ಹೊಚ್ಚ ಹೊಸ ನಿರೂಪಣಾ ಶೈಲಿಯ ಕಾದಂಬರಿ 'ಹಾವು ಹಚ್ಚೆಯ ನೀಲಿ ಹುಡುಗಿ’


ಸಣ್ಣಕತೆಯ ತೀವ್ರತೆ ಮತ್ತು ಕಾದಂಬರಿಯ ವಿಸ್ತಾರ -ಎರಡನ್ನೂ ಈ ಕಾದಂಬರಿ ಹೊಂದಿದೆ. ಅದೇ ಕಾರಣಕ್ಕೆ ಇದಕ್ಕೆ ಅಪರಿಮಿತ ವೇಗ ಪ್ರಾಪ್ತಿಯಾಗಿದೆ. ಓದಿ ಮುಗಿಸಿದ ನಂತರ ಕಾದಂಬರಿ ನಮ್ಮೊಳಗೆ ವಿಸ್ತರಿಸುತ್ತಾ ಹೋಗುತ್ತದೆ. ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. ನಿಜ ಮತ್ತು ಸುಳ್ಳನ್ನು ಹೊದ್ದುಕೊಂಡಿರುವ, ಯಾವುದು ನಿಜ ಯಾವುದು ಸುಳ್ಳು ಎಂದು ಗುರುತಿಸಲಿಕ್ಕಾಗದ ಮಾಯೆಯೊಂದು ಈ ಕತೆಯನ್ನು ತನಗೇ ತಾನೇ ಹೇಳಿಕೊಳ್ಳುತ್ತಿರುವಂತಿದೆ ಎನ್ನುತ್ತಾರೆ ಲೇಖಕ ಜೋಗಿ. ಲೇಖಕ ರಾಜೇಶ್ ಶೆಟ್ಟಿ ಅವರ ಹಾವು ಹಚ್ಚೆಯ ನೀಲಿ ಹುಡುಗಿ ಕೃತಿಯ ಬಗ್ಗೆ ಅವರು ಬರೆದ ಪ್ರತಿಕ್ರಿಯೆ ಹಾಗೂ ಲೇಖಕರ ಮಾತು ನಿಮ್ಮ ಓದಿಗಾಗಿ..

ಪ್ರಿಯ ರಾಜೇಶ್,
ನಿಮ್ಮ ಕಾದಂಬರಿ ಒಂದೇ ಉಸಿರಿನಲ್ಲಿ ಓದಿಸಿಕೊಂಡಿತು. ಓದಿದ ಎಷ್ಟೋ ಹೊತ್ತು ನಾನು ಅದರ ಗುಂಗಿನಲ್ಲಿದ್ದೆ. ಅದಕ್ಕೆ ಕಾರಣವಾದದ್ದು ನೀವು ಹೇಳಿದ ಕತೆಯಲ್ಲ, ಅದನ್ನು ಹೇಳಿದ ರೀತಿ. ನಿಮ್ಮ ಕತೆಯಲ್ಲಿ ಫ್ಯಾಂಟಸಿ ಮತ್ತು ರಿಯಾಲಿಟಿ ಬಹಳ ಸೊಗಸಾಗಿ ಬೆರೆತುಕೊಂಡಿದೆ. ಯಾವುದು ನಿಜ, ಯಾವುದು ಭ್ರಮೆ ಎನ್ನುವುದು ಥಟ್ಟನೆ ಗೊತ್ತಾಗದಂತೆ ಘಟನೆಗಳು ನಡೆಯುತ್ತವೆ. ಈ ಕತೆಗೆ ಅಸಾಧಾರಣ ವೇಗವೂ ಇರುವುದರಿಂದ ಇದೊಂದು ಥ್ರಿಲ್ಲರ್ ಸಿನಿಮಾದಂತೆ ನಡೆದುಹೋಗುತ್ತದೆ. ಅಂದುಕೊಂಡದ್ದಕ್ಕಿಂತ ಬೇಗ ಮುಗಿದುಹೋಗುತ್ತದೆ.

ಕಳೆದುಹೋದ ಕೃಷ್ಣನನ್ನು ಹುಡುಕುವುದು ನಿಮ್ಮ ಫೇವರಿಟ್ ಥೀಮ್. ಈ ಹಿಂದಿನ ಕಥಾಸಂಕಲನದಲ್ಲೂ ನಾನಿದನ್ನು ಗಮನಿಸಿದ್ದೇನೆ. ಮಹಾನಗರ ಎಂದರೆ ನಿಮ್ಮ ಪಾಲಿಗೆ ಆಕರ್ಷಣೆ ಹೇಗೋ ಹಾಗೆಯೇ ಭಯಾನಕ ಕೂಡ. ನಗರದಲ್ಲಿ ಕಳೆದುಹೋಗಲು ಇಷ್ಟಪಡುವ ನಿಮ್ಮ ಕಥಾನಾಯಕ ಅಮರ್, ನಗರದಿಂದ ಪಾರಾಗಲು ಕೂಡ ಹವಣಿಸುವುದು ಈ ಕಾದಂಬರಿಯ ಎರಡು ಪ್ರಮುಖ ಬಿಂದುಗಳು. ಕತೆ ಆರಂಭವಾಗುವುದು ಮತ್ತು ಮುಗಿಯುವುದು ಅಲ್ಲಿಂದಲೇ.

ಬೆಂಗಳೂರಿನಂಥ ಬೆಂಗಳೂರು. ಅಲ್ಲಿ ಹುಟ್ಟಿಕೊಳ್ಳುವ ನಿಗೂಢ ಊರು. ಅಲ್ಲಿ ಕಾಣುವ ದೊಂದಿ ಬೆಳಕು, ಅಲ್ಲಿಯ ವಿಚಿತ್ರ ಮಂದಿ. ಕಾಡು ಉಳಿಸಿಕೊಳ್ಳುವ ಹೋರಾಟ, ಮಹಾಗುರುವಿನ ಪಿತೂರಿ, ಅವರನ್ನು ಕಾಪಾಡಲು ಹೊರಡುವ ಗೊಲ್ಲ ಕೃಷ್ಣ, ಎಲ್ಲವನ್ನೂ ಬಲ್ಲ ಬಾಲ್ಟಿಮೋರ್, ತೀವ್ರ ವ್ಯಾಮೋಹದ ಕುಮಾರ್, ಮುರಿದ ಪ್ರೇಮದ ಅಜಿತ್, ಹೋರಾಟದ ಹುಮ್ಮಸ್ಸಿನ ಶರತ್, ಮುಟ್ಟಿಯೂ ಮುಟ್ಟದಂತಿರುವ ನಟರಾಜರಾಯರು- ಇವರೆಲ್ಲರನ್ನೂ ನಾನು ನಿಮ್ಮ ಕತೆಗಳಲ್ಲಿ ಭೇಟಿ ಮಾಡಿದ್ದೇನೆ. ಇಲ್ಲಿ ಅವರು ಹೊಸ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

ಸಣ್ಣಕತೆಯ ತೀವ್ರತೆ ಮತ್ತು ಕಾದಂಬರಿಯ ವಿಸ್ತಾರ -ಎರಡನ್ನೂ ಈ ಕಾದಂಬರಿ ಹೊಂದಿದೆ. ಅದೇ ಕಾರಣಕ್ಕೆ ಇದಕ್ಕೆ ಅಪರಿಮಿತ ವೇಗ ಪ್ರಾಪ್ತಿಯಾಗಿದೆ. ಓದಿ ಮುಗಿಸಿದ ನಂತರ ಕಾದಂಬರಿ ನಮ್ಮೊಳಗೆ ವಿಸ್ತರಿಸುತ್ತಾ ಹೋಗುತ್ತದೆ. ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. ನಿಜ ಮತ್ತು ಸುಳ್ಳನ್ನು ಹೊದ್ದುಕೊಂಡಿರುವ, ಯಾವುದು ನಿಜ ಯಾವುದು ಸುಳ್ಳು ಎಂದು ಗುರುತಿಸಲಿಕ್ಕಾಗದ ಮಾಯೆಯೊಂದು ಈ ಕತೆಯನ್ನು ತನಗೇ ತಾನೇ ಹೇಳಿಕೊಳ್ಳುತ್ತಿರುವಂತಿದೆ.

ಅರ್ಬನ್ ಎಂಬುದು ಒಂದು ಜನಪದ. ಅದಕ್ಕೆ ತನ್ನದೇ ಆದ ಒಂದು ಮಹಿಮೆಯಿದೆ. ಅದನ್ನು ಹಿಡಿಯುವುದು ಸುಲಭವಲ್ಲ. ವಾಸ್ತವವಾದ ಮಾರ್ಗದಲ್ಲಿ ಅದು ಮುಷ್ಟಿಗೆ ಸಿಗುತ್ತದೆ ಎಂಬ ನಂಬಿಕೆ ನನಗೂ ಇಲ್ಲ. ಮ್ಯಾಜಿಕಲ್ ರಿಯಲಿಸಮ್ ಎಂಬುದು ಈಗ ಕತೆ ಹೇಳುವ ತಂತ್ರವಷ್ಟೇ ಆಗದೇ, ನಮ್ಮ ಮುಂದಿರುವ ಜಗತ್ತನ್ನು ನೋಡುವ ಕ್ರಮವೂ ಆಗಿದೆ ಎನ್ನುವುದನ್ನು ನೀವು ಈ ಕಾದಂಬರಿಯಲ್ಲಿ ತೋರಿಸಿಕೊಟ್ಟಿದ್ದೀರಿ.

ಆ ಕಾರಣಕ್ಕಾಗಿ ಇದು ಹೊಚ್ಚ ಹೊಸ ನಿರೂಪಣಾ ಶೈಲಿಯ ಕಾದಂಬರಿ. ಸ್ಥಿತಿ ಮತ್ತು ಗತಿ ಒಂದನ್ನೊಂದು ಅಟ್ಟಿಸಿಕೊಂಡು ಹೋಗುವಂತೆ ಕಾಣುವ ಈ ಕಥನಕ್ರಮವೇ ನಿಮ್ಮ ಕತೆಯನ್ನು ಬೆರಗಿನಿಂದ ಓದುವಂತೆ ಮಾಡುತ್ತದೆ.
ಇದಕ್ಕಾಗಿ ನಿಮಗೆ ಅಭಿನಂದನೆ.

-ಜೋಗಿ

****

ಆರಂಭದ ಮಾತು
ವರ್ತುಲಾಕಾರದಲ್ಲಿದ್ದ ಕೆರೆಯ ನೀರಿನ ಮೇಲೆ ಮಳೆಯ ಹನಿಗಳು ಬಿದ್ದು ವರ್ತುಲಗಳು ಸೃಷ್ಟಿಯಾಗಿ ಪುಟ್ಟ ಪುಟ್ಟ ಅಲೆಗಳು ಹುಟ್ಟಿ ಅಷ್ಟು ದೂರ ಸಾಗಿ ಗೊತ್ತೇ ಆಗದಂತೆ ಸಾಯುತ್ತಿದ್ದವು. ಮಳೆ ಹನಿಗಳು ಬೀಳುವುದು ಜಾಸ್ತಿಯಾದಂತೆ ವರ್ತುಲಗಳ ಸಂಖ್ಯೆ ಹೆಚ್ಚಿತು. ಮೇಲಿನಿಂದ ನೋಡಿದರೆ ಒಂದು ಕೆರೆಯಲ್ಲಿ ಸಾವಿರಾರು ವರ್ತುಲಗಳನ್ನು ಕಾಣಬಹುದಾಗಿತ್ತು. ಸೂಕ್ಣ್ಮವಾಗಿ ಮಳೆ ಹನಿಗಳು ಕೆರೆ ನೀರಿನ ಮೇಲ್ಮೈಯನ್ನು ಘಾಸಿಗೊಳಿಸುವಂತೆ ಬೀಳುತ್ತಿದ್ದವು.

ಅದೇ ಕೆರೆಯಲ್ಲಿ ಆ ಮಳೆಯಲ್ಲಿ ಆ ಸಂಜೆಯಲ್ಲಿ ಒಬ್ಬ ತಾತ ಈಜು ಹೊಡೆಯುತ್ತಿದ್ದರು. ಅವರು ಯಾವಾಗ ಮೇಲೆ ಬಂದು ಯಾವಾಗ ನೀರಿನಾಳಕ್ಕೆ ಹೋಗುತ್ತಿದ್ದರೋ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಅವರು ಇತ್ತಿಂದತ್ತ ಅತ್ತಿಂದಿತ್ತ ಈಜುತ್ತಲೇ ಇರುವುದನ್ನು, ಒಂದೊಂದು ವರ್ತುಲಗಳನ್ನು ದಾಟುವುದನ್ನು, ನೀರನ್ನು ಜಯಿಸಲು ಶ್ರಮಿಸುವುದನ್ನು ಕೆರೆ ದಡಲ್ಲಿ ಕೊಡೆ ಹಿಡಿದು ನಿಂತು ನೋಡುತ್ತಿದ್ದೆ. ನನ್ನ ಪಕ್ಕದಲ್ಲಿ ಆಗಿನ್ನೂ ಕಾಲೇಜು ಮುಗಿಸಿದ ಹುಡುಗನಿದ್ದ.

ನಾವೆಲ್ಲರೂ ಒಂದು ಎರಡು ಕಿಮೀ ಆಕಾಶದ ಕಡೆಗೆ ಹೋಗಿ ಕೆಳಗೆ ನಿಂತು ನೋಡಿದರೆ ಕೆರೆ ಎಂಬ ಒಂದು ದೊಡ್ಡ ವರ್ತುಲದ ಒಳಗೆ ಎಷ್ಟು ವರ್ತುಲಗಳು ಕಾಣಬಹುದು ಎಂದು ಯೋಚಿಸುತ್ತಿದ್ದೆ. ಒಬ್ಬೊಬ್ಬರ ಬದುಕೂ ಒಂದೊಂದು ವರ್ತುಲ. ಆ ವರ್ತುಲವಷ್ಟೇ ಬದುಕು ಎಂದುಕೊಂಡ ವೇಳೆ ಮತ್ತೊಂದು ವರ್ತುಲ ನಮ್ಮ ವರ್ತುಲದೊಳಕ್ಕೆ ಬಂದು ವರ್ತುಲಗಳು ಸಿಕ್ಕುಸಿಕ್ಕಾಗಿ ದೊಡ್ಡದಾಗಿ ಬೆಳೆಯುತ್ತಾ ಹೋಗುವ ವಿಸ್ಮಯ ನಡೆಯುತ್ತಿರುತ್ತದೆ. ಕಡೆಗೆ ನಿಂತು ನೋಡಿದರೆ ಯಾರು ಯಾವ ವರ್ತುಲದಲ್ಲಿದ್ದಾರೆ ಎಂದು ಸ್ಪಷ್ಟವಾಗಿ ಹೇಳುವುದಾದರೂ ಹೇಗೆ.

ಮಳೆ ಜಾಸ್ತಿಯಾದಂತೆ ಕೆರೆಯಲ್ಲಿ ಈಜುತ್ತಿದ್ದ ತಾತ ಮಾಯವಾಗಿಬಿಟ್ಟರು. ಎಲ್ಲಿ ಎಂದು ನಾವು ಈಡಿ ಕೆರೆಯ ಕಡೆ ಕಣ್ಣು ಹಾಯಿಸಿ ಗಾಬರಿಗೊಳ್ಳುತ್ತಿದ್ದರೆ ಅವರು ಮಾತ್ರ ನೀರಿನಾಳಕ್ಕೆ ಹೋಗಿ ಮಳೆಹಳಿಯ ಏಟುಗಳಿಂದ ತಪ್ಪಿಸಿಕೊಳ್ಳುತ್ತಿದ್ದರು. ಅವರವರು ಆಯಾಯ ಕಾಲಕ್ಕೆ ಪರಿಸ್ಥಿತಿ ಕೊಡುವ ಏಟಿಗೆ ಮೈಯೊಡ್ಡುತ್ತಾ ಕಾಲ ಕ್ರಮೇಣ ಆ ಏಟುಗಳಿಂದ ತಪ್ಪಿಸಿಕೊಳ್ಳುತ್ತಾ ಮೈಯನ್ನು ಜಡ್ಡಾಗಿಸಿಕೊಂಡು ಮುಂದೆ ಹೋಗುತ್ತಿರುವ ವೇಳೆಗೆ ಮತ್ತೊಂದು ಯಾವುದೋ ಅಚ್ಚರಿ ಕೆಡವಿ ಹಾಕಲು ಕಾಯುತ್ತಿರುತ್ತದೆ.

ಇವನ್ನೆಲ್ಲಾ ಆಲೋಚನೆ ಮಾಡುತ್ತಾ ಆ ತಾತನ ಜೊತೆ ಮಾತನಾಡಬೇಕೆಂದು ಕಾಯುತ್ತಾ ನಿಂತಿರುವ ವೇಳೆಯಲ್ಲಿ ಪಕ್ಕದಲ್ಲಿ ನಿಂತಿದ್ದ ಹುಡುಗ ಅಣ್ಣಾ, ಬೆಂಗಳೂರು ಹೇಗೆ, ಅಲ್ಲೆಲ್ಲಾ ಬಹಳ ಚಂದ ಉಂಟಂತಲ್ಲ ಎಂದು ಕೇಳಿದ. ನಾನು ನಸುನಕ್ಕೆ.

ಅಷ್ಟು ಹೊತ್ತಿಗೆ ಕೆರೆಯಲ್ಲಿ ಈಜುತ್ತಿದ್ದ ತಾತ ಸುಸ್ತಾಗಿ ಕಾಲೆಳೆದುಕೊಂಡು ಮೇಲೆದ್ದು ಬಂದರು. ನಾನು ಹಲೋ ಎಂದೆ. ಅವರು ಗುರುತು ಪರಿಚಯ ಇಲ್ಲದವರಂತೆ ನೋಡಿದರು. ನಾನು ಸುಮ್ಮನೆ ನಿಂತಿದ್ದೆ. ಆಗ ಅವರು ಹಾಂ ಈಗ ಪರಿಚಯ ಆಯಿತು ಎಂದು ಹೇಳುತ್ತಲೇ ಮತ್ಯಾರದೋ ಹೆಸರನ್ನು ಹೇಳಿ ನೀನು ಅವನಲ್ವಾ ಎಂದು ಕೇಳಿದರು. ಈ ಜಗತ್ತಿಗೆ ನಾನು ಯಾರು ಎಂದು ತಿಳಿಸುವುದು ಹೇಗೆ? ನನ್ನ ಜಗತ್ತನ್ನು ನಾನು ಹುಡುಕುವುದು ಹೇಗೆ? ಅಂತರಂಗದ ತುಣುಕನ್ನು ಹೊರಗಿಡಲು ಸಾಧ್ಯವಾಗುವುದೇ ಆದರೆ ಅದು ಹೇಗೆ?

ಅವರು ಅವತ್ತು ಕೈ ಕುಲುಕಿ ಕಷ್ಟ ಸುಖ ಮಾತನಾಡಿ ಎದ್ದು ಹೋದರು ಅನ್ನಿಸುತ್ತದೆ. ನಾನು ಮತ್ತು ಅವನು ಮಾತ್ರ ಬಹಳ ಹೊತ್ತು ಅಲ್ಲೇ ಕೆರೆದಡದಲ್ಲಿ ಕಲ್ಲಿನ ಮೇಲೆ ಮಳೆಹನಿಯನ್ನು ಮುಖಕ್ಕೆ ಬಿಟ್ಟುಕೊಳ್ಳುತ್ತಾ ಕುಳಿತಿದ್ದೆವು. ಒಂದೊಂದು ಹನಿಗಳು ಕಣ್ಣು, ಮುಖ, ಹಣೆಯ ಮೇಲೆ ಬಿದ್ದು ನೀರಾಗಿ ಹರಿದು ಹೋಗುತ್ತಿದ್ದವು. ಇವತ್ತು ಸಿಕ್ಕ ಮಳೆ ಹನಿ ನಾಳೆ ಬೇಕು ಎಂದರೂ ಸಿಗುವುದಿಲ್ಲ. ಇವತ್ತು ನಮ್ಮದಾದ ಆ ಒಂದು ಕ್ಷಣ ನಾಳೆ ನಮ್ಮದಾಗಿ ಇರುವುದಿಲ್ಲ.

ಅವತ್ತು ಆ ಇಬ್ಬರು ಜೀವಗಳಿಂದಾಗಿ ನನ್ನ ಮನಸ್ಸಲ್ಲಿ ಅನೇಕ ಚಿತ್ರಗಳು, ದೃಶ್ಯಗಳು ಸಾಲುಗಟ್ಟತೊಡಗಿದವು. ಬೆಂಗಳೂರಿನ ದಾರಿ, ಹಾದಿಬದಿಯ ದೀಪ, ಸಂಜೆ ಹೊತ್ತಿನ ನಿಟ್ಟುಸಿರು, ಮಧ್ಯರಾತ್ರಿಯ ಹುಮ್ಮಸ್ಸು, ಜೊತೆಗಿದ್ದು ಮರೆಯಾದವರು, ಮರೆಯಲ್ಲಿದ್ದು ಮುನ್ನಡೆಸಿದವರು, ಕಾಲೆಡವಿ ಬೀಳಿಸಿದವರು, ಊರಾಚೆಯ ತಂಗಾಳಿ, ಮಾರ್ಕೆಟ್ಟಿನ ಸದ್ದುಗದ್ದಲ, ನಡು ಮಧ್ಯಾಹ್ನದ ಕಣ್ಣೀರು, ಸಿಹಿ ಸಿಹಿ ಹುಚ್ಚು ಉತ್ಸಾಹ, ಯಾವುದೋ ಒಂದು ಗಳಿಗೆಯ ದಟ್ಟ ವಿಷಾದ ಎಲ್ಲವೂ ಕಣ್ಣ ಮುಂದೆ ಬಂದವು. ಅವೆಲ್ಲವನ್ನೂ ಅಕ್ಷರ ರೂಪದಲ್ಲಿ ಮುಂದಿಡುವ ಹುಂಬ ಪ್ರಯತ್ನ ಇದು.

ಗಾಳಿಯು ಸವರಿ ಹೋದಂತೆ, ಪರಿಮಳವು ಹಿತವಾಗಿ ಅಪ್ಪಿಕೊಂಡಂತೆ, ಎಲ್ಲವೂ ಮುಗಿದ ಬಳಿಕದ ನಿರಾಳ ಆವರಿಸಿದಂತೆ ಈ ಅಕ್ಷರಗಳು ನಿಮ್ಮನ್ನು ತಬ್ಬಿಕೊಂಡು ಉಳಿದು ಹೋಗಲಿ ಅಥವಾ ದಾಟಿ ಸಾಗಲಿ.
ಒಪ್ಪಿಸಿಕೊಳ್ಳಿ.

- ರಾಜೇಶ್ ಶೆಟ್ಟಿ

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...