ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

Date: 27-10-2021

Location: ಬೆಂಗಳೂರು


‘ಸಾಹಿತಿಗಳು, ಕಲಾವಿದರು ಸಾಮಾನ್ಯವಾಗಿ ಸೂಕ್ಷ್ಮಜ್ಞರೂ ಸಂವೇದನಾಶೀಲರೂ ಆಗಿರುತ್ತಾರೆ. ತಮ್ಮ ಕೃತಿಗಳ ಬಗ್ಗೆ ಅದೇ ಸ್ತರದ ಸ್ಪಂದನವನ್ನು ನಿರೀಕ್ಷಿಸುತ್ತಾರೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರು ತಮ್ಮ ‘ಪತ್ರತಂತು ಮಾಲಾ’ದಲ್ಲಿ ಹಿರಿಯ ಕತೆಗಾರ, ಲೇಖಕ ಯಶವಂತ ಚಿತ್ತಾಲ ಅವರೊಂದಿಗಿನ ಪತ್ರಸಂವಾದದ ಕುರಿತು ವಿಶ್ಲೇಷಿಸಿದ್ದಾರೆ.

ಪತ್ರಿಕೆಗಳ ಸಂಪಾದಕರಾದವರಿಗೆ ಹಾಗೂ ಸಾಪ್ತಾಹಿಕ ಪುರವಣಿ ಮತ್ತು ವಿಶೇಷಾಂಕಗಳ ಸಂಪಾದನೆಯ ಹೊಣೆ ಹೊತ್ತವರಿಗೆ ರಾಜಕೀಯ ಮೊದಲಾದ ಪ್ರಚಲಿತ ವಿದ್ಯಮಾನಗಳ ಜೊತೆಗೆ ಕಲೆ, ಸಾಹಿತ್ಯ, ಕಾವ್ಯಮೀಮಾಂಸೆ ಮೊದಲಾದವುಗಳಲ್ಲಿ ಅಭಿರುಚಿ ಮತ್ತು ಸ್ವಲ್ಪಮಟ್ಟಿನ ತಿಳಿವಳಿಕೆ, ರಸಾಭಿಜ್ಞತೆ, ಸಂವೇದನೆಗಳು ಇರಬೇಕಾಗುತ್ತದೆ. ಇಲ್ಲವಾದಲ್ಲಿ ಅವರಿಂದ ಸಾಹಿತಿ ಕಲಾವಿದರು ಹಾಗೂ ಓದುಗರು ಇಬ್ಬರಿಗೂ ನ್ಯಾಯಸಲ್ಲಿಸಲಾಗದು.

ಸಾಹಿತಿಗಳು, ಕಲಾವಿದರು ಸಾಮಾನ್ಯವಾಗಿ ಸೂಕ್ಷ್ಮಜ್ಞರೂ ಸಂವೇದನಾಶೀಲರೂ ಆಗಿರುತ್ತಾರೆ. ತಮ್ಮ ಕೃತಿಗಳ ಬಗ್ಗೆ ಅದೇ ಸ್ತರದ ಸ್ಪಂದನವನ್ನು ನಿರೀಕ್ಷಿಸುತ್ತಾರೆ. ಪತ್ರಿಕೆಗಳಿಗೆ ಸೃಜನಶೀಲ ಲೇಖಕರು ಮತ್ತು ಕಲಾವಿದರ ಸಹಕಾರ, ಬೆಂಬಲಗಳು ಅನಿವಾರ್ಯವಾದ್ದರಿಂದ ಅವರು ಈ ವಿಷಯದಲ್ಲಿ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮುಜುಗರದ ಪರಿಸ್ಥಿತಿಯನ್ನೂ ಕೆಲವೊಮ್ಮ ತಿಕ್ಕಾಟವನ್ನೂ ಎದುರಿಸಬೇಕಾಗುತ್ತದೆ. ಶ್ರೀ ಯಶವಂತ ಚಿತ್ತಾಲರ ಈಪತ್ರ ನೋಡಿ.

ಯಶವಂತ ಚಿತ್ತಾಲ          
2-08-1989

ಪ್ರೀತಿಯ ರಂಗನಾಥ ರಾವ್ ಅವರೆ,
ಬಹಳ ದಿವಸಗಳ ಮೇಲೆ ಈ ಪತ್ರ ಬರೆಯುತ್ತಿದ್ದೇನೆ.

ನನ್ನ ಬೃಹತ್ ಕಾದಂಬರಿ ‘ಪುರುಷೋತ್ತಮ’ ಮುದ್ರಣಕ್ಕೆ ಹೋಗಿ ಒಂದು ವರ್ಷವಾಗುತ್ತ ಬಂತು. ಆದರೂ ಬೇಗನೆ ಬೆಳಕು ಕಾಣುವ ಯಾವ ಲಕ್ಷಣವೂ ತೋರುತ್ತಿಲ್ಲ. ಏಪ್ರಿಲ್ ತಿಂಗಳಲ್ಲೇ ಪ್ರಕಟವಾಗಬೇಕಾದ ಕೃತಿಗಾಗಿ ಅಕ್ಟೋಬರ್ ತಿಂಗಳವರೆಗೂ ಕಾಯಬೇಕಾದೀತೇನೋ! ದುರ್ದೈವದ ಸಂಗತಿಯೆಂದರೆ, ಈ ಕೃತಿಯಿಂದ ಸಂಪೂರ್ಣವಾಗಿ ಬಿಡುಗಡೆಯಾದ ಹೊರತು ಹೊಸತೇನನ್ನೂ ಸೃಷ್ಟಿಸಲಾರೆನೋ ಎನ್ನುವ ಸ್ಥಿತಿಯಲ್ಲಿ ತೊಳಲಾಡುತ್ತದ್ದೇನೆ. ಇಂಥ ಒಂದು ಸ್ಥಿತಿಯಲ್ಲಿದ್ದಾಗಲೆ ಎಸ್.ದಿವಾಕರ್ ಹಾಗೂ ಇನ್ನೂ ಕೆಲವು ಗೆಳೆಯರು ಕೂಡಿ ಆರಂಭಿಸಲು ಯೋಚಿಸಿದ್ದ ‘ಮಾಯಾದರ್ಪಣ’ ಎಂಬ ಹೊಸ ಪತ್ರಿಕೆಗಾಗಿ ನನ್ನಿಂದ ಎಲ್ಲ ಬಿಟ್ಟು ‘ಕವನ’ವನ್ನು ಬಯಸಿದರು! ನಾನೀ ಆಹ್ವಾನವನ್ನು ಸ್ವೀಕರಿಸಿ, ‘ಬ್ಯಾಂಡ್ ಸ್ಟ್ಯಾಂಡಿನ ಬಂಡೆಗಳು' ಎನ್ನುವ ‘ಕವನ'(!)ಬರೆದೆ. ಆದರೆ ಅದನ್ನು ಕಾವ್ಯವೆಂದು ಕರೆಯಲಾಗದ್ದಕ್ಕೆ ‘ಕೆಲವು ಲಯಬದ್ಧ ಸಾಲುಗಳು' ಎಂದು ಕರೆದಿದ್ದೆ.

‘ಮಾಯಾದರ್ಪಣ’ಕಾರಣಾಂತರದಿಂದ ಹೊರಡಲೇ ಇಲ್ಲ. ಆದರೆ ‘ಬಂಡೆಗಳು' ಬರೆದ ಉತ್ಸಾಹದಲ್ಲಿ ಇನ್ನೂ ನಾಲ್ಕು ಇಂಥ ಪ್ರಯೋಗಗಳು ಹುಟ್ಟಿಬಂದವು. ಇವುಗಳನ್ನು ‘ಲಬಸಾ’ ಎಂದು ಕರೆಯುವುದನ್ನು ನಿಶ್ಚಯಿಸಿ ಬೇರೆ ಬೇರೆ ಪತ್ರಿಕೆಗಳಿಗೆ ಕಳಿಸಿದ್ದೇನೆ. - ‘ಸಂವಾದ’, ‘ಶೂದ್ರ’, ಹಾಗೂ ‘ಸೃಜನಮುಖಿ'. ಇವೆಲ್ಲವುಗಳಲ್ಲಿ, ನಾನೇ (ಹಾಗೂ ನಮ್ಮ ಇಲ್ಲಿಯ ಹಾಗೂ ಬೆಂಗಳೂರಿನ ಗೆಳೆಯರು)ತುಂಬಾ ಮೆಚ್ಚಿಕೊಂಡಿರುವ ‘ಬಿಸಿಲು' ಎನ್ನುವ ರಚನೆಯನ್ನು ‘ಪ್ರಜಾವಾಣಿ'ಯ ದೀಪಾವಳಿ ಸಂಚಿಕೆಗೆ ಕಳುಹಿಸಿದ್ದೇನೆ. ಕಳುಹಿಸಿ ತಪ್ಪು ಮಾಡಿದೆ ಎನ್ನುವ ಭಾವನೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ.  

ಕೆಲವು ತಿಂಗಳ ಹಿಂದೆ ಬಿ.ಎಂ.ಕೃಷ್ಣಸ್ವಾಮಿಯವರಿಂದ ನನಗೊಂದು ಪತ್ರ ಬಂದಿತ್ತು.-ದೀಪಾವಳಿ ಸಂಚಿಕೆಗಾಗಿ ನನ್ನಿಂದ ಒಂದು ಕತೆಯನ್ನು ಬಯಸಿ. ಈ ಮೊದಲು ತಿಳಿಸಿದ ಕಾರಣಗಳಿಂದಾಗಿ ಹೊಸ ಕತೆ ಬರೆಯುವ ಮೂಡಿಗೆ ಬರದಾದೆ. ಹೀಗಾಗಿ ಸದ್ಯ ‘ಬಿಸಿಲು’ `ಲಬಸಾ'ವನ್ನು ಕಳಿಸುವ  ಮನಸ್ಸಾಗಿ ಅದನ್ನು ಕೃಷ್ಣಸ್ವಾಮಿಯವರಿಗೆ ಕಳುಹಿಸಿದೆ. ಈ ಮಾತಿಗೆ ಈಗ ಮೂರು ವಾರಗಳ ಮೇಲೇ ಆಯಿತು. ಅದು ತಲುಪಿದ ಬಗೆಗೂ ಪತ್ರವಿಲ್ಲದ್ದು ನೋಡಿ ಅವರಿಗೆ ಮುಜುಗರವಾಗುವ ಕೆಲಸ ಮಾಡಿದನೇ  ಎನ್ನುವ ಶಂಕೆಯಾಗಿದೆ. ದೀಪಾವಳಿ ಸಂಚಿಕೆಯಲ್ಲಿ ನೀವೇ ಕೇಳಿದ ಲೇಖನಗಳಿಗಷ್ಟೇ ಅವಕಾಶವಿದ್ದು `ಬಿಸಿಲಿಗೆ' ಅಲ್ಲಿ ಸ್ಥಾನ ದೊರಕದೇ ಹೋದರೆ ನನಗೆ ಕೆಡುಕೆನಿಸಲಾರದು. ದಯಮಾಡಿ ಅದನ್ನು ಹಿಂದಕ್ಕೆ ಕಳಿಸುವ ಕೃಪೆ ಮಾಡ ಬೇಕು ಎಂದು ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ. ಕೃಷ್ಣಸ್ವಾಮಿಯವರ ಪರಿಚಯವಾದದ್ದು ನನಗೆ ನೆನಪಿಲ್ಲ. ಎಂ.ಬಿ.ಸಿಂಗರು ನಿವೃತ್ತರಾದ ಮೇಲೆ ನನಗೆ ‘ಪ್ರಜಾವಾಣಿ'ಯ ಆಫೀಸಿನಲ್ಲಿ ನನಗೆ ಆತ್ಮೀಯರಾದವರು ನೀವೊಬ್ಬರೇ. ದಯಮಾಡಿ ಈ ಪತ್ರಕ್ಕೆ ಉತ್ತರ ಬರೆಯಿರಿ,ಖು ಶಿಯಾಗುತ್ತದೆ. 

ನನ್ನ ‘ಸಿದ್ಧಾರ್ಥ' ಕಥಾ ಸಂಕಲನ ಓದಲು ಸಿಕ್ಕಿದೆಯಾ? ಸೇವಾ ನಿವೃತ್ತಿಯ ನಂತರ ಬೆಂಗಳೂರಿಗೆ ಬರಹೋಗುವುದು ಕಡಿಮೆಯಾಗಿದೆ. ತೀರಾ ಒಬ್ಬಂಟಿಯನ್ನಿಸಿ ನಿಮ್ಮನ್ನೆಲ್ಲ ನೆನೆದು ಧೈರ್ಯ ತಂದುಕೊಳ್ಳುತ್ತೇನೆ. ನಿಮ್ಮ ಬಗ್ಗೆ ಬರೆಯಿರಿ.

ಇತಿ ಪ್ರೀತಿಯಿಂದ,
ನಿಮ್ಮ
ಯಶವಂತ ಚಿತ್ತಾಲ

ತಮ್ಮ ಹೊಸಪ್ರಯೋಗದ ಬಗ್ಗೆ ಖಚಿತವಾದ ನಿಲುವು ತಾಳಲಾಗದೆ ತೊಳಲಾಟದಲ್ಲಿದ್ದ ಚಿತ್ತಾಲರು ಅದರ ಬಗ್ಗೆ ಪ್ರಜಾವಾಣಿಯ ಪ್ರತಿಕ್ರಿಯೆ ತಿಳಿಯಲು ಕಾತುರರಾಗಿದ್ದುದು ಸಹಜವೇ. ಸಾಮಾನ್ಯವಾಗಿ ಬರಹ ಬಂದ ಒಂದೆರಡು ವಾರಗಳೊಳಗೇ ಅದರ ಸ್ವೀಕೃತಿ/ಅಸ್ವೀಕೃತಿಯನ್ನು ವಂದನಾಪೂರ್ವಕವಾಗಿ ತಿಳಿಸುವ ಪರಿಪಾಠವನ್ನು ನಾವು ಇಟ್ಟುಕೊಂಡಿದ್ದೆವು. ಇಂತಹದೊಂದು ಪತ್ರ ಸಾಹಿತಿ/ಕಲಾವಿದರಿಗೂ ಸಂತೋಷ, ನೆಮ್ಮದಿಗಳನ್ನು ಕೊಡುತ್ತಿತ್ತು. ಉದಯೋನ್ಮುಖ ಲೇಖರಿಗಂತೂ ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ತಮ್ಮ ರಚನೆಯೊಂದು ಪ್ರಕಟಗೊಳ್ಳುವದೆಂದರೆ ಒಂದು ಪ್ರಶಸ್ತಿಯನ್ನೋ/ಪಾರಿತೋಷಕವನ್ನೋ ಪಡೆದಂತೆ ಎಂಬ ಭಾವನೆಯಿದ್ದ ಕಾಲವದು. ಆದ್ದರಿಂದ ಸ್ವೀಕೃತಿ ಪತ್ರಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದರು. ಮೂರು ವಾರಗಳಾದರೂ ಚಿತ್ತಾಲರಿಗೆ ಸ್ವೀಕೃತಿ ಪತ್ರ ಹೋಗಿಲ್ಲ. ನಾವು ಕೇಳಿದ್ದು ಕತೆಯನ್ನು, ಅವರು ಕಳುಹಿಸಿದ್ದು ಕವಿತೆಯೊಂದನ್ನು. ತಮ್ಮ ಹೊಸ ಪ್ರಯೋಗದ ಬಗ್ಗೆ ಪ್ರಜಾವಾಣಿಯ ಪ್ರತಿಕ್ರಿಯೆ ತಿಳಿಯಲು ಕಾತುರರಾಗಿದ್ದ ಅವರಿಗೆ ಸ್ವೀಕೃತಿ ಪತ್ರ ಹೋಗದೆ ಮುಜುಗರ, ಆತಂಕ ಎರಡೂ ಆಗಿದೆ. ಅವರ ಪತ್ರ ನೋಡಿ ನನಗೂ ಮುಜುಗರವಾಯಿತು. ಸಂಪಾದಕರ ಬಳಿ ಪ್ರಸ್ತಾಪಿಸಿದೆ."ಹೌದು. ‘ಬಿಸಿಲು’ ನೋಡಿದೆ. ನನಗೇನೂ ಆರ್ಥವಾಗಲಿಲ್ಲ ಎಂದು ತಮ್ಮ ಮೇಜಿನ ಮೇಲಿದ್ದ ಕಾಗದಪತ್ರಗಳ ರಾಶಿಯಿಂದ ಹೊರತೆಗೆದು "ನೀವು ನೋಡಿ" ಎಂದು ನನ್ನ ಕೈಯ್ಯಲ್ಲಿಟ್ಟರು. ಇಂಥ ಮುಜುಗರವನ್ನು ಹಿಂದೆ ಒಂದೆರಡು ಬಾರಿ ನಾನು ಅನುಭವಿಸಿದ್ದುಂಟು. ಬಿ.ಆರ್.ಲಕ್ಷ್ಮಣ ರಾವ್ ಅವರ "ಗುಂಡಪ್ಪ ವಿಶ್ವನಾಥ್'ಕವನವನ್ನು ಸಂಪಾದಕರಿಗೆ ಅರ್ಥವಾಗಲಿಲ್ಲ ಎನ್ನುವ ಕಾರಣಕ್ಕಗಿ ತಿರಸ್ಕರಿಸಬೇಕಾಗಿ ಬಂದಾಗ ನನಗಾದ ಮುಜುಗರ ಅಷ್ಟಿಷ್ಟಲ್ಲ. ತನಗೆ ಅರ್ಥವಾಗದ್ದನ್ನು ಓದುಗರಿಗೆ ಕೊಡುವುದು ಹೇಗೆ ಎಂಬ ಪ್ರಶ್ನೆ ಏಳಬಹುದಾದರೂ ಓದುಗರು ನಮಗಿಂತ ಹೆಚ್ಚು ಸೂಕ್ಷ್ಮಗ್ರಾಹಿಗಳೂ ಸಂವೇದನಾಶೀಲರೂ ಆಗಿರುವ ಸಾಧ್ಯತೆಯುಂಟು ಎಂಬುದನ್ನು ಮರೆಯಲಾಗದು. ಎಂದೇ ಹೊಸರುಚಿ/ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಸ್ವಲ್ಪ ಧೈರ್ಯಮಾಡಬೇಕಾಗುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:

                               

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...