ಹಿಂದೂಸ್ತಾನಿ ಸಂಗೀತಕ್ಕೆ ಕನ್ನಡದ ಘಮಲು ಹರಡಿದ ಸವಾಯಿ ಗಂಧರ್ವರು

Date: 07-02-2021

Location: .


ತಮ್ಮ ಸ್ವರಮಾಧುರ್ಯದಿಂದ ಸಂಗೀತ ಲೋಕದ ಉದಾತ್ತ ಧ್ಯೇಯಗಳನ್ನು ಎತ್ತಿ ಹಿಡಿದ, ‘ಸವಾಯಿ ಗಂಧರ್ವ’ ಬಿರುದಾಂಕಿತ ರಾಮಚಂದ್ರ ಗಣೇಶ ಕುಂದಗೋಳಕರ್ ಅವರ ಸಂಗೀತ ಪ್ರೇಮ ಹಾಗೂ ಬದುಕನ್ನು ಸಾಹಿತಿ ಜಗದೀಶ ಕೊಪ್ಪ ಅವರು ತಮ್ಮ ‘ಗಾನಲೋಕದ ಗಂಧರ್ವರು’ ಅಂಕಣದಲ್ಲಿ ಪರಿಚಯಿಸಿದ್ದು ಇಲ್ಲಿದೆ.

ಭಾರತೀಯ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಆರಂಭದಿಂದಲೂ ಇಸ್ಲಾಂ ಸಮುದಾಯದ ಕಲಾವಿದರು ಮುಂಚೂಣಿಯಲ್ಲಿದ್ದುದು ಸಹಜ ಸಂಗತಿಯಾಗಿತ್ತು. ಆನಂತರದ ದಿನಗಳಲ್ಲಿ ಭಕ್ತಿಪರಂಪರೆಯ ನೆಲವಾದ ಮಹಾರಾಷ್ಟ್ರದ ಅನೇಕ ಕಲಾವಿದರು ವಿಶೇಷವಾಗಿ ಮೇಲ್ಜಾತಿಯ ವಿದ್ವಾಂಸರು ಈ ಕ್ಷೇತ್ರವನ್ನು ಪ್ರವೇಶ ಮಾಡಿ ತಮ್ಮ ಛಾಪನ್ನು ಮೂಡಿಸುವುದರ ಜೊತೆಗೆ ಜನಸಾಮಾನ್ಯರ ನಡುವೆ ಪ್ರಸಿದ್ಧಿಯಾಗಿದ್ದ ಅಭಂಗ್ ( ಭಜನೆ) ಜೊತೆಗೆ ಸಂಗೀತದ ಅಭಿರುಚಿ ಮೂಡಿಸಿದರು. ಇದೇ ಸಮಯದಲ್ಲಿ, ಹಿಂದೂಸ್ತಾನಿ ಸಂಗೀತಕ್ಕೆ ಕನ್ನಡದ ಕಂಪನ್ನು ಹರಡುವುದರ ಮೂಲಕ ಪಂಡಿತ್ ಭೀಮಸೇನ ಜೋಷಿ, ಪಂಡಿತ್ ಬಸವರಾಜ ರಾಜಗುರು ಮತ್ತು ವಿದುಷಿ ಗಂಗೂಬಾಯಿ ಹಾನಗಲ್ ಮುಂತಾದ ರಾಷ್ಟ್ರೀಯ ಪ್ರತಿಭೆಗಳನ್ನು ಸೃಷ್ಟಿಸಿದ ಕೀರ್ತಿ ಸವಾಯಿ ಗಂಧರ್ವರಿಗೆ ಸಲ್ಲುತ್ತದೆ. ಇವರ ಜೊತೆಗೆ ಮಲ್ಲಿಕಾರ್ಜುನ ಮನ್ಸೂರ್ ಮತ್ತು ಕುಮಾರ ಗಂಧರ್ವರು ಸಹ ರಾಷ್ಟ್ರ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ ಕನ್ನಡಿಗರಾಗಿದ್ದಾರೆ.

ಭಾರತೀಯ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಮೂವರು ಕಲಾವಿದರು ಮಾತ್ರ ಗಂಧರ್ವರಾಗಿ ಮನೆ ಮಾತಾಗಿದ್ದಾರೆ. ಬಾಲಗಂಧರ್ವರರನ್ನು (ಮೀರಜ್ ಸಮೀಪದ ನಾರಾಯಣರಾವ್) ಹೊರತುಪಡಿಸಿದರೆ, ಸವಾಯಿ ಗಂದರ್ವರು ( ಕುಂದಗೋಳದ ರಾಮ್ ಬಾವು) ಮತ್ತು ಕುಮಾರ ಗಂಧರ್ವರು( ಬೆಳಗಾವಿ ಸಮೀಪದ ಸೂಳೆಬಾವಿಯ ಶಿವಪುತ್ರ ಸಿದ್ಧರಾಮಯ್ಯ) ಕನ್ನಡಿಗರಾಗಿರುವುದು ವಿಶೇಷ. ಸವಾಯಿ ಗಂಧರ್ವರ ಮೂಲ ಹೆಸರು ರಾಮಚಂದ್ರ ಗಣೇಶ ಕುಂದುಗೋಳಕರ್ ಎಂಬುದಾಗಿತ್ತು. ರಾಮಭಾವು ಎಂಬ ಹೆಸರಿನಿಂದ ಗುರುತಿಲ್ಪಟ್ಟಿದ್ದ ಅವರ ಗಾಯವನ್ನು ಮೆಚ್ಚಿದ ಮಹಾರಾಷ್ಟ್ರದ ಜನತೆ 1919ರಲ್ಲಿ ಅಮರಾವತಿಯಲ್ಲಿ ಸವಾಯಿ ಗಂಧರ್ವ ಎಂಬ ಬಿರುದು ನೀಡಿ ಗೌರವಿಸಿದರು. ಅಂದಿನಿಂದ ಈ ಹೆಸರು ಶಾಶ್ವತವಾಗಿ ಉಳಿಯಿತು. ಈ ಗೌರವಕ್ಕೆ ತಕ್ಕಂತೆ ಕಿರಾನಾ ಘರಾನಾ ಶೈಲಿ ಯ ಸಂಸ್ಥಾಪಕ ಉಸ್ತಾದ್ ಅಬ್ದುಲ್ ಕರೀಂ ಖಾನರ ಶಿಷ್ಯರಾಗಿ ಕಿರಾನಾ ಘರಾನಾ ಸಂಗೀತಕ್ಕೆ ತಮ್ಮ ಶಿಷ್ಯರ ಮೂಲಕ ಭದ್ರ ಬುನಾದಿ ಹಾಕಿದರು.

ಹುಬ್ಬಳ್ಳಿ ನಗರದಿಂದ ಹತ್ತೊಂಬತ್ತು ಕಿಲೊಮೀಟರ್ ದೂರದಲ್ಲಿರುವ ಕುಂದಗೋಳ ಪಟ್ಟಣದಲ್ಲಿ 1889ರ ಜನವರಿಯಲ್ಲಿ ಸವಾಯಿ ಗಂಧರ್ವರು ಜನಿಸಿದರು. ಕುಂದಗೋಳ ಪಟ್ಟಣವು ಆ ಕಾಲದಲ್ಲಿ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ಜೊತೆಗೆ ಮರಾಠಿ ಭಾಷೆಯು ಆಡಳಿತ ಭಾಷೆಯಾಗಿತ್ತು. ಇವರ ತಂದೆ ಗಣಪತರಾವ್ ಸಂಶಿ ಎಂಬುವರು ಸಂಶಿ ಗ್ರಾಮದವರಾಗಿದ್ದು ಕುಂದುಗೋಳದ ಜಮೀನ್ದಾರರಾದ ನಾಡಗೀರ್ ರಾಮನಗೌಡ ಎಂಬುವರ ಬಳಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಧಾರವಾಡ ಸಮೀಪದ ಅಮ್ಮಿನ್ ಹಾಳ್ ಗ್ರಾಮದವರಾಗಿದ್ದರು. ಸಂಗೀತದಲ್ಲಿ ಅಪಾರವಾದ ಅಭಿರುಚಿಯಿದ್ದ ಗಣಪತರಾವ್ ಅವರು ಕುಂದಗೋಳದಲ್ಲಿ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವ, ದತ್ತ ಜಯಂತಿ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಜೊತೆಗೆ ಪ್ರತಿ ನಿತ್ಯ ನಡೆಯುತ್ತಿದ್ದ ಭಜನೆಯಲ್ಲಿಯೂ ಸಹ ಪಾಲ್ಗೊಳ್ಳುತ್ತಿದ್ದರು. ಇದು ಪರೋಕ್ಷವಾಗಿ ಪುತ್ರ ರಾಮಭಾವು ಮೇಲೂ ಪರಿಣಾಮ ಬೀರಿತು.

ಬಾಲ್ಯದ ಶಿಕ್ಷಣವನ್ನು ಕುಂದಗೋಳದಲ್ಲಿ ಪೂರೈಸಿದ ಸವಾಯಿ ಗಂಧರ್ವರು, ಪ್ರೌಢಶಿಕ್ಷಣಕ್ಕಾಗಿ ಹುಬ್ಬಳ್ಳಿ ನಗರದ ಲ್ಯಾಮಿಂಗ್ ಟನ್ ಶಾಲೆಗೆ ದಾಖಲಾಗಿದ್ದರು. ಹುಬ್ಬಳ್ಳಿ ಹಾಗೂ ಬೆಂಗಳೂರು ರೈಲು ಮಾರ್ಗಕ್ಕೆ ಹೊಂದಿಕೊಂಡಂತೆ ಇದ್ದ ಕುಂದಗೋಳದಿಂದ ಹುಬ್ಬಳ್ಳಿ ನಗರಕ್ಕೆ ಪ್ಯಾಸಂಜರ್ ರೈಲು ಮೂಲಕ ಬಂದು ಹೋಗುತ್ತಿದ್ದ ಸವಾಯಿ ಗಂಧರ್ವರು ಹೈಸ್ಕೂಲ್ ಓದುತ್ತಿದ್ದ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದರು. ಪುತ್ರನನನ್ನು ಸರ್ಕಾರಿ ಅಧಿಕಾರಿ ಮಾಡಬೇಕೆಂದು ತಂದೆ ಗಣಪತರಾವ್ ಕನಸು ಕಾಣುತ್ತಿದ್ದರು. ಆದರೆ, ಬಾಲಕನಿಗೆ ತಂದೆಯ ಮೂಲಕ ಸಂಗೀತದ ಗುಂಗು ಹಿಡಿದಿತ್ತು. ಜೊತೆಗೆ, ಹುಬ್ಬಳ್ಳಿ ನಗರದಲ್ಲಿ ನಡೆಯುತ್ತಿದ್ದ ವೃತ್ತಿ ರಂಗಭೂಮಿಯ ನಾಟಕಗಳ ಮೂಲಕ ಮತ್ತು ಅಬ್ದುಲ್ ಕರೀಂ ಖಾನರ ಸಂಗೀತ ಕಚೇರಿಗಳ ಮೂಲಕ ಸಂಗೀತದಲ್ಲಿ ಆಸಕ್ತಿ ಮೂಡಿತ್ತು. ಮಗನ ಸಂಗೀತಾಸಕ್ತಿಯನ್ನು ಗಮನಿಸಿದ ಗಣಪತರಾವ್ ಕುಂದಗೊಳ ಪಟ್ಟಣದಲ್ಲಿದ್ದ ಹಿಂದುಸ್ತಾನಿ ಸಂಗೀತಗಾರ ಬಲವಂತರಾವ್ ಎಂಬುವರ ಸಂಗೀತ ಶಿಕ್ಷಣ ಕೊಡಿಸಿದರು. ಕೇವಲ ಒಂದೂವರೆ ವರ್ಷದಲ್ಲಿ ಸವಾಯಿ ಗಂಧರ್ವರು ಎಪ್ಪತ್ತೈದು ದ್ರುಪದ್, ಇಪ್ಪತ್ತೈದು ತರಾನ ಮತ್ತು ಒಂದೂ ನೂರು ಚೀಜ್ ಗಳಲ್ಲಿ ಪರಿಣಿತಿ ಸಾಧಿಸಿದರು.

ಬಲವಂತರಾವ್ ನಿಧನದಿಂದ ಸಂಗೀತ ಶಿಕ್ಷಣ ಮೊಟಕುಗೊಂಡಿತು. ನಂತರ ತಂದೆಯವರ ಜೊತೆ ನಾಡಗೀರ್ ಮನೆತನದ ವಾಡೆಯಲ್ಲಿದ್ದ ಸವಾಯಿ ಗಂಧರ್ವರು ಅಲ್ಲಿ ನಡೆಯುತ್ತಿದ್ದ ಧಾರ್ಮಿಕ ಉತ್ಸವಗಳಲ್ಲಿ ಪಾಲ್ಗೊಂಡು ಹಾಡುತ್ತಿದ್ದರು. ಆ ವೇಳೆಗಾಗಲೇ ಮೀರಜ್ ಪಟ್ಟಣದಲ್ಲಿ ನೆಲೆ ನಿಂತು ಕಿರಾನಾ ಘರಾಣಾ ಶೈಲಿಯ ಹಿಂದೂಸ್ತಾನಿ ಸಂಗೀತದಲ್ಲಿ ಹೆಸರಾಂತ ಕಲಾವಿದರಾಗಿದ್ದ ಉಸ್ತಾದ್ ಅಬ್ದಲ್ ಕರೀಂ ಖಾನರು ಮೈಸೂರು ಸಂಸ್ಥಾನದ ಆಸ್ಥಾನ ಕಲಾವಿದರಾಗಿದ್ದರು. ಮೈಸೂರಿಗೆ ಹೋಗುವ ಅಥವಾ ಮೈಸೂರಿನಿಂದ ಮೀರಜ್‌ಗೆ ವಾಪಸ್ ಬರುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಹುಬ್ಬಳ್ಳಿ ನಗರದಲ್ಲಿ ಇಳಿದು ಅವಳಿ ನಗರಗಳಲ್ಲಿ ಒಂದು ವಾರ ಕಾಲ ತಂಗುತ್ತಿದ್ದರು. ಹುಬ್ಬಳ್ಳಿಯ ಸಿದ್ಧಾರೂಢ ಮಠ, ಧಾರವಾಡ ನಗರ ಸೇರಿದಂತೆ ಹಲವೆಡೆ ಸಂಗೀತ ಕಚೇರಿ ನಡೆಸಿಕೊಡುತ್ತಿದ್ದರು. ಜೊತೆಗೆ ತಮ್ಮ ಶಿಷ್ಯನಾದ ಕುಂದುಗೋಳದ ನಾನಾಸಾಹೇಬ್ ಎಂಬುವರ ಮನೆಯಲ್ಲಿ ತಂಗುತ್ತಿದ್ದ ಕರೀಂ ಖಾನರು ಆಸಕ್ತರಿಗಾಗಿ ನಾಡಿಗೇರ್ ವಾಡೆಯಲ್ಲಿ ಸಹ ಸಂಗೀತ ಕಚೇರಿ ನಡೆಸಿಕೊಡುತ್ತಿದ್ದರು. ಒಮ್ಮೆ ಬಾಲಕ ಸವಾಯಿ ಗಂಧರ್ವನ ಹಾಡುಗಾರಿಕೆಯನ್ನು ಕೇಳಿದ ಕರೀಂಖಾನರಿಗೆ ಅಚ್ಚರಿಯಾಯಿತು. ಆತನನ್ನು ಹತ್ತಿರಕ್ಕೆ ಕರೆದು ವಿಚಾರಿಸಿದಾಗ ಬಾಲಕನಿಗೆ ಸಂಗೀತ ಕುರಿತಂತೆ ಅಪರಿಮಿತ ಉತ್ಸಾಹ ಕಂಡು ಸಂತೋಷ ಪಟ್ಟರು. ಸವಾಯಿ ಗಂಧರ್ವರ ತಂದೆ ಗಣಪತರಾವ್‌ರವರು ತಮ್ಮ ಮಗನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಕರೀಂಖಾನರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಜಮೀನ್ದಾರ್ ನಾಡಿಗೇರ್‌ ರಾಮನಗೌಡ ಕೂಡ ಧ್ವನಿಗೂಡಿಸಿದರು. ಇವೆಲ್ಲವುಗಳ ಒಟ್ಟು ಪ್ರತಿಫಲ ವೆಂಬಂತೆ ಸವಾಯಿ ಗಂಧರ್ವರು ಉಸ್ತಾದ್ ಅಬ್ದುಲ್ ಕರೀಂಖಾನರಿಗೆ ಪ್ರಥಮ ಕನ್ನಡದ ಅಧಿಕೃತ ಶಿಷ್ಯನಾಗಿ ಆಯ್ಕೆಯಾಗಿ ಗುರುವಿನ ಜೊತೆ ಕುಂದಗೋಳದಿಂದ ಮೀರಜ್ ಪಟ್ಟಣಕ್ಕೆ ಪ್ರಯಾಣ ಬೆಳೆಸಿದರು.

ಅಬ್ದುಲ್ ಕರೀಂ ಖಾನರು ಮೀರಜ್ ಪಟ್ಟಣದಲ್ಲಿ ಆರಂಭಿಸಿದ್ದ ಆರ್ಯ ಸಂಗೀತ ವಿದ್ಯಾಶಾಲೆಯಲ್ಲಿ ಶಿಷ್ಯರಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಸಂಗೀತ ಶಾಲೆಗೆ ಸೇರುವ ವಿದ್ಯಾರ್ಥಿಗಳಿಗೆ ಕೆಲವು ಷರತ್ತುಗಳನ್ನು ವಿಧಿಸುತ್ತಿದ್ದರು. ಶಿಷ್ಯರು ಕಡ್ಡಾಯವಾಗಿ ಎಂಟು ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಗುರುವಿನ ಆಶ್ರಯದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಸಂಗೀತ ಅಭ್ಯಾಸ ಮಾಡಬೇಕಿತ್ತು. ಆರಂಭದಲ್ಲಿ ತಂಬೂರ (ತಂಬೂರಿ) ಹಿಡಿದು ಶ್ರುತಿ ಮೀಟುತ್ತಾ, ಗುರು ಹಾಡುವುದನ್ನು ತದೇಕ ಚಿತ್ತದಿಂದ ಗಮನಿಸಬೇಕು. ಜೊತೆಗೆ ಗುರು ಸೂಚಿಸಿದಾಗ ರಾಗದ ಜೊತೆ ಧ್ವನಿಗೂಡಿಸಬೇಕು. ಆರಂಭದ ಮೂರು ವರ್ಷಗಳಲ್ಲಿ ತೋಡಿ ರಾಗ, ಮುಲ್ತಾನಿ ರಾಗ ಮತ್ತು ಪೂರಿಯಾ ರಾಗಗಳನ್ನು ವರ್ಷಪೂರ್ತಿ ಅಭ್ಯಾಸ ಮಾಡಿ ಪರಿಣತಿ ಸಾಧಿಸಬೇಕಿತ್ತು. ಏಕೆಂದರೆ, ಹಿಂದೂಸ್ತಾನಿ ಸಂಗೀತ ಅನೇಕ ಶೈಲಿಯ ಶಾಲೆಗಳಲ್ಲಿ ಅಬ್ದುಲ್ ಕರೀಂ ಖಾನರ ಕಿರಾನ ಘರಾಣ ಶೈಯಲ್ಲಿ ಸ್ವರಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗಿತ್ತು. ಆಗ್ರಾ ಘರಾಣೆಯಲ್ಲಿ ಲಯಕ್ಕೆ ಹೆಚ್ಚಿನ ಆದ್ಯತೆ ಇದ್ದರೆ ಇನ್ನಿತರೆ ಶಾಲೆಗಳಲ್ಲಿ ಇವುಗಳ ನಡುವೆ ಸಮನ್ವಯತೆ ಇರುವಂತೆ ನೋಡಿಕೊಳ್ಳಲಾಗಿತ್ತು. ಗ್ವಾಲಿಯರ್ ಘರಾಣೆಯಲ್ಲಿ ಬಂದೀಷ್(ಸಂಗೀತದ ಸಾಹಿತ್ಯ) ಹೆಚ್ಚು ಆದ್ಯತೆ ಇತ್ತು. ಈ ರೀತಿಯ ಕಠಿಮ ಶ್ರಮ ಮತ್ತು ಅಧ್ಯಯನದ ಮೂಲಕ ಸಂಪುರ್ಣ ಸಂಗೀತಗಾರರಾಗಿ ಕಲಾವಿದರಾಗಿ ಹೊರಹೊಮ್ಮಿದ ಸವಾಯಿ ಗಂಧರ್ವರು ಸಂಗೀತವನ್ನೇ ನಂಬಿ ಜೀವನ ಮಾಡುವುದು ದುಸ್ತರವಾಗಿತ್ತು. ಏಕೆಂದರೆ, ಸಾರ್ವಜನಿಕ ಸಂಗೀತ ಕಚೇರಿಗಳು ಇಲ್ಲವಾಗಿದ್ದ ಆ ಕಾಲದಲ್ಲಿ ಸಂಗೀತಗಾರರಿಗೆ ದೇಶಿಯ ಸಂಸ್ಥಾನಗಳ ದೊರೆಗಳು, ಜಮೀನ್ದಾರರು ಮತ್ತು ಶ್ರೀಮಂತ ವ್ಯಾಪಾರಿಗಳು ಮಾತ್ರ ಆಶ್ರಯದಾತರಾಗಿದ್ದರು. ಇಂತಹ ಅವಕಾಶ ಎಲ್ಲರಿಗೂ ದೊರೆಯುತ್ತಿರಲಿಲ್ಲ. ಹಾಗಾಗಿ ಮಹಾರಾಷ್ಟ್ರದಲ್ಲಿ ಅನೇಕ ಕಲಾವಿದರು ವೃತ್ತಿ ರಂಗಭೂಮಿಯ ಮೂಲಕ ಜೀವನ ನಿರ್ವಹಣೆ ಮಾಡುವುದು ಅನಿವಾರ್ಯವಾಗಿತ್ತು.

ಸವಾಯಿ ಗಂಧರ್ವರು ಸಹ ತಮ್ಮ ಗುರು ಅಬ್ದುಲ್ ಕರೀಂ ಖಾನ್ ರವರ ಆಶಯಕ್ಕೆ ವಿರುದ್ಧವಾಗಿ ರಂಗಭೂಮಿಗೆ ಸೇರ್ಪಡೆಯಾಗಿ ಪ್ರಸಿದ್ಧ ಕಲಾವಿದರಾಗಿ ಹೆಸರು ಮಾಡಿದರು. ಗೋವಿಂದರಾವ್ ತಾಂಬೆ ಎಂಬುವರ ಶಿವರಾಜ್ ನಾಟಕ ಮಂಡಳಿಗೆ ಸೇರ್ಪಡೆಯಾಗಿ ಗಾಯಕರಾಗಿ, ಕಲಾವಿದರಾಗಿ ಹೆಸರು ಮಾಡಿದರು. ಸಂಗೀತವೇ ಪ್ರಧಾನವಾಗಿದ್ದ ಅಂದಿನ ಮರಾಠಿ ವೃತ್ತಿ ರಂಗಭೂಮಿಯಲ್ಲಿ ಸಂಗೀತ ಕಲಾವಿದರಿಗೆ ಹೆಚ್ಚಿನ ಬೇಡಿಕೆ ಇತ್ತು. ನಟನೆ ಮತ್ತು ಹಾಡುಗಾರಿಕೆಯಿಂದಾಗಿ ರಾಮಭಾವು ಎಂಬ ಮೂಲ ಹೆಸರಿನ ಇವರು ಸವಾಯಿ ಗಂಧರ್ವ ಎಂದು ಹೆಸರಾದರು. ಬಾಲಗಂಧರ್ವರು ನಾಟಕಗಳಲ್ಲಿ ಸ್ತ್ರೀ ಪಾತ್ರ ಮತ್ತು ಹಾಡುಗಾರಿಕೆಗೆ ಪ್ರಸಿದ್ದಿಯಾಗಿದ್ದರೆ, ಸವಾಯಿ ಗಂಧರ್ವರು ಪುರುಷ ಪಾತ್ರ ಮತ್ತು ಹಾಡುಹಾರಿಕೆಯಲ್ಲಿ ಜನಪ್ರಿಯತೆ ಗಳಿಸಿದ್ದರು. ತಿಂಗಳಿಗೆ ನೂರು ರೂಪಾಯಿ ವೇತನಕ್ಕಾಗಿ ರಂಗಭೂಮಿಯಲ್ಲಿ ಅಭಿನಯಿಸುತ್ತಿದ್ದ ಸವಾಯಿ ಗಂಧರ್ವರು, ಹಾಡುಗಾರಿಕೆಯಲ್ಲಿ ವೈವಿಧ್ಯತೆ ತರುವ ನಿಟ್ಟಿನಲ್ಲಿ ತಾವು ಕಲಿತ ಕಿರಾನಾ ಘರಾಣ ಶೈಲಿಯ ಜೊತೆಗೆ ಗ್ವಾಲಿಯರ್ ಘರಾಣೆಯ ನಿಸಾರ್ ಹುಸೈನ್ ಖಾನ್ ಎಂಬುವರ ಬಳಿ ಸಂಗೀತವನ್ನು ಅಭ್ಯಾಸ ಮಾಡಿದ್ದರು. ಮಹಾರಾಷ್ಟ್ರದ ಪುಣೆ, ನಾಸಿಕ್, ನಾಗಪುರ, ಸೊಲ್ಲಾಪುರ, ಮುಂಬೈ, ಅಮರಾವತಿ ಸೇರಿದಂತೆ ಹಲವಾರು ಜಿಲ್ಲಾ ಕೇಂದ್ರಗಲ್ಲಿ ನಾಟಕ ತಂಡ ತಿಂಗಳುಗಟ್ಟಲೆ ಬೀಡುಬಿಟ್ಟು ಪ್ರದರ್ಶನ ನೀಡುತ್ತಿತ್ತು.

ಒಮ್ಮೆ ಪುಣೆಯಲ್ಲಿ ಇವರ ನಾಟಕ ಪ್ರದರ್ಶನ ನಡೆಯುತ್ತಿದ್ದಾಗ ಮುಂದಿನ ಪ್ರೇಕ್ಷಕರ ಸಾಲಿನಲ್ಲಿ ತಮ್ಮ ಗುರು ಅಬ್ದುಲ್ ಕರೀಂ ಖಾನರು ಕುಳಿತಿರುವುದನ್ನು ನೋಡಿ ಬೆಚ್ಚಿ ಬಿದ್ದ ಸವಾಯಿ ಗಂಧರ್ವರು ತಮ್ಮ ನಟನೆ ಮತ್ತು ಹಾಡುಗಾರಿಕೆಯಿಂದ ಗುರುವಿನ ಮನ ಗೆದ್ದರು. ನಂತರ ಗುರುವಿನ ಕೋರಿಕೆಯಂತೆ ನಾಟಕಗಳ ಜೊತೆ ಜೊತೆಯಲ್ಲಿ ನಾಗಪುರ, ಕೊಲ್ಕತ್ತ, ಮುಂಬೈ ಪುಣೆ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಸಂಗೀತ ಕಚೇರಿ ನಡಿಸಿಕೊಟ್ಟರು. ಆದರೂ ಸಹ ರಂಗಭೂಮಿ ಅವರ ವೃತ್ತಿಯಾಯಿತು. ಸವಾಯಿ ಗಂಧರ್ವರಿಗೆ ಗದುಗಿನ ವೈದ್ಯ ಕುಟುಂಬದ ಸೀತಾಬಾಯಿ ಎಂಬ ಹೆಣ್ಣು ಮಗಳನ್ನು ವಿವಾಹ ಮಾಡಿದ್ದ ತಂದೆ ಗಣಪತರಾವ್ ನಿಧನರಾದರು. ಆಗ, ಸವಾಯಿ ಗಂಧರ್ವರು ಮುವ್ವತ್ತು ವರ್ಷದ ಯುವಕರು. ನಂತರ ಸವಾಯಿ ಗಂಧರ್ವರು ತಾವೇ ಸ್ವತಃ ನಾಟಕ ಕಂಪನಿಯನ್ನುಆರಂಭಿಸಿ, ಮಹಾರಾಷ್ಟ್ರದ ಗಡಿ ಭಾಗ, ಹಾಗೂ ಹುಬ್ಬಳ್ಳಿಯಲ್ಲಿ ಪ್ರದರ್ಶನ ನೀಡುತ್ತಿದ್ದರು. ಶಂಕರ್ ರಾವ್ ಎಂಬ ಕಲಾವಿದರ ಸ್ತ್ರೀ ಪಾತ್ರ ಮತ್ತು ಸವಾಯಿ ಗಂಧರ್ವರು ಆಡುತ್ತಿದ್ದ ಪುರುಷ ಪಾತ್ರಗಳಿಂದಾಗಿ ಅನೇಕ ಯಶಸ್ವಿ ನಾಟಕಗಳನ್ನು ನೀಡಿದರು. ತಮ್ಮ ವೃತ್ತಿಯ ನಡುವೆಯೂ ಸಹ 1916 ರಿಂದ 1941 ರ ಅವಧಿಯಲ್ಲಿ ಇಪ್ಪತ್ತೈದು ವರ್ಷಗಳ ಕಾಲ ಶ್ರೇಷ್ಟ ಸಂಗೀತಗುರುವಾಗಿ ಅನೇಕ ಮಹಾನ್ ಸಂಗೀತಗಾರರನ್ನು ಸೃಷ್ಟಿಸಿದ ಕೀರ್ತಿ ಇವರದು.

ಇವರ ಶಿಷ್ಯರಲ್ಲಿ ನೀಲಕಂಠ ಬುವಾ, ರಾಮದುರ್ಗ ಕೃಷ್ಣಬಾಯಿ, ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಮತ್ತು ಫೈರೋಜ್ ದಸ್ತಾರ್, ಕೃಷ್ಣರಾವ್ ಪುಳಂಬಿಕರ್ ಮುಂತಾದ ಪ್ರತಿಭೆಗಳು ಕಿರಾನ ಘರಾಣ ಸಂಗೀತದ ಅಸ್ಮಿತೆಯನ್ನು ಜೀವಂತಗೊಳಿಸಿದ್ದಾರೆ. ಸವಾಯಿ ಗಂಧರ್ವರಿಗೆ ಓರ್ವ ಪುತ್ರ ಮತ್ತು ಪುತ್ರಿಯರಿದ್ದು ಇವರಲ್ಲಿ ಪುತ್ರ ಬುದ್ದಿಮಾಂದವ್ಯದಿಂದ ಬಲಲುತ್ತಿದ್ದ. ಪುತ್ರಿಯನ್ನು ( ಪ್ರಮಿಳಾ) ಪುಣೆನಗರದ ಡಾ. ದೇಶಪಾಂಡೆ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ನಾಟಕ ಕಂಪನಿಯು ನಷ್ಟ ಅನುಭವಿಸಿದ್ದರಿಂದ 1941 ರ ವೇಳೆಗೆ ಕುಂದಗೋಳದಲ್ಲಿದ್ದ ತಮ್ಮ ಆಸ್ತಿಯನ್ನು ಮಾರಾಟ ಮಾಡುವುದರ ಮೂಲಕ ನಾಟಕ ಕಂಪನಿಯ ಸಾಲವನ್ನು ತೀರಿಸಿ ಅದನ್ನು ಮುಚ್ಚಿಹಾಕಿದರು. ನಂತರ ಪುಣೆ ನಗರದ ಪುತ್ರಿಯ ಮನೆಯಲ್ಲಿ ಪತ್ನಿಯ ಜೊತೆ ವಾಸವಾಗಿದ್ದ ಸವಾಯಿ ಗಂಧರ್ವರು 1942 ಪಾರ್ಶ್ವವಾಯು ರೋಗಕ್ಕೆ ತುತ್ತಾದರು. ಪಂಡಿತ್ ಬಸವರಾಜ ರಾಜಗುರು ಅವರ ಕೊನೆಯ ಶಿಷ್ಯರಾದರು. 1946ರಲ್ಲಿ ತಮ್ಮ ಪತ್ನಿಯ ಜೊತೆ ಹುಬ್ಬಳ್ಳಿ ನಗರದ ಪ್ರೀತಿಯ ಶಿಷ್ಯೆ ಗಂಗೂಬಾಯ್ ಹಾನಗಲ್ ನಿವಾಸಕ್ಕೆ ಬಂದು ವಾಸವಾಗಿದ್ದ ಸವಾಯ್ ಗಂಧರ್ವರು 1952 ರಲ್ಲಿ ನಿಧನರಾದರು.

ಕೊಲ್ಕತ್ತ ನಗರದಲ್ಲಿ ನಡೆದ ಸಂಗೀತೋತ್ಸವದಲ್ಲಿ ಸನ್ಮಾನ, ಹುಬ್ಬಳ್ಳಿ ನಗರದಲ್ಲಿ ನೀಡಿದ ಸಾರ್ವಜನಿಕ ಗೌರವಕ್ಕೆ ಪಾತ್ರರಾಗಿದ್ದ ಸವಾಯಿ ಗಂಧರ್ವರಿಗೆ ಅರವತ್ತು ವರ್ಷ ತುಂಬಿದಾಗ ಅವರ ಶಿಷ್ಯರು ಪುಣೆ ನಗರದಲ್ಲಿ ಸಂಗೀತೋತ್ಸವ ನಡೆಸಿ ಗೌರವಿಸಿದ್ದರು. ಅವರ ನಿಧನಾನಂತರ ಶಿಷ್ಯ ಭಿಮಸೇನ ಜೋಷಿ ಪುಣೆ ನಗರದಲ್ಲಿ ಪ್ರತಿ ವರ್ಷ ನಡೆಸುತ್ತಿದ್ದ ಸವಾಯಿ ಗಂಧರ್ವ ಸಂಗೀತೋತ್ಸವವು ಭಾರತದ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ. ಭಿಮಸೇನ ಜೋಷಿಯವರ ನಿಧನಾನಂತರ ಸಂಗೀತ ಸಮ್ಮೆಳನಕ್ಕೆ ಸವಾಯಿ ಗಂಧರ್ವ ಮತ್ತು ಭೀಮಸೇನ ಸಂಗೀತೋತ್ಸವ ಎಂದು ನಾಮಕರಣ ಮಾಡಲಾಗಿದ್ದು, ಅಹೋರಾತ್ರಿ ನಡೆಯುವ ಈ ಸಂಗೀತ ಸಮ್ಮೇಳನಕ್ಕೆ ಪುಣೆ ನಗರದಲ್ಲಿ ಕನಿಷ್ಟ ಇಪ್ಪತ್ತೈದು ಸಾವಿರ ಮಂದಿ ಆಸಕ್ತರು ಭಾಗವಹಿಸುವುದು ವಿಶೇಷ.

ಕುಂದಗೋಳ ಪಟ್ಟಣದಲ್ಲಿರುವ ಬಾಡಗೀರ್ ವಾಡೆಯಲ್ಲಿ ಪ್ರತಿವರ್ಷ ಗಂಗೂಬಾಯ್ ಹಾನಗಲ್ ನೇತೃತ್ವದಲ್ಲಿ ಸವಾಯ್ ಗಂಧರ್ವರ ಸ್ಮರಣಾರ್ಥ ಸಂಗೀತೋತ್ಸವ ನಡೆಯುತ್ತಿತ್ತು ಈ ಉತ್ಸವ ಈಗಲೂ ಸಹ ಮುಂದುವರಿದಿದೆ. ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆಯು ಕುಂದಗೊಳ ಪಟ್ಟಣದಲ್ಲಿ ಸವಾಯಿ ಗಂಧರ್ವ ಹೆಸರಿನಲ್ಲಿ ಭವನವನ್ನು ನಿರ್ಮಾಣ ಮಾಡಿದೆ. ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿ ಗಂಗೂಬಾಯಿ ಹಾನಗಲ್ ನಿವಾಸದ ಸಮೀಪ 1971ರಲ್ಲಿ ಸಮಾನ ಸಂಗೀತಾಸಕ್ತರು ಸೆರಿ ನಿರ್ಮಿಸಿದ್ದ ಸವಾಯಿ ಗಂಧರ್ವ ಕಲಾಭವನವನ್ನು ಇದೀಗ ಕರ್ನಾಟಕ ಸರ್ಕಾರವು ಐದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಿಸಿದೆ. ಸವಾಯಿ ಗಂಧರ್ವರು ತಮ್ಮ ಪ್ರತಿಭೆಯ ಜೊತೆಗೆ ನಿಷ್ಠಾವಂತ ಶಿಷ್ಯರ ಮೂಲಕ ಸಂಗೀತಾಸಕ್ತರ ಮನದಲ್ಲಿ ಜೀವಂತವಾಗಿ ಉಳಿದಿರುವುದು ವಿಶೇಷ.

ಈ ಅಂಕಣದ ಹಿಂದಿನ ಬರಹಗಳು:

ಸಂಗೀತ ಲೋಕದ ತಾನ್ ಸೇನ್ ಬಡೇ ಗುಲಾಂ ಆಲಿಖಾನ್

ಅಪ್ರತಿಮ ಗುರು ಅಲ್ಲಾದಿಯಾಖಾನ್

ಕೇಳದೇ ಉಳಿದ ಸ್ವರ ಮಾಧುರ್ಯ

ಶುದ್ದ ಸಂಗೀತದ ಪ್ರತಿಪಾದಕ: ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

MORE NEWS

ಅನಾಮಿಕರಾಗಿ ಉಳಿದ ಮಹಾನ್ ಗಾಯಕಿಯರು...

17-04-2021 ಬೆಂಗಳೂರು

ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಎನ್ನು...

‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳ...

15-04-2021 ಬೆಂಗಳೂರು

ಸ್ವಜನ-ಸ್ವಜಾತಿ ಪಕ್ಶಪಾತಿಯ ಇಂದಿನ ‘ಜಾತಿಶ್ರೀ’ ಸ್ವಾಮೀಜಿಗಳು ಜ್ಞಾನಯೋಗಿ ತತ್ವದ ಅರ್ಥವನ್ನೇ ನಾಶ ಮಾಡುತ...

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್...

14-04-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...