ಹೋರಾಟಕ್ಕೆ ನಿರಂತರತೆಯ ಸ್ಪರ್ಶ ನೀಡುವ ಸಾರ್ಥಕ ಪ್ರಯತ್ನ-ಚಂದ್ರಶಿಕಾರಿ


ಹೋರಾಟ-ಸಾಹಿತ್ಯ-ಒಡನಾಟ-ಪ್ರೇರಣೆ-ಪ್ರೋತ್ಸಾಹ-ಹೀಗೆ ವೈವಿಧ್ಯಮಯ ಬರಹಗಳ ಮೂಲಕ ನೈಜ ಹೋರಾಟಗಾರ ತೋರಣಘಟ್ಟ ಚಂದ್ರಶೇಖರರನ್ನು ಜೀವಂತವಾಗಿಡುವ ಒಡನಾಡಿಗಳ ಪ್ರಯತ್ನದ ಒಟ್ಟು ಪರಿಣಾಮ- ‘ಚಂದ್ರಶಿಕಾರಿ’. ಹೋರಾಟಕ್ಕೆ ನಿರಂತರತೆಯ ಸ್ಪರ್ಶ ನೀಡುವ ಸಾರ್ಥಕ ಪ್ರಯತ್ನ ಎಂದು ಕೃತಿಯ ಕುರಿತು ಪತ್ರಕರ್ತ ವೆಂಕಟೇಶ ಮಾನು ಅವರ ಅಭಿಪ್ರಾಯವಿದು. 

ತೋರಣಘಟ್ಟ ಚಂದ್ರಶೇಖರ ಅವರ ಅಕಾಲಿಕ ಮರಣ; ಸಂಗಾತಿ ಹಾಗೂ ಒಡನಾಡಿಗಳಿಂದ ಮರು ಜೀವದೊಂದಿಗೆ ರೂಪು ಪಡೆದಿದ್ದೇ-ವಿಪ್ಲವ ಪ್ರಕಾಶನದ -ಚಂದ್ರಶಿಕಾರಿ. ‘ಸಾವನ್ನೇ ಶಿಕಾರಿ’ ಯಾಗಿಸಿದ್ದ ಎಂಬ ಅಭಿಮಾನ-ಭಾವ ಹೆಪ್ಪುಗಟ್ಟಿದ ಕೃತಿ- ಚಂದ್ರಶಿಕಾರಿ. ಹೋರಾಟದ ಜೀವಂತಿಕೆಗೆ ನಿರಂತರತೆಯ ಸ್ಪರ್ಶ ನೀಡುವ ಆತ್ಮಕಥನ ಹಾಗೂ  ಉತ್ತಮ ಸಾಹಿತ್ಯವಾಗಿಯೂ ಗಮನ ಸೆಳೆಯುವ ಕೃತಿ-ಚಂದ್ರಶಿಕಾರಿ. 

ಹೋರಾಟ-ದೈಹಿಕ ಅನಾರೋಗ್ಯ-ತತ್ತರಿಸುವ ಮನೋಸ್ಥೈರ್ಯ-ಆರ್ಥಿಕ ಸಂಕಷ್ಟಗಳು, ನಿರ್ವಹಿಸಲಾಗದೇ ಹೋಗುವ ಕೌಟುಂಬಿಕ ಹೊಣೆಗಾರಿಕೆಯ ನೋವು- ಎಲ್ಲವು ಏಕಕಾಲಕ್ಕೆ ಎದುರಿಸುವ ಅನಿವಾರ್ಯತೆ, ‘ಯಾಕಪ್ಪ ಬೇಕು’ ಎನಿಸಿದರೂ, ಉಸಿರು ಅನಿವಾರ್ಯ ಎಂಬಂತೆ ಬಿಡಲಾಗದ ಮನೋ-ದೈಹಿಕ ನಿಲುವು-ಸ್ವಭಾವಗಳ ಸ್ವರೂಪ ತೋರುವ-ಚಂದ್ರಶಿಕಾರಿ. 

ಕಷ್ಟವೋ, ಸುಖವೋ….! ಹೋರಾಟದ ಹಾದಿಯಲ್ಲಿ ಹೆಜ್ಜೆ ಹಾಕುವ ದಂಪತಿ…ಆ ಪೈಕಿ, ಇನ್ನಿಲ್ಲವಾದ ಮನೆಯ ಒಡೆಯ, ಪುಟ್ಟ ಮಗುವಿನೊಂದಿಗೆ ಕಲ್ಲುಮುಳ್ಳುಗಳ ಹಾದಿಯಲ್ಲಿ ಹೆಜ್ಜೆ ಹಾಕಿದ, ಅನಾಥ ಪ್ರಜ್ಞೆಯನ್ನೂ ಮೀರಿದ  ಸಂಗಾತಿಯೊಬ್ಬಳ ಮನೋಸ್ಥೈರ್ಯವೇ -ಚಂದ್ರಶಿಕಾರಿ.

ಅಕಾಲ ಮರಣಕ್ಕೆ ತುತ್ತಾದ ಪತಿಯ ಸಾಂಸಾರಿಕ ಸಂಬಂಧ, ಕುಟುಂಬ ನಿರ್ವಹಣೆ, ಹೋರಾಟದ ಆಶಯಗಳನ್ನು ದಾಖಲಿಸುತ್ತಾ ಸಾಗುವಾಗಿನ ಸಂದರ್ಭದಲ್ಲಿ, ಪತಿಯ ಒಡನಾಡಿ ಗೆಳೆಯರು ಸೇರಿಕೊಂಡು, ಸಲ್ಲಿಸಿರುವ ನಮನ ನುಡಿಗಳ, ಬರೆದ ಪತ್ರಗಳ, ಅನುವಾದಿಸಿದ ಕವಿತೆಗಳ, ಕೌಟುಂಬಿಕ ಸಂಬಂಧಗಳ ಬೆಸುಗೆಯ ಗಟ್ಟಿತನವೇ-ಚಂದ್ರಶಿಕಾರಿ. ‘ಚಳವಳಿಯ ಅಸಲಿ ಕಸಬುದಾರ’ ಎಂಬ ಉಪಶೀರ್ಷಿಕೆಯು ಕೃತಿಯ ಸ್ವರೂಪ-ಸ್ವಭಾವ ಹಾಗೂ ಓದಿಸಿಕೊಂಡು ಹೋಗುವ ವಿಷಯದ ದಿಕ್ಸೂಚಿಯಾಗಿದೆ. ಹೀಗೆ...ಹತ್ತು ಹಲವು ಆಯಾಮಗಳಲ್ಲಿ ತನ್ನ ಪರಿಣಾಮಕತೆಯ ಮುದ್ರೆಯನ್ನೊತ್ತುವ ‘ಚಂದ್ರಶಿಕಾರಿ’ ಜೀವನ ಪ್ರೀತಿಯ ಮೂಲಕವೇ ವೇದನೆ ಅನುಭವಿಸುವ, ‘ವಿಚಿತ್ರ ಆದರೂ ವಾಸ್ತವ’ ಎಂಬ ಬದುಕಿನ ವಿಪರ್ಯಾಸತೆಯನ್ನು ದರ್ಶಿಸುತ್ತದೆ.

‘ಹೋರಾಟ’ ಬದುಕಿನ ಅರ್ಥಪೂರ್ಣತೆ ….!

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ (ಮೂಲ ಸಿದ್ದರಹಳ್ಳಿ)  ತೋರಣಘಟ್ಟದ ಚಂದ್ರಶೇಖರ ಅವರು ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದವರು. ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಟಿನ್ ನಲ್ಲಿ ಚಹಾ ಕುಡಿಯುವುದರೊಂದಿಗೆ ಆರಂಭವಾದ ಸ್ನೇಹ, ದಿನಗಳದಂತೆ ಪ್ರೇಮಕ್ಕೆ ತಿರುಗಿ, ಕುಟುಂಬದ ವಿರೋಧದ ಮಧ್ಯೆ, ಇವರೊಂದಿಗೆ ಮದುವೆಯಾದ ಯಶೋಧ, ನಂತರ ಅನುಭವಿಸಿದ ನೋವು-ನಲಿವುಗಳು, ಆತ್ಮಕಥನ ರೂಪದಲ್ಲಿ(ಭಾಗ-2)  ಮೂಡಿಬಂದಿವೆ.  

ಮೊದಲ ಭೇಟಿ ಒಂದು ಕಪ್ ಕಾಫಿ, ಒಂದು ಡೈರಿ ಡಬ್ಲ್ಯು ಬಿ. ಯೇಟ್ಸ್ ನ ಕವನದ ನಾಲ್ಕು ಸಾಲು, ಸಿದ್ಧರಳ್ಳಿ ಎಂಬ ಕುಲುಮೆಯಲ್ಲಿ, ಹಳಿ ಹತ್ತಿದ ವೃತ್ತಿ ಬದುಕು, ಮುಳುಗಿದ ಟೈಟಾನಿಕ್, ಆತಂಕದ ದಿನಗಳು, ಕೊನೆಯ ಮಾತು ಕೊನೆಯ ಅಪ್ಪುಗೆ ಹೀಗೆ ಉಪ ಅಧ್ಯಾಯಗಳಡಿ, ( ಸುಮಾರು 40 ಪುಟ) ಚಂದ್ರಶೇಖರನೊಂದಿಗೆ ಕಳೆದ ಸಾಂಸಾರಿಕ ದಿನಗಳು, ಒಂದರ ಮೇಲೊಂದು ಎರಗಿದ  ಕಷ್ಟಗಳು, ಬೆನ್ನಿಗೆ ಆಳವಾದ ಗಾಯವಾಗಿ ಮಗ ವಿಪ್ಲವ್ ತೀರಿ ಹೋದ,  ಮಿದುಳು ಕ್ಯಾನ್ಸರ್ ಗೆ ಬಲಿಯಾಗಿ ಪತಿ ಚಂದ್ರಶೇಖರ ಸಹ ಸಾಯುತ್ತಾರೆ. ಹಕ್ಕಿಪಿಕ್ಕಿ ಸಮುದಾಯದ ಸಂಘಟನೆ ಸೇರಿದಂತೆ ಸಮಾಜದ ಎಲ್ಲ ಸ್ತರದ ಅನ್ಯಾಯಗಳ ವಿರುದ್ಧ ಹೋರಾಟ ಕಟ್ಟಿಕೊಂಡಿದ್ದ ಪತಿ, ಅವರ ಒಡನಾಡಿ ಗೆಳೆಯರು ನೀಡಿದ ಮನಸ್ಥೈರ್ಯ, ‘ನಿನ್ನ ಮಡಿಲಲ್ಲೇ ಸಾಯೋದು ಕಣೆ..! ಸಾವು ಬಂದರೂ ಯಶು ಬರುವವರೆಗೂ ಕಾಯು ಎಂದು ಹೇಳುತ್ತೇನೆ’ ಎಂಬ ಚಂದ್ರಶೇಖರ ಅವರ ಕೊನೆ ಮಾತು, ಪತ್ನಿ ಲೇಖಕಿಯ ಬದುಕಿಗೆ ಆಸರೆ-ಆಶಯ-ಭರವಸೆ ಎಲ್ಲವೂ ಆಗುವುದು -ಚಂದ್ರಶಿಕಾರಿ’. ಸಾವನ್ನು ಕ್ಷಣಕ್ಷಣಕ್ಕೂ ಅನುಭವಿಸಿ ಕೊನೆಗೆ, ಪತಿಯು ಶರಣಾದ ದಾರುಣ ಬದುಕನ್ನು ಚಿತ್ರಿಸುವ ಈ ಕೃತಿಯು, ‘ಹೋರಾಟದ ಮೂಲಕವೇ ಸಾವನ್ನೇ ಶಿಕಾರಿಯಾಡಿದ’ ಎಂಬರ್ಥದಲ್ಲಿ, ಬದುಕನ್ನು ಸವಾಲಾಗಿ ಸ್ವೀಕರಿಸುವ ನೆಲೆಯಲ್ಲಿ ಪತ್ನಿಯ ಸಂಕಲ್ಪ- ಮೌಲ್ಯದ ದರ್ಶನ ಮಾಡಿಸುತ್ತದೆ. ಪತಿಯ ಸಾಹಿತ್ಯಕ ಪ್ರೇಮ, ಅನುವಾದ -ಬರಹ-ಪತ್ರಗಳನ್ನು ದಾಖಲಿಸಿ ಕೇವಲ ವ್ಯಕ್ತಿಯಾಗಿಯಲ್ಲ; ಸಂಗಾತಿಯಾಗಿ ಯಶೋಧ ಅವರು, ಹೋರಾಟಗಾರರರೊಬ್ಬರ ಬದುಕಿನ ಅರ್ಥಪೂರ್ಣತೆಯನ್ನು ಹೆಚ್ಚಿಸಿದ್ದಾರೆ. ವ್ಯಕ್ತಿ ಚಂದ್ರಶೇಖರ, ಪತಿ ಚಂದ್ರಶೇಖರ, ಹೋರಾಟಗಾರ ಚಂದ್ರಶೇಖರನ ಆಶಯಗಳ ಎತ್ತರದ ವ್ಯಕ್ತಿತ್ವವನ್ನು, ಚಂದ್ರಶೇಖರರಿಗೆ ಬದುಕಿನ ಪ್ರೀತಿ ಎಂದರೆ ಹೋರಾಟವೇ ಆಗಿತ್ತು ಎಂಬುದನ್ನು ಸುಂದರವಾಗಿ, ಸರಳ ನಿರೂಪಣೆಯಲ್ಲಿ ಕಟ್ಟಿಕೊಟ್ಟಿದ್ದಾರೆ.  

ಗೆಳೆತನಕ್ಕೂ ಹೋರಾಟದ್ದೇ ನಂಟು…!

‘ಶೇಖರ (ಕೃತಿಯ ಕೇಂದ್ರ ವ್ಯಕ್ತಿ)ತುಂಟ ಎಂದರೆ ಕೆಡುಕ ಎಂದು ಅರ್ಥೈಸಬೇಕಿಲ್ಲ. ಯಾವುದೇ ವಿಷಯ ಹಾಗೂ ಸಂದರ್ಭವನ್ನು ಅದು ಇರುವ ಸ್ಥಿತಿಯಲ್ಲೇ ಸ್ವೀಕರಿಸುವ ಮನಃಸ್ಥಿತಿ ಅವನದಲ್ಲ. ಮಾಡಬೇಡ ಎಂದರೆ ಅದನ್ನು ಮಾಡುವ, ಮಾಡು ಎಂದರೆ ಮಾಡದೇ ಇರುವ ಮಾನಸಿಕತೆ ಅವನದು. ಇಂತಹ ಮನೋಭಾವವೇ ಮುಂದಿನ ದಿನಗಳಲ್ಲಿ ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭೂಮಿಕೆಯಾಗಿ ಸಿದ್ಧಗೊಳ್ಳಲು ಕಾರಣವಾಗಿರಬಹುದೆಂದು ಭಾವಿಸುತ್ತೇನೆ’ (ಲೇಖನ-ನೆನಪುಗಳ ಬುತ್ತಿ ಬಿಚ್ಚುತ್ತಾ..ಕಾಡಪ್ಪ ಜಿ.ಎಸ್.)ಈ ಮಾತುಗಳು, ತೋರಣಘಟ್ಟ ಚಂದ್ರಶೇಖರ ಅವರ ಹೋರಾಟದ ವ್ಯಕ್ತಿತ್ವ ಸೂಚಕಗಳಾಗಿವೆ. ಗೌತಮ ನಗರವನ್ನು ಕಟ್ಟಿದ ಕಥೆ, ಹಕ್ಕಿಪಿಕ್ಕಿಗೆ ಶಾಲೆ ಬಂದಿದ್ದು, ಬುದ್ಧನ ಪ್ರೀತಿಯ ಚಂದ್ರಣ್ಣ, ನನ್ನ ನೇಮಿನ ಫೇಮು ಚೇಂಜ್ ಆಗಿದ್ದೇ ಚಂದ್ರಣ್ಣನಿಂದ, ಕೊನೆವರೆಗೂ ಜೊತಿಗಿದ್ದ ಹತಾರ, ಖಂಡಿತವಾಗಿ ಚಂದ್ರಣ್ಣ, ವೈರುಧ್ಯಗಳ ಕಾಲದಲ್ಲಿ ನಂಬಿದ ತತ್ವಕ್ಕಂಟಿಕೊಂಡ ಚಂದ್ರಣ್ಣ, ಅರಿನಿನಲ್ಲಿ ಉಳಿದ ಸಂಗಾತಿ ಇಂತಹ ಅಧ್ಯಾಯಗಳ ಮೂಲಕ ಗೆಳೆಯರು, ವಿಚಾರ-ಭಾವ-ವರ್ತನೆಯ ನೆಲೆಯಲ್ಲಿ ಹೋರಾಟಗಾರನ ವ್ಯಕ್ತಿತ್ವದ ವೈವಿಧ್ಯಮಯ ಪರಿಗಳ ಸೂಕ್ಷ್ಮತೆಯನ್ನು ತೋರಿದ್ದಾರೆ. ಚಂದ್ರಶೇಖರ ಬದುಕಿನ ವಿವಿಧ ಮಜಲುಗಳ ಸ್ವಭಾವಗಳನ್ನು ಪರಿಚಯಿಸುತ್ತವೆ. ಮಾತ್ರವಲ್ಲ; ಕವಿಗಳಾದ ಚರಬಂಡರಾಜು, ಅಜಂ ಅಲಿ, ದಿಲಾವರ್ ಅವರ ತೆಲುಗು ಮೂಲದ ಕವಿತೆಗಳನ್ನುಅನುವಾದಿಸಿದ್ದು ಅವುಗಳನ್ನು ಪ್ರಕಟಿಸಿದ್ದು, ಹೋರಾಟಗಾರನ ಸಾಹಿತ್ಯ ಪ್ರೇಮವನ್ನು, ಕೊನೆಯದಾಗಿ, ಹೋರಾಟದ ಕ್ಷಣಗಳ ಸ್ಮರಣೀಯ ಚಿತ್ರಗಳನ್ನು ದಾಖಲಿಸಿದೆ-ಚಂದ್ರಶಿಕಾರಿ.  ಚಲನಶೀಲ ಗುಣ, ಚಳವಳಿ ಪ್ರಜ್ಞೆ, ಮಾನವೀಯತೆ...ಹೀಗೆ, 

ಹೋರಾಟದ ಮೂಲಕವೇ ಬೆಳೆಸಿಕೊಂಡಿದ್ದ  ಗೆಳೆತನದ ನಂಟಿನ ಅಂಟಿನೊಂದಿಗಿದ್ದ ತೋರಣಘಟ್ಟ ಚಂದ್ರಶೇಖರನ ಬದುಕು, ಕಲಿತ ಒಡನಾಟ, ಸ್ನೇಹ-ಆಪ್ತತೆ, ಸಂಬಂಧ ಬೆಸುಗೆಯ ಪರಿಣಾಮದ ಫಲವಾಗಿ, ಗೆಳೆಯ ಕೈದಾಳ್ ಕೃಷ್ಣಮೂರ್ತಿ ಸಂಪಾದಕತ್ವದಲ್ಲಿ ಮೂಡಿದ -ಚಂದ್ರಶಿಕಾರಿ ಕೃತಿಯು, ‘ಚಳವಳಿಯ ಅಸಲಿ ಕಸಬುದಾರ’ನ ಹೋರಾಟಕ್ಕೆ ನಿರಂತರತೆಯ ಸ್ಪರ್ಶ ನೀಡುವ ಸಾರ್ಥಕ ಪ್ರಯತ್ನವಾಗಿದೆ. ಹೋರಾಟದ ಹಾದಿಯಲ್ಲಿ, ಪ್ರಜ್ಞಾ ಅಥವಾ ಅಪ್ರಜ್ಞಾಪೂರ್ವಕವಾಗಿ ವ್ಯಕ್ತಿಗತ ಬದುಕು ಬಲಿ ಕೊಡುವ ಹೋರಾಟಗಾರರ ದುರಂತಮಯ ಬದುಕಿಗೂ ಈ ಕೃತಿ ಕನ್ನಡಿ ಹಿಡಿಯುತ್ತದೆ.  

(ಚಂದ್ರಶಿಕಾರಿ, ಪುಟ: 270, ಬೆಲೆ: 150 ರೂ, ವಿಪ್ಲವ ಪ್ರಕಾಶನ, ಮುದ್ರಣ: 2021),  

MORE FEATURES

‘ರಂಗಪಯಣ’ಕ್ಕೆ 12ನೇ ವಸಂತ, ರಂಗ ಬೆ...

30-07-2021 ಬೆಂಗಳೂರು

ಕನ್ನಡ ರಂಗಭೂಮಿಯಲ್ಲಿ ‘ಗುಲಾಬಿ ಗ್ಯಾಂಗ್’ ಕಟ್ಟಿ ನಾಯಕಿಯಾದ ನಯನ.ಜೆ.ಸೂಡ ಅವರು 2021ಕ್ಕೆ ಜುಲೈ 31ಕ್ಕೆ ...

ಆನೆ ಕಂಡ ಅಂಧರು ಮತ್ತು ಮನೋವಿಜ್ಞಾನ...

29-07-2021 ಬೆಂಗಳೂರು

ಅಂಧರು ಆನೆಯನ್ನು ವರ್ಣಿಸುವ ರೀತಿ ಬೇರೆ. ಕಣ್ಣಿದ್ದವರೂ ಆನೆ ಕುರಿತ ವರ್ಣನೆಯೂ ಬೇರೆ ಬೇರೆಯಾಗಿರುತ್ತದೆ. ಕೇವಲ ದೃಷ್ಟಿ ...

ಮನುಷ್ಯನೊಳಗೂ ಬಚ್ಚಿಟ್ಟುಕೊಂಡಿರುವ ...

29-07-2021 ಬೆಂಗಳೂರು

ತಮಿಳುನಾಡಿನ ಜಾನಪದೀಯ ಸಾಹಸ ಕ್ರೀಡೆ -ಜಲ್ಲಿಕಟ್ಟು. ಅದನ್ನು ಮೂಲವಾಗಿಟ್ಟುಕೊಂಡು ಲೇಖಕ ಚಿ.ಸು. ಚೆಲ್ಲಪ್ಪ ಅವರು ರಚಿಸಿದ...