ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು

Date: 29-03-2022

Location: ಬೆಂಗಳೂರು


‘ಏಣಗಿ ಬಾಳಪ್ಪನವರ ಹೆಸರಿನ ಉಲ್ಲೇಖವಿಲ್ಲದೇ ಕನ್ನಡ ರಂಗಭೂಮಿಯ ಚರಿತ್ರೆ ಖಂಡಿತಾ ಪರಿಪೂರ್ಣವೆನಿಸದು. ಅವರನ್ನು ವೃತ್ತಿ ರಂಗಭೂಮಿಗೆ ಸೀಮಿತಗೊಳಿಸಿ ನೋಡಲಾಗದು. ಅವರು ಸಮಗ್ರ ಕನ್ನಡ ರಂಗಸಂಸ್ಕೃತಿಯ ಸಿರಿಚೈತನ್ಯ’ ಎನ್ನುತ್ತಾರೆ ಲೇಖಕ, ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ರಂಗಭೂಮಿ ಮತ್ತು ಮೇರು ಕಲಾವಿದರಾದ ಏಣಗಿ ಬಾಳಪ್ಪನವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಹೋಗಿ ಬರ್ತೇನ್ರಯ್ಯ ನಮ್ಮೂರಿಗೆ
ಎಲ್ಲರಿಗೂ ಶರಣಾರ್ಥಿ
ದಯೆತೋರಿ ಕಳುಹಿಸಿರಿ...

ಇದು ಗಮಕ ಕಲಾನಿಧಿ, ಅಭಿಜಾತ ರಂಗ ಕಲಾವಿದ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡರ ಪೆಟೆಂಟ್ ಹಾಡು. ಅವರು ತಮ್ಮ ನಾಟಕ ಪ್ರದರ್ಶನ ಮುಗಿವ ಮುನ್ನ ಮತ್ತು ನಾಟಕ ಕಂಪನಿ ಕ್ಯಾಂಪ್ ಮುಕ್ತಾಯದ ಸಂದರ್ಭದಲ್ಲಿ ಹಾಡುವ ವಿದಾಯ ಗೀತೆಯೆಂತಲೇ ಜನಜನಿತವಾಗಿತ್ತು. ಜೋಳದರಾಶಿ ಗೌಡರು ತೆಲುಗಿನಲ್ಲಿಯೂ ಪಾಂಡಿತ್ಯವುಳ್ಳವರಾಗಿದ್ದರು. ದೊಡ್ಡನಗೌಡರ ಇದೇ ವಿದಾಯಗೀತೆಯನ್ನು ಏಣಗಿ ಬಾಳಪ್ಪನವರು ತಮ್ಮ ನಾಟಕದ ಮಂಗಲ ಸಂದರ್ಭವೂ ಸೇರಿದಂತೆ ಅವರ ಅನುಭವಜನ್ಯ ಸುದೀರ್ಘ ಭಾಷಣದ ಮುಕ್ತಾಯ ಸಂದರ್ಭದಲ್ಲಿಯೂ ಹಾಡುತ್ತಿದ್ದರು.

ಕನ್ನಡ ಸಂಸ್ಕೃತಿ ಚರಿತ್ರೆಯಲ್ಲಿ ಇಬ್ಬರು ಬಾಳಪ್ಪರ ಹೆಸರು ಅಜರಾಮರ. ಇಬ್ಬರೂ ಬೆಳಗಾವಿ ಜಿಲ್ಲೆಯವರೆಂಬುದು ಅಭೂತಪೂರ್ವ ಮತ್ತು ಹೆಮ್ಮೆಯ ವಿಷಯ. ಒಬ್ಬರು ಕನ್ನಡ ರಂಗಭೂಮಿಯ ಅಮೋಘ ಸಂಸ್ಕೃತಿಯನ್ನು ಬಾಳಿ ಬದುಕಿದ ಏಣಗಿ ಬಾಳಪ್ಪ. ಮತ್ತೊಬ್ಬರು ಜನಪದ ಸಂಗೀತ ಲೋಕದ ''ಸ್ಟಾರ್ ಸಿಂಗರ್ '' ಸಾವಿರ ಹಾಡಿನ ಸರದಾರ ಎಂದೇ ಖ್ಯಾತರಾದ ಹುಕ್ಕೇರಿ ಬಾಳಪ್ಪ. ಇಬ್ಬರೂ ಬಾಳಪ್ಪನವರು ಹತತ್ರ ಶತಮಾನದಷ್ಟು ಕಾಲ ಅಪ್ಪಟ ಜನಸಂಸ್ಕೃತಿಯನ್ನೇ ನಾಡಿನುದ್ದಗಲಕ್ಕು ಮೆರೆದವರು. ಅಂತೆಯೇ ಅವರಿಬ್ಬರೂ ಅಮರರು. ಹಾಗೆಯೇ ಅದೇ ಜಿಲ್ಲೆಯ ಅಮಟೂರು ಬಾಳಪ್ಪ ಕೂಡಾ ಅಜರಾಮರರು.

ಏಣಗಿ ಬಾಳಪ್ಪನವರ ಹೆಸರಿನ ಉಲ್ಲೇಖವಿಲ್ಲದೇ ಕನ್ನಡ ರಂಗಭೂಮಿಯ ಚರಿತ್ರೆ ಖಂಡಿತಾ ಪರಿಪೂರ್ಣವೆನಿಸದು. ಅವರನ್ನು ವೃತ್ತಿ ರಂಗಭೂಮಿಗೆ ಸೀಮಿತಗೊಳಿಸಿ ನೋಡಲಾಗದು. ಅವರು ಸಮಗ್ರ ಕನ್ನಡ ರಂಗಸಂಸ್ಕೃತಿಯ ಸಿರಿಚೈತನ್ಯ. ಅಲ್ಲದೇ ಅವರು ‌ರಂಗಭೂಮಿಗೆ ಮಾತ್ರ ಮೀಸಲಾಗಿರದೇ ಕನ್ನಡದ ಒಟ್ಟು ಬದುಕಿನ ಅನನ್ಯತೆಗಳನ್ನು ಹಾಳತವಾಗಿ ಬಾಳಿ ಬದುಕಿದವರು. ಹಾಗಂತ ಅವರನ್ನು ರಂಗಭೂಮಿಯ ಕ್ಯಾನ್ವಾಸ್ ಹೊರಗೆ ನಿಲ್ಲಿಸಿ ನೋಡಲು ಸಾಧ್ಯವಿಲ್ಲ. ಏಕೆಂದರೆ ರಂಗಭೂಮಿಯೇ ಅವರ ಪ್ರಾಣದ ಉಸಿರು. ಅಭಿಜಾತ ರಂಗಸಂಸ್ಕೃತಿ ಮತ್ತು ಬಾಳಪ್ಪ ಎರಡೂ ಬೇರ್ಪಡಿಸಲಾಗದಷ್ಟು ಗಾಢವಾಗಿ ಬೆಸೆದುಕೊಂಡ ಒಂದು ವಿಭಿನ್ನ ವ್ಯಕ್ತಿತ್ವವೇ ಏಣಗಿ ಬಾಳಪ್ಪ.

ಅದು ಅತ್ಯಪರೂಪದ ಸಂಸ್ಕೃತಿಯೇ ಹೌದು. ಹೀಗೆ ವ್ಯಕ್ತಿಯೊಬ್ಬರು ಸಂಸ್ಕೃತಿಯಾಗಿ ರೂಪುಗೊಳ್ಳುವುದು ಕಾಲಮಾನವೊಂದರ ದಾಖಲೆಯೇ ಹೌದು. ರಂಗಭೂಮಿಯಂತಹ ಸಮೂಹಪ್ರಜ್ಞೆಯ ಕಲೆಯೊಂದು ವ್ಯಕ್ತಿಯೊಬ್ಬನಲ್ಲಿ ಆವಿರ್ಭವಿಸಿದ ಸಂಕೀರ್ಣಶಕ್ತಿ ಪ್ರಕ್ರಿಯೆಯೇ ಬಾಳಪ್ಪ. ಹಾಗೆ ನೋಡಿದರೆ ಬಾಳಪ್ಪ ಕಂಪನಿ ನಾಟಕಗಳ ಪರಂಪರೆಯಿಂದ ಬಂದವರು. ಆದರೆ ಅವರು ಸಂಪಾದಿಸಿದ ರಂಗಜ್ಞಾನ ಮಾತ್ರ ಸಮಗ್ರ ರಂಗಸಂಸ್ಕೃತಿಯ ಚೈತನ್ಯ ಶೃಂಗ. ಅಷ್ಟೇಯಾಕೆ ಚಲನಚಿತ್ರ ಕುರಿತಾಗಿಯೂ ಅವರ ಜ್ಞಾನ ಕ್ಷಿತಿಜದ ವಿಸ್ತರಣೆ. ಜನುಮದ ಜೋಡಿ ಸಿನೆಮಾ ಸೇರಿದಂತೆ ಕೆಲವು ಚಿತ್ರಗಳಲ್ಲಿ ಪ್ರಮುಖ ಅವಕಾಶ ಅವರದು. ಪ್ರಯೋಗ ಶೀಲತೆಯ ಆಧುನಿಕ ರಂಗಭೂಮಿ ಮತ್ತು ಕಂಪನಿ ನಾಟಕಗಳ ವೃತ್ತಿ ರಂಗಭೂಮಿ ಕುರಿತಾದ ಅವರ ವಿಶ್ಲೇಷಣೆ ಅತ್ಯಂತ ಸರಳ-ಸುಂದರ ಮತ್ತು ಸಂವೇದನಾಶೀಲ.

ವೃತ್ತಿ ನಾಟಕಗಳು ಸಾಮಾನ್ಯ ಜನರ ಹೃದಯಕ್ಕ ಮುಟ್ತಾವ. ವೈಚಾರಿಕತೆ ಹೆಸರಿನ ಆಧುನಿಕ ನಾಟಕಗಳು ಶ್ಯಾಣೇ ಮಂದಿಯ ಬುದ್ಧಿಗೆ ತಟ್ತಾವ. ಅವರ ಈ ವಿಶ್ಲೇಷಣೆಯಲ್ಲಿ ಪ್ರಜಾಸತ್ತಾತ್ಮಕ ಬಾಹುಳ್ಯದ ಲೋಕಮಾನಸ ಸೂಕ್ಷ್ಮತೆಯ ಸಂವೇದನೆಗಳಿವೆ. ದೇಶಿ ಮತ್ತು ಮಾರ್ಗದ ನೆಲೆಯ ತಾರ್ಕಿಕ ಜ್ಞಾನ ಶಿಸ್ತುಗಳಿವೆ. ಪ್ರಾಯಶಃ ಇವರಷ್ಟು ಖಚಿತವಾಗಿ ಯಾವೊಬ್ಬ ರಂಗ ಮೀಮಾಂಸಕನು ಹೇಳಿರಲಾರ. ಮನುಷ್ಯನ ಹೃದಯ ಮತ್ತು ಮಿದುಳಿನ ಜೀವಸ್ಪಂದನಗಳನ್ನು ಇಷ್ಟೊಂದು ಸರಳವಾಗಿ ಹೇಳಲು ಸಾಧ್ಯವಾಗಿಲ್ಲ. ಹೌದು ಬಾಳಪ್ಪ ಪಂಡಿತ ಪಾಮರ ಎರಡೂ ವರ್ಗಗಳ ರಂಗಾಭಿರುಚಿ ಬದುಕಿನ ಪ್ರತಿನಿಧಿ. ಅದು ಹೃದಯಸ್ಪರ್ಶಿ ಮತ್ತು ತಲಸ್ಪರ್ಶಿ ಮಾನದಂಡಗಳ ಮಾಸ್ & ಕ್ಲಾಸಿಕ್ ಅನುಸಂಧಾನ. ಎಲ್ಲಕಾಲಕ್ಕೂ ಲೋಕಮಾನಸದ ಪಾರಮ್ಯಕ್ಕೆ ಗೆಲುವು. ಈ ಕಾಲಘಟ್ಟದಲ್ಲಿ ಕೇಳಿ ಬರುತ್ತಿರುವ ಪ್ರಯೋಗಶೀಲ ರಂಗಭೂಮಿಯ ಪ್ರಕಾಂಡ ಪಂಡಿತ ರಂಗಕರ್ಮಿಗಳ "ನವ ವೃತ್ತಿ ರಂಗಭೂಮಿ" ಎಂಬ ವಿನೂತನ ಸಂಶೋಧನೆಗಳಿಗೆ ಬಾಳಪ್ಪನವರು ಇದ್ದಿದ್ರೇ ಯಾವರೀತಿ ಪ್ರತಿಕ್ರಿಯಿಸುತ್ತಿದ್ದರೆಂಬ ಕೌತುಕ ನನ್ನದು.

ಮೂರು ವರ್ಷದ ಮಗುವಿದ್ದಾಗ ಅಪ್ಪನನ್ನು, ಹದಿಮೂರು ವರ್ಷದವನಾದಾಗ ಬಾಲಕ ಬಾಳಪ್ಪ ಅಕ್ಕ ಮತ್ತು ಅಣ್ಣನನ್ನು ಕಳಕೊಳ್ಳುತ್ತಾರೆ. ಇಂತಹ ಅನಾಥಪ್ರಜ್ಞೆಯ ನರಳಾಟದ ನಡುವೆ ಅವ್ವ ಬಾಳವ್ವನ ಅಂತಃಕರಣದಲ್ಲಿ ಅರಳಿದ್ದು ಬಾಲಕ ಬಾಳಪ್ಪನ ಬಾಲ್ಯ. ತಾಯಿ ಬಾಳವ್ವ ಮಗ ಬಾಳಪ್ಪ ಇಬ್ಬರ ತಬ್ಬಲಿತನದ ಬಾಳು ಸಂಕಟದಿಂದ ಕೂಡಿತ್ತು. ಬಾಳಾ ನೀನು ಬದುಕಲೇ ಬೇಕೆಂಬುದು ಹೆತ್ತ ಕರುಳಿನ ಅಹವಾಲು. ಸಹಜವಾಗಿ ಅದು ಸವಾಲಿನ ಬಾಲ್ಯವೇ ಆಗಿತ್ತು.

ಏಕೆಂದರೆ ಅಂದು ಬಾಳಪ್ಪಗೆ ಉಂಡುಡಲು ಯಥೇಚ್ಛವಾಗಿದ್ದುದು ಭಯಂಕರ ಬಡತನ ಮತ್ತು ಬಡತನ. ಅದು ಅಂತಿಂಥ ಬಡತನವಲ್ಲ, ಎರಡು ಹೊತ್ತಿನ ಗಂಜಿಗೂ ಗತಿಯಿಲ್ಲದ ಕ್ರೂರ ಬಡತನ. ಅದೆಷ್ಟೋ ಬಾರಿ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ಟಿಕೊಂಡು ಮಲಗಿದ್ದುಂಟು. ಅವ್ವ ಬಾಳವ್ವ ಹೊಲಗಳಲ್ಲಿ ಕೂಲಿನಾಲಿ ಮಾಡಿ ಬಾಳಪ್ಪನನ್ನು ಬದುಕಿಸಿಕೊಂಡಳು. ಕರುಳು ಚುರುಕೆನ್ನುವ ಕಡು ಬಡತನದ ಕುಲುಮೆಯಲ್ಲಿ ರೂಪು ತಳೆದ ಬಾಳಪ್ಪ ಬಡತನದಿಂದ ಕಲಿತ ಪಾಠವೇ ಮುಂದಿನ ಸುಂದರ ಬದುಕಿನ ರಂಗಭಾಗ್ಯ.

ಊರಿನ ಪರಿಸರ ಅವರ ರಂಗ ಬದುಕಿಗೆ ಪೂರಕವಾಗಿತ್ತು. ಬಯಲಾಟದ ಪಾತ್ರಗಳ ಅವಕಾಶ ಅವರಲ್ಲಿ ಸ್ಟೇಜ್ ಫಿಯರ್ ಬಯಲು ಮಾಡಿತು. ಚಿಕ್ಕೋಡಿ ಶಿವಲಿಂಗ ಸ್ವಾಮಿಗಳ ರಂಗಕೃಪೆಯಿಂದ ಅವರ ರಂಗ ಜೀವನಕ್ಕೆ ಮಹತ್ವದ ತಿರುವು ದೊರಕಿತು. ಶಿವಲಿಂಗ ಮಹಾಸ್ವಾಮಿಗಳ ಗುರು ಕರುಣೆಯೇ ಬಾಳಪ್ಪನವರ ರಂಗಬಾಳಿಗೆ ಹೊಸ ಮನ್ವಂತರದ ಗಾಳಿ ಬೀಸಿತೆನ್ನಬಹುದು. ಅಭಿನಯ, ರಂಗಸಂಗೀತ, ಮಾಲೀಕತ್ವದ ವ್ಯವಹಾರ ಜ್ಞಾನ ಸಮಗ್ರ ರಂಗಸಂಸ್ಕೃತಿಗೆ ಬುನಾದಿ ಹಾಕಿದಂತಾಯಿತು. ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ವೃತ್ತಿಪರ ರಂಗಸಂಸ್ಕೃತಿಯ ಅಪಾರ ಅನುಭವಿಗಳು.

ಕನ್ನಡ ರಂಗಭೂಮಿಗೆ ಅಜಮಾಸು ನೂರೈವತ್ತು ವರ್ಷಗಳ ರಂಗೇತಿಹಾಸವಿದೆ. ನೂರಾ ಮೂರು ವರ್ಷಗಳ ಕಾಲ (05-01-1914- 18-08-2017) ಬದುಕಿದ ಏಣಗಿ ಬಾಳಪ್ಪ ಕಡೆಯ ಎಂಟ್ಹತ್ತು ವರ್ಷಗಳ ಕಾಲ ಬಿಟ್ಟರೆ ಹತತ್ರ ಒಂದು ಶತಮಾನ ಕಾಲ ಕನ್ನಡ ರಂಗಭೂಮಿಯ ನಡೆದಾಡುವ ವಿಶ್ವಕೋಶವಾಗಿ ಬಾಳಿ ಬದುಕಿದವರು ಬಾಳಪ್ಪ. ಇಷ್ಟು ಸುದೀರ್ಘ ಕಾಲ ಬದುಕಿದ ರಂಗಚೇತನ ಕನ್ನಡ ನಾಡಿನಲ್ಲಿ ಇನ್ನೊಬ್ಬರಿಲ್ಲ.

ಆರಂಭಿಕ ವರ್ಷಗಳಲ್ಲಿ ಬಾಳಪ್ಪ ಸ್ತ್ರೀ ಪಾತ್ರಗಳನ್ನು ಮಾಡುವ ಮೂಲಕ ಹೆಸರು ಮಾಡಿದರು. ಕಿತ್ತೂರು ರುದ್ರಮ್ಮ, ಹೇಮರೆಡ್ಡಿ ಮಲ್ಲಮ್ಮ ಪಾತ್ರಗಳು ಅವರಿಗೆ ತಾರಾ ವರ್ಚಸ್ಸು ತಂದುಕೊಟ್ಟವು. ಅವರು ಮದುವೆಯಾದ ಹೊಸತರಲ್ಲೂ ನಿಸ್ಸಂಕೋಚವಾಗಿ ಹೆಣ್ಣುಪಾತ್ರ ಅಭಿನಯಕ್ಕೆ ಹೆಸರುವಾಸಿ ಆಗಿದ್ದರು. ರಾಮಾಯಣ ಮಹಾಭಾರತಗಳ ಮಹತ್ವದ ರಾಮ ಮತ್ತು ಕೃಷ್ಣನ ನಾಯಕನಟ ಪಾತ್ರಗಳಲ್ಲಿ ಅವರದು ಸ್ಟಾರ್ ಅಭಿನಯ. ವಿಶೇಷವಾಗಿ ಜಗಜ್ಯೋತಿ ಬಸವೇಶ್ವರ ನಾಟಕದ ಹೀರೋ ಬಸವಣ್ಣನ ಪಾತ್ರ ಅವರಿಗೆ ರಾಷ್ಟ್ರೀಯ ಮಟ್ಟದ ಖ್ಯಾತಿ ತಂದುಕೊಟ್ಟಿತು.

ಅವರ ಬಸವಣ್ಣ ಪಾತ್ರ ಅದೆಷ್ಟು ಜನಪ್ರಿಯವಾಗಿತ್ತೆಂದರೆ ಆ ಪಾತ್ರ ಪರಿಣಾಮದ ಘಟನೆಯೊಂದರಿಂದ ಜೀವನ ಪರ್ಯಂತ ಬಾಳಪ್ಪ ಚಹ ಕುಡಿಯುವುದನ್ನೇ ಬಿಟ್ಟರು. ಅಷ್ಟಕ್ಕೂ ಅವರಿಗಿದ್ದುದೇ ಅದೊಂದೇ ಹವ್ಯಾಸ. ಸಾಕ್ಷಾತ್ ಬಸವಣ್ಣನನ್ನು ಆವಾಹಿಸಿಕೊಂಡು ಪಾತ್ರವನ್ನೇ ಬದುಕುತ್ತಿದ್ದರು. ಅವರ ಬಸವಣ್ಣನ ಪಾತ್ರದ ಪ್ರಭಾವಕ್ಕೊಳಗಾಗಿ ರಂಗಸಜ್ಜಿಕೆ ಏರಿ ಬಸವಣ್ಣ ಬಾಳಪ್ಪನ ಪಾದಕ್ಕೆ ಸಾಷ್ಟಾಂಗ ಸಲ್ಲಿಸಿದವರುಂಟು. ಅಂತಹ ಬಸವಣ್ಣನ ಪ್ರಭಾವದ ಕೆಲವು ಅಭಿಮಾನಿ ಪ್ರೇಕ್ಷಕರು ಚಹದ ಅಂಗಡಿಯೊಂದರಲ್ಲಿ ಬಾಳಪ್ಪ ಚಹ ಕುಡಿಯುವುದನ್ನು ಕಂಡು " ಅಯ್ಯೋ ಬಸವಣ್ಣ ನಮ್ಮಂತಹ ಹುಲು ಮಾನವರಂತೆ ಚಹ ಕುಡಿಯುತ್ತಿದ್ದಾನೆಂದು" ಆಡಿಕೊಳ್ಳುತ್ತಾರೆ. ಅವರ ಮಾತುಗಳು ಬಾಳಪ್ಪನವರ ಕಿವಿಗೆ ಬೀಳುತ್ತವೆ. ಆ ಕ್ಷಣದಲ್ಲೇ ಚಹ ಕುಡಿಯ ಬಾರದೆಂಬ ಬಾಳಪ್ಪ ಸಂಕಲ್ಪ ಮಾಡುತ್ತಾರೆ. ಅದನ್ನು ತಮ್ಮ ಉಸಿರಿನ ಕಟ್ಟಕಡೆಯ ಗಳಿಗೆವರೆಗೂ ಪಾಲಿಸುತ್ತಾರೆ.

ಅಭಿನಯದ ಅನನ್ಯತೆಯ ಜತೆಯಲ್ಲಿ ಬಾಳಪ್ಪ ರಂಗಗೀತೆಗಳ ಅಮೋಘ ಗಾಯಕ. ಅಷ್ಟೇನು ಎತ್ತರದ ಶರೀರ ಅವರದಲ್ಲ.‌ ಆದರೆ ಶಾರೀರದ ಎತ್ತರ ಭಿತ್ತರ ಅಳತೆಗೆ ನಿಲುಕದ್ದು. ಅವರ ಶಾಸ್ತ್ರೀಯ ಸಂಗೀತ ಜ್ಞಾನವು ಅಷ್ಟೇ ಎತ್ತರದ್ದು. ಹಿಂದಿ ಚಿತ್ರಗೀತೆಗಳ ಮಹಾನ್ ತಾರೆ ಲತಾ ಮಂಗೇಶ್ಕರ್ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಬಾಳಪ್ಪನವರ ಹಾಡುಗಾರಿಕೆಗೆ ಮನಸೋತು ಅವರನ್ನು ಹಿಂದಿ ಸಿನೆಮಾ ಲೋಕಕ್ಕೆ ಆಹ್ವಾನಿಸುತ್ತಾರೆ. ಹೀಗೆ ಅವರಿಗೆ ಮರಾಠಿ ರಂಗಭೂಮಿಯ ಹೆಸರಾಂತರನೇಕರ ದಿವಿನಾದ ಒಡನಾಟವಿತ್ತು.

ಬಾಳಪ್ಪನವರ ಸಾಂಸ್ಕೃತಿಕ ಸ್ನೇಹದ ಸಾಹಚರ್ಯ ಮಹೋನ್ನತವಾದುದು. ವರನಟ ಡಾ. ರಾಜಕುಮಾರ್ ಅವರಿಗೆ ಬಾಳಪ್ಪನವರ ಕುರಿತು ಅಪಾರ ಗೌರವ. ಜಿ.ವಿ.ಅಯ್ಯರ್, ಗುಬ್ಬಿ ವೀರಣ್ಣ, ವರದಾಚಾರ್, ಗರುಡ ಸದಾಶಿವರಾಯ, ಸುಬ್ಬಯ್ಯ ನಾಯ್ಡು. ಸಾಹಿತ್ಯ ಕ್ಷೇತ್ರದಲ್ಲಿ ರಂ. ಶ್ರೀ. ಮುಗಳಿ, ಕಾವ್ಯಾನಂದ, ಬೇಂದ್ರೆ, ಕುವೆಂಪು, ಅನಕೃ, ಎಂ. ಎಂ. ಕಲಬುರ್ಗಿ, ಪಾಟೀಲ ಪುಟ್ಟಪ್ಪ, ಚಂಪಾ ಇನ್ನೂ ಅನೇಕರು. ಸಂಗೀತ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಮನ್ಸೂರ, ಸಿದ್ಧರಾಮ ಜಂಬಲದಿನ್ನಿ ಲೆವೆಲ್ಲು. ರಾಜಕಾರಣದಲ್ಲಿ ಎಸ್. ನಿಜಲಿಂಗಪ್ಪನವರ ಸರೀಕರಷ್ಟು ಎತ್ತರದು.

ಹೀಗೆ ಅವರದು ಅಕ್ಷರಶಃ ಘನ ಗಂಭೀರದ ಮೇರುವ್ಯಕ್ತಿತ್ವ. ಬಾಳಪ್ಪನವರ ಭಾಷಣಗಳೆಂದರೆ ಚಿಂತನಶೀಲ ಸಂಸ್ಕೃತಿಯ ಅನುಭವ ದಾಸೋಹದ ಮಹಾಪ್ರಸಾದ. ಅದು ಕೇವಲ ರಂಗಭೂಮಿ ಕೇಂದ್ರಿತವಾಗಿರದೇ ಕನ್ನಡದ ಸಮಗ್ರ ಸಂಸ್ಕೃತಿಯ ಬೇರು ಮತ್ತು ಹರವಿನ ಅಂಶಗಳ ಮೇಲೆ ಬೆಳಕು ಚೆಲ್ಲುವಂತಿರ್ತಿತ್ತು. ನಾವು ಅನೇಕರು ಗಾಂಧೀವಾದ ಕುರಿತು ಕುಳುಬಾನ ಒಟ್ಟಿದಂತೆ ಪುಸ್ತಕಗಳನ್ನು ಬರೆದು ಭಾಷಣಗಳ ಹೊಳೆಗಳನ್ನೇ ಹರಿಸುತ್ತೇವೆ. ಎಳ್ಳರ್ಧ ಕಾಳಿನಷ್ಟು ಗಾಂಧೀತ್ವ ಬದುಕಿರುವುದಿಲ್ಲ. ಏಣಗಿಯವರದು ದಿನಕ್ಕೊಂದೇ ಊಟ. ಅದೂ ಶುದ್ಧ ಶಾಖಾಹಾರದ ಲಘು ಊಟ. ಬಾಳಪ್ಪ ಜೀವನ ಪರ್ಯಂತ ಬಿಳಿಖಾದಿಯನ್ನೇ ಧರಿಸಿದರು. ತನ್ಮೂಲಕ ಗಾಂಧೀವಾದ ಬದುಕಿದರು. ಅಂತಹ ಬೆಳ್ಳನೆಯ ಹಸನು ಬಾಳನ್ನೇ ಬದುಕಿದರು. ಕನ್ನಡ ಸಂಸ್ಕೃತಿಯ ಹಲವು ಆಯಾಮಗಳನ್ನು ತೀವ್ರವಾಗಿ ಬದುಕಿದ ಬಾಳಪ್ಪ ಕನ್ನಡ ಸಂಸ್ಕೃತಿಯ ಕಾರಣ ಪುರುಷ. ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಕರ್ನಾಟಕ ಸರಕಾರ ಕೊಡಮಾಡುವ ರಂಗಭೂಮಿ ಕ್ಷೇತ್ರದ ಅತ್ಯುನ್ನತ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾದ ಮೊದಲಿಗರು.

ಆದರೆ ಪದ್ಮಪ್ರಶಸ್ತಿ ಇವರ ಬಳಿಗೆ ಬರಲಿಲ್ಲ. ಅವರು ಯಾವತ್ತೂ ಲಾಬಿ ಮಾಡಿ ಏನನ್ನೂ ಪಡೆದವರಲ್ಲ. ಬಾಳಪ್ಪನವರ ಹೆಸರಿನಲ್ಲಿ ಅವರ ಮಕ್ಕಳು ಪ್ರತಿವರ್ಷದ ವಿಶ್ವರಂಗಭೂಮಿ ದಿನಾಚರಣೆಯಂದು ಪ್ರಶಸ್ತಿ ನೀಡುವ ಮೂಲಕ ಅವರ ಹೆಸರು ಅಮರಗೊಳಿಸಿದ್ದಾರೆ. ಮೊನ್ನೆ ಮಾರ್ಚ್ 27ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಏಣಗಿ ಬಾಳಪ್ಪ ಪ್ರತಿಷ್ಠಾನದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಅತ್ಯಂತ ಅಚ್ಚುಕಟ್ಟಾಗಿ ಜರುಗಿತು. ರಂಗಭೂಮಿಯ ವಿಶ್ವವಿದ್ಯಾಲಯವೇ ಆಗಿದ್ದ ಶ್ರೀ ಶಾರದಾ ಸಂಗೀತ ನಾಟಕ ಮಂಡಳಿಯ ಗೋಕಾಕ ಬಸವಣ್ಣೆಪ್ಪನವರ ಸುಪುತ್ರ ಗೋಕಾಕ ಜಯರಾಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನನಗೆ ಅವತ್ತಿನ ಕಾರ್ಯಕ್ರಮದ ಮುಖ್ಯಅತಿಥಿ ಭಾಗ್ಯ.

ಏಣಗಿ ಬಾಳಪ್ಪ ಅವರ ಕುಟುಂಬದ ಸದಸ್ಯರು ಕಳೆದ ಮೂರು ವರ್ಷಗಳಿಂದ ಬಾಳಪ್ಪ ಅವರ ಹೆಸರಲ್ಲಿ ಪ್ರಶಸ್ತಿ ನೀಡುವ ರಂಗ ಕೈಂಕರ್ಯಕ್ಕೆ ತೊಡಗಿದ್ದಾರೆ. ಅಂದು ಬಾಳಪ್ಪ ಬಾಳಿ ಬದುಕಿದ ರಂಗಸಂಸ್ಕೃತಿಯ ನೆನಪುಗಳ ಅನಾವರಣ. ಬಾಳಪ್ಪನವರ ರಂಗಸಂಸ್ಕೃತಿ ಸಾಧನೆ ಕುರಿತು ಆಳದ ಅಧ್ಯಯನ, ನಿಕಟವಾದ ಪ್ರೀತಿಯುಳ್ಳ ಡಾ. ಬಸವರಾಜ ಜಗಜಂಪಿ, ಡಾ. ಬಿ. ಎಸ್. ಗವಿಮಠ, ಡಾ. ರಾಮಕೃಷ್ಣ ಮರಾಠೆ ಇನ್ನೂ ಅನೇಕರು ಸೇರಿದ್ದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಬಾಳಪ್ಪ ಅವರು ಕಾಲವಾಗಿ ನಾಲ್ಕು ವರ್ಷಗಳೇ ಗತಿಸಿದವು. ಬಾಳಪ್ಪನವರ ರಂಗಸಾಧನೆ ಕುರಿತು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಸರಕಾರಕ್ಕೆ ಪರಿಚಯ ಇಲ್ಲವೆಂದೇನಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಏಣಗಿ ಬಾಳಪ್ಪನವರ ಕುರಿತು ಅವರ ಅನನ್ಯ ಸಾಧನೆಗಳ ಕುರಿತು ದಟ್ಟ ಪರಿಚಯವಿದೆ. ಹೀಗಿರುವಾಗ ಏಣಗಿ ಬಾಳಪ್ಪ ಪ್ರತಿಷ್ಠಾನ ಸ್ಥಾಪನೆಗೆ ವಿಳಂಬವಾಗುತ್ತಿರುವ ಕಾರಣ ತಿಳಿದಿಲ್ಲ. ಬಾಳಪ್ಪ ಕುಟುಂಬದ ಸದಸ್ಯರು ಏರ್ಪಡಿಸಿದ ದತ್ತಿ ಉಪನ್ಯಾಸ, ರಂಗಗೌರವ ಕಾರ್ಯಕ್ರಮದಲ್ಲಿ ಶಾರದಾ ಸಂಗೀತ ನಾಟಕ ಮಂಡಳಿ ಸಾಧನೆಗಳ ಮೇಲೆ ಡಾ. ಮುರ್ತುಜಾ ಒಂಟಿ ಮಾತಿನ ಬೆಳಕು ಚೆಲ್ಲಿದರು. ಮಲ್ಲಿಕಾರ್ಜುನ ಕಡಕೋಳ ಏಣಗಿ ಬಾಳಪ್ಪ ಅವರ ಕುರಿತು ತಮ್ಮ ಅನುಭವ ಹಂಚಿಕೊಂಡರು. ಏಣಗಿ ಅವರು ತಮ್ಮ ಭಾಷಣದ ಕೊನೆಯಲ್ಲಿ ಹಾಡುತ್ತಿದ್ದ ಜೋಳದರಾಶಿ ದೊಡ್ಡನಗೌಡರು ರಚಿಸಿದ

*ಹೋಗಿ ಬರ್ತೇನ್ರಯ್ಯ ನಮ್ಮೂರಿಗೆ
ಎಲ್ಲರಿಗೂ ಶರಣಾರ್ಥಿ
ದಯತೋರಿ ಕಳುಹಿಸಿರಿ
ಎಷ್ಟೋ ಕಾಲದಿಂದ ಊರೂರು ತಿರುಗುತ
ನಿಮ್ಮೂರಿಗೆ ಬಂದೆ ಕಲಾವಿದನಾಗಿ
ಹಿಂದಿಲ್ಲ, ಮುಂದಿಲ್ಲ, ನಾ ತಂದದ್ದೇನಿಲ್ಲ
ಎಲ್ಲ ನೀವೇ ನೀಡಿ ನೆರವಾದಿರಿ ಎನಗೆ.
ತಂದೆ, ತಾಯಿ ಅಣ್ಣ ತಮ್ಮಂದಿರಾಗುತ
ಅಕ್ಕ ತಂಗಿಯರಾಗುತ
ಹಾಲು ಸಕ್ಕರೆ ತುಪ್ಪವ ಇಕ್ಕಿ ಸಲುಹಿದಿರಿ
ಹೆಂಡತಿ, ಮಕ್ಕಳ ಸಂಸಾರ ಬೆಳೆಸಿದಿರಿ
ಮಮಕಾರವಿದ್ದರೇನು ಬಿಟ್ಟು
ಹೋಗಲೇಬೇಕು.

ನಾ ವಾಸವಾಗಿದ್ದ ಮನೆಯು
ಹಳೆಯದಾಯಿತು
ಇದ್ದಷ್ಟು ಕಾಲ ಸಂಸಾರಕ್ಕೆ ನೆರವಾಯಿತು.
ಬಿಟ್ಟು ಹೋಗುವುದೆಲ್ಲ, ನಾ ತಂದದ್ದೇನಲ್ಲ
ನೀವಿತ್ತುದನ್ನೆಲ್ಲ ನಿಮಗೊಪ್ಪಿಸುವೆನಯ್ಯ

ಬದುಕಿದ್ದ ಕಾಲದಲ್ಲಿ ಏನೇನೋ ಮಾಡಿದೆ
ತಪ್ಪೇನೋ ಒಪ್ಪೇನೋ ಒಪ್ಪಿಸಿಕೊಳ್ಳಿರಯ್ಯ
ಹೋಗೆಂದ ದೇವನು, ಬಾ ಎಂದು ಕರೆವನು
ಎಲ್ಲರಿಗೂ ಶರಣು ಶರಣಾರ್ಥಿಗಳು*

ಜೋಳದರಾಶಿ ದೊಡ್ಡನಗೌಡರ ವಿದಾಯಸ್ವರದ ಈ ಮಂಗಲಗೀತೆ ಏಣಗಿ ಬಾಳಪ್ಪನವರ ಪ್ರೀತಿಯ ವಿದಾಯಗೀತೆಯೂ ಆಗಿತ್ತು.

*ಮಲ್ಲಿಕಾರ್ಜುನ ಕಡಕೋಳ*
9341010712

ಈ ಅಂಕಣದ ಹಿಂದಿನ ಬರಹಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...