ಹಿಂದುತ್ವ ಮತ್ತು ಭಾಷಾಂತರ: ಕೆಲವು ಟಿಪ್ಪಣಿಗಳು

Date: 10-11-2021

Location: ಬೆಂಗಳೂರು


‘ಭಾಷಾಂತರಗಳಲ್ಲಿ ರಾಷ್ಟ್ರೀಯತೆಯನ್ನು ಎತ್ತಿಹಿಡಿದ ವಿದ್ಯಾವಂತ ವರ್ಗವೇ ಹೆಚ್ಚಿನದಾಗಿ ತೊಡಗಿಕೊಂಡಿದ್ದರಿಂದ ಅವರು ತಮ್ಮ ವರ್ಗಪ್ರಜ್ಞೆಗನುಗುಣವಾಗಿ ಆರ್ಯ ಸಂಸ್ಕೃತಿಯನ್ನು ಎತ್ತಿಹಿಡಿದರು’ ಎನ್ನುತ್ತಾರೆ ವಿಮರ್ಶಕಿ ತಾರಿಣಿ ಶುಭದಾಯಿನಿ ಅವರು ತಮ್ಮ ‘ಅಕ್ಷರ ಸಖ್ಯ’ ಅಂಕಣದಲ್ಲಿ ಹಿಂದುತ್ವ ಮತ್ತು ಭಾಷಾಂತರಗಳ ಕುರಿತು ವಿಶ್ಲೇಷಿಸಿದ್ದಾರೆ.

ವಸಾಹತುಶಾಹಿ ಆಡಳಿತದ ಒಂದು ತೀವ್ರ ಪರಿಣಾಮ ಎಂದರೆ ಸ್ವದೇಶಿಯರಿಗೆ ಭಾರತೀಯ ಅಸ್ಮಿತೆಯ ಬಗೆಗೆ ವಿಪರೀತವಾದ ಕಾಳಜಿ ಮೂಡಿದ್ದು. ವಸಾಹತು ರಾಷ್ಟ್ರಗಳ ಸಮಾಜದಲ್ಲಿ ಅಸ್ಮಿತೆಯ ಪ್ರಶ್ನೆ ಬಹಳ ಮುಖ್ಯವಾದುದು. ತಮ್ಮದು ಎನ್ನುವ ಅಸ್ಮಿತೆಯು ವಿದೇಶೀ ಪ್ರಭುತ್ವದ ಎದುರು ಹೊಸದಾಗಿ ನಿರ್ಮಾಣವಾಗಬೇಕಾದ ಒತ್ತಡವು ಸದಾ ದೇಶೀಯರ ಮೇಲೆ ಇರುತ್ತದೆ. ದೇಶೀಯರು ಅನುಭವಿಸುವ ಕೀಳರಿಮೆ ಅವರನ್ನು ಪ್ರಭುತ್ವದ ಎದುರು ಸವಾಲಾಗಿ ನಿಲ್ಲಬಲ್ಲ ಹೊಸದೊಂದು ಅಸ್ಮಿತೆಯನ್ನು ರೂಪಿಸಿಕೊಳ್ಳಲು ಒತ್ತಡ ಹಾಕುತ್ತದೆ. ಈ ಪ್ರಕ್ರಿಯೆಯು ಪ್ರತಿಕ್ರಿಯಾತ್ಮಕವಾಗಿದ್ದು, ಬಹು ಸಂಕೀರ್ಣವಾದ ಸ್ವರೂಪದಲ್ಲಿ ನಡೆಯುತ್ತಿರುತ್ತದೆ. ಸಂಪೂರ್ಣವಾದ ಪಾಶ್ಚಾತ್ಯೀಕರಣಕ್ಕೆ ಈಡಾಗುವ ಸ್ವದೇಶಿಯರು ಇರುವಂತೆಯೇ ವಿಸ್ಮೃತಿಯಲ್ಲಿರುವ ತಮ್ಮ ಗತಕಾಲದ ಅಸ್ಮಿತೆಯನ್ನು ಶೋಧಿಸಿಕೊಳ್ಳಬೇಕೆನ್ನುವವರು ಇದ್ದಾರೆ. ಇವೆರೆಡರ ನಡುವೆ ಒಂದು ಮಧ್ಯಮಮಾರ್ಗಿಗಳೂ ಇದ್ದಾರೆ. ಆದರೆ ಸ್ಥೂಲವಾಗಿ ವಸಾಹತುಶಾಹಿ ಆಡಳಿತ ಕಾಲದ ಭಾರತೀಯ ಭಾಷಾಂತರಗಳು ಕಲ್ಪಿಸಿಕೊಟ್ಟ ಅಸ್ಮಿತೆಗಳೆಂದರೆ ಆಳರಸರು ತಮ್ಮ ಆಡಳಿತದ ಮೊದಲ ಹಂತದಲ್ಲಿ ಕಲ್ಪಿಸಿದ ಓರಿಯೆಂಟಲ್ ಭಾರತೀಯತೆ ಒಂದಾದರೆ, ಇನ್ನೊಂದು, ಇಂಗ್ಲಿಷ್ ಶಿಕ್ಷಿತ ಸ್ವದೇಶಿಯರು ಕಲ್ಪಿಸಿದ ಸಾಂಸ್ಕೃತಿಕ ಭಾರತೀಯತೆ. ಯಾವುದು ಭಾರತೀಯತೆ? ಭಾಷಾಂತರಗಳಲ್ಲಿ ಸಾಧಿತವಾದ ಭಾರತೀಯ ಮಾದರಿ ಯಾವುದು? ಅದರ ಹುಡುಕಾಟ ಯಾವ ಬಗೆಯದು? ಭಾರತೀಯ ಭಾಷಾಂತರಕಾರರು ವಿವಿಧ ಭಾರತೀಯ ಭಾಷೆಗಳಲ್ಲಿ ಆಧುನಿಕವಾದ ಸಾಹಿತ್ಯವನ್ನು ಸೃಷ್ಟಿಸುತ್ತಾ ಸಾಹಿತ್ಯವನ್ನು ರಾಷ್ಟ್ರೀಕೃತಗೊಳಿಸುವತ್ತ ಆಸಕ್ತಿ ಹೊಂದಿದ್ದರು. ಅದರಿಂದ ಒಂದು ಏಕತೆಯನ್ನು ಸಾಧಿಸುತ್ತಿದ್ದೇವೆ ಎನ್ನುವ ಭಾವನೆ ಅವರಲ್ಲಿತ್ತು. ಈ ಪ್ರವೃತ್ತಿ ಮೊದಲ ಹಂತದಲ್ಲಿ ಇಂಗ್ಲಿಷ್ ಪಠ್ಯಗಳ ಭಾಷಾಂತರಗಳಲ್ಲಿ ಕಾಣಿಸಿತು. ಆನಂತರ ಸ್ವಾತಂತ್ರ್ಯ ಆಂದೋಲನ ಎಲ್ಲೆಡೆ ಚುರುಕುಗೊಳ್ಳುವಾಗ ಭಾರತೀಯ ಭಾಷೆಗಳೊಳಗೇ ಭಾಷಾಂತರಗಳು ಅಧಿಕವಾಗಿ ನಡೆದವು.

ರಾಷ್ಟ್ರೀಯತೆ ಎನ್ನುವಾಗ ಅದಕ್ಕೊಂದು ಸಾಂಸ್ಕೃತಿಕವಾದ ಒಳಧಾರೆ ಇರುತ್ತದೆ. ಅದನ್ನೇ ಭಾಷಾಂತರಕಾರರು ತಮ್ಮ ಭಾಷಾಂತರಗಳ ಹಿನ್ನೆಲೆಯಲ್ಲಿ ಇಟ್ಟುಕೊಂಡಿರುತ್ತಾರೆ. ವಸಾಹತುಕಾಲದ ಭಾಷಾಂತರಗಳಲ್ಲಿ ಸಂಸ್ಕೃತಿಯು ಕೇಂದ್ರವಾಗಿರುತ್ತದೆ. ಸಂಸ್ಕೃತಿ ಎನ್ನುವುದು ವೈವಿಧ್ಯಮಯವೂ ಭಿನ್ನ ಸಂರಚನೆಗಳನ್ನು ಹೊಂದಿರುವಂತದ್ದೂ ಆಗಿರುತ್ತದೆ. ಭಾರತೀಯ ಅಸ್ಮಿತೆಯು ಭಾಷಾಂತರದ ಮೂಲಕ ಕಂಡುಕೊಳ್ಳುವ ಸಂದರ್ಭದಲ್ಲಿ ಇತರೆ ವಸಾಹತು ದೇಶಗಳಲ್ಲಿ ನಡೆದ ಭಾಷಾಂತರಗಳ ಮಾದರಿಯಲ್ಲೇ ಸಂದಿಗ್ಧವನ್ನು ಅನುಭವಿಸಿತು. ಈ ಸಂಸ್ಕೃತಿಯ ಪ್ರಶ್ನೆಯು ರಾಷ್ಟ್ರೀಯತೆಯ ಸಂದರ್ಭದಲ್ಲಿ ಉಜ್ವಲವಾಗಿರುತ್ತದೆ. ಭಾರತೀಯ ಸಂಸ್ಕೃತಿಯ ಸಂಕಥನದಲ್ಲಿ ಅನೇಕ ಬಗೆಯ ಸಂಸ್ಕೃತಿಗಳು ತಿಕ್ಕಾಡಿ, ಮೇಲಾಟಗಳನ್ನು ನಡೆಸಿದ ಇತಿಹಾಸ ಇದೆ. ವಸಾಹತುಕಾಲದಲ್ಲಿ ವಿದೇಶೀ ಸಂಸ್ಕೃತಿಗೆ ಮುಖಾಮುಖಿಯಾಗುವ ಸಂದರ್ಭದಲ್ಲಿ ಭಾರತೀಯ ಭಾಷಾಂತರಗಳಲ್ಲಿ ವಿದೇಶೀ ಸಂಸ್ಕೃತಿಯನ್ನು ಎಷ್ಟರ ಮಟ್ಟಿಗೆ ಒಳಗೊಳ್ಳಬೇಕೆನ್ನುವ ಸಂದಿಗ್ಧ ಇದೆ. ವಸಾಹತುಶಾಹಿ ಆಡಳಿತದಿಂದ ಬದಲಾಗುತ್ತಿದ್ದ ಹೊಸ ಸಮಾಜದ ಆಶೋತ್ತರಗಳಿಗೆ ತಕ್ಕಂತೆ ಹೊಸ ರಾಷ್ಟ್ರೀಯತೆಯನ್ನು ವಿವರಿಸಿಕೊಳ್ಳಬೇಕಾದ ಹೊಣೆಯನ್ನು ಭಾರತೀಯ ಭಾಷಾಂತರಗಳು ಭಾವಿಸುತ್ತವೆ. ಇದೊಂದು ಬಗೆಯ ಪೊಲಿಟಿಕಲ್ ಆದ ಬರವಣಿಗೆಗೆ ಕಾರಣವಾಯಿತು.

ರಾಷ್ಟ್ರೀಯತೆಯು ಯುರೋಪಿನಲ್ಲಿ ಭಾಷೆ, ಪ್ರದೇಶ ಮತ್ತು ವರ್ಣಗಳನ್ನು ಆಧರಿಸಿದ ಕಲ್ಪನೆಯಾಗಿತ್ತು. ಈ ಬಗೆಯ ರಾಷ್ಟ್ರೀಯತೆಯು ಭಾರತಕ್ಕೆ ಅನ್ವಯಿಸುವಾಗ ವರ್ಣದ ಬದಲಾಗಿ ಭಾರತೀಯ ಸಮಾಜದಲ್ಲಿ ಈಗಾಗಲೇ ಒಡೆದುಕೊಂಡಿದ್ದ ಜನಾಂಗೀಯ ಮಾದರಿಯ ಜಾತಿಗಳಿಗೆ ಅನ್ವಯವಾಯಿತು. ಯುರೋಪಿನ ಜನಾಂಗೀಯ ಶುದ್ಧತೆಯ ಅವತಾರವೇ ಭಾರತದಲ್ಲಿ ಉದ್ಭವವಾದ ಹಿಂದುತ್ವವಾಗಿತ್ತು. ಧಾರ್ಮಿಕವಾಗಿ ಶುದ್ಧವಾದ ಪ್ಯೂರಿಟನ್ ಮನೋಭಾವದ ಅವತರಣಿಕೆಯಾಗಿ ಹಿಂದುತ್ವ ಹುಟ್ಟಿಕೊಂಡಿತು. ರಾಷ್ಟ್ರ ನಿರ್ಮಾಣದ ಸಂದರ್ಭದಲ್ಲಿ ತಾರಕಕ್ಕೇರಿದ ಅಸ್ಮಿತೆಯ ಪ್ರಶ್ನೆಯಿಂದ ಹಿಂದುತ್ವದ ಕಲ್ಪನೆ ಬಂದಿತು. ಓರಿಯೆಂಟಲ್ ಕಾಲದಲ್ಲಿ ಬ್ರಿಟಿಷರು ಕಲ್ಪಿಸಿದ ಹಿಂದುತ್ವವು ವೈದಿಕ ಮಾದರಿಯದಾಗಿತ್ತು. ವಾರನ್ ಹೇಸ್ಟಿಂಗ್ಸ್ ಕಾಲದಲ್ಲಿ ಸಂಸ್ಕೃತದಿಂದ ಇಂಗ್ಲಿಷಿಗೆ ನಡೆದ ಭಾಷಾಂತರಗಳು ಹಿಂದುತ್ವದ ಒಂದು ಕಲ್ಪನೆಯನ್ನು ಸ್ಥಿರಗೊಳಿಸಿದವು. ಭಗವದ್ಗೀತೆ, ಮನುಸ್ಮೃತಿಯಂತಹ ಪಠ್ಯಗಳು ಬ್ರಿಟಿಷರಿಗೆ ಸ್ಥಳೀಯವಾಗಿ ಕಾನೂನನ್ನು ಅನುಷ್ಠಾನಗೊಳಿಸಲು ಬೇಕಾದ ಕೀಲಿಕೈಗಳಂತೆ ತೋರಿದ್ದರಿಂದ ಅವುಗಳನ್ನು ಭಾಷಾಂತರಿಸಲಾಯಿತು. ಈ ಪಠ್ಯಗಳು ಮೂಲತ: ಶಾಸ್ತ್ರಗ್ರಂಥಗಳು. ಇವುಗಳಿಗೆ ದೊರೆತ ಮಾನ್ಯತೆಯು ಭಾರತೀಯರಲ್ಲಿ ಹಿಂದುತ್ವದ ಅಸ್ಮಿತೆಯನ್ನು ಸ್ಥಾಪಿಸಿಕೊಟ್ಟಿತು.

ಹಿಂದುತ್ವ ಎನ್ನುವುದು ಮುಖ್ಯವಾಹಿನಿಯ ಪ್ರಮುಖ ಸಿದ್ಧಾಂತವಾಗಿ ರಾಷ್ಟ್ರೀಯ ಚಳವಳಿಯಲ್ಲಿ ಹೊರಹೊಮ್ಮಿತು. ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ಹೊರಗಿನವರಾದ ಬ್ರಿಟಿಷರು ಆಳುತ್ತಿದ್ದರಿಂದ ‘ಅನ್ಯ’ವೆನ್ನುವ ಪರಿಕಲ್ಪನೆಗೆ ಎದುರಾಗಿ ‘ಸ್ವ’ ಎನ್ನುವುದು ಹಿಂದುತ್ವದ ಪರಿಕಲ್ಪನೆಯಾಗಿ ಬೆಳೆಯಿತು. ರಾಷ್ಟ್ರೀಯತೆಯ ಕಲ್ಪನೆ ಬೆಳೆದಂತೆಲ್ಲ ಹಿಂದುತ್ವ ಎನ್ನುವ ಏಕಮುಖೀ ಸಮುದಾಯದ ಕಲ್ಪನೆಯೂ ಜೊತೆ ಜೊತೆಗೆ ಬೆಳೆಯುತ್ತಾ ಬಂದಿತು. ರಾಷ್ಟ್ರೀಯತೆಯು ಹುಟ್ಟುಹಾಕಿದ ಈ ಕಲ್ಪನೆಯು ತನ್ನ ಸಾಂಸ್ಕೃತಿಕ ಚಹರೆಯನ್ನು ಸ್ಥಿರಗೊಳಿಸಿಕೊಂಡಿದ್ದು ಹಿಂದುತ್ವವೆಂಬ ಅಸ್ಮಿತೆಯಲ್ಲಿ.

ರಾಷ್ಟ್ರೀಯತೆಯ ಚಾರಿತ್ರಿಕ ಸಂದರ್ಭದಲ್ಲಿ ಹೊರಹೊಮ್ಮಿದ ವರ್ಗವು ಸುಧಾರಣಾವಾದಿಯಾಗಿತ್ತು. ಆದರೆ ಸುಧಾರಣೆಯ ಆಂತರ್ಯದಲ್ಲಿ ಪ್ರಬಲವಾದ ಧಾರ್ಮಿಕ ಮತ್ತು ಜಾತಿ ಶ್ರೇಣೀಕರಣದ ಚಹರೆಗಳು ಅಡಗಿದ್ದವು. ಓರಿಯೆಂಟಲ್ ವಿದ್ವಾಂಸರು ಕಟ್ಟಿಕೊಟ್ಟ ಗತವೈಭವದ ಸುಂದರ ಚಿತ್ರವನ್ನು ಸುಧಾರಣಾವಾದಿಗಳು ಇನ್ನಷ್ಟು ಸುಧಾರಣೆ ಮಾಡಿಕೊಂಡರು ಎನ್ನಬಹುದು. ಸಂಸ್ಕೃತ ಧಾರ್ಮಿಕ ಪಠ್ಯಗಳೂ(ವೇದಗಳು) ಆಧ್ಯಾತ್ಮಿಕ ಪಠ್ಯಗಳೂ(ಉಪನಿಷತ್ತುಗಳು) ಇವರ ಕಲ್ಪಿತ ಭಾರತೀಯ ಧರ್ಮದ ಮೂಲಗಳಾದವು. ಪಾರ್ಥಾ ಚಟರ್ಜಿಯವರು ತಮ್ಮ ರಾಷ್ಟ್ರೀಯತೆಯ ಚಿಂತನೆಗಳಲ್ಲಿ ಭಾರತೀಯ ಸಮಾಜದಲ್ಲಿ ಪೂರ್ವ ಮತ್ತು ಪಶ್ಚಿಮ ಎಂಬ ಎರಡು ಬಿರುಕುಗಳಿರುವುದನ್ನು ಗುರುತಿಸುತ್ತಾರೆ. ಓರಿಯೆಂಟಲ್ ವಾದದಿಂದ ಸಮರ್ಥನೆಗೊಂಡ ಪೂರ್ವಪರವಾದವು ಪೌರ್ವಾತ್ಯ ಸಂಸ್ಕೃತಿಯಲ್ಲಿರುವ ಆಧ್ಯಾತ್ಮಿಕತೆಯ ಪಠ್ಯಗಳನ್ನಾಧರಿಸಿ ಬೆಳೆಯಿತಲ್ಲದೆ ಇಹ-ಪರ ಎನ್ನುವ ಎರಡು ವಲಯಗಳನ್ನು ಸೃಷ್ಟಿಸಿಕೊಂಡಿತು(ಇದನ್ನು ಭೌತಿಕ ಮತ್ತು ಆಧ್ಯಾತ್ಮಿಕ ಎಂಬ ಎರಡು ಭಿನ್ನತೆಗಳೆಂದು ಗುರುತಿಸಬಹುದು. ಈ ಆಧ್ಯಾತ್ಮಿಕತೆಯ ಸಂಗತಿಯು ವಸಾಹತುಕಾಲದಲ್ಲಿ ಭಾರತವು ತನ್ನ ಅಸ್ಮಿತೆಗಾಗಿ ಬಳಸಿದುದಾಗಿತ್ತು. ಇದು ಭಾರತೀಯ ಎನ್ನುವ ತನ್ನತನದ ಅಸ್ಮಿತೆಯನ್ನು ನಿರೂಪಿಸಲು ಬೇಕಾದ ಅಗತ್ಯ ಅಂಶವಾಗಿತ್ತು.

ಹೊಸ ಸಮಾಜಕ್ಕೆ ತೆರೆದುಕೊಳ್ಳುವ ಸಂದರ್ಭದಲ್ಲಿಯೇ ಮತೀಯವಾದ ಶೆವನಿಸಂ(chauvinism) ಬೆಳೆದಿತ್ತು ಎನ್ನುವುದನ್ನು ಚರಿತ್ರೆಕಾರರು ಗುರುತಿಸಿದ್ದಾರೆ. ಅದು ಹಿಂದೂ ಮತೀಯತೆ ಎನ್ನುವುದನ್ನು ಸಹ ಗುರುತಿಸಲಾಗಿದೆ. ಹಿಂದುತ್ವದ ರಾಜಕಾರಣವು ರಾಷ್ಟ್ರೀಯತೆಯ ರಾಜಕಾರಣದೊಳಗೆ ಮಿಳಿತವಾಗಿತ್ತು. ಅದನ್ನು ಪ್ರೋತ್ಸಾಹಿಸಿ ಮುನ್ನಡೆಸುತ್ತಿದ್ದವರು ಹೊಸ ವಿದ್ಯಾವಂತ ವರ್ಗವೇ. ಒಟ್ಟು ರಾಷ್ಟ್ರೀಯತೆಯ ಅಲೆಯಲ್ಲಿ ಅನೇಕ ಹಿಂದುತ್ವದ ಪದರಗಳಿದ್ದವು. ಅವುಗಳಲ್ಲಿ ಬಂಕಿಂಚಂದ್ರ ಮತ್ತು ತಿಲಕ್ ಅವರ ಅಲೆಗಳು ತೀವ್ರವಾಗಿದ್ದರೆ ಇನ್ನು ರ್ಯಾಶನಲ್ ಸ್ವರೂಪದ ಹಿಂದುತ್ವವು ಅನೇಕ ಸಮಾಜಗಳ ಮೂಲಕ ಚಾಲನೆಯಲ್ಲಿತ್ತು. ಹಿಂದುತ್ವವಾದವು ಸಾವರ್ಕರ್, ಗೊಳ್ವಾಲ್‍ಕರ್ ಅವರನ್ನೂ ಮುಂದೆ ಗಾಂಧೀಜಿಯವರನ್ನೂ ಒಳಗೊಂಡು ಬೇರೆ ಬೇರೆ ಸ್ವರೂಪವನ್ನು ಪಡೆದುಕೊಂಡು ಭಾರತದ ರಾಷ್ಟ್ರೀಯ ಇತಿಹಾಸದಲ್ಲಿ ಸೇರಿಕೊಂಡಿತು.

ಸಾಂಸ್ಕೃತಿಕ ಅಸ್ಮಿತೆ ಎನ್ನುವುದನ್ನು ಜನಾಂಗೀಯವಾಗಿ, ವರ್ಣಾಧಾರಿತವಾಗಿ ಮತ್ತು ಧಾರ್ಮಿಕವಾಗಿ ಕಟ್ಟಿಕೊಳ್ಳಬಹುದು. ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ ಈ ಎಲ್ಲ ಅಂಶಗಳೂ ಸೇರಿಕೊಳ್ಳುತ್ತವೆ. ಸಂಸ್ಕೃತಿಯನ್ನೇ ಪ್ರಧಾನವಾಗಿಟ್ಟುಕೊಂಡಾಗ ಅದರೊಳಗೆ ಇರುವ ಶ್ರೇಣೀಕರಣಗಳು ಮೇಲ್ನೋಟಕ್ಕೆ ಗೋಚರಿಸದಿದ್ದರೂ ಅವು ಕ್ರಿಯಾಶೀಲವಾಗಿರುತ್ತವೆ. ಹಿರಿಸಂಸ್ಕೃತಿ ಮತ್ತು ಕಿರಿಸಂಸ್ಕೃತಿ ಎಂಬ ಧಾರೆಗಳು ಸಮುದಾಯಗಳೊಳಗೆ ಪ್ರವಹಿಸುತ್ತಲೇ ಇರುತ್ತವೆ ಎನ್ನುವುದನ್ನು ಭಾರತೀಯ ರಾಷ್ಟ್ರೀಯತೆಯ ಸಂದರ್ಭದಲ್ಲಿಯೂ ನಿರೂಪಿತವಾಯಿತು. ಇದರಲ್ಲಿ ಆರ್ಯ ಸಂಸ್ಕೃತಿ ಎನ್ನುವುದು ಪೂರ್ವಾಗ್ರಹದಂತೆ ಮೇಲು ಸಂಸ್ಕೃತಿಯಾಗಿದ್ದರೆ, ಆದಿವಾಸಿ, ದಲಿತ ಮುಂತಾದ ಕಿರು ಸಂಸ್ಕೃತಿಗಳು ಅಧೀನ ಸಂಸ್ಕೃತಿಗಳಾಗಿ ನಿರೂಪಿಸಲ್ಪಡುತ್ತಿದ್ದವು. ಇಂದಿನ ಸಬಾಲ್ಟ್ರನ್ ಇತಿಹಾಸಕಾರರು ಗುರುತಿಸುವಂತೆ ರಾಷ್ಟ್ರೀಯ ಚಳವಳಿಯು ಒಂದು ವರ್ಗದ ಮುಂದಾಳತ್ವದಲ್ಲಿ ನಡೆಯಿತು. ಅದರಲ್ಲಿ ಭಾರತದ ಕಿರಿಯ ಅಸ್ಮಿತೆಗಳಿಗೆ ಜಾಗವೇ ಇರಲಿಲ್ಲ. ಆದುದರಿಂದ ಅವು ಅಂಚಿನಲ್ಲಿ ತಳ್ಳಲ್ಪಟ್ಟವು. ರಾಷ್ಟ್ರೀಯ ಚಳವಳಿಯ ಜೊತೆ ಹುಟ್ಟಿಕೊಂಡ ಸಾಂಸ್ಕೃತಿಕ ಪುನರುಜ್ಜೀವನದ ಅಲೆಯು ಸಾಂಸ್ಕೃತಿಕವಾಗಿ ಒಂದು ವರ್ಗದ ಸಂಸ್ಕೃತಿಯನ್ನು ಎತ್ತಿಹಿಡಿಯಿತು. ಈ ಹಿನ್ನೆಲೆಯಲ್ಲಿ ಭಾಷಾಂತರ ಪಠ್ಯಗಳನ್ನು ನೋಡುವಾಗ ಭಾಷಾಂತರದ ಪಠ್ಯಗಳು ಬಿಂಬಿಸಿದ್ದು ಪ್ರಧಾನವಾಗಿ ಹಿರಿಯ ಸಂಸ್ಕೃತಿಯನ್ನೇ.

ಹಿಂದುತ್ವವು ಭಾರತದಲ್ಲಿ ಮುಖ್ಯವಾಗಿ ಉಗ್ರವಾದಿ ಹಾಗು ಸುಧಾರಣಾವಾದಿ ಎಂಬ ಎರಡು ಬಗೆಗಳಲ್ಲಿ ಕಾಣಿಸಿಕೊಂಡಿತು. ಅಂದಿನ ಬುದ್ಧಿಜೀವಿಗಳ ಒಂದು ವರ್ಗ ಹಾಗು ರಾಷ್ಟ್ರೀಯವಾದಿಗಳು ವಸಾಹತುಶಾಹಿಗೆ ಪ್ರತಿರೋಧ ತೋರಬೇಕೆನ್ನುವುದಾದರೆ ಹಿಂದುವಾಗುವುದು ಅನಿವಾರ್ಯ ಎನ್ನುವ ತೀವ್ರ ಭಾವನೆಯಿಂದ ರಾಷ್ಟ್ರೀಯತೆಯ ಚಳವಳಿಯಲ್ಲಿ ತೊಡಗಿದರು. ಈ ಭಾವನೆಯು ಕಾಲವನ್ನು ಭೂತಕಾಲದೆಡೆಗೆ ತಿರುಗುವಂತೆ ಮಾಡಿತು. ಹತ್ತೊಂಬತ್ತನೆಯ ಶತಮಾನದ ರಾಷ್ಟ್ರೀಯತಾವಾದಿಗಳು ಈ ನಂಬಿಕೆಯ ಮೇಲೆಯೇ ಹೆಚ್ಚಿನ ವಿಶ್ವಾಸವಿರಿಸಿದರು. ಆದರೆ ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಚಲಿತವಾಗಿದ್ದ ಸುಧಾರಣೆ, ವಿದ್ಯಾಭ್ಯಾಸದ ಪರಿಣಾಮಗಳು ತಮ್ಮದೇ ಆದ ಆಧುನಿಕ ಭಾರತವನ್ನು ಸುಧಾರಿತ, ಶುದ್ಧಗೊಂಡ ಹಿಂದುತ್ವದ ಚಹರೆಯೊಂದಿಗೆ ಕಲ್ಪಿಸಿಕೊಳ್ಳಲಾರಂಭಿಸಿದ್ದವು. ಹಿಂದುತ್ವವನ್ನು ವೇದಕಾಲೀನ ಮೌಲ್ಯಗಳ ಜೊತೆ ಗುರುತಿಸಿಕೊಳ್ಳುವ ಆಶಯವನ್ನು ನೇರವಾಗಿ ವ್ಯಕ್ತಪಡಿಸುತ್ತಲೇ ಆಧುನಿಕ ಮೌಲ್ಯಗಳನ್ನು ನಿರಾಕರಿಸದ ಹೈಬ್ರಿಡ್ ಧಾರ್ಮಿಕ ಕಲ್ಪನೆಯು ಬೆಳೆಯಿತು.

ಬಂಗಾಳದಲ್ಲಿ ಕಾಣಿಸಿಕೊಂಡ ಹಿಂದುತ್ವವು ವಸಾಹತುಶಾಹಿ ಆಡಳಿತವನ್ನು ನೇರ ಎದುರಿಸಿದ ಕಾರಣದಿಂದ ಉಂಟಾದುದು. ಆದುದರಿಂದ ಅಲ್ಲಿ ವಸಾಹತುಶಾಹಿಯನ್ನು ಎದುರಿಸುವ ತಂತ್ರವಾಗಿ ಹಿಂದುತ್ವವು ಬಳಕೆಯಾಗತೊಡಗಿತು. ಅದರ ಜೊತೆಗೇ ಹೊಸ ಬಗೆಯ ಹಿಂದುತ್ವವನ್ನು ಸೃಷ್ಟಿಸಬೇಕೆನ್ನುವ ಆಶಯ ಕೂಡ ಇದೇ ಪ್ರದೇಶದಿಂದಲೇ ಉದ್ಭವವಾಯಿತು. ಪ್ರಭುತ್ವವನ್ನು ಎದುರಿಸಲೆಂದು ಹುಟ್ಟಿದ ಹಿಂದುತ್ವವು ತನ್ನದೇ ಆದ ರಾಜ್ಯವನ್ನು ಕಲ್ಪಿಸಿಕೊಳ್ಳುವುದರಲ್ಲಿ ಆಸಕ್ತವಾಗಿತ್ತು. ಹತ್ತೊಂಬತ್ತನೆಯ ಶತಮಾನದ ರಾಷ್ಟ್ರೀಯವಾದೀ ಬಂಗಾಳಿಗಳಲ್ಲಿ ಹಿಂದೂ ಧರ್ಮವೆನ್ನುವುದು ರಾಜ್ಯ, ಪ್ರಭುತ್ವಕ್ಕೆ ಎದುರಾಳಿಯಾಗಿತ್ತು.

ಭಾಷಾಂತರಗಳಲ್ಲಿ ರಾಷ್ಟ್ರೀಯತೆಯನ್ನು ಎತ್ತಿಹಿಡಿದ ವಿದ್ಯಾವಂತ ವರ್ಗವೇ ಹೆಚ್ಚಿನದಾಗಿ ತೊಡಗಿಕೊಂಡಿದ್ದರಿಂದ ಅವರು ತಮ್ಮ ವರ್ಗಪ್ರಜ್ಞೆಗನುಗುಣವಾಗಿ ಆರ್ಯ ಸಂಸ್ಕೃತಿಯನ್ನು ಎತ್ತಿಹಿಡಿದರು. ಬಂಗಾಳದ ಪುನರುಜ್ಜೀವಕ ಸಾಹಿತ್ಯಪಠ್ಯಗಳು ಕನ್ನಡದ ಭಾಷಾಂತರಕಾರರಿಗೆ ಬಹುವಾಗಿ ಸ್ಫೂರ್ತಿಯನ್ನು ಒದಗಿಸಿಕೊಟ್ಟವು. ಈ ನಿಟ್ಟಿನಲ್ಲಿ ಬಂಕಿಮಚಂದ್ರ ಚಟರ್ಜಿಯವರ ಸಾಹಿತ್ಯಕೃತಿಗಳು ಕನ್ನಡಕ್ಕೆ ಬಂದ ಉದಾಹರಣೆಯನ್ನು ಗಮನಿಸಬಹುದು. ಬಂಕಿಮರು ಬಿಂಬಿಸಿದ ಹಿಂದೂ ಮತಭಾವನೆ ಹಾಗು ಉಜ್ವಲವಾದ ರಾಷ್ಟ್ರಭಾವನೆಯು ಆರ್ಯ ಸಂಸ್ಕೃತಿಯನ್ನು ಬಿಂಬಿಸಿ ಸಾಂಸ್ಕೃತಿಕ ಗತಕಾಲವನ್ನು ಕಲ್ಪಿಸಿಕೊಟ್ಟವು. ಅವರ ‘ಆನಂದ ಮಠ’ ಹಾಗೂ ‘ದೇವಿ ಚೌಧುರಾಣಿ’ ಕಾದಂಬರಿಗಳು ಕನ್ನಡದ ಭಾಷಾಂತರದಲ್ಲಿ ಉಂಟು ಮಾಡಿದ ಸಂಚಲನವನ್ನು ಗಮನಿಸಬಹುದು.

ಬಂಗಾಳಿ ಹಿಂದುತ್ವದಲ್ಲಿ ಧರ್ಮಾಂಧತೆಯನ್ನು ಹೊಂದಿರುವ ಒಂದು ಗುಂಪು ಕ್ರಿಯಾಶೀಲವಾಗಿದ್ದರೆ ಇನ್ನೊಂದು ಗುಂಪು ಸ್ವವಿಮರ್ಶಾತ್ಮಕವಾಗಿತ್ತು. ಬಂಗಾಳಿ ಪ್ರಣೀತ ಹಿಂದುತ್ವವು ಬ್ರಿಟಿಷರಿಂದ ಪಡೆದ ಲೌಕಿಕ ಲಾಭಗಳ ಪರಿಣಾಮದಿಂದ ಹಾಗು ಅಧಿಕಾರಕ್ಕೆ ಹತ್ತಿರವಿರುವ ಕಾರಣ ಕ್ರಿಶ್ಚಿಯಾನಿಟಿಯನ್ನು ಬಿಟ್ಟು ಮುಸ್ಲಿಮ್‍ಧರ್ಮದ ಎದುರು ತನ್ನ ಅಸ್ಮಿತೆಯನ್ನು ನಿರೂಪಿಸಿಕೊಳ್ಳಲಾರಂಭಿಸಿತು. ಇದಕ್ಕೆ ಇತಿಹಾಸಕಾರರು ಊಹಿಸುವಂತೆ ಬಂಗಾಳದಲ್ಲಿ ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ನಡೆದ ಅಂತರ್ಯುದ್ಧಗಳು, ದಾಳಿಗಳು ಮತ್ತು ಜನಸಮುದಾಯದ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಗಳೇ ಕಾರಣಗಳು. ಆದುದರಿಂದ ಬಂಗಾಳಿ ಸಂವೇದನೆಯು ಹಿಂದುತ್ವದ ಅನೇಕ ಕಲ್ಪನೆಗಳೊಂದಿಗೆ ಮೈದಳೆಯಲಾರಂಭಿಸಿತು. ಇದರ ಅಡಿಯಲ್ಲಿ ಉಗ್ರ ಹಿಂದುತ್ವದ ಚಹರೆಯೂ ಇತ್ತು; ಸುಧಾರಣಾವಾದಿ ಮನೋಭಾವದ ಹಿಂದುತ್ವವೂ ಇತ್ತು. ಬಂಗಾಳಿ ಆಧ್ಯಾತ್ಮಿಕ ಚಹರೆಯು ತನ್ನೊಳಗೆ ಹಿಂದುತ್ವದ ಕಾವನ್ನು ಅಡಗಿಸಿಟ್ಟುಕೊಂಡಿತ್ತು.

ಕನ್ನಡದಲ್ಲಿ ಬಹಳ ಪ್ರಭಾವಶಾಲಿಯಾಗಿದ್ದ ಬಂಗಾಳಿ ಭಾಷಾಂತರಗಳು ಬಂಗಾಳಿ ಕಲ್ಪಿತ ಹಿಂದೂ ರಾಷ್ಟ್ರೀಯತೆಯನ್ನು ಒಂದು ಮಾದರಿಯಾಗಿ ಅನುಸರಿಸಿವೆ. ಭಾರತೀಯ ಎನ್ನುವ ರಾಷ್ಟ್ರೀಯತೆಯನ್ನು ಶೋಧಿಸಿಕೊಂಡಿದ್ದು ಬಂಗಾಳಿ ಸಾಹಿತ್ಯದ ಹಲವು ಮಾದರಿಗಳಲ್ಲಿ. ಅವುಗಳಲ್ಲಿ ಮೊದಲನೆಯದು ಬಂಕಿಮಚಂದ್ರ ಚಟರ್ಜಿಯವರದು(1838-1893). ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ಅವರ ಕಾದಂಬರಿಗಳು ಭಾರತದಾದ್ಯಂತ ಪ್ರಚಲಿತಗೊಂಡು ರಾಷ್ಟ್ರೀಯತೆಯ ಚಿಂತನೆಗಳನ್ನು ಪ್ರಸರಣ ಮಾಡುತ್ತಿದ್ದವು. ಬಂಕಿಮರು ಬರೆದ ಕಾದಂಬರಿಗಳಲ್ಲಿ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳಿದ್ದವು. ಐತಿಹಾಸಿಕ ಕಾದಂಬರಿಗಳು ವಿಮರ್ಶಕರು ಅಭಿಪ್ರಾಯ ಪಡುವಂತೆ ಭಾರತದಲ್ಲಿನ ಇಸ್ಲಾಂ ಆಳ್ವಿಕೆಯನ್ನು ಕಥಾಹಂದರವಾಗಿ ಹೊಂದಿರುವಂತವು. ಬಂಕಿಮರ ‘ದುರ್ಗೇಶ ನಂದಿನಿ’ ಕಾದಂಬರಿಯು ಎತ್ತಿಕೊಂಡ ರಾಷ್ಟ್ರಪ್ರೇಮದ ವಿಷಯವು ಬಂಕಿಮರು ಪ್ರಸ್ತುತ ಪಡಿಸಲು ಇಚ್ಛಿಸಿದ ಹೊಸ ರಾಷ್ಟ್ರೀಯತೆಯ ಅಜೆಂಡಾ ಆಗಿತ್ತು. ‘ಆನಂದಮಠ’(1882), ‘ದೇವಿ ಚೌಧುರಾಣಿ ’(1884), ‘ಸೀತಾರಾಮ’(1887)-ಇವು ಬಂಕಿಮಚಂದ್ರರ ಐತಿಹಾಸಿಕ ಕಾದಂಬರಿಗಳಲ್ಲಿ ಪ್ರಮುಖವಾದವು. ದೇವಿ ಚೌಧುರಾಣಿ ಕಾದಂಬರಿಯು ಮುಸ್ಲಿಂ ಆಳ್ವಿಕೆಯ ಕೊನೆಯ ದಿನಗಳಲ್ಲಿ ಆಗಿನ ಬಂಗಾಳದಲ್ಲಿ ಇದ್ದ ಅಶಾಂತ ಪರಿಸ್ಥಿತಿಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಬರೆದ ಕಾದಂಬರಿ. ಮುಸ್ಲಿಂ ರಾಜಾಡಳಿತವು ದಬ್ಬಾಳಿಕೆ ಮತ್ತು ಲೂಟಿಯಿಂದ ಕೂಡಿದ್ದು ಅದಕ್ಕೆ ಸಹಾಯಕಳಾಗಿದ್ದ ದೇವಿ ಚೌಧುರಾಣಿಯು ಹಿಂದೂ ಧರ್ಮದ ಅನುಯಾಯಿಯಾಗಿ ನಾವೆಯಲ್ಲಿದ್ದ ಭವಾನಿ ಪಾಠಕ್ ಅವರ ಬೋಧನೆಯಿಂದ ಸಚ್ಚಾರಿತ್ರದಿಂದ ನಡೆದುಕೊಂಡು ತನ್ನ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳುತ್ತಾಳೆ ಎನ್ನುವುದೇ ಕಥೆಯ ವಸ್ತು. ಆದರೆ ಇದಕ್ಕೆ ಹಿನ್ನೆಲೆಯಾಗಿ ಇರುವ ಚಾರಿತ್ರಿಕ ಸನ್ನಿವೇಶವು ಬಂಗಾಳಿ ಕ್ಷೋಭೆಗೆ ಕಾರಣರಾದವರು ಮುಸ್ಲಿಮರೆಂದೂ ಅವರೆದುರು ನಿಲ್ಲಬಲ್ಲ ಶಕ್ತಿಯಿರುವುದು ಭಾರತದ ಹಿಂದೂ ಧರ್ಮದ ಸತ್ವವಾಗಿರುವ ಆಧ್ಯಾತ್ಮಿಕತೆ ಮತ್ತು ಧರ್ಮಪ್ರಜ್ಞೆ ಎನ್ನುವ ಅಂಶಗಳನ್ನು ಮುನ್ನೆಲೆಗೆ ತರುತ್ತದೆ.

ಬಂಕಿಮಚಂದ್ರರ ನಂತರದ ಪ್ರಖ್ಯಾತ ಲೇಖಕ ಎಂದು ಹೆಸರಾಗಿದ್ದ ನನಿಲಾಲರ ‘ಅಮೃತಪುಲಿನ’(1907) ಕಾದಂಬರಿಯಾದರೂ ರಜಪೂತ ಮತ್ತು ಮೊಘಲರ ನಡುವಿನ ಸಂಘರ್ಷವನ್ನು ಹೇಳುತ್ತಾ ಹಿಂದೂಗಳಾದ ರಜಪೂತರ ಕಡೆಗೆ ತನ್ನ ಧೋರಣೆಯನ್ನು ತೋರುತ್ತದೆ. ರಜಪೂತರ ರಾಜಧಾನಿಯನ್ನು ಹಿಂದೂದೇಶ ಎಂದೇ ಕರೆಯಲಾಗಿದೆ. ವೆಂಕಟಾಚಾರ್ಯರೇ ಅನುವಾದ ಮಾಡಿರುವ ರಮೇಶಚಂದ್ರ ದತ್ತರ ಐತಿಹಾಸಿಕ ಕಾದಂಬರಿ ‘ವಂಗವಿಜೇತ’(1913)ವು ಹಿಂದೆ ಹೇಗೆ ವಂಗದೇಶವು ಮೊಘಲರ ಕೈವಶವಾಗಿತ್ತೆಂಬುದನ್ನು ಸುದೀರ್ಘವಾದ ಐತಿಹಾಸಿಕ ವಿವರಗಳ ಮೂಲಕ ಕಟ್ಟಿಕೊಡುತ್ತದೆ. ಭಾರತೀಯ ಭಾಷಾಂತರಗಳಲ್ಲಿ ಕಂಡು ಬರುವ ಅಂಶವೆಂದರೆ ಬ್ರಿಟಿಷರ ವೈರತ್ವವನ್ನು ಅವರು ನೇರವಾಗಿ ಎದುರಿಸದೆ ತಮ್ಮ ಸಮೀಪದ ಶತ್ರುವನ್ನಾಗಿ ಮುಸ್ಲಿಮರನ್ನು ಪರಿಗಣಿಸುವುದು. ಇದರ ಮೂಲಕ ಹಿಂದು ಎನ್ನುವ ಕಲ್ಪನೆಯು ಬಲಗೊಳ್ಳುತ್ತದೆ ಎಂಬ ಭಾವನೆಯು ಅಧಿಕವಾಗಿದೆ. ಹಿಂದೂ ಎನ್ನುವ ಕಲ್ಪನೆಯನ್ನು ಹೆಚ್ಚೂಕಡಿಮೆ ತುಂಬುತ್ತಿದ್ದುದು ರಜಪೂತ ಅಥವಾ ಮರಾಠ ಚರಿತ್ರೆಯ ಭಾಗಗಳು. ಮಧ್ಯಕಾಲೀನ ಸಂದರ್ಭದಲ್ಲಿ ಈ ಎರಡು ಸಮುದಾಯಗಳು ಹೋರಾಡಿದ ರೀತಿಯನ್ನು ಆಧುನಿಕಯುಗಕ್ಕೆ ಸ್ಫೂರ್ತಿ ಆಕರ ಎಂದು ಹತ್ತೊಂಬತ್ತನೇ ಶತಮಾನದ ಬಂಗಾಳಿ ಮತ್ತು ಮರಾಠಿ ಕಥನಕಾರರು ಭಾವಿಸಿದ್ದರೆ ಅದನ್ನು ಭಾಷಾಂತರಗಳ ಮೂಲಕ ಸ್ವೀಕರಿಸುವ ಇತರೆ ಭಾರತೀಯ ಭಾಷೆಗಳು ಈ ತಾತ್ವಿಕ ಚೌಕಟ್ಟನ್ನು ಅನುಸರಿಸಿದವು. ಮಾತ್ರವಲ್ಲ ತಮ್ಮ ದೇಶೀಭಾಷೆಗಳಲ್ಲಿ ಅವುಗಳನ್ನು ವಿಜೃಂಭಿಸಿ ಬರೆದರು. ಇದರಿಂದ ದೇಶಭಕ್ತಿಯನ್ನು ಹುಟ್ಟುಹಾಕುವ ಒಳ್ಳೆಯ ಕೆಲಸವನ್ನು ತಾವು ಮಾಡುತ್ತಿದ್ದೇವೆ ಎನ್ನುವ ಭಾವನೆಯು ಅವರಿಗಿತ್ತು.

ಬಂಗಾಳಿ ಹಿಂದುತ್ವದಲ್ಲಿ ಆಧ್ಯಾತ್ಮಿಕವಾದ ಧೋರಣೆಯು ವ್ಯಕ್ತವಾಗುತ್ತಿತ್ತು. ವಿಶೇಷವಾಗಿ ಈ ಆಧ್ಯಾತ್ಮಿಕ ಹಿಂದುತ್ವವು ರಾಷ್ಟ್ರೀಯತೆಯೊಂದಿಗೆ ಬೆರೆತಿತ್ತು. ಸಂನ್ಯಾಸಿಗಳು ಮತ್ತು ವಿವಿಧ ಬಗೆಯ ಸಮಾಜಗಳು ರಾಷ್ಟ್ರೀಯತೆಯೊಂದಿಗೆ ತಳಕು ಹಾಕಿಕೊಂಡಿರುವುದನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಗಮನಿಸಬಹುದು. ‘ಆನಂದಮಠ’ದ ಸಂನ್ಯಾಸಿಗಳು ಸ್ವಾತಂತ್ರ್ಯಕ್ಕಾಗಿ ಒಗ್ಗೂಡಿಸುವ ಕೆಲಸ ಮಾಡಿದುದನ್ನು ಇಲ್ಲಿ ಉದಾಹರಣೆಯಾಗಿ ಗಮನಿಸಬಹುದು. ಸ್ವಾಮಿ ವಿವೇಕಾನಂದ, ಅರವಿಂದ, ರಾಮಕೃಷ್ಣ ಪರಮಹಂಸ ಇನ್ನೂ ಮುಂತಾದವರು ರಾಷ್ಟ್ರನಿರ್ಮಾಣದ ಮಹತ್ವವನ್ನು ತಮ್ಮ ಆಧ್ಯಾತ್ಮಿಕ ಧೋರಣೆಯೊಂದಿಗೇ ಪ್ರತಿಪಾದಿಸಿದರು. ಈ ಬಂಗಾಳಿ ಆಧ್ಯಾತ್ಮಿಕ ರಾಷ್ಟ್ರೀಯತೆಯು ಕನ್ನಡದಲ್ಲಿ ಭಾಷಾಂತರಗಳ ಮೇಲಷ್ಟೆ ಅಲ್ಲದೆ ಮುಂದೆ ಸ್ವತಂತ್ರ ಸಾಹಿತ್ಯ ಸೃಷ್ಟಿಯ ಮೇಲೆಯೂ ಪರಿಣಾಮ ಬೀರಿತು.

ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿದ್ದ ಉಗ್ರ ಹಿಂದುತ್ವದ ಗುಂಪು ತಿಲಕ್, ಸಾವರ್ಕರ್ ಮುಂತಾದವರಿಂದ ಪ್ರಚಲಿತಗೊಂಡಿತು. ಈ ಗುಂಪು ಹಿಂದೂಯೇತರರನ್ನು ಹೊರಗಿಟ್ಟರೆ ಹಿಂದೂ ದೇಶವೆನ್ನುವ ತಾಯ್ನಾಡಿನ ಕಲ್ಪನೆ ಹುಟ್ಟುತ್ತದೆ ಎಂದು ನಂಬಿಕೊಂಡಿತ್ತು. ಇದರಿಂದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಬಗೆಗೆ ಅಸಹನೆ ಹುಟ್ಟಲು ಕಾರಣವಾಯಿತು. ಹಿಂದೂ ಎಂದರೆ ಒಂದು ಎನ್ನುವ ಸಿದ್ಧಾಂತವನ್ನು ಈ ಗುಂಪು ಮುಂದಿಡುತ್ತಿದ್ದರೂ ತಮ್ಮ ಹಿಂದೂ ಸಮಾಜದಲ್ಲಿ ಅನೇಕ ಬಗೆಯ ಭಿನ್ನಬೇಧಗಳಿರುವುದನ್ನು ಅರಿತಿತ್ತು. ಆದರೆ ಅದನ್ನು ಸುಧಾರಿಸುವುದು ಇವರ ಗುರಿಯಾಗಿರಲಿಲ್ಲ. ಬದಲಾಗಿ ವರ್ಣಾಶ್ರಮ ಧರ್ಮಗಳನ್ನು ಆಧರಿಸಿದ ಹಿಂದೂ ಧರ್ಮವನ್ನು ತಮ್ಮ ಕಲ್ಪಿತ ಸಮಾಜವನ್ನಾಗಿ ಮಾಡಿಕೊಂಡಿದ್ದ ಈ ಗುಂಪು ಅದನ್ನು ಉಗ್ರವಾಗಿ ಪ್ರತಿಪಾದಿಸಿತು. ಜಾತಿಯ ಶ್ರೇಣೀ ಯಲ್ಲಿ ಕೆಳಗಿದ್ದ ಶೂದ್ರವರ್ಗವೂ ಸಹ ಉಚ್ಛಾಟಿತ ಗುಂಪಿನ ಪಟ್ಟಿಯಲ್ಲಿಯೇ ಇತ್ತು. ಒಟ್ಟಿನಲ್ಲಿ ಹಿಂದೂ ಧರ್ಮದ ಔನ್ನತ್ಯವನ್ನು ಎತ್ತಿಹಿಡಿಯಬೇಕೆನ್ನುವುದು ಈ ಗುಂಪಿನ ಮುಖ್ಯ ಉದ್ದೇಶ.

ಬಂಗಾಳಿ ಮತ್ತು ಮರಾಠಿ ಕಾದಂಬರಿಕಾರರಿಗೆ ತಮ್ಮ ನಾಡುಗಳು ಹೇಗೆ ಮುಸಲರ ವಶವಾಗಿ ಕಷ್ಟಕೋಟಲೆಗಳನ್ನು ಅನುಭವಿಸಬೇಕಾಯಿತೆನ್ನುವುದನ್ನು ತಿಳಿಸಿ ರಾಷ್ಟ್ರಭಕ್ತಿಯನ್ನು ಉದ್ದೀಪಿಸುವ ಕಡೆ ಗಮನವಿತ್ತೊ ಗಳಗನಾಥರಿಗೆ ಕನ್ನಡ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳುವ ಕಡೆ ಆಸಕ್ತಿಯಿದ್ದುದರಿಂದ ಅವರು ಕನ್ನಡಿಗರ ಕರ್ಮಕಥೆಯನ್ನು ವಿಜಯನಗರದ ಪತನವನ್ನು ಕಲ್ಪಿಸುತ್ತಾರೆ. ಗಳಗನಾಥರ ಹಿಂದೂ ಪಕ್ಷಪಾತದ ಧೋರಣೆಯು ಎದ್ದುಕಾಣುವಂತಿದೆ. ವಿಜಯನಗರದ ಅರಸರನ್ನು ಅದರಲ್ಲಿಯೂ ಕೃಷ್ಣದೇವರಾಯನನ್ನು ಒಂದು ಆದರ್ಶಮೂರ್ತಿಯನ್ನಾಗಿಯೂ ಅವನ ಸಾಮ್ರಾಜ್ಯವನ್ನು ಹಿಂದೂಗಳಾದ ಕನ್ನಡಿಗರ ಸ್ವರ್ಗಸೀಮೆಯೆಂದೂ ಕಲ್ಪಿಸಿದ್ದಾರೆ. ಕನ್ನಡಿಗರ ಉತ್ಕರ್ಷದ ಪರಮಾವಧಿಯೆಂದೂ ವೈದಿಕ ವಿದ್ಯೆಗೆ ಉತ್ತೇಜನ ದೊರೆತ ಕಾಲವೆಂದು ಬಹುತೇಕ ರಾಷ್ಟ್ರೀಯವಾದಿಗಳ ಧೋರಣೆಯಾಗಿತ್ತು. ಚೆನ್ನಿಯವರು ಗುರುತಿಸುವಂತೆ, “ಅನ್ಯದೇಶೀಯ ಆಳ್ವಿಕೆಯ ವಿರುದ್ಧ ಹುಟ್ಟಿಕೊಂಡ ರಾಷ್ಟ್ರೀಯತೆಯ ಪರಿಕಲ್ಪನೆ ದೇಶೀಯ ಸಂಸ್ಕೃತಿಯ ವೈಭವೀಕರಣಕ್ಕೆ ಈಡು ಮಾಡಿತು ಎನ್ನುವುದನ್ನು ಮರೆಯಲಾಗದು.... “ಮುಖ್ಯವಾಗಿ ಸಾಮಾಜಿಕ ಅಸಮಾನತೆಗಳಿಗೂ ಸಂಸ್ಕೃತಿಗೂ ಇರುವ ಸಂಬಂಧಗಳನ್ನು ನಮ್ಮ ಬರಹಗಾರರು ಅರ್ಥ ಮಾಡಿಕೊಳ್ಳದೇ ಇದ್ದುದರಿಂದ ಸಮಾಜದಲ್ಲಿ ಎಲ್ಲ ಕೆಡಕುಗಳನ್ನು ಎದುರಿಸಿ ಉಳಿಯಬಲ್ಲ ಆರೋಗ್ಯವಂತಿಕೆ ನಮ್ಮ ಸಂಸ್ಕೃತಿಗೆ ಇದೆ ಎಂದು ಭ್ರಮಿಸಿದರು”(ಚೆನ್ನಿ 390). ಗಳಗನಾಥರಂತಹ ಖಚಿತವಾದ ಹಿಂದೂ ಧೋರಣೆಗಳುಳ್ಳ ಬರಹಗಾರರಿಗೆ ಇಂತಹ ಮಾತುಗಳು ಅನ್ವಯವಾಗುತ್ತವೆ.

ಗಾಂಧೀಜಿಯವರ ಹಿಂದುತ್ವದ ರಾಜಕಾರಣ ಮೇಲಿನೆರಡು ಮಾದರಿಗಳಿಗಿಂತ ವಿಭಿನ್ನವಾದುದಾಗಿತ್ತು. ಗಾಂಧಿ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಂಡರು. ಆದರೆ ತಾವು ಸಮಕಾಲೀನವಾಗಿ ಬೆಳೆಯುತ್ತಿದ್ದ ಹಿಂದುತ್ವದ ಪರಿಪಾಲಕರಲ್ಲ ಎನ್ನುವುದನ್ನು ಗುರುತಿಸಿಕೊಂಡಿದ್ದರು. ಗಾಂಧಿ ಸಾಹಿತ್ಯವು ಭಾಷಾಂತರಗಳ ಮೂಲಕ ಕನ್ನಡವನ್ನು ಪ್ರವೇಶಿಸತೊಡಗಿದಾಗ ಹಿಂದುತ್ವದ ವಿಶಾಲ ತಾತ್ವಿಕ ನೆಲೆಗಟ್ಟು ರಚನೆಯಾಗತೊಡಗಿತು. ಮೊದಲ ಹಂತದ ಭಾಷಾಂತರಗಳಲ್ಲಿ ಕಾಣುವ ಹಿಂದುತ್ವದ ಆವೇಶವು ಇಲ್ಲಿ ಹಿನ್ನೆಲೆಗೆ ಸರಿದಂತೆ ತೋರುತ್ತದೆ. ಈ ಹಂತದಲ್ಲಿನ ಭಾಷಾಂತರಗಳು ರಾಜಕೀಯವನ್ನೇ ಮುನ್ನೆಲೆಗೆ ತಂದವು. ಈ ಹೊತ್ತಿನಲ್ಲಿ ಪ್ರಚಲಿತವಾಗಿದ್ದುದು ಜೀವನ ಚರಿತ್ರೆಗಳು, ಆತ್ಮಚರಿತ್ರೆಗಳು, ಪ್ರಬಂಧಗಳು(ಮುಖ್ಯವಾಗಿ ರಾಜಕೀಯ ಲೇಖನಗಳು).

ಕನ್ನಡದ ಮಟ್ಟಿಗೆ ಹೇಳುವುದಾದರೆ ಭಾಷಾಂತರಗಳು ಎದುರಿಸಿದ ಆಧುನಿಕತೆ ಮತ್ತು ಹಿಂದುತ್ವದ ವಾಸ್ತವಗಳು ಬಂಗಾಳಿ ಮತ್ತು ಮರಾಠಿ ಸಾಹಿತ್ಯದ ಪರಿಣಾಮಗಳೆಂದು ಹೇಳಬಹುದು. ವಾಸ್ತವವಾಗಿ ಕನ್ನಡದ ಸಂವೇದನೆಯು ಉಗ್ರ ಹಿಂದುತ್ವವನ್ನು ಆಳದಲ್ಲಿ ತನ್ನದಾಗಿಸಿಕೊಂಡಿರಲಿಲ್ಲ. ಇದು ಸ್ಥೂಲವಾದ ಗ್ರಹಿಕೆ. ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ.

ಆಕರಗಳು:
ಆಲೂರು ವೆಂಕಟರಾವ್. “ಕರ್ನಾಟಕದ ಸೂತ್ರಗಳು”. ಮುಕ್ತ ಕರ್ನಾಟಕ. ಎ.ರಂಗಸ್ವಾಮಿ(ಸಂ).
ಮೈಸೂರು: ಪ್ರಸಾರಾಂಗ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, 2008
ಕಲ್ಬುರ್ಗಿ, ಎಂ.ಎಂ(ಸಂ). ಗಳಗನಾಥ ಸಮಗ್ರ ಸಾಹಿತ್ಯ. ಧಾರವಾಡ: ಮನೋಹರ ಗ್ರಂಥಮಾಲೆ, 2014ನೇ ಆವೃತ್ತಿ
ತಾರಕೇಶ್ವರ, ವಿ.ಬಿ. ವಸಾಹತುಶಾಹಿ ಮತ್ತು ಭಾಷಾಂತರ. ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 2006
ರಾಜೇಂದ್ರ ಚೆನ್ನಿ. ಆಯ್ದ ವಿಮರ್ಶಾ ಲೇಖನಗಳು. ಬೆಂಗಳೂರು: ಕನ್ನಡ & ಸಂಸ್ಕೃತಿ ಇಲಾಖೆ, 2011
ಶಿವರಾಮ ಪಡಿಕ್ಕಲ್.ನಾಡು ನುಡಿ ರೂಪಕ. ರಾಷ್ಟ್ರ, ಆಧುನಿಕತೆ ಮತ್ತು ಕನ್ನಡದ ಮೊದಲ
ಕಾದಂಬರಿಗಳು. ಮಂಗಳೂರು: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, 2001

ಈ ಅಂಕಣದ ಹಿಂದಿನ ಬರೆಹಗಳು:
ಕುವೆಂಪು ಅನುವಾದಗಳ ಧೋರಣೆ…
ಕನ್ನಡದ ಕೆಲಸ ಮಾಡಿದ ಭಾಷಾಂತರಗಳು:
ಟಾಲ್‍ಸ್ಟಾಯ್ ಎಂಬ ಬೂರ್ಜ್ವಾ ವೃಕ್ಷದ ನೆರಳು- (ಟಾಲ್‍ಸ್ಟಾಯ್ ಕನ್ನಡಾನುವಾದಗಳು)
ಕನ್ನಡ ಬೌದ್ಧಸಾಹಿತ್ಯದ ಭಾಷಾಂತರಗಳ ಸ್ವರೂಪ ಹಾಗೂ ರಾಜರತ್ನಂ ಭಾಷಾಂತರಗಳು
ಶ್ರದ್ಧೆಯ ಬೆಸೆವ ಭಾಷಾಂತರ
ಎಂ.ಎಲ್.ಶ್ರೀಕಂಠೇಶಗೌಡರೆಂಬ ಅನುವಾದಕ

ಬೇಂದ್ರೆ ಅನುವಾದಗಳ ಅನುಸಂಧಾನ
ಕನ್ನಡ ಭಾಷಾಂತರ ಮತ್ತು ಪ್ರದೇಶಗಳು
‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ
ಕನ್ನಡ ಭಾಷಾಂತರ ಮತ್ತು ಪ್ರದೇಶಗಳು
ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ
ಇಂಗ್ಲಿಷ್ ಗೀತಗಳ ಪಯಣ
ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು
ಸ್ತ್ರೀ ಮಲಯಾಳ ಹಾಗೂ ಸ್ತ್ರೀ ವಿವೇಕದ ಕಥನಗಳು










MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...