“ಮನುಷ್ಯನಿಗೆ ಪ್ರೀತಿಸುವುದು ಸಾಧ್ಯವಾಗಲು ಧೈರ್ಯಬೇಕು, ಧಾರಾಳತನಬೇಕು- ತುಸು ಬೋಳೇತನವೂ ಅವನಲ್ಲಿರಬೇಕು. ಈ ಮೂರೂ ಶೂದ್ರ ಅವರಲ್ಲಿದೆ. ಆದ್ದರಿಂದಲೇ ಇಂತಹ ಸಾಂಸ್ಕೃತಿಕ ಮಹತ್ತ್ವವುಳ್ಳ ಲೇಖನಗಳನ್ನು ಬರೆಯಲು ಸಾಧ್ಯವಾಗಿದೆ. ಇಂತಹ ಲೇಖನಗಳನ್ನು ಬರೆಯಬೇಕಾದರೆ ಸಹಜಶಕ್ತಿ, ವಿಶಾಲ ಸಾಂಸ್ಕೃತಿಕ ಜ್ಞಾನ ಹಾಗೂ ಕಲಾ ನೈಪುಣ್ಯತೆ, ಪ್ರಾಮಾಣಿಕತೆ ಮತ್ತು ನೇರ ಗುಣಗಳು ಇರಬೇಕು, ಆಗ ಅವು ಭಾರತದಂತಹ ಎಲ್ಲಾ ಜಾತಿ/ವರ್ಗದ ಓದುಗರನ್ನು ತಲುಪಬಲ್ಲವು,” ಎನ್ನುತ್ತಾರೆ ಎಚ್. ದಂಡಪ್ಪ. ಅವರು ಶೂದ್ರ ಶ್ರೀನಿವಾಸ್ ಅವರ ‘ಕಾಲದ ನೆರಳು’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.
ಶೂದ್ರ ಶ್ರೀನಿವಾಸ ಅವರ ಈ ಕೃತಿಯ ಲೇಖನಗಳು ಐದು ಭಾಗಗಳಲ್ಲಿ ಹರಡಿಕೊಂಡಿವೆ -
(1) ಭಾಷೆ, ಸಂಸ್ಕೃತಿ, ಪರಂಪರೆ
(2) ಸಾಂಸ್ಕೃತಿಕ ವ್ಯಕ್ತಿತ್ವದ ಸ್ಮೃತಿಗಳು
(3) ಸ್ತ್ರೀ-ಸ್ತ್ರೀವಾದ- ಅಸ್ಮಿತೆ
(4 ) ಪ್ರಕೃತಿ-ಸಂಸ್ಕೃತಿ ವಿದ್ಯಮಾನ
(5) ಸಾಹಿತ್ಯ-ಸಂಸ್ಕೃತಿ-ಸಂಗತಿ.
ಈ ಐದು ಭಾಗಗಳಲ್ಲಿ ಒಟ್ಟು 67 ಲೇಖನಗಳಿವೆ. ಈ ಎಲ್ಲಾ ಲೇಖನಗಳು ಆಯಾ ಶೀರ್ಷಿಕೆಗೆ ಅನುಗುಣವಾಗಿ ತಮ್ಮ ವಿಚಾರಗಳನ್ನು ಮಾತ್ರ ಮಂಡಿಸದೆ, ಎಲ್ಲಾ ಭಾಗದ ವಿಚಾರಗಳೂ ಮುಂದುವರಿಕೆಯಾಗಿ ಬರುತ್ತವೆ. ಇವು ಅಧ್ಯಯನದ ಅನುಕೂಲಕ್ಕೆ ಮಾಡಿಕೊಂಡಿರುವ ವಿಭಾಗ ಕ್ರಮವಷ್ಟೆ. ಎಲ್ಲಾ ಲೇಖನಗಳಲ್ಲಿ ಕನ್ನಡ ಸಂಸ್ಕೃತಿ, ಕರ್ನಾಟಕ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಿಸರವನ್ನು ಕಟ್ಟಿಕೊಡುವುದರ ಜೊತೆಗೆ ಮಾನವೀಯ ಮೌಲ್ಯಗಳ ಶೋಧನೆ ಮತ್ತು ಮನುಷ್ಯರ ಸೌಹಾರ್ದಯುತ ಸಂಬಂಧಗಳ ಬಗೆಗಿನ ಚಿಂತನೆಗಳಿವೆ, ಜೊತೆಗೆ ಕರ್ನಾಟಕ ಪ್ರಗತಿಯ ಬಗೆಗಿನ ಚಿಂತನೆಗಳಿವೆ. 1973ರಲ್ಲಿ ಇವರ ಸಂಪಾದಕತ್ವದಲ್ಲಿ ಪ್ರಾರಾಂಭವಾದ ಶೂದ್ರ ಪತ್ರಿಕೆಯಲ್ಲಿ ಬರೆಯುತ್ತಿದ್ದ ಕನಸಿಗೊಂದು ಕಣ್ಣು ಎಂಬ ಶೀರ್ಷಿಕೆ ಕಸ್ತೂರಿಯಲ್ಲಿ ಮಾಸ ಪತ್ರಿಕೆಯಲ್ಲಿ ಮುಂದುವರಿಯುತ್ತಿದ್ದು ಆ ಲೇಖನಗಳನ್ನು ಒಟ್ಟುಗೂಡಿಸಿ ಈ ಪುಸ್ತಕವನ್ನು ಹೊರತರಲಾಗುತ್ತಿದೆ, ಕನಸಿನೊಳಗೊಂದು ಕಣ್ಣು ಲೇಖನಗಳನ್ನು ಗಮನಿಸಿದಾಗ ಯಶವಂತ ಚಿತ್ತಾಲರ ಮಾತುಗಳು ಜ್ಞಾಪಕಕ್ಕೆ ಬರುತ್ತವೆ.
“ನಾನು ಅಮೆರಿಕೆಯಿಂದ ಹಿಂತಿರುಗಿ ಬಂದ ಮೇಲೆ ಆಗಸ್ಟ್ 1 ರಂದು 1986 ಓದಿದ ಮೊಟ್ಟ ಮೊದಲಿನ ಕನ್ನಡ ಪುಸ್ತಕ ನಿಮ್ಮ ಕನಸಿಗೊಂದು ಕಣ್ಣು, ಆಗೀಗ ಕೆಲವು ಲೇಖನಗಳ ಬಿಡಿಯಾಗಿ ಓದಿದ್ದೆನಾದರೂ ಅವುಗಳ ಸಾಹಿತ್ಯಕ ಮಹತ್ವವನ್ನು ಗ್ರಹಿಸಿರಲಿಲ್ಲ. ಪುಸ್ತಕ ರೂಪದಲ್ಲಿ ಇವು ಮಾಡಿದ ಪರಿಣಾಮ ಮಾತ್ರ ಇದೊಂದು ಅಸಾಧಾರಣ ಕೃತಿ. ನಾವೆಲ್ಲ ಲಕ್ಷ್ಯ ತಂದುಕೊಳ್ಳುವ ಮೊದಲೇ ಹೊಸ ಸಾಹಿತ್ಯ ಪ್ರಕಾರವೊಂದನ್ನು ಸೃಷ್ಟಿಸಿ ಬಿಟ್ಟಿದ್ದೀರಿ. ಈ ಪ್ರಕಾರದಲ್ಲಿ ನೀವು ಸಾಧಿಸಿಕೊಂಡ ಶಕ್ತಿಗೆ ಇತ್ತೀಚಿನ ಶೂದ್ರದಲ್ಲಿ ಪ್ರಕಟಗೊಂಡ `ಒಂದು ಸಂತಾಪ ಸೂಚಕ ಪತ್ರ' ಸಮರ್ಥ ಉದಾಹರಣೆ.”
ಯಶವಂತ ಚಿತ್ತಾಲರು 1986ರಲ್ಲಿ ಬರೆದ ಈ ಮಾತುಗಳನ್ನು ಉಲ್ಲೇಖ ಮಾಡಲು ಕಾರಣವೆಂದರೆ ಅದರಲ್ಲಿರುವ “ನಾವೆಲ್ಲ ಲಕ್ಷ್ಯತಂದುಕೊಳ್ಳುವ ಮೊದಲೇ ಹೊಸ ಸಾಹಿತ್ಯ ಪ್ರಕಾರವೊಂದನ್ನು ಸೃಷ್ಟಿಸಿಬಿಟ್ಟಿದ್ದೀರಿ” ಎಂಬ ಮಾತು. ಈ ಮಾತು ಬಹಳ ಮುಖ್ಯವಾದದ್ದು. ಹೊಸ ಸಾಹಿತ್ಯ ಪ್ರಕಾರವೇ ಇದು. ಇಂತಹ ಬರವಣಿಗೆ ಕನ್ನಡ ಸಾಹಿತ್ಯದಲ್ಲಿ ಇಲ್ಲವೇ ಇಲ್ಲ ಎನ್ನುಬಹುದು. ಈ ರೀತಿಯ ಬರವಣಿಗೆ ಮೊದಲು ಶೂದ್ರ ಶ್ರೀನಿವಾಸರಿಗಲ್ಲದೆ ಬೇರಾರಿಗೂ ಸಾಧ್ಯವಿಲ್ಲ. ಏಕೆಂದರೆ 'ಕನಸಿಗೊಂದು ಕಣ್ಣು'ವಿನ ಲೇಖನಗಳು ಶೂದ್ರರ ಪ್ರಾಮಾಣಿಕ ಅಭಿವ್ಯಕ್ತಿಯಾಗಿವೆ. ಈ ಲೇಖನಗಳಲ್ಲಿರುವ ಮನುಷ್ಯ ಮತ್ತು ಮನುಷ್ಯ-ಮನುಷ್ಯ-ಮತ್ತು ಸಮಾಜ, ಮನುಷ್ಯ ಮತ್ತು ಪರಿಸರ ಇತ್ಯಾದಿಗಳ ಸಂಬಂಧವನ್ನು ಕುರಿತು ಬರೆಯುವಾಗ ಅವರ ಪ್ರಾಮಾಣಿಕತೆಯ ಜೊತೆಗೆ ಅವರಲ್ಲಿರುವ ಮಾನವೀಯ ಮೌಲ್ಯಗಳ ತುಡಿತ ಎಚ್ಚರಗೊಳ್ಳುತ್ತದೆ. ಅವುಗಳದೇ ಮೇಲು ಗೈಯಾಗಿ ಮಾನವೀಕರಣದತ್ತ ಸಾಗುತ್ತದೆ. ಈ ಬಗೆಯ ಬರವಣಿಗೆ ಸಾಂಸ್ಕೃತಿಕವಾಗಿ ಬಹಳ ಮುಖ್ಯವಾದದ್ದು ಮತ್ತು ಅಗತ್ಯವೂ ಕೂಡಾ. ಅದರಲ್ಲೂ ಇಂದಿನ ದಿನಗಳಲ್ಲಿ ಇಂತಹ ಬರವಣಿಗೆಯ ತುರ್ತು ತುಂಬಾ ಅಗತ್ಯವಾಗಿದೆ, ಇಂತಹ ಬರವಣಿಗೆ ಅನಂತಮೂರ್ತಿ ಅವರು ಹೇಳುವಂತೆ
“ಮನುಷ್ಯನಿಗೆ ಪ್ರೀತಿಸುವುದು ಸಾಧ್ಯವಾಗಲು ಧೈರ್ಯಬೇಕು ಧಾರಾಳಬೇಕು- ತುಸು ಬೋಳೇತನವೂ ಅವನಲ್ಲಿರಬೇಕು. ಈ ಮೂರೂ ಶೂದ್ರ ಅವರಲ್ಲಿದೆ. ಆದ್ದರಿಂದಲೇ ಇಂತಹ ಸಾಂಸ್ಕೃತಿಕ ಮಹತ್ತ್ವವುಳ್ಳ ಲೇಖನಗಳನ್ನು ಬರೆಯಲು ಸಾಧ್ಯವಾಗಿದೆ. ಇಂತಹ ಲೇಖನಗಳನ್ನು ಬರೆಯಬೇಕಾದರೆ ಸಹಜಶಕ್ತಿ, ವಿಶಾಲ ಸಾಂಸ್ಕೃತಿಕ ಜ್ಞಾನ ಹಾಗೂ ಕಲಾ ನೈಪುಣ್ಯತೆ, ಪ್ರಾಮಾಣಿಕತೆ ಮತ್ತು ನೇರ ಗುಣಗಳು ಇರಬೇಕು, ಆಗ ಅವು ಭಾರತದಂತಹ ಎಲ್ಲಾ ಜಾತಿ/ವರ್ಗದ ಓದುಗರನ್ನು ತಲುಪಬಲ್ಲವು. ಈ ಗುಣಗಳಿಲ್ಲದ ಲೇಖಕ ಯಾರನ್ನೂ ತಲುಪಲಾಗದೆ ಜನಮಾನಸದಿಂದ ಬೇಗ ಮರೆಯಾಗಿ ಬಿಡುತ್ತಾರೆ. ಶೂದ್ರರಲ್ಲಿ ಸೋಪಜ್ಞತಾ ಗುಣವಿದೆ. ಸಾಚಾತನವಿದೆ. ಅವರ ಅನುಭವ ಹಾಗೂ ವೈಯಕ್ತಿಕ ಶಕ್ತಿಯಿಂದ ಸ್ವಂತಿಕೆಯ ಅನುಭವವನ್ನು ಕುರಿತು ಬರೆಯುತ್ತಾರೆ. ತಾನು ಕಂಡಿದ್ದನ್ನು ಬದುಕಿದ್ದನ್ನು, ಯೋಚಿಸಿದ್ದನ್ನು ಅನುಭವಿಸಿದ್ದನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸುವ ಜವಾಬ್ದಾರಿಯನ್ನು ಅವರು ಅರಿತಿರುವುದರಿಂದಲೇ ಅವರು ಈ ಬಗೆಯ ಹೊಸ ಬಗೆಯ ಸಾಹಿತ್ಯ ಪ್ರಕಾರವೊಂದನ್ನು ಸೃಷ್ಟಿಸಲು ಸಾಧ್ಯವಾಗಿದೆ.” ಹಾಗಿದ್ದರೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಈ ಬಗೆಯ ಬರವಣಿಗೆ ಇರಲಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ನಿಜ, ಒಂದು ಸಾಹಿತ್ಯ ಪ್ರಕಾರದ ಮಾನವನ ಸಾಂಸ್ಕೃತಿಕ ಇತಿಹಾಸದಲ್ಲಿ ಕೆಲವು ಎಳೆಗಳು ಇರುತ್ತವೆ. ಆ ಎಳೆಗಳ ಮುಂದುವರಿಕೆಯಾಗಿ ಸ್ಪಷ್ಟರೂಪವನ್ನು ಒಬ್ಬ ಸಮರ್ಥ ಲೇಖಕನಲ್ಲಿ ಪಡೆದುಕೊಳ್ಳುತ್ತವೆ, ಈ ಪ್ರಕಾರಕ್ಕೆ ಅಷ್ಟೆ.
ಕನ್ನಡದಲ್ಲಿ ಈ ಬಗೆಯ ಬರವಣಿಗೆಯ ಅಭಿವ್ಯಕ್ತಿ ಪ್ರಕಾರದ ಎಳೆಗಳನ್ನು ಬಖೈರುಗಳಲ್ಲಿ ಗುರುತಿಸಬಹುದು. ಬಖೈರುಗಳಿಗೂ ಶೂದ್ರ ಶ್ರೀನಿವಾಸ ಅವರ ಈ ಸಾಂಸ್ಕೃತಿಕ ಬರಹಗಳಿಗೂ ಸಂಬಂಧವಿದೆಯೆಂದಲ್ಲ. ಶೂದ್ರ ಅವರ ಬರಹಗಳಲ್ಲಿ ಸಾಂಸ್ಕೃತಿಕ ವ್ಯಕ್ತಿಗಳ, ಅವರ ವ್ಯಕ್ತಿತ್ವದ ಅವರ ಪ್ರತಿಭೆ ಮತ್ತು ಸೃಜನಶೀಲತೆಯ ಅಭಿವ್ಯಕ್ತಿ ವಿಧಾನದ ಸ್ವರೂಪ ಮತ್ತು ಅವುಗಳ ಕಾರ್ಯ ಸ್ವರೂಪದ ಬಗೆಗಿನ ವಿವರಗಳಿವೆ. ಈ ವಿವರಗಳ ಮೂಲಕ ಒಂದು ಚರಿತ್ರೆಯನ್ನು ಕಟ್ಟಬಹುದು, ಸಾಂಸ್ಕೃತಿಕ ಚರಿತ್ರೆಯನ್ನು ಬರೆಯಬಹುದು. ಮಾನವನ ಸಂಸ್ಕೃತಿ, ಸಾಹಿತ್ಯ-ಕಲೆ, ಧರ್ಮ, ಚರಿತ್ರೆ, ವಿಜ್ಞಾನ ಇತ್ಯಾದಿಗಳ ವಿಕಾಸದ ನೆಲೆಗಳ ಸ್ವರೂಪವನ್ನು ಅರಿಯಬಹುದು. ಇಲ್ಲಿರುವ ಯಾವುದೇ ವಿಭಾಗದ ಲೇಖನಗಳನ್ನು ಗಮನಿಸಿದರೂ ಇದರ ಅರಿವಾಗುತ್ತದೆ. ಅವರು ಆಯ್ಕೆಮಾಡಿಕೊಳ್ಳುವಾಗ ಮಾನವೀಯ ನೆಲೆಗಳುಳ್ಳ ಚಿಂತನೆಗಳನ್ನು ಯಾವ ರೀತಿ ಓದುಗನಿಗೆ ತಲುಪಿಸಬೇಕೆಂಬ ದೃಷ್ಟಿಯು ಅವರ ಕಣ್ಣ ಮುಂದಿರುತ್ತದೆ. ಆದ್ದರಿಂದಲೇ ಇವುಗಳು ಮಾನವತೆ, ಮಾನವೀಯತೆ, ಮನುಷ್ಯ ಸಂಬಂಧಗಳ ಗಟ್ಟಿಗೊಳಿಸುವಿಕೆ, ಸೌಹಾರ್ದಯುತವಾದ ಪರಿಸರದ ನಿರ್ಮಾಣ ಇವುಗಳ ಕಡೆ ತುಡಿಯುತ್ತವೆ. ಆದ್ದರಿಂದ ಮನುಷ್ಯನ ಚರಿತ್ರೆಯನ್ನು ಕಟ್ಟಿಕೊಳ್ಳಲು ನೆರವಾಗುವುದರ ಜೊತೆಗೆ ಸಾಹಿತ್ಯ ಮತ್ತು ಚರಿತ್ರೆಯು ವಿಕಾಸದ ಹಂತಗಳ ಸ್ವರೂಪವನ್ನು ನಾವು ಕಟ್ಟಿಕೊಳ್ಳಲು ನೆರವಾಗುತ್ತದೆ. ಆದ್ದರಿಂದಲೇ ಇಲ್ಲಿ ಬಖೈರುಗಳು ನೆನಪಿಗೆ ಬಂದವು. ಬಖೈರುವಿನಲ್ಲಿ ವಿಷಯದ ನಿರೂಪಣೆ ಜೊತೆಗೆ ಬರೆದವರ ಸಹಿ ಮತ್ತು ಮುದ್ರೆ ಕಡ್ಡಾಯವಾಗಿರುತ್ತದೆ. ಅದೇ ರೀತಿ ಶೂದ್ರ ಅವರ ಬರವಣಿಗೆಯಲ್ಲಿ ನಿರೂಪಣೆ ಮಾಡುವ ಹೇಳುವ ವಿಷಯಕ್ಕೆ ಪೂರಕವಾಗಿ ಘಟನೆಗಳನ್ನು ವ್ಯಕ್ತಿಗಳನ್ನು ಪ್ರಸಂಗಗಳನ್ನು ತರುತ್ತಾರೆ. ಕವಿ, ನಾಟಕಕಾರ, ಕಾದಂಬರಿಕಾರ, ಕತೆಗಾರ, ನಟ, ಸಮಾಜಸೇವಕ, ವಿಜ್ಞಾನಿ, ಇತ್ಯಾದಿ ಸಾಧಕ-ಸಾಧಕಿಯರ ಹೆಸರುಗಳು ಆ ನಿರೂಪಣೆ ಮಾಡುವ ವಸ್ತುವಿಗೆ ಪೂರಕವಾಗಿ ಬರುತ್ತವೆ. ಹೀಗಾಗಿ ಈ ಬರವಣಿಗೆಗೆ ಒಂದು ಅಧಿಕೃತತೆ ಬಂದು ಬಿಡುತ್ತದೆ. ಆದ್ದರಿಂದಲೇ ಬಖೈರುವಿಗೆ ಇದನ್ನು ಹೋಲಿಸಿದ್ದು, ಹಾಗೆ ನೋಡಿದರೆ ಬಖೈರುವಿನಂತೆ ಈ ಬರವಣಿಗೆ ಮಾಹಿತಿಕೋಶವಲ್ಲ. ಬಖೈರುವಿನಲ್ಲಿಯೂ ನಿರೂಪಣೆ ಇದೆ. ಶೂದ್ರ ಶ್ರೀನಿವಾಸರ ಬರವಣಿಗೆಯಲ್ಲೂ ನಿರೂಪಣೆ ಇದೆ. ಜೊತೆಗೆ ವಿಶ್ಲೇಷಣೆ ಇದೆ. ಬಖೈರುವಿನಲ್ಲಿ ವಿಶ್ಲೇಷಣೆ ಇಲ್ಲ, ವಿಶ್ಲೇಷಣೆ ಇರುವುದರಿಂದಲೇ ಇದಕ್ಕೆ ಸಾಂಸ್ಕೃತಿಕ ಮಹತ್ವ ಬಂದುಬಿಟ್ಟಿದೆ, ಜೊತೆಗೆ ವಿಶಿಷ್ಟವಾದ ಸಾಹಿತ್ಯ ಪ್ರಕಾರ ಸೃಷ್ಟಿಯಾಗಿದೆ.
"ಈಗಲೂ ಸೌದೆಯಿಂದಲೇ ಅಡಿಗೆ ಮಾಡಿ ತಿನ್ನುವ ಜನರು ಆಹಾರದಲ್ಲಿ ರುಚಿ ಹೆಚ್ಚು ಬಯಸುತ್ತಾರೆ. ಹಾಗೆಯೇ ಧೃಡಕಾಯರಾಗಿ ಬೆ...
“ಇವರ ಕನ್ನಡ ಸಾಹಿತ್ಯದ ಗಣಿಗೆ ಬೆಲೆಬಾಳುವ ಕೃತಿ, ಲೇಖನ, ಅಂಕಣ ಬರಹ, ಅನುವಾದ ಸಾಹಿತ್ಯ, ಜೀವನ ಚರಿತ್ರೆ, ವಿಚಾರ ...
“ಶ್ರೀ ಡಿ.ಎನ್. ಅಕ್ಕಿಯವರು ರಂಗೋಲಿಯಲ್ಲಿ ಭಾವಚಿತ್ರ ಬಿಡಿಸುವುದನ್ನು ನೋಡಿಯೇ ಆನಂದಿಸಬೇಕು. ಅದು ಶಬ್ದಗಳಿಂದ ಸೆ...
©2024 Book Brahma Private Limited.