರಿಯಾಗಿ ಅಪ್ಪನ ಹೆಸರಿಗೆ ಆಗದೆ ಇರುವುದರಿಂದ ಎಲ್ಲರ ಸಹಿಯನ್ನೂ ಪಡೆಯಬೇಕಾಗಿ ಬಂದಾಗ ತಂಗಿಯ ಮಗನೊಬ್ಬ ಹಣದಲ್ಲಿ ಪಾಲು ಕೇಳಿ ತೆಗೆದುಕೊಂಡಾಗಲೂ ಅದಕ್ಕಿಂತ ಹೆಚ್ಚು ನೊಂದಿದ್ದರು. ತನ್ನ ಹೊಟ್ಟೆ ಬಟ್ಟೆ ಕಟ್ಟಿಟ್ಟು, ತನ್ನದೇ ಸಂಸಾರ ಕಡೆಗಣಿಸಿ ಓದಿಸಿದ ಸೋದರಳಿಯ, ಇದು ವಂಶಪಾರಂಪರ್ಯವಾಗಿ ಬಂದ ಆಸ್ತಿ ಅಲ್ಲ, ಕೊಂಡುಕೊಂಡಿದ್ದ ಜಾಗ ಎಂಬುದು ಗೊತ್ತಿದ್ದರೂ ಅಜ್ಜನ ಆಸ್ತಿ ಎಂದು ಕಾಗದಪತ್ರಗಳಿಗೆ ಸಹಿ ಹಾಕಲು ಬಂದ ಹಣದಲ್ಲಿ ಪಾಲು ಕಿತ್ತುಕೊಂಡಿದ್ದು ಕಂಡು ಸಂಬಂಧಕ್ಕೆ ಬೆಲೆಯೇ ಇಲ್ಲ ಎನ್ನುತ್ತ ಕುಗ್ಗಿಹೋಗಿದ್ದರು.

ಚಂದ್ರಶೇಖರರವರ ಬೈಪಾಸ್ ರಸ್ತೆ ಓದುತ್ತ ಇದೆಲ್ಲ ನೆನಪಾಗಿ ಎಷ್ಟೇ ತಡೆದುಕೊಂಡರೂ ಕಣ್ಣಂಚಲ್ಲಿ ನೀರು ಉಕ್ಕಿತ್ತು. ಹೆದ್ದಾರಿಗಾಗಿ ತನ್ನ ಒಳ್ಳೆಯ ಬೆಳೆ ಬೆಳೆಯುವ ಜಾಗ, ಗಂಡನ ಸಮಾಧಿ ಇರುವ ಸ್ಥಳ ಎಲ್ಲವನ್ನು ಕಳೆದುಕೊಂಡ ಗಂಗವ್ವ ಮಗ ಚಂದ್ರ, ಸೊಸೆ ಸುಮತಿ ಎಷ್ಟೇ ಹೇಳಿದರೂ ಕೇಳದೇ ದುಃಖ ಎದೆಯಲ್ಲಿಟ್ಟು ನರಳಿದವಳು. ನಂಬಿಕೆ ಕಳೆದುಕೊಂಡವಳಂತೆ ದೇವರಿಗೆ ಬಿಟ್ಟ ಕೋಳಿಯನ್ನೂ ಕುಯ್ದು ಅಡುಗೆ ಮಾಡಿ ನೋವಲ್ಲೇ ಎದ್ದು ನಡೆದ ಗಂಗಮ್ಮ ಜನ ವಿರೋಧಿ ಬೈಪಾಸ್ ರಸ್ತೆ ನಿರ್ಮಾಣವನ್ನು ವಿರೋಧಿಸಿದ್ದು ತನ್ನ ಸಾವಿನ ಮೂಲಕವೇ. ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದ ಈ ಕಥೆಯೊಂದೇ ಸಾಕು ಚಂದ್ರಶೇಖರ ಕಥೆಗಳ ಆಳವನ್ನು ತಿಳಿಸಲು.

ಒಟ್ಟೂ ಎಂಟು ಕಥೆಗಳಿರುವ ಈ ಸಂಕಲನದಲ್ಲಿ ಎಲ್ಲ ಕಥೆಗಳೂ ಒಂದಲ್ಲ ಒಂದು ರೀತಿಯಲ್ಲಿ ಗಮನ ಸೆಳೆಯತ್ತವೆ. ನನಗೆ ವಿಶೇಷವಾಗಿ ಇಷ್ಟವಾದ ಕಥೆ ಅಂಟಿದ ನಂಟು. ಸಿಂಗಲ್ ಪೇರೆಂಟ್ ಆಗುವುದು ಮಹಿಳೆಯರಿಗೆ ಅಷ್ಟೊಂದು ಸುಲಭವಲ್ಲ. ದತ್ತು ತೆಗೆದುಕೊಂಡ ಮಗುವನ್ನು ತಾಯಿಯಾಗಿ ಪಾಲಿಸುವ, ಬೆಳೆಸುವ ಹೊಣೆಗಾರಿಕೆ ನಿಜಕ್ಕೂ ಹೆಚ್ಚು. ಇದರೊಟ್ಟಿಗೆ ಸಮಾಜದ ಹೀಗಳಿಕೆ. ಕಥೆಯಲ್ಲಿ "ನಿನ್ನ ಬಗ್ಗೆ ನಮಗೆ ಗೊತ್ತು ಗಮ್ಯ, ನೀನು ಓದು ಕೆಲಸ ಅಂತ ವರ್ಷಾನುಗಟ್ಟಲೆ ಊರಿಂದ ಹೊರಗೆ ಇದ್ದೀಯಾ. .. ಮುಂದೆ ನೀನು ಕರ್ಕಂಡು ಬರೋ ಮಗಾ ನಿಂದೇ ಇರಬೋದು.... ಯಾವಂಗೋ ಬಸಿರಾಗಿ ಮಗಾನ ಅಲ್ಲೇ ಹೆತ್ತು ಅವ್ನು ಕೈ ಕೊಟ್ಟ ಮ್ಯಾಕೆ ಇಧಿಯಿಲ್ದೇ ದತ್ತು ತಕೊಂಡಾವಿ ಅನ್ನೋ ನಾಟಕ ಆಡ್ತಾವ್ರೆ ಅಂತ ಊರವರು ಅಂದುಕೊಂಡ್ರೆ ಮನೆತನದ ಮರ್ವಾದೆ ಏನಾಗಬೇಕು' ಎಂದು ಸ್ವತಃ ಅವಳಣ್ಣನೇ ಹೇಳುತ್ತಾನೆ. ಈ ಮಾತಿನಲ್ಲಿ ಅಂತಹುದ್ದೊಂದು ಸಾಧ್ಯತೆ ಇದ್ದರೂ ಇರಬಹುದು ಎಂದು ಅವನೂ ಅಂದುಕೊಂಡ ಹಾಗಿದೆ. ಹೆಣ್ಣು ಸ್ವತಂತ್ರ ತೀರ್ಮಾನವನ್ನು ಎಂದಿಗೂ ತೆಗೆದುಕೊಳ್ಳುವಂತಿರುವುದಿಲ್ಲ. ಸಂಪ್ರದಾಯ, ಮನೆತನ ಎನ್ನುತ್ತಿದ್ದ ಅಪ್ಪ ಮಗುವನ್ನು ಒಪ್ಪಿಕೊಳ್ಳುವ ಕಥೆಯ ಅಂತ್ಯ ಮಾತ್ರ ಖುಷಿ ಕೊಡುತ್ತದೆ. ಮುಕ್ತಿ ಎನ್ನುವ ಕಥೆಯ ಹಂದರ ಸಾಧಾರಣ ಎನಿಸಿದರೂ ಒಂದು ಕಥೆಯಾಗಿ ಅದನ್ನು ಕಟ್ಟಿಕೊಟ್ಟ ರೀತಿ ಚೆನ್ನಾಗಿದೆ.

ಅರ್ಥವಾಗದವನು ಎನ್ನುವ ಕಥೆಯಲ್ಲಿ ಒಬ್ಬ ವ್ಯಕ್ತಿಯ ಸಾವು , ಆತನ ಸುತ್ತ ಕಟ್ಟಿಕೊಳ್ಳುವ ಕಥೆಗಳು, ಅದರಲ್ಲೂ ಮುಖ್ಯವಾಗಿ ಹೆಂಡತಿಯ ಮೇಲೆ ಅನುಮಾನ ಪಟ್ಟು ಆತ ಆತ್ಮಹತ್ಯೆ ಮಾಡಿಕೊಂಡ ಎನ್ನುವ ಅಂಶ ಎಲ್ಲವನ್ನೂ ಎದುರಿಗೆ ಕುಳಿತು ಕಥೆ ಹೇಳಿದಂತೆ ನಿರೂಪಿಸುತ್ತದೆ. ಹರಿವ ತೊರೆ ಎನ್ನುವ ಕಥೆ ಕೂಡ ತಮ್ಮ ವಿಶಿಷ್ಟ ತಂತ್ರಗಾರಿಕೆಯಿಂದ ಮನಸೆಳೆಯುತ್ತದೆ. ಕಥೆಯ ಕೊನೆಯವರೆಗೂ ಎಲ್ಲಿಯೂ ಸುಳಿವನ್ನು ಬಿಟ್ಟುಕೊಡದೇ ಅಂತ್ಯದಲ್ಲಿ ವಿಶಿಷ್ಟ ತಿರುವನ್ನು ಪಡೆದು ನಮ್ಮನ್ನು ದಿಘ್ಮೂಢರನ್ನಾಗಿಸುತ್ತದೆ. ಪ್ರತಿಸಲ ಗಂಡನೊಂದಿಗೆ ಜಗಳವಾಡಿ ಡಿವೋರ್ಸ್ ಕೊಟ್ಟು ಬಿಡುತ್ತೇನೆ ಎಂದು ಹೇಳುತ್ತಲೇ ಮತ್ತೆ ಮತ್ತೆ ಹೊಂದಿಕೊಳ್ಳುವ ಗೆಳತಿಯೊಬ್ಬಳು ಈ ಸಂದರ್ಭದಲ್ಲಿ ಬೇಡವೆಂದರೂ ನೆನಪಾಗಿದ್ದು ಸುಳ್ಳಲ್ಲ.

ಕಥೆಗಾರರ ಹೆಸರನ್ನು ಓದದೇ ಇಡೀ ಸಂಕಲನವನ್ನು ಓದಿ ಎಂದರೆ ಖಂಡಿತವಾಗಿ ಬರೆದದ್ದು ಒಬ್ಬ ಮಹಿಳೆ ಎಂದೇ ಅಂದುಕೊಳ್ಳಬಹುದಾದಷ್ಟು ಸೂಕ್ಷ್ಮ ಸಂವೇದನೆಗಳನ್ನು, ಸ್ತ್ರೀ ಭಾವನೆಗಳನ್ನು ಹೊಂದಿರುವ ಈ ಸಂಕಲನ ಬದುಕಿನ ಹಲವಾರು ಮಗ್ಗುಲುಗಳನ್ನು ನಮ್ಮೆದುರಿಗೆ ಅನಾವರಣ ಮಾಡುತ್ತದೆ. ಹೆಣ್ಣಿನ ಜೀವನದಲ್ಲಿ ಯಾರೂ ಅರಿಯದ ಬಹಳಷ್ಟು ಘಟನೆಗಳಿರುತ್ತವೆ ಎಂಬುದನ್ನು ಹೇಳುತ್ತಲೇ ಅದಕ್ಕೆ ಸಮಾಜ ನೀಡುವ, ನೀಡಬಹುದಾದ ಪ್ರತಿಕ್ರಿಯೆಗಳನ್ನು ಯಥಾವತ್ತಾಗಿ ಇಲ್ಲಿ ತಿಳಿಯಲು ಸಾಧ್ಯವಿದೆ. ಒಂದು ಹೆಣ್ಣು ಹೆಣ್ಣಾಗಿ ಬರೆಯುವ ಮಾತಿಗೂ, ಒಂದು ಗಂಡು ಹೆಣ್ಣಾಗಿ ತೆರೆದುಕೊಳ್ಳುವ ರೀತಿಗೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಇಲ್ಲಿ ಗಮನಿಸಬಹುದು.

ಈ ಕಥೆಗಳಲ್ಲಿನ ಹೆಣ್ಣುಗಳು ದೃಢ ನಿಶ್ಚಯದವರು. ತಾವು ತೆಗೆದುಕೊಂಡ ತೀರ್ಮಾನವನ್ನು ಪಟ್ಟೂ ಬಿಡದೆ ನಡೆಸುವವರು. ನಿಶ್ಚಯಿಸಿದ ಹಾದಿಯಲ್ಲಿ ಕಲ್ಲು ಮುಳ್ಳುಗಳಿದ್ದರೂ ಹಿಂಜರೆಯದೆ ಗುರಿ ತಲುಪಿದವರು. ಮನಸ್ಸು ಒಂದಿಷ್ಟು ಹಿಂದೆ ಮುಂದಾಗಿ ತೊಳಲಾಡಿದರೂ ಮತ್ತೆ ಗಟ್ಟಿಗೊಂಡವರು. ಈ ಕಥೆಗಳಲ್ಲಿ ಹೆಣ್ಣು ಪ್ರಥಮ ಪುರುಷದಲ್ಲಿದ್ದು ನಿರೂಪಣೆ ಮಾಡುತ್ತಿರುವಾಗಲೂ ಸುತ್ತಲಿನ ಸಮಾಜ ಆಡಿಕೊಳ್ಳುವ ಮಾತುಗಳನ್ನು ಉಲ್ಲೇಖಿಸುವ ಪರಿ ವಿಭಿನ್ನ. ಯಾಕೆಂದರೆ ಸ್ತ್ರೀ ಮನದ ಕಥೆಗಾರರಿಗೆ ಗಂಡುಲೋಕದ ಹುಳುಕುಗಳ ಅರಿವಿದೆ. ಸಮಾಜ ಹೇಗೆ ಮಾತಾಡಿ ಪ್ರತಿಕ್ರಿಯಿಸುತ್ತದೆ ಎಂಬ ಅರಿವಿದೆ. ಈ ಕಾರಣದಿಂದಾಗಿಯೇ, ಈ ಕಥೆಗಳ ನಿರೂಪಣೆ, ತಂತ್ರಗಾರಿಕೆಯಲ್ಲಿ ಹೊಸತನವನ್ನು ಕಾಣಬಹುದು. ಭಾಷಾ ಬಳಕೆಯೂ ಕೂಡ ಗಮನ ಸೆಳೆಯುತ್ತದೆ. ಮಂಡ್ಯದ ಜವಾರಿ ಭಾಷೆ ನಮ್ಮನ್ನು ನಿಜಕ್ಕೂ ಮಂಡ್ಯದ ಹಳ್ಳಿಗಳೊಳಗೆ ಒಂದು ಸುತ್ತು ಹೊಡೆಸಿದಂತೆ ಭಾಸವಾಗುತ್ತದೆ. ನಾನು ಚೇತನ್ ಎಂದು ಕರೆಯುವ ಈ ಹುಡುಗ ತನ್ನ ಮೊದಲ ಕಥಾ ಸಂಕಲನದಲ್ಲಿಯೇ ಗೆದ್ದಿದ್ದಾರೆ. ಕನ್ನಡ ಕಥಾಲೋಕಕ್ಕೊಂದು ಸಶಕ್ತ ಕಥೆಗಾರ ದೊರೆತಿರುವ ಸೂಚನೆ ನೀಡಿದ್ದಾರೆ.

ಈ ಸರಣಿಯ ಹಿಂದಿನ ಬರೆಹಗಳು:
ಮಲೆನಾಡಿನ ಸೊಗಡನ್ನು ನೆನಪಿಸುವ 'ಮೂಚಿಮ್ಮ'
‘ಚೆಕ್ ಪೋಸ್ಟ್’ ಟ್ರಕ್ ನೊಂದಿಗೆ ಸಾಗುವ ಬಾಲ್ಯದ ನೆನಪು


MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...